Aranyaka Parva: Chapter 226

ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ

೨೨೬

ಪರಮ ಸಂಪತ್ತಿನಿಂದ ಕೂಡಿ ಪಾಂಡವರು ವಾಸಿಸುತ್ತಿರುವ ದ್ವೈತಸರೋವರಕ್ಕೆ ಹೋಗಿ ಪಾಂಡುಪುತ್ರರನ್ನು ಸುಡು ಎಂದು ಕರ್ಣನು ದುರ್ಯೋಧನನಿಗೆ ಸಲಹೆ ನೀಡುವುದು (೧-೨೨).

03226001 ವೈಶಂಪಾಯನ ಉವಾಚ|

03226001a ಧೃತರಾಷ್ಟ್ರಸ್ಯ ತದ್ವಾಕ್ಯಂ ನಿಶಮ್ಯ ಸಹಸೌಬಲಃ|

03226001c ದುರ್ಯೋಧನಮಿದಂ ಕಾಲೇ ಕರ್ಣೋ ವಚನಮಬ್ರವೀತ್||

ವೈಶಂಪಾಯನನು ಹೇಳಿದನು: “ಧೃತರಾಷ್ಟ್ರನ ಆ ಮಾತುಗಳನ್ನು ಕೇಳಿದ ಕರ್ಣನು ದುರ್ಯೋಧನ-ಸೌಬಲರು ಜೊತೆಯಿರುವಾಗ ಈ ಮಾತುಗಳನ್ನಾಡಿದನು.

03226002a ಪ್ರವ್ರಾಜ್ಯ ಪಾಂಡವಾನ್ವೀರಾನ್ಸ್ವೇನ ವೀರ್ಯೇಣ ಭಾರತ|

03226002c ಭುಂಕ್ತ್ವೇಮಾಂ ಪೃಥಿವೀಮೇಕೋ ದಿವಂ ಶಂಬರಹಾ ಯಥಾ||

“ಭಾರತ! ವೀರ ಪಾಂಡವರನ್ನು ನಿನ್ನದೇ ವೀರ್ಯದಿಂದ ಹೊರಗಟ್ಟಿದ ನೀನು ಶಂಬರನನ್ನು ಕೊಂದವನು ಸ್ವರ್ಗವನ್ನು ಹೇಗೋ ಹಾಗೆ ಒಬ್ಬನೇ ಇಡೀ ಭೂಮಿಯನ್ನು ಭೋಗಿಸು!

03226003a ಪ್ರಾಚ್ಯಾಶ್ಚ ದಾಕ್ಷಿಣಾತ್ಯಾಶ್ಚ ಪ್ರತೀಚ್ಯೋದೀಚ್ಯವಾಸಿನಃ|

03226003c ಕೃತಾಃ ಕರಪ್ರದಾಃ ಸರ್ವೇ ರಾಜಾನಸ್ತೇ ನರಾಧಿಪ||

ನರಾಧಿಪ! ಪೂರ್ವ-ದಕ್ಷಿಣ-ಪಶ್ಚಿಮ ಮತ್ತು ಉತ್ತರಗಳ ರಾಜರೆಲ್ಲರೂ ನಿನಗೆ ಕರವನ್ನು ಕೊಂಡುವಂತೆ ಮಾಡಿಯಾಗಿದೆ.

03226004a ಯಾ ಹಿ ಸಾ ದೀಪ್ಯಮಾನೇವ ಪಾಂಡವಾನ್ಭಜತೇ ಪುರಾ|

03226004c ಸಾದ್ಯ ಲಕ್ಷ್ಮೀಸ್ತ್ವಯಾ ರಾಜನ್ನವಾಪ್ತಾ ಭ್ರಾತೃಭಿಃ ಸಹ||

ರಾಜನ್! ಹಿಂದೆ ಪಾಂಡವರನ್ನು ಸೇವಿಸುತ್ತಿದ್ದ ದೀಪ್ಯಮಾನ ಲಕ್ಷ್ಮಿಯನ್ನು ಸಹೋದರರೊಂದಿಗೆ ನೀನು ಪಡೆದಿದ್ದೀಯೆ.

03226005a ಇಂದ್ರಪ್ರಸ್ಥಗತೇ ಯಾಂ ತಾಂ ದೀಪ್ಯಮಾನಾಂ ಯುಧಿಷ್ಠಿರೇ|

03226005c ಅಪಶ್ಯಾಮ ಶ್ರಿಯಂ ರಾಜನ್ನಚಿರಂ ಶೋಕಕರ್ಶಿತಾಃ||

ರಾಜನ್! ಇಂದ್ರಪ್ರಸ್ಥಕ್ಕೆ ಹೋದಾಗ ಯುಧಿಷ್ಠಿರನಲ್ಲಿ ದೀಪ್ಯಮಾನ ಶ್ರೀಯನ್ನು ನಾವು ನೋಡಿ ತಕ್ಷಣವೇ ಶೋಕದಿಂದ ಸಣ್ಣವರಾಗಿದ್ದೆವು.

03226006a ಸಾ ತು ಬುದ್ಧಿಬಲೇನೇಯಂ ರಾಜ್ಞಸ್ತಸ್ಮಾದ್ಯುಧಿಷ್ಠಿರಾತ್|

03226006c ತ್ವಯಾಕ್ಷಿಪ್ತಾ ಮಹಾಬಾಹೋ ದೀಪ್ಯಮಾನೇವ ದೃಶ್ಯತೇ||

ಮಹಾಬಾಹೋ! ನೀನು ಬುದ್ಧಿಬಲವನ್ನು ಉಪಯೋಗಿಸಿ ಯುಧಿಷ್ಠಿರನಿಂದ ಆ ರಾಜ್ಯವನ್ನು ಕಸಿದುಕೊಂಡು ದೀಪ್ಯಮಾನನಾಗಿ ಕಾಣುತ್ತಿದ್ದೀಯೆ.

03226007a ತಥೈವ ತವ ರಾಜೇಂದ್ರ ರಾಜಾನಃ ಪರವೀರಹನ್|

03226007c ಶಾಸನೇಽಧಿಷ್ಠಿತಾಃ ಸರ್ವೇ ಕಿಂ ಕುರ್ಮ ಇತಿ ವಾದಿನಃ||

ರಾಜೇಂದ್ರ! ಪರವೀರಹ! ಹಾಗೆಯೇ ಎಲ್ಲ ರಾಜರೂ ನಿನ್ನ ಶಾಸನದಡಿಯಲ್ಲಿ ಇದ್ದಾರೆ ಮತ್ತು ಏನು ಮಾಡಬೇಕೆಂದು ನಿನ್ನನ್ನೇ ಕೇಳುತ್ತಾರೆ.

03226008a ತವಾದ್ಯ ಪೃಥಿವೀ ರಾಜನ್ನಿಖಿಲಾ ಸಾಗರಾಂಬರಾ|

03226008c ಸಪರ್ವತವನಾ ದೇವೀ ಸಗ್ರಾಮನಗರಾಕರಾ|

03226008e ನಾನಾವನೋದ್ದೇಶವತೀ ಪತ್ತನೈರುಪಶೋಭಿತಾ||

ರಾಜನ್! ಇಂದು ಸಾಗರ, ಆಕಾಶ, ಪರ್ವತ, ಗ್ರಾಮ, ನಗರ, ಆಕರಗಳು, ನಾನಾ ವನೋದ್ದೇಶಗಳು, ಸುಂದರವಾಗಿ ಶೋಭಿಸುವ ಪಟ್ಟಣಗಳಿಂದ ಕೂಡಿದ ಇಡೀ ಪೃಥ್ವಿ ದೇವಿಯು ನಿನ್ನದಾಗಿದ್ದಾಳೆ.

03226009a ವಂದ್ಯಮಾನೋ ದ್ವಿಜೈ ರಾಜನ್ಪೂಜ್ಯಮಾನಶ್ಚ ರಾಜಭಿಃ|

03226009c ಪೌರುಷಾದ್ದಿವಿ ದೇವೇಷು ಭ್ರಾಜಸೇ ರಶ್ಮಿವಾನಿವ||

ರಾಜನ್! ದ್ವಿಜರಿಂದ ವಂದಿಸಲ್ಪಟ್ಟು, ರಾಜರಿಂದ ಪೂಜಿಸಲ್ಪಟ್ಟು, ನೀನು ಪೌರುಷದಲ್ಲಿ ದೇವತೆಗಳ ಮಧ್ಯೆ ರವಿಯಂತೆ ಬೆಳಗುತ್ತಿದ್ದೀಯೆ.

03226010a ರುದ್ರೈರಿವ ಯಮೋ ರಾಜಾ ಮರುದ್ಭಿರಿವ ವಾಸವಃ|

03226010c ಕುರುಭಿಸ್ತ್ವಂ ವೃತೋ ರಾಜನ್ ಭಾಸಿ ನಕ್ಷತ್ರರಾಡಿವ||

ರಾಜನ್! ರುದ್ರರಲ್ಲಿ ಯಮನಂತೆ, ಮರುತ್ತರಲ್ಲಿ ವಾಸವನಂತೆ, ಕುರುಗಳಿಂದ ಆವೃತನಾಗಿ ನಕ್ಷತ್ರರಾಜನಂತೆ ಬೆಳಗುತ್ತಿರುವೆ.

03226011a ಯೇ ಸ್ಮ ತೇ ನಾದ್ರಿಯಂತೇಽಜ್ಞಾ ನೋದ್ವಿಜಂತೇ ಕದಾ ಚ ನ|

03226011c ಪಶ್ಯಾಮಸ್ತಾಂ ಶ್ರಿಯಾ ಹೀನಾನ್ಪಾಂಡವಾನ್ವನವಾಸಿನಃ||

ನಿನ್ನನ್ನು ಯಾವಾಗಲೂ ನಿರ್ಲಕ್ಷಿಸಿದ, ನಿನ್ನನ್ನು ಅರ್ಥಮಾಡಿಕೊಳ್ಳದ ಪಾಂಡವರು ಈಗ ಹೇಗೆ ಸಂಪತ್ತನ್ನು ಕಳೆದುಕೊಂಡು ವನವಾಸಿಗಳಾಗಿದ್ದಾರೆ ಎನ್ನುವುದನ್ನು ನೋಡುತ್ತಿದ್ದೇವೆ.

03226012a ಶ್ರೂಯಂತೇ ಹಿ ಮಹಾರಾಜ ಸರೋ ದ್ವೈತವನಂ ಪ್ರತಿ|

03226012c ವಸಂತಃ ಪಾಂಡವಾಃ ಸಾರ್ಧಂ ಬ್ರಾಹ್ಮಣೈರ್ವನವಾಸಿಭಿಃ||

ಮಹಾರಾಜ! ಪಾಂಡವರು ವನವಾಸಿಗಳಾದ ಬ್ರಾಹ್ಮಣರೊಂದಿಗೆ ದ್ವೈತವನದ ಸರೋವರದ ಹತ್ತಿರ ವಾಸಿಸುತ್ತಿದ್ದಾರೆಂದು ಕೇಳುತ್ತೇವೆ.

03226013a ಸ ಪ್ರಯಾಹಿ ಮಹಾರಾಜ ಶ್ರಿಯಾ ಪರಮಯಾ ಯುತಃ|

03226013c ಪ್ರತಪನ್ಪಾಂಡುಪುತ್ರಾಂಸ್ತ್ವಂ ರಶ್ಮಿವಾನಿವ ತೇಜಸಾ||

ಮಹಾರಾಜ! ಪರಮ ಸಂಪತ್ತಿನಿಂದ ಕೂಡಿ ಅಲ್ಲಿಗೆ ಹೋಗಿ ಸೂರ್ಯನು ತನ್ನ ತೇಜಸ್ಸಿನಿಂದ ಹೇಗೋ ಹಾಗೆ ಪಾಂಡುಪುತ್ರರನ್ನು ಸುಡು.

03226014a ಸ್ಥಿತೋ ರಾಜ್ಯೇ ಚ್ಯುತಾನ್ರಾಜ್ಯಾಚ್ಚ್ರಿಯಾ ಹೀನಾಂ ಶ್ರಿಯಾ ವೃತಃ|

03226014c ಅಸಮೃದ್ಧಾನ್ಸಮೃದ್ಧಾರ್ಥಃ ಪಶ್ಯ ಪಾಂಡುಸುತಾನ್ನೃಪ||

ನೃಪ! ರಾಜ್ಯವನ್ನು ಪಡೆದ ನೀನು ರಾಜ್ಯವನ್ನು ಕಳೆದುಕೊಂಡ ಪಾಂಡವರನ್ನು, ಶ್ರೀಯನ್ನು ಕಳೆದು ಕೊಂಡ ಅವರನ್ನು ಶ್ರೀಯಿಂದ ಆವೃತನಾಗಿ, ಅಸಮೃದ್ಧರಾದ ಅವರನ್ನು ಸಮೃದ್ಧ ಸಂಪತ್ತಿನ ನೀನು ನೋಡು!

03226015a ಮಹಾಭಿಜನಸಂಪನ್ನಂ ಭದ್ರೇ ಮಹತಿ ಸಂಸ್ಥಿತಂ|

03226015c ಪಾಂಡವಾಸ್ತ್ವಾಭಿವೀಕ್ಷಂತಾಂ ಯಯಾತಿಮಿವ ನಾಹುಷಂ||

ನಾಹುಷ ಯಯಾತಿಯೋ ಎಂಬಂತೆ ಮಹಾಭಿಜನಸಂಪನ್ನನಾದ, ಭದ್ರವಾಗಿ ಮಹತ್ತರವಾಗಿ ಸ್ಥಾಪಿತನಾಗಿರುವ ನಿನ್ನನ್ನು ಪಾಂಡವರು ನೋಡಲಿ!

03226016a ಯಾಂ ಶ್ರಿಯಂ ಸುಹೃದಶ್ಚೈವ ದುರ್ಹೃದಶ್ಚ ವಿಶಾಂ ಪತೇ|

03226016c ಪಶ್ಯಂತಿ ಪುರುಷೇ ದೀಪ್ತಾಂ ಸಾ ಸಮರ್ಥಾ ಭವತ್ಯುತ||

ವಿಶಾಂಪತೇ! ಸ್ನೇಹಿತರೂ ಶತ್ರುಗಳೂ ಪುರುಷನಲ್ಲಿ ತೇಜಸ್ಸನ್ನು ಕಾಣಲು ಸಮರ್ಥರು ಎನ್ನುವುದು ಅದೃಷ್ಟದ ಮಹತ್ವವೇ ಸರಿ.

03226017a ಸಮಸ್ಥೋ ವಿಷಮಸ್ಥಾನ್ಹಿ ದುರ್ಹೃದೋ ಯೋಽಭಿವೀಕ್ಷತೇ|

03226017c ಜಗತೀಸ್ಥಾನಿವಾದ್ರಿಸ್ಥಃ ಕಿಂ ತತಃ ಪರಮಂ ಸುಖಂ||

ಸಮಪ್ರದೇಶದಲ್ಲಿ ನಿಂತು ವಿಷಮಸ್ಥಾನದಲ್ಲಿರುವ ಶತ್ರುಗಳನ್ನು ನೋಡುವುದಕ್ಕಿಂತಲೂ ಹೆಚ್ಚಿನ ಸುಖವು ಈ ಜಗತ್ತಿನಲ್ಲಿ ಇನ್ನೇನಿದೆ?

03226018a ನ ಪುತ್ರಧನಲಾಭೇನ ನ ರಾಜ್ಯೇನಾಪಿ ವಿಂದತಿ|

03226018c ಪ್ರೀತಿಂ ನೃಪತಿಶಾರ್ದೂಲ ಯಾಮಮಿತ್ರಾಘದರ್ಶನಾತ್||

ನೃಪತಿಶಾರ್ದೂಲ! ಮಗನು ಹುಟ್ಟಿದನೆನ್ನುವುದಾಗಲೀ, ಧನ ಅಥವಾ ರಾಜ್ಯ ಲಾಭವಾಯಿತೆನ್ನುವುದಾಗಲೀ, ಶತ್ರುಗಳು ಕಷ್ಟದಲ್ಲಿರುವುದನ್ನು ನೋಡಿದೆನೆನ್ನುವಷ್ಟು ಸಂತೋಷವನ್ನು ತರುವುದಿಲ್ಲ.

03226019a ಕಿಂ ನು ತಸ್ಯ ಸುಖಂ ನ ಸ್ಯಾದಾಶ್ರಮೇ ಯೋ ಧನಂಜಯಂ|

03226019c ಅಭಿವೀಕ್ಷೇತ ಸಿದ್ಧಾರ್ಥೋ ವಲ್ಕಲಾಜಿನವಾಸಸಂ||

ಯಶಸ್ವಿಯಾದ ಯಾರು ತಾನೇ ಆಶ್ರಮದಲ್ಲಿ ವಲ್ಕಲ ಜಿನಗಳನ್ನುಟ್ಟಿರುವ ಧನಂಜಯನನ್ನು ನೋಡಿ ಸಂತೋಷಪಡುವುದಿಲ್ಲ?

03226020a ಸುವಾಸಸೋ ಹಿ ತೇ ಭಾರ್ಯಾ ವಲ್ಕಲಾಜಿನವಾಸಸಂ|

03226020c ಪಶ್ಯಂತ್ವಸುಖಿತಾಂ ಕೃಷ್ಣಾಂ ಸಾ ಚ ನಿರ್ವಿದ್ಯತಾಂ ಪುನಃ|

03226020e ವಿನಿಂದತಾಂ ತಥಾತ್ಮಾನಂ ಜೀವಿತಂ ಚ ಧನಚ್ಯುತಾ||

ಸುಂದರ ವಸ್ತ್ರಗಳನ್ನುಟ್ಟಿರುವ ನಿನ್ನ ಭಾರ್ಯೆಯರು ವಲ್ಕಲ ಜಿನಗಳನ್ನು ಉಟ್ಟಿರುವ ಅಸುಖಿ ಕೃಷ್ಣೆಯನ್ನು ನೋಡಲಿ ಮತ್ತು ಅವಳ ದುಃಖವನ್ನು ಹೆಚ್ಚಿಸಲಿ! ಧನವನ್ನು ಕಳೆದುಕೊಂಡ ತನ್ನ ಜೀವನವನ್ನು ತಾನೇ ನಿಂದನೆಮಾಡಿಕೊಳ್ಳುವಂತಾಗಲಿ.

03226021a ನ ತಥಾ ಹಿ ಸಭಾಮಧ್ಯೇ ತಸ್ಯಾ ಭವಿತುಮರ್ಹತಿ|

03226021c ವೈಮನಸ್ಯಂ ಯಥಾ ದೃಷ್ಟ್ವಾ ತವ ಭಾರ್ಯಾಃ ಸ್ವಲಂಕೃತಾಃ||

ಸಭಾಮಧ್ಯದಲ್ಲಿ ಅವಳು ಅನುಭವಿಸಿದ ದುಃಖವು ಸ್ವಲಂಕೃತರಾದ ನಿನ್ನ ಭಾರ್ಯೆಯರನ್ನು ನೋಡುವುದಕ್ಕಿಂತ ಹೆಚ್ಚಿನದಾಗಲಾರದು!”

03226022a ಏವಮುಕ್ತ್ವಾ ತು ರಾಜಾನಂ ಕರ್ಣಃ ಶಕುನಿನಾ ಸಹ|

03226022c ತೂಷ್ಣೀಂ ಬಭೂವತುರುಭೌ ವಾಕ್ಯಾಂತೇ ಜನಮೇಜಯ||

ಜನಮೇಜಯ! ಹೀಗೆ ಶಕುನಿಯೊಂದಿಗಿದ್ದ ರಾಜನಿಗೆ ಕರ್ಣನು ಹೇಳಲು, ಮಾತಿನ ಕೊನೆಯಲ್ಲಿ ಅವರಿಬ್ಬರೂ ಸುಮ್ಮನಾದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಕರ್ಣಶಕುನಿವಾಕ್ಯೇ ಷಡ್ವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಕರ್ಣಶಕುನಿವಾಕ್ಯೇ ಇನ್ನೂರಾಇಪ್ಪತ್ತಾರನೆಯ ಅಧ್ಯಾಯವು.

Related image

Comments are closed.