Aranyaka Parva: Chapter 225

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ

೨೨೫

ಪಾಂಡವರ ವನವಾಸದ ವರದಿ; ಧೃತರಾಷ್ಟ್ರನ ಸಂತಾಪ

ಬ್ರಾಹ್ಮಣನೋರ್ವನು ಧೃತರಾಷ್ಟ್ರನಲ್ಲಿಗೆ ಆಗಮಿಸಿ ಪಾಂಡವರ ವನವಾಶದ ಕ್ಲೇಶಗಳನ್ನು ವರದಿಮಾಡಿದುದು (೧-೬). ಅದನ್ನು ಕೇಳಿ ಧೃತರಾಷ್ಟ್ರನು ಕರುಣೆಯಿಂದ ತಪಿಸುವುದು (೭-೩೧).

03225001 ಜನಮೇಜಯ ಉವಾಚ|

03225001a ಏವಂ ವನೇ ವರ್ತಮಾನಾ ನರಾಗ್ರ್ಯಾಃ|

         ಶೀತೋಷ್ಣವಾತಾತಪಕರ್ಶಿತಾಂಗಾಃ|

03225001c ಸರಸ್ತದಾಸಾದ್ಯ ವನಂ ಚ ಪುಣ್ಯಂ|

         ತತಃ ಪರಂ ಕಿಮಕುರ್ವಂತ ಪಾರ್ಥಾಃ||

ಜನಮೇಜಯನು ಹೇಳಿದನು: “ಈ ನರಾಗ್ರ ಪಾರ್ಥರು ವನದಲ್ಲಿ ವಾಸಿಸುತ್ತಿರುವಾಗ ಛಳಿ, ಸೆಖೆ, ಗಾಳಿ ಮತ್ತು ಬಿಸಿಲಿನಿಂದ ಕೃಶರಾಗಿ ಪುಣ್ಯವನವನ್ನೂ ಸರೋವರವನ್ನೂ ತಲುಪಿದ ನಂತರ ಏನು ಮಾಡಿದರು?”

03225002 ವೈಶಂಪಾಯನ ಉವಾಚ|

03225002a ಸರಸ್ತದಾಸಾದ್ಯ ತು ಪಾಂಡುಪುತ್ರಾ|

         ಜನಂ ಸಮುತ್ಸೃಜ್ಯ ವಿಧಾಯ ಚೈಷಾಂ|

03225002c ವನಾನಿ ರಮ್ಯಾಣ್ಯಥ ಪರ್ವತಾಂಶ್ಚ|

         ನದೀಪ್ರದೇಶಾಂಶ್ಚ ತದಾ ವಿಚೇರುಃ||

ವೈಶಂಪಾಯನನು ಹೇಳಿದನು: “ಪಾಂಡುಪುತ್ರರು ಸರೋವರವನ್ನು ತಲುಪಿ ಜನರನ್ನು ತೊರೆದು ಹೋಗಲು ಅನುಮತಿಯನ್ನಿತ್ತು ರಮ್ಯ ವನ, ಪರ್ವತ ಮತ್ತು ನದೀಪ್ರದೇಶಗಳಲ್ಲಿ ವಿಹರಿಸಿದರು.

03225003a ತಥಾ ವನೇ ತಾನ್ವಸತಃ ಪ್ರವೀರಾನ್|

         ಸ್ವಾಧ್ಯಾಯವಂತಶ್ಚ ತಪೋಧನಾಶ್ಚ

03225003c ಅಭ್ಯಾಯಯುರ್ವೇದವಿದಃ ಪುರಾಣಾಸ್|

         ತಾನ್ಪೂಜಯಾಮಾಸುರಥೋ ನರಾಗ್ರ್ಯಾಃ||

ಆ ಪ್ರವೀರರು ವನದಲ್ಲಿ ಹೀಗೆ ಸ್ವಾಧ್ಯಾಯ-ತಪಸ್ಸಿನಲ್ಲಿ ನಿರತರಾಗಿ ವಾಸಿಸುತ್ತಿರುವಾಗ ವೇದವಿದರೂ ಪುರಾಣವಿದರೂ ಅಲ್ಲಿಗೆ ಬಂದರು ಮತ್ತು ಆ ನರಾಗ್ರರು ಅವರನ್ನು ಪೂಜಿಸಿದರು.

03225004a ತತಃ ಕದಾ ಚಿತ್ಕುಶಲಃ ಕಥಾಸು|

         ವಿಪ್ರೋಽಭ್ಯಗಚ್ಚದ್ಭುವಿ ಕೌರವೇಯಾನ್|

03225004c ಸ ತೈಃ ಸಮೇತ್ಯಾಥ ಯದೃಚ್ಚಯೈವ|

         ವೈಚಿತ್ರವೀರ್ಯಂ ನೃಪಮಭ್ಯಗಚ್ಚತ್||

ಆಗ ಒಂದು ದಿನ ಕಥೆಗಳಲ್ಲಿ ಕುಶಲನಾದ ಓರ್ವ ವಿಪ್ರನು ಕೌರವರ ನಾಡಿಗೆ ಬಂದನು. ಅಷ್ಟರವರೆಗೆ ಬಂದಿದ್ದ ಅವನು ನೃಪ ವೈಚಿತ್ರವೀರ್ಯನಲ್ಲಿಗೆ ಬಂದನು.

03225005a ಅಥೋಪವಿಷ್ಟಃ ಪ್ರತಿಸತ್ಕೃತಶ್ಚ|

         ವೃದ್ಧೇನ ರಾಜ್ಞಾ ಕುರುಸತ್ತಮೇನ|

03225005c ಪ್ರಚೋದಿತಃ ಸನ್ಕಥಯಾಂ ಬಭೂವ|

         ಧರ್ಮಾನಿಲೇಂದ್ರಪ್ರಭವಾನ್ಯಮೌ ಚ||

03225006a ಕೃಶಾಂಶ್ಚ ವಾತಾತಪಕರ್ಶಿತಾಂಗಾನ್|

         ದುಃಖಸ್ಯ ಚೋಗ್ರಸ್ಯ ಮುಖೇ ಪ್ರಪನ್ನಾನ್|

03225006c ತಾಂ ಚಾಪ್ಯನಾಥಾಮಿವ ವೀರನಾಥಾಂ|

         ಕೃಷ್ಣಾಂ ಪರಿಕ್ಲೇಶಗುಣೇನ ಯುಕ್ತಾಂ||

ವೃದ್ಧ ರಾಜ ಕುರುಸತ್ತಮನಿಂದ ಕುಳ್ಳಿರಿಸಿ ಸತ್ಕರಿಸಲ್ಪಟ್ಟು, ಅವನಿಂದ ಪ್ರಚೋದಿತನಾಗಿ, ಗಾಳಿಬಿಸಿಲುಗಳಿಂದ ಕೃಶಾಂಗರಾಗಿ ತಮ್ಮ ದುಃಖಿತ-ಉಗ್ರ ಮುಖಗಳನ್ನು ಮುಚ್ಚಿಕೊಂಡಿರುವ ಧರ್ಮ, ಅನಿಲ, ಇಂದ್ರರಿಂದ ಹುಟ್ಟಿದವರ ಮತ್ತು ಯಮಳರ ಕುರಿತಾದ ಮತ್ತು ವೀರನಾಥರಿದ್ದೂ ಅನಾಥಳಂತೆ ಪರಿಕ್ಲೇಶ-ಗುಣಗಳಿಂದ ಕೂಡಿದ ಕೃಷ್ಣೆಯು ಹೇಗಿದ್ದಾಳೆಂದು ವೃತ್ತಾಂತವನ್ನು ಪ್ರರಂಭಿಸಿದನು.

03225007a ತತಃ ಕಥಾಂ ತಸ್ಯ ನಿಶಮ್ಯ ರಾಜಾ|

         ವೈಚಿತ್ರವೀರ್ಯಃ ಕೃಪಯಾಭಿತಪ್ತಃ|

03225007c ವನೇ ಸ್ಥಿತಾನ್ಪಾರ್ಥಿವಪುತ್ರಪೌತ್ರಾಂ|

         ಶ್ರುತ್ವಾ ತದಾ ದುಃಖನದೀಂ ಪ್ರಪನ್ನಾನ್||

ಆಗ ಅವನ ಕಥೆಯನ್ನು ಕೇಳಿ, ವನದಲ್ಲಿ ರಾಜನ ಮಕ್ಕಳು ಮತ್ತು ಮೊಮ್ಮಕ್ಕಳು ದುಃಖದ ನದಿಯಲ್ಲಿ ಮುಳುಗಿದ್ದಾರೆ ಎಂದು ಕೇಳಿ ರಾಜ ವೈಚಿತ್ರವೀರ್ಯನು ಕರುಣೆಯಿಂದ ತಪಿಸಿದನು.

03225008a ಪ್ರೋವಾಚ ದೈನ್ಯಾಭಿಹತಾಂತರಾತ್ಮಾ|

         ನಿಃಶ್ವಾಸಬಾಷ್ಪೋಪಹತಃ ಸ ಪಾರ್ಥಾನ್|

03225008c ವಾಚಂ ಕಥಂ ಚಿತ್ಸ್ಥಿರತಾಮುಪೇತ್ಯ|

         ತತ್ಸರ್ವಮಾತ್ಮಪ್ರಭವಂ ವಿಚಿಂತ್ಯ||

ಅಂತರಾತ್ಮದಲ್ಲಿ ದೀನನಾಗಿ ಪಾರ್ಥರಿಗಾಗಿ ಕಣ್ಣೀರಿಟ್ಟು ನಿಟ್ಟುಸಿರು ಬಿಡುತ್ತಾ ಅವೆಲ್ಲವಕ್ಕೂ ಮೂಲನು ತಾನೇ ಎಂದು ಚಿಂತಿಸಿ, ಹೇಗೋ ತನ್ನ ಮನಸ್ಸನ್ನು ಸ್ಥಿತಿಗೆ ತಂದುಕೊಂಡು ಹೇಳಿದನು:

03225009a ಕಥಂ ನು ಸತ್ಯಃ ಶುಚಿರಾರ್ಯವೃತ್ತೋ|

         ಜ್ಯೇಷ್ಠಃ ಸುತಾನಾಂ ಮಮ ಧರ್ಮರಾಜಃ|

03225009c ಅಜಾತಶತ್ರುಃ ಪೃಥಿವೀತಲಸ್ಥಃ|

         ಶೇತೇ ಪುರಾ ರಾಂಕವಕೂಟಶಾಯೀ||

“ನನ್ನ ಮಕ್ಕಳಲ್ಲಿ ಜ್ಯೇಷ್ಠನಾದ ಧರ್ಮರಾಜ, ಸತ್ಯವಂತ, ಶುಚಿ, ಆರ್ಯನಡತೆಯ, ಅಜಾತಶತ್ರುವು ಹಿಂದೆ ರಂಕುವಿನ ಉಣ್ಣೆಯ ಮೇಲೆ ಮಲಗಿಕೊಳ್ಳುತ್ತಿದ್ದವನು ಏಕೆ ಇಂದು ನೆಲದಮೇಲೆ ಮಲಗಿಕೊಳ್ಳುತ್ತಿದ್ದಾನೆ?

03225010a ಪ್ರಬೋಧ್ಯತೇ ಮಾಗಧಸೂತಪೂಗೈರ್|

         ನಿತ್ಯಂ ಸ್ತುವದ್ಭಿಃ ಸ್ವಯಮಿಂದ್ರಕಲ್ಪಃ|

03225010c ಪತತ್ರಿಸಂಘೈಃ ಸ ಜಘನ್ಯರಾತ್ರೇ|

         ಪ್ರಬೋಧ್ಯತೇ ನೂನಮಿಡಾತಲಸ್ಥಃ||

ಮಾಗಧ-ಸೂತರ ಪಂಗಡಗಳು ನಿತ್ಯವೂ ಆ ಸ್ವಯಂ ಇಂದ್ರನಂತಿದ್ದವನನ್ನು ಸ್ತುತಿಗಳಿಂದ ಎಚ್ಚರಿಸುತ್ತಿದ್ದರು. ಈಗ ನೆಲದಮೇಲೆ ಮಲಗುವ ಅವನನ್ನು ಪಕ್ಷಿಗಳ ಗುಂಪುಗಳು ಸೂರ್ಯೋದಯದ ಒಳಗೇ ಅವನನ್ನು ಎಚ್ಚರಿಸುತ್ತವೆ!

03225011a ಕಥಂ ನು ವಾತಾತಪಕರ್ಶಿತಾಂಗೋ|

         ವೃಕೋದರಃ ಕೋಪಪರಿಪ್ಲುತಾಂಗಃ|

03225011c ಶೇತೇ ಪೃಥಿವ್ಯಾಮತಥೋಚಿತಾಂಗಃ|

         ಕೃಷ್ಣಾಸಮಕ್ಷಂ ವಸುಧಾತಲಸ್ಥಃ||

ಗಾಳಿ-ಬಿಸಿಲಿನಿಂದ ಅಂಗಾಂಗಗಳು ಸೋತುಹೋದ ವೃಕೋದರನು ಕೋಪದಿಂದ ಅಂಗಾಂಗಗಳು ಉರಿಯುತ್ತಿರಲು ಹೇಗೆ ತಾನೇ ಉಚಿತವಲ್ಲದಿದ್ದರೂ ಭೂಮಿತಾಯಿಯ ಮೇಲೆ ಕೃಷ್ಣೆಯ ಎದಿರು ನೆಲದಮೇಲೆ ಇರುತ್ತಾನೆ?

03225012a ತಥಾರ್ಜುನಃ ಸುಕುಮಾರೋ ಮನಸ್ವೀ|

         ವಶೇ ಸ್ಥಿತೋ ಧರ್ಮಸುತಸ್ಯ ರಾಜ್ಞಃ|

03225012c ವಿದೂಯಮಾನೈರಿವ ಸರ್ವಗಾತ್ರೈರ್|

         ಧ್ರುವಂ ನ ಶೇತೇ ವಸತೀರಮರ್ಷಾತ್||

ಹಾಗೆಯೇ ಸುಕುಮಾರ ಮನಸ್ವಿ ಅರ್ಜುನನು ರಾಜ ಧರ್ಮಸುತನ ವಶದಲ್ಲಿದ್ದುಕೊಂಡು ಅಂಗಾಂಗಗಳೆಲ್ಲವೂ ನೋಯುತ್ತಿರಲು ನಿಶ್ಚಯವಾಗಿಯೂ ಸಿಟ್ಟಿಲ್ಲದೇ ರಾತ್ರಿಗಳನ್ನು ಕಳೆದಿರಲಿಕ್ಕಿಲ್ಲ.

03225013a ಯಮೌ ಚ ಕೃಷ್ಣಾಂ ಚ ಯುಧಿಷ್ಠಿರಂ ಚ|

         ಭೀಮಂ ಚ ದೃಷ್ಟ್ವಾ ಸುಖವಿಪ್ರಯುಕ್ತಾನ್|

03225013c ವಿನಿಃಶ್ವಸನ್ಸರ್ಪ ಇವೋಗ್ರತೇಜಾ|

         ಧ್ರುವಂ ನ ಶೇತೇ ವಸತೀರಮರ್ಷಾತ್||

ಸುಖವಿಲ್ಲದ ಯಮಳರನ್ನೂ, ಕೃಷ್ಣೆಯನ್ನೂ, ಯುಧಿಷ್ಠಿರನನ್ನೂ, ಭೀಮನನ್ನೂ ನೋಡಿ ಅವನು ಉಗ್ರತೇಜಸ್ವಿ ಸರ್ಪದಂತೆ ಭುಸುಗುಟ್ಟುತ್ತಾ ಸಿಟ್ಟಿಲ್ಲದೇ ರಾತ್ರಿಯನ್ನು ಕಳೆಯಲಾರ!

03225014a ತಥಾ ಯಮೌ ಚಾಪ್ಯಸುಖೌ ಸುಖಾರ್ಹೌ|

         ಸಮೃದ್ಧರೂಪಾವಮರೌ ದಿವೀವ|

03225014c ಪ್ರಜಾಗರಸ್ಥೌ ಧ್ರುವಮಪ್ರಶಾಂತೌ|

         ಧರ್ಮೇಣ ಸತ್ಯೇನ ಚ ವಾರ್ಯಮಾಣೌ||

ಸುಖಾರ್ಹರಾದ, ದಿವಿಯಲ್ಲಿಯ ಅಮರರಿಗಿಂತಲೂ ಸಮೃದ್ಧ ರೂಪಿಗಳಾದ ಯಮಳರೂ ಅಸುಖಿಗಳಾಗಿದ್ದಾರೆ; ಧರ್ಮ ಮತ್ತು ಸತ್ಯಗಳಿಂದ ತಡೆಯಲ್ಪಟ್ಟ ಅವರೂ ಈಗ ನಿಜವಾಗಿಯೂ ನಿದ್ದೆಗೆಟ್ಟಿರಬಹುದು ಮತ್ತು ಅಪ್ರಶಾಂತರಾಗಿರಬಹುದು.

03225015a ಸಮೀರಣೇನಾಪಿ ಸಮೋ ಬಲೇನ|

         ಸಮೀರಣಸ್ಯೈವ ಸುತೋ ಬಲೀಯಾನ್|

03225015c ಸ ಧರ್ಮಪಾಶೇನ ಸಿತೋಗ್ರತೇಜಾ|

         ಧ್ರುವಂ ವಿನಿಃಶ್ವಸ್ಯ ಸಹತ್ಯಮರ್ಷಂ||

ಆ ವಾಯುವಿನ ಬಲಶಾಲಿ ಪುತ್ರ, ಅವನಷ್ಟೇ ಬಲವುಳ್ಳವ ವಾಯುಪುತ್ರನ ಉಗ್ರತೇಜಸ್ಸು ಧರ್ಮಪಾಶದಿಂದ ಕಟ್ಟಲ್ಪಟ್ಟಿದೆ. ಅವನು ನಿಜವಾಗಿಯು ನಿಟ್ಟುಸಿರು ಬಿಡುತ್ತಾ ಕೋಪವನ್ನು ಸಹಿಸಿಕೊಳ್ಳುತ್ತಿರಬಹುದು.

03225016a ಸ ಚಾಪಿ ಭೂಮೌ ಪರಿವರ್ತಮಾನೋ|

         ವಧಂ ಸುತಾನಾಂ ಮಮ ಕಾಂಕ್ಷಮಾಣಃ|

03225016c ಸತ್ಯೇನ ಧರ್ಮೇಣ ಚ ವಾರ್ಯಮಾಣಃ|

         ಕಾಲಂ ಪ್ರತೀಕ್ಷತ್ಯಧಿಕೋ ರಣೇಽನ್ಯೈಃ||

ಅವನು ನನ್ನ ಮಕ್ಕಳ ವಧೆಯನ್ನು ಬಯಸುತ್ತಾ ನೆಲದ ಮೇಲೆ ಹೊರಳಾಡುತ್ತಿರಬಹುದು. ಸತ್ಯ ಮತ್ತು ಧರ್ಮಗಳಿಂದ ತಡೆಯಲ್ಪಟ್ಟು, ರಣದಲ್ಲಿ ಅನ್ಯರಿಗಿಂತ ಅಧಿಕನಾದ ಅವನು ಕಾಲವನ್ನು ಕಾಯುತ್ತಿದ್ದಾನೆ.

03225017a ಅಜಾತಶತ್ರೌ ತು ಜಿತೇ ನಿಕೃತ್ಯಾ|

         ದುಃಶಾಸನೋ ಯತ್ಪರುಷಾಣ್ಯವೋಚತ್|

03225017c ತಾನಿ ಪ್ರವಿಷ್ಟಾನಿ ವೃಕೋದರಾಂಗಂ|

         ದಹಂತಿ ಮರ್ಮಾಗ್ನಿರಿವೇಂಧನಾನಿ||

ಮೋಸದಿಂದ ಅಜಾತಶತ್ರುವನ್ನು ಗೆದ್ದಾಗ ದುಃಶಾಸನನು ಈ ಮೂದಲಿಕೆಯ ಮಾತುಗಳನ್ನಾಡಿದ್ದನು. ಅವು ವೃಕೋದರನ ದೇಹವನ್ನು ಚುಚ್ಚಿರಬಹುದು ಮತ್ತು ಇಂಧನವನ್ನು ಬೆಂಕಿಯು ಸುಡುವಂತೆ ಅವನ ಕರುಳುಗಳನ್ನು ಸುಡುತ್ತಿರಬಹುದು.

03225018a ನ ಪಾಪಕಂ ಧ್ಯಾಸ್ಯತಿ ಧರ್ಮಪುತ್ರೋ|

         ಧನಂಜಯಶ್ಚಾಪ್ಯನುವರ್ತತೇ ತಂ|

03225018c ಅರಣ್ಯವಾಸೇನ ವಿವರ್ಧತೇ ತು|

         ಭೀಮಸ್ಯ ಕೋಪೋಽಗ್ನಿರಿವಾನಿಲೇನ||

ಧರ್ಮಪುತ್ರನು ಪಾಪಕೃತ್ಯದ ಕುರಿತು ಯೋಚಿಸುವವನಲ್ಲ; ಧನಂಜಯನಾದರೋ ಅವನಂತೆಯೇ ನಡೆದುಕೊಳ್ಳುವವನು. ಆದರೆ ಅರಣ್ಯವಾಸದಿಂದ ಭೀಮನ ಕೋಪಾಗ್ನಿಯು ಗಾಳಿಯಿಂದ ಉರಿದಂತೆ ಹೆಚ್ಚಾಗುತ್ತಿದೆ.

03225019a ಸ ತೇನ ಕೋಪೇನ ವಿದೀರ್ಯಮಾಣಃ|

         ಕರಂ ಕರೇಣಾಭಿನಿಪೀಡ್ಯ ವೀರಃ|

03225019c ವಿನಿಃಶ್ವಸತ್ಯುಷ್ಣಮತೀವ ಘೋರಂ|

         ದಹನ್ನಿವೇಮಾನ್ಮಮ ಪುತ್ರಪೌತ್ರಾನ್||

ಆ ವೀರನು ಈ ಕೋಪದಿಂದ ಭುಗಿಲೆದ್ದು ಮುಷ್ಟಿಯನ್ನು ಅಂಗೈಗೆ ಹೊಡೆದುಕೊಳ್ಳುತ್ತಾ, ಘೋರವಾದ ಬಿಸಿ‌ಉಸಿರು ಬಿಡುತ್ತಾ ನನ್ನ ಪುತ್ರಪೌತ್ರರನ್ನು ಸುಡುವವನಂತಿದ್ದಾನೆ.

03225020a ಗಾಂಡೀವಧನ್ವಾ ಚ ವೃಕೋದರಶ್ಚ|

         ಸಂರಂಭಿಣಾವಂತಕಕಾಲಕಲ್ಪೌ|

03225020c ನ ಶೇಷಯೇತಾಂ ಯುಧಿ ಶತ್ರುಸೇನಾಂ|

         ಶರಾನ್ಕಿರಂತಾವಶನಿಪ್ರಕಾಶಾನ್||

ಗಾಂಡೀವಧನ್ವಿ ಮತ್ತು ವೃಕೋದರರು ಕಲ್ಪವು ಅಂತ್ಯವಾಗುವ ಕಾಲದ ಅಗ್ನಿಯಂತೆ ಧ್ವಂಸಮಾಡುವವರು; ಸಿಡಿಲುಗಳಂಥ ಬಾಣಗಳನ್ನು ಅವರು ತೂರುವಾಗ ಯುದ್ಧದಲ್ಲಿ ಶತ್ರುಸೇನೆಯು ಉಳಿಯುವುದಿಲ್ಲ.

03225021a ದುರ್ಯೋಧನಃ ಶಕುನಿಃ ಸೂತಪುತ್ರೋ|

         ದುಃಶಾಸನಶ್ಚಾಪಿ ಸುಮಂದಚೇತಾಃ|

03225021c ಮಧು ಪ್ರಪಶ್ಯಂತಿ ನ ತು ಪ್ರಪಾತಂ|

         ವೃಕೋದರಂ ಚೈವ ಧನಂಜಯಂ ಚ||

ಮಂದಚೇತಸರಾದ ದುರ್ಯೋಧನ, ಶಕುನಿ, ಸೂತಪುತ್ರ ಮತ್ತು ದುಃಶಾಸನರು ಮಧುವನ್ನು ಕಾಣುತ್ತಾರೆ. ಪ್ರಪಾತವನ್ನಾಗಲೀ ವೃಕೋದರನನ್ನಾಗಲೀ ಮತ್ತು ಧನಂಜಯನನ್ನಾಗಲೀ ಅಲ್ಲ.

03225022a ಶುಭಾಶುಭಂ ಪುರುಷಃ ಕರ್ಮ ಕೃತ್ವಾ|

         ಪ್ರತೀಕ್ಷತೇ ತಸ್ಯ ಫಲಂ ಸ್ಮ ಕರ್ತಾ|

03225022c ಸ ತೇನ ಯುಜ್ಯತ್ಯವಶಃ ಫಲೇನ|

         ಮೋಕ್ಷಃ ಕಥಂ ಸ್ಯಾತ್ಪುರುಷಸ್ಯ ತಸ್ಮಾತ್||

ಶುಭಾಶುಭ ಕರ್ಮಗಳನ್ನು ಮಾಡಿ ಪುರುಷನು ತಾನು ಮಾಡಿದುದರ ಫಲವನ್ನು ಪ್ರತೀಕ್ಷಿಸುತ್ತಿರುತ್ತಾನೆ. ಅವನು ಅವಶ್ಯವಾಗಿ ಆ ಫಲಕ್ಕೆ ಬದ್ಧನಾಗಿರುವಾಗ ಪುರುಷನಿಗೆ ಅದರಿಂದ ಹೇಗೆ ತಾನೇ ಮುಕ್ತಿ ದೊರೆಯುವುದು?

03225023a ಕ್ಷೇತ್ರೇ ಸುಕೃಷ್ಟೇ ಹ್ಯುಪಿತೇ ಚ ಬೀಜೇ|

         ದೇವೇ ಚ ವರ್ಷತ್ಯೃತುಕಾಲಯುಕ್ತಂ|

03225023c ನ ಸ್ಯಾತ್ಫಲಂ ತಸ್ಯ ಕುತಃ ಪ್ರಸಿದ್ಧಿರ್|

         ಅನ್ಯತ್ರ ದೈವಾದಿತಿ ಚಿಂತಯಾಮಿ||

ಹೊಲವನ್ನು ಹೂಳಿ, ಬೀಜವನ್ನು ಬಿತ್ತಿ, ದೇವತೆಗಳು ಋತುಕಾಲಕ್ಕೆ ತಕ್ಕಂತೆ ಮಳೆಯನ್ನು ಸುರಿಸಿದಾಗ ಬೆಳೆಯು ಬೆಳೆಯುವುದಿಲ್ಲವೇ? ಅದನ್ನು ಯಾರುತಾನೇ ನೋಡಿಲ್ಲ? ಬೇರೆ ಏನಾದರೂ ಆದರೆ ಅದು ದೈವವೆಂದು ಯೋಚಿಸುತ್ತೇನೆ.

03225024a ಕೃತಂ ಮತಾಕ್ಷೇಣ ಯಥಾ ನ ಸಾಧು|

         ಸಾಧುಪ್ರವೃತ್ತೇನ ಚ ಪಾಂಡವೇನ|

03225024c ಮಯಾ ಚ ದುಷ್ಪುತ್ರವಶಾನುಗೇನ|

         ಯಥಾ ಕುರೂಣಾಮಯಮಂತಕಾಲಃ||

ಸಾಧುಪ್ರವೃತ್ತಿಯ ಪಾಂಡವರೊಂದಿಗೆ ಜೂಜನ್ನು ಸರಿಯಾಗಿ ಆಡಲಿಲ್ಲ ಎಂದು ತಿಳಿದೂ ದುಷ್ಟ ಮಕ್ಕಳನ್ನು ಅನುಸರಿಸಿದ ನಾನು ಕುರುಗಳ ಅಂತ್ಯಕಾಲವನ್ನು ತಂದೆನಲ್ಲ!

03225025a ಧ್ರುವಂ ಪ್ರವಾಸ್ಯತ್ಯಸಮೀರಿತೋಽಪಿ|

         ಧ್ರುವಂ ಪ್ರಜಾಸ್ಯತ್ಯುತ ಗರ್ಭಿಣೀ ಯಾ|

03225025c ಧ್ರುವಂ ದಿನಾದೌ ರಜನೀಪ್ರಣಾಶಸ್|

         ತಥಾ ಕ್ಷಪಾದೌ ಚ ದಿನಪ್ರಣಾಶಃ||

ನಿಶ್ಚಯವಾಗಿಯೂ ಗಾಳಿಯು ತಡೆಯಿಲ್ಲದೇ ಬೀಸುತ್ತದೆ. ನಿಶ್ಚಯವಾಗಿಯೂ ಗರ್ಭಿಣಿಯು ಹಡೆಯುತ್ತಾಳೆ. ನಿಶ್ಚಯವಾಗಿಯೂ ಉದಯವು ರಾತ್ರಿಯನ್ನು ನಾಶಪಡಿಸುತ್ತದೆ ಮತ್ತು ಹಾಗೆಯೇ ಸಂಜೆಯು ದಿನವನ್ನು ನಾಶಪಡಿಸುತ್ತದೆ.

03225026a ಕ್ರಿಯೇತ ಕಸ್ಮಾನ್ನ ಪರೇ ಚ ಕುರ್ಯುರ್|

         ವಿತ್ತಂ ನ ದದ್ಯುಃ ಪುರುಷಾಃ ಕಥಂ ಚಿತ್|

03225026c ಪ್ರಾಪ್ಯಾರ್ಥಕಾಲಂ ಚ ಭವೇದನರ್ಥಃ|

         ಕಥಂ ನು ತತ್ಸ್ಯಾದಿತಿ ತತ್ಕುತಃ ಸ್ಯಾತ್||

ಇತರರು ದುಡಿಯದಿರುವಾಗ ಏಕೆ ದುಡಿಯಬೇಕು? ಪುರುಷರು ಎಂದೂ ವಿತ್ತವನ್ನು ದಾನಮಾಡದಿದ್ದರೆ ಏಕೆ ಮಾಡಬೇಕು? ಸಂಪತ್ತಿನ ಕಾಲ ಬಂದರೂ ಸಂಪತ್ತು ಇಲ್ಲವಲ್ಲ! ಏಕೆ ಮಾಡಬೇಕೆಂದು ಯಾರೂ ಏನನ್ನೂ ಮಾಡುವುದಿಲ್ಲ.

03225027a ಕಥಂ ನ ಭಿದ್ಯೇತ ನ ಚ ಸ್ರವೇತ|

         ನ ಚ ಪ್ರಸಿಚ್ಯೇದಿತಿ ರಕ್ಷಿತವ್ಯಂ|

03225027c ಅರಕ್ಷ್ಯಮಾಣಃ ಶತಧಾ ವಿಶೀರ್ಯೇದ್|

         ಧ್ರುವಂ ನ ನಾಶೋಽಸ್ತಿ ಕೃತಸ್ಯ ಲೋಕೇ||

ನಾವು ನಮ್ಮ ಸಂಪತ್ತನ್ನು ಭಾಗವಾಗಬಾರದು, ಒಡೆದುಹೋಗಬಾರದು ಮತ್ತು ಸೋರಿಹೋಗಬಾರದೆಂದು ರಕ್ಷಿಸುತ್ತೇವೆ. ರಕ್ಷಿಸದೇ ಇದ್ದರೆ ಅದು ನೂರು ತುಂಡಾಗಬಹುದು. ನಿಶ್ಚಯವಾಗಿಯೂ ಲೋಕದಲ್ಲಿ ಮಾಡಿದುದು ನಾಶವಾಗುವುದಿಲ್ಲ.

03225028a ಗತೋ ಹ್ಯರಣ್ಯಾದಪಿ ಶಕ್ರಲೋಕಂ|

         ಧನಂಜಯಃ ಪಶ್ಯತ ವೀರ್ಯಮಸ್ಯ|

03225028c ಅಸ್ತ್ರಾಣಿ ದಿವ್ಯಾನಿ ಚತುರ್ವಿಧಾನಿ|

         ಜ್ಞಾತ್ವಾ ಪುನರ್ಲೋಕಮಿಮಂ ಪ್ರಪನ್ನಃ||

ಅರಣ್ಯದಿಂದ ಶಕ್ರಲೋಕಕ್ಕೆ ಹೋದ ಧನಂಜಯನ ವೀರ್ಯವನ್ನು ನೋಡು! ಅವನು ಪುನಃ ಈ ಲೋಕಕ್ಕೆ ಬಂದಾಗ ಅವನಿಗೆ ನಾಲ್ಕು ವಿಧದ ದಿವ್ಯ ಅಸ್ತ್ರಗಳು ತಿಳಿದಿದ್ದವು.

03225029a ಸ್ವರ್ಗಂ ಹಿ ಗತ್ವಾ ಸಶರೀರ ಏವ|

         ಕೋ ಮಾನುಷಃ ಪುನರಾಗಂತುಮಿಚ್ಚೇತ್|

03225029c ಅನ್ಯತ್ರ ಕಾಲೋಪಹತಾನನೇಕಾನ್|

         ಸಮೀಕ್ಷಮಾಣಸ್ತು ಕುರೂನ್ಮುಮೂರ್ಷೂನ್||

ಸಶರೀರನಾಗಿಯೇ ಸ್ವರ್ಗಕ್ಕೆ ಹೋಗಿ, ಲೆಕ್ಕವಿಲ್ಲದಷ್ಟು ಕುರುಗಳು ಕಾಲನಿಂದ ಹತರಾಗುವುದನ್ನು ಕಾಣದ ಯಾವ ಮನುಷ್ಯನು ಪುನಃ ಬರಲು ಬಯಸುತ್ತಾನೆ?

03225030a ಧನುರ್ಗ್ರಾಹಶ್ಚಾರ್ಜುನಃ ಸವ್ಯಸಾಚೀ|

         ಧನುಶ್ಚ ತದ್ಗಾಂಡಿವಂ ಲೋಕಸಾರಂ|

03225030c ಅಸ್ತ್ರಾಣಿ ದಿವ್ಯಾನಿ ಚ ತಾನಿ ತಸ್ಯ|

         ತ್ರಯಸ್ಯ ತೇಜಃ ಪ್ರಸಹೇತ ಕೋ ನು||

ಆ ಧನುಷ್ಪಾಣಿ ಅರ್ಜುನ ಸವ್ಯಸಾಚಿಯ, ಲೋಕಸಾರವಾದ ಆ ಗಾಂಡೀವ ಧನುಸ್ಸಿನ, ಮತ್ತು ಅವನ ದಿವ್ಯಾಸ್ತ್ರಗಳ - ಈ ಮೂರರ ತೇಜಸ್ಸನ್ನು ಯಾರುತಾನೇ ಸಹಿಸಿಯಾರು?”

03225031a ನಿಶಮ್ಯ ತದ್ವಚನಂ ಪಾರ್ಥಿವಸ್ಯ|

         ದುರ್ಯೋಧನೋ ರಹಿತೇ ಸೌಬಲಶ್ಚ|

03225031c ಅಬೋಧಯತ್ಕರ್ಣಮುಪೇತ್ಯ ಸರ್ವಂ|

         ಸ ಚಾಪ್ಯಹೃಷ್ಟೋಽಭವದಲ್ಪಚೇತಾಃ||

ದುರ್ಯೋಧನ ಮತ್ತು ಸೌಬಲರು ಗುಟ್ಟಿನಲ್ಲಿ ಪಾರ್ಥಿವನ ಆ ಮಾತುಗಳನ್ನು ಕೇಳಿ ಎಲ್ಲವನ್ನೂ ಕರ್ಣನಿಗೆ ಹೋಗಿ ಹೇಳಿದರು. ಅದರಿಂದ ಅವನು ಸಂತೋಷವನ್ನು ಕಳೆದುಕೊಂಡು ಅಲ್ಪಚೇತಸನಾದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಧೃತರಾಷ್ಟ್ರಖೇದವಾಕ್ಯೇ ಪಂಚವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಧೃತರಾಷ್ಟ್ರಖೇದವಾಕ್ಯದಲ್ಲಿ ಇನ್ನೂರಾಇಪ್ಪತ್ತೈದನೆಯ ಅಧ್ಯಾಯವು.

Related image

Comments are closed.