ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ
Contents
Toggle೨೦೧
ರಾಗದೋಷಗಳ ಕುರಿತು ಹೇಳಿದುದು (೧-೧೧). ಇಪ್ಪತ್ನಾಲ್ಕು ಗುಣಗಳ ವರ್ಣನೆ (೧೨-೨೦).
03201001 ಮಾರ್ಕಂಡೇಯ ಉವಾಚ|
03201001a ಏವಮುಕ್ತಸ್ತು ವಿಪ್ರೇಣ ಧರ್ಮವ್ಯಾಧೋ ಯುಧಿಷ್ಠಿರ|
03201001c ಪ್ರತ್ಯುವಾಚ ಯಥಾ ವಿಪ್ರಂ ತಚ್ಚೃಣುಷ್ವ ನರಾಧಿಪ||
ಮಾರ್ಕಂಡೇಯನು ಹೇಳಿದನು: “ಯುಧಿಷ್ಠಿರ! ನರಾಧಿಪ! ವಿಪ್ರನ ಈ ಮಾತುಗಳಿಗೆ ಧರ್ಮವ್ಯಾಧನು ಹೇಗೆ ವಿಪ್ರನಿಗೆ ಉತ್ತರಿಸಿದನು ಎನ್ನುವುದನ್ನು ಕೇಳು.
03201002 ವ್ಯಾಧ ಉವಾಚ|
03201002a ವಿಜ್ಞಾನಾರ್ಥಂ ಮನುಷ್ಯಾಣಾಂ ಮನಃ ಪೂರ್ವಂ ಪ್ರವರ್ತತೇ|
03201002c ತತ್ಪ್ರಾಪ್ಯ ಕಾಮಂ ಭಜತೇ ಕ್ರೋಧಂ ಚ ದ್ವಿಜಸತ್ತಮ||
ವ್ಯಾಧನು ಹೇಳಿದನು: “ದ್ವಿಜಸತ್ತಮ! ತಿಳಿದುಕೊಳ್ಳುವುದಕ್ಕಾಗಿ ಮನುಷ್ಯರಲ್ಲಿ ಮೊದಲು ಮನಸ್ಸು ಕಾರ್ಯಗತವಾಗುತ್ತದೆ. ಅದನ್ನು ಪಡೆದನಂತರ ಕಾಮ, ಪ್ರೇಮ, ಕ್ರೋಧಗಳುಂಟಾಗುತ್ತವೆ.
03201003a ತತಸ್ತದರ್ಥಂ ಯತತೇ ಕರ್ಮ ಚಾರಭತೇ ಮಹತ್|
03201003c ಇಷ್ಟಾನಾಂ ರೂಪಗಂಧಾನಾಮಭ್ಯಾಸಂ ಚ ನಿಷೇವತೇ||
ಅದನ್ನು ತೃಪ್ತಿಗೊಳಿಸಲು ಮಹಾ ಕರ್ಮಗಳನ್ನು ಮಾಡಲಾಗುತ್ತದೆ. ಇಷ್ಟವಾದ ರೂಪಗಂಧಗಳನ್ನು ಅಭ್ಯಾಸಬಲದಿಂದ ಸೇವಿಸಲಾಗುತ್ತದೆ.
03201004a ತತೋ ರಾಗಃ ಪ್ರಭವತಿ ದ್ವೇಷಶ್ಚ ತದನಂತರಂ|
03201004c ತತೋ ಲೋಭಃ ಪ್ರಭವತಿ ಮೋಹಶ್ಚ ತದನಂತರಂ||
ಆಗ ರಾಗವು ಹುಟ್ಟುತ್ತದೆ ಮತ್ತು ಅದರ ನಂತರ ದ್ವೇಷ. ಅನಂತರ ಲೋಭವು ಹುಟ್ಟುತ್ತದೆ ಮತ್ತು ಅದರ ನಂತರ ಮೋಹ.
03201005a ತಸ್ಯ ಲೋಭಾಭಿಭೂತಸ್ಯ ರಾಗದ್ವೇಷಹತಸ್ಯ ಚ|
03201005c ನ ಧರ್ಮೇ ಜಾಯತೇ ಬುದ್ಧಿರ್ವ್ಯಾಜಾದ್ಧರ್ಮಂ ಕರೋತಿ ಚ|
ಲೋಭದಿಂದ ಆಳಲ್ಪಡುತ್ತಾನೆ, ರಾಗದ್ವೇಷಗಳಿಂದ ಪೆಟ್ಟು ತಿನ್ನುತ್ತಾನೆ. ಬುದ್ಧಿಯು ಧರ್ಮದ ಕಡೆ ಹೋಗುವುದಿಲ್ಲ. ಧರ್ಮದಲ್ಲಿರುವಂತೆ ನಟಿಸುತ್ತಾನೆ.
03201006a ವ್ಯಾಜೇನ ಚರತೇ ಧರ್ಮಮರ್ಥಂ ವ್ಯಾಜೇನ ರೋಚತೇ|
03201006c ವ್ಯಾಜೇನ ಸಿಧ್ಯಮಾನೇಷು ಧನೇಷು ದ್ವಿಜಸತ್ತಮ|
03201006e ತತ್ರೈವ ರಮತೇ ಬುದ್ಧಿಸ್ತತಃ ಪಾಪಂ ಚಿಕೀರ್ಷತಿ||
ಕಪಟ ಧರ್ಮದಲ್ಲಿ ನಡೆಯುತ್ತಾನೆ. ಕಪಟನಾಗಿ ಸಂಪತ್ತನ್ನು ಬಯಸುತ್ತಾನೆ. ದ್ವಿಜಸತ್ತಮ! ಕಪಟತನದಲ್ಲಿ ಸಂಪತ್ತನ್ನು ಗಳಿಸುತ್ತಾನೆ. ಆಗ ಬುದ್ಧಿಯು ಅದರಲ್ಲಿಯೇ ರಮಿಸಿ ಪಾಪವನ್ನೆಸಗುತ್ತಾನೆ.
03201007a ಸುಹೃದ್ಭಿರ್ವಾರ್ಯಮಾಣಶ್ಚ ಪಂಡಿತೈಶ್ಚ ದ್ವಿಜೋತ್ತಮ|
03201007c ಉತ್ತರಂ ಶ್ರುತಿಸಂಬದ್ಧಂ ಬ್ರವೀತಿ ಶ್ರುತಿಯೋಜಿತಂ||
ದ್ವಿಜೋತ್ತಮ! ಸ್ನೇಹಿತರು ಮತ್ತು ಪಂಡಿತರು ಅವನನ್ನು ತಡೆದರೂ ಅವನು ಶ್ರುತಿಸಂಬದ್ಧವಾದ ಶ್ರುತಿಯೋಜಿತವಾದ ಉತ್ತರವನ್ನೇ ಅವರಿಗೆ ಹೇಳುತ್ತಾನೆ.
03201008a ಅಧರ್ಮಸ್ತ್ರಿವಿಧಸ್ತಸ್ಯ ವರ್ಧತೇ ರಾಗದೋಷತಃ|
03201008c ಪಾಪಂ ಚಿಂತಯತೇ ಚಾಪಿ ಬ್ರವೀತಿ ಚ ಕರೋತಿ ಚ||
ರಾಗ ದೋಷದಿಂದ ಅವನ ಅಧರ್ಮವು ಮೂರುವಿಧಗಳಲ್ಲಿ ಹೆಚ್ಚಾಗುತ್ತದೆ; ಪಾಪವನ್ನು ಯೋಚಿಸುತ್ತಾನೆ, ಮಾತನಾಡುತ್ತಾನೆ ಮತ್ತು ಮಾಡುತ್ತಾನೆ ಕೂಡ.
03201009a ತಸ್ಯಾಧರ್ಮಪ್ರವೃತ್ತಸ್ಯ ಗುಣಾ ನಶ್ಯಂತಿ ಸಾಧವಃ|
03201009c ಏಕಶೀಲಾಶ್ಚ ಮಿತ್ರತ್ವಂ ಭಜಂತೇ ಪಾಪಕರ್ಮಿಣಃ||
ಅವನ ಅಧರ್ಮಪ್ರವೃತ್ತಿಯಿಂದ ಒಳ್ಳೆಯ ಗುಣಗಳು ನಾಶವಾಗುತ್ತವೆ. ಅದೇ ನಡತೆಯ ಪಾಪಕರ್ಮಿಗಳು ಅವನ ಮಿತ್ರತ್ವವನ್ನು ಬಯಸುತ್ತಾರೆ.
03201010a ಸ ತೇನಾಸುಖಮಾಪ್ನೋತಿ ಪರತ್ರ ಚ ವಿಹನ್ಯತೇ|
03201010c ಪಾಪಾತ್ಮಾ ಭವತಿ ಹ್ಯೇವಂ ಧರ್ಮಲಾಭಂ ತು ಮೇ ಶೃಣು||
ಅವನು ಅಸುಖವನ್ನೇ ಹೊಂದುತ್ತಾನೆ ಮತ್ತು ನಂತರದಲ್ಲಿ ನಾಶಹೊಂದುತ್ತಾನೆ. ಪಾಪಾತ್ಮನು ಹೀಗೆಯೇ ಆಗುತ್ತಾನೆ. ಈಗ ಧರ್ಮಲಾಭದ ಕುರಿತು ನನ್ನಿಂದ ಕೇಳು.
03201011a ಯಸ್ತ್ವೇತಾನ್ಪ್ರಜ್ಞಯಾ ದೋಷಾನ್ಪೂರ್ವಮೇವಾನುಪಶ್ಯತಿ|
03201011c ಕುಶಲಃ ಸುಖದುಃಖೇಷು ಸಾಧೂಂಶ್ಚಾಪ್ಯುಪಸೇವತೇ|
03201011e ತಸ್ಯ ಸಾಧುಸಮಾರಂಭಾದ್ಬುದ್ಧಿರ್ಧರ್ಮೇಷು ಜಾಯತೇ||
ಯಾರು ತನ್ನ ಪ್ರಜ್ಞೆಯ ಮೂಲಕ ಈ ದೋಷಗಳನ್ನು ಮೊದಲೇ ಕಂಡುಕೊಳ್ಳುತ್ತಾನೋ ಮತ್ತು ಸುಖ ದುಃಖಗಳೇನೆಂದು ತಿಳಿದಿರುವನೋ ಅವನು ಒಳ್ಳೆಯ ಜನರೊಡನೆ ಒಡನಾಡುತ್ತಾನೆ. ಒಳ್ಳೆಯ ಕಾರ್ಯಗಳನ್ನು ಆರಂಭಿಸಿದುದರಿಂದ ಅವನ ಬುದ್ಧಿಯು ಧರ್ಮದ ಕಡೆ ನಡೆಯುತ್ತದೆ.”
03201012 ಬ್ರಾಹ್ಮಣ ಉವಾಚ|
03201012a ಬ್ರವೀಷಿ ಸೂನೃತಂ ಧರ್ಮಂ ಯಸ್ಯ ವಕ್ತಾ ನ ವಿದ್ಯತೇ|
03201012c ದಿವ್ಯಪ್ರಭಾವಃ ಸುಮಹಾನೃಷಿರೇವ ಮತೋಽಸಿ ಮೇ||
ಬ್ರಾಹ್ಮಣನು ಹೇಳಿದನು: “ವಕ್ತಾರನೇ ಇಲ್ಲದ ಸುಖಕರವಾದ ಧರ್ಮದ ಕುರಿತು ನೀನು ಹೇಳುತ್ತಿರುವೆ. ನೀನು ಓರ್ವ ದಿವ್ಯದೃಷ್ಟಿಯ ಮಹಾ ಋಷಿಯೆಂದೇ ನನಗನ್ನಿಸುತ್ತದೆ.”
03201013 ವ್ಯಾಧ ಉವಾಚ|
03201013a ಬ್ರಾಹ್ಮಣಾ ವೈ ಮಹಾಭಾಗಾಃ ಪಿತರೋಽಗ್ರಭುಜಃ ಸದಾ|
03201013c ತೇಷಾಂ ಸರ್ವಾತ್ಮನಾ ಕಾರ್ಯಂ ಪ್ರಿಯಂ ಲೋಕೇ ಮನೀಷಿಣಾ||
ವ್ಯಾಧನು ಹೇಳಿದನು: “ಪಿತೃಗಳಂತೆ ಮಹಾಭಾಗ ಬ್ರಾಹ್ಮಣರೂ ಸದಾ ಮೊದಲು ಆಹಾರಕ್ಕೆ ಅರ್ಹರು. ಈ ಲೋಕದಲ್ಲಿ ತಿಳಿದವನು ಅವರಿಗೆ ತೃಪ್ತಿಕೊಡುವ ಕಾರ್ಯವನ್ನು ಕೈಗೊಳ್ಳಬೇಕು.
03201014a ಯತ್ತೇಷಾಂ ಚ ಪ್ರಿಯಂ ತತ್ತೇ ವಕ್ಷ್ಯಾಮಿ ದ್ವಿಜಸತ್ತಮ|
03201014c ನಮಸ್ಕೃತ್ವಾ ಬ್ರಾಹ್ಮಣೇಭ್ಯೋ ಬ್ರಾಹ್ಮೀಂ ವಿದ್ಯಾಂ ನಿಬೋಧ ಮೇ||
ದ್ವಿಜಸತ್ತಮ! ಅವರಿಗೆ ಪ್ರಿಯವಾದುದು ಏನೆಂದು ಹೇಳುತ್ತೇನೆ. ಬ್ರಾಹ್ಮಣರಿಗೆ ನಮಸ್ಕರಿಸಿ, ಬ್ರಾಹ್ಮೀ ವಿದ್ಯೆಯನ್ನು ನನ್ನಿಂದ ಕೇಳು.
03201015a ಇದಂ ವಿಶ್ವಂ ಜಗತ್ಸರ್ವಮಜಯ್ಯಂ ಚಾಪಿ ಸರ್ವಶಃ|
03201015c ಮಹಾಭೂತಾತ್ಮಕಂ ಬ್ರಹ್ಮನ್ನಾತಃ ಪರತರಂ ಭವೇತ್||
ಬ್ರಹ್ಮನ್! ಯಾವುದರಿಂದಲೂ ಅಜೇಯವಾಗಿರುವ, ಈ ಸರ್ವ ವಿಶ್ವ, ಜಗತ್ತೂ, ಮಹಾಭೂತಗಳಿಂದ ಕೂಡಿದೆ. ಅವುಗಳಿಗೂ ಮಿಗಿಲಾದುದು ಬೇರೊಂದಿಲ್ಲ.
03201016a ಮಹಾಭೂತಾನಿ ಖಂ ವಾಯುರಗ್ನಿರಾಪಸ್ತಥಾ ಚ ಭೂಃ|
03201016c ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧಶ್ಚ ತದ್ಗುಣಾಃ||
ಈ ಮಹಾಭೂತಗಳು - ಆಕಾಶ, ವಾಯು, ಅಗ್ನಿ, ನೀರು, ಮತ್ತು ಭೂಮಿ. ಅವುಗಳ ಗುಣಗಳು - ಶಬ್ದ, ಸ್ಪರ್ಶ, ರೂಪ, ರಸ, ಮತ್ತು ಗಂಧ.
03201017a ತೇಷಾಮಪಿ ಗುಣಾಃ ಸರ್ವೇ ಗುಣವೃತ್ತಿಃ ಪರಸ್ಪರಂ|
03201017c ಪೂರ್ವಪೂರ್ವಗುಣಾಃ ಸರ್ವೇ ಕ್ರಮಶೋ ಗುಣಿಷು ತ್ರಿಷು||
ಅವೆಲ್ಲವುಗಳಲ್ಲಿ ತಮ್ಮದೇ ಆದ ಪ್ರತ್ಯೇಕ ಗುಣಗಳಿದ್ದರೂ, ಅವು ಪರಸ್ಪರರ ಗುಣಗಳನ್ನೂ ಹೊಂದಿವೆ. ಕ್ರಮವಾಗಿ ಪ್ರತಿಯೊಂದರಲ್ಲಿಯೂ ಅದರ ಹಿಂದಿನ ಮೂರು ಭೂತಗಳ ಗುಣಗಳೂ ಸೇರಿವೆ.
03201018a ಷಷ್ಠಸ್ತು ಚೇತನಾ ನಾಮ ಮನ ಇತ್ಯಭಿಧೀಯತೇ|
03201018c ಸಪ್ತಮೀ ತು ಭವೇದ್ಬುದ್ಧಿರಹಂಕಾರಸ್ತತಃ ಪರಂ||
ಆರನೆಯದು ಚೇತನ. ಇದನ್ನು ಮನಸ್ಸು ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಏಳನೆಯದು ಬುದ್ಧಿ. ಅಹಂಕಾರವು ಅದರ ನಂತರದ್ದು.
03201019a ಇಂದ್ರಿಯಾಣಿ ಚ ಪಂಚೈವ ರಜಃ ಸತ್ತ್ವಂ ತಮಸ್ತಥಾ|
03201019c ಇತ್ಯೇಷ ಸಪ್ತದಶಕೋ ರಾಶಿರವ್ಯಕ್ತಸಂಜ್ಞಕಃ||
ಇಂದ್ರಿಯಗಳು ಐದು. ರಜ, ಸತ್ವ ಮತ್ತು ತಮಗಳು ಕೂಡ. ಈ ಹದಿನೇಳರ ಗುಂಪು ಅವ್ಯಕ್ತ ಎಂದು ತಿಳಿಯಲ್ಪಟ್ಟಿದೆ.
03201020a ಸರ್ವೈರಿಹೇಂದ್ರಿಯಾರ್ಥೈಸ್ತು ವ್ಯಕ್ತಾವ್ಯಕ್ತೈಃ ಸುಸಂವೃತಃ|
03201020c ಚತುರ್ವಿಂಶಕ ಇತ್ಯೇಷ ವ್ಯಕ್ತಾವ್ಯಕ್ತಮಯೋ ಗುಣಃ|
03201020e ಏತತ್ತೇ ಸರ್ವಮಾಖ್ಯಾತಂ ಕಿಂ ಭೂಯೋ ಶ್ರೋತುಮಿಚ್ಚಸಿ||
ಎಲ್ಲ ಇಂದ್ರಿಯ ವಸ್ತುಗಳಲ್ಲಿ, ಮನಸ್ಸು ಮತ್ತು ಬುದ್ಧಿಗಳಲ್ಲಿ ಹುದುಗಿರುವ ವ್ಯಕ್ತ ಮತ್ತು ಅವ್ಯಕ್ತಗಳನ್ನೂ ಸೇರಿ ಇಪ್ಪತ್ನಾಲ್ಕು ವ್ಯಕ್ತ-ಅವ್ಯಕ್ತ ಗುಣಗಳೆಂದು ಕರೆಯಲ್ಪಟ್ಟಿದೆ. ಈ ಎಲ್ಲವನ್ನೂ ನಿನಗೆ ಹೇಳಿದ್ದೇನೆ. ಇನ್ನು ಏನನ್ನು ಕೇಳ ಬಯಸುತ್ತೀಯೆ?””
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವ ಬ್ರಾಹ್ಮಣವಾಕ್ಯೇ ಏಕಾಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಬ್ರಾಹ್ಮಣವಾಕ್ಯದಲ್ಲಿ ಇನ್ನೂರಾಒಂದನೆಯ ಅಧ್ಯಾಯವು.
