Aranyaka Parva: Chapter 194

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೧೯೪

ಮಧು-ಕೈಟಭ ವಧೆ

ಆ ಕಾರ್ಯವನ್ನು ತನ್ನ ಮಗ ಕುವಲಾಶ್ವನು ಮಾಡುತ್ತಾನೆಂದು ಹೇಳಿ ಬೃಹದಶ್ವನು ತೆರಳಿದುದು (೧-೫). ಯುಧಿಷ್ಠಿರನು ಧುಂಧುವಿನ ಕುರಿತು ಕೇಳಲು ಮಾರ್ಕಂಡೇಯನು ಮಧು-ಕೈಟಭರು ವಿಷ್ಣುವಿನಿಂದ ವಧಿಸಲ್ಪಟ್ಟಿದುದನ್ನು ವರ್ಣಿಸಿದುದು (೬-೩೦).

03194001 ಮಾರ್ಕಂಡೇಯ ಉವಾಚ|

03194001a ಸ ಏವಮುಕ್ತೋ ರಾಜರ್ಷಿರುತ್ತಂಕೇನಾಪರಾಜಿತಃ|

03194001c ಉತ್ತಂಕಂ ಕೌರವಶ್ರೇಷ್ಠ ಕೃತಾಂಜಲಿರಥಾಬ್ರವೀತ್||

ಮಾರ್ಕಂಡೇಯನು ಹೇಳಿದನು: “ಉತ್ತಂಕನು ಹೀಗೆ ಹೇಳಲು ಆ ಅಪರಾಜಿತ ರಾಜರ್ಷಿಯು ಅಂಜಲೀಬದ್ಧನಾಗಿ ಉತ್ತಂಕನಿಗೆ ಹೇಳಿದನು:

03194002a ನ ತೇಽಭಿಗಮನಂ ಬ್ರಹ್ಮನ್ಮೋಘಮೇತದ್ಭವಿಷ್ಯತಿ|

03194002c ಪುತ್ರೋ ಮಮಾಯಂ ಭಗವನ್ಕುವಲಾಶ್ವ ಇತಿ ಸ್ಮೃತಃ||

“ಬ್ರಹ್ಮನ್! ನಿನ್ನ ಆಗಮನವು ವ್ಯರ್ಥವಾಗುವುದಿಲ್ಲ. ಭಗವನ್! ನನ್ನ ಪುತ್ರ ಕುವಲಾಶ್ವನೆಂದು ಪ್ರಸಿದ್ಧ.

03194003a ಧೃತಿಮಾನ್ ಕ್ಷಿಪ್ರಕಾರೀ ಚ ವೀರ್ಯೇಣಾಪ್ರತಿಮೋ ಭುವಿ|

03194003c ಪ್ರಿಯಂ ವೈ ಸರ್ವಮೇತತ್ತೇ ಕರಿಷ್ಯತಿ ನ ಸಂಶಯಃ||

ಅವನು ಧೃತಿವಂತ, ಕ್ಷಿಪ್ರಕಾರಿ ಮತ್ತು ವೀರ್ಯದಲ್ಲಿ ಭೂಮಿಯಲ್ಲಿಯೇ ಅಪ್ರತಿಮ. ಇವನು ನಿನ್ನ ಸರ್ವ ಪ್ರಿಯ ಕಾರ್ಯಗಳನ್ನು ಮಾಡುತ್ತಾನೆ. ಸಂಶಯವಿಲ್ಲ.

03194004a ಪುತ್ರೈಃ ಪರಿವೃತಃ ಸರ್ವೈಃ ಶೂರೈಃ ಪರಿಘಬಾಹುಭಿಃ|

03194004c ವಿಸರ್ಜಯಸ್ವ ಮಾಂ ಬ್ರಹ್ಮನ್ನ್ಯಸ್ತಶಸ್ತ್ರೋಽಸ್ಮಿ ಸಾಂಪ್ರತಂ||

ಅವನು ಎಲ್ಲ ಶೂರ ಪರಿಘಬಾಹು ಮಕ್ಕಳಿಂದ ಸುತ್ತುವರೆದಿದ್ದಾನೆ. ನನ್ನನ್ನು ಬಿಟ್ಟುಬಿಡು ಬ್ರಹ್ಮನ್! ನಾನು ನನ್ನ ಶಸ್ತ್ರಗಳನ್ನು ವಿಸರ್ಜಿಸಿದ್ದೇನೆ.”

03194005a ತಥಾಸ್ತ್ವಿತಿ ಚ ತೇನೋಕ್ತೋ ಮುನಿನಾಮಿತತೇಜಸಾ|

03194005c ಸ ತಮಾದಿಶ್ಯ ತನಯಮುತ್ತಂಕಾಯ ಮಹಾತ್ಮನೇ||

03194005e ಕ್ರಿಯತಾಮಿತಿ ರಾಜರ್ಷಿರ್ಜಗಾಮ ವನಮುತ್ತಮಂ||

ಹಾಗೆಯೆ ಆಗಲೆಂದು ಅಮಿತತೇಜಸ್ವಿ ಮುನಿಯು ಹೇಳಿದನು. ಆಗ ತನ್ನ ತನಯನನ್ನು ಮಹಾತ್ಮ ಉತ್ತಂಕನಿಗೆ ಒಪ್ಪಿಸಿ ಕಾರ್ಯವನ್ನು ನಡೆಸಿಕೊಡು ಎಂದು ಆದೇಶವನ್ನಿತ್ತು ರಾಜರ್ಷಿಯು ಉತ್ತಮ ವನಕ್ಕೆ ತೆರಳಿದನು.”

03194006 ಯುಧಿಷ್ಠಿರ ಉವಾಚ|

03194006a ಕ ಏಷ ಭಗವನ್ದೈತ್ಯೋ ಮಹಾವೀರ್ಯಸ್ತಪೋಧನ|

03194006c ಕಸ್ಯ ಪುತ್ರೋಽಥ ನಪ್ತಾ ವಾ ಏತದಿಚ್ಚಾಮಿ ವೇದಿತುಂ||

ಯುದಿಷ್ಠಿರನು ಹೇಳಿದನು: “ಭಗವನ್! ತಪೋಧನ! ಈ ಮಹಾವೀರ್ಯ ದೈತ್ಯನು ಯಾರು? ಯಾರ ಮಗನಿವನು? ಇದನ್ನು ತಿಳಿಯಲು ಬಯಸುತ್ತೇನೆ.

03194007a ಏವಂ ಮಹಾಬಲೋ ದೈತ್ಯೋ ನ ಶ್ರುತೋ ಮೇ ತಪೋಧನ|

03194007c ಏತದಿಚ್ಚಾಮಿ ಭಗವನ್ಯಾಥಾತಥ್ಯೇನ ವೇದಿತುಂ||

03194007e ಸರ್ವಮೇವ ಮಹಾಪ್ರಾಜ್ಞ ವಿಸ್ತರೇಣ ತಪೋಧನ||

ತಪೋಧನ! ಮಹಾಪ್ರಾಜ್ಞ! ಈ ಮಹಾಬಲಿ ದೈತ್ಯನ ಕುರಿತು ನಾನು ಕೇಳಿಲ್ಲ. ಭಗವನ್! ಇವನ ಕುರಿತು ಯಥಾವತ್ತಾಗಿ ಎಲ್ಲವನ್ನೂ ವಿಸ್ತಾರದಲ್ಲಿ ತಿಳಿಯಲು ಬಯಸುತ್ತೇನೆ.”

03194008 ಮಾರ್ಕಂಡೇಯ ಉವಾಚ|

03194008a ಶೃಣು ರಾಜನ್ನಿದಂ ಸರ್ವಂ ಯಥಾವೃತ್ತಂ ನರಾಧಿಪ|

03194008c ಏಕಾರ್ಣವೇ ತದಾ ಘೋರೇ ನಷ್ಟೇ ಸ್ಥಾವರಜಂಗಮೇ||

03194008e ಪ್ರನಷ್ಟೇಷು ಚ ಭೂತೇಷು ಸರ್ವೇಷು ಭರತರ್ಷಭ||

03194009a ಪ್ರಭವಃ ಸರ್ವಭೂತಾನಾಂ ಶಾಶ್ವತಃ ಪುರುಷೋಽವ್ಯಯಃ|

03194009c ಸುಷ್ವಾಪ ಭಗವಾನ್ವಿಷ್ಣುರಪ್ಶಯ್ಯಾಮೇಕ ಏವ ಹ||

03194009e ನಾಗಸ್ಯ ಭೋಗೇ ಮಹತಿ ಶೇಷಸ್ಯಾಮಿತತೇಜಸಃ||

ಮಾರ್ಕಂಡೇಯನು ಹೇಳಿದನು: “ರಾಜನ್! ನರಾಧಿಪ! ನಡೆದಂತೆ ಎಲ್ಲವನ್ನೂ ಕೇಳು. ಭರತರ್ಷಭ! ಘೋರವಾದ ಸಾಗರವೊಂದೇ ಇದ್ದಾಗ, ಸ್ಥಾವರಜಂಗಮ ಸರ್ವ ಭೂತಗಳು ನಷ್ಟವಾಗಿದ್ದಾಗ, ಸರ್ವಭೂತಗಳ ಪ್ರಭವ, ಶಾಶ್ವತ, ಪುರುಷ, ಅವ್ಯಯ, ಭಗವಾನ್ ವಿಷ್ಣುವು ಈ ನೀರಿನ ಹಾಸಿಗೆಯ ಮೇಲೆ ಏಕಾಂಗಿಯಾಗಿ, ಅಮಿತ ತೇಜಸ್ವಿ ನಾಗ ಶೇಷನ ಸುರಳಿಯಲ್ಲಿ ಮಲಗಿದ್ದನು.

03194010a ಲೋಕಕರ್ತಾ ಮಹಾಭಾಗ ಭಗವಾನಚ್ಯುತೋ ಹರಿಃ|

03194010c ನಾಗಭೋಗೇನ ಮಹತಾ ಪರಿರಭ್ಯ ಮಹೀಮಿಮಾಂ||

ಲೋಕಕರ್ತ, ಮಹಾಭಾಗ, ಭಗವಾನ, ಅಚ್ಯುತ ಹರಿಯು ನಾಗನ ಮಹಾಸುರುಳಿಯಲ್ಲಿ ಈ ಮಹಿಯನ್ನು ಸುತ್ತುವರೆದು ಮಲಗಿದ್ದನು.

03194011a ಸ್ವಪತಸ್ತಸ್ಯ ದೇವಸ್ಯ ಪದ್ಮಂ ಸೂರ್ಯಸಮಪ್ರಭಂ|

03194011c ನಾಭ್ಯಾಂ ವಿನಿಃಸೃತಂ ತತ್ರ ಯತ್ರೋತ್ಪನ್ನಃ ಪಿತಾಮಹಃ||

03194011e ಸಾಕ್ಷಾಲ್ಲೋಕಗುರುರ್ಬ್ರಹ್ಮಾ ಪದ್ಮೇ ಸೂರ್ಯೇಂದುಸಪ್ರಭೇ||

03194012a ಚತುರ್ವೇದಶ್ಚತುರ್ಮೂರ್ತಿಸ್ತಥೈವ ಚ ಚತುರ್ಮುಖಃ|

03194012c ಸ್ವಪ್ರಭಾವಾದ್ದುರಾಧರ್ಷೋ ಮಹಾಬಲಪರಾಕ್ರಮಃ||

ದೇವನು ಮಲಗಿರಲು ಅವನ ಹೊಕ್ಕಳಿನಿಂದ ಸೂರ್ಯಸಮಪ್ರಭೆಯ ಪದ್ಮವು ಅರಳಿತು. ಸೂರ್ಯ-ಚಂದ್ರರ ಪ್ರಭೆಯುಳ್ಳ ಆ ಪದ್ಮದಲ್ಲಿ ಸಾಕ್ಷಾತ್ ಲೋಕಗುರು ಪಿತಾಮಹ ಬ್ರಹ್ಮನು - ಚತುರ್ವೇದ,  ಚತುರ್ಮೂರ್ತಿ, ಚತುರ್ಮುಖ, ಸ್ವಪ್ರಭಾವದಿಂದ ದುರಾಧರ್ಷ ಮಹಾಬಲಪರಾಕ್ರಮಿಯು - ಉತ್ಪನ್ನನಾದನು.

03194013a ಕಸ್ಯ ಚಿತ್ತ್ವಥ ಕಾಲಸ್ಯ ದಾನವೌ ವೀರ್ಯವತ್ತರೌ|

03194013c ಮಧುಶ್ಚ ಕೈಟಭಶ್ಚೈವ ದೃಷ್ಟವಂತೌ ಹರಿಂ ಪ್ರಭುಂ||

03194014a ಶಯಾನಂ ಶಯನೇ ದಿವ್ಯೇ ನಾಗಭೋಗೇ ಮಹಾದ್ಯುತಿಂ|

03194014c ಬಹುಯೋಜನವಿಸ್ತೀರ್ಣೇ ಬಹುಯೋಜನಮಾಯತೇ||

03194015a ಕಿರೀಟಕೌಸ್ತುಭಧರಂ ಪೀತಕೌಶೇಯವಾಸಸಂ|

03194015c ದೀಪ್ಯಮಾನಂ ಶ್ರಿಯಾ ರಾಜಂಸ್ತೇಜಸಾ ವಪುಷಾ ತಥಾ||

03194015e ಸಹಸ್ರಸೂರ್ಯಪ್ರತಿಮಮದ್ಭುತೋಪಮದರ್ಶನಂ||

ಇದೇ ಕಾಲದಲ್ಲಿ ವೀರ್ಯವಂತರಾದ ಮಧು-ಕೈಟಭರು ಜನಿಸಿದರು. ಮಧು-ಕೈಟಭರು ಬಹುಯೋಜನ ವಿಸ್ತೀರ್ಣದ ಬಹು ಯೋಜನ ಅಗಲದ ದಿವ್ಯವಾದ ನಾಗಭೋಗದ ಶಯನದಲ್ಲಿ ಮಲಗಿದ್ದ ಮಹಾದ್ಯುತಿ, ಕಿರೀಟ-ಕೌಸ್ತುಭಗಳನ್ನು ಧರಿಸಿದ್ದ, ಪೀತಕೌಶೇಯವನ್ನು ಉಟ್ಟಿದ್ದ, ಸಹಸ್ರಸೂರ್ಯಪ್ರತಿಮನಾದ, ಅದ್ಭುತವಾಗಿ ತೋರುತ್ತಿದ್ದ ಹರಿ ಪ್ರಭುವನ್ನು ನೋಡಿದರು.

03194016a ವಿಸ್ಮಯಃ ಸುಮಹಾನಾಸೀನ್ಮಧುಕೈಟಭಯೋಸ್ತದಾ|

03194016c ದೃಷ್ಟ್ವಾ ಪಿತಾಮಹಂ ಚೈವ ಪದ್ಮೇ ಪದ್ಮನಿಭೇಕ್ಷಣಂ||

ಪದ್ಮದಲ್ಲಿ ಪದ್ಮನಿಭೇಕ್ಷಣ ಪಿತಾಮಹನನ್ನು ನೋಡಿ ಮಧು-ಕೈಟಭರಿಗೆ ಮಹಾ ವಿಸ್ಮಯವುಂಟಾಯಿತು.

03194017a ವಿತ್ರಾಸಯೇತಾಮಥ ತೌ ಬ್ರಹ್ಮಾಣಮಮಿತೌಜಸಂ|

03194017c ವಿತ್ರಾಸ್ಯಮಾನೋ ಬಹುಶೋ ಬ್ರಹ್ಮಾ ತಾಭ್ಯಾಂ ಮಹಾಯಶಾಃ||

03194017e ಅಕಂಪಯತ್ಪದ್ಮನಾಲಂ ತತೋಽಬುಧ್ಯತ ಕೇಶವಃ||

ಅವರಿಬ್ಬರೂ ಆಗ ಅಮಿತೌಜಸ ಬ್ರಹ್ಮನನ್ನು ಪೀಡಿಸತೊಡಗಿದರು. ಆ ಮಹಾಯಶರಿಂದ ಬಹಳಷ್ಟು ಪೀಡಿತನಾದ ಬ್ರಹ್ಮನು ಪದ್ಮದ ತೊಟ್ಟನ್ನು ಅಲುಗಾಡಿಸಲು, ಅದರಿಂದ ಕೇಶವನು ಎಚ್ಚೆತ್ತನು.

03194018a ಅಥಾಪಶ್ಯತ ಗೋವಿಂದೋ ದಾನವೌ ವೀರ್ಯವತ್ತರೌ|

03194018c ದೃಷ್ಟ್ವಾ ತಾವಬ್ರವೀದ್ದೇವಃ ಸ್ವಾಗತಂ ವಾಂ ಮಹಾಬಲೌ||

03194018e ದದಾನಿ ವಾಂ ವರಂ ಶ್ರೇಷ್ಠಂ ಪ್ರೀತಿರ್ಹಿ ಮಮ ಜಾಯತೇ||

ಆಗ ಗೋವಿಂದನು ವೀರ್ಯವತ್ತರರಾದ ಈರ್ವರು ದಾನವರನ್ನು ನೋಡಿದನು. ನೋಡಿ ಅವರಿಗೆ ದೇವನು ಹೇಳಿದನು: “ನೀವಿಬ್ಬರು ಮಹಾಬಲರಿಗೆ ಸ್ವಾಗತ! ಶ್ರೇಷ್ಠವಾದ ವರವನ್ನು ನೀಡುತ್ತೇನೆ. ನಿಮ್ಮಮೇಲೆ ನನಗೆ ಪ್ರೀತಿಯುಂಟಾಗಿದೆ.”

03194019a ತೌ ಪ್ರಹಸ್ಯ ಹೃಷೀಕೇಶಂ ಮಹಾವೀರ್ಯೌ ಮಹಾಸುರೌ|

03194019c ಪ್ರತ್ಯಬ್ರೂತಾಂ ಮಹಾರಾಜ ಸಹಿತೌ ಮಧುಸೂದನಂ||

ಮಹಾರಾಜ! ಆ ಮಹಾವೀರ್ಯ ಮಹಾಸುರರು ಹೃಷೀಕೇಶನ ಮೇಲೇ ನಗತೊಡಗಿದರು. ಒಟ್ಟಿಗೇ ಮಧುಸೂದನನಿಗೆ ಉತ್ತರಿಸಿದರು.

03194020a ಆವಾಂ ವರಯ ದೇವ ತ್ವಂ ವರದೌ ಸ್ವಃ ಸುರೋತ್ತಮ|

03194020c ದಾತಾರೌ ಸ್ವೋ ವರಂ ತುಭ್ಯಂ ತದ್ಬ್ರವೀಹ್ಯವಿಚಾರಯನ್||

“ದೇವ! ಸುರೋತ್ತಮ! ನೀನೇ ನಮ್ಮಲ್ಲಿ ವರವನ್ನು ಕೇಳು! ನಾವೇ ನಿನಗೆ ನಿಜಯಾಗಿಯೂ ವರವನ್ನು ನೀಡುತ್ತೇವೆ. ವಿಚಾರಿಸದೇ ಕೇಳು.”

03194021 ಭಗವಾನುವಾಚ|

03194021a ಪ್ರತಿಗೃಹ್ಣೇ ವರಂ ವೀರಾವೀಪ್ಸಿತಶ್ಚ ವರೋ ಮಮ|

03194021c ಯುವಾಂ ಹಿ ವೀರ್ಯಸಂಪನ್ನೌ ನ ವಾಮಸ್ತಿ ಸಮಃ ಪುಮಾನ್||

ಭಗವಂತನು ಹೇಳಿದನು: “ವೀರರೇ! ನಿಮ್ಮ ವರವನ್ನು ಸ್ವೀಕರಿಸುತ್ತೇನೆ. ನಾನು ಬಯಸುವ ವರವೊಂದಿದೆ. ನೀವಿಬ್ಬರೂ ವೀರ್ಯ ಸಂಪನ್ನರು. ನಿಮ್ಮ ಸಮನಾದ ಪುರುಷನು ಇಲ್ಲವೇ ಇಲ್ಲ.

03194022a ವಧ್ಯತ್ವಮುಪಗಚ್ಚೇತಾಂ ಮಮ ಸತ್ಯಪರಾಕ್ರಮೌ|

03194022c ಏತದಿಚ್ಚಾಮ್ಯಹಂ ಕಾಮಂ ಪ್ರಾಪ್ತುಂ ಲೋಕಹಿತಾಯ ವೈ||

ಸತ್ಯಪರಾಕ್ರಮಿಗಳಾದ ನೀವಿಬ್ಬರೂ ನನ್ನ ಕೈಗಳಿಂದ ವಧಿಸಲ್ಪಡಿರಿ. ಲೋಕಕ್ಕೆ ಹಿತವನ್ನುಂಟುಮಾಡಲು ಬಯಸಿ ನಾನು ಇದನ್ನು ಇಚ್ಛಿಸುತ್ತೇನೆ.”

03194023 ಮಧುಕೈಟಭೌ ಊಚತುಃ|

03194023a ಅನೃತಂ ನೋಕ್ತಪೂರ್ವಂ ನೌ ಸ್ವೈರೇಷ್ವಪಿ ಕುತೋಽನ್ಯಥಾ|

03194023c ಸತ್ಯೇ ಧರ್ಮೇ ಚ ನಿರತೌ ವಿದ್ಧ್ಯಾವಾಂ ಪುರುಷೋತ್ತಮ||

ಮಧು-ಕೈಟಭರು ಹೇಳಿದರು: “ವಿನೋದಕ್ಕಾಗಿಯಾದರೂ ನಾವು ಇದೂವರೆಗೆ ಸುಳ್ಳನ್ನು ಹೇಳಲಿಲ್ಲ. ಅನ್ಯಥಾ ಏನು? ಪುರುಷೋತ್ತಮ! ನಾವಿಬ್ಬರೂ ಸತ್ಯ ಮತ್ತು ಧರ್ಮಗಳಲ್ಲಿ ನಿರತರಾಗಿದ್ದೇವೆಂದು ತಿಳಿ.

03194024a ಬಲೇ ರೂಪೇ ಚ ವೀರ್ಯೇ ಚ ಶಮೇ ಚ ನ ಸಮೋಽಸ್ತಿ ನೌ|

03194024c ಧರ್ಮೇ ತಪಸಿ ದಾನೇ ಚ ಶೀಲಸತ್ತ್ವದಮೇಷು ಚ||

ಬಲದಲ್ಲಿ, ರೂಪದಲ್ಲಿ, ವೀರ್ಯದಲ್ಲಿ, ಶಮದಲ್ಲಿ, ಧರ್ಮದಲ್ಲಿ, ತಪಸ್ಸಿನಲ್ಲಿ, ಶೀಲ, ಸತ್ವ, ದಮಗಳಲ್ಲಿ ನಮ್ಮೀರ್ವರ ಸಮರಿಲ್ಲ.

03194025a ಉಪಪ್ಲವೋ ಮಹಾನಸ್ಮಾನುಪಾವರ್ತತ ಕೇಶವ|

03194025c ಉಕ್ತಂ ಪ್ರತಿಕುರುಷ್ವ ತ್ವಂ ಕಾಲೋ ಹಿ ದುರತಿಕ್ರಮಃ||

ಕೇಶವ! ಒಂದು ಮಹಾ ಉಪಪ್ಲವವು ನಮಗೆ ಬಂದೊದಗಿದೆ. ಆದರೆ ನೀನು ಹೇಳಿದಂತೆ ಮಾಡು. ಕಾಲವನ್ನು ಅತಿಕ್ರಮಿಸಲು ಸಾಧ್ಯವಿಲ್ಲ.

03194026a ಆವಾಮಿಚ್ಚಾವಹೇ ದೇವ ಕೃತಮೇಕಂ ತ್ವಯಾ ವಿಭೋ|

03194026c ಅನಾವೃತೇಽಸ್ಮಿನ್ನಾಕಾಶೇ ವಧಂ ಸುರವರೋತ್ತಮ||

ಆದರೆ ದೇವ! ವಿಭೋ! ನಿನ್ನಿಂದ ಒಂದು ಆಗಬೇಕೆಂದು ಬಯಸುತ್ತೇವೆ. ಸುರವರೋತ್ತಮ! ಆಕಾಶವು ಅನಾವೃತವಾದಲ್ಲಿ ನಮ್ಮನ್ನು ವಧಿಸು.

03194027a ಪುತ್ರತ್ವಮಭಿಗಚ್ಚಾವ ತವ ಚೈವ ಸುಲೋಚನ|

03194027c ವರ ಏಷ ವೃತೋ ದೇವ ತದ್ವಿದ್ಧಿ ಸುರಸತ್ತಮ||

ಸುಲೋಚನ! ನಿನ್ನ ಪುತ್ರರಾಗಲು ಬಯಸುತ್ತೇವೆ. ದೇವ! ಸುರಸತ್ತಮ! ಇದೇ ನಮ್ಮ ವರವೆಂದು ತಿಳಿ.”

03194028 ಭಗವಾನುವಾಚ|

03194028a ಬಾಢಮೇವಂ ಕರಿಷ್ಯಾಮಿ ಸರ್ವಮೇತದ್ ಭವಿಷ್ಯತಿ|

ಭಗವಂತನು ಹೇಳಿದನು: “ಅವಶ್ಯವಾಗಿ ನಾನು ಅದನ್ನು ಮಾಡುತ್ತೇನೆ. ಎಲ್ಲವೂ ಹಾಗೆಯೇ ಆಗುತ್ತದೆ.””

03194029 ಮಾರ್ಕಂಡೇಯ ಉವಾಚ|

03194029a ವಿಚಿಂತ್ಯ ತ್ವಥ ಗೋವಿಂದೋ ನಾಪಶ್ಯದ್ಯದನಾವೃತಂ|

03194029c ಅವಕಾಶಂ ಪೃಥಿವ್ಯಾಂ ವಾ ದಿವಿ ವಾ ಮಧುಸೂದನಃ||

ಮಾರ್ಕಂಡೇಯನು ಹೇಳಿದನು: “ಆಗ ಮಧುಸೂದನ ಗೋವಿಂದನು ಅನಾವೃತವಾದ ಅವಕಾಶವನ್ನು ಭೂಮಿಯಲ್ಲಾಗಲೀ  ದಿವಿಯಲ್ಲಾಗಲೇ ಕಾಣದೇ ಚಿಂತಿಸಿದನು.

03194030a ಸ್ವಕಾವನಾವೃತಾವೂರೂ ದೃಷ್ಟ್ವಾ ದೇವವರಸ್ತದಾ|

03194030c ಮಧುಕೈಟಭಯೋ ರಾಜಂ ಶಿರಸೀ ಮಧುಸೂದನಃ||

03194030e ಚಕ್ರೇಣ ಶಿತಧಾರೇಣ ನ್ಯಕೃಂತತ ಮಹಾಯಶಾಃ||

ರಾಜನ್! ಆಗ ಅನಾವೃತವಾಗಿದ್ದ ತನ್ನ ತೊಡೆಗಳನ್ನೇ ನೋಡಿ, ದೇವವರ ಮಧುಸೂದನನು ಮಹಾಯಶ ಮಧು-ಕೈಟಭರ ಶಿರಗಳನ್ನು ಹರಿತವಾದ ಚಕ್ರದಿಂದ ಕತ್ತರಿಸಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಧುಂಧುಮಾರೋಪಾಖ್ಯಾನೇ ಚತುರ್ನವತ್ಯಧಿಕಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಧುಂಧುಮಾರೋಪಾಖ್ಯಾನದಲ್ಲಿ ನೂರಾತೊಂಭತ್ನಾಲ್ಕನೆಯ ಅಧ್ಯಾಯವು.

Related image

Comments are closed.