Aranyaka Parva: Chapter 183

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೧೮೩

ಅತ್ರಿ

ಬ್ರಾಹ್ಮಣರ ಮಹಾತ್ಮೆಯನ್ನು ಸೂಚಿಸುವ ಅತ್ರಿಯ ಕಥೆಯನ್ನು ಮಾರ್ಕಂಡೇಯನು ಹೇಳಿದುದು (೧-೩೨).

03183001 ಮಾರ್ಕಂಡೇಯ ಉವಾಚ|

03183001a ಭೂಯ ಏವ ತು ಮಾಹಾತ್ಮ್ಯಂ ಬ್ರಾಹ್ಮಣಾನಾಂ ನಿಬೋಧ ಮೇ|

03183001c ವೈನ್ಯೋ ನಾಮೇಹ ರಾಜರ್ಷಿರಶ್ವಮೇಧಾಯ ದೀಕ್ಷಿತಃ||

03183001e ತಮತ್ರಿರ್ಗಂತುಮಾರೇಭೇ ವಿತ್ತಾರ್ಥಮಿತಿ ನಃ ಶ್ರುತಂ||

ಮಾರ್ಕಂಡೇಯನು ಹೇಳಿದನು: “ಬ್ರಾಹ್ಮಣರ ಮಹಾತ್ಮೆಯ ಕುರಿತು ಇನ್ನೂ ಹೆಚ್ಚಿನದನ್ನು ನನ್ನಿಂದ ಕೇಳು. ವೈನ್ಯ ಎಂಬ ಹೆಸರಿನ ರಾಜರ್ಷಿಯು ಅಶ್ವಮೇಧಯಾಗದ ದೀಕ್ಷೆಯಲ್ಲಿದ್ದನು. ಅಲ್ಲಿಗೆ ಅತ್ರಿಯು ವಿತ್ತವನ್ನು ಅರಸಿ ಹೋಗಲು ಬಯಸಿದನೆಂದು ಕೇಳಿದ್ದೇವೆ.

03183002a ಭೂಯೋಽಥ ನಾನುರುಧ್ಯತ್ಸ ಧರ್ಮವ್ಯಕ್ತಿನಿದರ್ಶನಾತ್|

03183002c ಸಂಚಿಂತ್ಯ ಸ ಮಹಾತೇಜಾ ವನಮೇವಾನ್ವರೋಚಯತ್||

03183002e ಧರ್ಮಪತ್ನೀಂ ಸಮಾಹೂಯ ಪುತ್ರಾಂಶ್ಚೇದಮುವಾಚ ಹ||

ಆದರೆ ಅವನು ವ್ಯಕ್ತಿಧರ್ಮದ ನಿದರ್ಶನದಂತೆ ಅಲ್ಲಿ ಹೋಗಲು ತನ್ನೊಂದಿಗೆ ತಾನೇ ಒಪ್ಪಿಕೊಳ್ಳಲಿಲ್ಲ. ಅದರ ಕುರಿತು ಯೋಚಿಸಿದ ಆ ಮಹಾತೇಜಸ್ವಿಯು ವನಕ್ಕೆ ಹೋಗಲು ನಿರ್ಧರಿಸಿದನು. ಅವನು ತನ್ನ ಧರ್ಮಪತ್ನಿಯನ್ನೂ ಮಕ್ಕಳನ್ನೂ ಕರೆದು ಅವರಿಗೆ ಹೇಳಿದನು:

03183003a ಪ್ರಾಪ್ಸ್ಯಾಮಃ ಫಲಮತ್ಯಂತಂ ಬಹುಲಂ ನಿರುಪದ್ರವಂ|

03183003c ಅರಣ್ಯಗಮನಂ ಕ್ಷಿಪ್ರಂ ರೋಚತಾಂ ವೋ ಗುಣಾಧಿಕಂ||

“ಅತ್ಯಂತ ಫಲವನ್ನೂ ಬಹಳ ನಿರುಪದ್ರವವನ್ನೂ ಹೊಂದಬೇಕೆಂದರೆ ಬೇಗನೆ ಅರಣ್ಯಕ್ಕೆ ಹೋಗುವುದೇ ಅಧಿಕ ಉತ್ತಮವಾದುದು ಎಂದು ನನಗನ್ನಿಸುತ್ತದೆ.”

03183004a ತಂ ಭಾರ್ಯಾ ಪ್ರತ್ಯುವಾಚೇದಂ ಧರ್ಮಮೇವಾನುರುಧ್ಯತೀ|

03183004c ವೈನ್ಯಂ ಗತ್ವಾ ಮಹಾತ್ಮಾನಮರ್ಥಯಸ್ವ ಧನಂ ಬಹು||

03183004e ಸ ತೇ ದಾಸ್ಯತಿ ರಾಜರ್ಷಿರ್ಯಜಮಾನೋಽರ್ಥಿನೇ ಧನಂ||

ಧರ್ಮವನ್ನೇ ಅನುಸರಿಸುತ್ತಿದ್ದ ಅವನ ಪತ್ನಿಯು ಹೀಗೆ ಉತ್ತರಿಸಿದಳು: “ಮಹಾತ್ಮ ವೈನ್ಯನಲ್ಲಿಗೆ ಹೋಗಿ ಅವನಿಂದ ಬಹಳ ಧನವನ್ನು ಕೇಳು. ಯಜಮಾನನಾಗಿರುವ ಆ ರಾಜರ್ಷಿಯು ಕೇಳಿದವರಿಗೆ ಧನವನ್ನು ಕೊಡುತ್ತಾನೆ.

03183005a ತತ ಆದಾಯ ವಿಪ್ರರ್ಷೇ ಪ್ರತಿಗೃಹ್ಯ ಧನಂ ಬಹು|

03183005c ಭೃತ್ಯಾನ್ಸುತಾನ್ಸಂವಿಭಜ್ಯ ತತೋ ವ್ರಜ ಯಥೇಪ್ಸಿತಂ||

03183005e ಏಷ ವೈ ಪರಮೋ ಧರ್ಮೋ ಧರ್ಮವಿದ್ಭಿರುದಾಹೃತಃ||

ವಿಪ್ರರ್ಷೇ! ಅದನ್ನು ತೆಗೆದುಕೋ. ಬಹುಧನವನ್ನು ಸ್ವೀಕರಿಸಿ, ಭೃತ್ಯರು ಮತ್ತು ಮಕ್ಕಳಲ್ಲಿ ಸರಿಯಾಗಿ ವಿಭಜನೆ ಮಾಡಿ ನಿನಗಿಷ್ಟವಿದ್ದಲ್ಲಿಗೆ ಹೋಗು. ಇದೇ ಧರ್ಮವಿದರು ಹೇಳುವ ಪರಮ ಧರ್ಮ.”

03183006 ಅತ್ರಿರುವಾಚ|

03183006a ಕಥಿತೋ ಮೇ ಮಹಾಭಾಗೇ ಗೌತಮೇನ ಮಹಾತ್ಮನಾ|

03183006c ವೈನ್ಯೋ ಧರ್ಮಾರ್ಥಸಂಯುಕ್ತಃ ಸತ್ಯವ್ರತಸಮನ್ವಿತಃ||

ಅತ್ರಿಯು ಹೇಳಿದನು: “ಮಹಾಭಾಗೇ! ವೈನ್ಯನು ಧರ್ಮಸಂಯುಕ್ತ ಮತ್ತು ಸತ್ಯವ್ರತಸಮನ್ವಿತನೆಂದು ಮಹಾತ್ಮ ಗೌತಮನು ನನಗೆ ಹೇಳಿದ್ದನು.

03183007a ಕಿಂ ತ್ವಸ್ತಿ ತತ್ರ ದ್ವೇಷ್ಟಾರೋ ನಿವಸಂತಿ ಹಿ ಮೇ ದ್ವಿಜಾಃ|

03183007c ಯಥಾ ಮೇ ಗೌತಮಃ ಪ್ರಾಹ ತತೋ ನ ವ್ಯವಸಾಮ್ಯಹಂ||

ಆದರೆ ಅಲ್ಲಿ ನನ್ನ ದ್ವೇಷವನ್ನಿಟ್ಟಿರುವ ದ್ವಿಜರಿದ್ದಾರೆ ಎಂದೂ ಗೌತಮನು ಹೇಳಿದ್ದನು. ಆದುದರಿಂದ ನಾನು ಅಲ್ಲಿಗೆ ಹೋಗಬಾರದೆಂದು ನಿರ್ಧರಿಸಿದ್ದೇನೆ.

03183008a ತತ್ರ ಸ್ಮ ವಾಚಂ ಕಲ್ಯಾಣೀಂ ಧರ್ಮಕಾಮಾರ್ಥಸಂಹಿತಾಂ|

03183008c ಮಯೋಕ್ತಾಮನ್ಯಥಾ ಬ್ರೂಯುಸ್ತತಸ್ತೇ ವೈ ನಿರರ್ಥಕಾಂ||

ಅಲ್ಲಿ ನಾನು ಎಷ್ಟೇ ಮಂಗಳಕರ, ಧರ್ಮಕಾಮಾರ್ಥಸಂಹಿತವಾದ ಮಾತುಗಳನ್ನಾಡಿದರೂ ಅವರು ಅದನ್ನು ಅನ್ಯಥಾ ನಿರರ್ಥಕವೆಂದು ಹೇಳುತ್ತಾರೆ.

03183009a ಗಮಿಷ್ಯಾಮಿ ಮಹಾಪ್ರಾಜ್ಞೇ ರೋಚತೇ ಮೇ ವಚಸ್ತವ|

03183009c ಗಾಶ್ಚ ಮೇ ದಾಸ್ಯತೇ ವೈನ್ಯಃ ಪ್ರಭೂತಂ ಚಾರ್ಥಸಂಚಯಂ||

ಆದರೆ ಮಹಾಪ್ರಾಜ್ಞೇ! ನಿನ್ನ ಮಾತುಗಳು ನನಗೆ ಹಿಡಿಸುತ್ತವೆ. ಹೋಗುತ್ತೇನೆ. ವೈನ್ಯನು ನನಗೆ ಗೋವುಗಳನ್ನೂ ಅತಿದೊಡ್ಡ ಅರ್ಥಸಂಚಯವನ್ನೂ ಕೊಡುತ್ತಾನೆ.””

03183010 ಮಾರ್ಕಂಡೇಯ ಉವಾಚ|

03183010a ಏವಮುಕ್ತ್ವಾ ಜಗಾಮಾಶು ವೈನ್ಯಯಜ್ಞಂ ಮಹಾತಪಾಃ|

03183010c ಗತ್ವಾ ಚ ಯಜ್ಞಾಯತನಮತ್ರಿಸ್ತುಷ್ಟಾವ ತಂ ನೃಪಂ||

ಮಾರ್ಕಂಡೇಯನು ಹೇಳಿದನು: “ಹೀಗೆ ಹೇಳಿ ಆ ಮಹಾತಪಸ್ವಿಯು ವೈನ್ಯನ ಯಜ್ಞಕ್ಕೆ ಹೋದನು. ಯಜ್ಞಾಯತನವನ್ನು ತಲುಪಿ ಅತ್ರಿಯು ಆ ನೃಪನನ್ನು ಪ್ರಶಂಸಿಸಿದನು.

03183011a ರಾಜನ್ವೈನ್ಯ ತ್ವಮೀಶಶ್ಚ ಭುವಿ ತ್ವಂ ಪ್ರಥಮೋ ನೃಪಃ|

03183011c ಸ್ತುವಂತಿ ತ್ವಾಂ ಮುನಿಗಣಾಸ್ತ್ವದನ್ಯೋ ನಾಸ್ತಿ ಧರ್ಮವಿತ್||

“ರಾಜನ್! ವೈನ್ಯ! ನೀನು ಭೂಮಿಯ ಈಶ. ನೀನು ನೃಪರಲ್ಲಿ ಪ್ರಥಮ. ನಿನ್ನನ್ನು ಮುನಿಗಣವು ಸ್ತುತಿಸುತ್ತದೆ. ಯಾಕೆಂದರೆ ನಿನ್ನ ಹೊರತಾದ ಧರ್ಮವಿದುವು ಇಲ್ಲ.”

03183012a ತಮಬ್ರವೀದೃಷಿಸ್ತತ್ರ ವಚಃ ಕ್ರುದ್ಧೋ ಮಹಾತಪಾಃ|

03183012c ಮೈವಮತ್ರೇ ಪುನರ್ಬ್ರೂಯಾ ನ ತೇ ಪ್ರಜ್ಞಾ ಸಮಾಹಿತಾ||

03183012e ಅತ್ರ ನಃ ಪ್ರಥಮಂ ಸ್ಥಾತಾ ಮಹೇಂದ್ರೋ ವೈ ಪ್ರಜಾಪತಿಃ||

ಆಗ ಅಲ್ಲಿದ್ದ ಓರ್ವ ಮಹಾತಪಸ್ವಿ ಋಷಿಯು ಸಿಟ್ಟಿನಿಂದ ಅವನಿಗೆ ಹೇಳಿದನು: “ಅತ್ರೇ! ಹಾಗೆ ಪುನಃ ಮಾತನಾಡಬೇಡ! ನಿನಗೆ ಸರಿಯಾದ ಪ್ರಜ್ಞೆಯಿಲ್ಲ! ನಮಗೆ ಪ್ರಜಾಪತಿ ಮಹೇಂದ್ರನೇ ಪ್ರಥಮ ಸ್ಥಾನದಲ್ಲಿದ್ದಾನೆ.”

03183013a ಅಥಾತ್ರಿರಪಿ ರಾಜೇಂದ್ರ ಗೌತಮಂ ಪ್ರತ್ಯಭಾಷತ|

03183013c ಅಯಮೇವ ವಿಧಾತಾ ಚ ಯಥೈವೇಂದ್ರಃ ಪ್ರಜಾಪತಿಃ||

03183013e ತ್ವಮೇವ ಮುಹ್ಯಸೇ ಮೋಹಾನ್ನ ಪ್ರಜ್ಞಾನಂ ತವಾಸ್ತಿ ಹ||

ರಾಜೇಂದ್ರ! ಆಗ ಅತ್ರಿಯೂ ಕೂಡ ಗೌತಮನಿಗೆ ಉತ್ತರಿಸಿದನು: “ಪ್ರಜಾಪತಿ ಇಂದ್ರನು ಹೇಗೋ ಹಾಗೆ ಇವನೂ ನಮಗೆ ಕೊಡುವವನು. ನೀನೇ ಮೋಹದಿಂದ ಮೋಹಿತನಾಗಿರುವೆ. ನಿನ್ನಲ್ಲಿ ಪ್ರಜ್ಞೆಯೇ ಇಲ್ಲ.”

03183014 ಗೌತಮ ಉವಾಚ|

03183014a ಜಾನಾಮಿ ನಾಹಂ ಮುಹ್ಯಾಮಿ ತ್ವಂ ವಿವಕ್ಷುರ್ವಿಮುಹ್ಯಸೇ|

03183014c ಸ್ತೋಷ್ಯಸೇಽಭ್ಯುದಯಪ್ರೇಪ್ಸುಸ್ತಸ್ಯ ದರ್ಶನಸಂಶ್ರಯಾತ್||

ಗೌತಮನು ಹೇಳಿದನು: “ನನಗೆ ತಿಳಿದಿದೆ. ನಾನು ಮೋಹಿತನಾಗಿಲ್ಲ. ಮಾತನಾಡಲು ಮುನ್ನುಗ್ಗುವ ನೀನು ಮೋಹಿತನಾಗಿದ್ದೀಯೆ. ಅವನನ್ನು ಭೇಟಿಮಾಡಿ ಅವನಿಂದ ಅಭ್ಯುದಯವನ್ನು ಪಡೆಯಬೇಕೆಂಬ ಒಂದೇ ಕಾರಣದಿಂದ ನೀನು ಅವನನ್ನು ಸ್ತುತಿಸುತ್ತಿದ್ದೀಯೆ.

03183015a ನ ವೇತ್ಥ ಪರಮಂ ಧರ್ಮಂ ನ ಚಾವೈಷಿ ಪ್ರಯೋಜನಂ|

03183015c ಬಾಲಸ್ತ್ವಮಸಿ ಮೂಢಶ್ಚ ವೃದ್ಧಃ ಕೇನಾಪಿ ಹೇತುನಾ||

ನಿನಗೆ ಪರಮಧರ್ಮವು ತಿಳಿದಿಲ್ಲ ಮತ್ತು ಅದರ ಪ್ರಯೋಜನವೂ ನಿನಗೆ ಗೊತ್ತಿಲ್ಲ. ನೀನೊಬ್ಬ ಮೂಢ ಬಾಲಕ. ನೀನು ಹೇಗೆ ವೃದ್ಧನಾದೆಯೋ!””

03183016 ಮಾರ್ಕಂಡೇಯ ಉವಾಚ|

03183016a ವಿವದಂತೌ ತಥಾ ತೌ ತು ಮುನೀನಾಂ ದರ್ಶನೇ ಸ್ಥಿತೌ|

03183016c ಯೇ ತಸ್ಯ ಯಜ್ಞೇ ಸಂವೃತ್ತಾಸ್ತೇಽಪೃಚ್ಚಂತ ಕಥಂ ತ್ವಿಮೌ||

ಮಾರ್ಕಂಡೇಯನು ಹೇಳಿದನು: “ಮುನಿಗಳು ನೋಡುತ್ತಿದ್ದಂತೆಯೇ ಅವರೀರ್ವರು ಅಲ್ಲಿ ನಿಂತು ವಾದಿಸುತ್ತಿರುವಾಗ ಆ ಯಜ್ಞಕ್ಕೆ ಬಂದು ಸೇರಿದ್ದವರು ಕೇಳತೊಡಗಿದರು:

03183017a ಪ್ರವೇಶಃ ಕೇನ ದತ್ತೋಽಯಮನಯೋರ್ವೈನ್ಯಸಂಸದಿ|

03183017c ಉಚ್ಚೈಃ ಸಮಭಿಭಾಷಂತೌ ಕೇನ ಕಾರ್ಯೇಣ ವಿಷ್ಠಿತೌ||

“ಇವರಿಬ್ಬರು ಇಲ್ಲಿ ಹೇಗೆ ಪ್ರವೇಶಿಸಿದರು? ವೈನ್ಯನ ಈ ಸಂಸದಿಗೆ ಯಾರು ಇವರಿಗೆ ಪ್ರವೇಶವನ್ನು ಕೊಟ್ಟರು? ಯಾವ ಕಾರಣದಿಂದ ಈ ಈರ್ವರು ಜೋರಾಗಿ ಕೂಗುತ್ತಾ ವಾದಿಸುತ್ತಿದ್ದಾರೆ?”

03183018a ತತಃ ಪರಮಧರ್ಮಾತ್ಮಾ ಕಾಶ್ಯಪಃ ಸರ್ವಧರ್ಮವಿತ್|

03183018c ವಿವಾದಿನಾವನುಪ್ರಾಪ್ತೌ ತಾವುಭೌ ಪ್ರತ್ಯವೇದಯತ್||

ಆಗ ಪರಮಧರ್ಮಾತ್ಮ ಸರ್ವಧರ್ಮವಿದು ಕಾಶ್ಯಪನು ವಾದಿಸುತ್ತಿರುವ ಅವರಿಬ್ಬರಿಗೂ ಬೆರಳು ತೋರಿಸಿ ಹೇಳಿದನು.

03183019a ಅಥಾಬ್ರವೀತ್ಸದಸ್ಯಾಂಸ್ತು ಗೌತಮೋ ಮುನಿಸತ್ತಮಾನ್|

03183019c ಆವಯೋರ್ವ್ಯಾಹೃತಂ ಪ್ರಶ್ನಂ ಶೃಣುತ ದ್ವಿಜಪುಂಗವಾಃ||

03183019e ವೈನ್ಯೋ ವಿಧಾತೇತ್ಯಾಹಾತ್ರಿರತ್ರ ನಃ ಸಂಶಯೋ ಮಹಾನ್||

ಆಗ ಗೌತಮನು ಆ ಮುನಿಸತ್ತಮ ಸದಸ್ಯರಿಗೆ ಹೇಳಿದನು: “ದ್ವಿಜಪುಂಗವರೇ! ಈಗ ನಮ್ಮಿಬ್ಬರ ನಡುವೆ ಹುಟ್ಟಿರುವ ಪ್ರಶ್ನೆಯ ಕುರಿತು ಕೇಳಿ. ವೈನ್ಯನು ವಿಧಾತನೆಂದು ಅತ್ರಿಯು ಹೇಳುತ್ತಿದ್ದಾನೆ. ಆದರೆ ನನಗೆ ಅದರಲ್ಲಿ ಮಹಾ ಸಂಶಯವಿದೆ.”

03183020a ಶ್ರುತ್ವೈವ ತು ಮಹಾತ್ಮಾನೋ ಮುನಯೋಽಭ್ಯದ್ರವನ್ದ್ರುತಂ|

03183020c ಸನತ್ಕುಮಾರಂ ಧರ್ಮಜ್ಞಂ ಸಂಶಯಚ್ಚೇದನಾಯ ವೈ||

ಇದನ್ನು ಕೇಳಿದ ತಕ್ಷಣವೇ ಆ ಮಹಾತ್ಮ ಮುನಿಗಳು ಆ ಸಂಶಯವನ್ನು ಬಿಡಿಸಲು ಧರ್ಮಜ್ಞ ಸತತ್ಕುಮಾರನಲ್ಲಿಗೆ ಧಾವಿಸಿದರು.

03183021a ಸ ಚ ತೇಷಾಂ ವಚಃ ಶ್ರುತ್ವಾ ಯಥಾತತ್ತ್ವಂ ಮಹಾತಪಾಃ|

03183021c ಪ್ರತ್ಯುವಾಚಾಥ ತಾನೇವಂ ಧರ್ಮಾರ್ಥಸಹಿತಂ ವಚಃ||

ಯಥಾವತ್ತಾಗಿ ಹೇಳಿದ ಅವರ ಮಾತನ್ನು ಕೇಳಿ ಆ ಮಹಾತಪಸ್ವಿಯು ಧರ್ಮಾರ್ಥಸಂಹಿತವಾದ ಈ ಮಾತಿನಿಂದ ಉತ್ತರಿಸಿದನು.

03183022 ಸನತ್ಕುಮಾರ ಉವಾಚ|

03183022a ಬ್ರಹ್ಮ ಕ್ಷತ್ರೇಣ ಸಹಿತಂ ಕ್ಷತ್ರಂ ಚ ಬ್ರಹ್ಮಣಾ ಸಹ|

03183022c ರಾಜಾ ವೈ ಪ್ರಥಮೋ ಧರ್ಮಃ ಪ್ರಜಾನಾಂ ಪತಿರೇವ ಚ||

ಸನತ್ಕುಮಾರನು ಹೇಳಿದನು: “ಬ್ರಾಹ್ಮಣತ್ವವು ಕ್ಷತ್ರಿಯ ಸಹಿತವಾಗಿದೆ ಮತ್ತು ಕ್ಷತ್ರಿಯತ್ವವು ಬ್ರಾಹ್ಮಣತ್ವದ ಜೊತೆಯಿದೆ. ರಾಜನೇ ಪರಮ ಧರ್ಮ ಮತ್ತು ಪ್ರಜೆಗಳ ಒಡೆಯನೂ ಹೌದು.

03183022e ಸ ಏವ ಶಕ್ರಃ ಶುಕ್ರಶ್ಚ ಸ ಧಾತಾ ಸ ಬೃಹಸ್ಪತಿಃ||

03183023a ಪ್ರಜಾಪತಿರ್ವಿರಾಟ್ಸಮ್ರಾಟ್ ಕ್ಷತ್ರಿಯೋ ಭೂಪತಿರ್ನೃಪಃ|

03183023c ಯ ಏಭಿಃ ಸ್ತೂಯತೇ ಶಬ್ಧೈಃ ಕಸ್ತಂ ನಾರ್ಚಿತುಮರ್ಹತಿ||

ಅವನೇ ಶಕ್ರ, ಅವನೇ ಶುಕ್ರ, ಅವನೇ ಧಾತ ಮತ್ತು ಅವನೇ ಬೃಹಸ್ಪತಿ. ಕ್ಷತ್ರಿಯ ಭೂಪತಿ ನೃಪನು ಪ್ರಜಾಪತಿ, ವಿರಾಟ ಮತ್ತು ಸಾಮ್ರಾಟ. ಈ ಶಬ್ಧಗಳಿಂದ ಕರೆಯಲ್ಪಡುವವನು ಸ್ತುತಿಗೆ ಏಕೆ ಅರ್ಹನಲ್ಲ?

03183024a ಪುರಾಯೋನಿರ್ಯುಧಾಜಿಚ್ಚ ಅಭಿಯಾ ಮುದಿತೋ ಭವಃ|

03183024c ಸ್ವರ್ಣೇತಾ ಸಹಜಿದ್ಬಭ್ರುರಿತಿ ರಾಜಾಭಿಧೀಯತೇ||

03183025a ಸತ್ಯಮನ್ಯುರ್ಯುಧಾಜೀವಃ ಸತ್ಯಧರ್ಮಪ್ರವರ್ತಕಃ|

ರಾಜನನ್ನು ಪುರಾತನ ಯೋನಿಯೆಂದೂ, ಯುದ್ಧದಲ್ಲಿ ಜಯಶೀಲನೆಂದೂ, ಆಕ್ರಮಣಮಾಡುವವನೆಂದೂ, ಸಂತೋಷವನ್ನು ನೀಡುವವನೆಂದೂ, ಅಭಿವೃದ್ಧಿಕಾರನೆಂದೂ, ಸ್ವರ್ಗದ ಮಾರ್ಗದರ್ಶಕನೆಂದೂ, ಜಯವುಳ್ಳವನೆಂದೂ, ವಿಶಾಲ ಪ್ರಶಾಸಕನೆಂದೂ, ಸಿಟ್ಟಿನಲ್ಲಿ ಸತ್ಯನೂ, ಯುದ್ಧದಲ್ಲಿ ಉಳಿಯುವವನೂ, ಮತ್ತು ಸತ್ಯಧರ್ಮಪ್ರವರ್ತಕನೆಂದೂ ಕರೆಯುತ್ತಾರೆ.

03183025c ಅಧರ್ಮಾದೃಷಯೋ ಭೀತಾ ಬಲಂ ಕ್ಷತ್ರೇ ಸಮಾದಧನ್||

03183026a ಆದಿತ್ಯೋ ದಿವಿ ದೇವೇಷು ತಮೋ ನುದತಿ ತೇಜಸಾ|

03183026c ತಥೈವ ನೃಪತಿರ್ಭೂಮಾವಧರ್ಮಂ ನುದತೇ ಭೃಶಂ||

ಅಧರ್ಮದ ಭೀತಿಯಿಂದ ಋಷಿಗಳು ಕ್ಷತ್ರಿಯರಲ್ಲಿ ಬಲವನ್ನು ಅಡವಿಟ್ಟಿದ್ದಾರೆ. ಆದಿತ್ಯನು ದಿವಿಯಲ್ಲಿ ದೇವತೆಗಳ ಕತ್ತಲೆಯನ್ನು ತನ್ನ ತೇಜಸ್ಸಿನಿಂದ ಕಳೆಯುತ್ತಾನೆ. ಹಾಗೆಯೇ ನೃಪತಿಯು ಈ ಭೂಮಿಯಲ್ಲಿ ಅಧರ್ಮವನ್ನು ಕ್ರೂರನಾಗಿ ಕಳೆಯುತ್ತಾನೆ.

03183027a ಅತೋ ರಾಜ್ಞಃ ಪ್ರಧಾನತ್ವಂ ಶಾಸ್ತ್ರಪ್ರಾಮಾಣ್ಯದರ್ಶನಾತ್|

03183027c ಉತ್ತರಃ ಸಿಧ್ಯತೇ ಪಕ್ಷೋ ಯೇನ ರಾಜೇತಿ ಭಾಷಿತಂ||

ಆದುದರಿಂದ ಶಾಸ್ತ್ರಪ್ರಮಾಣದ ದರ್ಶನಗಳಿಂದ ರಾಜನ ಪ್ರಧಾನತ್ವವನ್ನು ತೋರಿಸಲಾಗಿದೆ. ಮತ್ತು ಯಾವಪಕ್ಷವು ರಾಜನ ಪರವಾಗಿ ಮಾತನಾಡಿದೆಯೋ ಅದೇ ಸಾಧಿಸಿದೆ.””

03183028 ಮಾರ್ಕಂಡೇಯ ಉವಾಚ|

03183028a ತತಃ ಸ ರಾಜಾ ಸಂಹೃಷ್ಟಃ ಸಿದ್ಧೇ ಪಕ್ಷೇ ಮಹಾಮನಾಃ|

03183028c ತಮತ್ರಿಮಬ್ರವೀತ್ಪ್ರೀತಃ ಪೂರ್ವಂ ಯೇನಾಭಿಸಂಸ್ತುತಃ||

ಮಾರ್ಕಂಡೇಯನು ಹೇಳಿದನು: “ಅನಂತರ ಮಹಾಮನ ರಾಜನು ತನ್ನ ಪಕ್ಷವೇ ಗೆದ್ದಿದೆಯೆಂದು ಸಂತೋಷದಿಂದ ತನ್ನ ಸ್ತುತಿಸಿದ ಆ ಅತ್ರಿಗೆ ಹೇಳಿದನು:

03183029a ಯಸ್ಮಾತ್ಸರ್ವಮನುಷ್ಯೇಷು ಜ್ಯಾಯಾಂಸಂ ಮಾಮಿಹಾಬ್ರವೀಃ|

03183029c ಸರ್ವದೇವೈಶ್ಚ ವಿಪ್ರರ್ಷೇ ಸಮ್ಮಿತಂ ಶ್ರೇಷ್ಠಮೇವ ಚ||

03183029e ತಸ್ಮಾತ್ತೇಽಹಂ ಪ್ರದಾಸ್ಯಾಮಿ ವಿವಿಧಂ ವಸು ಭೂರಿ ಚ||

03183030a ದಾಸೀಸಹಸ್ರಂ ಶ್ಯಾಮಾನಾಂ ಸುವಸ್ತ್ರಾಣಾಮಲಂಕೃತಂ|

03183030c ದಶ ಕೋಟ್ಯೋ ಹಿರಣ್ಯಸ್ಯ ರುಕ್ಮಭಾರಾಂಸ್ತಥಾ ದಶ||

03183030e ಏತದ್ದದಾನಿ ತೇ ವಿಪ್ರ ಸರ್ವಜ್ಞಸ್ತ್ವಂ ಹಿ ಮೇ ಮತಃ||

“ವಿಪ್ರರ್ಷೇ! ಇದಕ್ಕೆ ಮೊದಲು ನೀನು ನಾನು ಸರ್ವಮನುಷ್ಯರಲ್ಲಿಯೂ ಹಿರಿಯವನೆಂದೂ, ಸರ್ವದೇವರ ಸಮನೆಂದೂ ಶ್ರೇಷ್ಠನೆಂದೂ ಹೇಳಿದೆ. ಆದುದರಿಂದ ನಾನು ನಿನಗೆ ಅಧಿಕವಾದ ವಿವಿಧ ಸಂಪತ್ತನ್ನೂ, ಸಹಸ್ರ ಸುವರ್ಣಗಳಿಂದ ಅಲಂಕೃತರಾದ ಯುವದಾಸಿಯರನ್ನೂ, ಹತ್ತು ಕೋಟಿ ಬಂಗಾರದ ನಾಣ್ಯಗಳನ್ನೂ ಹತ್ತು ಭಾರದಷ್ಟು ಆಭರಣಗಳನ್ನೂ ಕೊಡುತ್ತೇನೆ. ಯಾಕೆಂದರೆ ನೀನು ಸರ್ವಜ್ಞನೆಂದು ನನ್ನ ಅಭಿಪ್ರಾಯ.”

03183031a ತದತ್ರಿರ್ನ್ಯಾಯತಃ ಸರ್ವಂ ಪ್ರತಿಗೃಹ್ಯ ಮಹಾಮನಾಃ|

03183031c ಪ್ರತ್ಯಾಜಗಾಮ ತೇಜಸ್ವೀ ಗೃಹಾನೇವ ಮಹಾತಪಾಃ||

ಆಗ ಮಹಾತ್ಮ ಅತ್ರಿಯು ಅವೆಲ್ಲವನ್ನೂ ಯಥಾವಿಧಿಯಾಗಿ ಸ್ವೀಕರಿಸಿದನು ಮತ್ತು ಆ ತೇಜಸ್ವಿ ಮಹಾತಪಸ್ವಿಯು ತನ್ನ ಮನೆಗೆ ಹಿಂದಿರುಗಿದನು.

03183032a ಪ್ರದಾಯ ಚ ಧನಂ ಪ್ರೀತಃ ಪುತ್ರೇಭ್ಯಃ ಪ್ರಯತಾತ್ಮವಾನ್|

03183032c ತಪಃ ಸಮಭಿಸಂಧಾಯ ವನಮೇವಾನ್ವಪದ್ಯತ||

ಸಂತೋಷದಿಂದ ಆ ಪ್ರಯತಾತ್ಮನು ತನ್ನ ಪುತ್ರರಿಗೆ ಅದನ್ನು ಸಮವಾಗಿ ವಿಂಗಡಿಸಿ ಕೊಟ್ಟು ವನಕ್ಕೆ ತೆರಳಿ ತಪಸ್ಸಿನಲ್ಲಿ ನಿರತನಾದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಬ್ರಾಹ್ಮಣಮಾಹಾತ್ಮಕಥನೇ ತ್ರಿಶೀತ್ಯಧಿಕಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಬ್ರಾಹ್ಮಣಮಾಹಾತ್ಮಕಥನದಲ್ಲಿ ನೂರಾಎಂಭತ್ಮೂರನೆಯ ಅಧ್ಯಾಯವು.

Image result for indian motifs

Comments are closed.