ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೧೪೫
ಘಟೋತ್ಕಚನ ಸಹಾಯದಿಂದ ಪಾಂಡವರು ಗಂಧಮಾದನವನ್ನೇರುವುದು (೧-೧೦). ನರ-ನಾರಾಯಣರ ಆಶ್ರಮ ವರ್ಣನೆ; ಅಲ್ಲಿ ಪಾಂಡವರು ನೆಲೆಸಿದುದು (೧೧-೪೩).
03145001 ಯುಧಿಷ್ಠಿರ ಉವಾಚ|
03145001a ಧರ್ಮಜ್ಞೋ ಬಲವಾಂ ಶೂರಃ ಸದ್ಯೋ ರಾಕ್ಷಸಪುಂಗವಃ|
03145001c ಭಕ್ತೋಽಸ್ಮಾನೌರಸಃ ಪುತ್ರೋ ಭೀಮ ಗೃಹ್ಣಾತು ಮಾತರಂ||
ಯುಧಿಷ್ಠಿರನು ಹೇಳಿದನು: “ಭೀಮ! ನಿನ್ನ ಔರಸ ಪುತ್ರನೂ ನಮ್ಮ ಮೇಲೆ ಭಕ್ತಿಯುಳ್ಳವನೂ ಆದ ಈ ಧರ್ಮಜ್ಞ ಬಲವಂತ ಶೂರ ರಾಕ್ಷಸಪುಂಗವನು ಸದ್ಯ ತನ್ನ ತಾಯಿಯನ್ನು ಎತ್ತಿ ಕೊಳ್ಳಲಿ.
03145002a ತವ ಭೀಮ ಬಲೇನಾಹಮತಿಭೀಮಪರಾಕ್ರಮ|
03145002c ಅಕ್ಷತಃ ಸಹ ಪಾಂಚಾಲ್ಯಾ ಗಚ್ಚೇಯಂ ಗಂಧಮಾದನಂ||
ಭೀಮ! ನಿನ್ನ ಬಲದಿಂದಲೂ ಅತಿಭಯಂಕರವಾದ ಪರಾಕ್ರಮದಿಂದಲೂ ನಾವು ಪಾಂಚಾಲಿಯೊಡನೆ ಏನೂ ಕಷ್ಟಪಡದೇ ಗಂಧಮಾದನಕ್ಕೆ ಹೋಗುತ್ತೇವೆ.””
03145003 ವೈಶಂಪಾಯನ ಉವಾಚ|
03145003a ಭ್ರಾತುರ್ವಚನಮಾಜ್ಞಾಯ ಭೀಮಸೇನೋ ಘಟೋತ್ಕಚಂ|
03145003c ಆದಿದೇಶ ನರವ್ಯಾಘ್ರಸ್ತನಯಂ ಶತ್ರುಕರ್ಶನಂ||
ವೈಶಂಪಾಯನನು ಹೇಳಿದನು: “ಅಣ್ಣನ ಮಾತನ್ನು ಸ್ವೀಕರಿಸಿದ ನರವ್ಯಾಘ್ರ ಭೀಮಸೇನನು ತನ್ನ ಮಗ ಶತ್ರುಕರ್ಶನ ಘಟೋತ್ಕಚನಿಗೆ ಆದೇಶವನ್ನಿತ್ತನು.
03145004a ಹೈಡಿಂಬೇಯ ಪರಿಶ್ರಾಂತಾ ತವ ಮಾತಾಪರಾಜಿತಾ|
03145004c ತ್ವಂ ಚ ಕಾಮಗಮಸ್ತಾತ ಬಲವಾನ್ವಹ ತಾಂ ಖಗ||
“ಹಿಡಿಂಬೆಯ ಮಗನೇ! ಸೋಲನ್ನೇ ಅರಿಯದ ನಿನ್ನ ತಾಯಿಯು ಆಯಾಸಗೊಂಡಿದ್ದಾಳೆ. ಮಗೂ! ನೀನಾದರೋ ಬಲಶಾಲಿಯಾಗಿದ್ದೀಯೆ ಮತ್ತು ಬೇಕಾದಲ್ಲಿಗೆ ಹೋಗಬಲ್ಲೆ. ಇವಳನ್ನು ಎತ್ತಿಕೊಂಡು ಆಕಾಶದಲ್ಲಿ ಹೋಗು.
03145005a ಸ್ಕಂಧಮಾರೋಪ್ಯ ಭದ್ರಂ ತೇ ಮಧ್ಯೇಽಸ್ಮಾಕಂ ವಿಹಾಯಸಾ|
03145005c ಗಚ್ಚ ನೀಚಿಕಯಾ ಗತ್ಯಾ ಯಥಾ ಚೈನಾಂ ನ ಪೀಡಯೇಃ||
ನಿನಗೆ ಮಂಗಳವಾಗಲಿ! ಅವಳನ್ನು ನಿನ್ನ ಹೆಗಲಮೇಲೆ ಎತ್ತಿ ಕುಳ್ಳಿರಿಸಿಕೊಂಡು ನಮ್ಮೆಲ್ಲರ ಮಧ್ಯೆ, ಅವಳಿಗೆ ತೊಂದರೆಯಾಗದಂತೆ ಹೆಚ್ಚು ಮೇಲೆ ಹೋಗದೇ ಕೆಳಗಿನಿಂದಲೇ ಹಾರುತ್ತಾ ಹೋಗು.”
03145006 ಘಟೋತ್ಕಚ ಉವಾಚ
03145006a ಧರ್ಮರಾಜಂ ಚ ಧೌಮ್ಯಂ ಚ ರಾಜಪುತ್ರೀಂ ಯಮೌ ತಥಾ|
03145006c ಏಕೋಽಪ್ಯಹಮಲಂ ವೋಢುಂ ಕಿಮುತಾದ್ಯ ಸಹಾಯವಾನ್||
ಘತೋತ್ಕಚನು ಹೇಳಿದನು: “ನಾನೊಬ್ಬನೇ ಧರ್ಮರಾಜನನ್ನೂ, ಧೌಮ್ಯನನ್ನೂ, ರಾಜಪುತ್ರಿಯನ್ನೂ ಮತ್ತು ನಕುಲ ಸಹದೇವರನ್ನೂ ಎತ್ತಿಕೊಂಡು ಹೋಗಬಲ್ಲೆ. ಇಂದು ಸಹಾಯವಿರುವುದರಿಂದ ನನಗೇನು?””
03145007 ವೈಶಂಪಾಯನ ಉವಾಚ|
03145007a ಏವಮುಕ್ತ್ವಾ ತತಃ ಕೃಷ್ಣಾಮುವಾಹ ಸ ಘಟೋತ್ಕಚಃ|
03145007c ಪಾಂಡೂನಾಂ ಮಧ್ಯಗೋ ವೀರಃ ಪಾಂಡವಾನಪಿ ಚಾಪರೇ||
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಆ ಘಟೋತ್ಕಚನು ಇತರರು ಪಾಂಡವರನ್ನು ಹೊತ್ತುಕೊಳ್ಳಲು ತಾನು ಕೃಷ್ಣೆಯನ್ನು ಎತ್ತಿಕೊಂಡು ಪಾಂಡವರ ಮಧ್ಯದಲ್ಲಿ ಹೊರಟನು.
03145008a ಲೋಮಶಃ ಸಿದ್ಧಮಾರ್ಗೇಣ ಜಗಾಮಾನುಪಮದ್ಯುತಿಃ|
03145008c ಸ್ವೇನೈವಾತ್ಮಪ್ರಭಾವೇನ ದ್ವಿತೀಯ ಇವ ಭಾಸ್ಕರಃ||
ಅಮಿತದ್ಯುತಿ ಲೋಮಶನು ತನ್ನದೇ ಆತ್ಮ ಪ್ರಭಾವದಿಂದ ಎರಡನೆಯ ಭಾಸ್ಕರನೋ ಎನ್ನುವಂತೆ ಸಿದ್ಧರ ಮಾರ್ಗದಿಂದ ಹೋದನು.
03145009a ಬ್ರಾಹ್ಮಣಾಂಶ್ಚಾಪಿ ತಾನ್ಸರ್ವಾನ್ಸಮುಪಾದಾಯ ರಾಕ್ಷಸಾಃ|
03145009c ನಿಯೋಗಾದ್ರಾಕ್ಷಸೇಂದ್ರಸ್ಯ ಜಗ್ಮುರ್ಭೀಮಪರಾಕ್ರಮಾಃ||
ಭೀಮಪರಾಕ್ರಮಿಗಳಾದ ರಾಕ್ಷಸರು ತಮ್ಮ ರಾಕ್ಷಸೇಂದ್ರನ ಆಜ್ಞೆಯಂತೆ ಆ ಇಲ್ಲ ಬ್ರಾಹ್ಮಣರನ್ನೂ ಎತ್ತಿಕೊಂಡು ಹೋದರು.
03145010a ಏವಂ ಸುರಮಣೀಯಾನಿ ವನಾನ್ಯುಪವನಾನಿ ಚ|
03145010c ಆಲೋಕಯಂತಸ್ತೇ ಜಗ್ಮುರ್ವಿಶಾಲಾಂ ಬದರೀಂ ಪ್ರತಿ||
03145011a ತೇ ತ್ವಾಶುಗತಿಭಿರ್ವೀರಾ ರಾಕ್ಷಸೈಸ್ತೈರ್ಮಹಾಬಲೈಃ|
03145011c ಉಹ್ಯಮಾನಾ ಯಯುಃ ಶೀಘ್ರಂ ಮಹದಧ್ವಾನಮಲ್ಪವತ್||
ಹೀಗೆ ರಮಣೀಯವಾಗಿರುವ ವನ-ಉಪವನಗಳನ್ನು ನೋಡುತ್ತಾ ಅವರು ವಿಶಾಲ ಬದರಿಯ ಕಡೆ ಹೊರಟರು. ಮಹಾವೇಗದಲ್ಲಿ ಹೋಗುತ್ತಿರುವ ಆ ಮಹಾಬಲಶಾಲೀ ವೀರ ರಾಕ್ಷಸರನ್ನೇರಿ ಅವರು ತುಂಬಾ ದೂರವನ್ನು ಸ್ವಲ್ಪವೇ ಸಮಯದಲ್ಲಿ ಪ್ರಯಾಣಿಸಿದರು.
03145012a ದೇಶಾನ್ಮ್ಲೇಚ್ಚಗಣಾಕೀರ್ಣಾನ್ನಾನಾರತ್ನಾಕರಾಯುತಾನ್|
03145012c ದದೃಶುರ್ಗಿರಿಪಾದಾಂಶ್ಚ ನಾನಾಧಾತುಸಮಾಚಿತಾನ್||
ಅವರು ಮ್ಲೇಚ್ಛಗುಂಪುಗಳ ದೇಶಗಳನ್ನೂ, ಅನೇಕ ರತ್ನಗಳ ಗಣಿಗಳನ್ನೂ, ನಾನಾ ಧಾತುಗಳನ್ನು ಹೊಂದಿದ್ದ ಗಿರಿಪಾದಗಳನ್ನೂ ನೋಡಿದರು.
03145013a ವಿದ್ಯಾಧರಗಣಾಕೀರ್ಣಾನ್ಯುತಾನ್ವಾನರಕಿನ್ನರೈಃ|
03145013c ತಥಾ ಕಿಂಪುರುಷೈಶ್ಚೈವ ಗಂಧರ್ವೈಶ್ಚ ಸಮಂತತಃ||
03145014a ನದೀಜಾಲಸಮಾಕೀರ್ಣಾನ್ನಾನಾಪಕ್ಷಿರುತಾಕುಲಾನ್|
03145014c ನಾನಾವಿಧೈರ್ಮೃಗೈರ್ಜುಷ್ಟಾನ್ವಾನರೈಶ್ಚೋಪಶೋಭಿತಾನ್||
03145015a ತೇ ವ್ಯತೀತ್ಯ ಬಹೂನ್ದೇಶಾನುತ್ತರಾಂಶ್ಚ ಕುರೂನಪಿ|
03145015c ದದೃಶುರ್ವಿವಿಧಾಶ್ಚರ್ಯಂ ಕೈಲಾಸಂ ಪರ್ವತೋತ್ತಮಂ||
ಅವರು ವಿದ್ಯಾಧರ ಗುಂಪುಗಳಿಂದ ಕೂಡಿದ್ದ, ವಾನರ ಕಿನ್ನರರಿಂದ ಕೂಡಿದ್ದ, ಹಾಗೆಯೇ ಕಿಂಪುರುಷರೂ ಗಂಧರ್ವರೂ ಸೇರಿದ್ದ, ನದಿಗಳ ಜಾಲಗಳಿಂದ ಕೂಡಿದ್ದ, ನಾನಾಪಕ್ಷಿಕುಲಗಳಿಂದ ಕೂಡಿದ್ದ, ನಾನಾ ವಿಧದ ಮೃಗಗಳು ಬರುತ್ತಿದ್ದ, ಮಂಗಗಳಿಂದ ಶೋಭಿತಗೊಂಡಿದ್ದ ಬಹಳಷ್ಟು ಪ್ರದೇಶಗಳನ್ನು, ಮತ್ತು ಉತ್ತರ ಕುರುವನ್ನೂ ದಾಟಿ ವಿವಿಧಾಶ್ಚರ್ಯಗಳನ್ನುಳ್ಳ ಉತ್ತಮ ಕಲಾಸ ಪರ್ವತವನ್ನು ಕಂಡರು.
03145016a ತಸ್ಯಾಭ್ಯಾಶೇ ತು ದದೃಶುರ್ನರನಾರಾಯಣಾಶ್ರಮಂ|
03145016c ಉಪೇತಂ ಪಾದಪೈರ್ದಿವ್ಯೈಃ ಸದಾಪುಷ್ಪಫಲೋಪಗೈಃ||
ಅದೇ ಪ್ರದೇಶದಲ್ಲಿ ಸದಾ ಫಲಪುಷ್ಪಗಳನ್ನು ನೀಡುವ ಮರಗಳು ಬೆಳೆದು ನಿಂತಿದ್ದ ನರ-ನಾರಾಯಣರ ಆಶ್ರಮವನ್ನೂ ಕಂಡರು.
03145017a ದದೃಶುಸ್ತಾಂ ಚ ಬದರೀಂ ವೃತ್ತಸ್ಕಂಧಾಂ ಮನೋರಮಾಂ|
03145017c ಸ್ನಿಗ್ಧಾಮವಿರಲಚ್ಚಾಯಾಂ ಶ್ರಿಯಾ ಪರಮಯಾ ಯುತಾಂ||
03145018a ಪತ್ರೈಃ ಸ್ನಿಗ್ಧೈರವಿರಲೈರುಪೇತಾಂ ಮೃದುಭಿಃ ಶುಭಾಂ|
03145018c ವಿಶಾಲಶಾಖಾಂ ವಿಸ್ತೀರ್ಣಾಮತಿದ್ಯುತಿಸಮನ್ವಿತಾಂ||
03145019a ಫಲೈರುಪಚಿತೈರ್ದಿವ್ಯೈರಾಚಿತಾಂ ಸ್ವಾದುಭಿರ್ಭೃಶಂ|
03145019c ಮಧುಸ್ರವೈಃ ಸದಾ ದಿವ್ಯಾಂ ಮಹರ್ಷಿಗಣಸೇವಿತಾಂ||
ದುಂಡನೆಯ ಬುಡವುಳ್ಳ, ಮನೋರಮವಾದ, ತೆಳುರೆಂಬೆಗಳಿಂದ ದಟ್ಟ ನೆರಳನ್ನು ನೀಡುತ್ತಿದ್ದ, ಎಲ್ಲೆಡೆಯೂ ಕಾಂತಿಯನ್ನು ಹೊಂದಿದ್ದ, ದಟ್ಟ ಮೃದು ಚಿಗುರೆಲೆಗಳನ್ನು ಹೊಂದಿದ್ದ, ವಿಸ್ತಾರವಾದ ಭಾರಿರೆಂಬೆಗಳನ್ನು ಹೊಂದಿದ್ದ, ಸುಂದರವಾದ, ತುಂಬಾ ಕಾಂತಿಯುಕ್ತವಾದ, ಗಳಿತ ಹಣ್ಣುಗಳ ಗೊಂಚಲುಗಳಿಂದ ಸಿಹಿಯು ಸುರಿಯುತ್ತಿರುವ, ಸದಾ ದಿವ್ಯ ಮಹರ್ಷಿಗಣಗಳಿಂದ ಪೂಜಿತವಾದ ಬದರೀ ವೃಕ್ಷವನ್ನು ಕಂಡರು.
03145019e ಮದಪ್ರಮುದಿತೈರ್ನಿತ್ಯಂ ನಾನಾದ್ವಿಜಗಣೈರ್ಯುತಾಂ||
03145020a ಅದಂಶಮಶಕೇ ದೇಶೇ ಬಹುಮೂಲಫಲೋದಕೇ|
03145020c ನೀಲಶಾದ್ವಲಸಂಚನ್ನೇ ದೇವಗಂಧರ್ವಸೇವಿತೇ||
03145021a ಸುಸಮೀಕೃತಭೂಭಾಗೇ ಸ್ವಭಾವವಿಹಿತೇ ಶುಭೇ|
03145021c ಜಾತಾಂ ಹಿಮಮೃದುಸ್ಪರ್ಶೇ ದೇಶೇಽಪಹತಕಂಟಕೇ||
ಅದರಲ್ಲಿ ಸದಾ ಮದಭರಿತ ಚಿಲಿಪಿಲಿಗುಟ್ಟುತ್ತಿದ್ದ ನಾನಾರೀತಿಯ ಪಕ್ಷಿಸಂಕುಲಗಳಿದ್ದವು. ಆ ಪ್ರದೇಶದಲ್ಲಿ ಸೊಳ್ಳೆಗಳಾಗಲೀ ನೊಣಗಳಾಗಲೀ ಇರಲಿಲ್ಲ. ಅಲ್ಲಿ ಬಹಳಷ್ಟು ಗೆಡ್ಡೆಗಳು, ಹಣ್ಣುಗಳು ಮತ್ತು ನೀರು ದೊರೆಯುತ್ತಿತ್ತು. ಏರಿಳಿತಗಳಿಲ್ಲದ ಸ್ವಾಭಾವಿಕವಾಗಿಯೇ ಹಿತವಾಗಿರುವ ಸುಂದರವಾಗಿರುವ ನೀಲಿಬಣ್ಣದ ಹುಲ್ಲುಗಾವಲ ಪ್ರದೇಶಕ್ಕೆ ದೇವಗಂಧರ್ವರು ಬರುತ್ತಿದ್ದರು. ಅಲ್ಲಿ ಮುಳ್ಳುಗಳಿರಲಿಲ್ಲ ಮತ್ತು ಆ ಪ್ರದೇಶದಲ್ಲಿ ಸ್ವಲ್ಪವೇ ಮಂಜು ಬೀಳುತ್ತಿತ್ತು.
03145022a ತಾಮುಪೇತ್ಯ ಮಹಾತ್ಮಾನಃ ಸಹ ತೈರ್ಬ್ರಾಹ್ಮಣರ್ಷಭೈಃ|
03145022c ಅವತೇರುಸ್ತತಃ ಸರ್ವೇ ರಾಕ್ಷಸಸ್ಕಂಧತಃ ಶನೈಃ||
ಅದರ ಹತ್ತಿರ ಬಂದು ಆ ಮಹಾತ್ಮರೂ ಮತ್ತು ಬ್ರಾಹ್ಮಣರ್ಷಭರೂ ಎಲ್ಲರೂ ನಿಧಾನವಾಗಿ ರಾಕ್ಷಸರ ಭುಜಗಳಿಂದ ಕೆಳಗಿಳಿದರು.
03145023a ತತಸ್ತಮಾಶ್ರಮಂ ಪುಣ್ಯಂ ನರನಾರಾಯಣಾಶ್ರಿತಂ|
03145023c ದದೃಶುಃ ಪಾಂಡವಾ ರಾಜನ್ಸಹಿತಾ ದ್ವಿಜಪುಂಗವೈಃ||
ರಾಜನ್! ಅನಂತರ ಪಾಂಡವರು ದ್ವಿಜಪುಂಗವರ ಸಹಿತ ಆ ಪುಣ್ಯ ನರ-ನಾರಾಯಣರ ಆಶ್ರಮವನ್ನು ನೋಡಿದರು.
03145024a ತಮಸಾ ರಹಿತಂ ಪುಣ್ಯಮನಾಮೃಷ್ಟಂ ರವೇಃ ಕರೈಃ|
03145024c ಕ್ಷುತ್ತೃಟ್ಶೀತೋಷ್ಣದೋಷೈಶ್ಚ ವರ್ಜಿತಂ ಶೋಕನಾಶನಂ||
ಆ ಪುಣ್ಯ ಕ್ಷೇತ್ರದಲ್ಲಿ ಸೂರ್ಯನ ಕಿರಣವು ತಲುಪದೇ ಇದ್ದರೂ ಕತ್ತಲೆಯೆನ್ನುವುದೇ ಇರಲಿಲ್ಲ. ಅ ಪ್ರದೇಶವು ಹಸಿವು, ಬಾಯಾರಿಕೆ, ಶೀತ, ಸೆಖೆಗಳಿಂದ ವರ್ಜಿತವಾಗಿತ್ತು ಮತ್ತು ಶೋಕವನ್ನು ನಾಶಗೊಳಿಸುತ್ತಿತ್ತು.
03145025a ಮಹರ್ಷಿಗಣಸಂಬಾಧಂ ಬ್ರಾಹ್ಮ್ಯಾ ಲಕ್ಷ್ಮ್ಯಾ ಸಮನ್ವಿತಂ|
03145025c ದುಷ್ಪ್ರವೇಶಂ ಮಹಾರಾಜ ನರೈರ್ಧರ್ಮಬಹಿಷ್ಕೃತೈಃ||
ಅಲ್ಲಿ ಮಹರ್ಷಿಗಳ ಗುಂಪುಕಟ್ಟಿತ್ತು ಮತ್ತು ಬ್ರಹ್ಮನ ಕಾಂತಿಯಿಂದ ತುಂಬಿತ್ತು. ಮಹಾರಾಜ! ಧರ್ಮ ಬಹಿಷ್ಕೃತ ಮನುಷ್ಯರಿಗೆ ಅಲ್ಲಿಗೆ ಪ್ರವೇಶವು ಬಹಳ ಕಷ್ಟಕರವಾಗುತ್ತದೆ.
03145026a ಬಲಿಹೋಮಾರ್ಚಿತಂ ದಿವ್ಯಂ ಸುಸಮ್ಮೃಷ್ಟಾನುಲೇಪನಂ|
03145026c ದಿವ್ಯಪುಷ್ಪೋಪಹಾರೈಶ್ಚ ಸರ್ವತೋಽಭಿವಿರಾಜಿತಂ||
ಆ ಆಶ್ರಮದಲ್ಲಿ ನಲಿಹರಣ, ಹೋಮ, ಅರ್ಚನೆಗಳೂ-ಸಮ್ಮಾರ್ಜನ ಅನುಲೇಪನಾದಿಗಳೂ ಅನವರತವಾಗಿ ನಡೆಯುತ್ತಿದ್ದವು. ದಿವ್ಯ ಪುಷ್ಪಹಾರಗಳಿಂದ ಯಾವಾಗಲೂ ಅಲಂಕರಿಸಲ್ಪಡುತ್ತಿತ್ತು.
03145027a ವಿಶಾಲೈರಗ್ನಿಶರಣೈಃ ಸ್ರುಗ್ಭಾಂಡೈರಾಚಿತಂ ಶುಭೈಃ|
03145027c ಮಹದ್ಭಿಸ್ತೋಯಕಲಶೈಃ ಕಠಿನೈಶ್ಚೋಪಶೋಭಿತಂ||
03145027e ಶರಣ್ಯಂ ಸರ್ವಭೂತಾನಾಂ ಬ್ರಹ್ಮಘೋಷನಿನಾದಿತಂ||
ವಿಶಾಲ ಸ್ರುಕ್-ಸ್ರುವ-ಬಾಂಡಾದಿಗಳು ಸದಾ ಸಿದ್ದವಾಗಿರುವ ಸುಂದರ ಅಗ್ನ್ಯಾಗಾರಗಳಿದ್ದವು. ದೊಡ್ಡ ದೊಡ್ಡ ನೀರಿನ ಕಲಶಗಳು ಶೋಭಿಸುತ್ತಿದ್ದವು. ಸರ್ವಭೂತಗಳಿಗೂ ಆಶ್ರಯದಾಯಕವಾದ ಆ ಆಶ್ರಮವು ಬ್ರಹ್ಮಘೋಷದಿಂದ ಮೊಳಗುತ್ತಿತ್ತು.
03145028a ದಿವ್ಯಮಾಶ್ರಯಣೀಯಂ ತಮಾಶ್ರಮಂ ಶ್ರಮನಾಶನಂ|
03145028c ಶ್ರಿಯಾ ಯುತಮನಿರ್ದೇಶ್ಯಂ ದೇವಚರ್ಯೋಪಶೋಭಿತಂ||
03145029a ಫಲಮೂಲಾಶನೈರ್ದಾಂತೈಶ್ಚೀರಕೃಷ್ಣಾಜಿನಾಂಬರೈಃ|
03145029c ಸೂರ್ಯವೈಶ್ವಾನರಸಮೈಸ್ತಪಸಾ ಭಾವಿತಾತ್ಮಭಿಃ||
03145030a ಮಹರ್ಷಿಭಿರ್ಮೋಕ್ಷಪರೈರ್ಯತಿಭಿರ್ನಿಯತೇಂದ್ರಿಯೈಃ|
03145030c ಬ್ರಹ್ಮಭೂತೈರ್ಮಹಾಭಾಗೈರುಪೇತಂ ಬ್ರಹ್ಮವಾದಿಭಿಃ||
ಆ ದಿವ್ಯಾಶ್ರಮವು ಎಲ್ಲರಿಗೂ ಆಶ್ರಯಣೀಯವೂ, ಶ್ರಮವನ್ನು ಹೋಗಲಾಡಿಸುವಂತಹುದೂ ಆಗಿತ್ತು. ಕಾಂತಿಯಿಂದ ಕೂಡಿದ್ದ ಆಶ್ರಮವು ದೇವತೆಗಳು ಸದಾಕಾಲ ಹೋಗಿ ಬರುತ್ತಿದ್ದುದರಿಂದ ಇನ್ನೂ ಶೋಭಾಯಮಾನವಾಗಿ ಕಾಣುತ್ತಿತ್ತು. ಫಲಮೂಲಗಳನ್ನು ತಿಂದುಕೊಂಡು, ಜಿತೇಂದ್ರಿಯರಾಗಿರುವ, ನಾರುಡುಗೆ ಮತ್ತು ಕೃಷ್ಣಾಜಿನಗಳನ್ನು ಧರಿಸಿದ್ದ, ಸೂರ್ಯ ಮತ್ತು ಅಗ್ನಿಯರ ತೇಜೋಸಮಾನರಾದ, ತಪಸ್ಸಿನಿಂದ ಆತ್ಮಜ್ಞಾನವನ್ನು ಪಡೆದಿದ್ದ, ಮೋಕ್ಷಪರರಾದ ಮಹರ್ಷಿಗಳಿಂದ ಮತ್ತು ನಿಯತೇಂದ್ರಿಯರಾದ ಯತಿಗಳಿಂದ, ಬ್ರಹ್ಮಭೂತರಾದ ಮಹಾಭಾಗರಿಂದ ಮತ್ತು ಬ್ರಹ್ಮವಾದಿಗಳಿಂದ ತುಂಬಿಕೊಂಡಿತ್ತು.
03145031a ಸೋಽಭ್ಯಗಚ್ಚನ್ಮಹಾತೇಜಾಸ್ತಾನೃಷೀನ್ನಿಯತಃ ಶುಚಿಃ|
03145031c ಭ್ರಾತೃಭಿಃ ಸಹಿತೋ ಧೀಮಾನ್ಧರ್ಮಪುತ್ರೋ ಯುಧಿಷ್ಠಿರಃ||
ಧೀಮಂತ ಧರ್ಮಪುತ್ರ ಯುಧಿಷ್ಠಿರನು ತನ್ನ ತಮ್ಮಂದಿರೊಡನೆ ಆ ಮಹಾತೇಜಸ್ವಿ ಋಷಿಗಳ ಬಳಿ ನಿಯತನಾಗಿ, ಶುಚಿಯಾಗಿ ಹೋದನು.
03145032a ದಿವ್ಯಜ್ಞಾನೋಪಪನ್ನಾಸ್ತೇ ದೃಷ್ಟ್ವಾ ಪ್ರಾಪ್ತಂ ಯುಧಿಷ್ಠಿರಂ|
03145032c ಅಭ್ಯಗಚ್ಚಂತ ಸುಪ್ರೀತಾಃ ಸರ್ವ ಏವ ಮಹರ್ಷಯಃ||
03145032e ಆಶೀರ್ವಾದಾನ್ಪ್ರಯುಂಜಾನಾಃ ಸ್ವಾಧ್ಯಾಯನಿರತಾ ಭೃಶಂ||
03145033a ಪ್ರೀತಾಸ್ತೇ ತಸ್ಯ ಸತ್ಕಾರಂ ವಿಧಿನಾ ಪಾವಕೋಪಮಾಃ|
03145033c ಉಪಾಜಹ್ರುಶ್ಚ ಸಲಿಲಂ ಪುಷ್ಪಮೂಲಫಲಂ ಶುಚಿ||
ದಿವ್ಯಜ್ಞಾನವನ್ನು ಹೊಂದಿದ್ದ ಆ ಎಲ್ಲ ಮಹರ್ಷಿಗಳೂ ಬರುತ್ತಿದ್ದ ಯುಧಿಷ್ಠಿರನನ್ನು ನೋಡಿ ಭೇಟಿಯಾಗಿ ಸುಪ್ರೀತರಾದರು. ಸ್ವಾಧ್ಯಾಯನಿರತರಾದ ಅವರು ಅವರಿಗೆ ಆತಿಥ್ಯವನ್ನೂ ಆಶೀರ್ವಾದಗಳನ್ನೂ ನೀಡಿದರು. ಅಗ್ನಿಸಮಾನರಾದ ಅವರು ಪ್ರೀತಿಯಿಂದ ಅವನನ್ನು ವಿಧಿಪೂರ್ವಕವಾಗಿ ಶುದ್ಧೀಕರಿಸಿದ ನೀರಿನಿಂದ ಮತ್ತು ಪುಷ್ಪ, ಮೂಲ, ಫಲಗಳಿಂದ ಸತ್ಕರಿಸಿದರು.
03145034a ಸ ತೈಃ ಪ್ರೀತ್ಯಾಥ ಸತ್ಕಾರಮುಪನೀತಂ ಮಹರ್ಷಿಭಿಃ|
03145034c ಪ್ರಯತಃ ಪ್ರತಿಗೃಹ್ಯಾಥ ಧರ್ಮಪುತ್ರೋ ಯುಧಿಷ್ಠಿರಃ||
ಧರ್ಮಪುತ್ರ ಯುಧಿಷ್ಠಿರನೂ ಆ ಮಹರ್ಷಿಗಳ ಸತ್ಕಾರವನ್ನು ವಿನಯದಿಂದ ಮತ್ತು ಪ್ರೀತಿಯಿಂದ ಸ್ವೀಕರಿಸಿದನು.
03145035a ತಂ ಶಕ್ರಸದನಪ್ರಖ್ಯಂ ದಿವ್ಯಗಂಧಂ ಮನೋರಮಂ|
03145035c ಪ್ರೀತಃ ಸ್ವರ್ಗೋಪಮಂ ಪುಣ್ಯಂ ಪಾಂಡವಃ ಸಹ ಕೃಷ್ಣಯಾ||
03145036a ವಿವೇಶ ಶೋಭಯಾ ಯುಕ್ತಂ ಭ್ರಾತೃಭಿಶ್ಚ ಸಹಾನಘ|
03145036c ಬ್ರಾಹ್ಮಣೈರ್ವೇದವೇದಾಂಗಪಾರಗೈಶ್ಚ ಸಹಾಚ್ಯುತಃ||
ಕೃಷ್ಣೆಯೊಡನೆ ಆ ಅನಘ ಅಚ್ಯುತ ಪಾಂಡವನು ತನ್ನ ತಮ್ಮಂದಿರೊಡನೆ ಮತ್ತು ವೇದವೇದಾಂಗ ಪಾರಂಗತರಾದ ಬ್ರಾಹ್ಮಣರೊಡನೆ ಸಂತೋಷದಿಂದ ಸ್ವರ್ಗದಂತಿದ್ದ, ಇಂದ್ರನ ಅರಮನೆಯಂತಿದ್ದ, ದಿವ್ಯಗಂಧಗಳಿಂದ ಮನೋಹರವಾದ ಪುಣ್ಯಕರ ಸುಂದರ ಅಶ್ರಮವನ್ನು ಪ್ರವೇಶಿಸಿದನು.
03145037a ತತ್ರಾಪಶ್ಯತ್ಸ ಧರ್ಮಾತ್ಮಾ ದೇವದೇವರ್ಷಿಪೂಜಿತಂ|
03145037c ನರನಾರಾಯಣಸ್ಥಾನಂ ಭಾಗೀರಥ್ಯೋಪಶೋಭಿತಂ||
03145038a ಮಧುಸ್ರವಫಲಾಂ ದಿವ್ಯಾಂ ಮಹರ್ಷಿಗಣಸೇವಿತಾಂ|
03145038c ತಾಮುಪೇತ್ಯ ಮಹಾತ್ಮಾನಸ್ತೇಽವಸನ್ಬ್ರಾಹ್ಮಣೈಃ ಸಹ||
ಅಲ್ಲಿ ಆ ಧರ್ಮಾತ್ಮನು ದೇವದೇವರ್ಷಿಪೂಜಿತ ಭಾಗೀರಥಿಯಿಂದ ಶೋಭಿತವಾದ ಮಧುವನ್ನು ಸುರಿಸುವ ಹಣ್ಣುಗಳುಳ್ಳ ದಿವ್ಯ ಮಹರ್ಷಿಗಣಸೇವಿತ ನರ-ನಾರಾಯಣರ ಆಸ್ಥಾನವನ್ನು ನೋಡಿದನು. ಬ್ರಾಹ್ಮಣರ ಸಹಿತ ಆ ಮಹಾತ್ಮನು ಅದರ ಬಳಿ ಹೋಗಿ ಅಲ್ಲಿ ವಸತಿಮಾಡಿದನು.
03145039a ಆಲೋಕಯಂತೋ ಮೈನಾಕಂ ನಾನಾದ್ವಿಜಗಣಾಯುತಂ|
03145039c ಹಿರಣ್ಯಶಿಖರಂ ಚೈವ ತಚ್ಚ ಬಿಂದುಸರಃ ಶಿವಂ||
03145040a ಭಾಗೀರಥೀಂ ಸುತೀರ್ಥಾಂ ಚ ಶೀತಾಮಲಜಲಾಂ ಶಿವಾಂ|
03145040c ಮಣಿಪ್ರವಾಲಪ್ರಸ್ತಾರಾಂ ಪಾದಪೈರುಪಶೋಭಿತಾಂ||
ನಾನಾ ದ್ವಿಜಗಣಗಳಿಂದ ಕೂಡಿದ ಮೈನಾಕದ ಬಂಗಾರದ ಶಿಖರವನ್ನು, ಸುಂದರ ಬಿಂದುಸರೋವರವನ್ನು, ಸುತೀರ್ಥ, ಮಂಗಳಕರ, ತಣ್ಣಗಿನ ಶುದ್ಧ ನೀರಿನ ಭಾಗೀರಥಿಯನ್ನು, ನೋಡುತ್ತಾ ಮಣಿಗಳಂತೆ ಚಿಗುರುಗಳನ್ನುಳ್ಳ ಮರಗಳಿಂದ ಶೋಭಿಸುತ್ತಿದ್ದ ಆ ಅಶ್ರಮದಲ್ಲಿ ನೆಲಸಿದರು.
03145041a ದಿವ್ಯಪುಷ್ಪಸಮಾಕೀರ್ಣಾಂ ಮನಸಃ ಪ್ರೀತಿವರ್ಧನೀಂ|
03145041c ವೀಕ್ಷಮಾಣಾ ಮಹಾತ್ಮಾನೋ ವಿಜಹ್ರುಸ್ತತ್ರ ಪಾಂಡವಾಃ||
03145042a ತತ್ರ ದೇವಾನ್ಪಿತೄಂಶ್ಚೈವ ತರ್ಪಯಂತಃ ಪುನಃ ಪುನಃ|
03145042c ಬ್ರಾಹ್ಮಣೈಃ ಸಹಿತಾ ವೀರಾ ನ್ಯವಸನ್ಪುರುಷರ್ಷಭಾಃ||
ಮನಸ್ಸಿಗೆ ಸಂತೋಷವನ್ನು ಹೆಚ್ಚಿಸುವ ದಿವ್ಯ ಪುಷ್ಪಗಳ ಹಾಸಿಗೆಯನ್ನು ನೋಡುತ್ತಾ ಆ ಮಹಾತ್ಮ ಪಾಂಡವರು ಅಲ್ಲಿ ವಿಹರಿಸಿದರು. ಅಲ್ಲಿ ಪುನಃ ಪುನಃ ದೇವತೆಗಳಿಗೂ ಪಿತೃಗಳಿಗೂ ತರ್ಪಣಗಳನ್ನು ನೀಡುತ್ತಾ ಬ್ರಾಹ್ಮಣರೊಡನೆ ಆ ವೀರ ಪುರುಷರ್ಷಭರು ವಾಸಿಸಿದರು.
03145043a ಕೃಷ್ಣಾಯಾಸ್ತತ್ರ ಪಶ್ಯಂತಃ ಕ್ರೀಡಿತಾನ್ಯಮರಪ್ರಭಾಃ|
03145043c ವಿಚಿತ್ರಾಣಿ ನರವ್ಯಾಘ್ರಾ ರೇಮಿರೇ ತತ್ರ ಪಾಂಡವಾಃ||
ಅಮರಪ್ರಭರಾದ ಆ ನರವ್ಯಾಘ್ರ ಪಾಂಡವರು ದ್ರೌಪದಿಯ ವಿಚಿತ್ರ ಆಟಗಳನ್ನು ನೋಡುತ್ತಾ ಅಲ್ಲಿ ರಮಿಸಿದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಗಂಧಮಾದನಪ್ರವೇಶೇ ಪಂಚಚತ್ವಾರಿಂಶದಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಗಂಧಮಾದನಪ್ರವೇಶವೆಂಬ ನೂರಾನಲ್ವತ್ತೈದನೆಯ ಅಧ್ಯಾಯವು.