Aranyaka Parva: Chapter 127

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೨೭

ಸೋಮಕ-ಜಂತು

ರಾಜ ಸೋಮಕನಿಗೆ ವೃದ್ಧಾಪ್ಯದಲ್ಲಿ ಅವನ ನೂರು ಪತ್ನಿಯರಲ್ಲಿ ಜಂತು ಎಂಬ ಹೆಸರಿನ ಪುತ್ರನೋರ್ವನು ಜನಿಸಿದ್ದುದು; ಎಲ್ಲ ತಾಯಂದಿರೂ ಅವನನ್ನು ಮುದ್ದಿಸಿ ಬೆಳೆಸುವುದು; ಇರುವೆ ಕಚ್ಚಿ ಅತ್ತ ಜಂತುವನ್ನು ನೋಡಿ ಎಲ್ಲ ತಾಯಂದಿರೂ ರೋದನ ಮಾಡಿದುದನ್ನು ಕೇಳಿ ರೋಷಗೊಂಡ ರಾಜನು ಪುರೋಹಿತರಲ್ಲಿ “ಒಬ್ಬನೇ ಮಗನಿರುವುದಕ್ಕಿಂದ ಮಕ್ಕಳಿಲ್ಲದಿರುವುದೇ ಒಳ್ಳೆಯದು” ಎಂದು ಹೇಳಿ ನೂರು ಮಕ್ಕಳನ್ನು ಪಡೆಯುವ ವಿಧಾನ ಯಾವುದಾದರೂ ಇದೆಯೇ ಎಂದು ಕೇಳುವುದು (೧-೧೬). ಜಂತುವನ್ನು ಆಹುತಿಯನ್ನಾಗಿತ್ತು ಯಾಗಮಾಡಿ ಅದರ ಧೂಮವನ್ನು ರಾಜಪತ್ನಿಯರು ಸೇವಿಸಿದರೆ ನೂರು ಮಕ್ಕಳಾಗುತ್ತಾರೆ ಎಂದು ಋತ್ವಿಜರು ಸೂಚಿಸುವುದು (೧೭-೨೧).

03127001 ಯುಧಿಷ್ಠಿರ ಉವಾಚ|

03127001a ಕಥಂವೀರ್ಯಃ ಸ ರಾಜಾಭೂತ್ಸೋಮಕೋ ವದತಾಂ ವರ|

03127001c ಕರ್ಮಾಣ್ಯಸ್ಯ ಪ್ರಭಾವಂ ಚ ಶ್ರೋತುಮಿಚ್ಚಾಮಿ ತತ್ತ್ವತಃ||

ಯುಧಿಷ್ಠಿರನು ಹೇಳಿದನು: “ಮಾತುಗಾರರಲ್ಲಿ ಶ್ರೇಷ್ಠನೇ! ರಾಜಾ ಸೋಮಕನು ಎಂಥಹ ವೀರ್ಯವಂತನಾಗಿದ್ದನು? ಅವನ ಕರ್ಮಗಳ ಮತ್ತು ಪ್ರಭಾವದ ಕುರಿತು ನಿನ್ನಿಂದ ಕೇಳ ಬಯಸುತ್ತೇನೆ.”

03127002 ಲೋಮಶ ಉವಾಚ|

03127002a ಯುಧಿಷ್ಠಿರಾಸೀನ್ನೃಪತಿಃ ಸೋಮಕೋ ನಾಮ ಧಾರ್ಮಿಕಃ|

03127002c ತಸ್ಯ ಭಾರ್ಯಾಶತಂ ರಾಜನ್ಸದೃಶೀನಾಮಭೂತ್ತದಾ||

ಲೋಮಶನು ಹೇಳಿದನು: “ಯುಧಿಷ್ಠಿರ! ರಾಜನ್! ಸೋಮಕ ಎಂಬ ಹೆಸರಿನ ಧಾರ್ಮಿಕ ರಾಜನಿದ್ದನು. ಅವನಿಗೆ ಸದೃಶರಾದ ನೂರು ಪತ್ನಿಯರಿದ್ದರು.

03127003a ಸ ವೈ ಯತ್ನೇನ ಮಹತಾ ತಾಸು ಪುತ್ರಂ ಮಹೀಪತಿಃ|

03127003c ಕಂ ಚಿನ್ನಾಸಾದಯಾಮಾಸ ಕಾಲೇನ ಮಹತಾ ಅಪಿ||

ಆದರೆ ಆ ಮಹೀಪತಿಯು ಎಷ್ಟು ಪ್ರಯತ್ನಿಸಿದರೂ ಬಹಳ ಕಾಲದವರೆಗೆ ಅವರಲ್ಲಿ ಮಗನನ್ನು ಪಡೆಯಲಾಗಲಿಲ್ಲ.

03127004a ಕದಾ ಚಿತ್ತಸ್ಯ ವೃದ್ಧಸ್ಯ ಯತಮಾನಸ್ಯ ಯತ್ನತಃ|

03127004c ಜಂತುರ್ನಾಮ ಸುತಸ್ತಸ್ಮಿನ್ಸ್ತ್ರೀಶತೇ ಸಮಜಾಯತ||

ಹೀಗೆ ಅವನು ಪ್ರಯತ್ನಿಸುತ್ತಿರಲು, ವೃದ್ಧಾಪ್ಯದಲ್ಲಿ ಜಂತು ಎನ್ನುವ ಓರ್ವ ಮಗನು ಆ ನೂರು ಸ್ತ್ರೀಯರಲ್ಲಿ ಹುಟ್ಟಿದನು.

03127005a ತಂ ಜಾತಂ ಮಾತರಃ ಸರ್ವಾಃ ಪರಿವಾರ್ಯ ಸಮಾಸತೇ|

03127005c ಸತತಂ ಪೃಷ್ಠತಃ ಕೃತ್ವಾ ಕಾಮಭೋಗಾನ್ವಿಶಾಂ ಪತೇ||

ವಿಶಾಂಪತೇ! ಅವನು ಹುಟ್ಟಿದಾಗ ಎಲ್ಲ ತಾಯಂದಿರೂ ಅವನನ್ನು ಸುತ್ತುವರೆದು ಸದಾಕಾಲವೂ ಅವನನ್ನು ಎತ್ತಿ ಹಿಡಿದು ಅವನ ಕಾಮಭೋಗಗಳನ್ನೆಲ್ಲಾ ಪೂರೈಸುತ್ತಿದ್ದರು.

03127006a ತತಃ ಪಿಪೀಲಿಕಾ ಜಂತುಂ ಕದಾ ಚಿದದಶತ್ಸ್ಫಿಜಿ|

03127006c ಸ ದಷ್ಟೋ ವ್ಯನದದ್ರಾಜಂಸ್ತೇನ ದುಃಖೇನ ಬಾಲಕಃ||

ರಾಜನ್! ಒಂದು ದಿನ ಜಂತುವಿನ ಕುಂಡೆಯನ್ನು ಒಂದು ಇರುವೆಯು ಕಚ್ಚಿತು ಮತ್ತು ಅದರಿಂದ ದುಃಖಿತನಾದ ಬಾಲಕನು ನೋವಿನಿಂದ ಕಿರುಚಿದನು.

03127007a ತತಸ್ತಾ ಮಾತರಃ ಸರ್ವಾಃ ಪ್ರಾಕ್ರೋಶನ್ಭೃಶದುಃಖಿತಾಃ|

03127007c ಪರಿವಾರ್ಯ ಜಂತುಂ ಸಹಿತಾಃ ಸ ಶಬ್ಧಸ್ತುಮುಲೋಽಭವತ್||

ಆಗ ಅವನ ಎಲ್ಲ ತಾಯಂದಿರೂ ಬಹು ದುಃಖಿತರಾಗಿ ಜಂತುವನ್ನು ಸುತ್ತುವರಿದು ಅವನೊಂದಿಗೆ ರೋದಿಸಿದರು, ಮತ್ತು ಅವರ ರೋದನೆಯು ಜೋರಾಗಿ ಕೇಳಿಸುತ್ತಿತ್ತು.

03127008a ತಮಾರ್ತನಾದಂ ಸಹಸಾ ಶುಶ್ರಾವ ಸ ಮಹೀಪತಿಃ|

03127008c ಅಮಾತ್ಯಪರಿಷನ್ಮಧ್ಯೇ ಉಪವಿಷ್ಟಃ ಸಹರ್ತ್ವಿಜೈಃ||

ಅಮಾತ್ಯರು ಮತ್ತು ಪುರೋಹಿತರ ಮಧ್ಯೆ ಸಮಾಲೋಚನೆಯಲ್ಲಿ ಕುಳಿತಿದ್ದ ರಾಜನು ಒಮ್ಮೆಗೇ ಬಂದ ಆ ಅರ್ತನಾದವನ್ನು ಕೇಳಿದನು.

03127009a ತತಃ ಪ್ರಸ್ಥಾಪಯಾಮಾಸ ಕಿಮೇತದಿತಿ ಪಾರ್ಥಿವಃ|

03127009c ತಸ್ಮೈ ಕ್ಷತ್ತಾ ಯಥಾವೃತ್ತಮಾಚಚಕ್ಷೇ ಸುತಂ ಪ್ರತಿ||

ತಕ್ಷಣವೇ ರಾಜನು ಅದೇನೆಂದು ಕಂಡುಕೊಂಡುಬರಲು ಸೇವಕನನ್ನು ಕಳುಹಿಸಲು, ಆ ಸೇವಕನು ಹಿಂದಿರುಗಿ ಬಂದು ಅವನ ಮಗನಿಗಾದುದರ ಕುರಿತು ವರದಿಮಾಡಿದನು.

03127010a ತ್ವರಮಾಣಃ ಸ ಚೋತ್ಥಾಯ ಸೋಮಕಃ ಸಹ ಮಂತ್ರಿಭಿಃ|

03127010c ಪ್ರವಿಶ್ಯಾಂತಃಪುರಂ ಪುತ್ರಮಾಶ್ವಾಸಯದರಿಂದಮಃ||

ಆ ಅರಿಂದಮ ಸೋಮಕನು ಮಂತ್ರಿಗಳೊಡನೆ ಅವಸರದಿಂದ ಮೇಲೆದ್ದು ಅಂತಃಪುರವನ್ನು ಹೊಕ್ಕು ಮಗನನ್ನು ಸಂತೈಸಿದನು.

03127011a ಸಾಂತ್ವಯಿತ್ವಾ ತು ತಂ ಪುತ್ರಂ ನಿಷ್ಕ್ರಮ್ಯಾಂತಃಪುರಾನ್ನೃಪಃ|

03127011c ಋತ್ವಿಜೈಃ ಸಹಿತೋ ರಾಜನ್ಸಹಾಮಾತ್ಯ ಉಪಾವಿಶತ್||

ಮಗನನ್ನು ಸಂತವಿಸಿ ರಾಜನು ಅಂತಃಪುರದಿಂದ ಹೊರಬಂದನು ಮತ್ತು ರಾಜನ್! ತನ್ನ ಋತ್ವಿಜ ಮತ್ತು ಅಮಾತ್ಯರೊಂದಿಗೆ ಕುಳಿತುಕೊಂಡನು.

03127012 ಸೋಮಕ ಉವಾಚ|

03127012a ಧಿಗಸ್ತ್ವಿಹೈಕಪುತ್ರತ್ವಮಪುತ್ರತ್ವಂ ವರಂ ಭವೇತ್|

03127012c ನಿತ್ಯಾತುರತ್ವಾದ್ಭೂತಾನಾಂ ಶೋಕ ಏವೈಕಪುತ್ರತಾ||

ಸೋಮಕನು ಹೇಳಿದನು: “ಒಬ್ಬನೇ ಮಗನಿದ್ದುದಕ್ಕೆ ಧಿಕ್ಕಾರ! ಇದಕ್ಕಿಂತಲೂ ಮಕ್ಕಳೇ ಇಲ್ಲದಿದ್ದರೆ ಒಳ್ಳೆಯದಾಗಿರುತ್ತಿತ್ತು. ಎಲ್ಲ ಜೀವಿಗಳಿಗೂ ನಿತ್ಯವೂ ಒಂದಿಲ್ಲೊಂದು ತೊಂದರೆಯಿರುವುದರಿಂದ ಒಬ್ಬನೇ ಮಗನಿದ್ದರೆ ಶೋಕವು ತಪ್ಪಿದ್ದಲ್ಲ.

03127013a ಇದಂ ಭಾರ್ಯಾಶತಂ ಬ್ರಹ್ಮನ್ಪರೀಕ್ಷ್ಯೋಪಚಿತಂ ಪ್ರಭೋ|

03127013c ಪುತ್ರಾರ್ಥಿನಾ ಮಯಾ ವೋಢಂ ನ ಚಾಸಾಂ ವಿದ್ಯತೇ ಪ್ರಜಾ||

ಬ್ರಾಹ್ಮಣ! ಮಕ್ಕಳಾಗಲೆಂದು ಸರಿಯಾಗಿ ಪರೀಕ್ಷೆಮಾಡಿಯೇ ಈ ನೂರು ಪತ್ನಿಯರನ್ನು ನಾನು ವರಿಸಿದರೂ ಯಾರೂ ಮಕ್ಕಳನ್ನು ಪಡೆಯಲಿಲ್ಲ!

03127014a ಏಕಃ ಕಥಂ ಚಿದುತ್ಪನ್ನಃ ಪುತ್ರೋ ಜಂತುರಯಂ ಮಮ|

03127014c ಯತಮಾನಸ್ಯ ಸರ್ವಾಸು ಕಿಂ ನು ದುಃಖಮತಃ ಪರಂ||

ಅವರೆಲ್ಲರ ಮೇಲೆ ಪ್ರಯತ್ನಿಸಿದರೂ ಹೇಗೋ ಈ ಜಂತುವು ನನ್ನ ಮಗನಾಗಿ ಹುಟ್ಟಿದನು. ಇದಕ್ಕಿಂತ ಪರಮ ದುಃಖವು ಇನ್ನ್ಯಾವುದಿರಬಹುದು?

03127015a ವಯಶ್ಚ ಸಮತೀತಂ ಮೇ ಸಭಾರ್ಯಸ್ಯ ದ್ವಿಜೋತ್ತಮ|

03127015c ಆಸಾಂ ಪ್ರಾಣಾಃ ಸಮಾಯತ್ತಾ ಮಮ ಚಾತ್ರೈಕಪುತ್ರಕೇ||

ದ್ವಿಜೋತ್ತಮ! ನನ್ನ ಮತ್ತು ನನ್ನ ಪತ್ನಿಯರ ವಯಸ್ಸು ಮೀರಿಯಾಗಿದೆ. ಅವರಂತೆ ನನ್ನ ಪ್ರಾಣವೂ ಕೂಡ ಈ ಓರ್ವ ಮಗನ ಮೇಲೆ ನಿಂತಿದೆ.

03127016a ಸ್ಯಾನ್ನು ಕರ್ಮ ತಥಾ ಯುಕ್ತಂ ಯೇನ ಪುತ್ರಶತಂ ಭವೇತ್|

03127016c ಮಹತಾ ಲಘುನಾ ವಾಪಿ ಕರ್ಮಣಾ ದುಷ್ಕರೇಣ ವಾ||

ನೂರು ಮಕ್ಕಳಾಗುವ ಬೇರೆ ಯಾವುದಾದರೂ, ಎಷ್ಟೇ ದೊಡ್ಡದಾಗಲೀ, ಸಣ್ಣದಾಗಲೀ ಅಥವಾ ದುಷ್ಕರವಾಗಿರಲೀ, ಕರ್ಮವಿಲ್ಲವೇ?”

03127017 ಋತ್ವಿಗುವಾಚ|

03127017a ಅಸ್ತಿ ವೈ ತಾದೃಶಂ ಕರ್ಮ ಯೇನ ಪುತ್ರಶತಂ ಭವೇತ್|

03127017c ಯದಿ ಶಕ್ನೋಷಿ ತತ್ಕರ್ತುಮಥ ವಕ್ಷ್ಯಾಮಿ ಸೋಮಕ||

ಋತ್ವಿಜನು ಹೇಳಿದನು: “ನೀನು ಬಯಸಿದಂತೆ ನೂರು ಪುತ್ರರನ್ನು ಪಡೆಯುವ ಒಂದು ಕರ್ಮವಿದ್ದೇ ಇದೆ. ಸೋಮಕ! ನೀನು ಮಾಡುವೆಯಂತಾದರೆ ನಾನು ಆ ಕರ್ಮದ ಕುರಿತು ಹೇಳುತ್ತೇನೆ.”

03127018 ಸೋಮಕ ಉವಾಚ|

03127018a ಕಾರ್ಯಂ ವಾ ಯದಿ ವಾಕಾರ್ಯಂ ಯೇನ ಪುತ್ರಶತಂ ಭವೇತ್|

03127018c ಕೃತಮೇವ ಹಿ ತದ್ವಿದ್ಧಿ ಭಗವಾನ್ಪ್ರಬ್ರವೀತು ಮೇ||

ಸೋಮಕನು ಹೇಳಿದನು: “ಕಾರ್ಯವನ್ನು ಮಾಡಬಹುದೋ ಅಥವಾ ಮಾಡಬಾರದೋ - ನೂರು ಮಕ್ಕಳನ್ನು ಪಡೆಯುವ ಕಾರ್ಯವಿದ್ದರೆ ಹೇಳು. ಭಗವಾನ್! ಆ ವಿಧಿಯ ಕುರಿತು ನನಗೆ ವಿವರಿಸಿ ಹೇಳು.”

03127019 ಋತ್ವಿಗುವಾಚ|

03127019a ಯಜಸ್ವ ಜಂತುನಾ ರಾಜಂಸ್ತ್ವಂ ಮಯಾ ವಿತತೇ ಕ್ರತೌ|

03127019c ತತಃ ಪುತ್ರಶತಂ ಶ್ರೀಮದ್ಭವಿಷ್ಯತ್ಯಚಿರೇಣ ತೇ||

ಋತ್ವಿಜನು ಹೇಳಿದನು: “ರಾಜನ್! ನಾನು ಆ ಕ್ರತುವನ್ನು ನಡೆಸಿಕೊಡುತ್ತೇನೆ. ಅದರಲ್ಲಿ ಜಂತುವನ್ನು ಆಹುತಿಯನ್ನಾಗಿ ನೀಡು. ತಕ್ಷಣವೇ ನೀನು ನೂರು ಶ್ರೀಮಂತ ಮಕ್ಕಳನ್ನು ಪಡೆಯುತ್ತೀಯೆ.

03127020a ವಪಾಯಾಂ ಹೂಯಮಾನಾಯಾಂ ಧೂಮಮಾಘ್ರಾಯ ಮಾತರಃ|

03127020c ತತಸ್ತಾಃ ಸುಮಹಾವೀರ್ಯಾಂ ಜನಯಿಷ್ಯಂತಿ ತೇ ಸುತಾನ್||

ಅವನ ಕೊಬ್ಬನ್ನು ಆಹುತಿಯನ್ನಾಗಿ ನೀಡುವಾಗ ತಾಯಂದಿರು ಹೊಗೆಯನ್ನು ಸೇವಿಸಬೇಕು. ಆಗ ಅವರಲ್ಲಿ ನಿನಗೆ ಮಹಾವೀರರಾದ ಮಕ್ಕಳು ಜನಿಸುತ್ತಾರೆ.

03127021a ತಸ್ಯಾಮೇವ ತು ತೇ ಜಂತುರ್ಭವಿತಾ ಪುನರಾತ್ಮಜಃ|

03127021c ಉತ್ತರೇ ಚಾಸ್ಯ ಸೌವರ್ಣಂ ಲಕ್ಷ್ಮ ಪಾರ್ಶ್ವೇ ಭವಿಷ್ಯತಿ||

ಜಂತುವು ನಿನ್ನ ಮಗನಾಗಿ ಅವಳಲ್ಲಿಯೇ ಪುನಃ ಹುಟ್ಟುತ್ತಾನೆ. ಅವನ ಎಡಬದಿಯಲ್ಲಿ ಬಂಗಾರದ ಚಿಹ್ನೆಯು ಇರುವುದು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಜಂತೂಪಖ್ಯಾನೇ ಸಪ್ತವಿಂಶತ್ಯಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಜಂತೂಪಖ್ಯಾನದಲ್ಲಿ ನೂರಾಇಪ್ಪತ್ತೇಳನೆಯ ಅಧ್ಯಾಯವು.

Image result for indian motifs cranes

Comments are closed.