Aranyaka Parva: Chapter 12

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ: ಕಿರ್ಮೀರವಧ ಪರ್ವ

೧೨

ಧೃತರಾಷ್ಟ್ರನಿಗೆ ವಿದುರನು ಭೀಮನ ಅಮಾನುಷ ಕೃತ್ಯದ ಕುರಿತು ಹೇಳಲು ಪ್ರಾರಂಭಿಸಿದುದು (೧-೨). ಮೂರು ದಿನ-ರಾತ್ರಿಗಳು ನಡೆದು ಮಧ್ಯರಾತ್ರಿಯಲ್ಲಿ ಕಾಮ್ಯಕವನ್ನು ಪ್ರವೇಶಿಸುತ್ತಿರುವಾಗ ಪಾಂಡವರು ಮಾರ್ಗದಲ್ಲಿ ಅಡ್ಡವಾಗಿ ನಿಂತಿದ್ದ ರಾಕ್ಷಸ ಕಿರ್ಮೀರನನ್ನು ನೋಡಿದುದು (೩-೧೫). ಆ ಘೋರರೂಪಿಯನ್ನು ನೋಡಿ ದ್ರೌಪದಿಯು ಮೂರ್ಛಿತಳಾದುದು; ಧೌಮ್ಯನು ಮಂತ್ರಶಕ್ತಿಯಿಂದ ರಾಕ್ಷಸನ ಮಾಯೆಯನ್ನು ನಾಶಪಡಿಸಿದುದು (೧೬-೧೯). ಅವರ್ಯಾರೆಂದು ತಿಳಿದ ಬಕನ ಸಹೋದರ, ಹಿಡಿಂಬನ ಗೆಳೆಯ ಕಿರ್ಮೀರನು ಭೀಮನೊಂದಿಗೆ ಸೇಡುತೀರಿಸಿಕೊಳ್ಳಲು ಮುಂದೆ ಬರುವುದು (೨೦-೩೭). ಭೀಕರವಾಗಿ ಹೋರಾಡಿ ಕಿರ್ಮೀರನನ್ನು ಭೀಮನು ವಧಿಸಿದ್ದುದು (೩೮-೭೫).

03012001 ಧೃತರಾಷ್ಟ್ರ ಉವಾಚ|

03012001a ಕಿರ್ಮೀರಸ್ಯ ವಧಂ ಕ್ಷತ್ತಃ ಶ್ರೋತುಮಿಚ್ಚಾಮಿ ಕಥ್ಯತಾಂ|

03012001c ರಕ್ಷಸಾ ಭೀಮಸೇನಸ್ಯ ಕಥಮಾಸೀತ್ಸಮಾಗಮಃ||

ಧೃತರಾಷ್ಟ್ರನು ಹೇಳಿದನು: “ಕ್ಷತ್ತ! ಕಿರ್ಮೀರನ ವಧೆಯ ಕುರಿತು ಕೇಳಲು ಬಯಸುತ್ತೇನೆ. ರಾಕ್ಷಸ ಮತ್ತು ಭೀಮಸೇನರ ನಡುವೆ ಸಮಾಗಮವು ಹೇಗೆ ಆಯಿತು ಎನ್ನುವುದನ್ನು ಹೇಳು.”

03012002 ವಿದುರ ಉವಾಚ|

03012002a ಶೃಣು ಭೀಮಸ್ಯ ಕರ್ಮೇದಮತಿಮಾನುಷಕರ್ಮಣಃ|

03012002c ಶ್ರುತಪೂರ್ವಂ ಮಯಾ ತೇಷಾಂ ಕಥಾಂತೇಷು ಪುನಃ ಪುನಃ||

ವಿದುರನು ಹೇಳಿದನು: “ಅವರು ಪುನಃ ಪುನಃ ಹೇಳುತ್ತಿದ್ದುದನ್ನು ಇದಕ್ಕೆ ಮೊದಲೇ ಕೇಳಿದ ಅಮಾನುಷಕರ್ಮಿ ಭೀಮನ ಕೃತ್ಯವನ್ನು ಕೇಳು.

03012003a ಇತಃ ಪ್ರಯಾತಾ ರಾಜೇಂದ್ರ ಪಾಂಡವಾ ದ್ಯೂತನಿರ್ಜಿತಾಃ|

03012003c ಜಗ್ಮುಸ್ತ್ರಿಭಿರಹೋರಾತ್ರೈಃ ಕಾಮ್ಯಕಂ ನಾಮ ತದ್ವನಂ||

ರಾಜೇಂದ್ರ! ದ್ಯೂತದಲ್ಲಿ ಸೋತ ಪಾಂಡವರು ಇಲ್ಲಿಂದ ಹೊರಟು ಮೂರು ಹಗಲು ರಾತ್ರಿ ನಡೆದು ಕಾಮ್ಯಕವೆಂಬ ಹೆಸರಿನ ಆ ವನವನ್ನು ಸೇರಿದರು.

03012004a ರಾತ್ರೌ ನಿಶೀಥೇ ಸ್ವಾಭೀಲೇ ಗತೇಽರ್ಧಸಮಯೇ ನೃಪ|

03012004c ಪ್ರಚಾರೇ ಪುರುಷಾದಾನಾಂ ರಕ್ಷಸಾಂ ಭೀಮಕರ್ಮಣಾಂ||

03012005a ತದ್ವನಂ ತಾಪಸಾ ನಿತ್ಯಂ ಶೇಷಾಶ್ಚ ವನಚಾರಿಣಃ|

03012005c ದೂರಾತ್ಪರಿಹರಂತಿ ಸ್ಮ ಪುರುಷಾದಭಯಾತ್ಕಿಲ||

ನೃಪ! ಢಕಾಯಿತರಿಗೆ ಸರಿಯಾದ ಸಮಯವೆನಿಸಿದ ಮಧ್ಯರಾತ್ರಿ ಕಳೆದ ರಾತ್ರಿಯಲ್ಲಿ, ಭೀಮಕರ್ಮಿಣಿ ನರಭಕ್ಷಕ ರಾಕ್ಷಸರು ತಿರುಗುತ್ತಿರುವ ಸಮಯದಲ್ಲಿ ತಾಪಸರೂ ಮತ್ತು ಉಳಿದ ವನಚಾರಿಣಿಗಳೂ ನಿತ್ಯವೂ ತಿರುಗಾಡುತ್ತಿರುವ ನರಭಕ್ಷಕರ ಭಯದಿಂದ ಆ ವನದಿಂದ ದೂರವಿರುತ್ತಾರೆ.

03012006a ತೇಷಾಂ ಪ್ರವಿಶತಾಂ ತತ್ರ ಮಾರ್ಗಮಾವೃತ್ಯ ಭಾರತ|

03012006c ದೀಪ್ತಾಕ್ಷಂ ಭೀಷಣಂ ರಕ್ಷಃ ಸೋಲ್ಮುಕಂ ಪ್ರತ್ಯದೃಶ್ಯತ||

ಭಾರತ! ಅಂಥಹ ಸಮಯದಲ್ಲಿ ಅವರು ಅದನ್ನು ಪ್ರವೇಶಿಸುತ್ತಿರುವಾಗ ಉರಿಯುತ್ತಿರುವ ಕಣ್ಣುಗಳ ಭೀಷಣ ರಾಕ್ಷಸನು ದೊಂದಿಯನ್ನು ಹಿಡಿದು ಅವರನ್ನು ತಡೆಗಟ್ಟುತ್ತಿರುವುದನ್ನು ಕಂಡರು.

03012007a ಬಾಹೂ ಮಹಾಂತೌ ಕೃತ್ವಾ ತು ತಥಾಸ್ಯಂ ಚ ಭಯಾನಕಂ|

03012007c ಸ್ಥಿತಮಾವೃತ್ಯ ಪಂಥಾನಂ ಯೇನ ಯಾಂತಿ ಕುರೂದ್ವಹಾಃ||

ತನ್ನ ಮಹಾಬಾಹುಗಳನ್ನು ವಿಸ್ತರಿಸಿ, ಮುಖವನ್ನು ಭಯಾನಕವಾಗಿ ಮಾಡಿಕೊಂಡು ಅವನು ಆ ಕುರೂದ್ವಹರು ಹೋಗುತ್ತಿದ್ದ ಮಾರ್ಗದಲ್ಲಿ ಅಡ್ಡವಾಗಿ ನಿಂತನು.

03012008a ದಷ್ಟೋಷ್ಠದಂಷ್ಟ್ರಂ ತಾಮ್ರಾಕ್ಷಂ ಪ್ರದೀಪ್ತೋರ್ಧ್ವಶಿರೋರುಹಂ|

03012008c ಸಾರ್ಕರಶ್ಮಿತಡಿಚ್ಚಕ್ರಂ ಸಬಲಾಕಮಿವಾಂಬುದಂ||

ಅವನ ಎಂಟು ಕೋರೆದಾಡೆಗಳೂ ಬಾಯಿಯಿಂದ ಹೊರಕ್ಕೆ ಚಾಚಿದ್ದವು. ಕಣ್ಣುಗಳು ಕೆಂಪಾಗಿದ್ದವು. ಅವನ ತಲೆಗೂದಲುಗಳು ಪ್ರಕಾಶಮಾನವಾಗಿ ನೆಟ್ಟಗೆ ನಿಂತಿದ್ದವು. ಆ ಸಮಯದಲ್ಲಿ ಅವನು ಸೂರ್ಯನ ರಶ್ಮಿಗಳಿಂದ, ಮಿಂಚು ಮತ್ತು ಬೆಳ್ಳಕ್ಕಿಗಳಿಂದ ಕೂಡಿದ ಮೋಡದಂತೆ ಕಂಡನು.

03012009a ಸೃಜಂತಂ ರಾಕ್ಷಸೀಂ ಮಾಯಾಂ ಮಹಾರಾವವಿರಾವಿಣಂ|

03012009c ಮುಂಚಂತಂ ವಿಪುಲಂ ನಾದಂ ಸತೋಯಮಿವ ತೋಯದಂ||

ಮಳೆಸುರಿಸುವ ಮೋಡಗಳು ಜೋರಾಗಿ ಗುಡುಗು ಸಿಡಿಲುಗಳಿಂದ ಆರ್ಭಟಿಸುತ್ತಾ ಪ್ರಾಣಿಗಳಿಗೆ ಭಯತರುವಂತೆ ಅವನು ರಾಕ್ಷಸೀ ಮಾಯೆಗಳನ್ನು ಬಳಸಿ ಮಹಾ ನಿನಾದವನ್ನು ಹುಟ್ಟಿಸಿದನು.

03012010a ತಸ್ಯ ನಾದೇನ ಸಂತ್ರಸ್ತಾಃ ಪಕ್ಷಿಣಃ ಸರ್ವತೋದಿಶಂ|

03012010c ವಿಮುಕ್ತನಾದಾಃ ಸಂಪೇತುಃ ಸ್ಥಲಜಾ ಜಲಜೈಃ ಸಹ||

ಅವನ ಕೂಗಿನಿಂದ ಸಂತ್ರಸ್ತರಾದ ಪಕ್ಷಿಗಳು ಎಲ್ಲ ದಿಕ್ಕುಗಳಲ್ಲಿ ಚೀರುತ್ತಾ ಅಲ್ಲಿದ್ದ ಪ್ರಾಣಿಗಳು ಮತ್ತು ಜಲಪ್ರಾಣಿಗಳೊಂದಿಗೆ ಚಿಲ್ಲಾಪಿಲ್ಲೆಗಳಾಗಿ ಹಾರಿಹೋದವು.

03012011a ಸಂಪ್ರದ್ರುತಮೃಗದ್ವೀಪಿಮಹಿಷರ್ಕ್ಷಸಮಾಕುಲಂ|

03012011c ತದ್ವನಂ ತಸ್ಯ ನಾದೇನ ಸಂಪ್ರಸ್ಥಿತಮಿವಾಭವತ್||

ಭೂಮಿಯ ಮೇಲಿದ್ದ ಜಿಂಕೆ, ಹುಲಿ, ಕಾಡು ಕೋಣ, ಕರಡಿ ಮುಂತಾದ ಪ್ರಾಣಿಗಳು ಅವನ ಆರ್ಭಟವನ್ನು ಕೇಳಿ ಭಯದಿಂದ ಓಡಲಾರಂಭಿಸಿದವು.

03012012a ತಸ್ಯೋರುವಾತಾಭಿಹತಾ ತಾಮ್ರಪಲ್ಲವಬಾಹವಃ|

03012012c ವಿದೂರಜಾತಾಶ್ಚ ಲತಾಃ ಸಮಾಶ್ಲಿಷ್ಯಂತ ಪಾದಪಾನ್||

ಅವನ ತೊಡೆಗಳ ವೇಗದ ಹೊಡೆತಕ್ಕೆ ಸಿಕ್ಕ ಎತ್ತರವಾಗಿ ಬೆಳೆದ ಬಳ್ಳಿಗಳು ತಮ್ಮ ಕೆಂಪು ಪುಷ್ಪಗಳನ್ನು ಹೊತ್ತು ಮರಗಳನ್ನು ಅಪ್ಪಿಕೊಂಡವು.

03012013a ತಸ್ಮಿನ್ ಕ್ಷಣೇಽಥ ಪ್ರವವೌ ಮಾರುತೋ ಭೃಶದಾರುಣಃ|

03012013c ರಜಸಾ ಸಂವೃತಂ ತೇನ ನಷ್ಟರ್ಷ್ಕಮಭವನ್ನಭಃ||

ಅದೇ ಕ್ಷಣದಲ್ಲಿ ಭಯಂಕರ ಭಿರುಗಾಳಿಯು ಬೀಸಿ ಆಕಾಶವನ್ನೆಲ್ಲ ಧೂಳಿನಿಂದ ಮುಚ್ಚಿ ನಕ್ಷತ್ರಗಳೇ ಕಾಣದ ಹಾಗೆ ಮಾಡಿತು.

03012014a ಪಂಚಾನಾಂ ಪಾಂಡುಪುತ್ರಾಣಾಮವಿಜ್ಞಾತೋ ಮಹಾರಿಪುಃ|

03012014c ಪಂಚಾನಾಮಿಂದ್ರಿಯಾಣಾಂ ತು ಶೋಕವೇಗ ಇವಾತುಲಃ||

ಪಂಚೇಂದ್ರಿಯಗಳಿಗೆ ತಿಳಿಯದಂತೆ ಆಕ್ರಮಿಸಿದ ಅತೀವ ಶೋಕದಂತೆ ಆ ಮಹಾ ಶತ್ರುವು ಪಂಚಪಾಂಡವರ ಮೇಲೆ ಎರಗಿದನು.

03012015a ಸ ದೃಷ್ಟ್ವಾ ಪಾಂಡವಾನ್ದೂರಾತ್ ಕೃಷ್ಣಾಜಿನಸಮಾವೃತಾನ್|

03012015c ಆವೃಣೋತ್ತದ್ವನದ್ವಾರಂ ಮೈನಾಕ ಇವ ಪರ್ವತಃ||

ದೂರದಿಂದಲೇ ಕೃಷ್ಣಾಜಿನಗಳನ್ನು ಧರಿಸಿದ್ದ ಪಾಂಡವರನ್ನು ಕಂಡ ಅವನು ಮೈನಾಕ ಪರ್ವತದಂತೆ ವನದ್ವಾರದಲ್ಲಿ ತಡೆಗಟ್ಟಿ ನಿಂತನು.

03012016a ತಂ ಸಮಾಸಾದ್ಯ ವಿತ್ರಸ್ತಾ ಕೃಷ್ಣಾ ಕಮಲಲೋಚನಾ|

03012016c ಅದೃಷ್ಟಪೂರ್ವಂ ಸಂತ್ರಾಸಾನ್ನ್ಯಮೀಲಯತ ಲೋಚನೇ||

ಅವನು ಹತ್ತಿರಬರುತ್ತಿದ್ದಂತೆಯೇ ಕಮಲಲೋಚನೆ ಕೃಷ್ಣೆಯು ಭಯಭೀತಳಾಗಿ ನಡುಗುತ್ತಾ ತನ್ನ ಕಣ್ಣುಗಳನ್ನು ಮುಚ್ಚಿದಳು.

03012017a ದುಃಶಾಸನಕರೋತ್ಸೃಷ್ಟವಿಪ್ರಕೀರ್ಣಶಿರೋರುಹಾ|

03012017c ಪಂಚಪರ್ವತಮಧ್ಯಸ್ಥಾ ನದೀವಾಕುಲತಾಂ ಗತಾ||

ದುಃಶಾಸನನ ಕೈಗಳಿಂದ ಎಳೆಯಲ್ಪಟ್ಟು ಕೆದರಿದ ಕೂದಲಿನ ಅವಳು ಐದು ಪರ್ವತಗಳ ಮಧ್ಯೆ ಪ್ರವಾಹವಾಗಿ ಹರಿಯುತ್ತಿದ್ದ ನದಿಯಂತೆ ಕಂಡಳು.

03012018a ಮೋಮುಹ್ಯಮಾನಾಂ ತಾಂ ತತ್ರ ಜಗೃಹುಃ ಪಂಚ ಪಾಂಡವಾಃ|

03012018c ಇಂದ್ರಿಯಾಣಿ ಪ್ರಸಕ್ತಾನಿ ವಿಷಯೇಷು ಯಥಾ ರತಿಂ||

ಅವಳು ಮೂರ್ಛಿತಳಾಗಿ ಅಲ್ಲಿಯೇ ಬೀಳಲು ಪಂಚ ಪಾಂಡವರು ಇಂದ್ರಿಯಗಳು, ವಿಷಯಗಳಿಗೆ ಅಂಟಿಕೊಂಡು ಸುಖವನ್ನು ಹೇಗೋ ಹಾಗೆ ಅವಳನ್ನು ಹಿಡಿದುಕೊಂಡರು.

03012019a ಅಥ ತಾಂ ರಾಕ್ಷಸೀಂ ಮಾಯಾಮುತ್ಥಿತಾಂ ಘೋರದರ್ಶನಾಂ|

03012019c ರಕ್ಷೋಘ್ನೈರ್ವಿವಿಧೈರ್ಮಂತ್ರೈರ್ಧೌಮ್ಯಃ ಸಮ್ಯಕ್ಪ್ರಯೋಜಿತೈಃ|

03012019e ಪಶ್ಯತಾಂ ಪಾಂಡುಪುತ್ರಾಣಾಂ ನಾಶಯಾಮಾಸ ವೀರ್ಯವಾನ್||

ಆಗ ವೀರ್ಯವಾನ್ ಧೌಮ್ಯನು ಪಾಂಡುಪುತ್ರರು ನೋಡುತ್ತಿದ್ದಂತೆಯೇ ರಾಕ್ಷಸನು ಮಾಯೆಯಿಂದ ಕಾಣಿಸಿದ ಘೋರರೂಪೀ ರಾಕ್ಷಸರನ್ನು ವಿವಿಧಮಂತ್ರಗಳನ್ನು ಸರಿಯಾಗಿ ಬಳಸಿ ನಾಶಪಡಿಸಿದನು.

03012020a ಸ ನಷ್ಟಮಾಯೋಽತಿಬಲಃ ಕ್ರೋಧವಿಸ್ಫಾರಿತೇಕ್ಷಣಃ|

03012020c ಕಾಮಮೂರ್ತಿಧರಃ ಕ್ಷುದ್ರಃ ಕಾಲಕಲ್ಪೋ ವ್ಯದೃಶ್ಯತ||

ತನ್ನ ಮಾಯೆಯು ನಾಶವಾಗಲು ಇಷ್ಟವಾದ ರೂಪವನ್ನು ಧರಿಸಬಲ್ಲ ಆ ಅತಿಬಲನು ಕ್ರೋಧದಿಂದ ಕಣ್ಣುಗಳನ್ನು ತೆರೆದು ಕ್ಷುದ್ರನಾಗಿ ಕಲ್ಪಾಂತ್ಯದಲ್ಲಿದ್ದ ಕಾಲನಂತೆ ಅವರಿಗೆ ಕಾಣಿಸಿಕೊಂಡನು.

03012021a ತಮುವಾಚ ತತೋ ರಾಜಾ ದೀರ್ಘಪ್ರಜ್ಞೋ ಯುಧಿಷ್ಠಿರಃ|

03012021c ಕೋ ಭವಾನ್ಕಸ್ಯ ವಾ ಕಿಂ ತೇ ಕ್ರಿಯತಾಂ ಕಾರ್ಯಮುಚ್ಯತಾಂ||

ಆಗ ದೀರ್ಘಪ್ರಜ್ಞ ರಾಜಾ ಯುಧಿಷ್ಠಿರನು ಅವನಿಗೆ ಹೇಳಿದನು: “ನೀನು ಯಾರು ಮತ್ತು ಯಾರವನು? ನಿನಗೆ ಏನು ಮಾಡಬೇಕು ಹೇಳು!”

03012022a ಪ್ರತ್ಯುವಾಚಾಥ ತದ್ರಕ್ಷೋ ಧರ್ಮರಾಜಂ ಯುಧಿಷ್ಠಿರಂ|

03012022c ಅಹಂ ಬಕಸ್ಯ ವೈ ಭ್ರಾತಾ ಕಿರ್ಮೀರ ಇತಿ ವಿಶ್ರುತಃ||

ಆ ರಾಕ್ಷಸನು ಧರ್ಮರಾಜ ಯುಧಿಷ್ಠಿರನಿಗೆ ಉತ್ತರಿಸಿದನು: “ನಾನು ಕಿರ್ಮೀರ ಎಂದು ವಿಶ್ರುತನಾದ ಬಕನ ಸಹೋದರ.

03012023a ವನೇಽಸ್ಮಿನ್ಕಾಮ್ಯಕೇ ಶೂನ್ಯೇ ನಿವಸಾಮಿ ಗತಜ್ವರಃ|

03012023c ಯುಧಿ ನಿರ್ಜಿತ್ಯ ಪುರುಷಾನಾಹಾರಂ ನಿತ್ಯಮಾಚರನ್||

ನಾನು ಈ ಶೂನ್ಯ ಕಾಮ್ಯಕ ವನದಲ್ಲಿ ನಿತ್ಯವೂ ಯುದ್ಧದಲ್ಲಿ ಮನುಷ್ಯರನ್ನು ಸೋಲಿಸಿ ತಿನ್ನುತ್ತಾ ನಿಶ್ಚಿಂತೆಯಾಗಿ ವಾಸಿಸುತ್ತಿದ್ದೇನೆ.

03012024a ಕೇ ಯೂಯಮಿಹ ಸಂಪ್ರಾಪ್ತಾ ಭಕ್ಷ್ಯಭೂತಾ ಮಮಾಂತಿಕಂ|

03012024c ಯುಧಿ ನಿರ್ಜಿತ್ಯ ವಃ ಸರ್ವಾನ್ಭಕ್ಷಯಿಷ್ಯೇ ಗತಜ್ವರಃ||

ನನ್ನ ಆಹಾರವಾಗಿ ನನ್ನಲ್ಲಿಗೆ ಬಂದಿರುವ ನೀವು ಯಾರು? ನಿಮ್ಮೆಲ್ಲರನ್ನೂ ಯುದ್ಧದಲ್ಲಿ ಸೋಲಿಸಿ ನಿಶ್ಚಿಂತೆಯಾಗಿ ತಿನ್ನುತ್ತೇನೆ.”

03012025a ಯುಧಿಷ್ಠಿರಸ್ತು ತಚ್ಛೃತ್ವಾ ವಚಸ್ತಸ್ಯ ದುರಾತ್ಮನಃ|

03012025c ಆಚಚಕ್ಷೇ ತತಃ ಸರ್ವಂ ಗೋತ್ರನಾಮಾದಿ ಭಾರತ||

ಭಾರತ! ಆ ದುರಾತ್ಮನ ಮಾತುಗಳನ್ನು ಕೇಳಿ ಯುಧಿಷ್ಠಿರನು ಅವನಿಗೆ ಎಲ್ಲರ ಹೆಸರು ಗೋತ್ರಗಳನ್ನು ಹೇಳಿದನು.

03012026a ಪಾಂಡವೋ ಧರ್ಮರಾಜೋಽಹಂ ಯದಿ ತೇ ಶ್ರೋತ್ರಮಾಗತಃ|

03012026c ಸಹಿತೋ ಭ್ರಾತೃಭಿಃ ಸರ್ವೈರ್ಭೀಮಸೇನಾರ್ಜುನಾದಿಭಿಃ||

03012027a ಹೃತರಾಜ್ಯೋ ವನೇ ವಾಸಂ ವಸ್ತುಂ ಕೃತಮತಿಸ್ತತಃ|

03012027c ವನಮಭ್ಯಾಗತೋ ಘೋರಮಿದಂ ತವ ಪರಿಗ್ರಹಂ||

“ನೀನು ಈಗಾಗಲೇ ಕೇಳಿರಬಹುದು, ನಾನು ಪಾಂಡವ ಧರ್ಮರಾಜ. ಭೀಮಸೇನ, ಅರ್ಜುನ ಮೊದಲಾದ ನನ್ನ ಸಹೋದರರೊಂದಿಗೆ ರಾಜ್ಯವನ್ನು ಕಳೆದುಕೊಂಡು ವನವಾಸದ ಮನಸ್ಸುಮಾಡಿ ನಿನ್ನ ಹತೋಟಿಯಲ್ಲಿರುವ ಈ ಘೋರ ವನಕ್ಕೆ ಬಂದಿದ್ದೇವೆ.”

03012028a ಕಿರ್ಮೀರಸ್ತ್ವಬ್ರವೀದೇನಂ ದಿಷ್ಟ್ಯಾ ದೇವೈರಿದಂ ಮಮ|

03012028c ಉಪಪಾದಿತಮದ್ಯೇಹ ಚಿರಕಾಲಾನ್ಮನೋಗತಂ||

ಕಿರ್ಮೀರನು ಹೇಳಿದನು: “ಒಳ್ಳೆಯದಾಯಿತು! ತುಂಬಾಸಮಯದಿಂದ ನನಗಿದ್ದ ಆಸೆಯನ್ನು ದೈವವು ಇಂದು ನಡೆಸಿಕೊಟ್ಟಿದೆ!

03012029a ಭೀಮಸೇನವಧಾರ್ಥಂ ಹಿ ನಿತ್ಯಮಭ್ಯುದ್ಯತಾಯುಧಃ|

03012029c ಚರಾಮಿ ಪೃಥಿವೀಂ ಕೃತ್ಸ್ನಾಂ ನೈನಮಾಸಾದಯಾಮ್ಯಹಂ||

ಭೀಮಸೇನನನ್ನು ಕೊಲ್ಲಬೇಕೆಂದು ನಾನು ನಿತ್ಯವೂ ಆಯುಧಗಳನ್ನು ಧರಿಸಿ ಇಡೀ ಪೃಥ್ವಿಯನ್ನೇ ತಿರುಗುತ್ತಿದ್ದೆ. ಆದರೂ ಅವನು ನನಗೆ ನೋಡಲೂ ಸಿಕ್ಕಿರಲಿಲ್ಲ.

03012030a ಸೋಽಯಮಾಸಾದಿತೋ ದಿಷ್ಟ್ಯಾ ಭ್ರಾತೃಹಾ ಕಾಂಕ್ಷಿತಶ್ಚಿರಂ|

03012030c ಅನೇನ ಹಿ ಮಮ ಭ್ರಾತಾ ಬಕೋ ವಿನಿಹತಃ ಪ್ರಿಯಃ||

03012031a ವೇತ್ರಕೀಯಗೃಹೇ ರಾಜನ್ಬ್ರಾಹ್ಮಣಚ್ಚದ್ಮರೂಪಿಣಾ|

03012031c ವಿದ್ಯಾಬಲಮುಪಾಶ್ರಿತ್ಯ ನ ಹ್ಯಸ್ತ್ಯಸ್ಯೌರಸಂ ಬಲಂ||

ರಾಜನ್! ತುಂಬಾ ಸಮಯದಿಂದ ಇದ್ದ ಆಸೆಯಂತೆ ಈಗ ಅವನೇ ಇಲ್ಲಿಗೆ ಬಂದಿದ್ದುದು ಒಳ್ಳೆಯದೇ ಆಯಿತು. ಇವನೇ ವೇತ್ರಕೀಯಗೃಹದಲ್ಲಿ, ಅಷ್ಟೊಂದು ಬಲಶಾಲಿಯಾಗಿಲ್ಲದಿದ್ದರೂ ಬ್ರಾಹ್ಮಣನಂತೆ ಸುಳ್ಳು ವೇಷಧರಿಸಿ, ವಿದ್ಯಾಬಲದಿಂದ ನನ್ನ ಪ್ರಿಯ ಭ್ರಾತಾ ಬಕನನ್ನು ಕೊಂದವನು.

03012032a ಹಿಡಿಂಬಶ್ಚ ಸಖಾ ಮಹ್ಯಂ ದಯಿತೋ ವನಗೋಚರಃ|

03012032c ಹತೋ ದುರಾತ್ಮನಾನೇನ ಸ್ವಸಾ ಚಾಸ್ಯ ಹೃತಾ ಪುರಾ||

ಹಿಂದೆ ನನ್ನ ಪ್ರಿಯ ಸಖ ವನಗೋಚರ ಹಿಂಡಿಂಬನನ್ನೂ ಕೂಡ ಈ ದುರಾತ್ಮನೇ ಕೊಂದು ಅವನ ತಂಗಿಯನ್ನು ಅಪಹರಿಸಿದನು.

03012033a ಸೋಽಯಮಭ್ಯಾಗತೋ ಮೂಢೋ ಮಮೇದಂ ಗಹನಂ ವನಂ|

03012033c ಪ್ರಚಾರಸಮಯೇಽಸ್ಮಾಕಮರ್ಧರಾತ್ರೇ ಸಮಾಸ್ಥಿತೇ||

ಈಗ ಆ ಮೂರ್ಖನು ತಾನಾಗಿಯೇ ನನ್ನ ಈ ದಟ್ಟ ಅರಣ್ಯಕ್ಕೆ ನಾವು ಸಂಚರಿಸುವ ಸಮಯ ಆರ್ಧರಾತ್ರಿಯಾಗಿರುವಾಗ ಬಂದಿದ್ದಾನೆ.

03012034a ಅದ್ಯಾಸ್ಯ ಯಾತಯಿಷ್ಯಾಮಿ ತದ್ವೈರಂ ಚಿರಸಂಭೃತಂ|

03012034c ತರ್ಪಯಿಷ್ಯಾಮಿ ಚ ಬಕಂ ರುಧಿರೇಣಾಸ್ಯ ಭೂರಿಣಾ||

ಇಂದು ನಾನು ತುಂಬಾ ಸಮಯದಿಂದ ಇಟ್ಟುಕೊಂಡಿರುವ ದ್ವೇಷದಿಂದ ಅವನನ್ನು ಹೊಡೆದು ಅವನ ಬೊಗಸೆ ರಕ್ತದಿಂದ ಬಕನಿಗೆ ತರ್ಪಣವನ್ನು ನೀಡುತ್ತೇನೆ.

03012035a ಅದ್ಯಾಹಮನೃಣೋ ಭೂತ್ವಾ ಭ್ರಾತುಃ ಸಖ್ಯುಸ್ತಥೈವ ಚ|

03012035c ಶಾಂತಿಂ ಲಬ್ಧಾಸ್ಮಿ ಪರಮಾಂ ಹತ್ವ ರಾಕ್ಷಸಕಂಟಕಂ||

ಇಂದು ನನ್ನ ಅಣ್ಣ ಮತ್ತು ಸಖರ ಋಣವನ್ನು ತೀರಿಸುತ್ತೇನೆ. ಈ ರಾಕ್ಷಸಕಂಟಕನನ್ನು ಕೊಂದು ಪರಮ ಶಾಂತಿಯನ್ನು ಹೊಂದುತ್ತೇನೆ.

03012036a ಯದಿ ತೇನ ಪುರಾ ಮುಕ್ತೋ ಭೀಮಸೇನೋ ಬಕೇನ ವೈ|

03012036c ಅದ್ಯೈನಂ ಭಕ್ಷಯಿಷ್ಯಾಮಿ ಪಶ್ಯತಸ್ತೇ ಯುಧಿಷ್ಠಿರ||

ಯುಧಿಷ್ಠಿರ! ಹಿಂದೆ ಬಕನು ಅವನನ್ನು ಬಿಟ್ಟುಬಿಟ್ಟಿದ್ದರೂ ಇಂದು ನಾನು ನೀನು ನೋಡುತ್ತಿದ್ದಂತೆಯೇ ಭೀಮಸೇನನನ್ನು ಕಬಳಿಸುತ್ತೇನೆ.

03012037a ಏನಂ ಹಿ ವಿಪುಲಪ್ರಾಣಮದ್ಯ ಹತ್ವಾ ವೃಕೋದರಂ|

03012037c ಸಂಭಕ್ಷ್ಯ ಜರಯಿಷ್ಯಾಮಿ ಯಥಾಗಸ್ತ್ಯೋ ಮಹಾಸುರಂ||

ತುಂಬಾ ಪ್ರಾಣವನ್ನು ಹೊಂದಿರುವ ಈ ವೃಕೋದರನನ್ನು ಅಗಸ್ತ್ಯನು ಮಹಾಸುರನನ್ನು ಹೇಗೋ ಹಾಗೆ[1] ಕೊಂದು, ತಿಂದು, ಜೀರ್ಣಿಸಿಕೊಳ್ಳುತ್ತೇನೆ.”

03012038a ಏವಮುಕ್ತಸ್ತು ಧರ್ಮಾತ್ಮಾ ಸತ್ಯಸಂಧೋ ಯುಧಿಷ್ಠಿರಃ|

03012038c ನೈತದಸ್ತೀತಿ ಸಕ್ರೋಧೋ ಭರ್ತ್ಸಯಾಮಾಸ ರಾಕ್ಷಸಂ||

ಅವನ ಈ ಮಾತುಗಳಿಗೆ ಧರ್ಮಾತ್ಮ ಸತ್ಯಸಂಧ ಯುಧಿಷ್ಠಿರನು ಸಿಟ್ಟಿನಿಂದ “ಹೀಗೆಂದಿಗೂ ಆಗುವುದಿಲ್ಲ!” ಎಂದು ರಾಕ್ಷಸನಿಗೆ ಹೇಳಿದನು.

03012039a ತತೋ ಭೀಮೋ ಮಹಾಬಾಹುರಾರುಜ್ಯ ತರಸಾ ದ್ರುಮ|

03012039c ದಶವ್ಯಾಮಮಿವೋದ್ವಿದ್ಧಂ ನಿಷ್ಪತ್ರಮಕರೋತ್ತದಾ||

ಆಗ ಮಹಾಬಾಹು ಭೀಮನು ತಕ್ಷಣವೇ ಹತ್ತುವ್ಯಾಮ[2] ಎತ್ತರವಿರುವ ಮರವೊಂದನ್ನು ಕಿತ್ತು ಅದರ ಎಲೆಗಳನ್ನೆಲ್ಲಾ ಹರಿದನು.

03012040a ಚಕಾರ ಸಜ್ಯಂ ಗಾಂಡೀವಂ ವಜ್ರನಿಷ್ಪೇಷಗೌರವಂ|

03012040c ನಿಮೇಷಾಂತರಮಾತ್ರೇಣ ತಥೈವ ವಿಜಯೋಽರ್ಜುನಃ||

ಕಣ್ಣು ಮುಚ್ಚಿ ತೆರೆಯುವುದರೊಳಗೆ ವಿಜಯ ಅರ್ಜುನನೂ ಕೂಡ ವಜ್ರದಷ್ಟೇ ಘಾತಿಯನ್ನುಂಟುಮಾಡಬಲ್ಲ ತನ್ನ ಗಾಂಡೀವವನ್ನು ಅಣಿಮಾಡಿ ಠೇಂಕರಿಸಿದನು.

03012041a ನಿವಾರ್ಯ ಭೀಮೋ ಜಿಷ್ಣುಂ ತು ತದ್ರಕ್ಷೋ ಘೋರದರ್ಶನಂ|

03012041c ಅಭಿದ್ರುತ್ಯಾಬ್ರವೀದ್ವಾಕ್ಯಂ ತಿಷ್ಠ ತಿಷ್ಠೇತಿ ಭಾರತ||

ಭಾರತ! ಅರ್ಜುನನನ್ನು ತಡೆದು ಭೀಮನು ಆ ಘೋರದರ್ಶನ ರಾಕ್ಷಸನೆಡೆಗೆ ನುಗ್ಗಿ “ನಿಲ್ಲು! ನಿಲ್ಲು!” ಎಂದು ಘರ್ಜಿಸಿದನು.

03012042a ಇತ್ಯುಕ್ತ್ವೈನಮಭಿಕ್ರುದ್ಧಃ ಕಕ್ಷ್ಯಾಮುತ್ಪೀಡ್ಯ ಪಾಂಡವಃ|

03012042c ನಿಷ್ಪಿಷ್ಯ ಪಾಣಿನಾ ಪಾಣಿಂ ಸಂದಷ್ಟೋಷ್ಠಪುಟೋ ಬಲೀ|

ಹೀಗೆ ಹೇಳಿ ಸಿಟ್ಟಿಗೆದ್ದ ಬಲಶಾಲಿ ಪಾಂಡವನು ಸೊಂಟವನ್ನು ಬಿಗಿದು, ಕೈಗಳನ್ನು ಮುಷ್ಠಿಮಾಡಿ ತಿರುಗಿಸುತ್ತಾ ಹಲ್ಲು ಬಿಗಿದು ತುಟಿಕಚ್ಚಿದನು.

03012042e ತಮಭ್ಯಧಾವದ್ವೇಗೇನ ಭೀಮೋ ವೃಕ್ಷಾಯುಧಸ್ತದಾ||

03012043a ಯಮದಂಡಪ್ರತೀಕಾಶಂ ತತಸ್ತಂ ತಸ್ಯ ಮೂರ್ಧನಿ|

03012043c ಪಾತಯಾಮಾಸ ವೇಗೇನ ಕುಲಿಶಂ ಮಘವಾನಿವ||

ಮರವನ್ನೇ ಆಯುಧವಾಗಿ ಎತ್ತಿಕೊಂಡು ಭೀಮನು ವೇಗದಿಂದ ಅವನ ಕಡೆ ಮುನ್ನುಗ್ಗಿ ಯಮದಂಡದಂತೆ ಅವನ ನೆತ್ತಿಯಮೇಲೆ ಜೋರಾಗಿ ಹೊಡೆದನು.

03012044a ಅಸಂಭ್ರಾಂತಂ ತು ತದ್ರಕ್ಷಃ ಸಮರೇ ಪ್ರತ್ಯದೃಶ್ಯತ|

03012044c ಚಿಕ್ಷೇಪ ಚೋಲ್ಮುಕಂ ದೀಪ್ತಮಶನಿಂ ಜ್ವಲಿತಾಮಿವ||

03012045a ತದುದಸ್ತಮಲಾತಂ ತು ಭೀಮಃ ಪ್ರಹರತಾಂ ವರಃ|

03012045c ಪದಾ ಸವ್ಯೇನ ಚಿಕ್ಷೇಪ ತದ್ರಕ್ಷಃ ಪುನರಾವ್ರಜತ್||

ಆದರೂ ಆ ರಾಕ್ಷಸನು ಹೊಡೆತದಿಂದ ಒಂದು ಸ್ವಲ್ಪವೂ ಜರುಗಾಡಲಿಲ್ಲ. ಆಗ ಅವನು ಮಿಂಚಿನಂತೆ ಉರಿಯುತ್ತಿರುವ ತನ್ನ ದೊಂದಿಯನ್ನು ಎಸೆಯಲು, ಪ್ರಹಾರಿಗಳಲ್ಲಿ ಶ್ರೇಷ್ಠ ಭೀಮನು ತನ್ನ ಎಡಗಾಲಿನಿಂದ ಒದೆದು ಅದನ್ನು ಪುನಃ ರಾಕ್ಷಸನ ಕಡೆಗೆ ಎಸೆದನು.

03012046a ಕಿರ್ಮೀರಶ್ಚಾಪಿ ಸಹಸಾ ವೃಕ್ಷಮುತ್ಪಾಟ್ಯ ಪಾಂಡವಂ|

03012046c ದಂಡಪಾಣಿರಿವ ಕ್ರುದ್ಧಃ ಸಮರೇ ಪ್ರತ್ಯಯುಧ್ಯತ||

03012047a ತದ್ವೃಕ್ಷಯುದ್ಧಮಭವನ್ಮಹೀರುಹವಿನಾಶನಂ|

03012047c ವಾಲಿಸುಗ್ರೀವಯೋರ್ಭ್ರಾತ್ರೋರ್ಯಥಾ ಶ್ರೀಕಾಂಕ್ಷಿಣೋಃ ಪುರಾ||

ಆಗ ಕಿರ್ಮೀರನು ಬೇಗನೆ ಒಂದು ಮರವನ್ನು ಕಿತ್ತು ಸಮರದಲ್ಲಿ ಕೃದ್ಧ ದಂಡಪಾಣಿಯಂತೆ ಪಾಂಡವನೆಡೆಗೆ ಎಸೆದನು. ಹೀಗೆ ಹಿಂದೆ ರಾಜ್ಯವನ್ನು ಬಯಸಿದ ಸಹೋದರರಾದ ವಾಲಿ-ಸುಗ್ರೀವರ[3] ನಡುವೆ ನಡೆದ ಹಾಗೆ ಎಲ್ಲ ಮರಗಳನ್ನೂ ನಾಶಪಡೆಸಿದ ಮರಗಳ ಮಹಾಯುದ್ಧವೇ ಪ್ರಾರಂಭವಾಯಿತು.

03012048a ಶೀರ್ಷಯೋಃ ಪತಿತಾ ವೃಕ್ಷಾ ಬಿಭಿದುರ್ನೈಕಧಾ ತಯೋಃ|

03012048c ಯಥೈವೋತ್ಪಲಪದ್ಮಾನಿ ಮತ್ತಯೋರ್ದ್ವಿಪಯೋಸ್ತಥಾ||

ಆನೆಗಳ ತಲೆಯ ಮೇಲೆ ಎಸೆದ ಕಮಲದ ಹೂವಿನ ಎಸಳುಗಳಂತೆ ಅವರಿಬ್ಬರ ತಲೆಗಳ ಮೇಲೆ ಬಿದ್ದ ಮರಗಳು ಒಡೆದು ಚೂರು ಚೂರಾದವು.

03012049a ಮುಂಜವಜ್ಜರ್ಜರೀಭೂತಾ ಬಹವಸ್ತತ್ರ ಪಾದಪಾಃ|

03012049c ಚೀರಾಣೀವ ವ್ಯುದಸ್ತಾನಿ ರೇಜುಸ್ತತ್ರ ಮಹಾವನೇ||

ಆ ಮಹಾವನದಲ್ಲಿದ್ದ ಬಹಳಷ್ಟು ಮರಗಳು ಮುರಿದು ತುಂಡಾಗಿ ಚಿಂದಿಮಾಡಿ ಬಿಸಾಡಿದ ಬಟ್ಟೆಗಳಂತೆ ಕಂಡುಬಂದವು.

03012050a ತದ್ವೃಕ್ಷಯುದ್ಧಮಭವತ್ಸುಮುಹೂರ್ತಂ ವಿಶಾಂ ಪತೇ|

03012050c ರಾಕ್ಷಸಾನಾಂ ಚ ಮುಖ್ಯಸ್ಯ ನರಾಣಾಮುತ್ತಮಸ್ಯ ಚ||

ವಿಶಾಂಪತೇ! ರಾಕ್ಷಸ ಮುಖ್ಯ ಮತ್ತು ನರೋತ್ತಮನ ನಡುವೆ ಆ ಮರಗಳ ಯುದ್ಧವು ಬಹಳಷ್ಟು ಸಮಯದ ವರೆಗೆ ನಡೆಯಿತು.

03012051a ತತಃ ಶಿಲಾಂ ಸಮುತ್ಕ್ಷಿಪ್ಯ ಭೀಮಸ್ಯ ಯುಧಿ ತಿಷ್ಠತಃ|

03012051c ಪ್ರಾಹಿಣೋದ್ರಾಕ್ಷಸಃ ಕ್ರುದ್ಧೋ ಭೀಮಸೇನಶ್ಚಚಾಲ ಹ||

ಆಗ ಕೃದ್ಧ ರಾಕ್ಷಸನು ಒಂದು ಬಂಡೆಗಲ್ಲನ್ನು ಎತ್ತಿ ಹೋರಾಟದಲ್ಲಿ ನಿಂತಿದ್ದ ಭೀಮನೆಡೆಗೆ ಎಸೆಯಲು ಭೀಮನು ತತ್ತರಿಸಿದನು.

03012052a ತಂ ಶಿಲಾತಾಡನಜಡಂ ಪರ್ಯಧಾವತ್ಸ ರಾಕ್ಷಸಃ|

03012052c ಬಾಹುವಿಕ್ಷಿಪ್ತಕಿರಣಃ ಸ್ವರ್ಭಾನುರಿವ ಭಾಸ್ಕರಂ||

ಅವನು ಶಿಲೆಯ ಹೊಡೆತದಿಂದ ಜಡನಾಗಲು ಆ ರಾಕ್ಷಸನು ಸ್ವರ್ಭಾನುವು ತನ್ನ ಹೊರಬೀಳುವ ಕಿರಣಗಳಿಂದ ಭಾಸ್ಕರನನ್ನು ಮುತ್ತುವ ಹಾಗೆ ತನ್ನ ಬಾಹುಗಳನ್ನು ಬೀಸಿ ಓಡಿಬಂದು ಆಕ್ರಮಿಸಿದನು.

03012053a ತಾವನ್ಯೋನ್ಯಂ ಸಮಾಶ್ಲಿಷ್ಯ ಪ್ರಕರ್ಷಂತೌ ಪರಸ್ಪರಂ|

03012053c ಉಭಾವಪಿ ಚಕಾಶೇತೇ ಪ್ರಯುದ್ಧೌ ವೃಷಭಾವಿವ||

ಅವರು ಒಬ್ಬರನ್ನೊಬ್ಬರು ಹಿಡಿದು, ಪರಸ್ಪರರನ್ನು ಎಳೆಯುತ್ತಾ ಇಬ್ಬರೂ ಪ್ರಾಯಕ್ಕೆ ಬಂದ ಘೂಳಿಗಳು ಹೊಡೆದಾಡುವಂತೆ ಕಂಡರು.

03012054a ತಯೋರಾಸೀತ್ಸುತುಮುಲಃ ಸಂಪ್ರಹಾರಃ ಸುದಾರುಣಃ|

03012054c ನಖದಂಷ್ಟ್ರಾಯುಧವತೋರ್ವ್ಯಾಘ್ರಯೋರಿವ ದೃಪ್ತಯೋಃ||

ಉಗುರು ದಾಡೆಗಳಿಂದ ಹೊಡೆದಾಡುವ ಎರಡು ಹುಲಿಗಳಂತೆ ಅವರಿಬ್ಬರ ನಡುವೆ ಬಹಳ ಹೊಡೆತದ ಆ ಸುದಾರುಣ ಯುದ್ಧವು ನಡೆಯಿತು.

03012055a ದುರ್ಯೋಧನನಿಕಾರಾಚ್ಚ ಬಾಹುವೀರ್ಯಾಚ್ಚ ದರ್ಪಿತಃ|

03012055c ಕೃಷ್ಣಾನಯನದೃಷ್ಟಶ್ಚ ವ್ಯವರ್ಧತ ವೃಕೋದರಃ||

ದುರ್ಯೋಧನನ ಮೇಲಿನ ರೋಷದಿಂದ ರೊಚ್ಚಿಗೆದ್ದಿದ್ದ ವೃಕೋದರನ ಬಾಹುಬಲವು ದ್ರೌಪದಿಯ ಕಣ್ಣೆದುರಿಗೆ ಇನ್ನೂ ಹೆಚ್ಚಾಯಿತು.

03012056a ಅಭಿಪತ್ಯಾಥ ಬಾಹುಭ್ಯಾಂ ಪ್ರತ್ಯಗೃಹ್ಣಾದಮರ್ಷಿತಃ|

03012056c ಮಾತಂಗ ಇವ ಮಾತಂಗಂ ಪ್ರಭಿನ್ನಕರಟಾಮುಖಃ||

ಮುಖದ ಕರಟೆಯೊಡೆದು ಸೋರುತ್ತಿದ್ದ ಸೊಕ್ಕೆದ್ದ ಆನೆಯು ಇನ್ನೊಂದು ಆನೆಯ ಮೇಲೆ ಎರಗಿ ಬೀಳುವಂತೆ ಅವನ ಮೇಲೆ ಬಿದ್ದು ರೋಷದಿಂದ ತನ್ನ ಬಾಹುಗಳಿಂದ ಅವನನ್ನು ಬಿಗಿಯಾಗಿ ಹಿಡಿದನು.

03012057a ತಂ ಚಾಪ್ಯಾಥ ತತೋ ರಕ್ಷಃ ಪ್ರತಿಜಗ್ರಾಹ ವೀರ್ಯವಾನ್|

03012057c ತಮಾಕ್ಷಿಪದ್ಭೀಮಸೇನೋ ಬಲೇನ ಬಲಿನಾಂ ವರಃ||

ಅಷ್ಟರಲ್ಲೇ ಆ ವೀರ್ಯವಾನ್ ರಾಕ್ಷಸನು ಬಲಶಾಲಿಗಳಲ್ಲಿ ಶ್ರೇಷ್ಠ ಭೀಮಸೇನನನ್ನು ಬಲವನ್ನುಪಯೋಗಿಸಿ ಹಿಡಿದು ಕೆಳಗುರುಳಿಸಿದನು.

03012058a ತಯೋರ್ಭುಜವಿನಿಷ್ಪೇಷಾದುಭಯೋರ್ಬಲಿನೋಸ್ತದಾ|

03012058c ಶಬ್ಧಃ ಸಮಭವದ್ಘೋರೋ ವೇಣುಸ್ಫೋಟಸಮೋ ಯುಧಿ||

ಆ ಇಬ್ಬರು ಬಲಶಾಲಿಗಳು ಭುಜಗಳಿಂದ ಹೊಡೆದಾಡುತ್ತಿರುವಾಗ ಬಿದಿರು ಮೆಳೆಗಳ ಘರ್ಷಣೆಯಿಂದ ಬರುವಂತೆ ಘೋರ ಶಬ್ಧವು ಕೇಳಿಬಂದಿತು.

03012059a ಅಥೈನಮಾಕ್ಷಿಪ್ಯ ಬಲಾದ್ಗೃಹ್ಯ ಮಧ್ಯೇ ವೃಕೋದರಃ|

03012059c ಧೂನಯಾಮಾಸ ವೇಗೇನ ವಾಯುಶ್ಚಂಡ ಇವ ದ್ರುಮಂ||

ಆಗ ವೃಕೋದರನು ಅವನ ಸೊಂಟವನ್ನು ಹಿಡಿದು ಚಂಡಮಾರುತವು ಮರವನ್ನು ಅಲುಗಾಡಿಸುವ ಹಾಗೆ ಜೋರಾಗಿ ಅಲುಗಾಡಿಸಿದನು.

03012060a ಸ ಭೀಮೇನ ಪರಾಮೃಷ್ಟೋ ದುರ್ಬಲೋ ಬಲಿನಾ ರಣೇ|

03012060c ವ್ಯಸ್ಪಂದತ ಯಥಾಪ್ರಾಣಂ ವಿಚಕರ್ಷ ಚ ಪಾಂಡವಂ||

ಭೀಮನ ಬಿಗಿಯಾದ ಹಿಡಿತದಲ್ಲಿ ಸಿಕ್ಕಿದ್ದ ಅವನು ರಣದಲ್ಲಿ ಭುಸುಗುಟ್ಟುತ್ತಾ ದುರ್ಬಲನಾದರೂ ಶಕ್ತಿಯಿದ್ದಷ್ಟೂ ಪಾಂಡವನನ್ನು ಎಳೆದಾಡಿದನು.

03012061a ತತ ಏನಂ ಪರಿಶ್ರಾಂತಮುಪಲಭ್ಯ ವೃಕೋದರಃ|

03012061c ಯೋಕ್ತ್ರಯಾಮಾಸ ಬಾಹುಭ್ಯಾಂ ಪಶುಂ ರಶನಯಾ ಯಥಾ||

ಅವನು ಈ ರೀತಿ ಆಯಾಸಗೊಂಡಿದ್ದುದನ್ನು ನೋಡಿ ವೃಕೋದರನು ಅವನನ್ನು ಮೂಗುದಾಣವನ್ನು ಹಾಕಿ ಎತ್ತನ್ನು ನಿಯಂತ್ರಿಸುವಂತೆ ತನ್ನ ಬಾಹುಗಳಿಂದ ಬಿಗಿಮಾಡಿದನು.

03012062a ವಿನದಂತಂ ಮಹಾನಾದಂ ಭಿನ್ನಭೇರೀಸಮಸ್ವನಂ|

03012062c ಭ್ರಾಮಯಾಮಾಸ ಸುಚಿರಂ ವಿಸ್ಫುರಂತಮಚೇತಸಂ||

ಭೇರಿಯು (ನಗಾರಿಯು) ಒಡೆದು ಹೋದಂತೆ ಜೋರಾಗಿ ಕೂಗಿ ಅವನನ್ನು ತುಂಬಾ ಹೊತ್ತು ಹೊರಳಾಡಿ ಮೂರ್ಛೆಯಾಗುವವರೆಗೆ ತಿರುಗಿಸಿದನು.

03012063a ತಂ ವಿಷೀದಂತಮಾಜ್ಞಾಯ ರಾಕ್ಷಸಂ ಪಾಂಡುನಂದನಃ|

03012063c ಪ್ರಗೃಹ್ಯ ತರಸಾ ದೋರ್ಭ್ಯಾಂ ಪಶುಮಾರಮಮಾರಯತ್||

ಅವನು ಕುಸಿಯುತ್ತಿದ್ದಾನೆ ಎಂದು ತಿಳಿದ ಪಾಂಡುನಂದನನು ಆ ರಾಕ್ಷಸನನ್ನು ಹಿಡಿದು ತಕ್ಷಣವೇ ಪಶುವನ್ನು ಕೊಲ್ಲುವ ಹಾಗೆ ಅವನ ಕುತ್ತಿಗೆಯನ್ನು ಹಿಸುಕಿ ಕೊಂದನು.

03012064a ಆಕ್ರಮ್ಯ ಸ ಕಟೀದೇಶೇ ಜಾನುನಾ ರಾಕ್ಷಸಾಧಮಂ|

03012064c ಅಪೀಡಯತ ಬಾಹುಭ್ಯಾಂ ಕಂಠಂ ತಸ್ಯ ವೃಕೋದರಃ||

03012065a ಅಥ ತಂ ಜಡಸರ್ವಾಂಗಂ ವ್ಯಾವೃತ್ತನಯನೋಲ್ಬಣಂ|

03012065c ಭೂತಲೇ ಪಾತಯಾಮಾಸ ವಾಕ್ಯಂ ಚೇದಮುವಾಚ ಹ||

ಆ ಅಧಮ ರಾಕ್ಷಸನ ಸೊಂಟವನ್ನು ತನ್ನ ತೊಡೆಯಿಂದ ಹಿಡಿದಿಟ್ಟು ವೃಕೋದರನು ತನ್ನ ಬಾಹುಗಳಿಂದ ಅವನ ಕುತ್ತಿಗೆಯನ್ನು ಹಿಸುಕಿದನು. ಅವನ ಎಲ್ಲ ಅಂಗಗಳೂ ಜಡವಾಗಲು ಮತ್ತು ತೆರೆದ ಕಣ್ಣುಗಳು ತೇಲಿಬರಲು, ಅವನನ್ನು ನೆಲದ ಮೇಲೆ ಬಿಸಾಡಿ ಈ ಮಾತುಗಳನ್ನಾಡಿದನು:

03012066a ಹಿಡಿಂಬಬಕಯೋಃ ಪಾಪ ನ ತ್ವಮಶ್ರುಪ್ರಮಾರ್ಜನಂ|

03012066c ಕರಿಷ್ಯಸಿ ಗತಶ್ಚಾಸಿ ಯಮಸ್ಯ ಸದನಂ ಪ್ರತಿ||

“ಪಾಪಿ! ಹಿಡಿಂಬ ಮತ್ತು ಬಕರ ಮೇಲೆ ನೀನು ಇನ್ನು ಕಣ್ಣೀರಿಡುವುದಿಲ್ಲ. ನೀನು ಈಗ ಯಮನ ಸದನಕ್ಕೆ ಹೋಗಿಯಾಯಿತು!”

03012067a ಇತ್ಯೇವಮುಕ್ತ್ವಾ ಪುರುಷಪ್ರವೀರಸ್|

         ತಂ ರಾಕ್ಷಸಂ ಕ್ರೋಧವಿವೃತ್ತನೇತ್ರಃ||

03012067c ಪ್ರಸ್ರಸ್ತವಸ್ತ್ರಾಭರಣಂ ಸ್ಫುರಂತಂ|

         ಉದ್ಭ್ರಾಂತಚಿತ್ತಂ ವ್ಯಸುಮುತ್ಸಸರ್ಜ||

ಕ್ರೋಧದಿಂದ ಕಣ್ಣುಗಳನ್ನರಳಿಸಿ ವಸ್ತ್ರ ಆಭರಣಗಳನ್ನು ಕಳೆದುಕೊಂಡ, ನರಳಾಡುತ್ತಿದ್ದ ಬುದ್ಧಿಯನ್ನೇ ಕಳೆದುಕೊಂಡ ಆ ರಾಕ್ಷಸನಿಗೆ ಹೀಗೆ ಹೇಳಿ ಆ ಪುರುಷಪ್ರವೀರನು ಜೀವವಿಲ್ಲದ ಹೆಣವನ್ನು ಬಿಟ್ಟನು.

03012068a ತಸ್ಮಿನ್ ಹತೇ ತೋಯದತುಲ್ಯರೂಪೇ|

         ಕೃಷ್ಣಾಂ ಪುರಸ್ಕೃತ್ಯ ನರೇಂದ್ರಪುತ್ರಾಃ||

03012068c ಭೀಮಂ ಪ್ರಶಸ್ಯಾಥ ಗುಣೈರನೇಕೈರ್|

         ಹೃಷ್ಟಾಸ್ತತೋ ದ್ವೈತವನಾಯ ಜಗ್ಮುಃ||

ಕಪ್ಪು ಮೋಡದಂತಿದ್ದ ಅವನು ಹತನಾಗಲು ಆ ರಾಜಪುತ್ರರು ಕೃಷ್ಣೆಯನ್ನು ಮುಂದಿಟ್ಟುಕೊಂಡು, ಭೀಮನ ಅನೇಕ ಗುಣಗಳನ್ನು ಪ್ರಶಂಸಿಸುತ್ತಾ ಸಂತೋಷದಿಂದ ದ್ವೈತವನದೆಡೆಗೆ ನಡೆದರು.

03012069a ಏವಂ ವಿನಿಹತಃ ಸಂಖ್ಯೇ ಕಿರ್ಮೀರೋ ಮನುಜಾಧಿಪ|

03012069c ಭೀಮೇನ ವಚನಾತ್ತಸ್ಯ ಧರ್ಮರಾಜಸ್ಯ ಕೌರವ||

ಮನುಜಾಧಿಪ! ಹೀಗೆ ಕೌರವ ಧರ್ಮರಾಜನ ವಚನದಂತೆ ಆ ಕಿರ್ಮೀರನು ಹತನಾದನು.

03012070a ತತೋ ನಿಷ್ಕಂಟಕಂ ಕೃತ್ವಾ ವನಂ ತದಪರಾಜಿತಃ|

03012070c ದ್ರೌಪದ್ಯಾ ಸಹ ಧರ್ಮಜ್ಞೋ ವಸತಿಂ ತಾಮುವಾಸ ಹ||

ಆ ವನವನ್ನು ನಿಷ್ಕಂಟಕವನ್ನಾಗಿ ಮಾಡಿ ಅಪರಾಜಿತ ಧರ್ಮಜ್ಞನು ದ್ರೌಪದಿಯೊಡನೆ ಅಲ್ಲಿ ವಸತಿಯನ್ನು ಮಾಡಿದನು.

03012071a ಸಮಾಶ್ವಾಸ್ಯ ಚ ತೇ ಸರ್ವೇ ದ್ರೌಪದೀಂ ಭರತರ್ಷಭಾಃ|

03012071c ಪ್ರಹೃಷ್ಟಮನಸಃ ಪ್ರೀತ್ಯಾ ಪ್ರಶಶಂಸುರ್ವೃಕೋದರಂ||

03012072a ಭೀಮಬಾಹುಬಲೋತ್ಪಿಷ್ಟೇ ವಿನಷ್ಟೇ ರಾಕ್ಷಸೇ ತತಃ|

03012072c ವಿವಿಶುಸ್ತದ್ವನಂ ವೀರಾಃ ಕ್ಷೇಮಂ ನಿಹತಕಂಟಕಂ||

ಆ ಎಲ್ಲ ಭರತರ್ಷಭರೂ ದ್ರೌಪದಿಯನ್ನು ಸಮಾಧಾನಪಡಿಸಿ ಸಂತೋಷ-ಪ್ರೀತಿಗಳಿಂದ ವೃಕೋದರನನ್ನು ಪ್ರಶಂಸಿಸಿದರು. ಭೀಮನ ಬಾಹುಬಲದಿಂದ ರಾಕ್ಷಸನು ಕೆಳಗುರುಳಿಸಲ್ಪಟ್ಟು ನಾಶಗೊಂಡ ನಂತರ ಆ ವೀರರು ಕಂಟಕವಿಲ್ಲದೇ ಕ್ಷೇಮದಿಂದ ವನವನ್ನು ಪ್ರವೇಶಿಸಿದರು.

03012073a ಸ ಮಯಾ ಗಚ್ಚತಾ ಮಾರ್ಗೇ ವಿನಿಕೀರ್ಣೋ ಭಯಾವಹಃ|

03012073c ವನೇ ಮಹತಿ ದುಷ್ಟಾತ್ಮಾ ದೃಷ್ಟೋ ಭೀಮಬಲಾದ್ಧತಃ||

ಅದೇ ಮಾರ್ಗದಲ್ಲಿ ಹೋಗುತ್ತಿರುವಾಗ ನಾನು ಭೀಮನ ಬಲದಿಂದ ಹತನಾದ ಆ ಮಹಾ ಭಯಾನಕ ದುಷ್ಟಾತ್ಮನನ್ನು ಹರಡಿ ಬಿದ್ದಿರುವುದನ್ನು ನೋಡಿದೆ.

03012074a ತತ್ರಾಶ್ರೌಷಮಹಂ ಚೈತತ್ಕರ್ಮ ಭೀಮಸ್ಯ ಭಾರತ|

03012074c ಬ್ರಾಹ್ಮಣಾನಾಂ ಕಥಯತಾಂ ಯೇ ತತ್ರಾಸನ್ಸಮಾಗತಾಃ||

ಭಾರತ! ಅಲ್ಲಿ ಸೇರಿದ್ದ ಬ್ರಾಹ್ಮಣರು ಹೇಳಿದಾಗಲೇ ನಾನು ಭೀಮನ ಈ ಕೃತ್ಯದ ಕುರಿತು ಕೇಳಿದೆ.””

03012075 ವೈಶಂಪಾಯನ ಉವಾಚ|

03012075a ಏವಂ ವಿನಿಹತಂ ಸಂಖ್ಯೇ ಕಿರ್ಮೀರಂ ರಾಕ್ಷಸೋತ್ತಮಂ|

03012075c ಶ್ರುತ್ವಾ ಧ್ಯಾನಪರೋ ರಾಜಾ ನಿಶಶ್ವಾಸಾರ್ತವತ್ತದಾ||

ವೈಶಂಪಾಯನನು ಹೇಳಿದನು: “ರಾಕ್ಷಸೋತ್ತಮ ಕಿರ್ಮೀರನು ಈ ರೀತಿ ಹತನಾದುದನ್ನು ಕೇಳಿದ ರಾಜನು ನಿಟ್ಟುಸಿರು ಬಿಡುತ್ತಾ ಚಿಂತಾಮಗ್ನನಾದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕಿರ್ಮೀರವಧಪರ್ವಣಿ ವಿದುರವಾಕ್ಯೇ ದ್ವಾದಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕಿರ್ಮೀರವಧಪರ್ವದಲ್ಲಿ ವಿದುರವಾಕ್ಯ ಎನ್ನುವ ಹನ್ನೆರಡನೆಯು ಅಧ್ಯಾಯವು.ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕಿರ್ಮೀರವಧಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಕಿರ್ಮೀರವಧಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೨/೧೮, ಉಪಪರ್ವಗಳು-೩೦/೧೦೦, ಅಧ್ಯಾಯಗಳು-೩೦೯/೧೯೯೫, ಶ್ಲೋಕಗಳು-೯೯೮೩/೭೩೭೮೪

Image result for indian motifs forests

[1]ಮಹರ್ಷಿ ಅಗಸ್ತ್ಯನು ಇಲ್ವಲ ಎನ್ನುವ ರಾಕ್ಷಸನನ್ನು ತಿಂದು ಸಂಪೂರ್ಣವಾಗಿ ಜೀರ್ಣಿಸಿಕೊಂಡಿದ್ದನು. ಈ ವೃತ್ತಾಂತವು ವನಪರ್ವದ ಮುಂದಿನ ಅಧ್ಯಾಯಗಳಲ್ಲಿ ಬರುತ್ತದೆ.

[2]ಹತ್ತು ಭುಜ ಅಥವಾ ಕೈಯಿಂದ ಭುಜದವರೆಗಿನ ಅಳತೆ

[3]ರಾಮಾಯಣದಲ್ಲಿ ಬರುವ ವಾಲಿ-ಸುಗ್ರೀವರು. ರಾಮಾಯಣದ ಘಟನೆಗಳು ಮಹಾಭಾರತದ ಮೊದಲೇ ನಡೆದು ಹೋಗಿತ್ತು ಎನ್ನುವುದಕ್ಕೆ ಇದೊಂದು ಉದಾಹರಣೆ.

Comments are closed.