ಆದಿ ಪರ್ವ: ಸಂಭವ ಪರ್ವ
Contents
Toggle೭೧
ಯಯಾತಿ
ದೇವತೆಗಳು ಕಚನನ್ನು ಶುಕ್ರನಲ್ಲಿಗೆ ಸಂಜೀವನಿ ವಿದ್ಯೆಯನ್ನು ಕಲಿಯಲು ಕಳುಹಿಸುವುದು (೧-೧೫). ಅಸುರರು ಕಚನನ್ನು ಕೊಲ್ಲಲು, ದೇವಯಾನಿಯ ಮಾತಿನಂತೆ ಶಕ್ರನು ಅವನನ್ನು ಬದುಕಿಸುವುದು (೧೬-೩೦). ಅಸುರರು ಎರಡನೆ ಬಾರಿ ಕಚನನ್ನು ಕೊಂದು, ಸುಟ್ಟು ಭಸ್ಮವನ್ನು ಶುಕ್ರನಿಗೆ ಕುಡಿಯಲಿಕ್ಕೆ ಕೊಡಲು, ಮಗಳ ಮಾತಿನಂತೆ ಪುನಃ ಕಚನನ್ನು ಬದುಕಿಸಲು ಅವನಿಗೆ ಸಂಜೀವನಿ ಮಂತ್ರವನ್ನು ಹೇಳಿಕೊಡುವುದು (೩೧-೫೫).
01071001 ಜನಮೇಜಯ ಉವಾಚ|
01071001a ಯಯಾತಿಃ ಪೂರ್ವಕೋಽಸ್ಮಾಕಂ ದಶಮೋ ಯಃ ಪ್ರಜಾಪತೇಃ|
01071001c ಕಥಂ ಸ ಶುಕ್ರತನಯಾಂ ಲೇಭೇ ಪರಮದುರ್ಲಭಾಂ||
ಜನಮೇಜಯನು ಹೇಳಿದನು: “ಪ್ರಜಾಪತಿಯಿಂದ ಹತ್ತನೆಯವನಾದ ನನ್ನ ಪೂರ್ವಜ ಯಯಾತಿಯು ಪರಮದುರ್ಲಭೆ ಶುಕ್ರತನಯೆಯನ್ನು ಹೇಗೆ ಪಡೆದನು?
01071002a ಏತದಿಚ್ಛಾಮ್ಯಹಂ ಶ್ರೋತುಂ ವಿಸ್ತರೇಣ ದ್ವಿಜೋತ್ತಮ|
01071002c ಆನುಪೂರ್ವ್ಯಾ ಚ ಮೇ ಶಂಸ ಪೂರೋರ್ವಂಶಕರಾನ್ ಪೃಥಕ್||
ದ್ವಿಜೋತ್ತಮ! ಇದನ್ನು ನಾನು ವಿಸ್ತಾರವಾಗಿ ಕೇಳಲು ಬಯಸುತ್ತೇನೆ. ಪುರುವಂಶವನ್ನು ಪ್ರಾರಂಭಿಸಿದವರ ಕುರಿತು ಪುನಃ ಮೊದಲಿನಿಂದ ಹೇಳು.”
01071003 ವೈಶಂಪಾಯನ ಉವಾಚ|
01071003a ಯಯಾತಿರಾಸೀದ್ರಾಜರ್ಷಿರ್ದೇವರಾಜಸಮದ್ಯುತಿಃ|
01071003c ತಂ ಶುಕ್ರವೃಷಪರ್ವಾಣೌ ವವ್ರಾತೇ ವೈ ಯಥಾ ಪುರಾ||
01071004a ತತ್ತೇಽಹಂ ಸಂಪ್ರವಕ್ಷ್ಯಾಮಿ ಪೃಚ್ಛತೋ ಜನಮೇಜಯ|
01071004c ದೇವಯಾನ್ಯಾಶ್ಚ ಸಂಯೋಗಂ ಯಯಾತೇರ್ನಾಹುಷಸ್ಯ ಚ||
ವೈಶಂಪಾಯನನು ಹೇಳಿದನು: “ಯಯಾತಿಯು ದೇವರಾಜ ಸಮದ್ಯುತಿ ಮತ್ತು ರಾಜರ್ಷಿಯಾಗಿದ್ದನು. ಜನಮೇಜಯ! ನೀನು ಕೇಳಿಕೊಂಡಂತೆ ಶುಕ್ರ ಮತ್ತು ವೃಷಪರ್ವರು ಯಯಾತಿಗೆ ತಮ್ಮ ಪುತ್ರಿಯರನ್ನು ಹೇಗೆ ಕೊಟ್ಟರು, ನಾಹುಷ ಯಯಾತಿ ಮತ್ತು ದೇವಯಾನಿಯರ ಸಂಬಂಧ ಹೇಗೆ ಪ್ರಾರಂಭವಾಯಿತು ಎನ್ನುವುದನ್ನು ಹೇಳುತ್ತೇನೆ.
01071005a ಸುರಾಣಾಮಸುರಾಣಾಂ ಚ ಸಮಜಾಯತ ವೈ ಮಿಥಃ|
01071005c ಐಶ್ವರ್ಯಂ ಪ್ರತಿ ಸಂಘರ್ಷಸ್ತ್ರೈಲೋಕ್ಯೇ ಸಚರಾಚರೇ||
ಸಚರಾಚರ ತ್ರೈಲೋಕ್ಯದ ಐಶ್ವರ್ಯಕ್ಕಾಗಿ ಸುರಾಸುರರ ನಡುವೆ ಅತೀ ದೊಡ್ಡ ಹೋರಾಟವು ನಡೆಯಿತು.
01071006a ಜಿಗೀಷಯಾ ತತೋ ದೇವಾ ವವ್ರಿರೇಽಂಗಿರಸಂ ಮುನಿಂ|
01071006c ಪೌರೋಹಿತ್ಯೇನ ಯಾಜ್ಯಾರ್ಥೇ ಕಾವ್ಯಂ ತೂಶನಸಂ ಪರೇ|
01071006e ಬ್ರಾಹ್ಮಣೌ ತಾವುಭೌ ನಿತ್ಯಮನ್ಯೋನ್ಯಸ್ಪರ್ಧಿನೌ ಭೃಶಂ||
ವಿಜಯಪ್ರಾಪ್ತಿಗಾಗಿ ದೇವತೆಗಳು ಮುನಿ ಅಂಗಿರಸ ಪುತ್ರನನ್ನು ಮತ್ತು ಪರಪಕ್ಷದವರು ಉಶಾನಸ ಕಾವ್ಯನನ್ನು ಯಜ್ಞಾದಿಗಳ ಪುರೋಹಿತರನ್ನಾಗಿ ನಿಯೋಜಿಸಿಕೊಂಡರು. ಆ ಈರ್ವರು ಬ್ರಾಹ್ಮಣರೂ ಸದಾ ಪರಸ್ಪರರ ಕಡು ಸ್ಪರ್ಧಿಗಳಾಗಿದ್ದರು.
01071007a ತತ್ರ ದೇವಾ ನಿಜಘ್ನುರ್ಯಾನ್ದಾನವಾನ್ಯುಧಿ ಸಂಗತಾನ್|
01071007c ತಾನ್ಪುನರ್ಜೀವಯಾಮಾಸ ಕಾವ್ಯೋ ವಿದ್ಯಾಬಲಾಶ್ರಯಾತ್|
01071007e ತತಸ್ತೇ ಪುನರುತ್ಥಾಯ ಯೋಧಯಾಂ ಚಕ್ರಿರೇ ಸುರಾನ್||
ಯುದ್ಧದಲ್ಲಿ ಸೇರಿದ್ದ ದಾನವರನ್ನು ದೇವತೆಗಳು ಸಂಹರಿಸುತ್ತಿದ್ದರು. ಆದರೆ ಕಾವ್ಯನು ತನ್ನ ವಿದ್ಯಾಬಲದಿಂದ ಅವರನ್ನು ಪುನರ್ಜೀವಿಸುತ್ತಿದ್ದನು, ಮತ್ತು ಅವರು ಪುನಃ ಸುರರೊಂದಿಗೆ ಯುದ್ಧಕ್ಕೆ ತೊಡಗುತ್ತಿದ್ದರು.
01071008a ಅಸುರಾಸ್ತು ನಿಜಘ್ನುರ್ಯಾನ್ಸುರಾನ್ಸಮರಮೂರ್ಧನಿ|
01071008c ನ ತಾನ್ಸಂಜೀವಯಾಮಾಸ ಬೃಹಸ್ಪತಿರುದಾರಧೀಃ||
ಸಮರ ಮಧ್ಯದಲ್ಲಿ ಅಸುರರು ಬಹಳಷ್ಟು ಸುರರನ್ನು ಸಂಹರಿಸುತ್ತಿದ್ದರು. ಆದರೆ ಬೃಹಸ್ಪತಿಯು ಅವರನ್ನು ಪುನಃ ಬದುಕಿಸಲು ಅಸಮರ್ಥನಾಗಿದ್ದನು.
01071009a ನ ಹಿ ವೇದ ಸ ತಾಂ ವಿದ್ಯಾಂ ಯಾಂ ಕಾವ್ಯೋ ವೇದ ವೀರ್ಯವಾನ್|
01071009c ಸಂಜೀವನೀಂ ತತೋ ದೇವಾ ವಿಷಾದಮಗಮನ್ಪರಂ||
ವೀರ್ಯವಂತ ಶುಕ್ರನು ತಿಳಿದಿದ್ದ ಸಂಜೀವಿನೀ ವಿದ್ಯೆಯು ಅವನಿಗೆ ತಿಳಿದಿರಲಿಲ್ಲ. ಇದರಿಂದಾಗಿ ದೇವತೆಗಳು ಪರಮ ದುಃಖವನ್ನು ಅನುಭವಿಸಿದರು.
01071010a ತೇ ತು ದೇವಾ ಭಯೋದ್ವಿಗ್ನಾಃ ಕಾವ್ಯಾದುಶನಸಸ್ತದಾ|
01071010c ಊಚುಃ ಕಚಮುಪಾಗಮ್ಯ ಜ್ಯೇಷ್ಠಂ ಪುತ್ರಂ ಬೃಹಸ್ಪತೇಃ||
ಉಶಾನಸ ಕಾವ್ಯನಿಂದ ಭಯೋದ್ವಿಗ್ನರಾದ ದೇವತೆಗಳು ಬೃಹಸ್ಪತಿಯ ಜ್ಯೇಷ್ಠ ಪುತ್ರ ಕಚನ ಬಳಿ ಬಂದು ಕೇಳಿಕೊಂಡರು:
01071011a ಭಜಮಾನಾನ್ಭಜಸ್ವಾಸ್ಮಾನ್ಕುರು ನಃ ಸಾಹ್ಯಮುತ್ತಮಂ|
01071011c ಯಾಸೌ ವಿದ್ಯಾ ನಿವಸತಿ ಬ್ರಾಹ್ಮಣೇಽಮಿತತೇಜಸಿ|
01071011e ಶುಕ್ರೇ ತಾಮಾಹರ ಕ್ಷಿಪ್ರಂ ಭಾಗಭಾಘ್ನೋ ಭವಿಷ್ಯಸಿ||
“ಭಜಿಸುತ್ತಿರುವ ನಮ್ಮನ್ನು ರಕ್ಷಿಸು ಮತ್ತು ನಮಗೆ ನೆರವನ್ನು ನೀಡು. ಅಮಿತತೇಜಸ್ವಿ ಬ್ರಾಹ್ಮಣ ಶುಕ್ರನಲ್ಲಿರುವ ವಿದ್ಯೆಯನ್ನು ಕ್ಷಿಪ್ರವಾಗಿ ಪಡೆದು ತಾ. ನಮ್ಮ (ಯಜ್ಞ) ಭಾಗಗಳ ಭಾಗಿಯಾಗುತ್ತೀಯೆ.
01071012a ವೃಷಪರ್ವಸಮೀಪೇ ಸ ಶಕ್ಯೋ ದ್ರಷ್ಟುಂ ತ್ವಯಾ ದ್ವಿಜಃ|
01071012c ರಕ್ಷತೇ ದಾನವಾಂಸ್ತತ್ರ ನ ಸ ರಕ್ಷತ್ಯದಾನವಾನ್||
ಆ ದ್ವಿಜನನ್ನು ನೀನು ವೃಷಪರ್ವನ ಬಳಿ ಕಾಣಬಲ್ಲೆ. ಅಲ್ಲಿ ಅವನು ದಾನವರನ್ನು ರಕ್ಷಿಸುತ್ತಿದ್ದಾನೆ. ಅದಾನವರ್ಯಾರನ್ನೂ ಅವನು ರಕ್ಷಿಸುವುದಿಲ್ಲ.
01071013a ತಮಾರಾಧಯಿತುಂ ಶಕ್ತೋ ಭವಾನ್ಪೂರ್ವವಯಾಃ ಕವಿಂ|
01071013c ದೇವಯಾನೀಂ ಚ ದಯಿತಾಂ ಸುತಾಂ ತಸ್ಯ ಮಹಾತ್ಮನಃ||
ವಯಸ್ಸಿನಲ್ಲಿ ನೀನು ಇನ್ನೂ ಚಿಕ್ಕವನು, ಆದುದರಿಂದ ನೀನು ಆ ಮಹಾತ್ಮ ಕವಿಯನ್ನು ಮತ್ತು ಅವನ ಪ್ರಿಯ ಸುತೆ ದೇವಯಾನಿಯನ್ನೂ ಆರಾಧಿಸಬಲ್ಲೆ.
01071014a ತ್ವಮಾರಾಧಯಿತುಂ ಶಕ್ತೋ ನಾನ್ಯಃ ಕಶ್ಚನ ವಿದ್ಯತೇ|
01071014c ಶೀಲದಾಕ್ಷಿಣ್ಯಮಾಧುರ್ಯೈರಾಚಾರೇಣ ದಮೇನ ಚ|
01071014e ದೇವಯಾನ್ಯಾಂ ಹಿ ತುಷ್ಟಾಯಾಂ ವಿದ್ಯಾಂ ತಾಂ ಪ್ರಾಪ್ಸ್ಯಸಿ ಧ್ರುವಂ||
ನೀನು ಮಾತ್ರ ಅವನನ್ನು ಆರಾಧಿಸಬಲ್ಲೆ, ಬೇರೆ ಯಾರೂ ಇಲ್ಲ. ನಿನ್ನ ಶೀಲ, ದಾಕ್ಷಿಣ್ಯ, ಮಾಧುರ್ಯ, ನಡವಳಿಕೆ, ಮತ್ತು ದಮಗಳಿಂದ ನೀನು ದೇವಯಾನಿಯನ್ನು ತೃಪ್ತಿಗೊಳಿಸಬಲ್ಲೆ ಮತ್ತು ಖಂಡಿತವಾಗಿಯೂ ಆ ವಿದ್ಯೆಯನ್ನು ಪ್ರಾಪ್ತಗೊಳಿಸಬಲ್ಲೆ.”
01071015a ತಥೇತ್ಯುಕ್ತ್ವಾ ತತಃ ಪ್ರಾಯಾದ್ಬೃಹಸ್ಪತಿಸುತಃ ಕಚಃ|
01071015c ತದಾಭಿಪೂಜಿತೋ ದೇವೈಃ ಸಮೀಪಂ ವೃಷಪರ್ವಣಃ||
“ಹಾಗೆಯೇ ಆಗಲಿ” ಎಂದು ಉತ್ತರಿಸಿದ ಬೃಹಸ್ಪತಿಸುತ ಕಚನು ದೇವತೆಗಳಿಂದ ಗೌರವಿಸಲ್ಪಟ್ಟು ವೃಷಪರ್ವನ ಬಳಿ ಹೋದನು.
01071016a ಸ ಗತ್ವಾ ತ್ವರಿತೋ ರಾಜನ್ದೇವೈಃ ಸಂಪ್ರೇಷಿತಃ ಕಚಃ|
01071016c ಅಸುರೇಂದ್ರಪುರೇ ಶುಕ್ರಂ ದೃಷ್ಟ್ವಾ ವಾಕ್ಯಮುವಾಚ ಹ||
ರಾಜನ್! ಈ ರೀತಿ ದೇವತೆಗಳಿಂದ ಕಳುಹಿಸಲ್ಪಟ್ಟ ಕಚನು ಸಮಯ ವ್ಯರ್ಥ ಮಾಡದೇ ಅಸುರೇಂದ್ರನ ಪುರವನ್ನು ತಲುಪಿ ಅಲ್ಲಿ ಶುಕ್ರನನ್ನು ಕಂಡು ಹೇಳಿದನು:
01071017a ಋಷೇರಂಗಿರಸಃ ಪೌತ್ರಂ ಪುತ್ರಂ ಸಾಕ್ಷಾದ್ಬೃಹಸ್ಪತೇಃ|
01071017c ನಾಮ್ನಾ ಕಚ ಇತಿ ಖ್ಯಾತಂ ಶಿಷ್ಯಂ ಗೃಹ್ಣಾತು ಮಾಂ ಭವಾನ್||
“ಭಗವನ್! ನನ್ನನ್ನು ನಿಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ. ನಾನು ಅಂಗಿರಸನ ಮೊಮ್ಮಗ ಸಾಕ್ಷಾತ್ ಬೃಹಸ್ಪತಿಯ ಪುತ್ರ. ನನ್ನನ್ನು ಕಚ ಎಂಬ ಹೆಸರಿನಿಂದ ಕರೆಯುತ್ತಾರೆ.
01071018a ಬ್ರಹ್ಮಚರ್ಯಂ ಚರಿಷ್ಯಾಮಿ ತ್ವಯ್ಯಹಂ ಪರಮಂ ಗುರೌ|
01071018c ಅನುಮನ್ಯಸ್ವ ಮಾಂ ಬ್ರಹ್ಮನ್ಸಹಸ್ರಂ ಪರಿವತ್ಸರಾನ್||
ನಿಮ್ಮನ್ನು ನನ್ನ ಪರಮ ಗುರುವೆಂದು ಸ್ವೀಕರಿಸಿ ನಾನು ಸಾವಿರ ವರ್ಷಗಳ ಪರ್ಯಂತ ಬ್ರಹ್ಮಚರ್ಯವನ್ನು ಪಾಲಿಸುತ್ತೇನೆ. ನನಗೆ ಅನುಮತಿಯನ್ನು ನೀಡಿ.”
01071019 ಶುಕ್ರ ಉವಾಚ|
01071019a ಕಚ ಸುಸ್ವಾಗತಂ ತೇಽಸ್ತು ಪ್ರತಿಗೃಹ್ಣಾಮಿ ತೇ ವಚಃ|
01071019c ಅರ್ಚಯಿಷ್ಯೇಽಹಮರ್ಚ್ಯಂ ತ್ವಾಮರ್ಚಿತೋಽಸ್ತು ಬೃಹಸ್ಪತಿಃ||
ಶುಕ್ರನು ಹೇಳಿದನು: “ಕಚ! ನಿನಗೆ ಸುಸ್ವಾಗತ. ನಿನ್ನ ಮಾತುಗಳನ್ನು ನಾನು ಸ್ವೀಕರಿಸುತ್ತೇನೆ. ಗೌರವಕ್ಕೆ ಅರ್ಹನಾದ ನಿನ್ನನ್ನು ನಾನು ಗೌರವಿಸುತ್ತೇನೆ. ಇದರಿಂದ ಬೃಹಸ್ಪತಿಯನ್ನೂ ಗೌರವಿಸಿದಂತಾಗುತ್ತದೆ.”
01071020 ವೈಶಂಪಾಯನ ಉವಾಚ|
01071020a ಕಚಸ್ತು ತಂ ತಥೇತ್ಯುಕ್ತ್ವಾ ಪ್ರತಿಜಗ್ರಾಹ ತದ್ವ್ರತಂ|
01071020c ಆದಿಷ್ಟಂ ಕವಿಪುತ್ರೇಣ ಶುಕ್ರೇಣೋಶನಸಾ ಸ್ವಯಂ||
ವೈಶಂಪಾಯನನು ಹೇಳಿದನು: “ಹಾಗೆಯೇ ಆಗಲಿ” ಎಂದು ಹೇಳಿದ ಕಚನು ಸ್ವಯಂ ಕವಿಪುತ್ರ ಶುಕ್ರ ಉಶನಸನ ಆದೇಶದಂತೆ ವ್ರತದೀಕ್ಷೆಯನ್ನು ಪಡೆದನು.
01071021a ವ್ರತಸ್ಯ ವ್ರತಕಾಲಂ ಸ ಯಥೋಕ್ತಂ ಪ್ರತ್ಯಗೃಹ್ಣತ|
01071021c ಆರಾಧಯನ್ನುಪಾಧ್ಯಾಯಂ ದೇವಯಾನೀಂ ಚ ಭಾರತ||
ಭಾರತ! ಹೇಳಿಕೆಯ ಪ್ರಕಾರ ಸರಿಯಾದ ವ್ರತಕಾಲದಲ್ಲಿ ವ್ರತವನ್ನು ಪ್ರಾರಂಭಿಸಿದ ಅವನು ತನ್ನ ಉಪಾಧ್ಯಾಯ ಮತ್ತು ದೇವಯಾನಿಯನ್ನು ಆರಾಧಿಸತೊಡಗಿದನು.
01071022a ನಿತ್ಯಮಾರಾಧಯಿಷ್ಯಂಸ್ತಾಂ ಯುವಾ ಯೌವನಗೋಽಮುಖೇ|
01071022c ಗಾಯನ್ನೃತ್ಯನ್ವಾದಯಂಶ್ಚ ದೇವಯಾನೀಮತೋಷಯತ್||
ಆ ಯುವಕನು ಯುವತಿ ದೇವಯಾನಿಯನ್ನು ಗಾನ, ನೃತ್ಯ ಮತ್ತು ವಾದ್ಯಗಳಿಂದ ನಿತ್ಯವೂ ಸಂತುಷ್ಟಗೊಳಿಸುತ್ತಿದ್ದನು.
01071023a ಸಂಶೀಲಯನ್ದೇವಯಾನೀಂ ಕನ್ಯಾಂ ಸಂಪ್ರಾಪ್ತಯೌವನಾಂ|
01071023c ಪುಷ್ಪೈಃ ಫಲೈಃ ಪ್ರೇಷಣೈಶ್ಚ ತೋಷಯಾಮಾಸ ಭಾರತ||
ಭಾರತ! ಯೌವನವನ್ನು ಪಡೆದಿದ್ದ ಕನ್ಯೆ ದೇವಯಾನಿಯನ್ನು ಪುಷ್ಪ ಮತ್ತು ಫಲಗಳನ್ನು ನೀಡುತ್ತಾ, ಅವಳೊಡನೆ ಪ್ರೀತಿಪೂರ್ವಕ ನಡೆನುಡಿಯುತ್ತಾ ಸಂತೃಪ್ತಿಗೊಳಿಸಿದನು.
01071024a ದೇವಯಾನ್ಯಪಿ ತಂ ವಿಪ್ರಂ ನಿಯಮವ್ರತಚಾರಿಣಂ|
01071024c ಅನುಗಾಯಮಾನಾ ಲಲನಾ ರಹಃ ಪರ್ಯಚರತ್ತದಾ||
ದೇವಯಾನಿಯೂ ಕೂಡ ಆ ನಿಯಮ ವ್ರತಚಾರಿಣಿ ವಿಪ್ರನೊಡನೆ ಏಕಾಂತದಲ್ಲಿ ಹಾಡುತ್ತಿದ್ದಳು, ಮತ್ತು ಅವನ ಸುತ್ತ ಸಂತೋಷದಿಂದ ಸುಳಿದಾಡುತ್ತಿದ್ದಳು.
01071025a ಪಂಚ ವರ್ಷಶತಾನ್ಯೇವಂ ಕಚಸ್ಯ ಚರತೋ ವ್ರತಂ|
01071025c ತತ್ರಾತೀಯುರಥೋ ಬುದ್ಧ್ವಾ ದಾನವಾಸ್ತಂ ತತಃ ಕಚಂ||
ಹೀಗೆ ಕಚನ ವ್ರತದ ಐದು ನೂರು ವರ್ಷಗಳು ಕಳೆಯುತ್ತಾ ಬಂದಾಗ ದಾನವರು ಕಚನ ಉದ್ದೇಶವನ್ನು ತಿಳಿದುಕೊಂಡರು.
01071026a ಗಾ ರಕ್ಷಂತಂ ವನೇ ದೃಷ್ಟ್ವಾ ರಹಸ್ಯೇಕಮಮರ್ಷಿತಾಃ|
01071026c ಜಘ್ನುರ್ಬೃಹಸ್ಪತೇರ್ದ್ವೇಷಾದ್ವಿದ್ಯಾರಕ್ಷಾರ್ಥಮೇವ ಚ|
01071026e ಹತ್ವಾ ಶಾಲಾವೃಕೇಭ್ಯಶ್ಚ ಪ್ರಾಯಚ್ಛಂಸ್ತಿಲಶಃ ಕೃತಂ||
ವನದಲ್ಲಿ ಗೋವುಗಳನ್ನು ಕಾಯುತ್ತಿದ್ದ ಒಂಟಿ ಕಚನನ್ನು ಕಂಡ ಅವರು ಬೃಹಸ್ಪತಿಯೊಡನಿದ್ದ ದ್ವೇಶದಿಂದ ಮತ್ತು ಆ ವಿದ್ಯೆಯನ್ನು ರಕ್ಷಿಸಲೋಸುಗ ಅವನನ್ನು ಕೊಂದು, ಸಾಸಿವೆಕಾಳಿನ ಗಾತ್ರದಲ್ಲಿ ತುಂಡು ತುಂಡುಮಾಡಿ ಅಲ್ಲಿರುವ ತೋಳಗಳಿಗೆ ತಿನ್ನಿಸಿದರು.
01071027a ತತೋ ಗಾವೋ ನಿವೃತ್ತಾಸ್ತಾ ಅಗೋಪಾಃ ಸ್ವಂ ನಿವೇಶನಂ|
01071027c ತಾ ದೃಷ್ಟ್ವಾ ರಹಿತಾ ಗಾಸ್ತು ಕಚೇನಾಭ್ಯಾಗತಾ ವನಾತ್|
01071027e ಉವಾಚ ವಚನಂ ಕಾಲೇ ದೇವಯಾನ್ಯಥ ಭಾರತ||
ಗೋವುಗಳು ಗೋಪನಿಲ್ಲದೇ ತಾವೇ ತಮ್ಮ ನಿವೇಶನಕ್ಕೆ ಹಿಂದಿರುಗಿದವು. ಭಾರತ! ಕಚನ ಜೊತೆಯಿಲ್ಲದೇ ಗೋವುಗಳು ಹಿಂದಿರುಗಿದುದನ್ನು ನೋಡಿದ ದೇವಯಾನಿಯು ತನ್ನ ತಂದೆಗೆ ಇಂತೆಂದಳು:
01071028a ಅಹುತಂ ಚಾಗ್ನಿಹೋತ್ರಂ ತೇ ಸೂರ್ಯಶ್ಚಾಸ್ತಂ ಗತಃ ಪ್ರಭೋ|
01071028c ಅಗೋಪಾಶ್ಚಾಗತಾ ಗಾವಃ ಕಚಸ್ತಾತ ನ ದೃಶ್ಯತೇ||
“ಪ್ರಭು! ಅಗ್ನಿಹೋತ್ರವನ್ನು ಉರಿಸಿಯಾಗಿದೆ, ಸೂರ್ಯಾಸ್ತವೂ ಆಗಿದೆ. ಗೋಪನಿಲ್ಲದೇ ಗೋವುಗಳು ಹಿಂದಿರುಗಿವೆ. ಅಪ್ಪಾ! ಅದರೆ ಕಚನು ಇನ್ನೂ ಕಾಣುತ್ತಿಲ್ಲ.
01071029a ವ್ಯಕ್ತಂ ಹತೋ ಮೃತೋ ವಾಪಿ ಕಚಸ್ತಾತ ಭವಿಷ್ಯತಿ|
01071029c ತಂ ವಿನಾ ನ ಚ ಜೀವೇಯಂ ಕಚಂ ಸತ್ಯಂ ಬ್ರವೀಮಿ ತೇ||
ತಂದೆ! ಕಚನು ಸತ್ತಿರಬಹುದು ಅಥವಾ ಅವನನ್ನು ಕೊಂದಿರಬಹುದು. ಅವನಿಲ್ಲದೇ ನಾನು ನಿಜವಾಗಿಯೂ ಬದುಕಲಾರೆ.”
01071030 ಶುಕ್ರ ಉವಾಚ|
01071030a ಅಯಮೇಹೀತಿ ಶಬ್ಧೇನ ಮೃತಂ ಸಂಜೀವಯಾಮ್ಯಹಂ||
ಶುಕ್ರನು ಹೇಳಿದನು: “ಇಲ್ಲಿ ಬಾ ಎಂದು ಹೇಳಿ ಮೃತನನ್ನು ಬದುಕಿಸುತ್ತೇನೆ.””
01071031 ವೈಶಂಪಾಯನ ಉವಾಚ|
01071031a ತತಃ ಸಂಜೀವನೀಂ ವಿದ್ಯಾಂ ಪ್ರಯುಜ್ಯ ಕಚಮಾಹ್ವಯತ್|
01071031c ಆಹೂತಃ ಪ್ರಾದುರಭವತ್ಕಚೋಽರಿಷ್ಟೋಽಥ ವಿದ್ಯಯಾ|
01071031e ಹತೋಽಹಮಿತಿ ಚಾಚಖ್ಯೌ ಪೃಷ್ಠೋ ಬ್ರಾಹ್ಮಣಕನ್ಯಯಾ||
ವೈಶಂಪಾಯನನು ಹೇಳಿದನು: “ನಂತರ ಸಂಜೀವಿನೀ ವಿದ್ಯೆಯಿಂದ ಕಚನನ್ನು ಆಹ್ವಾನಿಸಿದನು. ಹಾಗೆ ಕರೆಯಲ್ಪಟ್ಟಾಗ, ಕಚನು ಸಂತೋಷದಿಂದ ಕಾಣಿಸಿಕೊಂಡನು. “ನನ್ನನ್ನು ಕೊಲೆಮಾಡಲಾಗಿತ್ತು” ಎಂದು ಬ್ರಾಹ್ಮಣ ಕನ್ಯೆಯ ಪ್ರಶ್ನೆಗಳಿಗೆ ಉತ್ತರಿಸಿದನು.
01071032a ಸ ಪುನರ್ದೇವಯಾನ್ಯೋಕ್ತಃ ಪುಷ್ಪಾಹಾರೋ ಯದೃಚ್ಛಯಾ|
01071032c ವನಂ ಯಯೌ ತತೋ ವಿಪ್ರೋ ದದೃಶುರ್ದಾನವಾಶ್ಚ ತಂ||
ಪುನಃ ಇನ್ನೊಂದು ದಿನ ದೇವಯಾನಿಗೆ ಪುಷ್ಪಗಳನ್ನು ತೆಗೆದುಕೊಂಡು ಬರಲು ಕಚನು ವನಕ್ಕೆ ಹೋದಾಗ ದಾನವರು ಆ ವಿಪ್ರನನ್ನು ನೋಡಿದರು.
01071033a ತತೋ ದ್ವಿತೀಯಂ ಹತ್ವಾ ತಂ ದಗ್ಧ್ವಾ ಕೃತ್ವಾ ಚ ಚೂರ್ಣಶಃ|
01071033c ಪ್ರಾಯಚ್ಛನ್ಬ್ರಾಹ್ಮಣಾಯೈವ ಸುರಾಯಾಮಸುರಾಸ್ತದಾ||
ಎರಡನೆಯ ಬಾರಿ ಅವರು ಅವನನ್ನು ಕೊಂದು, ಸುಟ್ಟು, ಭಸ್ಮದ ಚೂರ್ಣವನ್ನು ಮಾಡಿ, ಮದ್ಯದಲ್ಲಿ ಸೇರಿಸಿ ಬ್ರಾಹ್ಮಣನಿಗೆ ಕುಡಿಯಲು ಕೊಟ್ಟರು.
01071034a ದೇವಯಾನ್ಯಥ ಭೂಯೋಽಪಿ ವಾಕ್ಯಂ ಪಿತರಮಬ್ರವೀತ್|
01071034c ಪುಷ್ಪಾಹಾರಃ ಪ್ರೇಷಣಕೃತ್ಕಚಸ್ತಾತ ನ ದೃಶ್ಯತೇ||
ಪುನಃ ದೇವಯಾನಿಯು ತನ್ನ ತಂದೆಯಲ್ಲಿ ಹೇಳಿಕೊಂಡಳು: “ಪುಷ್ಪಗಳನ್ನು ತರಲೆಂದು ಹೋದ ಕಚನು ಕಾಣುತ್ತಿಲ್ಲ.”
01071035 ಶುಕ್ರ ಉವಾಚ|
01071035a ಬೃಹಸ್ಪತೇಃ ಸುತಃ ಪುತ್ರಿ ಕಚಃ ಪ್ರೇತಗತಿಂ ಗತಃ|
01071035c ವಿದ್ಯಯಾ ಜೀವಿತೋಽಪ್ಯೇವಂ ಹನ್ಯತೇ ಕರವಾಣಿ ಕಿಂ||
ಶುಕ್ರನು ಹೇಳಿದನು: “ಪುತ್ರಿ! ಬೃಹಸ್ಪತಿಯ ಸುತ ಕಚನು ಪ್ರೇತಲೋಕವನ್ನು ಸೇರಿದ್ದಾನೆ. ನನ್ನ ವಿದ್ಯೆಯಿಂದ ಅವನನ್ನು ಬದುಕಿಸಿದರೂ ಪುನಃ ಅವನನ್ನು ಕೊಂದು ಹಾಕಿದ್ದಾರೆ. ನಾನೇನು ಮಾಡಲಿ?
01071036a ಮೈವಂ ಶುಚೋ ಮಾ ರುದ ದೇವಯಾನಿ |
ನ ತ್ವಾದೃಶೀ ಮರ್ತ್ಯಮನುಪ್ರಶೋಚೇತ್||
01071036c ಸುರಾಶ್ಚ ವಿಶ್ವೇ ಚ ಜಗಚ್ಚ ಸರ್ವಂ|
ಉಪಸ್ಥಿತಾಂ ವೈಕೃತಿಮಾನಮಂತಿ||
ದೇವಯಾನಿ! ಅವನಿಗಾಗಿ ಶೋಕಿಸಬೇಡ, ರೋದಿಸಬೇಡ. ನಿನ್ನಂಥವರು ಮಾನವನಿಗಾಗಿ ಅಳುವುದಿಲ್ಲ. ನಡೆಯುವ ಬದಲಾವಣೆಗಳಿಗೆ ಸುರರೂ, ವಿಶ್ವವೂ, ಜಗತ್ತೂ ಮತ್ತು ಸರ್ವವೂ ತಲೆಬಾಗಿಸಲೇಬೇಕು.”
01071037 ದೇವಯಾನ್ಯುವಾಚ|
01071037a ಯಸ್ಯಾಂಗಿರಾ ವೃದ್ಧತಮಃ ಪಿತಾಮಹೋ |
ಬೃಹಸ್ಪತಿಶ್ಚಾಪಿ ಪಿತಾ ತಪೋಧನಃ||
01071037c ಋಷೇಃ ಪುತ್ರಂ ತಮಥೋ ವಾಪಿ ಪೌತ್ರಂ |
ಕಥಂ ನ ಶೋಚೇಯಮಹಂ ನ ರುದ್ಯಾಂ||
ದೇವಯಾನಿಯು ಹೇಳಿದಳು: “ಯಾರ ಪಿತಾಮಹನು ವೃದ್ಧ ಅಂಗಿರಸನೋ, ಯಾರ ತಂದೆಯು ತಪೋಧನ ಬೃಹಸ್ಪತಿಯೋ, ಯಾರು ಋಷಿಯ ಪುತ್ರನೂ ಪೌತ್ರನೂ ಆಗಿದ್ದಾನೋ ಅಂಥವನ ಕುರಿತು ನಾನು ಹೇಗೆ ಶೋಕಿಸದಿರಲಿ ಅಥವಾ ರೋದಿಸದೇ ಇರಲಿ?
01071038a ಸ ಬ್ರಹ್ಮಚಾರೀ ಚ ತಪೋಧನಶ್ಚ |
ಸದೋತ್ಥಿತಃ ಕರ್ಮಸು ಚೈವ ದಕ್ಷಃ||
01071038c ಕಚಸ್ಯ ಮಾರ್ಗಂ ಪ್ರತಿಪತ್ಸ್ಯೇ ನ ಭೋಕ್ಷ್ಯೇ|
ಪ್ರಿಯೋ ಹಿ ಮೇ ತಾತ ಕಚೋಽಭಿರೂಪಃ||
ಸ್ವಯಂ ಬ್ರಹ್ಮಚಾರಿಯೂ ತಪೋಧನನೂ ಆದ, ಕೆಲಸಗಳಲ್ಲಿ ಸದಾ ದಕ್ಷ ಆ ಕಚನ ದಾರಿಯಲ್ಲಿಯೇ ನಾನೂ ಹೋಗುತ್ತೇನೆ ತಂದೆ! ನನಗೆ ಊಟವೂ ಬೇಡ. ಸುಂದರ ಕಚನು ನನ್ನ ಪ್ರಿಯಕರ.”
01071039 ಶುಕ್ರ ಉವಾಚ|
01071039a ಅಸಂಶಯಂ ಮಾಮಸುರಾ ದ್ವಿಷಂತಿ |
ಯೇ ಮೇ ಶಿಷ್ಯಂ ನಾಗಸಂ ಸೂದಯಂತಿ||
01071039c ಅಬ್ರಾಹ್ಮಣಂ ಕರ್ತುಮಿಚ್ಛಂತಿ ರೌದ್ರಾಃ|
ತೇ ಮಾಂ ಯಥಾ ಪ್ರಸ್ತುತಂ ದಾನವೈರ್ಹಿ||
01071039e ಅಪ್ಯಸ್ಯ ಪಾಪಸ್ಯ ಭವೇದಿಹಾಂತಃ |
ಕಂ ಬ್ರಹ್ಮಹತ್ಯಾ ನ ದಹೇದಪೀಂದ್ರಂ||
ಶುಕ್ರನು ಹೇಳಿದನು: “ನನ್ನ ಜೊತೆಯಲ್ಲಿಯೇ ವಾಸಿಸುವ ನನ್ನ ಶಿಷ್ಯನನ್ನು ಕೊಂದು ಅಸುರರು ನನಗೆ ಕೆಟ್ಟದ್ದನ್ನೇ ಮಾಡಿದ್ದಾರೆ. ಬ್ರಾಹ್ಮಣ ಹತ್ಯೆಯಲ್ಲಿ ನನ್ನನ್ನೂ ಸೇರಿಸಿ ನನ್ನನ್ನು ಅಬ್ರಾಹ್ಮಣನನ್ನಾಗಿ ಮಾಡಲು ಈ ಅಸುರರು ಪ್ರಯತ್ನಿಸುತ್ತಿದ್ದಾರೆ. ಈ ಪಾಪದ ಅಂತ್ಯವು ಈಗಲೇ ಆಗಲಿ. ಯಾಕೆಂದರೆ ಬ್ರಹ್ಮಹತ್ಯೆಯು ಇಂದ್ರನನ್ನೂ ಸುಡುವುದಿಲ್ಲವೇ?””
01071040 ವೈಶಂಪಾಯನ ಉವಾಚ|
01071040a ಸಂಚೋದಿತೋ ದೇವಯಾನ್ಯಾ ಮಹರ್ಷಿಃ ಪುನರಾಹ್ವಯತ್|
01071040c ಸಂರಂಭೇಣೈವ ಕಾವ್ಯೋ ಹಿ ಬೃಹಸ್ಪತಿಸುತಂ ಕಚಂ||
ವೈಶಂಪಾಯನನು ಹೇಳಿದನು: “ದೇವಯಾನಿಯ ಒತ್ತಾಯದಂತೆ ಮಹರ್ಷಿ ಕಾವ್ಯನು ಪುನಃ ಬೃಹಸ್ಪತಿಸುತ ಕಚನನ್ನು ಜೋರಾಗಿ ಕೂಗಿ ಕರೆದನು.
01071041a ಗುರೋರ್ಭೀತೋ ವಿದ್ಯಯಾ ಚೋಪಹೂತಃ|
ಶನೈರ್ವಾಚಂ ಜತರೇ ವ್ಯಾಜಹಾರ||
01071041c ತಮಬ್ರವೀತ್ಕೇನ ಪಥೋಪನೀತೋ |
ಮಮೋದರೇ ತಿಷ್ಠಸಿ ಬ್ರೂಹಿ ವಿಪ್ರ||
ವಿದ್ಯೆಯಿಂದ ಕರೆಯಲ್ಪಟ್ಟಾಗ, ಗುರುವಿಗೆ ಹೆದರಿ ಅವನ ಹೊಟ್ಟೆಯ ಒಳಗಿಂದಲೇ ಕಚನು ಸಣ್ಣಸ್ವರದಲ್ಲಿ ಉತ್ತರಿಸಿದನು. ಆಗ ಮುನಿಯು ಅವನನ್ನು ಕೇಳಿದನು: “ವಿಪ್ರ! ನೀನು ಯಾವ ಮಾರ್ಗದಿಂದ ನನ್ನ ಹೊಟ್ಟೆಯನ್ನು ಸೇರಿದ್ದೀಯೆ ಹೇಳು!”
01071042 ಕಚ ಉವಾಚ|
01071042a ಭವತ್ಪ್ರಸಾದಾನ್ನ ಜಹಾತಿ ಮಾಂ ಸ್ಮೃತಿಃ|
ಸ್ಮರೇ ಚ ಸರ್ವಂ ಯಚ್ಚ ಯಥಾ ಚ ವೃತ್ತಂ||
01071042c ನ ತ್ವೇವಂ ಸ್ಯಾತ್ತಪಸೋ ವ್ಯಯೋ ಮೇ |
ತತಃ ಕ್ಲೇಶಂ ಘೋರಮಿಮಂ ಸಹಾಮಿ||
ಕಚನು ಹೇಳಿದನು: “ನಿಮ್ಮ ಅನುಗ್ರಹದಿಂದ ನನ್ನ ನೆನಪು ಉಳಿದಿದೆ. ನನಗೆ ಆದ ಪ್ರತಿಯೊಂದು ವಿಷಯವೂ ಯಥಾವತ್ತಾಗಿ ನೆನಪಿದೆ. ನನ್ನ ತಪಸ್ಸಿನ ಶಕ್ತಿಯನ್ನೂ ಕಳೆದುಕೊಂಡಿಲ್ಲ. ಇದರಿಂದಾಗಿ ನಾನು ಈ ಘೋರ ಕ್ಲೇಶವನ್ನು ಸಹಿಸಬಲ್ಲವನಾಗಿದ್ದೇನೆ.
01071043a ಅಸುರೈಃ ಸುರಾಯಾಂ ಭವತೋಽಸ್ಮಿ ದತ್ತೋ |
ಹತ್ವಾ ದಗ್ಧ್ವಾ ಚೂರ್ಣಯಿತ್ವಾ ಚ ಕಾವ್ಯ||
01071043c ಬ್ರಾಹ್ಮೀಂ ಮಾಯಾಮಾಸುರೀ ಚೈವ ಮಾಯಾ |
ತ್ವಯಿ ಸ್ಥಿತೇ ಕಥಮೇವಾತಿವರ್ತೇತ್||
ಕಾವ್ಯ! ಅಸುರರು ನನ್ನನ್ನು ಕೊಂದು, ಸುಟ್ಟು, ಚೂರ್ಣವನ್ನಾಗಿ ಮಾಡಿ ಮದ್ಯದಲ್ಲಿ ಸೇರಿಸಿ ನಿನಗೆ ಕೊಟ್ಟರು. ಆದರೆ ಬ್ರಾಹ್ಮೀ ಮಾಯೆಯನ್ನು ಹೊಂದಿರುವ ನೀನಿರುವಾಗ ಅಸುರೀ ಮಾಯೆಯು ಏನು ತಾನೇ ಮಾಡಬಲ್ಲದು?”
01071044 ಶುಕ್ರ ಉವಾಚ|
01071044a ಕಿಂ ತೇ ಪ್ರಿಯಂ ಕರವಾಣ್ಯದ್ಯ ವತ್ಸೇ |
ವಧೇನ ಮೇ ಜೀವಿತಂ ಸ್ಯಾತ್ ಕಚಸ್ಯ||
01071044c ನಾನ್ಯತ್ರ ಕುಕ್ಷೇರ್ಮಮ ಭೇದನೇನ |
ದೃಶ್ಯೇತ್ ಕಚೋ ಮದ್ಗತೋ ದೇವಯಾನಿ||
ಶುಕ್ರನು ಹೇಳಿದನು: “ವತ್ಸೇ! ಈಗ ನಾನು ಹೇಗೆ ತಾನೆ ನೀನು ಕೇಳಿದ್ದುದನ್ನು ಮಾಡಬಲ್ಲೆ? ನನ್ನ ಮರಣದಿಂದಲೇ ಕಚನು ಜೀವಿತನಾಗಬಲ್ಲ. ದೇವಯಾನಿ! ನನ್ನ ಹೊಟ್ಟೆಯನ್ನು ಸೀಳಿ ಹೊರಬರುವುದರ ಹೊರತು ಬೇರೆ ಯಾವ ಮಾರ್ಗವೂ ಕಚನಿಗೆ ತೋರುವುದಿಲ್ಲ.”
01071045 ದೇವಯಾನ್ಯುವಾಚ|
01071045a ದ್ವೌ ಮಾಂ ಶೋಕಾವಗ್ನಿಕಲ್ಪೌ ದಹೇತಾಂ |
ಕಚಸ್ಯ ನಾಶಸ್ತವ ಚೈವೋಪಘಾತಃ||
01071045c ಕಚಸ್ಯ ನಾಶೇ ಮಮ ನಾಸ್ತಿ ಶರ್ಮ |
ತವೋಪಘಾತೇ ಜೀವಿತುಂ ನಾಸ್ಮಿ ಶಕ್ತಾ||
ದೇವಯಾನಿಯು ಹೇಳಿದಳು: “ಇವೆರಡು ಶೋಕಗಳೂ ನನ್ನನ್ನು ಅಗ್ನಿಯಂತೆ ಸುಡುತ್ತವೆ. ಕಚನ ಮತ್ತು ನಿನ್ನ ನಾಶ ಇವೆರಡೂ ನನಗೆ ಒಂದೇ. ಕಚನ ನಾಶದಿಂದ ನನಗೆ ಎಲ್ಲಿಯೂ ನೆರಳಿಲ್ಲ; ನೀನಿಲ್ಲದೇ ನಾನು ಜೀವಿಸುವಿದೇ ಅಶಕ್ಯ.”
01071046 ಶುಕ್ರ ಉವಾಚ|
01071046a ಸಂಸಿದ್ಧರೂಪೋಽಸಿ ಬೃಹಸ್ಪತೇಃ ಸುತ |
ಯತ್ತ್ವಾಂ ಭಕ್ತಂ ಭಜತೇ ದೇವಯಾನೀ||
01071046c ವಿದ್ಯಾಮಿಮಾಂ ಪ್ರಾಪ್ನುಹಿ ಜೀವನೀಂ ತ್ವಂ |
ನ ಚೇದಿಂದ್ರಃ ಕಚರೂಪೀ ತ್ವಮದ್ಯ||
ಶುಕ್ರನು ಹೇಳಿದನು: “ಬೃಹಸ್ಪತಿಯ ಮಗನೇ! ದೇವಯಾನಿಯ ಪ್ರೀತಿ ಪಾತ್ರನಾದ ನೀನು ಸಂಸಿದ್ಧರೂಪನಾಗಿದ್ದೀಯೆ. ನೀನು ಕಚರೂಪದಲ್ಲಿದ್ದ ಇಂದ್ರನಲ್ಲದಿದ್ದರೆ ನಾನು ನಿನಗೆ ಈಗ ಸಂಜೀವಿನೀ ವಿದ್ಯೆಯನ್ನು ನೀಡುತ್ತೇನೆ.
01071047a ನ ನಿವರ್ತೇತ್ಪುನರ್ಜೀವನ್ಕಶ್ಚಿದನ್ಯೋ ಮಮೋದರಾತ್|
01071047c ಬ್ರಾಹ್ಮಣಂ ವರ್ಜಯಿತ್ವೈಕಂ ತಸ್ಮಾದ್ವಿದ್ಯಾಮವಾಪ್ನುಹಿ||
ನನ್ನ ಉದರದಿಂದ ಬೇರೆ ಯಾರೂ ಜೀವಂತ ಹೊರಗೆ ಬರಲು ಸಾಧ್ಯವಿಲ್ಲ. ಆದರೆ ಬ್ರಾಹ್ಮಣನನ್ನು ಎಂದೂ ಕೊಲ್ಲಬಾರದು. ಆದ್ದರಿಂದ ನಾನು ನಿನಗೆ ಹೇಳಿಕೊಡುವ ಈ ವಿಧ್ಯೆಯನ್ನು ಸ್ವೀಕರಿಸು.
01071048a ಪುತ್ರೋ ಭೂತ್ವಾ ಭಾವಯ ಭಾವಿತೋ ಮಾಂ|
ಅಸ್ಮಾದ್ದೇಹಾದುಪನಿಷ್ಕ್ರಮ್ಯ ತಾತ||
01071048c ಸಮೀಕ್ಷೇಥಾ ಧರ್ಮವತೀಮವೇಕ್ಷಾಂ|
ಗುರೋಃ ಸಕಾಶಾತ್ಪ್ರಾಪ್ಯ ವಿದ್ಯಾಂ ಸವಿದ್ಯಃ||
ಮಗುವೇ! ನೀನು ನನ್ನ ಪುತ್ರನಾಗಿ ಈ ದೇಹದಿಂದ ಹೊರಗೆ ಬಾ. ಗುರುವಿನಿಂದ ಈ ಸವಿದ್ಯೆಯನ್ನು ಪಡೆದ ನೀನು ಈ ವಿದ್ಯೆಯನ್ನು ಜಾಗರೂಕತೆಯಿಂದ, ಧರ್ಮಪ್ರಕಾರವಾಗಿ ಬಳಸು.””
01071049 ವೈಶಂಪಾಯನ ಉವಾಚ|
01071049a ಗುರೋಃ ಸಕಾಶಾತ್ಸಮವಾಪ್ಯ ವಿದ್ಯಾಂ |
ಭಿತ್ತ್ವಾ ಕುಕ್ಷಿಂ ನಿರ್ವಿಚಕ್ರಾಮ ವಿಪ್ರಃ||
01071049c ಕಚೋಽಭಿರೂಪೋ ದಕ್ಷಿಣಂ ಬ್ರಾಹ್ಮಣಸ್ಯ |
ಶುಕ್ಲಾತ್ಯಯೇ ಪೌರ್ಣಮಾಸ್ಯಾಮಿವೇಂದುಃ||
ವೈಶಂಪಾಯನನು ಹೇಳಿದನು: “ಗುರುವಿನ ಸಾಕ್ಷಾತ್ಕಾರದಲ್ಲಿ ವಿದ್ಯೆಯನ್ನು ಪಡೆದ ವಿಪ್ರನು ಅವನ ಹೊಟ್ಟೆಯನ್ನು ಸೀಳಿ ಹೊರಬಂದನು. ಶುಕ್ಲಪಕ್ಷದ ಪೂರ್ಣಿಮೆಯಂದು ಚಂದ್ರನು ಹೊರಬರುವಂತೆ ಸುಂದರ ಕಚನು ಬ್ರಾಹ್ಮಣನ ಬಲಭಾಗದಿಂದ ಹೊರಬಂದನು.
01071050a ದೃಷ್ಟ್ವಾ ಚ ತಂ ಪತಿತಂ ಬ್ರಹ್ಮರಾಶಿಂ|
ಉತ್ಥಾಪಯಾಮಾಸ ಮೃತಂ ಕಚೋಽಪಿ||
01071050c ವಿದ್ಯಾಂ ಸಿದ್ಧಾಂ ತಾಮವಾಪ್ಯಾಭಿವಾದ್ಯ |
ತತಃ ಕಚಸ್ತಂ ಗುರುಮಿತ್ಯುವಾಚ||
ಕೆಳಗೆ ಬಿದ್ದಿದ್ದ ಆ ಬ್ರಹ್ಮರಾಶಿಯನ್ನು ನೋಡಿ ಕಚನು ತಾನು ಆಗಲೇ ಪಡೆದಿದ್ದ ವಿದ್ಯಸಿದ್ಧಿಯನ್ನು ಬಳಸಿ ಮೃತನನ್ನು ಪುನಃ ಎಬ್ಬಿಸಿದನು. ಆಗ ಕಚನು ಗುರುವನ್ನು ನಮಸ್ಕರಿಸಿ ಹೇಳಿದನು:
01071051a ಋತಸ್ಯ ದಾತಾರಮನುತ್ತಮಸ್ಯ |
ನಿಧಿಂ ನಿಧೀನಾಂ ಚತುರನ್ವಯಾನಾಂ||
01071051c ಯೇ ನಾದ್ರಿಯಂತೇ ಗುರುಮರ್ಚನೀಯಂ |
ಪಾಪಾಽಲ್ಲೋಕಾಂಸ್ತೇ ವ್ರಜಂತ್ಯಪ್ರತಿಷ್ಠಾನ್||
“ಅನುತ್ತಮ ಜ್ಞಾನವನ್ನು ನೀಡುವ, ಚತುರಾನ್ವಯ ನಿಧಿಗಳ ನಿಧಿ, ಅರ್ಚನೀಯ ಗುರುವನ್ನು ನಿಂದಿಸುವವನು ನಿಜವಾಗಿಯೂ ಪಾಪಲೋಕವನ್ನು ಪಡೆಯುತ್ತಾನೆ.””
01071052 ವೈಶಂಪಾಯನ ಉವಾಚ|
01071052a ಸುರಾಪಾನಾದ್ವಂಚನಾಂ ಪ್ರಾಪಯಿತ್ವಾ |
ಸಂಜ್ಞಾನಾಶಂ ಚೈವ ತಥಾತಿಘೋರಂ||
01071052c ದೃಷ್ಟ್ವಾ ಕಚಂ ಚಾಪಿ ತಥಾಭಿರೂಪಂ |
ಪೀತಂ ತದಾ ಸುರಯಾ ಮೋಹಿತೇನ||
01071053a ಸಮನ್ಯುರುತ್ಥಾಯ ಮಹಾನುಭಾವಃ|
ತದೋಶನಾ ವಿಪ್ರಹಿತಂ ಚಿಕೀರ್ಷುಃ||
01071053c ಕಾವ್ಯಃ ಸ್ವಯಂ ವಾಕ್ಯಮಿದಂ ಜಗಾದ |
ಸುರಾಪಾನಂ ಪ್ರತಿ ವೈ ಜಾತಶಂಕಃ||
ವೈಶಂಪಾಯನನು ಹೇಳಿದನು: “ಸುರಾಪಾನದಿಂದ ವಂಚಿತನಾದ, ಅದರಿಂದಾದ ಘೋರ ಪರಿಣಾಮಗಳನ್ನೂ ಪ್ರಜ್ಞಾಹರಣವನ್ನೂ ನೋಡಿದ, ತನ್ನ ಸುಂದರ ದೇಹವನ್ನು ಹೊತ್ತು ಹೊರಬಂದ ಕಚನನ್ನು ನೋಡಿ, ಅವನನ್ನು ಮದ್ಯದ ನಶೆಯಲ್ಲಿ ತಿಳಿಯದೇ ಕುಡಿದಿದ್ದುದನ್ನು ನೋಡಿ, ಆ ಮಹಾನುಭಾವನು ಕೋಪಗೊಂಡು, ವಿಪ್ರರ ಹಿತಕ್ಕಾಗಿ ಸ್ವಯಂ ಕಾವ್ಯನು ಜಗತ್ತಿಗೇ ಸುರಾಪಾನದ ವಿರುದ್ಧ ಉದ್ಗರಿಸಿ ಹೇಳಿದನು.
01071054a ಯೋ ಬ್ರಾಹ್ಮಣೋಽದ್ಯ ಪ್ರಭೃತೀಹ ಕಶ್ಚಿನ್|
ಮೋಹಾತ್ಸುರಾಂ ಪಾಸ್ಯತಿ ಮಂದಬುದ್ಧಿಃ||
01071054c ಅಪೇತಧರ್ಮೋ ಬ್ರಹ್ಮಹಾ ಚೈವ ಸ ಸ್ಯಾದ್|
ಅಸ್ಮಿಽಲ್ಲೋಕೇ ಗರ್ಹಿತಃ ಸ್ಯಾತ್ಪರೇ ಚ||
“ಇಂದಿನಿಂದ ಯಾವ ಬ್ರಾಹ್ಮಣನು ಆಸೆಯಿಂದ ಬುದ್ಧಿಯಿಲ್ಲದೇ ಮದ್ಯವನ್ನು ಸೇವಿಸುತ್ತಾನೋ ಅವನು ಬ್ರಹ್ಮಹತ್ಯೆಯ ಪಾಪವನ್ನು ಪಡೆದು ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ತಿರಸ್ಕರಿಸಲ್ಪಡುತ್ತಾನೆ.
01071055a ಮಯಾ ಚೇಮಾಂ ವಿಪ್ರಧರ್ಮೋಕ್ತಿಸೀಮಾಂ|
ಮರ್ಯಾದಾಂ ವೈ ಸ್ಥಾಪಿತಾಂ ಸರ್ವಲೋಕೇ||
01071055c ಸಂತೋ ವಿಪ್ರಾಃ ಶುಶ್ರುವಾಂಸೋ ಗುರೂಣಾಂ |
ದೇವಾ ಲೋಕಾಶ್ಚೋಪಶೃಣ್ವಂತು ಸರ್ವೇ||
ಈ ರೀತಿ ನಾನು ವಿಪ್ರಧರ್ಮದ ಸೀಮಾರೇಖೆಯನ್ನು ಎಳೆಯುತ್ತಿದ್ದೇನೆ. ಈ ಮರ್ಯಾದೆಯು ಸರ್ವಲೋಕದಲ್ಲಿಯೂ ಸ್ಥಾಪಿತಗೊಳ್ಳಲಿ. ಸಂತ ಬ್ರಾಹ್ಮಣರು, ಗುರುಗಳ ಸೇವೆಮಾಡುವವರು, ದೇವತೆಗಳು ಮತ್ತು ಲೋಕದಲ್ಲಿ ಎಲ್ಲರೂ ಇದನ್ನು ಕೇಳಲಿ.”
01071056a ಇತೀದಮುಕ್ತ್ವಾ ಸ ಮಹಾನುಭಾವಃ|
ತಪೋನಿಧೀನಾಂ ನಿಧಿರಪ್ರಮೇಯಃ||
01071056c ತಾನ್ದಾನವಾನ್ದೈವವಿಮೂದಬುದ್ಧೀನ್|
ಇದಂ ಸಮಾಹೂಯ ವಚೋಽಭ್ಯುವಾಚ||
ಈ ರೀತಿ ಹೇಳಿದ ಆ ತಪೋನಿಧಿಗಳ ಅಪ್ರಮೇಯ ನಿಧಿ ಮಹಾನುಭಾವನು ದೈವಕಾರಣದಿಂದ ವಿಮೂಢರಾಗಿದ್ದ ದಾನವರನ್ನು ತನ್ನಲ್ಲಿಗೆ ಕರೆಯಿಸಿ ಈ ಮಾತುಗಳನ್ನಾಡಿದನು:
01071057a ಆಚಕ್ಷೇ ವೋ ದಾನವಾ ಬಾಲಿಶಾಃ ಸ್ಥ|
ಸಿದ್ಧಃ ಕಚೋ ವತ್ಸ್ಯತಿ ಮತ್ಸಕಾಶೇ||
01071057c ಸಂಜೀವನೀಂ ಪ್ರಾಪ್ಯ ವಿದ್ಯಾಂ ಮಹಾರ್ಥಾಂ|
ತುಲ್ಯಪ್ರಭಾವೋ ಬ್ರಹ್ಮಣಾ ಬ್ರಹ್ಮಭೂತಃ||
“ಬಾಲಿಶರಂತೆ ನಿಂತಿರುವ ದಾನವರೇ! ಕೇಳಿ. ಕಚನು ನನ್ನ ಮಗನಾಗಿ ನನ್ನ ಬಳಿಯಲ್ಲಿಯೇ ಇರುವುದು ಸಿದ್ಧ. ನನ್ನಿಂದ ಸಂಜೀವಿನೀ ವಿದ್ಯೆಯನ್ನು ಪಡೆದು ಈ ಬ್ರಾಹ್ಮಣನು ತನ್ನ ಪ್ರಭಾವದಲ್ಲಿ ಬ್ರಹ್ಮನ ಸರಿಸಾಟಿಯಾಗಿದ್ದಾನೆ.”
01071058a ಗುರೋರುಷ್ಯ ಸಕಾಶೇ ತು ದಶ ವರ್ಷಶತಾನಿ ಸಃ|
01071058c ಅನುಜ್ಞಾತಃ ಕಚೋ ಗಂತುಮಿಯೇಷ ತ್ರಿದಶಾಲಯಂ||
ಒಂದು ಸಾವಿರ ವರುಷಗಳ ಕಾಲ ತನ್ನ ಗುರುವಿನಲ್ಲಿಯೇ ಇದ್ದ ಕಚನು ಗುರುವಿನ ಅನುಜ್ಞೆಯನ್ನು ಪಡೆದು ಸ್ವರ್ಗಲೋಕಕ್ಕೆ ಹೋಗಲು ಸಿದ್ಧತೆಗಳನ್ನು ಮಾಡಿದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಏಕಸಪ್ತತಿತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತೊಂದನೆಯ ಅಧ್ಯಾಯವು.
