ಆದಿ ಪರ್ವ: ಆಸ್ತೀಕ ಪರ್ವ
Contents
Toggle೪೫
ಜನಮೇಜಯನಿಗೆ ತಂದೆ ಪರಿಕ್ಷಿತನ ಸಾವಿನ ಕುರಿತ ವರದಿ (೧-೨೫).
01045001 ಶೌನಕ ಉವಾಚ
01045001a ಯದಪೃಚ್ಛತ್ತದಾ ರಾಜಾ ಮಂತ್ರಿಣೋ ಜನಮೇಜಯಃ|
01045001c ಪಿತುಃ ಸ್ವರ್ಗಗತಿಂ ತನ್ಮೇ ವಿಸ್ತರೇಣ ಪುನರ್ವದ||
ಶೌನಕನು ಹೇಳಿದನು: “ರಾಜ ಜನಮೇಜಯನು ತನ್ನ ತಂದೆಯ ಸ್ವರ್ಗಗತಿಯಬಗ್ಗೆ ಮಂತ್ರಿಗಳೊಂದಿಗೆ ಏನನ್ನು ಕೇಳಿದನು ಎನ್ನುವುದನ್ನು ಪುನಃ ನನಗೆ ವಿಸ್ತಾರವಾಗಿ ಹೇಳು.”
01045002 ಸೂತ ಉವಾಚ
01045002a ಶೃಣು ಬ್ರಹ್ಮನ್ಯಥಾ ಪೃಷ್ಟಾ ಮಂತ್ರಿಣೋ ನೃಪತೇಸ್ತದಾ|
01045002c ಆಖ್ಯಾತವಂತಸ್ತೇ ಸರ್ವೇ ನಿಧನಂ ತತ್ಪರಿಕ್ಷಿತಃ||
ಸೂತನು ಹೇಳಿದನು: “ಬ್ರಾಹ್ಮಣ! ಪರಿಕ್ಷಿತನ ನಿಧನದ ಕುರಿತು ನೃಪತಿಯು ಮಂತ್ರಿಗಳಲ್ಲಿ ಏನನ್ನು ಕೇಳಿದನು ಮತ್ತು ಅವರು ಅವನಿಗೆ ಏನನ್ನು ಹೇಳಿದರು ಎನ್ನುವುದನ್ನು ಕೇಳು.
01045003 ಜನಮೇಜಯ ಉವಾಚ
01045003a ಜಾನಂತಿ ತು ಭವಂತಸ್ತದ್ಯಥಾವೃತ್ತಃ ಪಿತಾ ಮಮ|
01045003c ಆಸೀದ್ಯಥಾ ಚ ನಿಧನಂ ಗತಃ ಕಾಲೇ ಮಹಾಯಶಾಃ||
ಜನಮೇಜಯನು ಹೇಳಿದನು: “ನನ್ನ ತಂದೆ ಮಹಾಯಶಸ್ವಿಯು ಹೇಗಿದ್ದ ಮತ್ತು ಅವನು ಹೇಗೆ ಸಾವನ್ನಪ್ಪಿದ ಎನ್ನುವುದನ್ನು ನೀವು ಯಥಾವತ್ತಾಗಿ ತಿಳಿದಿದ್ದೀರಿ.
01045004a ಶ್ರುತ್ವಾ ಭವತ್ಸಕಾಶಾದ್ಧಿ ಪಿತುರ್ವೃತ್ತಮಶೇಷತಃ|
01045004c ಕಲ್ಯಾಣಂ ಪ್ರತಿಪತ್ಸ್ಯಾಮಿ ವಿಪರೀತಂ ನ ಜಾತು ಚಿತ್||
ತಂದೆಯ ಕುರಿತು ಎಲ್ಲವನ್ನೂ ನಿಮ್ಮಿಂದ ಕೇಳಿದ ನಂತರವೇ ಯಾವುದು ಕಲ್ಯಾಣಕರವಾದುದೋ ಅದನ್ನು ಮಾಡುತ್ತೇನೆ. ಅನ್ಯಥಾ ಇಲ್ಲ.””
01045005 ಸೂತ ಉವಾಚ
01045005a ಮಂತ್ರಿಣೋಽಥಾಬ್ರುವನ್ವಾಕ್ಯಂ ಪೃಷ್ಟಾಸ್ತೇನ ಮಹಾತ್ಮನಾ|
01045005c ಸರ್ವಧರ್ಮವಿದಃ ಪ್ರಾಜ್ಞಾ ರಾಜಾನಂ ಜನಮೇಜಯಂ||
ಸೂತನು ಹೇಳಿದನು: “ಆ ಮಾಹಾತ್ಮ ರಾಜ ಜನಮೇಜಯನ ಮಾತುಗಳನ್ನು ಕೇಳಿದ ಸರ್ವ ಧರ್ಮವಿದ ಪ್ರಾಜ್ಞ ಮಂತ್ರಿಗಳು ಹೇಳಿದರು:
01045006a ಧರ್ಮಾತ್ಮಾ ಚ ಮಹಾತ್ಮಾ ಚ ಪ್ರಜಾಪಾಲಃ ಪಿತಾ ತವ|
01045006c ಆಸೀದಿಹ ಯಥಾವೃತ್ತಃ ಸ ಮಹಾತ್ಮಾ ಶೃಣುಷ್ವ ತತ್||
“ನಿನ್ನ ತಂದೆಯು ಧರ್ಮಾತ್ಮನೂ, ಮಹಾತ್ಮನೂ, ಪ್ರಜಾಪಾಲಕನೂ ಆಗಿದ್ದನು. ಆ ಮಹಾತ್ಮನು ಹೇಗೆ ನಡೆದುಕೊಳ್ಳುತ್ತಿದ್ದನು ಎನ್ನುವುದನ್ನು ಕೇಳು.
01045007a ಚಾತುರ್ವರ್ಣ್ಯಂ ಸ್ವಧರ್ಮಸ್ಥಂ ಸ ಕೃತ್ವಾ ಪರ್ಯರಕ್ಷತ|
01045007c ಧರ್ಮತೋ ಧರ್ಮವಿದ್ರಾಜಾ ಧರ್ಮೋ ವಿಗ್ರಹವಾನಿವ||
ಸ್ವಧರ್ಮದಲ್ಲಿ ನಿಷ್ಠನಾಗಿದ್ದು ನಾಲ್ಕೂವರ್ಣದವರನ್ನು ರಕ್ಷಿಸುತ್ತಿದ್ದನು. ರಾಜನು ಧರ್ಮನಂತೆಯೇ ಧರ್ಮವತ್ತಾಗಿ ಧಾರ್ಮಿಕನಾಗಿದ್ದನು.
01045008a ರರಕ್ಷ ಪೃಥಿವೀಂ ದೇವೀಂ ಶ್ರೀಮಾನತುಲವಿಕ್ರಮಃ|
01045008c ದ್ವೇಷ್ಟಾರಸ್ತಸ್ಯ ನೈವಾಸನ್ಸ ಚ ನ ದ್ವೇಷ್ಟಿ ಕಂಚನ|
01045008e ಸಮಃ ಸರ್ವೇಷು ಭೂತೇಷು ಪ್ರಜಾಪತಿರಿವಾಭವತ್||
ಶ್ರೀಮಂತನೂ ಅತುಲ ವಿಕ್ರಮಿಯೂ ಆದ ಅವನು ಪೃಥ್ವೀ ದೇವಿಯನ್ನು ರಕ್ಷಿಸುತ್ತಿದ್ದನು. ಅವನಿಗೆ ಯಾರ ಮೇಲೂ ದ್ವೇಷವಿರಲಿಲ್ಲ ಮತ್ತು ಯಾರೂ ಅವನನ್ನು ದ್ವೇಷಿಸುತ್ತಿರಲಿಲ್ಲ. ಪ್ರಜಾಪತಿಯಂತೆ ಸರ್ವರನ್ನೂ ಒಂದೇಸಮನಾಗಿ ಕಾಣುತ್ತಿದ್ದನು.
01045009a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚೈವ ಸ್ವಕರ್ಮಸು|
01045009c ಸ್ಥಿತಾಃ ಸುಮನಸೋ ರಾಜಂಸ್ತೇನ ರಾಜ್ಞಾ ಸ್ವನುಷ್ಠಿತಾಃ||
ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರೆಲ್ಲರೂ ತಮ್ಮ ತಮ್ಮ ಕರ್ಮಗಳಲ್ಲಿ ನಿರತರಾಗಿದ್ದು, ಸುಖಮನಸ್ಕರಾಗಿ, ರಾಜನ ರಾಜ್ಯಭಾರದಿಂದ ಸುರಕ್ಷಿತರಾಗಿದ್ದರು.
01045010a ವಿಧವಾನಾಥಕೃಪಣಾನ್ವಿಕಲಾಂಶ್ಚ ಬಭಾರ ಸಃ|
01045010c ಸುದರ್ಶಃ ಸರ್ವಭೂತಾನಾಮಾಸೀತ್ಸೋಮ ಇವಾಪರಃ||
ವಿಧವೆಯರ, ಅನಾಥರ ಮತ್ತು ಬಡವರ ಜೀವನ ಜವಾಬ್ದಾರಿಯನ್ನು ಹೊತ್ತ ಆ ಸುಂದರನು ಸರ್ವರಿಗೂ ಚಂದ್ರನಂತಿದ್ದನು.
01045011a ತುಷ್ಟಪುಷ್ಟಜನಃ ಶ್ರೀಮಾನ್ಸತ್ಯವಾಗ್ದೃಢವಿಕ್ರಮಃ|
01045011c ಧನುರ್ವೇದೇ ಚ ಶಿಷ್ಯೋಽಭೂನ್ನೃಪಃ ಶಾರದ್ವತಸ್ಯ ಸಃ||
ಜನರೆಲ್ಲರೂ ತುಷ್ಟಪುಷ್ಟರೂ, ಶ್ರೀಮಂತರೂ, ಸತ್ಯವಂತರೂ, ದೃಢವಿಕ್ರಮಿಗಳೂ ಆಗಿದ್ದರು. ಧನುರ್ವೇದದಲ್ಲಿ ನೃಪನು ಶಾರದ್ವತ ಕೃಪನ ಶಿಷ್ಯನಾಗಿದ್ದನು.
01045012a ಗೋವಿಂದಸ್ಯ ಪ್ರಿಯಶ್ಚಾಸೀತ್ಪಿತಾ ತೇ ಜನಮೇಜಯ|
01045012c ಲೋಕಸ್ಯ ಚೈವ ಸರ್ವಸ್ಯ ಪ್ರಿಯ ಆಸೀನ್ಮಹಾಯಶಾಃ||
ಜನಮೇಜಯ! ಗೋವಿಂದನ ಪ್ರಿಯಕರನಾಗಿದ್ದ ನಿನ್ನ ತಂದೆಯು ಲೋಕದಲ್ಲಿ ಸರ್ವರ ಪ್ರಿಯಕರನಾಗಿ ಮಹಾ ಯಶಸ್ವಿಯಾಗಿದ್ದನು.
01045013a ಪರಿಕ್ಷೀಣೇಷು ಕುರುಷು ಉತ್ತರಾಯಾಮಜಾಯತ|
01045013c ಪರಿಕ್ಷಿದಭವತ್ತೇನ ಸೌಭದ್ರಸ್ಯಾತ್ಮಜೋ ಬಲೀ||
ಕುರುಗಳ ಪರಿಕ್ಷೀಣವಾದಾಗ ಉತ್ತರೆಯಲ್ಲಿ ಹುಟ್ಟಿದ ಆ ಅಭಿಮನ್ಯುವಿನ ಬಲಶಾಲಿ ಮಗನನ್ನು ಪರಿಕ್ಷಿತ ಎಂದು ಕರೆದಿದ್ದರು.
01045014a ರಾಜಧರ್ಮಾರ್ಥಕುಶಲೋ ಯುಕ್ತಃ ಸರ್ವಗುಣೈರ್ನೃಪಃ|
01045014c ಜಿತೇಂದ್ರಿಯಶ್ಚಾತ್ಮವಾಂಶ್ಚ ಮೇಧಾವೀ ವೃದ್ಧಸೇವಿತಃ||
ರಾಜಧರ್ಮಾರ್ಥ ಕುಶಲನಾಗಿದ್ದ ಆ ರಾಜನು ಸರ್ವಗುಣ ಸಂಪನ್ನನೂ, ಸ್ವತಃ ಜಿತೇಂದ್ರಿಯನೂ, ಮೇಧಾವಿಯೂ, ವೃದ್ಧರ ಸೇವನಿರತನೂ ಆಗಿದ್ದನು.
01045015a ಷಢ್ವರ್ಗವಿನ್ಮಹಾಬುದ್ಧಿರ್ನೀತಿಧರ್ಮವಿದುತ್ತಮಃ|
01045015c ಪ್ರಜಾ ಇಮಾಸ್ತವ ಪಿತಾ ಷಷ್ಟಿಂ ವರ್ಷಾಣ್ಯಪಾಲಯತ್|
01045015e ತತೋ ದಿಷ್ಟಾಂತಮಾಪನ್ನಃ ಸರ್ಪೇಣಾನತಿವರ್ತಿತಂ||
ಷಡ್ವರ್ಗಗುಣಯುಕ್ತನಾದ ಮಹಾಬುದ್ಧಿಶಾಲಿಯೂ, ನೀತಿಧರ್ಮ ವಿದುತ್ತಮನೂ ಆದ ನಿನ್ನ ತಂದೆಯು ಅರವತ್ತು ವರ್ಷಗಳ ಕಾಲ ಪ್ರಜಾಪಾಲನೆಯನ್ನು ಮಾಡಿದನು. ನಂತರ ಅವನಿಗೆ ಒಂದು ಸರ್ಪದಿಂದ ತಡೆಗಟ್ಟಲಾಗದಂಥಹ ಆಪತ್ತು ಸಂಭವಿಸಿತು.
01045016a ತತಸ್ತ್ವಂ ಪುರುಷಶ್ರೇಷ್ಠ ಧರ್ಮೇಣ ಪ್ರತಿಪೇದಿವಾನ್|
01045016c ಇದಂ ವರ್ಷಸಹಸ್ರಾಯ ರಾಜ್ಯಂ ಕುರುಕುಲಾಗತಂ|
01045016e ಬಾಲ ಏವಾಭಿಜಾತೋಽಸಿ ಸರ್ವಭೂತಾನುಪಾಲಕಃ||
ಅವನ ನಂತರ ಪುರುಷಶ್ರೇಷ್ಠನಾದ ನೀನು ಸಹಸ್ರಾರು ವರ್ಷಗಳಿಂದ ಕುರುಕುಲಾಗತವಾಗಿದ್ದ ಈ ರಾಜ್ಯವನ್ನು ಧರ್ಮಪೂರ್ವಕವಾಗಿ ಪಡೆದೆ. ಸರ್ವಭೂತಾನುಪಾಲಕ! ನೀನು ಬಾಲಕನಾಗಿರುವಾಗಲೇ ನಿನ್ನನ್ನು ಅಭಿಷಿಕ್ತನನ್ನಾಗಿ ಮಾಡಲಾಗಿತ್ತು.”
01045017 ಜನಮೇಜಯ ಉವಾಚ
01045017a ನಾಸ್ಮಿನ್ಕುಲೇ ಜಾತು ಬಭೂವ ರಾಜಾ
ಯೋ ನ ಪ್ರಜಾನಾಂ ಹಿತಕೃತ್ಪ್ರಿಯಶ್ಚ|
01045017c ವಿಶೇಷತಃ ಪ್ರೇಕ್ಷ್ಯ ಪಿತಾಮಹಾನಾಂ
ವೃತ್ತಂ ಮಹದ್ವೃತ್ತಪರಾಯಣಾನಾಂ||
ಜನಮೇಜಯನು ಹೇಳಿದನು: “ಪ್ರಜೆಗಳ ಹಿತವನ್ನಾಗಲೀ ಅವರಿಗೆ ಬೇಕಾಗಿದ್ದುದನ್ನಾಗಲೀ ಮಾಡದೇ ಇದ್ದ ರಾಜರು ಯಾರೂ ನನ್ನ ಈ ಕುಲದಲ್ಲಿ ಹುಟ್ಟಲಿಲ್ಲ. ವಿಶೇಷವಾಗಿ ನನ್ನ ಪಿತಾಮಹರು ಮಹಾ ಕಾರ್ಯಗಳನ್ನೆಸಗಿದವರು.
01045018a ಕಥಂ ನಿಧನಮಾಪನ್ನಃ ಪಿತಾ ಮಮ ತಥಾವಿಧಃ|
01045018c ಆಚಕ್ಷಧ್ವಂ ಯಥಾವನ್ಮೇ ಶ್ರೋತುಮಿಚ್ಛಾಮಿ ತತ್ತ್ವತಃ||
ಹೀಗಿರುವಾಗ ನನ್ನ ತಂದೆಯಾದರೋ ಹೇಗೆ ಸಾವೆಂಬ ಆಪತ್ತಿಗೆ ಒಳಗಾದನು? ನನಗೆ ವಿವರಿಸಿ. ಯಥಾವತ್ತಾಗಿ ಕೇಳಲು ಬಯಸುತ್ತೇನೆ.””
01045019 ಸೂತ ಉವಾಚ
01045019a ಏವಂ ಸಂಚೋದಿತಾ ರಾಜ್ಞಾ ಮಂತ್ರಿಣಸ್ತೇ ನರಾಧಿಪಂ|
01045019c ಊಚುಃ ಸರ್ವೇ ಯಥಾವೃತ್ತಂ ರಾಜ್ಞಃ ಪ್ರಿಯಹಿತೇ ರತಾಃ||
ಸೂತನು ಹೇಳಿದನು: “ಈ ರೀತಿ ರಾಜನಿಂದ ಆಜ್ಞೆಯಾದಾಗ ಮಂತ್ರಿಗಳು ಪ್ರಿಯಹಿತ ನಿರತ ರಾಜ ನರಾಧಿಪನಿಗೆ ಎಲ್ಲವನ್ನೂ ವರದಿಮಾಡಿದರು.
01045020a ಬಭೂವ ಮೃಗಯಾಶೀಲಸ್ತವ ರಾಜನ್ಪಿತಾ ಸದಾ|
01045020c ಯಥಾ ಪಾಂಡುರ್ಮಹಾಭಾಗೋ ಧನುರ್ಧರವರೋ ಯುಧಿ|
01045020e ಅಸ್ಮಾಸ್ವಾಸಜ್ಯ ಸರ್ವಾಣಿ ರಾಜಕಾರ್ಯಾಣ್ಯಶೇಷತಃ||
“ರಾಜನ್! ಯುದ್ಧದಲ್ಲಿ ಮಹಾಭಾಗ ಪಾಂಡುವಿನಂತೆ ಶ್ರೇಷ್ಠ ಧನುರ್ಧರನಾದ ನಿನ್ನ ತಂದೆಯು ಸದಾ ಮೃಗಯಾಶೀಲನಾಗಿ ರಾಜಕಾರ್ಯಗಳೊಂದನ್ನೂ ಬಿಡದೇ ಎಲ್ಲವನ್ನು ನಮಗೊಪ್ಪಿಸಿದ್ದನು.
01045021a ಸ ಕದಾ ಚಿದ್ವನಚರೋ ಮೃಗಂ ವಿವ್ಯಾಧ ಪತ್ರಿಣಾ|
01045021c ವಿದ್ಧ್ವಾ ಚಾನ್ವಸರತ್ತೂರ್ಣಂ ತಂ ಮೃಗಂ ಗಹನೇ ವನೇ||
01045022a ಪದಾತಿರ್ಬದ್ಧನಿಸ್ತ್ರಿಂಶಸ್ತತಾಯುಧಕಲಾಪವಾನ್|
01045022c ನ ಚಾಸಸಾದ ಗಹನೇ ಮೃಗಂ ನಷ್ಟಂ ಪಿತಾ ತವ||
ಒಮ್ಮೆ ಅವನು ವನದಲ್ಲಿ ಸಂಚರಿಸುತ್ತಿದ್ದ ಮೃಗವೊಂದನ್ನು ಬಾಣದಿಂದ ಹೊಡೆದು, ಖಡ್ಗ ಮತ್ತು ಧನುಸ್ಸು ಭತ್ತಳಿಗೆಗಳನ್ನು ಹಿಡಿದು ಕಾಲ್ನಡುಗೆಯಲ್ಲಿಯೇ ಹೊಡೆತ ತಿಂದ ಮೃಗವನ್ನು ಆ ದಟ್ಟಡವಿಯಲ್ಲಿ ಹಿಂಬಾಲಿಸುತ್ತಾ ಹೋದನು. ಆದರೆ ನಿನ್ನ ತಂದೆಗೆ ಆ ಮೃಗವು ದೊರೆಯಲೇ ಇಲ್ಲ.
01045023a ಪರಿಶ್ರಾಂತೋ ವಯಃಸ್ತಶ್ಚ ಷಷ್ಟಿವರ್ಷೋ ಜರಾನ್ವಿತಃ|
01045023c ಕ್ಷುಧಿತಃ ಸ ಮಹಾರಣ್ಯೇ ದದರ್ಶ ಮುನಿಮಂತಿಕೇ||
ಅರವತ್ತು ವರ್ಷ ವಯಸ್ಸಿನ ವೃದ್ಧನಾಗಿದ್ದ ಅವನು ಆಯಾಸಗೊಂಡು ಹಸಿವು ಬಾಯಾರಿಕೆಗಳಿಂದ ಬಳಲಿ, ಆ ಮಹಾರಣ್ಯದಲ್ಲಿ ಓರ್ವ ಮುನಿಯನ್ನು ಕಂಡನು.
01045024a ಸ ತಂ ಪಪ್ರಚ್ಛ ರಾಜೇಂದ್ರೋ ಮುನಿಂ ಮೌನವ್ರತಾನ್ವಿತಂ|
01045024c ನ ಚ ಕಿಂ ಚಿದುವಾಚೈನಂ ಸ ಮುನಿಃ ಪೃಚ್ಛತೋಽಪಿ ಸನ್||
ಆ ಸಮಯದಲ್ಲಿ ಮೌನವ್ರತವನ್ನಾಚರಿಸುತ್ತಿದ್ದ ಆ ಮುನಿಯನ್ನು ರಾಜೇಂದ್ರನು ಕೇಳಿದನು. ಪುನಃ ಪುನಃ ಕೇಳಿದರೂ ಆ ಮುನಿಯು ಯಾವ ಉತ್ತರವನ್ನೂ ನೀಡಲಿಲ್ಲ.
01045025a ತತೋ ರಾಜಾ ಕ್ಷುಚ್ಛ್ರಮಾರ್ತಸ್ತಂ ಮುನಿಂ ಸ್ಥಾಣುವತ್ಸ್ಥಿತಂ|
01045025c ಮೌನವ್ರತಧರಂ ಶಾಂತಂ ಸದ್ಯೋ ಮನ್ಯುವಶಂ ಯಯೌ||
ಹಸಿವು ಬಾಯಾರಿಕೆಗಳಿಂದ ಬಳಲಿದ್ದ ರಾಜನು ಮೌನವ್ರತಧರನಾಗಿ ಶಾಂತವಾಗಿ ಅಲುಗಾಡದೇ ಕುಳಿತಿದ್ದ ಮುನಿಯನ್ನು ಕಂಡು ಸಿಟ್ಟಿಗೆದ್ದನು.
01045026a ನ ಬುಬೋಧ ಹಿ ತಂ ರಾಜಾ ಮೌನವ್ರತಧರಂ ಮುನಿಂ|
01045026c ಸ ತಂ ಮನ್ಯುಸಮಾವಿಷ್ಟೋ ಧರ್ಷಯಾಮಾಸ ತೇ ಪಿತಾ||
ಮುನಿಯು ಮೌನವ್ರತವನ್ನು ಪಾಲಿಸುತ್ತಿದ್ದಾನೆಂದು ತಿಳಿಯದೇ ನಿನ್ನ ತಂದೆ ರಾಜನು ಸಿಟ್ಟಿನ ಆವೇಶದಲ್ಲಿ ಅವನನ್ನು ಅಪಮಾನಿಸಿದನು.
01045027a ಮೃತಂ ಸರ್ಪಂ ಧನುಷ್ಕೋಟ್ಯಾ ಸಮುತ್ಕ್ಷಿಪ್ಯ ಧರಾತಲಾತ್|
01045027c ತಸ್ಯ ಶುದ್ಧಾತ್ಮನಃ ಪ್ರಾದಾತ್ಸ್ಕಂಧೇ ಭರತಸತ್ತಮ||
ಭರತಸತ್ತಮನು ತನ್ನ ಧನುಸ್ಸಿನ ತುದಿಯಿಂದ ನೆಲದ ಮೇಲೆ ಸತ್ತು ಬಿದ್ದಿದ್ದ ಸರ್ಪವನ್ನು ಮೇಲೆತ್ತಿ ಆ ಶುದ್ಧಾತ್ಮನ ಭುಜಗಳ ಮೇಲೆ ಹಾಕಿದನು.
01045028a ನ ಚೋವಾಚ ಸ ಮೇಧಾವೀ ತಮಥೋ ಸಾಧ್ವಸಾಧು ವಾ|
01045028c ತಸ್ಥೌ ತಥೈವ ಚಾಕ್ರುಧ್ಯನ್ಸರ್ಪಂ ಸ್ಕಂಧೇನ ಧಾರಯನ್||
ಆದರೂ ಆ ಮೇಧಾವಿಯು ಒಳ್ಳೆಯದಾಗಲೀ ಕೆಟ್ಟುದಾಗಲೀ ಒಂದು ಮಾತನ್ನೂ ಆಡಲಿಲ್ಲ. ಸರ್ಪವನ್ನು ತನ್ನ ಭುಜದ ಮೇಲೆ ಹೊತ್ತು ಹಾಗೆಯೇ ನಿಂತುಕೊಂಡಿದ್ದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಪಂಚಚತ್ವಾರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ನಲವತ್ತೈದನೆಯ ಅಧ್ಯಾಯವು.
