[spacer height="20px"]

ಹದಿಮೂರನೇ ದಿನದ ಯುದ್ಧ - ೧: ಅಭಿಮನ್ಯು ವಧೆ

ಚಕ್ರವ್ಯೂಹ ನಿರ್ಮಾಣ

ಅಮಿತೌಜಸ ಫಲ್ಗುನನು ಕೌರವರನ್ನು ಮೊದಲೇ ಭಗ್ನಗೊಳಿಸಿದ್ದನು. ಯುಧಿಷ್ಠಿರನನ್ನು ರಕ್ಷಿಸಿ ದ್ರೋಣನ ಸಂಕಲ್ಪವನ್ನು ಅಸಫಲಗೊಳಿಸಿದ್ದನು. ಕೌರವರೆಲ್ಲರೂ ಯುದ್ಧದಲ್ಲಿ ಸೋತು, ಕವಚಗಳನ್ನು ಕಳೆದುಕೊಂಡು ಧೂಳಿನಿಂತ ತುಂಬಿಕೊಂಡು, ತುಂಬಾ ಉದ್ವಿಗ್ನರಾಗಿ ದಿಕ್ಕು ದಿಕ್ಕುಗಳನ್ನು ನೋಡುತ್ತಿದ್ದರು. ಭಾರದ್ವಾಜನ ಸಮ್ಮತಿಯಂತೆ ಯುದ್ಧದಿಂದ ಹಿಂದಿರುಗಿದರು. ಅರ್ಜುನನ ಗುರಿಗೆ ಸಿಲುಕಿದ್ದ ಅವರು ರಣದಲ್ಲಿ ಶತ್ರುಗಳಿಂದ ದೀನರಾಗಿಸಿಕೊಂಡಿದ್ದರು ಮತ್ತು ಅವಹೇಳನಕ್ಕೊಳಗಾಗಿದ್ದರು. ಎಲ್ಲ ಭೂತಗಳು ಫಲ್ಗುನನ ಅಮಿತ ಗುಣಗಳನ್ನು ಮತ್ತು ಕೇಶವನ ಸೌಹಾರ್ದತೆಯನ್ನು ಶ್ಲಾಘಿಸುತ್ತಿದ್ದರು. ಅರ್ಜುನನ ಗುಣಗಾನವನ್ನೇ ಮಾಡುತ್ತಿದ್ದರು. ಕೌರವರು ಮಾತ್ರ ಕಳಂಕಿತರಾದವರಂತೆ ಧ್ಯಾನಮೂಕರಾಗಿದ್ದರು. ಆಗ ಪ್ರಭಾತಸಮಯದಲ್ಲಿ ಶತ್ರುಗಳ ಗೆಲುವಿನಿಂದ ಮನಸ್ಸು ಕೆಟ್ಟುಹೋಗಿ ಸಂರಬ್ಧನಾಗಿದ್ದ ವಾಕ್ಯಕೋವಿದ ದುರ್ಯೋಧನನು ಎಲ್ಲರಿಗೂ ಕೇಳುವಂತೆ ಪ್ರಣಯ ಮತ್ತು ಅಭಿಮಾನಗಳಿಂದ ದ್ರೋಣನಿಗೆ ಹೇಳಿದನು. “ಬ್ರಹ್ಮವಿತ್ತಮ! ನಾವೆಲ್ಲರೂ ನಿಮ್ಮ ಶತ್ರುಪಕ್ಷದಲ್ಲಿದ್ದೇವೆ ಎಂದು ತೋರುತ್ತದೆ. ಆದುದರಿಂದಲೇ ಯುಧಿಷ್ಠರನು ಸಮೀಪದಲ್ಲಿ ದೊರಕಿದ್ದರೂ ಅವನನ್ನು ನೀವು ಸೆರೆಹಿಡಿಯಲಿಲ್ಲ! ನೀವು ಬಯಸಿದರೆ ರಣದಲ್ಲಿ ನಿಮ್ಮ ಕಣ್ಣಿಗೆ ಸಿಲುಕಿದ ಯಾವ ಶತ್ರುವೂ ಅಮರರಿಂದಾಗಲೀ ಪಾಂಡವರಿಂದಾಗಲೀ ರಕ್ಷಿಸಲ್ಪಡುತ್ತಿದ್ದರೂ ನಿಮ್ಮಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ. ನನ್ನ ಮೇಲೆ ಪ್ರೀತರಾಗಿ ವರವನ್ನಿತ್ತು ನಂತರ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದೀರಿ. ಆರ್ಯರು ಎಂದೂ ಭಕ್ತರ ಆಶಾಭಂಗವನ್ನು ಎಸಗುವುದಿಲ್ಲ.”

ಆಗ ಅಪ್ರೀತನಾಗಿ ಭಾರದ್ವಾಜನು ನೃಪನಿಗೆ ಹೇಳಿದನು: “ನಿನಗೋಸ್ಕರವಾಗಿ ಸರ್ವ ಪ್ರಯತ್ನಮಾಡಿ ದುಡಿಯುತ್ತಿದ್ದವನ ಕುರಿತು ಹಾಗೆ ಆಲೋಚಿಸುವುದು ಸರಿಯಲ್ಲ. ರಣದಲ್ಲಿ ಕಿರೀಟಿಯಿಂದ ಪಾಲಿತನಾದವನನ್ನು ಜಯಿಸಲು ಲೋಕದಲ್ಲಿ ಸುರಾಸುರಗಂಧರ್ವರಿಗೂ ಯಕ್ಷೋರಗರಾಕ್ಷಸರಿಗೂ ಸಾಧ್ಯವಿಲ್ಲ. ಎಲ್ಲಿ ವಿಶ್ವದ ಸೃಷ್ಟಿಕರ್ತ ಗೋವಿಂದನಿದ್ದಾನೋ ಎಲ್ಲಿ ಸೇನಾಧಿಪತಿ ಅರ್ಜುನನಿದ್ದಾನೋ ಅಲ್ಲಿ ಪ್ರಭು ತ್ರ್ಯಂಬಕನ ಬಲವನ್ನು ಬಿಟ್ಟು ಬೇರೆ ಯಾರ ಬಲವು ತಾನೇ ನಾಟೀತು? ಇಂದು ನಾನು ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಇದು ಅನ್ಯಥಾ ಆಗುವುದಿಲ್ಲ ಎಂದು ತಿಳಿ. ಇಂದು ನಾನು ಓರ್ವ ಮುಖ್ಯ ವೀರ ಮಹಾರಥನನ್ನು ಕೆಡವುತ್ತೇನೆ. ಅದಕ್ಕಾಗಿ ನಾನು ದೇವತೆಗಳಿಗೂ ಅಭೇದ್ಯವಾದ ವ್ಯೂಹವನ್ನು ರಚಿಸುತ್ತೇನೆ. ಆದರೆ ಯಾವುದಾದರೂ ಉಪಾಯದಿಂದ ನೀನು ಅರ್ಜುನನನ್ನು ಬೇರೆಕಡೆ ಒಯ್ಯಬೇಕು. ಏಕೆಂದರೆ ಅವನಿಗೆ ಯುದ್ಧದ ವಿಷಯದಲ್ಲಿ ತಿಳಿಯದೇ ಇದ್ದುದು ಮತ್ತು ಅಸಾಧ್ಯವಾದುದು ಯಾವುದೂ ಇಲ್ಲ. ಅವನು ಸೇನೆಗಳ ಕುರಿತು ಸರ್ವ ಜ್ಞಾನವನ್ನೂ ಇಲ್ಲಿಂದ ಮತ್ತು ಬೇರೆಕಡೆಗಳಿಂದ ಪಡೆದುಕೊಂಡಿದ್ದಾನೆ.”

ದ್ರೋಣನು ಹೀಗೆ ಹೇಳಲು ಪುನಃ ಸಂಶಪ್ತಕಗಣಗಳು ರಣದ ದಕ್ಷಿಣಭಾಗಕ್ಕೆ ಅರ್ಜುನನನ್ನು ಯುದ್ಧಕ್ಕೆ ಆಹ್ವಾನಿಸಿದರು. ಅಲ್ಲಿ ಅರ್ಜುನ ಮತ್ತು ಶತ್ರುಗಳ ನಡುವೆ ಎಲ್ಲಿಯೂ ಎಂದೂ ಕಂಡು-ಕೇಳಿರದಂತಹ ಕಾಳಗವು ನಡೆಯಿತು. ಆಗ ದ್ರೋಣನು ಮಧ್ಯಾಹ್ನದ ಸೂರ್ಯನು ಸುಡುವಂತೆ ನೋಡಲೂ ಅಸಾದ್ಯವಾದ ವ್ಯೂಹವನ್ನು ರಚಿಸಿದನು. ಆಚಾರ್ಯರು ರಚಿಸಿದ ಚಕ್ರವ್ಯೂಹದಲ್ಲಿ ಇಂದ್ರಸಮಾನರಾದ ರಾಜರೆಲ್ಲರೂ ಪ್ರತಿಷ್ಠಿತರಾಗಿದ್ದರು. ಆಗ ಅಲ್ಲಿ ಎಲ್ಲ ಪ್ರತಿಜ್ಞೆಮಾಡಿದ್ದ, ಸುವರ್ಣವಿಕೃತದ್ವಜರಾದ ರಾಜಪುತ್ರರ ಒಕ್ಕೂಟವು ಸೇರಿತ್ತು. ಎಲ್ಲರೂ ಕೆಂಪು ವಸ್ತ್ರಗಳನ್ನು ಧರಿಸಿದ್ದರು. ಎಲ್ಲರೂ ಕೆಂಪು ಆಭರಣಗಳನ್ನು ಧರಿಸಿದ್ದರು. ಎಲ್ಲರಿಗೂ ಕೆಂಪು ಧ್ವಜಗಳಿದ್ದವು. ಎಲ್ಲರೂ ಚಿನ್ನದ ಮಾಲೆಗಳನ್ನು ಧರಿಸಿದ್ದರು. ಧೃತರಾಷ್ಟ್ರನ ಮೊಮ್ಮಗ ಪ್ರಿಯದರ್ಶನ ಲಕ್ಷ್ಮಣನನ್ನು ಮುಂದೆ ಇರಿಸಿಕೊಂಡಿದ್ದ ಆ ದೃಢಧನ್ವಿಗಳ ಸಂಖ್ಯೆ ಹತ್ತುಸಾವಿರವಾಗಿತ್ತು. ಒಬ್ಬನಿಗಾಗುವ ದುಃಖವು ಎಲ್ಲರಿಗೂ ಸಮಾನವೆಂದು ಭಾವಿಸಿದ್ದರು. ಸಾಹಸದಲ್ಲಿ ಅನ್ಯೋನ್ಯರ ಸಮನಾಗಿದ್ದರು. ಅನ್ಯೋನ್ಯರೊಂದಿಗೆ ಸ್ಪರ್ಧಿಸುತ್ತಿದ್ದರು. ಮತ್ತು ಅನ್ಯೋನ್ಯರ ಹಿತಾಸಕ್ತಿಯುಳ್ಳವರಾಗಿದ್ದರು. ಕರ್ಣ-ದುಃಶಾಸನರಿಂದ ಮತ್ತು ಮಹಾರಥ ರಾಜರಿಂದ ಪರಿವೃತನಾಗಿ, ದೇವರಾಜನಂತಿದ್ದ ಶ್ರೀಮಾನ್ ಶ್ವೇತಚತ್ರದಡಿಯಲ್ಲಿ, ಚಾಮರ ಬೀಸಣಿಗೆಗಳನ್ನು ಬೀಸುತ್ತಿರಲು, ಉದಯಿಸುತ್ತಿರುವ ಭಾಸ್ಕರನಂತೆ ಆ ಸೈನ್ಯದ ಪ್ರಮುಖ ನಾಯಕನಾಗಿ ದ್ರೋಣನು ವ್ಯವಸ್ಥಿತನಾಗಿದ್ದನು. ಅಲ್ಲಿ ಮೇರು ಪರ್ವತದಂತೆ ಶ್ರೀಮಾನ್ ಸಿಂಧುರಾಜನು ನಿಂತಿದ್ದನು. ಸಿಂಧುರಾಜನ ಪಕ್ಕದಲ್ಲಿ ಅಶ್ವತ್ಥಾಮನೇ ಮೊದಲಾದವರು ನಿಂತಿದ್ದರು. ದೇವ ಸನ್ನಿಭರಾದ ಧೃತರಾಷ್ಟ್ರನ ಮೂವತ್ತು ಮಕ್ಕಳೂ, ಜೂಜುಗಾರ ಗಾಂಧಾರರಾಜನೂ, ಮಹಾರಥ ಶಲ್ಯ-ಭೂರಿಶ್ರವರೂ ಸಿಂಧುರಾಜನ ಪಕ್ಕದಲ್ಲಿ ವಿರಾಜಮಾನರಾಗಿದ್ದರು.

ಅಭಿಮನ್ಯು ಪ್ರತಿಜ್ಞೆ

ಎದುರಿಸಲು ಅಸಾಧ್ಯವಾಗಿದ್ದ ಭಾರದ್ವಾಜನಿಂದ ರಕ್ಷಿತಗೊಂಡಿದ್ದ ಆ ಸೇನೆಯನ್ನು ಭೀಮಸೇನನನ್ನು ಮುಂದಿಟ್ಟುಕೊಂಡು ಪಾರ್ಥರು ಆಕ್ರಮಣಿಸಿದರು. ಕುಂತೀಭೋಜ, ದ್ರುಪದ, ಆರ್ಜುನಿ, ಕ್ಷತ್ರಧರ್ಮ, ಬೃಹತ್ಕ್ಷತ್ರ, ಧೃಷ್ಟಕೇತು, ಮಾದ್ರೀಪುತ್ರರಿಬ್ಬರು, ಘಟೋತ್ಕಚ, ಯುಧಾಮನ್ಯು, ಶಿಖಂಡೀ, ಉತ್ತಮೌಜ, ವಿರಾಟ, ದ್ರೌಪದೇಯರು, ಶೈಶುಪಾಲಿ, ಕೇಕಯರು, ಸಹಸ್ರಾರು ಸೃಂಜಯರು ಮತ್ತು ಇತರ ಅನ್ಯರು ಗಣಗಳೊಂದಿಗೆ ಕೃತಾಸ್ತ್ರರಾಗಿ ಯುದ್ಧದುರ್ಮದರಾಗಿ, ಯುದ್ಧಮಾಡಲು ಉತ್ಸುಕರಾಗಿ ಒಮ್ಮೆಲೇ ಭಾರದ್ವಾಜನನ್ನು ಆಕ್ರಮಣಿಸಿದರು. ಒಂದಾಗಿ ಬಂದ ಅವರೆಲ್ಲರನ್ನೂ ಭಾರದ್ವಾಜನು ಸಂಭ್ರಾಂತನಾಗದೇ ಮಹಾ ಶರಜಾಲಗಳಿಂದ ತಡೆದು ನಿಲ್ಲಿಸಿದನು. ದುರ್ಭೇದ್ಯವಾದ ಪರ್ವತದ ಸಮೀಪಕ್ಕೆ ಹೋದ ದೊಡ್ಡ ಜಲಪ್ರವಾಹವು ತಟಸ್ಥವಾಗಿ ನಿಲ್ಲುವಂತೆ, ಸಮುದ್ರದ ಅಲೆಗಳು ತಟವನ್ನು ದಾಟಿ ಮುಂದೆ ಬಾರದಂತೆ ದ್ರೋಣನನ್ನು ಅತಿಕ್ರಮಿಸಿ ಹೋಗಲು ಅವರಿಗೆ ಸಾಧ್ಯವಾಗಲಿಲ್ಲ. ದ್ರೋಣನ ಚಾಪದಿಂದ ಪ್ರಯೋಗಿಸಲ್ಪಟ್ಟ ಶರಗಳಿಂದ ಪೀಡಿತರಾದ ಪಾಂಡವರು ಭಾರದ್ವಾಜನ ಮುಂದೆ ನಿಲ್ಲಲೂ ಶಕ್ಯರಾಗದಂತಾದರು. ಸೃಂಜಯರೊಂದಿಗೆ ಪಾಂಚಾಲರು ಮುಂದೆ ಬಾರದಂತೆ ತಡೆಗಟ್ಟಿದ ದ್ರೋಣನ ಆ ಭುಜಬಲವು ಅದ್ಭುತವಾಗಿತ್ತು. ಕ್ರುದ್ಧನಾಗಿ ಮುಂದುವರೆದು ಬರುತ್ತಿದ್ದ ದ್ರೋಣನನ್ನು ನೋಡಿ ಯುಧಿಷ್ಠಿರನು ದ್ರೋಣನನ್ನು ಎದುರಿಸಿ ನಿಲ್ಲಿಸುವುದರ ಕುರಿತು ಬಹಳವಾಗಿ ಚಿಂತಿಸಿದನು. ಬೇರೆ ಯಾರಿಗೂ ಅದು ಸಾದ್ಯವಿಲ್ಲವೆಂದು ಅಭಿಪ್ರಾಯಪಟ್ಟು ಯುಧಿಷ್ಠಿರನು ದ್ರೋಣನನ್ನು ಎದುರಿಸುವ ಅತಿ ಭಾರವಾದ ಕಾರ್ಯವನ್ನು ಸೌಭದ್ರಿಗೆ ಒಪ್ಪಿಸಿದನು. ವಾಸುದೇವನಿಗೆ ಮತ್ತು ಫಲ್ಗುನನಿಗೆ ಸಮಾನನಾದ ಪರವೀರಘ್ನ ಅಭಿಮನ್ಯುವಿಗೆ ಈ ಮಾತನ್ನಾಡಿದನು: “ಮಗೂ! ಅರ್ಜುನನು ನಮ್ಮನ್ನು ಈ ವಿಷಯದಲ್ಲಿ ನಿಂದಿಸಬಾರದಂತೆ ಮಾಡು. ನಮ್ಮಲ್ಲಿರುವ ಯಾರಿಗೂ ಚಕ್ರವ್ಯೂಹವನ್ನು ಭೇದಿಸುವುದು ತಿಳಿದಿಲ್ಲ. ನೀನು ಅಥವಾ ಅರ್ಜುನ ಅಥವಾ ಕೃಷ್ಣ ಅಥವಾ ಪ್ರದ್ಯುಮ್ನರು ಮಾತ್ರ ಚಕ್ರವ್ಯೂಹವನ್ನು ಭೇದಿಸಬಲ್ಲಿರಿ. ಐದನೆಯ ಬೇರೆ ಯಾರಿಗೂ ಇದು ತಿಳಿದಿಲ್ಲ. ನಿನ್ನ ತಂದೆಯರು, ಸೋದರ ಮಾವಂದಿರು ಮತ್ತು ಎಲ್ಲ ಸೇನೆಗಳೂ ಬೇಡುವ ಈ ವರವನ್ನು ದಯಪಾಲಿಸಬೇಕು. ಯುದ್ಧದಿಂದ ಹಿಂದಿರುಗಿದ ಅರ್ಜುನನು ನಮ್ಮನ್ನು ನಿಂದಿಸಬಾರದು. ಅದಕ್ಕಾಗಿ ನೀನು ಬೇಗನೆ ಅಸ್ತ್ರಗಳನ್ನು ತೆಗೆದುಕೊಂಡು ದ್ರೋಣನ ಸೇನೆಯನ್ನು ನಾಶಗೊಳಿಸು.”

ಅಭಿಮನ್ಯುವು ಹೇಳಿದನು: “ಪಿತೃಗಳ ಜಯವನ್ನು ಬಯಸಿ ನಾನು ದ್ರೋಣನ ದೃಢ, ಅವ್ಯಗ್ರ ಸೇನಾಪ್ರವರವನ್ನು ಯುದ್ಧದಲ್ಲಿ ನುಗ್ಗಿ ಭೇದಿಸುತ್ತೇನೆ. ನನ್ನ ತಂದೆಯು ನನಗೆ ಸೇನೆಯನ್ನು ಭೇದಿಸುವುದರ ಉಪಾಯವನ್ನು ಮಾತ್ರ ಉಪದೇಶಿಸಿದ್ದಾನೆ. ಒಂದು ವೇಳೆ ಆಪತ್ತಿನಲ್ಲಿ ಸಿಲುಕಿದರೆ ಹೊರಬರಲು ನನಗೆ ಸರ್ವಥಾ ಸಾಧ್ಯವಾಗಲಾರದು.”

ಯುಧಿಷ್ಠಿರನು ಹೇಳಿದನು: “ಯೋಧಶ್ರೇಷ್ಠ! ಮಗೂ! ಸೇನೆಯನ್ನು ಭೇದಿಸಿ ನಮಗೆ ದ್ವಾರವನ್ನು ಮಾಡಿಕೊಡು. ನೀನು ಯಾವ ಮಾರ್ಗದಲ್ಲಿ ಒಳಹೋಗುತ್ತೀಯೋ ಅದೇ ಮಾರ್ಗದಲ್ಲಿ ನಾವು ನಿನ್ನನ್ನು ಅನುಸರಿಸಿ ಬರುತ್ತೇವೆ. ಯುದ್ಧದಲ್ಲಿ ನಿನ್ನನ್ನು ಅರ್ಜುನನ ಸಮನೆಂದೇ ಮನ್ನಿಸುತ್ತೇವೆ. ಎಲ್ಲಕಡೆಗಳಲ್ಲಿ ಧೃಷ್ಟಿಯನ್ನು ಹರಿಸುತ್ತಾ ನಿನಗೆ ಸ್ವಲ್ಪವೂ ಅಪಾಯವಾಗದಂತೆ ನಿನ್ನನ್ನು ರಕ್ಷಿಸುತ್ತಾ ಹಿಂಬಾಲಿಸಿ ಬರುತ್ತೇವೆ.”

ಭೀಮನು ಹೇಳಿದನು: “ನಾನು ನಿನ್ನನ್ನು ಹಿಂಬಾಲಿಸಿ ಬರುತ್ತೇನೆ. ಅದೇರೀತಿ ಧೃಷ್ಟದ್ಯುಮ್ನ, ಸಾತ್ಯಕಿ, ಪಾಂಚಾಲರು, ಕೇಕಯರು, ಮತ್ಸ್ಯರು ಮತ್ತು ಸರ್ವ ಪ್ರಭದ್ರಕರು ಬರುತ್ತಾರೆ. ವ್ಯೂಹವನ್ನು ಭೇದಿಸುವುದನ್ನು ತಿಳಿದುಕೊಂಡಿರುವ ನೀನು ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಭೇದಿಸು. ನಾವು ಪುನಃ ಪುನಃ ಶ್ರೇಷ್ಠ ಶ್ರೇಷ್ಠರಾದವರನ್ನು ಸಂಹರಿಸಿ ವ್ಯೂಹವನ್ನು ಧ್ವಂಸಗೊಳಿಸುತ್ತೇವೆ.”

ಅಭಿಮನ್ಯುವು ಹೇಳಿದನು: “ಈ ದುರಾಸದ ದ್ರೋಣನ ಸೇನೆಯನ್ನು ಸಂಕ್ರುದ್ಧ ಪತಂಗವು ಪ್ರಜ್ವಲಿಸುತ್ತಿರುವ ಜಾತವೇದಸನನ್ನು ಹೊಗುವಂತೆ ಪ್ರವೇಶಿಸುತ್ತೇನೆ. ಇಂದು ನಾನು ಎರಡೂ ವಂಶಗಳಿಗೆ ಹಿತವಾದುದನ್ನು ಮಾಡುತ್ತೇನೆ. ಸೋದರ ಮಾವನಿಗೂ, ನನ್ನ ತಂದೆಗೂ ಇದರಿಂದ ಸಂತೋಷವಾಗುತ್ತದೆ. ಇನ್ನೂ ಬಾಲಕನಾಗಿರುವ ನನ್ನಿಂದ ಸಂಗ್ರಾಮದಲ್ಲಿ ಶತ್ರುಸೇನೆಗಳು ನಾಶವಾಗುವುದನ್ನು ಇಂದು ಇರುವವೆಲ್ಲವೂ ನೋಡಲಿವೆ.”

ಯುಧಿಷ್ಠಿರನು ಹೇಳಿದನು: “ಸೌಭದ್ರ! ಹೀಗೆ ಮಾತನಾಡುತ್ತಿರುವ ನಿನ್ನ ಬಲವು ವರ್ಧಿಸಲಿ. ದುರ್ಭೇದ್ಯ ಪುರುಷವ್ಯಾಘ್ರರೂ, ಮಹೇಷ್ವಾಸರೂ, ಪ್ರಹಾರಿಗಳೂ, ಮತ್ತು ಸಾಧ್ಯ-ರುದ್ರ-ಮರುತ್-ಕಲ್ಪ-ವಸು-ಅಗ್ನಿ-ಆದಿತ್ಯರ ವಿಕ್ರಮಗಳನ್ನು ಹೊಂದಿರುವವರಿಂದ ರಕ್ಷಿತವಾದ ದ್ರೋಣನ ಸೇನೆಯನ್ನು ಭೇದಿಸಲು ಉತ್ಸುಕನಾಗಿರುವೆಯಲ್ಲವೇ?”

ಅವನ ಆ ಮಾತುಗಳನ್ನು ಕೇಳಿ ಅಭಿಮನ್ಯುವು ತನ್ನ ಸಾರಥಿಯನ್ನು ಪ್ರಚೋದಿಸಿದನು: “ಸುಮಿತ್ರ! ಕ್ಷಿಪ್ರವಾಗಿ ಕುದುರೆಗಳನ್ನು ದ್ರೋಣನ ಸೇನೆಯ ಕಡೆ ಓಡಿಸು!”

ಅಭಿಮನ್ಯು ಪರಾಕ್ರಮ

ಧರ್ಮರಾಜನ ಮಾತನ್ನು ಕೇಳಿ ಧೀಮತ ಸೌಭದ್ರನಾದರೋ ರಥವನ್ನು ದ್ರೋಣನ ಸೇನೆಯ ಕಡೆ ನಡೆಸಿದನು. ಹೋಗು ಹೋಗೆಂದು ಅವನು ಪ್ರಚೋದಿಸಲು, ಸಾರಥಿಯು ಅಭಿಮನ್ಯುವಿಗೆ ಈ ಮಾತನ್ನಾಡಿದನು: “ಆಯುಷ್ಮಾನ್! ಪಾಂಡವರು ನಿನ್ನ ಮೇಲೆ ಅತಿಯಾದ ಭಾರವನ್ನು ಹೊರಿಸಿದ್ದಾರೆ. ಕ್ಷಣಕಾಲ ನೀನು ಮಾಡಬೇಕಾಗಿರುವ ಮಹಾ ಕಾರ್ಯದ ಕುರಿತು ಯೋಚಿಸಿ ನಂತರ ನೀನು ಯುದ್ಧ ಮಾಡಬೇಕಾಗುತ್ತದೆ. ಆಚಾರ್ಯ ದ್ರೋಣನು ವಿಶೇಷ ಪರಿಶ್ರಮದಿಂದ ಪರಮಾಸ್ತ್ರಗಳಲ್ಲಿ ವಿದ್ವಾಂಸನಾಗಿದ್ದಾನೆ. ನೀನಾದರೋ ಅತ್ಯಂತ ಸುಖದಲ್ಲಿ ಬೆಳೆದಿದ್ದೀಯೆ ಮತ್ತು ಯುದ್ಧ ವಿಶಾರದನೂ ಆಗಿದ್ದೀಯೆ.”

ಆಗ ಅಭಿಮನ್ಯುವು ನಸುನಕ್ಕು ಸಾರಥಿಗೆ ಈ ಮಾತನ್ನಾಡಿದನು: “ಸಾರಥೇ! ಏನು ಮಾತನಾಡುತ್ತಿರುವೆ? ಈ ದ್ರೋಣನಾಗಲೀ ಅಥವಾ ಕ್ಷತ್ರಿಯರಾಗಲೀ ನನಗೆ ಸರಿಸಾಟಿಯಲ್ಲ! ಐರಾವತವನ್ನೇರಿ ಅಮರಗಣಗಳೊಂದಿಗೆ ಶಕ್ರನು ಬಂದರೂ ನಾನು ರಣಮುಖದಲ್ಲಿ ಹೋರಾಡಿ ಕ್ಷತ್ರಿಯರನ್ನು ವಿಸ್ಮಯಗೊಳಿಸುತ್ತೇನೆ. ಈ ಸೈನ್ಯವೂ ಕೂಡ ನನ್ನ ಹದಿನಾರನೆಯ ಒಂದು ಭಾಗದಷ್ಟೂ ಇಲ್ಲ. ನನ್ನ ಮಾವ ವಿಶ್ವಜಿತು ವಿಷ್ಣುವೂ, ತಂದೆ ಅರ್ಜುನನೂ ಕೂಡ ರಣದಲ್ಲಿ ಬಂದರೆ ಭಯವೆನ್ನುವುದು ನನ್ನನ್ನು ಸುಳಿಯುವುದೂ ಇಲ್ಲ.”

ಸಾರಥಿಯ ಮಾತುಗಳನ್ನು ನಿರ್ಲಕ್ಷಿಸಿ ಅಭಿಮನ್ಯುವು “ಶೀಘ್ರವಾಗಿ ನೀನು ದ್ರೋಣನ ಸೇನೆಯ ಕಡೆ ನಡೆ!” ಎಂದು ಹೇಳಿದನು. ಆಗ ಅಷ್ಟೊಂದು ಸಂತೋಷಗೊಳ್ಳದ ಸೂತನು ಬಂಗಾರದ ಆಭರಣಗಳಿಂದ ಅಲಂಕೃತಗೊಂಡ ಮೂರು ವರ್ಷದ ಕುದುರೆಗಳನ್ನು ಓಡಿಸಿದನು. ಸುಮಿತ್ರನಿಂದ ದ್ರೋಣನ ಕಡೆ ಓಡಿಸಲ್ಪಟ್ಟ ಆ ಮಹಾವೇಗಪರಾಕ್ರಮ ಕುದುರೆಗಳು ದ್ರೋಣನ ಬಳಿ ಓಡಿ ಬಂದವು. ಹೀಗೆ ಬರುತ್ತಿದ್ದ ಅವನನ್ನು ನೋಡಿ ಕೌರವರ ಕಡೆಯವರೆಲ್ಲರೂ ದ್ರೋಣನ ಮುಂದೆ ಬಂದರು. ಪಾಂಡವರು ಅಭಿಮನ್ಯುವನ್ನು ಹಿಂಬಾಲಿಸಿ ಹೋದರು. ಕರ್ಣಿಕಾರ ಗಿಡದ ಚಿಹ್ನೆಯ ಉನ್ನತ ಶ್ರೇಷ್ಠ ಧ್ವಜದ ಆರ್ಜುನಿಯು ಸುವರ್ಣಮಯ ಕವಚವನ್ನು ಧರಿಸಿ ಆನೆಗಳ ಹಿಂಡನ್ನು ಆಕ್ರಮಣಿಸುವ ಸಿಂಹದ ಮರಿಯಂತೆ ದ್ರೋಣಪ್ರಮುಖ ಮಹಾರಥರನ್ನು ಆಕ್ರಮಣಿಸಿದನು. ಇಪ್ಪತ್ತೇ ಅಡಿ ದೂರದಲ್ಲಿದ್ದ ಅವರು ಪ್ರಹರಿಸಲು ತೊಡಗಿದರು. ಆಗ ಅಲ್ಲಿ ಒಂದು ಕ್ಷಣ ಗಂಗೆಯ ಸಂಗಮ ಸ್ಥಾನದಲ್ಲುಂಟಾಗುವ ಸುಳಿಯಂತೆ ಕೋಲಾಹಲವುಂಟಾಯಿತು. ಇತರೇತರರನ್ನು ಸಂಹರಿಸುತ್ತಾ ಯುದ್ಧ ಮಾಡುತ್ತಿದ್ದ ಆ ಶೂರರ ತುಮುಲ ಯುದ್ಧವು ಅತಿ ದಾರುಣ ರೂಪವನ್ನು ತಾಳಿತು. ಆ ಅತಿಭಯಂಕರ ಸಂಗ್ರಾಮವು ನಡೆಯುತ್ತಿರಲು ಆರ್ಜುನಿಯು ದ್ರೋಣನು ನೋಡುತ್ತಿದ್ದಂತೆಯೇ ವ್ಯೂಹವನ್ನು ಭೇದಿಸಿ ಒಳನುಗ್ಗಿದನು. ಶತ್ರುಮಧ್ಯವನ್ನು ಪ್ರವೇಶಿಸಿ ಸಂಹರಿಸುತ್ತಿದ್ದ ಆ ಮಹಾಬಲನನ್ನು ಆನೆ-ಕುದುರೆ-ರಥ-ಪದಾತಿ ಗಣಗಳು ಆಯುಧಗಳೊಂದಿಗೆ ಸುತ್ತುವರೆದವು. ನಾನಾ ವಿಧದ ರಣವಾದ್ಯಗಳನ್ನು ಬಾರಿಸುತ್ತಾ, ಕೋಪದಿಂದ ಗುರುಗುಟ್ಟುತ್ತಾ, ಗಟ್ಟಿಯಾಗಿ ಗರ್ಜಿಸುತ್ತಾ, ಹುಂಕಾರ-ಸಿಂಹನಾದಗಳೊಂದಿಗೆ “ನಿಲ್ಲು! ನಿಲ್ಲು!” ಎಂದು ಕೂಗುತ್ತಾ, ಘೋರ ಹಾಲಾಹಲ ಶಬ್ಧದೊಂದಿಗೆ “ಹೋಗಬೇಡ! ನಿಲ್ಲು! ನಾನು ಇಲ್ಲಿಯೇ ಇದ್ದೇನೆ!” ಎಂದು ಬಾರಿ ಬಾರಿ ಕೂಗತ್ತಿದ್ದರು. ಘೀಂಕಾರಗಳಿಂದ, ಗಂಟೆಯ ಶಬ್ಧಗಳಿಂದ, ಗಹ-ಗಹಿಸಿ ನಗುತ್ತಾ, ರಥಚಕ್ರಗಳ ಶಬ್ಧಗಳಿಂದ ಭೂಮಿಯನ್ನೇ ಮೊಳಗಿಸುತ್ತಾ ಅವರು ಆರ್ಜುನಿಯನ್ನು ಆಕ್ರಮಣಿಸಿದರು. ಮೇಲೆ ಬೀಳುತ್ತಿದ್ದ ಅವರನ್ನು ವೀರ, ಶೀಘ್ರಯೋಧಿ, ದೃಢ, ಕ್ಷಿಪ್ರಾಸ್ತ್ರ, ಮರ್ಮಜ್ಞ ಅಭಿಮನ್ಯುವು ಮರ್ಮಭೇದಿಗಳಿಂದ ಸಂಹರಿಸತೊಡಗಿದನು. ಹಾಗೆ ನಾನಾ ಚಿಹ್ನೆಗಳ ನಿಶಿತ ಶರಗಳಿಂದ ಸಂಹರಿಸಲ್ಪಡುತ್ತಿದ್ದ ಅವರು ಬೆಂಕಿಯನ್ನು ಮುತ್ತಲು ಹೋದ ದೀಪದ ಹುಳುಗಳಂತೆ ವೇಗವಾಗಿ ಸತ್ತು ಬೀಳುತ್ತಿದ್ದರು. ಯಾಗಸಮಯದಲ್ಲಿ ನೆಲದಲ್ಲಿ ದರ್ಬೆಗಳನ್ನು ಹರಡುವಂತೆ ಅವನು ಅವರ ಮೃತ ಶರೀರಗಳನ್ನು ಭೂಮಿಯ ಮೇಲೆ ಬೇಗನೆ ಹರಡಿಬಿಟ್ಟನು.

ಗೋಧಾಂಗುಲಿಗಳನ್ನು ಕಟ್ಟಿಕೊಂಡಿದ್ದ, ಧನುಸ್ಸು-ಬಾಣಗಳನ್ನು ಹಿಡಿದುಕೊಂಡಿದ್ದ, ಖಡ್ಗ-ಗುರಾಣಿ-ಅಂಕುಶ-ಲಗಾಮುಗಳನ್ನು ಹಿಡಿದಿದ್ದ, ತೋಮರ ಪರಶುಗಳನ್ನು ಹಿಡಿದಿದ್ದ, ಗದೆ-ಲೋಹದ ಚಂಡು-ಪ್ರಾಸಗಳನ್ನು ಹಿಡಿದಿದ್ದ, ಋಷ್ಟಿ-ತೋಮರ-ಪಟ್ಟಿಷಗಳನ್ನು ಹಿಡಿದಿದ್ದ, ಭಿಂಡಿಪಾಲ-ಪರಿಘಗಳನ್ನು ಹಿಡಿದಿದ್ದ, ಶಕ್ತಿ-ಕಂಪನಗಳನ್ನು ಹಿಡಿದಿದ್ದ, ಪ್ರತೋದ-ಮಹಾಶಂಖ-ಕುಂತ-ಕಚಗ್ರಗಳನ್ನು ಹಿಡಿದಿದ್ದ, ಮುದ್ಗರ-ಕ್ಷೇಪಣಿಗಳನ್ನೂ ಪಾಶ-ಪರಿಘ-ಉಪಲಗಳನ್ನು ಹಿಡಿದಿದ್ದ, ಕೇಯೂರ-ಅಂಗದಗಳಿಂದ ಅಲಂಕೃತಗೊಂಡಿದ್ದ, ಗಂಧಾನುಲೇಪನಗಳಿಂದ ಮನೋಹರವಾಗಿದ್ದ ಸಹಸ್ರಾರು ಬಾಹುಗಳನ್ನು ಆರ್ಜುನಿಯು ಕತ್ತರಿಸಿದನು. ಗರುಡನಿಂದ ಕತ್ತರಿಸಲ್ಪಟ್ಟ ಸರ್ಪಗಳಂತೆ ಅವರ ಶಿರಸ್ಸುಗಳಿಂದ ಭೂಮಿಯು ತುಂಬಿಹೋಗಿತ್ತು. ಫಾಲ್ಗುಣಿಯು ಚೆನ್ನಾದ ಮೂಗು-ಮುಂಗುರುಳು-ಕುಂಡಲಗಳಿಂದ ಸುಂದರವಾಗಿದ್ದ, ಅತಿ ಕ್ರೋಧದಿಂದ ತುಟಿಕಚ್ಚಿ ರಕ್ತವನ್ನು ಸುರಿಸುತ್ತಿದ್ದ, ಸುಂದರ ಮುಕುಟ-ಮುಂಡಾಸು-ಮಣಿ-ರತ್ನಗಳಿಂದ ವಿರಾಜಿಸುತ್ತಿದ್ದದಂಟಿಲ್ಲದ ಕಮಲಗಳಂತೆ, ದಿವಾಕರ-ಶಶಿಗಳ ಪ್ರಭೆಯನ್ನು ಹೊಂದಿದ್ದ, ಆ ಕಾಲದಲ್ಲಿ ಹಿತವಾದ ಪ್ರಿಯವಾದ ಮಾತುಗಳನ್ನಾಡುತ್ತಿದ್ದ, ಪುಣ್ಯಗಂಧಗಳಿಂದ ಲೇಪಿತಗೊಂಡಿದ್ದ ಹಲವಾರು ಶತ್ರು ಶಿರಗಳನ್ನು ಭೂಮಿಯ ಮೇಲೆ ತೂರಾಡಿದನು. ಅವನು ಶರಗಳಿಂದ ಗಂಧರ್ವನಗರಾಕಾರದ, ವಿಧಿವತ್ತಾಗಿ ರಚಿಸಿದ್ದ ರಥಗಳ ಈಷಾದಂಡ-ತ್ರಿವೇಣುಗಳನ್ನು ಮುರಿದುಹಾಕಿ, ಕೂಬರಗಳನ್ನು ತುಂಡುಮಾಡಿ, ಚಕ್ರಗಳ ಅಂಚುಗಳನ್ನೂ ಅರೆಕಾಲುಗಳನ್ನೂ ಮುರಿದು ಹಾಕಿ, ಉಪಕರಣಗಳನ್ನು ತುಂಡುಮಾಡಿ ಅಲ್ಲಲ್ಲಿ ಚದುರಿ, ಆಸನಗಳೇ ಇಲ್ಲದಂತೆ ಮಾಡಿ ಸಹಸ್ರಾರು ಯೋಧರನ್ನು ಕೊಂದು ಎಲ್ಲ ದಿಕ್ಕುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದನು. ಪುನಃ ಅವನು ನಿಶಿತ ಧಾರಾಗ್ರ ಬಾಣಗಳಿಂದ ಆನೆಗಳನ್ನೂ, ಗಜಾರೋಹಿಗಳನ್ನೂ, ವೈಜಯಂತಿ-ಅಂಕುಶ-ಧ್ವಜಗಳನ್ನೂ, ಬತ್ತಳಿಕೆ-ಕವಚಗಳನ್ನೂ, ಕಕ್ಷ್ಯಗಳನ್ನೂ, ಹಗ್ಗಗಳನ್ನೂ, ಕಂಠಾಭರಣಗಳನ್ನೂ, ಕಂಬಳಿಗಳನ್ನೂ, ಘಂಟೆಗಳನ್ನೂ, ದಂತಗಳ ಅಗ್ರಭಾಗಗಳನ್ನೂ, ಬೆನ್ನುಗಳ ಮೇಲಿದ್ದ ಚತ್ರಗಳನ್ನೂ ಕತ್ತರಿಸಿದನು. ಬಾಲ-ಕಿವಿ-ಕಣ್ಣುಗಳನ್ನು ನಿಮಿರಿಸಿಕೊಂಡು ಹೆಚ್ಚು ಭಾರವನ್ನು ಹೊತ್ತು ವೇಗವಾಗಿ ಓಡಬಲ್ಲ ವನಾಯುಜ-ಪಾರ್ವತೀಯ-ಕಾಂಬೋಜ-ಆರಟ್ಟ-ಬಾಹ್ಲೀಕ ಕುದುರೆಗಳನ್ನೂ, ಅವುಗಳ ಮೇಲೆ ಶಕ್ತಿ-ಋಷ್ಟಿ-ಪ್ರಾಸಗಳನ್ನು ಹಿಡಿದು ಕುಳಿತಿದ್ದ ಸುಶಿಕ್ಷಿತ ಯೋಧರನ್ನು ಕೆಳಗುರುಳಿಸಿದನು. ಆ ಕುದುರೆಗಳ ಕುತ್ತಿಗೆಗಳ ಮೇಲೆ ಚಾಮರಗಳಂತಿದ್ದ ಕೂದಲುಗಳು ಅಸ್ತವ್ಯಸ್ತವಾಗಿದ್ದವು. ಶರೀರದ ಮೇಲೆಲ್ಲ ಗಾಯಗಳಾಗಿದ್ದವು. ನಾಲಿಗೆಗಳೂ ಕಣ್ಣುಗಳೂ ಹೊರಚಾಚಿಕೊಂಡಿದ್ದವು. ಕರುಳುಗಳೂ ಪಿತ್ತಕೋಶಗಳೂ ಹೊರಬಿದ್ದಿದ್ದವು. ಮಲ-ಮೂತ್ರ-ರಕ್ತದಿಂದ ತೋಯ್ದು ಹೋಗಿದ್ದವು. ಹೀಗೆ ಸತ್ತು ಬಿದ್ದಿದ್ದ ಕುದುರೆಗಳು ಮತ್ತು ಸವಾರರು ಮಾಂಸಗಳನ್ನು ತಿನ್ನುವ ಪ್ರಾಣಿಗಳಿಗೆ ಆನಂದವನ್ನುಂಟು ಮಾಡಿದವು.

ಈ ರೀತಿ ಕೌರವರ ಶ್ರೇಷ್ಠ ಕುದುರೆಗಳನ್ನು ಸಂಹರಿಸಿ ಅವನು ವಿರಾಜಿಸಿದನು. ಅಚಿಂತ್ಯ ವಿಷ್ಣುವಂತೆ ಒಬ್ಬನೇ ಆ ದುಷ್ಕರ ಕರ್ಮವನ್ನು ಎಸಗಲು ಮೂರು ಅಂಗಗಳ ಆ ಕೌರವ ಮಹಾಸೇನೆಯು ಅವನಿಂದ ನಾಶಗೊಂಡಿತು. ಹೀಗೆ ಏಕಾಂಗಿಯಾಗಿ ನಿಶಿತ ಶರಗಳಿಂದ ಅಸುರೀ ಸೇನೆಯನ್ನು ಸ್ಕಂದನು ಹೇಗೋ ಹಾಗೆ ಸೌಭದ್ರಿಯು ಆ ಸೇನೆಯನ್ನು ಸಂಪೂರ್ಣ ನಾಶಮಾಡಿದುದನ್ನು ನೋಡಿ ಧೃತರಾಷ್ಟ್ರನ ಮಕ್ಕಳು ಬೆವತು, ರೋಮಾಂಚನಗೊಂಡು, ಬಾಡಿದ ಮುಖಗಳಲ್ಲಿ, ಕಣ್ಣುಗಳನ್ನು ತಿರುಗಿಸುತ್ತಾ ಹತ್ತೂ ದಿಕ್ಕುಗಳನ್ನು ವೀಕ್ಷಿಸತೊಡಗಿದರು. ಶತ್ರುವನ್ನು ಜಯಿಸಲು ನಿರುತ್ಸಾಹಿಗಳಾಗಿ, ಪಲಾಯನಮಾಡುವುದರಲ್ಲಿ ಉತ್ಸಾಹಿಗಳಾಗಿ, ಜೀವಿತವನ್ನು ಬಯಸಿ, ಅನ್ಯೋನ್ಯರ ಹೆಸರು-ಗೋತ್ರಗಳನ್ನು ಕೂಗಿಕೊಳ್ಳುತ್ತಾ, ಹತರಾಗಿದ್ದ ಮಕ್ಕಳು-ತಂದೆಯರು-ಗೆಳೆಯರು-ಬಂಧು-ಬಾಂಧವರನ್ನು, ಕುದುರೆ-ಆನೆಗಳನ್ನು ಅಲ್ಲಿಯೇ ಬಿಟ್ಟು ತ್ವರೆಮಾಡಿ ಓಡಿದರು.

ಅಮಿತೌಜಸ ಸೌಭದ್ರನಿಂದ ತನ್ನ ಸೇನೆಯು ಭಗ್ನವಾದುದನ್ನು ನೋಡಿ ಕ್ರುದ್ಧನಾದ ದುರ್ಯೋಧನನು ಸ್ವಯಂ ತಾನೇ ಸೌಭದ್ರನ ಮೇಲೆ ಆಕ್ರಮಣಿಸಿದನು. ಸೌಭದ್ರನ್ನು ಎದುರಿಸಲು ಮುಂದಾಗುತ್ತಿರುವ ರಾಜನನ್ನು ನೋಡಿ ದ್ರೋಣನು ನರಾಧಿಪನನ್ನು ಸರ್ವಥಾ ರಕ್ಷಿಸಬೇಕೆಂದು ಯೋಧರಿಗೆ ಆದೇಶವನ್ನಿತ್ತನು:ವೀರ್ಯವಾನ್ ಅಭಿಮನ್ಯುವು ನಾವು ನೋಡುತ್ತಿರುವಂತೆಯೇ ಮೊದಲು ಗುರಿಯಿಟ್ಟು ಅವನನ್ನು ಸಂಹರಿಸಿಬಿಡುತ್ತಾನೆ. ಆದುದರಿಂದ ಅವನ ಕಡೆ ಓಡಿ ಹೋಗಿ. ಹೆದರಬೇಡಿ. ಬೇಗನೇ ಕೌರವನನ್ನು ರಕ್ಷಿಸಿರಿ!”

ಆಗ ಕೃತಜ್ಞರಾದ ಬಲಶಾಲಿ ಸುಹೃದ ಜಯಶೀಲ ಯೋಧರು ಭಯದಿಂದ ಬಿಡುಗಡೆಗೊಳಿಸಲು ವೀರ ದುರ್ಯೋಧನನನ್ನು ಸುತ್ತುವರೆದರು. ದ್ರೋಣ, ದ್ರೌಣಿ, ಕೃಪ, ಕರ್ಣ, ಕೃತವರ್ಮ, ಸೌಬಲ, ಬೃಹದ್ಬಲ, ಮದ್ರರಾಜ, ಭೂರಿಶ್ರವ, ಶಲ, ಪೌರವ, ವೃಷಸೇನರು ನಿಶಿತ ಶರಗಳನ್ನು ಪ್ರಯೋಗಿಸುತ್ತಾ ಸೌಭದ್ರನನ್ನು ಮಹಾ ಶರವರ್ಷದಿಂದ ಮುಚ್ಚಿದರು. ಹಾಗೆ ಅವನನ್ನು ಸಮ್ಮೋಹಗೊಳಿಸಿ ದುರ್ಯೋಧನನನ್ನು ವಿಮೋಚನಗೊಳಿಸಿದರು. ಹೀಗೆ ಕೈಗೆ ಸಿಕ್ಕಿದುದನ್ನು ಕೆಳಗೆ ಬೀಳಿಸಿದುದನ್ನು ಅರ್ಜುನನ ಮಗನು ಸಹಿಸಿಕೊಳ್ಳಲಿಲ್ಲ. ಸೌಭದ್ರನು ಮಹಾ ಶರಜಾಲದಿಂದ ಆ ಮಹಾರಥರನ್ನು, ಅಶ್ವ-ಸೂತರೊಂದಿಗೆ ವಿಮುಖರನ್ನಾಗಿ ಮಾಡಿ ಸಿಂಹನಾದಗೈದನು. ಮಾಂಸವನ್ನು ಬಯಸಿದ ಸಿಂಹದಂತಿದ್ದ ಅವನ ಆ ಗರ್ಜನೆಯನ್ನು ಕೇಳಿ ದ್ರೋಣಮುಖ ರಥರು ಸಂರಬ್ಧರಾಗಿ ಸಹಿಸಿಕೊಳ್ಳಲಿಲ್ಲ. ರಥಗಳ ಸಮೂಹದಿಂದ ಅವನನ್ನು ಇಕ್ಕಟ್ಟಾದ ಜಾಗದಲ್ಲಿರುವಂತೆ ಮಾಡಿ ಅವನ ಮೇಲೆ ಒಟ್ಟಾಗಿ ನಾನಾ ಚಿಹ್ನೆಗಳ ಬಾಣಗಳ ಜಾಲಗಳನ್ನು ಪ್ರಯೋಗಿಸಿದರು. ಅವುಗಳನ್ನು ಅಂತರಿಕ್ಷದಲ್ಲಿಯೇ ಅಭಿಮನ್ಯುವು ನಿಶಿತ ಶರಗಳಿಂದ ತುಂಡರಿಸಿದನು ಮತ್ತು ಅಲ್ಲದೇ ಅವರನ್ನೂ ತಿರುಗಿ ಹೊಡೆದನು. ಅದೊಂದು ಅದ್ಭುತವಾಗಿತ್ತು. ಆಗ ಕುಪಿತರಾದ ಕೌರವರು ಸರ್ಪವಿಷದಂತಿರುವ ಬಾಣಗಳಿಂದ ಅವನನ್ನು ಕೊಲ್ಲಲು ಬಯಸಿ ಸೌಭದ್ರನನ್ನು ಸುತ್ತುವರೆದರು. ಎಲ್ಲಕಡೆಗಳಲ್ಲೂ ವ್ಯಾಪ್ತವಾಗಿರುವ ಸಮುದ್ರವನ್ನು ತೀರಪ್ರದೇಶವು ತಡೆಹಿಡಿದಿರುವಂತೆ ಅಭಿಮನ್ಯು ಒಬ್ಬನೇ ಸಮುದ್ರದಂತಿದ್ದ ಕೌರವ ಸೇನೆಯನ್ನು ತಡೆಹಿಡಿದನು. ಇತರೇತರರನ್ನು ಹೊಡೆಯುತ್ತಾ ಯುದ್ಧಮಾಡುತ್ತಿದ್ದ ಶೂರ ಅಭಿಮನ್ಯು ಮತ್ತು ಇತರರಲ್ಲಿ ಯಾರೂ ಪರಾಙ್ಮುಖರಾಗಲಿಲ್ಲ.

ಭಯಂಕರವಾಗಿ ನಡೆಯುತ್ತಿರುವ ಆ ಘೋರ ಸಂಗ್ರಾಮದಲ್ಲಿ ದುಃಸಹನು ಒಂಭತ್ತು ಬಾಣಗಳಿಂದ, ದುಃಶಾಸನನು ಹನ್ನೆರಡು, ಕೃಪ ಶಾರದ್ವತನು ಮೂರು, ದ್ರೋಣನು ಸರ್ಪಸಮಾನ ಏಳು ಶರಗಳಿಂದ, ವಿವಂಶತಿಯು ಇಪ್ಪತ್ತು, ಕೃತವರ್ಮನು ಏಳು, ಭೂರಿಶ್ರವನು ಏಳು ಬಾಣಗಳಿಂದ, ಮದ್ರೇಶನು ಆರು ಆಶುಗಗಳಿಂದ, ಮತ್ತು ಶಕುನಿ-ನೃಪ ದುರ್ಯೋಧನರು ಎರೆಡೆರಡು ಶರಗಳಿಂದ ಅಭಿಮನ್ಯುವನ್ನು ಹೊಡೆದರು. ಚಾಪವನ್ನು ಹಿಡಿದು ನರ್ತಿಸುತ್ತಿರುವನೋ ಎನ್ನುವಂತೆ ಆ ಪ್ರತಾಪವಂತನು ಒಬ್ಬೊಬ್ಬರನ್ನೂ ಮೂರು ಮೂರು ಜಿಹ್ಮಗಗಳಿಂದ ತಿರುಗಿ ಹೊಡೆದನು. ಆಗ ಕಾಡುತ್ತಿದ್ದ ಕೌರವರಿಂದ ಕ್ರುದ್ಧನಾಗಿ ಅಭಿಮನ್ಯುವು ತನ್ನ ಸ್ವಾಭಾವಿಕ ಮಹಾ ಬಲವನ್ನು ಪ್ರದರ್ಶಿಸತೊಡಗಿದನು.

ಆಗ ಗರುಡ ಮತ್ತು ವಾಯುವೇಗಗಳಿಗೆ ಸಮಾನ ವೇಗವುಳ್ಳ ಸುಶಿಕ್ಷಿತ ಕುದುರೆಗಳಿಂದ ಎಳೆಯಲ್ಪಟ್ಟ ರಥದಲ್ಲಿ ಕುಳಿತು ಅಶ್ಮಕನ ಮಗನು ತ್ವರೆಮಾಡಿ ಆಕ್ರಮಣಿಸಿ ಹತ್ತು ಬಾಣಗಳಿಂದ ಹೊಡೆದು “ನಿಲ್ಲು! ನಿಲ್ಲು!” ಎಂದು ಕೂಗಿದನು. ಅಭಿಮನ್ಯುವು ನಸುನಗುತ್ತಾ ಹತ್ತು ಬಾಣಗಳಿಂದ ಅವನ ಸೂತನನ್ನೂ, ಧ್ವಜವನ್ನೂ, ತೋಳುಗಳನ್ನೂ, ಧನುಸ್ಸನ್ನೂ, ತಲೆ-ತೊಡೆಗಳನ್ನೂ ಕತ್ತರಿಸಿ ಬೀಳಿಸಿದನು. ಹಾಗೆ ವೀರ ಆಶ್ಮಕೇಶ್ವರನು ಸೌಭದ್ರನಿಂದ ಹತನಾಗಲು ಸರ್ವ ಸೇನೆಗಳೂ ಪಲಾಯನಪರರಾದರು. ಕರ್ಣ, ಕೃಪ, ದ್ರೋಣ, ದ್ರೌಣಿ, ಗಾಂಧಾರರಾಜ, ಶಲ, ಶಲ್ಯ, ಭೂರಿಶ್ರವ, ಕ್ರಾಥ, ಸೋಮದತ್ತ, ವಿವಿಂಶತಿ, ವೃಷಸೇನ, ಸುಷೇಣ, ಕುಂಡಭೇದಿ, ಪ್ರತರ್ದನ, ವೃಂದಾರಕ, ಲಲಿತ್ಥ, ಪ್ರಬಾಹು, ದೀರ್ಘಲೋಚನ ಮತ್ತು ದುರ್ಯೋಧನರು ಸಂಕ್ರುದ್ಧರಾಗಿ ಅವನನ್ನು ಶರವರ್ಷಗಳಿಂದ ಮುಚ್ಚಿದರು. ಆ ಮಹೇಷ್ವಾಸರಿಂದ ಅತಿ ಕ್ರುದ್ಧನಾದ ಅಭಿಮನ್ಯುವು ಕವಚ-ದೇಹಗಳೆರಡನ್ನೂ ಭೇದಿಸಬಲ್ಲ ಜಿಹ್ಮಗ ಶರವನ್ನು ತೆಗೆದುಕೊಂಡು ಕರ್ಣನ ಮೇಲೆ ಪ್ರಯೋಗಿಸಿದನು. ಅದು ಅವನ ಕವಚವನ್ನು ಒಡೆದು ದೇಹವನ್ನು ಭೇದಿಸಿ ಹಾವು ಬಿಲದೊಳಗೆ ಹೊಗುವಂತೆ ನೆಲವನ್ನು ಹೊಕ್ಕಿತು. ಅದರ ಅತಿ ಪ್ರಹಾರದಿಂದ ವ್ಯಥಿತನಾದ ಕರ್ಣನು ವಿಹ್ವಲನಾಗಿ ಭೂಕಂಪವಾದಾಗ ಪರ್ವತಗಳು ಹೇಗೆ ಅಲ್ಲಾಡುವವೋ ಹಾಗೆ ತೂಕಾಡಿದನು. ಆಗ ಬಲಿ ಅಭಿಮನ್ಯುವು ಸಂಕ್ರುದ್ಧನಾಗಿ ಮೂರು ಮೂರು ನಿಶಿತ ಬಾಣಗಳಿಂದ ಸುಷೇಣ, ದೀರ್ಘಲೋಚನ, ಮತ್ತು ಕುಂಡಭೇದಿಯರನ್ನು ಹೊಡೆದನು. ಕರ್ಣನು ಇಪ್ಪತ್ತೈದು ನಾರಾಚಗಳನ್ನು, ಅಶ್ವತ್ಥಾಮನು ಇಪ್ಪತ್ತು ಮತ್ತು ಕೃತವರ್ಮನು ಏಳನ್ನು ಅವನ ಮೇಲೆ ಪ್ರಯೋಗಿಸಿದರು.

ಎಲ್ಲ ಅಂಗಗಳಲ್ಲಿಯೂ ಗಾಯಗೊಂಡು ಕ್ರುದ್ಧನಾದ ಶಕ್ರನ ಮಗನ ಮಗನು ಹೀಗೆ ಸೈನ್ಯದಲ್ಲಿ ಸಂಚರಿಸುತ್ತಿರುವಾಗ ಪಾಶವನ್ನು ಹಿಡಿದ ಯಮನಂತೆ ಕಂಡುಬಂದನು. ಸಮೀಪದಲ್ಲಿಯೇ ಇದ್ದ ಶಲ್ಯನನ್ನು ಬಾಣದ ಮಳೆಯಿಂದ ಮುಚ್ಚಿ ಆ ಮಹಾಬಾಹುವು ಸೇನೆಗಳನ್ನು ಬೆದರಿಸುವಂತೆ ಜೋರಾಗಿ ಗರ್ಜಿಸಿದನು. ಆ ಅಸ್ತ್ರವಿದನ ಜಿಹ್ಮಗಗಳಿಂದ ಪೆಟ್ಟುತಿಂದ ಶಲ್ಯನು ರಥದಲ್ಲಿ ಸರಿದು ಕುಳಿತುಕೊಂಡನು ಮತ್ತು ಮೂರ್ಛಿತನಾದನು. ಯಶಸ್ವಿ ಸೌಭದ್ರನಿಂದ ಅವನೂ ಕೂಡ ಮೂರ್ಛಿತನಾದುದನ್ನು ಕಂಡು ಸೇನೆಗಳೆಲ್ಲವೂ ಭಾರದ್ವಾಜನು ನೋಡುತ್ತಿದ್ದಂತೆಯೇ ಪಲಯಾನ ಮಾಡತೊಡಗಿದವು. ರುಕ್ಮಪುಂಖಗಳಿಂದ ಸಮಾವೃತನಾಗಿದ್ದ ಆ ಮಹಾಬಾಹುವನ್ನು ನೋಡಿ ಕೌರವರು ಸಿಂಹಕ್ಕೆ ಬೆದರಿದ ಜಿಂಕೆಗಳಂತೆ ಪಲಾಯನ ಮಾಡಿದರು. ರಣಾಂಗಣದಲ್ಲಿ ಗಳಿಸಿದ ಯಶಸ್ಸಿನಿಂದಾಗಿ ಪಿತೃ-ಸುರ-ಚಾರಣ-ಸಿದ್ಧ-ಯಕ್ಷಗಣಗಳಿಂದ ಮತ್ತು ಭೂಮಿಯ ಮೇಲಿನ ಎಲ್ಲ ಭೂತಗಳಿಂದ ಸಂಪೂಜಿತನಾದ ಅಭಿಮನ್ಯುವು ಆಜ್ಯಧಾರೆಗಳಿಂದ ತೋಯ್ದ ಯಜ್ಞೇಶ್ವರನಂತೆ ಅತಿಯಾಗಿ ಪ್ರಕಾಶಿಸಿದನು.

ಸೌಭದ್ರನು ರಣದಲ್ಲಿ ಆಶುಗಗಳಿಂದ ಮದ್ರೇಶನನ್ನು ಪ್ರಹರಿಸಿದುದನ್ನು ನೋಡಿ ಶಲ್ಯನ ತಮ್ಮನು ಕ್ರುದ್ಧನಾಗಿ ಬಾಣಗಳ ಮಳೆಗರೆಯುತ್ತಾ ಅವನನ್ನು ಆಕ್ರಮಿಸಿದನು. ಅವನು ಹತ್ತು ಬಾಣಗಳಿಂದ ಆರ್ಜುನಿಯನ್ನು ಕುದುರೆ-ಸಾರಥಿಗಳೊಡನೆ ಹೊಡೆದು “ನಿಲ್ಲು! ನಿಲ್ಲು!” ಎಂದು ಮಹಾಸ್ವರದಲ್ಲಿ ಕೂಗಿ ಹೇಳಿದನು. ಆರ್ಜುನಿಯು ಅವನ ತಲೆ, ಕತ್ತು, ಕೈಕಾಲುಗಳು, ಧನುಸ್ಸು, ಕುದುರೆಗಳು, ಚತ್ರ, ಧ್ವಜ, ರಥದ ಮೂರು ಬೊಂಬುಗಳು, ರಥದ ಮೇಲಿದ್ದ ಆಸನ, ರಥದ ಚಕ್ರಗಳು, ನೊಗ, ತೂಣೀರಗಳು, ತೋಳುಮರಗಳು, ಪತಾಕೆ, ಚಕ್ರರಕ್ಷಕರು ಮತ್ತು ಸರ್ವೋಪಕರಣಗಳನ್ನು ಸಾಯಕಗಳಿಂದ ಹಸ್ತಲಾಘವವನ್ನು ಬಳಸಿ ಕತ್ತರಿಸಿ ಚೂರುಚೂರು ಮಾಡಿದನು. ಆಗ ವಧಿಸಲ್ಪಟ್ಟವನನ್ನು ಯಾರಿಂದಲೂ ನೋಡಲು ಸಾಧ್ಯವಾಗುತ್ತಿರಲಿಲ್ಲ. ಚಂಡಮಾರುತದ ಆಘಾತಕ್ಕೆ ಸಿಲುಕಿದ ಗಿರಿಯಂತೆ ಅಮಿತ ತೇಜಸ್ವಿಯಿಂದ ಭಗ್ನನಾದ ಅವನು ಕ್ಷೀಣನಾಗಿ, ವಸ್ತ್ರಾಭರಣಗಳೆಲ್ಲ ಚೆಲ್ಲಾ-ಪಿಲ್ಲಿಯಾಗಿ, ಭೂಮಿಯ ಮೇಲೆ ಬಿದ್ದನು. ಅವನ ಅನುಯಾಯಿಗಳು ಭಯಗೊಂಡು ದಿಕ್ಕಾಪಾಲಾಗಿ ಓಡಿ ಹೋದರು. ಆರ್ಜುನಿಯ ಆ ಅದ್ಭುತ ಪರಾಕ್ರಮವನ್ನು ನೋಡಿ ಎಲ್ಲ ಪ್ರಾಣಿಗಳೂ ಎಲ್ಲ ದಿಕ್ಕುಗಳಿಂದ “ಸಾಧು! ಸಾಧು!” ಎಂದು ಜಯಕಾರಗೈದವು.

ಶಲ್ಯನ ತಮ್ಮನು ಹತನಾಗಲು ಅವನ ಅನೇಕ ಸೈನಿಕರು ಸಂಕ್ರುದ್ಧರಾಗಿ ವಿವಿಧ ಆಯುಧಗಳನ್ನು ಹಿಡಿದು ತಮ್ಮ ಕುಲ-ನಿವಾಸ-ನಾಮಧೇಯಗಳನ್ನು ಕೇಳಿಸುತ್ತಾ ಅರ್ಜುನಾತ್ಮಜನ ಮೇಲೆ ಎರಗಿದರು. ಬಲೋತ್ಕಟರಾದ ಅವರು ರಥ-ಅಶ್ವ-ಗಜಗಳನ್ನೇರಿ, ಇನ್ನು ಕೆಲವರು ಕಾಲ್ನಡುಗೆಯಲ್ಲಿ ಬಾಣಗಳ ಮಹಾ ಶಬ್ಧ ಮತ್ತು ರಥದ ಚಕ್ರಗಳ ಶಬ್ಧಗಳೊಂದಿಗೆ, ಹೂಂಕಾರಗಳಿಂದ, ಕೋಪದಿಂದ ಗುರುಗುಟ್ಟುತ್ತಾ, ಸಿಂಹನಾದದ ಗರ್ಜನೆಗಳೊಂದಿಗೆ, ಧನುಸ್ಸನ್ನು ಠೇಂಕರಿಸುತ್ತಾ ಚಪ್ಪಾಳೆ ತಟ್ಟುತ್ತಾ, ಅರ್ಜುನನಂದನನನ್ನು ಗರ್ಜಿಸುತ್ತಾ “ನಮ್ಮಿಂದ ನೀನು ಜೀವಸಹಿತ ಹೋಗಲಾರೆ!” ಎಂದು ಕೂಗುತ್ತಾ ಆಕ್ರಮಿಸಿದರು. ಅವರು ಹಾಗೆ ಹೇಳುತ್ತಿರುವುದನ್ನು ನೋಡಿ ಸೌಭದ್ರನು ನಕ್ಕು ಯಾರ್ಯಾರು ಮೊದಲು ತನ್ನನ್ನು ಹೊಡೆದರೋ ಅವರನ್ನು ಪತ್ರಿಗಳಿಂದ ಹೊಡೆದನು. ತನ್ನ ವಿಚಿತ್ರ ಅಸ್ತ್ರಗಳನ್ನೂ ಹಸ್ತಲಾಘವನ್ನೂ ತೋರಿಸಲು ಬಯಸಿ ಸಮರ ಶೂರ ಆರ್ಜುನಿಯು ಮೊದಲು ಮೃದುವಾಗಿಯೇ ಯುದ್ಧಮಾಡಿದನು. ವಾಸುದೇವ ಮತ್ತು ಧನಂಜಯನಿಂದ ಪಡೆದಿದ್ದ ಅಸ್ತ್ರಗಳನ್ನು ಕಾರ್ಷ್ಣಿಯು ಆ ಇಬ್ಬರು ಕೃಷ್ಣರನ್ನೂ ಮೀರಿಸಿ ಪ್ರದರ್ಶಿಸಿದನು. ಸಂಧಾನ, ದೂರ, ಗುರುತರ, ಭಾರ, ಸಾಧನಗಳಲ್ಲಿ ಪುನಃ ಪುನಃ ಅವರಿಗೂ ತನಗೂ ವ್ಯತ್ಯಾಸವೇ ಇಲ್ಲದಂತೆ ತೋರಿಸಿದನು.

ಶರತ್ಕಾಲದಲ್ಲಿ ಉರಿಯುತ್ತಿದ್ದ ಸೂರ್ಯಮಂಡಲೋಪಾದಿಯಲ್ಲಿ ಅವನ ಧನುಸ್ಸು ಮಂಡಲಾಕಾರವಾಗಿ ಮಾತ್ರ ಎಲ್ಲ ದಿಕ್ಕುಗಳಲ್ಲಿಯೂ ಪ್ರಕಾಶಿಸುತ್ತಿತ್ತು. ವರ್ಷಾಕಾಲದಲ್ಲಿ ಮಿಂಚನ್ನು ಹೊರಬಿಡುವ ಮೇಘದ ಗರ್ಜನೆಯಂತೆ ಅವನ ಧನುಸ್ಸಿನ ಶಿಂಜನಿಯ ಶಬ್ಧವೂ ಅಂಗೈಯ ದಾರುಣ ಶಬ್ಧವೂ ಕೇಳಿಬರುತ್ತಿತ್ತು. ಲಜ್ಜಾಶೀಲನಾದ, ಅಸಹಿಷ್ಣುವಾದ, ಇತರರನ್ನು ಗೌರವಿಸುವ ಸ್ವಭಾವವುಳ್ಳ ಸುಂದರ ಸೌಭದ್ರನು ಶತ್ರುಪಕ್ಷದ ವೀರರನ್ನು ಸಮ್ಮಾನಿಸಬೇಕೆಂಬ ಇಚ್ಛೆಯಿಂದ ಅವರೊಡನೆ ಬಾಣ-ಅಸ್ತ್ರಗಳೊಡನೆ ಹೋರಾಡಿದನು. ಭಗವಾನ್ ದಿವಾಕರನು ವರ್ಷಾಕಾಲವು ಮುಗಿಯಲು ಹೇಗೆ ಪ್ರಚಂಡರಶ್ಮಿಯಾಗುತ್ತಾನೋ ಹಾಗೆ ಅವನು ಮೊದಮೊದಲು ಮೃದುವಾಗಿದ್ದು ಕಡೆಕಡೆಗೆ ಉಗ್ರನಾದನು. ಸೂರ್ಯನು ತನ್ನ ಕಿರಣಗಳನ್ನು ಚೆಲ್ಲುವಂತೆ ಅವನು ಕ್ರುದ್ಧನಾಗಿ ನೂರಾರು ವಿಚಿತ್ರವಾದ ದೊಡ್ಡ ದೊಡ್ಡ ರುಕ್ಮಪುಂಖಗಳ ಶಿಲಾಶಿತ ಶರಗಳನ್ನು ಪ್ರಯೋಗಿಸಿದನು. ಭಾರದ್ವಾಜನು ನೋಡುತ್ತಿದ್ದಂತೆಯೇ ಆ ಮಹಾಯಶನು ಅವನ ರಥಸೇನೆಯನ್ನು ಕ್ಷುರಪ್ರಗಳಿಂದ, ವತ್ಸದಂತಗಳಿಂದ, ವಿಪಾಠಗಳಿಂದ, ನಾರಾಚಗಳಿಂದ, ಅರ್ಧನಾರಾಚಗಳಿಂದ, ಭಲ್ಲಗಳಿಂದ, ಅಂಜಲೀಕಗಳಿಂದ ಮುಚ್ಚಿಬಿಟ್ಟನು. ಶರಪೀಡಿದ ಆ ಸೇನೆಯು ಆಗ ಯುದ್ಧದಿಂದ ಹಿಮ್ಮೆಟ್ಟಿತು.

ಯುದ್ಧೋತ್ಸಾಹಿಯಾದ ಅಭಿಮನ್ಯುವು ರಥದಲ್ಲಿ ಕುಳಿದು ರಥಸ್ಥರಾಗಿದ್ದ ಕೌರವರ ಕಡೆಯ ಯುದ್ಧೋತ್ಸಾಹೀ ಅರಿಂದಮರೆಲ್ಲರನ್ನೂ ದುಃಖಕ್ಕೀಡುಮಾಡಿದನು. ಬೆಂಕಿಯ ಕೊಳ್ಳಿಯಂತೆ ಎಲ್ಲ ಕಡೆ ಸಂಚರಿಸುತ್ತಾ ಬಾಣಗಳಿಂದ ಅವನು ದ್ರೋಣ, ಕರ್ಣ, ಕೃಪ, ಶಲ್ಯ, ದ್ರೌಣಿ, ಭೋಜ, ಬೃಹದ್ಬಲ, ದುರ್ಯೋಧನ, ಸೌಮದತ್ತಿ, ಶಕುನಿ, ನಾನಾ ನೃಪರು, ನೃಪರ ಮಕ್ಕಳು, ಮತ್ತು ವಿವಿಧ ಸೈನ್ಯಗಳನ್ನು ಮುಚ್ಚಿದನು. ಅಮಿತ್ರರನ್ನು ಸಂಹರಿಸುತ್ತಾ ತೇಜಸ್ವೀ ಪರಮಾಸ್ತ್ರ ಪ್ರತಾಪವಾನ್ ಸೌಭದ್ರನು ಎಲ್ಲ ದಿಕ್ಕುಗಳಲ್ಲಿಯೂ ಕಾಣುತ್ತಿದ್ದನು. ಅಮಿತೌಜಸ ಸೌಭದ್ರನ ಆ ಚರಿತವನ್ನು ನೋಡಿ ಕೌರವ ಸೈನ್ಯಗಳು ಪುನಃ ಪುನಃ ನಡುಗಿದವು. ಆಗ ಮಹಾಪ್ರಾಜ್ಞ ಪ್ರತಾಪವಾನ್ ಭಾರದ್ವಾಜನು ರಣದಲ್ಲಿ ರಣವಿಶಾರದ ಅಭಿಮನ್ಯುವನ್ನು ನೋಡಿ ಹರ್ಷದಿಂದ ವಿಕಸಿತ ಕಣ್ಣುಗಳಿಂದ ಕೂಡಿದವನಾಗಿ ದುರ್ಯೋಧನನ ಮರ್ಮಗಳನ್ನು ಇರಿಯುವಂತೆ ತ್ವರೆಮಾಡಿ ಕೃಪನಿಗೆ ಹೇಳಿದನು: “ಇಗೋ ಇಲ್ಲಿ ಹೋಗುತ್ತಿದ್ದಾನೆ - ಎಲ್ಲ ರಾಜರನ್ನೂ ಸುಹೃದಯರನ್ನೂ, ಯುಧಿಷ್ಠಿರ-ನಕುಲ-ಸಹದೇವ-ಭೀಮಸೇನ ಮತ್ತು ಪಾಂಡವನನ್ನೂ, ಅನ್ಯ ಬಂಧುಗಳನ್ನೂ, ಸಂಬಂಧಿಗಳನ್ನೂ, ಮಧ್ಯಸ್ಥರನ್ನೂ, ಸುಹೃದಯರನ್ನೂ ಆನಂದಿಸುತ್ತಾ - ಯುವಕ ಸೌಭದ್ರನು ಹೋಗುತ್ತಿದ್ದಾನೆ. ಯುದ್ಧದಲ್ಲಿ ಇವನ ಸಮನಾದ ಧನುರ್ಧರನು ಬೇರೆ ಯಾರೂ ಇಲ್ಲವೆಂದು ನನಗನ್ನಿಸುತ್ತಿದೆ. ಈ ಸೇನೆಗಳನ್ನು ನಾಶಗೊಳಿಸಲು ಇಚ್ಛಿಸಿದರೂ ಯಾವುದೋ ಕಾರಣಕ್ಕೆ ಇವನು ಹಾಗೆ ಮಾಡಲು ಬಯಸುತ್ತಿಲ್ಲ.”

ದ್ರೋಣನ ಪ್ರೀತಿಸಂಯುಕ್ತವಾದ ಈ ಮಾತನ್ನು ಕೇಳಿ ದುರ್ಯೋಧನನು ಆರ್ಜುನಿಯ ಕುರಿತು ಕ್ರುದ್ಧನಾಗಿ, ದ್ರೋಣನನ್ನು ನೋಡಿ ನಕ್ಕು, ಕರ್ಣ-ಬಾಹ್ಲಿಕ-ಕೃಪ-ದುಃಶಾಸನ-ಮದ್ರರಾಜ ಮತ್ತು ಇತರ ಮಹಾರಥರಿಗೆ ಹೇಳಿದನು: “ಮೂರ್ಧಾಭಿಷಿಕ್ತರಾದ ಎಲ್ಲರಿಗೂ ಆಚಾರ್ಯರಾದ ಈ ಬ್ರಹ್ಮವಿತ್ತಮರು ಅರ್ಜುನನ ಈ ಮೂಢ ಮಗನನ್ನು ಕೊಲ್ಲಲು ಇಚ್ಛಿಸುತ್ತಿಲ್ಲ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಶಸ್ತ್ರಪಾಣಿಗಳಾದ ಇವರೊಂದಿಗೆ ಸಮರದಲ್ಲಿ ಅಂತಕನೂ ಬಿಡಿಸಿಕೊಳ್ಳಲಾರ. ಹೀಗಿರುವಾಗ ಅನ್ಯ ಮರ್ತ್ಯನು ಹೇಗೆ ಉಳಿದಾನು? ಅರ್ಜುನನ ಈ ಮಗನನ್ನು ಶಿಷ್ಯತ್ವ ಭಾವದಿಂದ ರಕ್ಷಿಸುತ್ತಿದ್ದಾರೆ. ಧರ್ಮಿಗಳಿಗೆ ಪ್ರಿಯ ಶಿಷ್ಯರ ಮಕ್ಕಳು ತಮ್ಮದೇ ಮಕ್ಕಳಿದ್ದಂತೆ. ದ್ರೋಣರಿಂದ ಸಂರಕ್ಷಿತನಾದ ಇವನು ತನ್ನನ್ನೇ ವೀರನೆಂದು ತಿಳಿದುಕೊಂಡಿದ್ದಾನೆ. ಆತ್ಮಸಂಭಾವಿತನಾದ ಈ ಮೂಢನನ್ನು ಕೂಡಲೇ ಸಂಹರಿಸಿರಿ!”

ರಾಜನು ಹೀಗೆ ಹೇಳಲು ಭಾರದ್ವಾಜನು ನೋಡುತ್ತಿದ್ದಂತೆಯೇ ಸಾತ್ವತೀಪುತ್ರನನ್ನು ಸಂಹರಿಸಲು ಅವರು ಮುಂದಾದರು. ದುರ್ಯೋಧನನ ಮಾತನ್ನು ಕೇಳಿ ಕುರುಶಾರ್ದೂಲ ದುಃಶಾಸನನು ದುರ್ಯೋಧನನಿಗೆ ಹೀಗೆ ಹೇಳಿದನು: “ಮಹಾರಾಜ! ನಿನಗೆ ಹೇಳುತ್ತಿದ್ದೇನೆ! ಪಾಂಡುಪುತ್ರರು ಮತ್ತು ಪಾಂಚಾಲರು ನೋಡುತ್ತಿದ್ದಂತೆಯೇ ನಾನು ಇವನನ್ನು ಕೊಲ್ಲುತ್ತಿದ್ದೇನೆ. ರಾಹುವು ದಿವಾಕರನನ್ನು ಹೇಗೋ ಹಾಗೆ ಇಂದು ನಾನು ಸೌಭದ್ರನನ್ನು ಹಿಡಿಯುತ್ತೇನೆ.”

ಹೀಗೆ ಕೂಗಿ ಹೇಳಿ ಪುನಃ ಕುರುರಾಜನಿಗೆ ಇದನ್ನು ಹೇಳಿದನು: “ಸೌಭದ್ರನು ನನ್ನಿಂದ ಗ್ರಸ್ತನಾಗಿದ್ದುದನ್ನು ಕೇಳಿ ಅತಿಮಾನಿನಿಗಳಾದ ಕೃಷ್ಣರಿಬ್ಬರೂ ಜೀವಲೋಕದಿಂದ ಪ್ರೇತಲೋಕಕ್ಕೆ ಹೋಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಅವರಿಬ್ಬರೂ ಮೃತರಾದರೆಂದು ಕೇಳಿ ಪಾಂಡುವಿನ ಕ್ಷೇತ್ರದಲ್ಲಿ ಹುಟ್ಟಿದ ಮಕ್ಕಳು ದೌರ್ಬಲ್ಯದ ಕಾರಣದಿಂದ ಸುಹೃದ್ವರ್ಗಗಳೊಂದಿಗೆ ಒಂದೇ ದಿನದಲ್ಲಿ ಜೀವಬಿಡುತ್ತಾರೆ. ಆದುದರಿಂದ ರಾಜನ್! ಇವರಿಬ್ಬರು ಹತರಾದರೆಂದರೆ ನಿನ್ನ ಎಲ್ಲ ಅಹಿತರೂ ಹತರಾದಂತೆ. ನನಗೆ ಮಂಗಳವನ್ನು ಕೋರು. ನಿನ್ನ ಈ ಶತ್ರುಗಳನ್ನು ನಾನು ಸಂಹರಿಸುತ್ತೇನೆ.”

ಅಭಿಮನ್ಯು-ದುಃಶಾಸನರ ಯುದ್ಧ

ಹೀಗೆ ಹೇಳಿ ಗರ್ಜಿಸಿ ದುಃಶಾಸನನು ಕ್ರುದ್ಧನಾಗಿ ಸೌಭದ್ರನನ್ನು ಶರವರ್ಷಗಳಿಂದ ಮುಚ್ಚಿದನು. ಕ್ರುದ್ಧನಾಗಿ ಮೇಲೆ ಬೀಳುತ್ತಿದ್ದ ಅವನನ್ನು ಅರಿಂದಮ ಅಭಿಮನ್ಯುವು ಇಪ್ಪತ್ತಾರು ತೀಕ್ಷ್ಣ ಬಾಣಗಳಿಂದ ಹೊಡೆದನು. ದುಃಶಾಸನನಾದರೋ ಕುಂಭಸ್ಥಳವು ಒಡೆದ ಆನೆಯಂತೆ ಸಂಕ್ರುದ್ಧನಾಗಿ ರಣದಲ್ಲಿ ಸೌಭದ್ರ ಅಭಿಮನ್ಯುವಿನೊಡನೆ ಯುದ್ಧಮಾಡಿದನು. ರಥಶಿಕ್ಷಾವಿಶಾರದರಾದ ಅವರಿಬ್ಬರೂ ವಿಚಿತ್ರ ರಥಗಳಲ್ಲಿ ಎಡ ಮತ್ತು ಬಲ ಮಂಡಲಗಳಲ್ಲಿ ತಿರುಗುತ್ತಾ ಯುದ್ಧಮಾಡುತ್ತಿದ್ದರು. ಆಗ ಪಣವ, ಮೃದಂಗ, ದುಂಧುಭಿ, ಕೃಕರ, ಮಹಾನಕ ಭೇರಿಗಳನ್ನೂ ಝರ್ಝರಗಳನ್ನು ವಾದಕರು ಬಾರಿಸಿದರು. ಆ ನಿನಾದವು ಶಂಖಧ್ವನಿಗಳಿಂದಲೂ ವೀರರ ಸಿಂಹನಾದದಿಂದಲೂ ಕೂಡಿ ಮತ್ತಷ್ಟು ಭಯಂಕರವಾಗಿ ಕೇಳುತ್ತಿತ್ತು.

ತನ್ನ ಶರಗಳಿಂದ ಗಾಯಗೊಂಡು ಎದುರಿಸಿ ನಿಂತಿದ್ದ ಶತ್ರು ದುಃಶಾಸನನಿಗೆ ಧೀಮಾನ್ ಅಭಿಮನ್ಯುವು ನಸುನಗುತ್ತಾ ಹೇಳಿದನು: “ಒಳ್ಳೆಯದಾಯಿತು! ಸಂಗ್ರಾಮದಲ್ಲಿ ಮಾನಿನಿಯೂ, ಶೂರನೂ, ಕ್ರೂರಿಯೂ, ಧರ್ಮವನ್ನು ತ್ಯಜಿಸಿ ಸದಾ ಇತರರನ್ನು ನಿಂದಿಸುವುದರಲ್ಲೇ ನಿರತನಾಗಿರುವ ನಿಷ್ಠುರ ಶತ್ರುವನ್ನು ಕಾಣುತ್ತಿದ್ದೇನೆ. ಸಭೆಯಲ್ಲಿ ರಾಜಾ ಧೃತರಾಷ್ಟ್ರನೂ ಕೇಳುವಂತೆ ನೀನು ಧರ್ಮರಾಜ ಯುಧಿಷ್ಠಿರನನ್ನು ಪೌರುಷದ ಮಾತುಗಳಿಂದ ಕುಪಿತಗೊಳಿಸಿದ್ದೆ. ಜಯದಿಂದ ಉನ್ಮತ್ತನಾಗಿ ಭೀಮನಲ್ಲಿ ಕೂಡ ಬಹಳ ಅಬದ್ಧವಾಗಿ ಮಾತನಾಡಿದ್ದೆ. ಪರವಿತ್ತಾಪಹರಣ, ಕ್ರೋಧ, ಅಶಾಂತಿ, ಲೋಭ, ಜ್ಞಾನನಾಶ, ದ್ರೋಹ, ಅತಿ ಅಹಿತ ಕರ್ಮಗಳ, ಉಗ್ರಧನ್ವಿಗಳಾದ ನನ್ನ ಪಿತೃಗಳ ರಾಜ್ಯವನ್ನು ಅಪಹರಿಸಿದುದರ ಮತ್ತು ಆ ಮಹಾತ್ಮರ ಕೋಪದಿಂದಾಗಿ ನಿನಗೆ ಈ ದುರ್ದಿನವು ಪ್ರಾಪ್ತವಾಗಿದೆ. ದುರ್ಮತೇ! ಸದ್ಯವೇ ನೀನು ಆ ಉಗ್ರಧರ್ಮದ ಫಲವನ್ನು ಅನುಭವಿಸುತ್ತೀಯೆ. ಸರ್ವ ಸೇನೆಯು ನೋಡುತ್ತಿರುವಂತೆಯೇ ಇಂದು ನಿನ್ನನ್ನು ಬಾಣಗಳಿಂದ ಶಿಕ್ಷಿಸುತ್ತೇನೆ. ಇಂದು ನಾನು ರಣದಲ್ಲಿ ಆ ಕೋಪದ ಋಣವನ್ನು ತೀರಿಸುತ್ತೇನೆ. ಇಂದು ಕ್ರೋಧಳಾಗಿರುವ ಕೃಷ್ಣೆಯ ಮತ್ತು ನನ್ನ ದೊಡ್ಡಪ್ಪ ಭೀಮನ ಆಸೆಗಳನ್ನು ಪೂರೈಸಿ ಯುದ್ಧದಲ್ಲಿ ಋಣಮುಕ್ತನಾಗುತ್ತೇನೆ. ರಣವನ್ನು ಬಿಟ್ಟು ಓಡಿಹೋಗದೇ ಇದ್ದರೆ ನೀನು ನನ್ನಿಂದ ಜೀವಂತ ಉಳಿಯಲಾರೆ!”

ಹೀಗೆ ಹೇಳಿ ಕಾಲ-ಅಗ್ನಿ-ವಾಯುಗಳ ತೇಜಸ್ಸುಳ್ಳ ಆ ಮಹಾಬಾಹು ಪರವೀರಘ್ನನು ದುಃಶಾಸನನನ್ನು ಕೊನೆಗೊಳಿಸಲು ಧನುಸ್ಸನ್ನು ಹೂಡಿದನು. ಅದು ಕೂಡಲೇ ಅವನ ಬಳಿಸಾರಿ ಕುತ್ತಿಗೆಯ ಪ್ರದೇಶವನ್ನು ಭೇದಿಸಿತು. ಆಗ ಇನ್ನೊಮ್ಮೆ ಇಪ್ಪತ್ತೈದು ಬಾಣಗಳಿಂದ ಅವನನ್ನು ಹೊಡೆದನು. ಗಾಢವಾಗಿ ಗಾಯಗೊಂಡು ದುಃಖಿತನಾದ ದುಃಶಾಸನನು ರಥದ ಆಸನಕ್ಕೆ ಒರಗಿ ಕುಳಿತುಕೊಂಡನು ಮತ್ತು ಮಹಾ ಮೂರ್ಛಿತನಾದನು. ಸೌಭದ್ರನ ಶರದಿಂದ ಪೀಡಿತನಾಗಿ ಅಚೇತಸನಾಗಿದ್ದ ದುಃಶಾಸನನನ್ನು ಅವನ ಸಾರಥಿಯು ತ್ವರೆಮಾಡಿ ರಣದಿಂದ ಆಚೆ ತೆಗೆದುಕೊಂಡು ಹೋದನು. ಪಾಂಡವರು, ದ್ರೌಪದೇಯರು, ವಿರಾಟ, ಪಾಂಚಾಲರು ಮತ್ತು ಕೇಕಯರು ಅದನ್ನು ನೋಡಿ ಸಿಂಹನಾದಗೈದರು. ಅಲ್ಲಿ ಪಾಂಡವರ ಸೈನಿಕರು ಸಂಹೃಷ್ಟರಾಗಿ ಎಲ್ಲರೀತಿಯ ವಾದ್ಯಗಳನ್ನು ಎಲ್ಲೆಡೆ ಬಾರಿಸಿದರು.

ಆಟವಾಡುತ್ತಿದ್ದ ಸೌಭದ್ರನನ್ನು ಮತ್ತು ಅತ್ಯಂತ ವೈರಿಯಾಗಿದ್ದ ದೃಪ್ತನಾಗಿದ್ದ ಶತ್ರುವು ಪರಾಜಿತನಾದುದನ್ನು ನೋಡಿ ನಸುನಕ್ಕು ಯುಧಿಷ್ಠಿರನನ್ನು ಮುಂದಿರಿಸಿಕೊಂಡು ಧ್ವಜಾಗ್ರಗಳಲ್ಲಿ ಧರ್ಮ, ವಾಯು, ಶಕ್ರ, ಮತ್ತು ಅಶ್ವಿನೀ ದೇವತೆಗಳ ಪ್ರತಿಮೆಗಳನ್ನು ಹೊಂದಿದ್ದ ರಥಗಳೂ ಮಹಾರಥ ದ್ರೌಪದೇಯರೂ, ಸಾತ್ಯಕಿ, ಚೇಕಿತಾನರು, ಧೃಷ್ಟದ್ಯುಮ್ನ-ಶಿಖಂಡಿಯರೂ, ಕೇಕಯರೂ, ಧೃಷ್ಟಕೇತು, ಮತ್ಸ್ಯ-ಪಾಂಚಾಲ-ಸೃಂಜಯರು, ಪಾಂಡವರೂ ಸಂತೋಷದಿಂದ ದ್ರೋಣನ ಸೇನೆಯನ್ನು ಭೇದಿಸಲು ಬಯಸಿ ಮುನ್ನುಗ್ಗಿದರು. ಆಗ ಜಯವನ್ನು ಬಯಸುತ್ತಿದ್ದವರ ಶತ್ರುಗಳೊಂದಿಗೆ ಕೌರವರ ಮಹಾಯುದ್ಧವು ನಡೆಯಿತು. ಆಗ ಮಹಾರಾಜ ದುರ್ಯೋಧನನು ರಾಧೇಯನಿಗೆ ಹೇಳಿದನು: “ನೋಡು! ದುಃಶಾಸನನು ಆದಿತ್ಯನಂತೆ ಸುಡುತ್ತಾ ರಣದಲ್ಲಿ ಶತ್ರುಗಳನ್ನು ಸಂಹರಿಸುತ್ತಿರುವ ವೀರ ಸೌಭದ್ರ ಅಭಿಮನ್ಯುವಿನ ವಶನಾದುದನ್ನು ನೋಡು! ಹಾಗೆಯೇ ಆಯುಧಗಳನ್ನು ಹಿಡಿದು ಪಾಂಡವರು ಮುನ್ನುಗ್ಗಿ ಬರುತ್ತಿದ್ದಾರೆ.”

ಅಭಿಮನ್ಯು-ಕರ್ಣರ ಯುದ್ಧ

ಆಗ ದುರ್ಯೋಧನನಿಗೆ ಹಿತವನ್ನು ಮಾಡಲೋಸುಗ ಕರ್ಣನು ಸಂಕ್ರುದ್ಧನಾಗಿ ದುರಾಸದ ಅಭಿಮನ್ಯುವನ್ನು ತೀಕ್ಷ್ಣ ಶರಗಳಿಂದ ಮುಸುಕಿದನು. ಆ ವೀರನು ರಣರಂಗದಲ್ಲಿ ಸೌಭದ್ರನ ಅನುಚರರನ್ನು ತೀಕ್ಷ್ಣ ಶ್ರೇಷ್ಠ ಅಸ್ತ್ರಗಳಿಂದ ತಿರಸ್ಕಾರ ಭಾವದಿಂದ ಹೊಡೆದನು. ಮಹಾಮನಸ್ವಿ ಅಭಿಮನ್ಯುವಾದರೋ ರಾಧೇಯನನ್ನು ತ್ವರೆಮಾಡಿ ಎಪ್ಪತ್ಮೂರು ಶಿಲೀಮುಖಗಳಿಂದ ಹೊಡೆದು ದ್ರೋಣನನ್ನು ತಲುಪಿದನು. ವಜ್ರಹಸ್ತನು ಅಸುರರನ್ನು ಹೇಗೋ ಹಾಗೆ ಆಕ್ರಮಣಿಸಿ ಬರುತ್ತಿದ್ದ ಅವನನ್ನು ದ್ರೋಣನಿಂದ ತಡೆಹಿಡಿದು ನಿಲ್ಲಿಸಲು ರಣದಲ್ಲಿ ಯಾವ ರಥಶ್ರೇಷ್ಠನಿಗೂ ಶಕ್ಯವಾಗಲಿಲ್ಲ. ಆಗ ಜಯವನ್ನು ಬಯಸಿದ ಸರ್ವಧನುಭೃತರಲ್ಲಿ ಮಾನನೀಯನಾದ ಕರ್ಣನು ಉತ್ತಮ ಅಸ್ತ್ರಗಳನ್ನು ಪ್ರದರ್ಶಿಸುತ್ತಾ ಸೌಭದ್ರನನ್ನು ನೂರಾರು ಬಾಣಗಳಿಂದ ಹೊಡೆದನು. ಆ ಅಸ್ತ್ರವಿದರಲ್ಲಿ ಶ್ರೇಷ್ಠ, ರಾಮಶಿಷ್ಯ, ಪ್ರತಾಪವಾನನು ಸಮರದಲ್ಲಿ ಶತ್ರುದುರ್ಧರ್ಷ ಅಭಿಮನ್ಯುವನ್ನು ಪೀಡಿಸಿದನು.

ಈ ರೀತಿ ರಾಧೇಯನ ಅಸ್ತ್ರವೃಷ್ಠಿಗಳಿಂದ ಪೀಡಿತನಾದ ಸಮರದಲ್ಲಿ ಅಮರಸಂಕಾಶನಾದ ಸೌಭದ್ರನು ಸಹಿಸಿಕೊಳ್ಳಲಿಲ್ಲ. ಆಗ ಆರ್ಜುನಿಯು ಶಿಲಾಶಿತ ತೀಕ್ಷ್ಣ ಭಲ್ಲಗಳು ಮತ್ತು ಸನ್ನತಪರ್ವಗಳಿಂದ ಕರ್ಣನ ಧನುಸ್ಸನ್ನು ಕತ್ತರಿಸಿ ಅವನನ್ನು ಹೊಡೆದನು. ಅವನ ಧ್ವಜ-ಕಾರ್ಮುಕವು ತುಂಡಾಗಿ ನೆಲದ ಮೇಲೆ ಬಿದ್ದವು. ಆಗ ಕರ್ಣನು ಕಷ್ಟದಲ್ಲಿ ಸಿಲುಕಿದುದನ್ನು ನೋಡಿದ ಕರ್ಣನ ತಮ್ಮನು ದೃಢವಾದ ಕಾರ್ಮುಕವನ್ನು ಎತ್ತಿ ಹಿಡಿದು ತಕ್ಷಣವೇ ಸೌಭದ್ರನ ಮೇಲೆ ಎರಗಿದನು. ಆಗ ಪಾಂಡವರು ಮತ್ತು ಅವರ ಅನುಚರ ಜನರು ವಾದ್ಯಗಳನ್ನು ನುಡಿಸಿದರು ಮತ್ತು ಸೌಭದ್ರನನ್ನೂ ಹೊಗಳಿದರು.

ಅವನು ಗರ್ಜಿಸುತ್ತಾ ಪುನಃ ಪುನಃ ಕೈಯಿಂದ ಧನುಸ್ಸಿನ ಶಿಂಜಿನಿಯನ್ನು ಎಳೆಯುತ್ತಾ ಬೇಗನೇ ಆ ಮಹಾತ್ಮರ ರಥಗಳ ಮಧ್ಯೆ ಬಂದು ಎರಗಿದನು. ನಸುನಗುವ ಮುಖವಿದ್ದ ಅವನು ದುರಾಸದ ಅಭಿಮನ್ಯುವನ್ನು ಅವನ ಚತ್ರ-ಧ್ವಜ-ಸಾರಥಿಯನ್ನೂ ಸೇರಿ ಹತ್ತು ಬಾಣಗಳಿಂದ ಹೊಡೆದನು. ಪಿತೃಪಿತಾಮಹರಿಗಾಗಿ ಅತಿ ಮಾನುಷ ಕರ್ಮವನ್ನು ಮಾಡುತ್ತಿದ್ದ ಕಾರ್ಷ್ಣಿಯು ಶರಗಳಿಂದ ಗಾಯಗೊಂಡಿದುದನ್ನು ನೋಡಿ ಕೌರವರಿಗೆ ಸಂತೋಷವಾಯಿತು. ಆಗ ಅಭಿಮನ್ಯುವು ನಗು ನಗುತ್ತಲೇ ಶರಸಂಧಾನ ಮಾಡಿ ಶಿಂಜಿನಿಯನ್ನು ದೀರ್ಘವಾಗಿ ಎಳೆದು ಒಂದೇ ಪತ್ರಿಯಿಂದ ಅವನ ಶಿರವನ್ನು ಕತ್ತರಿಸಲು ಚಂಡಮಾರುತದಿಂದ ಪರ್ವತದಿಂದ ಕೆಳಗುರುಳಿಸಲ್ಪಟ್ಟ ಬೆಟ್ಟಕಣಗಿಲೇ ಮರದಂತೆ ಅವನು ರಥದಿಂದ ನೆಲದ ಮೇಲೆ ಬಿದ್ದನು.

ಸಹೋದರನು ಹತನಾದುದನ್ನು ನೋಡಿ ಕರ್ಣನು ವ್ಯಥಿತನಾದನು. ಕಂಕಪತ್ರಿಗಳಿಂದ ಕರ್ಣನನ್ನೂ ವಿಮುಖನನ್ನಾಗಿ ಮಾಡಿ ಸೌಭದ್ರನು ಕೂಡಲೇ ಅನ್ಯ ಮಹೇಷ್ವಾಸರನ್ನೂ ಆಕ್ರಮಿಸಿದನು. ಆಗ ಕ್ರುದ್ಧನಾದ ಮಹಾಯಶ ಅಭಿಮನ್ಯುವು ವಿಶಾಲವಾಗಿ ಹರಡಿಕೊಂಡಿದ್ದ ಗಜಾಶ್ವರಥಪದಾತಿಗ ಸೈನ್ಯವನ್ನು ಧ್ವಂಸಮಾಡಲು ಉಪಕ್ರಮಿಸಿದನು. ಕರ್ಣನಾದರೋ ಅಭಿಮನ್ಯುವಿನ ಅನೇಕ ಬಾಣಗಳಿಂದ ಗಾಯಗೊಂಡು ವೇಗವುಳ್ಳ ಕುದುರೆಗಳೊಂದಿಗೆ ಪಲಾಯನಗೈದನು.

ಆಗ ಆ ಸೇನೆಯು ಭಗ್ನವಾಯಿತು. ಆಕಾಶವು ಮಿಡಿತೆ ಹುಳುಗಳಿಂದ ಅಥವಾ ಮಳೆಯಿಂದ ಮುಚ್ಚಿಹೋದಂತೆ ಅಭಿಮನ್ಯುವಿನ ಶರಗಳಿಂದ ಮುಚ್ಚಿ ಹೋಯಿತು. ಆಗ ಏನೂ ಕಾಣುತ್ತಿರಲಿಲ್ಲ. ನಿಶಿತ ಶರಗಳಿಂದ ಆಕ್ರಮಣಿಸಿಸಲ್ಪಡುತ್ತಿರುವ ಕೌರವ ಯೋಧರಲ್ಲಿ ಸೈಂಧವನನ್ನು ಬಿಟ್ಟು ಬೇರೆ ಯಾರೂ ಅವನನ್ನು ಎದುರಿಸಿ ನಿಲ್ಲಲು ಸಾಧ್ಯವಾಗಲಿಲ್ಲ. ಆಗ ಪುರುಷರ್ಷಭ ಸೌಭದ್ರನಾದರೋ ಶಂಖವನ್ನು ಊದಿ ಶೀಘ್ರದಲ್ಲಿ ಭಾರತೀ ಸೇನೆಯನ್ನು ಆಕ್ರಮಣಿಸಿದರು. ಹುಲ್ಲುಮೆದೆಯ ಮೇಲೆ ಬಿದ್ದ ಒಂದು ಕಿಡಿಯೂ ಕೂಡ ಸ್ವಲ್ಪವೇ ಹೊತ್ತಿನಲ್ಲಿ ಅದನ್ನು ಭಸ್ಮಮಾಡುವಂತೆ ಆರ್ಜುನಿಯು ಕ್ಷಣದಲ್ಲಿಯೇ ರಿಪುಗಳನ್ನು ಸಂಹರಿಸುತ್ತಾ ಭಾರತ ಸೇನೆಯ ಮಧ್ಯೆ ಸಂಚರಿಸುತಿದ್ದನು. ಅವನು ಒಳನುಗ್ಗಿ ನಿಶಿತ ಶರಗಳಿಂದ ರಥ-ಗಜ-ಅಶ್ವ-ಮನುಷ್ಯರನ್ನು ಹೊಡೆಯುತ್ತಾ ಭೂಮಿಯನ್ನು ಮುಂಡಗಳ ರಾಶಿಗಳಿಂದ ಮುಚ್ಚಿದನು.

ಸೌಭದ್ರನ ಧನುಸ್ಸಿನಿಂದ ಪ್ರಯೋಗಿಸಲ್ಪಟ್ಟ ಶ್ರೇಷ್ಠ ಶರಗಳಿಂದ ಗಾಯಗೊಂಡು ಜೀವವನ್ನು ಉಳಿಸಿಕೊಳ್ಳಲು ಆತುರಪಟ್ಟು ಓಡುವಾಗ ಸೇನೆಗಳು ತಮ್ಮವರನ್ನೇ ತುಳಿದು ಸಾಯಿಸುತ್ತಿದ್ದವು. ಅವನ ಘೋರವಾದ, ರೌದ್ರಕರ್ಮಗಳನ್ನು ಮಾಡಬಲ್ಲ, ತೀಕ್ಷ್ಣವಾದ ಬಹುಸಂಖ್ಯಾತ ಬಾಣಗಳು ರಥ-ಆನೆ-ಅಶ್ವಗಳನ್ನು ಸಂಹರಿಸಿ ನೆಲವನ್ನು ಹೊಗುತ್ತಿದ್ದವು. ಆಯುಧಗಳನ್ನು ಹಿಡಿದ, ಅಂಗುಲಿತ್ರಾಣಗಳನ್ನು ಧರಿಸಿದ್ದ, ಖಡ್ಗಗಳನ್ನು ಹಿಡಿದಿದ್ದ, ಗದೆಗಳನ್ನು ಹಿಡಿದಿದ್ದ, ಹೇಮಾಭರಣ ಭೂಷಿತ ಬಾಹುಗಳು ತುಂಡಾಗಿ ಬಿದ್ದಿರುವುದು ರಣರಂಗದಲ್ಲಿ ಕಂಡುಬಂದವು. ಭೂಮಿಯ ಮೇಲೆ ಸಹಸ್ರಾರು ಬಾಣಗಳೂ, ಚಾಪಗಳೂ, ಖಡ್ಗಗಳೂ, ಶರೀರಗಳೂ, ಕುಂಡಲ-ಸರಗಳನ್ನು ಧರಿಸಿದ್ದ ಶಿರಗಳೂ ಹರಡಿ ಬಿದ್ದಿದ್ದವು. ಯುದ್ಧಸಾಮಗ್ರಿಗಳಿಂದ ಕೂಡಿದ್ದ, ಆಸನಗಳು, ಈಷಾದಂಡಗಳು, ರಥದ ಅಚ್ಚುಗಳು, ಮುರಿದುಹೋದ ಚಕ್ರಗಳು, ಅನೇಕ ರಥಗಳು, ಶಕ್ತಿ-ಚಾಪ ಆಯುಧಗಳೂ ಮಹಾಧ್ವಜಗಳೂ ಬಿದ್ದಿದ್ದವು. ಸಂಹರಿಸಲ್ಪಡುತ್ತಿದ್ದ ಕ್ಷತ್ರಿಯರು, ಕುದುರೆಗಳು, ಮತ್ತು ಆನೆಗಳಿಂದ ಭೂಮಿಯು ಕ್ಷಣದಲ್ಲಿಯೇ ಅಗಮ್ಯವೂ ದಾರುಣವೂ ಆಯಿತು. ವಧಿಸಲ್ಪಡುತ್ತಿದ್ದ ರಾಜಪುತ್ರರು ಇತರೇತರರನ್ನು ಕೂಗಿ ಕರೆಯುತ್ತಿದುದರ ಮಹಾ ಶಬ್ಧವು ಉದ್ಭವಿಸಿತು. ಹೇಡಿಗಳ ಭಯವನ್ನು ಹೆಚ್ಚಿಸುವ ಆ ಶಬ್ಧವು ಸರ್ವ ದಿಕ್ಕುಗಳಲ್ಲಿಯೂ ಮೊಳಗಿತು. ಅಶ್ವ-ರಥ-ಗಜಗಳ ಸೇನೆಗಳನ್ನು ಸಂಹರಿಸುತ್ತಾ ಸೌಭದ್ರನು ದಿಕ್ಕು ಉಪದಿಕ್ಕುಗಳನ್ನು ಬೆಳಗಿಸುತ್ತಾ ತಿರುಗುತ್ತಿದ್ದನು. ಆಗ ಧೂಳಿನಿಂದ ಸೇನೆಗಳು ಮುಸುಕಿಹೋಗಲು ಆನೆ-ಕುದುರೆ-ಸೈನಿಕರನ್ನು ಧ್ವಂಸಗೊಳಿಸುತ್ತಿದ್ದ ಅವನು ಕಾಣುತ್ತಲೇ ಇರಲಿಲ್ಲ. ಕ್ಷಣದಲ್ಲಿಯೇ ಮಧ್ಯಾಹ್ನದ ಸೂರ್ಯನಂತೆ ಶತ್ರುಗಣಗಳನ್ನು ಸುಡುತ್ತಾ ಅಭಿಮನ್ಯುವು ಕಾಣಿಸಿಕೊಂಡನು. ಯುದ್ಧದಲ್ಲಿ ವಾಸವನ ಸಮನಾದ ವಾಸವನ ಮಗನ ಮಗ ಅಭಿಮನ್ಯುವು ಸೇನೆಯ ಮಧ್ಯದಲ್ಲಿ ವಿರಾಜಿಸಿದನು.

ಜಯದ್ರಥನ ಯುದ್ಧ

ರಣದಲ್ಲಿ ಅವನನ್ನು ಯುಧಿಷ್ಠಿರ, ಭೀಮಸೇನ, ಶಿಖಂಡಿ, ಸಾತ್ಯಕಿ, ಯಮಳರು, ಧೃಷ್ಟದ್ಯುಮ್ನ, ವಿರಾಟ, ದ್ರುಪದ, ಕೇಕಯರೊಂದಿಗೆ ಧೃಷ್ಟಕೇತುವೂ ಮತ್ಸ್ಯರೂ ಸಂರಬ್ಧರಾಗಿ ಅನುಸರಿಸಿ ಹೋಗುತ್ತಿದ್ದರು. ವ್ಯೂಹದಲ್ಲಿದ್ದ ಸೇನೆಗಳನ್ನು ಪ್ರಹರಿಸಿ ಆಕ್ರಮಣಿಸಿದುದನ್ನು ನೋಡಿ ಕೌರವರ ಕಡೆಯ ಶೂರರು ಓಡುತ್ತಾ ವಿಮುಖರಾದರು. ದುರ್ಯೋಧನನ ಮಹಾಬಲವು ಹಾಗೆ ವಿಮುಖವಾಗುತ್ತಿದ್ದುದನ್ನು ನೋಡಿದ ಧೃತರಾಷ್ಟ್ರನ ಅಳಿಯ ತೇಜಸ್ವಿ ಜಯದ್ರಥನು ಶತ್ರುಗಳನ್ನು ತಡೆಹಿಡಿಯಲು ಧಾವಿಸಿದನು. ಸೈಂಧವನ ಮಗ ರಾಜಾ ಜಯದ್ರಥನು ಮಗನನ್ನು ಹಿಂಬಾಲಿಸಿ ಹೋಗುತ್ತಿದ್ದ ಪಾರ್ಥರನ್ನು ಅವರ ಸೇನೆಗಳೊಂದಿಗೆ ತಡೆದನು. ಓಡಿಬಂದು ಆನೆಗಳನ್ನು ಎದುರಿಸುವ ಸಲಗದಂತೆ ಉಗ್ರಧನ್ವಿ, ಮಹೇಷ್ವಾಸ ವಾರ್ಧಕ್ಷತ್ರಿಯು ದಿವಾಸ್ತ್ರಗಳನ್ನು ಪ್ರಯೋಗಿಸುತ್ತಾ ಆಕ್ರಮಣಿಸಿದನು.

ದ್ರೌಪದೀಹರಣದ ಸಮಯದಲ್ಲಿ ಭೀಮಸೇನನಿಂದ ಪರಾಜಯಗೊಂಡ ಈ ರಾಜನು ಮಾನ್ಯತೆಯಿಂದ ವರವನ್ನು ಅರಸಿ ಮಹಾ ತಪಸ್ಸನ್ನಾಚರಿಸಿದನು. ಇಂದ್ರಿಯಗಳನ್ನು ಇಂದ್ರಿಯಾರ್ಥಗಳಿಂದ ಹಿಂದಿರುಗಿಸಿ, ಪ್ರಿಯವಾದವುಗಳೆಲ್ಲವನ್ನೂ ಹತ್ತಿರಕ್ಕೆ ತೆಗೆದುಕೊಳ್ಳದೇ, ಹಸಿವು-ಬಾಯಾರಿಕೆ-ಬಿಸಿಲನ್ನು ಸಹಿಸಿಕೊಂಡು ತಪಸ್ಸನ್ನಾಚರಿಸಿದ ಅವನು ಕೃಶನಾಗಿ, ದಮನಿಗಳು ಮಾತ್ರವೇ ಕಾಣಿಸಿಕೊಳ್ಳುತ್ತಿರುವ ಹಾಗೆ ಬ್ರಹ್ಮ, ಸನಾತನ, ದೇವ ಶರ್ವನನ್ನು ಆರಾಧಿಸಿದನು. ಭಕ್ತಾನುಕಂಪಿಯಾದ ಭಗವಾನನು ಅವನ ಮೇಲೆ ದಯೆ ತೋರಿಸಿದನು. ಒಮ್ಮೆ ಸ್ವಪ್ನದ ಕೊನೆಯಲ್ಲಿ ಹರನು ಸಿಂಧುಪತಿಯ ಸುತನಿಗೆ ಕಾಣಿಸಿಕೊಂಡು “ಜಯದ್ರಥ! ನಿನ್ನ ಕುರಿತು ಪ್ರೀತನಾಗಿದ್ದೇನೆ. ವರವನ್ನು ಕೇಳು. ಏನನ್ನು ಇಚ್ಛಿಸುತ್ತೀಯೆ?” ಎಂದು ಕೇಳಿದನು. ಶರ್ವನು ಹೀಗೆ ಹೇಳಲು ಸಿಂಧುರಾಜ ಜಯದ್ರಥನು ರುದ್ರನಿಗೆ ಅಂಜಲೀಬದ್ಧನಾಗಿ ನಮಸ್ಕರಿಸಿ ಹೇಳಿದನು: “ನಾನು ರಣದಲ್ಲಿ ಭೀಮವೀರ್ಯಪರಾಕ್ರಮಿಗಳಾದ ಪಾಂಡವ ಸಮಸ್ತರನ್ನು ಒಬ್ಬನೇ ಯುದ್ಧದಲ್ಲಿ ಎದುರಿಸಬಲ್ಲವನಾಗಬೇಕು” ಎಂದು. ಹೀಗೇ ಹೇಳಲು ದೇವೇಶನು ಜಯದ್ರಥನಿಗೆ ಹೇಳಿದನು: “ಸೌಮ್ಯ! ನಿನಗೆ ವರವನ್ನು ಕೊಡುತ್ತೇನೆ. ಪಾರ್ಥ ಧನಂಜಯನ ಹೊರತಾಗಿ ನಾಲ್ವರು ಪಾಂಡುನಂದನರನ್ನು ನೀನು ಸಂಗ್ರಾಮದಲ್ಲಿ ಎದುರಿಸಬಲ್ಲೆ!” ಹೀಗೆ ಹೇಳಿ ದೇವೇಶನು ರಾಜನನ್ನು ಎಚ್ಚರಿಸಿದನು. ಅವನು ಆ ವರದಾನದಿಂದ ಮತ್ತು ದಿವ್ಯಾಸ್ತ್ರಗಳ ಬಲದಿಂದ ಒಬ್ಬನೇ ಪಾಂಡವರ ಸೇನೆಯನ್ನು ಎದುರಿಸತೊಡಗಿದನು.

ಅವನ ಧನುಸ್ಸು ಮತ್ತು ಚಪ್ಪಾಳೆಯ ಘೋಷದಿಂದ ಶತ್ರುಪಕ್ಷದ ಕ್ಷತ್ರಿಯರಲ್ಲಿ ಭಯವು ಆವೇಶಗೊಂಡಿತು ಮತ್ತು ಕೌರವ ಸೇನೆಯಲ್ಲಿ ಪರಮ ಹರ್ಷವುಂಟಾಯಿತು. ಭಾರವೆಲ್ಲವೂ ಸೈಂಧವನ ಪಾಲಿಗೆ ಬಂದುದನ್ನು ನೋಡಿ ಕೌರವರ ಕಡೆಯ ಕ್ಷತ್ರಿಯರು ಜೋರಾಗಿ ಗರ್ಜಿಸುತ್ತಾ ಯುಧಿಷ್ಠಿರನ ಸೇನೆಯನ್ನು ಆಕ್ರಮಿಸಿದರು. ಸಾರಥಿಯ ವಶವರ್ತಿಗಳಾದ, ಹೆಚ್ಚು ಭಾರವನ್ನು ಹೊರಬಲ್ಲ, ನಾನಾಪ್ರಕಾರದ ನಡಿಗೆಗಳನ್ನುಳ್ಳ ವಾಯುವಿನ ವೇಗಗತಿಯಿದ್ದ ಅತಿದೊಡ್ಡ ಕುದುರೆಗಳು ಅವನ ರಥವನ್ನು ಕೊಂಡೊಯ್ಯುತ್ತಿದ್ದವು. ಗಂಧರ್ವನಗರಾಕಾರದ, ವಿಧಿವತ್ತಾಗಿ ರಚಿಸಲ್ಪಟ್ಟ ರಥವು ವರಾಹದ ಚಿಹ್ನೆಯ ಬೆಳ್ಳಿಯ ಮಹಾ ಕೇತುವೊಂದಿಗೆ ಶೋಭಿಸುತ್ತಿತ್ತು. ಶ್ವೇತ ಚತ್ರ-ಪತಾಕೆಗಳಿಂದ ಮತ್ತು ಚಾಮರ-ವ್ಯಂಜನಗಳಿಂದ ಮತ್ತು ಇತರ ರಾಜ ಚಿಹ್ನೆಗಳಿಂದ ಅವನು ಅಂಬರದಲ್ಲಿ ತಾರಾಪತಿಯಂತೆ ಕಾಣಿಸಿದನು. ಮುಕ್ತ-ವಜ್ರ-ಮಣಿ-ಸುವರ್ಣಗಳಿಂದ ಭೂಷಿತವಾಗಿದ್ದ ಲೋಹಮಯವಾಗಿದ್ದ ಆ ರಥದ ಕಟಾಂಜನವು ನಕ್ಷತ್ರಗಳಿಂದ ಆವೃತವಾದ ಆಕಾಶದಂತೆ ಪ್ರಕಾಶಿಸುತ್ತಿತ್ತು. ಅವನು ಮಹಾಚಾಪವನ್ನು ಎಳೆದು ಅನೇಕ ಬಾಣಸಮೂಹಗಳನ್ನು ಪ್ರಯೋಗಿಸಿ ಆರ್ಜುನಿಯು ದ್ವಾರವನ್ನಾಗಿಸಿದ್ದ ವ್ಯೂಹದ ಆ ಖಂಡವನ್ನು ಮುಚ್ಚಿಬಿಟ್ಟನು.

ಅವನು ಸಾತ್ಯಕಿಯನ್ನು ಮೂರು ಬಾಣಗಳಿಂದ, ಎಂಟರಿಂದ ವೃಕೋದರನನ್ನು, ಹಾಗೆಯೇ ಧೃಷ್ಟದ್ಯುಮ್ನನನ್ನು ಆರವತ್ತರಿಂದ, ವಿರಾಟನನ್ನು ಹತ್ತು ಶರಗಳಿಂದ, ದ್ರುಪದನನ್ನು ಐದು ತೀಕ್ಷ್ಣ ಶರಗಳಿಂದ, ಹತ್ತರಿಂದ ಶಿಖಂಡಿಯನ್ನು, ಇಪ್ಪತ್ತೈದರಿಂದ ಕೇಕಯರನ್ನು, ದ್ರೌಪದೇಯರನು ಮೂರು ಮೂರು ಬಾಣಗಳಿಂದ ಮತ್ತು ಯುಧಿಷ್ಠಿರನನ್ನು ಎಪ್ಪತ್ತು ಬಾಣಗಳಿಂದಲೂ ಪ್ರಹರಿಸಿ, ಉಳಿದವರನ್ನೂ ಬಾಣಗಳ ಮುಹಾ ಜಾಲಗಳನ್ನು ಸುರಿಸಿ ಓಡಿಸಿಬಿಟ್ಟನು. ಅದೊಂದು ಅದ್ಭುತವಾಗಿತ್ತು. ಆಗ ರಾಜಾ ಧರ್ಮಪುತ್ರನು ನಸುನಗುತ್ತಾ ಹೊಂಬಣ್ಣದ ನಿಶಿತ ಭಲ್ಲವನ್ನು ಪ್ರಯೋಗಿಸಿ ಅವನ ಕಾರ್ಮುಕವನ್ನು ಕತ್ತರಿಸಿದನು. ಕಣ್ಣು ಮುಚ್ಚಿ ತೆಗೆಯುವುದರೊಳಗಾಗಿ ಅವನು ಇನ್ನೊಂದು ಬಿಲ್ಲನ್ನು ಎತ್ತಿಕೊಂಡು ಹತ್ತು ಬಾಣಗಳಿಂದ ಪಾರ್ಥನನ್ನೂ, ಅನ್ಯರನ್ನು ಮೂರು ಮೂರು ಬಾಣಗಳಿಂದಲೂ ಹೊಡೆದನು.

ಅವನ ಆ ಹಸ್ತಲಾಘವನ್ನು ಅರ್ಥಮಾಡಿಕೊಂಡ ಭೀಮನು ಮೂರು ಮೂರು ಬಾಣಗಳಿಂದ ಪುನಃ ಅವನ ಧನುಸ್ಸನ್ನೂ, ಧ್ವಜವನ್ನೂ, ಚತ್ರವನ್ನೂ ಭೂಮಿಯ ಮೇಲೆ ಬೀಳಿಸಿದನು. ಆ ಬಲವಾನನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಹೆದೆಯೇರಿಸಿ ಭೀಮನ ಕೇತು, ಧನುಸ್ಸು ಮತ್ತು ಕುದುರೆಗಳನ್ನು ಕಡಿದು ಉರುಳಿಸಿದನು. ಧನುಸ್ಸನ್ನು ಕಳೆದುಕೊಂಡ ಅವನು ಕುದುರೆಗಳು ಹತವಾಗಿದ್ದ ಆ ಉತ್ತಮ ರಥದಿಂದ ಧುಮುಕಿ ಸಿಂಹವು ಪರ್ವತ ಶಿಖರವನ್ನೇರುವಂತೆ ಸಾತ್ಯಕಿಯ ರಥವನ್ನೇರಿದನು. ಶ್ರವಣಮಾತ್ರದಿಂದ ನಂಬಲಾಗದ ಪರಮಾದ್ಭುತವಾದ ಸಿಂಧುರಾಜನ ಆ ಸಾಹಸಕರ್ಮವನ್ನು ಪ್ರತ್ಯಕ್ಷವಾಗಿಯೇ ನೋಡಿದ ಕೌರವರ ಕಡೆಯವರು ಸಂಹೃಷ್ಟರಾಗಿ “ಸಾಧು! ಸಾಧು!” ಎಂದು ಕೂಗಿದರು. ಅಸ್ತ್ರತೇಜಸ್ಸಿನಿಂದ ಅವನು ಒಬ್ಬನೇ ಸಂಕ್ರುದ್ಧರಾದ ಪಾಂಡವರನ್ನು ತಡೆಹಿಡಿದ ಅವನ ಆ ಕರ್ಮವನ್ನು ನೋಡಿ ಸರ್ವ ಭೂತಗಳೂ ಅವನನ್ನು ಗೌರವಿಸಿದವು.

ಈ ಮೊದಲು ಸೌಭದ್ರನು ಅನೇಕ ಗಜ-ಯೋಧರನ್ನು ಸಂಹರಿಸಿ ಪಾಂಡವರಿಗೆ ತೋರಿಸಿಕೊಟ್ಟಿದ್ದ ದಾರಿಯನ್ನೇ ಸೈಂಧವನು ಮುಚ್ಚಿಬಿಟ್ಟನು. ಆ ಮತ್ಸ್ಯ-ಪಾಂಚಾಲ-ಕೇಕಯ ವೀರರು ಮತ್ತು ಪಾಂಡವರು ಎಷ್ಟೇ ಪ್ರಯತ್ನಪಟ್ಟರೂ ಸೈಂಧವನನ್ನು ಅಲ್ಲಿಂದ ಕದಲಿಸಲು ಅವರಿಗೆ ಸಾಧ್ಯವಾಗಲಿಲ್ಲ. ಪಾಂಡವರಲ್ಲಿ ಯಾರ್ಯಾರು ದ್ರೋಣನ ವ್ಯೂಹವನ್ನು ಭೇದಿಸಲು ಪ್ರಯತ್ನಿಸುತ್ತಿದ್ದರೋ ಅವರನ್ನು ದೇವವರವನ್ನು ಪಡೆದಿದ್ದ ಸೈಂಧವನು ತಡೆಯುತ್ತಿದ್ದನು. ವಿಜಯೇಚ್ಛಿಗಳಾದ ಪಾಂಡವರು ಸೈಂಧವನಿಂದ ತಡೆಯಲ್ಪಡಲು ಕೌರವರ ಮತ್ತು ಪಾಂಡವರ ನಡುವೆ ಅತಿ ಘೋರವಾದ ಯುದ್ಧವು ನಡೆಯಿತು.

ಅಭಿಮನ್ಯು ಯುದ್ಧ

ಅಷ್ಟರಲ್ಲಿ ಸತ್ಯಸಂಧ ತೇಜಸ್ವಿ ಆರ್ಜುನಿಯು ದುರಾಸದವಾದ ಕೌರವ ಸೇನೆಯನ್ನು ಪ್ರವೇಶಿಸಿ ಮೊಸಳೆಯು ಸಮುದ್ರವನ್ನು ಹೇಗೋ ಹಾಗೆ ಅಲ್ಲೋಲಕಲ್ಲೋಲಗೊಳಿಸಿದನು. ಶರವರ್ಷದಿಂದ ಕ್ಷೋಭೆಗೊಳಿಸುತ್ತಿದ್ದ ಅರಿಂದಮ ಸೌಭದ್ರನನ್ನು ಕುರುಸತ್ತಮ ಪ್ರಧಾನರು ಒಟ್ಟಾಗಿ ಆಕ್ರಮಿಸಿದರು. ಒಟ್ಟಾಗಿ ಸೇರಿ ಶರವರ್ಷಗಳನ್ನು ಸೃಷ್ಟಿಸುತ್ತಿದ್ದ ಅಮಿತೌಜಸರಾದ ಕೌರವರ ಮತ್ತು ಅವನ ನಡುವೆ ದಾರುಣ ಯುದ್ಧವು ನಡೆಯಿತು. ಶತ್ರುಪಕ್ಷದ ರಥಸಮೂಹಗಳಿಂದ ಸುತ್ತುವರೆಯಲ್ಪಟ್ಟ ಆರ್ಜುನಿಯು ವೃಷಸೇನನ ಸಾರಥಿಯನ್ನೂ ಧನುಸ್ಸನ್ನೂ ಕತ್ತರಿಸಿದನು. ಬಲವಾನನು ಜಿಹ್ಮಗ ಶರಗಳಿಂದ ಅವನ ಕುದುರೆಗಳನ್ನೂ ಹೊಡೆಯಲು ವಾಯುವೇಗಸಮನಾದ ಕುದುರೆಗಳು ಅವನ ರಥವನ್ನು ರಣದಿಂದ ಕೊಂಡೊಯ್ದವು. ಅದರ ಮಧ್ಯದಲ್ಲಿ ಅಭಿಮನ್ಯುವಿನ ಸಾರಥಿಯು ರಥವನ್ನು ಮಹಾರಥರ ಮಧ್ಯದಿಂದ ಬೇರೊಂದು ಕಡೆ ಕೊಂಡೊಯ್ಯಲು ಅದನ್ನು ನೋಡಿದ ರಥಸಮೂಹಗಳು ಹೃಷ್ಟರಾಗಿ “ಸಾಧು! ಸಾಧು!” ಎಂದು ಕೂಗಿದರು. ಸಿಂಹದಂತೆ ಸಂಕ್ರುದ್ಧನಾಗಿ ಶರಗಳಿಂದ ಅರಿಗಳನ್ನು ಸಂಹರಿಸುತ್ತಿದ್ದ ಅವನನ್ನು ದೂರದಿಂದಲೇ ನೋಡಿದ ವಸಾತೀಯನು ಬೇಗನೆ ಮುಂದೆ ಬಂದು ಎದುರಿಸಿದನು. ಅವನು ಅಭಿಮನ್ಯುವನ್ನು ಅರವತ್ತು ರುಕ್ಮಪುಂಖಗಳಿಂದ ಮುಚ್ಚಿ “ನಾನು ಜೀವಿಸಿರುವಾಗ ನೀನು ಜೀವಸಹಿತವಾಗಿ ಹೋಗಲಾರೆ!” ಎಂದು ಹೇಳಿದನು.

ಆಗ ಸೌಭದ್ರನು ಉಕ್ಕಿನ ಕವಚವನ್ನು ಧರಿಸಿದ್ದ ಅವನ ಹೃದಯಕ್ಕೆ ಗುರಿಯಿಟ್ಟು ದೂರಲಕ್ಷ್ಯವಿರುವ ಬಾಣದಿಂದ ಹೊಡೆಯಲು ಅವನು ಅಸುನೀಗಿ ಭೂಮಿಯ ಮೇಲೆ ಬಿದ್ದನು. ವಸಾತಿಯು ಹತನಾದುದನ್ನು ನೋಡಿ ಕ್ರುದ್ಧರಾದ ಕ್ಷತ್ರಿಯಪುಂಗವರು ಅಭಿಮನ್ಯುವನ್ನು ಸಂಹರಿಸಲು ಸುತ್ತುವರೆದರು. ನಾನಾ ರೂಪದ ಅನೇಕ ಚಾಪಗಳನ್ನು ಠೇಂಕರಿಸುತ್ತಿದ್ದ ಅರಿಗಳೊಡನೆ ಸೌಭದ್ರನ ರೌದ್ರ ಯುದ್ಧವು ನಡೆಯಿತು. ಕ್ರುದ್ಧನಾದ ಫಾಲ್ಗುನಿಯು ಅವರ ಶರಗಳನ್ನೂ, ಧನುಸ್ಸುಗಳನ್ನೂ, ಶರೀರಗಳನ್ನೂ, ಕರ್ಣಕುಂಡಲ-ಹಾರಗಳೊಂದಿಗೆ ಶಿರಗಳನ್ನೂ ಕತ್ತರಿಸಿದನು. ಖಡ್ಗಗಳೊಂದಿಗೆ, ಅಂಗುಲಿತ್ರಾಣಗಳೊಂದಿಗೆ, ಪಟ್ಟಿಶ-ಪರಶಾಯುಧಗಳೊಂದಿಗೆ ಹೇಮಾಭರಣ ಭೂಷಿತವಾದ ಭುಜಗಳು ಅದೃಶ್ಯವಾಗುತ್ತಿದ್ದವು. ಮಹಿಯ ಮೇಲೆ ಮಾಲೆಗಳು, ಆಭರಣಗಳು, ವಸ್ತ್ರಗಳು, ಕೆಳಗೆ ಬಿದ್ದಿದ್ದ ಮಹಾಧ್ವಜಗಳು, ಕವಚಗಳು, ಗುರಾಣಿಗಳು, ಹಾರಗಳು, ಮುಕುಟಗಳು, ಚತ್ರ-ಚಾಮರಗಳು, ಯುದ್ಧೋಪಯೋಗಿ ಸಾಮಗ್ರಿಗಳು, ಆಸನಗಳು, ಈಷಾದಂಡಗಳು, ಮೂಕಿಕಂಬಗಳು, ಅಚ್ಚುಮರಗಳು, ಮುರಿದುಹೋದ ಚಕ್ರಗಳು, ಭಗ್ನವಾದ ಅನೇಕ ನೊಗಗಳು, ಹರಿದುಹೋದ ಪತಾಕೆಗಳು, ಅಸುನೀಗಿ ಮಲಗಿದ್ದ ಸಾರಥಿ-ಕುದುರೆಗಳು, ಮುರಿದ ರಥಗಳು, ಮತ್ತು ಹತವಾದ ಆನೆಗಳು ಹರಡಿ ಬಿದ್ದಿದ್ದವು. ಜಯವನ್ನು ಬಯಸಿದ್ದ ಶೂರ ನಾನಾಜನಪದೇಶ್ವರ ಕ್ಷತ್ರಿಯರು ಹತರಾಗಿ ಬಿದ್ದಿದ್ದ ಭೂಮಿಯು ದಾರುಣವಾಗಿ ಕಂಡಿತು.

ರಣದಲ್ಲಿ ಕ್ರುದ್ಧನಾಗಿ ಎಲ್ಲ ದಿಕ್ಕು-ಉಪದಿಕ್ಕುಗಳಲ್ಲಿ ಸಂಚರಿಸುತ್ತಿದ್ದ ಅಭಿಮನ್ಯುವಿನ ರೂಪವು ಮಧ್ಯ-ಮಧ್ಯದಲ್ಲಿ ಕಾಣಿಸುತ್ತಲೇ ಇರಲಿಲ್ಲ. ಕೇವಲ ಅವನ ಥಳಥಳಿಸುವ ಬಂಗಾರದ ಕವಚ, ಆಭರಣಗಳು, ಧನುಸ್ಸು ಮತ್ತು ಶರಗಳು ಕಾಣುತ್ತಿದ್ದವು. ಸೂರ್ಯನಂತೆ ರಣದ ಮಧ್ಯದಲ್ಲಿ ನಿಂತು ಬಾಣಗಳಿಂದ ಯೋಧರ ಪ್ರಾಣಗಳನ್ನು ಹೀರುತ್ತಿದ್ದ ಅವನನ್ನು ಆಗ ಕಣ್ಣುಗಳನ್ನು ತೆರೆದು ನೋಡಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ.

ಕಾಲವು ಸಮೀಪಿಸಿದಾಗ ಸರ್ವಭೂತಗಳ ಪ್ರಾಣಗಳನ್ನು ತೆಗೆದುಕೊಳ್ಳುವ ಅಂತಕನಂತೆ ಆರ್ಜುನಿಯು ಶೂರರ ಆಯುಸ್ಸುಗಳನ್ನು ಅಪಹರಿದನು. ಶಕ್ರನಂತೆಯೇ ಆ ಶಕ್ರನ ಮಗನ ಮಗ ಬಲಶಾಲೀ ವಿಕ್ರಾಂತ ಅಭಿಮನ್ಯುವು ಆ ಸೇನೆಯನ್ನು ಮಥಿಸುತ್ತಾ ಬಹುವಾಗಿ ಶೋಭಿಸಿದನು. ಕ್ಷತ್ರಿಯೇಂದ್ರರಿಗೆ ಅಂತಕನಂತಿದ್ದ ಅವನು ಶತ್ರು ಸೈನ್ಯವನ್ನು ಪ್ರವೇಶಿಸಿ ವ್ಯಾಘ್ರವು ಜಿಂಕೆಯನ್ನು ಹೇಗೋ ಹಾಗೆ ಸತ್ಯಶ್ರವಸನ ಪ್ರಾಣಗಳನ್ನು ಅಪಹರಿಸಿದನು. ಸತ್ಯಶ್ರವಸನು ಕೆಳಗುರುಳಲು ಮಹಾರಥರು ತ್ವರೆಮಾಡಿ ವಿಪುಲ ಶಸ್ತ್ರಗಳನ್ನು ಹಿಡಿದು ಅಭಿಮನ್ಯುವನ್ನು ಆಕ್ರಮಣಿಸಿದರು. “ನಾನು ಮೊದಲು! ನಾನು ಮೊದಲು!” ಎಂದು ಸ್ಪರ್ಧಿಸುತ್ತಾ ಅರ್ಜುನಾತ್ಮಜನನ್ನು ಕೊಲ್ಲಲು ಬಯಸಿ ಕ್ಷತ್ರಿಯಪುಂಗವರು ಮುಂದಾದರು. ತನ್ನ ಮೇಲೆ ಬೀಳಲು ಆತುರದಿಂದ ಮುನ್ನುಗ್ಗುತ್ತಿದ್ದ ಕ್ಷತ್ರಿಯರ ಸೇನೆಗಳನ್ನು ಅವನು ಸಮುದ್ರದಲ್ಲಿ ತಿಮಿಂಗಿಲವು ಕ್ಷುದ್ರಮೀನುಗಳನ್ನು ಹೇಗೋ ಹಾಗೆ ಕಬಳಿಸಿದನು. ಪಲಾಯನ ಮಾಡದೇ ಅವನ ಸಮೀಪಕ್ಕೆ ಯಾರೆಲ್ಲ ಹೋಗುತ್ತಿದ್ದರೂ ಅವರು ಸಮುದ್ರಕ್ಕೆ ಸೇರಿದ ನದಿಗಳಂತೆ ಹಿಂದಿರುಗುತ್ತಿರಲಿಲ್ಲ. ಮೊಸಳೆಗೆ ಬಾಯಿಗೆ ಸಿಕ್ಕಿದವರಂತೆ, ಚಂಡಮಾರುತದ ಭಯದಿಂದ ಆರ್ದಿತವಾದವರಂತೆ, ಮತ್ತು ಸಮುದ್ರದಲ್ಲಿ ದಿಕ್ಕುತಪ್ಪಿದ ನೌಕೆಯಂತೆ ಆ ಸೇನೆಯು ನಡುಗಿತು.

ಆಗ ರುಕ್ಮರಥನೆಂಬ ಹೆಸರಿನ ಮದ್ರೇಶ್ವರನ ಬಲಶಾಲೀ ಮಗನು ನಿರ್ಭಯನಾಗಿ ಭಯಗೊಂಡಿದ್ದ ಸೇನೆಗೆ ಆಶ್ವಾಸನೆಯನ್ನು ನೀಡುತ್ತಾ ಹೇಳಿದನು: “ಭಯಪಡುವುದನ್ನು ಸಾಕುಮಾಡಿ! ಶೂರರೇ! ನಾನಿರುವಾಗ ನಿಮಗೆ ಯಾವುದೇ ರೀತಿಯ ಭಯಕ್ಕೂ ಕಾರಣವಿಲ್ಲ. ನಾನು ಇವನನ್ನು ಜೀವಸಹಿತ ಹಿಡಿಯುತ್ತೇನೆ. ಅದರಲ್ಲಿ ಸಂಶಯವಿಲ್ಲ.” ಹೀಗೆ ಹೇಳಿ ಆ ವೀರ್ಯವಾನನು ಸುಕಲ್ಪಿತ ರಥದಲ್ಲಿ ವಿರಾಜಿಸುತ್ತಾ ಸೌಭದ್ರನನ್ನು ಆಕ್ರಮಿಸಿದನು. ಅವನು ಅಭಿಮನ್ಯುವಿನ ವಕ್ಷಸ್ಥಳಕ್ಕೆ ಮತ್ತು ಮೂರು ಮೂರು ನಿಶಿತ ಶರಗಳಿಂದ ಅವನ ಎಡ-ಬಲ ಬಾಹುಗಳನ್ನೂ ಹೊಡೆದು ಗರ್ಜಿಸಿದನು. ಆಗ ಫಾಲ್ಗುಣಿಯು ಅವನ ಧನುಸ್ಸನ್ನೂ, ಎಡ-ಬಲ ಭುಜಗಳನ್ನೂ, ಸುಂದರ ಕಣ್ಣು-ಹುಬ್ಬುಗಳಿಂದ ಕೂಡಿದ್ದ ಶಿರವನ್ನೂ ಕತ್ತರಿಸಿ ಭೂಮಿಯ ಮೇಲೆ ಬೀಳಿಸಿದನು.

ಜೀವಂತವಾಗಿ ಹಿಡಿಯಲು ಬಯಸಿದ್ದ ಶಲ್ಯನ ಮಾನಿನೀ ಪುತ್ರ ರುಕ್ಮರಥನು ಯಶಸ್ವಿನೀ ಸೌಭದ್ರನಿಂದಲೇ ಹತನಾದುದನ್ನು ನೋಡಿ ಸಂಗ್ರಾಮದುರ್ಮದರಾದ, ಪ್ರಹಾರಿಗಳಾದ, ಶಲ್ಯಪುತ್ರನ ಮಿತ್ರ ರಾಜಪುತ್ರ ಮಹಾರಥರು ಸುವರ್ಣಧ್ವಜಗಳೊಂದಿಗೆ ನಾಲ್ಕು ಮೊಳಗಳ ಧನುಸ್ಸುಗಳನ್ನು ಟೇಂಕರಿಸುತ್ತಾ ಆರ್ಜುನಿಯನ್ನು ಶರವರ್ಷಗಳಿಂದ ಎಲ್ಲ ಕಡೆಗಳಿಂದಲೂ ಸುತ್ತುವರೆದರು. ಸಮರದಲ್ಲಿ ಶೂರ ಅಪರಾಜಿತ ಸೌಭದ್ರನು ಒಬ್ಬನೇ ಅನೇಕ ಶೂರ-ಶಿಕ್ಷಾಬಲೋಪೇತ-ತರುಣ-ಅಮರ್ಷರ ಶರವೃಷ್ಟಿಯಿಂದ ಮುಸುಕಿದ್ದುದನ್ನು ನೋಡಿ ಹೃಷ್ಟನಾದ ದುರ್ಯೋಧನನು ಅವನು ವೈವಸ್ವತನ ಭವನಕ್ಕೆ ಹೋದನೆಂದೇ ತಿಳಿದನು. ಸುವರ್ಣ ಪುಂಖಗಳಿದ್ದ, ನಾನಾ ಚಿಹ್ನೆಗಳಿಂದೊಡಗೂಡಿದ, ಮೂರು ಮೂರು ತೀಕ್ಷ್ಣ ಶರಗಳಿಂದ ಆ ನೃಪಾತ್ಮಜರು ಆರ್ಜುನಿಯನ್ನು ಒಂದು ನಿಮಿಷ ಕಾಣಿಸದಂತೆಯೇ ಮಾಡಿ ಬಿಟ್ಟರು. ಮುಳ್ಳುಹಂದಿಯ ಶರೀರದಂತೆ ಅವನೂ ಅವನ ಸೂತನೂ, ಕುದುರೆಗಳೂ, ಧ್ವಜವೂ, ರಥವೂ ಬಾಣಗಳಿಂದ ಚುಚ್ಚಲ್ಪಟ್ಟರು. ಆಳವಾಗಿ ಗಾಯಗೊಂಡು ಕ್ರುದ್ಧನಾದ ಅವನು ಅಂಕುಶದಿಂದ ತಿವಿಯಲ್ಪಟ್ಟ ಆನೆಯಂತೆ ಘೀಳಿಟ್ಟನು. ಮತ್ತು ಗಾಂಧರ್ವಾಸ್ತ್ರವನ್ನು ಪ್ರಯೋಗಿಸಿ ರಥಮಾಯೆಯನ್ನು ಬಳಸಿದನು. ಅರ್ಜುನನು ತಪಸ್ಸುಮಾಡಿ ತುಂಬುರು ಪ್ರಮುಖ ಗಂಧರ್ವರಿಂದ ಯಾವ ಅಸ್ತ್ರವನ್ನು ಪಡೆದಿದ್ದನೋ ಅದನ್ನೇ ತನ್ನ ಮಗನಿಗೂ ಉಪದೇಶಿಸಿದ್ದನು. ಅದನ್ನು ಬಳಸಿ ಅವನು ಶತ್ರುಗಳನ್ನು ಮೋಹಿಸಿದನು. ಬೆಂಕಿಯ ಕೊಳ್ಳಿಯ ಚಕ್ರದಂತೆ ಒಬ್ಬನೇ ನೂರಾಗಿಯೂ ಸಹಸ್ರವಾಗಿಯೂ ಕಾಣಿಸುತ್ತಾ ಬೇಗನೇ ಅಸ್ತ್ರಗಳನ್ನು ಪ್ರದರ್ಶಿಸಿದನು.

ರಥದ ಚಲನೆ ಮತ್ತು ಅಸ್ತ್ರಗಳಿಂದ ಮೋಹಿಸಿ ಆ ಪರಂತಪನು ನೂರಾರು ಮಹೀಕ್ಷಿತರ ಶರೀರಗಳನ್ನು ಭೇದಿಸಿದನು. ಪ್ರಾಣವಿರುವವರ ಪ್ರಾಣಗಳನ್ನು ರಣದಲ್ಲಿ ನಿಶಿತ ಶರಗಳಿಂದ ಪರಲೋಕಕ್ಕೆ ಕಳುಹಿಸಲು ಶರೀರಗಳು ಭೂಮಿಯ ಮೇಲೆ ಬಿದ್ದವು. ಫಾಲ್ಗುನಿಯು ನಿಶಿತ ಭಲ್ಲಗಳಿಂದ ಅವರ ಧನುಸ್ಸುಗಳನ್ನೂ, ಕುದುರೆಗಳನ್ನೂ, ಸಾರಥಿಗಳನ್ನೂ, ಧ್ವಜಗಳನ್ನೂ, ಅಂಗದಗಳೊಡನೆ ಬಾಹುಗಳನ್ನೂ ಶಿರಗಳನ್ನೂ ಕತ್ತರಿಸಿದನು. ಫಲವನ್ನು ಕೊಡಲಿರುವ ಐದುವರ್ಷದ ಮಾವಿನ ಮರವು ಸಿಡುಲಿಗೆ ಸಿಲುಕಿ ಭಗ್ನವಾಗುವಂತೆ ಆ ನೂರು ರಾಜಪುತ್ರರು ಸೌಭದ್ರನಿಂದ ಭಗ್ನರಾಗಿ ಹೋದರು. ಕ್ರುದ್ಧ ಸರ್ಪದ ವಿಷದಂತಿದ್ದ ಅ ಸುಖೋಚಿತ ಸುಕುಮಾರರೆಲ್ಲರೂ ಒಬ್ಬನಿಂದನೇ ನಿಹತರಾದುದನ್ನು ನೋಡಿ ದುರ್ಯೋಧನನು ಭೀತನಾದನು. ರಥಿಗಳು, ಆನೆಗಳು, ಕುದುರೆಗಳು ಮತ್ತು ಪದಾತಿಗಳು ಅವನಿಂದ ನಾಶವಾಗುತ್ತಿರುವುದನ್ನು ನೋಡಿ ಸಹಿಸಿಕೊಳ್ಳಲಾರದೇ ದುರ್ಯೋಧನನು ಬೇಗನೇ ಅವನನ್ನು ಆಕ್ರಮಣಿಸಿದನು. ಅವರಿಬ್ಬರ ನಡುವೆ ನಡೆದ ಒಂದೇ ಕ್ಷಣದ ಸಂಗ್ರಾಮದಲ್ಲಿ ನೂರಾರು ಶರಗಳಿಂದ ಗಾಯಗೊಂಡ ದುರ್ಯೋಧನನು ವಿಮುಖನಾದನು.

ಮುಖವು ಒಣಗಿ ಹೋಗಿ, ಕಣ್ಣುಗಳು ತಿರುಗುತ್ತಿರಲು, ಶರೀರಗಳು ಬೆವತಿರಲು, ರೋಮಗಳು ನಿಮಿರೆದ್ದು, ಪಲಾಯನದಲ್ಲಿಯೇ ಉತ್ಸಾಹಿಗಳಾಗಿ, ಶತ್ರುಗಳನ್ನು ಜಯಿಸುವುದರಲ್ಲಿ ನಿರುತ್ಸಾಹಿಗಳಾಗಿ, ಹತರಾಗಿದ್ದ ಸಹೋದರರು-ಪಿತೃಗಳು-ಪುತ್ರರು-ಮಿತ್ರರು-ಸಂಬಂಧಿಗಳು-ಬಾಂಧವರನ್ನು ಅಲ್ಲಲ್ಲಿಯೇ ಬಿಟ್ಟು ತಾವು ಕುಳಿತಿದ್ದ ಕುದುರೆ ಆನೆಗಳನ್ನು ಅವಸರ ಪಡಿಸುತ್ತಾ ಓಡಿ ಹೋಗುತ್ತಿದ್ದರು. ಅವರು ಹಾಗೆ ಪ್ರಭಗ್ನರಾದುದನ್ನು ನೋಡಿ ದ್ರೋಣ, ದ್ರೌಣಿ, ಬೃಹದ್ಬಲ, ಕೃಪ, ದುರ್ಯೋಧನ, ಕರ್ಣ, ಕೃತವರ್ಮ, ಮತ್ತು ಸೌಬಲರು ಸಂಕ್ರುದ್ಧರಾಗಿ ಅಪರಾಜಿತ ಸೌಭದ್ರನನ್ನು ಆಕ್ರಮಣಿಸಿದರು. ಅವರನ್ನೂ ಕೂಡ ಹೆಚ್ಚುಪಾಲು ಅಭಿಮನ್ಯುವು ವಿಮುಖರನ್ನಾಗಿ ಮಾಡಿದನು.

ಲಕ್ಷ್ಮಣ ವಧೆ

ಆದರೆ ಅವರಲ್ಲಿ ಒಬ್ಬ – ಸುಖದಲ್ಲಿಯೇ ಬೆಳೆದಿದ್ದ, ಬಾಲ್ಯದಿಂದಲೂ ದರ್ಪ-ಭಯಗಳನ್ನು ತೊರೆದಿದ್ದ, ಇಷ್ವಸ್ತ್ರಗಳನ್ನು ಚೆನ್ನಾಗಿ ತಿಳಿದಿದ್ದ, ಮಹಾತೇಜಸ್ವಿ ಲಕ್ಷ್ಮಣನು ಆರ್ಜುನಿಯನ್ನು ಎದುರಿಸಿದನು. ಮಗನ ಮೇಲಿನ ಪ್ರೀತಿಯಿಂದ ಅವನ ತಂದೆ ದುರ್ಯೋಧನನೂ ಅವನನ್ನು ಹಿಂಬಾಲಿಸಿದನು. ಇತರ ಮಹಾರಥರೂ ಹಿಂದಿರುಗಿದರು. ಮೋಡಗಳು ಮಳೆಗರೆದು ಪರ್ವತವನ್ನು ಮುಚ್ಚುವಂತೆ ಅವನು ಮತ್ತು ಅವನ ಅನುಯಾಯಿಗಳು ಬಾಣಗಳಿಂದ ಅವನನ್ನು ಮುಚ್ಚಿಬಿಟ್ಟರು. ಮದಿಸಿದ ಸಲಗವನ್ನು ಇನ್ನೊಂದು ಮದಿಸಿದ ಸಲಗವು ಎದುರಿಸುವಂತೆ ರಣದಲ್ಲಿ ಕಾರ್ಷ್ಣಿಯು ತನ್ನ ತಂದೆಯ ಸಮೀಪದಲ್ಲಿಯೇ ನಿಂತು ಕಾರ್ಮುಕವನ್ನು ಎತ್ತಿ ಹಿಡಿದಿದ್ದ ಧೃತರಾಷ್ಟ್ರನ ಮೊಮ್ಮಗ, ದುರ್ಧರ್ಷ, ನೋಡಲು ಸುಂದರನಾಗಿದ್ದ, ಅತ್ಯಂತ ಸುಖದಲ್ಲಿ ಬೆಳೆದಿದ್ದ, ಧನೇಶ್ವರನ ಮಗನಂತಿದ್ದ ಶೂರ ಲಕ್ಷ್ಮಣನನ್ನು ಎದುರಿಸಿದನು. ಎದುರಿಸಲು ಪರವೀರಹ ಸೌಭದ್ರನು ಲಕ್ಷ್ಮಣನ ನಿಶಿತ ತೀಕ್ಷ್ಣ ಶರಗಳಿಂದ ಬಾಹುಗಳು ಮತ್ತು ಎದೆಯಲ್ಲಿ ಹೊಡೆಯಲ್ಪಟ್ಟನು. ಕೋಲಿನಿಂದ ಹೊಡೆಯಲ್ಪಟ್ಟ ಸರ್ಪದಂತೆ ಸಂಕ್ರುದ್ಧನಾದ ಅವನು ಲಕ್ಷ್ಮಣನಿಗೆ ಹೇಳಿದನು: “ಈ ಲೋಕವನ್ನೆಲ್ಲ ಒಮ್ಮೆ ಚೆನ್ನಾಗಿ ನೋಡಿಕೋ! ಇನ್ನೊಂದು ಲೋಕಕ್ಕೆ ಹೋಗಲಿರುವೆ. ಬಾಂಧವರೆಲ್ಲರೂ ನೋಡುತ್ತಿರುವಂತೆ ನಿನ್ನನ್ನು ನಾನು ಯಮಸಾದನಕ್ಕೆ ಕಳುಹಿಸುತ್ತೇನೆ!”

ಹೀಗೆ ಹೇಳಿ ಪರವೀರಹ ಮಹಾಬಾಹು ಸೌಭದ್ರನು ಪೊರೆಬಿಟ್ಟ ಸರ್ಪದಂತಿದ್ದ ಭಲ್ಲವನ್ನು ತೆಗೆದು ಪ್ರಯೋಗಿಸಿದನು. ಅದು ಸುಂದರನಾಗಿದ್ದ ಲಕ್ಷ್ಮಣನ ಸುಂದರ ಮೂಗು, ಸುಂದರ ಹುಬ್ಬು, ಮುಂಗುರುಳುಗಳ ಕುಂಡಲಗಳನ್ನು ಧರಿಸಿದ್ದ ಶಿರವನ್ನು ಅಪಹರಿಸಿತು. ಲಕ್ಷ್ಮಣನು ಹತನಾದುದನ್ನು ನೋಡಿ ಜನರು ಹಾಹಾಕಾರ ಮಾಡಿದರು. ತನ್ನ ಪ್ರಿಯಪುತ್ರನು ಕೆಳಗುರುಳಲು ಕ್ರುದ್ಧನಾಗಿ ಕ್ಷತ್ರಿಯರ್ಷಭ ದುರ್ಯೋಧನನು “ಇವನನ್ನು ಕೊಲ್ಲಿ!” ಎಂದು ಕ್ಷತ್ರಿಯರಿಗೆ ಕೂಗಿ ಹೇಳಿದನು. ಆಗ ದ್ರೋಣ, ಕೃಪ, ಕರ್ಣ, ದ್ರೋಣಪುತ್ರ, ಬೃಹದ್ಬಲ, ಕೃತವರ್ಮ ಈ ಷಡ್ರಥರು ಅವನನ್ನು ಮುತ್ತಿಗೆ ಹಾಕಿದರು. ಅವರನ್ನು ನಿಶಿತ ಬಾಣಗಳಿಂದ ಗಾಯಗೊಳಿಸಿ ವಿಮುಖರನ್ನಾಗಿ ಮಾಡಿ ಆರ್ಜುನಿಯು ಕ್ರುದ್ಧನಾಗಿ ವೇಗದಿಂದ ಸೈಂಧವನ ಮಹಾಬಲದ ಮೇಲೆ ಎರಗಿದನು. ಅವನನ್ನು ದಾರಿಯಲ್ಲಿಯೇ ಗಜಸೇನೆಯಿಂದ ರಕ್ಷಿತರಾದ ಕಲಿಂಗರು, ನಿಷಾದರು ಮತ್ತು ವೀರ್ಯವಾನ್ ಕ್ರಾಥಪುತ್ರನು ಅವನನ್ನು ಆಕ್ರಮಣಿಸಿದರು. ಆಗಲೇ ಇತ್ಯರ್ಥವಾಗುವಂತಹ ಯುದ್ಧವು ನಡೆಯಿತು.

ಆರ್ಜುನಿಯು ಆ ಗಜಸೇನೆಯನ್ನು ಅಂಬರದಲ್ಲಿರುವ ನೂರಾರು ಕಪ್ಪು ಮೋಡಗಳನ್ನು ಭಿರುಗಾಳಿಯು ಚದುರಿಸುತ್ತದೆಯೋ ಹಾಗೆ ಚೆಲ್ಲಾಪಿಲ್ಲಿ ಮಾಡಿದನು. ಆಗ ಕ್ರಾಥನು ಶರವ್ರಾತಗಳಿಂದ ಆರ್ಜುನಿಯನ್ನು ಮುಸುಕಿದನು. ಅಷ್ಟರಲ್ಲಿಯೇ ದ್ರೋಣಪ್ರಮುಖ ರಥರು ಹಿಂದಿರುಗಿ ಬಂದು ಪುನಃ ಪರಮಾಸ್ತ್ರಗಳನ್ನು ಪ್ರಯೋಗಿಸುತ್ತಾ ಸೌಭದ್ರನನ್ನು ಆಕ್ರಮಣಿಸಿದರು. ಅವುಗಳನ್ನು ತಪ್ಪಿಸಿಕೊಂಡು ಆರ್ಜುನಿಯು ತ್ವರೆಮಾಡಿ ಅವನನ್ನು ಕೊಲ್ಲಲು ಬಯಸಿ ಕ್ರಾಥಪುತ್ರನನ್ನು ಅಪ್ರಮೇಯ ಶರೌಘದಿಂದ ಹೊಡೆದನು. ಅವುಗಳು ಧನುಸ್ಸು-ಬಾಣ-ಕೇಯೂರಗಳೊಂದಿಗೆ ಅವನ ಬಾಹುಗಳನ್ನೂ, ಮುಕುಟ ಧರಿಸಿದ ಶಿರವನ್ನೂ, ಚತ್ರ-ಧ್ವಜಗಳನ್ನೂ, ಸಾರಥಿ-ಕುದುರೆಗಳನ್ನೂ ಕೆಳಗೆ ಬೀಳಿಸಿದವು. ಕುಲ-ಶೀಲ-ಶಿಕ್ಷಣ-ಶಕ್ತಿ, ಕೀರ್ತಿ ಮತ್ತು ಅಸ್ತ್ರಬಲಗಳಿಂದ ಕೂಡಿದ ಅವನು ಹತನಾಗಲು ನಿಮ್ಮವರಲ್ಲಿ ಪ್ರಾಯಶಃ ಎಲ್ಲ ವೀರರೂ ಯುದ್ಧದಿಂದ ಹಿಮ್ಮೆಟ್ಟಿದರು.

ಬೃಹದ್ಬಲ ವಧೆ

ಪಾಂಡುನಂದನ ಅಭಿಮನ್ಯುವು ಪ್ರವೇಶಿಸುತ್ತಲೇ ಕೌರವರ ಸರ್ವ ಪಾರ್ಥಿವರನ್ನೂ ವಿಮುಖರನ್ನಾಗಿ ಮಾಡಿದನು. ಅವನನ್ನಾದರೋ ದ್ರೋಣ, ಕೃಪ, ಕರ್ಣ, ದ್ರೌಣಿ, ಬೃಹದ್ಬಲ ಮತ್ತು ಕೃತವರ್ಮ ಈ ಷಡ್ರಥರು ಸುತ್ತುವರೆದರು. ಸೈಂಧವನ ಮೇಲೆ ಗುರುತರ ಭಾರವಿದ್ದುದನ್ನು ನೋಡಿ ಕೌರವ ಸೈನ್ಯವು ಯುಧಿಷ್ಠಿರನನ್ನು ಆಕ್ರಮಣಿಸಿತು. ಇತರ ವೀರರು ತಾಲಮಾತ್ರದ ಚಾಪಗಳನ್ನು ಟೇಂಕರಿಸುತ್ತಾ ಸೌಭದ್ರನ ಮೇಲೆ ಶರಾಂಬುಗಳನ್ನು ಸುರಿಸಿದರು. ಪರವೀರಹ ಸೌಭದ್ರನು ಆ ಎಲ್ಲ ಮಹೇಷ್ವಾಸರನ್ನೂ  ಸರ್ವವಿದ್ಯೆಗಳಲ್ಲಿಯೂ ಪರಿಣಿತರಾಗಿದ್ದವರನ್ನು ಬಾಣಗಳಿಂದ ತಡೆಗಟ್ಟಿದನು. ದ್ರೋಣನನ್ನು ಐವತ್ತರಿಂದ ಮತ್ತು ಬೃಹದ್ಬಲನನ್ನು ಇಪ್ಪತ್ತರಿಂದ ಹೊಡೆದು, ಕೃತವರ್ಮನನ್ನು ಎಂಭತ್ತು ಮತ್ತು ಕೃಪನನ್ನು ಅರವತ್ತು ಶಿಲೀಮುಖಗಳಿಂದ ಹೊಡೆದು, ಆರ್ಜುನಿಯು ಅಶ್ವತ್ಥಾಮನನ್ನು ರುಕ್ಮಪುಂಖಗಳ ಮಹಾವೇಗದ ಹತ್ತು ಬಾಣಗಳನ್ನು ಕಿವಿಯವರೆಗೆ ಎಳೆದು ಹೊಡೆದನು. ಫಾಲ್ಗುನಿಯು ಶತ್ರುಗಳ ಮಧ್ಯದಲ್ಲಿದ್ದ ಕರ್ಣನ ಕಿವಿಗೆ ಡೊಂಕಾಗಿದ್ದ ಪೀತ ನಿಶಿತ ಪರಮ ಬಾಣದಿಂದ ಹೊಡೆದನು. ಕೃಪನ ಎರಡೂ ಅಶ್ವಗಳನ್ನೂ ಇಬ್ಬರು ಪಾರ್ಷ್ಣಿಸಾರಥಿಗಳನ್ನೂ ಹೊಡೆದುರುಳಿಸಿ ಅವನ ಎದೆಗೆ ಹತ್ತು ಬಾಣಗಳಿಂದ ಹೊಡೆದನು. ಆಗ ಕೌರವ ಪುತ್ರರು ಮತ್ತು ವೀರರು ನೋಡುತ್ತಿದ್ದಂತೆಯೇ ಆ ಬಲಶಾಲಿಯು ಕುರುಗಳ ಕೀರ್ತಿವರ್ಧನ ವೀರ ವೃಂದಾರಕನನ್ನು ಸಂಹರಿಸಿದನು. ಶ್ರೇಷ್ಠ ಅಮಿತ್ರರೊಂದಿಗೆ ಭಯಗೊಳ್ಳದೇ ಯುದ್ಧಮಾಡುತ್ತಿದ್ದ ಆ ಶ್ರೇಷ್ಠನನ್ನು ದ್ರೌಣಿಯು ಇಪ್ಪತ್ತೈದು ಕ್ಷುದ್ರಕಗಳಿಂದ ಹೊಡೆದನು. ಆರ್ಜುನಿಯಾದರೋ ಕೂಡಲೇ ಧಾರ್ತರಾಷ್ಟ್ರರು ನೋಡುತ್ತಿದ್ದಂತೆಯೇ ಅಶ್ವತ್ಥಾಮನನ್ನು ನಿಶಿತ ಬಾಣಗಳಿಂದ ತಿರುಗಿ ಹೊಡೆದನು. ಅವನನ್ನು ದ್ರೌಣಿಯು ಅರವತ್ತು ತಿಗ್ಮಧಾರೆ, ತೇಜಸ್ವಿ ಉಗ್ರ ಬಾಣಗಳಿಂದ ಹೊಡೆಯಲು ಅವನು ಮೈನಾಕ ಪರ್ವತದಂತೆ ನಡುಗದೇ ನಿಂತಿದ್ದನು. ಆ ಮಹಾತೇಜಸ್ವಿ ಬಲವಾನನು ದ್ರೌಣಿಯನ್ನು ತಿರುಗಿ ಎಪ್ಪತ್ಮೂರು ಹೇಮಪುಂಖ ಜಿಹ್ಮಗಗಳಿಂದ ಹೊಡೆದನು. ಪುತ್ರನ ಮೇಲಿನ ಪ್ರೀತಿಯಿಂದ ದ್ರೋಣನು ಅಭಿಮನ್ಯುವಿನ ಮೇಲೆ ನೂರು ಬಾಣಗಳನ್ನು ಪ್ರಯೋಗಿಸಿದನು. ಮತ್ತು ರಣದಲ್ಲಿ ತಂದೆಯನ್ನು ರಕ್ಷಿಸುವ ಸಲುವಾಗಿ ಅಶ್ವತ್ಥಾಮನು ಅಭಿಮನ್ಯುವಿನ ಮೇಲೆ ಎಂಟು ಬಾಣಗಳನ್ನೂ, ಕರ್ಣನು ಇಪ್ಪತ್ತೆರಡು ಭಲ್ಲಗಳನ್ನು, ಕೃತವರ್ಮನು ಹದಿನಾಲ್ಕು, ಬೃಹದ್ಬಲನು ಐವತ್ತನ್ನೂ, ಕೃಪ ಶಾರದ್ವತನು ಹತ್ತನ್ನು ಪ್ರಹರಿಸಿದರು. ಅವರೆಲ್ಲರನ್ನೂ ತಿರುಗಿ ಹತ್ತು ಹತ್ತು ಬಾಣಗಳಿಂದ ಹೊಡೆದು ಸೌಭದ್ರನು  ಎಲ್ಲೆಡೆಗಳಿಂದ ನಿಶಿತ ಶರಗಳಿಂದ ಅವರನ್ನು ಗಾಯಗೊಳಿಸಿದನು. ಅವನ ಎದೆಗೆ ಗುರಿಯಿಟ್ಟು ಕೋಸಲಾಧಿಪ ಬೃಹದ್ಬಲನು ಕರ್ಣಿಯನ್ನು ಪ್ರಯೋಗಿಸಿದನು. ಆಗ ಅವನು ಅವನ ಕುದುರೆಗಳನ್ನೂ, ಧ್ವಜವನ್ನೂ, ಚಾಪವನ್ನೂ, ಸೂತನನ್ನೂ ನೆಲಕ್ಕುರುಳಿಸಿದನು. ಆಗ ವಿರಥನಾದ ಕೋಸಲರಾಜನು ಖಡ್ಗ-ಗುರಾಣಿಗಳನ್ನು ಹಿಡಿದು ಫಾಲ್ಗುನಿಯ ಶರೀರದಿಂದ ಕುಂಡಲ ಸಹಿತ ಶಿರಸ್ಸನ್ನು ಅಪಹರಿಸಲು ಮುಂದಾದನು. ಅವನು ಕೋಸಲರ ಒಡೆಯ ರಾಜಪುತ್ರ ಬೃಹದ್ಬಲನ ಎದೆಯನ್ನು ಬಾಣದಿಂದ ಹೊಡೆಯಲು ಅವನು ಹೃದಯವೊಡೆದು ಬಿದ್ದನು. ಅಶಿವ ಮಾತುಗಳನ್ನಾಡುತ್ತಾ ಖಡ್ಗ-ಕಾರ್ಮುಕಗಳನ್ನು ಹಿಡಿದು ಬರುತ್ತಿದ್ದ ಹತ್ತು ಸಾವಿರ ಮಹಾತ್ಮರನ್ನು ಸದೆಬಡಿದನು. ಹಾಗೆ ಬೃಹದ್ಬಲನನ್ನು ಸಂಹರಿಸಿ ಸೌಭದ್ರನು ರಣದಲ್ಲಿ ಕೌರವ ಮುಹೇಷ್ವಾಸ ಯೋಧರನ್ನು ಶರಾಂಬುಗಳಿಂದ ಮುಚ್ಚಿ ಭಯಪಡಿಸುತ್ತಾ ಸಂಚರಿಸಿದನು.

ಅಭಿಮನ್ಯುವು ವಿರಥನಾದುದು

ಪುನಃ ಫಾಲ್ಗುನಿಯು ಕರ್ಣನ ಕಿವಿಗಳಿಗೆ ಡೊಂಕಾದ ಶರದಿಂದ ಹೊಡೆದನು. ಅವನು ಇನ್ನೂ ತುಂಬಾ ಕೋಪಗೊಂಡು ಐವತ್ತು ಶರಗಳಿಂದ ಅವನನ್ನು ಹೊಡೆದನು. ರಾಧೇಯನೂ ಅಷ್ಟೇ ಬಾಣಗಳಿಂದ ಅವನನ್ನು ಪ್ರಹರಿಸಿದನು. ಸರ್ವಾಂಗಗಳಲ್ಲಿ ಬಾಣಗಳಿಂದ ಚುಚ್ಚಲ್ಪಟ್ಟಿದ್ದ ಅಭಿಮನ್ಯುವು ಆಗ ಬಹಳವಾಗಿ ಶೋಭಿಸಿದನು. ಅವನೂ ಕೂಡ ಕ್ರುದ್ಧನಾಗಿ ಕರ್ಣನು ಗಾಯಗೊಂಡು ರಕ್ತವನ್ನು ಸುರಿಸುವಂತೆ ಮಾಡಿದನು. ಶೂರ ಕರ್ಣನೂ ಕೂಡ ಶರಗಳಿಂದ ಗಾಯಗೊಂಡು ರಕ್ತದಿಂದ ತೋಯ್ದು ಬಹಳವಾಗಿ ಶೋಭಿಸಿದನು. ಅವರಿಬ್ಬರು ಮಹಾತ್ಮರೂ ಶರಗಳಿಂದ ಚುಚ್ಚಲ್ಪಟ್ಟು, ರಕ್ತದಿಂದ ತೋಯ್ದು ಹೂಬಿಟ್ಟ ಮುತ್ತುಗದ ಮರಗಳಂತೆ ಕಂಡರು. ಆಗ ಸೌಭದ್ರನು ಕರ್ಣನ ಶೂರರೂ ಚಿತ್ರಯೋಧಿಗಳೂ ಆದ ಆರು ಸಚಿರವರನ್ನು ಅವರ ಅಶ್ವ-ಸೂತ-ಧ್ವಜ-ರಥಗಳೊಂದಿಗೆ ಸಂಹರಿಸಿದನು. ಮತ್ತೆ ಸಂಭ್ರಾಂತನಾಗದೇ ಇತರ ಮಹೇಷ್ವಾಸರನ್ನು ಹತ್ತು ಹತ್ತು ಶರಗಳಿಂದ ಹೊಡೆದನು. ಅದೊಂದು ಅದ್ಭುತವಾಗಿತ್ತು. ಪುನಃ ಅವನು ಆರು ಜಿಹ್ಮಗಗಳಿಂದ ಮಾಗಧನ ಮಗನನ್ನು ಹೊಡೆದು ಕುದುರೆಗಳು ಮತ್ತು ಸಾರಥಿಗಳೊಂದಿಗೆ ಅಶ್ವಕೇತುವನ್ನು ಉರುಳಿಸಿದನು. ಅನಂತರ ಆನೆಯ ಧ್ವಜವನ್ನು ಹೊಂದಿದ್ದ ಮಾರ್ತಿಕಾವತದ ರಾಜ ಭೋಜನನ್ನು ಕ್ಷುರಪ್ರದಿಂದ ಸಂಹರಿಸಿ ಶರಗಳನ್ನು ಪ್ರಯೋಗಿಸುತ್ತಾ ಸಿಂಹನಾದಗೈದನು.

ದುಃಶಾಸನನ ಮಗನು ಅವನ ನಾಲ್ಕು ಕುದುರೆಗಳನ್ನು ನಾಲ್ಕರಿಂದ, ಸೂತನನ್ನು ಒಂದರಿಂದ ಮತ್ತು ಹತ್ತರಿಂದ ಅರ್ಜುನನ ಮಗನನ್ನು ಹೊಡೆದನು. ಆಗ ಕಾರ್ಷ್ಣಿಯು ದೌಃಶಾಸನಿಯನ್ನು ಏಳು ಆಶುಗಗಳಿಂದ ಹೊಡೆದು ಕ್ರೋಧದಿಂದ ಕೆಂಪಾದ ಕಣ್ಣುಗಳುಳ್ಳವನಾಗಿ ಜೋರಾಗಿ ಕೂಗಿ ಹೇಳಿದನು: “ನಿನ್ನ ತಂದೆಯು ಹೇಡಿಯಂತೆ ಹೇಗೆ ಯುದ್ಧವನ್ನು ಬಿಟ್ಟು ಹೋದನೋ ಹಾಗೆ ನೀನೂ ಸಹ ಯುದ್ಧಮಾಡಲು ಕಲಿತಿರುವೆಯಲ್ಲವೇ? ಆದರೆ ಇಂದು ನಿನ್ನನ್ನು ಜೀವಸಹಿತವಾಗಿ ಬಿಡುವುದಿಲ್ಲ!” ಹೀಗೆ ಹೇಳಿ ಅವನು ಕಮ್ಮಾರನಿಂದ ಪರಿಷ್ಕೃತವಾದ ನಾರಾಚವನ್ನು ಅವನ ಮೇಲೆ ಪ್ರಯೋಗಿಸಲು ದ್ರೌಣಿಯು ಅದನ್ನು ಮೂರು ಬಾಣಗಳಿಂದ ಕತ್ತರಿಸಿದನು. ಆರ್ಜುನಿಯು ಅವನ ಧ್ವಜವನ್ನು ಕತ್ತರಿಸಿ ಮೂರರಿಂದ ಶಲ್ಯನನ್ನು ಹೊಡೆದನು. ಅವನನ್ನು ಶಲ್ಯನು ಒಂಭತ್ತು ಹದ್ದಿನ ಗರಿಗಳನ್ನುಳ್ಳ ಶರಗಳಿಂದ ಹೊಡೆದನು. ಆರ್ಜುನಿಯು ಅವನ ಧ್ವಜವನ್ನು ತುಂಡರಿಸಿ, ಪಾರ್ಶ್ವರಕ್ಷಕರಿಬ್ಬರನ್ನೂ ಸಂಹರಿಸಿ, ಲೋಹಮಯವಾದ ಆರು ಬಾಣಗಳಿಂದ ಶಲ್ಯನನ್ನು ಪ್ರಹರಿಸಿದನು. ಅವನು ಬೇರೆಯೇ ರಥವನ್ನೇರಿದನು. ಅನಂತರ ಶತ್ರುಂಜಯ, ಚಂದ್ರಕೇತು, ಮೇಘವೇಗ, ಸುವರ್ಚಸ ಮತ್ತು ಸೌರ್ಯಭಾಸ ಈ ಐವರನ್ನು ಸಂಹರಿಸಿ, ಸೌಬಲನನ್ನು ಹೊಡೆದನು. ಸೌಬಲನು ಅವನನ್ನು ಮೂರುಬಾಣಗಳಿಂದ ಹೊಡೆದು ದುರ್ಯೋಧನನಿಗೆ ಹೇಳಿದನು: “ಇವನು ನಮ್ಮಲ್ಲಿ ಒಬ್ಬೊಬ್ಬರನ್ನೇ ಆರಿಸಿಕೊಂಡು ಸಂಹರಿಸುವ ಮೊದಲು ನಾವೆಲ್ಲರೂ ಒಟ್ಟಾಗಿ ಸೇರಿ ಇವನನ್ನು ಸಂಹರಿಸೋಣ!”

ಆಗ ವೈಕರ್ತನ ಕರ್ಣನೂ ಕೂಡ ದ್ರೋಣನೊಡನೆ ಇದರ ಕುರಿತೇ ಕೇಳಿದನು: “ಇವನು ಸರ್ವರನ್ನೂ ಕೊಲ್ಲುವ ಮೊದಲೇ ಇವನನ್ನು ವಧಿಸುವ ಉಪಾಯವನ್ನು ಹೇಳಿ.”

ಆಗ ಮಹೇಷ್ವಾಸ ದ್ರೋಣನು ಅವರೆಲ್ಲರಿಗೆ ಉತ್ತರಿಸಿದನು: “ಕುಮಾರನಲ್ಲಿ ಯಾವುದೇ ರೀತಿಯ ಸ್ವಲ್ಪ ದೋಷವೂ ಇಲ್ಲದಿರುವುದನ್ನು ನೀವು ನೋಡಿದಿರಿ. ತನ್ನ ತಂದೆಯಂತೆ ಇಂದು ಎಲ್ಲ ದಿಕ್ಕುಗಳಲ್ಲಿಯೂ ಸಂಚರಿಸುತ್ತಿರುವ ಈ ಪಾಂಡವೇಯ ನರಸಿಂಹನ ಶೀಘ್ರತೆಯನ್ನು ನೋಡಿರಿ. ರಥಮಾರ್ಗಗಳಲ್ಲಿ ಇವನ ಧನುರ್ಮಂಡಲವೇ ಕಾಣುತ್ತದೆ. ಇವನು ಶೀಘ್ರವಾಗಿ ವಿಶಿಖೆಗಳನ್ನು ಸಂಧಾನಮಾಡುತ್ತಾನೆ ಮತ್ತು ಬಿಡುತ್ತಾನೆ ಕೂಡ! ಸಾಯಕಗಳಿಂದ ನನ್ನ ಪ್ರಾಣಗಳನ್ನು ಸಂಕಟಗೊಳಿಸಿ ಮೋಹಿತನನ್ನಾಗಿಸುತ್ತಿದ್ದರು ಪರವೀರಹ ಸೌಭದ್ರನು ಬಾರಿ ಬಾರಿಗೂ ನನಗೆ ಹರ್ಷವನ್ನು ನೀಡುತ್ತಿದ್ದಾನೆ. ರಣದಲ್ಲಿ ಸಂಚರಿಸುತ್ತಿರುವ ಈ ಸೌಭದ್ರನು ನನಗೆ ಅತಿಯಾದ ಆನಂದವನ್ನು ನೀಡುತ್ತಿದ್ದಾನೆ. ಇವನಿಂದ ಗಾಯಗೊಂಡ ಮಹಾರಥರೂ ಕೂಡ ಇವನಲ್ಲಿ ದೋಷವನ್ನು ಕಾಣುವುದಿಲ್ಲ. ಹಸ್ತ ಲಾಘವದಿಂದ ಎಲ್ಲ ದಿಕ್ಕುಗಳನ್ನೂ ಬಾಣಗಳಿಂದ ಮುಚ್ಚುತ್ತಿರುವ ಇವನು ಮತ್ತು ರಣದಲ್ಲಿ ಗಾಂಡೀವಧನ್ವಿಯ ನಡುವೆ ಯಾವ ವ್ಯತ್ಯಾಸವನ್ನೂ ನಾನು ಕಾಣತ್ತಿಲ್ಲ!”

ಆಗ ಆರ್ಜುನಿಯ ಶರಗಳಿಂದ ಪೀಡಿತನಾಗುತ್ತಿದ್ದ ಕರ್ಣನು ಪುನಃ ದ್ರೋಣನಿಗೆ ಹೇಳಿದನು: “ಅಭಿಮನ್ಯುವಿನಿಂದ ಪೀಡಿತನಾಗಿದ್ದರೂ ಓಡಿಹೋಗಬಾರದೆಂದು ನಿಂತಿದ್ದೇನೆ. ಈ ತೇಜಸ್ವೀ ಕುಮಾರನ ಪರಮದಾರುಣ ಘೋರ ಪಾವಕನ ತೇಜಸ್ಸುಳ್ಳ ಶರಗಳು ಇಂದು ನನ್ನ ಹೃದಯವನ್ನು ಸೀಳುತ್ತಿವೆ.”

ಕರ್ಣನಿಗೆ ಆಚಾರ್ಯನು ನಗುತ್ತಿರುವಂತೆ ಮೆಲ್ಲಗೆ ಹೇಳಿದನು: “ಇವನ ಕವಚವು ಅಭೇದ್ಯವಾದುದು. ಇವನಿನ್ನೂ ಯುವಕ. ತನ್ನ ಪರಾಕ್ರಮವನ್ನು ಬಹುಬೇಗ ಪ್ರಕಟಿಸುವ ಸಾಮರ್ಥ್ಯವುಳ್ಳವನು. ಇವನ ತಂದೆಗೆ ನಾನು ಕವಚಧಾರಣವಿಧಿಯನ್ನು ಹೇಳಿಕೊಟ್ಟಿದ್ದೆನು. ಅದನ್ನೇ ಸಂಪೂರ್ಣವಾಗಿ ಈ ಪರಪುರಂಜಯನು ತಿಳಿದುಕೊಂಡಿದ್ದಾನೆ ಎನ್ನುವುದು ಸತ್ಯ. ಆದರೆ ಏಕಾಗ್ರಚಿತ್ತವುಳ್ಳವರು ಇವನ ಧನುಸ್ಸನ್ನೂ ಶಿಂಜಿನಿಯನ್ನೂ ಬಾಣಗಳಿಂದ ಕತ್ತರಿಸಲು ಸಾಧ್ಯವಿದೆ. ಅನಂತರ ಕುದುರೆಗಳ ಕಡಿವಾಣಗಳನ್ನು ಕತ್ತರಿಸಿ ಅವುಗಳನ್ನೂ ಪರ್ಶ್ವಸಾರಥಿಗಳನ್ನೂ ಸಂಹರಿಸಬಹುದು. ರಾಧೇಯ! ಸಾಧ್ಯವಾದರೆ ಇದನ್ನು ಮಾಡು! ಹೀಗೆ ಇವನನ್ನು ವಿಮುಖನಾಗುವಂತೆ ಮಾಡಿ ನಂತರ ಅವನ ಮೇಲೆ ಪ್ರಹರಣ ಮಾಡು. ಧನುಸ್ಸಿನೊಂದಿರುವ ಇವನನ್ನು ಗೆಲ್ಲಲು ಸುರಾಸುರರಿಗೂ ಶಕ್ಯವಿಲ್ಲ. ಆದುದರಿಂದ ಇಚ್ಛಿಸುವೆಯಾದರೆ ಇವನನ್ನು ವಿರಥನನ್ನಾಗಿಯೂ ಧನುಸ್ಸು ಇಲ್ಲದವನನ್ನಾಗಿಯೂ ಮಾಡು!”

ಆಚಾರ್ಯನ ಆ ಮಾತನ್ನು ಕೇಳಿ ವೈಕರ್ತನ ಕರ್ಣನು ತ್ವರೆಮಾಡಿ ಶೀಘ್ರ ಬಾಣಗಳಿಂದ ಆ ಲಘುಹಸ್ತನ ಧನುಸ್ಸನ್ನು ಕತ್ತರಿಸಿದನು. ಆಗ ಭೋಜ ಕೃತವರ್ಮನು ಅವನ ಕುದುರೆಗಳನ್ನೂ, ಗೌತಮನು ಪಾರ್ಶ್ವಸಾರಥಿಗಳನ್ನು ಸಂಹರಿಸಿದರು. ಧನುಸ್ಸನ್ನು ಕಳೆದುಕೊಂಡಿದ್ದ ಅವನನ್ನು ಉಳಿದವರು ಶರವರ್ಷಗಳಿಂದ ಮುಚ್ಚಿದರು. ಅವಸರ ಮಾಡಬೇಕಾಗಿದ್ದ ಆ ಸಮಯದಲ್ಲಿ ಷಣ್ಮಹಾರಥರು ತ್ವರೆಮಾಡಿ ವಿರಥನಾಗಿದ್ದ ಏಕಾಕಿಯಾಗಿದ್ದ ಬಾಲಕನನ್ನು ನಿಷ್ಕರುಣೆಯಿಂದ ಶರವರ್ಷಗಳಿಂದ ಮುಚ್ಚಿಬಿಟ್ಟರು. ಆ ಚಿನ್ನಧನ್ವಿ ವಿರಥ ಶ್ರೀಮಾನನು ಸ್ವಧರ್ಮವನ್ನು ಅನುಸರಿಸಿ ಖಡ್ಗ-ಗುರಾಣಿಗಳನ್ನು ಹಿಡಿದು ಆಕಾಶಕ್ಕೆ ಹಾರಿದನು. ಕೈಶಿಕಾದಿ ಮಾರ್ಗಗಳಿಂದಲೂ ಲಘುತ್ವ ಮತ್ತು ಬಲದಿಂದ ಆರ್ಜುನಿಯು ಪಕ್ಷಿಯಂತೆ ಆಕಾಶದಲ್ಲಿ ಚೆನ್ನಾಗಿ ಸಂಚರಿಸಬಲ್ಲವನಾಗಿದ್ದನು. ಖಡ್ಗವನ್ನು ಹಿಡಿದಿರುವ ಅವನು ನನ್ನ ಮೇಲೆಯೇ ಬೀಳುತ್ತಾನೆ ಎಂದು ಸಮರದಲ್ಲಿ ಮಹೇಷ್ವಾಸರು ಭಾವಿಸಿಕೊಂಡು ಮೇಲೆ ನೋಡುತ್ತಿದ್ದರು. ದ್ರೋಣನು ಅವನ ಮುಷ್ಟಿಯಲ್ಲಿದ್ದ ಮಣಿಮಯ ಹಿಡಿಯಿದ್ದ ಖಡ್ಗವನ್ನು ಕತ್ತರಿಸಿದನು. ರಾಧೇಯನು ನಿಶಿತ ಬಾಣಗಳಿಂದ ಅವನ ಉತ್ತಮ ಗುರಾಣಿಯನ್ನು ಸೀಳಿದನು. ಖಡ್ಗ-ಗುರಾಣಿಗಳನ್ನು ಕಳೆದುಕೊಂಡು, ಸಂಪೂರ್ಣ ಅಂಗಗಳಲ್ಲಿ ಬಾಣಗಳಿಂದ ಚುಚ್ಚಲ್ಪಟ್ಟಿದ್ದ ಅವನು ಪುನಃ ಭೂಮಿಗಿಳಿದನು.

ಅಲ್ಲಿದ್ದ ಚಕ್ರವನ್ನೇ ಹಿಡಿದು ಕ್ರುದ್ಧನಾಗಿ ದ್ರೋಣನ ಕಡೆ ಧಾವಿಸಿದನು. ಆಗ ಚಕ್ರದ ಧೂಳು ಮತ್ತು ಕಾಂತಿಯಿಂದ ಶೋಭಿತಾಂಗನಾಗಿದ್ದ ಅವನು ಚಕ್ರವನ್ನು ಎತ್ತಿ ಹಿಡಿತು ಅತೀವವಾಗಿ ಪ್ರಕಾಶಿಸುತ್ತಿದ್ದನು. ರಣದಲ್ಲಿ ವಾಸುದೇವನ ನಡುಗೆಯನ್ನೇ ಅನುಕರಿಸುತ್ತಿದ್ದ ಅಭಿಮನ್ಯುವು ಒಂದು ಕ್ಷಣ ಘೋರನಾಗಿ ಕಂಡನು. ಸುರಿಯುತ್ತಿದ್ದ ರಕ್ತದಿಂದ ಅವನ ವಸ್ತ್ರಗಳು ಕೆಂಪಾಗಿದ್ದವು. ಗಂಟಿಕ್ಕಿಕೊಂಡಿದ್ದ ಅವನ ಹುಬ್ಬುಗಳ ಮಧ್ಯವು ಸ್ಪಷ್ಟವಾಗಿ ಕಾಣುತ್ತಿರಲು ಅವನು ಸಿಂಹನಾದಗೈದನು. ರಣದಲ್ಲಿ ನೃಪವರರ ಮಧ್ಯದಲ್ಲಿ ಆ ಅಮಿತ ಬಲಶಾಲಿ, ಅಭಿಮನ್ಯುವು ತುಂಬಾ ವಿರಾಜಿಸಿದನು.

ಅಭಿಮನ್ಯು ವಧೆ

ವಿಷ್ಣುವಿನ ಅಳಿಯ, ಆನಂದದಾಯಕ, ವಿಷ್ಣುವಿನ ಆಯುಧ ಭೂಷಿತನಾದ ಆ ಅತಿರಥನು ಯುದ್ಧದಲ್ಲಿ ಅಪರ ಜನಾರ್ದನನಂತೆಯೇ ರಾರಾಜಿಸಿದನು. ಮುಂಗುರುಳುಗಳು ಗಾಳಿಯಲ್ಲಿ ಹಾರಾಡುತ್ತಿರಲು, ಶ್ರೇಷ್ಠವಾದ ಚಕ್ರಾಯುಧವನ್ನು ಮೇಲೆತ್ತಿ ಹಿಡಿದಿದ್ದ, ಸುರರಿಗೂ ನೋಡಲಿಕ್ಕೆ ಸಿಗದ ಅವನ ಆ ರೂಪವನ್ನು ಪೃಥ್ವೀಶರು ಕಂಡರು. ಉದ್ವಿಗ್ನರಾದ ಅವರು ಆ ಚಕ್ರವನ್ನು ಅನೇಕ ಭಾಗಗಳಾಗಿ ತುಂಡರಿಸಿದರು. ಆಗ ಮಹಾರಥ ಕಾರ್ಷ್ಣಿಯು ಮಹಾಗದೆಯನ್ನು ಎತ್ತಿಕೊಂಡನು. ಶತ್ರುಗಳಿಂದ ಧನುಸ್ಸು, ರಥ, ಖಡ್ಗ ಮತ್ತು ಚಕ್ರಗಳಿಲ್ಲದಂತೆ ಮಾಡಿಸಿಕೊಂಡ ಅಭಿಮನ್ಯುವು ಗದೆಯನ್ನು ಹಿಡಿದು ಅಶ್ವತ್ಥಾಮನ ಮೇಲೆ ಎರಗಿದನು. ವಜ್ರಾಯುಧದಂತಿದ್ದ ಆ ಗದೆಯನ್ನು ಮೇಲೆತ್ತಿ ಬರುತ್ತಿರುವ ಅವನನ್ನು ನೋಡಿ ನರರ್ಷಭ ಅಶ್ವತ್ಥಾಮನು ತಾನು ನಿಂತಿದ್ದ ರಥದಿಂದ ಮೂರು ಹೆಜ್ಜೆಗಳಷ್ಟು ಹಿಂದೆ ಸರಿದನು. ಗದೆಯಿಂದ ಅವನ ಕುದುರೆಗಳನ್ನೂ ಇಬ್ಬರು ಪಾರ್ಶ್ವಸಾರಥಿಗಳನ್ನೂ ಕೊಂದನು. ಅಂಗಾಂಗಳಲೆಲ್ಲಾ ಶರಗಳಿಂದ ಚುಚ್ಚಲ್ಪಟ್ಟಿದ್ದ ಸೌಭದ್ರನು ಮುಳ್ಳುಹಂದಿಯಂತೆಯೇ ಕಂಡನು. ಅನಂತರ ಅವನು ಸುಬಲನ ಮಗ ಕಾಲಕೇಯನನ್ನು ಕೆಳಗುರುಳಿಸಿ ಅವನ ಎಪ್ಪತ್ತೇಳು ಗಾಂಧಾರ ಅನುಚರರನ್ನು ಸಂಹರಿಸಿದನು. ಪುನಃ ಅವನು ಗದೆಯಿಂದ ಬ್ರಹ್ಮವಸಾತೀಯ ಹತ್ತು ರಥಿಗಳನ್ನು ಸಂಹರಿಸಿದನು. ಹತ್ತು ಆನೆಗಳನ್ನು ಕೊಂದು ಕೇಕಯರ ಏಳು ರಥಗಳನ್ನು ನೆಲಸಮಮಾಡಿದನು. ಹಾಗೆಯೇ ದೌಃಶಾಸನಿಯ ರಥವನ್ನು ಅಶ್ವಗಳೊಂದಿಗೆ ಧ್ವಂಸಮಾಡಿದನು.

ಆಗ ದೌಃಶಾಸನಿಯು ಕ್ರುದ್ಧನಾಗಿ ಗದೆಯನ್ನು ಮೇಲೆತ್ತಿ “ನಿಲ್ಲು! ನಿಲ್ಲು!” ಎಂದು ಹೇಳುತ್ತಾ ಸೌಭದ್ರನ ಮೇಲೆ ಎರಗಿದನು. ಅನ್ಯೋನ್ಯರನ್ನು ವಧಿಸಲು ಬಯಸಿ ಅವರಿಬ್ಬರು ಭ್ರಾತೃಗಳೂ ಹಿಂದೆ ತ್ರ್ಯಂಬಕ-ಅಂತಕರಂತೆ ಪರಸ್ಪರರನ್ನು ಗದೆಯಿಂದ ಪ್ರಹರಿಸಿದರು. ಗದೆಗಳ ಅಗ್ರಭಾಗಗಳಿಂದ ಪೆಟ್ಟುತಿಂದು ಮೇಲಿನಿಂದ ಬಿದ್ದ ಇಂದ್ರಧ್ವಜಗಳಂತೆ ಇಬ್ಬರೂ ಭೂಮಿಯ ಮೇಲೆ ಬಿದ್ದರು. ಒಡನೆಯೇ ಕುರುಗಳ ಕೀರ್ತಿವರ್ಧಕ ದೌಃಶಾಸನಿಯು ಮೇಲೆದ್ದು ಮೇಲೇಳುತ್ತಿರುವ ಸೌಭದ್ರನ ತಲೆಗೆ ಗದೆಯಿಂದ ಹೊಡೆದನು. ಮಹಾವೇಗಯುಕ್ತವಾದ ಗದಾ ಪ್ರಹಾರದಿಂದಲೂ ಹೆಚ್ಚಿನ ಶ್ರಮದಿಂದಲೂ ವಿಮೋಹಿತನಾಗಿದ್ದ ಪರವೀರಹ ಸೌಭದ್ರನು ಅಸುನೀಗಿ ಭೂಮಿಯ ಮೇಲೆ ಬಿದ್ದನು. ಹೀಗೆ ಅನೇಕರು ಆಹವದಲ್ಲಿ ಏಕಾಂಗಿಯಾಗಿದ್ದವನನ್ನು ಸಂಹರಿಸಿದರು.

ಸರೋವರವನ್ನು ಆನೆಯು ಕ್ಷೋಭೆಗೊಳಿಸುವಂತೆ ಆ ವೀರನು ಸೇನೆಯನ್ನು ಅಲ್ಲೋಲಕಲ್ಲೋಲಗೊಳಿಸಿ ವ್ಯಾಧರಿಂದ ಬೇಟೆಯಾಡಲ್ಪಟ್ಟ ಕಾಡಾನೆಯಂತೆ ಹತನಾಗಿ ಶೋಭಿಸಿದನು. ಹೀಗೆ ಕೆಳಗೆಬಿದ್ದ ಆ ಶೂರನನ್ನು ಕೌರವರು ಸುತ್ತುವರೆದರು. ಶಿಶಿರ ಋತುವಿನ ಅಂತ್ಯದಲ್ಲಿ ಅರಣ್ಯವನ್ನು ಸುಟ್ಟು ಶಾಂತನಾದ ಪಾವಕನಂತಿದ್ದ, ಮರ-ಶಿಖರಗಳನ್ನು ಕೆಳಗುರುಳಿಸಿ ಶಾಂತವಾದ ಭಿರುಗಾಳಿಯಂತಿದ್ದ, ಭಾರತವಾಹಿನಿಯನ್ನು ಸುಟ್ಟು ಅಸ್ತಂಗತನಾದ ಆದಿತ್ಯನಂತಿದ್ದ, ರಾಹುಗ್ರಸ್ತನಾದ ಚಂದ್ರನಂತಿದ್ದ, ಬತ್ತಿಹೋದ ಸಾಗರದಂತಿದ್ದ, ಪೂರ್ಣಚಂದ್ರನ ಕಾಂತಿಯಿಂದ ಬೆಳಗುತ್ತಿದ್ದ, ಮುಂಗುರುಳುಗಳು ಮುಚ್ಚಿದ ಕಣ್ಣುಗಳಿಂದ ಕೂಡಿದ ಮುಖದ ಅವನು ಭೂಮಿಯ ಮೇಲೆ ಬಿದ್ದುದನ್ನು ನೋಡಿ ಕೌರವರ ಕಡೆಯ ಮಹಾರಥರು ಪರಮ ಹರ್ಷಿತರಾಗಿ ಒಟ್ಟಾಗಿ ಮತ್ತೆ ಮತ್ತೆ ಸಿಂಹನಾದಗೈದರು. ಅವರಿಗೆ ಪರಮ ಹರ್ಷವುಂಟಾಯಿತು. ಆದರೆ ಇತರ ವೀರರ ಕಣ್ಣುಗಳು ನೀರಿನಿಂದ ತುಂಬಿದವು. ಅಂಬರದಿಂದ ಚಂದ್ರನು ಬಿದ್ದಂತೆ ಬಿದ್ದಿರುವ ಆ ವೀರನನ್ನು ನೋಡಿ ಅಂತರಿಕ್ಷದಲ್ಲಿ ಇರುವವರು ಕಿರುಚಿಕೊಂಡರು: “ದ್ರೋಣ-ಕರ್ಣರೇ ಪ್ರಮುಖರಾದ ಧಾರ್ತರಾಷ್ಟ್ರರ ಆರು ಮಹಾರಥರಿಂದ ಈ ಒಬ್ಬನೇ ನಿಹತನಾಗಿ ಮಲಗಿದ್ದಾನೆ! ಇದು ಧರ್ಮವಲ್ಲವೆಂಬುದು ನಮ್ಮ ಮತ!”

ಆ ವೀರನು ಹತನಾಗಲು ರಣಾಂಗಣವು ಪೂರ್ಣಚಂದ್ರನಿಂದ ಕೂಡಿದ ನಕ್ಷತ್ರಗಣಮಾಲಿನೀ ಆಕಾಶದಂತೆ ಬಹುವಾಗಿ ಶೋಭಿಸಿತು. ರುಕ್ಮಪುಂಖಗಳಿಂದ, ಸಂಪೂರ್ಣವಾಗಿ ರಕ್ತದಲ್ಲಿ ತೋಯ್ದುಹೋಗಿದ್ದ ವೀರರ ಶಿರಗಳಿಂದ, ಹೊಳೆಯುತ್ತಿದ್ದ ಕುಂಡಲಗಳಿಂದ, ಪತಾಕೆಗಳಿಂದ ಸಂವೃತವಾಗಿದ್ದ ವಿಚಿತ್ರ ಪರಿಸ್ತೋಮಗಳಿಂದ, ಚಾಮರಗಳಿಂದ, ಬಣ್ಣದ ಕಂಬಳಿಗಳಿಂದ, ಹರಡಿದ್ದ ಉತ್ತಮ ವಸ್ತ್ರಗಳಿಂದ, ರಥ-ಅಶ್ವ-ನರ-ನಾಗಗಳ ಹೊಳೆಯುತ್ತಿರುವ ಅಲಂಕಾರಗಳಿಂದ, ಪೊರೆಬಿಟ್ಟ ಸರ್ಪಗಳಂತಿದ್ದ ಪೀತಲದ ನಿಶಿತ ಖಡ್ಗಗಳಿಂದ, ಮುರಿದಿದ್ದ ಚಾಪ-ವಿಶಿಖಗಳಿಂದ, ಶಕ್ತಿ-ಋಷ್ಟಿ-ಪ್ರಾಸ-ಕಂಪನಗಳಿಂದ, ಅನ್ಯ ವಿವಿಧ ಆಯುಧಗಳಿಂದ ತುಂಬಿ ಭೂಮಿಯು ಶೋಭಿಸಿತು. ಸೌಭದ್ರನಿಂದ ಕೆಳಗುರುಳಿಸಲ್ಪಟ್ಟ ನಿರ್ಜೀವ ಕುದುರೆಗಳು ಮತ್ತು ರಕ್ತದಿಂದ ತೋಯ್ದು ಹೋಗಿ ಆರೋಹಿಗಳೊಡನೆ ಸ್ವಲ್ಪ ಸ್ವಲ್ಪವೇ ಉಸಿರಾಡುತ್ತಿದ್ದ ಕುದುರೆಗಳಿಂದ ರಣಭೂಮಿಯು ಏರುತಿಟ್ಟಾಗಿತ್ತು. ಅಂಕುಶಗಳಿಂದ, ಮಾವುತರಿಂದ, ಕವಚಗಳಿಂದ, ಆಯುಧಗಳಿಂದ, ಕೇತುಗಳಿಂದ, ಮತ್ತು ವಿಶಿಖಗಳಿಂದ ಸಂಹರಿಸಲ್ಪಟ್ಟ ಪರ್ವತಗಳಂತಿರುವ ಆನೆಗಳಿಂದ ರಣರಂಗವು ಹರಡಿ ಹೋಗಿತ್ತು. ಅಶ್ವ-ಸಾರಥಿ-ಯೋಧರಿಂದ ವಿಹೀನವಾದ ರಥಗಳು ನುಚ್ಚುನೂರಾಗಿ ಅಲ್ಲೋಲಕಲ್ಲೋಲವಾಗಿರುವ, ಸತ್ತುಬಿದ್ದಿರುವ ಸರ್ಪಗಳಿಂದ ಕೂಡಿದ ಮಡುವುಗಳಂತೆ ಶೋಭಿಸುತ್ತಿದ್ದವು. ವಿವಿಧಾಯುಧಭೂಷಣಗಳೊಂದಿಗೆ ಹತರಾಗಿ ಬಿದ್ದಿದ್ದ ಪದಾತಿಸೇನೆಗಳಿಂದ ರಣಭೂಮಿಯು ಹೇಡಿಗಳಿಗೆ ಭಯವನ್ನುಂಟುಮಾಡುವ ಘೋರರೂಪವನ್ನು ತಾಳಿತ್ತು. ಚಂದ್ರ-ಸೂರ್ಯರ ಕಾಂತಿಯನ್ನು ಹೊಂದಿದ್ದ ಅವನು ಭೂಮಿಯ ಮೇಲೆ ಬಿದ್ದುದನ್ನು ನೋಡಿ ಕೌರವರಿಗೆ ಪರಮ ಸಂತೋಷವಾಯಿತು ಮತ್ತು ಪಾಂಡವರಿಗೆ ವ್ಯಥೆಯಾಯಿತು. ಇನ್ನೂ ಯೌವನವನ್ನು ಪಡೆಯದಿದ್ದ ಕುಮಾರ ಅಭಿಮನ್ಯುವು ಹತನಾಗಲು ಧರ್ಮರಾಜನು ನೋಡುತ್ತಿದ್ದಂತೆಯೇ ಎಲ್ಲ ಸೇನೆಗಳೂ ಓಡಿ ಹೋಗತೊಡಗಿದವು. ಸೌಭದ್ರನು ಕೆಳಗುರುಳಲು ಸೀಳಿಹೋದ ಸೇನೆಯನ್ನು ನೋಡಿ ಅಜಾತಶತ್ರುವು ತನ್ನ ವೀರರಿಗೆ ಈ ಮಾತನ್ನಾಡಿದನು: “ಪರಾಙ್ಮುಖನಾಗದೇ ಹತನಾದ ಈ ಶೂರನು ಸ್ವರ್ಗಕ್ಕೇ ಹೋಗಿದ್ದಾನೆ. ನೀವೆಲ್ಲರೂ ಧೈರ್ಯತಾಳಿರಿ. ಹೆದರಬೇಡಿ. ರಣದಲ್ಲಿ ರಿಪುಗಳನ್ನು ನಾವು ಗೆಲ್ಲುತ್ತೇವೆ!”

ಈ ರೀತಿಯಾಗಿ ದುಃಖಿತನಾಗಿದ್ದ ಮಹಾತೇಜಸ್ವಿ ಮಹಾದ್ಯುತಿ, ಯೋಧರಲ್ಲಿ ಶ್ರೇಷ್ಠ ಧರ್ಮರಾಜನು ಹೇಳಿ ದುಃಖವನ್ನು ಕಡಿಮೆಮಾಡಿದನು. ಯುದ್ಧದಲ್ಲಿ ಸರ್ಪವಿಷಸಮಾನರಾದ ಅನೇಕ ರಾಜಪುತ್ರರನ್ನು ರಣದಲ್ಲಿ ಮೊದಲು ಸಂಹರಿಸಿ ಅನಂತರ ಸಂಗ್ರಾಮದಲ್ಲಿ ಆರ್ಜುನಿಯು ತೀರಿಕೊಂಡನು. ಹತ್ತು ಸಾವಿರರನ್ನು ಮತ್ತು ಮಹಾರಥ ಕೌಸಲ್ಯನನ್ನೂ ಸಂಹರಿಸಿ ಕೃಷ್ಣಾರ್ಜುನರ ಸಮನಾದ ಕಾರ್ಷ್ಣಿಯು ಶಕ್ರನ ಮನೆಗೆ ಹೋಗಿರುವುದು ನಿಶ್ಚಯ. ಸಹಸ್ರಾರು ರಥ-ಅಶ್ವ-ನರ-ಮಾತಂಗಗಳನ್ನು ನಾಶಪಡೆಸಿಯೂ ಅವನು ಸಂಗ್ರಾಮದಲ್ಲಿ ಅತೃಪ್ತನಾಗಿದ್ದನು. ಪುಣ್ಯಕರ್ಮಗಳನ್ನೆಸಗಿದ ಅವನು ಅಶೋಚ್ಯನೇ ಸರಿ. ಕೌರವರಾದರೋ ಪಾಂಡವರಲ್ಲಿ ಶ್ರೇಷ್ಠನಾದವನನ್ನು ಸಂಹರಿಸಿ ಅವನ ಶರಗಳಿಂದ ಪೀಡಿತರಾಗಿ, ರಕ್ತದಲ್ಲಿ ತೋಯ್ದು, ಸಾಯಂಕಾಲದ ಹೊತ್ತಿಗೆ ಬಿಡಾರಗಳಿಗೆ ಹಿಂದಿರುಗಿದರು. ಕೌರವರು ಮತ್ತು ಪಾಂಡವರು ರಣರಂಗವನ್ನು ತಿರುಗಿ ತಿರುಗಿ ನೋಡುತ್ತಾ ಮೆಲ್ಲ ಮೆಲ್ಲನೇ ಹಿಂದಿರುಗಿದರು. ಅವರು ಶೋಕಗ್ರಸ್ತರಾಗಿ ಬುದ್ಧಿಕೆಟ್ಟವರಾಗಿ ಹಿಂದಿರುಗಿದರು. ಆಗ ಕಮಲದ ಮಾಲೆಯ ಕಾಂತಿಯ ದಿವಾಕರನು ಪರ್ವತವನ್ನೇರಿ ಕೆಳಗಿಳಿಯುತ್ತಿರಲು, ರಾತ್ರಿ ಮತ್ತು ದಿವಸದ ಸಂಧಿಯು ನರಿಗಳ ಅಮಂಗಳಕರ ಕೂಗಿನಿಂದ ಅದ್ಭುತವಾಯಿತು. ಶ್ರೇಷ್ಠ ಖಡ್ಗ-ಶಕ್ತಿ-ಋಷ್ಠಿ-ರಥ-ಗುರಾಣಿಗಳ ಮತ್ತು ವಿಭೂಷಣಗಳ ಪ್ರಭೆಗಳನ್ನು ಹೀರಿಕೊಳ್ಳುತ್ತಾ, ಅಂತರಿಕ್ಷ-ಭೂಮಿಗಳನ್ನು ಸಮಾನವೆನ್ನಿಸುವಂತೆ ಮಾಡುತ್ತಾ ಭಾನುವು ತನ್ನ ಪ್ರಿಯ ಪಾವಕನಲ್ಲಿ ಸೇರಿಕೊಂಡನು.

ಮಹಾಮೇಘಸಮೂಹಸದೃಶವಾದ, ಪರ್ವತಶಿಖರ ಸದೃಶವಾದ ದೊಡ್ಡ ದೊಡ್ಡ ಆನೆಗಳು ವಜ್ರಾಯುಧದಿಂದ ಹತವಾದವುಗಳಂತೆ ವೈಜಯಂತಿ-ಅಂಕುಶ-ಕವಚ-ಮಾವುತರ ಸಹಿತ ಅಸುನೀಗಿ ಕೆಳಗೆ ಬಿದ್ದು ರಣರಂಗದ ಹಾದಿಗಳನ್ನೇ ಮುಚ್ಚಿಬಿಟ್ಟಿದ್ದವು. ಒಡೆಯರು ಹತರಾಗಿ, ಯುದ್ಧ ಸಾಮಗ್ರಿಗಳು ಚೆಲ್ಲಿ ಹರಡಿ, ಕುದುರೆ-ಸಾರಥಿಗಳು ಹತರಾಗಿ, ಪತಾಕೆ-ಕೇತುಗಳನ್ನು ಕಳೆದುಕೊಂಡು ಮುರಿದು ಬಿದ್ದಿದ್ದ ಮಹಾರಥಗಳು ರಣರಂಗದಲ್ಲಿ ಶತ್ರುಗಳಿಂದ ಧ್ವಂಸಗೊಂಡ ಪುರಗಳಂತೆ ಶೋಭಿಸಿದವು. ಮುರಿದ ರಥಗಳೂ ಮತ್ತು ಸತ್ತುಹೋದ ಕುದುರೆಗಳೂ, ಅವುಗಳ ಸವಾರರೂ ಗುಂಪು ಗುಂಪಾಗಿ ಬಿದ್ದಿದ್ದವು. ಸಲಕರಣ್ಗಳು ಮತ್ತು ಆಭರಣಗಳು ಅಲ್ಲಲ್ಲಿ ಚೆಲ್ಲಿ ಬಿದ್ದಿದ್ದವು. ಹೊರಚಾಚಿದ್ದ ನಾಲಿಗೆ, ಹಲ್ಲು, ಕರುಳು, ಕಣ್ಣುಗಳಿಂದ ಧರೆಯು ನೋಡಲು ಘೋರವೂ ವಿರೂಪವೂ ಆಗಿದ್ದಿತು. ಗಜಾಶ್ವರಥ ಸೇನೆಗಳನ್ನು ಅನುಸರಿಸಿ ಹೋಗುತ್ತಿದ್ದ ಪದಾತಿಗಳೂ, ತುಂಡಾಗಿದ್ದ ಕವಚ-ಆಭರಣಗಳು, ಶ್ರೇಷ್ಠ ಆಯುಧಗಳು ಅಲ್ಲಲ್ಲಿ ಹರಡಿ ಬಿದ್ದಿದ್ದವು. ಸದಾ ಬೆಲೆಬಾಳುವ ಹಾಸಿಗೆಗಳ ಮೇಲೆ ಮಲಗಲು ಅರ್ಹರಾಗಿದ್ದ ಅವರು ಅನಾಥರಂತೆ ಹತರಾಗಿ ನೆಲದ ಮೇಲೆ ಮಲಗಿದ್ದರು. ಆ ಸುದಾರುಣ ರಣದಲ್ಲಿ ನಾಯಿಗಳು, ನರಿಗಳು, ಕಾಗೆಗಳು, ಬಕಪಕ್ಷಿಗಳು, ಗರುಡಪಕ್ಷಿಗಳು, ತೋಳಗಳು, ಕಿರುಬಗಳು, ರಕ್ತವನ್ನೇ ಹೀರುವ ಪಕ್ಷಿಗಳು, ರಾಕ್ಷಸ ಗಣಗಳು ಮತ್ತು ಪಿಶಾಚ ಪಂಗಡಗಳು ಅತೀವ ಹರ್ಷಿತವಾಗಿದ್ದವು. ಅವು ಚರ್ಮಗಳನ್ನು ಕಿತ್ತು ರಕ್ತವನ್ನು ಹೀರಿ ಕುಡಿಯುತ್ತಿದ್ದವು. ಹಾಗೆಯೇ ಮಾಂಸ-ಮಜ್ಜೆಗಳನ್ನು ತಿನ್ನುತ್ತಿದ್ದವು. ಹೆಣಗಳನ್ನು ಅನೇಕ ಬಾರಿ ಇಲ್ಲಿಂದಲ್ಲಿಗೆ ಕಚ್ಚಿಕೊಂಡು ಎಳೆದಾಡುತ್ತಿದ್ದ ಅವು ನಗುತ್ತಾ, ಹಾಡುತ್ತಾ, ಔತಣದೂಟ ಮಾಡುತ್ತಿದ್ದವು. ಮಹಾಭಯಂಕರವಾದ ದಾಟಲು ಅಸಾಧ್ಯವಾದ ವೈತರಣೀ ನದಿಯನ್ನು ಶ್ರೇಷ್ಠ ಯೋಧರು ಅಲ್ಲಿ ಹರಿಸಿದ್ದರು. ರಕ್ತವೇ ನೀರಾಗಿದ್ದ ಅದರಲ್ಲಿ ಪ್ರಾಣಿಗಳ ಶರೀರಸಮೂಹಗಳು ಕೊಚ್ಚಿಕೊಂಡು ಹೋಗುತ್ತಿದ್ದವು. ರಥಗಳು ದೋಣಿಗಳಂತಿದ್ದವು. ಆನೆಗಳು ಸಂಕಟದ್ವೀಪಗಳಂತಿದ್ದವು. ಮನುಷ್ಯರ ತಲೆಗಳು ನದಿಯ ಸಣ್ಣ ಬಂಡೆಗಳಂತಿದ್ದವು. ಮಾಂಸವೇ ಕೆಸರಾಗಿತ್ತು. ಚೆಲ್ಲಿದ್ದ ನಾನಾವಿಧದ ಶಸ್ತ್ರಗಳೇ ತೆರೆಗಳಾಗಿದ್ದವು. ಜೀವಿಸಿರುವವರನ್ನೂ ಸತ್ತವರನ್ನೂ ಒಯ್ಯುತ್ತಿದ್ದ ಆ ಭಯಂಕರ ನದಿಯು ರಣರಂಗದ ಮಧ್ಯದಲ್ಲಿ ಹರಿಯುತ್ತಿತ್ತು. ನೋಡಲೂ ಕಷ್ಟಸಾಧ್ಯವಾದ, ತುಂಬಾ ಭೈರವ ವಿವಿಧ ಪಿಶಾಚಗಣಗಳು ಅಲ್ಲಿ ಕುಡಿಯುತ್ತಿದ್ದವು ತಿನ್ನುತ್ತಿದ್ದವು. ಪ್ರಾಣವಿರುವವುಗಳಲ್ಲೇ ಭಯಂಕವಾದ ಮೃಗ-ಪಕ್ಷಿಗಳು ಸಮಾನವಾಗಿ ಆನಂದಿತರಾಗಿ ಭಕ್ಷಿಸುತ್ತಿದ್ದವು.

ನಿಶಾಮುಖದಲ್ಲಿ ಆ ರಣರಂಗವು ಯಮರಾಜನ ರಾಷ್ಟ್ರದಂತೆ ಉಗ್ರವಾಗಿ ಕಾಣುತ್ತಿತ್ತು. ಮೇಲಕ್ಕೆದ್ದು ಕುಣಿಯುತ್ತಿದ್ದ ಮುಂಡಗಳನ್ನು ಜಾಗ್ರತೆಯಿಂದ ನೋಡಿಕೊಳ್ಳುತ್ತಾ ಯೋಧರು ಮೆಲ್ಲನೆ ಹಿಂದಿರುಗಿದರು. ಸುತ್ತಲೂ ಮಹಾರ್ಹಭೂಷಣಗಳು ಹರಡಿ ಬಿದ್ದಿರುವ, ಹವಿಸ್ಸಿಲ್ಲದೇ ಸೀದುಹೋದ ಯಜ್ಞೇಶ್ವರನಂತೆ ರಣದಲ್ಲಿ ಬಿದ್ದಿರುವ ಶಕ್ರಸಮ ಮಹಾರಥ ಅಭಿಮನ್ಯುವನ್ನು ಜನರು ನೋಡಿದರು.

Leave a Reply

Your email address will not be published. Required fields are marked *