ಹದಿನೇಳನೇ ದಿನದ ಯುದ್ಧ - ೮: ಕರ್ಣವಧೆ
ವೃಷಸೇನನು ಹತನಾದುದನ್ನು ಕಂಡು ಕೂಡಲೇ ಶೋಕ-ಕೋಪ ಸಮನ್ವಿತನಾದ ಕರ್ಣನು ಎರಡೂ ಕಣ್ಣುಗಳಿಂದ ಶೋಕೋದ್ಭವ ಕಣ್ಣೀರನ್ನು ಸುರಿಸಿದನು. ಕೋಪದಿಂದ ರಕ್ತಾಕ್ಷನಾಗಿದ್ದ ತೇಜಸ್ವಿ ಕರ್ಣನು ರಥದಲ್ಲಿ ಕುಳಿತು ಶತ್ರುಗಳ ಅಭಿಮುಖವಾಗಿ ತೆರಳಿ ಧನಂಜಯನನ್ನು ಯುದ್ಧಕ್ಕೆ ಆಹ್ವಾನಿಸಿದನು. ವ್ಯಾಘ್ರಚರ್ಮ ಆಚ್ಛಾದಿತ ಸೂರ್ಯಸಂಕಾಶ ರಥಗಳಲ್ಲಿ ಕುಳಿತಿದ್ದ ಅವರಿಬ್ಬರೂ ಎದುರುಬದಿರಾಗಿರುವ ಎರಡು ಸೂರ್ಯರಂತೆ ಕಂಡರು. ಶ್ವೇತಾಶ್ವರಾಗಿದ್ದ ಅವರಿಬ್ಬರು ಪುರುಷಾದಿತ್ಯ ಅರಿಮರ್ದನ ಮಹಾತ್ಮರು ದಿವಿಯಲ್ಲಿ ಚಂದ್ರ-ಆದಿತ್ಯರಂತೆ ಶೋಭಿಸಿದರು. ಅವರಿಬ್ಬರನ್ನು ನೋಡಿ ಸರ್ವಭೂತಗಳೂ ಇಂದ್ರ ವೈರೋಚರು ತ್ರೈಲೋಕ್ಯವಿಜಯಕ್ಕೆ ನಿಂತಿದ್ದಾಗ ಹೇಗೋ ಹಾಗೆ ವಿಸ್ಮಿತರಾದರು. ರಥಘೋಷಗಳಿಂದಲೂ, ಮೌರ್ವಿಗಳ ಟೇಂಕಾರಗಳಿಂದಲೂ, ಚಪ್ಪಳೆಯ ಶಬ್ಧಗಳಿಂದಲೂ, ಬಾಣಗಳ ಸೀತ್ಕಾರಗಳಿಂದಲೂ, ಶಂಖಗಳ ಶಬ್ಧಗಳಿಂದಲೂ ಕಿರೀಟಿಯ ವಾನರಧ್ವಜ ಮತ್ತು ಕರ್ಣನ ಆನೆಯ ಹಗ್ಗದ ಚಿಹ್ನೆಯ ಧ್ವಜಗಳ ಎರಡು ರಥಗಳೂ ಯುದ್ಧದಲ್ಲಿ ಸಂಸಕ್ತವಾದುದನ್ನು ನೋಡಿ ಮಹೀಕ್ಷಿತರು ವಿಸ್ಮಿತನಾದರು. ಆ ಎರಡು ಮಹಾರಥರೂ ಒಂದೆಡೆಯಲ್ಲಿ ಯುದ್ಧಮಾಡಲು ತೊಡಗಿದುದನ್ನು ನೋಡಿ ಪಾರ್ಥಿವರು ಸಿಂಹನಾದಗೈದರು ಮತ್ತು ಪುಷ್ಕಲವಾಗಿ “ಸಾಧು! ಸಾಧು!” ಎಂದು ಘೋಷಿಸಿದರು. ಅವರಿಬ್ಬರು ದ್ವೈರಥಯುದ್ಧದಲ್ಲಿ ತೊಡಗಿದ್ದಾರೆಂದು ಕೇಳಿದ ಯೋಧರು ಎಲ್ಲಕಡೆಗಳಿಂದ ಬಂದು ಭುಜಗಳನ್ನು ತಟ್ಟಿಕೊಳ್ಳುತ್ತಾ ಅಂಗವಸ್ತ್ರಗಳನ್ನು ಹಾರಿಸಿ ಮಹಾ ತುಮುಲಶಬ್ಧವನ್ನುಂಟುಮಾಡಿದರು. ಕರ್ಣನಿಗೆ ಹರ್ಷವನ್ನುಂಟುಮಾಡಲು ಅಲ್ಲಿಗೆ ಕುರುಗಳು ವಾದ್ಯಗಳಿಂದ ಕೂಡಿಕೊಂಡು ಬಂದು ಪುಷ್ಕಲವಾಗಿ ಶಂಖಗಳನ್ನೂದಿದರು. ಹಾಗೆಯೇ ಪಾಂಡವರೆಲ್ಲರೂ ಧನಂಜಯನನ್ನು ಹರ್ಷಗೊಳಿಸಲು ತೂರ್ಯ ಶಂಖನಿನಾದಗಳಿಂದ ಎಲ್ಲ ದಿಕ್ಕುಗಳನ್ನೂ ಮೊಳಗಿಸಿದರು. ಕರ್ಣಾರ್ಜುನರ ಆ ಸಮಾಗಮದಲ್ಲಿ ವೀರರ ಸಿಂಹನಾದ, ಚಪಾಳೆ ಮತ್ತು ಕೂಗಾಟಗಳಿಂದ ಸರ್ವತ್ರ ಕೋಲಾಹಲವುಂಟಾಯಿತು.
ರಥಸ್ಥರಾಗಿದ್ದ ಮಹಾಚಾಪ-ಶರ-ಶಕ್ತಿ-ಗದಾಯುಧಗಳನ್ನು ಹಿಡಿದ ಆ ರಥಿಗಳಲ್ಲಿ ಶ್ರೇಷ್ಠ ಪುರುಷವ್ಯಾಘ್ರರಿಬ್ಬರನ್ನು, ಕವಚಗಳನ್ನು ಧರಿಸಿದ್ದ, ಖಡ್ಗಗಳನ್ನು ಕಟ್ಟಿಕೊಂಡಿದ್ದ, ಶ್ವೇತಾಶ್ವರಾದ, ಶಂಖಗಳಿಂದ ಸುಶೋಭಿತರಾಗಿದ್ದ, ಶ್ರೇಷ್ಠ ಬತ್ತಳಿಕೆಗಳಿಂದ ಸಂಪನ್ನರಾಗಿದ್ದ, ಸುಂದರರಾಗಿ ಕಾಣುತ್ತಿದ್ದ ಅವರಿಬ್ಬರನ್ನೂ, ಕೆಂಪಾದ ರಕ್ತದಿಂದ ಲೇಪಿತರಾಗಿದ್ದ, ಮದಿಸಿದ ಹೋರಿಗಳಂತಿದ್ದ, ಸರ್ಪದ ವಿಷದಂತೆ ಪ್ರಖರರಾಗಿದ್ದ, ಕಾಲಾಂತಕ ಯಮರಂತಿದ್ದ, ಇಂದ್ರ-ವೃತ್ರರಂತೆ ಕ್ರುದ್ಧರಾಗಿದ್ದ, ಸೂರ್ಯಚಂದ್ರರ ಸಮಪ್ರಭೆಯುಳ್ಳ, ಯುಗಾಂತದಲ್ಲಿ ಕೂಡಿಕೊಳ್ಳುವ ಕ್ರೂರ ಮಹಾಗ್ರಹಗಳಂತಿದ್ದ, ದೇವಗರ್ಭರಾದ, ದೇವಸಮರಾದ, ರೂಪದಲ್ಲಿ ದೇವತುಲ್ಯರಾದ, ಸಮೇತರಾಗಿದ್ದ ಪುರುಷವ್ಯಾಘ್ರರಾದ ಕರ್ಣ-ಧನಂಜಯರನ್ನು ನೋಡಿ ವಿಸ್ಮಿತರಾದರು. ಇಬ್ಬರೂ ಶ್ರೇಷ್ಠ ಅಯುಧಗಳನ್ನು ಧರಿಸಿದ್ದರು. ಇಬ್ಬರೂ ಯುದ್ಧಮಾಡಿ ಬಳಲಿದ್ದರು, ಇಬ್ಬರೂ ಬಾಹುಶಬ್ಧಗಳಿಂದ ನಭಸ್ತಲವನ್ನು ಮೊಳಗಿಸುತ್ತಿದ್ದರು. ಇಬ್ಬರೂ ಬಲ ಮತ್ತು ಪೌರುಷ ಕರ್ಮಗಳಲ್ಲಿ ವಿಶ್ರುತರಾಗಿದ್ದರು. ಇಬ್ಬರೂ ಯುದ್ಧದಲ್ಲಿ ಶಂಬರ ಮತ್ತು ಅಮರರಾಜರಂತೆ ಕಾಣುತ್ತಿದ್ದರು. ಇಬ್ಬರೂ ಯುದ್ಧದಲ್ಲಿ ಕಾರ್ತವೀರ್ಯನ ಮತ್ತು ದಾಶರಥಿಯ ಸಮನಾಗಿದ್ದರು. ಇಬ್ಬರೂ ವೀರ್ಯದಲ್ಲಿ ವಿಷ್ಣುವಿನ ಸಮನಾಗಿದ್ದರು ಮತ್ತು ಯುದ್ಧದಲ್ಲಿ ಭವನ ಸಮನಾಗಿದ್ದರು. ಇಬ್ಬರ ಕುದುರೆಗಳೂ ಶ್ವೇತವರ್ಣದ್ದಾಗಿದ್ದವು. ರಥಗಳು ಶ್ರೇಷ್ಠವಾಗಿದ್ದವು. ಅವರಿಬ್ಬರ ಸಾರಥಿಗಳೂ ಮಹಾಬಲಶಾಲಿಗಳು ಮತ್ತು ಪ್ರಮುಖರಾಗಿದ್ದರು. ವಿರಾಜಿಸುತ್ತಿರುವ ಆ ಮಹಾರಥರನ್ನು ಕಂಡು ಸಿದ್ಧಚಾರಣಸಂಘಗಳಿಗೆ ವಿಸ್ಮಯವುಂಟಾಯಿತು.
ಆಗ ಬೇಗನೇ ಸೇನೆಗಳೊಂದಿಗೆ ಧಾರ್ತರಾಷ್ಟ್ರರು ಕರ್ಣನನ್ನು ಸುತ್ತುವರೆದರು. ಹಾಗೆಯೇ ಧೃಷ್ಟದ್ಯುಮ್ನಪುರೋಗಮ ಪಾಂಡವರು ಹೃಷ್ಟರಾಗಿ ಪಾರ್ಥನನ್ನು ಸುತ್ತುವರೆದರು. ರಣವೆಂಬ ಜೂಜಿನಲ್ಲಿ ಕೌರವರಿಗೆ ಕರ್ಣನು ಪಣವಾದನು. ಹಾಗೆಯೇ ಯುದ್ಧದಲ್ಲಿ ಪಾಂಡವೇಯರಿಗೆ ಪಾರ್ಥನು ಪಣವಾದನು. ಅಂದು ಸಭಾಸದರಾಗಿ ಯಾರಿದ್ದರೋ ಅವರೇ ಇಂದು ಪ್ರೇಕ್ಷಕರಾಗಿದ್ದರು. ಪಣವನ್ನಿಟ್ಟಿದ್ದ ಅವರಲ್ಲಿ ಒಬ್ಬರಿಗೆ ಜಯ ಮತ್ತು ಇನ್ನೊಬ್ಬರಿಗೆ ಪರಾಜಯವು ನಿಶ್ಚಯವಾಗಿತ್ತು. ರಣಮೂರ್ಧನಿಯಲ್ಲಿ ನಿಂತಿರುವ ಕೌರವರು ಮತ್ತು ಪಾಂಡವರ ನಡುವೆ ಅವರಿಬ್ಬರ ವಿಜಯ ಅಥವಾ ಪರಾಜಯದ ಕುರಿತಾದ ದ್ಯೂತವು ಪ್ರಾರಂಭವಾಯಿತು. ಆ ಇಬ್ಬರು ಯುದ್ಧಶಾಲಿಗಳೂ ಅನ್ಯೋನ್ಯರೊಡನೆ ಕುಪಿತರಾಗಿ ಅನ್ಯೋನ್ಯರನ್ನು ಜಯಿಸಲು ಬಯಸಿ ಎದುರಾಳಿಗಳಾಗಿ ನಿಂತಿದ್ದರು. ಇಂದ್ರ-ವೃತ್ರರಂತೆ ಅವರಿಬ್ಬರೂ ಅನ್ಯೋನ್ಯರನ್ನು ಪ್ರಹರಿಸಲು ಉತ್ಸುಕರಾಗಿದ್ದರು. ಮಹಾಧೂಮಗ್ರಹಗಳಾದ ರಾಹು-ಕೇತುಗಳಂತೆ ಭಯಂಕರ ರೂಪಗಳನ್ನು ತಳೆದಿದ್ದರು.
ಆಗ ಅಂತರಿಕ್ಷದಲ್ಲಿದ್ದವರಲ್ಲಿ ಕರ್ಣಾರ್ಜುನರಲ್ಲಿ ಯಾರು ವಿಜಯಿಗಳಾಗುವರೆನ್ನುವ ವಿಷಯದಲ್ಲಿ ವಿವಾದಗಳೂ ಭಿನ್ನಾಭಿಪ್ರಾಯಗಳೂ ಉಂಟಾಗಲು ಅವರ ಭಿನ್ನ ಅಭಿಪ್ರಾಯದ ಮಾತುಗಳೂ ಸರ್ವಲೋಕಗಳಿಗೂ ಸರ್ವ ದಿಕ್ಕುಗಳಲ್ಲಿಯೂ ಕೇಳಿಬರುತ್ತಿತ್ತು. ಕರ್ಣಾರ್ಜುನರ ಆ ಸಮಾಗಮದಲ್ಲಿ ದೇವ-ದಾನವ-ಗಂಧರ್ವರೂ ಪಿಶಾಚ-ಉರಗ-ರಾಕ್ಷಸರೂ ಒಂದೊಂದು ಪಕ್ಷವನ್ನು ಹಿಡಿದರು. ನಕ್ಷತ್ರಗಳೊಂದಿಗೆ ನಭವು ವ್ಯಗ್ರಳಾಗಿ ಕರ್ಣನ ಪಕ್ಷವನ್ನು ವಹಿಸಿದಳು. ಮಾತೆಯಂತಿದ್ದ ವಿಶಾಲ ಭೂಮಿಯು ಮಗ ಪಾರ್ಥನ ಪಕ್ಷವನ್ನು ವಹಿಸಿದಳು. ಸಾಗರ-ಸರಿತ್ತುಗಳೂ, ಗಿರಿಗಳೂ, ವೃಕ್ಷ-ಔಷಧಗಳೂ ಕಿರೀಟಿಯನ್ನು ಆಶ್ರಯಿಸಿದವು. ಅಸುರರೂ, ಯಾತುಧಾನರೂ, ಗುಹ್ಯಕರೂ, ಖೇಚರರೂ, ಪಕ್ಷಿಗಳೂ ಕರ್ಣನ ಪಕ್ಷವನ್ನು ಸೇರಿದರು. ರತ್ನಗಣಿಗಳು, ಸರ್ವ ವೇದ-ಆಖ್ಯಾನ-ಪಂಚಮಗಳೂ, ರಹಸ್ಯಗಳು ಮತ್ತು ಸಂಗ್ರಹಗಳೊಂದಿಗೆ ಸಮಸ್ತ ವೇದ-ಉಪನಿಢತ್ತುಗಳೂ, ವಾಸುಕಿ, ಚಿತ್ರಸೇನ, ತಕ್ಷಕ, ಉಪತಕ್ಷಕ, ಪರ್ವತಗಳು, ಕದ್ರುವಿನ ಸರ್ಪ ಪೀಳಿಗೆಗಳು, ಮಹಾರೋಷವುಳ್ಳ ವಿಷಯುಕ್ತ ನಾಗಗಳು ಅರ್ಜುನನ ಪಕ್ಷವನ್ನು ಸೇರಿದವು. ಐರಾವತರು, ಸೌರಭೇಯರು, ಹೆಡೆಗಳುಳ್ಳ ವೈಶಾಲೇಯರು ಅರ್ಜುನನ ಪಕ್ಷದವರಾದರು. ಕ್ಷುದ್ರ ಸರ್ಪಗಳು ಕರ್ಣನ ಪಕ್ಷಕ್ಕೆ ಸೇರಿದವು. ಮಹಾಮೃಗಗಳು, ವ್ಯಾಲಮೃಗಗಳು, ಮಂಗಳಸೂಚಕ ಮೃಗಳು, ಪಕ್ಷಿಗಳು ಎಲ್ಲವೂ ಪಾರ್ಥನ ವಿಜಯವನ್ನು ಬಯಸಿ ಅವನ ಪಕ್ಷವನ್ನೇ ಸೇರಿದವು. ವಸುಗಳು, ಮರುತರು, ಸಾಧ್ಯರು, ರುದ್ರರು, ವಿಶ್ವೇದೇವರು, ಅಶ್ವಿನಿಗಳು, ಅಗ್ನಿ-ಇಂದ್ರರು, ಸೋಮ, ಪವನ ಮತ್ತು ಹತ್ತು ದಿಕ್ಕುಗಳು ಧನಂಜಯನ ಪಕ್ಷವನ್ನು ಸೇರಿದರು. ಆದರೆ ಆದಿತ್ಯರು ಕರ್ಣನ ಪಕ್ಷದವರಾದರು. ಪಿತೃಗಳೊಂದಿಗೆ ದೇವತೆಗಳು ಗಣಗಳೊಂದಿಗೆ ಅರ್ಜುನನ ಕಡೆಯವರಾದರು. ಯಮ, ವೈಶ್ರವಣ, ವರುಣರೂ ಅರ್ಜುನನ ಕಡೆಯವರಾದರು. ದೇವ-ಬ್ರಹ್ಮರ್ಷಿ-ನೃಪರ್ಷಿಗಣಗಳು ಪಾಂಡವನ ಕಡೆಯಾಯಿತು. ಹಾಗೆಯೇ ತುಂಬುರು ಪ್ರಮುಖ ಗಂಧರ್ವರೂ, ಮೌನೇಯರೊಂದಿಗೆ ಪ್ರಾವೇಯರೂ, ಗಂಧರ್ವಾಪ್ಸರ ಗಣಗಳೂ ಅರ್ಜುನನ ಕಡೆಯವರಾದರು.
ತೋಳಗಳೊಂದಿಗೆ ಹುಲಿಯೇ ಮೊದಲಾದ ದುಷ್ಟಪ್ರಾಣಿಗಳೂ, ರಥ-ಪದಾತಿಗಳೂ, ಮೇಘ-ವಾಯುಗಳನ್ನು ವಾಹನವನ್ನಾಗಿಸಿಕೊಂಡ ಮನೀಷಿಗಳೂ ಕರ್ಣಾರ್ಜುನರ ಆ ಸಮಾಗಮವನ್ನು ನೋಡಲು ಸೇರಿದರು. ದೇವ-ದಾನವ-ಗಂಧರ್ವರೂ, ನಾಗ-ಯಕ್ಷ-ಪಕ್ಷಿಗಳೂ, ವೇದವಿದ ಮಹರ್ಷಿಗಳೂ, ಸ್ವಧಾಭುಜ ಪಿತೃಗಳು, ನಾನಾರೂಪಗಳಲ್ಲಿದ್ದ ತಪಸ್ಸು, ವಿದ್ಯೆ, ಔಷಧಿಗಳೂ ಅಂತರಿಕ್ಷದಲ್ಲಿ ನೆರೆದು ಆನಂದಿಸುತ್ತಿದ್ದರು. ಬ್ರಹ್ಮರ್ಷಿಗಳೊಡನೆ ಪ್ರಜಾಪತಿ ಬ್ರಹ್ಮನು ಭವನೊಂದಿಗೆ ದಿವ್ಯ ಯಾನದಲ್ಲಿ ಆ ಪ್ರದೇಶಕ್ಕೆ ಆಗಮಿಸಿದನು. ಸ್ವಯಂಭು ಪ್ರಜಾಪತಿಯು ಬಂದುದನ್ನು ನೋಡಿ ದೇವತೆಗಳು “ದೇವ! ನಿನಗೆ ನಮಸ್ಕಾರ! ಈ ಎಬ್ಬರು ನರಸಿಂಹರಲ್ಲಿ ವಿಜಯವು ಸಮನಾಗಿರಲಿ!’ ಎನ್ನಲು ಅದನ್ನು ಕೇಳಿದ ಮಘವನು ಪಿತಾಮಹನಿಗೆ ನಮಸ್ಕರಿಸಿ “ಕರ್ಣಾರ್ಜುನರ ವಿನಾಶದಿಂದ ಅಖಿಲ ಜಗತ್ತನ್ನೂ ನಾಶಪಡಿಸದಿರು! ಸ್ವಯಂಭೋ! ನಿನಗೆ ನಮಸ್ಕಾರ! ಇವರಿಬ್ಬರ ವಿಜಯವೂ ಸಮವಾಗಿರಲಿ ಎಂದು ಹೇಳು! ನೀನು ಹೇಳಿದಂತೆಯೇ ಆಗಲಿ. ನಿನಗೆ ನಮಸ್ಕಾರ! ಭಗವನ್! ನನ್ನ ಮೇಲೆ ಪ್ರಸೀದನಾಗು!”
ಆಗ ಬ್ರಹ್ಮೇಶನು ತ್ರಿದಶೇಶ್ವರನಿಗೆ ಈ ಮಾತನ್ನಾಡಿದನು: “ಮಹಾತ್ಮ ವಿಜಯನಿಗೇ ವಿಜಯವೆನ್ನುವುದು ನಿಶ್ಚಿತವಾದುದು. ಅವನು ಮನಸ್ವಿ. ಬಲಶಾಲಿ. ಶೂರ. ಅಸ್ತ್ರಗಳನ್ನು ಕಲಿತಿದ್ದಾನೆ ಮತ್ತು ತಪೋಧನನು. ಆ ಮಹಾತೇಜಸ್ವಿಯು ಧನುರ್ವೇದವನ್ನು ಸಂಪೂರ್ಣವಾಗಿ ಧರಿಸಿದ್ದಾನೆ. ಈ ಮಹಾತ್ಮನು ದೈವವನ್ನೂ ಅತಿಕ್ರಮಿಸಬಲ್ಲನು. ಇವನೇನಾದರೂ ದೈವವನ್ನು ಅತಿಕ್ರಮಿಸಿದರೆ ಲೋಕಗಳ ನಾಶವು ನಿಶ್ಚಿತವಾಗುತ್ತದೆ. ಈ ಕೃಷ್ಣರಿಬ್ಬರು ಕ್ರುದ್ಧರಾದರೆ ಲೋಕದಲ್ಲಿ ಯಾವ ವ್ಯವಸ್ಥೆಯೂ ಉಳಿಯುವುದಿಲ್ಲ. ಶೋಭಿಸುತ್ತಿರುವ ಇವರಿಬ್ಬರು ಪುರುಷರ್ಷಭರೂ ಸತತವಾಗಿ ಸೃಷ್ಟಿಸುತ್ತಿರುತ್ತಾರೆ. ಇವರು ಪುರಾಣರಾದ ನರನಾರಾಯಣ ಋಷಿಸತ್ತಮರು. ಇವರು ಯಾರ ನಿಯಂತ್ರಣಕ್ಕೂ ಒಳಪಡದವರು. ನಿರ್ಭೀತರಾದ ಈ ಪರಂತಪರು ಎಲ್ಲವನ್ನೂ ನಿಯಂತ್ರಿಸುವವರು. ವೀರ ಕರ್ಣನು ಮುಖ್ಯ ಲೋಕಗಳಿಗೆ ಹೋಗಲಿ. ಅವನು ಭೀಷ್ಮನೊಂದಿಗೆ ವಸುಗಳ ಲೋಕಕ್ಕಾಗಲೀ ಅಥವಾ ದ್ರೋಣನೊಂದಿಗೆ ಮರುತರ ಲೋಕಕ್ಕಾಗಲೀ ಹೋಗಲಿ ಅಥವಾ ನಾಕಲೋಕಾಗಲೀ ಹೋಗಲಿ! ಆದರೆ ವಿಜಯವು ಕೃಷ್ಣರಿಬ್ಬರದಾಗುತ್ತದೆ.”
ದೇವದೇವರಿಬ್ಬರೂ ಇದನ್ನು ಹೇಳಲು ಸಹಸ್ರಾಕ್ಷನು ಸರ್ವಭೂತಗಳನ್ನೂ ಆಮಂತ್ರಿಸಿ ಹೇಳಿದನು: “ಬ್ರಹ್ಮ-ಈಶಾನರ ಶಾಸನಗಳನ್ನು ನೀವು ಕೇಳಿದಿರಿ. ಜಗತ್ತಿನ ಹಿತಕ್ಕಾಗಿ ಈ ಭಗವಂತರಿಬ್ಬರೂ ಹೇಳಿದಂತೆಯೇ ಆಗುತ್ತದೆ. ಅದಲ್ಲದೇ ಬೇರೆ ಆಗುವುದೇ ಇಲ್ಲ. ಆದುದರಿಂದ ನೀವು ನಿಶ್ಚಿಂತರಾಗಿರಿ!” ಇಂದ್ರನ ಈ ಮಾತನ್ನು ಕೇಳಿ ಸರ್ವಭೂತಗಳೂ ವಿಸ್ಮಿತರಾಗಿ ಕೃಷ್ಣಾರ್ಜುನರನ್ನು ಪೂಜಿಸತೊಡಗಿದವು. ದೇವತೆಗಳು ಅವರ ಮೇಲೆ ಸುಗಂಧದ್ರವ್ಯಗಳನ್ನೆರಚಿದರು. ನಾನಾರೂಪದ ಪುಷ್ಪವೃಷ್ಟಿಯನ್ನು ಸುರಿಸಿದರು. ದೇವತೂರ್ಯಗಳನ್ನು ಬಾರಿಸಿದರು. ಮಹಾರಥಿಗಳಾದ, ಶ್ವೇತಹಯರಾದ, ಯುಕ್ತಕೇತುಗಳಾಗಿದ್ದ, ಮಹಾಸ್ವನರಾಗಿದ್ದ ಆ ಇಬ್ಬರು ನರಸಿಂಹರ ದ್ವೈರಥಯುದ್ಧವನ್ನು ನೋಡಲು ದೇವ-ದಾನವ-ಗಂಧರ್ವರೆಲ್ಲರೂ ನೆರೆದರು. ಅಲ್ಲಿ ಸೇರಿದ್ದ ಲೋಕವೀರರು ಪ್ರತ್ಯೇಕ ಪ್ರತ್ಯೇಕವಾಗಿ ಶಂಖಗಳನ್ನೂದಿದರು. ವೀರರಾದ ವಾಸುದೇವ-ಅರ್ಜುನರೂ, ಕರ್ಣ-ಶಲ್ಯರೂ ಶಂಖಗಳನ್ನೂದಿದರು. ಆಗ ಶಕ್ರ-ಶಂಬರರಂತೆ ಅನ್ಯೋನ್ಯರೊಡನೆ ಸ್ಪರ್ಧಿಸುತ್ತಿದ್ದ ಆ ವೀರರ ನಡುವೆ ಹೇಡಿಗಳನ್ನು ನಡುಗಿಸಬಲ್ಲ ಯುದ್ಧವು ಪ್ರಾರಂಭವಾಯಿತು.
ಪರಸ್ಪರರರನ್ನು ಕ್ರೋಧದಿಂದ ನೋಡುತ್ತಿರುವ ಮಹಾಗ್ರಹಗಳಂತೆ ಮಾಲೆಗಳುಳ್ಳ ಅವರ ರಥಗಳ ಮೇಲಿದ್ದ ಎರಡು ಧ್ವಜಗಳು ಶೋಭಿಸಿದವು. ಸರ್ಪದಂತಿದ್ದ ಆನೆಯ ಹಗ್ಗದ ಚಿಹ್ನೆಯುಳ್ಳ, ರತ್ನಸಾರಮಯವಾಗಿದ್ದ, ದೃಢವಾಗಿದ್ದ, ಪುರಂಧರನ ಧನುಸ್ಸಿನಂತಿದ್ದ ಕರ್ಣನ ಧ್ವಜವು ವಿರಾಜಿಸುತ್ತಿತ್ತು. ಪಾರ್ಥನ ಕಪಿಶ್ರೇಷ್ಠನಾದರೋ ಬಾಯಿಕಳೆದು ಕೋರೆದಾಡೆಗಳಿಂದ ಭಯಂಕರನಾಗಿ, ಸೂರ್ಯನು ಹೇಗೋ ಹಾಗೆ ನೋಡಲೂ ಅಸಾಧ್ಯನಾಗಿದ್ದನು. ಗಾಂಡಿವಧನ್ವಿಯ ಧ್ವಜದಲ್ಲಿದ್ದ ಹನುಮಂತನು ಯುದ್ಧಾಭಿಲಾಷಿಯಾಗಿ ಕರ್ಣಧ್ವಜವನ್ನೇರಿ ಜೋರಾಗಿ ಗರ್ಜಿಸಿದನು. ಮಹಾವೇಗದಿಂದ ಹಾರಿ ಆ ಕಪಿಯು ಆನೆಯಕಕ್ಷದ ಧ್ವಜವನ್ನು ಗರುಡನು ಸರ್ಪವನ್ನು ಹೇಗೋ ಹಾಗೆ ಉಗುರುಗಳಿಂದ ಪರಚಿ ಹಲ್ಲುಗಳಿಂದ ಕಚ್ಚಿಹಾಕಲು ಪ್ರಾರಂಭಿಸಿದನು. ಕಿಂಕಿಣಿಗಳನ್ನೇ ಆಭರಣಗಳನ್ನಾಗುಳ್ಳ ಕಾಲಪಾಶದಂತಿದ್ದ ಉಕ್ಕಿನ ಆನೆಯ ಕಕ್ಷವು ಸಂಕ್ರುದ್ಧವಾಗಿ ಮಹಾಕಪಿಯನ್ನು ಆಕ್ರಮಣಿಸಿತು. ಅವರಿಬ್ಬರ ನಡುವೆ ದ್ವೈರಥಯುದ್ಧದ ದ್ಯೂತವು ನಡೆಯುತ್ತಿರಲು ಧ್ವಜಗಳೆರಡು ಮತ್ತು ಅವರ ಕುದುರೆಗಳು ಕುದುರೆಗಳೊಡನೆ ಹೇಷಾರವ ಮಾಡಿ ಯುದ್ಧಮಾಡುತ್ತಿದ್ದವು. ಪುಂಡರೀಕಾಕ್ಷನು ಶಲ್ಯನನ್ನು ತನ್ನ ಸಾಯಕದಂತಹ ದೃಷ್ಟಿಯಿಂದ ಹೊಡೆಯುತ್ತಿದನು. ಅವನೂ ಕೂಡ ಪುಂಡರೀಕಾಕ್ಷನನ್ನು ಹಾಗೆಯೇ ನೋಡುತ್ತಿದ್ದನು. ಅಲ್ಲಿ ವಾಸುದೇವನೇ ನಯನಸಾಯಕಗಳಿಂದ ಶಲ್ಯನನ್ನು ಗೆದ್ದನು. ಕುಂತೀಪುತ್ರ ಧನಂಜಯನೂ ಕೂಡ ಕರ್ಣನನ್ನು ದೃಷ್ಟಿಯುದ್ಧದಲ್ಲಿ ಗೆದ್ದನು.
ಆಗ ಸೂತಪುತ್ರನು ಮಂದಹಾಸಪೂರ್ವಕವಾಗಿ ಮಾತನಾಡುತ್ತಾ ಹೇಳಿದನು: “ಸಖಾ! ರಣದಲ್ಲಿ ಪಾರ್ಥನೇನಾದರೂ ನನ್ನನ್ನು ಸಂಹರಿಸಿದರೆ ಅದರ ನಂತರ ನೀನು ಏನು ಮಾಡುತ್ತೀಯೆ? ಸತ್ಯವನ್ನೇ ನನಗೆ ಹೇಳು!”
ಶಲ್ಯನು ಹೇಳಿದನು: “ಕರ್ಣ! ರಣದಲ್ಲಿ ಇಂದು ಶ್ವೇತವಾಹನನು ನಿನ್ನನ್ನು ಸಂಹರಿಸಿದ್ದೇ ಆದರೆ ನಾನು ಏಕರಥನಾಗಿ ಮಾಧವ-ಪಾಂಡವರಿಬ್ಬರನ್ನೂ ಸಂಹರಿಸುತ್ತೇನೆ!”
ಅದೇರೀತಿ ಅರ್ಜುನನೂ ಕೂಡ ಗೋವಿಂದನನ್ನು ಕೇಳಿದನು. ಆಗ ಜೋರಾಗಿ ನಕ್ಕು ಕೃಷ್ಣನಿಗೆ ಈ ಪರಮವಚನವನ್ನಿತ್ತನು: “ದಿವಾಕರನು ತಾನಿರುವ ಸ್ಥಳದಿಂದ ಚ್ಯುತನಾಗಿ ಬೀಳಬಹುದು. ಮಹಾಸಾಗರವು ಬತ್ತಿಹೋಗಬಹುದು. ಅಗ್ನಿಯು ಶೀತಲನಾಗಬಹುದು. ಆದರೆ ಕರ್ಣನು ಧನಂಜಯನನ್ನು ಸಂಹರಿಸಲಾರನು! ಆದರೆ ಲೋಕಸ್ಥಿತಿಯೇ ವ್ಯತ್ಯಾಸಹೊಂದಿ ಹಾಗೇನಾದರೂ ಆಗಿ ಹೋದರೆ ನನ್ನ ಈ ತೋಳುಗಳಿಂದಲೇ ಯುದ್ಧದಲ್ಲಿ ನಾನು ಕರ್ಣನನ್ನೂ ಶಲ್ಯನನ್ನೂ ಸಂಹರಿಸುತ್ತೇನೆ!”
ಕೃಷ್ಣನ ಈ ಮಾತನ್ನು ಕೇಳಿ ನಗುತ್ತಾ ಕಪಿಕೇತನ ಅರ್ಜುನನು ಕೃಷ್ಣನಿಗೆ ಉತ್ತರಿಸಿದನು: “ಜನಾರ್ದನ! ಈ ಕರ್ಣ-ಶಲ್ಯರು ನನಗೆ ಕೂಡ ಪರ್ಯಾಪ್ತರಲ್ಲ! ನನ್ನ ಶರಗಳಿಂದ ಇಂದು ಕರ್ಣನು ಶಲ್ಯ, ರಥ, ಕುದುರೆಗಳು, ಪತಾಕೆ, ಧ್ವಜ, ಚ್ಛತ್ರ, ಕವಚ, ಶಕ್ತಿ-ಶರ-ಕಾರ್ಮುಕಗಳೊಡನೆ ಅನೇಕ ಭಾಗಗಳಾಗಿ ಕತ್ತರಿಸಿಲ್ಪಡುವುದನ್ನು ನೀನು ನೋಡುವೆಯಂತೆ! ಇಂದು ಇವನನ್ನು ರಥ-ಕುದುರೆ-ಶಕ್ತಿ-ಕವಚ-ಆಯುಧಗಳೊಂದಿಗೆ ನಾಶಪಡಿಸದೇ ಹಿಂದೆ ಇವನು ವೈರದಿಂದ ಕೃಷ್ಣೆಯನ್ನು ನೋಡಿ ಹೇಗೆ ನಕ್ಕನೋ ಅದರ ಕೋಪವು ಶಾಂತವಾಗುವುದಿಲ್ಲ! ಗೋವಿಂದ! ಅರಣ್ಯದಲ್ಲಿ ಮದಿಸಿದ ಆನೆಯು ಪುಷ್ಪಿತವಾದ ದೊಡ್ಡ ವೃಕ್ಷವನ್ನು ಮಥಿಸಿಬಿಡುವಂತೆ ಕರ್ಣನನ್ನು ಪುಡಿಪುಡಿ ಮಾಡುವುದನ್ನು ನೀನು ಇಂದು ನೋಡುವಿಯಂತೆ! ಇಂದು ನೀನು ಆ ಮಧುರ ಮಾತುಗಳನ್ನು ಕೇಳುವೆ. ಇಂದು ನೀನು ಅಭಿಮನ್ಯುವಿನ ತಾಯಿಯನ್ನೂ ನಿನ್ನ ತಂದೆಯ ತಂಗಿ ಕುಂತಿಯನ್ನೂ ಪ್ರಹೃಷ್ಟನಾಗಿ ಸಂತವಿಸುತ್ತೀಯೆ! ಇಂದು ನೀನು ಅಮೃತಕಲ್ಪವಾದ ಮಾತುಗಳಿಂದ ಕಣ್ಣೀರುತುಂಬಿದ ಕೃಷ್ಣೆಯನ್ನೂ, ಧರ್ಮರಾಜ ಯುಧಿಷ್ಟಿರನನ್ನೂ ಸಂತವಿಸುತ್ತೀಯೆ!”
ಆಗ ಆಕಾಶದಲ್ಲಿ ದೇವ, ನಾಗ, ಅಸುರ, ಸಿದ್ಧಸಂಘಗಳೂ, ಗಂಧರ್ವ-ಯಕ್ಷ-ಅಪ್ಸರೆಯರ ಸಂಘಗಳೂ, ಬ್ರಹ್ಮರ್ಷಿ-ರಾಜರ್ಷಿ-ಗರುಡರು ಸೇರಿ ವಿಸ್ಮಯರೂಪವನ್ನು ತಾಳಿದ್ದಿತು. ಕಿವಿಗಿಂಪಾಗುವ ನಾನಾವಿಧದ ನಾದಗಳಿಂದಲೂ, ವಾದ್ಯ-ಗೀತ-ಸ್ತ್ರೋತ್ರ-ನೃತ್ಯಗಳಿಂದಲೂ ಅಂತರಿಕ್ಷವೆಲ್ಲವೂ ತುಂಬಿರಲು ಮನುಷ್ಯರೂ ಆಕಾಶದಲ್ಲಿ ನಿಂತಿದ್ದವರೂ ವಿಸ್ಮಯರಾಗಿ ನೋಡುತ್ತಿದ್ದರು. ಆಗ ಪ್ರಹೃಷ್ಟರಾದ ಕುರು-ಪಾಂಡವ ಯೋಧರು ವಾದ್ಯ, ಶಂಖ ಮತ್ತು ಸಿಂಹನಾದ ಶಬ್ಧಗಳಿಂದ ವಸುಧೆಯನ್ನೂ ದಿಶಗಳನ್ನೂ ಮೊಳಗಿಸಿ, ಶತ್ರುಗಳನ್ನು ಸಂಹರಿಸತೊಡಗಿದರು. ಅನೇಕ ಅಶ್ವ-ಗಜ-ರಥ-ಪದಾತಿ ಸಂಕುಲಗಳಿಂದ ಕೂಡಿದ್ದ, ಖಡ್ಗ-ಶಕ್ತಿ-ಋಷ್ಟಿ-ಬಾಣ ಈ ಆಯುಧಗಳ ಪತನದಿಂದ ದುಃಸ್ಸಹವಾಗಿದ್ದ, ವೀರರಿಂದ ಮತ್ತು ಮೃತದೇಹಗಳಿಂದ ಕೂಡಿದ್ದ ಆ ರಣಾಂಗಣವು ರಕ್ತದಿಂದಾಗಿ ಕೆಂಪಾಗಿ ತೋರುತ್ತಿತ್ತು. ಹಾಗೆ ಶಸ್ತ್ರಭೃತರ ಪರಾಭವವು ಪ್ರಾರಂಭವಾಯಿತು. ಕವಚಧಾರಿಗಳಾಗಿದ್ದ ಧನಂಜಯ-ಆಧಿರಥರು ಸಾಯಕಗಳಿಂದ ದಿಕ್ಕುಗಳನ್ನೂ ಸೈನ್ಯವನ್ನೂ ಮುಸುಕಿ, ನಿಶಿತ ಜಿಹ್ಮಗಗಳಿಂದ ಪರಸ್ಪರರನ್ನು ಮುಚ್ಚಿಬಿಟ್ಟರು. ಆ ಸಾಯಕಗಳಿಂದ ನಿರ್ಮಿತವಾದ ಅಂಧಕಾರದಲ್ಲಿ ನಿನ್ನವರು ಮತ್ತು ಅವರಿಗೆ ಏನೂ ತಿಳಿಯದಂತಾಯಿತು. ಭಯದಲ್ಲಿ ಅವರು ಆ ಇಬ್ಬರು ಮಹಾರಥರ ಆಶ್ರಯವನ್ನೇ ಪಡೆದರು. ಆಕಾಶದಲ್ಲಿ ಅವರಿಬ್ಬರನ್ನೂ ಅನುಮೋದಿಸುತ್ತಿದ್ದರು. ಪೂರ್ವ-ಪಶ್ಚಿಮದ ಗಾಳಿಗಳು ಎದುರಾಗಿ ಪರಸ್ಪರರ ವೇಗವನ್ನು ಕುಂಠಿತಗೊಳಿಸುವಂತೆ ಅವರಿಬ್ಬರು ಪರಸ್ಪರರ ಅಸ್ತ್ರಗಳನ್ನು ಅಸ್ತ್ರಗಳಿಂದ ನಿರಸನಗೊಳಿಸುತ್ತಿದ್ದರು. ಘನಾಂಧಕಾರವನ್ನು ಹೋಗಲಾಡಿಸಲು ಉದಯಿಸುವ ಎರಡು ಸೂರ್ಯರಂತೆ ಅವರು ಅತೀವ ತೇಜಸ್ಸಿನಿಂದ ಪ್ರಕಾಶಿಸುತ್ತಿದ್ದರು. ಮುನ್ನುಗ್ಗಿ ಹೋಗಬಾರದೆಂದು ಪ್ರೇರಿತರಾದ ನಿನ್ನವರು ಮತ್ತು ಶತ್ರುಗಳ ಕಡೆಯವರು ಹಿಂದೆ ವಾಸವ-ಶಂಬರರನ್ನು ಸುತ್ತುವರೆದ ಸುರಾಸುರರಂತೆ ಆ ಮಹಾರಥರನ್ನು ಸುತ್ತುವರೆದು ನಿಂತಿದ್ದರು. ಮೃದಂಗ-ಭೇರೀ-ಪಣವಾನಕ ಧ್ವನಿಗಳಿಂದಲೂ, ಶಂಖಗಳ ಧ್ವನಿಗಳಿಂದಲೂ, ಸಿಂಹನಾದಗಳಿಂದಲೂ ಪರಿವೃತರಾಗಿದ್ದ ಆ ಇಬ್ಬರು ನರೋತ್ತಮರು ಗುಡುಗುತ್ತಿರುವ ಮೋಡಗಳ ಮಧ್ಯದಲ್ಲಿರುವ ಶಶಾಂಕ-ಸೂರ್ಯರಿಂದ ಕಾಣುತ್ತಿದ್ದರು. ರಣದಲ್ಲಿ ಮಹಾಧನುರ್ಮಂಡಲಗಳ ಮಧ್ಯದಲ್ಲಿದ್ದ ಸಹಸ್ರಬಾಣಗಳ ಕಿರಣಗಳಿಂದ ಸುವರ್ಚಸರಾಗಿದ್ದ ಆ ಇಬ್ಬರೂ ಸಚರಾಚರ ಜಗದ ಯುಗಾಸ್ತದ ಕಾಲದಲ್ಲಿ ದುಃಸ್ಸಹರಾಗಿರುವ ಎರಡು ಸೂರ್ಯರಂತೆ ಪ್ರಖರರಾಗಿ ಕಾಣುತ್ತಿದ್ದರು. ಅಜೇಯರಾದ, ಅಹಿತರ ಅಂತಕರಾದ, ಪರಸ್ಪರರನ್ನು ಸಂಹರಿಸಲು ಪ್ರಯತ್ನಿಸುತ್ತಿರುವ ಆ ವೀರವರರಾದ ಕರ್ಣಪಾಂಡವರು ಮಹಾಹವದಲ್ಲಿ ಇಂದ್ರ ಮತ್ತು ಜಂಭಾಸುರರಂತೆ ಕಾಣುತ್ತಿದ್ದರು. ಆಗ ಮಹಾಸ್ತ್ರಗಳನ್ನು ಮತ್ತು ಭಯಾನಕ ಬಾಣಗಳನ್ನು ಬಿಡುತ್ತಿದ್ದ ಆ ಮಹಾಧನುರ್ಧರರಿಬ್ಬರೂ ಅಮಿತವಾದ ನರ-ಅಶ್ವ-ಗಜಗಳನ್ನು ಸಂಹರಿಸಿ ಉತ್ತಮ ಬಾಣಗಳಿಂದ ಪರಸ್ಪರರನ್ನು ಆಕ್ರಮಣಿಸಿದರು. ಆ ನರೋತ್ತಮರಿಬ್ಬರ ಶರಗಳಿಂದ ಭಯಪಟ್ಟ ಕುರುಪಾಂಡವ ಸೇನೆಗಳು ಆನೆ-ಪದಾತಿ-ಕುದುರೆ-ರಥಗಳೊಂದಿಗೆ ದಿಕ್ಕಾಪಾಲಾಗಿ ಸಿಂಹದ ಭಯದಿಂದ ವನ್ಯಮೃಗಗಳು ಹೇಗೋ ಹಾಗೆ ಪಲಾಯನಮಾಡಿದವು.
ಅಶ್ವತ್ಥಾಮನ ಮಾತು
ಆಗ ದುರ್ಯೋಧನ, ಕೃತವರ್ಮ, ಸೌಬಲ ಶಕುನಿ, ಕೃಪ, ಅಶ್ವತ್ಥಾಮ ಈ ಐವರು ಮಹಾರಥರು ಧನಂಜಯ-ಅಚ್ಯುತರನ್ನು ಶರೀರಾಂತಕ ಶರಗಳಿಂದ ಹೊಡೆದರು. ಅದಕ್ಕೆ ಪ್ರತಿಯಾಗಿ ಧನಂಜಯನು ಶರಗಳಿಂದ ಅವರ ಧನುಸ್ಸುಗಳನ್ನೂ, ಬತ್ತಳಿಕೆಗಳನ್ನೂ, ಕುದುರೆಗಳನ್ನೂ, ಧ್ವಜಗಳನ್ನೂ, ರಥಗಳನ್ನೂ, ಸಾರಥಿಗಳನ್ನೂ ಒಂದೇ ಬಾರಿಗೆ ತುಂಡರಿಸಿ ಕರ್ಣನನ್ನು ಹನ್ನೆರಡು ಉತ್ತಮ ಬಾಣಗಳಿಂದ ಹೊಡೆದನು. ಆಗ ಅರ್ಜುನನನ್ನು ಸಂಹರಿಸಲು ಇಚ್ಛಿಸಿದ ನೂರು ರಥಿಕರೂ, ನೂರು ಗಜಸೈನಿಕರೂ, ಶಕ-ತುಖಾರ-ಯವನ ಮತ್ತು ಕಾಂಬೋಜರ ಶ್ರೇಷ್ಠ ಕುದುರೆಸವಾರರೂ ತ್ವರೆಮಾಡಿ ಅವನನ್ನು ಆಕ್ರಮಣಿಸಿದರು. ಧನಂಜಯನು ತ್ವರೆಮಾಡಿ ಕ್ಷುರಗಳಿಂದ ಅವರ ಶ್ರೇಷ್ಠ ಆಯುಧಗಳನ್ನು ಹಿಡಿದಿದ್ದ ಕೈಗಳೊಂದಿಗೆ ಶಿರಗಳನ್ನು ತುಂಡರಿಸಿದನು. ಕುದುರೆ-ಆನೆ-ರಥಗಳನ್ನೂ, ಯುದ್ಧಮಾಡುತ್ತಿದ್ದ ಶತ್ರುಗಣಗಳನ್ನೂ ಸಂಹರಿಸಿ ನೆಲದಮೇಲೆ ಕೆಡವಿದನು. ಆಗ ಅಂತರಿಕ್ಷದಲ್ಲಿ ಸುರರು ಹರ್ಷಿತರಾಗಿ ಸಾಧು ಸಾಧು ಎಂದು ಉದ್ಗರಿಸಿದರು, ತೂರ್ಯಗಳನ್ನು ಮೊಳಗಿಸಿದರು ಮತ್ತು ಉತ್ತಮ ಪುಷ್ಪಗಳ ಮಳೆಯನ್ನು ಸುರಿಸಿದರು. ಮಂಗಳವಾದ ಸುಗಂಧಿತ ಗಾಳಿಯು ಬೀಸತೊಡಗಿತು.
ದೇವಮನುಷ್ಯ ಸಾಕ್ಷಿಕವಾದ ಆ ಅದ್ಭುತವನ್ನು ನೋಡಿ ಭೂತಗಳು ವಿಸ್ಮಿತಗೊಂಡವು. ಆದರೆ ಒಂದೇ ಮನಸ್ಸಿನವರಾದ ದುರ್ಯೋಧನ ಮತ್ತು ಸೂತಸುತರು ವ್ಯಥಿತರಾಗಲೂ ಇಲ್ಲ; ಅಚ್ಚರಿಯನ್ನೂ ತೋರ್ಪಡಿಸಲಿಲ್ಲ. ಆಗ ದ್ರೋಣಸುತನು ದುರ್ಯೋಧನನ ಕೈಯನ್ನು ಕೈಯಿಂದ ಒತ್ತಿ ಹಿಡಿತು ಸಾಂತ್ವನಗೊಳಿಸುತ್ತಾ ಇದನ್ನು ಹೇಳಿದನು: “ದುರ್ಯೋಧನ! ಪ್ರಸನ್ನನಾಗು! ಪಾಂಡವರೊಡನೆ ಸಂಧಾನಮಾಡಿಕೋ! ವಿರೋಧದಿಂದ ಯಾವ ಪ್ರಯೋಜನವೂ ಇಲ್ಲ. ಈ ಯುದ್ಧಕ್ಕೆ ಧಿಕ್ಕಾರ! ಬ್ರಹ್ಮಸಮ ಮಹಾಸ್ತ್ರವಿದು ಗುರುವು ಹತನಾದನು ಮತ್ತು ಹಾಗೆಯೇ ಭೀಷ್ಮಪ್ರಮುಖರಾದ ನರರ್ಷಭರು ಹತರಾದರು. ನಾನು ಮತ್ತು ನನ್ನ ಸೋದರಮಾವರು ಅವಧ್ಯರು. ಪಾಂಡವರೊಡನೆ ಸೇರಿ, ಚಿರಕಾಲ ರಾಜ್ಯಭಾರಮಾಡು! ನಾನು ಬೇಡವೆಂದರೆ ಧನಂಜಯನು ಯುದ್ಧವನ್ನು ನಿಲ್ಲಿಸುತ್ತಾನೆ. ಜನಾರ್ದನನೂ ಇದಕ್ಕೆ ವಿರೋಧಿಸಲು ಬಯಸುವುದಿಲ್ಲ. ಯುಧಿಷ್ಠಿರನು ಸದಾ ಭೂತಹಿತರತನಾಗಿರುವನು. ವೃಕೋದರ ಮತ್ತು ಯಮಳರು ಅವನ ಅಧೀನದಲ್ಲಿದ್ದಾರೆ. ನೀನು ಮತ್ತು ಪಾರ್ಥರು ಪರಸ್ಪರರಲ್ಲಿ ಸಂಧಿಮಾಡಿಕೊಂಡರೆ ನಿನ್ನ ಇಚ್ಛೆಯಂತೆ ಪ್ರಜೆಗಳು ಸೌಖ್ಯವನ್ನು ಹೊಂದುತ್ತಾರೆ. ಉಳಿದ ಪಾರ್ಥಿವರು ತಮ್ಮ ತಮ್ಮ ಪುರಗಳಿಗೆ ತೆರಳುತ್ತಾರೆ. ಸೈನಿಕರು ವೈರವನ್ನು ಕಳೆದುಕೊಂಡವರಾಗುತ್ತಾರೆ. ಒಂದು ವೇಳೆ ನೀನು ನನ್ನ ಈ ಮಾತನ್ನು ಕೇಳದೇ ಇದ್ದರೆ ಶತ್ರುಗಳಿಂದ ಯುದ್ಧದಲ್ಲಿ ಹತನಾಗಿ ಪಶ್ಚಾತ್ತಾಪಪಡುವೆ ಎನ್ನುವುದು ನಿಶ್ಚಯ! ಕಿರೀಟಮಾಲಿನಿಯು ಏಕಾಕಿಯಾಗಿ ಏನೆಲ್ಲ ಮಾಡಿದನೋ ಅದನ್ನು ನಿನ್ನೊಂದಿಗೆ ಜಗತ್ತೂ ಕೂಡ ನೋಡಿದೆ! ಇಂಥಹುದನ್ನು ಇಂದ್ರನೂ, ಅಂತಕ ಯಮನೂ, ಪ್ರಚೇತಸ ಬ್ರಹ್ಮನೂ, ಭಗವಾನ್ ಯಕ್ಷರಾಜನೂ ಮಾಡಲಾರರು! ಇದಕ್ಕಿಂತಲೂ ಹೆಚ್ಚಿನ ಗುಣವಂತನಾಗಿದ್ದರೂ ಧನಂಜಯನು ನನ್ನ ಎಲ್ಲ ಮಾತುಗಳನ್ನೂ ಕೇಳುತ್ತಾನೆ. ಅನಂತರ ನಿನ್ನ ಅಭಿಪ್ರಾಯದಂತೆ ಕೂಡ ಮಾಡುತ್ತಾನೆ. ಆದುದರಿಂದ ಜಗತ್ತಿನ ಶಾಂತಿಗಾಗಿ ಪ್ರಸೀದನಾಗು! ನನಗೆ ನಿನ್ನೊಡನೆ ಸದಾ ವಿಶೇಷ ಗೌರವವಿರುವುದರಿಂದ ಮತ್ತು ಪರಮ ಸೌಹಾರ್ದತೆಯಿರುವುದರಿಂದ ನಾನು ನಿನಗೆ ಇದನ್ನು ಹೇಳುತ್ತಿದ್ದೇನೆ. ಒಂದು ವೇಳೆ ನೀನು ಪಾಂಡವರ ವಿಷಯದಲ್ಲಿ ಪ್ರೀತನಾದರೆ ನಾನು ಕರ್ಣನನ್ನು ಕೂಡ ಯುದ್ಧದಿಂದ ಹಿಂದಿರುಗುವಂತೆ ಮಾಡುತ್ತೇನೆ! ನಾಲ್ಕು ವಿಧದ ಮಿತ್ರತ್ವದ ಕುರಿತು ತಿಳಿದವರು ಹೇಳುತ್ತಾರೆ: ಸಹಜಮಿತ್ರ, ಸಂಧಿಮಾಡಿಕೊಂಡು ಆದ ಮಿತ್ರ, ಧನದಿಂದ ಗಳಿಸಿಕೊಂಡ ಮಿತ್ರ, ಮತ್ತು ಪ್ರತಾಪದಿಂದ ಶರಣಾಗತನನ್ನಾಗಿಸಿಕೊಂಡ ಮಿತ್ರ. ಇವೆಲ್ಲ ಪ್ರಕಾರಗಳಲ್ಲಿ ನೀನು ಪಾಂಡವರ ಮಿತ್ರನಾಗಬಲ್ಲೆ! ನಿಸರ್ಗದತ್ತವಾಗಿ ಅವರು ನಿನ್ನ ಬಾಂಧವರು. ಮತ್ತೆ ಸಂಧಿ ಮಾಡಿಕೊಂಡು ಪುನಃ ನೀನು ಅವರನ್ನು ಸ್ಥಿರರಾದ ಮಿತ್ರರನ್ನಾಗಿ ಪಡೆದುಕೋ! ನೀನು ಪ್ರಸನ್ನನಾಗಿ ಅವರೊಡನೆ ಮಿತ್ರನಾದರೆ ನಿಶ್ಚಯವಾಗಿಯೂ ನೀನು ಜಗತ್ತಿಗೇ ಅನುಪಮ ಹಿತವನ್ನುಂಟುಮಾಡಿದಂತಾಗುತ್ತದೆ!”
ಸುಹೃದನ ಈ ಹಿತ ಮಾತುಗಳನ್ನು ಕೇಳಿ ದುರ್ಯೋಧನನು ಯೋಚನೆಗೊಳಗಾಗಿ, ನಿಟ್ಟುಸಿರು ಬಿಡುತ್ತಾ, ವ್ಯಾಕುಲಗೊಂಡು ಹೇಳಿದನು: “ಸಖಾ! ನೀನು ಹೇಳಿದುದು ವಾಸ್ತವವೇ ಸರಿ! ಆದರೆ ಇದರಲ್ಲಿ ನನ್ನ ಅಭಿಪ್ರಾಯವೇನೆಂದು ಹೇಳುತ್ತೇನೆ. ಕೇಳು! ಆ ದುರ್ಮತಿ ವೃಕೋದರನು ದುಃಶಾಸನನನ್ನು ಹುಲಿಯಂತೆ ಎಳೆದುತಂದು ಸಂಹರಿಸಿ ಜೋರಾಗಿ ನಗುತ್ತಾ ಹೇಳಿದುದು ನನ್ನ ಹೃದಯದಲ್ಲಿ ನೆಲೆಸಿಬಿಟ್ಟಿದೆ! ನಿನ್ನ ಪರೋಕ್ಷದಲ್ಲಿ ಅದನ್ನೇನೂ ಹೇಳಲಿಲ್ಲವಲ್ಲ! ಅದನ್ನು ಹೇಗೆ ನಾನು ಶಾಂತಗೊಳಿಸಬಲ್ಲೆ? ಗುರುಪುತ್ರ! ಈ ಸಮಯದಲ್ಲಿ ಕರ್ಣನನ್ನು ಯುದ್ಧದಿಂದ ವಿರಮಿಸುವಂತೆ ಹೇಳುವುದೂ ಉಚಿತವಲ್ಲ. ಇಂದು ಫಲ್ಗುನನು ಶ್ರಮದಿಂದ ಬಹಳವಾಗಿ ಬಳಲಿದ್ದಾನೆ. ಕರ್ಣನು ಬಲಪೂರ್ವಕವಾಗಿ ಅವನನ್ನು ಕೊಲ್ಲುತ್ತಾನೆ!”
ದುರ್ಯೋಧನನು ಅವನಿಗೆ ಹೀಗೆ ಹೇಳಿ ಸಮಾಧಾನಗೊಳಿಸಿ ತನ್ನ ಸೈನಿಕರಿಗೆ ಆಜ್ಞಾಪಿಸಿ ಹೇಳಿದನು: “ಬಾಣಗಳನ್ನು ಹಿಡಿದು ಸುಮ್ಮನೇಕೆ ನಿಂತಿದ್ದೀರಿ? ಶತ್ರುಗಳನ್ನು ಆಕ್ರಮಣಿಸಿ ಸಂಹರಿಸಿರಿ!”
ಕರ್ಣಾರ್ಜುನರ ದ್ವೈರಥಯುದ್ಧ
ದುರ್ಯೋಧನನ ದುರ್ಮಂತ್ರದಿಂದಾಗಿ ಸಮೃದ್ಧವಾದ ಶಂಖಭೇರಿ ನಿನಾದದ ಮಧ್ಯೆ ನರಾಗ್ರರಾದ ಶ್ವೇತಹಯರಾದ ವೈಕರ್ತನ ಕರ್ಣ ಮತ್ತು ಅರ್ಜುನರು ಎದುರಾಗಿ ಯುದ್ಧಮಾಡತೊಡಗಿದರು. ಮದೋದಕವನ್ನು ಸುರಿಸುತ್ತಿರುವ ದೀರ್ಘ ದಂತಗಳನ್ನು ಹೊಂದಿದ್ದ ಹಿಮಾಲಯದ ಎರಡು ಆನೆಗಳು ಹೆಣ್ಣಾನೆಗೋಸ್ಕರವಾಗಿ ಸೆಣಸಾಡಲು ಮುನ್ನುಗ್ಗಿಹೋಗುವಂತೆ ವೀರರಾದ ಧನಂಜಯ ಮತ್ತು ಆಧಿರಥರು ಉಗ್ರವೇಗದಿಂದ ಅನ್ಯೋನ್ಯರ ಮೇಲೆ ಎರಗಿದರು. ಮಹಾಮೇಘದೊಡನೆ ಮಹಾಮೇಘವು ಠಕ್ಕರಿಸುವಂತೆ, ಪರ್ವತವು ಪರ್ವತಕ್ಕೆ ಠಕ್ಕರಿಸುವಂತೆ ಬಾಣಗಳ ಮಳೆಯನ್ನೇ ಸುರಿಸುತ್ತಿದ್ದ ಕರ್ಣಾರ್ಜುನರು ಧನುಸ್ಸಿನ ಟೇಂಕಾರ ಶಬ್ಧಗಳಿಂದಲೂ, ಚಪ್ಪಳೆಯ ಶಬ್ಧಗಳಿಂದಲೂ, ರಥಚಕ್ರದ ಶಬ್ಧಗಳಿಂದಲೂ ಪರಸ್ಪರರನ್ನು ಎದುರಿಸಿದರು. ಬೆಳೆದಿರುವ ಶಿಖರಗಳಿಂದಲೂ, ವೃಕ್ಷಗಳಿಂದಲೂ, ಲತಾ-ಗುಲ್ಮಗಳಿಂದಲೂ, ಔಷಧಿಮೂಲಿಕೆಗಳಿಂದಲೂ ಕೂಡಿರುವ, ತುಂಬಿಹರಿಯುತ್ತಿರುವ ನಾನಾ ಝರಿಗಳಿಂದ ಕೂಡಿದ ಎರಡು ಪರ್ವತಗಳಂತೆ ಆ ಮಹಾಬಲಶಾಲಿಗಳಿಬ್ಬರು ಕಂಡರು. ಅವರಿಬ್ಬರ ಆಕ್ರಮಣವು ಹಿಂದೆ ಸುರೇಶ-ವೈರೋಚನರ ನಡುವೆ ನಡೆದಂತೆ ಘೋರವಾಗಿದ್ದಿತು. ಬೇರೆಯವರಿಗೆ ದುಃಸ್ಸಹವಾದ ಆ ಯುದ್ಧದಲ್ಲಿ ಶರಗಳಿಂದ ಗಾಯಗೊಂಡ ಅವರ ದೇಹಗಳಿಂದ, ಸಾರಥಿಗಳಿಂದ ಮತ್ತು ಕುದುರೆಗಳಿಂದ ರಕ್ತವೇ ನೀರಾದ ಕೋಡಿಯು ಹರಿಯತೊಡಗಿತು. ಬೆಳಿದಿದ್ದ ಪದ್ಮಗಳಿಂದಲೂ, ಮೀನು ಆಮೆಗಳಿಂದಲೂ ಕೂಡಿದ್ದ, ಪಕ್ಷಿಗಣಗಳ ಇಂಚರಗಳಿಂದಲೂ ಕೂಡಿದ್ದ ಮಹಾ ಸರೋವರಗಳೆರಡು ಭಿರುಗಾಳಿಯಿಂದ ಮೇಲೆದ್ದ ಅಲೆಗಳ ಮೂಲಕವಾಗಿ ಪರಸ್ಪರ ಸಮ್ಮಿಲಿತವಾಗುವಂತೆ ಧ್ವಜವುಳ್ಳ ಅವರಿಬ್ಬರ ರಥಗಳು ಪರಸ್ಪರರೊಡನೆ ಸಂಘರ್ಷಿಸಿದವು. ಇಬ್ಬರೂ ಮಹೇಂದ್ರಸಮಾನ ವಿಕ್ರಮಿಗಳಾಗಿದ್ದರು. ಇಬ್ಬರೂ ಮಹೇಂದ್ರನಂತೆ ಮಹಾರಥರಾಗಿದ್ದರು. ಇಬ್ಬರ ಸಾಯಕಗಳೂ ಮಹೇಂದ್ರನ ವಜ್ರಗಳಿಂತಿದ್ದವು. ಇಬ್ಬರೂ ಮಹೇಂದ್ರ-ವೃತ್ರರಂತೆ ಸೆಣಸಾಡುತ್ತಿದ್ದರು. ಕರ್ಣಾರ್ಜುನರ ಆ ದ್ವಂದ್ವಯುದ್ಧದಲ್ಲಿ ವಿಚಿತ್ರ ಕವಚ-ಆಭರಣ-ವಸ್ತ್ರಗಳನ್ನು ಧರಿಸಿದ್ದ ಎರಡೂ ಸೇನೆಗಳೂ, ಗಜ-ಪದಾತಿ-ಅಶ್ವ-ರಥಗಳೊಡನೆ ವಿಸ್ಮಯ-ಭಯಗಳಿಂದ ನಡುಗಿದವು. ಮದಿಸಿದ ಆನೆಯು ಇನ್ನೊಂದು ಮದಿಸಿದ ಆನೆಯನ್ನು ಆಕ್ರಮಣಿಸುವಂತೆ ಅರ್ಜುನನು ಆಧಿರಥಿಯನ್ನು ಸಂಹರಿಸಲು ಮುನ್ನುಗ್ಗಲು ಹೃಷ್ಟರಾದ ಪ್ರೇಕ್ಷಕರು ಬೆರಳುಗಳಲ್ಲಿ ಅಂಗವಸ್ತ್ರಗಳನ್ನು ಹಿಡಿದು ಭುಜಗಳನ್ನೆತ್ತಿ ಸಿಂಹನಾದಗಳೊಂದಿಗೆ ಹಾರಾಡಿಸತೊಡಗಿದರು. ಆಗ ಸೋಮಕರು ಪಾರ್ಥನಿಗೆ ಕೂಗಿ ಹೇಳಿದರು: “ಅರ್ಜುನ! ತ್ವರೆಮಾಡಿ ಕರ್ಣನನ್ನು ಸಂಹರಿಸು. ಕೂಡಲೇ ಅವನ ತಲೆಯನ್ನು ಶಿರಸ್ಸಿನಿಂದ ತುಂಡರಿಸು! ರಾಜ್ಯದ ಮೇಲೆ ಧೃತರಾಷ್ಟ್ರನ ಮಗನಿಗಿದ್ದ ಶ್ರದ್ಧೆಯನ್ನೂ ನಾಶಪಡಿಸು!”
ಹಾಗೆಯೇ ಕೌರವ ಕಡೆಯ ಅನೇಕ ಯೋಧರೂ ಕೂಡ “ಮುಂದುವರೆ! ಮುಂದುವರೆ!” ಎಂದು ಹೇಳುತ್ತಾ “ಕರ್ಣ! ತಕ್ಷಣವೇ ಅರ್ಜುನನನ್ನು ಸಂಹರಿಸು! ದೀರ್ಘಕಾಲದವರೆಗೆ ಪಾರ್ಥರು ವನಕ್ಕೆ ತೆರಳಲಿ!” ಎಂದು ಕೂಗುತ್ತಿದ್ದರು.
ಆಗ ಕರ್ಣನು ಮೊದಲು ಪಾರ್ಥನನ್ನು ಹತ್ತು ಮಹಾಶರಗಳಿಂದ ಹೊಡೆದನು. ಅದಕ್ಕೆ ಪ್ರತಿಯಾಗಿ ಅರ್ಜುನನು ಅತೀವ ಕ್ರುದ್ಧನಾಗಿ ಹತ್ತು ನಿಶಿತ ಬಾಣಗಳಿಂದ ಅವನ ಭುಜಗಳಿಗೆ ಹೊಡೆದನು. ಸೂತಪುತ್ರ-ಅರ್ಜುನರು ಪರಸ್ಪರರನ್ನು ಸುತೀಕ್ಷ್ಣ ವಿಶಿಖಗಳಿಂದ ಗಾಯಗೊಳಿಸಿದರು. ಪ್ರಹೃಷ್ಟರಾಗಿದ್ದ ಅವರಿಬ್ಬರೂ ಪರಸ್ಪರರನ್ನು ಮೀರಿಸಲು ಪ್ರಯತ್ನಿಸಿ ಭಯಂಕರವಾಗಿ ಯುದ್ಧಮಾಡುತ್ತಿದ್ದರು. ಆ ಮಹಾಯುದ್ಧದಲ್ಲಿ ಸಹನೆಯನ್ನು ಕಳೆದುಕೊಂಡ ಭೀಮಸೇನನು ಕ್ರುದ್ಧನಾಗಿ, ಕೈಯಲ್ಲಿ ಕೈಯನ್ನು ಮಸೆಯುತ್ತಾ, ತುಟಿಗಳು ನೃತ್ಯವಾಡುತ್ತಿವೆಯೋ ಎಂಬಂತೆ ಅಲುಗಾಡುತ್ತಿರಲು ಕೂಗಿ ಹೇಳಿದನು: “ಕಿರೀಟಿ! ಸೂತಪುತ್ರನು ಹೇಗೆ ಮೊದಲು ನಿನ್ನನ್ನು ಹತ್ತು ಮಹಾ ಬಾಣಗಳಿಂದ ಪ್ರಹರಿಸಿದನು? ಯಾವ ಧೈರ್ಯದಿಂದ ನೀನು ಸರ್ವಭೂತಗಳನ್ನೂ ಜಯಿಸಿ ಖಾಂಡವವನ್ನು ಅಗ್ನಿಗೆ ಆಹಾರವನ್ನಾಗಿತ್ತೆಯೋ ಅದೇ ಧೈರ್ಯದಿಂದ ನೀನು ಸೂತಪುತ್ರನನ್ನು ಸಂಹರಿಸು! ಇಲ್ಲದಿದ್ದರೆ ನಾನು ಇವನನ್ನು ಗದೆಯಿಂದ ಪ್ರಹರಿಸುತ್ತೇನೆ!”
ರಥದಿಂದ ಹೊರಟ ಬಾಣಗಳು ಪ್ರತಿಯಾಗಿ ನಾಶಗೊಳ್ಳುತ್ತಿರುವುದನ್ನು ನೋಡಿ ವಾಸುದೇವನೂ ಕೂಡ ಪಾರ್ಥನಿಗೆ ಹೇಳಿದನು: “ಕಿರೀಟೀ! ಇದೇನಿದು? ಇಂದು ನೀನು ಬಿಟ್ಟ ಅಸ್ತ್ರಗಳೆಲ್ಲವನ್ನೂ ಕರ್ಣನು ನಾಶಪಡಿಸುತ್ತಿದ್ದಾನೆ! ಮೋಹಗೊಂಡಿರುವೆಯಾ? ಧೈರ್ಯವನ್ನು ಕಳೆದುಕೊಂಡಿರುವೆಯಾ? ನಿನ್ನ ಅಸ್ತ್ರಗಳನ್ನು ಅವನು ಅಸ್ತ್ರಗಳನ್ನು ವಿನಾಶಗೊಳಿಸುತ್ತಿರುವುದರಿಂದ ಕರ್ಣನನ್ನು ಗೌರವಿಸಿ ಕುರುಗಳೆಲ್ಲರೂ ಸಂತೋಷದಿಂದ ಸಿಂಹನಾದಗೈಯುತ್ತಿದ್ದಾರೆ! ಯುಗಯುಗಗಳಲ್ಲಿ ಯಾವ ಧೈರ್ಯದಿಂದ ನೀನು ಘೋರ ರಾಕ್ಷಸರ ತಾಮಸಾಸ್ತ್ರಗಳನ್ನು ನಾಶಗೊಳಿಸಿರುವೆಯೋ ಮತ್ತು ಯುದ್ಧಗಳಲ್ಲಿ ದಂಭೋದ್ಭವ ಮತ್ತು ಅಸುರರರನ್ನು ಸಂಹರಿಸಿರುವೆಯೋ ಅದೇ ಧೈರ್ಯದಿಂದ ನೀನು ಸೂತಪುತ್ರನನ್ನು ಸಂಹರಿಸು! ಶಕ್ರನು ಅರಿ ನಮೂಚಿಯನ್ನು ವಜ್ರದಿಂದ ಹೇಗೋ ಹಾಗೆ ಇಗೋ ನನ್ನಿಂದ ಸೃಷ್ಟಿಸಲ್ಪಟ್ಟ, ಹರಿತ ಅಲಗುಗಳುಳ್ಳ ಈ ಸುದರ್ಶನದಿಂದ ಶತ್ರುವಿನ ಶಿರವನ್ನು ಇಂದು ಕತ್ತರಿಸಿ ನಗು! ಕಿರಾತರೂಪೀ ಭಗವಾನನನ್ನು ಹೇಗೆ ನೀನು ಬಹಳವಾಗಿ ತೃಪ್ತಿಪಡಿಸಿದ್ದೆಯೋ ಅದೇ ಧೃತಿಯನ್ನು ಪುನಃ ಪಡೆದು ಪರಿವಾರಸಹಿತನಾದ ಸೂತಪುತ್ರನನ್ನು ಸಂಹರಿಸು! ಶತ್ರುಸಮೂಹಗಳನ್ನು ಸಂಹರಿಸಿದ ಅನಂತರ ನೀನು ಸಮುದ್ರಗಳೇ ಒಡ್ಯಾಣವಾಗಿರುವ, ಪಟ್ಟನ-ಗ್ರಾಮಗಳಿಂದ ಕೂಡಿದ ಸಮೃದ್ಧವಾಗಿರುವ ಈ ಮಹಿಯನ್ನು ರಾಜನಿಗೆ ಒಪ್ಪಿಸು! ಇದರಿಂದ ನೀನು ವಿಪುಲ ಯಶಸ್ಸನ್ನು ಪಡೆಯುತ್ತೀಯೆ!”
ಹೀಗೆ ಭೀಮ-ಜನಾರ್ದನರಿಂದ ಪ್ರೇರಿತನಾದ ಅರ್ಜುನನು ತನ್ನ ಸತ್ತ್ವವನ್ನು ನೆನಪಿಸಿಕೊಂಡು, ತನ್ನ ಆಗಮನದ ಮಹಾತ್ಮೆಯನ್ನು ಪ್ರಯೋಜನಗಳನ್ನು ತಿಳಿದು ಕೇಶವನಿಗೆ ಇದನ್ನು ಹೇಳಿದನು: “ಲೋಕಮಂಗಳಕ್ಕಾಗಿ ಮತ್ತು ಸೌತಿಯವಧೆಗಾಗಿ ಉಗ್ರವಾದ ಈ ಮಹಾಸ್ತ್ರವನ್ನು ಪ್ರಕಟಿಸುತ್ತೇನೆ. ನೀನು, ಸುರರು, ಬ್ರಹ್ಮ, ಭವ, ಮತ್ತು ಬ್ರಹ್ಮವಿದರೆಲ್ಲರೂ ನನಗೆ ಅನುಮತಿಯನ್ನು ನೀಡಬೇಕು!”
ಹೀಗೆ ಹೇಳಿ ಅವನು ಸಹಿಸಲಸಾಧ್ಯವಾದ ಮನಸ್ಸಿನಲ್ಲಿಯೇ ನೆಲೆಗೊಂಡಿದ್ದ ಬ್ರಹ್ಮಾಸ್ತ್ರವನ್ನು ಪ್ರಕಟಿಸಿದನು. ಆಗ ದಿಕ್ಕು-ಉಪದಿಕ್ಕುಗಳಲೆಲ್ಲಾ ಭೂರಿತೇಜಸ್ಸುಳ್ಳ ಸಾಯಕಗಳು ತುಂಬಿಕೊಂಡವು. ಭರತರ್ಷಭನಾದರೋ ಮಿಂಚಿನವೇಗಗಳ ನೂರಾರು ಬಾಣಗಳನ್ನು ಒಂದೇ ಬಾಣವೋ ಎನ್ನುವಂತೆ ಸೃಷ್ಟಿಸಿದನು. ಆ ರಣಮಧ್ಯದಲ್ಲಿ ವೈಕರ್ತನನನೂ ಕೂಡ ಸಹಸ್ರಾರು ಬಾಣಗಳನ್ನು ಸೃಷ್ಟಿಸಿದನು. ಗುಡುಗುತ್ತಿದ್ದ ಅವು ಮೇಘವು ಮಳೆಯ ಧಾರೆಗಳನ್ನು ಸುರಿಸುವಂತೆ ಪಾಂಡವನ ಮೇಲೆ ಸುರಿದವು. ಆ ಭೀಮಬಲ ಅಮಾನುಷಕರ್ಮಿ ಕರ್ಣನು ಭೀಮಸೇನನನ್ನು, ಜನಾರ್ದನನನ್ನು ಮತ್ತು ಕಿರೀಟಿಯನ್ನು ಮೂರು ಮೂರು ಬಾಣಗಳಿಂದ ಹೊಡೆದು ಘೋರ ಮಹಾಸ್ವರದಿಂದ ನಿನಾದಿಸಿದನು. ಕರ್ಣನ ಬಾಣಗಳಿಂದ ಹಾಗೆ ಭೀಮ ಮತ್ತು ಜನಾರ್ದನರು ಹೊಡೆಯಲ್ಪಟ್ಟುದುದನ್ನು ನೋಡಿ ಪಾರ್ಥ ಕಿರೀಟಿಯು ಸಹಿಸಿಕೊಳ್ಳಲಾಗದೇ ಪುನಃ ಹದಿನೆಂಟು ಬಾಣಗಳನ್ನು ಭತ್ತಳಿಕೆಯಿಂದ ತೆಗೆದು ಪ್ರಯೋಗಿಸಿದನು. ಒಂದು ಶರದಿಂದ ಸುಷೇಣನನ್ನು ಹೊಡೆದು, ನಾಲ್ಕರಿಂದ ಶಲ್ಯನನ್ನೂ, ಮೂರರಿಂದ ಕರ್ಣನನ್ನೂ, ಮತ್ತು ಹತ್ತು ಬಾಣಗಳಿಂದ ಕಾಂಚನಕವಚವನ್ನು ಧರಿಸಿದ್ದ ಸಭಾಪತಿಯನ್ನು ಹೊಡೆದನು. ಆ ರಾಜಪುತ್ರನು ಶಿರಸ್ಸು, ಬಾಹುಗಳು, ಕುದುರೆ, ಸಾರಥಿ, ಧನುಸ್ಸು ಮತ್ತು ಧ್ವಜಗಳನ್ನು ಕಳೆದುಕೊಂಡು ಕೊಡಲಿಯಿಂದ ಕಡಿಯಲ್ಪಟ್ಟ ಶಾಲವೃಕ್ಷದಂತೆ ಭಗ್ನನಾಗಿ ರಥದಿಂದ ಕೆಳಕ್ಕೆ ಬಿದ್ದನು. ಪುನಃ ಕರ್ಣನನ್ನು ಮೂರು, ಎಂಟು, ಎರಡು, ನಾಲ್ಕು ಮತ್ತು ಹತ್ತು ಬಾಣಗಳಿಂದ ಹೊಡೆದು, ಆಯುಧಪಾಣಿಗಳಾದ ಸವಾರರನ್ನುಳ್ಳ ನಾಲ್ಕುನೂರು ಆನೆಗಳನ್ನೂ, ಎಂಟುನೂರು ರಥಗಳನ್ನೂ, ಇನ್ನೊಂದು ಸಾವಿರ ಸವಾರರೊಡನಿದ್ದ ಕುದುರೆಗಳನ್ನೂ ಮತ್ತು ಎಂಟು ಸಾವಿರ ಪದಾತಿ ವೀರರನ್ನು ಹೊಡೆದು ನಾಶಪಡಿಸಿದನು.
ಪರಸ್ಪರರೊಡನೆ ಯುದ್ಧದಲ್ಲಿ ತೊಡಗಿದ್ದ ಶತ್ರುಹಂತಕರಾದ ಯೋಧಮುಖ್ಯರಾದ ಆ ಇಬ್ಬರು ಶೂರಶ್ರೇಷ್ಠರಾದ ಕರ್ಣ ಮತ್ತು ಪಾರ್ಥರನ್ನು ನೋಡಲು ವಾಹನಗಳನ್ನು ನಿಯಂತ್ರಿಸಿಕೊಂಡು ಆಕಾಶದಲ್ಲಿ ಮತ್ತು ಭೂಮಿಯಮೇಲೆ ಜನರು ನಿಂತಿದ್ದರು. ಆಗ ಸುದೀರ್ಘವಾಗಿ ಸೆಳೆದುದಕ್ಕಾಗಿ ಜೋರಾದ ಶಬ್ಧದೊಂದಿಗೆ ಪಾಂಡವನ ಧನುಸ್ಸಿನ ಮೌರ್ವಿಯು ತುಂಡಾಗಲೂ, ಅದೇ ಕ್ಷಣದಲ್ಲಿ ಸೂತಪುತ್ರನು ನೂರಾರು ಕ್ಷುದ್ರಕಗಳಿಂದ ಪಾರ್ಥನನ್ನು ಮುಚ್ಚಿಬಿಟ್ಟನು. ಪೊರೆಬಿಟ್ಟ ಸರ್ಪಗಳಂತಿದ್ದ ಎಣ್ಣೆಯಿಂದ ಹದಮಾಡಲ್ಪಟ್ಟಿದ್ದ ಪಕ್ಷಿಗಳ ರೆಕ್ಕೆಗಳನ್ನು ಹೊಂದಿದ್ದ ಅರವತ್ತು ನಾರಾಚಗಳಿಂದ ವಾಸುದೇವನನ್ನು ಹೊಡೆದನು. ಅಷ್ಟರಲ್ಲಿ ಸೋಮಕರು ಪಲಾಯನಮಾಡುತ್ತಿದ್ದರು. ಆಗ ಧನಂಜಯನು ಧನುಸ್ಸಿನ ಮೌರ್ವಿಯನ್ನು ಶೀಘ್ರವಾಗಿ ಕಟ್ಟಿ ಅದರಿಂದ ಬಾಣಗಳನ್ನು ಆಧಿರಥಿಯ ಮೇಲೆ ಪ್ರಯೋಗಿಸಿದನು. ಕರ್ಣನನ್ನು ಶರಗಳಿಂದ ಗಾಯಗೊಳಿಸಿ ರಣದಲ್ಲಿ ಸಂರಬ್ಧನಾಗಿ ಪಾರ್ಥನು ಸೋಮಕರನ್ನು ಪುನಃ ಹಿಂದಿರುಗುವಂತೆ ಮಾಡಿದನು. ಅಸ್ತ್ರಗಳಿಂದ ಅಂಧಕಾರವುಂಟಾಗಿರಲು ಅಂತರಿಕ್ಷದಲ್ಲಿ ಪಕ್ಷಿಗಳು ಹಾರಾಡುತ್ತಿರಲಿಲ್ಲ.
ಪಾರ್ಥನು ನಗುನಗುತ್ತಲೇ ಶಲ್ಯನನ್ನು ಹತ್ತು ಬಾಣಗಳಿಂದ ಗಾಢವಾಗಿ ಪ್ರಹರಿಸಿ ಅವನ ಕವಚವನ್ನು ಒಡೆದನು. ಅನಂತರ ಉತ್ತಮವಾಗಿ ಪ್ರಯೋಗಿಸಿದ ಹನ್ನೆರಡು ಬಾಣಗಳಿಂದ ಕರ್ಣನನ್ನು ಹೊಡೆದು ಪುನಃ ಏಳರಿಂದ ಹೊಡೆದನು. ಪಾರ್ಥನ ಬತ್ತಳಿಕೆಯಿಂದ ವೇಗವಾಗಿ ಹೊರಟು ಉಗ್ರವೇಗದಿಂದ ಬರುತ್ತಿದ್ದ ಪತ್ರಿಗಳಿಂದ ಗಾಢವಾಗಿ ಹೊಡೆಯಲ್ಪಟ್ಟ ಕರ್ಣನು ಶರೀರವು ಭಗ್ನವಾಗಿ ಅಂಗಾಂಗಗಳು ಗಾಯಗೊಂಡಿರಲು ಶ್ಮಶಾನದ ಮಧ್ಯದಲ್ಲಿರುವ ರುದ್ರನಂತೆ ಕಂಡನು. ಆಗ ಆಧಿರಥನು ಧನಂಜಯನನ್ನು ಮೂರು ಶರಗಳಿಂದ ಹೊಡೆದನು. ಮತ್ತು ಅಚ್ಯುತನನ್ನು ಸಂಹರಿಸಲು ಬಯಸಿ ಉರಗಗಳಂತೆ ಪ್ರಜ್ವಲಿಸುತ್ತಿದ್ದ ಐದು ಬಾಣಗಳನ್ನು ಅವನ ಶರೀರದಲ್ಲಿ ನೆಟ್ಟನು. ಉತ್ತಮವಾಗಿ ಪ್ರಯೋಗಿಸಲ್ಪಟ್ಟ ಆ ಬಾಣಗಳು ಪುರುಷೋತ್ತಮನ ಸುವರ್ಣಚಿತ್ರಿತವಾದ ಕವಚವನ್ನು ಸೀಳಿ ಭೂಮಿಯ ಮೇಲೆ ಬಿದ್ದವು. ವೇಗಯುಕ್ತವಾಗಿದ್ದ ಆ ಬಾಣಗಳು ಭೂಮಿಯನ್ನು ಬಹಳ ಆಳದವರೆಗೂ ಕೊರೆದು ಪಾತಾಳಗಂಗೆಯಲ್ಲಿ ಸ್ನಾನಮಾಡಿ ಪುನಃ ಕರ್ಣನ ಅಭಿಮುಖವಾಗಿ ತೆರಳಿದವು. ಧನಂಜಯನು ತ್ವರೆಮಾಡಿ ಐದು ಸುಮುಕ್ತ ಭಲ್ಲಗಳಿಂದ ಆ ಐದು ಬಾಣಗಳಲ್ಲಿ ಒಂದೊಂದನ್ನೂ ಮೂರು ಮೂರು ಭಾಗಗಳನ್ನಾಗಿ ಕತ್ತರಿಸಿ, ಭೂಮಿಯಮೇಲೆ ಬೀಳಿಸಿದನು. ಅವುಗಳು ತಕ್ಷಕಪುತ್ರನ ಪಕ್ಷದಲ್ಲಿಯ ಮಹಾಸರ್ಪಗಳಾಗಿದ್ದವು. ಆಗ ಕಿರೀಟಮಾಲಿಯು ಕ್ರೋಧದಿಂದ ಹುಲ್ಲುಮೆದೆಯನ್ನು ಸುಡುವ ಅಗ್ನಿಯಂತೆ ಉರಿಯುತ್ತಾ ಆಕರ್ಣಾಂತವಾಗಿ ಸೆಳೆದುಬಿಟ್ಟ ಶರೀರಾಂತಕವಾದ ಪ್ರಜ್ವಲಿಸುತ್ತಿರುವ ಬಾಣಗಳಿಂದ ಕರ್ಣನ ಮರ್ಮಸ್ಥಾನಗಳನ್ನು ಹೊಡೆದನು. ಆಗ ಕರ್ಣನು ವೇದನೆಯಿಂದ ತತ್ತರಿಸಿದನು. ಆದರೆ ಅತಿಧೈರ್ಯವುಳ್ಳ ಅವನು ರಥದಲ್ಲಿಯೇ ಕುಳಿತುಕೊಂಡನು. ಧನಂಜಯನು ಕುಪಿತನಾಗಲು ಹಿಮಕಣಗಳಿಂದಲೂ ಮಂಜಿನಿಂದಲೂ ಆಚ್ಛಾದಿತವಾದ ಆಕಾಶದಂತೆ ಅರ್ಜುನನು ಬಿಟ್ಟ ಬಾಣಗಳ ಸಮೂಹದಿಂದ ದಿಕ್ಕುಗಳೂ, ಉಪದಿಕ್ಕುಗಳೂ, ಸೂರ್ಯನ ಪ್ರಭೆಯೂ, ಕರ್ಣನ ರಥವೂ ಅದೃಶ್ಯವಾದವು. ಅವನು ಆಗ ಚಕ್ರರಕ್ಷಕರನ್ನೂ, ಪಾದರಕ್ಷಕರನ್ನೂ, ಮುಂದಿದ್ದ ಮತ್ತು ಹಿಂದಿದ್ದ ರಕ್ಷಕರೆಲ್ಲರನ್ನೂ, ದುರ್ಯೋಧನನ ಅನುಯಾಯಿಗಳನ್ನೂ ಸಂಹರಿಸಿದನು. ವೀರ ಸವ್ಯಸಾಚಿಯೊಬ್ಬನೇ ಕ್ಷಣದಲ್ಲಿ ರಥ-ಅಶ್ವ-ಸಾರಥಿಗಳೊಂದಿಗೆ ಎರಡು ಸಾವಿರ ಕುರುಪ್ರವೀರ ಕುರುಗಳ ಋಷಭರೆಲ್ಲರನ್ನೂ ಕ್ಷಯಗೊಳಿಸಿದನು. ಅಳಿದುಳಿದ ಕುರುಗಳು ಹತರಾದವರನ್ನೂ, ಬಾಣಗಳಿಂದ ಗಾಯಗೊಂಡವರನ್ನೂ, ಕೂಗಿಕೊಳ್ಳುತ್ತಿದ್ದವರನ್ನೂ, ಪಿತೃಗಳನ್ನೂ ಕರ್ಣನನ್ನೂ ಉಪೇಕ್ಷಿಸಿ ಪಲಾಯನಮಾಡಿದರು. ಭಯದಿಂದ ಭಗ್ನರಾದ ಕುರುಸೇನೆಯಿಂದ ವಿಹೀನವಾಗಿದ್ದ ರಣಭೂಮಿಯನ್ನು ಮತ್ತು ಶೂನ್ಯವಾಗಿದ್ದ ದಿಕ್ಕುಗಳನ್ನು ನೋಡಿಯೂ ಕರ್ಣನು ಅಲ್ಲಿ ವ್ಯಥಿತನಾಗಲಿಲ್ಲ. ಸಂತುಷ್ಟನಾಗಿಯೇ ಅರ್ಜುನನನ್ನು ಪುನಃ ಆಕ್ರಮಿಸಿದನು.
ಕರ್ಣನು ಅರ್ಜುನನ ಮೇಲೆ ಸರ್ಪಾಸ್ತ್ರವನ್ನು ಪ್ರಯೋಗಿಸಿದುದು
ಚದುರಿಹೋಗಿ ಪಲಾಯನಮಾಡುತ್ತಿದ್ದ ಕುರುಸೇನೆಗಳು ಧನಂಜಯನ ಬಾಣಗಳು ಬೀಳುವ ಸ್ಥಳವನ್ನು ಬಿಟ್ಟು ಬೇರೆಕಡೆ ಹೋಗಿ ನಿಂತುಕೊಂಡವು. ಎಲ್ಲಕಡೆಗಳಿಂದ ಅವರು ವಿದ್ಯುತ್ತಿನಂತೆ ಪ್ರಕಾಶಮಾನವಾಗಿ ವರ್ಧಿಸುತ್ತಿರುವ ಧನಂಜಯನ ಅಸ್ತ್ರವನ್ನು ನೋಡಿದರು. ಆ ಮಹಾಯುದ್ಧದಲ್ಲಿ ಕರ್ಣನ ವಧೆಗೋಸ್ಕರವಾಗಿ ಕ್ರುದ್ಧನಾದ ಪಾರ್ಥನು ಬಿಡುತ್ತಿದ್ದ ಅಸ್ತ್ರಗಳನ್ನು ಆಕಾಶದಲ್ಲಿಯೇ ಅನಂತಘೋಷದೊಂದಿಗೆ ಕರ್ಣನು ನುಂಗಿಬಿಡುತ್ತಿದ್ದನು. ಕರ್ಣನು ಪರಶುರಾಮನಿಂದ ಪಡೆದುಕೊಂಡ ಮಹಾಮಹಿಮೆಯುಳ್ಳ ಶತ್ರುನಾಶಕವಾದ ಅಥರ್ವಣಾಸ್ತ್ರವನ್ನು ಪ್ರಕಟಿಸಿ ಸೇನೆಗಳನ್ನು ಮರ್ದಿಸುತ್ತಿರುವ ಅರ್ಜುನನ ಅಸ್ತ್ರವನ್ನು ಧ್ವಂಸಗೊಳಿಸಿ, ನಿಶಿತ ಬಾಣಗಳಿಂದ ಅರ್ಜುನನನ್ನು ಹೊಡೆದನು. ಅನಂತರ ಉಗ್ರ ದಂತಗಳಿಂದ ಅನ್ಯೋನ್ಯರನ್ನು ತಿವಿಯುತ್ತಿದ್ದ ಆನೆಗಳಂತೆ ಪರಸ್ಪರರನ್ನು ಬಾಣಗಳಿಂದ ಆಕ್ರಮಿಸುತ್ತಿದ್ದ ಕರ್ಣಾರ್ಜುನರ ನಡುವೆ ಪುನಃ ಭಯಂಕರ ಯುದ್ಧವು ಪ್ರಾರಂಭಿಸಿತು. ಆಗ ರಿಪುವನ್ನು ಸಂಹರಿಸುವ, ಬಹಳ ಹಿಂದೆಯೇ ಸಂಚಯಿಸಿ ಇಟ್ಟುಕೊಂಡಿದ್ದ, ಪಾರ್ಥನ ಸಲುವಾಗಿಯೇ ಬಹಳಕಾಲದಿಂದ ಸಂರಕ್ಷಿಸಿ ಇಟ್ಟುಕೊಂಡಿದ್ದ, ಪ್ರಜ್ವಲಿಸುತ್ತಿರುವ ಸರ್ಪದ ಮುಖವುಳ್ಳ, ಎಣ್ಣೆಯಿಂದ ಹದಮಾಡಲ್ಪಟ್ಟಿದ್ದ ರೌದ್ರವಾದ, ಸದಾ ಪೂಜಿಸಲ್ಪಡುತ್ತಿದ್ದ, ಸುವರ್ಣಮಯವಾದ ಕೊಳವೆಯಲ್ಲಿ ಚಂದನಚೂರ್ಣದಲ್ಲಿ ಇರಿಸಿದ್ದ, ಮಹಾಜ್ವಾಲೆಯುಳ್ಳ, ಐರಾವತವಂಶಸಂಭವ ಮಹಾವಿಷಭರಿತವಾದ ಅಶ್ವಸೇನನ ಶರವನ್ನು ಯುದ್ಧದಲ್ಲಿ ಫಲ್ಗುನನ ಶಿರವನ್ನು ಕತ್ತರಿಸಲು ಎತ್ತಿಕೊಂಡನು. ವೈಕರ್ತನನು ಧನುಸ್ಸಿಗೆ ಆ ಬಾಣವನ್ನು ಹೂಡಿದುದನ್ನು ನೋಡಿ ಮಹಾತ್ಮ ಮದ್ರರಾಜನು “ಕರ್ಣ! ಈ ಬಾಣವು ಅವನ ಕುತ್ತಿಗೆಗೆ ತಾಗುವುದಿಲ್ಲ. ಆದುದರಿಂದ ಗುರಿಯಿಟ್ಟು ಶಿರವು ಕತ್ತರಿಸುವಂತೆ ಪುನಃ ಅನುಸಂಧಾನಮಾಡು!”
ಕೂಡಲೇ ಕ್ರೋಧದಿಂದ ಕಣ್ಣುಗಳು ಕೆಂಪಾದ ಕರ್ಣನು ಜೋರಾಗಿ ನಕ್ಕು ಬಾಣವನ್ನು ಹೂಡಿಕೊಂಡೇ ಶಲ್ಯನಿಗೆ ಹೇಳಿದನು: “ಶಲ್ಯ! ಕರ್ಣನು ಎಂದೂ ಶರವನ್ನು ಎರಡನೆಯ ಬಾರಿ ಹೂಡುವುದಿಲ್ಲ! ನನ್ನಂಥವನು ಮೋಸಗಾರನಾಗುವುದಿಲ್ಲ!” ಹೀಗೆ ಹೇಳಿ ಹಲವು ವರ್ಷಗಳಿಂದ ಪೂಜಿಸಿಕೊಂಡು ಬಂದಿದ್ದ ಬಲಶಾಲಿಯಾಗಿದ್ದ ಆ ಶರವನ್ನು “ಫಲ್ಗುನ! ನೀನು ಹತನಾದೆ!” ಎಂದು ಜೋರಾಗಿ ಕೂಗಿ ತ್ವರೆಮಾಡಿ ವಿಸರ್ಜಿಸಿದನು. ಕರ್ಣನು ಸಂಧಾನಮಾಡಿದ ಆ ಸರ್ಪಾಸ್ತ್ರವನ್ನು ನೋಡಿ ಮಾಧವನು ತನ್ನ ಪಾದಗಳಿಂದ ರಥವನ್ನು ಒತ್ತಿದನು. ರಥವು ಭೂಮಿಯಲ್ಲಿ ಹುಗಿದುಹೋಗಲು ಕುದುರೆಗಳು ತಮ್ಮ ಮೊಣಕಾಲುಗಳನ್ನು ಬಗ್ಗಿಸಿದವು. ಆಗ ಶರವು ಧೀಮತ ಅರ್ಜುನನ ಕಿರೀಟವನ್ನು ಹಾರಿಸಿತು.
ಭೂಮಿ-ಅಂತರಿಕ್ಷ-ಸ್ವರ್ಗ-ಪಾತಾಳಗಳಲ್ಲಿಯೂ ವಿಶ್ರುತವಾಗಿದ್ದ ಮತ್ತು ಅರ್ಜುನನ ಶಿರಸ್ಸಿಗೆ ಭೂಷಣವಾಗಿದ್ದ, ಕಿರೀಟವನ್ನು ಅಸ್ತ್ರಬಲ, ಸಂಧಾನ, ಪ್ರಯತ್ನ, ಮತ್ತು ಕೋಪಗಳಿಂದ ಕೂಡಿದ ಆ ಶರದಿಂದ ಸೂತಜನು ಹಾರಿಸಿದನು. ಸೂರ್ಯ-ಚಂದ್ರ-ಅಗ್ನಿಗಳ ಕಾಂತಿಗೆ ಸಮಾನಕಾಂತಿಯುಳ್ಳ, ಸುವರ್ಣ-ಮುತ್ತು-ಮಣಿಗಳ ಜಾಲದಿಂದ ವಿಭೂಷಿತವಾಗಿದ್ದ, ಪುರಂಧರನಿಗಾಗಿ ಭುವನನ ಮಗನಿಂದ ತಪಸ್ಸುಮಾಡಿ ಪ್ರಯತ್ನತಃ ಸ್ವಯಂ ಮಾಡಲ್ಪಟ್ಟಿದ್ದ, ಬಹು ಅಮೂಲ್ಯವಾಗಿದ್ದ, ದ್ವೇಷಿಗಳಿಗೆ ಭಯಂಕರವಾಗಿ ಕಾಣುತ್ತಿದ್ದ, ಸುಗಂಧಿತವಾಗಿದ್ದ, ಧರಿಸಿದವನಿಗೆ ಅತ್ಯಂತ ಸುಖವನ್ನು ನೀಡುತ್ತಿದ್ದ, ದೇವರಿಪುಗಳನ್ನು ಸಂಹರಿಸಲು ಹೊರಟಾಗ ಸ್ವಯಂ ಸುರೇಶ್ವರನು ಸಂತೋಷದಿಂದ ಕಿರೀಟಿಗೆ ತೊಡಿಸಿದ್ದ, ಹರ-ವರುಣ-ಯಮ-ಕುಬೇರರಿಗೂ, ಪಿನಾಕ-ಪಾಶ-ವಜ್ರಾಯುಧ-ಉತ್ತಮ ಸಾಯಕಗಳಿಗೂ, ಸುರೋತ್ತಮರಿಗೂ ನಾಶಗೊಳಿಸಲು ಅಸಾಧ್ಯವಾಗಿದ್ದ ಕಿರೀಟವನ್ನು ವೃಷಸೇನನನು ನಾಗಾಸ್ತ್ರದಿಂದ ಹಾರಿಸಿ ಜೋರಾಗಿ ನಕ್ಕನು. ಆ ಉತ್ತಮ ಬಾಣದ ವಿಷಾಗ್ನಿಯಿಂದ ಮಥಿಸಲ್ಪಟ್ಟ ಸೂರ್ಯನ ಪ್ರಕಾಶದಂತೆ ಉರಿಯುತ್ತಿದ್ದ ಪ್ರಿಯವಾದ ಪಾರ್ಥನ ಉತ್ತಮ ಕಿರೀಟವು ಪರ್ವತವನ್ನು ಬೆಳಗುಸುತ್ತಾ ಅಸ್ತನಾಗುವ ದಿವಾಕರನಂತೆ ಕೆಳಗೆ ಬಿದ್ದಿತು. ಅರ್ಜುನನ ನೆತ್ತಿಯ ಮೇಲಿದ್ದ ಅನೇಕ ರತ್ನಗಳಿಂದ ಸಮಲಂಕೃತವಾಗಿದ್ದ ಕಿರೀಟವನ್ನು ಆ ನಾಗವು ಅಂಕುರಗಳಿಂದಲೂ ಹೂಬಿಟ್ಟ ವೃಕ್ಷಗಳಿಂಡಲೂ ಕೂಡಿದ್ದ ಉತ್ತಮ ಶಿಖರವನ್ನು ಮಹೇಂದ್ರನ ವಜ್ರವು ಹೇಗೋ ಹಾಗೆ ಕೆಳಗುರುಳಿಸಿತು. ವಾಯುವಿನಿಂದ ಭೂಮಿ, ಆಕಾಶ ಮತ್ತು ಸಮುದ್ರಗಳು ಒಡೆದಾಗ ಎಷ್ಟು ಜೋರಾಗಿ ಶಬ್ಧವುಂಟಾಗುವುದೋ ಹಾಗೆ ಶಬ್ಧವುಂಟಾಗಲು ಭುವನಗಳ ಜನರೆಲ್ಲರೂ ವ್ಯಥಿತರಾಗಿ ನಡುಗಿದರು.
ಆಗ ಬಿಳಿಯವಸ್ತ್ರವನ್ನು ತಲೆಗೆ ಬಿಗಿದಿದ್ದ ಅರ್ಜುನನು ವ್ಯಥಿತನಾಗದೇ ಸಂಪೂರ್ಣನಾದ ಸೂರ್ಯನಂತೆ ಮತ್ತು ಶಿಖರವಿಲ್ಲದ ಪರ್ವತದಂತೆ ಮಿಂಚಿದನು. ಕರ್ಣನ ಭುಜಗಳಿಂದ ಪ್ರಯೋಗಿಸಲ್ಪಟ್ಟ ಸೂರ್ಯ-ಆಗ್ನಿಗಳ ಸಮನಾದ ಬೆಳಕಿದ್ದ ಆ ಬಲಶಾಲೀ ಮಹೋರಗವು ಅರ್ಜುನನ ಮೇಲಿನ ಸೇಡನ್ನು ತೀರಿಸಿಕೊಳ್ಳಲೋಸುಗ ಕಿರೀಟವನ್ನು ಕೆಡವಿ ಪುನಃ ಮೇಲೆದ್ದಿತು. ಅವನು ಕರ್ಣನಿಗೆ “ನನ್ನ ತಾಯಿಯ ವಧೆಯ ವೈರವನ್ನು ಇಂದು ತೀರಿಸಿಕೊಳ್ಳುತ್ತೇನೆ” ಎಂದು ಹೇಳಲು ಕೃಷ್ಣನು ಪಾರ್ಥನಿಗೆ “ಯುದ್ಧದಲ್ಲಿ ಬದ್ಧವೈರಿಯಾಗಿರುವ ಈ ಮಹೋರಗವನ್ನು ನೀನು ಕೊಲ್ಲು!” ಎಂದು ಹೇಳಿದನು. ಮಧುಸೂದನನು ಹೀಗೆ ಹೇಳಲು ಗಾಂಡೀವಧನ್ವಿಯು “ಇಂದು ಗರುಡನ ಬಾಯಿಗೆ ತಾನಾಗಿಯೇ ಬಂದು ಬೀಳುತ್ತಿರುವ ಈ ನಾಗವು ಯಾರು?” ಎಂದು ಕೇಳಿದನು.
ಕೃಷ್ಣನು ಹೇಳಿದನು: “ಖಾಂಡವದಲ್ಲಿ ಅಗ್ನಿಯನ್ನು ತೃಪ್ತಿಪಡಿಸಲು ಧನುರ್ಧರನಾದ ನೀನು ಇವನ ತಾಯಿಯನ್ನು ಬಾಣದಿಂದ ಕತ್ತರಿಸಿ ಕೊಂದೆ. ಆದರೆ ಇವನು ಅವಳ ದೇಹದಲ್ಲಿ ಅಡಗಿದ್ದನು.” ಆಗ ಜಿಷ್ಣುವಾದರೋ ಆಕಾಶದಲ್ಲಿ ವಕ್ರಗತಿಯಲ್ಲಿ ಹಾರಿಕೊಂಡು ಬರುತ್ತಿದ್ದ ಆ ನಾಗವನ್ನು ತಿರುಗಿ ನೋಡಿ ಅದನ್ನು ನಿಶಿತ ಅಲಗುಗಳುಳ್ಳ ಆರು ಬಾಣಗಳಿಂದ ತುಂಡು ತುಂಡು ಮಾಡಿದನು. ಕತ್ತರಿಸಲ್ಪಟ್ಟ ಆ ಸರ್ಪವು ನೆಲದ ಮೇಲೆ ಬಿದ್ದಿತು.
ಕರ್ಣನ ರಥಚಕ್ರವು ಹುಗಿದುಹೋದುದು
ಅದೇ ಕ್ಷಣದಲ್ಲಿ ಕರ್ಣನು ಕಡೆಗಣ್ಣಿನಿಂದ ನೋಡುತ್ತಾ ಪುರುಷಪ್ರವೀರ ಧನಂಜಯನನ್ನು ಮಸೆಗಲ್ಲಿನಿಂದ ಮಸೆಯಲ್ಪಟ್ಟಿದ್ದ, ನವಿಲುಗರಿಗಳಿಂದ ಕೂಡಿದ್ದ ಹತ್ತು ಬಾಣಗಳಿಂದ ಪ್ರಹರಿಸಿದನು. ಆಗ ಅರ್ಜುನನು ಹನ್ನೆರಡು ವಿಮುಕ್ತವಾದ ಸರ್ಪದ ವಿಷಕ್ಕೆ ಸಮನಾದ ವೇಗವುಳ್ಳ ನಿಶಿತ ನಾರಾಚಗಳನ್ನು ಕಿವಿಯವರೆಗೂ ಎಳೆದು ಪ್ರಯೋಗಿಸಿ ಹೊಡೆದನು. ಚೆನ್ನಾಗಿ ಪ್ರಯೋಗಿಸಲ್ಪಟ್ಟ ಆ ಶ್ರೇಷ್ಠ ಬಾಣವು ಕರ್ಣನ ಚಿತ್ರಿತ ಕವಚವನ್ನು ಸೀಳಿ ರಕ್ತವನ್ನು ಕುಡಿದು ರೆಕ್ಕೆಗಳು ರಕ್ತದಲ್ಲಿ ಅದ್ದಲ್ಪಟ್ಟವುಗಳಾಗಿ ನೆಲದ ಮೇಲೆ ಬಿದ್ದವು. ಆಗ ಮಹಾಸರ್ಪವು ದಂಡಪ್ರಹಾರದಿಂದ ಕುಪಿತಗೊಳ್ಳುವಂತೆ ವೃಷಸೇನನು ಕುಪಿತನಾಗಿ ಉತ್ತಮ ವಿಷವನ್ನುಳ್ಳ ಮಹಾವಿಷದ ಸರ್ಪಗಳಂತಿರುವ ಉತ್ತಮ ಬಾಣಗಳನ್ನು ಪ್ರಯೋಗಿಸಿದನು. ಜನಾರ್ದನನನ್ನು ಹನ್ನೆರಡು ಬಾಣಗಳಿಂದ ಮತ್ತು ಅರ್ಜುನನನ್ನು ತೊಂಬತ್ತು ಬಾಣಗಳಿಂದ ಪ್ರಹರಿಸಿ ಪುನಃ ಪಾಂಡವನನ್ನು ಘೋರ ಶರದಿಂದ ಗಾಯಗೊಳಿಸಿ ಕರ್ಣನು ಅಟ್ಟಹಾಸಗೈದನು. ಅವನ ಆ ಹರ್ಷವನ್ನು ಸಹಿಸಿಕೊಳ್ಳಲಾಗದೇ ಮರ್ಮಗಳನ್ನು ತಿಳಿದಿದ್ದ ಪಾಂಡವನು ಹೇಗೆ ಇಂದ್ರನು ಬಲನನ್ನು ವಜ್ರದಿಂದ ಹೊಡೆಯುವಂತೆ ವಿಕ್ರಮದಿಂದ ಪರಮ ಬಾಣಗಳಿಂದ ಹೊಡೆದನು.
ಆಗ ಅರ್ಜುನನು ಯಮದಂಡಸದೃಶವಾದ ತೊಂಬತ್ತು ಬಾಣಗಳನ್ನು ಕರ್ಣನ ಮೇಲೆ ಪ್ರಯೋಗಿಸಿದನು. ವಜ್ರಾಯುಧದಿಂದ ಸೀಳಲ್ಪಟ್ಟ ಪರ್ವತದಂತೆ ಶರಗಳಿಂತ ತುಂಬಾ ಗಾಯಗೊಂಡ ಕರ್ಣನು ನೋವಿನಿಂದ ವ್ಯಥಿತನಾದನು. ಧನಂಜಯನ ಧನುಸ್ಸಿನಿಂದ ಹೊರಟ ಪತ್ರಿಗಳು ಕರ್ಣನ ಮಣಿ-ವಜ್ರ-ಸುವರ್ಣಗಳಿಂದ ಅಲಂಕೃತವಾದ ಶಿರೋಭೂಷಣ ಕಿರೀಟವನ್ನೂ ಉತ್ತಮ ಕುಂಡಲಗಳನ್ನೂ ಕೆಳಗೆ ಬೀಳಿಸಿದವು. ಶ್ರೇಷ್ಠ ಶಿಲ್ಪಿಗಳು ಪ್ರಯತ್ನಪಟ್ಟು ತುಂಬಾ ಸಮಯವನ್ನು ತೆಗೆದುಕೊಂಡು ನಿರ್ಮಿಸಿದ್ದ ಮಹಾಬೆಲೆಬಾಳುವ ಹೊಳೆಯುತ್ತಿದ್ದ ಕರ್ಣನ ಉತ್ತಮ ಕವಚವನ್ನೂ ಕೂಡ ಪಾಂಡವನು ಒಂದೇ ಕ್ಷಣದಲ್ಲಿ ಬಾಣಗಳಿಂದ ತುಂಡು ತುಂಡು ಮಾಡಿದನು. ಕವಚರಹಿತನಾಗಿದ್ದ ಅವನನ್ನು ಅರ್ಜುನನು ಕುಪಿತನಾಗಿ ನಾಲ್ಕು ಉತ್ತಮ ಶರಗಳಿಂದ ಜೋರಾಗಿ ಹೊಡೆದನು. ಶತ್ರುವಿನಿಂದ ಗಾಢವಾಗಿ ಪ್ರಹೃತನಾದ ಕರ್ಣನು ರೋಗಿಯು ವಾತ-ಪಿತ್ತ-ಕಫಗಳಿಂದ ಮತ್ತು ಜ್ವರಗಳಿಂದ ನರಳುವಂತೆ ಬಹಳವಾಗಿ ಸಂಕಟಪಟ್ಟನು. ಕ್ರಿಯೆ-ಪ್ರಯತ್ನ-ಬಲಗಳನ್ನು ಸೇರಿಸಿ ಮಹಾಧನುಸ್ಸಿನ ಮಂಡಲದಿಂದ ಸತತವಾಗಿ ಹೊರಬರುತ್ತಿದ್ದ ನಿಶಿತ ಶರಗಳಿಂದ ಅರ್ಜುನನು ಕರ್ಣನನ್ನು ಗಾಯಗೊಳಿಸಿದನು. ಉತ್ತಮ ಶರಗಳಿಂದ ಅರ್ಜುನನು ತ್ವರೆಮಾಡಿ ಅವನ ಮರ್ಮಸ್ಥಾನಗಳಿಗೂ ಹೊಡೆದನು. ಪಾರ್ಥನ ಉಗ್ರವೇಗಗಳುಳ್ಳ ಪತ್ರಿಗಳಿಂದ ಮತ್ತು ವಿವಿಧ ಶಿತಾಗ್ರಗಳಿಂದ ದೃಢವಾಗಿ ಹೊಡೆಯಲ್ಪಟ್ಟ ಕರ್ಣನು ರಕ್ತವನ್ನು ಸುರಿಸುತ್ತಾ ಗೈರಿಕಾದಿ ಧಾತುಗಳಿಂದ ಕೂಡಿದ ಕೆಂಪು ನೀರಿನ ಜಲಪಾತವನ್ನು ಸುರಿಸುವ ಪರ್ವತದಂತೆ ಕಂಡನು. ಆಗ ಕಿರೀಟಿಯು ಕುದುರೆ ರಥಗಳೊಂದಿಗೆ ಕರ್ಣನನ್ನು ವತ್ಸದಂತ ಶರಗಳಿಂದ ಮುಚ್ಚಿಬಿಟ್ಟನು ಮತ್ತು ಸರ್ವ ಪ್ರಯತ್ನಪಟ್ಟು ಪುಂಖಗಳು ಉರಿಯುತ್ತಿರುವ ಬಾಣಗಳಿಂದ ದಿಕ್ಕುಗಳನ್ನೂ ಮುಚ್ಚಿಬಿಟ್ಟನು. ಆ ವತ್ಸದಂತಗಳಿಂದ ಚುಚ್ಚಲ್ಪಟ್ಟ ವಿಶಾಲ ಪೀನವಕ್ಷಸ್ಥನಾದ ಆಧಿರಥಿ ಕರ್ಣನು ಹೂಬಿಟ್ಟ ಅಶೋಕ, ಮುತ್ತುಗ, ಬೂರುಗ ಮರಗಳಿಂದ ಕೂಡಿದ ಎತ್ತರ ಪರ್ವತದಂತೆಯೇ ತೋರಿದನು.
ಅನೇಕ ಶರಗಳಿಂದ ಶರೀರಾದ್ಯಂತ ಚುಚ್ಚಲ್ಪಟ್ಟ ಕರ್ಣನು ವೃಕ್ಷಗಳಿಂದ ವ್ಯಾಪ್ತವಾದ ಶಿಖರದಂತೆ ಮತ್ತು ಸುಪುಷ್ಪಿತವಾದ ಕೆಂಪು ಕಣಗಿಲೆ ಮರಗಳುಳ್ಳ ಪರ್ವತದಂತೆ ಕಂಡನು. ಆಗ ಧನುಸ್ಸಿನಿಂದ ಬಾಣಸಂಘಗಳನ್ನು ಸೃಷ್ಟಿಸುತ್ತಿದ್ದ ಕರ್ಣನು ಶರಜಾಲಗಳ ಕಾಂತಿಯನ್ನು ಸೂಸುತ್ತಿರುವಂತೆ ತೋರುತ್ತಿದ್ದನು. ರಕ್ತದಿಂದ ತೋಯ್ದು ಲೋಹಿತ ವರ್ಣನಾಗಿದ್ದ ಅವನು ಕೆಂಪಾದ ಸೂರ್ಯಮಂಡಲದಲ್ಲಿ ದಿವಾಕರನು ಅಸ್ತನಾಗುತ್ತಿರುವಂತೆ ತೋರುತ್ತಿದ್ದನು. ಆಧಿರಥಿಯ ಎರಡು ತೋಳುಗಳ ಮಧ್ಯದಿಂದ ಹೊರಬರುತ್ತಿದ್ದ ಉರಿಯುವ ಸರ್ಪಗಳಂತಹ ನಿಶಿತ ಬಾಣಗಳು ದಿಕ್ಕುಗಳನ್ನು ಸೇರಿ ಅರ್ಜುನನ ಬಾಹುಗಳಿಂದ ಬಿಡಲ್ಪಟ್ಟ ಬಾಣಗಳನ್ನು ಧ್ವಂಸಮಾಡಿದವು.
ಆಗ ಸಮರದಲ್ಲಿ ಅವನ ಚಕ್ರಗಳು ಭೂಮಿಯಲ್ಲಿ ಹುಗಿದುಹೋಗಲು ಸೂತಪುತ್ರನು ವಿಹ್ವಲನಾದನು. ಬ್ರಾಹ್ಮಣನ ಶಾಪದಿಂದಾಗಿ ರಥವು ಕುಸಿಯಲು ಪರಶುರಾಮನ ಶಾಪದಂತೆ ಅವನಿಗೆ ಅಸ್ತ್ರಗಳೂ ಹೊಳೆಯದಾದವು. ಆ ವ್ಯಸನಗಳನ್ನು ಸಹಿಸಿಕೊಳ್ಳಲಾಗದೇ ಕೈಗಳನ್ನು ಕೊಡವುತ್ತಾ ಅವನು ಧರ್ಮವನ್ನು ನಿಂದಿಸಿದನು: “ಧರ್ಮವೇ ಪ್ರಧಾನವಾಗಿರುವವನನ್ನು ಧರ್ಮವು ರಕ್ಷಿಸುತ್ತದೆ ಎಂದು ಸದೈವ ಧರ್ಮವಿದರು ಹೇಳುತ್ತಾರೆ. ಇಂದು ನನಗನ್ನಿಸುತ್ತಿದೆ – ಧರ್ಮವು ಭಕ್ತರನ್ನು ಪಾಲಿಸುವುದಿಲ್ಲ. ಧರ್ಮವು ನಿತ್ಯವೂ ಪರಿಪಾಲಿಸುವುದಿಲ್ಲ.”
ಹೀಗೆ ಹೇಳುತ್ತಿರಲು ಕುದುರೆಗಳೂ ಸೂತನೂ ತತ್ತರಿಸಿದವು. ಮರ್ಮಸ್ಥಾನಗಳಲ್ಲಿ ಚುಚ್ಚಲ್ಪಟ್ಟಿದ್ದ ಅವನು ಏನನ್ನು ಮಾಡಲೂ ವಿಚಲಿತನಾಗಿದ್ದನು. ತನಗಾದ ಅವಸ್ಥೆಗೆ ಧರ್ಮವನ್ನೇ ಪುನಃ ಪುನಃ ನಿಂದಿಸುತ್ತಿದ್ದನು. ಆಗ ಕರ್ಣನು ಆಹವದಲ್ಲಿ ಮೂರು ಭಯಂಕರ ಶರಗಳಿಂದ ಕೃಷ್ಣನ ಕೈಗೆ ಹೊಡೆದು, ಏಳರಿಂದ ಪಾರ್ಥನನ್ನು ಮುಸುಕಿದನು. ಆಗ ಅರ್ಜುನನು ಹದಿನೇಳು ಉಗ್ರತೇಜಸ್ಸುಳ್ಳ, ಇಂದ್ರನ ವಜ್ರಕ್ಕೆ ಸಮಾನವಾದ, ಅಗ್ನಿಯಂತಿದ್ದ ಘೋರ ಜಿಹ್ಮಗಗಳನ್ನು ಪ್ರಯೋಗಿಸಿದನು. ಭೀಮವೇಗದ ಅವು ಅವನನ್ನು ಭೇದಿಸಿ ನೆಲದಮೇಲೆ ಬಿದ್ದವು. ಆಗ ನಡುಗಿದ ಕರ್ಣನು ತನ್ನ ಶಕ್ತಿಯೊಡನೆ ಒಟ್ಟುಗೂಡಿಸಿ ಪ್ರಯತ್ನಿಸಿರುವಂತೆ ಕಂಡುಬಂದನು. ಕೂಡಲೇ ಅವನು ಧೈರ್ಯವನ್ನು ತಾಳಿ ಬಲವನ್ನುಪಯೋಗಿಸಿ ಬ್ರಹ್ಮಾಸ್ತ್ರವನ್ನು ಬಳಸಿದನು. ಅದನ್ನು ನೋಡಿ ಅರ್ಜುನನು ಐಂದ್ರಾಸ್ತ್ರವನ್ನು ಅಭಿಮಂತ್ರಿಸಿದನು. ಗಾಂಡೀವ, ಮೌರ್ವಿ ಮತ್ತು ಬಾಣಗಳನ್ನು ಅನುಮಂತ್ರಿಸಿ ಧನಂಜಯನು ಪುರಂದರನು ಮಳೆಸುರಿಸುವಂತೆ ಶರವರ್ಷಗಳನ್ನು ಸೃಷ್ಟಿಸಿದನು. ಪಾರ್ಥನ ರಥದಿಂದ ಹೊರಟ ಆ ತೇಜೋಮಯ ಮಹಾವೀರ್ಯ ಬಾಣಗಳು ಕರ್ಣನ ರಥದ ಬಳಿ ಪ್ರಕಟವಾದವು. ಮಹಾರಥ ಕರ್ಣನು ವೇಗದಿಂದ ಬರುತ್ತಿದ್ದ ಆ ಅಸ್ತ್ರಗಳನ್ನು ವ್ಯರ್ಥಗೊಳಿಸಿದನು. ಆ ಅಸ್ತ್ರವೂ ನಾಶವಾಗಲು ವೃಷ್ಣಿವೀರನು ಹೇಳಿದನು:
“ಪಾರ್ಥ! ಪರಮ ಅಸ್ತ್ರವನ್ನು ಪ್ರಯೋಗಿಸು! ರಾಧೇಯನು ಶರಗಳನ್ನು ನುಂಗಿಬಿಡುತ್ತಿದ್ದಾನೆ!” ಆ ಸಲಹೆಯಂತೆ ಅರ್ಜುನನು ಆಗ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು. ಆಗ ಬಾಣಗಳಿಂದ ಅರ್ಜುನನು ಕರ್ಣನನ್ನು ಭ್ರಾಂತಗೊಳಿಸಿದನು. ಆದರೆ ಅವುಗಳನ್ನು ಕ್ರುದ್ಧನಾದ ಕರ್ಣನು ತೇಜಸ್ಸುಳ್ಳ ಮೌರ್ವಿಯಿಂದ ಹೊರಟ ಶರಗಳಿಂದ ಕತ್ತರಿಸಿದನು. ಆಗ ಮೌರ್ವಿಯನ್ನು ಕತ್ತರಿಸಲು ಪಾಂಡವನು ಪುನಃ ಮೌರ್ವಿಯನ್ನು ಕಟ್ಟಿ ಸಹಸ್ರಾರು ಉರಿಯುತ್ತಿರುವ ಶರಗಳಿಂದ ಕರ್ಣನನ್ನು ಮುಚ್ಚಿಬಿಟ್ಟನು. ಸಂಯುಗದಲ್ಲಿ ಅವನ ಮೌರ್ವಿಯನ್ನು ಕತ್ತರಿಸುತ್ತಿದ್ದೆಂತೆಲ್ಲ ಅರ್ಜುನನು ಬಾಣಗಳನ್ನು ಹೂಡುತ್ತಿದ್ದನು. ಅವನ ಶೀಘ್ರತ್ವವು ತಿಳಿಯುತ್ತಲೇ ಇರಲಿಲ್ಲ. ಅದೊಂದು ಅದ್ಭುತವಾಗಿತ್ತು. ಸವ್ಯಸಾಚಿಯ ಅಸ್ತ್ರಗಳನ್ನು ಅಸ್ತ್ರಗಳಿಂದ ರಾಧೇಯನು ನಾಶಗೊಳಿಸಿ, ಪಾರ್ಥನಿಗಿಂತಲೂ ಅಧಿಕವಾದ ವೀರ್ಯವನ್ನು ಪ್ರದರ್ಶಿಸಿದನು. ಆಗ ಕೃಷ್ಣನು ಕರ್ಣನ ಅಸ್ತ್ರಗಳಿಂದ ಪೀಡಿತನಾದ ಅರ್ಜುನನನ್ನು ನೋಡಿ “ಪಾರ್ಥ! ಅನುತ್ತಮವಾದ ಅಸ್ತ್ರವನ್ನು ಬಳಸು!” ಎಂದು ಹೇಳಿದನು. ಆಗ ಧನಂಜಯನು ಅಗ್ನಿಸದೃಶ ಸರ್ಪವಿಷಸಮ ಉಕ್ಕಿನ ಸಾರಮಯ ದಿವ್ಯ ಶರವನ್ನು ಅನುಮಂತ್ರಿಸಿದನು. ಕಿರೀಟವಾನನು ಆ ರೌದ್ರ ಅಸ್ತ್ರವನ್ನು ಹೂಡಿ ಪ್ರಯೋಗಿಸಲು ಬಯಸಲು ಭೂಮಿಯು ಮಹಾರಣದಲ್ಲಿ ರಾಧೇಯನ ಚಕ್ರವನ್ನು ನುಂಗಿತು.
ಚಕ್ರವು ಹುಗಿದುಕೊಳ್ಳಲು ರಾಧೇಯನು ಕೋಪದಿಂದ ಕಣ್ಣೀರನ್ನು ಸುರಿಸುತ್ತಾ ಅರ್ಜುನನಿಗೆ ಹೇಳಿದನು: “ಪಾಂಡವ! ಒಂದು ಕ್ಷಣಕಾಲ ಕ್ಷಮಿಸು! ಚಕ್ರವು ಭೂಮಿಯಲ್ಲಿ ಹುಗಿದುಕೊಂಡಿದುದನ್ನು ನೋಡಿ ಇದೇ ದೈವವಿತ್ತ ಸರಿಯಾದ ಸಮಯವೆಂದು ತಿಳಿಯಬೇಡ! ಕಾಪುರುಷರು ಅನುಸರಿಸುವ ಈ ಮಾರ್ಗವನ್ನು ಬಿಟ್ಟುಬಿಡು! ಮುಡಿಯು ಬಿಚ್ಚಿಹೋಗಿರುವವರನ್ನೂ, ಯುದ್ಧದಿಂದ ವಿಮುಖರಾಗಿರುವವರನ್ನೂ, ಬ್ರಾಹ್ಮಣರನ್ನೂ, ಕೈಮುದು ಶರಣಾಗತನಾದವರನ್ನೂ, ಶಸ್ತ್ರನ್ಯಾಸಮಾಡಿದವರನ್ನೂ, ಜೀವಯಾಚಕರನ್ನೂ, ಬಾಣಗಳಿಲ್ಲದವರನ್ನೂ, ಕವಚದಿಂದ ವಿಹೀನರಾದವರನ್ನೂ, ಆಯುಧಗಳನ್ನು ಕಳೆದುಕೊಂಡವರನ್ನು ಅಥವಾ ಆಯುಧಗಳು ಭಗ್ನರಾದವರನ್ನು ಶೂರರಾದ ರಾಜರು ಪಾರ್ಥಿವರು ಪ್ರಹರಿಸುವುದಿಲ್ಲ. ನೀನಾದರೋ ಶೂರನಾಗಿದ್ದೀಯೆ. ಆದುದರಿಂದ ಮುಹೂರ್ತಕಾಲ ತಡೆ! ಈ ಚಕ್ರವನ್ನು ಭೂಮಿಯಿಂದ ಮೇಲೆತ್ತುತ್ತೇನೆ. ರಥಸ್ಥನಾಗಿರದ, ನೆಲದಮೇಲಿರುವ ಮತ್ತು ಯುದ್ಧಕ್ಕೆ ಸಜ್ಜಾಗಿರದ ನನ್ನನ್ನು ಹೊಡೆಯಕೂಡದು! ನಾನು ಇದನ್ನು ಭಯದಿಂದ ಹೇಳುತ್ತಿದ್ದೇನೆಂದು ವಾಸುದೇವ ಅಥವಾ ಪಾಂಡವೇಯ ನೀನು ತಿಳಿಯಬಾರದು! ನೀನಾದರೋ ಕ್ಷತ್ರಿಯರ ದಾಯಾದನಾಗಿರುವೆ! ಮಹಾಕುಲದ ವಿವರ್ಧಕನಾಗಿರುವೆ! ಧರ್ಮೋಪದೇಶವನ್ನು ಸ್ಮರಿಸಿಕೊಂಡು ನೀನು ಮುರ್ಹೂರ್ತಕಾಲ ಸೈರಿಸಿಕೋ!”
ಕರ್ಣವಧೆ
ಆಗ ರಥಸ್ಥನಾದ ವಾಸುದೇವನು ಹೇಳಿದನು: “ರಾಧೇಯ! ಅದೃಷ್ಟವಶಾತ್ ಈಗ ನೀನು ಧರ್ಮವನ್ನು ನೆನಪಿಸಿಕೊಳ್ಳುತ್ತಿರುವೆ. ಕಷ್ಟದಲ್ಲಿ ಮುಳುಗಿದ ನೀಚರು ಸಾಮಾನ್ಯವಾಗಿ ತಾವು ಮಾಡಿದ ಕೆಟ್ಟ ಕೆಲಸಗಳನ್ನಲ್ಲದೇ ಕೇವಲ ದೈವವನ್ನೇ ನಿಂದಿಸುತ್ತಾರೆ. ಯಾವಾಗ ನೀನು, ಸುಯೋಧನ, ದುಃಶಾಸನ ಮತ್ತು ಸೌಬಲ ಶಕುನಿಯರು ಎಕವಸ್ತ್ರಳಾಗಿದ್ದ ದ್ರೌಪದಿಯನ್ನು ಸಭೆಗೆ ಎಳೆದು ತರಿಸಿದಾಗ ನಿನಗೆ ಅಲ್ಲಿ ಧರ್ಮದ ವಿಚಾರವೇ ಹೊಳೆದಿರಲಿಲ್ಲ! ಅಕ್ಷವಿದ್ಯೆಯನ್ನು ತಿಳಿದಿರದ ಕೌಂತೇಯ ಯುಧಿಷ್ಠಿರನನ್ನು ಸಭೆಯಲ್ಲಿ ಅಕ್ಷಜ್ಞನಾದ ಶಕುನಿಯು ಗೆದ್ದಾಗ ನಿನ್ನ ಧರ್ಮವು ಎಲ್ಲಿ ಹೋಗಿತ್ತು? ದುಃಶಾಸನ ವಶದಲ್ಲಿದ್ದ ರಜಸ್ವಲೆ ಕೃಷ್ಣೆಯನ್ನು ಸಭೆಯಲ್ಲಿ ಅಪಹಾಸ್ಯಮಾಡುವಾಗ ನಿನ್ನ ಧರ್ಮವು ಎಲ್ಲಿ ಹೋಗಿತ್ತು? ಪುನಃ ಪಾಂಡವನನ್ನು ಕರೆಯಿಸಿ ಗಾಂಧಾರರಾಜನನ್ನು ಅವಲಂಬಿಸಿ ರಾಜ್ಯವನ್ನು ಕಸಿದುಕೊಳ್ಳುವಾಗ ನಿನ್ನ ಧರ್ಮವು ಎಲ್ಲಿ ಹೋಗಿತ್ತು?”
ಕರ್ಣನಿಗೆ ವಾಸುದೇವನು ಹೀಗೆ ಹೇಳುತ್ತಿರಲು ಅವುಗಳನ್ನು ಸ್ಮರಿಸಿಕೊಂಡ ಪಾಂಡವ ಧನಂಜಯನನ್ನು ತೀವ್ರವಾದ ಕೋಪವು ಆವರಿಸಿತು. ಕ್ರೋಧದಿಂದ ಅವನ ರಂಧ್ರ ರಂಧ್ರಗಳಲ್ಲಿ ಅಗ್ನಿಯ ಜ್ವಾಲೆಗಳು ಹೊರಹೊಮ್ಮಿ ಅದೊಂದು ಅದ್ಭುತವೆನಿಸಿತು. ಅದನ್ನು ನೋಡಿ ಕರ್ಣನು ಬ್ರಹ್ಮಾಸ್ತ್ರದಿಂದ ಧನಂಜಯನ ಮೇಲೆ ಬಾಣಗಳ ಮಳೆಯನ್ನು ಸುರಿಸಿ ಪುನಃ ರಥವನ್ನು ಮೇಲೆತ್ತುವ ಪ್ರಯತ್ನವನ್ನು ಮಾಡಿದನು. ಅ ಅಸ್ತ್ರವನ್ನು ಕೌಂತೇಯನು ಅಸ್ತ್ರದಿಂದಲೇ ನಿರಸನಗೊಳಿಸಿನು. ಅನಂತರ ಪಾರ್ಥನು ಜಾತವೇದಸನಿಗೆ ಪ್ರಿಯವಾದ ಇನ್ನೊಂದು ಅಸ್ತ್ರವನ್ನು ಕರ್ಣನ ಮೇಲೆ ಗುರಿಯಿಟ್ಟು ಪ್ರಯೋಗಿಸಿದನು. ಅದು ಬಹಳವಾಗಿ ಪ್ರಜ್ವಲಿಸುತ್ತಿತ್ತು. ಆಗ ಕರ್ಣನು ಆ ಅಗ್ನಿಯನ್ನು ವಾರುಣಾಸ್ತ್ರದಿಂದ ಶಮನಗೊಳಿಸಿದನು. ಮತ್ತು ಮೋಡಗಳಿಂದ ಎಲ್ಲ ದಿಕ್ಕುಗಳನ್ನೂ ತುಂಬಿಸಿ ಹಗಲನ್ನೇ ಕತ್ತಲೆಯನ್ನಾಗಿಸಿದನು. ಪಾಂಡವೇಯನು ಸ್ವಲ್ಪವೂ ಗಾಬರಿಗೊಳ್ಳದೇ ವಾಯವ್ಯಾಸ್ತ್ರದಿಂದ ರಾಧೇಯನು ನೋಡುತ್ತಿದ್ದಂತೆಯೇ ಆ ಮೋಡಗಳನ್ನು ನಿರಸನಗೊಳಿಸಿದನು. ಅನಂತರ ಕಿರೀಟಿಯು ಸುವರ್ಣಪುಂಖಗಳುಳ್ಳ ನಿಶಿತ ಕ್ಷುರದಿಂದ ಪ್ರಯತ್ನಮಾಡಿ ಆಧಿರಥಿಯ ಮಹಾರಥದ ಮೇಲೆ ಹಾರಾಡುತ್ತಿದ್ದ ಆನೆಯ ಹಗ್ಗದ ಚಿಹ್ನೆಯನ್ನು ಹೊಂದಿದ್ದ, ಸುವರ್ಣ-ಮುತ್ತು ಮತ್ತು ವಜ್ರಗಳಿಂದ ಸಮಲಂಕೃತವಾಗಿದ್ದ, ಉತ್ತಮ ಶಿಲ್ಪಿಗಳಿಂದ ನಿರ್ಮಿಸಲ್ಪಟ್ಟಿದ್ದ, ಸೂರ್ಯನಂತೆ ವಿಶ್ವವಿಖ್ಯಾತವಾಗಿದ್ದ, ಕೌರವ ಸೈನ್ಯದ ವಿಜಯಕ್ಕೆ ಆಧಾರಸ್ತಂಭವೆಂತಿದ್ದ, ಶತ್ರುಗಳಿಗೆ ಭಯವನ್ನುಂಟುಮಾಡುತ್ತಿದ್ದ, ಸರ್ವರ ಸ್ತುತಿಗೂ ಪಾತ್ರವಾಗಿದ್ದ, ಕಾಂತಿಯಲ್ಲಿ ಸೂರ್ಯಾಗ್ನಿಗಳಿಗೆ ಸಮಾನವಾಗಿದ್ದ ಧ್ವಜವನ್ನು ಪ್ರಹರಿಸಿ ಕೆಡವಿದನು. ಆ ಧ್ವಜದ ಜೊತೆಯಲ್ಲಿಯೇ ಕೌರವರ ಯಶಸ್ಸು, ಧರ್ಮ, ಜಯ, ಮತ್ತು ಸರ್ವರ ಸಂತೋಷವೂ, ಹಾಗೆಯೇ ಕುರುಗಳ ಹೃದಯವೂ ಕೆಳಗೆ ಬಿದ್ದಿತು! ನಿಟ್ಟುಸಿರಿನ ಮಹಾ ಹಾಹಾಕಾರವುಂಟಾಯಿತು.
ಕರ್ಣನ ವಧೆಯನ್ನು ತ್ವರೆಗೊಳಿಸಲು ಕೂಡಲೇ ಪಾಂಡವ ಪಾರ್ಥನು ಮಹೇಂದ್ರನ ವಜ್ರ, ಅಗ್ನಿದಂಡ ಮತ್ತು ಸೂರ್ಯನ ಶ್ರೇಷ್ಠ ಕಿರಣಗಳಿಗೆ ಸಮನಾದ ಅಂಜಲಿಕವನ್ನು ಕೈಗೆತ್ತಿಕೊಂಡನು. ಮರ್ಮಗಳನ್ನು ಕತ್ತರಿಸುವ, ರಕ್ತಮಾಂಸಗಳಿಂದ ಲೇಪಿತವಾಗಿದ್ದ, ಸೂರ್ಯಾಗ್ನಿಸದೃಶವಾಗಿದ್ದ, ಬಹುಮೂಲ್ಯವಾಗಿದ್ದ, ನರ-ಅಶ್ವ-ಗಜಗಳನ್ನು ಸಂಹರಿಸಬಲ್ಲ, ಮೂರುಮೊಳ ಉದ್ದದ, ಆರು ರೆಕ್ಕೆಗಳುಳ್ಳ, ಉಗ್ರವೇಗದ, ಸಹಸ್ರನೇತ್ರನ ವಜ್ರಾಯುದ್ಧದ ಸಮಾನ ತೇಜಸ್ಸುಳ್ಳ, ಬಾಯಿತೆರೆದ ಅಂತಕನಂತೆ ಸಹಿಸಲಸಾಧ್ಯವಾದ, ಶಿವನ ಪಿನಾಕಕ್ಕೂ, ನಾರಾಯಣನ ಚಕ್ರಕ್ಕೂ ಸಮನಾಗಿದ್ದ, ಭಯಂಕರವಾಗಿದ್ದ, ಪ್ರಾಣಭೃತರ ವಿನಾಶಕಾರಿಯಾಗಿದ್ದ, ಆ ಬಾಣವನ್ನು ಮಹಾಸ್ತ್ರದಿಂದ ಅಭಿಮಂತ್ರಿಸಿ ಗಾಂಡೀವಕ್ಕೆ ಹೂಡಿ ಟೇಂಕಾರದೊಂದಿಗೆ ಕೂಗಿ ಹೇಳಿದನು: “ನಾನು ತಪಸ್ಸನ್ನು ತಪಿಸಿದ್ದರೆ, ಗುರುಗಳನ್ನು ತೃಪ್ತಿಗೊಳಿಸಿದ್ದರೆ, ಯಜ್ಞಯಾಗಾದಿಗಳನ್ನು ಮಾಡಿದ್ದರೆ, ಸುಹೃದಯರನ್ನು ಕೇಳಿದ್ದಿದ್ದರೆ, ಈ ಸತ್ಯಗಳಿಂದ ಸುವಿಹಿತವಾಗಿ ಸಂಧಾನಗೊಂಡಿರುವ, ಶತ್ರುಗಳ ಶರೀರವನ್ನೂ ಪ್ರಾಣವನ್ನೂ ಹರಣಮಾಡಬಲ್ಲ ಈ ಅಪ್ರತಿಮ, ಧೃತ, ಮಹಾಸ್ತ್ರದಿಂದ ಅಭಿಮಂತ್ರಿತ ಈ ಶರವು ನನ್ನ ಪ್ರಬಲಶತ್ರುವಾದ ಕರ್ಣನನ್ನು ಸಂಹರಿಸಲಿ!”
ಹೀಗೆ ಹೇಳಿ ಧನಂಜಯನು ಕರ್ಣನ ವಧೆಗೆಂದು ಅಥರ್ವಾಂಗೀರಸ ಮಂತ್ರದಿಂದ ಮಾಡಿದ ಕೃತ್ಯವು ಹೇಗೆ ಉಗ್ರವೂ, ಪ್ರದೀಪ್ತವೂ, ಮೃತ್ಯುವಿಗೂ ಯುದ್ಧದ್ದಲ್ಲಿ ಎದುರಿಸಲಸಾಧ್ಯವಾಗಿರುತ್ತದೆಯೋ ಹಾಗಿದ್ದ ಆ ಘೋರವಾದ ಬಾಣವನ್ನು ಪ್ರಯೋಗಿಸಿದನು.
ಅದರಿಂದ ಪರಮ ಹೃಷ್ಟನಾದ ಕಿರೀಟಿಯು ಪುನಃ ಹೇಳಿದನು: “ಈ ಶರವು ನನಗೆ ವಿಜಯದಾಯಕವಾಗಲಿ! ಚಂದ್ರಾದಿತ್ಯರ ಪ್ರಭೆಗೆ ಸಮಾನವಾಗಿರುವ ಇದು ಕರ್ಣನನ್ನು ಸಂಹರಿಸಿ, ಸಮಾಪ್ತಿಗೊಳಿಸಿ, ಯಮನಲ್ಲಿಗೆ ಕಳುಹಿಸಲಿ!”
ಯುದ್ಧದಲ್ಲಿ ವಿಜಯವನ್ನು ತರಬಲ್ಲ ಆ ಶ್ರೇಷ್ಠಬಾಣದಿಂದ ಪ್ರಹೃಷ್ಟನಾಗಿ ಕಾಣುತ್ತಿದ್ದ ಕಿರೀಟಮಾಲಿಯು ತನ್ನ ರಿಪು ಆತಯಾಯಿಯನ್ನು ಸಂಹರಿಸಲು ಚಂದ್ರಾದಿತ್ಯಸಮ ಪ್ರಭೆಯುಳ್ಳ ಆ ಶರವನ್ನು ಪ್ರಯೋಗಿಸಿದನು. ಉದಯಿಸುವ ಸೂರ್ಯನ ಸಮಾನ ವರ್ಚಸ್ಸುಳ್ಳ ಮತ್ತು ನಭೋಮಧ್ಯದಲ್ಲಿದ್ದ ಭಾಸ್ಕರನಂತಿರುವ ಆ ಬಾಣವು ಕೆಂಪಾದ ಅಸ್ತಾಚಲದಿಂದ ದಿವಾಕರನು ಕೆಳಗೆ ಬೀಳುತ್ತಿರುವನೋ ಎಂಬಂತೆ ಕರ್ಣನ ಶಿರಸ್ಸನ್ನು ಸೇನೆಯ ಅಗ್ರಭಾಗದಲ್ಲಿ ಕೆಡವಿತು. ಸತತವೂ ಸುಖವನ್ನೇ ಅನುಭವಿಸಿದ್ದ ಆ ಅತ್ಯಂತ ಸುಂದರ ದೇಹವನ್ನು ಉದಾರಕರ್ಮಿಯಾದ ಕರ್ಣನ ಶಿರಸ್ಸು ಐಶ್ವರ್ಯವಂತನು ಸಂಪತ್ತಿನಿಂದ ಮತ್ತು ಪ್ರಿಯಜನರಿಂದ ತುಂಬಿರುವ ಮನೆಯನ್ನು ಬಹಳ ಕಷ್ಟದಿಂದ ಬಿಟ್ಟುಹೋಗುವಂತೆ ಬಹಳ ಕಷ್ಟದಿಂದ ಆ ಈಶ್ವರನ ಸಂಗವನ್ನು ತೊರೆದು ಹೋಯಿತು. ವಜ್ರದಿಂದ ಹತವಾದ ಗಿರಿಯಂತೆ ಶರದಿಂದ ಶಿರವು ಕತ್ತರಿಸಲ್ಪಡಲು ಪ್ರಾಣವನ್ನು ತೊರೆದ ಕರ್ಣನ ಎತ್ತರ ಶರೀರವು ಗೈರಿಕಾದಿ ಧಾತುಗಳಿಂದ ಕೂಡಿದ ಕೆಂಪುನೀರನ್ನು ಸುರಿಸುವ ಪರ್ವತದಂತೆ ರಕ್ತವನ್ನು ಸುರಿಸುತ್ತಾ ಭೂಮಿಯ ಮೇಲೆ ಬಿದ್ದಿತು.
ಕರ್ಣನ ದೇಹವು ಕೆಳಗೆ ಬೀಳುತ್ತಲೇ ಅವನ ದೇಹದಿಂದ ಬೆಳಗುತ್ತಿರುವ ತೇಜಸ್ಸೊಂದು ಹೊರಹೊರಟು ಆಕಾಶದಲ್ಲಿ ಸೂರ್ಯಮಂಡಲದಲ್ಲಿ ಲೀನವಾಯಿತು. ಕರ್ಣನು ಹತನಾದಾಗ ನಡೆದ ಆ ಅದ್ಭುತವನ್ನು ಸರ್ವ ಮನುಷ್ಯಯೋಧರೂ ನೋಡಿದರು. ಹತನಾಗಿ ಮಲಗಿರುವ ಅವನನ್ನು ನೋಡಿ ಪ್ರೀತರಾದ ಸೋಮಕರು ಸೇನೆಗಳೊಂದಿಗೆ ನಿನಾದಿಸಿದರು. ಅತೀವ ಹೃಷ್ಟರಾಗಿ ತೂರ್ಯಗಳನ್ನು ಮೊಳಗಿಸಿದರು ಮತ್ತು ಭುಜಗಳನ್ನು ಮೇಲೆತ್ತಿ ಉತ್ತರೀಯಗಳನ್ನು ಹಾರಿಸಿದರು. ಇತರ ಬಲಾನ್ವಿತರು ಅನ್ಯೋನ್ಯರನ್ನು ಆಲಂಗಿಸಿ, ಕುಣಿದಾಡಿ, ಗರ್ಜಿಸುತ್ತಾ ಒಬ್ಬರಿಗೊಬ್ಬರು ಹೀಗೆ ಮಾತನಾಡಿಕೊಂಡರು:
“ಸಾಯಕದಿಂದ ಕತ್ತರಿಸಲ್ಪಟ್ಟು ರಥದಿಂದ ಕೆಳಕ್ಕೆ ಬಿದ್ದಿರುವ ಅವನು ಚಂಡಮಾರುತದಿಂದ ಭಗ್ನವಾಗಿ ಕೆಳಗೆ ಬಿದ್ದ ಪರ್ವತ ಶಿಖರದಂತೆಯೂ, ಯಜ್ಞಾವಸಾನದ ಅಗ್ನಿಯಂತೆಯೂ, ಮುಳುಗಿರುವ ಸೂರ್ಯನಂತೆಯೂ ಕಾಣುತ್ತಿದ್ದಾನೆ! ಸರ್ವಾಂಗಗಳಲ್ಲಿಯೂ ಶರಗಳಿಂದ ಚುಚ್ಚಲ್ಪಟ್ಟು ಸುರಿಯುತ್ತಿರುವ ರಕ್ತದಿಂದ ಲೇಪಿತನಾಗಿರುವ ಕರ್ಣನ ದೇಹವು ತನ್ನದೇ ರಶ್ಮಿಗಳಿಂದ ಬೆಳಗುವ ಸೂರ್ಯನಂತೆ ಬೆಳಗುತ್ತಿದೆ! ಉರಿಯುತ್ತಿರುವ ಶರಗಳೆಂಬ ಕಿರಣಗಳಿಂದ ಸೇನೆಗಳನ್ನು ತೀವ್ರವಾಗಿ ಉರಿಸಿ ಬಲಶಾಲಿ ಅರ್ಜುನನೆಂಬ ಸಮಯದಿಂದ ಕರ್ಣನೆಂಬ ಭಾಸ್ಕರನು ಅಸ್ತಗೊಂಡಿದ್ದಾನೆ! ಅಸ್ತನಾಗುತ್ತಿರುವ ಸೂರ್ಯನು ಹೇಗೆ ತನ್ನ ಪ್ರಭೆಗಳನ್ನೂ ತೆಗೆದುಕೊಂಡು ಹೋಗುತ್ತಾನೋ ಹಾಗೆ ಈ ಶರವು ಕರ್ಣನ ಜೀವವನ್ನೂ ತೆಗೆದುಕೊಂಡು ಹೋಯಿತು! ಸೂತಪುತ್ರನ ಮರಣವು ದಿವಸದ ಕಡೆಯ ಭಾಗದಲ್ಲಾಯಿತು. ಅಂಜಲಿಕ ಬಾಣದಿಂದ ಕತ್ತರಿಸಲ್ಪಟ್ಟು ಶಿರಸ್ಸು ದೇಹದಿಂದ ಕೆಳಗೆ ಬಿದ್ದಿತು. ಅದು ಸೇನೆಯ ಮೇಲ್ಭಾಗದಲ್ಲಿಯೇ ಹೋಗುತ್ತಾ ಎತ್ತರವಾದ ಶಿರಸ್ಸನ್ನು ಬಹಳ ಬೇಗ ಅಪಹರಿಸಿಬಿಟ್ಟಿತು!”
ಬಾಣಗಳಿಂದ ಚುಚ್ಚಲ್ಪಟ್ಟು ರಕ್ತದಿಂದ ತೋಯ್ದುಹೋಗಿ ಭೂಮಿಯ ಮೇಲೆ ಬಿದ್ದಿದ್ದ ಶೂರನಾದ ಕರ್ಣನನ್ನು ನೋಡಿ ಮದ್ರರಾಜನು ಧ್ವಜದಿಂದ ವಿಹೀನವಾಗಿದ್ದ ರಥದಿಂದ ಹೊರಬಂದು ಹೊರಟು ಹೋದನು. ಕರ್ಣನು ಹತನಾಗಲು ಬಾಣಗಳಿಂದ ಗಾಢವಾಗಿ ಗಾಯಗೊಂಡಿದ್ದ ಕೌರವ ಸೇನೆಯು ರಣದಲ್ಲಿ ತೇಜಸ್ಸಿನಿಂದ ಬೆಳಗುತ್ತಿದ್ದ ಅರ್ಜುನನ ಮಹಾಧ್ವಜವನ್ನು ತಿರುಗಿ ತಿರುಗಿ ನೋಡುತ್ತಾ ಪಲಾಯನಮಾಡಿತು. ಸಹಸ್ರನೇತ್ರನ ಕರ್ಮಗಳಿಗೆ ಸಮಾನ ಕರ್ಮಗಳನ್ನು ಮಾಡಿದ್ದ ಕರ್ಣನ ಸಹಸ್ರದಳ ಕಮಲಕ್ಕೆ ಸಮಾನ ಶುಭ ಮುಖವು ದಿನವು ಕಳೆದಾಗ ಮುಳುಗುವ ಸಹಸ್ರರಶ್ಮಿ ಸೂರ್ಯನು ಪಶ್ಚಿಮ ಪರ್ವತದಲ್ಲಿ ಬೀಳುವಂತೆ ಭೂಮಿಯ ಮೇಲೆ ಬಿದ್ದಿತು.
ಯುಧಿಷ್ಠಿರನು ರಣಭೂಮಿಗೆ ಬಂದು ಮೃತನಾದ ಕರ್ಣನನ್ನು ವೀಕ್ಷಿಸಿದುದು
ಕರ್ಣಾರ್ಜುನರ ಯುದ್ಧದಲ್ಲಿ ಬಾಣಗಳಿಂದ ನಾಶಗೊಂಡ ಸೇನೆಗಳನ್ನು ನೋಡಿ ಶಲ್ಯನು ವೀಕ್ಷಿಸಲು ಬರುತ್ತಿದ್ದ ದುರ್ಯೋಧನನಿಗೆ ಯುದ್ಧಭೂಮಿಯನ್ನು ತೋರಿಸಿದನು. ನಾಶವಾಗಿ ಕೆಳಗುರುಳಿದ್ದ ರಥ-ಕುದುರೆ-ಆನೆಗಳ ಸೇನೆಯನ್ನು ಮತ್ತು ಸೂತಪುತ್ರನು ಹತನಾದುದನ್ನು ನೋಡಿ ದುರ್ಯೋಧನನು ಕಂಬನಿದುಂಬಿದ ಕಣ್ಣುಗಳುಳ್ಳವನಾಗಿ ಆರ್ತರೂಪವನ್ನು ತಾಳಿ ಬಾರಿಬಾರಿಗೂ ನಿಟ್ಟುಸಿರುಬಿಡುತ್ತಿದ್ದನು. ಸ್ವೇಚ್ಛೆಯಿಂದ ಭೂಮಿಗೆ ಬಂದಿಳಿದಿರುವ ಸೂರ್ಯನಂತೆ ಕಾಣುತ್ತಿದ್ದ ಬಾಣಗಳಿಂದ ಚುಚ್ಚಲ್ಪಟ್ಟು ರಕ್ತದಿಂದ ತೋಯ್ದುಹೋಗಿ ರಣಭೂಮಿಯಲ್ಲಿ ಬಿದ್ದಿದ್ದ ಶೂರ ಕರ್ಣನನ್ನು ನೋಡಲು ಎಲ್ಲ ಯೋಧರೂ ಅವನನ್ನು ಸುತ್ತುವರೆದು ನಿಂತರು. ಕೆಲವರು ಪ್ರಹೃಷ್ಟರಾಗಿದ್ದರು, ಕೆಲವರು ಭಯಕ್ರಸ್ಥರಾಗಿದ್ದರು, ಕೆಲವರು ವಿಷಣ್ಣರಾಗಿದ್ದರು, ಕೆಲವರು ವಿಸ್ಮಿತರಾಗಿದ್ದರು ಮತ್ತು ಇತರರು ಶೋಕಗತರಾಗಿದ್ದರು. ಹೀಗೆ ಕೌರವರು ಮತ್ತು ಪಾಂಡವರು ತಮ್ಮ ತಮ್ಮ ಸ್ವಭಾವಗಳಿಗನುಗುಣವಾಗಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದರು. ಚದುರಿಹೋಗಿದ್ದ ಕವಚ-ವಸ್ತ್ರ-ಆಭರಣ-ಆಯುಧಗಳಿಂದ ಯುಕ್ತನಾಗಿದ್ದ ಧನಂಜಯನಿಂದ ಹತನಾಗಿ ವೀರ್ಯವನ್ನು ಕಳೆದುಕೊಂಡಿದ್ದ ಕರ್ಣನನ್ನು ನೋಡಿ ವಿಜನ ಅರಣ್ಯದಲ್ಲಿ ಗೂಳಿಯು ಸತ್ತುಹೋದನಂತರ ಹಸುಗಳು ಹೇಗೋ ಹಾಗೆ ದಿಕ್ಕಾಪಾಲಾಗಿ ಓಡಿ ಹೋದರು. ಸಿಂಹದಿಂದ ಆನೆಯು ಹತಗೊಂಡಂತೆ ಅರ್ಜುನನೊಡನೆ ಭೀಕರ ಯುದ್ಧವನ್ನು ಮಾಡಿ ರಣಭೂಮಿಯಲ್ಲಿ ಮಲಗಿದ್ದ ಕರ್ಣನನ್ನು ನೋಡಿ ಭೀತನಾದ ಮದ್ರರಾಜನು ಶೀಘ್ರವಾಗಿ ತನ್ನ ರಥವನ್ನು ಓಡಿಸಿದನು. ವಿಮೂಢಚೇತನನಾಗಿದ್ದ ಮದ್ರಾಧಿಪತಿಯು ಬೇಗನೆ ಧ್ವಜವಿಲ್ಲದ ತನ್ನ ರಥದಲ್ಲಿ ಕುಳಿತು ಶೀಘ್ರವಾಗಿ ದುರ್ಯೋಧನನ ಬಳಿ ಹೋಗಿ ದುಃಖಾರ್ತನಾಗಿ ಈ ಮಾತುಗಳನ್ನಾಡಿದನು:
“ಆನೆ-ಕುದುರೆ-ರಥಪ್ರವೀರರು ನಾಶವಾಗಿರುವ ನಿನ್ನ ಸೇನೆಯು ಯಮರಾಷ್ಟ್ರದಂತಾಗಿ ಹೋಗಿದೆ! ಪರ್ವತ ಶಿಖರಗಳಂತಿದ್ದ ಮನುಷ್ಯ-ಆನೆ-ಕುದುರೆ-ರಥಗಳಿಂದ ಕೂಡಿದ್ದ ನಿನ್ನ ಮಹಾಸೇನೆಯು ಅನ್ಯೋನ್ಯರೊಡನೆ ಕಾದಾಡಿ ಅವಸಾನಹೊಂದಿದೆ! ಇಂದು ಕರ್ಣಾರ್ಜುನರ ನಡುವೆ ನಡೆದ ಯುದ್ಧವು ಹಿಂದೆಂದೂ ನಡೆದಿರಲಿಲ್ಲ. ಕೃಷ್ಣಾರ್ಜುನರಿಬ್ಬರೂ, ನಿನ್ನ ಅನ್ಯ ಶತ್ರುಗಳೆಲ್ಲರೂ ಕರ್ಣನ ಹಿಡಿತಕ್ಕೆ ಬಂದಿದ್ದರು! ತನ್ನದೇ ವಶದಲ್ಲಿದ್ದುಕೊಂಡು ನಡೆದುಕೊಳ್ಳುವ ದೈವವು ಪಾಂಡವರನ್ನು ರಕ್ಷಿಸುತ್ತಿದೆ ಮತ್ತು ನಮ್ಮನ್ನು ವಿನಾಶಗೊಳಿಸುತ್ತಿದೆ! ಇದರಿಂದಲೇ ಬಹುಷಃ ನಿನ್ನ ಸಿದ್ಧಿ-ಅರ್ಥ-ಹಿತಗಳಿಗೆ ನಡೆದುಕೊಳ್ಳುತ್ತಿರುವ ಎಲ್ಲ ವೀರರೂ ಶತ್ರುಗಳಿಂದ ಹತರಾಗುತ್ತಿದ್ದಾರೆ! ನಿನ್ನೊಡನಿದ್ದ ವೀರರು ವೀರ್ಯ-ಶೌರ್ಯಗಳಲ್ಲಿ ಕುಬೇರ-ವೈವಸ್ವತ-ವಾಸವ-ವರುಣರ ಸಮಾನರಾಗಿದ್ದು ವಿಪುಲ ಗುಣಸಮೇತರಾಗಿದ್ದರು. ನಿನ್ನ ಅರ್ಥಕಾಮಗಳಿಗಾಗಿ ಪಾಂಡವೇಯರೊಂದಿಗೆ ಹೋರಾಡಿ ನಿಧನರಾದ ನರೇಂದ್ರರು ಅವಧ್ಯರೇ ಆಗಿದ್ದರು. ಈ ಪರ್ಯಾಯ ಸಿದ್ಧಿಯು ದೈವದ ಇಚ್ಛೆ. ಆದುದರಿಂದ ಶೋಕಿಸಬೇಡ! ಎಲ್ಲರಿಗೂ ಎಲ್ಲ ಸಮಯಗಳಲ್ಲಿಯೂ ಕಾರ್ಯಸಿದ್ಧಿಯಾಗುವುದಿಲ್ಲ!”
ಮದ್ರಪತಿಯ ಈ ಮಾತುಗಳನ್ನು ಕೇಳಿ ತನ್ನದೇ ಅನೀತಿಗಳನ್ನು ಮನಸಾ ನಿರೀಕ್ಷಿಸಿ ದುರ್ಯೋಧನನು ದೀನಮನಸ್ಕನಾಗಿ ಮೂರ್ಛಿತನಾದನು. ಆರ್ತರೂಪನಾದ ಅವನು ಪುನಃ ಪುನಃ ನಿಟ್ಟುಸಿರುಬಿಡುತ್ತಿದ್ದನು. ಧ್ಯಾನಮೂಕನೂ ಕೃಪಣನೂ ತುಂಬಾ ಆರ್ತನೂ ಆಗಿದ್ದ ದುರ್ಯೋಧನನಿಗೆ ಶಲ್ಯನು ಈ ಮಾತನ್ನಾಡಿದನು: “ಸತ್ತುಹೋಗಿರುವ ಯುದ್ಧಮಾಡುತ್ತ ಹತರಾದ ವೀರ ನರಾಶ್ವಗಜಗಳಿಂದ ತುಂಬಿಹೋಗಿರುವ ಈ ಉಗ್ರ ಭೂಮಿಯನ್ನು ನೋಡು! ಮದೋದಕವನ್ನು ಸುರಿಸುತ್ತಿದ್ದ ಪರ್ವತೋಪಮ ಆನೆಗಳು ಬಾಣಗಳಿಂದ ಶರೀರಗಳನ್ನು ಕತ್ತರಿಸಿಕೊಂಡು, ವಿಹ್ವಲಿಸುತ್ತಾ ಅಥವಾ ಅಸುನೀಗಿ, ಸುತ್ತಲೂ ಹರಡಿಹೋಗಿರುವ ಯೋಧರು, ಕವಚ-ಆಯುಧ-ಯಂತ್ರಗಳೊಂದಿಗೆ ಈ ರಣರಂಗದ ಸುತ್ತಲೂ ಬಿದ್ದಿವೆ! ಈ ಆನೆಗಳು ವಜ್ರಾಯುಧದಿಂದ ಒಡೆದು ಬಿದ್ದಿರುವ ವಿಭಿನ್ನ ಕಲ್ಲುಬಂಡೆಗಳು, ಮೃಗಗಳು, ಔಷಧ-ವೃಕ್ಷಗಳನ್ನೊಡಗೂಡಿದ ಪರ್ವತಗಳಂತೆ ತೋರುತ್ತಿವೆ! ಆ ಆನೆಗಳ ಮೇಲಿದ್ದ ಚಿಕ್ಕ ಚಿಕ್ಕ ಗಂಟೆಗಳೂ, ಅಂಕುಶಗಳೂ, ತೋಮರಗಳೂ, ಧ್ವಜಗಳೂ ಛಿದ್ರ ಛಿದ್ರವಾಗಿ ಹೋಗಿವೆ! ಮೇಲೆ ಹೊದಿಸಿದ್ದ ಸುವರ್ಣಮಯ ಜಾಲಗಳ ಸಹಿತವಾಗಿ ರಕ್ತದಿಂದ ತೋಯ್ದು ಹೋಗಿವೆ! ಶರಗಳಿಂದ ಗಾಯಗೊಂಡು ಬಿದ್ದಿರುವ ಕುದುರೆಗಳು ವಿಲಿವಿಲಿಗುಟ್ಟುತ್ತಿವೆ. ಅನ್ಯ ಕುದುರೆಗಳು ರಕ್ತವನ್ನೇ ಕಾರುತ್ತಿವೆ. ಎಲ್ಲವೂ ದೀನವಾಗಿ ಧ್ವನಿಮಾಡುತ್ತಾ ಕಣ್ಣುಗಳನ್ನು ತಿರುಗಿಸುತ್ತಾ ನೆಲವನ್ನು ಕಚ್ಚಿ ಆರ್ತನಾದ ಮಾಡುತ್ತಿವೆ! ಬಾಣಗಳ ಆಘಾತಕ್ಕೆ ಸಿಕ್ಕಿ ಪ್ರಾಣಗಳನ್ನು ಬಿಟ್ಟಿರುವ ಮತ್ತು ಬಿಡುತ್ತಿರುವ ಗಜಾಶ್ವ-ಪದಾತಿ ಯೋಧರಿಂದ ನಿಬಿಡವಾಗಿರುವ, ನಾಶಗೊಂಡಿರುವ ನರಾಶ್ವ-ಆನೆ-ರಥಗಳಿಂದ ಈ ರಣಭೂಮಿಯು ಮಹಾ ವೈತರಣಿ ನದಿಯಂತೆಯೇ ತೋರುತ್ತಿದೆ. ತುಂಡಾಗಿರುವ ಸೊಂಡಿಲು ಶರೀರಗಳಿರುವ ಆನೆಗಳಿಂದಲೂ, ಚಡಪಡಿಸುತ್ತ ಬಿದ್ದಿರುವ ಯಶಸ್ವಿ ಆನೆ-ರಥ-ಅಶ್ವ-ಯೋಧರಿಂದ, ಯುದ್ಧಾಭಿಮುಖ ಶತ್ರುಗಳಿಂದ ಹತರಾದ ಪದಾತಿಗಳಿಂದ, ಚೂರು ಚೂರಾಗಿ ಬಿದ್ದಿರುವ ಕವಚ-ಆಭರಣ-ವಸ್ತ್ರ-ಆಯುಧಗಳಿಂದ ತುಂಬಿರುವ ಈ ರಣಭೂಮಿಯು ಆರಿಹೋದ ಯಜ್ಞಾಗ್ನಿಗಳಿಂದ ತುಂಬಿದ ಯಜ್ಞಭೂಮಿಯಂತೆಯೇ ತೋರುತ್ತಿದೆ! ಆಕಾಶದಿಂದ ಚ್ಯುತವಾದ ಗ್ರಹಗಳಂತಿರುವ - ಶರಪ್ರಹಾರಗಳಿಂದ ಕಣ್ಣುತೆರೆದು ಸಂಜ್ಞೆಗಳನ್ನು ಕಳೆದುಕೊಂಡು, ಹತರಾಗಿ ಬಿದ್ದಿರುವ ಸಹಸ್ರಾರು ಮಹಾಬಲರಿಂದ ತುಂಬಿರುವ ರಣಭೂಮಿಯು ನಿರ್ಮಲ ಆಕಾಶವು ರಾತ್ರಿವೇಳೆ ಗ್ರಹಗಳಿಂದ ತುಂಬಿ ಶೋಭಾಯಮಾನವಾಗಿ ಕಾಣುವಂತೆ ಕಾಣುತ್ತಿದೆ. ಕರ್ಣಾರ್ಜುನರ ಬಾಹುಗಳಿಂದ ಬಿಡಲ್ಪಟ್ಟ ಶರಗಳು ಆನೆ-ಕುದುರೆ-ಮನುಷ್ಯರ ದೇಹಗಳನ್ನು ಸೀಳಿಕೊಂಡು ಪ್ರಾಣಗಳನ್ನು ಹೀರಿಕೊಂಡು ಮಹಾಸರ್ಪಗಳು ಬಿಲವನ್ನು ಹೊಗುವಂತೆ ಭೂಮಿಯಲ್ಲಿ ನಾಟಿಕೊಂಡಿವೆ! ಧನಂಜಯ-ಆಧಿರಥಿಯರ ರಥಮಾರ್ಗಗಳಲ್ಲಿ ಶರಗಳಿಂದ ಕತ್ತರಿಸಲ್ಪಟ್ಟು ಹತರಾಗಿ ಬಿದ್ದಿರುವ ಮನುಷ್ಯ-ಕುದುರೆ-ಆನೆಗಳು ಮತ್ತು ರಥಗಳಿಂದ ರಣಭೂಮಿಯು ಸಂಚಾರಕ್ಕೆ ಅಸಾಧ್ಯವಾಗಿ ತೋರುತ್ತಿದೆ. ಸಾರಥಿಗಳು, ಕುದುರೆಗಳು, ಶ್ರೇಷ್ಠ ಆಯುಧಗಳು ಮತ್ತು ಧ್ವಜಗಳಿಂದ ಸುಸಜ್ಜಿತವಾಗಿದ್ದ ಶ್ರೇಷ್ಠ ರಥಗಳು ಯೋಧರೊಂದಿಗೆ ಮಥಿಸಲ್ಪಟ್ಟು, ಶಸ್ತ್ರಗಳಿಂದ ಚೂರು ಚೂರಾಗಿ ಶಸ್ತ್ರಾಯುಧ-ಧ್ವಜಗಳು, ಚಕ್ರಗಳು, ನೊಗಗಳು, ಹಗ್ಗಗಳು, ಮರ, ತ್ರಿವೇಣು, ಮಣಿ-ಚಿನ್ನಗಳಿಂದ ಮಾಡಿದ ಆಸನಗಳು ಒಡೆದು ಚೆಲ್ಲಿ ರಣಭೂಮಿಯು ಶರತ್ಕಾಲದ ಮೇಘಗಳಿಂದ ಆಚ್ಛಾದಿತ ಆಕಾಶದಂತೆಯೇ ಕಾಣುತ್ತಿದೆ! ಒಡೆಯರನ್ನು ಕಳೆದುಕೊಂಡ ಕುದುರೆಗಳಿಂದ ವೇಗವಾಗಿ ಎಳೆದುಕೊಂಡು ಹೋಗಲ್ಪಡುತ್ತಿರುವ ಅಲಂಕೃತ ಸುಸಜ್ಜಿತ ರಥಗಳಿಂದಲೂ ಓಡಿಹೋಗುತ್ತಿರುವ ಮನುಷ್ಯ-ಮಾತಂಗ-ರಥ-ಅಶ್ವಗಳಿಂದಲೂ ತುಳಿಯಲ್ಪಟ್ಟು ಅನೇಕ ಚೂರುಚೂರುಗಳಾಗಿ ಬಿದ್ದಿವೆ. ಸುವರ್ಣ ಪಟ್ಟಿಗಳನ್ನು ಹೊಂದಿದ್ದ ಪರಿಘಗಳು, ಪರಶುಗಳು, ಗಂಡುಗೊಡಲಿಗಳು, ನಿಶಿತ ಶೂಲಗಳು, ಮುಸಲಗಳು, ಪಟ್ಟಿಶಗಳು, ಒರೆಯಿಂದ ಹೊರತೆಗೆದ ಶುಭ್ರ ಖಡ್ಗಗಳೂ, ಬಂಗಾರದ ಪಟ್ಟಿಗಳಿಂದ ಕಟ್ಟಲ್ಪಟ್ಟ ಗದೆಗಳೂ, ಧನುಸ್ಸುಗಳೂ, ಬೆಳ್ಳಿಯ ಅಂಗದ ಭೂಷಣಗಳೂ, ಬಂಗಾರದ ಬಣ್ಣದ ಪುಂಖಗಳುಳ್ಳ ಶರಗಳು, ಒರೆಯಿಂದ ತೆಗೆದಿದ್ದ ವಿಮಲ ಹಳದೀ ಬಣ್ಣದ ಋಷ್ಟಿಗಳು, ಪ್ರಾಸಗಳು, ಬಂಗಾರದಂತೆ ಹೊಳೆಯುವ ಖಡ್ಗಗಳು, ಚತ್ರಗಳು, ವಾಲ-ವ್ಯಜನಗಳು, ಶಂಖಗಳು, ಹೇಮಚಿತ್ರಗಳುಳ್ಳ ತುಂಡಾದ ಹಾರಗಳು, ರತ್ನಗಂಬಳಿಗಳೂ, ಪತಾಕ-ವಸ್ತ್ರಾಭರಣಗಳು, ಕಿರೀಟಮಾಲೆಗಳು, ಶುಭ್ರ ಮುಕುಟಗಳು, ಶ್ವೇತಚಾಮರಗಳು, ಹವಳ ಮತ್ತು ಮುತ್ತಿನ ಹಾರಗಳು, ಶಿರಸ್ತ್ರಾಣ, ಕೇಯೂರ, ಸುಂದರ ಅಂಗದಗಳು, ಕಂಠಹಾರ, ಪದಕ, ಚಿನ್ನದ ಸರಪಣಿ, ಶ್ರೇಷ್ಠ ಮಣಿ-ವಜ್ರ-ಸುವರ್ಣ-ಮುತ್ತು-ರತ್ನಗಳು, ಬಗೆಬಗೆಯ ಮಂಗಲಕಾರಕ ರತ್ನಗಳು, ಅತ್ಯಂತ ಸುಖಬೋಗಗಳಿಗೆ ಯೋಗ್ಯ ಶರೀರಗಳು, ಚಂದ್ರಸದೃಶ ಮುಖವುಳ್ಳ ಶಿರಗಳು – ಇವೆಲ್ಲವೂ ರಣರಂಗದಲ್ಲಿ ಹರಡಿಹೋಗಿವೆ! ದೇಹ-ಭೋಗ-ವಸ್ತ್ರಗಳು ಮತ್ತು ಮನಸ್ಸಿಗೆ ಬೇಕಾದ ಸುಖಗಳನ್ನು ತೊರೆದು ಸ್ವಧರ್ಮನಿಷ್ಠರಾಗಿದ್ದುಕೊಂಡು ಮಹಾ ಲೋಕಗಳನ್ನು ಪಡೆದು ಯಶಸ್ಸನ್ನು ಪ್ರಸರಿಸಿ ಅವರು ಹೊರಟುಹೋಗಿದ್ದಾರೆ.”
ಶೋಕದಿಂದ ಸಂಕಟಪಡುತ್ತಾ “ಹಾ ಕರ್ಣ! ಹಾ ಕರ್ಣ!” ಎಂದು ಹೇಳುತ್ತಾ ಕಂಬನಿದುಂಬಿದ ಕಣ್ಣುಗಳಿಂದ ಆರ್ತನಾಗಿ ಮೂರ್ಛೆಹೋಗುತ್ತಿದ್ದ ದುರ್ಯೊಧನನಿಗೆ ಹೀಗೆ ಹೇಳಿ ಶಲ್ಯನು ಸುಮ್ಮನಾದನು. ದ್ರೋಣಪುತ್ರನೇ ಮೊದಲಾದ ನರೇಂದ್ರರು ಎಲ್ಲರೂ ದುರ್ಯೋಧನನ್ನು ಸಮಾಧಾನಗೊಳಿಸುತ್ತಾ ಅವನೊಡನೆಯೇ ಪುನಃ ಪುನಃ ಅರ್ಜುನನ ಅತಿದೊಡ್ಡದಾದ ಯಶಸ್ಸಿನಿಂದ ಪ್ರಜ್ವಲಿಸುತ್ತಿದ್ದ ಧ್ವಜವನ್ನೇ ನೋಡುತ್ತಾ ಹೋಗುತ್ತಿದ್ದರು. ನರ-ಅಶ್ವ-ಮಾತಂಗಗಳ ಶರೀರಗಳಿಂದ ಸುರಿದ ರಕ್ತದಿಂದ ತೋಯ್ದುಹೋಗಿ ಕೆಂಪಾಗಿದ್ದ ರಣಭೂಮಿಯು ರಕ್ತಮಾಲೆ, ರಕ್ತಾಂಬರ ಮತ್ತು ಸುವರ್ಣ ಆಭರಣಗಳನ್ನು ತೊಟ್ಟಿದ್ದ ವೈಶ್ಯೆಯಂತೆ ಪ್ರಕಾಶಿಸುತ್ತಿದ್ದಳು. ಅತ್ಯಂತ ವಿರಾಜಮಾನವಾಗಿದ್ದ ಆ ರೌದ್ರ ಮುಹೂರ್ತದಲ್ಲಿ ರಕ್ತದಿಂದಲೇ ತನ್ನ ನಿಜಸ್ವರೂಪವನ್ನು ಮರೆಮಾಡಿಕೊಂಡಿದ್ದ ರಣ ಭೂಮಿಯನ್ನು ನೋಡಿ ಕುರುಗಳೆಲ್ಲರೂ ಅಲ್ಲಿ ನಿಲ್ಲಲಾರದೇ ದೇವಲೋಕದ ದೀಕ್ಷೆಯನ್ನು ಸ್ವೀಕರಿಸಿದರು. ಕರ್ಣನ ವಧೆಯಿಂದ ದುಃಖಿತರಾಗಿದ್ದ ಅವರು “ಹಾ ಕರ್ಣ! ಹಾ ಕರ್ಣ!” ಎಂದು ಹೇಳಿಕೊಳ್ಳುತ್ತಾ ಕೆಂಪುಬಣ್ಣಕ್ಕೆ ತಿರುಗಿದ ದಿವಾಕರನನ್ನು ನೋಡುತ್ತಾ ತಮ್ಮ ತಮ್ಮ ಶಿಬಿರಗಳಿಗೆ ತೆರಳಿದರು. “ಗಾಂಡೀವದಿಂದ ಪ್ರಮುಕ್ತವಾದ ಸುವರ್ಣಪುಂಖಗಳ ನಿಶಿತ ಶರಗಳಿಂದ ಮತ್ತು ರಕ್ತದಿಂದ ತೋಯ್ದುಹೋಗಿದ್ದ ರೆಕ್ಕೆಗಳುಳ್ಳ ಶರಗಳಿಂದ ಚುಚ್ಚಲ್ಪಟ್ಟ ಕರ್ಣನು ಹತನಾಗಿದ್ದರೂ ಅಂಶುಮಾಲೀ ಸೂರ್ಯನಂತೆ ಪ್ರಕಾಶಿಸುತ್ತಿದ್ದಾನೆ! ರಕ್ತದಿಂದ ತೋಯ್ದುಹೋಗಿದ್ದ ಕರ್ಣನ ದೇಹವನ್ನು ತನ್ನ ಕಿರಣಗಳಿಂದ ಸ್ಪರ್ಷಿಸಿ ಭಕ್ತಾನುಕಂಪೀ ಭಗವಾನ್ ವಿವಸ್ವತನು ತಾನೂ ರಕ್ತದಂತೆ ಕೆಂಪಾದ ದೇಹವನ್ನು ಧರಿಸಿ ಆ ಕೆಂಪನ್ನು ತೊಳೆದುಕೊಳ್ಳುವ ಇಚ್ಛೆಯಿಂದ ಪಶ್ಚಿಮ ಸಮುದ್ರದ ಕಡೆ ಹೊರಟುಹೋಗುತ್ತಿದ್ದಾನೆ!” ಹೀಗೆ ಯೋಚಿಸುತ್ತಿದ್ದ ಸುರರ್ಷಿಸಂಘಗಳು ತಮ್ಮ ತಮ್ಮ ನಿವಾಸಗಳಿಗೆ ತೆರಳಿದಂತೆ ಇತರ ಜನರೂ ಅದೇ ರೀತಿಯಲ್ಲಿ ತಮ್ಮ ತಮ್ಮ ಸ್ವಭಾವಗಳಿಗನುಗುಣವಾಗಿ ಯೋಚಿಸುತ್ತಾ ಭೂಮ್ಯಾಂತರಿಕ್ಷಗಳಲ್ಲಿದ್ದ ತಮ್ಮ ತಮ್ಮ ನಿವಾಸಗಳಿಗೆ ಸುಖವಾಗಿ ಪ್ರಯಾಣಿಸಿದರು. ಪ್ರಾಣಭೃತರಿಗೆ ಭಯಂಕರವಾಗಿದ್ದ ಕುರುವೀರ ಮುಖ್ಯರಾದ ಧನಂಜಯ-ಆಥಿರಥರ ಯುದ್ಧವನ್ನು ನೋಡಿ ವಿಸ್ಮಿತರಾಗಿ ಇಬ್ಬರನ್ನೂ ಪ್ರಶಂಸಿಸುತ್ತಾ ಜನರು ತೆರಳಿದರು.
ಶರಗಳಿಂದ ಕವಚವು ಕತ್ತರಿಸಲ್ಪಟ್ಟು ಹತನಾಗಿ ಅಸುನೀಗಿ ಮಲಗಿದ್ದ ಆ ವೀರ ರಾಧೇಯನನ್ನು ಲಕ್ಷ್ಮಿಯು ಮಾತ್ರ ಬಿಟ್ಟು ಹೋಗಿರಲಿಲ್ಲ. ನಾನಾ ಆಭರಣಗಳನ್ನು ಮತ್ತು ಚಿನ್ನದ ಅಂಗದಗಳನ್ನು ತೊಟ್ಟು ಹತನಾಗಿ ಮಲಗಿದ್ದ ವೈಕರ್ತನ ಕರ್ಣನು ಅಂಕುರಗಳಿದ್ದ ವೃಕ್ಷದಂತೆ ಕಾಣುತ್ತಿದ್ದನು. ಉತ್ತಮ ಕನಕದ ಕಾಂತಿಯಿದ್ದ, ಪಾವಕನಂತೆ ಉರಿಯುತ್ತಿದ್ದ, ಆ ಪುತ್ರವಾನ್ ಪುರುಷವ್ಯಾಘ್ರನು ಅಸ್ತ್ರತೇಜಸ್ಸಿನಿಂದ ಪಾಂಚಾಲರನ್ನು ಮತ್ತು ಪಾಂಡವರನ್ನು ಸುಟ್ಟು ಪಾರ್ಥನ ತೇಜಸ್ಸಿನಿಂದ ಶಾಂತನಾದನು. ಸತ್ಪುರುಷ ಯಾಚಕರು ಕೇಳಿಕೊಂಡಾಗ ಯಾರು ಕೊಡುತ್ತೇನೆಂದು ಹೇಳುತ್ತಿದ್ದನೇ ಹೊರತು ಇಲ್ಲವೆಂದು ಹೇಳುತ್ತಿರಲಿಲ್ಲವೂ ಆ ಸತ್ಪುರುಷ ವೃಷ ಕರ್ಣನು ದ್ವೈರಥದಲ್ಲಿ ಹತನಾದನು. ಆ ಮಹಾತ್ಮನ ಸರ್ವೈಶ್ವರ್ಯವೂ ಬ್ರಾಹ್ಮಣರಿಗೆ ಮೀಸಲಾಗಿದ್ದಿತು. ತನ್ನ ಜೀವವೂ ಸೇರಿ ಬ್ರಾಹ್ಮಣರಿಗೆ ಕೊಡಬಾರದೆಂಬಾ ಯಾವ ವಸ್ತುವೂ ಅವನಲ್ಲಿರಲಿಲ್ಲ. ನರರಿಗೆ ಸದಾ ಪ್ರಿಯನಾಗಿದ್ದ, ದಾನಿ, ಪ್ರಿಯವಾದುದನ್ನು ನೀಡುವ ಕರ್ಣನು ನಿನ್ನ ಪುತ್ರರ ಜಯ, ಆಶೆ, ರಕ್ಷಣೆ ಮತ್ತು ನೆರಳನ್ನೂ ಜೊತೆಯಲ್ಲಿಯೇ ತೆಗೆದುಕೊಂಡು ದಿವಂಗತನಾದನು.
ಕರ್ಣನು ಹತನಾಗಲು ನದಿಗಳು ಹರಿಯುವುದನ್ನು ನಿಲ್ಲಿಸಿಬಿಟ್ಟವು, ಸೂರ್ಯನು ಕುಂದಿ ಅಸ್ತನಾದನು. ಸೂರ್ಯವರ್ಣದ ಯಮನ ಪುತ್ರ ಗ್ರಹವು ಅಡ್ಡವಾಗಿ ಉದಯಿಸಿತು. ಆಕಾಶವು ಸೀಳಿದಂತಾಯಿತು. ಭೂಮಿಯು ಚೀತ್ಕಾರಮಾಡಿತು. ಕ್ರೂರವಾದ ಭಿರುಗಾಳಿಯು ಬೀಸತೊಡಗಿತು. ದಿಕ್ಕುಗಳು ತುಂಬಾಹೊಗೆಯೊಂದಿಗೆ ಪ್ರಜ್ವಲಿಸತೊಡಗಿತು. ಸಮುದ್ರಗಳು ಗರ್ಜಿಸುತ್ತಾ ಅಲ್ಲೋಲಕಲ್ಲೋಲವಾದವು. ಕಾನನ ಶಿಖರಗಳೊಂದಿಗೆ ಪರ್ವತಗಳು ನಡುಗಿದವು. ಭೂತಗಣಗಳು ಅತ್ಯಂತ ವ್ಯಥೆಗೊಂಡವು. ಬೃಹಸ್ಪತಿಯು ರೋಹಿಣಿಯನ್ನು ಆವರಿಸಿ ಚಂದ್ರ-ಸೂರ್ಯರಿಗೆ ಸಮಾನನಾಗಿ ಪ್ರಕಾಶಿಸಿದನು. ಕರ್ಣನು ಹತನಾಗಲು ದಿಕ್ಕುಗಳು ಬೆಳಗಿದವು. ಆಕಾಶವು ಕತ್ತಲೆಯಿಂದ ಆವೃತವಾಯಿತು. ಭೂಮಿಯು ಕಂಪಿಸಿತು. ಜ್ವಲನದಿಂದ ಪ್ರಕಾಶಿಸುತ್ತಾ ಉಲ್ಕೆಗಳು ಬಿದ್ದವು. ನಿಶಾಚರರೂ ಅತ್ಯಂತ ಹರ್ಷಿತರಾದರು. ಚಂದ್ರನಂತೆ ಪ್ರಕಾಶಿಸುವ ಮುಖವುಳ್ಳ ಅರ್ಜುನನು ಕ್ಷುರದಿಂದ ಕರ್ಣನ ಶಿರವನ್ನು ಉರುಳಿಸಿದಾಗ ಅಂತರಿಕ್ಷ ಮತ್ತು ಸ್ವರ್ಗಗಳಲ್ಲಿ ಜನರ ಹಾಹಾಕಾರವುಂಟಾಯಿತು.
ಶತ್ರು ಕರ್ಣನನ್ನು ಯುದ್ಧದಲ್ಲಿ ಸಂಹರಿಸಿದ ಪಾರ್ಥ ಅರ್ಜುನನು ದೇವಗಂಧರ್ವಮನುಷ್ಯರಿಂದ ಪೂಜಿಸಲ್ಪಟ್ಟು ವೃತ್ರನನ್ನು ಸಂಹರಿಸಿದ ಸಹಸ್ರಲೋಚನನಂತೆ ಪರಮ ತೇಜಸ್ಸಿನಿಂದ ರಾರಾಜಿಸಿದನು. ಆಗ ಮೋಡಗಳ ವೃಂದಗಳಂತೆ ಶಬ್ಧಮಾಡುತ್ತಿದ್ದ, ಶರತ್ಕಾಲದ ಮಧ್ಯಾಹ್ನದ ಸೂರ್ಯನಂತೆ ಬೆಳಗುತ್ತಿದ್ದ, ಭಯಂಕರವಾಗಿ ಶಬ್ಧಮಾಡುತ್ತಿದ್ದ ಪತಾಕೆ-ಧ್ವಜವುಳ್ಳ, ಹಿಮ-ಚಂದ್ರ-ಶಂಖ ಮತ್ತು ಸ್ಪಟಿಕಶಿಲೆಗಳಂತೆ ಕಾಂತಿಯುಕ್ತವಾಗಿದ್ದ, ಸುವರ್ಣ-ಮುಕ್ತ-ಮಣಿ-ವಜ್ರ-ವಿದ್ರುಮಗಳಿಂದ ಅಲಂಕೃತವಾಗಿದ್ದ, ಹಂಸಗಳ ವೇಗವುಳ್ಳ ರಥದಲ್ಲಿ ಕುಳಿತು ಅಗ್ನಿ-ದಿವಾಕರರಂತೆ ಬೆಳಗುತ್ತಿದ್ದ ನರೋತ್ತಮರಾದ ಪಾಂಡವ-ಕೇಶಿಮರ್ದನರು ರಣರಂಗದಲ್ಲಿ ಭಯವಿಲ್ಲದೇ ಒಂದೇ ರಥದಲ್ಲಿ ಕುಳಿತಿರುವ ವಿಷ್ಣು-ವಾಸವರಂತೆ ವಿರಾಜಿಸುತ್ತಿದ್ದರು. ಆಗ ಧನುಸ್ಸು-ಶಿಂಜನಿ ಮತ್ತು ಚಪ್ಪಾಳೆಯ ಶಬ್ಧಗಳೊಂದಿಗೆ ಶತ್ರುಗಳನ್ನು ಹತಪ್ರಭರನ್ನಾಗಿಸಿ ಶರೌಘಗಳಿಂದ ಕುರುಗಳನ್ನು ಆಚ್ಛಾದಿಸಿ ಕಪಿಧ್ವಜ ಮತ್ತು ಗರುಡಧ್ವಜರಿಬ್ಬರೂ ಶತ್ರುಗಳ ಮನಸ್ಸುಗಳನ್ನು ಭೇದಿಸುವ ಸುಘೋಷವುಳ್ಳ ಶಂಖಗಳನ್ನು ಜೋರಾಗಿ ಊದಿದರು. ಸುವರ್ಣಬಲೆಗಳಿಂದ ಅಚ್ಛಾದಿತವಾಗಿದ್ದ, ಮಹಾಧ್ವನಿಯನ್ನುಂಟುಮಾಡುವ, ಹಿಮದಂತೆ ಬಿಳುಪಾಗಿದ್ದ ತಮ್ಮ ಶ್ರೇಷ್ಠ ಶಂಖಗಳನ್ನು ಕೈಗೆತ್ತಿಕೊಂಡು ಆ ಇಬ್ಬರು ನರಶ್ರೇಷ್ಠರೂ ಶ್ರೇಷ್ಠ ಮುಖಗಳಿಂದ ಚುಂಬಿಸಿ ಏಕಕಾಲದಲ್ಲಿ ಊದಿದರು. ಪಾಂಚಜನ್ಯ ಮತ್ತು ದೇವದತ್ತಗಳ ನಿರ್ಘೋಷವು ಪೃಥ್ವಿ, ಅಂತರಿಕ್ಶ ಮತ್ತು ಎಲ್ಲ ದಿಕ್ಕುಳಲ್ಲಿಯೂ ಪ್ರತಿಧ್ವನಿಯನ್ನುಂಟುಮಾಡಿತು. ಆ ಎರಡು ಶಂಖಗಳ ಶಬ್ಧದಿಂದ ವನ, ಶೈಲ, ನದಿ, ದಿಕ್ಕುಗಳು ನಿನಾದಿಸಿದವು. ನಿನ್ನ ಪುತ್ರನ ಸೇನೆಯು ಭಯಗೊಂಡಿತು ಮತ್ತು ಆ ವೀರರಿಬ್ಬರೂ ಯುಧಿಷ್ಠಿರನಿಗೆ ಆನಂದವನ್ನಿತ್ತರು.
ಶಂಖಧ್ವನಿಗಳನ್ನು ಕೇಳುತ್ತಲೇ ಕುರುಸೈನಿಕರು ವೇಗದಿಂದ ಮದ್ರಾಧಿಪತಿಯನ್ನೂ ಭಾರತರ ಒಡೆಯ ದುರ್ಯೋಧನನನ್ನೂ ಅಲ್ಲಿಯೇ ಬಿಟ್ಟು ಪಲಾಯನಗೈದರು. ಆಗ ಭೂತಗಣಗಳು ಒಟ್ಟಾಗಿ ಇಬ್ಬರು ಸೂರ್ಯರಂತೆ ರಣರಂಗವನ್ನು ಶೋಭಿಸುತ್ತಿದ್ದ ಧನಂಜಯ ಮತ್ತು ಜನಾರ್ದನರನ್ನು ಅನುಮೋದಿಸಿದರು. ಸಮರದಲ್ಲಿ ಕರ್ಣನ ಶರಗಳಿಂದ ವ್ಯಾಪ್ತರಾಗಿದ್ದ ಅಚ್ಯುತ-ಅರ್ಜುನರು ಕತ್ತಲೆಯನ್ನು ಕೊಂದು ಉದಿಸಿದ ಅಮಲ ಕಿರಣಗಳನ್ನೇ ಮಾಲೆಗಳನ್ನಾಗಿಸಿಕೊಂಡ ಸೂರ್ಯ-ಚಂದ್ರರಂತೆ ಪ್ರಕಾಶಿಸುತ್ತಿದ್ದರು. ಅಪ್ರತಿಮ ವಿಕ್ರಮಿಗಳಾದ ವಾಸವ-ಅಚ್ಯುತರಿಬ್ಬರೂ ಆ ಬಾಣಗಣಗಳನ್ನು ಹೊರತೆಗೆದು, ಸುಹೃದಯರಿಂದ ಪರಿವೃತರಾಗಿ, ಯಜ್ಞಕ್ಕೆ ಆಹ್ವಾನಿತರಾದ ವಿಷ್ಣು-ವಾಸವರಂತೆ ಸುಖವಾಗಿ ತಮ್ಮ ಶಿಬಿರವನ್ನು ಪ್ರವೇಶಿಸಿದರು. ಆ ಮಹಾರಣದಲ್ಲಿ ಕರ್ಣನನ್ನು ಸಂಹರಿಸಿದ ಅವರಿಬ್ಬರನ್ನೂ ದೇವ-ಗಂಧರ್ವ-ಮನುಷ್ಯ-ಚಾರಣ-ಮಹರ್ಷಿ-ಯಕ್ಷ-ಮಹೋರಗರೆಲ್ಲರೂ ಜಯಕಾರಗಳಿಂದ ಸಂಪೂಜಿಸಿದರು.
ಹಾಗೆ ಕರ್ಣನ ಪತನವಾಗಿ ಕೌರವ ಸೇನೆಯು ಪಲಾಯನಮಾಡಲು ದಾಶಾರ್ಹನು ಪಾರ್ಥನನ್ನು ಬಿಗಿದಪ್ಪಿ ಹರ್ಷದಿಂದ ಈ ಮಾತನ್ನಾಡಿದನು: “ಧನಂಜಯ! ವೃತ್ರನು ಬಲಭಿದ ಇಂದ್ರನಿಂದ ಮತ್ತು ಕರ್ಣನು ನಿನ್ನಿಂದ ಹತರಾದರು. ಕರ್ಣ ಮತ್ತು ವೃತ್ರರ ವಧೆಯನ್ನು ಮಾನವರು ಹೇಳುತ್ತಿರುತ್ತಾರೆ. ಭೂರಿತೇಜಸ ಇಂದ್ರನು ವೃತ್ರನನ್ನು ವಜ್ರದಿಂದ ಯುದ್ಧದಲ್ಲಿ ಸಂಹರಿಸಿದನು. ನೀನಾದರೋ ಕರ್ಣನನ್ನು ಧನುಸ್ಸು ಮತ್ತು ನಿಶಿತ ಶರಗಳಿಂದ ಸಂಹರಿಸಿದೆ. ನಿನ್ನ ಈ ಯಶೋಕಾರಿ ವಿಕ್ರಮವು ಲೋಕದಲ್ಲಿ ಪ್ರಥಿತವಾಗುತ್ತದೆ. ಇದರ ಕುರಿತು ಧರ್ಮರಾಜನಿಗೆ ಹೇಳೋಣ! ದೀರ್ಘಕಾಲದಿಂದ ಕರ್ಣನ ವಧೆಯಾಗಬೇಕೆಂದು ಅವನು ಬಯಸಿದ್ದನು. ಅದು ಆಯಿತೆಂದು ಧರ್ಮರಾಜನಿಗೆ ಹೇಳು. ಅವನ ಋಣದಿಂದ ನೀನು ಮುಕ್ತನಾಗುವೆ.”
ಹಾಗೆಯೇ ಆಗಲೆಂದು ಪಾರ್ಥನು ಹೇಳಲು ಕೇಶವನು ಅವ್ಯಗ್ರನಾಗಿ ರಥಶ್ರೇಷ್ಠನ ರಥವನ್ನು ಹಿಂದಿರುಗಿಸಿದನು. ಗೋವಿಂದನು ಧೃಷ್ಟದ್ಯುಮ್ನ, ಯುಧಾಮನ್ಯು, ಮಾದ್ರೀಪುತ್ರರು, ವೃಕೋದರ ಮತ್ತು ಯುಯುಧಾನರಿಗೆ ಇದನ್ನು ಹೇಳಿದನು: “ಕರ್ಣನು ಅರ್ಜುನನಿಂದ ಹತನಾದುದನ್ನು ರಾಜನಿಗೆ ತಿಳಿಸಿ ಬರುವವರೆಗೆ ನೀವು ಶತ್ರುಗಳಿಗೆ ಅಭಿಮುಖರಾಗಿ ನಿಂತು ಅವರನ್ನು ತಡೆಯಿರಿ. ನಿಮಗೆ ಮಂಗಳವಾಗಲಿ! “
ಹಾಗೆ ಆ ಶೂರರಿಂದ ಬೀಳ್ಕೊಂಡು ಅವರಿಬ್ಬರೂ ರಾಜನಿವೇಶನಕ್ಕೆ ಹೋದರು. ಪಾರ್ಥನನ್ನು ಕರೆದುಕೊಂಡು ಗೋವಿಂದನು ಯುಧಿಷ್ಠಿರನನ್ನು ಸಂದರ್ಶಿಸಿದನು. ಕಾಂಚನದ ಉತ್ತಮ ಶಯನದಲ್ಲಿ ಮಲಗಿದ್ದ ಆ ರಾಜಶಾರ್ದೂಲನ ಚರಣಗಳನ್ನು ಸಂತೋಷದಿಂದಿದ್ದ ಅವರಿಬ್ಬರೂ ಹಿಡಿದುಕೊಂಡರು. ಅವರ ಹರ್ಷವನ್ನೂ ಸೈನಿಕರು ಎದೆಯನ್ನು ಹೊಡೆದುಕೊಳ್ಳುತ್ತಿರುವುದನ್ನೂ ಕಂಡ ಯುಧಿಷ್ಠಿರನು ರಾಧೇಯನು ಹತನಾದನೆಂದು ತಿಳಿದು ಮೇಲೆದ್ದು ನಿಂತನು. ಆಗ ಯದುನಂದನನು ಅವನಿಗೆ ಕರ್ಣನ ನಿಧನದ ಕುರಿತು, ಅಲ್ಲಿ ಹೇಗೆ ನಡೆಯಿತೋ ಹಾಗೆ, ಹೇಳಿದನು. ಅಚ್ಯುತ ಕೃಷ್ಣನು ನಸುನಗುತ್ತ ಶತ್ರುವನ್ನು ಕಳೆದುಕೊಂಡ ಯುಧಿಷ್ಠಿರನಿಗೆ ಬದ್ಧಾಂಜಲಿಯಾಗಿ ಹೇಳಿದನು:
“ರಾಜನ್! ಒಳ್ಳೆಯದಾಯಿತು ಗಾಂಡೀವಧನ್ವಿ ಪಾಂಡವ, ವೃಕೋದರ, ಮಾದ್ರೀಪುತ್ರ ಪಾಂಡವರೀರ್ವರೂ ಮತ್ತು ನೀನೂ ಕೂಡ ಕುಶಲರಾಗಿರುವಿರಿ! ಈ ಲೋಮಹರ್ಷಣ ವೀರಕ್ಷಯಕಾರಕ ಸಂಗ್ರಾಮದಿಂದ ನೀವು ಪಾರಾಗಿದ್ದೀರಿ. ಆದುದರಿಂದ ಮುಂದೆ ಮಾಡಬೇಕಾದ ಕಾರ್ಯಗಳನ್ನು ಮಾಡಲು ಬೇಗನೇ ಉಪಕ್ರಮಿಸು. ಕ್ರೂರ ಮಹಾಬಲ ಸೂತಪುತ್ರನು ಹತನಾಗಿದ್ದಾನೆ. ಅದೃಷ್ಟವಷಾತ್ ನಿನಗೆ ಜಯವಾಗಿದೆ. ಅದೃಷ್ಟವಷಾತ್ ನಿನ್ನ ಏಳ್ಗೆಯಾಗುತ್ತಿದೆ. ದ್ಯೂತದಲ್ಲಿ ಗೆದ್ದಿದ್ದ ಕೃಷ್ಣೆಯನ್ನು ನೋಡಿ ಯಾವ ಪುರುಷಾಧಮನು ನಕ್ಕಿದ್ದನೋ ಆ ಸೂತಪುತ್ರನ ರಕ್ತವನ್ನು ಇಂದು ಭೂಮಿಯು ಕುಡಿಯುತ್ತಿದೆ. ಬಾಣಗಳಿಂದ ಸೀಳಲ್ಪಟ್ಟು ಅನೇಕ ಶರಗಳಿಂದ ಕತ್ತರಿಸಲ್ಪಟ್ಟಿರುವ ನಿನ್ನ ಶತ್ರುವನ್ನು ನೋಡು!”
ಯುಧಿಷ್ಠಿರನಾದರೋ ಪ್ರಹೃಷ್ಟನಾಗಿ ದಾಶಾರ್ಹನನ್ನು ಪ್ರತಿಪೂಜಿಸಿದನು. ಸಂತೋಷದಿಂದ “ಒಳ್ಳೆಯದಾಯಿತು! ಒಳ್ಳೆಯದಾಯಿತು!” ಎಂದು ಹೇಳುತ್ತಾ ಇದನ್ನೂ ಹೇಳಿದನು: “ದೇವಕೀನಂದನ! ನೀನಿರುವಾಗ ಮತ್ತು ನೀನು ಸಾರಥಿಯಾಗಿರುವಾಗ ಇಂದು ಪಾರ್ಥನು ತೋರಿಸಿದ ಪೌರುಷವು ನನಗೆ ಆಶ್ಚರ್ಯವೆನಿಸುವುದಿಲ್ಲ.”
ಅನಂತರ ಆ ಕುರುಶ್ರೇಷ್ಠ ಪಾರ್ಥನು ತೋಳ್ಬಂದಿಯಿಂದ ಕೂಡಿದ ಬಲಭುಜವನ್ನು ಮೇಲೆತ್ತಿ ಕೇಶವಾರ್ಜುನರಿಬ್ಬರಿಗೂ ಹೇಳಿದನು: “ನಾರದನು ಹೇಳಿದಂತೆ ನೀವಿಬ್ಬರೂ ನರ-ನಾರಾಯಣ ದೇವರುಗಳು. ಧರ್ಮಸಂಸ್ಥಾಪನೆಯಲ್ಲಿ ನಿರತರಾಗಿರುವ ಪುರಾಣ ಪುರುಷೋತ್ತಮರು. ಹಾಗೆಯೇ ತತ್ತ್ವವಿದ ಮೇಧಾವೀ ಪ್ರಭು ಕೃಷ್ಣದ್ವೈಪಾಯನನೂ ಕೂಡ ಈ ವಿಷಯವನ್ನು ಹಲವು ಬಾರಿ ನನಗೆ ಹೇಳಿದ್ದನು. ಕೃಷ್ಣ! ನಿನ್ನ ಪ್ರಭಾವದಿಂದಾಗಿ ಧನಂಜಯನು ಗಾಂಡೀವದಿಂದ ಶತ್ರುಗಳನ್ನು ಎದುರಿಸಿ ಜಯವನ್ನೇ ಪಡೆದಿದ್ದಾನೆ. ಎಂದೂ ವಿಮುಖನಾಗಲಿಲ್ಲ. ಯುದ್ಧದಲ್ಲಿ ನೀನು ಪಾರ್ಥನ ಸಾರಥ್ಯವನ್ನು ವಹಿಸುತ್ತಿರುವಾಗ ನಮಗೆ ಜಯವೇ ನಿಶ್ಚಯವಾದುದು. ನಮಗೆ ಪರಾಜಯವೆನ್ನುವುದೇ ಇರುವುದಿಲ್ಲ.”
ಹೀಗೆ ಹೇಳಿ ಆ ಮಹಾರಥನು ಶರೀರದಲ್ಲಿ ಬಿಳುಪಾಗಿಯೂ ಬಾಲದಲ್ಲಿ ಕಪ್ಪಾಗಿಯೂ ಇದ್ದ ಕುದುರೆಗಳನ್ನು ಕಟ್ಟಿದ್ದ ಪ್ರಿಯ ಹೇಮಭೂಷಿತ ರಥವನ್ನೇರಿ ಸ್ವಸೇನೆಯಿಂದ ಪರಿವೃತವಾಗಿ, ಕೃಷ್ಣಾರ್ಜುನರನ್ನೊಡಗೂಡಿ ಹೊರಟನು. ದಾರಿಯಲ್ಲಿ ವೀರರಾದ ಮಾಧವ-ಫಲ್ಗುನರೊಂದಿಗೆ ಯುದ್ಧದ ವಿಷವಾಗಿ ಬಹಳವಾಗಿ ಮಾತನಾಡಿಕೊಳ್ಳುತ್ತಾ ರಣಭೂಮಿಯನ್ನು ನೋಡಲು ಹೊರಟ ಅವನು ರಣದಲ್ಲಿ ಗಾಂಡೀವದಿಂದ ಹೊರಟ ವಿಶಿಖಗಳಿಂದ ದೇಹದಲ್ಲೆಲ್ಲಾ ಗಾಯಗೊಂಡು ಮಲಗಿದ್ದ ಕರ್ಣನನ್ನು ನೋಡಿದನು. ಪುತ್ರನೊಂದಿಗೆ ಹತನಾಗಿದ್ದ ಕರ್ಣನನ್ನು ನೋಡಿ ಯುಧಿಷ್ಠಿರನು ಮಾಧವ-ಪಾಂಡವರಿಬ್ಬರನ್ನೂ ಪ್ರಶಂಸಿಸಿದನು. “ಗೋವಿಂದ! ನಿನ್ನ ರಕ್ಷಣೆಯಿಂದ, ವೀರ್ಯದಿಂದ, ಮತ್ತು ಬುದ್ಧಿವಂತಿಕೆಯಿಂದ ಪರಿಪಾಲಿತನಾದ ನಾನು ಇಂದು ಸಹೋದರರೊಂದಿಗೆ ಪೃಥ್ವಿಯ ರಾಜನಾಗಿದ್ದೇನೆ. ನರವ್ಯಾಘ್ರ ಅಭಿಮಾನಿ ರಾಧೇಯನು ಹತನಾದುದನ್ನು ನೋಡಿ ಇಂದು ದುರಾತ್ಮ ಧಾರ್ತರಾಷ್ಟ್ರನು ಮಹಾರಥ ಕರ್ಣನು ಹತನಾದನೆಂದು ಜೀವಿತದಲ್ಲಿಯೂ ರಾಜ್ಯದ ವಿಷಯದಲ್ಲಿಯೂ ಅತ್ಯಂತ ನಿರಾಶನಾಗುತ್ತಾನೆ. ನಿನ್ನ ಅನುಗ್ರಹದಿಂದ ನಾವು ಕೃತಾರ್ಥರಾಗಿದ್ದೇವೆ. ನೀನು ಮತ್ತು ಗಾಂಡೀವಧನ್ವಿಯು ವಿಜಯಿಯಾಗಿರುವಿರಿ. ಸೌಭಾಗ್ಯದಿಂದಲೇ ನೀವು ಜಯಿಸಿರುವಿರಿ! ಸೌಭಾಗ್ಯದಿಂದಲೇ ಕರ್ಣನು ಪತನಹೊಂದಿದನು!”
ಹೀಗೆ ಧರ್ಮರಾಜ ಯುಧಿಷ್ಠಿರನು ಅತ್ಯಂತ ಹರ್ಷಿತನಾಗಿ ಜನಾರ್ದನನನ್ನೂ ಅರ್ಜುನನನ್ನೂ ಬಹಳವಾಗಿ ಪ್ರಶಂಸಿಸಿದನು. ಆಗ ಭೀಮಸೇನನೇ ಮೊದಲಾದ ಸರ್ವ ಭಾತೃಗಳೂ ಹರ್ಷಯುಕ್ತರಾದ ಮಹಾರಥರೂ ರಾಜನನ್ನು ಅಭಿನಂದಿಸಿದರು. ಸೂತನಂದನನು ಹತನಾಗಲು ನಕುಲ, ಸಹದೇವರು, ವೃಕೋದರ, ಸಾತ್ಯಕಿ, ಧೃಷ್ಟದ್ಯುಮ್ನ, ಶಿಖಂಡಿ ಮತ್ತು ಇತರ ಪಾಂಡು-ಪಾಂಚಾಲ-ಸೃಂಜಯರು ಕೌಂತೇಯನನ್ನು ಗೌರವಿಸಿದರು. ವಿಜಯೋಲ್ಲಾಸಿತರಾದ, ಗುರಿಯನ್ನು ತಲುಪಿದ್ದ, ಯುದ್ಧಕುಶಲರಾದ, ಪ್ರಹಾರಿಗಳಾದ ಮಹಾರಥರು ಮುದಿತರಾಗಿ ನೃಪತಿ ಯುಧಿಷ್ಠಿರನನ್ನು ಅಭಿನಂದಿಸಿ, ಪರಂತಪರಾದ ಕೃಷ್ಣರಿಬ್ಬರನ್ನೂ ಪ್ರಶಂಸಯುಕ್ತವಾದ ಮಾತುಗಳಿಂದ ಸ್ತುತಿಸುತ್ತಾ ತಮ್ಮ ತಮ್ಮ ಶಿಬಿರಗಳಿಗೆ ತೆರಳಿದರು.
