ಹದಿನೇಳನೇ ದಿನದ ಯುದ್ಧ - ೫: ಕರ್ಣನ ಕುರಿತಾಗಿ ಯುಧಿಷ್ಠಿರ-ಅರ್ಜುನರಲ್ಲಿ ಮನಸ್ತಾಪ
ಕೃಷ್ಣಾರ್ಜುನರು ರಣಭೂಮಿಯಿಂದ ಹೊರಟು ಶಿಬಿರದಲ್ಲಿ ಒಬ್ಬನೇ ಮಲಗಿದ್ದ ಯುಧಿಷ್ಠಿರನನ್ನು ತಲುಪಿ ರಥದಿಂದ ಕೆಳಕ್ಕಿಳಿದು ಧರ್ಮರಾಜನ ಪಾದಗಳಿಗೆ ವಂದಿಸಿದರು. ಅಶ್ವಿನೀ ದೇವತೆಗಳು ವಾಸವನನ್ನು ಹೇಗೋ ಹಾಗೆ ಅಭಿನಂದಿಸಿದ ಆ ಇಬ್ಬರು ಪುರುಷವ್ಯಾಘ್ರ ಕುಶಲಿ ಕೃಷ್ಣಾರ್ಜುನರನ್ನು ನೋಡಿ ಯುಧಿಷ್ಠಿರನು ವಿವಸ್ವತನು ಅಶ್ವಿನೀ ದೇವತೆಗಳನ್ನು ಹೇಗೋ ಹಾಗೆ ಮತ್ತು ಮಹಾಸುರ ಜಂಭನು ಹತನಾಗಲು ಗುರು ಬೃಹಸ್ಪತಿಯು ಶಕ್ರ-ವಿಷ್ಣು ಇಬ್ಬರನ್ನೂ ಹೇಗೋ ಹಾಗೆ ಸಂತೋಷದಿಂದ ಅಭಿನಂದಿಸಿದನು. ಆ ಮಹಾಸತ್ತ್ವ ಕೇಶವ-ಅರ್ಜುನರನ್ನು ಒಟ್ಟಿಗೇ ನೋಡಿ ಯುಧಿಷ್ಠಿರನು ಗಾಂಡೀವಧನ್ವಿಯಿಂದ ಆಧಿರಥಿಯು ಯುದ್ಧದಲ್ಲಿ ಹತನಾದನೆಂದು ಭಾವಿಸಿ, ಮುಗುಳ್ನಗುತ್ತಾ ಅತ್ಯಂತ ಸಾಂತ್ವನಪೂರ್ವಕ ಮಧುರ ಮಾತುಗಳಿಂದ ಅವರಿಬ್ಬರನ್ನೂ ಅಭಿನಂದಿಸಿದನು. ಯುಧಿಷ್ಠಿರನು ಹೇಳಿದನು: “ಸ್ವಾಗತ ದೇವಕೀಪುತ್ರ! ಧನಂಜಯ! ನಿನಗೆ ಸ್ವಾಗತ! ಯುವಕರಾದ ಅಚ್ಯುತ-ಅರ್ಜುನರನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಗಾಯಗಳನ್ನು ಹೊಂದದೇ ಕುಶಲವಾಗಿದ್ದುಕೊಂಡೇ ಯುದ್ಧದಲ್ಲಿ ಸರ್ವಶಸ್ತ್ರವಿಶಾರದನಾದ, ಸರ್ಪದ ವಿಷಕ್ಕೆ ಸಮಾನನಾದ ಆ ಮಹಾರಥನೊಡನೆ ಹೇಗೆ ಯುದ್ಧಮಾಡಿದಿರಿ? ಧಾರ್ತರಾಷ್ಟ್ರರ ನಾಯಕನಾಗಿದ್ದ, ಎಲ್ಲರ ಸಲಹೆಗಾರ ಮತ್ತು ರಕ್ಷಕನಾಗಿದ್ದ, ಧನ್ವಿಗಳಾದ ವೃಷಸೇನ ಮತ್ತು ಸುಷೇಣರಿಂದ ರಕ್ಷಿಸಲ್ಪಡುತ್ತಿದ್ದ, ಅನುಜ್ಞಾತ, ಮಹಾವೀರ್ಯ, ಅಸ್ತ್ರಗಳಲ್ಲಿ ಪರಿಣಿತ, ದುರ್ಜಯ, ಧಾರ್ತರಾಷ್ಟ್ರರ ತ್ರಾತಾರ, ಅವರ ಸೇನೆಗಳನ್ನು ನಡೆಸುವ, ಅರಿಸೈನ್ಯಗಳನ್ನು ಸಂಹರಿಸುವ, ಅಮಿತ್ರರ ಗಣಗಳನ್ನು ಮರ್ದಿಸುವ, ದುರ್ಯೋಧನನ ಹಿತದಲ್ಲಿಯೇ ನಿರತನಾಗಿರುವ, ನಮ್ಮೊಡನೆ ಯುದ್ಧಮಾಡುವಂತೆ ಪ್ರಚೋದಿಸಿದ, ಮಹಾಯುದ್ಧದಲ್ಲಿ ವಾಸವನೊಡನೆ ದೇವತೆಗಳಿಗೂ ಗೆಲ್ಲಲಸಾಧ್ಯನಾದ, ತೇಜಸ್ಸು ಮತ್ತು ಬಲಗಳಲ್ಲಿ ಅಗ್ನಿ-ವಾಯುವಿನ ಸಮಾನನಾದ, ಪಾತಾಲದಂತೆ ಗಂಭೀರನಾದ, ಸುಹೃದಯರ ಆನಂದವನ್ನು ವರ್ಧಿಸುವ, ಅಮಿತ್ರರರಿಗೆ ಅಂತಕನಂತೆ ತೋರುವ ಕರ್ಣನನ್ನು ಸಂಹರಿಸಿ ನೀವು ಅದೃಷ್ಟವಶಾತ್ ಅಸುರರನ್ನು ಗೆದ್ದ ಅಮರರಂತೆ ಯೌವನವನ್ನು ಗಳಿಸಿರುವಿರಿ! ಅಚ್ಯುತಾರ್ಜುನರೇ! ಎಲ್ಲ ಪ್ರಜೆಗಳನ್ನೂ ಕೊಲ್ಲಲು ಬಯಸಿದ ಕುಪಿತ ಅಂತಕನಂತಿರುವ ಅವನೊಡನೆ ನಾನು ಇಂದು ಧೈರ್ಯಗೆಡದೇ ಯುದ್ಧಮಾಡಿದೆನು. ಯುಯುಧಾನ, ಧೃಷ್ಟದ್ಯುಮ್ನ, ಯಮಳರು, ವೀರ ಶಿಖಂಡಿ ಮತ್ತು ಐವರು ದ್ರೌಪದೇಯರು ಮತ್ತು ಪಾಂಚಾಲರು ಎಲ್ಲಕಡೆಗಳಿಂದಲೂ ನೋಡುತ್ತಿರಲು ಅವನು ನನ್ನ ಧ್ವಜವನ್ನು ಕತ್ತರಿಸಿ ಇಬ್ಬರು ಪಾರ್ಷ್ಣಿಸಾರಥಿಗಳನ್ನೂ ಸಂಹರಿಸಿದನು ಆ ಮಹಾಬಾಹುವು ಶತ್ರುಗಣಗಳ ಅನೇಕ ಮಹಾವೀರ್ಯರನ್ನು ಗೆದ್ದು ನನ್ನನ್ನೂ ಗೆದ್ದನು. ಯುದ್ಧದಲ್ಲಿ ನನ್ನನ್ನು ಅನುಸರಿಸಿ ಬಂದು ನನಗೆ ಕಠೋರವಾದ ಅನೇಕ ಮಾತುಗಳನ್ನು ಕೂಡ ಆಡಿದನು. ಅಲ್ಲಿ ಆ ಯೋಧಶ್ರೇಷ್ಠನು ಹೇಳಿದುದನ್ನು ನಾನಿನ್ನೂ ಮರೆತಿಲ್ಲ. ಅದರಲ್ಲಿ ಸಂಶಯವೇ ಇಲ್ಲ! ಭೀಮಸೇನನ ಪ್ರಭಾವದಿಂದಾಗಿ ನಾನು ಜೀವಿಸುತ್ತಿದ್ದೇನೆ! ಇದರಲ್ಲಿ ಹೆಚ್ಚು ಹೇಳುವುದಾದರೂ ಏನಿದೆ? ನನಗೆ ಅದನ್ನು ಸಹಿಸಿಕೊಳ್ಳಲು ಖಂಡಿತವಾಗಿಯೂ ಸಾಧ್ಯವಾಗಲಿಲ್ಲ! ಅವನ ಭೀತಿಯಲ್ಲಿಯೇ ನಾನು ಹದಿಮೂರು ವರ್ಷಗಳನ್ನು ಕಳೆದಿದ್ದೇನೆ. ರಾತ್ರಿ ನನಗೆ ನಿದ್ದೆಯೂ ಬರಲಿಲ್ಲ; ಹಗಲಲ್ಲಿ ಯಾವುದೇ ರೀತಿಯ ಸುಖವೂ ದೊರೆಯಲಿಲ್ಲ! ಅವನ ದ್ವೇಷದಿಂದ ಪರಿತಪಿಸುತ್ತಿದ್ದ ನಾನು ನನ್ನ ಅವಸಾನವು ಸಮೀಪಿಸಿತೆಂದು ತಿಳಿದು ವಾದ್ರೀಣಸವೆಂಬ ಪ್ರಾಣಿಯಂತೆ ಪಲಾಯನಗೈದೆನು! ಯುದ್ಧದಲ್ಲಿ ಕರ್ಣನನ್ನು ನಾನು ಹೇಗೆ ಸಂಹರಿಸಬಲ್ಲೆ ಎಂದು ಚಿಂತಿಸುತ್ತಲೇ ಬಹಳ ಕಾಲವು ಕಳೆದುಹೋಯಿತು! ಜಾಗ್ರತನಾಗಿರುವಾಗ ಮತ್ತು ಸ್ವಪ್ನದಲ್ಲಿ ಕೂಡ ಕೇವಲ ಕರ್ಣನನ್ನೇ ನಾನು ಸದಾ ಕಾಣುತ್ತಿದ್ದೆ. ಈ ಜಗತ್ತೆಲ್ಲವೂ ಕರ್ಣಮಯವಾಗಿರುವಂತೆ ಕಾಣುತ್ತಿತ್ತು! ಕರ್ಣನ ಭಯದಿಂದ ಎಲ್ಲೆಲ್ಲಿ ಹೋಗುತ್ತಿದ್ದೆನೋ ಆಲ್ಲಲ್ಲಿ ಕರ್ಣನೇ ಎದುರು ನಿಂತಿರುವಂತೆ ಕಾಣುತ್ತಿದ್ದೆನು. ಸಮರದಲ್ಲಿ ಪಲಾಯನಮಾಡದಿರುವ ಆ ವೀರನೇ ನನ್ನ ಕುದುರೆಗಳು ಮತ್ತು ರಥಗಳನ್ನು ಗೆದ್ದು ನನ್ನನ್ನು ಜೀವಸಹಿತನಾಗಿ ವಿಸರ್ಜಿಸಿದ್ದಾನೆ! ಕರ್ಣನಿಂದ ಹೀಗೆ ಧಿಕ್ಕರಿಸಲ್ಪಟ್ಟ ನನಗೆ ಈ ಜೀವದಿಂದ ಮತ್ತೆ ಈ ರಾಜ್ಯದಿಂದ ಅರ್ಥವಾದರೂ ಏನಿದೆ? ಈ ಹಿಂದೆ ಸಂಯುಗದಲ್ಲಿ ನಾನು ಏನನ್ನು ಭೀಷ್ಮ, ಕೃಪ ಮತ್ತು ದ್ರೋಣರಿಂದ ಪಡೆದಿರಲಿಲ್ಲವೋ ಅದನ್ನು ಇಂದು ನಾನು ಯುದ್ಧದಲ್ಲಿ ಸೂತಪುತ್ರನಿಂದ ಪಡೆದಿದ್ದೇನೆ! ಆದುದರಿಂದ ನಾನು ನಿನ್ನನ್ನು ಕೇಳುತ್ತಿದ್ದೇನೆ. ಕುಶಲನಾಗಿದ್ದುಕೊಂಡೇ ನೀನು ಹೇಗೆ ಕರ್ಣನನ್ನು ಸಂಹರಿಸಿದೆ? ಅದನ್ನು ನನಗೆ ಹೇಳು! ಯುದ್ಧದಲ್ಲಿ ಶಕ್ರನ ವೀರ್ಯನ ಸಮನಾಗಿರುವ, ಪರಾಕ್ರಮದಲ್ಲಿ ಯಮನ ಸಮಾನನಾಗಿರುವ, ಹಾಗೆಯೇ ಅಸ್ತ್ರದಲ್ಲಿ ರಾಮನಿಗೆ ಸಮನಾಗಿರುವ ಅವನನ್ನು ನೀನು ಹೇಗೆ ಸಂಹರಿಸಿದೆ? ಮಹಾರಥನೆಂದು ಸಮಾಖ್ಯಾತನಾದ, ಸರ್ವಯುದ್ಧವಿಶಾರದನಾದ, ಧನುರ್ಧಾರಿಗಳಲ್ಲಿ ಶ್ರೇಷ್ಠ, ಎಲ್ಲರ ಏಕಪುರುಷ, ಸದಾ ನಿನಗೋಸ್ಕರವಾಗಿ ಪುತ್ರರೊಡನೆ ಧೃತರಾಷ್ಟ್ರನು ಗೌರವಿಸುತ್ತಿದ್ದ ಆ ರಾಧೇಯನನ್ನು ನೀನು ಹೇಗೆ ಸಂಹರಿಸಿದೆ? ಧೃತರಾಷ್ಟ್ರನಾದರೋ ರಣದಲ್ಲಿ ನಿನ್ನ ಮೃತ್ಯುವು ಸರ್ವ ಯೋಧರಲ್ಲಿ ಕರ್ಣನೆಂದೇ ಭಾವಿಸಿದ್ದನು. ಯುದ್ಧದಲ್ಲಿ ನೀನು ಅವನನ್ನು ಹೇಗೆ ಸಂಹರಿಸಿದೆ? ನಿನ್ನಿಂದ ಕರ್ಣನು ಹತನಾದುದನ್ನು ನನಗೆ ಹೇಳು! ರುರುವಿನ ಶಿರವನ್ನು ಶಾರ್ದೂಲವು ಅಪಹರಿಸುವಂತೆ ಎಲ್ಲರೂ ನೋಡುತ್ತಿರಲು ನೀನು ಅವನ ಶಿರವನ್ನು ಅಪಹರಿಸಿದುದರ ಕುರಿತು ಹೇಳು! ಸೂತಪುತ್ರನು ಸಮರದಲ್ಲಿ ನಿನ್ನನ್ನು ದಿಕ್ಕು ಉಪದಿಕ್ಕುಗಳಲ್ಲಿ ಹುಡುಕುತ್ತಾ ಸುತಾಡುತ್ತಿದ್ದನು. ಸಮರದಲ್ಲಿ ನಿನ್ನನ್ನು ಹುಡುಕಿಕೊಟ್ಟವನಿಗೆ ಕರ್ಣನು ಆನೆಗಳನ್ನು ಬಹುಮಾನವಾಗಿ ಕೊಡುವವನಿದ್ದನು. ಅವನು ಈಗ ಸುತೀಕ್ಶ್ಣವಾದ ಕಂಕಪತ್ರಗಳಿಂದ ಹತನಾಗಿರುವನಲ್ಲವೇ? ದುರಾತ್ಮ ಸೂತಪುತ್ರನು ರಣದಲ್ಲಿ ನಿನ್ನಿಂದ ನಿಹತನಾಗಿ ಭೂಮಿಯಮೇಲೆ ಮಲಗಿರುವನಲ್ಲವೇ? ರಣದಲ್ಲಿ ಸೂತಪುತ್ರನನ್ನು ಸಂಹರಿಸಿ ನೀನು ಇಂದು ನನಗೆ ಪರಮ ಪ್ರಿಯವಾದುದನ್ನು ಮಾಡಿರುವೆಯಲ್ಲವೇ? ನಿನಗೋಸ್ಕರವಾಗಿ ಎಲ್ಲಕಡೆಗಳಿಂದ ನಮ್ಮ ಮೇಲೆ ಆಕ್ರಮಣಮಾಡುತ್ತಿದ್ದ ಆ ಶೂರಮಾನೀ ಮದಾನ್ವಿತ ಸೂತಪುತ್ರನು ಸಮರದಲ್ಲಿ ಇಂದು ಸೇನಾಸಮೇತನಾಗಿ ನಿನ್ನಿಂದ ಹತನಾದ ತಾನೇ? ನಿನಗೋಸ್ಕರವಾಗಿ ಅವನು ಇತರರಿಗೆ ಚಿನ್ನ, ರಥ ಮತ್ತು ಶ್ರೇಷ್ಠ ಕುದುರೆಗಳಿಂದ ಯುಕ್ತವಾದ ರಥವನ್ನು ಕೊಡುವವನಿದ್ದನು. ಆ ಪಾಪಿಯು ಸದಾ ರಣದಲ್ಲಿ ನಿನ್ನೊಡನೆ ಸ್ಪರ್ಧಿಸುತ್ತಿದ್ದನು. ಅವನು ಯುದ್ಧದಲ್ಲಿ ನಿನ್ನಿಂದ ಹತನಾದ ತಾನೇ? ನಿತ್ಯವೂ ಶೂರಮದದಿಂದ ಮತ್ತನಾಗಿ, ಸುಯೋಧನನಿಗೆ ಅತಿಪ್ರಿಯವಾದುದನ್ನು ಮಾಡಲೋಸುಗ ಕೌರವರ ಸಂಸದಿಯಲ್ಲಿ ಕೊಚ್ಚಿಕೊಳ್ಳುತ್ತಿದ್ದ ಆ ಪಾಪಿಯನ್ನು ಇಂದು ನೀನು ಸಂಹರಿಸಿದ್ದೀಯೆ ತಾನೇ? ಧನುಸ್ಸಿನಿಂದ ಹೊರಟು ನಿನ್ನಿಂದ ಕಳುಹಿಸಲ್ಪಟ್ಟ ಕೆಂಪುಬಣ್ಣದ ವಿಹಂಗಗಳಿಗೆ ಸಿಲುಕಿ ಆ ಪಾಪಿಯ ಶರೀರವು ಭಗ್ನವಾಗಿ ಮಲಗಿದ್ದಾನೆ ತಾನೇ? ಧಾರ್ತರಾಷ್ಟ್ರನ ಬಾಹುವು ತುಂಡಾಗಿದೆ ತಾನೇ? ರಾಜಮಧ್ಯದಲ್ಲಿ ಸದಾ ದರ್ಪಪೂರ್ಣನಾಗಿ “ನಾನು ಫಲ್ಗುನನನ್ನು ಕೊಲ್ಲುತ್ತೇನೆ!” ಎಂದು ಮೋಹದಿಂದ ಹೊಗಳಿಕೊಂಡು ದುರ್ಯೋಧನನನ್ನು ಹರ್ಷಗೊಳಿಸುತ್ತಿದ್ದ ಆ ಮಹಾರಥನು ಇಂದು ನಿನ್ನಿಂದ ಹತನಾಗಿದ್ದಾನಲ್ಲವೇ? “ಎಲ್ಲಿಯವರೆಗೆ ಪಾರ್ಥನಿರುವನೋ ಅಲ್ಲಿಯವರೆಗೆ ಪಾದಗಳನ್ನು ತೊಳೆಯಿಸಿಕೊಳ್ಳುವುದಿಲ್ಲ!” ಎನ್ನುವುದು ಸರ್ವದಾ ಆ ಅಲ್ಪಬುದ್ಧಿಯ ವ್ರತವಾಗಿತ್ತು. ಆ ಕರ್ಣನು ಇಂದು ನಿನ್ನಿಂದ ಹತನಾಗಿದ್ದಾನೆ ತಾನೇ? “ಕೃಷ್ಣೇ! ಸುದುರ್ಬಲರಾಗಿರುವ, ಪತಿತರಾಗಿರುವ ಮತ್ತು ಹೀನಸತ್ತ್ವರಾಗಿರುವ ಪಾಂಡವರನ್ನು ನೀನು ಏಕೆ ಪರಿತ್ಯಜಿಸುವುದಿಲ್ಲ?” ಎಂದು ಆ ದುಷ್ಟಬುದ್ಧಿ ಕರ್ಣನು ಕುರುವೀರರ ಮಧ್ಯದಲ್ಲಿ ಸಭೆಯಲ್ಲಿ ಕೃಶ್ಣೆಯನ್ನು ಪ್ರಶ್ನಿಸಿದ್ದನು. “ಕೃಷ್ಣನೊಡನೆ ಪಾರ್ಥನನ್ನು ಸಂಹರಿಸದೇ ನಾನು ಹಿಂದಿರುಗುವುದಿಲ್ಲ!” ಎಂದು ಆ ಪಾಪಬುದ್ಧಿ ಕರ್ಣನು ನಿನಗೋಸ್ಕರವಾಗಿ ಪ್ರತಿಜ್ಞೆಮಾಡಿ ಹೊರಟಿದ್ದನು. ಅವನು ಬಾಣಗಳಿಂದ ಭಗ್ನಶರೀರವುಳ್ಳವನಾಗಿ ಮಲಗಿದ್ದಾನೆ ತಾನೇ? ಸಂಗ್ರಾಮದಲ್ಲಿ ಸೃಂಜಯ-ಕೌರವರ ಸಮಾಗಮದಲ್ಲಿ ನಡೆದುದುದು ನಿನಗೆ ತಿಳಿದಿದೆ ತಾನೇ? ನನ್ನನ್ನು ಈ ದುರವಸ್ಥೆಗೆ ಗುರಿಮಾಡಿದ ಅವನು ನಿನ್ನಿಂದ ಇಂದು ಹತನಾಗಿದ್ದಾನೆ ತಾನೇ? ನಿನ್ನ ಗಾಂಡೀವದಿಂದ ಮುಕ್ತವಾದ ಉರಿಯುತ್ತಿದ್ದ ವಿಶಿಖಗಳು ಆ ಮಂದಬುದ್ಧಿಯ ಕುಂಡಲಗಳೊಂದಿಗೆ ಹೊಳೆಯುತ್ತಿದ್ದ ಶಿರಸ್ಸನ್ನು ಅವನ ಕಾಯದಿಂದ ಕತ್ತರಿಸಿವೆ ತಾನೇ? ಅವನ ಬಾಣಗಳು ನನಗೆ ನಾಟಿದಾಗಲೆಲ್ಲ ಅವನ ವಧೆಗಾಗಿ ನಿನ್ನನ್ನೇ ನಾನು ಸ್ಮರಿಸಿಕೊಳ್ಳುತ್ತಿದ್ದೆ. ಕರ್ಣನನ್ನು ಕೆಳಗುರುಳಿಸಿ ಇಂದು ನೀನು ನನ್ನ ಆ ಸ್ಮರಣೆಗಳನ್ನು ಸಾರ್ಥಕಮಾಡಿದ್ದೀಯೆ ತಾನೇ? ಕರ್ಣನ ಸಮಾಶ್ರಯದಿಂದಾಗಿ ಸುಯೋಧನನು ನಮ್ಮನ್ನು ದರ್ಪಪೂರ್ಣನಾಗಿ ನೋಡುತ್ತಿದ್ದನು. ಇಂದು ನಿನ್ನ ಪರಾಕ್ರಮದಿಂದ ಸುಯೋಧನನ ಆ ಸಮಾಶ್ರಯವನ್ನು ಭಗ್ನಗೊಳಿಸಿದ್ದೀಯೆ ತಾನೇ? ಹಿಂದೆ ಸಭಾಮಧ್ಯದಲ್ಲಿ ಪಾರ್ಥಿವರ ಸಮಕ್ಷಮದಲ್ಲಿ ಅವನು ನಮ್ಮನ್ನು ಎಣ್ಣೆಯನ್ನು ಕಳೆದುಕೊಂಡ ಎಳ್ಳೆಂದು ಕರೆದಿದ್ದನು. ಆ ದುರ್ಮತಿ ಸೂತಪುತ್ರನು ರಣದಲ್ಲಿ ನಿನ್ನನ್ನು ಎದುರಿಸಿ ನಿನ್ನಿಂದ ಹತನಾದ ತಾನೇ? ಹಿಂದೆ ದುರಾತ್ಮಾ ಸೂತಪುತ್ರನು “ಸೌಬಲನಿಂದ ಗೆಲ್ಲಲ್ಪಟ್ಟ ಯಾಜ್ಞಸೇನಿಯನ್ನು ಸ್ವಯಂ ನೀನೇ ಎಳೆದು ತಾ!” ಎಂದು ದುಃಶಾಸನನಿಗೆ ಹೇಳಿದ್ದನು. ಅವನು ಇಂದು ನಿನ್ನಿಂದ ಹತನಾಗಿದ್ದಾನೆ ತಾನೇ? ಪೃಥ್ವಿಯ ಶಸ್ತ್ರಭೃತರಲ್ಲಿಯೇ ಶ್ರೇಷ್ಠತಮನೆಂದು ತಿಳಿದುಕೊಂಡಿದ್ದ ಆ ಅಲ್ಪಚೇತನನನ್ನು ಪಿತಾಮಹನು ಅರ್ಧರಥನೆಂದು ಎಣಿಸಿದ್ದನು. ಆ ದುರಾತ್ಮ ಆಧಿರಥನು ಇಂದು ನಿನ್ನಿಂದ ಹತನಾಗಿದ್ದಾನೆ ತಾನೇ? ಅವನ ಅವಹೇಳನೆಯೆಂಬ ಗಾಳಿಯಿಂದ ಉರಿಯುತ್ತಿರುವ ಈ ಅಗ್ನಿಯು ಸದಾ ನನ್ನ ಹೃದಯದಲ್ಲಿದೆ. “ಇಂದು ಎದುರಿಸಿ ಆ ಪಾಪಿಯು ನನ್ನಿಂದ ಹತನಾದನು!” ಎಂದು ಹೇಳಿ ನನ್ನ ಈ ಅಗ್ನಿಯನ್ನು ಶಾಂತಗೊಳಿಸು ಫಲ್ಗುನ!”
ಆಧಿರಥಿಯಮೇಲಿನ ಕೋಪದಿಂದ ಧರ್ಮಶೀಲನ ಆ ಮಾತನ್ನು ಕೇಳಿದ ಅನಂತವೀರ್ಯ ಜಿಷ್ಣುವು ಯುಧಿಷ್ಠಿರನಿಗೆ ಹೇಳಿದನು: “ರಾಜನ್! ಇಂದು ನಾನು ಸಂಶಪ್ತಕರೊಂದಿಗೆ ಯುದ್ಧಮಾಡುತ್ತಿರಲು ಕುರುಸೇನೆಯ ಸೇನಾಗ್ರಯಾಯೀ ದ್ರೌಣಿಯು ಒಮ್ಮೆಲೇ ಹಾವಿನ ವಿಷಗಳಂತೆ ಹಾರಾಡುತ್ತಿದ್ದ ಬಾಣಗಳನ್ನು ಪ್ರಯೋಗಿಸುತ್ತಾ ನನ್ನ ಎದುರು ಬಂದನು. ನನ್ನ ಮೇಘಸನ್ನಿಭ ರಥವನ್ನು ನೋಡಿದ ಮರಣವನ್ನೇ ಕಾಯುತ್ತಿದ್ದ ಅಂಬಷ್ಠಸೇನೆಯು ನನ್ನನ್ನು ಆಕ್ರಮಣಿಸಲು ನಾನು ಆ ಐನೂರು ಯೋಧರನ್ನು ಸಂಹರಿಸಿ ದ್ರೌಣಿಯೊಡನೆ ಯುದ್ಧಮಾಡಲು ಹೋದೆನು. ಕಾಲಮೇಘವು ಮಳೆಸುರಿಸುವಂತೆ ಅವನು ಶಿಕ್ಷೆ-ಬಲ-ಪ್ರಯತ್ನಗಳಿಂದ ಆಕರ್ಣಪರ್ಯಂತವಾಗಿ ಧನುಸ್ಸನ್ನು ಸೆಳೆದು ಅನೇಕ ಬಾಣಸಂಘಗಳನ್ನು ಸೃಷ್ಟಿಸಿ ನನ್ನ ಮೇಲೆ ಪ್ರಯೋಗಿಸಿದನು. ಅವನು ಯಾವಾಗ ಬತ್ತಳಿಕೆಯಿಂದ ಬಾಣಗಳನ್ನು ತೆಗೆದುಕೊಳ್ಳುತ್ತಿದ್ದಾನೆ, ಯಾವಾಗ ಅವುಗಳನ್ನು ಹೂಡುತ್ತಿದ್ದಾನೆ ಎನ್ನುವುದು ನಮಗೆ ತಿಳಿಯುತ್ತಲೇ ಇರಲಿಲ್ಲ. ಮತ್ತು ಅವನು ಎಡಗೈಯಿಂದ ಅಥವಾ ಬಲಗೈಯಿಂದ ಬಾಣಪ್ರಯೋಗ ಮಾಡುತ್ತಿದ್ದಾನೆಯೋ ಎನ್ನುವುದೂ ತಿಳಿಯದಂತೆ ಸಮರದಲ್ಲಿ ಆ ದ್ರೋಣಪುತ್ರನು ವರ್ತಿಸುತ್ತಿದ್ದನು. ಐದರಿಂದ ನನ್ನನ್ನು ಹೊಡೆದು ದ್ರೋಣಪುತ್ರನು ಐದು ನಿಶಿತ ಶರಗಳಿಂದ ವಾಸುದೇವನನ್ನೂ ಹೊಡೆದನು. ನಾನಾದರೋ ನಿಮಿಷಮಾತ್ರದಲ್ಲಿ ಅವನನ್ನು ಮೂವತ್ತು ವಜ್ರಸದೃಶ ಬಾಣಗಳಿಂದ ಮರ್ದಿಸಿದೆನು. ದೇಹದಲ್ಲೆಲ್ಲಾ ಗಾಯಗೊಂಡು ರಕ್ತವನ್ನು ಸುರಿಸುತ್ತಾ ಅವನು, ನನ್ನಿಂದ ಗಾಯಗೊಂಡು ರಕ್ತದಲ್ಲಿ ತೋಯ್ದುಹೋಗಿರುವ ಸೈನಿಕರನ್ನು ನೋಡುತ್ತಾ, ಸೂತಪುತ್ರ ಕರ್ಣನ ರಥಸೇನೆಯನ್ನು ಸೇರಿಕೊಂಡನು. ಯುದ್ಧದಲ್ಲಿ ಸೈನ್ಯವು ಭಯಗೊಂಡು ವಿಧ್ವಸ್ತವಾಗಿ ಯೋಧರು, ಆನೆ-ಕುದುರೆಗಳು ಪಲಾಯನಮಾಡುತ್ತಿರುವುದನ್ನು ನೋಡಿ ಕರ್ಣನು ತ್ವರೆಮಾಡಿ ಐದುನೂರು ರಥಪ್ರಮುಖರನ್ನೊಡಗೂಡಿಕೊಂಡು ನನ್ನನ್ನು ಆಕ್ರಮಣಿಸಿದನು. ಕರ್ಣನ ಆ ಸೇನೆಯನ್ನು ನಾಶಗೊಳಿಸಿ ನಾನು ನಿನ್ನನ್ನು ನೋಡುವ ಸಲುವಾಗಿ ಅವಸರದಿಂದ ಇಲ್ಲಿಗೆ ಬಂದೆನು. ಸಿಂಹದ ವಾಸನೆಯನ್ನು ಮೂಸಿ ಹಸುಗಳು ಭಯಪಡುವಂತೆ ಕರ್ಣನಿಂದ ಪಾಂಚಾಲರೆಲ್ಲರೂ ಉದ್ವಿಗ್ನರಾಗಿದ್ದರು. ಮಹಾರೋಷದಿಂದ ಪ್ರಭದ್ರಕರು ಕರ್ಣನನ್ನು ಎದುರಿಸಿ ಯುದ್ಧಮಾಡುತ್ತಿದ್ದಾರೆ. ಮೃತ್ಯುವಿನ ತೆರೆದ ಬಾಯಿಯೊಳಗೆ ಪ್ರವೇಶಿಸುವಂತೆ ಪ್ರಭದ್ರಕರು ಕರ್ಣನನ್ನು ಎದುರಿಸಿ ಸಂಕಟಕ್ಕೊಳಗಾಗಿದ್ದಾರೆ. ರಣಾಂಗಣಕ್ಕೆ ಆಗಮಿಸು! ಇಂದು ನಾನು ಸೂತಪುತ್ರನೊಡನೆ ವಿಜಯಿಯಾಗುವಂತೆ ಯುದ್ಧಮಾಡುವುದನ್ನು ನೋಡು! ಆರುಸಾವಿರ ಮಹಾರಥ ರಾಜಪುತ್ರರು ಸ್ವರ್ಗಲೋಕದ ಸಲುವಾಗಿ ರಣದಲ್ಲಿ ಮುಳುಗಿದ್ದಾರೆ! ರಣದಲ್ಲಿ ಸೂತಪುತ್ರನನ್ನು, ವಜ್ರಿಯು ವೃತ್ರನನ್ನು ಹೇಗೋ ಹಾಗೆ, ನಾನು ಎದುರಿಸುತ್ತೇನೆ. ಇಂದು ನೀನು ನೋಡಿದರೆ ನಾನು ಈ ಸಂಗ್ರಾಮದಲ್ಲಿ ಸೂತಪುತ್ರನೊಡನೆ ಚೆನ್ನಾಗಿ ಹೋರಾಡುತ್ತೇನೆ. ಪ್ರತಿಜ್ಞೆಯಂತೆ ಇಂದು ನಾನು ಯುದ್ಧಮಾಡುತ್ತಿರುವ ಕರ್ಣನನ್ನು ಅವನ ಬಾಂಧವರೊಡನೆ ಸಂಹರಿಸದೇ ಇದ್ದರೆ, ಪ್ರತಿಜ್ಞೆಮಾಡಿದಂತೆ ಮಾಡದೇ ಇರುವವನಿಗೆ ದೊರೆಯುವ ಕಷ್ಟಗಳು ನನಗೆ ದೊರೆಯಲಿ! ಧಾರ್ತರಾಷ್ಟ್ರರು ಭೀಮನನ್ನು ನುಂಗಿಹಾಕುವ ಮೊದಲು ರಣದಲ್ಲಿ ನನಗೆ ಜಯವಾಗಲೆಂದು ಆಶೀರ್ವದಿಸು. ಸೌತಿಯನ್ನು ಮತ್ತು ಹಾಗೆಯೇ ಎಲ್ಲ ಶತ್ರುಗಣಗಳನ್ನೂ ಸಂಹರಿಸುತ್ತೇನೆ!”
ಕರ್ಣನು ಕುಶಲನಾಗಿರುವನೆಂದು ಕೇಳಿ ಯುಧಿಷ್ಠಿರನು ಫಲ್ಗುನನ ಮೇಲೆ ಕ್ರುದ್ಧನಾದನು. ಕರ್ಣನ ಶರಗಳಿಂದ ಅಭಿತಪ್ತನಾಗಿದ್ದ ಯುಧಿಷ್ಠಿರನು ಧನಂಜಯನಿಗೆ ಈ ಮಾತುಗಳನ್ನಾಡಿದನು: “ಪಾರ್ಥ! ಕರ್ಣನೊಡನೆ ಯುದ್ಧಮಾಡಲು ನಾನು ಸಮರ್ಥನಿಲ್ಲ! ಎಂದು ನೀನು ದ್ವೈತವನದಲ್ಲಿಯೇ ಹೇಳಿದ್ದಿದ್ದರೆ ಆಗ ನಾವು ಸಮಯೋಚಿತವಾದುದೇನೆಂದು ನಿಶ್ಚಯಿಸಿ ಅದರಂತೆಯೇ ನಡೆದುಕೊಳ್ಳುತ್ತಿದ್ದೆವು! ಅವನ ಬಲವನ್ನೂ ಆಪ್ತರನ್ನೂ ವಧಿಸುತ್ತೇನೆಂದು ನನಗೆ ಹೇಳಿ ಈಗ ನಮ್ಮನ್ನು ಶತ್ರುಗಳ ಮಧ್ಯದಲ್ಲಿ ತಂದು ಕಠಿಣವಾದ ರಣಾಂಗಣದಲ್ಲಿ ಉರುಳಿಸಿ ಸಮ್ಮರ್ದಿತರಾಗುವಂತೆ ಏಕೆ ಮಾಡಿದೆ? ಅರ್ಜುನ! ಕಲ್ಯಾಣಕರ ಅನೇಕ ಇಷ್ಟಗಳನ್ನು ಪೂರೈಸುವೆಯೆಂದು ನಾವು ನಿನ್ನಮೇಲೆ ಬಹಳಷ್ಟು ಆಸೆಗಳನ್ನಿಟ್ಟುಕೊಂಡು ಬಂದಿದ್ದೆವು. ಆದರೆ ಫಲಾರ್ಥಿಗಳಿಗೆ ವೃಕ್ಷವು ಕೇವಲ ಪುಷ್ಪಗಳನ್ನಿತ್ತಂತೆ ಅವೆಲ್ಲವೂ ನಿಷ್ಫಲವಾಗಿಹೋಯಿತು! ಮೀನನ್ನು ಹಿಡಿಯುವ ಗಾಳವು ಮಾಂಸದ ತುಂಡಿನಿಂದ ಆಚ್ಛಾದಿತವಾಗಿರುವಂತೆ, ಘೋರವಿಷವು ಅನ್ನದಿಂದ ಮುಚ್ಚಲ್ಪಟ್ಟಿರುವಂತೆ, ರಾಜ್ಯಾರ್ಥಿಯಾದ ನನಗೆ ರಾಜ್ಯರೂಪದ ಅನರ್ಥಕ ವಿನಾಶವನ್ನು ನೀನು ತೋರಿಸಿಕೊಟ್ಟಿರುವೆ! ನೀನು ಹುಟ್ಟಿದ ಏಳನೆಯ ದಿನದಂದು ಅಂತರಿಕ್ಷದ ವಾಣಿಯು ಪೃಥೆಗೆ ಇದನ್ನು ಹೇಳಿತ್ತಂತೆ: “ಹುಟ್ಟಿದ ಈ ಮಗನು ವಾಸವನಂತೆ ವಿಕ್ರಮಿಯಾಗುತ್ತಾನೆ. ಎಲ್ಲ ಶೂರರನ್ನೂ ಶತ್ರುಗಳನ್ನೂ ಜಯಿಸುತ್ತಾನೆ! ಇವನು ಖಾಂಡವದಲ್ಲಿ ದೇವಸಂಘಗಳನ್ನೂ ಉತ್ತಮೌಜಸ ಎಲ್ಲ ಭೂತಗಳನ್ನೂ ಜಯಿಸುತ್ತಾನೆ! ಇವನು ರಾಜಮಧ್ಯದಲ್ಲಿ ಮದ್ರ-ಕಲಿಂಗ-ಕೇಕಯರನ್ನೂ ಕುರುಗಳನ್ನೂ ಸಂಹರಿಸುತ್ತಾನೆ! ಇವನಿಗಿಂತ ಹೆಚ್ಚಿನ ಧನುರ್ಧರನು ಯಾರೂ ಮುಂದೆ ಇರುವುದಿಲ್ಲ! ಹಿಂದೆ ಇರಲಿಲ್ಲ! ಹುಟ್ಟಿದ ಯಾರೂ ಇವನನ್ನು ಜಯಿಸಲಾರರು! ಸರ್ವವಿದ್ಯೆಗಳನ್ನೂ ಸಮಾಪ್ತಿಗೊಳಿಸಿದ ಈ ಆರ್ಯನು ಬಯಸಿದರೆ ಸರ್ವಭೂತಗಳನ್ನೂ ತನ್ನ ವಶದಲ್ಲಿರಿಸಿಕೊಳ್ಳಬಹುದು! ಇವನು ಕಾಂತಿಯಲ್ಲಿ ಶಶಾಂಕನಂತೆ, ವೇಗದಲ್ಲಿ ವಾಯುವಿನಂತೆ, ಸ್ಥೈರ್ಯದಲ್ಲಿ ಮೇರುವಿನಂತೆ, ಕ್ಷಮೆಯಲ್ಲಿ ಪೃಥ್ವಿಯಂತೆ, ಪ್ರಕಾಶದಲ್ಲಿ ಸೂರ್ಯನಂತೆ, ಸಂಪತ್ತಿನಲ್ಲಿ ಕುಬೇರನಂತೆ, ಶೌರ್ಯದಲ್ಲಿ ಶಕ್ರನಂತೆ ಮತ್ತು ಬಲದಲ್ಲಿ ವಿಷ್ಣುವಿನಂತೆ. ಕುಂತೀ! ನಿನ್ನ ಈ ಮಹಾತ್ಮ ಮಗನು ಅದಿತಿಯಲ್ಲಿ ಹುಟ್ಟಿದ ವಿಷ್ಣುವಿನ ಸಮನಾಗಿದ್ದಾನೆ! ತನ್ನವರಿಗೆ ಜಯವನ್ನು ತರಲು ಮತ್ತು ಶತ್ರುಗಳನ್ನು ವಧಿಸಲು ಇವನು ಹುಟ್ಟಿದ್ದಾನೆ. ಅಮಿತೌಜಸನೆಂದು ವಿಖ್ಯಾತನಾಗುತ್ತಾನೆ. ಕುಲವನ್ನು ಉದ್ಧರಿಸುತ್ತಾನೆ!” ಹೀಗೆ ಶತಶೃಂಗದ ಶಿಖರದಲ್ಲಿರುವ ತಪಸ್ವಿಗಳಿಗೆ ಕೇಳುವಂತೆ ಅಂತರಿಕ್ಷದ ವಾಣಿಯು ಹೇಳಿತ್ತು. ಆದರೆ ಅದು ಹೇಳಿದಂತೆ ನೀನು ನಡೆಸಿಕೊಡಲಿಲ್ಲ! ದೇವತೆಗಳೂ ನಿಶ್ಚಿತವಾಗಿ ಸುಳ್ಳುಹೇಳಿರಬಹುದು! ಈ ಮಾತುಗಳನ್ನು ಕೇಳಿ ಇತರ ಋಷಿಸತ್ತಮರೂ ಸದೈವ ನಿನ್ನನ್ನು ಗೌರವಿಸುತ್ತಿದ್ದರು. ಆದುದರಿಂದ ನಾನು ಸುಯೋಧನನೊಡನೆ ಪ್ರೇಮದಿಂದ ಸಂಧಿಮಾಡಿಕೊಳ್ಳಲಿಲ್ಲ! ನೀನು ಆಧಿರಥನಿಗೆ ಹೆದರುತ್ತೀಯೆಂದು ನನಗೆ ತಿಳಿದಿರಲಿಲ್ಲ! ತ್ವಷ್ಟನಿಂದ ನಿನ್ನ ರಥವು ನಿರ್ಮಿಸಲ್ಪಟ್ಟಿದೆ ಮತ್ತು ಅದರ ಚಕ್ರಗಳು ಸ್ವಲ್ಪವೂ ಶಬ್ಧಮಾಡುವುದಿಲ್ಲ! ನಿನ್ನ ಧ್ವಜದಲ್ಲಿ ಶುಭ ಕಪಿಯು ನೆಲೆಸಿದ್ದಾನೆ! ಹೇಮಚಿತ್ರಗಳಿರುವ ಖಡ್ಗವನ್ನೂ ನಾಲ್ಕು ಮೊಳ ಉದ್ದದ ಗಾಂಡೀವಧನುಸ್ಸನ್ನೂ ಹಿಡಿದು ಸನ್ನದ್ಧನಾಗಿರುವೆ! ಈ ಕೇಶವನೇ ನಿನ್ನ ಸಾರಥಿಯಾಗಿರುವಾಗ ಪಾರ್ಥ! ನೀನೇಕೆ ಕರ್ಣನಿಗೆ ಹೆದರಿ ಹೊರಟು ಬಂದೆ? ದುರಾತ್ಮನ್! ಈ ಧನುಸ್ಸನ್ನು ಕೇಶವನಿಗೆ ಕೊಟ್ಟುಬಿಡು! ರಣದಲ್ಲಿ ನೀನು ಅವನ ಸಾರಥಿಯಾಗು! ಆಗ ಕೇಶವನು ಇಂದ್ರನು ವಜ್ರಾಯುಧವನ್ನು ಹಿಡಿದು ವೃತ್ರನನ್ನು ಸಂಹರಿಸಿದಂತೆ ಉಗ್ರನಾದ ಕರ್ಣನನ್ನು ಸಂಹರಿಸುತ್ತಾನೆ! ನೀನು ಗರ್ಭದ ಐದನೆಯ ತಿಂಗಳಿನಲ್ಲಿಯೇ ಗರ್ಭಪಾತವಾಗಿ ಹೋಗಬೇಕಾಗಿದ್ದಿತು! ಅಥವಾ ಪೃಥೆಯ ಗರ್ಭದಲ್ಲಿಯೇ ಇರಬಾರದಾಗಿತ್ತು! ಆಗ ನೀನು ಸಂಗ್ರಾಮದಿಂದ ಓಡಿಬರುವ ಶ್ರಮವನ್ನು ಪಡಬೇಕಾಗುತ್ತಿರಲಿಲ್ಲ!”
ಯುಧಿಷ್ಠಿರನು ಹೀಗೆ ಹೇಳಲು ಅರ್ಜುನನು ಸಂಕ್ರುದ್ಧನಾಗಿ ಭರತರ್ಷಭನನ್ನು ಸಂಹರಿಸಲು ಖಡ್ಗವನ್ನು ಎಳೆದು ತೆಗೆದನು. ಅವನ ಕೋಪವನ್ನು ನೋಡಿ ಚಿತ್ತಜ್ಞನಾದ ಕೇಶವನು “ಪಾರ್ಥ! ಇದೇನು? ಖಡ್ಗವನ್ನು ಹಿಡಿದಿರುವೆ?” ಎಂದು ಕೇಳಿದನು. “ಧನಂಜಯ! ಇಲ್ಲಿ ಯಾರೊಡನೆಯೂ ಯುದ್ಧಮಾಡಬೇಕಾಗಿರುವುದು ನನಗೆ ಕಾಣುವುದಿಲ್ಲ! ಏಕೆಂದರೆ ಧಾರ್ತರಾಷ್ಟ್ರರೆಲ್ಲರೂ ಧೀಮತ ಭೀಮನಿಂದ ಧ್ವಂಸವಾಗುತ್ತಿದ್ದಾರೆ! ರಾಜನನ್ನು ನೋಡಬೇಕೆಂದು ನೀನು ಇಲ್ಲಿಗೆ ಬಂದಿರುವೆ! ರಾಜನನ್ನು ನೀನು ನೋಡಿದ್ದಾಯಿತು! ಯುಧಿಷ್ಠಿರನು ಕುಶಲನಾಗಿಯೇ ಇದ್ದಾನೆ! ನೃಪಶಾರ್ದೂಲನನ್ನು ನೋಡಿ ಹರ್ಷಪಡಬೇಕಾಗಿರುವ ಸಮಯದಲ್ಲಿ ನಿನಗೇಕೆ ಕೋಪವು ಆವರಿಸಿಕೊಂಡಿದೆ? ನಿನ್ನಿಂದ ವಧಿಸಲ್ಪಡಬೇಕಾಗಿರುವ ಯಾರನ್ನೂ ಇಲ್ಲಿ ನಾನು ಕಾಣುತ್ತಿಲ್ಲ! ನೀನು ಏಕೆ ತ್ವರೆಮಾಡಿ ಮಹಾಖಡ್ಗವನ್ನು ಹಿಡಿದಿರುವೆ? ನಿನ್ನನ್ನೇ ಪ್ರಶ್ನಿಸುತ್ತಿದ್ದೇನೆ. ನೀನೇನು ಮಾಡುತ್ತಿರುವೆ? ಕ್ರುದ್ಧನಾಗಿ ಏಕೆ ಖಡ್ಗವನ್ನು ಎಳೆದಿರುವೆ? ಉತ್ತರಿಸು!”
ಕೃಷ್ಣನು ಹೀಗೆ ಹೇಳಲು ಅರ್ಜುನನು ಯುಧಿಷ್ಠಿರನನ್ನೇ ದುರುಗುಟ್ಟಿ ನೋಡುತ್ತಾ, ಕ್ರುದ್ಧಸರ್ಪದಂತೆ ಭುಸುಗುಟ್ಟುತ್ತಾ ಗೋವಿಂದನಿಗೆ ಹೇಳಿದನು: “ಇತರನಿಗೆ ಗಾಂಡೀವವನ್ನು ಕೊಟ್ಟುಬಿಡು! ಎಂದು ಯಾರು ನನಗೆ ಹೇಳುತ್ತಾರೋ ಅವರ ಶಿರಸ್ಸನ್ನು ತುಂಡರಿಸುತ್ತೇನೆ ಎನ್ನುವುದು ನನ್ನ ಅಂತರಂಗದ ವ್ರತ! ನಿನ್ನ ಸಮಕ್ಷಮದಲ್ಲಿಯೇ ರಾಜನು ನನಗೆ ಇದನ್ನು ಹೇಳಿದನು. ಅದನ್ನು ನಾನು ಕ್ಷಮಿಸಲಾರೆನು! ಆದುದರಿಂದ ನಾನು ಧರ್ಮಭೀರುಕನಾದ ಈ ರಾಜನನ್ನು ವಧಿಸುತ್ತೇನೆ! ಈ ನರಸತ್ತಮನನ್ನು ಸಂಹರಿಸಿ ಪ್ರತಿಜ್ಞೆಯನ್ನು ಪಾಲಿಸುತ್ತೇನೆ! ಇದಕ್ಕಾಗಿಯೇ ನಾನು ಖಡ್ಗವನ್ನು ಹಿಡಿದಿದ್ದೇನೆ! ಯುಧಿಷ್ಠಿರನನ್ನು ಸಂಹರಿಸಿ ನಾನು ಸತ್ಯಕ್ಕೆ ಅನೃಣಿಯಾಗುತ್ತೇನೆ. ಮತ್ತು ಶೋಕರಹಿತನೂ, ಚಿಂತಾರಹಿತನೂ ಆಗುತ್ತೇನೆ! ಈ ಸಮಯವು ಬಂದೊದಗಿರುವಾಗ ಬೇರೆ ಏನನ್ನಾದರೂ ಮಾಡಬೇಕೆಂದು ನಿನಗನ್ನಿಸುತ್ತದೆಯೇ? ನಿನಗೆ ಜಗತ್ತಿನಲ್ಲಿ ನಡೆದಿರುವ ಮತ್ತು ನಡೆಯಲಿರುವ ಎಲ್ಲವೂ ತಿಳಿದಿದೆ. ಆದುದರಿಂದ ನೀನು ನನಗೇನು ಹೇಳುತ್ತೀಯೋ ಅದರಂತೆಯೇ ಮಾಡುತ್ತೇನೆ!”
ಕೃಷ್ಣನು ಹೇಳಿದನು: “ಪಾರ್ಥ! ನೀನು ವೃದ್ಧರ ಸೇವೆಯನ್ನು ಮಾಡಲಿಲ್ಲವೆಂದು ಇದರಿಂದ ನನಗೆ ತಿಳಿಯುತ್ತಿದೆ. ಕಾಲವಲ್ಲದ ಕಾಲದಲ್ಲಿ ನೀನು ದುಡುಕಿ ಇದನ್ನು ಮಾಡಲು ಹೊರಟಿರುವೆಯಲ್ಲ! ಧರ್ಮವಿಭಾಗಗಳನ್ನು ತಿಳಿದಿರುವವನು ಈ ರೀತಿ ಮಾಡುವುದಿಲ್ಲ! ಮಾಡಬಾರದುದನ್ನು ಮಾಡಬೇಕಾದುದರೊಡನೆ ಮತ್ತು ಮಾಡಬೇಕಾದುದನ್ನು ಮಾಡದಿರುವುದರೊಡನೆ ಸೇರಿಸಿಕೊಂಡು ಗೊಂದಲಕ್ಕೀಡಾಗುವವನು ಪುರುಷಾಧಮ. ಧರ್ಮವನ್ನು ಅನುಸರಿಸುತ್ತಾ ಅದರಲ್ಲಿಯೇ ಸಮುಪಸ್ಥಿತರಾಗಿರುವ ಗುರುಗಳು ಅವುಗಳನ್ನು ಸಂಕ್ಷಿಪ್ತವಾಗಿಯೂ ವಿಸ್ತಾರವಾಗಿಯೂ ತಿಳಿಸಿದ್ದಾರೆ. ನಿಶ್ಚಯವಾಗಿಯೂ ಅದು ನಿನಗೆ ತಿಳಿದಿಲ್ಲ! ಕಾರ್ಯ-ಅಕಾರ್ಯಗಳ ಕುರಿತು ನಿರ್ಣಯಿಸುವುದರಲ್ಲಿ ನಿಶ್ಚಯಜ್ಞಾನವಿಲ್ಲದವನು ಅವಶನಾಗಿ ನಿನ್ನಂತೆ ಮೂಢನಾಗಿ ಭ್ರಾಂತನಾಗುತ್ತಾನೆ. ಕಾರ್ಯ-ಅಕಾರ್ಯಗಳ ಕುರಿತು ತಿಳಿದುಕೊಳ್ಳುವುದು ಎಂದಿಗೂ ಸುಲಭಸಾಧ್ಯವಲ್ಲ. ಇವೆಲ್ಲವುಗಳೂ ಶ್ರುತಿಗಳಿಂದ ತಿಳಿಯುತ್ತವೆ. ಆದರೆ ಇವುಗಳು ನಿನಗೆ ತಿಳಿದಿಲ್ಲ. ನೀನು ಅಜ್ಞಾನದಿಂದ ಧರ್ಮವನ್ನು ತಿಳಿದುಕೊಂಡಿರುವೆಯೆಂದೂ ಧರ್ಮವನ್ನು ರಕ್ಷಿಸುತ್ತಿರುವೆಯೆಂದೂ ಭಾವಿಸಿ ಪ್ರಾಣಿವಧೆಗೆ ತೊಡಗಿರುವೆ! ಧಾರ್ಮಿಕನಾದ ನಿನಗೆ ಇದು ತಿಳಿಯುತ್ತಿಲ್ಲ! ಪ್ರಾಣಿಗಳನ್ನು ವಧಿಸದೇ ಇರುವುದು ಎಲ್ಲಕ್ಕಿಂತ ಪರಮವಾದುದೆಂದು ನನ್ನ ಮತ. ಸುಳ್ಳನ್ನಾದರೂ ಆಡಬಹುದು. ಆದರೆ ಹಿಂಸೆಯನ್ನು ಎಂದೂ ಮಾಡಬಾರದು! ಅನ್ಯ ಸಾಮಾನ್ಯ ಪುರುಷನಂತೆ ನೀನು ಹೇಗೆ ನಿನ್ನ ಜ್ಯೇಷ್ಠ ಭ್ರಾತು ಧರ್ಮಕೋವಿದ ರಾಜನನ್ನು ಕೊಲ್ಲುತ್ತೀಯೆ? ಯುದ್ಧಮಾಡದೇ ಇರುವವನ, ಶಸ್ತ್ರಗಳನ್ನು ಹಿಡಿಯದೇ ಇರುವವನ, ಪರಾಙ್ಮುಖನಾಗಿ ಓಡಿಹೋಗುತ್ತಿರುವವನ, ಶರಣುಬಂದಿರುವವನ, ಕೈಮುಗಿದು ಬೇಡಿಕೊಳ್ಳುತ್ತಿರುವವನ ವಧೆಯು ತಿಳಿದವರ ಗೌರವಪಾತ್ರವಲ್ಲ! ನೀನು ಹಿಂದೆ ಬಾಲಕನಾಗಿರುವಾಗಲೇ ಈ ವ್ರತವನ್ನು ಕೈಗೊಂಡಿರುವೆ. ಆದುದರಿಂದ ಮೌಢ್ಯತನದಿಂದ ಈ ಅಧರ್ಮಸಂಯುಕ್ತವಾದ ಕಾರ್ಯದಲ್ಲಿ ತೊಡಗಿರುವೆ! ತಿಳಿಯಲು ಅಸಾಧ್ಯವಾದ, ಅನುಸರಿಸಲು ಕಷ್ಟಕರವಾದ ಧರ್ಮದ ಸೂಕ್ಷ್ಮಗತಿಯನ್ನು ತಿಳಿಯದೇ ನೀನು ಗುರುವಾದ ಇವನನ್ನು ಕೊಂದು ಹೇಗೆ ಧರ್ಮವನ್ನು ಅನುಸರಿಸುತ್ತಿರುವೆಯೆಂದು ತಿಳಿದುಕೊಂಡಿದ್ದೀಯೆ? ಇಗೋ ಈ ಧರ್ಮರಹಸ್ಯವನ್ನು ಹೇಳುತ್ತೇನೆ. ಧರ್ಮಜ್ಞನಾದ ಭೀಷ್ಮ ಅಥವಾ ಯುಧಿಷ್ಠಿರ, ವಿದುರ, ಅಥವಾ ಕುಂತೀ ಇವರು ಏನನ್ನು ಹೇಳುತ್ತಾರೋ ಅದನ್ನೇ ನಾನು ನಿನಗೆ ಹೇಳುತ್ತೇನೆ. ಇದನ್ನು ಏಕಾಗ್ರತೆಯಿಂದ ಕೇಳು! ಸತ್ಯವನ್ನಾಡುವುದೇ ಒಳ್ಳೆಯದು. ಸತ್ಯಕ್ಕಿಂತಲೂ ಶ್ರೇಷ್ಠವಾದುದು ಇಲ್ಲ. ಆದರೆ ಸತ್ಯವನ್ನು ಅನುಷ್ಠಾನಮಾಡುವ ತತ್ತ್ವವನ್ನು ತಿಳಿದುಕೊಳ್ಳುವುದು ಕಷ್ಟ. ಯಾವಾಗ ಸುಳ್ಳು ಸತ್ಯದ ಪರಿಣಾಮವನ್ನು ನೀಡುತ್ತದೆಯೋ ಆಗ ಸುಳ್ಳನ್ನು ಹೇಳಬೇಕಾಗುತ್ತದೆ. ಹಾಗೆಯೇ ಯಾವಾಗ ಸತ್ಯವು ಸುಳ್ಳಿನ ಪರಿಣಾಮವನ್ನು ನೀಡುತ್ತದೆಯೋ ಆಗ ಸತ್ಯವನ್ನು ಹೇಳಬಾರದು. ಪ್ರಾಣಹೋಗುವ ಮತ್ತು ವಿವಾಹಗಳ ಸಮಯದಲ್ಲಿ – ಯಾವಾಗ ಸುಳ್ಳು ಸತ್ಯದ ಪರಿಣಾಮವನ್ನು ಮತ್ತು ಸತ್ಯವು ಸುಳ್ಳಿನ ಪರಿಣಾಮವನ್ನು ನೀಡುತ್ತದೆಯೋ ಆಗ - ಸುಳ್ಳನ್ನು ಹೇಳಬಹುದು. ಸತ್ಯದಲ್ಲಿ ಅನುಷ್ಠಿತನಾಗಿರುವ ಬಾಲಕನು ಅದನ್ನು ಇದೇರೀತಿ ಕಾಣುತ್ತಾನೆ. ಸತ್ಯ ಮತ್ತು ಸುಳ್ಳುಗಳನ್ನು ಹಾಗೆ ನಿರ್ಧರಿಸುವವನು ಧರ್ಮವಿದುವೆನಿಸಿಕೊಳ್ಳುತ್ತಾನೆ. ಅಂಧಪ್ರಾಣಿಯನ್ನು ವಧಿಸಿದ ಬಲಾಕದಂತೆ ಸುದಾರುಣ ಪುರುಷನಾಗಿದ್ದರೂ ಕೃತಪ್ರಜ್ಞನಾಗಿದ್ದರೆ ಮಹಾಪುಣ್ಯವನ್ನು ಪಡೆಯಬಲ್ಲ ಎನ್ನುವುದರಲ್ಲಿ ಆಶ್ಚರ್ಯವಾದರೂ ಏನಿದೆ? ನದೀತೀರದ್ದಲ್ಲಿರುವ ಕೌಶಿಕನಂತೆ ಧರ್ಮವನ್ನು ಮಾಡಲು ಬಯಸುತ್ತಿದ್ದರೂ ಕೌಶಿಕನಂತೆ ಮೂಢನೂ ಅಪಂಡಿತನೂ ಆಗಿದ್ದರೆ ಮಹಾ ಪಾಪವನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಆಶ್ಚರ್ಯವೇನಿದೆ?”
ಅರ್ಜುನನು ಹೇಳಿದನು: “ಭಗವನ್! ನನಗೆ ತಿಳಿಯುವಂತೆ ಬಲಾಕ-ಅಂಧ ಮತ್ತು ನದೀತೀರದ ಕೌಶಿಕನಿಗೆ ಸಂಬಧಿಸಿದ ಕಥೆಯನ್ನು ಹೇಳು!”
ಕೃಷ್ಣನು ಹೇಳಿದನು: “ಭಾರತ! ಒಂದು ಕಾಲದಲ್ಲಿ ಬಲಾಕ ಎಂಬ ಹೆಸರಿನ ಮೃಗವ್ಯಾಧನಿದ್ದನು. ಅವನು ಪತ್ನಿ-ಪುತ್ರರಿಗೋಸ್ಕರ ಮೃಗಗಳನ್ನು ಸಂಹರಿಸುತ್ತಿದ್ದನೇ ಹೊರತು ಕೊಲ್ಲಬೇಕೆಂಬ ಕಾಮನೆಯಿಂದ ಬೇಟೆಯಾಡುತ್ತಿರಲಿಲ್ಲ. ಅಂಧರಾದ ಅವನ ತಾಯಿ-ತಂದೆ ಮತ್ತು ಅನ್ಯ ಸೇವಕರು ಅವನ ಆಶ್ರಯದಲ್ಲಿದ್ದರು. ನಿತ್ಯವೂ ಸ್ವಧರ್ಮನಿರತನಾಗಿದ್ದ ಅವನು ಸತ್ಯಭಾಷಿಯೂ ಅನಸೂಯಕನೂ ಆಗಿದ್ದನು. ಒಂದು ದಿನ ಅವನು ಮೃಗಗಳಿಗಾಗಿ ಅಲೆದಾಡುತ್ತಿರುವಾಗ ಕುರುಡು ಮಾಂಸಾಹಾರೀ ಪ್ರಾಣಿಯನ್ನು ಕಂಡನು. ಹಿಂದೆಂದೂ ನೋಡಿರದ ಆ ಪ್ರಾಣಿಯನ್ನು ಅವನು ಸಂಹರಿಸಿದನು. ಕೂಡಲೇ ಆಕಾಶದಿಂದ ಪುಷ್ಪವೃಷ್ಟಿಯಾಯಿತು. ಮನೋರಮೆಯರಾದ ಅಪ್ಸರೆಯರು ಗೀತವಾದ್ಯಗಳ ನಾದದೊಂದಿಗೆ ವಿಮಾನದಿಂದ ಆಗಮಿಸಿ ಮೃಗವ್ಯಾಧನನ್ನು ಸ್ವರ್ಗಕ್ಕೆ ಕೊಂಡೊಯ್ದರು. ಆ ಪ್ರಾಣಿಯು ಹಿಂದೆ ಸರ್ವಭೂತಗಳ ವಿನಾಶಕ್ಕಾಗಿ ತಪಸ್ಸನ್ನು ತಪಿಸಿ ವರವನ್ನು ಪಡೆದಿತ್ತು. ಆಗ ಸ್ವಯಂಭುವು ಅದನ್ನು ಅಂಧನನ್ನಾಗಿ ಮಾಡಿದ್ದನು. ಸರ್ವಭೂತಗಳ ವಿನಾಶಕಾರ್ಯವನ್ನು ನಿಶ್ಚಯಿಸಿದ್ದ ಅದನ್ನು ಸಂಹರಿಸಿ ಬಲಾಕನು ಸ್ವರ್ಗಕ್ಕೆ ಹೋದನು. ಹೀಗೆ ಧರ್ಮವನ್ನು ತಿಳಿಯುವುದು ಕಷ್ಟ!
“ಬಹುಶ್ರುತನಲ್ಲದ ಕೌಶಿಕನೆಂಬ ವಿಪ್ರತಪಸ್ವಿಯು ನದಿಗಳ ಸಂಗಮಗ್ರಾಮದ ಹತ್ತಿರದಲ್ಲಿಯೇ ವಾಸಿಸುತ್ತಿದ್ದನು. ಸದಾ ನಾನು ಸತ್ಯವನ್ನೇ ಹೇಳುತ್ತೇನೆ ಎನ್ನುವುದು ಅವನ ವ್ರತವಾಗಿತ್ತು. ಅದರಿಂದ ಅವನು ಸತ್ಯವಾದಿಯೆಂದು ವಿಖ್ಯಾತನಾಗಿದ್ದನು. ಒಮ್ಮೆ ಕಳ್ಳರ ಭಯದಿಂದ ಕೆಲವರು ಆ ವನವನ್ನು ಪ್ರವೇಶಿಸಿದರು. ಕ್ರೂರ ಕಳ್ಳರೂ ಕೂಡ ಅವರನ್ನು ಹುಡುಕುತ್ತಾ ಅಲ್ಲಿಗೆ ಬಂದರು. ಕಳ್ಳರು ಸತ್ಯವಾದೀ ಕೌಶಿಕನಲ್ಲಿಗೆ ಬಂದು ಕೇಳಿದರು: “ಭಗವನ್! ಈ ಮಾರ್ಗದಲ್ಲಿ ಬಂದಿದ್ದ ಅನೇಕ ಜನರು ಯಾವ ಮಾರ್ಗದಲ್ಲಿ ಹೋದರು? ಸತ್ಯದಿಂದ ನಿನ್ನನ್ನು ಕೇಳುತ್ತಿದ್ದೇವೆ. ಒಂದುವೇಳೆ ಇದು ತಿಳಿದಿದ್ದರೆ ನಮಗೆ ಹೇಳು!” ಹಾಗೆ ಕೇಳಿದ ಅವರಿಗೆ ಕೌಶಿಕನು ಸತ್ಯವಚನವನ್ನೇ ನುಡಿಯುತ್ತಾ “ಅನೇಕ ವೃಕ್ಷ-ಲತೆ-ಪೊದರುಗಳಿಂದ ಕೂಡಿರುವ ಇದೇ ವನದಲ್ಲಿ ಅವರು ಅಡಗಿದ್ದಾರೆ!” ಎಂದನು. ಆಗ ಆ ಕ್ರೂರರು ಅವರನ್ನು ಹುಡುಕಿ ಕೊಂದರು. ಅವನ ಆ ಅಧರ್ಮದ ಮಹಾಮಾತಿನಿಂದಾಗಿ ಸೂಕ್ಷ್ಮಧರ್ಮವನ್ನು ತಿಳಿಯದಿದ್ದ ಕೌಶಿಕನು ಸುಕಷ್ಟಕರವಾದ ನರಕಕ್ಕೆ ಹೋದನು.
“ಹೆಚ್ಚು ಶಾಸ್ತ್ರಜ್ಞಾನವಿಲ್ಲದವನು ಧರ್ಮಗಳ ವಿಭಾಗಗಳನ್ನು ತಿಳಿಯದ ಮೂಢನು ವೃದ್ಧರ ಸೇವೆಮಾಡಿ ಸಂದೇಹವನ್ನು ನಿವಾರಿಸಿಕೊಳ್ಳದೇ ಇದ್ದರೆ ಮಹಾ ಕಷ್ಟಗಳಿಗೆ ಪಾತ್ರನಾಗುತ್ತಾನೆ. ಧರ್ಮದ ಲಕ್ಷಣ-ಉದ್ದೇಶಗಳು ಏನೂ ಆಗಬಹುದು. ಅದರ ಪರಮಜ್ಞಾನವು ದುಷ್ಕರವಾದುದು. ಕೆಲವರು ಇದನ್ನು ತರ್ಕದಿಂದ ಮತ್ತು ಇನ್ನು ಹಲವರು ಇದು ಶೃತಿಧರ್ಮವೆಂದು ಹೇಳುತ್ತಾರೆ. ಇರುವವುಗಳ ಏಳ್ಗೆಗಾಗಿ ಮಾಡಲ್ಪಟ್ಟ ಧರ್ಮಪ್ರವಚನವನ್ನಷ್ಟನ್ನೇ ನಿನಗೆ ಹೇಳುತ್ತೇನೆ. ಏಕೆಂದರೆ ಎಲ್ಲವನ್ನೂ ತಿಳಿಯಲು ಅಸಾಧ್ಯವು. ಧಾರಣೆಮಾಡುವುದರಿಂದ ಧರ್ಮವೆನ್ನುತ್ತಾರೆ. ಧರ್ಮವು ಪ್ರಜೆಗಳನ್ನು ಉದ್ಧರಿಸುತ್ತದೆ. ಯಾವುದು ಧಾರಣಸಂಯುಕ್ತವಾದುದೋ ಅದೇ ಧರ್ಮವೆಂದು ನಿಶ್ಚಯಿಸಲ್ಪಡುತ್ತದೆ. ಯಾರು ಅನ್ಯಾಯದಿಂದ ಇತರರದ್ದನ್ನು ಅಪಹರಿಸಲು ಬಯಸುತ್ತಾರೋ ಅವರೊಂದಿಗೆ ಏನನ್ನೂ ಮಾತನಾಡದೇ ಬಿಡುಗಡೆಹೊಂದಬೇಕು. ಅವರೊಂದಿಗೆ ಎಂದೂ ಮಾತನಾಡಬಾರದು. ಆದರೆ ಮಾತನಾಡಲೇಬೇಕಾಗಿಬಂದರೆ ಅಥವಾ ಮಾತನಾಡದೇ ಇದ್ದರೆ ಶಂಕೆಗೊಳಗಾಗುವುದಾದರೆ ಅಲ್ಲಿ ಸುಳ್ಳನ್ನು ಹೇಳುವುದೇ ಶ್ರೇಯಸ್ಕರವಾದುದು. ಅಲ್ಲಿ ಸುಳ್ಳನ್ನೂ ಸತ್ಯವೆಂದು ವಿಚಾರಿಸಲಾಗುತ್ತದೆ. ಪ್ರಾಣಹೋಗುವ ಸಂದರ್ಭದಲ್ಲಿ ಅಥವಾ ವಿವಾಹ ಸಂದರ್ಭದಲ್ಲಿ ಅಥವಾ ಸರ್ವ ಬಾಂಧವರ ಅಥವಾ ಧನಕ್ಷಯದ ಸಮಯದಲ್ಲಿ, ಮತ್ತು ಪರಿಹಾಸ-ವಿನೋದಗಳ ಸಂದರ್ಭದಲ್ಲಿ ಹೇಳಿದ ಸುಳ್ಳು ಸುಳ್ಳಾಗಿರುವುದಿಲ್ಲ. ಧರ್ವತತ್ವಾರ್ಥದರ್ಶಿಗಳು ಇದರಲ್ಲಿ ಅಧರ್ಮವನ್ನು ಕಾಣುವುದಿಲ್ಲ. ಇನ್ನೊಬ್ಬರ ಬಂಧನದಲ್ಲಿರುವಾಗ ನೂರು ಸುಳ್ಳನ್ನು ಹೇಳಿಯಾದರೂ ಬಿಡಿಸಿಕೊಳ್ಳಬೇಕು. ಅಲ್ಲಿ ಸುಳ್ಳನ್ನು ಹೇಳುವುದು ಶ್ರೇಯಸ್ಕರವಾಗುತ್ತದೆ. ಸತ್ಯವನ್ನು ಹೇಳುವುದು ಅವಿಚಾರಿತವೆನಿಸಿಕೊಳ್ಳುತ್ತದೆ. ಅವರಿಗೆ ಹಣವನ್ನಿತ್ತು ಮುಕ್ತಿಹೊಂದಲು ಸಾಧ್ಯವಿದ್ದರೂ ಹಣವನ್ನು ಎಂದೂ ನೀಡಬಾರದು. ಏಕೆಂದರೆ ಪಾಪಿಗಳಿಗೆ ಧನವನ್ನಿತ್ತರೆ ಅದು ಕೊಡುವವನನ್ನೂ ಪೀಡಿಸುತ್ತದೆ. ಆದುದರಿಂದ ಧರ್ಮಕ್ಕೋಸ್ಕರವಾಗಿ ಅನೃತವನ್ನು ಹೇಳಿದರೂ ಅದು ಅನೃತವೆಂದೆನಿಸಿಕೊಳ್ಳುವುದಿಲ್ಲ. ಹೀಗೆ ಯಥಾವಿಧಿಯಾಗಿ ಧರ್ಮದ ಲಕ್ಷಣೋದ್ದೇಶಗಳನ್ನು ಸಂಕ್ಷಿಪ್ತವಾಗಿ ಹೇಳಿದ್ದೇನೆ. ಪಾರ್ಥ! ಇದನ್ನು ಕೇಳಿ ಯುಧಿಷ್ಠಿರನು ವಧ್ಯನೇ ಎನ್ನುವುದನ್ನು ಹೇಳು!”
ಅರ್ಜುನನು ಹೇಳಿದನು: “ನಮಗೆ ನೀನು ಹೇಳಿದ ಈ ಹಿತವಚನವು ಮಹಾಪ್ರಾಜ್ಞರು ಹೇಳುವಂತೆಯೇ ಇದೆ. ಕೃಷ್ಣ! ನೀನು ನಮ್ಮ ತಾಯಿಯ ಸಮನಾಗಿರುವೆ. ತಂದೆಯ ಸಮನೂ ಆಗಿರುವೆ. ನಮ್ಮ ಪರಮ ಗತಿಯೂ ಆಗಿರುವೆ. ನಿನ್ನ ಈ ಮಾತು ಅದ್ಭುತವಾದುದು! ನಿನಗೆ ತಿಳಿಯದೇ ಇರುವುದು ಈ ಮೂರು ಲೋಕಗಳಲ್ಲಿಯೂ ಯಾವುದೂ ಇಲ್ಲ. ಆದುದರಿಂದ ನಿನಗೆ ಸರ್ವ ಪರಮ ಧರ್ಮವೂ ಯಥಾತಥವಾಗಿ ತಿಳಿದಿದೆ. ಧರ್ಮರಾಜ ಯುಧಿಷ್ಠಿರನು ಅವಧ್ಯನೆಂದು ಮನ್ನಿಸುತ್ತೇನೆ. ಆದರೆ ಈಗ ಬಂದೊದಗಿರುವ ಸಂದರ್ಭದಲ್ಲಿ ಏನನ್ನಾದರೂ ಅನುಗ್ರಹಿಸಿ ಹೇಳು. ನನ್ನ ಹೃದಯದಲ್ಲಿ ನೆಲಸಿರುವ ಈ ಸಂದೇಹವನ್ನು ಕೇಳು. ನನ್ನ ಈ ವ್ರತವು ನಿನಗೆ ತಿಳಿದೇ ಇದೆ. ಮನುಷ್ಯರಲ್ಲಿ ಯಾರಾದರೂ ನನಗೆ “ಪಾರ್ಥ! ನಿನಗಿಂತಲೂ ಅಸ್ತ್ರವಿದ್ಯೆಯಲ್ಲಿ ಮತ್ತು ಪ್ರಯತ್ನದಲ್ಲಿ ವಿಶಿಷ್ಟನಾಗಿರುವನೋ ಅಂತಹ ಇನ್ನೊಬ್ಬನೆಗೆ ನಿನ್ನ ಗಾಂಡೀವವನ್ನು ಕೊಟ್ಟುಬಿಡು!” ಎನ್ನುವವನನ್ನು ನಾನು ಕೊಲ್ಲುತ್ತೇನೆ ಎನ್ನುವುದು ನನ್ನ ಪ್ರತಿಜ್ಞೆ. ಭೀಮನೂ ಕೂಡ ತನ್ನನ್ನು ಕೂಬರನೆಂದು ಕರೆಯುವವನನ್ನು ಕೊಲ್ಲುತ್ತೇನೆ ಎಂದು ಹೇಳಿಕೊಂಡಿದ್ದಾನೆ. ನಿನ್ನ ಸಮಕ್ಷಮದಲ್ಲಿಯೇ ರಾಜನು ನನಗೆ ನಿನಗಿಂತಲೂ ಉತ್ತಮ ಕಾರ್ಯಮಾಡುವವನಿಗೆ ಧನುಸ್ಸನ್ನು ಕೊಟ್ಟುಬಿಡು ಎಂದು ಹೇಳಿದ್ದಾನೆ. ಇವನನ್ನು ಸಂಹರಿಸಿ ನಾನು ಅಲ್ಪಕಾಲವೂ ಕೂಡ ಇರಲಾರೆನು. ಲೋಕಗಳಿಗೇ ತಿಳಿದಿರುವ ನನ್ನ ಈ ಪ್ರತಿಜ್ಞೆಯು ಸತ್ಯವಾಗುವಂತೆ ಮತ್ತು ಈ ಪಾಂಡವನನ್ನು ನಾನು ಜೀವಂತವುಳಿಸುವಂತೆ ನೀನು ನನಗೆ ಬುದ್ಧಿಯನ್ನು ನೀಡಬೇಕು!”
ವಾಸುದೇವನು ಹೇಳಿದನು: “ರಣದಲ್ಲಿ ಕರ್ಣನ ನಿಶಿತ ಬಾಣಸಂಘಗಳಿಂದ ಗಾಯಗೊಂಡು ರಾಜನು ಬಳಲಿದ್ದಾನೆ. ಪಾರ್ಥ! ಇಂದು ರಣದಲ್ಲಿ ಕರ್ಣನು ದ್ಯೂತದ ಪಣವಾಗಿರುವುದರಿಂದ ನಿನ್ನಲ್ಲಿ ಅವನು ಕಠೋರವಾಗಿ ಮಾತನ್ನಾಡಿದ್ದಾನೆ. ಕರ್ಣನು ಹತನಾದನೆಂದರೆ ಕುರುಗಳು ಸೋತಂತೆ ಎಂದು ಪಾರ್ಥಿವ ಧರ್ಮಪುತ್ರನು ಯೋಚಿಸಿರುವನು. ಯಾರಿಗೆ ಮಹಾ ಅಪಮಾನವುಂಟಾಗುತ್ತದೆಯೋ ಅವನು ಜೀವಂತವಿದ್ದರೂ ಮೃತನಾದಂತೆ ಎಂದು ಹೇಳುತ್ತಾರೆ. ನಿನ್ನಿಂದ, ಭೀಮಸೇನನಿಂದ, ಹಾಗೆಯೇ ಯಮಳರಿಂದ, ಲೋಕದ ವೃದ್ಧರಿಂದ ಮತ್ತು ಪುರುಷಪ್ರವೀರರಿಂದ ಸದೈವ ಮಾನಿತನಾಗಿರುವ ಈ ಪಾರ್ಥಿವನನ್ನು ನೀನು ಮಾತಿನಿಂದ ಅವಹೇಳನೆ ಮಾಡು. “ಭವಂತಂ” ಎನ್ನುವುದರ ಬದಲಾಗಿ ನೀನು ಯುಧಿಷ್ಠಿರನನ್ನು “ತ್ವಂ” ಎಂದು ಸಂಬೋಧಿಸು. ಹಿರಿಯವನಿಗೆ “ತ್ವಂ” ಎಂದು ಹೇಳಿದರೂ ಅವನು ಹತನಾದಂತೆ! ಯುಧಿಷ್ಠಿರನ ಕುರಿತು ಹೀಗೆ ನಡೆದುಕೋ! ಅವನನ್ನು ಅಧರ್ಮಯುಕ್ತವಾಗಿ ಸಂಬೋಧಿಸು! ಅಥರ್ವಾಂಗೀರಸೀ ಎಂಬ ಈ ಶ್ರುತಿಯು ಶ್ರುತಿಗಳಲ್ಲಿಯೇ ಉತ್ತಮವಾದುದು. ಶ್ರೇಯಸ್ಸನ್ನು ಬಯಸುವ ನರರು ಸದಾ ವಿಚಾರವನ್ನೇನೂ ಮಾಡದೇ ಹೀಗೆಯೇ ನಡೆದುಕೊಳ್ಳಬೇಕು. ನೀನು ಎಂಬ ಸಂಬೋಧಯುಕ್ತವಾಗಿ ಮಾತನಾಡಿ ಧರ್ಮರಾಜನನ್ನು ವಧಿಸು. ಅನಂತರ ಪಾರ್ಥನ ಪಾದಗಳಿಗೆ ನಮಸ್ಕರಿಸಿ ಕ್ಷಮೆಯನ್ನು ಕೇಳು ಮತ್ತು ಅವನೊಡನೆ ಸಾಂತ್ವಪೂರ್ವಕವಾಗಿ ಮಾತನಾಡು! ಪ್ರಾಜ್ಞನಾದ ನಿನ್ನ ಭ್ರಾತಾ ರಾಜನು ನಿನ್ನ ಮೇಲೆ ಎಂದೂ ಕುಪಿತನಾಗುವುದಿಲ್ಲ. ಹೀಗೆ ಪ್ರತಿಜ್ಞೆಯನ್ನು ಸುಳ್ಳಾಗಿಸುವ ಮತ್ತು ಅಣ್ಣನ ವಧೆಯ ಕಷ್ಟದಿಂದ ಮುಕ್ತನಾಗಿ ಹೃಷ್ಟನಾಗಿ ಸೂತಪುತ್ರ ಕರ್ಣನನ್ನು ಸಂಹರಿಸು!”
ಜನಾರ್ದನನು ಹೀಗೆ ಹೇಳಲು ಪಾರ್ಥನು ತನ್ನ ಸುಹೃದನನ್ನು ಪ್ರಶಂಸಿದನು. ಅನಂತರ ಅರ್ಜುನನು ಹಿಂದೆಂದೂ ಹೇಳದೇ ಇದ್ದ ಅತ್ಯಂತ ನಿಷ್ಠುರವಾದ ಮಾತುಗಳನ್ನು, ತನಗಿಷ್ಟವಿಲ್ಲದಿದ್ದರೂ ಬಲವಂತದಿಂದ, ಆಡಿದನು: “ರಾಜನ್! ತುಂಬಾಮಾತನಾಡುತ್ತಿರುವೆ! ಮಾತನಾಡಬೇಡ! ರಣಭೂಮಿಯಿಂದ ಅರ್ಧಕ್ರೋಶಮಾತ್ರ ದೂರದಲ್ಲಿಯೂ ನೀನು ನಿಲ್ಲಲಾರೆ! ಸರ್ವಯೋಧಪ್ರವೀರರೊಡನೆಯೂ ಯುದ್ಧಮಾಡುತ್ತಿರುವ ಭೀಮನು ಮಾತ್ರ ನನ್ನನ್ನು ನಿಂದಿಸಲು ಅರ್ಹನಾಗಿರುತ್ತಾನೆ! ಸಮಯಸಿಕ್ಕಾಗಲೆಲ್ಲಾ ರಣದಲ್ಲಿ ಶತ್ರುಗಳನ್ನು ಬಹಳವಾಗಿ ಪೀಡಿಸಿ, ಶೂರ ಪೃಥಿವೀಪತಿಗಳನ್ನು ಸಂಹರಿಸಿ, ಸಾವಿರಕ್ಕೂ ಅಧಿಕ ಸಂಖ್ಯೆಗಳಲ್ಲಿ ಆನೆಗಳನ್ನು ಸಂಹರಿಸಿ ತುಮುಲ ಸಿಂಹನಾದವನ್ನು ಮಾಡಿ ಆ ವೀರನು ಯಾವ ಸುದುಷ್ಕರ ಕರ್ಮಗಳನ್ನು ಮಾಡುತ್ತಾನೋ ಅಂಥಹ ಕರ್ಮಗಳನ್ನು ನೀನು ಎಂದೂ ಮಾಡಲು ಸಮರ್ಥನಿಲ್ಲ! ರಣದಲ್ಲಿ ಅವನು ರಥದಿಂದ ಹಾರಿ ತನ್ನ ಗದೆಯಿಂದ ಪರಮಹಿಂಸೆಯನ್ನಿತ್ತು ಕುದುರೆ-ಮನುಷ್ಯ-ಆನೆಗಳನ್ನು ಸಂಹರಿಸುತ್ತಿದ್ದಾನೆ! ಶ್ರೇಷ್ಠ ಖಡ್ಗದಿಂದ ರಥ-ಅಶ್ವ-ಕುಂಜರಗಳನ್ನು ಮತ್ತು ಹಾಗೆಯೇ ಧನುಸ್ಸಿನಿಂದ ರಥಾಂಗಗಳನ್ನೂ ಅರಿಗಳನ್ನೂ ಸಂಹರಿಸಿ ಆ ಶತಮನ್ಯು ಮಿಕ್ರಮನು ಪುನಃ ಎರಡೂ ಪಾದಗಳಿಂದ ತುಳಿದು ಅಹಿತರನ್ನು ಸಂಹರಿಸುತ್ತಿದ್ದಾನೆ. ಮಹಾಬಲ ವೈಶ್ರವಣ ಮತ್ತು ಅಂತಕನಂತಿರುವ ಅವನು ಪ್ರಯತ್ನಪಟ್ಟು ಯಥಾರ್ಹರಾದ ಶತ್ರುಗಳನ್ನು ಸಂಹರಿಸುತ್ತಿದ್ದಾನೆ. ಅಂತಹ ಭೀಮಸೇನನು ನನ್ನನ್ನು ನಿಂದಿಸಲು ಅರ್ಹನಾಗಿದ್ದಾನೆ. ನಿತ್ಯವೂ ಸುಹೃದಯರ ರಕ್ಷಣೆಯಲ್ಲಿರುವ ನಿನಗೆ ಆ ಅರ್ಹತೆಯಿಲ್ಲ! ಮಹಾರಥಗಳನ್ನೂ, ಶ್ರೇಷ್ಠ ಸಲಗಗಳನ್ನೂ, ಕುದುರೆಗಳನ್ನೂ, ಮತ್ತು ಪದಾತಿಮುಖ್ಯರನ್ನೂ ತುಳಿದು ಧಾರ್ತರಾಷ್ಟ್ರರಲ್ಲಿ ಮಗ್ನನಾಗಿರುವ ಅರಿಂದಮ ಭೀಮನೊಬ್ಬನೇ ನನ್ನನ್ನು ನಿಂದಿಸಲು ಅರ್ಹನಾಗಿದ್ದಾನೆ! ಸದಾ ಮದೋನ್ಮತ್ತರಾದ ಕಪ್ಪುಮೋಡಗಳಿಂತಿರುವ ಕಲಿಂಗ- ವಂಗ-ಅಂಗ-ನಿಷಾದ-ಮಾಗಧರ ಅನೇಕ ಶತ್ರುಗಳನ್ನು ಯಾರು ಸಂಹರಿಸುತ್ತಿರುವನೋ ಆ ಭೀಮಸೇನನು ಮಾತ್ರ ನನ್ನನ್ನು ಹೀಯಾಳಿಸಲು ಸಮರ್ಥ! ಸಮಯದಲ್ಲಿ ಸುಯುಕ್ತವಾದ ರಥದಲ್ಲಿ ಕುಳಿತು ಧನುಸ್ಸನ್ನು ಎಳೆಯುತ್ತಾ, ಮುಷ್ಟಿ ತುಂಬಾ ಶರಗಳನ್ನು ಹಿಡಿದು ಆ ವೀರನು ಮಹಾಹವದಲ್ಲಿ ಮೇಘವು ಮಳೆಯನ್ನು ಸುರಿಸುವಂತೆ ಶರವರ್ಷಗಳನ್ನು ಸೃಷ್ಟಿಸುತ್ತಾನೆ! ದ್ವಿಜಸತ್ತಮರಿಗೆ ಮಾತೇ ಬಲವೆಂದೂ ಕ್ಷತ್ರಿಯರಿಗೆ ಬಾಹುವೇ ಬಲವೆಂದು ತಿಳಿದವರು ಹೇಳುತ್ತಾರೆ. ನಿಷ್ಠುರ ಮಾತುಗಳೇ ನಿನ್ನ ಬಲವಾಗಿದೆ! ನಾನು ಹೇಗಿದ್ದೇನೆಂಬುದು ನಿನಗೆ ತಿಳಿದೇ ಇದೆ! ಪತ್ನಿಯರು, ಮಕ್ಕಳು ಮತ್ತು ನನ್ನ ಜೀವಾತ್ಮಗಳಿಂದ ನಿತ್ಯವೂ ನಿನಗೆ ಇಷ್ಟವಾದುದನ್ನೇ ಮಾಡಲು ಪ್ರಯತ್ನಿಸುತ್ತಾ ಬಂದಿದ್ದೇನೆ. ಹಾಗಿದ್ದರೂ ನೀನು ನನ್ನನ್ನು ಮಾತಿನ ಬಾಣಗಳಿಂದ ಹಿಂಸಿಸುತ್ತಿರುವೆ! ನಿನ್ನಿಂದಾಗಿ ನಾವು ಸುಖವೇನೆಂಬುದನ್ನೇ ತಿಳಿಯದವರಾಗಿದ್ದೇವೆ! ದ್ರೌಪದಿಯ ಹಾಸಿಗೆಯ ಮೇಲೆ ಸುಖವಾಗಿ ಪವಡಿಸುವ ನೀನು ನಿನಗಾಗಿ ಪ್ರತಿದಿನವೂ ಮಹಾರಥರನ್ನು ಸಂಹರಿಸುವ ನನ್ನನ್ನು ಅಪಮಾನಿಸಬೇಡ! ಅತಿಶಂಕಿಯಾದ ನೀನು ನಿಷ್ಠುರನಾಗಿರುವೆ! ನಿನ್ನಿಂದಾಗಿ ನಾನು ಸುಖವೇನೆನ್ನುವುದನ್ನು ಸ್ವಲ್ಪವೂ ತಿಳಿದಿಲ್ಲ! ನಿನಗೆ ಪ್ರಿಯವನ್ನುಂಟುಮಾಡಲೆಂದು ಯುದ್ಧದಲ್ಲಿ ಸ್ವಯಂ ಸತ್ಯಸಂಧ ಭೀಷ್ಮನು ತನ್ನ ಮೃತ್ಯುವು ಹೇಗೆ ಸಾಧ್ಯವೆನ್ನುವುದನ್ನು ಹೇಳಿದನು. ನನ್ನಿಂದ ರಕ್ಷಿಸಲ್ಪಟ್ಟ ಶಿಖಂಡೀ ದ್ರೌಪದನು ಅವನನ್ನು ಸಂಹರಿಸಿದನು. ಅಹಿತಕರವಾದ ಜೂಜಿನಲ್ಲಿ ನಿರತನಾಗಿದ್ದ ನಿನ್ನ ರಾಜ್ಯಾಧಿಕಾರವನ್ನೂ ನಾನು ಪ್ರಶಂಸಿಸುವುದಿಲ್ಲ. ಅನಾರ್ಯರು ಮಾಡುವಂಥಹ ಪಾಪವನ್ನು ಸ್ವಯಂ ಮಾಡಿ ಅರಿಗಳೊಂದಿಗಿನ ಈ ಯುದ್ಧವನ್ನು ನಮ್ಮಿಂದ ಗೆಲ್ಲಲು ಬಯಸುತ್ತಿರುವೆ! ಅಧರ್ಮವಾದ ಜೂಜಿನಲ್ಲಿ ಅನೇಕ ದೋಷಗಳಿವೆಯೆಂದು ಸಹದೇಹನು ನಿನಗೆ ತಿಳಿಸಿ ಹೇಳಿದ್ದನು. ಆದರೂ ನೀನು ಅಸಾಧುಗಳಿಗೆ ಸರಿಯಾದ ಅದರಲ್ಲಿ ತೊಡಗಿ ನಮ್ಮೆಲ್ಲರನ್ನೂ ಕಷ್ಟಗಳಲ್ಲಿ ಮುಳುಗಿಸಿದ್ದೀಯೆ! ನೀನು ಜೂಜಾಡಿದುದರಿಂದಲೇ ರಾಜ್ಯನಾಶವಾಯಿತು. ನಿನ್ನಿಂದಲೇ ನಮ್ಮ ಈ ವ್ಯಸನವು ಹುಟ್ಟಿಕೊಂಡಿರುವುದು. ಅಲ್ಪಭಾಗ್ಯರಾದ ನಮ್ಮನ್ನು ಪುನಃ ಕ್ರೂರಮಾತುಗಳೆಂಬ ಚಾವಟಿಯಿಂದ ಹೊಡೆದು ಕುಪಿತರನ್ನಾಗಿಸಬೇಡ!”
ಸ್ಥಿತಪ್ರಜ್ಞನಿಗೆ ಈ ರೀತಿಯ ಕಠೋರ ಮಾತುಗಳನ್ನಾಡಿ ಸುರರಾಜಪುತ್ರ ಸವ್ಯಸಾಚಿಯು ಪರಿತಪಿಸಿದನು ಮತ್ತು ನಿಟ್ಟುಸಿರು ಬಿಡುತ್ತಾ ಪುನಃ ಖಡ್ಗವನ್ನು ಒರೆಯಿಂದ ಹೊರತೆಗೆದನು.
ಅಗ ಕೃಷ್ಣನು ಹೇಳಿದನು: “ಇದೇನಿದು? ಪುನಃ ನೀನು ಖಡ್ಗವನ್ನು ಒರೆಯಿಂದ ಹೊರಗೆಳೆಯುತ್ತಿರುವೆ? ಸತ್ಯವೇನೆನ್ನುವುದನ್ನು ಹೇಳು. ನಂತರ ನಾನು ನಿನಗೆ ಉದ್ದೇಶಸಿದ್ಧಿಯಾಗುವಂತಹ ಉಪಾಯವನ್ನು ಹೇಳಿಕೊಡುತ್ತೇನೆ!” ಪುರುಷೋತ್ತಮನು ಹೀಗೆ ಕೇಳಲು ಸುದುಃಖಿತನಾದ ಅರ್ಜುನನು ಕೇಶವನಿಗೆ ಈ ಮಾತನ್ನಾಡಿದನು: “ಮನಸ್ಸಿನಲ್ಲಿಲ್ಲದಿದ್ದರೂ ಈ ಅಹಿತ ಮಾತುಗಳನ್ನಾಡಿದುದಕ್ಕೆ ನಾನು ನನ್ನ ಶರೀರವನ್ನೇ ಸಂಹರಿಸಿಕೊಳ್ಳುತ್ತೇನೆ!”
ಧನಂಜಯನ ಆ ಮಾತುಗಳನ್ನು ಕೇಳಿದ ಕೃಷ್ಣನು ಹೇಳಿದನು: “ಪಾರ್ಥ! ನಿನ್ನ ಮನಃಪೂರ್ವಕವಾಗಿ ನಿನ್ನದೇ ಗುಣಗಳನ್ನು ಹೊಗಳಿಕೋ! ಇದರಿಂದಾಗಿ ನಿನ್ನನ್ನು ನೀನೇ ಕೊಂದುಕೊಂಡಂತೆ ಆಗುತ್ತದೆ!”
“ಹಾಗೆಯೇ ಆಗಲಿ ಕೃಷ್ಣ!” ಎಂದು ಹೇಳಿ ಅವನ ಮಾತನ್ನು ಅಭಿನಂದಿಸಿ ಧನಂಜಯನು ಧನುಸ್ಸನ್ನು ಬಗ್ಗಿಸುತ್ತಾ ಯುಧಿಷ್ಠಿರನಿಗೆ “ರಾಜನ್! ಕೇಳು!” ಎಂದು ಹೇಳಿದನು. “ನರದೇವ! ದೇವ ಪಿನಾಕಿಯನ್ನು ಬಿಟ್ಟು ನನ್ನಂತಹ ಧನುರ್ಧರನು ಬೇರೆ ಯಾರೂ ಇಲ್ಲ! ಮಹಾತ್ಮನಾದ ನೀನು ಅನುಮತಿಯನ್ನಿತ್ತರೆ ನಾನು ಸಚರಾಚರ ಜಗತ್ತನೂ ಕ್ಷಣದಲ್ಲಿ ಸಂಹರಿಸಿಯೇನು! ಜಗತ್ತಿನ ದಿಕ್ಕುಗಳನ್ನು ಗೆದ್ದು ನಾನೇ ನಿನಗೆ ಸರ್ವವನ್ನೂ ನಿನ್ನ ವಶವನ್ನಾಗಿ ಮಾಡಿದೆ. ದಕ್ಷಿಣೆಗಳಿಂದ ಸಮಾಪ್ತವಾದ ರಾಜಸೂಯವೂ ಮತ್ತು ದಿವ್ಯ ಸಭಾಭವನವೂ ನನ್ನ ಓಜಸ್ಸಿನಿಂದಲೇ ಆಯಿತು! ನನ್ನ ಅಂಗೈಯಲ್ಲಿ ಪೃಷತ್ಕಗಳೂ ಬಾಣದೊಂದಿಗೆ ಧನುಸ್ಸಿನ ಚಿಹ್ನೆಗಳು ಮತ್ತು ನನ್ನ ಪಾದಗಳಲ್ಲಿ ಶರ ಮತ್ತು ಧ್ವಜಗಳ ಚಿಹ್ನೆಗಳಿವೆ. ಅಥಹ ನಾನು ಯುದ್ಧಕ್ಕೆ ಹೋದರೆ ಯಾರೂ ಅವನನ್ನು ಗೆಲ್ಲಲಾರರು! ಉತ್ತರದವರು ಹತರಾದರು. ಪಶ್ಚಿಮದವರು ಹತರಾದರು. ಪೂರ್ವದವರು ನಿರಸ್ತರಾದರು. ದಾಕ್ಷಿಣಾತ್ಯರು ವಿಶಸ್ತರಾದರು. ಸಂಶಪ್ತಕರಲ್ಲಿ ಸ್ವಲ್ಪವೇ ಉಳಿದುಕೊಂಡಿದೆ. ಸರ್ವ ಸೇನೆಗಳ ಅರ್ಧವೇ ನನ್ನಿಂದ ನಾಶವಾಗಿದೆ! ದೇವಸೇನೆಗಳಂತೆ ಪ್ರಕಾಶಿಸುತ್ತಿದ್ದ ಭಾರತೀ ಸೇನೆಯು ನನ್ನಿಂದ ಹತವಾಗಿ ಮಲಗಿದೆ! ಅಸ್ತ್ರಜ್ಞಾನವುಳ್ಳವರನ್ನು ನಾನು ಶಸ್ತ್ರಗಳಿಂದಲೇ ಸಂಹರಿಸುತ್ತೇನೆ. ಆದುದರಿಂದ ನಾನು ಲೋಕವನ್ನೇ ಭಸ್ಮಮಾಡಿಬಿಡಲು ಬಯಸುವುದಿಲ್ಲ.”
ಇದನ್ನು ಹೇಳಿ ಪಾರ್ಥನು ಯುಧಿಷ್ಠಿರನಿಗೆ ಪುನಃ ಹೇಳಿದನು: “ರಾಜನ್! ನಿನ್ನಿಂದಾಗಿ ರಾಧೆಯು ಪುತ್ರನಿಲ್ಲದವಳಾಗುತ್ತಾಳೆ ಅಥವಾ ಕುಂತಿಯು ನಾನಿಲ್ಲದವಳಾಗುತ್ತಾಳೆಂದು ತಿಳಿದುಕೋ! ಶಾಂತನಾಗು! ನಾನು ಹೇಳಿದುದನ್ನು ಕ್ಷಮಿಸು! ಕಾಲಬಂದಾಗ ನಿನಗೆ ಎಲ್ಲವೂ ತಿಳಿಯುತ್ತದೆ! ನಿನಗೆ ನಮಸ್ಕಾರ!”
ಯುಧಿಷ್ಠಿರನನ್ನು ಪ್ರಸನ್ನಗೊಳಿಸುತ್ತಾ ನಿಂತಿದ್ದ ಅವನು ಪುನಃ ಸಮಾಧಾನಗೊಳಿಸುತ್ತಾ ಹೇಳಿದನು: “ಸಮರದ ಇಕ್ಕಟ್ಟಿನಿಂದ ಭೀಮನನ್ನು ಬಿಡುಗಡೆಗೊಳಿಸಲು ಮತ್ತು ಸರ್ವಪ್ರಯತ್ನದಿಂದ ಸೂತಪುತ್ರನನ್ನು ಸಂಹರಿಸಲು ಹೊರಡುತ್ತಿದ್ದೇನೆ. ನಿನಗೆ ಪ್ರಿಯವನ್ನುಂಟುಮಾಡಲೆಂದೇ ನನ್ನ ಈ ಜೀವವಿದೆ. ಸತ್ಯವನ್ನೇ ಹೇಳುತ್ತಿದ್ದೇನೆ. ಇದನ್ನು ತಿಳಿದುಕೋ! ಇನ್ನು ತಡವಾಗುವುದಿಲ್ಲ! ಬಹುಬೇಗ ಇದು ಆಗಿಹೋಗುತ್ತದೆ! ಈಗಲೇ ನಾನು ಅವನನ್ನು ಆಕ್ರಮಣಿಸುತ್ತೇನೆ!” ಎಂದು ಹೇಳಿ ದೀಪ್ತತೇಜಸ್ವಿ ಕಿರೀಟಿಯು ಅವನ ಎರಡೂ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಹೊರಟುನಿಂತನು.
ಭ್ರಾತಾ ಫಲ್ಗುನನ ಈ ಕಠೋರಮಾತುಗಳನ್ನು ಕೇಳಿದ ಧರ್ಮರಾಜನು ಹಾಸಿಗೆಯಿಂದ ಮೇಲೆದ್ದು ದುಃಖದಿಂದ ವ್ಯಾಕುಲಚಿತ್ತನಾಗಿ ಪಾರ್ಥನಿಗೆ ಹೇಳಿದನು: “ಪಾರ್ಥ! ನಾನು ಮಾಡಿದುದು ಒಳ್ಳೆಯದಲ್ಲ! ಇದರಿಂದಾಗಿ ನಿಮಗೆ ಸುಘೋರವಾದ ವ್ಯಸನವು ಪ್ರಾಪ್ತವಾಯಿತು! ಆದುದರಿಂದ ಕುಲಾಂತಕನಾದ ಮತ್ತು ಅಧಮ ಪುರುಷನಾದ ನನ್ನ ಈ ಶಿರಸ್ಸನ್ನು ಕತ್ತರಿಸು! ಈ ಪಾಪಿಯ, ಪಾಪವ್ಯಸನದಲ್ಲಿ ಆಸಕ್ತನಾಗಿರುವ, ವಿಮೂಢಬುದ್ಧಿಯ, ಆಲಸಿಯ, ನಾಚಿಕೆಯುಳ್ಳವನ, ವೃದ್ಧರನ್ನು ಅನಾದರಣೆಮಾಡುವ, ಕ್ರೂರಿಯ ಕಠಿಣವಾಕ್ಯಗಳನ್ನು ನೀನು ಸದಾ ಅನುಸರಣೆಯನ್ನು ಎಲ್ಲಿಯವರೆಗೆ ಮಾಡುತ್ತೀಯೆ? ಪಾಪಿಯಾದ ನಾನು ಇಂದೇ ವನಕ್ಕೆ ಹೋಗುತ್ತೇನೆ. ನಾನಿಲ್ಲದೇ ನೀವು ಸುಖದಿಂದಿರುವಿರಿ! ರಾಜನಾಗಲು ಯೋಗ್ಯ. ನಪುಂಸಕನಂತಿರುವ ನನಗೆ ರಾಜ್ಯಭಾರದ ಗೊಡವೆಯೇಕೆ? ರೋಷಾನ್ವಿತನಾದ ನಿನ್ನ ಈ ಕಠೋರಮಾತುಗಳನ್ನು ಪುನಃ ಸಹಿಸಿಕೊಳ್ಳಲು ನಾನು ಶಕ್ತನಿಲ್ಲ. ಭೀಮನು ರಾಜನಾಗಲಿ! ಇಷ್ಟೊಂದು ಅಪಮಾನಿತನಾದ ನಂತರವೂ ಜೀವಂತವಾಗಿರುವ ಅವಶ್ಯಕತೆಯು ನನಗಿಲ್ಲ!”
ಹೀಗೆ ಹೇಳಿ ತಕ್ಷಣವೇ ಹಾಸಿಗೆಯಿಂದ ಕೆಳಕ್ಕಿಳಿದು ವನಕ್ಕೆ ಹೊರಡಲು ಅನುವಾದ ರಾಜನಿಗೆ ವಾಸುದೇವನು ಪ್ರಣಯದಿಂದ ಹೇಳಿದನು: “ರಾಜನ್! ಸತ್ಯಸಂಧ ಗಾಂಡೀವಧನ್ವಿಯು ಗಾಂಡೀವದ ಕುರಿತಾಗಿ ಮಾಡಿದ್ದ ಲೋಕದಲ್ಲಿ ವಿಶ್ರುತವಾದ ಪ್ರತಿಜ್ಞೆಯು ನಿನಗೆ ತಿಳಿದೇ ಇತ್ತು. “ಗಾಂಡೀವವನ್ನು ನಿನಗಿಂತಲೂ ಹೆಚ್ಚಿನವನಿಗೆ ಕೊಟ್ಟುಬಿಡು!” ಎಂದು ಹೇಳಿದ ಲೋಕದ ಯಾವ ಪುರುಷನೂ ಇವನಿಗೆ ವಧ್ಯನು. ಅಂತಹ ಮಾತನ್ನು ನೀನೇ ಆಡಿದೆ! ಅವನ ಪ್ರತಿಜ್ಞೆಯನ್ನು ಸತ್ಯವಾಗಿಸಲು ಮತ್ತು ನಿನ್ನನ್ನು ಪಾರ್ಥನಿಂದ ರಕ್ಷಿಸಲು ನಾನು ಹೇಳಿಕೊಟ್ಟಂತೆ ಅವನು ನಿನ್ನನ್ನು ಅಪಮಾನಿಸಿದ್ದಾನೆ. ಏಕೆಂದರೆ ಹಿರಿಯರ ಅಪಮಾನವೇ ಅವರ ವಧೆಯೆಂದು ಹೇಳುತ್ತಾರೆ. ಆದುದರಿಂದ ಪಾರ್ಥ ಮತ್ತು ನಾನು ಇಬ್ಬರೂ ಮಾಡಿದ ಈ ಅಪರಾಧವನ್ನು ಕ್ಷಮಿಸು! ನಾವಿಬ್ಬರೂ ನಿನಗೆ ಶರಣಾಗತರಾಗಿದ್ದೇವೆ! ಪ್ರೀತಿಯನ್ನು ಯಾಚಿಸುವ ನಮ್ಮನ್ನು ನೀನು ಕ್ಷಮಿಸಬೇಕು! ಇಂದು ಭೂಮಿಯು ಪಾಪಿ ರಾಧೇಯನ ರಕ್ತವನ್ನು ಕುಡಿಯುತ್ತದೆ! ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಇಂದು ಸೂತಜನು ಹತನಾದನೆಂದೇ ತಿಳಿ! ಯಾರವಧೆಯನ್ನು ನೀನು ಇಚ್ಛಿಸುತ್ತಿರುವೆಯೋ ಅವನ ಜೀವವು ಇಂದು ಹೋದಂತೆಯೇ!”
ಹೀಗೆ ಹೇಳಿದ ಕೃಷ್ಣನನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ಸಂಭ್ರಮದಿಂದ ನಮಸ್ಕರಿಸುತ್ತಿದ್ದ ಹೃಷೀಕೇಶನನ್ನು ಎಬ್ಬಿಸಿ ಅನಂತರ ಕೈಗಳನ್ನು ಮುಗಿದು ಈ ಮಾತನ್ನಾಡಿದನು: “ಗೋವಿಂದ! ಮಾಧವ! ನೀನು ಹೇಳಿದುದು ಸರಿ! ನಾನೇ ಎಡವಿದೆನು! ನಾನು ಸಮಾಧಾನಗೊಂಡಿದ್ದೇನೆ. ಇಂದು ನನ್ನನ್ನು ಉದ್ಧರಿಸಿದೆ! ನಮ್ಮೆಲ್ಲರನ್ನೂ ಇಂದು ನೀನು ಈ ಘೋರ ವ್ಯಸನದಿಂದ ಬಿಡುಗಡೆಮಾಡಿದೆ! ಅಜ್ಞಾನಮೋಹಿತರಾದ ನಾವಿಬ್ಬರೂ ಇಂದು ನಿನ್ನನ್ನು ನಾಥನನ್ನಾಗಿ ಪಡೆದು ಘೋರವಾದ ವ್ಯಸನಸಾಗರದಿಂದ ಸಮುತ್ತೀರ್ಣರಾಗಿದ್ದೇವೆ! ನಿನ್ನ ಬುದ್ಧಿಯನ್ನೇ ನಾವೆಯನ್ನಾಗಿಸಿಕೊಂಡು ನಾವಿಬ್ಬರೂ ಅಮಾತ್ಯರೊಂದಿಗೆ ಸನಾಥರಾಗಿ ದುಃಖಶೋಕದ ಈ ಮಹಾಸಾಗರದಿಂದ ಮೇಲೆದ್ದಿದ್ದೇವೆ!”
ಹೀಗೆ ಕೃಷ್ಣನ ಮಾತಿನಂತೆ ಯುಧಿಷ್ಠಿರನನ್ನು ನಿಂದಿಸಿ ಮಾತನಾಡಿದ ಪಾರ್ಥನು ಏನೋ ಪಾತಕವನ್ನು ಮಾಡಿದ್ದೇನೆಂದು ವಿಮನಸ್ಕನಾದನು. ಆಗ ವಾಸುದೇವನು ನಗುತ್ತಿರುವನೋ ಎನ್ನುವಂತೆ ಪಾಂಡವನಿಗೆ ಹೇಳಿದನು: “ಪಾರ್ಥ! ಒಂದುವೇಳೆ ನೀನು ಹರಿತವಾಗಿರುವ ಖಡ್ಗದಿಂದ ಧರ್ಮದಲ್ಲಿ ವ್ಯವಸ್ಥಿತನಾದ ಧರ್ಮಜನನ್ನು ಕೊಂದಿದ್ದರೆ ನಿನ್ನ ಸ್ಥಿತಿಯು ಏನಾಗುತ್ತಿತ್ತು? ರಾಜನನ್ನು ನೀನು ಎಂದು ಕರೆದುದರಿಂದಲೇ ಇಷ್ಟೊಂದು ದುಃಖಿತನಾಗಿರುವೆ. ಆದರೆ ನೃಪತಿಯನ್ನು ನೀನು ಸಂಹರಿಸಿದ್ದೇ ಆದರೆ ಅನಂತರ ನೀನು ಏನು ಮಾಡುತ್ತಿದ್ದೆ? ವಿಶೇಷವಾಗಿ ಮಂದಪ್ರಜ್ಞರಿಗೆ ಧರ್ಮವನ್ನು ತಿಳಿಯುವುದು ಕಷ್ಟಸಾಧ್ಯವಾದುದು. ಧರ್ಮಭೀರುವಾಗಿರುವ ನಿನ್ನ ಜ್ಯೇಷ್ಠಭ್ರಾತನನ್ನು ವಧಿಸಿದ್ದರೆ ಖಂಡಿತವಾಗಿಯೂ ನೀನು ಘೋರರೂಪದ ಮಹಾನರಕವನ್ನು ಪಡೆಯುತ್ತಿದ್ದೆ! ನೀನು ಈಗ ಕುರುಶ್ರೇಷ್ಠ, ಧರ್ಮಸಂಹಿತ, ಧರ್ಮಭೃತರಲ್ಲಿ ಶ್ರೇಷ್ಠ ರಾಜನನ್ನು ಪ್ರಸನ್ನಗೊಳಿಸಬೇಕು ಎನ್ನುವುದು ನನ್ನ ಅಭಿಪ್ರಾಯ. ಭಕ್ತಿ-ಪ್ರೀತಿಯಿಂದ ಯುಧಿಷ್ಠಿರನನ್ನು ಪ್ರಸನ್ನಗೊಳಿಸಿ ನಾವು ತ್ವರೆಮಾಡಿ ಯುದ್ಧಮಾಡಲು ಸೂತಪುತ್ರನ ರಥದ ಕಡೆ ಹೋಗೋಣ! ಕರ್ಣನನ್ನು ಇಂದು ನಿಶಿತ ಶರಗಳಿಂದ ಸಂಹರಿಸಿ ಧರ್ಮಪುತ್ರನಿಗೆ ವಿಪುಲವಾದ ಸಂತೋಷವನ್ನು ನೀಡುವೆಯಂತೆ! ಇದಕ್ಕೆ ಕಾಲವು ಪ್ರಾಪ್ತವಾಗಿದೆ ಎಂದು ನನಗನ್ನಿಸುತ್ತಿದೆ. ಹೀಗೆ ನೀನು ಮಾಡಿದರೆ ನಿನ್ನ ಕಾರ್ಯವು ಸಿದ್ಧಿಯಾಗುತ್ತದೆ.”
ಆಗ ಅರ್ಜುನನು ಲಜ್ಜಾಸಮನ್ವಿತನಾಗಿ ಧರ್ಮರಾಜನ ಚರಣಗಳಲ್ಲಿ ಶಿರವನ್ನಿಟ್ಟು ನಮಸ್ಕರಿಸಿದನು. ಆ ಭರತಶ್ರೇಷ್ಠನು ಪುನಃ ಪುನಃ “ರಾಜನ್! ಧರ್ಮಕಾಮದಿಂದ ಭೀರುವಾದ ನಾನು ಹೇಳಿದುದನ್ನು ಕ್ಷಮಿಸಿ ಪ್ರಸೀದನಾಗು!” ಎಂದು ಹೇಳಿದನು. ಪಾದಗಳಮೇಲೆ ಬಿದ್ದಿದ್ದ ಅಳುತ್ತಿದ್ದ ಧನಂಜಯನನ್ನು ನೋಡಿ ಯುಧಿಷ್ಠಿರನು ತಮ್ಮನನ್ನು ಮೇಲೆಬ್ಬಿಸಿದನು. ಧರ್ಮರಾಜನು ಅವನನ್ನು ಸ್ನೇಹಪೂರ್ವಕವಾಗಿ ಆಲಂಗಿಸಿ ಅವನೊಡನೆ ರೋದಿಸಿದನು. ಬಹಳ ಹೊತ್ತು ರೋದಿಸಿ ಆ ನರವ್ಯಾಘ್ರ ಸಹೋದರರೂ ಶುಚಿಮಾಡಿಕೊಂಡು ಹರ್ಷಿತರಾದರು. ಅನಂತರ ಪಾಂಡವನನ್ನು ಪ್ರೀತಿಯಿಂದ ಆಲಂಗಿಸಿ ನೆತ್ತಿಯನ್ನು ಆಘ್ರಾಣಿಸಿ ಪರಮ ಸಂತೋಷಯುಕ್ತನಾಗಿ ಮತ್ತು ವಿಸ್ಮಯನಾಗಿ ಜಯನಿಗೆ ಹೇಳಿದನು: “ಮಹಾಬಾಹೋ! ಸರ್ವಸೈನ್ಯವೂ ನೋಡುತ್ತಿದ್ದಂತೆಯೇ ರಣದಲ್ಲಿ ಪ್ರಯತ್ನಪಟ್ಟು ಯುದ್ಧಮಾಡುತ್ತಿದ್ದ ಮಹೇಷ್ವಾಸ ಕರ್ಣನು ಶರಗಳಿಂದ ನನ್ನ ಕವಚ, ಧ್ವಜ, ಧನುಸ್ಸು, ಶಕ್ತಿ, ಕುದುರೆ, ಮತ್ತು ಗದೆಗಳನ್ನು ಕತ್ತರಿಸಿದನು. ಅವನನ್ನು ಮನಗಂಡು ಮತ್ತು ರಣದಲ್ಲಿ ಅವನ ಕರ್ಮವನ್ನು ನೋಡಿ ನಾನು ದುಃಖದಿಂದ ಕೃಶನಾಗುತ್ತಿದ್ದೇನೆ. ಜೀವಿತವಾಗಿರಲೂ ಇಷ್ಟವಾಗುತ್ತಿಲ್ಲ! ಒಂದು ವೇಳೆ ಇಂದು ನೀನು ಸೂತಜನನ್ನು ಸಂಹರಿಸದೇ ಇದ್ದರೆ ನಾನು ನನ್ನ ಪ್ರಾಣಗಳನ್ನೇ ಪರಿತ್ಯಜಿಸುತ್ತೇನೆ. ಮುಂದೆ ನಾನು ಜೀವಂತವಾಗಿರುವುದರ ಅರ್ಥವಾದರೂ ಏನಿದೆ?”
ಹೀಗೆ ಹೇಳಲು ವಿಜಯನು ಉತ್ತರಿಸಿದನು: “ರಾಜನ್! ಸತ್ಯ, ನಿನ್ನ ಪ್ರಸಾದ, ಭೀಮ ಮತ್ತು ಯಮಳರ ಮೇಲೆ ಆಣೆಯಿಟ್ಟು ಶಪಥಮಾಡುತ್ತಿದ್ದೇನೆ! ಆಯುಧದ ಮೇಲೆ ಆಣೆಯಿಟ್ಟು ಹೇಳುತ್ತೇನೆ! ಇಂದು ಸಮರದಲ್ಲಿ ಕರ್ಣನನ್ನು ಕೊಲ್ಲುತ್ತೇನೆ ಅಥವಾ ಹತನಾಗಿ ಮಹೀತಲದಲ್ಲಿ ಬೀಳುತ್ತೇನೆ!”
ರಾಜನಿಗೆ ಹೀಗೆ ಹೇಳಿ ಅವನು ಮಾಧವನಿಗೆ ಈ ಮಾತನ್ನಾಡಿದನು: “ಕೃಷ್ಣ! ಇಂದು ರಣದಲ್ಲಿ ಕರ್ಣನನ್ನು ಸಂಹರಿಸುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ಆ ದುರಾತ್ಮನ ವಧೆಯನ್ನು ನೀನು ಕೂಡ ನಿರ್ಧರಿಸಿರುವಂತಿದೆ!”
ಇದನ್ನು ಕೇಳಿದ ಕೇಶವನು ಪಾರ್ಥನಿಗೆ ಹೇಳಿದನು: “ಭರತಶ್ರೇಷ್ಠ! ಯಥಾಬಲ ಪ್ರಯತ್ನ ಮಾಡಲು ನೀನು ಶಕ್ತನಾಗಿರುವೆ! ಇದೇ ನನ್ನ ನಿತ್ಯದ ಮನೋಕಾಮನೆಯೂ ಆಗಿದೆ. ನೀನು ರಣದಲ್ಲಿ ಹೇಗೆ ಕರ್ಣನನ್ನು ಕೊಲ್ಲುತ್ತೀಯೆ ಎನ್ನುವುದೂ ನನ್ನ ಅನುದಿನದ ಚಿಂತೆಯಾಗಿದೆ.”
ಮತಿಮಾನ್ ಮಾಧವನು ಧರ್ಮನಂದನನಿಗೆ ಪುನಃ ಇದನ್ನು ಹೇಳಿದನು: “ಯುಧಿಷ್ಠಿರ! ಈ ಬೀಭತ್ಸುವನ್ನು ನೀನು ಸಂತವಿಸಬೇಕಾಗಿದೆ. ದುರಾತ್ಮ ಕರ್ಣನ ವಧೆಗೆ ಇಂದು ಆಜ್ಞೆಯನ್ನೂ ನೀಡಬೇಕು! ನೀನು ಕರ್ಣನ ಶರಗಳಿಂದ ಪೀಡಿತನಾದೆ ಎಂದು ಕೇಳಿದ ಇವನು ಮತ್ತು ನಾನು ನೀನು ಹೇಗಿರುವೆಯೆಂದು ತಿಳಿದುಕೊಳ್ಳಲು ಇಲ್ಲಿಗೆ ಬಂದಿದ್ದೆವು. ಅದೃಷ್ಟವಶಾತ್ ನೀನು ಅವನಿಂದ ಹತನಾಗಲಿಲ್ಲ. ಅದೃಷ್ಟವಶಾತ್ ನೀನು ಅವನ ಬಂಧಿಯಾಗಲಿಲ್ಲ. ಬೀಭತ್ಸುವನ್ನು ಸಂತವಿಸು ಮತ್ತು ಜಯದ ಆಶೀರ್ವಾದವನ್ನು ನೀಡು!”
ಯುಧಿಷ್ಠಿರನು ಹೇಳಿದನು: “ಬಾ ಪಾರ್ಥ ಬಾ! ನನ್ನನ್ನು ತಬ್ಬಿಕೋ! ನಿಂದ್ಯವಾದರೂ ಹಿತಕರವಾದ ಮಾತನ್ನೇ ನೀನು ಆಡಿರುವೆ. ನಾನು ಅವೆಲ್ಲವನ್ನೂ ಕ್ಷಮಿಸಿದ್ದೇನೆ! ನಾನು ನಿನಗೆ ಆಜ್ಞೆಮಾಡುತ್ತಿದ್ದೇನೆ! ಧನಂಜಯ! ಕರ್ಣನನ್ನು ಸಂಹರಿಸು! ನಾನು ಹೇಳಿದ ದಾರುಣ ಮಾತುಗಳಿಂದ ಕೋಪಿಸಿಕೊಳ್ಳಬೇಡ!”
ಆಗ ಧನಂಜಯನು ಜ್ಯೇಷ್ಠ ಭ್ರಾತನ ಪಾದಗಳನ್ನು ಕೈಗಳಿಂದ ಹಿಡಿದು ಶಿರಸಾ ಸಮಸ್ಕರಿಸಿದನು. ರಾಜನು ಪೀಡಿತನಾಗಿದ್ದ ಅರ್ಜುನನನ್ನು ಮೇಲೆತ್ತಿ ನೆತ್ತಿಯನ್ನು ಆಘ್ರಾಣಿಸಿ ಪುನಃ ಇದನ್ನು ಹೇಳಿದನು: “ಧನಂಜಯ! ನಿನ್ನ ದೃಢತೆಯಿಂದ ನನ್ನನ್ನು ಗೌರವಿಸಿರುವೆ! ಶಾಶ್ವತವಾದ ಮಹಾತ್ಮೆಯನ್ನೂ ವಿಜಯನ್ನೂ ಪಡೆಯುತ್ತೀಯೆ!”
ಅರ್ಜುನನು ಹೇಳಿದನು: “ಇಂದು ಆ ಪಾಪಕರ್ಮಿ ಬಲಗರ್ವಿತ ರಾಧೇಯನನ್ನು ರಣದಲ್ಲಿ ಎದುರಿಸಿ ಶರಗಳಿಂದ ಅವನನ್ನೂ ಅನುಯಾಯಿಗಳನ್ನೂ ಕಡೆಗಾಣಿಸುತ್ತೇನೆ! ಕಾರ್ಮುಕವನ್ನು ದೃಢವಾಗಿ ಬಗ್ಗಿಸಿ ಬಾಣಗಳಿಂದ ನಿನ್ನನ್ನು ಪೀಡಿಸಿದ ಆ ಕರ್ಣನು ತನ್ನ ಕರ್ಮಗಳ ಧಾರುಣ ಫಲವನ್ನು ಇಂದು ಪಡೆಯುತ್ತಾನೆ. ಇಂದು ನಾನು ಕರ್ಣನನ್ನು ಕೊಂದೇ ನಿನ್ನ ಬಳಿ ಬರುತ್ತೇನೆ! ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ! ಇಂದು ಕರ್ಣನನ್ನು ಸಂಹರಿಸದೇ ನಾನು ರಣರಂಗದಿಂದ ಹಿಂದಿರುಗುವುದಿಲ್ಲ. ನಿನ್ನ ಪಾದಗಳನ್ನು ಸ್ಪರ್ಷಿಸಿ ಆಣೆಯಿಟ್ಟು ಹೇಳುತ್ತೇನೆ!”
ಧರ್ಮರಾಜನನ್ನು ಹೀಗೆ ಪ್ರಸನ್ನಗೊಳಿಸಿ ಒಳಗಿಂದೊಳಗೇ ಪ್ರಹೃಷ್ಟನಾಗಿ ಸೂತಪುತ್ರನ ವಧೆಗೆ ಸಿದ್ಧನಾದ ಪಾರ್ಥನು ಗೋವಿಂದನಿಗೆ ಹೇಳಿದನು: “ಪುನಃ ರಥವು ಸಿದ್ಧವಾಗಲಿ. ಉತ್ತಮ ಹಯಗಳನ್ನು ಹೂಡಲಿ. ಸರ್ವ ಆಯುಧಗಳೂ ಮಹಾರಥದಲ್ಲಿ ಸಜ್ಜಾಗಿ ಇಡಲ್ಪಡಲಿ! ಕುದುರೆಸವಾರರಿಂದ ಪಳಗಿಸಲ್ಪಟ್ಟ ಮತ್ತು ತಿರುಗಾಡಿಸಲ್ಪಟ್ಟ ಕುದುರೆಗಳು ಸರ್ವ ರಥೋಪಕರಣಗಳೊಡನೆ ಬೇಗನೇ ಸಜ್ಜಾಗಲಿ!”
ಫಲ್ಗುನನು ಹೀಗೆ ಹೇಳಲು ಕೃಷ್ಣನು ದಾರುಕನಿಗೆ “ಸರ್ವಧನುಷ್ಮತರಲ್ಲಿ ಶ್ರೇಷ್ಠ ಭರತಶ್ರೇಷ್ಠ ಅರ್ಜುನನು ಹೇಳಿದಂತೆ ಎಲ್ಲವನ್ನೂ ಮಾಡು!” ಎಂದನು. ಕೃಷ್ಣನಿಂದ ಆಜ್ಞಾಪಿತನಾದ ದಾರುಕನು ವ್ಯಾಘ್ರಚರ್ಮದಿಂದ ಆಚ್ಛಾದಿತವಾದ ಶತ್ರುಗಳನ್ನು ಸುಡಬಲ್ಲ ಆ ರಥವನ್ನು ಸಜ್ಜುಗೊಳಿಸಿದನು.
