ಹದಿನಾರನೇ ದಿನದ ಯುದ್ಧ - ೨
ಕ್ಷೇಮಧೂರ್ತಿವಧೆ
ಅನ್ಯೋನ್ಯರನ್ನು ಎದುರಿಸಿದ ಆ ಸೇನೆಗಳ ಆನೆ-ಕುದುರೆ-ಪದಾತಿಗಳು ಪ್ರಹೃಷ್ಟರಾಗಿದ್ದರು. ದೇವಾಸುರರ ಸೇನೆಗಳಂತೆ ಬೆಳಗುತ್ತಿದ್ದ ಆ ಸೇನೆಗಳು ಅತಿ ವಿಶಾಲವಾಗಿದ್ದವು. ಆನೆ-ರಥ-ಕುದುರೆ-ಪದಾತಿಗಳು ದೇಹ-ಪಾಪಗಳನ್ನು ನಾಶಗೊಳಿಸುವ ಪ್ರಹಾರಗಳನ್ನು ಶತ್ರುಗಳ ಮೇಲೆ ಪ್ರಹರಿಸಿದರು. ಪೂರ್ಣಚಂದ್ರ, ಸೂರ್ಯ ಮತ್ತು ಪದ್ಮಗಳ ಕಾಂತಿಯಿಂದ ಸಮನಾಗಿ ಬೆಳಗುತ್ತಿದ್ದ ಎರಡೂ ಕಡೆಯ ನರಸಿಂಹರ ಶಿರಸ್ಸುಗಳು ರಣಭೂಮಿಯನ್ನು ತುಂಬಿಬಿಟ್ಟಿದ್ದವು. ಯುದ್ಧಮಾಡುತ್ತಿದ್ದ ಅವರು ಅರ್ಧಚಂದ್ರ-ಭಲ್ಲ-ಕ್ಷುರಪ್ರ-ಖಡ್ಗ-ಪಟ್ಟಿಷ-ಪರಶುಗಳಿಂದ ಇತರರ ಶಿರಗಳನ್ನು ಕತ್ತರಿಸುತ್ತಿದ್ದರು. ದಪ್ಪ ಸುದೀರ್ಘ ಬಾಹುಗಳಿಂದ ಕತ್ತರಿಸಲ್ಪಟ್ಟ ದಷ್ಟಪುಷ್ಟ ನೀಳ ಬಾಹುಗಳು ಅಂಗದ-ಆಯುಧಗಳ ಸಮೇತವಾಗಿ ರಣಾಂಗಣದಲ್ಲಿ ಬಿದ್ದಿದ್ದವು. ರಕ್ತಲೇಪಿತ ಅಂಗೈಗಳಿಂದಲೂ ಉಗುರುಗಳಿಂದಲೂ ಕೂಡಿದ್ದ ಆ ಬಾಹುಗಳು ಗರುಡನಿಂದ ಪ್ರಹರಿಸಲ್ಪಟ್ಟು ಭೂಮಿಯ ಮೇಲೆ ಬಿದ್ದಿದ್ದ ಐದು ಹೆಡೆಗಳ ಸರ್ಪಗಳಂತೆ ಕಾಣುತ್ತಿದ್ದವು. ಶತ್ರುಗಳಿಂದ ಹೊಡೆಯಲ್ಪಟ್ಟ ವೀರರು ಪುಣ್ಯಗಳು ಕ್ಷೀಣವಾಗಲು ವಿಮಾನಗಳಿಂದ ಬೀಳುವ ಸ್ವರ್ಗಸದಸ್ಯರಂತೆ ಆನೆ-ಕುದುರೆಗಳ ಭುಜಗಳ ಮೇಲಿಂದ ಕೆಳಕ್ಕೆ ಬೀಳುತ್ತಿದ್ದರು. ರಣದಲ್ಲಿ ವೀರರಾದ ಯೋಧರನ್ನು ಅವರಿಗಿಂತಲೂ ವೀರರಾದವರು ಭಾರವಾದ ಗದೆಗಳಿಂದಲೂ, ಅನ್ಯ ಪರಿಘ-ಮುಸಲಗಳಿಂದಲೂ ಹೊಡೆದು ಕೆಳಕ್ಕೆ ಕೆಡವುತ್ತಿದ್ದರು. ಆ ಪರಮಸಂಕುಲದಲ್ಲಿ ರಥಗಳನ್ನು ರಥಗಳು ಧ್ವಂಸಮಾಡಿದವು. ಮದಿಸಿದ ಆನೆಗಳು ಮದಿಸಿದ ಆನೆಗಳನ್ನು ಮತ್ತು ಹಾಗೆಯೇ ಅಶ್ವಾರೋಹಿಗಳು ಅಶ್ವಾರೋಹಿಗಳನ್ನು ನಾಶಪಡಿಸಿದವು. ರಥಗಳು ಶ್ರೇಷ್ಠರಥಗಳಿಂದ, ಅಶ್ವಾರೋಹಿಗಳು ಮತ್ತು ಪದಾತಿಗಳು ಆನೆಗಳಿಂದ, ಪದಾತಿಗಳು ಅಶ್ವಾರೋಹಿಗಳಿಂದ ಸಂಹರಿಸಲ್ಪಟ್ಟು ಮಲಗಿದವು. ಆನೆಗಳಿಂದ ರಥ-ಕುದುರೆ-ಪದಾತಿಗಳೂ, ರಥಗಳಿಂದ ಆನೆ-ಕುದುರೆ-ಪದಾತಿಗಳೂ, ರಥ-ಪದಾತಿ-ಆನೆ-ಕುದುರೆಗಳಿಂದ ಪದಾತಿ-ರಥ-ಆನೆ-ಕುದುರೆಗಳು ಹತವಾದವು. ರಥ ಮತ್ತು ಕುದುರೆಗಳನ್ನೇರಿದ್ದ ಯೋಧರು ರಥ ಮತ್ತು ಕುದುರೆಗಳ ಮೇಲೆ ಏರಿದ್ದ ಯೋಧರನ್ನು ಕೈಗಳಿಂದಲೂ, ಶಸ್ತ್ರಗಳಿಂದಲೂ, ರಥಗಳಿಂದಲೂ ಹೊಡೆದು ಜೋರಾಗಿ ಕದನವಾಡುತ್ತಿದ್ದರು.
ಹೀಗೆ ಶೂರರಿಂದ ವಧಿಸಲ್ಪಟ್ಟು ಹತರಾಗುತ್ತಿರಲು, ವೃಕೋದರನ ಮುಂದಾಳುತ್ವದಲ್ಲಿ ಪಾರ್ಥರು ಕೌರವ ಸೇನೆಯ ಮೇಲೆ ಎರಗಿದರು. ಧೃಷ್ಟದ್ಯುಮ್ನ, ಶಿಖಂಡೀ, ದ್ರೌಪದೇಯರು, ಪ್ರಭದ್ರಕರು, ಸಾತ್ಯಕಿ, ಚೇಕಿತಾನ, ಪಾಂಡ್ಯರು, ಔಡ್ರರು, ಮತ್ತು ಕೇರಳರು ಭೀಮನನ್ನು ಹಿಂಬಾಲಿಸಿದ್ದರು. ಮತ್ತಮಾತಂಗದ ವಿಕ್ರಮಗಳುಳ್ಳ ಅವರು ಶಿರೋಭೂಷಣಗಳನ್ನೂ ಆಭರಣಗಳನ್ನೂ ತೊಟ್ಟಿದ್ದರು. ಅವರ ಹಲ್ಲುಗಳು ಕೆಂಪಾಗಿದ್ದವು, ಬಣ್ಣಬಣ್ಣದ ವಸ್ತ್ರಗಳನ್ನು ತೊಟ್ಟಿದ್ದರು. ಸುಗಂಧದ್ರವ್ಯಗಳನ್ನ ಶರೀರಗಳಿಗೆ ಲೇಪಿಸಿಕೊಂಡಿದ್ದರು. ಖಡ್ಗಗಳನ್ನು ಸೊಂಟಕ್ಕೆ ಬಿಗಿದು ಕೊಂಡಿದ್ದರು. ಕೈಗಳಲ್ಲಿ ಪಾಶಗಳನ್ನು ಹಿಡಿದಿದ್ದರು. ಆನೆಗಳನ್ನೂ ತಡೆದು ನಿಲ್ಲಿಸಬಲ್ಲ ಅವರು ಸಮಾನಮೃತ್ಯುವನ್ನು ಬಯಸಿ ಪರಸ್ಪರರಿಂದ ಅಲಗದೇ ಒಟ್ಟಾಗಿಯೇ ಇರುತ್ತಿದ್ದರು. ನವಿಲುಗರಿಗಳಿಂದ ತಲೆಗಳನ್ನು ಅಲಂಕರಸಿಕೊಂಡಿದ್ದರು. ಚಾಪಗಳನ್ನು ಹಿಡಿದಿದ್ದರು. ನೀಳಕೂದಲಿನ, ಪ್ರಿಯ ಮಾತನಾಡುತ್ತಿದ್ದ ಆ ಪದಾತಿ-ಕುದುರೆ ಸವಾರರು ಪರಾಕ್ರಮದಲ್ಲಿ ಘೋರರೂಪಿಗಳಾಗಿದ್ದರು. ಇವರಲ್ಲದೇ ಶೂರರಾದ ಚೇದಿ, ಪಾಂಚಾಲ, ಕೇಕಯ, ಕರೂಷ, ಕೋಸಲ, ಕಾಶಿ, ಮಾಗಧ ಸೇನೆಗಳೂ ಕೌರವ ಸೇನೆಯ ಮೇಲೆ ಆಕ್ರಮಣಮಾಡಿದರು. ಅವರ ರಥಗಳು, ಆನೆಗಳು, ಕುದುರೆಗಳು ಮತ್ತು ಪದಾತಿಗಳು ಹರ್ಷದಿಂದ ನಾನವಿಧವಾಗಿ ಕೂಗಿ, ನಗುತ್ತಾ ಕುಣಿಯುತ್ತಿದ್ದವು. ಅಂತಹ ವಿಶಾಲ ಸೈನ್ಯದ ಮಧ್ಯದಲ್ಲಿ ವೃಕೋದರನು ಆನೆಯ ಮೇಲೆ ಕುಳಿತು ಅನೇಕ ಮಹಾಗಾತ್ರದ ಶ್ರೇಷ್ಠ ಆನೆಗಳಿಂದ ಪರಿವೃತನಾಗಿ ಶತ್ರು ಸೈನ್ಯದಕಡೆ ಧಾವಿಸುತ್ತಿದ್ದನು.
ವಿಧಿವತ್ತಾಗಿ ಸಜ್ಜಾಗಿದ್ದ ಆ ಉಗ್ರ ಶ್ರೇಷ್ಠ ಆನೆಯು ಸೂರ್ಯನಿಂದ ಕೂಡಿದ ಉದಯಾಚಲದ ಉಚ್ಚ ಶಿಖರದಂತೆ ಪ್ರಕಾಶಿಸುತ್ತಿತ್ತು. ಶ್ರೇಷ್ಠ ರತ್ನಗಳಿಂದ ವಿಭೂಷಿತಗೊಂಡಿದ್ದ ಆ ಮಹಾಗಜದ ಲೋಹಮಯ ಕವಚವು ನಕ್ಷತ್ರಗಳಿಂದ ಕೂಡಿದ ಶರತ್ಕಾಲದ ಅಕಾಶದಂತೆ ಹೊಳೆಯುತ್ತಿತ್ತು. ಸುಂದರ ಮುಕುಟದಿಂದಲೂ ಆಭರಣಗಳಿಂದಲೂ ಸಮಲಂಕೃತ ಭೀಮಸೇನನು ಕೈಯಲ್ಲಿ ತೋಮರ ಪ್ರಾಸಗಳನ್ನು ಹಿಡಿದು ಮಧ್ಯಾಹ್ನದ ಸೂರ್ಯನಂತೆ ಶತ್ರುಗಳನ್ನು ದಹಿಸುತ್ತಾ ಚಲಿಸುತ್ತಿದ್ದನು.
ದೂರದಿಂದಲೇ ಆ ಆನೆಯನ್ನು ನೋಡಿ ಆನೆಯ ಮೇಲಿದ್ದ ಕ್ಷೇಮಧೂರ್ತಿಯು ಉತ್ಸಾಹದಿಂದ ಕೂಗುತ್ತಾ ಭೀಮನನ್ನು ಯುದ್ಧಕ್ಕೆ ಆಹ್ವಾನಿಸುತ್ತಾ ಆಕ್ರಮಣಿಸಿದನು. ವೃಕ್ಷಗಳಿಂದ ತುಂಬಿದ್ದ ಎರಡು ಪರ್ವತಗಳ ಮಧ್ಯೆ ದೈವೀ ಸಂಘಟನೆಯಿಂದ ಸಂಘರ್ಷವಾಗುವ ರೀತಿ ಅವರಿಬ್ಬರ ಆ ಎರಡು ಉಗ್ರರೂಪೀ ಆನೆಗಳ ಮಧ್ಯೆ ಯುದ್ಧವು ನಡೆಯಿತು. ಎರಡು ಆನೆಗಳೂ ಸೆಣಸಾಡುತ್ತಿರಲು ಅವರಿಬ್ಬರು ವೀರರು ಸೂರ್ಯರಶ್ಮಿಗೆ ಸಮಾನ ಕಾಂತಿಗಳುಳ್ಳ ತೋಮರಗಳಿಂದ ಅನ್ಯೋನ್ಯರನ್ನು ಹೊಡೆದು ಸಿಂಹನಾದಗೈದರು. ಆನೆಗಳನ್ನು ಹಿಂದೆ ಸರಿಸಿಕೊಂಡು ಇಬ್ಬರೂ ಮಂಡಲಾಕಾರವಾಗಿ ತಿರುಗತೊಡಗಿದರು. ಇಬ್ಬರೂ ಧನುಸ್ಸುಗಳನ್ನು ಹಿಡಿದು ಪರಸ್ಪರರನ್ನು ಪ್ರಹರಿಸತೊಡಗಿದರು. ಚಪ್ಪಾಳೆಗಳಿಂದಲೂ, ಟೇಂಕಾರಗಳಿಂದಲೂ ಬಾಣಗಳ ಶಬ್ಧಗಳಿಂದಲೂ ಅವರಿಬ್ಬರೂ ಸುತ್ತಲಿದ್ದ ಜನರನ್ನು ಹರ್ಷಗೊಳಿಸುತ್ತಾ ಸಿಂಹನಾದಗೈದರು. ಗಾಳಿಯಿಂದ ಪರಪರನೆ ಹಾರಾಡುತ್ತಿದ್ದ ಪತಾಕೆಗಳಿಂದ ಕೂಡಿದ ಮತ್ತು ಸೊಂಡಿಲುಗಳನ್ನು ಮೇಲಕ್ಕೆತ್ತಿದ್ದ ಮಹಾ ಗಜಗಳನ್ನು ಬಳಸಿ ಆ ಇಬ್ಬರು ಮಹಾಬಲರೂ ಯುದ್ಧಮಾಡುತ್ತಿದ್ದರು. ವರ್ಷಾಕಾಲದ ಮೇಘಗಳು ಮಳೆಗರೆಯುವಂತೆ ಅವರು ಶಕ್ತಿ-ತೋಮರವರ್ಷಗಳಿಂದ ಪರಸ್ಪರರ ಧನುಸ್ಸುಗಳನ್ನು ತುಂಡರಿಸಿ ಗರ್ಜಿಸಿದರು. ಆಗ ಕ್ಷೇಮಧೂರ್ತಿಯು ತೋಮರದಿಂದ ಭೀಮನ ವಕ್ಷಸ್ಠಳಕ್ಕೆ ಹೊಡೆದು ನಂತರ ವೇಗದಿಂದ ಇನ್ನೂ ಆರು ತೋಮರಗಳಿಂದ ಹೊಡೆದು ಗರ್ಜಿಸಿದನು. ಅಂಗಗಳಲ್ಲಿ ತೋಮರಗಳು ಅಂಟಿಕೊಂಡಿರಲು ಕ್ರೋಧದೀಪ್ತನಾದ ಭೀಮಸೇನನು ಮೇಘಗಳಿಂದ ಮುಚ್ಚಲ್ಪಟ್ಟ ಏಳು ಕುದುರೆಗಳ ರಥದ ಮೇಲೆ ಕುಳಿತಿದ್ದ ಸೂರ್ಯನಂತೆ ಶೋಭಿಸಿದನು. ಆಗ ಭೀಮನು ಭಾಸ್ಕರನ ವರ್ಣದಂತೆ ಹೊಳೆಯುತ್ತಿದ್ದ, ಶೀಘ್ರಗತಿಯ ಲೋಹಮಯ ತೋಮರವನ್ನು ಶತ್ರುವಿನ ಮೇಲೆ ಪ್ರತಿಯಾಗಿ ಪ್ರಯೋಗಿಸಿದನು. ಆಗ ಕುಲೂತಾಧಿಪತಿ ಕ್ಷೇಮಧೂರ್ತಿಯು ಚಾಪವನ್ನು ಬಗ್ಗಿಸಿ ಹೆದೆಯೇರಿಸಿ ಸಾಯಕಗಳಿಂದ ಆ ತೋಮರವನ್ನು ಹತ್ತು ಭಾಗಗಳನ್ನಾಗಿ ತುಂಡರಿಸಿ ಪಾಂಡವ ಭೀಮನನ್ನು ಶಕ್ತಿಯಿಂದ ಪ್ರಹರಿಸಿದನು. ಕೂಡಲೇ ಪಾಂಡವನು ಮಹಾಮೇಘದ ಗರ್ಜನೆಯುಳ್ಳ ಕಾರ್ಮುಕವನ್ನು ಎತ್ತಿಕೊಂಡು ಶರಗಳಿಂದ ಶತ್ರುವಿನ ಆನೆಯನ್ನು ಪ್ರಹರಿಸಿದನು.
ಭೀಮಸೇನನ ಶರಗಳಿಂದ ಪೀಡಿತ ಆ ಆನೆಯು ನಿಯಂತ್ರಿಸಲ್ಪಟ್ಟರೂ ಭಿರುಗಾಳಿಯಿಂದ ತೂರಲ್ಪಟ್ಟ ಮೇಘದಂತೆ ಓಡಿಹೋಯಿತು. ಭಿರುಗಾಳಿಯಿಂದ ಒಯ್ಯಲ್ಪಡುವ ಮೇಗವನ್ನು ಭಿರುಗಾಳಿಯಿಂದ ಉಡಾಯಿಸಲ್ಪಟ್ಟ ಮತ್ತೊಂದು ಮೇಘವು ಅನುಸರಿಸಿ ಹೋಗುವಂತೆ ಓಡಿಹೋಗುತ್ತಿದ್ದ ಆ ಆನೆಯನ್ನು ಭೀಮಸೇನನ ಆನೆಯು ಹಿಂಬಾಲಿಸಿತು. ತನ್ನ ಆನೆಯನ್ನು ಪ್ರಯತ್ನತಃ ನಿಲ್ಲಿಸಿ ಕ್ಷೇಮಧೂರ್ತಿಯು ಬಾಣಗಳಿಂದ ಬೆನ್ನೆಟ್ಟಿ ಬರುತ್ತಿದ್ದ ಭೀಮಸೇನನನ್ನು ಅವನ ಆನೆಯೊಂದಿಗೆ ಹೊಡೆದನು. ಆಗ ಭೀಮನು ಕ್ಷುರದಿಂದ ಶತ್ರುವಿನ ಧನುಸ್ಸನ್ನು ತುಂಡರಿಸಿ ಅವನ ಆನೆಯನ್ನೂ ಗಾಯಗೊಳಿಸಿದನು. ಆಗ ಕ್ಷೇಮಧೂರಿಯು ಪರಮ ಕ್ರುದ್ಧನಾಗಿ ನಾರಾಚಗಳಿಂದ ಶತ್ರುವಿನ ಸರ್ವ ಮರ್ಮಗಳನ್ನೂ ಆನೆಯನ್ನೂ ಪ್ರಹರಿಸಿದನು. ತನ್ನ ಆನೆಯು ಕೆಳಕ್ಕೆ ಬೀಳುವುದರೊಳಗೇ ಭೀಮಸೇನನು ಕೆಳಕ್ಕೆ ಧುಮುಕಿ ನೆಲದಮೇಲೆ ಸ್ಥಿರನಾಗಿ ನಿಂತು, ಶತ್ರುವಿನ ಆನೆಯನ್ನು ಗದೆಯಿಂದ ಅಪ್ಪಳಿಸಿ ಸಂಹರಿಸಿದನು.
ಆ ಆನೆಯಿಂದ ಕೆಳಕ್ಕೆ ಹಾರಿ ಖಡ್ಗವನ್ನೆತ್ತಿ ಓಡಿ ಬರುತ್ತಿದ್ದ ಕ್ಷೇಮಧೂರಿಯನ್ನು ವೃಕೋದರನು ಅದೇ ಗದೆಯಿಂದ ಸಂಹರಿಸಿದನು. ಖಡ್ಗದ ಸಮೇತವಾಗಿಯೇ ತನ್ನ ಆನೆಯ ಬಳಿಯೇ ಬಿದ್ದು, ವಜ್ರದಿಂದ ಪ್ರಹರಿಸಲ್ಪಟ್ಟ ಗಿರಿಯ ಮೇಲಿಂದ ವಜ್ರಕ್ಕೆ ಸಿಲುಕಿದ ಸಿಂಹದಂತೆ ಅವನು ಅಸುನೀಗಿದನು. ಯಶಸ್ಕರ ಕುಲೂತರ ನೃಪತಿಯು ಹತನಾದುದನ್ನು ನೋಡಿ ಕೌರವ ಸೇನೆಯು ವ್ಯಥಿತಗೊಂಡು ಓಡಿಹೋಯಿತು.
ವಿಂದಾನುವಿಂದರ ವಧೆ
ಅನಂತರ ಶೂರ ಕರ್ಣನು ಸನ್ನತಪರ್ವ ಶರಗಳಿಂದ ಸಮರದಲ್ಲಿ ಪಾಂಡವರ ಸೇನೆಯನ್ನು ಸಂಹರಿಸಿದನು. ಹಾಗೆಯೇ ಮಹಾರಥ ಪಾಂಡವರು ಕೂಡ ಕ್ರುದ್ಧರಾಗಿ ಕರ್ಣನ ಎದುರೇ ದುರ್ಯೋಧನನ ಸೇನೆಯನ್ನು ಸಂಹರಿಸಿದರು. ಮಹಾಬಾಹು ಕರ್ಣನು ಪಾಂಡವೀ ಸೇನೆಯನ್ನು ಸೂರ್ಯನ ರಶ್ಮಿಗಳಂತೆ ತೀಕ್ಷ್ಣವಾಗಿದ್ದ, ಕಮ್ಮಾರನಲ್ಲಿ ತಯಾರಿಸಿದ್ದ ನಾರಾಚಗಳಿಂದ ಹೊಡೆದನು. ಅಲ್ಲಿ ಕರ್ಣನ ನಾರಾಚಗಳಿಂದ ಹೊಡೆಯಲ್ಪಟ್ಟ ಆನೆಗಳು ಅರಚುತ್ತಿದ್ದವು, ನಿಟ್ಟುಸಿರು ಬಿಡುತ್ತಿದ್ದವು, ನರಳುತ್ತಿದ್ದವು ಮತ್ತು ಹತ್ತೂ ದಿಕ್ಕುಗಳಲ್ಲಿ ಓಡಿ ಹೋಗುತ್ತಿದ್ದವು. ಸೂತಪುತ್ರನು ಆ ಸೇನೆಯನ್ನು ಹಾಗೆ ವಧಿಸುತ್ತಿರಲು ನಕುಲನು ಕೂಡಲೇ ಸೂತಪುತ್ರನನ್ನು ಆಕ್ರಮಣಿಸಿದನು. ಹಾಗೆಯೇ ಭೀಮಸೇನನು ದ್ರೌಣಿಯನ್ನು ಮತ್ತು ಸಾತ್ಯಕಿಯು ಕೇಕಯ ವಿಂದಾನುವಿಂದರನ್ನು ಎದುರಿಸಿದರು. ಮುಂದುವರೆದು ಬರುತ್ತಿದ್ದ ಶ್ರುತಕರ್ಮನನ್ನು ಚಿತ್ರಸೇನ, ಚಿತ್ರನು ಪ್ರತಿವಿಂದ್ಯನನ್ನು, ದುರ್ಯೋಧನನು ರಾಜಾ ಯುಧಿಷ್ಠಿರನನ್ನು, ಮತ್ತು ಧನಂಜಯನು ಸಂಶಪ್ತಕಗಣಗಳನ್ನು ಎದುರಿಸಿ ಯುದ್ಧಮಾಡಿದರು. ಆ ವೀರವರಕ್ಷಯ ಯುದ್ಧದಲ್ಲಿ ಧೃಷ್ಟದ್ಯುಮ್ನನು ಕೃಪನನ್ನು ಮತ್ತು ಕೃತವರ್ಮನನ್ನು ಶಿಖಂಡಿಯು ಎದುರಿಸಿದರು. ಹಾಗೆಯೇ ಶ್ರುತಕೀರ್ತಿಯು ಶಲ್ಯನನ್ನು, ಮತ್ತು ಸಹದೇವನು ದುಃಶಾಸನನನ್ನು ಎದುರಿಸಿ ಯುದ್ಧಮಾಡಿದರು.
ಕೇಕಯ ವಿಂದಾನುವಿಂದರಿಬ್ಬರೂ ಶರವರ್ಷಗಳಿಂದ ಸಾತ್ಯಕಿಯನ್ನೂ ಸಾತ್ಯಕಿಯು ಕೇಕಯರನ್ನೂ ಮುಚ್ಚಿಬಿಟ್ಟರು. ಮಹಾಹವದಲ್ಲಿ ಎರಡು ಆನೆಗಳು ಎದುರಾಳೀ ಆನೆಯನ್ನು ತಮ್ಮ ದಂತಗಳಿಂದ ಇರಿಯುವಂತೆ ಆ ಇಬ್ಬರು ಸಹೋದರರೂ ವೀರ ಸಾತ್ಯಕಿಯ ಹೃದಯಕ್ಕೆ ಅತ್ಯಂತ ಗಾಢವಾಗಿ ಪ್ರಹರಿಸಿದರು. ಅವನ ಕವಚವು ಸೀಳಿಹೋಗಲು ಆ ಇಬ್ಬರು ಸಹೋದರರೂ ಸಾತ್ಯಕಿಯನ್ನು ಶರಗಳಿಂದ ಪ್ರಹರಿಸಿದರು. ಸಾತ್ಯಕಿಯಾದರೋ ಜೋರಾಗಿ ನಗುತ್ತಾ ಸರ್ವದಿಕ್ಕುಗಳನ್ನೂ ಶರವರ್ಷಗಳಿಂದ ಮುಸುಕಿ ಅವರಿಬ್ಬರನ್ನೂ ತಡೆದನು. ಶೈನೇಯನ ಶರವೃಷ್ಟಿಗಳಿಂದ ತಡೆಯಲ್ಪಟ್ಟ ಅವರಿಬ್ಬರೂ ಕೂಡಲೇ ಶೈನೇಯನ ರಥವನ್ನು ಶರಗಳಿಂದ ಮುಚ್ಚಿಬಿಟ್ಟರು. ಶೌರಿಯು ಅವರಿಬ್ಬರ ಚಿತ್ರಿತ ಧನುಸ್ಸುಗಳನ್ನು ಕತ್ತರಿಸಿ ತೀಕ್ಷ್ಣ ದುಃಸ್ಸಹ ಸಾಯಕಗಳಿಂದ ಅವರಿಬ್ಬರನ್ನೂ ಮುಚ್ಚಿಬಿಟ್ಟನು. ಅವರು ಬೇರೆಯೇ ಧನುಸ್ಸುಗಳನ್ನು ಹಿಡಿದು ಮಹಾಶರಗಳಿಂದ ಸಾತ್ಯಕಿಯನ್ನು ಅಚ್ಛಾದಿಸುತ್ತಾ ರಣರಂಗದ ಸುತ್ತ ಶೀಘ್ರವಾಗಿ ಸಂಚರಿಸುತ್ತಿದ್ದರು. ಅವರಿಂದ ಪ್ರಯೋಗಿಸಲ್ಪಟ್ಟ ರಣಹದ್ದಿನ ಮತ್ತು ನವಿಲಿನ ಗರಿಗಳಿಂದ ಶೋಭಿತ ಸ್ವರ್ಣಭೂಷಣ ಮಹಾಬಾಣಗಳು ಎಲ್ಲದಿಕ್ಕುಗಳನ್ನೂ ಪ್ರಕಾಶಿಸುತ್ತಾ ಬೀಳುತ್ತಿದ್ದವು. ಆ ಮಹಾಯುದ್ಧದಲ್ಲಿ ಬಾಣಗಳಿಂದ ಅಂಧಕಾರವು ಕವಿಯಲು ಆ ಮಹಾರಥರು ಅನ್ಯೋನ್ಯರ ಧನುಸ್ಸುಗಳನ್ನು ಕತ್ತರಿಸಿದರು. ಆಗ ಕ್ರುದ್ಧನಾದ ಸಾತ್ವತನು ಅನ್ಯ ಧನುಸ್ಸನ್ನು ಎತ್ತಿಕೊಂಡು ಸಜ್ಜುಗೊಳಿಸಿ ಯುದ್ಧದಲ್ಲಿ ತೀಕ್ಷ್ಣ ಕ್ಷುರಪ್ರದಿಂದ ಅನುವಿಂದನ ಶಿರವನ್ನು ಅಪಹರಿಸಿದನು. ಅತ್ಯಂತ ಪೀಡಿತಗೊಂಡ ಕುಂಡಲಯುಕ್ತ ಆ ಶಿರವು ನಿಹಿತ ಶಂಬರನ ಶಿರದಂತೆ ಮಹಾರಣದಲ್ಲಿ ನೆಲದಮೇಲೆ ಬಿದ್ದು ಕೇಕಯರೆಲ್ಲರನ್ನೂ ಶೋಕಿಸಿತು. ಆ ಬಾಣವು ಭೂಮಿಯನ್ನು ಹೊಕ್ಕಿತು.
ಶೂರ ಸಹೋದರನು ಹತನಾದುದನ್ನು ನೋಡಿ ಮಹಾರಥ ವಿಂದನು ಇನ್ನೊಂದು ಧನುಸ್ಸನ್ನೆತ್ತಿಕೊಂಡು ಶೈನೇಯನನ್ನು ಪ್ರತಿಯಾಗಿ ಹೊಡೆದನು. ಸ್ವರ್ಣಪುಂಖಗಳ ಶಿಲಾಶಿತ ಶಕ್ತಿಯಿಂದ ಸಾತ್ಯಕಿಯನ್ನು ಹೊಡೆದು ಅವನು ಜೋರಾಗಿ ಗರ್ಜಿಸಿ ನಿಲ್ಲು ನಿಲ್ಲೆಂದು ಹೇಳಿದನು. ಆ ಕ್ರುದ್ಧ ಕೇಕಯ ಮಹಾರಥನು ಪುನಃ ಸಾತ್ಯಕಿಯನ್ನು ಅಗ್ನಿಶಿಖೆಗಳ ಆಕಾರದ ಬಾಣಗಳಿಂದ ಅವನ ಎದೆಗೆ ಗುರಿಯಿಟ್ಟು ಹೊಡೆದನು. ಶರಗಳಿಂದ ಸರ್ವಾಂಗಗಳಲ್ಲಿ ಗಾಯಗೊಂಡ ಸಾತ್ವತನು ಸಮರದಲ್ಲಿ ಹೂಬಿಟ್ಟ ಕಿಂಶುಕವೃಕ್ಷದಂತೆ ರಾರಾಜಿಸಿದನು. ಸಮರದಲ್ಲಿ ಕೇಕಯ ಮಹಾತ್ಮನಿಂದ ಪ್ರಹರಿಸಲ್ಪಟ್ಟ ಸಾತ್ಯಕಿಯು ಕೇಕಯನನ್ನು ನಸುನಗುತ್ತಾ ಇಪ್ಪತ್ತೈದು ಶರಗಳಿಂದ ಹೊಡೆದನು. ಉತ್ತಮ ಭುಜಗಳುಳ್ಳ ಅವರಿಬ್ಬರೂ ಶತಚಂದ್ರಚಿತ್ರಿತ ಗುರಾಣಿಗಳನ್ನು ಹಿಡಿದು ಖಡ್ಗಯುದ್ಧಕ್ಕೆ ಅಣಿಯಾಗಿ ಮಹಾರಣದಲ್ಲಿ ದೇವಾಸುರಯುದ್ಧದಲ್ಲಿ ಮಹಾಬಲ ಜಂಭಾಸುರ-ಶಕ್ರರಂತೆ ವಿರಾಜಿಸಿದರು. ಮಹಾರಣದಲ್ಲಿ ಅವರಿಬ್ಬರೂ ಮಂಡಲಾಕಾರಗಳಲ್ಲಿ ತಿರುಗುತ್ತಿದ್ದು ಅನ್ಯೋನ್ಯರನ್ನು ಕೂಡಲೇ ಖಡ್ಗದಿಂದ ಸಂಹರಿಸಲು ಪ್ರಯತ್ನಿಸಿದರು. ಆಗ ಸಾತ್ವತನು ಕೇಕಯನ ಗುರಾಣಿಯನ್ನು ಎರಡಾಗಿ ಕತ್ತರಿಸಿದನು. ಪಾರ್ಥಿವನೂ ಕೂಡ ಸಾತ್ಯಕಿಯ ಗುರಾಣಿಯನ್ನು ಕತ್ತರಿಸಿದನು. ನೂರಾರು ತಾರಾಗಣಗಳಿಂದ ಆವೃತಗೊಂಡಿದ್ದ ಆ ಗುರಾಣಿಯನ್ನು ತುಂಡರಿಸಿ ಕೇಕಯನು ಗತ-ಪ್ರತ್ಯಾಗತವೇ ಮೊದಲಾದ ಮಂಡಲಗಳಲ್ಲಿ ಸಂಚರಿಸತೊಡಗಿದನು. ಮಹಾರಣದಲ್ಲಿ ಶ್ರೇಷ್ಠಖಡ್ಗವನ್ನು ಧರಿಸಿ ಸಂಚರಿಸುತ್ತಿದ್ದ ಅವನನ್ನು ಶೈನೇಯನು ತ್ವರೆಮಾಡಿ ಬಲಗೈಯಿಂದ ತುಂಡರಿಸಿದನು. ಮಹಾಹವದಲ್ಲಿ ಎರಡಾಗಿ ತುಂಡರಿಸಲ್ಪಟ್ಟ ಮಹೇಷ್ವಾಸ ಕೇಕಯನು ವಜ್ರದಿಂದ ಪುಡಿಮಾಡಲ್ವಟ್ಟ ಪರ್ವತದಂತೆ ಕವಚದೊಂದಿಗೆ ಬಿದ್ದನು.
ಅವನನ್ನು ರಣದಲ್ಲಿ ಸಂಹರಿಸಿ ರಥಸತ್ತಮ ಶೂರ ಶೈನೇಯ ಪರಂತಪ ಯುಧಾಮನ್ಯುವು ಬೇಗನೇ ರಥವನ್ನೇರಿದನು. ವಿಧಿವತ್ತಾಗಿ ಕಲ್ಪಿಸಿದ್ದ ಆ ಅನ್ಯ ರಥವನ್ನೇರಿ ಸಾತ್ಯಕಿಯು ಶರಗಳಿಂದ ಕೇಕಯರ ಮಹಾ ಸೇನೆಯನ್ನು ವಧಿಸಿದನು. ಸಮರದಲ್ಲಿ ವಧಿಸಲ್ಪಡುತ್ತಿರುವ ಕೇಕಯರ ಮಹಾಸೇನೆಯು ಶತ್ರುರಥವನ್ನು ಬಿಟ್ಟು ಹತ್ತು ದಿಕ್ಕುಗಳಲ್ಲಿ ಓಡಿಹೋಯಿತು.
ಚಿತ್ರಸೇನ-ಚಿತ್ರರ ವಧೆ
ಸಮರದಲ್ಲಿ ಶ್ರುತಕರ್ಮನು ಕ್ರುದ್ಧನಾಗಿ ಮಹೀಪತಿ ಚಿತ್ರಸೇನನನ್ನು ಐವತ್ತು ಶಿಲೀಮುಖ ಶರಗಳಿಂದ ಗಾಯಗೊಳಿಸಿದನು. ಚಿತ್ರಸೇನನು ಒಂಭತ್ತು ನಿಶಿತ ಶರಗಳಿಂದ ಶ್ರುತಕರ್ಮನನ್ನು ಹೊಡೆದು ಐದರಿಂದ ಸೂತನನ್ನು ಹೊಡೆದನು. ಆಗ ಕ್ರುದ್ಧ ಶ್ರುತಕರ್ಮನು ಚಿತ್ರಸೇನನನ್ನು ತೀಕ್ಷ್ಣ ಶರದಿಂದ ಮರ್ಮದೇಶದಲ್ಲಿ ಹೊಡೆದನು. ಆ ಮಧ್ಯದಲ್ಲಿಯೇ ಶ್ರುತಕೀರ್ತಿಯು ತೊಂಭತ್ತು ಪತ್ರಿಗಳಿಂದ ಚಿತ್ರಸೇನನನ್ನು ಪ್ರಹರಿಸಿದನು. ಆಗ ಸಂಜ್ಞೆಗಳನ್ನು ಪಡೆದ ಚಿತ್ರಸೇನನು ಭಲ್ಲದಿಂದ ಶ್ರುತಕೀರ್ತಿಯ ಧನುಸ್ಸನ್ನು ತುಂಡರಿಸಿ ಏಳು ಶರಗಳಿಂದ ಅವನನ್ನು ಹೊಡೆದನು. ಶ್ರುತಕೀರ್ತಿಯು ವೇಗವನ್ನು ನಾಶಮಾಡುವ ರುಕ್ಮಭೂಷಣ ಚಿತ್ರರೂಪತರ ಅನ್ಯ ಧನುಸ್ಸನ್ನು ತೆಗೆದುಕೊಂಡು ಅಲೆಗಳ ರೂಪದಲ್ಲಿ ಬಾಣಗಳಿಂದ ಚಿತ್ರಸೇನನನ್ನು ಆಕ್ರಮಣಿಸಿದನು. ಶರಗಳಿಂದ ಚಿತ್ರಿತನಾದ ಚಿತ್ರಮಾಲ್ಯಧರ ಯುವಕ ಚಿತ್ರಸೇನನು ಗೋಷ್ಠಿಮಧ್ಯದಲ್ಲಿ ಸ್ವಲಂಕೃತ ಯುವಕನಂತೆ ಶೋಭಿಸಿದನು. ಕೂಡಲೇ ಅವನು ನಾರಾಚಗಳಿಂದ ಶ್ರುತಕರ್ಮನ ಸ್ತನಾಂತರದಲ್ಲಿ ಹೊಡೆದು ಸಮರದಲ್ಲಿ ಕ್ರುದ್ಧನಾಗಿ ನಿಲ್ಲು ನಿಲ್ಲೆಂದು ಹೇಳಿದನು. ಸಮರದಲ್ಲಿ ನಾರಾಚಗಳಿಂದ ಗಾಯಗೊಂಡ ಶ್ರುತಕರ್ಮನಾದರೋ ಧಾತುಗಳನ್ನು ಸುರಿಸುವ ಗಿರಿಯಂತೆ ಬಹಳವಾಗಿ ರಕ್ತವನ್ನು ಸುರಿಸಿದನು. ರುಧಿರಕ್ತಾಂಗನಾದ ದೇಹವೆಲ್ಲಾ ರಕ್ತದಿಂದ ಲೇಪಿತಗೊಂಡಿರಲು ಶ್ರುತಕರ್ಮನು ಹೂಬಿಟ್ಟ ಕಿಂಶುಕದಂತೆ ರಾಜಿಸಿದನು.
ಆಗ ಶ್ರುತಕರ್ಮನು ಸತ್ರುಸಂವರಣವನ್ನು ಮಾಡಿ ಅವನ ಕಾರ್ಮುಕವನ್ನು ಎರಡಾಗಿ ತುಂಡರಿಸಿದನು. ಕೂಡಲೇ ಶ್ರುತಕರ್ಮನು ಧನುಸ್ಸು ತುಂಡಾದ ಚಿತ್ರಸೇನನನ್ನು ಮುನ್ನೂರು ನಾರಾಚಗಳಿಂದ ಪ್ರಹರಿಸಿದನು. ಆಗ ಆ ಮಹಾತ್ಮ ಸತ್ವರನು ತೀಕ್ಷ್ಣ ಭಲ್ಲದಿಂದ ಶಿರಸ್ತ್ರಾಣದೊಂದಿಗೆ ಅವನ ಶಿರಸ್ಸನ್ನು ತುಂಡರಿಸಿದನು. ದೈವೇಚ್ಛೆಯಿಂದ ಚಂದ್ರನು ಸ್ವರ್ಗದಿಂದ ಚ್ಯುತನಾಗಿ ಮಹೀತಲದಲ್ಲಿ ಬೀಳುವಂತೆ ಕಾಂತಿಯುಕ್ತ ಚಿತ್ರಸೇನನ ಶಿರಸ್ಸು ಭೂಮಿಯ ಮೇಲೆ ಬಿದ್ದಿತು. ರಾಜಾ ಅಭಿಸಾರನು ಹತನಾದುದನ್ನು ಕಂಡು ಚಿತ್ರಸೇನನ ಸೈನಿಕರು ವೇಗದಿಂದ ಆಕ್ರಮಣಿಸಿದರು. ಅಗ ಕ್ರುದ್ಧ ಮಹೇಷ್ವಾಸ ಶ್ರುತಕರ್ಮನು ಅಂತಕಾಲದಲ್ಲಿ ಕ್ರುದ್ಧ ಪ್ರೇತರಾಜನು ಸರ್ವಭೂತಗಳನ್ನು ಹೇಗೋ ಹಾಗೆ ಬಾಣಗಳಿಂದ ತಕ್ಷಣವೇ ಆ ಸೇನೆಯನ್ನು ಓಡಿಸಿ ವಿರಾಜಿಸಿದನು.
ಅನಂತರ ಪ್ರತಿವಿಂದ್ಯನು ಚಿತ್ರನನ್ನು ಐದು ಆಶುಗಗಳಿಂದ ಭೇದಿಸಿ, ಮೂರರಿಂದ ಸಾರಥಿಯನ್ನು ಮತ್ತು ಒಂದು ಬಾಣದಿಂದ ಧ್ವಜವನ್ನು ಪ್ರಹರಿಸಿದನು. ಚಿತ್ರನು ಅವನ ಬಾಹು ಮತ್ತು ಎದೆಗಳಿಗೆ ಸ್ವರ್ಣಪುಂಖಗಳುಳ್ಳ, ಶಿಲಾಧೌತ, ಹದ್ದು-ನವಿಲುಗಳ ಗರಿಗಳುಳ್ಳ ಒಂಭತ್ತು ಭಲ್ಲಗಳಿಂದ ಹೊಡೆದನು. ಪ್ರತಿವಿಂದ್ಯನು ಸಾಯಕಗಳಿಂದ ಅವನ ಧನುಸ್ಸನ್ನು ತುಂಡರಿಸಿ ಐದು ನಿಶಿತ ಬಾಣಗಳಿಂದ ಚಿತ್ರನನ್ನು ಗಾಯಗೊಳಿಸಿದನು. ಆಗ ಚಿತ್ರನು ಹೇಮದಂಡದ ದುರಾಸದ ಅಗ್ನಿಶಿಖೆಯಂತೆ ಘೋರವಾಗಿದ್ದ ಶಕ್ತಿಯನ್ನು ಧೃತರಾಷ್ಟನ ಮಗ ಚಿತ್ರನ ಮೇಲೆ ಪ್ರಹರಿಸಿದನು. ಆಕಾಶದಿಂದ ಉಲ್ಕೆಯಂತೆ ತನ್ನ ಮೇಲೆ ಬೀಳುತ್ತಿದ್ದ ಆ ಶಕ್ತಿಯನ್ನು ಕೂಡಲೇ ನಸುನಗುತ್ತಿರುವನೋ ಎನ್ನುವಂತಿದ್ದ ಪ್ರತಿವಿಂದ್ಯನು ಎರಡಾಗಿ ತುಂಡರಿಸಿದನು. ಪ್ರತಿವಿಂದ್ಯನ ನಿಶಿತ ಶರಗಳಿಂದ ತುಂಡಾದ ಆ ಶಕ್ತಿಯು ಯುಗಾಂತದಲ್ಲಿ ಸರ್ವಭೂತಗಳನ್ನು ಭಯಗೊಳಿಸುವ ಮಿಂಚಿನಂತೆ ಕೆಳಗೆ ಬಿದ್ದಿತು. ಆ ಶಕ್ತಿಯು ನಾಶವಾದುದನ್ನು ನೋಡಿ ಚಿತ್ರನು ರುಕ್ಮಜಾಲವಿಭೂಷಿತ ಮಹಾಗದೆಯನ್ನು ಹಿಡಿದು ಪ್ರತಿವಿಂದ್ಯನ ಮೇಲೆ ಎಸೆದನು. ಅದು ಅವನ ಕುದುರೆಗಳನ್ನು ಮತ್ತು ಸಾರಥಿಯನ್ನು ಸಂಹರಿಸಿ ವೇಗದಿಂದ ರಥವನ್ನು ತಳ್ಳಿ ಧರಣಿಯ ಮೇಲೆ ಉರುಳಿಸಿತು. ಅದೇಸಮಯದಲ್ಲಿ ಪ್ರತಿವಿಂದ್ಯನು ರಥದಿಂದ ಹಾರಿ, ಸ್ವರ್ಣಘಂಟೆಗಳಿಂದ ಅಲಂಕೃತ ಶಕ್ತಿಯನ್ನು ಚಿತ್ರನ ಮೇಲೆ ಎಸೆದನು. ಮೇಲಿಂದ ಬೀಳುತ್ತಿದ್ದ ಅದನ್ನು ಚಿತ್ರನು ಹಿಡಿದನು ಮತ್ತು ಅದನ್ನೇ ಪ್ರತಿವಿಂದ್ಯನ ಮೇಲೆ ಎಸೆದನು. ಮಹಾಪ್ರಭೆಯುಳ್ಳ ಅದು ರಣದಲ್ಲಿ ಪ್ರತಿವಿಂದ್ಯನ ಬಲತೋಳನ್ನು ಭೇದಿಸಿ ನೆಲದಮೇಲೆ ಬಿದ್ದಿತು. ಅದು ಬಿದ್ದ ಪ್ರದೇಶವು ಮಿಂಚಿನೋಪಾದಿಯಲ್ಲಿ ಪ್ರಕಾಶಮಾನಗೊಂಡಿತು. ಆಗ ಸಂಕ್ರುದ್ಧನಾಗಿ ಪ್ರತಿವಿಂದ್ಯನು ಚಿತ್ರನ ವಧೆಯನ್ನು ಬಯಸಿ ಹೇಮಭೂಷಿತ ತೋಮರವನ್ನು ಪ್ರಯೋಗಿಸಿದನು. ಅದು ಅವನ ಕವಚವನ್ನೂ ಹೃದಯವನ್ನೂ ಭೇದಿಸಿ ಕೂಡಲೇ ಮಹಾಸರ್ಪವು ಬಿಲವನ್ನು ಹೇಗೋ ಹಾಗೆ ಧರಣಿಯನ್ನು ಹೊಕ್ಕಿತು. ತೋಮರದಿಂದ ಪ್ರಹೃತನಾದ ಚಿತ್ರನು ಪರಿಘೋಪಮ ದಪ್ಪ ತೋಳುಗಳನ್ನು ಹರಡಿ ಬಿದ್ದನು. ಚಿತ್ರನು ಹತನಾದುದನ್ನು ನೋಡಿ ಕೌರವ ರಣಶೋಭಿಗಳು ವೇಗದಿಂದ ಪ್ರತಿವಿಂದ್ಯನನ್ನು ಸುತ್ತುವರೆದು ಆಕ್ರಮಣಿಸಿದರು. ಕಿಂಕಿಣೀಗಂಟೆಗಳುಳ್ಳ ಶತಘ್ನಿಗಳನ್ನೂ ವಿವಿಧ ಬಾಣಗಳನ್ನು ಪ್ರಯೋಗಿಸಿ ಸೂರ್ಯನನ್ನು ಮೋಡಗಳು ಮುಸುಕುವಂತೆ ಅವರು ಪ್ರತಿವಿಂದ್ಯನನ್ನು ಮುಸುಕಿದರು. ಮಹಾಬಾಹು ಪ್ರತಿವಿಂದ್ಯನು ವಜ್ರಹಸ್ತನು ಅಸುರೀ ಸೇನೆಯನ್ನು ಹೇಗೋ ಹಾಗೆ ಶರಜಾಲಗಳಿಂದ ಕೌರವ ಸೇನೆಯನ್ನು ಪ್ರಹರಿಸಿ ಓಡಿಸಿದನು. ಪಾಂಡವರಿಂದ ವಧಿಸಲ್ಪಡುತ್ತಿರುವ ಕೌರವರ ಕಡೆಯವರು ಕೂಡಲೇ ಭಿರುಗಾಳಿಯಿಂದ ಚದುರಿಹೋಗುವ ಮೋಡಗಳಂತೆ ಚದುರಿಹೋದರು.
ಅಶ್ವತ್ಥಾಮ-ಭೀಮಸೇನರ ಯುದ್ಧ
ವಧಿಸಲ್ಪಡುತ್ತಿರುವ ಸೇನೆಯು ಎಲ್ಲಕಡೆ ಪಲಾಯನಮಾಡುತ್ತಿರಲು ದ್ರೌಣಿಯೊಬ್ಬನೇ ಶೀಘ್ರವಾಗಿ ಮಹಾಬಲ ಭೀಮಸೇನನನ್ನು ಆಕ್ರಮಣಿಸಿದನು. ಆಗ ಒಮ್ಮಿಂದೊಮ್ಮೆಲೇ ದೇವಾಸುರ ಯುದ್ಧದಲ್ಲಿ ವೃತ್ರ-ವಾಸವರ ನಡುವೆ ಹೇಗೋ ಹಾಗೆ ಅವರಿಬ್ಬರ ನಡುವೆ ಘೋರ ಯುದ್ಧವು ನಡೆಯಿತು.
ಆಗ ದ್ರೌಣಿಯು ತ್ವರೆಮಾಡಿ ಪರಮ ಯುಕ್ತಿಯಿಂದ ಅಸ್ತ್ರಲಾಘವವನ್ನು ಪ್ರದರ್ಶಿಸುತ್ತಾ ಭೀಮಸೇನನನ್ನು ಪತ್ರಿಗಳಿಂದ ಪ್ರಹರಿಸಿದನು. ಕೂಡಲೇ ಪುನಃ ತೊಂಭತ್ತು ನಿಶಿತ ಶರಗಳಿಂದ ಆ ಲಘುಹಸ್ತನು ಭೀಮಸೇನನನ ಸರ್ವಮರ್ಮಗಳಿಗೆ ಗುರಿಯಿಟ್ಟು ಹೊಡೆದನು. ದ್ರೌಣಿಯ ನಿಶಿತ ಶರಗಳಿಂದ ಸಮಾಕೀರ್ಣ ಭೀಮಸೇನನು ಸಮರದಲ್ಲಿ ಕಿರಣಗಳುಳ್ಳ ಭಾಸ್ಕರನಂತೆ ರಾರಾಜಿಸಿದನು. ಆಗ ಚೆನ್ನಾಗಿ ಪ್ರಹರಿಸಿದ ಸಹಸ್ರ ಶರಗಳಿಂದ ಪಾಂಡವನು ದ್ರೋಣಪುತ್ರನನ್ನು ಮುಚ್ಚಿ ಸಿಂಹನಾದಗೈದನು. ಯುದ್ಧದಲ್ಲಿ ಶರಗಳಿಂದ ಶರಗಳನ್ನು ನಾಶಗೊಳಿಸಿ ದ್ರೌಣಿಯು ನಗುತ್ತಿರುವನೋ ಎನ್ನುವಂತೆ ನಾರಾಚಗಳಿಂದ ಪಾಂಡವನ ಹಣೆಗೆ ಹೊಡೆದನು. ವನದಲ್ಲಿ ಮದಿಸಿದ ಖಡ್ಗಮೃಗವು ಕೋಡನ್ನು ಹೊತ್ತಿರುವಂತೆ ಆ ಬಾಣವು ಪಾಂಡವನ ಹಣೆಯನ್ನು ಹೊಕ್ಕಿ ನಿಂತಿತು. ಆಗ ಪರಾಕ್ರಮೀ ಭೀಮನು ರಣದಲ್ಲಿ ನಸುನಗುತ್ತಿರುವವನಂತೆ ದ್ರೌಣಿಯ ಲಲಾಟಕ್ಕೆ ಮೂರು ನಾರಾಚಗಳಿಂದ ಹೊಡೆದನು. ಹಣೆಗೆ ಚುಚ್ಚಿಕೊಂಡಿದ್ದ ಬಾಣಗಳಿಂದ ಆ ಬ್ರಾಹ್ಮಣನು ವರ್ಷಾಕಾಲದಲ್ಲಿ ಮಳೆಯಿಂದ ತೋಯ್ದ ಮೂರು ಶಿಖರಗಳುಳ್ಳ ಉತ್ತಮ ಪರ್ವತದಂತೆಯೇ ವಿರಾಜಿಸಿದನು. ಆಗ ನೂರು ಶರಗಳಿಂದ ಪಾಂಡವನು ದ್ರೌಣಿಯನ್ನು ಪೀಡಿಸಿದನು. ಆದರೆ ಭಿರುಗಾಳಿಯು ಪರ್ವತವನ್ನು ಅಳ್ಳಾಡಿಸಲು ಸಾಧ್ಯವಾಗದಂತೆ ಅವನನ್ನು ಕಂಪಿಸಲು ಶಕ್ತನಾಗಲಿಲ್ಲ. ಹಾಗೆಯೇ ದ್ರೌಣಿಯು ಯುದ್ಧದಲ್ಲಿ ಪಾಂಡವನನ್ನು ನೂರು ಶರಗಳಿಂದ ಹೊಡೆದರೂ ಮಹಾಜಲಪ್ರವಾಹವು ಪರ್ವತವನ್ನು ಕದಲಿಸಲಾಗದಂತೆ ಅವನನ್ನು ಕದಲಿಸಲಾಗಲಿಲ್ಲ. ರಥದಲ್ಲಿ ಸಂಚರಿಸುತ್ತಿದ್ದ ಅವರಿಬ್ಬರು ಮಹಾರಥ ಶೂರ ರಣೋತ್ಕಟರು ಅನ್ಯೋನ್ಯರನ್ನು ಘೋರ ಶರಸಂಘಗಳಿಂದ ಮುಚ್ಚುತ್ತಾ ಶೋಭಿಸಿದರು. ಆದಿತ್ಯರಂತೆ ಬೆಳಗುತ್ತಿದ್ದ ಆ ಇಬ್ಬರು ಲೋಕಕ್ಷಯಕಾರಕರೂ ತಮ್ಮದೇ ರಶ್ಮಿಗಳಂತಿದ್ದ ಉತ್ತಮ ಶರಗಳಿಂದ ಅನ್ಯೋನ್ಯರನ್ನು ತಾಪಗೊಳಿಸುತ್ತಿದ್ದರು. ಮಾಡಿದುದಕ್ಕೆ ಪ್ರತೀಕಾರ ಮಾಡುವುದರಲ್ಲಿ ಪ್ರಯತ್ನಿಸುತ್ತಿದ್ದ ಅವರಿಬ್ಬರೂ ಅಭೀತರಾಗಿ ಮಹಾರಣದಲ್ಲಿ ಪ್ರತೀಕಾರಮಾಡುತ್ತಿದ್ದರು. ವ್ಯಾಘ್ರಗಳಂತೆ ಸಂಗ್ರಾಮದಲ್ಲಿ ಸಂಚರಿಸುತ್ತಿದ್ದ ಆ ಇಬ್ಬರು ಮಹಾರಥ ದುರಾಧರ್ಷರು ಶರಗಳೇ ಕೋರೆದಾಡೆಗಳಂತೆಯೂ ಧನುಸ್ಸೇ ಮುಖಗಳಂತಿದ್ದು ಭಯಾನಕರಾಗಿ ಕಾಣುತ್ತಿದ್ದರು. ಗಗನದಲ್ಲಿ ಮೇಘಜಾಲಗಳಿಂದ ಮುಚ್ಚಿಹೋದ ಚಂದ್ರ-ಭಾಸ್ಕರರಂತೆ ಅವರಿಬ್ಬರೂ ಎಲ್ಲಕಡೆ ಶರಜಾಲಗಳಿಂದ ಮುಚ್ಚಿ ಇತರರಿಗೆ ಅದೃಶ್ಯರಾಗಿದ್ದರು. ಕ್ಷಣಮಾತ್ರದಲ್ಲಿ ಆ ಅರಿಂದಮರು ಮೇಘಜಾಲಗಳಿಂದ ವಿಮುಕ್ತರಾಗಿ ದಿವಿಯಲ್ಲಿರುವ ಶಶಿ-ಸೂರ್ಯರಂತೆ ಪುನಃ ಪ್ರಕಾಶಿಸುತ್ತಿದ್ದರು.
ಆಗ ಅಲ್ಲಿ ದ್ರೌಣಿಯು ವೃಕೋದರನನ್ನು ಬಲಭಾಗಕ್ಕೆ ಮಾಡಿಕೊಂಡು ಮಳೆಯ ಧಾರೆಯು ಪರ್ವತವನ್ನು ಹೇಗೋ ಹಾಗೆ ನೂರು ಉಗ್ರ ಬಾಣಗಳಿಂದ ಮುಚ್ಚಿಬಿಟ್ಟನು. ಶತ್ರುವಿನ ಆ ವಿಜಯಲಕ್ಷಣವನ್ನು ಭೀಮನು ಸಹಿಸಿಕೊಳ್ಳಲಿಲ್ಲ. ಪಾಂಡವನೂ ಕೂಡ ತಿರುಗಿ ಅವನನ್ನು ಬಲಭಾಗಕ್ಕೆ ಮಾಡಿಕೊಂಡನು. ಮಹಾಮೃಧದಲ್ಲಿ ಮಂಡಲಗಳನ್ನು ವಿಭಾಗಿಸಿಕೊಂಡು ಗತ-ಪ್ರತ್ಯಾಗತರಾಗಿ ಅವರಿಬ್ಬರ ನಡುವೆ ತುಮುಲ ಯುದ್ಧವು ನಡೆಯಿತು. ಮಂಡಲ-ಸ್ಥಾನ ಮೊದಲಾದ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಾ ಅವರಿಬ್ಬರೂ ಪೂರ್ಣವಾಗಿ ಸೆಳೆದುಬಿಟ್ಟ ಶರಗಳಿಂದ ಅನ್ಯೋನ್ಯರನ್ನು ಪ್ರಹರಿಸಿದರು. ಆಹವದಲ್ಲಿ ಆ ಇಬ್ಬರು ಮಹಾರಥರೂ ಅನ್ಯೋನ್ಯರನ್ನು ವಧಿಸಲು ಪ್ರಯತ್ನಿಸಿದರು ಮತ್ತು ಅನ್ಯೋನ್ಯರನ್ನು ವಿರಥರನ್ನಾಗಿ ಮಾಡಲು ಪ್ರಯತ್ನಿಸಿದರು. ಆಗ ಸಮರದಲ್ಲಿ ಮಹಾರಥ ದ್ರೌಣಿಯು ಮಹಾಸ್ತ್ರಗಳನ್ನು ಪ್ರಯೋಗಿಸತೊಡಗಿದನು. ಪಾಂಡವನು ಅವುಗಳನ್ನು ಅಸ್ತ್ರಗಳಿಂದಲೇ ನಾಶಗೊಳಿಸಿದನು. ಆಗ ಪ್ರಜಾಸಂಹರಣದಲ್ಲಿ ನಡೆಯುವ ಘೋರ ಗ್ರಹಯುದ್ಧದಂತೆ ಘೋರ ಅಸ್ತ್ರಯುದ್ಧವು ನಡೆಯಿತು. ಅವರು ಪ್ರಯೋಗಿಸುತ್ತಿದ್ದ ಬಾಣಗಳು ದಿಕ್ಕುಗಳನ್ನು ಬೆಳಗಿಸುತ್ತಾ ಸೈನ್ಯಗಳ ಸುತ್ತಲೂ ಬೀಳುತ್ತಿದ್ದವು. ಪ್ರಜಾಸಂಕ್ಷಯದಲ್ಲಿ ಉಲ್ಕಾಪಾತಗಳಾಗುವಂತೆ ಅವರ ಬಾಣಸಂಘಗಳಿಂದ ಆವೃತ ಆಕಾಶವು ಘೋರವಾಗಿ ಕಂಡಿತು. ಅಲ್ಲಿ ಬಾಣಗಳ ಆಘಾತದಿಂದ ಬೆಂಕಿಯು ಹುಟ್ಟಿಕೊಂಡು ಕಿಡಿ-ಜ್ವಾಲೆಗಳಿಂದ ಕೂಡಿದ ಅದು ಎರಡೂ ಸೇನೆಗಳನ್ನು ಸುಡತೊಡಗಿತು. ಅಲ್ಲಿ ಸಿದ್ಧರು ಈ ಮಾತುಗಳನ್ನು ಆಡತೊಡಗಿದರು:
“ಎಲ್ಲ ಯುದ್ಧಗಳಲ್ಲಿ ಈ ಯುದ್ಧವು ಅಧಿಕವಾಗಿದೆ. ಎಲ್ಲ ಯುದ್ಧಗಳೂ ಇದರ ಹದಿನಾರನೆಯ ಒಂದು ಭಾಗಕ್ಕೂ ಸಾಟಿಯಾಗಲಾರವು. ಇಂತಹ ಯುದ್ಧವು ಪುನಃ ನಡೆಯಲಾರದು ಮತ್ತು ಈ ಹಿಂದೆ ನಡೆದಿರಲಿಲ್ಲ! ಆಹಾ! ಇಬ್ಬರು ಉಗ್ರಪರಾಕ್ರಮಿಗಳೂ ಸಂಪೂರ್ಣವಾಗಿ ತಿಳಿದುಕೊಂಡಿದ್ದಾರೆ. ಆಹಾ! ಭೀಮನು ಭಯಂಕರ ಬಲವುಳ್ಳವನು. ಇನ್ನೊಬ್ಬನು ಅಸ್ತ್ರಗಳಲ್ಲಿ ಪಳಗಿದವನು. ಇವರಲ್ಲಿ ವೀರ್ಯದ ಸಾರತ್ವಗಳಿವೆ. ಇಬ್ಬರಲ್ಲೂ ಶರೀರಸೌಷ್ಟವವಿದೆ. ಸಮರದಲ್ಲಿ ಇಬ್ಬರೂ ಕಾಲಾಂತಕಯಮರಂತೆ ನಿಂತಿದ್ದಾರೆ! ರಣದಲ್ಲಿ ಈ ಪುರುಷವ್ಯಾಘ್ರರಿಬ್ಬರೂ ಇಬ್ಬರು ರುದ್ರರಂತೆಯೂ, ಇಬ್ಬರು ಭಾಸ್ಕರರಂತೆಯೂ ಅಥವಾ ಇಬ್ಬರು ಯಮರಂತೆಯೂ ಘೋರರಾಗಿ ಕಾಣುತ್ತಿದ್ದಾರೆ!”
ಹೀಗೆ ಮಾತನಾಡಿಕೊಳ್ಳುತ್ತಿದ್ದ ಸಿದ್ಧರ ಮಾತುಗಳು ಪುನಃ ಪುನಃ ಕೇಳಿಬರುತ್ತಿತ್ತು. ಯುದ್ಧದಲ್ಲಿ ಅವರಿಬ್ಬರ ಅದ್ಭುತ ಅಚಿಂತ್ಯ ಕರ್ಮಗಳನ್ನು ನೋಡಿ ಸೇರಿದ್ದ ದಿವೌಕಸರ ಸಿಂಹನಾದಗಳೂ ಕೇಳಿಬರುತ್ತಿದ್ದವು. ಸಮರದಲ್ಲಿ ಪರಸ್ಪರಾಪರಾಧಿಗಳಾಗಿದ್ದ ಆ ಇಬ್ಬರು ಶೂರರೂ ಕ್ರೋಧದಿಂದ ಕಣ್ಣುಗಳನ್ನು ಮೇಲೆತ್ತಿ ಪರಸ್ಪರರನ್ನು ದುರುಗುಟ್ಟಿ ನೋಡುತ್ತಿದ್ದರು. ಕ್ರೋಧದಿಂದ ಕಣ್ಣುಗಳು ಕೆಂಪಾಗಿದ್ದವು. ಮತ್ತು ಕ್ರೋಧದಿಂದ ಅವರ ತುಟಿಗಳು ಅದುರುತ್ತಿದ್ದವು. ಕ್ರೋಧದಿಂದ ಕಟಕಟನೆ ಹಲ್ಲುಕಡಿಯುತ್ತಿದ್ದರು ಮತ್ತು ಅವುಡುಗಳನ್ನು ಕಚ್ಚುತ್ತಿದ್ದರು. ಇಬ್ಬರು ಮಹಾರಥರೂ ಶರವೃಷ್ಟಿಯಿಂದ ಅನ್ಯೋನ್ಯರನ್ನು ಮುಚ್ಚುತ್ತಿದ್ದರು. ಸಮರದಲ್ಲಿ ಶರಗಳ ಮಳೆಸುರಿಸಿ ಶಸ್ತ್ರಗಳಿಂದ ಮಿಂಚುಗಳನ್ನು ಪ್ರಕಟಿಸುತ್ತಿದ್ದರು. ಆ ಮಹಾರಥರಿಬ್ಬರೂ ಅನ್ಯೋನ್ಯರ ಧ್ವಜಗಳನ್ನು ಮತ್ತು ಸಾರಥಿಯರನ್ನು ಹೊಡೆದು ಅನ್ಯೋನ್ಯರ ಕುದುರೆಗಳನ್ನು ಹೊಡೆದು ಪರಸ್ಪರರನ್ನು ಪ್ರಹರಿಸಿದರು. ಆಗ ಕ್ರುದ್ಧರಾದ ಮತ್ತು ಅನ್ಯೋನ್ಯರನ್ನು ವಧಿಸಲಿಚ್ಛಿಸುತ್ತಿದ್ದ ಅವರಿಬ್ಬರೂ ಬಾಣಗಳನ್ನು ಹಿಡಿದು ಕೂಡಲೇ ಅನ್ಯೋನ್ಯರಮೇಲೆ ಎಸೆದರು. ವಜ್ರವೇಗದ ದುರಾಸದ ಆ ಎರಡು ಸಾಯಕಗಳೂ ಉರಿಯುತ್ತಾ ಅವರಿಬ್ಬರನ್ನೂ ಪ್ರಹರಿಸಿತು. ಪರಸ್ಪರರ ಆ ಶರಗಳ ವೇಗದಿಂದ ತುಂಬಾ ಗಾಯಗೊಂಡ ಇಬ್ಬರು ಮಹಾವೀರರೂ ತಮ್ಮ ರಥಗಳಲ್ಲಿಯೇ ಕುಸಿದು ಬಿದ್ದರು. ಆಗ ದ್ರೋಣಪುತ್ರನು ಅಚೇತನನಾದುದನ್ನು ತಿಳಿದ ಅವನ ಸಾರಥಿಯು ಅವನನ್ನು ಸರ್ವಕ್ಷತ್ರಿಯರೂ ನೋಡುತ್ತಿದ್ದಂತೆ ರಣದಿಂದ ಆಚೆ ಕೊಂಡೊಯ್ದನು. ಹಾಗೆಯೇ ಪುನಃ ಪುನಃ ವಿಹ್ವಲಿಸುತ್ತಿದ್ದ ಶತ್ರುತಾಪನ ಪಾಂಡವನನ್ನು ಕೂಡ ಅವನ ಸಾರಥಿಯು ರಥದಿಂದ ಆಚೆ ಕೊಂಡೊಯ್ದನು.
ಸಂಶಪ್ತಕರೊಡನೆ ಅರ್ಜುನನ ಯುದ್ಧ
ಅಮಿತ್ರಘ್ನ ಪಾರ್ಥನು ಸಾಗರಸಂನಿಭ ಸಂಶಪ್ತಕಗಣವನ್ನು ಪ್ರವೇಶಿಸಿ ಚಂಡಮಾರುತವು ಸಾಗರವನ್ನು ಅಲ್ಲೋಲಕಲ್ಲೋಲಗೊಳಿಸುವಂತೆ ಕ್ಷೋಭೆಗೊಳಿಸಿದನು. ಸುಂದರ ಕಣ್ಣುಗಳು, ಹುಬ್ಬು, ದಂತಪಂಗ್ತಿಗಳುಳ್ಳ ಪೂರ್ಣಚಂದ್ರದಂತಹ ಮುಖವುಳ್ಳ ವೀರರ ಶಿರಗಳನ್ನು ನಿಶಿತ ಭಲ್ಲಗಳಿಂದ ಧನಂಜಯನು ಕತ್ತರಿಸಿ ನಾಳಗಳಿಲ್ಲದ ಕಮಲಗಳಂತೆ ಭೂಮಿಯ ಮೇಲೆ ಹರಡಿದನು. ದುಂಡುದುಂಡಾಗಿರುವ ಹೂವು-ಚಂದನ-ಅಗರುಗಳಿಂದ ಭೂಷಿತಗೊಂಡಿದ್ದ, ಐದುಹೆಡೆಗಳ ಹಾವುಗಳಂತಿದ್ದ ಅಮಿತ್ರರ ಬಾಹುಗಳನ್ನು ಆಯುಧಗಳೊಂದಿಗೆ ಮತ್ತು ರಕ್ಷಣಾಚೀಲಗಳೊಂದಿಗೆ ಅರ್ಜುನನು ರಣದಲ್ಲಿ ಕ್ಷುರಗಳಿಂದ ಕತ್ತರಿಸಿದನು. ಕುದುರೆಗಳನ್ನೂ, ಕುದುರೆಗಳನ್ನು ಓಡಿಸುತ್ತಿದ್ದ ಸಾರಥಿಗಳನ್ನೂ, ಧ್ವಜಗಳನ್ನೂ, ಚಾಪಗಳನ್ನೂ, ಸಾಯಕಗಳನ್ನೂ, ರತ್ನದುಂಗುರಳನ್ನು ತೊಟ್ಟಿದ್ದ ಶತ್ರುಗಳ ಕೈಗಳನ್ನೂ ಪಾಂಡವನು ಭಲ್ಲಗಳಿಂದ ಕತ್ತರಿಸಿದನು. ಆನೆಗಳನ್ನೂ, ಕುದುರೆಗಳನ್ನೂ, ರಥಗಳನ್ನೂ, ಅವುಗಳನ್ನೇರಿದವರೊಂದಿಗೆ ಅರ್ಜುನನು ರಣದಲ್ಲಿ ಅನೇಕ ಸಾವಿರ ಶರಗಳಿಂದ ಯಮಕ್ಷಯಕ್ಕೆ ಕಳುಹಿಸಿದನು. ಗೂಳಿಯಂತೆ ಘೀಳಿಡುತ್ತಾ ಬರುತ್ತಿದ್ದ ಆ ಪ್ರವೀರನನ್ನು ಸಂಶಪ್ತಕರು ಹಸುಗಳೊಡನೆ ಸಂಗಮಾಡುವ ಇಚ್ಛೆಯಿಂದ ಗುರುಗುಟ್ಟುವ ಮದಿಸಿದ ಹೋರಿಗಳೋಪಾದಿಯಲ್ಲಿ ಗರ್ಜಿಸುತ್ತಾ ಸಂಹರಿಸುತ್ತಿದ್ದ ಅರ್ಜುನನನ್ನು ಮದಿಸಿದ ಹೋರಿಗಳು ಕೊಂಬುಗಳಿಂದ ಇರಿಯುವಂತೆ ಶರಗಳಿಂದ ಪ್ರಹರಿಸಿದರು. ಆಗ ಅವರ ನಡುವೆ ತ್ರೈಲೋಕ್ಯವಿಜಯದ ಸಮಯದಲ್ಲಿ ದೈತ್ಯರೊಂದಿಗೆ ವಜ್ರಿಯ ಯುದ್ಧವು ಹೇಗೆ ನಡೆಯಿತೋ ಹಾಗೆ ಲೋಮಹರ್ಷಣ ಯುದ್ಧವು ನಡೆಯಿತು.
ಅರ್ಜುನನು ಅಸ್ತ್ರಗಳನ್ನು ಅಸ್ತ್ರಗಳಿಂದಲೇ ತಡೆದು ಅನೇಕ ಬಾಣಗಳಿಂದ ಅವರನ್ನು ಸರ್ವತ ಹೊಡೆದು ಪ್ರಾಣಗಳನ್ನು ಅಪಹರಿಸಿದನು. ರಥಗಳ ತ್ರಿವೇಣು, ಚಕ್ರ ಮತ್ತು ಅಚ್ಚುಮರಗಳು ಭಿನ್ನ-ಭಿನ್ನವಾದವು. ರಥಗಳಲ್ಲಿದ್ದ ಕುದುರೆ-ಸಾರಥಿಗಳೂ ಹತರಾದರು. ರಥಗಳಲ್ಲಿದ್ದ ಆಯುಧಗಳೂ, ಬತ್ತಳಿಕೆಗಳೂ ಧ್ವಂಸವಾದವು. ಧ್ವಜದಂಡಗಳು ಕೆಳಗೆ ಬಿದ್ದವು. ನೊಗದ ಹಗ್ಗಗಳೂ, ಕಡಿವಾಣಗಳೂ ಹರಿದುಹೋದವು. ಮೂಕಿಯ ಮರಗಳೇ ಇರಲಿಲ್ಲ. ನೊಗದ ಕೆಳಭಾಗದ ಮೂಕೀಕಂಬಗಳೂ ಕಳಚಿ ಬಿದ್ದಿದ್ದವು. ದೊಡ್ಡ ದೊಡ್ಡ ಮೇಘಗಳನ್ನು ಸುಂಟರಗಾಳಿಯು ಛಿದ್ರಗೊಳಿಸುವಂತೆ ಅರ್ಜುನನು ಸಂಶಪ್ತಕರ ರಥಗಳನ್ನು ಚೂರು-ಚೂರು ಮಾಡಿದನು. ನೋಡುವವರಿಗೆ ವಿಸ್ಮಯವನ್ನುಂಟುಮಾಡುವಂತೆ ಮತ್ತು ಶತ್ರುಗಳ ಭಯವನ್ನು ಹೆಚ್ಚಿಸುವಂತೆ ಅರ್ಜುನನು ಸಹಸ್ರಾರು ಮಹಾರಥಗಳನ್ನು ಸಮಮಾಡುವ ಕೃತ್ಯವನ್ನೆಸಗಿದನು. ಸಿದ್ಧ-ದೇವರ್ಷಿಸಂಘಗಳೂ, ಚಾರಣರೂ ಸಂತೋಷಗೊಂಡರು. ದೇವದುಂದುಭಿಗಳು ಮೊಳಗಿದವು. ಕೇಶವಾರ್ಜುನರ ನೆತ್ತಿಯ ಮೇಳೆ ಪುಷ್ಪವೃಷ್ಟಿಯಾಯಿತು. ಅಶರೀರವಾಣಿಯು ಹೀಗೆ ಹೇಳಿತು:
“ಚಂದ್ರನ ಕಾಂತಿಯನ್ನೂ, ಅಗ್ನಿಯ ದೀಪ್ತಿಯನ್ನೂ, ವಾಯುವಿನ ಬಲವನ್ನೂ, ಸೂರ್ಯನ ತೇಜಸ್ಸನ್ನೂ ಹೊಂದಿರುವ ಒಂದೇ ರಥದಲ್ಲಿ ಕುಳಿತಿರುವ ಈ ವೀರ ಕೇಶವಾರ್ಜುನನು ಬ್ರಹ್ಮ-ರುದ್ರರಂತೆ ಎಲ್ಲರಿಂದಲೂ ಅಜೇಯರಾಗಿದ್ದಾರೆ. ಸರ್ವಭೂತಗಳಿಗೂ ಶ್ರೇಷ್ಠರಾದ ಈ ವೀರರು ನರ-ನಾರಾಯಣರೇ ಆಗಿದ್ದಾರೆ!”
ಅರ್ಜುನ-ಅಶ್ವತ್ಥಾಮರ ಯುದ್ಧ
ಈ ಮಹದಾಶ್ಚರ್ಯವನ್ನು ನೋಡಿ ಮತ್ತು ಕೇಳಿದ ಅಶ್ವತ್ಥಾಮನು ಸರ್ವಸಿದ್ಧತೆಗಳನ್ನೂ ಮಾಡಿಕೊಂಡು ರಣದಲ್ಲಿ ಕೃಷ್ಣಾರ್ಜುನರೆಡೆಗೆ ಧಾವಿಸಿದನು. ಯಮಕಾಲಾಂತಕನಂತೆ ಶರಗಳನ್ನು ಎರಚುತ್ತಿದ್ದ ಪಾಂಡವನನ್ನು ಬಾಣಸಹಿತ ಕೈಯಿಂದಲೇ ಆಹ್ವಾನಿಸಿ ದ್ರೌಣಿಯು ನಗುತ್ತಾ ಹೇಳಿದನು: “ವೀರ! ಒದಗಿರುವ ಯೋಗ್ಯನಾದ ಅತಿಥಿಯಂತೆ ನನ್ನನ್ನು ಭಾವಿಸಿದರೆ ಎಲ್ಲಾ ರೀತಿಯ ಯುದ್ಧಾತಿಥ್ಯವನ್ನು ನೀನು ನನಗೆ ಕೊಡಬಹುದು!”
ಯುದ್ಧಾಸಕ್ತನಾಗಿದ್ದ ಆಚಾರ್ಯಪುತ್ರನಿಂದ ಹೀಗೆ ಆಹ್ವಾನಿಸಲ್ಪಟ್ಟ ಅರ್ಜುನನು ತನ್ನನ್ನೇ ಅಧಿಕನೆಂದು ಭಾವಿಸಿ ಜನಾರ್ದನನಿಗೆ ಹೇಳಿದನು: “ಮಹಾಭುಜ! ಸಂಶಪ್ತಕರನ್ನು ನನಗೆ ವಧಿಸಬೇಕಾಗಿದೆ. ಆದರೆ ದ್ರೌಣಿಯು ನನ್ನನ್ನು ಆಹ್ವಾನಿಸುತ್ತಿದ್ದಾನೆ. ಈಗ ಮೊದಲು ನಾನು ಏನು ಮಾಡಬೇಕೆಂದು ನೀನೇ ಹೇಳು!”
ಪಾರ್ಥನು ಹೀಗೆ ಹೇಳಲು ಕೃಷ್ಣನು ವಿಧಿವತ್ತಾಗಿ ಅಹ್ವಾನಿಸಲ್ಪಟ್ಟ ವಾಯು-ಇಂದ್ರರನ್ನು ಯಜ್ಞಕ್ಕೆ ಕೊಂಡೊಯ್ಯುವಂತೆ ಅವನನ್ನು ದ್ರೋಣಾತ್ಮಜನ ಬಳಿಗೆ ಕೊಂಡೊಯ್ದನು. ಏಕಮನಸ್ಕನಾಗಿ ಕರೆಯುತ್ತಿದ್ದ ದ್ರೌಣಿಗೆ ಕೇಶವನು ಹೇಳಿದನು: “ಅಶ್ವತ್ಥಾಮನ್! ಸ್ಥಿರವಾಗಿ ಪ್ರಹರಿಸು ಮತ್ತು ಪ್ರಹರಗಳನ್ನು ಸಹಿಸಿಕೋ! ಯಜಮಾನನನ್ನು ಆಶ್ರಯಿಸಿ ಜೀವಿಸುವವರಿಗೆ ಸ್ವಾಮಿಯ ಅನ್ನದ ಋಣವನ್ನು ತೀರಿಸುವ ಕಾಲವೀಗ ಸನ್ನಿಹಿತವಾಗಿದೆ. ಕ್ಷತ್ರಿಯರ ಜಯಾಪಜಯಗಳು ಸ್ಥೂಲರೂಪದ್ದು. ಆದರೆ ವಿರರ ಜಯಾಪಜಯಗಳು ಸೂಕ್ಷ್ಮವಾದುದು ಮತ್ತು ವಿವಾದಾತ್ಮಕವಾದುದು. ಮೋಹದಿಂದ ನೀನು ಪಾರ್ಥನ ಯಾವ ದಿವ್ಯಾತಿಥ್ಯವನ್ನು ಬಯಸುತ್ತಿದ್ದೀಯೋ ಅದನ್ನು ಇಚ್ಛೆಯಿದ್ದಷ್ಟು ಪಡೆ. ಸ್ಥಿರನಾಗಿದ್ದುಕೊಂಡು ಇಂದು ಪಾಂಡವನೊಡನೆ ಯುದ್ಧಮಾಡು!”
ವಾಸುದೇವನು ಹೀಗೆ ಹೇಳಲು ಹಾಗೆಯೇ ಆಗಲೆಂದು ಹೇಳಿ ದ್ವಿಜೋತ್ತಮನು ಕೇಶವನನ್ನು ಅರವತ್ತು ನಾರಾಚಗಳಿಂದಲೂ ಮತ್ತು ಅರ್ಜುನನನ್ನು ಮೂರರಿಂದಲೂ ಹೊಡೆದನು. ಅದರಿಂದ ಸಂಕೃದ್ಧನಾದ ಅರ್ಜುನನು ಮೂರು ಭಲ್ಲಗಳಿಂದ ಅವನ ಧನುಸ್ಸನ್ನು ಕತ್ತರಿಸಿದನು. ಆಗ ದ್ರೌಣಿಯು ಇನ್ನೂ ಹೆಚ್ಚಿನ ಘೋರತರ ಧನುಸ್ಸನ್ನು ಎತ್ತಿಕೊಂಡನು. ಕಣ್ಣುಮುಚ್ಚಿ ತೆರೆಯುವುದರೊಳಗ ಧನುಸ್ಸಿಗೆ ಶಿಂಜನಿಯನ್ನು ಬಿಗಿದು ಮೂರು ಅರ್ಜುನ-ಕೇಶವರನ್ನು ಹೊಡೆದನು. ಮೂರು ಬಾಣಗಳಿಂದ ವಾಸುದೇವನನ್ನೂ, ಸಾವಿರದಿಂದ ಪಾಂಡವನನ್ನೂ ಹೊಡೆದನು. ಅನಂತರ ದ್ರೌಣಿಯು ರಣದಲ್ಲಿ ಸಹಸ್ರಾರು ಲಕ್ಷೋಪಲಕ್ಷ ಬಾಣಗಳನ್ನು ಸತತವಾಗಿ ಬಿಟ್ಟು ಅರ್ಜುನನನ್ನು ಅಳ್ಳಾಡದಂತೆ ಮಾಡಿದನು. ಆಗ ಬಾಣಗಳು ಆ ಬ್ರಹ್ಮವಾದಿನಿಯ ಧನುಸ್ಸಿನಿಂದ, ಶಿಂಜನಿಯಿಂದ, ಬೆರಳುಗಳಿಂದ, ಬಾಹುಗಳಿಂದ, ಕೈಗಳಿಂದ, ಎದೆಯಿಂದ, ಮುಖದಿಂದ, ಮೂಗಿನಿಂದ, ಕಿವಿಗಳಿಂದ, ಶಿರಸ್ಸಿನಿಂದ, ಮತ್ತು ಇತರ ಅಂಗಗಳಿಂದ, ಕೂದಲುಗಳಿಂದ, ಕವಚದಿಂದ, ರಥಧ್ವಜದಿಂದ ಸತತವಾಗಿ ಅರ್ಜುನನ ಮೇಲೆ ಬೀಳುತ್ತಿದ್ದವು. ಮಹಾಶರಜಾಲಗಳಿಂದ ಕೇಶವ-ಪಾಂಡವರನ್ನು ಹೊಡೆದು ಮುದಿತನಾದ ದ್ರೌಣಿಯು ಮಹಾಮೇಘವು ಗುಡುಗುವಂತೆ ಜೋರಾಗಿ ಗರ್ಜಿಸಿದನು.
ಅವನ ಆ ನಿನಾದವನ್ನು ಕೇಳಿ ಪಾಂಡವನು ಅಚ್ಯುತನಿಗೆ ಹೇಳಿದನು: “ಮಾಧವ! ನನ್ನ ಕುರಿತು ದ್ರೋಣಪುತ್ರನು ತೋರಿಸಿದ ದೌರಾತ್ಮವನ್ನು ನೋಡು! ಶರಗೃಹದಲ್ಲಿ ಇರಿಸಿರುವ ಇವನು ನಾವಿಬ್ಬರೂ ಸತ್ತುಹೋದೆವೆಂದೇ ಭಾವಿಸಿದ್ದಾನೆ. ನನ್ನ ಶಿಕ್ಷಣ ಮತ್ತು ಬಲಗಳಿಂದ ಇವನ ಸಂಕಲ್ಪವನ್ನು ನಾಶಗೊಳಿಸುತ್ತೇನೆ.”
ಆ ಭರತಶ್ರೇಷ್ಠನು ಅಶ್ವತ್ಥಾಮನು ಬಿಟ್ಟ ಎಲ್ಲ ಬಾಣಗಳನ್ನೂ ಮೂರು ಮೂರು ತುಂಡುಗಳನ್ನಾಗಿ ಕತ್ತರಿಸಿ, ಗಾಳಿಯು ಮಂಜನ್ನು ಕರಗಿಸುವಂತೆ – ನಿರಸನಗೊಳಿಸಿದನು. ಅನಂತರ ಪಾಂಡವನು ಬಾಣಗಳಿಂದ ಅಶ್ವ-ಸೂತ-ರಥ-ಆನೆಗಳಿಂದ ಮತ್ತು ಧ್ವಜ-ಪದಾತಿಗಣಗಳಿಂದ ಕೂಡಿದ್ದ ಸಂಶಪ್ತಕರನ್ನು ಪುನಃ ಗಾಯಗೊಳಿಸಿದನು. ಅಲ್ಲಿ ಯಾರ್ಯಾರು ಯಾವಯಾವ ರೂಪಗಳನ್ನು ಧರಿಸಿದ್ದರೋ ಅವರೆಲ್ಲರೂ ಆಯಾ ಶರಗಳ ರೂಪಗಳನ್ನು ತಾಳಿ ತಾವೂ ಶರಗಳೂ ಒಂದೇ ಎನ್ನುವಂತೆ ಕಂಡುಬಂದರು. ಗಾಂಡೀವದಿಂದ ಕಳುಹಿಸಲ್ಪಟ್ಟ ನಾನಾರೂಪದ ಆ ಪತತ್ರಿಗಳು ಎದಿರು ರಣದಲ್ಲಿ ಒಂದು ಕ್ರೋಶದೂರದಲ್ಲಿ ನಿಂತಿದ್ದ ಆನೆ-ಪುರುಷರನ್ನೂ ಸಂಹರಿಸುತ್ತಿದ್ದವು. ಅವನ ಭಲ್ಲಗಳಿಂದ ಕತ್ತರಿಸಿ ಕೆಳಗುರುಳುತ್ತಿದ್ದ ಮದಭರಿತ ಆನೆಗಳ ಸೊಂಡಿಲುಗಳು ಅರಣ್ಯದಲ್ಲಿ ಕೊಡಲಿಗಳಿಂದ ಕತ್ತರಿಸಿ ಬೀಳಿಸಲ್ಪಡುವ ಬೆಳೆದ ಮರಗಳಂತೆ ತೋರುತ್ತಿದ್ದವು. ಅನಂತರ ಇಂದ್ರನ ವಜ್ರಾಯುಧದಿಂದ ಪ್ರಹೃತಗೊಂಡ ಪರ್ವತಗಳು ಕೆಳಗೆ ಉರುಳಿ ಬೀಳುತ್ತಿದ್ದಂತೆ ಸೊಂಡಿಲುಗಳನ್ನು ಕಳೆದುಕೊಂಡ ಪರ್ವತೋಪಮ ಆನೆಗಳು ಸವಾರರೊಂದಿಗೆ ಕೆಳಗೆ ಬೀಳುತ್ತಿದ್ದವು. ಗಂಧರ್ವನಗರಗಳಂತಿದ್ದ ವಿಧಿವತ್ತಾಗಿ ಸಜ್ಜುಗೊಳಿಸಿದ್ದ ವಿನೀತ ವೇಗದ ಕುದುರೆಗಳನ್ನು ಕಟ್ಟಿದ್ದ ಯುದ್ಧದುರ್ಮದ ಯೋಧರಿಂದ ಕೂಡಿದ್ದ ರಥಗಳನ್ನು ಧನಂಜಯನು ಶರಗಳಿಂದ ಪುಡಿಪುಡಿಮಾಡುತ್ತಾ ಶತ್ರುಗಳ ಮೇಲೆ ಬಾಣಗಳ ಮಳೆಯನ್ನು ಕರೆದು ಅಲಂಕೃತ ಕುದುರೆಗಳು ಮತ್ತು ಸವಾರರನ್ನು, ಪದಾತಿಗಳನ್ನು ಸಂಹರಿಸಿದನು. ಯುಗಾಂತಸೂರ್ಯನಂತಿದ್ದ ಧನಂಜಯನು ತೀವ್ರ ಶರಪ್ರಖರಕಿರಣಗಳಿಂದ ಶೋಷಿಸಲು ಅಸಾಧ್ಯವಾದ ಸಂಶಪ್ತಕಮಹಾಸಮುದ್ರವನ್ನು ಬತ್ತಿಸಿಬಿಟ್ಟನು.
ಪುನಃ ಮಹಾಶೈಲದಂತಿದ್ದ ದ್ರೌಣಿಯನ್ನು ಸೂರ್ಯಸನ್ನಿಭ ನಾರಾಚಗಳಿಂದ ವಜ್ರಿಯು ಪರ್ವತವನ್ನು ಹೇಗೋ ಹಾಗೆ ಮಹಾವೇಗದಿಂದ ತ್ವರೆಮಾಡಿ ಭೇಧಿಸಿದನು. ಅದರಿಂದ ಕ್ರುದ್ಧನಾದ ಆಚಾರ್ಯಸುತನು ನಾಶಕ ಯುದ್ಧಮಾಡಲು ಉತ್ಸುಕನಾಗಿ ಆಶುಗಗಳಿಂದ ಅಶ್ವ-ಸಾರಥಿಗಳೊಂದಿಗೆ ಅವನನ್ನು ಹೊಡೆಯಲು ಪಾರ್ಥನು ಅವುಗಳನ್ನು ಮಧ್ಯದಲ್ಲಿಯೇ ತುಂಡರಿಸಿದನು. ಮನೆಗೆ ಬಂದ ಅತಿಥಿಯ ಮೇಲೆ ತನ್ನ ಸರ್ವಸ್ವವನ್ನೂ ಸುರಿಯುವಂತೆ ಪರಮಸಂಕ್ರುದ್ಧ ಅಶ್ವತ್ಥಾಮನು ಸಕಲಮಹಾಸ್ತ್ರಗಳನ್ನೂ ಅರ್ಜುನನ ಮೇಲೆ ಸುರಿದನು. ಆಗ ಅಪಾಂಕ್ತೇಯರನ್ನು ಬಿಟ್ಟು ಪಂಕ್ತಿಪಾವನ ಆರ್ಥಿಗೆ ದಾನನೀಡುವವನಂತೆ ಪಾಂಡವನು ಸಂಶಪ್ತಕರನ್ನು ಬಿಟ್ಟು ದ್ರೌಣಿಯನ್ನು ಆಕ್ರಮಣಿಸಿದನು. ಆಗ ಆಕಾಶದಲ್ಲಿ ಶುಕ್ರ-ಆಂಗೀರಸ ಬೃಹಸ್ಪತಿ ನಕ್ಷತ್ರಗಳ ನಡುವೆ ನಡೆಯುವ ಯುದ್ಧದಂತೆ ಶುಕ್ರ-ಆಂಗಿರಸ ವರ್ಚಸ್ಸಿನ ಅವರಿಬ್ಬರ ನಡುವೆ ಯುದ್ಧವು ನಡೆಯಿತು. ವಕ್ರಗತಿಯಲ್ಲಿ ಸಂಚರಿಸುವ ಗ್ರಹಗಳಂತೆ ಅನ್ಯೋನ್ಯರನ್ನು ಪ್ರದೀಪ್ತಶರಕಿರಣಗಳಿಂದ ಸಂತಾಪಗೊಳಿಸುತ್ತಿರುವ ಅವರಿಬ್ಬರು ಲೋಕಗಳಿಗೇ ಭಯವನ್ನುಂಟುಮಾಡುತ್ತಿದ್ದರು.
ಆಗ ಅರ್ಜುನನು ನಾರಾಚದಿಂದ ಅವನ ಹುಬ್ಬುಗಳ ಮಧ್ಯೆ ಜೋರಾಗಿ ಹೊಡೆದನು. ಅಧರಿಂದ ದ್ರೌಣಿಯು ಊರ್ಧ್ವರಶ್ಮಿ ಸೂರ್ಯನಂತೆ ಪ್ರಕಾಶಿಸಿದನು. ಕೂಡಲೇ ಅಶ್ವತ್ಥಾಮನು ಕೃಷ್ಣರೀರ್ವರನ್ನೂ ನೂರು ಬಾಣಗಳಿಂದ ಚೆನ್ನಾಗಿ ಹೊಡೆದನು. ಆಗ ಅವರು ರಶ್ಮಿಜಾಲಗಳಿಂದ ಪ್ರಖರಗೊಂಡ ಯುಗಾಂತದ ಸೂರ್ಯರಂತೆ ಪ್ರಕಾಶಿಸಿದರು. ಆಗ ವಾಸುದೇವ ರಕ್ಷಿತ ಅರ್ಜುನನು ಸರ್ವತೋಧಾರಾಸ್ತ್ರವನ್ನು ಪ್ರಯೋಗಿಸಿದನು. ಪುನಃ ದ್ರೌಣಾಯನಿಯನ್ನು ವಜ್ರಾಯುಧ, ಅಗ್ನಿ ಮತ್ತು ಯಮದಂಡಗಳಿಗೆ ಸಮಾನ ಪೃಷತ್ಕಗಳಿಂದ ಪ್ರಹರಿಸಿದನು. ಆ ಅತಿತೇಜಸ್ವಿ ರೌದ್ರಕರ್ಮಿಯು ಕೇಶವ ಮತ್ತು ಅರ್ಜುನರ ಮರ್ಮಸ್ಥಾನಗಳಿಗೆ ಮೃತ್ಯುವೂ ವ್ಯಥೆಗೊಳ್ಳುವ ಉತ್ತಮವಾಗಿ ಪ್ರಯೋಗಿಸಿದ ಅತಿತೀವ್ರವೇಗಗಳ ಬಾಣಗಳಿಂದ ಹೊಡೆದನು. ಅರ್ಜುನನು ದ್ರೌಣಿಯ ಬಾಣಗಳನ್ನು ತಡೆದು ಅವನ ಬಾಣಗಳಿಗಿಂತಲೂ ಎರಡುಪಟ್ಟು ಗುಣಗಳುಳ್ಳ ಸುಂದರ ರೆಕ್ಕೆಗಳ ಬಾಣಗಳಿಂದ ಕೌರವರ ಏಕೈಕ ವೀರನಾಗಿದ್ದ ಅವನನ್ನು ಕುದುರೆಗಳು, ಸಾರಥಿ ಮತ್ತು ಧ್ವಜಗಳೊಂದಿಗೆ ಮುಚ್ಚಿ, ಸಂಶಪ್ತಕ ಸೈನ್ಯವನ್ನು ಆವರಿಸಿ ಆಕ್ರಮಣಿಸಿದನು. ಪರಾಙ್ಮುಖರಾಗದೇ ನಿಂತಿದ್ದ ಶತ್ರುಗಳ ಧನುಸ್ಸುಗಳನ್ನೂ, ಬಾಣಗಳನ್ನೂ, ಬತ್ತಳಿಕೆಗಳನ್ನೂ, ಶಿಂಜಿನಿಗಳನ್ನೂ, ಕೈಗಳನ್ನೂ, ಭುಜಗಳನ್ನೂ, ಕೈಗಳಲ್ಲಿ ಹಿಡಿದಿದ್ದ ಶಸ್ತ್ರಗಳನ್ನೂ, ಚತ್ರಗಳನ್ನೂ, ಧ್ವಜಗಳನ್ನೂ, ಕುದುರೆಗಳನ್ನೂ, ವಸ್ತ್ರಗಳನ್ನೂ, ಮಾಲೆಗಳನ್ನೂ, ಭೂಷಣಗಳನ್ನೂ, ಗುರಾಣಿಗಳನ್ನೂ, ಕವಚಗಳನ್ನೂ, ಮನೋರಥಗಳನ್ನೂ, ಸರ್ವರ ಸುಂದರ ಶಿರಗಳನ್ನೂ ಕೂಡ ಪಾರ್ಥನು ಬಾಣಗಳನ್ನು ಪ್ರಯೋಗಿಸಿ ಕತ್ತರಿಸಿದನು. ಸುಕಲ್ಪಿತವಾಗಿದ್ದ ರಥಕುದುರೆಗಳು ಮತ್ತು ಪ್ರಯತ್ನಪಟ್ಟು ಅವುಗಳಲ್ಲಿ ಸಮಾಸ್ಥಿತರಾಗಿದ್ದ ನರವೀರರು ನರವೀರ ಪಾರ್ಥನ ಬಾಣಗಣಗಳಿಗೆ ಹೆದರಿಯೇ ರಥಕುದುರೆಗಳೊಂದಿಗೆ ಕೆಳಗುರುಳಿದರು. ಕಮಲ ಸೂರ್ಯ ಮತ್ತು ಪೂರ್ಣಚಂದ್ರರ ಸಮಾನ ಮುಖಗಳುಳ್ಳ, ಕಿರೀಟ ಮಾಲೆ ಮುಕುಟಗಳಿಂದ ವಿಭೂಷಿತ ನರರ ಶಿರಗಳು ಅರ್ಜುನನ ಭಲ್ಲ, ಅರ್ಧಚಂದ್ರ ಮತ್ತು ಕ್ಷುರಗಳಿಂದ ಕತ್ತರಿಸಲ್ಪಟ್ಟು ಭೂಮಿಯ ಮೇಲೆ ಉರುಳಿದವು.
ಆಗ ದೇವಪತಿಯ ಐರಾವತದಂತಿದ್ದ ಆನೆಗಳಿಂದ ಕೂಡಿದ ಕಲಿಂಗ, ವಂಗ ಮತ್ತು ನಿಷಾದ ವೀರರು ದೇವಾರಿಗಳ ದರ್ಪವನ್ನು ಅಡಗಿಸಿದ ಪಾಂಡವನನ್ನು ಸಂಹರಿಸಲು ಅವನನ್ನು ಆಕ್ರಮಣಿಸಿದರು. ಪಾರ್ಥನು ಅವರ ಆನೆಗಳನ್ನೂ, ಕವಚಗಳನ್ನೂ, ಮರ್ಮಗಳನ್ನೂ, ಕೈಗಳನ್ನೂ, ಧ್ವಜಗಳನ್ನೂ, ಪತಾಕೆಗಳನ್ನೂ ಕತ್ತರಿಸಲು, ಅವರ ಶಿರಗಳು ವಜ್ರದಿಂದ ಪ್ರಹಾರಿಸಲ್ಪಟ್ಟ ಗಿರಿಗಳಂತೆ ಕೆಳಗುರುಳಿದವು. ಅವರು ಹತರಾಗಿ ಹೋಗಲು ವಾಯುವು ಉದಯಿಸುತ್ತಿರುವ ಸೂರ್ಯನ ಬಣ್ಣದ ಕಿರಣಗಳನ್ನು ಮಹಾಮೋಡಗಳಿಂದ ಮುಸುಕುವಂತೆ ಅರ್ಜುನನು ಗುರುಪುತ್ರ ಅಶ್ವತ್ಥಾಮನನ್ನು ಬಾಣಗಳಿಂದ ಮುಸುಕಿದನು. ಆಗ ದ್ರೌಣಿಯು ಅರ್ಜುನನ ಬಾಣಗಳನ್ನು ಬಾಣಗಳಿಂದಲೇ ನಿರಸನಗೊಳಿಸಿ ವರ್ಷಾಕಾಲದ ಕಾರ್ಮುಗಿಲು ಚಂದ್ರ-ಸೂರ್ಯರನ್ನು ಮುಚ್ಚಿ ಗರ್ಜಿಸುವಂತೆ ಅರ್ಜುನ-ವಾಸುದೇವರನ್ನು ಬಾಣಗಳಿಂದ ಮುಸುಕಿ ಗರ್ಜಿಸಿದನು. ಅಸ್ತ್ರಗಳನ್ನು ತುಂಡರಿಸಿ ಅರ್ಜುನನು ಒಡನೆಯೇ ಪುನಃ ಕೌರವ ಸೇನೆಯಲ್ಲಿ ಬಾಣಾಂಧಕಾರವನ್ನು ನಿರ್ಮಿಸಿ ಎಲ್ಲರನ್ನೂ ಸುಂದರ ಪುಂಖಗಳುಳ್ಳ ಬಾಣಗಳಿಂದ ಪ್ರಹರಿಸಿದನು. ಸವ್ಯಸಾಚಿಯು ಬತ್ತಳಿಕೆಯಿಂದ ಬಾಣಗಳನ್ನು ತೆಗೆದುಕೊಳ್ಳುವುದಾಗಲೀ ಧನುಸ್ಸಿನಲ್ಲಿ ಅನುಸಂಧಾನ ಮಾಡುವುದಾಗಲೀ ಶತ್ರುಗಳ ಮೇಲೆ ಅವುಗಳನ್ನು ಬಿಡುವುದಾಗಲೀ ಕಾಣುತ್ತಲೇ ಇರಲಿಲ್ಲ. ಅವನ ಬಾಣಗಳಿಂದ ಹತಗೊಂಡು ನೇಯಲ್ಪಟ್ಟ ಆನೆಗಳು, ಕುದುರೆಗಳು ಮತ್ತು ಪದಾತಿಗಳ ದೇಹಗಳೂ ರಥಗಳೂ ಮಾತ್ರವೇ ಕಾಣುತ್ತಿದ್ದವು.
ಆಗ ದ್ರೌಣಿಯು ಹತ್ತು ಶ್ರೇಷ್ಠ ನಾರಾಚಗಳನ್ನು ಒಂದೇ ಬಾಣದಂತೆ ಧನುಸ್ಸಿನಲ್ಲಿ ಯೋಜಿಸಿ ಒಂದೇ ಬಾರಿಗೆ ಪ್ರಹರಿಸಿದನು. ಅವುಗಳಲ್ಲಿ ಐದು ಅರ್ಜುನನನ್ನೂ ಐದು ಅಚ್ಯುತನನ್ನೂ ಹೊಡೆದು ಗಾಯಗೊಳಿಸಿದವು. ಕುಬೇರ ಮತ್ತು ಇಂದ್ರರಂತೆ ಸರ್ವಮನುಷ್ಯರ ಮುಖ್ಯರಾಗಿದ್ದ ಅವರು ಅಶ್ವತ್ಥಾಮನ ಬಾಣಗಳಿಂದ ಬಹಳವಾಗಿ ಗಾಯಗೊಂಡರು. ಧನುರ್ವಿದ್ಯೆಯ ಪಾರವನ್ನು ಕಂಡಿರುವ ದ್ರೌಣಿಯಿಂದ ಆ ಅವಸ್ಥೆಗೊಳಗಾದ ಅವರಿಬ್ಬರೂ ಹತರಾದರೆಂದೇ ಅನ್ಯರು ಭಾವಿಸಿದರು. ಆಗ ದಶಾರ್ಹನಾಥನು ಅರ್ಜುನನಿಗೆ ಹೀಗೆ ಹೇಳಿದನು: “ಏಕೆ ಪ್ರಮಾದಕ್ಕೊಳಗಾಗಿದ್ದೀಯೆ? ಈ ಯೋಧನನ್ನು ಸಂಹರಿಸು! ಇವನನ್ನು ಈಗಲೂ ಉಪೇಕ್ಷಿಸಿದರೆ ಇವನು ಇನ್ನೂ ಅನೇಕ ದೋಷಗಳನ್ನೆಸಗುವನು. ವ್ಯಾಧಿಗೆ ಉಪಚಾರವನ್ನು ಸಮಯದಲ್ಲಿ ಮಾಡದಿದ್ದರೆ ಆಗುವಂತೆ ಮುಂದೆ ನಮಗೆ ಕಷ್ಟವಾಗುವುದು!”
ಹಾಗೆಯೇ ಆಗಲೆಂದು ಅಚ್ಯುತನಿಗೆ ಹೇಳಿ ಅರ್ಜುನನು ದ್ರೌಣಿಯನ್ನು ಬಾಣಗಳಿಂದ ಗಾಯಗೊಳಿಸಿದನು ಮತ್ತು ಅವನ ಕುದುರೆಗಳ ಕಡಿವಾಣಗಳನ್ನು ಕತ್ತರಿಸಿ ಕುದುರೆಗಳು ಅವನನ್ನು ರಣದಿಂದ ಅತೀವ ದೂರಕ್ಕೆ ಒಯ್ಯುವಂತೆ ಮಾಡಿದನು. ವೃಷ್ಣಿವೀರ ಮತ್ತು ಧನಂಜಯರಲ್ಲಿ ಜಯವು ನಿಯತವಾಗಿಗೆಯೆಂದು ವಿಮರ್ಶಿಸಿ ನಿರ್ಧರಿಸಿದ ಮತಿವಂತ ಆಂಗಿರಸ ವರಿಷ್ಠ ಅಶ್ವತ್ಥಾಮನು ಪುನಃ ಪಾರ್ಥನೊಂದಿಗೆ ಯುದ್ಧಮಾಡುವುದು ಸರಿಯಲ್ಲವೆಂದು ತಿಳಿದುಕೊಂಡನು. ಮಂತ್ರೌಷಧಿಕ್ರಿಯೆಗಳಿಂದ ದೇಹದ ವ್ಯಾಧಿಗಳು ಪರಿಹಾರವಾಗುವಂತೆ ಪ್ರತಿಕೂಲಕಾರಿ ಅಶ್ವತ್ಥಾಮನು ತನ್ನ ಕುದುರೆಗಳಿಂದಲೇ ದೂರಕ್ಕೊಯ್ಯಲ್ಪಡಲು ಕೇಶವಾರ್ಜುನರು ಗಾಳಿಯಿಂದ ಹಾರಾಡುತ್ತಿದ್ದ ಪತಾಕೆಯುಳ್ಳ ಮತ್ತು ಜಲಪ್ರವಾಹದ ಶಬ್ಧದಂತೆ ಶಬ್ಧಮಾಡುತ್ತಿದ್ದ ರಥದಲ್ಲಿ ಸಂಶಪ್ತಕರಿಗೆ ಅಭಿಮುಖವಾಗಿ ತೆರಳಿದರು.
ದಂಡಧಾರ-ದಂಡರ ವಧೆ
ಆಗ ಪಾಂಡವರ ಸೇನೆಯ ಉತ್ತರ ಭಾಗದಲ್ಲಿ ದಂಡಧಾರ[1]ನಿಂದ ವಧಿಸಲ್ಪಡುತ್ತಿದ್ದ ರಥ-ಗಜ-ಅಶ್ವ-ಪದಾತಿಗಳ ಆರ್ಥನಾದವು ಕೇಳಿಬಂದಿತು. ಆಗ ರಥವನ್ನು ಹಿಂದಿರುಗಿಸಿ ಗರುಡ-ವಾಯುಗಳ ವೇಗವುಳ್ಳ ಕುದುರೆಗಳನ್ನು ನಡೆಸುತ್ತಾ ಕೇಶವನು ಅರ್ಜುನನಿಗೆ ಹೇಳಿದನು: “ಈ ಮಾಗಧನು ಅತಿ ಪರಾಕ್ರಮಿಯು. ಇವನಲ್ಲಿ ಶತ್ರುಗಳನ್ನು ಮಥಿಸುವ ಆನೆಯೂ ಇದೆ. ಶಿಕ್ಷಣ ಮತ್ತು ಬಲದಲ್ಲಿ ಇವನು ಭಗದತ್ತನಿಗೇನು ಕಡಿಮೆಯವನಲ್ಲ. ಇವನನ್ನು ಸಂಹರಿಸಿದ ನಂತರ ಪುನಃ ನೀನು ಸಂಶಪ್ತಕರನ್ನು ಎದುರಿಸಿವೆಯಂತೆ!” ಹೀಗೆ ವಾಕ್ಯವನ್ನು ಮುಗಿಸುವುದರೊಂದಿಗೆ ಪಾರ್ಥನನ್ನು ದಂಡಧಾರನ ಬಳಿ ಕೊಂಡೊಯ್ದನು. ಆ ಮಗಧ ಪ್ರವರನು ಅಂಕುಶಗ್ರಹಣದಲ್ಲಿ ಮತ್ತು ಆನೆಯನ್ನು ನಿಯಂತ್ರಿಸುವುದರಲ್ಲಿ ಅದ್ವಿತೀಯನಾಗಿದ್ದನು. ತನ್ನ ಪ್ರಖರ ಕಿರಣಗಳಿಂದ ಇರುವ ಸೂರ್ಯನಂತೆ ಸಹಿಸಲಸಾಧ್ಯನಾಗಿದ್ದನು. ಮೋಡಗಳಿಲ್ಲದ ದಾರುಣ ಕಿರಣಗಳನ್ನು ಹೊಂದಿದ ಪ್ರಳಯಕಾಲದ ಸೂರ್ಯನು ಸಮಗ್ರಭೂಮಂಡವನ್ನೂ ಧ್ವಂಸಮಾಡುವಂತೆ ಅವನು ಶತ್ರುಗಳ ಸೇನೆಗಳನ್ನು ನಾಶಗೊಳಿಸುತ್ತಿದ್ದನು. ಗಜಾಸುರನಿಗೆ ಸಮಾನವಾಗಿದ್ದ, ಚೆನ್ನಾಗಿ ಸಜ್ಜಾಗಿದ್ದ ಮತ್ತು ಮಹಾಮೇಘದಂತೆ ಗರ್ಜಿಸುತ್ತಾ ಅನೇಕ ಶತ್ತ್ರುಗಳನ್ನು ಧ್ವಂಸಗೊಳಿಸುತ್ತಿದ್ದ ಆನೆಯ ಮೇಲೆ ಕುಳಿತು ದಂಡಧಾರನು ರಥ-ಅಶ್ವ-ಮಾತಂಗ ಗಣಗಳನ್ನು ಸಹಸ್ರಾರು ಸಂಖ್ಯೆಗಳಲ್ಲಿ ಬಾಣಗಳನ್ನು ಪ್ರಯೋಗಿಸಿ ಸಂಹರಿಸುತ್ತಿದ್ದನು. ಕಾಲಚಕ್ರದಂತೆ ಅವನ ಆ ಆನೆಯು ಶತ್ರುರಥಗಳ ಮೇಲೆ ತನ್ನೆರಡು ಕಾಲುಗಳನ್ನು ಇಟ್ಟುಕೊಂಡು ರಥದಲ್ಲಿದ್ದ ಯೋಧರನ್ನೂ ಸಾರಥಿಗಳನ್ನೂ ಮತ್ತು ಕುದುರೆಗಳನ್ನೂ ಕಾಲಿನಿಂದ ತುಳಿದು ಸೊಂಡಿಲಿನಿಂದಲೂ ಎತ್ತಿ ಕೆಳಕ್ಕೆ ಕುಕ್ಕಿ ಸಂಹರಿಸುತ್ತಿತ್ತು. ಲೋಹದ ಕವಚಗಳಿಂದ ಭೂಷಿತರಾದ ಕುದುರೆಗಳ ಸವಾರರನ್ನೂ ಪದಾತಿಗಳೊಂದಿಗೆ ಕೆಳಗುರುಳಿಸಿ ಆ ಅನೆಯು ತುಳಿಯುತ್ತಿರಲು ಅದರಿಂದ ಉಂಟಾಗುವ ಶಬ್ಧವು ದೊಡ್ಡ ಬೆಂಡಿನ ಕಾಡನ್ನು ಅದು ತುಳಿಯುತ್ತಿದೆಯೋ ಎನ್ನುವಂತೆ ಕೇಳಿಬರುತ್ತಿತ್ತು.
ಆಗ ಅರ್ಜುನನು ಧನುಷ್ಟೇಂಕಾರಗಳಿಂದಲೂ, ರಥಚಕ್ರಗಳ ಶಬ್ಧಗಳಿಂದಲೂ, ಮೃದಂಗ-ಭೇರಿ ಮತ್ತು ಅನೇಕ ಶಂಖಗಳ ನಿನಾದಗಳೊಂದಿಗೆ ಮತ್ತು ತನ್ನವರ ಸಹಸ್ರಾರು ನರ-ಅಶ್ವ-ಮಾತಂಗಗಳಿಗೆ ಆನಂದವನ್ನೀಯುತ್ತಾ ಉತ್ತಮ ರಥವನ್ನೇರಿ ಆ ಆನೆಯನ್ನು ಆಕ್ರಮಣಿಸಿದನು. ಆಗ ದಂಡಧಾರನು ಅರ್ಜುನನನ್ನು ಹನ್ನೆರಡು ಉತ್ತಮ ಶರಗಳಿಂದ ಮತ್ತು ಜನಾರ್ದನನನ್ನು ಹದಿನಾರರಿಂದ ಹೊಡೆದನು. ಕುದುರೆಗಳನ್ನೂ ಮೂರು ಮೂರು ಬಾಣಗಳಿಂದ ಹೊಡೆದು ಗರ್ಜಿಸುತ್ತಾ ಗಹ ಗಹಿಸಿ ನಕ್ಕನು. ಆಗ ಪಾರ್ಥನು ಭಲ್ಲಗಳಿಂದ ಬಾಣಗಳಿಂದ ಕೂಡಿದ್ದ ಅವನ ಧನುಸ್ಸನ್ನೂ, ಧ್ವಜವನ್ನೂ, ಅಲಂಕಾರಗಳನ್ನೂ ಕತ್ತರಿಸಿದನು. ಅನಂತರ ಆನೆಯಮೇಲೆ ಕುಳಿತಿದ್ದ ಮಾವಟಿಗರನ್ನೂ ಪಾದರಕ್ಷಕರನ್ನೂ ಸಂಹರಿಸಿ, ಗಿರಿವ್ರಜೇಶ್ವರ ದಂಡಧಾರನನ್ನು ಕುಪಿತಗೊಳಿಸಿದನು. ಕುಂಭಸ್ಥಳದಿಂದ ಮದೋದಕವನ್ನು ಸುರಿಸುತ್ತಿದ್ದ, ವಾಯುವೇಗಕ್ಕೆ ಸಮಾನವೇಗವಿದ್ದ, ಸುತೀಕ್ಷ್ಣ ದಂತಗಳಿದ್ದ ಆ ಮದಿಸಿದ ಆನೆಯಿಂದ ಅರ್ಜುನನನ್ನು ಕ್ಷೋಭೆಗೊಳಿಸಲು ಬಯಸಿ ದಂಡಧಾರನು ತೋಮರಗಳಿಂದ ಜನಾರ್ದನ-ಧನಂಜಯರನ್ನು ಪ್ರಹರಿಸಿದನು. ಕೂಡಲೇ ಪಾಂಡವನು ಆನೆಯ ಸೊಂಡಿಲುಗಳಂತಿದ್ದ ಅವನ ಬಾಹುಗಳನ್ನೂ ಪೂರ್ಣಚಂದ್ರನಂತೆ ಹೊಳೆಯುತ್ತಿದ್ದ ಅವನ ಶಿರಸ್ಸನ್ನೂ ಮೂರು ಕ್ಷುರಗಳಿಂದ ಕತ್ತರಿಸಿದನು ಮತ್ತು ಆನೆಯನ್ನು ನೂರು ಬಾಣಗಳಿಂದ ಪ್ರಹರಿಸಿದನು. ಬಂಗಾರದ ಕವಚವನ್ನು ಧರಿಸಿದ್ದ ಮತ್ತು ಬಂಗಾರದ ಭೂಷಣಗಳಿಂದ ಅಲಂಕೃತವಾಗಿದ್ದ ಆ ಆನೆಯು ಪಾರ್ಥನ ಬಾಣಗಳು ಚುಚ್ಚಿಕೊಳ್ಳಲು ರಾತ್ರಿಯಲ್ಲಿ ದಾವಾಗ್ನಿಯಿಂದ ಸುಡುತ್ತಿದ್ದ ಔಷಧಿವೃಕ್ಷಗಳಿಂದ ಕೂಡಿದ್ದ ಪರ್ವತದಂತೆ ಪ್ರಕಾಶಿಸುತ್ತಿತ್ತು. ಅದು ವೇದನೆಯಿಂದ ಗುಡುಗಿನಂತೆ ಆರ್ತನಾದ ಮಾಡುತ್ತಾ ಎಲ್ಲ ಕಡೆ ತಿರುಗುತ್ತಾ ನಡುನಡುವೆ ತತ್ತರಿಸಿ ಬೀಳುತ್ತಾ ಓಡಿಹೋಗುತ್ತಿತ್ತು. ಆದರೆ ಬಾಣಗಳು ಶರೀರದಲ್ಲಿ ಆಳವಾಗಿ ನೆಟ್ಟಿಹೋದುದರಿಂದ ಮುಂದೆ ಹೋಗಲಾರದೇ ವಜ್ರಾಯುಧದಿಂದ ಸೀಳಲ್ಪಟ್ಟ ಪರ್ವತದಂತೆ ಮಾವಟಿಗರೊಂದಿಗೆ ಕೆಳಗುರುಳಿ ಬಿದ್ದಿತು.
ರಣದಲ್ಲಿ ಅಣ್ಣನು ಹತನಾಗಲು ದಂಡನು ಇಂದ್ರಾವರಜ ಕೃಷ್ಣ ಮತ್ತು ಧನಂಜಯರನ್ನು ಸಂಹರಿಸಲು ಬಯಸಿ ಹಿಮದಂತೆ ಶುಭ್ರವಾಗಿದ್ದ ಸುವರ್ಣಮಾಲೆಯನ್ನು ತೊಟ್ಟಿದ್ದ ಹಿಮವತ್ಪರ್ತದ ಶಿಖರೋಪಾದಿಯಲ್ಲಿದ್ದ ಆನೆಯನ್ನೇರಿ ಆಕ್ರಮಣಿಸಿದನು. ಅವನು ಸೂರ್ಯನ ಕಿರಣಗಳಿಗೆ ಸಮಾನವಾದ ಮೂರು ತೋಮರಗಳಿಂದ ಜನಾರ್ದನನನ್ನೂ ಐದರಿಂದ ಅರ್ಜುನನನ್ನು ಹೊಡೆದು ನಾದಗೈದನು. ಆಗ ಪಾಂಡವನು ಅವನ ಬಾಹುಗಳನ್ನು ತುಂಡರಿಸಿದನು. ಕ್ಷುರದಿಂದ ಕತ್ತರಿಸಲ್ಪಟ್ಟ ಆ ಎರಡು ಅಂಗದಯುಕ್ತ ಚಂದನಲೇಪಿತ ಭುಜಗಳು ತೋಮರಗಳೊಂದಿಗೆ ಆನೆಯಿಂದ ಕೆಳಗೆ ಬೀಳುವಾಗ ಗಿರಿಶೃಂಗದಿಂದ ಕೆಳಕ್ಕೆ ಬೀಳುತ್ತಿರುವ ಮಹಾಸರ್ಪಗಳಂತೆ ತೋರುತ್ತಿದ್ದವು. ಕೂಡಲೇ ಕಿರೀಟಿಯ ಅರ್ಧಚಂದ್ರದಿಂದ ಅಪಹೃತಗೊಂಡ ದಂಡನ ಶಿರವು ಆನೆಯ ಮೇಲಿಂದ ನೆಲಕ್ಕೆ ಬಿದ್ದಿತು. ರಕ್ತದಿಂದ ತೋಯ್ದುಹೋಗಿದ್ದ ಅವನ ಶಿರವು ಆನೆಯ ಮೇಲಿಂದ ಬೀಳುತ್ತಿರುವಾದ ಪಶ್ಚಿಮ ದಿಶೆಯಲ್ಲಿ ಅಸ್ತನಾಗುತ್ತಿರುವ ದಿವಾಕರನಂತೆ ಪ್ರಕಾಶಿಸುತ್ತಿತ್ತು. ನಂತರ ಹಿಮಪರ್ವತಶಿಖರದಂತ್ತಿದ್ದ ಆನೆಯನ್ನು ದಿವಾಕರಕಿರಣಗಳಂತಿದ್ದ ಉತ್ತಮ ಶರಗಳಿಂದ ಪಾರ್ಥನು ಭೇದಿಸಿದನು. ಅದು ಚೀತ್ಕರಿಸುತ್ತಾ ವಜ್ರಾಯುಧದಿಂದ ಪ್ರಹೃತಗೊಂಡ ಹಿಮಾದ್ರಿಕೂಟದಂತೆ ಕೆಳಗುರುಳಿತು. ಆಗ ಅದರಂತೆಯೇ ಇದ್ದ ಇತರ ಉತ್ತಮ ಆನೆಗಳು ಸವ್ಯಸಾಚಿಯನ್ನು ಸಂಹರಿಸಲು ಮುನ್ನುಗ್ಗಿ ಬರಲು ಅರ್ಜುನನು ಆ ಎರಡು ಆನೆಗಳಂತೆ ಇವುಗಳನ್ನೂ ಸಂಹರಿಸಿದನು. ಆಗ ಆ ಮಹಾರಿಪುಬಲವು ಭಗ್ನಗೊಂಡಿತು. ಆನೆಗಳು, ರಥಗಳು, ಕುದುರೆಗಳು, ಮತ್ತು ಪುರುಷ ಗುಂಪುಗಳು ಪರಸ್ಪರರನ್ನು ಕಾದಾಡುತ್ತಾ ರಣದಲ್ಲಿ ಬೀಳುತ್ತಿದ್ದರು. ಪರಸ್ಪರರೊಡನೆ ಯುದ್ಧಮಾಡುತ್ತಾ ಗಾಯಗೊಂಡು ತತ್ತರಿಸುತ್ತಾ ಮನಸ್ಸಿಗೆ ಬಂದಂತೆ ಕೂಗಿಕೊಳ್ಳುತ್ತಾ ಕೆಳಕ್ಕೆ ಬಿದ್ದು ಅಸುನೀಗಿದರು. ಪುರಂದರನನ್ನು ದೇವಗಣಗಳು ಹೇಗೆ ಹಾಗೆ ಅರ್ಜುನನನ್ನು ಸುತ್ತುವರೆದು ಸೈನಿಕರು ಹೀಗೆ ಹೇಳಿದರು: “ಪ್ರಜೆಗಳು ಮರಣಕ್ಕೆ ಹೆದರುವಂತೆ ನಾವು ದಂಡಧಾರನಿಗೆ ಹೆದರಿದ್ದೆವು. ವೀರ! ಅಂಥಹ ಶತ್ರುವನ್ನು ನೀನು ಸಂಹರಿಸಿದುದು ಒಳ್ಳೆಯದೇ ಆಯಿತು. ಬಲಿಷ್ಟ ಶತ್ರುಗಳಿಂದ ಪೀಡಿತರಾದ ಈ ಜನರನ್ನು ಭಯದಿಂದ ನೀನು ರಕ್ಷಿಸದೇ ಇದ್ದರೆ ಶತ್ರುಗಳನ್ನು ನೀನು ಸಂಹರಿಸಿದುದರಿಂದ ನಮಗುಂಟಾದ ಆನಂದದಂತೆ ನಮ್ಮವರ ಸಂಹಾರದಿಂದಾಗಿ ಶತ್ರುಗಳೇ ಮೋದಿಸುತ್ತಿದ್ದರು.” ಹೀಗೆ ಪುನಃ ಪುನಃ ಸುಹೃದಯರು ಹೇಳಿದ ಮಾತುಗಳನ್ನು ಕೇಳಿ ಸುಮನಸ್ಕನಾದ ಅರ್ಜುನನು ಯಥಾನುರೂಪವಾಗಿ ಆ ಜನರನ್ನು ಪುರಸ್ಕರಿಸಿ ಪುನಃ ಸಂಶಪ್ತಕಗಣಗಳ ಬಳಿ ಹೋದನು.
ಸಂಶಪ್ತಕರೊಂದಿಗೆ ಅರ್ಜುನನ ಪುನರ್ಯುದ್ಧ
ವಕ್ರಾನುಗತಿಯಲ್ಲಿರುವ ಅಂಗಾರಕ ಗ್ರಹದಂತೆ ಹಿಂದಿರುಗಿ ಬಂದು ಜಿಷ್ಣುವು ಪುನಃ ಅನೇಕ ಸಂಶಪ್ತಕರನ್ನು ಸಂಹರಿಸಿದನು. ಪಾರ್ಥನ ಬಾಣಗಳಿಂದ ಹತರಾದ ಅಶ್ವ-ರಥ-ಕುಂಜರಗಳು ನಡುಗಿದವು. ಭ್ರಾಂತಗೊಂಡವು. ಕೆಳಕ್ಕೆ ಬಿದ್ದು ಧೂಳು ಮುಕ್ಕಿದವು ಮತ್ತು ಅಂತ್ಯದಲ್ಲಿ ಅಸುವನ್ನು ನೀಗಿದವು. ಸಮರದಲ್ಲಿ ಎದುರಾಗಿ ಯುದ್ಧಮಾಡುತ್ತಿದ್ದ ಅಮಿತ್ರವೀರರ ಕುದುರೆಗಳನ್ನು, ಅವುಗಳ ಕಡಿವಾಣಗಳನು ಹಿಡಿದಿದ್ದ ಸೂತರನ್ನು, ರಥ ಧ್ವಜಗಳನ್ನು, ರಥಿಕರ ಕೈಗಳನ್ನು, ಕೈಗಳಲ್ಲಿ ಹಿಡಿದಿದ್ದ ಶಸ್ತ್ರಗಳನ್ನು, ಬಾಹುಗಳನ್ನು ಮತ್ತು ಶಿರಸ್ಸುಗಳನ್ನು ಕೂಡ ಪಾಂಡವನು ಭಲ್ಲ, ಕ್ಷುರ, ಅರ್ಧಚಂದ್ರ ಮತ್ತು ವತ್ಸದಂತಬಾಣಗಳಿಂದ ಕತ್ತರಿಸಿದನು. ಹಸುವನ್ನು ಕೂಡಲು ಬಂದ ಗೂಳಿಯನ್ನು ಇತರ ಗೂಳಿಗಳು ಆಕ್ರಮಣಿಸುವಂತೆ ನೂರಾರು ಸಹಸ್ರಾರು ಶೂರರು ಅರ್ಜುನನನ್ನು ಆಕ್ರಮಣಿಸಿದರು. ಆಗ ಅವರ ಮಧ್ಯೆ ತ್ರೈಲೋಕ್ಯವಿಜಯದ ಸಮಯದಲ್ಲಿ ದೈತ್ಯರೊಂದಿಗೆ ವಜ್ರಿಯ ಯುದ್ಧವು ನಡೆದಂತೆ ಲೋಮಹರ್ಷಣ ಯುದ್ಧವು ನಡೆಯಿತು. ಆಗ ಉಗ್ರಾಯುಧನು ಭಯಂಕರ ಸರ್ಪಗಳಂತಿದ್ದ ಮೂರು ಬಾಣಗಳಿಂದ ಅರ್ಜುನನನ್ನು ಪ್ರಹರಿಸಲು, ಕೂಡಲೇ ಅವನು ಉಗ್ರಾಯುಧನ ಶಿರಸ್ಸನ್ನು ದೇಹದಿಂದ ಅಪಹರಿಸಿದನು. ಅದರಿಂದ ಕ್ರುದ್ಧರಾದ ಅವನ ಸೈನಿಕರು ವರ್ಷಾಕಾಲದಲ್ಲಿ ಭಿರುಗಾಳಿಯಿಂದ ಪ್ರೇರಿತಗೊಂಡು ಮೇಘಗಳು ಹಿಮವತ್ಪರ್ವತದ ಮೇಲೆ ಸತತ ಮಳೆಗರೆಯುವಂತೆ ನಾನಾ ಶಸ್ತ್ರಾಸ್ತ್ರಗಳನ್ನು ಸುರಿಸಿ ಅರ್ಜುನನನ್ನು ಮುಚ್ಚಿದರು. ಶತ್ರುಗಳ ಅಸ್ತ್ರಗಳನ್ನು ಅಸ್ತ್ರಗಳಿಂದಲೇ ತಡೆದು ಅರ್ಜುನನು ಶರಗಳಿಗೆ ಅಸ್ತ್ರಗಳನ್ನು ಚೆನ್ನಾಗಿ ಹೂಡಿ ಅನೇಕರಾಗಿದ್ದ ಅವರೆಲ್ಲರನ್ನೂ ಒಟ್ಟಿಗೇ ಸಂಹರಿಸಿದನು. ತ್ರಿವೇಣುಸಮೂಹಗಳನ್ನು ಕತ್ತರಿಸಿದನು. ಪಾರ್ಷ್ಣಿಸಾರಥಿಗಳನ್ನು ಸಂಹರಿಸಿದನು. ಬಾಣಗಳಿಂದ ಕಡಿವಾಣಗಳನ್ನು ತುಂಡರಿಸಿ ರಥಗಳ ಗುಂಪುಗಳು ಎಳೆಯುಲ್ಪಟ್ಟು ಎಲ್ಲಕಡೆ ಹರಡಿ ಹೋಗುವಂತೆ ಮಾಡಿದನು. ಅಲ್ಲಿ ವಿಧ್ವಸ್ತಗೊಂಡಿದ್ದ ಆ ಅನೇಕ ಬಹು ಅಮೂಲ್ಯ ರಥಗಳು ಬೆಂಕಿ, ಭಿರುಗಾಳಿ ಮತ್ತು ಪ್ರವಾಹಕ್ಕೆ ಸಿಲುಕಿದ ಧನವಂತರ ಭವನಗಳಂತೆ ಕಾಣುತ್ತಿದ್ದವು. ವಜ್ರಾಯುಧಕ್ಕೆ ಸಮಾನ ಶರಗಳಿಂದ ಆನೆಗಳ ಕವಚಗಳು ಒಡೆದು ಸಿಡಿಲು-ಗಾಳಿ-ಮತ್ತು ಬೆಂಕಿಗೆ ಸಿಲುಕಿ ಪರ್ವತದ ಮೇಲಿಂದ ಬೀಳುತ್ತಿದ್ದ ಭವನಗಳಂತೆ ಕೆಳಗುರುಳಿ ಬೀಳುತ್ತಿದ್ದವು. ಅರ್ಜುನನ ಬಾಣಗಳಿಂದ ಹೊಡೆಯಲ್ಪಟ್ಟ ಅನೇಕ ಕುದುರೆಗಳು ಸವಾರರೊಂದಿಗೆ ಗಾಯಕೊಂಡು ಬಲಗುಂದಿ ರಕ್ತದಿಂದ ತೋಯ್ದು ನಾಲಿಗೆ ಕರುಳುಗಳು ಹೊರಬಂದು ಬಿದ್ದು ನೋಡಲಿಕ್ಕೂ ಸಾಧ್ಯವಾಗದಂತಿದ್ದವು. ಸವ್ಯಸಾಚಿಯ ನಾರಾಚಗಳಿಂದ ಚುಚ್ಚಲ್ಪಟ್ಟ ನರಾಶ್ವಗಜಗಳು ರಣರಂಗದ ಸುತ್ತಲೂ ತಿರುಗುತ್ತಿದ್ದವು. ತತ್ತರಿಸುತ್ತಿದ್ದವು. ನೋವಿನಿಂದ ಕಿರುಚಿಕೊಳ್ಳುತ್ತಿದ್ದವು ಮತ್ತು ಕೆಳಗೆ ಬಿದ್ದು ಹೊರಳಾಡುತ್ತಿದ್ದವು. ವಜ್ರಾಯುಧದ ವಿಷಕ್ಕೆ ಸಮಾನವಾದ ಅಣಕ ಮತ್ತು ಶಿಲಾಧೌತ ಶರಗಳಿಂದ ಪಾರ್ಥನು ದಾನವರನ್ನು ಇಂದ್ರನು ಹೇಗೋ ಹಾಗೆ ಅವರನ್ನು ಸಂಹರಿಸಿದನು. ಬೆಲೆಬಾಳುವ ಕವಚ-ಆಭರಣಗಳನ್ನೂ ನಾನಾರೂಪದ ಉಡುಪು-ಆಯುಧಗಳನ್ನೂ ಧರಿಸಿದ್ದ ವೀರರು ರಥ-ಧ್ವಜಗಳೊಂದಿಗೆ ಪಾರ್ಥನಿಂದ ಹತರಾಗಿ ಮಲಗಿದರು. ಪರಾಜಿತರಾಗಿ ಪ್ರಾಣಗಳನ್ನು ತೊರೆದ ಆ ಪುಣ್ಯಕರ್ಮಿ ಸತ್ಕುಲಪ್ರಸೂತ ಶಾಸ್ತ್ರಜ್ಞಾನಸಂಪನ್ನರು ತಾವು ಮಾಡಿದ ಕರ್ಮದ ಫಲದಿಂದಾಗಿ ಸ್ವರ್ಗವನ್ನೇ ಸೇರಿದರು.
ಕೋಪಗೊಂಡ ಕೌರವ ಪಕ್ಷದ ನಾನಾ ಜನಪದಾಧ್ಯಕ್ಷ ವೀರರು ತಮ್ಮ ತಮ್ಮ ಗಣಗಳೊಂದಿಗೆ ಅರ್ಜುನನ ರಥಕ್ಕೆ ಮುತ್ತಿಗೆ ಹಾಕಿದರು. ರಥ ಮತ್ತು ಕುದುರೆಗಳ ಮೇಲೇರಿದವರು ಮತ್ತು ಪದಾತಿಗಳು ಅವನನ್ನು ಸಂಹರಿಸಲು ಬಯಸಿ ವಿವಿಧ ಆಯುಧಗಳನ್ನು ಪ್ರಯೋಗಿಸುತ್ತಾ ಅತಿ ಶೀಘ್ರವಾಗಿ ಅರ್ಜುನನ ಮೇಲೆ ಎರಗಿ ಬಿದ್ದರು. ಆಗ ಬೇಗನೇ ಯೋಧರೆಂಬ ಮಹಾಮೋಡಗಳು ಸುರಿಸುತ್ತಿದ್ದ ಆಯುಧಗಳೆಂಬ ಮಳೆಯನ್ನು ಅರ್ಜುನನೆಂಬ ಮಾರುತವು ಕ್ಷಿಪ್ರವಾಗಿ ನಿಶಿತ ಬಾಣಗಳಿಂದ ನಾಶಗೊಳಿಸಿತು. ಮಹಾಶಸ್ತ್ರಗಳೆಂಬ ಅಲೆಗಳಿಂದ ಕೂಡಿದ್ದ ಕುದುರೆ-ಪದಾತಿ-ಆನೆ-ರಥಗಳ ಸೇನೆಯೆಂಬ ಆ ಮಹಾಸಾಗರವನ್ನು ಶಸ್ತ್ರಾಸ್ತ್ರಸೇತುವೆಯ ಮೂಲಕ ಬೇಗನೇ ದಾಟಲು ಬಯಸುತ್ತಿದ್ದ ಪಾರ್ಥನನ್ನು ಉದ್ದೇಶಿಸಿ ವಾಸುದೇವನು ಹೇಳಿದನು: “ಪಾರ್ಥ! ಇದೇನು ಆಟವಾಡುತ್ತಿದ್ದೀಯೆ! ಸಂಶಪ್ತಕರನ್ನು ಸದೆಬಡಿದು ನಂತರ ಕರ್ಣವಧೆಗೋಸ್ಕರ ತ್ವರೆಮಾಡು!”
ಹಾಗೆಯೇ ಆಗಲೆಂದು ಹೇಳಿ ಅರ್ಜುನನು ಅಳಿದುಳಿದ ಸಂಶಪ್ತಕರನ್ನು ಬಲಪೂರ್ವಕವಾಗಿ ಶಸ್ತ್ರಗಳಿಂದ ಇಂದ್ರನು ದೈತ್ಯರನ್ನು ಹೇಗೋ ಹಾಗೆ ಕ್ಷಿಪ್ರವಾಗಿ ಸಂಹರಿಸಿದನು. ಆ ಸಮಯದಲ್ಲಿ ಅರ್ಜುನನು ಬಾಣಗಳನ್ನು ತೆಗೆದುಕೊಳ್ಳುತ್ತಿದ್ದುದೂ, ಬಿಲ್ಲಿಗೆ ಹೂಡುತ್ತಿದ್ದುದೂ, ಅಥವಾ ಪ್ರಯೋಗಿಸುತ್ತಿದ್ದಿದೂ ಯಾರಿಗೂ ಕಾಣುತ್ತಿರಲಿಲ್ಲ. ಬಾಣಗಳಿಂದ ಸಾಯುತ್ತಿದ್ದವರು ಮಾತ್ರ ಕಾಣುತ್ತಿದ್ದರು.
ಕೃಷ್ಣನು ಅರ್ಜುನನಿಗೆ ರಣಭೂಮಿಯನ್ನು ವರ್ಣಿಸಿದುದು
ಆಶ್ಚರ್ಯವೆಂದು ಹೇಳುತ್ತಾ ಗೋವಿಂದನು ಹಂಸ-ಚಂದ್ರರಂತೆ ಬಿಳಿಯಾಗಿದ್ದ ಆ ಕುದುರೆಗಳನ್ನು ಪ್ರಚೋದಿಸುತ್ತಾ ಹಂಸಗಳು ಸರೋವರವನ್ನು ಹೇಗೋ ಹಾಗೆ ಸೇನೆಗಳನ್ನು ಪ್ರವೇಶಿಸಿದನು. ಆಗ ಸಂಗ್ರಾಮಭೂಮಿಯಲ್ಲಿ ನಡೆಯುತ್ತಿರುವ ಆ ಜನಕ್ಷಯವನ್ನು ವೀಕ್ಷಿಸುತ್ತಾ ಗೋವಿಂದನು ಸವ್ಯಸಾಚಿಗೆ ಹೇಳಿದನು:
“ಪಾರ್ಥ! ಇಗೋ ದುರ್ಯೋಧನನನು ಮಾಡಿದ ಪೃಥ್ವಿಯ ಪಾರ್ಥಿವರ ಈ ಮಹಾರೌದ್ರ ಮಹಾ ಭರತಕ್ಷಯವು ನಡೆಯುತ್ತಿದೆ. ಧನ್ವಿಗಳ ಬೆಳ್ಳಿಯ ಪಟ್ಟಿಯಿರುವ ಧನುಸ್ಸುಗಳು, ಆಭರಗಳು ಮತ್ತು ಬತ್ತಳಿಕೆಗಳು, ಸುವರ್ಣಮಯ ಪುಂಖಗಳುಳ್ಳ ನತಪರ್ವಣ ಶರಗಳು, ನಾಗಗಳಂತೆ ಪ್ರಯೋಗಿಸಲ್ಪಟ್ಟ ತೈಲದಲ್ಲಿ ತೊಳೆದ ನಾರಾಚಗಳು, ಆನೆಯ ದಂತ ಮತ್ತು ಚಿನ್ನದ ಹಿಡಿಗಳುಳ್ಳ ಖಡ್ಗಗಳು, ಚದುರಿ ಬಿದ್ದಿರುವ ತೋಮರಗಳು, ಚಾಅಪಗಳು ಮತ್ತು ಬಣ್ಣ ಬಣ್ಣದ ಹೇಮ ವಿಭೂಷಣಗಳು, ಕವಚಗಳು, ಬಂಗಾರದ ಪೃಷ್ಟಭಾಗಗಳಿಂದ ಕೂಡಿದ ಗುರಾಣಿಗಳು, ಸುವರ್ಣದಿಂದ ಮಾಡಿದ ಪ್ರಾಸಗಳು, ಕನಕಭೂಷಿತ ಶಕ್ತಿಗಳು, ಬಂಗಾರದ ಪಟ್ಟಿಗಳಿರುವ ದೊಡ್ಡ ದೊಡ್ಡ ಗದೆಗಳು, ಬಂಗಾರದ ಪಟ್ಟಿಗಳಿರುವ ಹೇಮಭೂಷಿತ ಋಷ್ಟಿಗಳು, ಕನಕ ಚಿತ್ರಗಳ ದಂಡಗಳುಳ್ಳ ಪರಶುಗಳು, ಉಕ್ಕಿನಿಂದ ಮಾಡಿದ ಭಾರವಾದ ಮುಸಲಗಳು, ಚಿತ್ರಚಿತ್ರದ ಶತಘ್ನಿಗಳು, ದೊಡ್ಡ ಪರಿಘಗಳೂ, ಚಕ್ರಗಳೂ, ಬಿಲ್ಲುಗಳೂ, ಮುದ್ಗರಗಳೂ ಅನೇಕ ಸಂಖ್ಯೆಗಳಲ್ಲಿ ರಣದಲ್ಲಿ ಬಿದ್ದಿರುವುದನ್ನು ನೋಡು! ವಿಜಯೇಚ್ಛಿಗಳು ನಾನಾವಿಧದ ಶಸ್ತ್ರಗಳನ್ನು ಹಿಡಿದೇ ಸತ್ತುಹೋಗಿದ್ದರೂ ಆ ತರಸ್ವಿಗಳು ಜೀವಂತವಿರುವರೋ ಎನ್ನುವಂತೆ ಕಾಣುತ್ತಿದ್ದಾರೆ. ಗದೆಗಳಿಂದ ಅಂಗಾಗಳೆಲ್ಲವೂ ಜಜ್ಜಿಹೋದ, ಮುಸಲಗಳಿಂದ ತಲೆಗಳು ಒಡೆದುಹೋದ, ಆನೆ-ಕುದುರೆ-ರಥಗಳಿಂದ ತುಳಿಯಲ್ಪಟ್ಟ ಸಹಸ್ರಾರು ಯೋಧರನ್ನು ನೋಡು! ಬಾಣ, ಶಕ್ತಿ, ಋಷ್ಟಿ, ತೋಮರ, ಖಡ್ಗ, ಪಟ್ಟಿಶ, ಪ್ರಾಸ, ನಖರ, ಲಗುಡಗಳಿಂದ ಶರೀರಗಳು ಒಡೆಯಲ್ಪಟ್ಟು ರಕ್ತದಲ್ಲಿ ಮಡುವಿನಲ್ಲಿ ಮುಳುಗಿಹೋಗಿ ಅಸುನೀಗಿರುವ ಮನುಷ್ಯ-ಗಜ-ವಾಜಿಗಳಿಂದ ಈ ರಣಭೂಮಿಯು ತುಂಬಿಹೋಗಿದೆ. ಚಂದನಾದಿಗಳಿಂದ ಲೇಪಿತಗೊಂಡ ಅಂಗದ-ಶುಭಭೂಷಣಗಳಿಂದ ಕೂಡಿರುವ, ಕೇಯೂರ, ತಲತ್ರಗಳಿಂದ ಮತ್ತು ಅಂಗುಲಿತ್ರಗಳಿಂದ ಕೂಡಿರುವ ಮತ್ತು ನಾನಾವಿಧದ ಅಲಂಕಾರಗಳಿಮ್ದ ಕೂಡಿದ ಭುಜಾಗ್ರಗಳಿರುವ ಬಾಹುಗಳಿಂದ ಈ ಮೇದಿನಿಯು ಸಂಪನ್ನವಾಗಿದೆ. ಆನೆಗಳ ಸೊಂಡಿಲುಗಳಂತಿರುವ ಆದರೆ ಒಡೆದುಹೋದ ತರಸ್ವಿಗಳ ತೊಡೆಗಳಿಂದ, ಶ್ರೇಷ್ಠ ಚೂಡಾಮಣಿಗಳನ್ನು ಕಟ್ಟಿದ್ದ ಕುಂಡಲಯುಕ್ತವಾದ ಶಿರಗಳಿಂದ ಮತ್ತು ತುಂಡರಿಸಲ್ಪಟ್ಟ ವೃಷಭಾಕ್ಷರಿಂದ ಈ ವಸುಂಧರೆಯು ವಿರಾಜಿಸುತ್ತಿದ್ದಾಳೆ. ರಕ್ತದಿಂದ ತೋಯ್ದುಹೋಗಿರುವ ಕಬಂದಗಳಿಂದ, ದೇಹವು ತುಂಡಾಗಿರುವ ಶಿರೋಧರಗಳಿಂದ ಭೂಮಿಯು ಬೆಂಕಿಯು ಸುಟ್ಟು ಶಾಂತವಾಗಿರುವಂತೆ ತೋರುತ್ತಿದೆ. ಬಂಗಾರದ ಗಂಟೆಗಳುಳ್ಳ ಶುಭ ರಥಗಳು ಬಹುವಿಧವಾಗಿ ಭಗ್ನವಾಗಿರುವುದನ್ನೂ ಅನೇಕ ಅಶ್ವಗಳು ರಕ್ತದಲ್ಲಿ ಮುಳುಗಿರುವುದನ್ನೂ ನೋಡು!
“ಯೋಧರ ಬಿಳಿಯ ಮಹಾಶಂಖಗಳು ಹರಡಿ ಬಿದ್ದಿರುವುದನ್ನು, ನಾಲಿಗೆಗಳನ್ನು ಹೊರಚಾಚಿ ಸತ್ತು ಮಲಗಿರುವ ಪರ್ವತೋಪಮ ಆನೆಗಳನ್ನು, ಬಣ್ಣ ಬಣ್ಣದ ವೈಜಯಂತೀ ಮಾಲೆಗಳು, ಹತರಾಗಿರುವ ಗಜಯೋಧಿಗಳು, ಆನೆಗಳ ಮೇಲೆ ಹೊದ್ದಿಸಿದ್ದ, ಹರಿದು ವಿಚಿತ್ರವಾಗಿ ಕಾಣುತ್ತಿದ್ದ ಕಂಬಳಿಗಳ ರಾಶಿಗಳು, ಕೆಳಗೆ ಬಿದ್ದು ಆನೆಗಳಿಂದ ತುಳಿದು ಒಡೆಯಲ್ಪಟ್ಟ ಅನೇಕ ಗಂಟೆಗಳು, ನೆಲದಮೇಲೆ ಬಿದ್ದಿದ್ದ ಅಂಕುಶಗಳ ವೈಡೂರ್ಯ-ಮಣಿಗಳ ದಂಡಗಳು, ಕುದುರೆಗಳ ಸವಾರಿಯ ಮೇಲೆ ಕಟ್ಟಿದ್ದ ಸುವರ್ಣ ವಿಚಿತ್ರ ಮಣಿಚಿತ್ರಗಳಿಂದ ಕೂಡಿದ ಹಗ್ಗಗಳು, ನೆಲದ ಮೇಲೆ ಬಿದ್ದಿರುವ ಕುದುರೆಗಳಿಗೆ ಹೊದಿಸಿದ್ದ ರಂಕ ಚರ್ಮದ ಜೀನುಗಳು, ನರೇಂದ್ರರ ಕಾಂಚನಸ್ರಜ ವಿಚಿತ್ರ ಚೂಡಾಮಣಿಗಳು, ಚಂದ್ರ-ನಕ್ಷತ್ರಗಳಂತೆ ಹೊಳೆಯುತ್ತಿರುವ ಮುಖಗಳ ಚಾರುಕುಂಡಲಗಳು, ಗಡ್ಡ ಮೀಸೆಗಳಿಂದ ಕೂಡಿದ್ದ ವೀರರ ಸಮಲಂಕೃತ ಮುಖಗಳು ರಕ್ತ ಮಾಂಸಗಳ ಮಡುವಿನಲ್ಲಿ ಮುಳುಗಿಹೋಗಿರುವುದನ್ನು ನೋಡು! ಶಸ್ತ್ರಗಳಿಂದ ಹೊಡೆಯಲ್ಪಟ್ಟು ಕೆಳಗುರುಳಿಸಲ್ಪಟ್ಟು ನರಳುತ್ತಿರುವ ಸಜೀವ ಮನುಷ್ಯರನ್ನು ಎಲ್ಲೆಡೆ ನೋಡು. ಮಹಾಹವದಲ್ಲಿ ನೀನು ಮಾಡಿದುದು ನಿನಗೆ ಅನುರೂಪವೇ ಆಗಿದೆ. ಸ್ವರ್ಗದಲ್ಲಿರುವ ದೇವರಾಜನು ಮಾತ್ರ ಯುದ್ಧದಲ್ಲಿ ನಿನ್ನಂತಹ ಈ ಕೃತ್ಯವನ್ನು ಮಾಡಬಲ್ಲನು.”
ಈ ರೀತಿ ಕೃಷ್ಣನು ಕಿರೀಟಿಗೆ ಯುದ್ಧಭೂಮಿಯನ್ನು ತೋರಿಸುತ್ತಾ ಹೋಗುತ್ತಿರಲು ದುರ್ಯೋಧನನ ಸೇನೆಯ ಕಡೆಯಿಂದ ಒಂದು ಮಹಾಶಬ್ಧವನ್ನು - ಭೇರೀ-ಪಣವಗಳೊಂದಿಗೆ ಮಿಶ್ರಿತ ಶಂಖದುಂದುಭಿಗಳ ನಿರ್ಘೋಷವನ್ನೂ, ರಥ-ಅಶ್ವ-ಗಜಗಳ ನಾದವನ್ನೂ, ದಾರುಣ ಶಸ್ತ್ರಗಳ ಶಬ್ಧಗಳನ್ನೂ - ಕೇಳಿದನು. ಗಾಳಿಯ ವೇಗದ ಕುದುರೆಗಳೊಂದಿಗೆ ಆ ಸೇನೆಯನ್ನು ಪ್ರವೇಶಿಸಿ ಕೃಷ್ಣನು ಕೌರವ ಸೇನೆಯನ್ನು ಪಾಂಡ್ಯನು ಮರ್ದಿಸುತ್ತಿರುವುದನ್ನು ಕಂಡು ಅಚ್ಚರಿಗೊಂಡನು.
ಅಶ್ವತ್ಥಾಮನಿಂದ ಪಾಂಡ್ಯನ ವಧೆ
ಆಯುಷ್ಯ ಮುಗಿದವರನ್ನು ಅಂತಕನು ಹೇಗೋ ಹಾಗೆ ಧನುರ್ಧಾರಿಪ್ರವರ ಪಾಂಡ್ಯನು ಯುದ್ಧದಲ್ಲಿ ನಾನಾವಿಧದ ಬಾಣಗಳಿಂದ ಶತ್ರುಸಮೂಹಗಳನ್ನು ಸತತವಾಗಿ ನಾಶಗೊಳಿಸುತ್ತಿದ್ದನು. ಆ ಪ್ರಹರಿಗಳಲ್ಲಿ ಶ್ರೇಷ್ಠನು ನಿಶಿತ ಶರಗಳಿಂದ ಗಜ-ವಾಜಿ-ಮನುಷ್ಯರ ಶರೀರಗಳನ್ನು ಭೇದಿಸಿ ವಿದೇಹಿಗಳನ್ನಾಗಿ ಮಾಡುತ್ತಿದ್ದನು. ಶಕ್ರನು ಅಸುರರನ್ನು ಹೇಗೋ ಹಾಗೆ ಪಾಂಡ್ಯನು ಶತ್ರುಪ್ರವೀರರು ಪ್ರಯೋಗಿಸುತ್ತಿದ್ದ ನಾನಾ ಶಸ್ತ್ರಗಳನ್ನು ಸಾಯಕಗಳಿಂದ ತುಂಡುಮಾಡಿ ಅವರನ್ನು ಪುನಃ ಆಕ್ರಮಣಿಸುತ್ತಿದ್ದನು.
ದ್ರೋಣ, ಭೀಷ್ಮ, ಕೃಪ, ದ್ರೌಣಿ, ಕರ್ಣ, ಅರ್ಜುನ ಮತ್ತು ಜನಾರ್ದನರನ್ನು ವಿದ್ಯಾಸಂಪೂರ್ಣರೆಂದೂ ಯುದ್ಧದಲ್ಲಿ ಧನುಶ್ರೇಷ್ಠರೆಂದೂ ತಿಳಿಯುತ್ತಾರೆ. ಆದರೆ ಪಾಂಡ್ಯನು ಕರ್ಣಭೀಷ್ಮರನ್ನು ತನ್ನ ಸಮಾನರೆಂದೂ ವಾಸುದೇವಾರ್ಜುನರು ತನಗಿಂತಲೂ ಕಡಿಮೆಯವರೆಂದೂ ತಿಳಿದುಕೊಂಡಿದ್ದನು. ಆ ಪಾಂಡ್ಯ ನೃಪತಿಶ್ರೇಷ್ಠನು ಅಂತಕನಂತೆ ಕರ್ಣನ ಸೇನೆಯನ್ನು ವಧಿಸಲು ಪ್ರಾರಂಭಿಸಿದನು. ಕರ್ಣನ ಶ್ರೇಷ್ಠ ರಥ-ಕುದುರೆ-ಪದಾತಿ-ಆನೆಗಳಿಂದ ಕೂಡಿದ ಮಹಾಸೇನೆಯು ಪಾಂಡ್ಯನಿಂದ ಧ್ವಂಸಗೊಳಿಸಲ್ಪಟ್ಟು ಕುಂಬಾರನ ಚಕ್ರದೋಪಾದಿಯಲ್ಲಿ ರಣಾಂಗಣದ ಸುತ್ತಲೂ ಸುತ್ತತೊಡಗಿತು. ಭಿರುಗಾಳಿಯು ಮೇಘಗಳನ್ನು ಚದುರಿಸುವಂತೆ ಪಾಂಡ್ಯನು ಚೆನ್ನಾಗಿ ಪ್ರಯೋಗಿಸಿದ ಬಾಣಗಳಿಂದ ಕುದುರೆಗಳು-ಸೂತರು-ಧ್ವಜಗಳೊಂದಿಗೆ ಶತ್ರುಗಳ ರಥಗಳನ್ನು ಚದುರಿಸಿದನು. ವಜ್ರಿಯು ಶತ್ರುಗಳನ್ನು ಸದೆಬಡಿಯುವಂತೆ ಅವನು ಗಜಸೇನೆಗಳನ್ನು ಪತಾಕೆಗಳಿಂದಲೂ ಆಯುಧಗಳಿಂದಲೂ ಮತ್ತು ಧ್ವಜಗಳಿಂದಲೂ ವಿಹೀನರನ್ನಾಗಿಸಿ ಧ್ವಂಸಮಾಡಿದನು. ಶಕ್ತಿ-ಪ್ರಾಸ-ಭತ್ತಳಿಕೆಗಳೊಡನೆ ಅಶ್ವಾರೋಹಿಗಳನ್ನೂ ಕುದುರೆಗಳನ್ನೂ ಹಾಗೆಯೇ ಕ್ರೂರರೂ, ಸಂಗ್ರಾಮ ಕರ್ಕಶರೂ ಆದ ಪುಲಿಂದ-ಖಶ-ಬಾಹ್ಲೀಕ-ನಿಷಾದ-ಆಂಧ್ರ-ಕುಂತಲ-ದಾಕ್ಷಿಣಾತ್ಯ-ಭೋಜರನ್ನು ಬಾಣಗಳಿಂದ ಕವಚವಿಹೀನರನ್ನಾಗಿಸಿ ಪಾಂಡ್ಯನು ಅವರನ್ನು ಪ್ರಾಣರಹಿತರನ್ನಾಗಿಯೂ ಮಾಡಿದನು. ಆಹವದಲ್ಲಿ ಸ್ವಲ್ಪವೂ ಭ್ರಾಂತಗೊಳ್ಳದೇ ಚತುರಂಗಬಲವನ್ನು ಬಾಣಗಳಿಂದ ಸಂಹರಿಸುತ್ತಿದ್ದ ಪಾಂಡ್ಯನನ್ನು ನೋಡಿ ಅಸಂಭ್ರಾಂತ ದ್ರೌಣಿಯು ಆಕ್ರಮಣಿಸಿದನು. ಪ್ರಹರಿಗಳಲ್ಲಿ ಶ್ರೇಷ್ಠ ಅಶ್ವತ್ಥಾಮನು ಭಯವಿಲ್ಲದೇ ನರ್ತಿಸುತ್ತಿದ್ದ ಪಾಂಡ್ಯನನ್ನು ಸಂಬೋಧಿಸುತ್ತಾ ತಾನೂ ಸಹ ಅವನ ಪರಾಕ್ರಮವನ್ನು ನೋಡಿ ಭಯಪಟ್ಟಿಲ್ಲವೆಂದು ತೋರಿಸಿಕೊಳ್ಳುತ್ತಾ ಸುಮಧುರ ಮಾತುಗಳಿಂದ ಮಂದಹಾಸಪೂರ್ವಕವಾಗಿ ಯುದ್ಧಕ್ಕೆ ಅಹ್ವಾನಿಸುತ್ತಾ ಹೇಳಿದನು:
“ರಾಜನ್! ಸುದೀರ್ಘವಾಗಿ ಸೆಳೆಯಲ್ಪಟ್ಟ ಮೌರ್ವಿಯುಳ್ಳ ಮಹಾಧನುಸ್ಸನ್ನು ಮುಷ್ಟಿಯಿಂದ ಹಿಡಿದು ಅಗಲವಾಗಿ ಮಾಡಲ್ಪಟ್ಟ ಎರಡು ತೋಳುಗಳಿಂದಲೂ ಟೇಂಕರಿಸುತ್ತಿರುವಾಗ ನೀನು ಗರ್ಜಿಸುವ ಮಹಾಮೇಘದಂತೆ ಪ್ರಕಾಶಿಸುವೆ! ಮಹಾವೇಗದಿಂದ ಶರವರ್ಷಗಳಿಂದ ಶತ್ರುಸೇನೆಯನ್ನು ಮುಚ್ಚಿತ್ತಿರುವ ನಿನ್ನನ್ನು ಎದುರಿಸುವ ಅನ್ಯ ಪ್ರತಿವೀರನನ್ನು ಈ ಯುದ್ಧದಲ್ಲಿ ನಾನು ಕಾಣಲಾರೆ. ಅರಣ್ಯದಲ್ಲಿ ಮೃಗಸಂಘಗಳನ್ನು ನಿರ್ಭೀತ ಭೀಮಬಲ ಹರಿಯಂತೆ ನೀನು ಅನೇಕ ರಥ-ಗಜ-ಪದಾತಿ-ಅಶ್ವಗಳನ್ನು ಪ್ರಮಥಿಸುತ್ತಿದ್ದೀಯೆ. ಮಹಾರಥಘೋಷದಿಂದ ಭೂಮಿ-ಆಕಾಶಗಳನ್ನು ಪ್ರತಿಧ್ವನಿಸುತ್ತಾ ನೀನು ಶರತ್ಕಾಲದಲ್ಲಿ ಗರ್ಜಿಸುವ ಸಸ್ಯನಾಶಕ ಮೇಘದಂತೆ ಪ್ರಕಾಶಿಸುತ್ತಿರುವೆ. ಸರ್ಪವಿಷೋಪಮ ತೀಕ್ಷ್ಣಶರಗಳನ್ನು ಬಿಡುತ್ತಾ ಅಂಧಕನು ತ್ರ್ಯಂಬಕನೊಡನೆ ಹೇಗೋ ಹಾಗೆ ನನ್ನೊಬ್ಬನೊಡನೆಯೇ ಯುದ್ಧಮಾಡು!”
“ಹಾಗೆಯೇ ಆಗಲಿ! ಪ್ರಹರಿಸು!” ಎಂದು ಹೇಳಿ ಮಲಯಧ್ವಜ ಪಾಂಡ್ಯನು ದ್ರೋಣತನಯನನ್ನು ಕರ್ಣಿಗಳಿಂದ ಹೊಡೆದನು. ದ್ರೌಣಿಯು ನಸುನಗುತ್ತಾ ಮರ್ಮಗಳನ್ನು ಭೀದಿಸುವ ಅಗ್ನಿಶಿಖಗಳಂತಿದ್ದ ಉಗ್ರ ಬಾಣಗಳಿಂದ ಪಾಂಡ್ಯನನ್ನು ಗಾಯಗೊಳಿಸಿದನು. ಅನಂತರ ಅಶ್ವತ್ಥಾಮನು ಅನ್ಯ ಒಂಭತ್ತು ಕಂಕವಾಸಸ ತೀಕ್ಷ್ಣ ನಾರಾಚಗಳನ್ನು ಹತ್ತನೆಯ ಗತಿಯನ್ನುಪಯೋಗಿಸಿ ಪ್ರಯೋಗಿಸಿದನು. ಅವುಗಳನ್ನು ಐದರಿಂದ ತುಂಡರಿಸಿ ಐದು ನಿಶಿತ ಶರಗಳಿಂದ ಪಾಂಡ್ಯನು ಅಶ್ವತ್ಥಾಮನ ನಾಲ್ಕೂ ಕುದುರೆಗಳನ್ನೂ ಹೊಡೆಯಲು ಅವು ಕೂಡಲೇ ಅಸುನೀಗಿದವು. ಪಾಂಡ್ಯನು ನಿಶಿತ ಶರಗಳಿಂದ ದ್ರೋಣಸುತನ ಬಾಣಗಳನ್ನು ಕತ್ತರಿಸಿ ಅವನ ಧನುಸ್ಸಿನ ಶಿಂಜನಿಯನ್ನೂ ಕತ್ತರಿಸಿದನು. ದ್ರೌಣಿಯು ಕೂಡಲೇ ಧನುಸ್ಸಿಗೆ ಇನ್ನೊಂದು ಮೌರ್ವಿಯನ್ನು ಬಿಗಿದು ಪಾಂಡ್ಯನ ಮೇಲೆ ಸಹಸ್ರಾರು ಶರಗಳನ್ನು ಪ್ರಯೋಗಿಸಿ, ಆಕಾಶ ಮತ್ತು ದಿಕ್ಕುಗಳನ್ನು ಬಾಣಗಳಿಂದ ದಟ್ಟವಾಗಿ ತುಂಬಿಸಿದನು. ಆಗ ಪಾಂಡ್ಯನು ದ್ರೌಣಿಯ ಬಾಣಗಳು ಅಕ್ಷಯವಾದುದೆಂದು ತಿಳಿದೂ ಅವುಗಳೆಲ್ಲವನ್ನೂ ತನ್ನ ಬಾಣಗಳಿಂದ ನಿರಸನಗೊಳಿಸಿದನು. ಹೀಗೆ ಶತ್ರುವು ದ್ರೌಣಿಯು ಪ್ರಯೋಗಿಸಿದ ಬಾಣಗಳೆಲ್ಲವನ್ನೂ ಪ್ರಯತ್ನಪಟ್ಟು ಕತ್ತರಿಸಿ ನಿಶಿತ ಶರಗಳಿಂದ ಅವನ ಚಕ್ರರಕ್ಷಕರನ್ನೂ ಸಂಹರಿಸಿದನು. ಆಗ ಅವನ ಹಸ್ತಲಾಘವವನ್ನು ನೋಡಿ ದ್ರೋಣಸುತನು ಧನುಸ್ಸನ್ನು ಮಂಡಲಾಕಾರವನ್ನಾಗಿಸಿ ಪೂಷನ ತಮ್ಮ ಪರ್ಜನ್ಯನು ಹೇಗೋ ಹಾಗೆ ಪಾಂಡ್ಯನ ಮೇಲೆ ಬಾಣಗಳ ಮಳೆಗರೆದನು. ದ್ರೌಣಿಯು ಎಂಟು ಎತ್ತುಗಳಿಂದ ಎಳೆಯಲ್ಪಡುವ ಎಂಟು ಬಂಡಿಗಳಲ್ಲಿ ತುಂಬಿ ತರಬಹುದಾದಷ್ಟು ಆಯುಧಗಳನ್ನು ದಿನದ ಎಂಟನೆಯ ಒಂದು ಭಾಗದಷ್ಟು ಕಾಲದಲ್ಲಿ (ಅರ್ಧಯಾಮದಲ್ಲಿ ಅಥವಾ ಒಂದು ಘಂಟೆಯಲ್ಲಿ) ಪಾಂಡ್ಯನ ಮೇಲೆ ಸುರಿಸಿದನು. ಅಂತಕನಂತೆ ಕ್ರುದ್ಧನಾದ ಅಶ್ವತ್ಥಾಮನು ಕಾಲಾಂತಕನಂತಿದ್ದನು. ಆಗ ಅವನನ್ನು ಅಲ್ಲಿ ಯಾರ್ಯಾರು ನೋಡುತ್ತಿದ್ದರೋ ಅವರೆಲ್ಲರೂ ಪ್ರಾಯಶಃ ಮೂರ್ಛೆಯೇ ಹೋಗುತ್ತಿದ್ದರು! ವರ್ಷಾಕಾಲದಲ್ಲಿ ಪರ್ಜನ್ಯನು ಪರ್ವತ-ವೃಕ್ಷಗಳ ಸಹಿತ ಭೂಮಿಯನ್ನು ಮಳೆಯಿಂದ ಮುಚ್ಚಿ ಬಿಡುವಂತೆ ಆಚಾರ್ಯ ಪುತ್ರನು ಪಾಂಡ್ಯನ ಸೇನೆಯನ್ನು ಬಾಣಗಳ ವೃಷ್ಟಿಯಿಂದ ಅಭಿಷೇಚಿಸಿದನು. ದ್ರೌಣಿಯೆಂಬ ಪರ್ಜನ್ಯನು ಪ್ರಯೋಗಿಸಿದ ಸಹಿಸಲಸಾಧ್ಯ ಆ ಬಾಣವೃಷ್ಟಿಯನ್ನು ಭಿರುಗಾಳಿಯಂತಿದ್ದ ಪಾಂಡ್ಯನು ಬೇಗನೇ ವಾಯುವ್ಯಾಸ್ತ್ರದಿಂದ ನಿರಸನಗೊಳಿಸಿ ಆನಂದದಿಂದ ಸಿಂಹನಾದಗೈದನು. ಸಿಂಹನಾದ ಮಾಡುತ್ತಿದ್ದ ಅವನ ಚಂದನ-ಅಗರುಗಳಿಂದ ಭೂಷಿತ ಮಲಯಪರ್ವತದಂತಿದ್ದ ಕೇತುವನ್ನು ದ್ರೌಣಿಯು ಕತ್ತರಿಸಿ ಅವನ ನಾಲ್ಕು ಕುದುರೆಗಳನ್ನೂ ಸಂಹರಿಸಿದನು. ಸೂತನನ್ನು ಒಂದು ಬಾಣದಿಂದ ಸಂಹರಿಸಿ, ಅರ್ಧಚಂದ್ರದಿಂದ ಅವನ ಮಹಾಮೋಡದಂತೆ ಗರ್ಜಿಸುತ್ತಿದ್ದ ಧನುಸ್ಸನ್ನು ಕತ್ತರಿಸಿ, ಅವನ ರಥವನ್ನು ಎಳ್ಳುಕಾಳಿನಷ್ಟು ಪುಡಿ ಪುಡಿ ಮಾಡಿದನು. ಅಸ್ತ್ರಗಳಿಂದ ಅಸ್ತ್ರಗಳನ್ನು ತಡೆದು, ಸರ್ವಾಯುಧಗಳನ್ನು ತುಂಡರಿಸಿ ದ್ರೌಣಿಯು ಕೈಗೆ ಸಿಕ್ಕಿದರೂ ಹಿತವಲ್ಲವೆಂದು ಇನ್ನೂ ಯುದ್ಧಮಾಡಲು ಬಯಸಿ ಅವನನ್ನು ಕೊಲ್ಲಲಿಲ್ಲ.
ಆಗ ಮಾವುತನನ್ನು ಕಳೆದುಕೊಂಡಿದ್ದ, ಸುಕಲ್ಪಿತವಾಗಿದ್ದ ಶ್ರೇಷ್ಠ ಆನೆಯೊಂದು ಅಲ್ಲಿಗೆ ತ್ವರೆಮಾಡಿ ಬರಲು ಯುದ್ಧನಿಪುಣ ಮಲಯೇಶ್ವರ ಪಾಂಡ್ಯನು ಆ ಮಹಾಗಜವನ್ನು ಸಿಂಹವು ಪರ್ವತಶಿಖರವನ್ನೇರುವಂತೆ ಹತ್ತಿ ಕುಳಿತುಕೊಂಡನು. ಆ ಅದ್ರಿಪತೀಶ್ವರನು ಭಾಸ್ಕರರಶ್ಮಿಸನ್ನಿಭ ತೋಮರವನ್ನು ಬಲ, ಅಸ್ತ್ರಪ್ರಹರಣ, ಉತ್ತಮ ಪ್ರಯತ್ನ ಮತ್ತು ಕೋಪಗಳಿಂದ ಪ್ರೇರಿತನಾಗಿ ಶೀಘ್ರವಾಗಿ ಆನೆಯನ್ನು ನಿಯಂತ್ರಿಸುತ್ತಾ ಗುರುಸುತನ ಮೇಲೆ ಎಸೆದು ಜೋರಾಗಿ ಗರ್ಜಿಸಿದನು. ಶ್ರೇಷ್ಠ ಮಣಿಗಳಿಂದಲೂ, ಉತ್ತಮ ವಜ್ರಗಳಿಂದಲೂ, ವಸ್ತ್ರ, ಸುವರ್ಣ, ಮುಕ್ತಗಳಿಂದ ಅಲಂಕೃತಗೊಂಡಿದ್ದ ದ್ರೌಣಿಯ ಕಿರೀಟವನ್ನು ದ್ರೌಣಿಯು “ನೀನು ಹತನಾದೆ!” ಎಂದು ಕೂಗಿ ಹೇಳುತ್ತಾ ತೋಮರದಿಂದ ಪ್ರಹರಿಸಿ ಜೋರಾಗಿ ನಕ್ಕನು. ಸೂರ್ಯ-ಚಂದ್ರ-ಅಗ್ನಿಗಳ ತೇಜಸ್ಸುಳ್ಳ ಆ ಕಿರೀಟವು ತೋಮರದ ಜೋರಾದ ಹೊಡೆತದಿಂದ ಚೂರು ಚೂರಾಗಿ ಮಹೇಂದ್ರನ ವಜ್ರದ ಆಘಾತಕ್ಕೆ ಒಳಗಾದ ಮಹಾವನ ಸಮೇತ ಪರ್ವತ ಶಿಖರವು ಬೀಳುವಂತೆ ಭೂಮಿಯ ಮೇಲೆ ಬಿದ್ದಿತು. ಆಗ ಅಶ್ವತ್ಥಾಮನು ಕಾಲಿನಿಂದ ತುಳಿಯಲ್ಪಟ್ಟ ನಾಗರಾಜನಂತೆ ಅತ್ಯಂತ ಕುಪಿತನಾಗಿ ಪ್ರಜ್ವಲಿಸಿದನು. ಅಂತಕನ ದಂಡಗಳಂತಿದ್ದ ಹದಿನಾಲ್ಕು ಶತ್ರುಗಳ ಅಂತಕ ಬಾಣಗಳನ್ನು ಅವನು ತೆಗೆದುಕೊಂಡನು. ಐದು ಬಾಣಗಳಿಂದ ಆ ಆನೆಯ ನಾಲ್ಕು ಕಾಲುಗಳನ್ನೂ ಸೊಂಡಿಲನ್ನೂ ತುಂಡರಿಸಿದನು. ಮೂರರಿಂದ ನೃಪನ ಬಾಹುಗಳನ್ನು ಮತ್ತು ಶಿರಗಳನ್ನು ಕತ್ತರಿಸಿದನು. ಆರರಿಂದ ಪಾಂಡ್ಯರಾಜನ ಅನುಯಾಯೀ ಆರು ಮಹಾರಥರನ್ನೂ ಸಂಹರಿಸಿದನು. ಸುದೀರ್ಘವೂ, ದುಂಡಾಗಿಯೂ ಇದ್ದ ಶ್ರೇಷ್ಠ ಚಂದನಲೇಪಿತವಾಗಿದ್ದ, ಸುವರ್ಣಮುಕ್ತಾಮಣಿವಜ್ರವಿಭೂಷಿತವಾಗಿದ್ದ ಆ ನೃಪನ ಭುಜಗಳೆರಡೂ ಗರುಡನಿಂದ ಹತಗೊಂಡ ಉರಗಗಳಂತೆ ಧರಣಿಯ ಮೇಲೆ ಬಿದ್ದವು. ಪೂರ್ಣಚಂದ್ರನ ಪ್ರಭೆಯಿದ್ದ, ರೋಷದಿಂದ ಕೆಂಪಾದ ಕಣ್ಣುಗಳಿದ್ದ, ಸುಂದರ ಮೂಗಿದ್ದ ಅವನ ಶಿರಸ್ಸು ಕೂಡ ಕುಂಡಲಗಳೊಂದಿಗೆ ಭೂಮಿಯ ಮೇಲೆ ಬಿದ್ದು ವಿಶಾಖಾನಕ್ಷತ್ರಗಳ ಮಧ್ಯೆಯಿರುವ ಶಶಿಯಂತೆ ಪ್ರಕಾಶಿಸಿತು. ಆಗ ವಿದ್ಯೆಯಿಂದ ಪರಿಪೂರ್ಣನಾಗಿದ್ದ ಮತ್ತು ಮಾಡಬೇಕಾದುದನ್ನು ಮಾಡಿ ಮುಗಿಸಿದ ಅಶ್ವತ್ಥಾಮನನ್ನು ಸುಹೃದಯರಿಂದ ಆವೃತನಾಗಿದ್ದ ನೃಪ ದುರ್ಯೋಧನನು ಸಂತೋಷಭರಿತನಾಗಿ ಬಲಿಯನ್ನು ಗೆದ್ದ ವಿಷ್ಣುವನ್ನು ಅಮರೇಶ್ವರನು ಹೇಗೋ ಹಾಗೆ ಪೂಜಿಸಿ ಗೌರವಿಸಿದನು.
[1] ಮಗಧದೇಶದ ಕ್ಷತ್ರಿಯ, ಕ್ರೋಧವರ್ಧನ ಎಂಬ ರಾಕ್ಷಸನ ಅಂಶದಿಂದ ಹುಟ್ಟಿದವನು.