ಶೋಕಾರ್ತನಾದ ಧೃತರಾಷ್ಟ್ರನನ್ನು ವಿದುರ-ವ್ಯಾಸರು ಸಂತೈಸಿದುದು
ಧೃತರಾಷ್ಟ್ರ-ಸಂಜಯರ ಸಂವಾದ
ಪುತ್ರಶತರನ್ನು ಕಳೆದುಕೊಂಡು ರೆಂಬೆಗಳು ಕಡಿದ ವೃಕ್ಷದಂತೆ ದೀನನಾಗಿದ್ದ, ಪುತ್ರಶೋಕದಿಂದ ಸಂತಪ್ತನಾಗಿದ್ದ, ಧ್ಯಾನ-ಮೂಕತ್ವಗಳನ್ನು ಪಡೆದಿದ್ದ, ಚಿಂತೆಯಲ್ಲಿ ಮುಳುಗಿಹೋಗಿದ್ದ ಮಹೀಪತಿ ಧೃತರಾಷ್ಟ್ರನ ಬಳಿಹೋಗಿ ಮಹಾಪ್ರಾಜ್ಞ ಸಂಜಯನು ಇಂತೆಂದನು: “ಮಹಾರಾಜ! ಏಕೆ ಶೋಕಿಸುತ್ತಿರುವೆ? ಶೋಕದಿಂದ ಯಾವ ಸಹಾಯವೂ ದೊರಕುವುದಿಲ್ಲ! ಹದಿನೆಂಟು ಅಕ್ಷೌಹಿಣೀ ಸೇನೆಗಳು ನಾಶವಾದವು. ನಿರ್ಜನವಾಗಿರುವ ಈ ವಸುಮತಿಯು ಕೇವಲ ಶೂನ್ಯವಾಗಿ ತೋರುತ್ತಿದೆ! ನಾನಾ ದಿಕ್ಕುಗಳಿಂದ, ನಾನಾದೇಶಗಳಿಂದ ಬಂದು ಸೇರಿದ್ದ ನರಾಧಿಪರೆಲ್ಲರೂ ನಿನ್ನ ಪುತ್ರರೊಂದಿಗೆ ನಿಧನಹೊಂದಿದರು. ಪಿತೃಗಳ, ಪುತ್ರ-ಪೌತ್ರರ, ಬಾಂಧವರ, ಸುಹೃದಯರ ಮತ್ತು ಗುರುಜನರ ಪ್ರೇತಕಾರ್ಯಗಳನ್ನು ಯಥಾನುಕ್ರಮವಾಗಿ ಮಾಡಿಸು!”
ಆ ಕರುಣ ವಾಕ್ಯವನ್ನು ಕೇಳಿ ಪುತ್ರ-ಪೌತ್ರರ ವಧೆಯಿಂದ ದುಃಖಿತನಾಗಿದ್ದ ಧೃತರಾಷ್ಟ್ರನು ಭಿರುಗಾಳಿಯು ಬಡಿದ ವೃಕ್ಷದಂತೆ ಭೂಮಿಯಮೇಲೆ ಬಿದ್ದನು. ಧೃತರಾಷ್ಟ್ರನು ಹೇಳಿದನು: “ಪುತ್ರರನ್ನು ಕಳೆದುಕೊಂಡ, ಅಮಾತ್ಯರನ್ನು ಕಳೆದುಕೊಂಡ ಮತ್ತು ಸರ್ವ ಸುಹೃಜ್ಜನರನ್ನು ಕಳೆದುಕೊಂಡ ನಾನು ಈ ಭೂಮಿಯಲ್ಲಿ ಸಂಚರಿಸುವ ದುಃಖವೇ ಆಗಿಬಿಟ್ಟಿದ್ದೇನೆ!1 ರೆಕ್ಕೆಗಳನ್ನು ಕಳೆದುಕೊಂಡು ಮುಪ್ಪಿನಿಂದ ಜೀರ್ಣವಾದ ಪಕ್ಷಿಯಂತಿರುವ ನನಗೆ ಇಂದು ಜೀವಿತವಿರುವುದರಿಂದ ಆಗಬೇಕಾದುದಾದರೂ ಏನಿದೆ? ರಾಜ್ಯದಿಂದ ಅಪಹೃತನಾದ, ಸುಹೃದ್ ಜನರು ಹತರಾದ ನಾನು ಕಿರಣಗಳನ್ನು ಕಳೆದುಕೊಂಡ ಸೂರ್ಯನಂತೆ ಇನ್ನು ಬೆಳಗಲಾರೆ! ಬಾರಿಬಾರಿ ಹೇಳುತ್ತಿದ್ದ ಸುಹೃದರಾಗಿದ್ದ ಜಾಮದಗ್ನಿ ಪರಶುರಾಮನ, ದೇವರ್ಷಿ ನಾರದನ ಮತ್ತು ಕೃಷ್ಣದ್ವೈಪಾಯನರ ಮಾತುಗಳನ್ನು ನಾನು ನಡೆಸಿಕೊಡಲಿಲ್ಲ. ಸಭಾಮಧ್ಯದಲ್ಲಿ ಕೃಷ್ಣನು – ರಾಜನ್! ಈ ವೈರವನ್ನು ಸಾಕುಮಾಡಿ ನಿನ್ನ ಮಗನನ್ನು ಹತೋಟಿಯಲ್ಲಿಟ್ಟುಕೋ – ಎಂದು ನನಗೆ ಹೇಳಿದ ಶ್ರೇಯ-ಹಿತ ವಚನವನ್ನು ದುರ್ಮತಿಯಾದ ನಾನು ಮಾಡದೇ ಇದ್ದುದಕ್ಕೆ ಈಗ ತುಂಬಾ ಪರಿತಪಿಸುತ್ತಿದ್ದೇನೆ! ಭೀಷ್ಮನು ಹೇಳಿದ್ದ ಧರ್ಮಯುಕ್ತ ಮಾತುಗಳನ್ನೂ, ದುರ್ಯೋಧನನ ಗೂಳಿಯಂಥಹ ಕೂಗನ್ನೂ ನಾನು ಕೇಳಲಿಲ್ಲ! ಇಂದು ದುಃಶಾಸನನು ಹತನಾದುದನ್ನು, ಕರ್ಣನು ವಿನಾಶಗೊಂಡಿದುದನ್ನು ಮತ್ತು ಸೂರ್ಯನಂತಹ ದ್ರೋಣನಿಗೂ ಗ್ರಹಣವಾದುದನ್ನು ಕೇಳಿ ನನ್ನ ಹೃದಯವು ಸೀಳಿಹೋಗುತ್ತಿದೆ! ಸಂಜಯ! ಮೂಢನಾದ ನಾನು ಯಾವುದರ ಫಲವೆಂದು ಇದನ್ನು ಅನುಭವಿಸುತ್ತಿದ್ದೇನೋ ಅಂತಹ ದುಷ್ಕೃತವನ್ನು ಈ ಹಿಂದೆ ಮಾಡಿದುದು ನನ್ನ ನೆನಪಿಗೇ ಬರುತ್ತಿಲ್ಲ! ನನ್ನ ಹಿಂದಿನ ಜನ್ಮದಲ್ಲಿ ನಾನು ಏನಾದರೂ ಅಪಕೃತವನ್ನು ಮಾಡಿರಬೇಕು. ಅದರಿಂದಾಗಿಯೇ ಧಾತನು ನನ್ನನ್ನು ಈ ದುಃಖವನ್ನು ತರುವ ಕರ್ಮಗಳಲ್ಲಿ ನನ್ನನ್ನು ತೊಡಗಿಸಿದ್ದಾನೆ! ದೈವಯೋಗದ ಪರಿಣಾಮವಾಗಿಯೇ ವೃದ್ಧನಾಗಿರುವ ನನಗೆ ಸರ್ವಬಂಧುಗಳ ನಾಶ ಮತ್ತು ಸುಹೃದಯರ ವಿನಾಶವು ಬಂದೊದಗಿದೆ! ನನಗಿಂಥಲೂ ಹೆಚ್ಚು ದುಃಖಿತನಾಗಿರುವ ಇನ್ನೊಬ್ಬ ಪುರುಷನು ಈ ಲೋಕದಲ್ಲಿ ಬೇರೆ ಯಾರಿದ್ದಾರೆ? ಸಂಶಿತವ್ರತನಾಗಿ ನಾನು ಇಂದು ತೆರೆದಿರುವ ಈ ಬ್ರಹ್ಮಲೋಕದ ದೀರ್ಘಮಾರ್ಗವನ್ನೇ ಆಶ್ರಯಿಸುವುದನ್ನು2 ಪಾಂಡವರು ನೋಡಲಿ!”
ಹೀಗೆ ಬಹುಶೋಕಿತನಾಗಿ ಒಂದೇ ಸಮನೆ ಪ್ರಲಾಪಿಸುತ್ತಿರುವ ನರೇಂದ್ರನ ಶೋಕವನ್ನು ಹೋಗಲಾಡಿಸುವಂತಹ ಈ ಮಾತುಗಳನ್ನು ಸಂಜಯನು ಹೇಳಿದನು: “ರಾಜನ್! ಶೋಕವನ್ನು ತೊರೆ! ನೀನು ವೃದ್ಧರು ಹೇಳಿದ ವೇದನಿಶ್ಚಯಗಳನ್ನೂ, ವಿವಿಧ ಶಾಸ್ತ್ರ-ಆಗಮಗಳನ್ನೂ ಕೇಳಿದ್ದೀಯೆ. ಹಿಂದೆ ಪುತ್ರಶೋಕಾರ್ತನಾಗಿದ್ದ ಸೃಂಜಯನಿಗೆ ಮುನಿಗಳು ಹೇಳಿದುದನ್ನೂ ಕೇಳಿದ್ದೀಯೆ. ಯೌವನದಿಂದುಂಟಾದ ದರ್ಪವನ್ನು ನಿನ್ನ ಮಗನು ಆಶ್ರಯಿಸಿದ್ದಾಗ ನೀನು ಆಡುತ್ತಿರುವ ಸುಹೃದಯರ ಮಾತುಗಳನ್ನು ಗಮನಿಸಲಿಲ್ಲ. ಸ್ವಾರ್ಥ ಮತ್ತು ಫಲವನ್ನು ಭೋಗಿಸಲು ಇಚ್ಛಿಸಿದ್ದ ಅವನು ಲುಬ್ಧನಾಗಿ ಯಾವ ಪುರುಷಾರ್ಥ ಸಾಧನೆಯನ್ನೂ ಮಾಡಲಿಲ್ಲ. ದುಃಶಾಸನ, ದುರಾತ್ಮ ರಾಧೇಯ, ದುಷ್ಟಾತ್ಮ ಶಕುನಿ, ದುರ್ಮತಿ ಚಿತ್ರಸೇನ ಮತ್ತು ಇಡೀ ಜಗತ್ತಿಗೇ ಮುಳ್ಳಿನಂತಿದ್ದ ಶಲ್ಯರು ನಿನ್ನ ಮಂತ್ರಿಗಳಾಗಿದ್ದರು. ಕುರುವೃದ್ಧ ಭೀಷ್ಮ, ಗಾಂಧಾರೀ, ಮತ್ತು ವಿದುರರ ಮಾತಿನಂತೆ ನಿನ್ನ ಪುತ್ರನು ನಡೆದುಕೊಳ್ಳಲಿಲ್ಲ. ನಿತ್ಯವೂ ಯುದ್ಧಮಾಡಬೇಕೆಂದು ಹೇಳುತ್ತಿದ್ದನೇ ಹೊರತು ಉತ್ತಮವಾಗಿ ಯಾವ ಧರ್ಮಾಚರಣೆಯನ್ನೂ ಅವನು ಮಾಡಲಿಲ್ಲ. ಅವನು ಸರ್ವ ಕ್ಷತ್ರಿಯರನ್ನೂ ವಿನಾಶಗೊಳಿಸಿದನು ಮತ್ತು ಶತ್ರುಗಳ ಯಶಸ್ಸನ್ನು ವರ್ಧಿಸಿದನು. ನೀನು ಮಧ್ಯಸ್ಥನಾಗಿದ್ದರೂ ತಕ್ಕುದಾದ ಯಾವ ಮಾತುಗಳನ್ನೂ ಆಡಲಿಲ್ಲ. ನೀನು ದುರ್ಧರನಾಗಿದ್ದೆ3. ಆದರೂ ನೀನು ತಕ್ಕಡಿಯಂತೆ ಸಮನಾಗಿರಲಿಲ್ಲ. ಒಂದೇ ಕಡೆ ಭಾರವನ್ನು ಹೆಚ್ಚಿಸಿದೆ. ನಡೆದುಹೋದ ನಂತರ ಪಶ್ಚಾತ್ತಾಪ ಪಡಬೇಕಾಗದಂತೆ, ಮನುಷ್ಯನು ಮೊದಲೇ ಯೋಗ್ಯರೀತಿಯಲ್ಲಿ ವರ್ತಿಸಬೇಕು. ಪುತ್ರನ ಮೇಲಿನ ವ್ಯಾಮೋಹದಿಂದ ನೀನು ಅವನಿಗೆ ಪ್ರಿಯವಾಗುವಂತೆ ಮಾಡಿಕೊಂಡು ಬಂದೆ. ಈಗ ಪಶ್ಚಾತ್ತಾಪಪಡುವ ಕಾಲವು ಬಂದಿದೆ. ನೀನು ಶೋಕಿಸಬಾರದು! ಮಧುವಿನ ಆಸೆಯಿಂದ ಕೇವಲ ಮಧುವನ್ನು ನೋಡಿಕೊಂಡು ಕೆಳಗಿರುವ ಪ್ರಪಾತವನ್ನು ಕಾಣದೇ ಭ್ರಷ್ಟನಾದವನಂತೆ ನೀನು ಈಗ ಶೋಕಿಸುತ್ತಿರುವೆ! ಶೋಕಿಸುವುದರಿಂದ ಯಾವ ಫಲವೂ ದೊರಕುವುದಿಲ್ಲ. ಶೋಕಿಸುವವನಿಗೆ ಸುಖವೂ ಇಲ್ಲ. ಶೋಕಿಸುವವನಿಗೆ ಸಂಪತ್ತು ದೊರಕುವುದಿಲ್ಲ. ಶೋಕಿಸಿದರೆ ಪರಮ ಗತಿಯೂ ದೊರಕುವುದಿಲ್ಲ. ಬೆಂಕಿಯನ್ನು ತಾನೇ ಹೊತ್ತಿಸಿ, ಬಟ್ಟೆಯಲ್ಲಿ ಅದನ್ನು ಕಟ್ಟಿಕೊಂಡು, ಅದು ಪ್ರಜ್ವಲಿಸಿ ತನ್ನನ್ನೇ ಸುಡುವಾಗ ಪರಿತಾಪ ಪಡುವವನು ಖಂಡಿತವಾಗಿಯೂ ಪಂಡಿತನೆಂದೆನಿಸಿಕೊಳ್ಳುವುದಿಲ್ಲ. ನೀನೇ ನಿನ್ನ ಮಕ್ಕಳೊಂದಿಗೆ ಕಠೋರ ಮಾತೆಂಬ ಗಾಳಿಯನ್ನು ಬೀಸಿ, ಲೋಭವೆಂಬ ತುಪ್ಪವನ್ನು ಸುರಿದು ಪಾರ್ಥನೆಂಬ ಅಗ್ನಿಯನ್ನು ಪ್ರಜ್ವಲಿಸಿದ್ದೆ. ಉರಿಯುತ್ತಿರುವ ಆ ಅಗ್ನಿಯಲ್ಲಿ ಶಲಭಗಳಂತೆ ನಿನ್ನ ಪುತ್ರರು ಬೀಳಲು, ಕೇಶವನೆಂಬ ಜ್ವಾಲೆಯು ಅವರನ್ನು ಸುಟ್ಟುಹಾಕಿತು. ಅದರ ಕುರಿತು ನೀನು ಶೋಕಿಸುವುದು ಸರಿಯಲ್ಲ! ಕಣ್ಣೀರು ಬಿದ್ದು ಕಲುಷವಾದ ಮುಖವು ಅಶಾಸ್ತ್ರವಾದುದು4. ಪಂಡಿತರು ಇದನ್ನು ಪ್ರಶಂಸಿಸುವುದಿಲ್ಲ. ಕಣ್ಣೀರು ಬೆಂಕಿಯ ಕಿಡಿಗಳಂತೆ ಮನುಷ್ಯರನ್ನು ಸುಡುತ್ತದೆ. ಆದುದರಿಂದ ಬುದ್ಧಿಯಿಂದ ಮನಸ್ಸನ್ನು ಗೆಲ್ಲು! ನಿನ್ನನ್ನು ನೀನೇ ಸ್ಥಿರಗೊಳಿಸಿಕೋ!”
ವಿದುರನು ಆಧ್ಯಾತ್ಮ ವಿಷಯಗಳನ್ನು ತಿಳಿಸಿ ಧೃತರಾಷ್ಟ್ರನನ್ನು ಸಂತೈಸಿದುದು
ಮಹಾತ್ಮ ಸಂಜಯನು ಹೀಗೆ ಅವನನ್ನು ಸಂತವಿಸಲು ವಿದುರನು ಈ ಬುದ್ಧಿಪೂರ್ವಕ ಮಾತುಗಳನ್ನಾಡಿದನು: “ಮೇಲೇಳು ರಾಜನ್! ಏಕೆ ಮಲಗಿರುವೆ? ಬುದ್ಧಿಯಿಂದ ನಿನ್ನ ಮನಸ್ಸನ್ನು ಸ್ಥಿರಗೊಳಿಸಿಕೋ! ಸ್ಥಿರಜಂಗಮಗಳು ಮತ್ತು ಮನುಷ್ಯರು ಎಲ್ಲರ ನಿರ್ಣಯವೂ ಒಂದೇ! ಸಂಗ್ರಹಿಸಿದುದೆಲ್ಲವೂ ಕಡಿಮೆಯಾಗುತ್ತವೆ. ಮೇಲೇರಿದವು ಕೆಳಗೆ ಬೀಳುತ್ತವೆ. ಸೇರುವಿಕೆಯು ವಿಯೋಗದಲ್ಲಿ ಕೊನೆಯಾಗುತ್ತದೆ. ಮತ್ತು ಜೀವನವು ಮರಣದಲ್ಲಿ ಕೊನೆಗೊಳ್ಳುತ್ತದೆ. ಶೂರನಾಗಿರಲಿ ಹೇಡಿಯಾಗಿರಲಿ ಯಮನು ಎಳೆದುಕೊಂಡು ಹೋಗುತ್ತಾನೆ. ಹೀಗಿರುವಾಗ ಕ್ಷತ್ರಿಯರು ಏಕೆ ಯುದ್ಧಮಾಡುವುದಿಲ್ಲ? ಯುದ್ಧಮಾಡದೇ ಉಳಿದುಕೊಂಡಿರುವವರು ಮತ್ತು ಯುದ್ಧಮಾಡಿಯೂ ಜೀವಂತವಿರುವವರು ಎಲ್ಲರಿಗೂ ಕಾಲವು ಒಂದೇರೀತಿಯಲ್ಲಿ ವರ್ತಿಸುತ್ತದೆ. ಶಾಸ್ತ್ರಗಳ ಪ್ರಮಾಣದ ಪ್ರಕಾರ ಯುದ್ಧದಲ್ಲಿ ಹತರಾದವರ ಕುರಿತು ಶೋಕಿಸಬಾರದು. ಏಕೆಂದರೆ ಅವರು ಪರಮ ಗತಿಯನ್ನು ಪಡೆದಿರುತ್ತಾರೆ. ಎಲ್ಲರೂ ವೇದಾಧ್ಯಯನ ಮಾಡಿದ್ದರು. ಎಲ್ಲರೂ ವ್ರತಗಳನ್ನು ನಡೆಸಿದ್ದರು. ಎಲ್ಲರೂ ಶತ್ರುಗಳನ್ನು ಎದುರಿಸಿಯೇ ಮಡಿದರು. ಅದರಲ್ಲಿ ದುಃಖಿಸುವುದೇನಿದೆ. ಕಣ್ಣಿಗೆ ಕಾಣಿಸದೇ ಇರುವಲ್ಲಿಂದ ಬಂದ ಅವರು ಪುನಃ ಕಣ್ಣಿಗೆ ಕಾಣಿಸದೇ ಇರುವಲ್ಲಿಗೆ ಹೋಗಿದ್ದಾರೆ! ಅವರು ನಿನ್ನವರೂ ಅಲ್ಲ. ನೀನು ಅವರವನೂ ಅಲ್ಲ. ಅದರಲ್ಲಿ ದುಃಖಿಸುವುದೇನಿದೆ? ಸತ್ತರೂ ಸ್ವರ್ಗವನ್ನು ಪಡೆಯುತ್ತಾರೆ. ಕೊಂದರೂ ಯಶಸ್ಸನ್ನು ಪಡೆಯುತ್ತಾರೆ. ಇವೆರಡೂ ಮಹಾಗುಣಯುಕ್ತವಾದವುಗಳು. ಆದುದರಿಂದ ರಣದಲ್ಲಿ ಯಾವುದೂ ನಿಷ್ಫಲವಾಗುವುದಿಲ್ಲ. ಅವರ ಕಾಮನೆಗಳಿಗೆ ತಕ್ಕಂತೆ ಇಂದ್ರನೇ ಲೋಕಗಳನ್ನು ಸಿದ್ಧಪಡಿಸುತ್ತಾನೆ. ಅವರು ಇಂದ್ರನ ಅತಿಥಿಗಳೇ ಆಗುತ್ತಾರೆ. ರಣದಲ್ಲಿ ಹತರಾದ ಶೂರ ನರರು ಸ್ವರ್ಗಕ್ಕೆ ಹೋಗುವಂತೆ ಬಹಳ ದಕ್ಷಿಣೆಗಳನ್ನಿತ್ತು ಯಜ್ಞಗಳನ್ನು ಮಾಡುವುದರಿಂದಲೂ, ತಪಸ್ಸಿನಿಂದಲೂ ವಿದ್ಯೆಯಿಂದಲೂ ಸಾಧ್ಯವಿಲ್ಲ. ಈ ಸಂಸಾರದಲ್ಲಿ ನಾವು ಸಾವಿರಾರು ಮಾತಾ-ಪಿತೃಗಳನ್ನು, ನೂರಾರು ಮಕ್ಕಳು-ಪತ್ನಿಯರನ್ನು ಅನುಭವಿಸಿದ್ದೇವೆ. ಆದರೆ ಈಗ ಅವರು ಯಾರವರು ಮತ್ತು ನಾವು ಯಾರು? ಶೋಕಪಡಲು ಸಹಸ್ರಾರು ಕಾರಣಗಳಿರುತ್ತವೆ ಮತ್ತು ಭಯಪಡಲು ಸಹಸ್ರಾರು ಕಾರಣಗಳಿರುತ್ತವೆ. ಆದರೆ ಅವು ಕೇವಲ ಮೂಢರನ್ನು ದಿನನಿತ್ಯವೂ ಬಾಧಿಸುತ್ತಿರುತ್ತದೆ. ಪಂಡಿತರನ್ನಲ್ಲ. ಕಾಲಕ್ಕೆ ಯಾರೂ ಪ್ರಿಯರಾದವರಿಲ್ಲ; ದ್ವೇಷಿಗಳೂ ಇಲ್ಲ. ಪ್ರೀತಿ-ದ್ವೇಷಗಳಿಲ್ಲದ ಮಧ್ಯಸ್ಥನೂ ಇಲ್ಲ. ಕಾಲವು ಸರ್ವವನ್ನೂ ಎಳೆದುಕೊಂಡು ಹೋಗುತ್ತದೆ. ಜೀವಿತ, ರೂಪ, ಯೌವನ, ದ್ರವ್ಯಸಂಚಯ, ಆರೋಗ್ಯ, ಪ್ರಿಯರೊಂದಿಗೆ ವಾಸ ಇವೆಲ್ಲರೂ ಅನಿತ್ಯವಾದವುಗಳು. ಪಂಡಿತನು ಇವುಗಳಲ್ಲಿ ಆಸೆಪಡುವುದಿಲ್ಲ. ದೇಶಕ್ಕೇ ಒದಗಿಬಂದಿರುವ ದುಃಖವನ್ನು ನಿನಗೊಬ್ಬನಿಗೇ ಬಂದಿರುವ ದುಃಖವೆಂದು ಶೋಕಿಸುವುದು ಸರಿಯಲ್ಲ. ಶೋಕಿಸುತ್ತಲೇ ಮರಣಹೊಂದಿದರೂ ಅವನ ಶೋಕವು ಹೋಗುವುದಿಲ್ಲ. ಪರಾಕ್ರಮವಿರುವವನು ಶೋಕಿಸುವುದಕ್ಕೆ ಬದಲಾಗಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು. ನಡೆದುಹೋಗಿದುದರ ಕುರಿತು ಚಿಂತಿಸದಿರುವುದೇ ದುಃಖಕ್ಕೆ ಚಿಕಿತ್ಸೆ. ಚಿಂತೆಯಿಂದ ದುಃಖವು ಇನ್ನೂ ಹೆಚ್ಚಾಗುವುದೇ ಹೊರತು ಶೋಕವು ಹೊರಟುಹೋಗುವುದಿಲ್ಲ. ಅಲ್ಪಬುದ್ಧಿಯ ಮನುಷ್ಯರು ಅನಿಷ್ಟವನ್ನು ಪಡೆಯುವುದರಿಂದ ಮತ್ತು ಪ್ರಿಯವಾದದ್ದನ್ನು ಕಳೆದುಕೊಳ್ಳುವುದರಿಂದ ಮಾನಸಿಕ ದುಃಖವನ್ನು ಅನುಭವಿಸುತ್ತಾರೆ. ಈ ಶೋಕವು ಅರ್ಥ-ಧರ್ಮ-ಸುಖಗಳ ಸಾಧಕವಲ್ಲ. ಈ ರೀತಿಯ ದುಃಖವು ಮನುಷ್ಯನನ್ನು ಮಾಡಬೇಕಾದ ಕರ್ತವ್ಯದಿಂದ ಭ್ರಷ್ಟನನ್ನಾಗಿಸುತ್ತದೆ. ಧನದ ಬೇರೆ ಬೇರೆ ಅವಸ್ಥಾವಿಶೇಷಗಳನ್ನು ಹೊಂದಿ ಅಸಂತುಷ್ಟರಾಗಿ ನರರು ವಿಮೋಹಗೊಳ್ಳುತ್ತಾರೆ. ಆದರೆ ಪಂಡಿತರು ಅವುಗಳಿಂದ ಸಂತೋಷವನ್ನೇ ಪಡೆಯುತ್ತಾರೆ. ಮಾನಸಿಕ ದುಃಖವನ್ನು ಪ್ರಜ್ಞೆಯಿಂದಲೂ, ಶರೀರ ದುಃಖವನ್ನು ಔಷಧಗಳಿಂದಲೂ ಪರಿಹರಿಸಿಕೊಳ್ಳಬೇಕು. ಇದು ಜ್ಞಾನದ ಸಾಮರ್ಥ್ಯ. ಬಾಲಕರ ಸಮನಾಗಿರಬಾರದು. ಪೂರ್ವಕೃತ ಕರ್ಮವು ಮನುಷ್ಯನು ಮಲಗಿರುವಾಗ ಜೊತೆಯಲ್ಲಿಯೇ ಮಲಗುತ್ತದೆ, ನಿಂತಿರುವಾಗ ಜೊತೆಯಲ್ಲಿಯೇ ನಿಂತಿರುತ್ತದೆ ಮತ್ತು ಓಡಿ ಹೋಗುವಾಗ ಜೊತೆಯಲ್ಲಿಯೇ ಓಡಿ ಬರುತ್ತದೆ. ಯಾವ ಯಾವ ಅವಸ್ಥೆಗಳಲ್ಲಿ ಶುಭಾಶುಭ ಕರ್ಮಗಳನ್ನು ಮಾಡಿರುತ್ತಾನೋ ಅವುಗಳನ್ನು ಮನುಷ್ಯನು ಆಯಾ ಅವಸ್ಥೆಗಳಲ್ಲಿ ಅದೇ ಫಲಗಳನ್ನು ಪಡೆಯುತ್ತಾನೆ.”
ಧೃತರಾಷ್ಟ್ರನು ಹೇಳಿದನು: “ಮಹಾಪ್ರಾಜ್ಞ! ಈ ಸುಭಾಷಿತಗಳಿಂದ ನನ್ನ ಶೋಕವು ದೂರವಾಗುತ್ತಿದೆ. ಇನ್ನೂ ಇಂತಹ ತತ್ತ್ವಯುಕ್ತ ಮಾತುಗಳನ್ನು ಕೇಳಬಯಸುತ್ತೇನೆ. ಇಷ್ಟವಿಲ್ಲದವುಗಳ ಸಂಸರ್ಗದಿಂದಲೂ ಮತ್ತು ಇಷ್ಟವಾದವುಗಳ ತೊಗಲಿಕೆಯಿಂದಲೂ ಉಂಟಾಗುವ ಮಾನಸಿಕ ದುಃಖಗಳಿಂದ ಪಂಡಿತರು ಹೇಗೆ ಬಿಡುಗಡೆ ಹೊಂದುತ್ತಾರೆ?”
ವಿದುರನು ಹೇಳಿದನು: “ಯಾವ-ಯಾವ ಸಾಧನಗಳಿಂದ ಮನಸ್ಸು ದುಃಖ-ಸುಖಗಳಿಂದ ಮುಕ್ತವಾಗುವುದೇ ಆಯಾ ಸಾಧನಗಳನ್ನು ಬಳಸಿ ಮನಸ್ಸನ್ನು ಶಾಂತಗೊಳಿಸಿ ತಿಳಿದವರು ಸುಗತಿಯನ್ನು ಹೊಂದುತ್ತಾರೆ. ಆಲೋಚಿಸಿದರೆ ಇವೆಲ್ಲವೂ ಅಶಾಶ್ವತವು. ಬಾಳೆಯ ದಿಂಡಿನಂತೆ ಈ ಲೋಕವು ಸಾರವಿಲ್ಲದ್ದು. ಮರ್ತ್ಯರ ದೇಹಗಳು ಮನೆಗಳಂತೆ ಎಂದು ಪಂಡಿತರು ಹೇಳುತ್ತಾರೆ. ಕಾಲಾಂತರದಲ್ಲಿ ನಷ್ಟವಾಗಿಹೋಗುತ್ತದೆ. ಆದರೆ ಅದರೊಳಗಿರುವ ಶೋಭಿಸುವ ಸತ್ತ್ವವೊಂದೇ ಉಳಿದುಕೊಳ್ಳುತ್ತದೆ. ಮನುಷ್ಯನು ಹೇಗೆ ಉಟ್ಟಿದ ವಸ್ತ್ರವು ಹಳೆಯದಾಗಿರಲಿ ಅಥವಾ ಹಳೆಯದಾಗದೇ ಇರಲಿ ಬೇರೊಂದನ್ನು ಬಯಸುತ್ತಾನೋ ಹಾಗೆ ಶರೀರಗಳಲ್ಲಿರುವುದೂ ಹೊಸ ದೇಹಗಳನ್ನು ಬಯಸುತ್ತದೆ. ಭೂತಗಳು ಸುಖ ಅಥವಾ ದುಃಖಗಳನ್ನು ತಾವೇ ಮಾಡಿದ ಕರ್ಮಗಳಿಂದ ಪಡೆಯುತ್ತಾರೆ. ಕರ್ಮಗಳಿಂದಲೇ ಸ್ವರ್ಗ, ಸುಖ ಮತ್ತು ದುಃಖಗಳು ದೊರೆಯುತ್ತವೆ. ಸ್ವಾಧೀನನಾಗಿರಲಿ ಅಥವಾ ಪರಾಧೀನನಾಗಿರಲಿ ಮನುಷ್ಯನು ಅವುಗಳ ಭಾರವನ್ನು ಹೊರಲೇ ಬೇಕಾಗುತ್ತದೆ. ಶರೀರವು ಮಣ್ಣಿನ ಮಡಿಕೆಯಂತೆ. ಅದನ್ನು ತಯಾರಿಸುವ ಪ್ರತಿಯೊಂದು ಹಂತದಲ್ಲಿಯೂ ಅದು ಒಡೆದುಹೋಗಬಹುದು. ಹದಮಾಡಿದ ಮಣ್ಣನ್ನು ಚಕ್ರದಮೇಲೆ ಇರಿಸಿ ಚಕ್ರವನ್ನು ಒಂದೆರಡು ಬಾರಿ ತಿರುಗಿಸುತ್ತಲೇ ಅದು ಒಡೆಯಬಹುದು. ಅರ್ಧಾಕಾರವು ಬಂದಮೇಲೆ ಅಥವಾ ಸಂಪೂರ್ಣ ಮಡಿಕೆಯ ಆಕಾರ ಬಂದಾಗ ಅಥವಾ ಮಡಿಕೆಯನ್ನು ಚಕ್ರದಿಂದ ಮೇಲೆತ್ತುವಾಗ ಅಥವಾ ಕೆಳಕ್ಕಿಡುವಾಗ ಅಥವಾ ಒಣಗಿದ ಮೇಲೂ ಅಥವಾ ಬೇಯಿಸುವಾಗಲೂ, ಬೇಯಿಸಿ ಮೇಲೆತ್ತುವಾಗ ಅಥವಾ ಕಟ್ಟಕಡೆಗೆ ಉಪಯೋಗಿಸುವಾಗಲೂ ಮಡಿಕೆಯು ಒಡೆದುಹೋಗಬಹುದು. ದೇಹಗಳೂ ಹಾಗೆಯೇ. ಗರ್ಭಸ್ಥನಾಗಿರುವಾಗ, ಅಥವಾ ಹುಟ್ಟುವಾಗ, ಅಥವಾ ಹುಟ್ಟಿ ಒಂದು ದಿನಸದ ನಂತರ, ಅಥವಾ ಅರ್ಧಮಾಸದಲ್ಲಿ, ಅಥವಾ ಒಂದೇ ತಿಂಗಳಿನಲ್ಲಿ, ಅಥವಾ ಒಂದು ಸಂವತ್ಸರವಾದಮೇಲೆ, ಅಥವಾ ಎರಡು ವರ್ಷಗಳಲ್ಲಿ, ಅಥವಾ ಯೌವನಾವಸ್ಥೆಯಲ್ಲಿದ್ದಾಗಿ ಅಥವಾ ಮಧ್ಯವಯಸ್ಸಿನಲ್ಲಿದ್ದಾಗ, ಅಥವಾ ವೃದ್ಧಾಪ್ಯದಲ್ಲಿ ಶರೀರವು ನಾಶವಾಗಬಹುದು. ಹಿಂದಿನ ಕರ್ಮಗಳಿಗನುಗುಣವಾಗಿ ಭೂತಗಳು ಇರುತ್ತವೆ ಅಥವಾ ಇಲ್ಲವಾಗುತ್ತವೆ. ಈ ರೀತಿ ಲೋಕವು ನಡೆಯುತ್ತಿರುವಾಗ ಅದರಲ್ಲಿ ಏಕೆ ಪರಿತಪಿಸುತ್ತೀಯೆ? ಕ್ರೀಡಾರ್ಥವಾಗಿ ನೀರಿನಲ್ಲಿ ಕೆಲವೊಮ್ಮೆ ಮುಳುಗಿ ಮತ್ತು ಕೆಲವೊಮ್ಮೆ ಮೇಲೆ ತೇಲಿ ಈಸುವಂತೆ ಈ ಗಹನ ಸಂಸಾರದಲ್ಲಿ ಮೇಲೆದ್ದುಕೊಂಡು ಅಥವಾ ಮುಳುಗಿಕೊಂಡು ಈಸುತ್ತೇವೆ. ಕರ್ಮಭೋಗಕ್ಕೆ ಬದ್ಧರಾದ ಅಲ್ಪಬುದ್ಧಿಗಳು ಇದರಿಂದ ದುಃಖಿತರಾಗುತ್ತಾರೆ. ಸತ್ಯದಲ್ಲಿಯೇ ಇದ್ದುಕೊಂಡು ಸಂಸಾರದಲ್ಲಿ ಸರ್ವ ಭೂತಗಳ ಸಮಾಗಮಗಳ ರಹಸ್ಯವನ್ನು ತಿಳಿದುಕೊಂಡಿರುವ ಪ್ರಾಜ್ಞರು ಪರಮ ಗತಿಯನ್ನು ಹೊಂದುತ್ತಾರೆ.”
ಧೃತರಾಷ್ಟ್ರನು ಹೇಳಿದನು: “ಮಾತುನಾಡುವವರಲ್ಲಿ ಶ್ರೇಷ್ಠ! ಈ ಅಗಾಧ ಸಂಸಾರವನ್ನು ಹೇಗೆ ತಿಳಿದುಕೊಳ್ಳಬೇಕು? ಇದನ್ನು ಕೇಳಲು ಬಯಸುತ್ತೇನೆ. ಕೇಳುತ್ತಿರುವ ನನಗೆ ಈ ತತ್ತ್ವವನ್ನು ಹೇಳು.”
ವಿದುರನು ಹೇಳಿದನು: “ಪ್ರಭೋ! ಜನ್ಮಪ್ರಭೃತಿ ಭೂತಗಳ ಕ್ರಿಯೆಗಳೆಲ್ಲವನ್ನೂ ಕೇಳು. ಜನ್ಮಕ್ಕೆ ಮೊದಲು ಸ್ವಲ್ಪಕಾಲ ಗರ್ಭವು ಕಲಲದಲ್ಲಿ ವಾಸಿಸಿರುತ್ತದೆ. ಅನಂತರ ಐದು ತಿಂಗಳು ಕಳೆಯಲು ಮಾಂಸದ ರೂಪವನ್ನು ಪಡೆಯುತ್ತದೆ. ಆಗ ಗರ್ಭವು ಸರ್ವಾಂಗಗಳನ್ನು ಪಡೆದು ಸಂಪೂರ್ಣವಾಗುತ್ತದೆ. ಮಾಂಸರಕ್ತಗಳಿಂದ ಲೇಪನಗೊಂಡು ಅದು ಅಮೇಧ್ಯದ ಮಧ್ಯದಲ್ಲಿ ವಾಸಮಾಡುತ್ತದೆ. ಅನಂತರ ವಾಯುವೇಗದ ಕಾರಣದಿಂದ ಗರ್ಭವು ತಲೆಕೆಳಗೆ ಕಾಲು ಮೇಲೆಮಾಡಿಕೊಳ್ಳುತ್ತದೆ. ಯೋನಿದ್ವಾರಕ್ಕೆ ಬಂದು ಅದು ಅನೇಕ ಕ್ಲೇಶಗಳನ್ನು ಅನುಭವಿಸುತ್ತದೆ. ಪೂರ್ವಕರ್ಮಗಳನ್ನು ಹೊತ್ತುತಂದಿರುವ ಅದು ಯೋನಿಪೀಡನೆಯನ್ನು ಅನುಭವಿಸುತ್ತದೆ. ಯೋನಿಪೀಡೆಯಿಂದ ಬಿಡುಗಡೆಹೊಂದಿ ಸಂಸಾರದಲ್ಲಿ ಅನ್ಯ ಉಪದ್ರವಗಳನ್ನು ಕಾಣುತ್ತದೆ. ನಾಯಿಗಳು ಮಾಂಸವನ್ನು ಹುಡುಕಿಕೊಂಡು ಹೋಗುವಂತೆ ಗ್ರಹಗಳು ಹುಟ್ಟಿದ ಮಗುವನ್ನು ಕಾಡುತ್ತವೆ. ಸಮಯವು ಕಳೆಯುತ್ತಿದ್ದಂತೆ ತನ್ನ ಕರ್ಮಗಳಿಂದಲೇ ಬಂಧಿತನಾದ ಜೀವವನ್ನು ವ್ಯಾಧಿಗಳು ಸಮೀಪಿಸುತ್ತವೆ. ಇಂದ್ರಿಯಗಳೆಂಬ ಹಗ್ಗಗಳಿಂದ ಬಂಧಿತನಾದ ಮತ್ತು ವಿಷಯಗಳಿಗೆ ಅಂಟಿಕೊಂಡಿರುವ ಆ ಜೀವವನ್ನು ವ್ಯಸನಗಳೂ ಕಾಡುತ್ತವೆ. ಅವುಗಳಿಂದ ಬಂಧಿತನಾದ ಅವನು ತೃಪ್ತಿಯನ್ನೇ ಹೊಂದುವುದಿಲ್ಲ. ಆಗ ಅವನಿಗೆ ಯಮಲೋಕಕ್ಕೆ ಹೋಗುವೆನೆಂಬ ಅರಿವೆಯೇ ಇರುವುದಿಲ್ಲ. ಸಮಯಬಂದಾಗ ಯಮದೂತರಿಂದ ಎಳೆಯಲ್ಪಟ್ಟ ಅವನು ಮೃತ್ಯುವನ್ನು ಹೊಂದುತ್ತಾನೆ. ಮಾತನಾಡಲೂ ಶಕ್ಯನಾಗಿರದ ಅವನ ಮುಂದೆ ತಾನು ಮಾಡಿದ ಇಷ್ಟಾನಿಷ್ಟ ಕರ್ಮಗಳು ನಿಲ್ಲುತ್ತವೆ. ಮತ್ತೊಮ್ಮೆ ಆ ಕರ್ಮಗಳು ಅವನನ್ನು ಬಂಧಿಸುತ್ತಿದ್ದರೂ ಅವನು ಸುಮ್ಮನೇ ನೋಡುತ್ತಿರಬೇಕಾಗುತ್ತದೆ. ಲೋಭಕ್ಕೆ ಅಧೀನವಾಗಿ ಲೋಕವು ಮೋಸಹೋಗಿಬಿಟ್ಟಿದೆ! ಲೋಭ-ಕ್ರೋಧ-ಮದೋನ್ಮತ್ತವಾಗಿ ತನ್ನನ್ನು ತಾನೇ ತಿಳಿದುಕೊಳ್ಳದಾಗಿದೆ. ಉತ್ತಮ ಕುಲದಲ್ಲಿ ಹುಟ್ಟಿದವನು ಕೀಳುಕುಲದಲ್ಲಿ ಹುಟ್ಟಿದವನನ್ನು ನಿಂದಿಸುತ್ತಾ ರಮಿಸುತ್ತಾನೆ. ಧನದ ದರ್ಪದಿಂದ ಗರ್ವಿತರಾಗಿ ದರಿದ್ರರನ್ನು ಅಪಹಾಸ್ಯಮಾಡುತ್ತಾರೆ. ಇತರರು ಮೂರ್ಖರೆಂದು ಹೇಳುತ್ತಾನೆಯೇ ಹೊರತು ತನ್ನನ್ನು ತಾನು ಪರೀಕ್ಷಿಸಿಕೊಳ್ಳುವುದಿಲ್ಲ. ಇತರರ ಮೇಲೆ ದೋಷಗಳನ್ನು ಹೊರಿಸುತ್ತಾನೆಯೇ ಹೊರತು ತನ್ನನ್ನು ತಾನು ಹಿಡಿತದಲ್ಲಿಟ್ಟುಕೊಳ್ಳುವುದಿಲ್ಲ. ಅಶಾಶ್ವತವಾದ ಈ ಜಗತ್ತಿನಲ್ಲಿ ಯಾರು ಜನ್ಮಪ್ರಭೃತಿ ಧರ್ಮವನ್ನು ಅನುಸರಿಸಿ ಜೀವನ ನಡೆಸುತ್ತಾರೋ ಅವರು ಪರಮ ಗತಿಯನ್ನು ಹೊಂದುತ್ತಾರೆ. ಹೀಗೆ ಸರ್ವವನ್ನೂ ತಿಳಿದುಕೊಂಡು ಆ ತತ್ತ್ವದಂತೆಯೇ ವರ್ತಿಸುವವನು ಮೋಕ್ಷದ ದಾರಿಯನ್ನು ಪಡೆಯುತ್ತಾನೆ.”
ಧೃತರಾಷ್ಟ್ರನು ಹೇಳಿದನು: “ಗಹನವಾದ ಈ ಧರ್ಮವನ್ನು ಬುದ್ಧಿಯಿಂದಲೇ ಅರ್ಥಮಾಡಿಕೊಳ್ಳಬಹುದಾದರೆ ಬುದ್ಧಿಮಾರ್ಗವನ್ನು ನನಗೆ ವಿಸ್ತಾರವಾಗಿ ಎಲ್ಲವನ್ನೂ ಹೇಳು!”
ವಿದುರನು ಹೇಳಿದನು: “ಸ್ವಯಂಭುವಿಗೆ ನಮಸ್ಕರಿಸಿ ಪರಮ ಋಷಿಗಳು ಸಂಸಾರವನ್ನು ಗಹನ ಅರಣ್ಯವೆಂದು ವರ್ಣಿಸಿರುವುದನ್ನು ನಿನಗೆ ಹೇಳುತ್ತೇನೆ. ಈ ಮಹಾಸಂಸಾರದಲ್ಲಿ ವಾಸಿಸುತ್ತಿದ್ದ ಓರ್ವ ದ್ವಿಜನು ಮಾಂಸಾಹಾರೀ ಮೃಗಗಳಿಂದ ತುಂಬಿದ್ದ ದುರ್ಗಮ ವನವೊಂದನ್ನು ಸೇರಿದನು. ಎಲ್ಲಕಡೆಗಳಿಂದ ಅತಿ ಘೋರ ಸಿಂಹ, ಹುಲಿ, ಆನೆ ಮತ್ತು ಕರಡಿಗಳ ಮಹಾ ಗರ್ಜನೆಗಳಿಂದ ಕೂಡಿದ್ದ ಆ ವನವು ಮೃತ್ಯುವಿಗೂ ಭಯವನ್ನುಂಟುಮಾಡುವಂತಿತ್ತು. ಅದನ್ನು ನೋಡಿ ಪರಮ ಉದ್ವೇಗವು ಅವನ ಹೃದಯವನ್ನು ಆವರಿಸಿತು. ರೋಮಗಳು ನಿಮಿರಿ ನಿಂತು ಅನೇಕ ವಿಕಾರಗಳನ್ನು ಅವನು ಅನುಭವಿಸಿದನು. ಆ ವನದಲ್ಲಿ ಅಲ್ಲಿಂದಿಲ್ಲಿಗೆ ಧಾವಿಸುತ್ತಾ ಆ ವಿಪ್ರನು ಎಲ್ಲಿಯಾದರೂ ರಕ್ಷಣೆಯು ಸಿಕ್ಕೀತೇ ಎಂದು ಎಲ್ಲ ದಿಕ್ಕುಗಳಲ್ಲಿಯೂ ನೋಡತೊಡಗಿದನು. ಭಯಪೀಡಿತನಾದ ಅವನು ಭಯಗಳಿಲ್ಲದ ಒಂದು ದಾರಿಯನ್ನೇ ಹಿಡಿದು ಓಡತೊಡಗಿದನು. ಆದರೆ ಆ ವಿಪ್ರನಿಗೆ ಬಹಳ ದೂರ ಓಡಲಿಕ್ಕಾಗಲಿಲ್ಲ. ಕೂಡಲೇ ಆ ಘೋರ ವನವು ಸುತ್ತಲೂ ಬಲೆಯಿಂದ ಆವೃತವಾಗಿರುವುದನ್ನೂ, ಪರಮ ಘೋರ ಸ್ತ್ರೀಯೊಬ್ಬಳು ತನ್ನೆರಡು ಕೈಗಳಿಂದ ಬಲೆಯನ್ನು ಎಳೆದು ವನವನ್ನು ಮುಚ್ಚುತ್ತಿರುವುದನ್ನು ಅವನು ನೋಡಿದನು. ಆ ಮಹಾವನವು ಪರ್ವತಗಳಷ್ಟು ಎತ್ತರವಾಗಿರುವ ಐದು ಹೆಡೆಗಳ ನಾಗಗಳಿಂದಲೂ ಆಕಾಶವನ್ನು ಮುಟ್ಟುವ ಮಹಾ ವೃಕ್ಷಗಳಿಂದಲೂ ವ್ಯಾಪ್ತವಾಗಿತ್ತು. ಆ ವನದ ಮಧ್ಯದಲ್ಲಿ ಹುಲ್ಲು-ಬಳ್ಳಿಗಳಿಂದ ಮುಚ್ಚಿ ಕಾಣದಂತಿದ್ದ ಬಾವಿಯೊಂದಿದ್ದಿತು. ನಿಗೂಢವಾಗಿದ್ದ ಆ ಬಾವಿಯಲ್ಲಿ ದ್ವಿಜನು ಬಿದ್ದನು. ಆದರೆ ಗಟ್ಟಿಯಾದ ಬಳ್ಳಿಗಳ ಬಲೆಯಲ್ಲಿ ಸಿಕ್ಕಿಹಾಕಿಕೊಂಡನು. ದೊಡ್ಡ ಹಲಸಿನ ಹಣ್ಣು ತನ್ನ ತೊಟ್ಟಿನಿಂದ ಹಿಡಿಯಲ್ಪಟ್ಟು ಮರದಲ್ಲಿ ನೇತಾಡುವಂತೆ ಅವನು ಕಾಲು ಮೇಲೆ ಮತ್ತು ತಲೆ ಕೆಳಗಾಗಿ ನೇತಾಡುತ್ತಿದ್ದನು. ಆ ಪರಿಸ್ಥಿತಿಯಲ್ಲಿ ಕೂಡ ಅವನಿಗೆ ಇನ್ನೊಂದು ಉಪದ್ರವವು ಒದಗಿ ಬಂದಿತು. ಬಾವಿಯ ದಡದ ಮೇಲೆ ದೊಡ್ಡ ಆನೆಯೊಂದನ್ನು ನೋಡಿದನು. ಅದಕ್ಕೆ ಆರು ಮುಖಗಳಿದ್ದವು. ಕಪ್ಪಾಗಿಯೂ ಬಿಳುಪಾಗಿಯೂ ಇತ್ತು. ಅದಕ್ಕೆ ಹನ್ನೆರಡು ಕಾಲುಗಳಿದ್ದವು. ಅದು ಬಳ್ಳಿ-ಮರಗಳಿಂದ ತುಂಬಿದ್ದ ಆ ಬಾವಿಯ ಕಡೆ ಕ್ರಮೇಣ ಬರುತ್ತಿತ್ತು. ಅವನು ನೇತುಬಿದ್ದಿದ್ದ ಮರದ ರೆಂಬೆಗಳ ಶಾಪೋಪಶಾಖೆಗಳಲ್ಲಿ ನಾನಾರೂಪದ, ಘೋರರೂಪದ, ಭಯವನ್ನುಂಟುಮಾಡುವ ಜೇನುಹುಳುಗಳು ಗೂಡುಕಟ್ಟಿದ್ದವು. ಮೊದಲೇ ಸಂಗ್ರಹಿಸಿದ್ದ ಜೇನುತುಪ್ಪವನ್ನು ಅವುಗಳು ಸವಿಯುತ್ತಿದ್ದವು. ಜೀವಿಗಳಿಗೆ ಸ್ವಾದನೀಯವಾದ ಮತ್ತು ಬಾಲಕರಿಗೆ ತೃಪ್ತಿಯನ್ನೀಡುವ ಆ ಜೇನುತುಪ್ಪವನ್ನು ಅವುಗಳು ಪುನಃ ಪುನಃ ಹೀರುತ್ತಿದ್ದವು. ಆ ಜೇನುಗೂಡುಗಳಿಂದ ಧಾರಾಕಾರವಾಗಿ ಬಹಳಷ್ಟು ಜೇನುತುಪ್ಪವು ಸುರಿಯುತ್ತಿದ್ದು. ಅಲ್ಲಿ ನೇತಾಡುತ್ತಿದ್ದ ಆ ಬ್ರಾಹ್ಮಣನು ಜೇನುತುಪ್ಪಿನ ಧಾರೆಯನ್ನು ಕುಡಿಯುತ್ತಿದ್ದನು. ಸಂಕಟದಲ್ಲಿದ್ದರೂ ಜೇನುತುಪ್ಪವನ್ನು ಕುಡಿಯುತ್ತಿದ್ದ ಅವನಿಗೆ ತೃಪ್ತಿಯೇ ಆಗಲಿಲ್ಲ. ಆಗಲೂ ಕೂಡ ಅವನು ನಿತ್ಯವೂ ಅತೃಪ್ತನಾಗಿ ಪುನಃ ಪುನಃ ಜೇನುತುಪ್ಪವನ್ನು ಬಯಸುತ್ತಿದ್ದನು. ಆಗಲೂ ಕೂಡ ಅವನಿಗೆ ಜೀವನದಲ್ಲಿ ವೈರಾಗ್ಯವುಂಟಾಗಲಿಲ್ಲ. ಅಲ್ಲಿ ಕೂಡ ಮನುಷ್ಯನ ಜೀವಿತದ ಆಸೆಯು ದೃಢವಾಗಿತ್ತು. ಬಿಳಿ ಮತ್ತು ಕಪ್ಪು ಬಣ್ಣದ ಇಲಿಗಳು ಆ ಮರವನ್ನು ಕಡಿಯುತ್ತಿದ್ದವು. ದುರ್ಗಮ ವನದಲ್ಲಿದ್ದ ಸರ್ಪಗಳು, ಪರಮ ಉಗ್ರರೂಪದ ಸ್ತ್ರೀ, ಬಾವಿಯೊಳಗಿದ್ದ ನಾಗ ಮತ್ತು ಬಾವಿಯ ಮೇಲಿದ್ದ ಆನೆ, ಐದನೆಯದು ಇಲಿಗಳಿಂದ ಕಡಿಯಲ್ಪಡುತ್ತಿದ್ದ ಮರವು ಬೀಳುವ ಭಯ, ಮತ್ತು ಆರನೆಯದಾಗಿ ಜೇನುತುಪ್ಪವನ್ನು ಸವಿಯುತ್ತಿದ್ದ ತನ್ನನ್ನು ಜೇನುಹುಳುಗಳು ಕಡಿಯುವ ಮಹಾಭಯ! ಈ ರೀತಿ ಸಂಸಾರವೆಂಬ ಮಹಾಸಾಗರದಲ್ಲಿ ಮುಳುಗಿದವನು ಜೀವಿಸಿರುತ್ತಾನೆ. ಜೀವದ ಆಸೆಯಿಂದ ಅವನು ಖಂಡಿತವಾಗಿಯೂ ವೈರಾಗ್ಯವನ್ನು ಹೊಂದುವುದಿಲ್ಲ.”
ಧೃತರಾಷ್ಟ್ರನು ಹೇಳಿದನು: “ಶ್ರೇಷ್ಠ ಮಾತುಗಾರನೇ! ಅಯ್ಯೋ! ಅಂಥಹ ಮಹಾದುಃಖ ಮತ್ತು ಕಷ್ಟದಲ್ಲಿ ಬದುಕಿದ್ದ ಅವನು ಹೇಗೆ ತಾನೇ ಅಲ್ಲಿ ಆನಂದಿಸುತ್ತಿದ್ದನು ಅಥವಾ ತೃಪ್ತಿಹೊಂದುತ್ತಿದ್ದನು? ಅವನು ಧರ್ಮಸಂಕಟದಲ್ಲಿ ಬದುಕಿದ್ದ ಅದು ಯಾವ ಪ್ರದೇಶವಾಗಿತ್ತು? ಅಂಥಹ ಮಹಾಭಯಗಳಿಂದ ಮನುಷ್ಯನು ಹೇಗೆ ಬಿಡುಗಡೆಹೊಂದಬಲ್ಲನು? ಏನು ಮಾಡಿದರೆ ಅವನಿಗೆ ಒಳ್ಳೆಯದಾಗುತ್ತದೆ? ಇವೆಲ್ಲವನ್ನೂ ನನಗೆ ಹೇಳು. ಅವನ ಮೇಲೆ ನನಗೆ ತುಂಬಾ ಮರುಕವುಂಟಾಗುತ್ತಿದೆ. ಅವನ ಉದ್ಧಾರಕ್ಕೆ ಪ್ರಯತ್ನಿಸಬೇಕೆನಿಸುತ್ತದೆ!”
ವಿದುರನು ಹೇಳಿದನು: “ರಾಜನ್! ಮೋಕ್ಷವನ್ನು ತಿಳಿದಿರುವವರು ಸಂಸಾರವನ್ನು ಉದಾಹರಿಸಿ ಕೊಟ್ಟಿರುವ ಉಪಮಾನವಿದು. ಇದನ್ನು ತಿಳಿದುಕೊಂಡ ಮನುಷ್ಯನು ಪರಲೋಕದಲ್ಲಿ ಉತ್ತಮ ಗತಿಯನ್ನು ಹೊಂದುತ್ತಾನೆ. ಸಂಸಾರವನ್ನೇ ಇಲ್ಲಿ ಮಹಾವನವೆಂದು ಹೇಳಿದ್ದಾರೆ. ಆ ವನವು ಎಷ್ಟು ದುರ್ಗಮವಾಗಿತ್ತೋ ಸಂಸಾರವೂ ಅಷ್ಟೇ ಗಹನವಾದುದು ಎಂದರ್ಥ. ಅಲ್ಲಿ ಹೇಳಿರುವ ಸರ್ಪಗಳೇ ವ್ಯಾಧಿಗಳು. ಬಲೆಯನ್ನು ಬೀಸುತ್ತಿದ್ದ ಆ ದೊಡ್ಡದೇಹದ ನಾರಿಯನ್ನು ಪ್ರಾಜ್ಞರು ವರ್ಣ-ರೂಪಗಳನ್ನು ನಾಶಗೊಳಿಸುವ ಮುಪ್ಪು ಎಂದು ಕರೆಯುತ್ತಾರೆ. ಅಲ್ಲಿದ್ದ ಬಾವಿಯೇ ಶರೀರಿಗಳ ದೇಹ. ಅದರೊಳಗೆ ವಾಸಿಸುತ್ತಿದ್ದ ಸರ್ಪವೇ ಇರುವ ಎಲ್ಲವುಗಳ ದೇಹಗಳಲ್ಲಿ ವಾಸಿಸುತ್ತಿರುವ, ಸರ್ವವನ್ನೂ ಅಪಹರಿಸುವ, ಅಂತಕ ಮಹಾಕಾಲ. ಆ ಬಾವಿಯ ಮಧ್ಯದಲ್ಲಿ ಬೆಳೆದಿದ್ದ ಮತ್ತು ಆ ಮನುಷ್ಯನು ಸಿಲುಕಿ ನೇತಾಡುತ್ತಿದ್ದ ಬಳ್ಳಿಯೇ ಶರೀರಿಗಳ ಜೀವದ ಆಶೆ. ಬಾವಿಯ ಸಮೀಪದಲ್ಲಿ ಒಂದು ಮರದ ಕಡೆ ಹೋಗುತ್ತಿದ್ದ ಆನೆಯೇ ಸಂವತ್ಸರವು. ಅದರ ಆರು ಮುಖಗಳು ಋತುಗಳು ಮತ್ತು ಪಾದಗಳೇ ಹನ್ನೆರಡು ಮಾಸಗಳು. ಎಚ್ಚರದಿಂದಿದ್ದು ಆ ಮರವನ್ನು ಕಡಿಯುತ್ತಿದ್ದ ಬಿಳಿ ಮತ್ತು ಕಪ್ಪುಬಣ್ಣದ ಇಲಿಗಳು ಹಗಲು-ರಾತ್ರಿಗಳೆಂದು ಹೇಳುತ್ತಾರೆ. ಅಲ್ಲಿದ್ದ ಜೇನುಹುಳುಗಳೇ ಕಾಮಗಳು. ಅನೇಕ ಧಾರೆಗಳಾಗಿ ಸುರಿಯುತ್ತಿದ್ದ ಜೇನುತುಪ್ಪವೇ ಮಾನವರನ್ನು ಮುಳುಗಿಸುವ ಕಾಮರಸಗಳೆಂದು ತಿಳಿಯಬೇಕು. ಈ ರೀತಿ ಸಂಸಾರಚಕ್ರವು ತಿರುಗುತ್ತಿರುತ್ತದೆಯೆಂದು ತಿಳಿದವರು ಹೇಳುತ್ತಾರೆ. ತಿಳಿದವರು ಅದೇ ಸಂಸಾರಚಕ್ರದ ಪಾಶಗಳನ್ನು ಕಡಿದುಹಾಕುತ್ತಾರೆ.”
ಧೃತರಾಷ್ಟ್ರನು ಹೇಳಿದನು: “ಅಯ್ಯಾ! ತತ್ತ್ವದರ್ಶಿಯಾದ ನಿನ್ನಿಂದ ಈ ಅದ್ಭುತ ಆಖ್ಯಾನವನ್ನು ಕೇಳಿದೆನು. ನಿನ್ನ ವಚನಾಮೃತವನ್ನು ಇನ್ನೂ ಕೇಳಲು ನನಗೆ ಹರ್ಷವಾಗುತ್ತದೆ.”
ವಿದುರನು ಹೇಳಿದನು: “ಇದರ ಮಾರ್ಗವನ್ನು ವಿಸ್ತಾರವಾಗಿ ಇನ್ನೊಮ್ಮೆ ಹೇಳುತ್ತೇನೆ. ಕೇಳು. ಇದನ್ನು ಕೇಳಿದ ವಿಚಕ್ಷಣರು ಸಂಸಾರಬಂಧನದಿಂದ ವಿಮುಕ್ತರಾಗುತ್ತಾರೆ. ದೀರ್ಘ ಯಾತ್ರೆಯನ್ನು ಕೈಗೊಂಡಿರುವ ಪುರುಷನು ಹೇಗೆ ಮಧ್ಯದಲ್ಲಿ ಸ್ವಲ್ಪ ಸ್ವಲ್ಪ ಸಮಯ ಕೆಲವೆಡೆಗಳಲ್ಲಿ ತಂಗುತ್ತಾನೋ ಹಾಗೆ ಈ ಸಂಸಾರವೆಂಬ ಪಯಣದಲ್ಲಿ ಅನೇಕ ಗರ್ಭಗಳಲ್ಲಿ ಜೀವನು ತಂಗುತ್ತಾನೆ. ಆದರೆ ತಿಳುವಳಿಕೆಯಿಲ್ಲದವರು ಮಾಡುವ ಈ ವಿಶ್ರಾಂತಿಯ ವಾಸದಿಂದ ಪಂಡಿತರಾದವರು ಮುಕ್ತರಾಗಿರುತ್ತಾರೆ. ಸಂಸಾರವನ್ನು ಗಹನ ವನಕ್ಕೆ ಹೇಗೆ ಮನೀಷಿಣರು ಹೋಲಿಸುತ್ತಾರೋ ಹಾಗೆ ಶಾಸ್ತ್ರಗಳನ್ನು ತಿಳಿದವರು ಗರ್ಭಾವಾಸವನ್ನು ದೀರ್ಘಯಾತ್ರೆಯ ತಂಗುದಾಣವೆಂದು ನಿರೂಪಿಸಿರುತ್ತಾರೆ. ಈ ರೀತಿ ಮರ್ತ್ಯರ, ಸ್ಥಾವರ-ಚರಗಳ ಲೋಕಚಕ್ರವು ತಿರುಗುತ್ತಿರುತ್ತದೆ. ಪಂಡಿತರು ಇದರಲ್ಲಿ ಆಸಕ್ತರಾಗುವುದಿಲ್ಲ. ಮನುಷ್ಯರ ಶಾರೀರಿಕ ಮತ್ತು ಮಾನಸಿಕ, ಪ್ರತ್ಯಕ್ಷ ಮತ್ತು ಪರೋಕ್ಷ ವ್ಯಾಧಿಗಳನ್ನು ವಿಷಸರ್ಪಗಳೆಂದು ತಿಳಿದವರು ಹೇಳುತ್ತಾರೆ. ಸ್ವಕರ್ಮಗಳ ಫಲಗಳಾಗಿರುವ ಇವುಗಳಿಂದ ನಿತ್ಯವೂ ಪೀಡಿಸಲ್ಪಟ್ಟು ಸಾಯುತ್ತಿದ್ದರೂ ಅಲ್ಪಬುದ್ಧಿಯವರು ಈ ವಿಷಸರ್ಪಗಳಿಂದ ಉದ್ವಿಗ್ನರಾಗುವುದಿಲ್ಲ. ಪುರುಷನು ವ್ಯಾಧಿಗಳಿಂದ ಬಿಡುಗಡೆ ಹೊಂದಿದರೂ, ನಂತರ ಅವನನ್ನು ರೂಪವಿನಾಶಿನೀ ಮುಪ್ಪು ಆವರಿಸುವುದು ನಿಶ್ಚಿತ! ವಿವಿಧ ಶಬ್ಧ-ರೂಪ-ರಸ-ಸ್ಪರ್ಶ-ಗಂಧಗಳೆಂಬ ಮಹಾ ಕೆಸರಿನಲ್ಲಿ ಸುತ್ತಲೂ ಆಶ್ರಯವಿಲ್ಲದೇ ಮುಳುಗುತ್ತಿರುವವನ ರೂಪ-ವಯಸ್ಸುಗಳನ್ನು ಸಂವತ್ಸರ-ಮಾಸ-ಪಕ್ಷ-ಆಹೋ-ರಾತ್ರಿ-ಸಂಧ್ಯಾಕಾಲಗಳು ಕ್ರಮೇಣವಾಗಿ ಕ್ಷೀಣಿಸುತ್ತಾ ಬರುತ್ತವೆ. ಇವೇ ಕಾಲದ ಪ್ರತಿನಿಧಿಗಳು. ದುರ್ಬುಧರು ಇವುಗಳನ್ನು ಅರಿತುಕೊಂಡಿರುವುದಿಲ್ಲ. ಸರ್ವಭೂತಗಳ ಕರ್ಮಗಳನ್ನು ಮೊದಲೇ ಬರೆದಿಡಲಾಗಿದೆ ಎಂದು ಹೇಳುತ್ತಾರೆ. ಭೂತಗಳ ಶರೀರವನ್ನು ರಥವೆಂದೂ, ಸಾರಥಿಯನ್ನು ಅದರೊಳಗಿರುವ ಸತ್ತ್ವವೆಂದೂ ಹೇಳುತ್ತಾರೆ. ಇಂದ್ರಿಯಗಳನ್ನು ಕುದುರೆಗಳೆಂದೂ ಕರ್ಮಮಾಡುವ ಬುದ್ಧಿಯನ್ನು ಕಡಿವಾಣಗಳೆಂದೂ ಹೇಳುತ್ತಾರೆ. ಆ ಕುದುರೆಗಳು ಯಾವ ವೇಗದಲ್ಲಿ ಹೋಗುತ್ತಿರುತ್ತವೆಯೋ ಅದೇ ವೇಗದಲ್ಲಿ ಹೋಗುತ್ತಿರುವವನು ಈ ಸಂಸಾರ ಚಕ್ರದಲ್ಲಿ ಚಕ್ರದಂತೆ ತಿರುಗುತ್ತಿರುತ್ತಾನೆ. ಬುದ್ಧಿಯಿಂದ ಯಾರು ಇದನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತಾನೋ ಅವನು ಸಂಸಾರಚಕ್ರಕ್ಕೆ ಹಿಂದಿರುಗುವುದಿಲ್ಲ. ಯಾಮ್ಯರಥವೆಂದು ಕರೆಯಲ್ಪಡುವ ಇದರಿಂದ ಮೂಢರು ವ್ಯಾಮೋಹಿತರಾಗಿರುತ್ತಾರೆ. ನೀನು ಪಡೆದಿರುವ ರಾಜ್ಯನಾಶ, ಸುಹೃದಯರ ನಾಶ ಮತ್ತು ಮಕ್ಕಳ ನಾಶ ಮೊದಲಾದ ಅವಸ್ಥೆಯನ್ನೇ ಅವರೂ ಪಡೆಯುತ್ತಾರೆ. ಅತಿವ್ಯಾಮೋಹವೇ ದುಃಖಕ್ಕೆ ಕಾರಣವಾಗುತ್ತದೆ. ಸಾಧುವಾದವನು ಪರಮದುಃಖಗಳಿಗೆ ದುಃಖದ ಚಿಕಿತ್ಸೆಯನ್ನು ಮಾಡಿಕೊಳ್ಳಬೇಕು. ಆತ್ಮದ ಸ್ಥಿರ-ಸಂಯಮಗಳಿಂದ ದೊರೆಯುವ ದುಃಖಾದಿಗಳ ಬಿಡುಗಡೆಯು ವಿಕ್ರಮದಿಂದಾಗಲೀ, ಸಂಪತ್ತಿನಿಂದಾಲೀ, ಮಿತ್ರ-ಸುಹೃಜ್ಜನರಿಂದಾಗಲೀ ದೊರೆಯುವುದಿಲ್ಲ. ಆದುದರಿಂದ ಸರ್ವತ್ರ ಸರ್ವರಲ್ಲಿಯೂ ಮೈತ್ರೀಭಾವವನ್ನು ಹೊಂದಿ ಶೀಲವನ್ನು ಪಡೆದುಕೋ! ದಮ, ತ್ಯಾಗ ಮತ್ತು ಅಪ್ರಮಾದ ಈ ಮೂರು ಬ್ರಹ್ಮನ ಸ್ಥಾನಕ್ಕೊಯ್ಯುವ ಕುದುರೆಗಳು. ಮನಸ್ಸಿನಲ್ಲಿ ಶೀಲವೆಂಬ ಕಡಿವಾಣವನ್ನು ಹಿಡಿದು ರಥದಲ್ಲಿ ಕುಳಿತಿರುವವನು ಮೃತ್ಯುಭಯವನ್ನು ತ್ಯಜಿಸಿ ಬ್ರಹ್ಮಲೋಕಕ್ಕೆ ಹೋಗುತ್ತಾನೆ.”
ವ್ಯಾಸನು ಧೃತರಾಷ್ಟ್ರನಿಗೆ ದೇವರಹಸ್ಯವನ್ನು ತಿಳಿಸಿ ಸಂತೈಸಿದುದು
ವಿದುರನ ಆ ಮಾತನ್ನು ಕೇಳಿ ಕುರುಸತ್ತಮನು ಪುತ್ರಶೋಕದಿಂದ ಸಂತಪ್ತನಾಗಿ ಮೂರ್ಛಿತನಾಗಿ ನೆಲದ ಮೇಲೆ ಬಿದ್ದನು. ಹಾಗೆ ನಿಃಸಂಜ್ಞನಾಗಿ ಅವನು ನೆಲದ ಮೇಲೆ ಬಿದ್ದುದನ್ನು ನೋಡಿ ಅಲ್ಲಿದ್ದ ಬಾಂಧವರು – ಕೃಷ್ಣದ್ವೈಪಾಯನ, ಕ್ಷತ್ತ ವಿದುರ - ಮತ್ತು ಅನ್ಯ ವಿಶ್ವಸನೀಯ ಸುಹೃದಯರು – ಸಂಜಯ ಮತ್ತು ದ್ವಾರಪಾಲಕರು – ಸುಖಶೀತಲ ನೀರನ್ನು ಚುಮಿಕಿಸಿ ಬೀಸಣಿಗೆಯನ್ನು ಬೀಸಿದರು. ಕೈಗಳಿಂದ ಅವನ ಶರೀರವನ್ನು ಮುಟ್ಟುತ್ತಾ ಎಬ್ಬಿಸಲು ಪ್ರಯತ್ನಿಸುತ್ತಿದ್ದ ಅವರು ಹಾಗೆಯೇ ಬಹಳ ಹೊತ್ತಿನವರೆಗೆ ಧೃತರಾಷ್ಟ್ರನ ಬಳಿಯೇ ಇದ್ದರು. ದೀರ್ಘಕಾಲದ ನಂತರ ಎಚ್ಚರಗೊಂಡ ಮಹೀಪತಿಯು ಪುತ್ರವ್ಯಸನದಿಂದ ಮುಳುಗಿಹೋಗಿ ಬಹಳ ಹೊತ್ತು ವಿಲಪಿಸುತ್ತಿದ್ದನು. “ಮನುಷ್ಯಜನ್ಮಕ್ಕೇ ಧಿಕ್ಕಾರ! ಮನುಷ್ಯನಾಗಿ ಹುಟ್ಟಿದಾಗಿನಿಂದ ಪುನಃ ಪುನಃ ದುಃಖಗಳು ಬರುತ್ತಲೇ ಇರುತ್ತವೆ! ಪುತ್ರನಾಶ, ಅರ್ಥನಾಶ, ಜ್ಞಾತಿ-ಸಂಬಂಧಿಗಳ ನಾಶಗಳಿಂದ ವಿಷ ಮತ್ತು ಅಗ್ನಿಗಳಿಗೆ ಸಮಾನ ಮಹಾದುಃಖವು ಪ್ರಾಪ್ತವಾಗಿದೆ. ಇವುಗಳಿಂದ ದೇಹವು ಸುಡುತ್ತಿದೆ. ಪ್ರಜ್ಞೆಯು ನಾಶವಾಗುತ್ತಿದೆ. ಇದನ್ನು ಅನುಭವಿಸುತ್ತಿರುವ ಮನುಷ್ಯನಿಗೆ ಮರಣವೇ ಲೇಸೆನಿಸುತ್ತದೆ. ದ್ವಿಜಸತ್ತಮ! ಭಾಗ್ಯವಿಪರ್ಯಾಸದಿಂದ ನನಗೆ ಈ ವ್ಯಸನವು ಪ್ರಾಪ್ತವಾಗಿದೆ. ಇಂದೇ ನಾನು ಪ್ರಾಣತ್ಯಾಗಮಾಡುತ್ತೇನೆ!”
ಹೀಗೆ ಅವನು ಮಹಾತ್ಮ ಬ್ರಹ್ಮವಿತ್ತಮ ತಂದೆಗೆ ಹೇಳಿ ಮೂಢನಾಗಿ ಪರಮ ಶೋಕಾನ್ವಿತನಾದನು. ಯೋಚನಾಮಗ್ನನಾಗಿದ್ದ ರಾಜ ಮಹೀಪತಿಯು ಸುಮ್ಮನಾದನು. ಅವನ ಆ ಮಾತನ್ನು ಕೇಳಿ ಪ್ರಭು ಕೃಷ್ಣದ್ವೈಪಾಯನನು ಪುತ್ರಶೋಕದಿಂದ ಸಂತಪ್ತನಾಗಿದ್ದ ಪುತ್ರನಿಗೆ ಈ ಮಾತನ್ನಾಡಿದನು: “ಧೃತರಾಷ್ಟ್ರ! ನಾನು ನಿನಗೆ ಹೇಳುವುದನ್ನು ಕೇಳು. ನೀನು ವೇದಾಧ್ಯಯನ ಮಾಡಿರುವೆ. ಮೇಧಾವಿಯೂ ಧರ್ಮಾರ್ಥಕುಶಲನೂ ಆಗಿರುವೆ. ನಿನಗೆ ತಿಳಿಯದೇ ಇರುವುದು ಯಾವುದೂ ಇಲ್ಲ. ತಿಳಿಯಬೇಕಾಗಿರುವುದೂ ಯಾವುದೂ ಇಲ್ಲ. ಮನುಷ್ಯರ ಅನಿತ್ಯತೆಯನ್ನು ನೀನು ಅರಿತುಕೊಂಡಿದ್ದೇಯೆ. ಅದರಲ್ಲಿ ಸಂಶಯವಿಲ್ಲ! ಜೀವಲೋಕವೇ ಅಶಾಶ್ವತವಾದುದು. ಸತ್ಯರ ಸ್ಥಾನವೇ ಶಾಶ್ವತವಾದುದು. ಜೀವಿಸಿರುವವನಿಗೆ ಮರಣವೇ ಅಂತ್ಯವಾದುದು. ಅದಕ್ಕಾಗಿ ಏಕೆ ದುಃಖಿಸುತ್ತಿರುವೆ? ನಿನ್ನ ಪುತ್ರನನ್ನೇ ಕಾರಣವನ್ನಾಗಿಸಿಕೊಂಡು ಕಾಲಯೋಗದಿಂದ ನಿನ್ನ ಪ್ರತ್ಯಕ್ಷದಲ್ಲಿಯೇ ಈ ವೈರವು ಹುಟ್ಟಿಕೊಂಡಿತು. ಅವಶ್ಯವಾಗಿದ್ದ ಕುರುಗಳ ವಿನಾಶವು ನಡೆದುಹೋಯಿತು. ಪರಮ ಗತಿಯನ್ನು ಸೇರಿದ ಆ ಶೂರರಿಗಾಗಿ ಏಕೆ ನೀನು ಶೋಕಿಸುತ್ತಿರುವೆ? ಇದನ್ನು ತಿಳಿದಿದ್ದ ಮಹಾಬಾಹು ಮಹಾತ್ಮ ವಿದುರನು ಸರ್ವಶಕ್ತಿಗಳಿಂದ ಶಾಂತಿಗಾಗಿ ಪ್ರಯತ್ನಿಸಿದನು. ಬಹುಕಾಲ ಪ್ರಯತ್ನಿಸಿದರೂ ದೈವವು ಮಾಡಿದ ಮಾರ್ಗವನ್ನು ಇರುವ ಯಾವುದೂ ತಡೆಯಲಾರದೆನ್ನುವುದು ನನ್ನ ಅಭಿಪ್ರಾಯ. ದೇವತೆಗಳ ಕಾರ್ಯವನ್ನು ನಾನು ಪ್ರತ್ಯಕ್ಷ ನೋಡಿದ್ದೇನೆ ಮತ್ತು ಕೇಳಿದ್ದೇನೆ. ಅದನ್ನು ನಿನಗೆ ಹೇಳುತ್ತೇನೆ. ಅದರಿಂದ ನಿನಗೆ ಸ್ಥೈರ್ಯವುಂಟಾಗಬಹುದು. ಶ್ರಮವನ್ನು ಜಯಿಸಿರುವ ನಾನು ಹಿಂದೆ ತ್ವರೆಮಾಡಿ ಇಂದ್ರನ ಸಭೆಗೆ ಹೋಗಿದ್ದೆನು. ಅಲ್ಲಿ ದಿವೌಕಸರು, ಮತ್ತು ನಾರದನೇ ಮೊದಲಾದ ಸರ್ವ ದೇವಋಷಿಗಳು ನೆರೆದಿರುವುದನ್ನು ನೋಡಿದೆನು. ಅಲ್ಲಿ ಕಾರ್ಯಾರ್ಥವಾಗಿ ದೇವತೆಗಳ ಸಮೀಪ ಬಂದಿದ್ದ ಪೃಥ್ವಿಯನ್ನೂ ನೋಡಿದೆ. ಆಗ ಧರಿತ್ರಿಯು ಬಳಿಸಾರಿ ನೆರೆದಿದ್ದ ದೇವತೆಗಳಿಗೆ ಹೇಳಿದಳು: “ಮಹಾಭಾಗರೇ! ಬ್ರಹ್ಮಸದನದಲ್ಲಿ ನೀವು ಪ್ರತಿಜ್ಞೆಮಾಡಿದ್ದ ನನ್ನ ಕಾರ್ಯವನ್ನು ಶೀಘ್ರವಾಗಿ ನಡೆಸಿಕೊಡಿರಿ!” ಅವಳ ಆ ಮಾತನ್ನು ಕೇಳಿ ಲೋಕನಮಸ್ಕೃತ ವಿಷ್ಣುವು ನಗುತ್ತಾ ದೇವಸಂಸದಿಯಲ್ಲಿ ಪೃಥ್ವಿಗೆ ಈ ಮಾತನ್ನಾಡಿದನು: “ಧೃತರಾಷ್ಟ್ರನ ನೂರು ಪುತ್ರರಲ್ಲಿ ಜ್ಯೇಷ್ಠನಾದ ದುರ್ಯೋಧನನೆಂದು ಖ್ಯಾತನಾಗಿರುವ ಅವನು ನಿನ್ನ ಕಾರ್ಯವನ್ನು ಮಾಡಿಕೊಡುತ್ತಾನೆ. ಆ ಮಹೀಪಾಲನನ್ನು ಹೊಂದಿದ ನೀನು ಕೃತಕೃತ್ಯಳಾಗುವೆ! ಅವನಿಗೋಸ್ಕರವಾಗಿ ಪೃಥ್ವೀಪಾಲರು ಕುರುಕ್ಷೇತ್ರದಲ್ಲಿ ಸೇರಿ ದೃಢ ಶಸ್ತ್ರ ಪ್ರಹಾರಗಳಿಂದ ಅನ್ಯೋನ್ಯರನ್ನು ಸಂಹರಿಸುತ್ತಾರೆ. ದೇವೀ! ಆ ಯುದ್ಧದಲ್ಲಿ ನೀನು ಹೊತ್ತಿರುವ ಭಾರವು ನಾಶವಾಗುತ್ತದೆ. ಶೀಘ್ರವಾಗಿ ನಿನ್ನ ಸ್ವಸ್ಥಾನಕ್ಕೆ ತೆರಳಿ ಲೋಕಗಳನ್ನು ಧರಿಸು!” ಲೋಕಸಂಹಾರದ ಕಾರಣಾರ್ಥವಾಗಿ ಕಲಿಯ ಅಂಶದಿಂದ ಅವನು ಗಾಂಧಾರಿಯ ಜಠರದಲ್ಲಿ ನಿನ್ನ ಸುತನಾಗಿ ಹುಟ್ಟಿದನು. ದೈವಯೋಗದಿಂದ ಅಸಹನಶೀಲನೂ, ಚಪಲನೂ, ಕೋಪಿಷ್ಠನೂ, ಅಸಂತುಷ್ಟನೂ ಆಗಿದ್ದ ಅವನಂತೆಯೇ ಅವನ ಸಹೋದರರೂ ಹುಟ್ಟಿಕೊಂಡರು. ಪೃಥ್ವಿಯ ನೃಪರನ್ನು ಒಟ್ಟಾಗಿ ವಿನಾಶಗೊಳಿಸಲಿಕ್ಕಾಗಿಯೇ ಅವನ ಮಾವ ಶಕುನಿಯೂ ಪರಮ ಸಖ ಕರ್ಣನೂ ಹುಟ್ಟಿದ್ದರು. ಇದರ ಅರ್ಥವನ್ನು ನಾರದನು ತತ್ತ್ವತಃ ತಿಳಿದುಕೊಂಡಿದ್ದಾನೆ. ತಾವೇ ಮಾಡಿದ ಅಪರಾಧಗಳಿಂದ ನಿನ್ನ ಪುತ್ರರು ವಿನಾಶಹೊಂದಿದ್ದಾರೆ. ಅವರ ಕುರಿತು ಶೋಕಿಸಬೇಡ! ಇದರಲ್ಲಿ ಶೋಕಿಸುವ ಕಾರಣವೇ ಇಲ್ಲ! ಪಾಂಡವರೂ ಕೂಡ ನಿನ್ನನ್ನು ಅಪರಾಧಿಯೆಂದು ಸ್ವಲ್ಪವೂ ತಿಳಿದುಕೊಳ್ಳುವುದಿಲ್ಲ. ದುರಾತ್ಮರಾದ ನಿನ್ನ ಮಕ್ಕಳೇ ಈ ಮಹಿಯನ್ನು ವಿನಾಶಮಾಡಿದರು. ನಿನಗೆ ಮಂಗಳವಾಗಲಿ! ನಾರದನು ಹಿಂದೆಯೇ ಯುಧಿಷ್ಠಿರನ ರಾಜಸೂಯದ ಸಭೆಯಲ್ಲಿ ಇದನ್ನು ಹೇಳಿದ್ದನು. ಅದರಲ್ಲಿ ಸಂಶಯವೇ ಇಲ್ಲ. “ಕೌಂತೇಯ! ಪಾಂಡವರು ಮತ್ತು ಕೌರವರು ಪರಸ್ಪರರನ್ನು ಎದುರಿಸಿ ಇಲ್ಲವಾಗುತ್ತಾರೆ. ನೀನು ಮಾಡಬೇಕಾದ ಕರ್ತವ್ಯವನ್ನು ಮಾಡು!” ನಾರದನ ಮಾತನ್ನು ಕೇಳಿ ಪಾಂಡವರು ವ್ಯಥೆಪಟ್ಟಿದ್ದರು. ಇಗೋ ಸನಾತನವಾಗಿರುವ ಈ ದೇವರಹಸ್ಯವೆಲ್ಲವನ್ನೂ ಹೇಳಿದ್ದೇನೆ. ಇದನ್ನು ಕೇಳಿದ ನಂತರವಾದರೂ ದೈವವು ನಡೆಸಿದ ವಿಧಿಯನ್ನು ತಿಳಿದು ನಿನ್ನ ಶೋಕವು ನಾಶವಾಗಲಿ. ಪ್ರಾಣಗಳ ಮೇಲೆ ದಯವುಂಟಾಗಲಿ. ಮತ್ತು ಪಾಂಡುಪುತ್ರರೊಡನೆ ಸ್ನೇಹವು ಬೆಳೆಯಲಿ. ಇದರ ಅರ್ಥವನ್ನು ನಾನು ಬಹಳ ಹಿಂದೆಯೇ ಕೇಳಿದ್ದೆ. ಉತ್ತಮ ಕ್ರತು ರಾಜಸೂಯದಲ್ಲಿ ಧರ್ಮರಾಜನಿಗೂ ಇದನ್ನು ಹೇಳಿದ್ದೆ. ಈ ಗುಟ್ಟನ್ನು ನನ್ನಿಂದ ಕೇಳಿದ ಧರ್ಮಪುತ್ರನೂ ಕೌರವರೊಂದಿಗೆ ಕಲಹವಾಗದಂತೆ ಬಹಳವಾಗಿ ಪ್ರಯತ್ನಿಸಿದನು. ಆದರೆ ದೈವವೇ ಬಲವತ್ತರವಾದುದು. ಕೃತಾಂತನ ಈ ವಿಧಿಯನ್ನು ಚರಾಚರ ಪ್ರಾಣಿಗಳಲ್ಲಿ ಯಾರಿಗೂ ಎಂದೂ ಅತಿಕ್ರಮಿಸಲಾಗುವುದಿಲ್ಲ. ನೀನು ಕರ್ಮಪರನಾಗಿರುವೆ! ಬುದ್ಧಿಶ್ರೇಷ್ಠನೂ ಆಗಿರುವೆ. ಪ್ರಾಣಿಗಳ ಆಗಮನ-ನಿರ್ಗಮನಗಳ ಕುರಿತು ತಿಳಿದಿರುವ ನೀನು ಏಕೆ ಮೋಹಿತನಾಗುವೆ? ನೀನು ಶೋಕಸಂತಪ್ತನಾಗಿ ಪುನಃ ಪುನಃ ಮೂರ್ಛಿತನಾಗುತ್ತಿರುವೆ ಎಂದು ತಿಳಿದು ರಾಜಾ ಯುಧಿಷ್ಠಿರನು ಪ್ರಾಣಗಳನ್ನೂ ತ್ಯಜಿಸಿಯಾನು! ತಿರ್ಯಗ್ಯೋನಿಗಳಲ್ಲಿ ಜನಿಸಿರುವ ಪಶು-ಪಕ್ಷಿಗಳ ಮೇಲೂ ಕೃಪಾಲುವಾಗಿರುವ ಆ ವೀರನು ನಿನ್ನ ಮೇಲೆ ಏಕೆ ಕೃಪೆಯಿಂದ ನಡೆದುಕೊಳ್ಳುವುದಿಲ್ಲ? ನನ್ನ ನಿಯೋಗದಿಂದ ವಿಧಿಯು ಅನತಿಕ್ರಮಣೀಯವೆಂದು ತಿಳಿದು ಪಾಂಡವರ ಮೇಲಿನ ಕಾರುಣ್ಯದಿಂದ ಪ್ರಾಣಧಾರಣೆಯನ್ನು ಮಾಡಿಕೊಂಡಿರು! ಹೀಗೆ ನಡೆದುಕೊಂಡರೆ ಲೋಕದಲ್ಲಿ ಕೀರ್ತಿಯುಂಟಾಗುತ್ತದೆ. ಮಗೂ! ಮಹಾ ಧರ್ಮವನ್ನೂ ದೀರ್ಘಕಾಲದ ತಪಸ್ಸನ್ನೂ ಪಡೆದುಕೊಳ್ಳಬಹುದು. ಪುತ್ರಶೋಕದಿಂದ ಹುಟ್ಟಿ ಪ್ರಜ್ವಲಿಸುತ್ತಿರುವ ಅಗ್ನಿಯನ್ನು ಪ್ರಜ್ಞೆಯೆಂಬ ನೀರಿನಿಂದ ಸದಾಕಾಲಕ್ಕಾಗಿ ಆರಿಸು!”
ಅಮಿತತೇಜಸ್ವಿ ವ್ಯಾಸನ ಈ ಮಾತನ್ನು ಕೇಳಿ ಮುಹೂರ್ತಕಾಲ ಯೋಚಿಸಿ ಧೃತರಾಷ್ಟ್ರನು ಹೇಳಿದನು: “ದ್ವಿಜೋತ್ತಮ! ಮಹಾ ಶೋಕಜಾಲದಲ್ಲಿ ಸಿಲುಕಿಬಿಟ್ಟಿದ್ದೇನೆ! ಪುನಃಪುನಃ ಮೂರ್ಛಿತನಾಗಿ ನನ್ನನ್ನು ನಾನೇ ತಿಳಿಯದಂತಾಗಿದ್ದೇನೆ. ದೈವವು ನಿಶ್ಚಯಿಸಿದುದು ಎಂಬ ನಿನ್ನ ಮಾತನ್ನು ಕೇಳಿ ಪ್ರಾಣಗಳನ್ನು ಹಿಡಿದುಕೊಳ್ಳುತ್ತೇನೆ ಮತ್ತು ಶೋಕಿಸದಿರಲು ಪ್ರಯತ್ನಿಸುತ್ತೇನೆ.”
ರಾಜೇಂದ್ರ ಧೃತರಾಷ್ಟ್ರನ ಆ ಮಾತನ್ನು ಕೇಳಿ ಸತ್ಯವತೀಸುತ ವ್ಯಾಸನು ಅಲ್ಲಿಯೇ ಅಂತರ್ಧಾನನಾದನು.