ರಣಭೂಮಿಯ ಮಾರ್ಗದಲ್ಲಿ ಧೃತರಾಷ್ಟ್ರನು ಪಾಂಡವರನ್ನು ಭೇಟಿಮಾಡಿದುದು
ಸ್ತ್ರೀಯರು ಮತ್ತು ಪುರಜನರೊಂದಿಗೆ ಧೃತರಾಷ್ಟ್ರನು ರಣಭೂಮಿಗೆ ಹೊರಟಿದುದು
ಇದನ್ನು ಕೇಳಿ ಆ ನರಶ್ರೇಷ್ಠನು ಬಹುಕಾಲ ಧ್ಯಾನಮಗ್ನನೂ ಅಚೇತನನೂ ಆಗಿದ್ದನು. ಅನಂತರ ಸಂಜಯನಿಗೆ ರಥವನ್ನು ಸಿದ್ಧಪಡಿಸಲು ಹೇಳಿ ವಿದುರನೊಡನೆ ಇಂತೆಂದನು: “ಬೇಗನೇ ಗಾಂಧಾರಿಯನ್ನೂ ಸರ್ವ ಭರತಸ್ತ್ರೀಯರನ್ನೂ ಕರೆದುಕೊಂಡು ಬಾ! ನಾದಿನಿ ಕುಂತಿಯನ್ನೂ ಅವಳ ಬಳಿಯಿರುವ ಅನ್ಯ ಸ್ತ್ರೀಯರನ್ನು ಕರೆದುಕೊಂಡು ಬಾ!”
ಧರ್ಮಾತ್ಮಾ ಧರ್ಮವಿತ್ತಮ ವಿದುರನಿಗೆ ಹೀಗೆ ಹೇಳಿ ಶೋಕದಿಂದ ಪ್ರಜ್ಞೆಯನ್ನೇ ಕಳೆದುಕೊಂಡಿದ್ದ ಅವನು ರಥವನ್ನೇರಿದನು. ಶೋಕಾರ್ತಳಾದ ಗಾಂಧಾರಿಯೂ ಕೂಡ ಪತಿಯ ಮಾತಿನಂತೆ ಕುಂತಿ ಮತ್ತು ಇತರ ಸ್ತ್ರೀಯರೊಂದಿಗೆ ರಾಜನಿದ್ದಲ್ಲಿಗೆ ಆಗಮಿಸಿದಳು. ರಾಜನ ಬಳಿಬಂದೊಡನೆಯೇ ಶೋಕಸಮನ್ವಿತರಾದ ಅವರೆಲ್ಲರೂ ಅನ್ಯೋನ್ಯರ ಹೆಸರನ್ನು ಕೂಗಿಕೊಳ್ಳುತ್ತಾ ಅನ್ಯೋನ್ಯರ ಕುತ್ತಿಗೆಯನ್ನು ತಬ್ಬಿಹಿಡಿದು ಬಿಕ್ಕಿ ಬಿಕ್ಕಿ ಅಳತೊಡಗಿದರು. ಅವರನ್ನು ಸಮಾಧಾನಗೊಳಿಸುತ್ತಿದ್ದ ಕ್ಷತ್ತ ವಿದುರನು ಅವರಿಂದಾಗಿ ಸ್ವಯಂ ತಾನೇ ದುಃಖಿತನಾದನು. ಕಂಬನಿಯಿಂದ ಮಾತುಕಟ್ಟಿದ್ದ ಅವರೆಲ್ಲರನ್ನೂ ರಥದಲ್ಲಿ ಕುಳ್ಳಿರಿಸಿಕೊಂಡು ವಿದುರನು ಹಸ್ತಿನಾಪುರದಿಂದ ಹೊರಟನು. ಕುರುಗಳ ಎಲ್ಲರ ಮನೆಯಲ್ಲಿಯೂ ಆಗ ಹೃದಯವನ್ನೇ ಸೀಳಿಬಿಡುವ ದೊಡ್ಡ ಆರ್ತನಾದವು ಕೇಳಿಬರುತ್ತಿತ್ತು. ಕುಮಾರರಿಂದ ಹಿಡಿದು ಹಸ್ತಿನಾಪುರದಲ್ಲಿ ಎಲ್ಲರೂ ಶೋಕಪೀಡಿತರಾಗಿದ್ದರು. ಹಿಂದೆ ದೇವತೆಗಳಿಗೂ ನೋಡಲು ದೊರೆಯದಿದ್ದ ಕುರುನಾರಿಯರು ತಮ್ಮ ಪತಿಗಳನ್ನು ಕಳೆದು ನಗರದ ಸಾಮಾನ್ಯ ಜನರ ದೃಷ್ಟಿಗೂ ಬೀಳುವಂತಾದರು! ಸುಂದರ ಕೇಶರಾಶಿಗಳನ್ನು ಕೆದರಿ, ಆಭರಣಗಳನ್ನು ಕಳಚಿ, ಏಕವಸ್ತ್ರಧಾರಿಯರಾದ ಕುರು ನಾರಿಯರು ಅನಾಥರಂತೆ ಹೋಗುತ್ತಿದ್ದರು. ಹಿಂಡಿನ ನಾಯಕನನ್ನು ಕಳೆದುಕೊಂಡ ಹೆಣ್ಣುಜಿಂಕೆಗಳು ಪರ್ವತದ ಗುಹೆಗಳಿಂದ ಹೊರಬರುವಂತೆ ಶ್ವೇತಪರ್ವತಗಳಂತಿದ್ದ ಭವನಗಳಿಂದ ಅವರು ಹೊರಬರುತ್ತಿದ್ದರು. ಅಂಗಳದಲ್ಲಿ ಸೇರಿದ್ದ ಕಿಶೋರಿಯರ ಗುಂಪಿನಂತಿದ್ದ ಶೋಕಾರ್ತ ನಾರಿಯರ ಅನೇಕ ಗುಂಪುಗಳು ರಣಭೂಮಿಯ ಕಡೆ ಹೊರಟವು. ಪರಸ್ಪರರ ತೋಳನ್ನು ಹಿಡಿದು ತಮ್ಮ ಪುತ್ರರು, ಸಹೋದರರು ಮತ್ತು ತಂದೆಯರ ಹೆಸರನ್ನು ಹೇಳಿ ಕೂಗಿಕೊಳ್ಳುತ್ತಿದ್ದ ಅವರು ಯುಗಾಂತದ ಲೋಕವಿನಾಶವು ಹೇಗಿರುತ್ತದೆಯೆಂದು ತೋರಿಸುವಂತಿದ್ದರು. ವಿಲಪಿಸುತ್ತಿದ್ದ, ರೋದಿಸುತ್ತಿದ್ದ, ಮತ್ತು ಅಲ್ಲಿಂದಿಲ್ಲಿಗೆ ಓಡುತ್ತಾ ಶೋಕದಿಂದ ಪೀಡಿತರಾದ ಅವರು ಬುದ್ಧಿಯನ್ನೇ ಕಳೆದುಕೊಂಡು ಏನು ಮಾಡಬೇಕೆಂದು ತಿಳಿಯದಾಗಿದ್ದರು. ಇದಕ್ಕೆ ಮೊದಲು ತಮ್ಮ ದಾಸಿ ಮತ್ತು ಸಖಿಯರ ಮುಂದೆ ಬರಲೂ ನಾಚಿಕೊಳ್ಳುತ್ತಿದ್ದ ಅವರು ಈಗ ಏಕವಸ್ತ್ರರಾಗಿ ನಿರ್ಲಜ್ಜೆಯಿಂದ ತಮ್ಮ ಅತ್ತೆಯರ ಮುಂದೆ ನಿಂತಿದ್ದರು. ಮೊದಲು ಸಣ್ಣಪುಟ್ಟ ವ್ಯಸನಗಳಲ್ಲಿಯೂ ಪರಸ್ಪರರನ್ನು ಸಮಾಧಾನಪಡಿಸುತ್ತಿದ್ದ ಆ ಶೋಕವಿಹ್ವಲರು ಈಗ ಪರಸ್ಪರರನ್ನು ನೋಡುತ್ತಿದ್ದರು. ರೋದಿಸುತ್ತಿದ್ದ ಸಹಸ್ರಾರು ನಾರಿಯರಿಂದ ಪರಿವೃತನಾಗಿ ದೀನ ರಾಜನು ನಗರದಿಂದ ರಣಭೂಮಿಯ ಕಡೆ ಬೇಗನೇ ಪ್ರಯಾಣಮಾಡಿದನು.
ಆ ರಾಜನನ್ನು ಹಿಂಬಾಲಿಸುತ್ತಾ ಶಿಲ್ಪಿಗಳು, ವರ್ತಕರು, ವೈಶ್ಯರು ಮತ್ತು ಸರ್ವ ಕರ್ಮಗಳಿಂದ ಉಪಜೀವನವನ್ನು ಮಾಡುತ್ತಿದ್ದವರು ನಗರದಿಂದ ಹೊರಟರು. ಕುರುಸಂಕ್ಷಯದಿಂದುಂಟಾದ ಶೋಕದಿಂದ ಕೂಗಿಕೊಳ್ಳುತ್ತಿದ್ದ ಅವರ ಮಹಾಶಬ್ಧವು ಮೇಲೇರಿ ಭುವನಗಳನ್ನೂ ವ್ಯಥೆಗೊಳಿಸಿತು. ಇರುವವೆಲ್ಲವನ್ನೂ ಸುಟ್ಟುಬಿಡುವ ಯುಗಾಂತದ ಸಮಯವು ಈಗಲೇ ಒದಗಿಬಂದಿತೋ ಎಂದು ಭೂತಗಳು ತಿಳಿದುಕೊಂಡವು. ಕುರುನಾಶದಿಂದ ತುಂಬಾ ಉದ್ವಿಗ್ನಮನಸ್ಕರಾಗಿದ್ದ ತಮ್ಮಲ್ಲಿಯೇ ಅನುರಕ್ತರಾಗಿದ್ದ ಪೌರರು ಗಟ್ಟಿಯಾಗಿ ಅಳತೊಡಗಿದರು.
ಕೃಪ, ಕೃತವರ್ಮ, ಅಶ್ವತ್ಥಾಮರು ಧೃತರಾಷ್ಟ್ರನನ್ನು ಮಾರ್ಗದಲ್ಲಿಯೇ ಭೇಟಿ ಮಾಡಿ ರಣರಂಗದಿಂದ ಪಲಾಯನ ಮಾಡಿದುದು
ಕ್ರೋಶಮಾತ್ರ ದೂರ ಹೋಗಿ ಅಲ್ಲಿ ಅವನು ಆ ಮಹಾರಥರನ್ನು – ಶಾರದ್ವತ ಕೃಪ, ದ್ರೌಣಿ ಮತ್ತು ಕೃತವರ್ಮರನ್ನು – ಕಂಡನು. ಪ್ರಜ್ಞಾಚಕ್ಷು ಒಡೆಯ ರಾಜನನ್ನು ನೋಡಿದೊಡನೆಯೇ ಅವರು ನಿಟ್ಟುಸಿರು ಬಿಡುತ್ತಾ ಮತ್ತು ಅಳುತ್ತಾ ಗದ್ಗದ ಕಂಠದಿಂದ ಇಂತೆಂದರು: “ಮಹಾರಾಜ! ನಿನ್ನ ಮಗ ಮಹೀಪತಿಯು ಸುದುಷ್ಕರ ಕರ್ಮವನ್ನೆಸಗಿ ಅನುಚರರೊಂದಿಗೆ ಶಕ್ರಲೋಕಕ್ಕೆ ಹೋದನು. ದುರ್ಯೋಧನನ ಸೇನೆಯಲ್ಲಿ ನಾವು ಮೂವರು ರಥರು ಮಾತ್ರ ಉಳಿದುಕೊಂಡಿದ್ದೇವೆ. ನಿನ್ನ ಸೇನೆಯಲ್ಲಿ ಅನ್ಯರೆಲ್ಲರೂ ನಾಶವಾಗಿದ್ದಾರೆ.”
ಹೀಗೆ ಹೇಳಿ ಕೃಪ ಶಾರದ್ವತನು ಪುತ್ರಶೋಕಾರ್ತರಾದ ರಾಜ ಮತ್ತು ಗಾಂಧಾರಿಯರಿಗೆ ಈ ಮಾತನ್ನಾಡಿದನು: “ಅಭೀತರಾಗಿ ಯುದ್ಧ ಮಾಡುತ್ತಿದ್ದ ಅವರು ಶತ್ರುಗಣಗಳಿಂದ ಹತರಾದರು. ಅನೇಕ ವೀರಕರ್ಮಗಳನ್ನು ಮಾಡಿದ ನಿನ್ನ ಪುತ್ರರು ನಿಧನ ಹೊಂದಿದರು. ನಿಶ್ಚಯವಾಗಿಯೂ ಅವರು ನಿರ್ಮಲ ಶಸ್ತ್ರಗಳಿಂದ ನಿಧನಹೊಂದಿ ಉತ್ತಮ ಲೋಕಗಳನ್ನು ಪಡೆದು ಹೊಳೆಯುವ ದೇಹಗಳನ್ನು ಧರಿಸಿ ಅಮರರಂತೆ ಅಲ್ಲಿ ವಿಹರಿಸುತ್ತಿದ್ದಾರೆ. ಆ ಶೂರರಲ್ಲಿ ಯಾರೂ ಯುದ್ಧಮಾಡುತ್ತಿರುವಾಗ ಪರಾಙ್ಮುಖರಾಗಲಿಲ್ಲ. ಶಸ್ತ್ರಗಳಿಂದ ಸಾವನ್ನು ಪಡೆದ ಅವರಲ್ಲಿ ಯಾರೂ ಶತ್ರುಗಳ ಮುಂದೆ ಕೈಜೋಡಿಸಿ ನಿಂತಿರಲಿಲ್ಲ. ಈ ರೀತಿ ಯುದ್ಧದಲ್ಲಿ ಶಸ್ತ್ರಗಳಿಂದ ನಿಧನಹೊಂದಿದ ಕ್ಷತ್ರಿಯರು ಪರಮ ಗತಿಯನ್ನು ಹೊಂದುತ್ತಾರೆಂದು ಪುರಾಣರು ಹೇಳಿದ್ದಾರೆ. ಆದುದರಿಂದ ಅದರ ಕುರಿತು ಶೋಕಿಸಬಾರದು. ಅವರ ಶತ್ರುವಾದ ಪಾಂಡವರು ಮತ್ತು ಅವರ ರಾಣಿಯೂ ರೋದಿಸುತ್ತಿದ್ದಾರೆ. ಅಶ್ವತ್ಥಾಮನ ನಾಯಕತ್ವದಲ್ಲಿ ನಾವೇನು ಮಾಡಿದೆವೆನ್ನುವುದನ್ನು ಕೇಳು. ನಿನ್ನ ಮಗನು ಭೀಮಸೇನನಿಂದ ಅಧರ್ಮರೀತಿಯಿಂದ ಹತನಾದನೆಂದು ಕೇಳಿ ನಾವು ಮಲಗಿದ್ದ ಪಾಂಡವರ ಶಿಬಿರವನ್ನು ಪ್ರವೇಶಿಸಿ ಕದನವಾಡಿದೆವು. ಧೃಷ್ಟದ್ಯುಮ್ನನನ್ನು ಮೊದಲ್ಗೊಂಡು ಪಾಂಚಾಲರೆಲ್ಲರೂ ಹತರಾದರು. ದ್ರುಪದನ ಮಕ್ಕಳೂ ದ್ರೌಪದೇಯರೂ ಕೆಳಗುರುಳಿದರು. ಹಾಗೆ ನಿನ್ನ ಪುತ್ರನ ಶತ್ರುಗಣವನ್ನು ನಾಶಮಾಡಿ ನಾವು ಓಡಿ ಬಂದಿದ್ದೇವೆ. ನಾವು ಮೂವರು ರಣದಲ್ಲಿ ಅವರನ್ನು ಎದುರಿಸಿ ನಿಲ್ಲಲಾರೆವು. ಕ್ರೋಧವಶರಾದ ಆ ಶೂರ ಮಹೇಷ್ವಾಸ ಪಾಂಡವರು, ವೈರಕ್ಕೆ ಪ್ರತೀಕಾರವನ್ನು ಮಾಡಲು ಬಯಸಿ ವೇಗದಿಂದ ಬರುತ್ತಾರೆ. ಮಕ್ಕಳು ಹತರಾದರೆಂದು ಕೇಳಿ ಪ್ರಮತ್ತರಾದ ಆ ಶೂರ ಪುರುಷರ್ಷಭರು ನಮ್ಮ ದಾರಿಯನ್ನೇ ಹಿಡಿದು ಬೇಗ ಬಂದುಬಿಡುತ್ತಾರೆ. ಪಾಂಡವರಿಗೆ ಕೆಟ್ಟದ್ದನ್ನು ಮಾಡಿ ಇಲ್ಲಿ ನಿಂತುಕೊಳ್ಳಲು ಇಚ್ಛಿಸುವುದಿಲ್ಲ. ನಮಗೆ ಅನುಮತಿಯನ್ನು ನೀಡು. ರಾಣಿ! ಮನಸ್ಸನ್ನು ಶೋಕದಲ್ಲಿ ತೊಡಗಿಸಬೇಡ! ರಾಜನ್! ನೀನೂ ಕೂಡ ಅನುಮತಿಯನ್ನು ನೀಡು. ಉತ್ತಮ ಧೈರ್ಯವನ್ನು ತಂದುಕೋ! ಕೇವಲ ಕ್ಷತ್ರಧರ್ಮವನ್ನು ಗಮನದಲ್ಲಿಟ್ಟುಕೊಂಡು ಆಗಿಹೋದುದನ್ನು ಕಾಣು.”
ಹೀಗೆ ಹೇಳಿ, ರಾಜನಿಗೆ ಪ್ರದಕ್ಷಿಣೆ ಹಾಕಿ, ಕೃಪ, ಕೃತವರ್ಮ ಮತ್ತು ದ್ರೋಣಪುತ್ರರು ಮಹಾತ್ಮ ಮನೀಷಿಣಿ ರಾಜ ಧೃತರಾಷ್ಟ್ರನನ್ನು ತಿರುಗಿ ನೋಡುತ್ತಲೇ ಗಂಗಾನದಿಯ ಕಡೆ ಶೀಘ್ರವಾಗಿ ಅಶ್ವಗಳನ್ನು ಓಡಿಸಿದರು. ಗಂಗಾನದಿಯನ್ನು ದಾಟಿ ಉದ್ವಿಗ್ನರಾಗಿ ಮಂತ್ರಾಲೋಚನೆಮಾಡಿ ಆ ಮೂವರು ಮಹಾರಥರೂ ಪ್ರತ್ಯೇಕ ಮೂರುದಾರಿಗಳನ್ನು ಹಿಡಿದು ಹೊರಟುಹೋದರು. ಕೃಪ ಶಾರದ್ವತನು ಹಸ್ತಿನಾಪುರಕ್ಕೆ ಹೋದನು. ಹಾರ್ದಿಕ್ಯನು ತನ್ನ ದೇಶಕ್ಕೆ ಹೊರಟುಹೋದನು. ಮತ್ತು ದ್ರೌಣಿಯು ವ್ಯಾಸಾಶ್ರಮಕ್ಕೆ ಹೋದನು. ಮಹಾತ್ಮ ಪಾಂಡುಪುತ್ರರಿಗೆ ಮಹಾಪರಾಧವನ್ನೆಸಗಿದ್ದ ಆ ವೀರರು ಭಯಾರ್ತರಾಗಿ ಪರಸ್ಪರರನ್ನೇ ನೋಡುತ್ತಾ ಹೀಗೆ ಹೊರಟುಹೋದರು. ರಾಜ ಧೃತರಾಷ್ಟ್ರನನ್ನು ಭೇಟಿಯಾಗಿ ಆ ವೀರ ಅರಿಂದಮರು ಸೂರ್ಯೋದಯವಾಗುವುದರೊಳಗಾಗಿ ಇಚ್ಛಿಸಿದ್ದ ಸ್ಥಳಗಳನ್ನು ಸೇರಿದರು.
ಪಾಂಡವರು ಧೃತರಾಷ್ಟ್ರ-ಗಾಂಧಾರಿಯರನ್ನು ಭೇಟಿಮಾಡಿದುದು
ಸರ್ವಸೇನೆಗಳೂ ಹತಗೊಳ್ಳಲು ಧರ್ಮರಾಜ ಯುಧಿಷ್ಠಿರನು ತನ್ನ ವೃದ್ಧ ದೊಡ್ಡಪ್ಪನು ಹಸ್ತಿನಾಪುರದಿಂದ ಹೊರಟಿರುವನೆಂದು ಕೇಳಿದನು. ಆ ಪುತ್ರಶೋಕಾರ್ತನು ಪುತ್ರಶೋಕದಲ್ಲಿ ಮುಳುಗಿ ಶೋಕಿಸುತ್ತಿದ್ದ ಮಹಾರಾಜನನ್ನು ನೋಡಲು ಭ್ರಾತೃಗಳೊಂದಿಗೆ ಹೊರಟನು. ಮಹಾತ್ಮ ವೀರ ಧಾಶಾರ್ಹನೂ ಯುಯುಧಾನ ಮತ್ತು ಯುಯುತ್ಸುವೂ ಅವನನ್ನು ಹಿಂಬಾಲಿಸಿದರು. ಅಲ್ಲಿ ಬಂದು ಸೇರಿದ್ದ ಅತೀವ ದುಃಖಾರ್ಥಳೂ ಶೋಕಕರ್ಶಿತಳೂ ಆಗಿದ್ದ ದ್ರೌಪದಿಯು ಪಾಂಚಾಲ ಸಖಿಯರೊಂದಿಗೆ ಅವರನ್ನು ಅನುಸರಿಸಿದಳು. ಅವನು ಗಂಗಾನದೀ ತೀರದಲ್ಲಿ ಕುರರೀ ಪಕ್ಷಿಗಳಂತೆ ಕೂಗಿಕೊಳ್ಳುತ್ತಾ ರೋದಿಸುತ್ತಿದ್ದ ಕುರುಸ್ತ್ರೀಯರ ಗುಂಪುಗಳನ್ನು ಕಂಡನು. ಪ್ರಿಯ ಮತ್ತು ಅಪ್ರಿಯ ಮಾತುಗಳನ್ನಾಡುತ್ತಾ ತೋಳುಗಳನ್ನು ಮೇಲೆತ್ತಿ ಬಹಳವಾಗಿ ಆರ್ತನಾದಗೈದು ರೋದಿಸುತ್ತಿದ್ದ ಸಹಸ್ರಾರು ಸ್ತ್ರೀಯರು ರಾಜಾ ಯುಧಿಷ್ಠಿರನನ್ನು ಮುತ್ತಿಕೊಂಡರು. “ಪಿತೃಗಳನ್ನೂ, ಭ್ರಾತ್ರುಗಳನ್ನೂ, ಗುರುಗಳನ್ನೂ, ಪುತ್ರರನ್ನೂ, ಸ್ನೇಹಿತರನ್ನೂ ವಧಿಗೀಡುಮಾಡಿದ ರಾಜನ ಆ ಧರ್ಮಜ್ಞತೆ, ದಯೆ ಮತ್ತು ಅಹಿಂಸೆಗಳು ಈಗ ಎಲ್ಲಿಹೋದವು? ಮಹಾಬಾಹೋ! ದ್ರೋಣ, ಪಿತಾಮಹ ಭೀಷ್ಮ ಮತ್ತು ಜಯದ್ರಥನನ್ನು ಸಂಹರಿಸಿ ನಿನ್ನ ಮನಸ್ಸು ಈಗ ಹೇಗಿದೆ? ಪಿತೃಗಳನ್ನೂ, ಭ್ರಾತೃಗಳನ್ನೂ, ದುರ್ಧರ್ಷ ಅಭಿಮನ್ಯುವನ್ನೂ ಮತ್ತು ದ್ರೌಪದೇಯರನ್ನು ಇನ್ನು ನೋಡಲಿಕ್ಕಾಗದಿರುವಾಗ ಈ ರಾಜ್ಯವನ್ನಿಟ್ಟುಕೊಂಡು ನೀನು ಏನು ಮಾಡುವೆ?”
ಕುರರೀ ಪಕ್ಷಿಗಳಂತೆ ಅಳುತ್ತಿರುವ ಆ ಸ್ತ್ರೀಯರನ್ನು ಸರಿಸಿ ಮುಂದೆಹೋಗಿ ಮಹಾಬಾಹು ಧರ್ಮರಾಜ ಯುಧಿಷ್ಠಿರನು ತನ್ನ ದೊಡ್ಡಪ್ಪನಿಗೆ ವಂದಿಸಿದನು. ಆಗ ಆ ಅಮಿತ್ರಕರ್ಶನ ಪಾಂಡವರೆಲ್ಲರೂ ತಮ್ಮ ತಮ್ಮ ನಾಮಧೇಯಗಳನ್ನು ಹೇಳಿಕೊಂಡು ದೊಡ್ಡಪ್ಪನಿಗೆ ನಮಸ್ಕರಿಸಿದರು. ಪುತ್ರವಧೆಯಿಂದ ಪೀಡಿತನಾಗಿ ಶೋಕಾರ್ತನಾಗಿದ್ದ ಆ ತಂದೆಯು ಅಂತಃಕರಣದಲ್ಲಿ ಪ್ರೀತಿಸದಿದ್ದರೂ ಪಾಂಡವನನ್ನು ಆಲಂಗಿಸಿದನು. ಧರ್ಮರಾಜನನ್ನು ಬಿಗಿದಪ್ಪಿ ಸಂತವಿಸಿದ ಆ ದುಷ್ಟಾತ್ಮನು ಭಸ್ಮೀಭೂತನನ್ನಾಗಿಸುವ ಪಾವಕನಂತೆ ಭೀಮನನ್ನು ಆಲಂಗಿಸಲು ಬಯಸಿದನು. ಶೋಕವೆಂಬ ವಾಯುವಿನಿಂದ ಭುಗಿಲೆದ್ದ ಅವನ ಕೋಪಾಗ್ನಿಯು ಭೀಮಸೇನನನ್ನು ಸುಟ್ಟುಬಿಡುತ್ತದೆಯೋ ಎನ್ನುವಂತೆ ಕಾಣುತ್ತಿತ್ತು. ಅವನ ಸಂಕಲ್ಪವನ್ನು ತಿಳಿದ ಹರಿಯು ಕೈಗಳಿಂದ ಭೀಮನನ್ನು ಹಿಂದಕ್ಕೆಳೆದುಕೊಂಡು ಭೀಮನ ಆಕಾರದ ಲೋಹದ ಮೂರ್ತಿಯೊಂದನ್ನು ಮುಂದಿಟ್ಟನು. ಮೊದಲೇ ಅವನ ಇಂಗಿತವನ್ನು ಅರಿತಿದ್ದ ಮಹಾಬುದ್ಧಿ ಮಹಾಪ್ರಾಜ್ಞ ಹರಿ ಜನಾರ್ದನನು ಅದರ ವ್ಯವಸ್ಥೆಯನ್ನು ಮಾಡಿದ್ದನು. ವೃಕೋದರನೆಂದು ತಿಳಿದು ಭೀಮಸೇನನ ಆ ಲೋಹದ ಮೂರ್ತಿಯನ್ನು ತೋಳುಗಳಿಂದ ಹಿಡಿಯುತ್ತಲೇ ಆ ಬಲವಾನ್ ರಾಜನು ಅದನ್ನು ಪುಡಿಪುಡಿ ಮಾಡಿದನು. ಹತ್ತುಸಾವಿರ ಆನೆಗಳ ಬಲವನ್ನು ಹೊಂದಿದ್ದರೂ ಭೀಮನ ಲೋಹದ ಮೂರ್ತಿಯನ್ನು ತೋಳಿನಿಂದ ಅಪ್ಪಿಕೊಂಡು ಒಡೆದು ಹಾಕಿದುದರಿಂದ ಅವನ ಮುಖದಿಂದ ರಕ್ತವು ಸೋರತೊಡಗಿತು. ರಕ್ತದಿಂದ ತೋಯ್ದು ಹೋಗಿದ್ದ ಅವನು ಪುಷ್ಪಗಳಿಂದ ತುಂಬಿಹೋಗಿದ್ದ ಪಾರಿಜಾತ ವೃಕ್ಷದಂತೆ ಭೂಮಿಯ ಮೇಲೆ ಬಿದ್ದನು. ಆಗ ವಿದ್ವಾನ್ ಸೂತ ಗಾವಲ್ಗಣಿಯು ಅವನನ್ನು ಹಿಡಿದೆತ್ತಿ ಸಂತವಿಸುತ್ತಾ, ಶಾಂತಗೊಳಿಸುತ್ತಾ “ಹೀಗೆ ಮಾಡಬಾರದಾಗಿತ್ತು!” ಎಂದು ಹೇಳಿದನು. ಮಹಾಮನಸ್ವಿ ಧೃತರಾಷ್ಟ್ರನು ಕೋಪವನ್ನು ತೊರೆದು ಸಿಟ್ಟಿಲ್ಲದವನಾಗಿ “ಅಯ್ಯೋ ಭೀಮ!” ಎಂದು ಪುನಃ ಶೋಕಸಮನ್ವಿತನಾಗಿ ಕೂಗಿದನು. ಭೀಮಸೇನನನ್ನು ಕೊಂದೆನೆಂಬ ಕಾರಣದಿಂದ ರಾಜನು ಸಂಕಟಪಡುತ್ತಿರುವುದನ್ನೂ ಮತ್ತು ಅವನ ಕ್ರೋಧವು ಹೊರಟುಹೋದುದನ್ನೂ ನೋಡಿದ ಪುರುಷಶ್ರೇಷ್ಠ ವಾಸುದೇವನು ಇಂತೆಂದನು: “ರಾಜನ್! ಧೃತರಾಷ್ಟ್ರ! ಶೋಕಿಸದಿರು! ನೀನು ಭೀಮನನ್ನು ಕೊಲ್ಲಲಿಲ್ಲ! ನೀನು ಕೆಳಗುರುಳಿಸಿದುದು ಒಂದು ಲೋಹದ ಪ್ರತಿಮೆ! ನೀನು ಕ್ರೋಧವಶನಾಗಿದ್ದೀಯೆ ಎಂದು ತಿಳಿದು ನಾನು ಮೃತ್ಯುವಿನ ದವಡೆಗಳ ಮಧ್ಯೆ ಹೋಗುತ್ತಿದ್ದ ಕೌಂತೇಯ ಭೀಮನನ್ನು ಹಿಂದಕ್ಕೆಳೆದುಕೊಂಡೆನು. ಬಲದಲ್ಲಿ ನಿನ್ನ ಸಮಾನರು ಯಾರೂ ಇಲ್ಲ. ನಿನ್ನ ಬಾಹುಬಂಧನವನ್ನು ಯಾರು ತಾನೇ ಸಹಿಸಿಕೊಳ್ಳಬಲ್ಲರು? ಯಮನ ಬಳಿಹೋದವನು ಎಂದೂ ಜೀವಂತ ಬಿಡುಗಡೆಹೊಂದದಂತೆ ನಿನ್ನ ಬಾಹುಗಳ ಮಧ್ಯೆ ಸಿಲುಕಿದವರು ಯಾರೂ ಜೀವಿತರಾಗಿರುವುದಿಲ್ಲ. ಆದುದರಿಂದ ಭೀಮಸೇನನೊಡನೆ ಯುದ್ಧದ ಅಭ್ಯಾಸಕ್ಕಾಗಿ ನಿನ್ನ ಪುತ್ರನು ಮಾಡಿಸಿಟ್ಟುಕೊಂಡಿದ್ದ ಉಕ್ಕಿನ ಪ್ರತಿಮೆಯನ್ನು ನಾನು ಅಪಹರಿಸಿದ್ದೆ. ಪುತ್ರಶೋಕದಿಂದ ಸಂತಪ್ತನಾದ ನಿನ್ನ ಮನಸ್ಸು ಧರ್ಮದಿಂದ ವಿಚಲಿತಗೊಂಡಿದೆ. ಆದುದರಿಂದಲೇ ನೀನು ಭೀಮಸೇನನನ್ನು ಕೊಲ್ಲಲು ಬಯಸಿದೆ. ನಿನ್ನಂಥವನಿಗೆ ಅದು ಸರಿಯೆನಿಸುವುದಿಲ್ಲ! ಒಂದು ವೇಳೆ ನೀನು ವೃಕೋದರನನ್ನು ಕೊಂದಿದ್ದರೂ ನಿನ್ನ ಪುತ್ರರು ಯಾವುದೇ ಕಾರಣದಿಂದಲೂ ಜೀವಂತರಾಗಿ ಹಿಂದೆ ಬರುತ್ತಿರಲಿಲ್ಲ! ಆದುದರಿಂದ ಶಾಂತಿಯ ಸಲುವಾಗಿ ನಾವು ಮಾಡಿದುದೆಲ್ಲಕ್ಕೂ ನೀನು ಅನುಮತಿನೀಡು. ವೃಥಾ ನಿನ್ನ ಮನಸ್ಸನ್ನು ಶೋಕದಲ್ಲಿ ತೊಡಗಿಸಬೇಡ!”
ಆಗ ಶೌಚಕ್ಕಾಗಿ ಅವನನ್ನು ಅವನ ಪರಿಚಾರಕರು ಮೇಲೆತ್ತಿದರು. ಅವನು ಶೌಚವನ್ನು ಮಾಡಿದ ನಂತರ ಮಧುಸೂದನನು ಪುನಃ ಇದನ್ನು ಹೇಳಿದನು: “ರಾಜನ್! ನೀನು ವೇದಗಳನ್ನೂ ವಿವಿಧ ಶಾಸ್ತ್ರಗಳನ್ನು ಅಧ್ಯಯನ ಮಾಡಿರುವೆ. ಪುರಾಣಗಳನ್ನೂ ರಾಜಧರ್ಮಗಳನ್ನೂ ಕೇಳಿರುವೆ. ಈ ರೀತಿ ವಿಧ್ವಾಂಸನಾಗಿರುವ ನೀನು ಬಲ ಮತ್ತು ಶೌರ್ಯಗಳಲ್ಲಿ ಪಾಂಡವರು ಅಧಿಕರೆಂದು ತಿಳಿದೂ ಆಗ ಋಷಿಗಳ ವಚನವನ್ನು ಕೇಳಲಿಲ್ಲ. ಯಾವ ರಾಜನು ಸ್ಥಿರಪ್ರಜ್ಞನಾಗಿದ್ದುಕೊಂಡು ದೇಶ-ಕಾಲಗಳಿಗೆ ತಕ್ಕಂತೆ ತನ್ನ ದೋಷಗಳನ್ನು ತಾನೇ ಅರಿತುಕೊಳ್ಳುತ್ತಾನೋ ಅವನಿಗೆ ಪರಮ ಶ್ರೇಯಸ್ಸುಂಟಾಗುತ್ತದೆ. ಶ್ರೇಯಮಾತುಗಳನ್ನು ಹೇಳುತ್ತಿದ್ದರು ಅವುಗಳ ಹಿತಾಹಿತವನ್ನು ಗಮನಿಸದೇ ಗ್ರಹಣಮಾಡದಿರುವವನು ಅನ್ಯಾಯಮಾರ್ಗದಲ್ಲಿ ನಡೆದು ಆಪತ್ತನ್ನು ಪಡೆದು ಮುಂದೆ ಶೋಕಿಸುತ್ತಾನೆ. ಆಗ ನೀನು ವ್ಯವಹರಿಸಿದುದನ್ನು ನೀನೇ ವಿಮರ್ಶಿಸು. ಆಗ ನೀನು ನಿನ್ನ ಅಧೀನನಾಗಿರದೇ ದುರ್ಯೋಧನನ ವಶದಲ್ಲಿದ್ದೆ. ನಿನ್ನದೇ ಅಪರಾಧದಿಂದ ಆದುದಕ್ಕೆ ಭೀಮಸೇನನನ್ನು ಏಕೆ ಕೊಲ್ಲಲು ಬಯಸುವೆ? ಆದುದರಿಂದ ನೀನು ಮಾಡಿದ ದುಷ್ಕೃತ್ಯಗಳನ್ನು ಸ್ಮರಿಸಿಕೊಂಡು ನಿನ್ನ ಕೋಪವನ್ನು ಹಿಡಿತದಲ್ಲಿಟ್ಟುಕೋ! ಸ್ಪರ್ಧಾಭಾವದಿಂದ ಪಾಂಚಾಲಿಯನ್ನು ಸಭೆಗೆ ಎಳೆದುತಂದ ಆ ಕ್ಷುದ್ರನು ಭೀಮಸೇನನಿಂದ ಹತನಾಗಿ, ವೈರಕ್ಕೆ ಪ್ರತೀಕಾರವಾಯಿತು. ನಿನ್ನ ಮತ್ತು ನಿನ್ನ ಮಗ ಆ ದುರಾತ್ಮನ ಅನ್ಯಾಯಗಳನ್ನು ನೋಡು. ನಿರಪರಾಧಿಗಳಾದ ಪಾಂಡವರನ್ನು ಆಗ ನೀನು ಪರಿತ್ಯಜಿಸಿದೆ.”
ಕೃಷ್ಣನಿಂದ ಹೀಗೆ ಸರ್ವ ಸತ್ಯವನ್ನೂ ಹೇಳಿಸಿಕೊಂಡ ಜನಾಧಿಪ ಮಹೀಪತಿ ಧೃತರಾಷ್ಟ್ರನು ದೇವಕೀಪುತ್ರನಿಗೆ ಇಂತೆಂದನು: “ಮಾಧವ! ಧರ್ಮಾತ್ಮನ್! ನೀನು ಹೇಳಿದಂತೆಯೇ ನಡೆದುಹೋಯಿತು! ಪುತ್ರಸೇಹವೇ ನನ್ನ ಧೈರ್ಯವನ್ನು ಕೆಡಿಸಿತು! ಕೃಷ್ಣ! ಒಳ್ಳೆಯದಾಯಿತು ನಿನ್ನಿಂದ ರಕ್ಷಿತನಾದ ಪುರುಷವ್ಯಾಘ್ರ ಬಲವಾನ್ ಸತ್ಯವಿಕ್ರಮಿ ಭೀಮನು ನನ್ನ ಬಾಹುಗಳ ಮಧ್ಯೆ ಬರಲಿಲ್ಲ! ಈಗ ನಾನು ಏಕಾಗ್ರಚಿತ್ತನಾಗಿದ್ದೇನೆ. ಸಿಟ್ಟು ಹೊರಟುಹೋಗಿದೆ. ತಾಪವೂ ಇಲ್ಲವಾಗಿದೆ. ಮಧ್ಯಮ ಪಾಂಡವ ವೀರನನ್ನು ಮುಟ್ಟಲು ಬಯಸುತ್ತೇನೆ. ಪಾರ್ಥಿವೇಂದ್ರರು ಮತ್ತು ಪುತ್ರರು ಹತರಾದ ಮೇಲೆ ಪಾಂಡುಪುತ್ರರ ಮೇಲೆಯೇ ನನ್ನ ಸುಖ ಮತ್ತು ಪ್ರೀತಿಗಳು ಪ್ರತಿಷ್ಠಿತವಾಗಿರುತ್ತವೆ.”
ಅನಂತರ ಅವನು ಭೀಮ, ಧನಂಜಯ, ಮತ್ತು ಪುರುಷಪ್ರವೀರ ಮಾದ್ರೀಪುತ್ರರ ಅಂಗಾಂಗಗಳನ್ನು ಮುಟ್ಟಿ ನೇವರಿಸಿದನು. ಅವರನ್ನು ಸಂತಯಿಸಿ ಮಂಗಳವಾಗಲೆಂದು ಆಶೀರ್ವಾದಿಸಿದನು. ಧೃತರಾಷ್ಟ್ರನಿಂದ ಅನುಜ್ಞೆಯನ್ನು ಪಡೆದು ಆ ಕುರುಪುಂಗವ ಭ್ರಾತರರೆಲ್ಲರೂ ಕೇಶವನೊಡಗೂಡಿ ಗಾಂಧಾರಿಯ ಬಳಿಬಂದರು.
ಋಷಿ ಸತ್ಯವತೀ ಪುತ್ರನು ಪುತ್ರಶೋಕಾರ್ತಳಾಗಿದ್ದ ಅನಿಂದಿತೆ ಗಾಂಧಾರಿಯು ಅಮಿತ್ರರನ್ನು ಸಂಹರಿಸಿದ್ದ ಧರ್ಮರಾಜಯುಧಿಷ್ಠಿರನನ್ನು ಶಪಿಸಲು ಇಚ್ಛಿಸುತ್ತಿದ್ದಾಳೆಂದು ಮತ್ತು ಪಾಂಡವರ ಕುರಿತು ಅವಳಿಗಿದ್ದ ಅಭಿಪ್ರಾಯವನ್ನು ಆ ಮೊದಲೇ ತಿಳಿದುಕೊಂಡನು. ಆ ಪರಮ ಋಷಿಯು ಪವಿತ್ರವೂ ಸುಗಂಧಿತವೂ ಆದ ಗಂಗೆಯ ಶುದ್ಧನೀರಿನಲ್ಲಿ ಆಚಮನ ಮಾಡಿ ಮನೋವೇಗದಲ್ಲಿ ಅವಳಿದ್ದ ಪ್ರದೇಶಕ್ಕೆ ಆಗಮಿಸಿದನು. ಮನಸ್ಸನ್ನು ಕೇಂದ್ರೀಕರಿಸಿ ದಿವ್ಯ ದೃಷ್ಟಿಯಿಂದ ಅವನು ಸರ್ವ ಪ್ರಾಣಿಗಳ ಭಾವವನ್ನು ತಿಳಿದುಕೊಳ್ಳುತ್ತಿದ್ದನು. ಹಿತವಾದೀ ಮಹಾತಪಸ್ವಿಯು ಶಾಪಕಾಲವನ್ನು ಕಳೆದು ಶಾಂತಿಯ ಕಾಲವನ್ನು ಬರಗೊಳಿಸಲೋಸುಗ ತನ್ನ ಸೊಸೆಗೆ ಕಾಲಕ್ಕೆ ತಕ್ಕಂತಹ ಮಾತುಗಳನ್ನಾಡಿದನು: “ಗಾಂಧಾರೀ! ಪಾಂಡವರ ಮೇಲೆ ಕೋಪಿಸಬೇಡ! ಶಾಂತಳಾಗು! ಸಿಟ್ಟನ್ನು ನಿಯಂತಿಸಿಕೋ! ನನ್ನ ಈ ಮಾತನ್ನು ಕೇಳು! ಹದಿನೆಂಟು ದಿನಗಳ ಹಿಂದೆ ವಿಜಯವನ್ನು ಇಚ್ಛಿಸಿದ ನಿನ್ನ ಪುತ್ರನು “ಅಮ್ಮಾ! ಶತ್ರುಗಳೊಂದಿಗೆ ಯುದ್ಧಮಾಡುವ ನನಗೆ ಮಂಗಳವನ್ನು ಆಶೀರ್ವದಿಸು!” ಎಂದು ನಿನ್ನಲ್ಲಿ ಕೇಳಿಕೊಂಡಿದ್ದನು. ವಿಜಯೈಷಿಣಿಯಾದ ಅವನು ನಿನ್ನಲ್ಲಿ ಪದೇ ಪದೇ ಅದನ್ನೇ ಬೇಡುತ್ತಿದ್ದನು. ಗಾಂಧಾರೀ! ಆಗ “ಧರ್ಮವೆಲ್ಲಿರುವುದೋ ಅಲ್ಲಿ ಜಯವಿರುತ್ತದೆ!” ಎಂದು ಹೇಳುತ್ತಿದ್ದೆ. ನೀನಾಡಿದ ಯಾವೊಂದು ಮಾತೂ ಇದಕ್ಕೆ ಮೊದಲು ಸುಳ್ಳಾದುದು ನನಗೆ ನೆನಪಿಲ್ಲ. ನೀನು ಯಾವಾಗಲೂ ಪ್ರಾಣಿಗಳ ಹಿತದಲ್ಲಿಯೇ ತತ್ಪರಳಾಗಿರುವವಳು. ನೀನಾಡಿದ ಆ ಧರ್ಮದ ಮಾತನ್ನು ನೆನಪಿಸಿಕೊಂಡು ಕೋಪವನ್ನು ಉಪಶಮನಗೊಳಿಸು! ಪುನಃ ಹೀಗೆ ಮಾಡಬೇಡ!”
ಗಾಂಧಾರಿಯು ಹೇಳಿದಳು: “ಭಗವನ್! ನಾನು ಅಸೂಯೆಪಡುತ್ತಿಲ್ಲ. ಅವರ ನಾಶವನ್ನೂ ಬಯಸುತ್ತಿಲ್ಲ. ಆದರೆ ಪುತ್ರಶೋಕದಿಂದ ನನ್ನ ಮನೋಬಲವು ವಿಹ್ವಲಗೊಂಡಿದೆ. ಕುಂತಿಯು ಹೇಗೆ ಕೌಂತೇಯರನ್ನು ರಕ್ಷಿಸುವಳೋ ಹಾಗೆಯೇ ನಾನೂ ಅವರನ್ನು ರಕ್ಷಿಸಬೇಕು. ಧೃತರಾಷ್ಟ್ರನು ಹೇಗೆ ಅವರನ್ನು ರಕ್ಷಿಸುತ್ತಾನೋ ಹಾಗೆ ನಾನೂ ರಕ್ಷಿಸಬೇಕು. ದುರ್ಯೋಧನ, ಸೌಬಲ ಶಕುನಿ, ಮತ್ತು ಕರ್ಣ-ದುಃಶಾಸನರ ಅಪರಾಧದಿಂದಾಗಿ ಈ ಕುರುಸಂಕ್ಷಯವು ನಡೆದುಹೋಯಿತು. ಬೀಭತ್ಸುವಾಗಲೀ, ಪಾರ್ಥ ವೃಕೋದರನಾಗಲೀ, ನಕುಲ-ಸಹದೇವರಾಗಲೀ ಅಥವಾ ಯುಧಿಷ್ಠಿರನಾಗಲೀ ಅಪರಾಧ ಮಾಡಿರುವುದು ತಿಳಿದಿಲ್ಲ. ಕೌರವರು ಪರಸ್ಪರವಾಗಿ ಯುದ್ಧಮಾಡುತ್ತಾ ಅನ್ಯರನ್ನು ಕೊಚ್ಚಿಹಾಕುತ್ತಾ ಹತರಾದರು. ಅದರಲ್ಲಿ ನನಗೆ ಅಸಮಾಧಾನವೇನೂ ಇಲ್ಲ. ಆದರೆ ವಾಸುದೇವನು ನೋಡುತ್ತಿದ್ದಂತೆಯೇ ಮಹಾಮನಸ್ವಿ ಭೀಮನು ದುರ್ಯೋಧನನನ್ನು ಗದಾಯುದ್ಧಕ್ಕೆ ಆಹ್ವಾನಿಸಿ, ಶಿಕ್ಷಣದಲ್ಲಿ ಅವನು ತನಗಿಂತಲೂ ಅಧಿಕನೆಂದು ತಿಳಿದು, ರಣದಲ್ಲಿ ಅನೇಕ ರೀತಿಗಳಲ್ಲಿ ತಿರುಗುತ್ತಿದ್ದ ಅವನನ್ನು ನಾಭಿಯ ಕೆಳಗೆ ಹೊಡೆದನೆಂದು ನನ್ನ ಕೋಪವು ಹೆಚ್ಚುತ್ತಿದೆ. ಮಹಾತ್ಮರು ಹಾಕಿಕೊಟ್ಟ ಧರ್ಮವನ್ನು, ಯುದ್ಧದಲ್ಲಿ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಧರ್ಮಜ್ಞರು ಹೇಗೆ ತಾನೇ ತ್ಯಾಗಮಾಡುತ್ತಾರೆ?”
ಅವಳ ಆ ಮಾತನ್ನು ಕೇಳಿದ ಭೀಮಸೇನನು ಭಯಗೊಂಡು ಗಾಂಧಾರಿಗೆ ಈ ಅನುನಯ ಮಾತುಗಳನ್ನಾಡಿದನು: “ನನ್ನ ಪ್ರಾಣಗಳನ್ನು ಉಳಿಸಿಕೊಳ್ಳಲೋಸುಗ, ಭಯದಿಂದ ನಾನು ಅಲ್ಲಿ ಅಧರ್ಮದ ಅಥವಾ ಧರ್ಮದ ಆ ಕೃತ್ಯವನ್ನು ಮಾಡಿದೆ. ನನ್ನನ್ನು ನೀನು ಕ್ಷಮಿಸಬೇಕು! ಧರ್ಮಪೂರ್ವಕವಾಗಿ ನಿನ್ನ ಮಗನೊಂದಿಗೆ ಯುದ್ಧಮಾಡಲು ಮಹಾಬಲಶಾಲಿಗೂ ಶಕ್ಯವಾಗಿರಲಿಲ್ಲ. ಆದುದರಿಂದಲೇ ನಾನು ಧರ್ಮಕ್ಕೆ ವಿಪರೀತವಾಗಿ ನಡೆದುಕೊಂಡೆನು. ಸೈನ್ಯಗಳಲ್ಲಿ ಉಳಿದುಕೊಂಡಿರುವ ಆ ಒಬ್ಬನೇ ವೀರ್ಯವಾನನು ಗದಾಯುದ್ಧದಲ್ಲಿ ನನ್ನನ್ನು ಸಂಹರಿಸಿ ರಾಜ್ಯವನ್ನು ಅಪಹರಿಸಬಹುದು ಎಂದು ನಾನು ಹಾಗೆ ಮಾಡಿದೆ. ಏಕವಸ್ತ್ರವನ್ನು ಧರಿಸಿದ್ದ ರಜಸ್ವಲೆ ರಾಜಪುತ್ರೀ ಪಾಂಚಾಲಿಯನ್ನು ಕಾಡಿದಾಗ ನಿನ್ನ ಮಗನಿಗೆ ನಾನು ಹೇಳಿದುದೆಲ್ಲವೂ ನಿನಗೆ ತಿಳಿದೇ ಇದೆ. ದುರ್ಯೋಧನನನ್ನು ಇಲ್ಲವಾಗಿಸದೇ ಸಾಗರಗಳೊಂದಿಗೆ ಈ ಭೂಮಿಯನ್ನು ಭೋಗಿಸಲು ನಾವು ಶಕ್ಯರಾಗಿರಲಿಲ್ಲ. ಆದುದರಿಂದ ನಾನು ಹಾಗೆ ಮಾಡಿದೆ. ಸಭಾಮಧ್ಯದಲ್ಲಿ ದ್ರೌಪದಿಗೆ ತನ್ನ ಎಡತೊಡೆಯನ್ನು ತೋರಿಸಿ ನಿನ್ನ ಮಗನೂ ಕೂಡ ನಮ್ಮೊಡನೆ ಅಪ್ರಿಯವಾಗಿ ನಡೆದುಕೊಂಡಿದ್ದನು. ಅಮ್ಮಾ! ಆಗಲೇ ದುರಾಚಾರನಾದ ನಿನ್ನ ಮಗನನ್ನು ನಾವು ಸಂಹರಿಸಬೇಕಾಗಿತ್ತು. ಆದರೆ ಧರ್ಮರಾಜನ ಆಜ್ಞೆಯಂತೆ ನಿಯಮಕ್ಕೆ ಕಟ್ಟುಬಿದ್ದು ಸುಮ್ಮಲೇ ಕುಳಿತಿದ್ದೆವು. ನಿನ್ನ ಮಗನೇ ಈ ವೈರವನ್ನು ಉರಿಸಿ ಬೆಳೆಸಿದನು. ವನದಲ್ಲಿಯೂ ನಿತ್ಯವೂ ಮಹಾ ಕಷ್ಟಗಳನ್ನು ಅನುಭವಿಸುವಂತೆ ಮಾಡಿದನು. ಆದುದರಿಂದಲೇ ನಾನು ಹೀಗೆ ಮಾಡಿದೆ. ರಣದಲ್ಲಿ ದುರ್ಯೋಧನನನ್ನು ಸಂಹರಿಸಿ ನಾವು ವೈರವನ್ನು ಪಾರುಮಾಡಿದ್ದೇವೆ. ಯುಧಿಷ್ಠಿರನು ರಾಜ್ಯವನ್ನು ಪಡೆದು ನಮ್ಮ ಕೋಪವೂ ಹೊರಟುಹೋಗಿದೆ.”
ಗಾಂಧಾರಿಯು ಹೇಳಿದಳು: “ನನ್ನ ಮಗನನ್ನು ನೀನು ಪ್ರಶಂಸಿಸುತ್ತಿರುವೆಯಾದುದರಿಂದ ಅವನ ವಧೆಯೇ ನಡೆಯಲಿಲ್ಲವೆಂದು ತಿಳಿಯುತ್ತೇನೆ. ನನ್ನಲ್ಲಿ ಹೇಳಿದಂತೆ ನೀನು ಅವೆಲ್ಲವನ್ನೂ ಮಾಡಿದ್ದೀಯೆ ಹೌದು. ವೃಷಸೇನನು ನಕುಲನ ಕುದುರೆಗಳನ್ನು ಸಂಹರಿಸಲು ರಣದಲ್ಲಿ ನೀನು ದುಃಶಾಸನನ ಶರೀರದ ರಕ್ತವನ್ನು ಕುಡಿದೆಯಲ್ಲವೇ? ಸತ್ಪುರುಷರಿಂದ ನಿಂದನೀಯವೂ, ಘೋರವೂ, ಅನಾರ್ಯರು ಮಾಡುವಂಥಹುದೂ ಆದ ಆ ಕ್ರೂರ ಕರ್ಮವನ್ನು ನೀನು ಮಾಡಿದ್ದೀಯೆ. ವೃಕೋದರ! ಅದು ನಿನಗೆ ಹೇಗೆ ಯುಕ್ತವಾದುದು?”
ಭೀಮಸೇನನು ಹೇಳಿದನು: “ಬೇರೆಯವರಿಂದ ಸುರಿಯುತ್ತಿರುವ ರಕ್ತವನ್ನೇ ಕುಡಿಯಬಾರದೆಂದಿರುವಾಗ ನನ್ನದೇ ರಕ್ತವನ್ನು ನಾನೇಕೆ ಕುಡಿಯುತ್ತೇನೆ? ನನ್ನಂತೆಯೇ ನನ್ನ ಸಹೋದರ ದುಃಶಾಸನ ಕೂಡ. ನಮ್ಮಿಬ್ಬರಲ್ಲಿ ವ್ಯತ್ಯಾಸವೇ ಇರಲಿಲ್ಲ. ಅಮ್ಮಾ! ಅವನ ರಕ್ತವು ನನ್ನ ತುಟಿ ಮತ್ತು ಹಲ್ಲುಗಳನ್ನು ದಾಟಿ ಒಳಗೆ ಹೋಗಲೇ ಇಲ್ಲ. ಶೋಕಿಸಬೇಡ! ಇದಕ್ಕೆ ಸೂರ್ಯಪುತ್ರ ಯಮನೇ ಸಾಕ್ಷಿ! ನನ್ನೆರಡು ಕೈಗಳೂ ರಕ್ತದಿಂದ ತೋಯ್ದುಹೋಗಿದ್ದವು. ಯುದ್ಧದಲ್ಲಿ ವೃಷಸೇನನಿಂದ ನಕುಲನ ಕುದುರೆಗಳು ಹತವಾದುದನ್ನು ಕಂಡು ಸಂಪ್ರಹೃಷ್ಟರಾದ ಸಹೋದರರು ನನ್ನಲ್ಲಿ ಭಯವುಂಟಾಯಿತು. ದ್ಯೂತವಾಡುವಾಗ ದ್ರೌಪದಿಯ ಕೇಶಗಳನ್ನು ಹಿಡಿದು ಎಳೆದುತರುವಾಗ ನಾನು ಕ್ರೋಧದಿಂದ ಆಡಿದ ಮಾತು ನನ್ನ ಹೃದಯದಲ್ಲಿ ತಿರುಗುತ್ತಲೇ ಇತ್ತು. ಆ ಪ್ರತಿಜ್ಞೆಯನ್ನು ಪೂರೈಸದಿದ್ದರೆ ಶಾಶ್ವತವಾಗಿ ಕ್ಷತ್ರಧರ್ಮದಿಂದ ಚ್ಯುತನಾಗುವೆನೆಂಬ ಭಯದಿಂದ ನಾನು ಹಾಗೆ ಮಾಡಿದೆ. ನಮಗೆ ಅಪಕಾರವನ್ನೆಸಗಿದ ಪುತ್ರರನ್ನು ಮೊದಲೇ ನಿಯಂತಿಸಿಟ್ಟುಕೊಳ್ಳದೇ ಈಗ ನನ್ನನ್ನು ದೋಷಿತನೆಂದು ಪರಿಶಂಕಿಸುವುದು ಸರಿಯಲ್ಲ.”
ಗಾಂಧಾರಿಯು ಹೇಳಿದಳು: “ಈ ವೃದ್ಧರ ನೂರು ಮಕ್ಕಳನ್ನೂ ಸಂಹರಿಸಿ ಅಪರಾಜಿತನಾಗಿರುವ ನೀನು ಅಲ್ಪ ಅಪರಾಧಮಾಡಿದ್ದ ಒಬ್ಬನನ್ನಾದರೂ ಏಕೆ ಉಳಿಸಲಿಲ್ಲ? ಮಗನೇ! ರಾಜ್ಯವನ್ನು ಕಳೆದುಕೊಂಡ ಈ ವೃದ್ಧರಿಗೆ ಒಂದು ಸಂತಾನವೂ ಇಲ್ಲವಾಗಿದೆ. ಈ ಅಂಧರಿಬ್ಬರಿಗೆ ಊರುಗೋಲಾಗಿರಲು ಒಬ್ಬನನ್ನಾದರೂ ನೀನು ಏಕೆ ಜೀವಸಹಿತ ಬಿಡಲಿಲ್ಲ? ಪುತ್ರರನ್ನು ಕೊಲ್ಲುವಾಗ ನೀನು ಧರ್ಮವನ್ನಾಚರಿಸಿ ಒಬ್ಬನನ್ನಾದರೂ ಉಳಿಸಿದ್ದರೆ ನನಗೆ ಇಷ್ಟೊಂದು ದುಃಖವಾಗುತ್ತಿರಲಿಲ್ಲ!”
ಹೀಗೆ ಹೇಳಿ ಮಕ್ಕಳು-ಮೊಮ್ಮಕ್ಕಳ ವಧೆಯಿಂದ ಪೀಡಿತಳಾಗಿದ್ದ ಗಾಂಧಾರಿಯು ಕ್ರೋಧದಿಂದ “ಆ ರಾಜನೆಲ್ಲಿ?” ಎಂದು ಯುಧಿಷ್ಠಿರನನ್ನು ಕೇಳಿದಳು. ರಾಜೇಂದ್ರ ಯುಧಿಷ್ಠಿರನು ಕೈಮುಗಿದು ನಡುಗುತ್ತಾ ಅವಳ ಬಳಿಹೋಗಿ ಈ ಮಧುರ ಮಾತನ್ನಾಡಿದನು: “ದೇವೀ! ನಿನ್ನ ಪುತ್ರರನ್ನು ವಧಿಸಿದ ಮಹಾಕ್ರೂರಿ ಯುಧಿಷ್ಠಿರನು ನಾನು. ಪೃಥ್ವಿಯ ವಿನಾಶಕ್ಕೆ ಕಾರಣನಾಗಿರುವ ನಾನು ಶಾಪಾರ್ಹನಾಗಿದ್ದೇನೆ. ನನ್ನನ್ನು ಶಪಿಸು! ಸುಹೃದರಿಗೆ ದ್ರೋಹವನ್ನೆಸಗಿ ಅಂಥಹ ಸುಹೃದರನ್ನು ಸಂಹರಿಸಿದ ಈ ಮೂಢನಿಗೆ ಜೀವದಲ್ಲಾಗಲೀ, ರಾಜ್ಯದಲ್ಲಾಗಲೀ ಅಥವಾ ಧನದಲ್ಲಾಗಲೀ ಆಗಬೇಕಾದುದೇನೂ ಇಲ್ಲ!”
ಹತ್ತಿರದಲ್ಲಿಯೇ ಭೀತನಾಗಿ ನಿಂತಿದ್ದ ಆ ಅನಿಂದಿತನಿಗೆ ಸುದೀರ್ಘವಾಗಿ ನಿಟ್ಟುಸಿರು ಬಿಡುತ್ತಿದ್ದ ಗಾಂಧಾರಿಯು ಏನನ್ನೂ ಹೇಳಲಿಲ್ಲ. ನೃಪತಿ ಯುಧಿಷ್ಠಿರನು ದೇಹವನ್ನು ಬಗ್ಗಿಸಿ ಅವಳ ಪಾದಗಳಲ್ಲಿ ಬೀಳುವುದರಲ್ಲಿದ್ದಾಗ ಧರ್ಮಜ್ಞಾ ಧರ್ಮದರ್ಶಿನೀ ದೇವೀ ಗಾಂಧರಿಯು ತನ್ನ ಕಣ್ಣಿಗೆ ಕಟ್ಟಿದ್ದ ಪಟ್ಟಿಯ ಸಂಧಿಯಿಂದ ಅವನ ಬೆರಳ ತುದಿಗಳನ್ನು ನೋಡಿದಳು. ಕೂಡಲೇ ಆ ನೃಪನ ಸುಂದರ ಉಗುರುಗಳ ಬೆರಳುಗಳು ವಿಕಾರರೂಪವನ್ನು ತಾಳಿದವು. ಅದನ್ನು ನೋಡಿ ಅರ್ಜುನನು ವಾಸುದೇವನ ಹಿಂದೆ ಅಡಗಿಕೊಂಡನು. ಅವರೆಲ್ಲರೂ ಕೂಡ ಹೀಗೆ ಅಲ್ಲಿಂದಿಲ್ಲಿಗೆ ಓಡಾಡತೊಡಗಿದರು. ಆಗ ಗಾಂಧಾರಿಯು ಕ್ರೋಧವನ್ನು ತೊರೆದು ತಾಯಿಯಂತೆ ಅವರನ್ನು ಸಂತವಿಸಿದಳು. ಅವಳಿಂದ ಅನುಜ್ಞೆಯನ್ನು ಪಡೆದು ಆ ವಿಶಾಲವಕ್ಷರು ಒಟ್ಟಿಗೇ ವೀರಮಾತೆ ತಾಯಿ ಪೃಥೆಯ ಬಳಿ ಹೋದರು.
ಬಹಳ ಕಾಲದ ನಂತರ ತನ್ನ ಪುತ್ರರನ್ನು ಕಂಡು ಕುಂತೀದೇವಿಯು ಸೆರಗಿನಿಂದ ಮುಖವನ್ನು ಮುಚ್ಚಿ ಪುತ್ರರೊಂದಿಗೆ ಕಣ್ಣೀರು ಸುರಿಸಿದಳು. ಅನಂತರ ಕಣ್ಣಿರನ್ನು ಒರೆಸಿಕೊಂಡು ಪೃಥೆಯು ಶಸ್ತ್ರಪ್ರಹಾರಗಳಿಂದ ಗಾಯಗೊಂಡಿದ್ದ ತನ್ನ ಪುತ್ರರನ್ನು ನೋಡಿದಳು. ಒಬ್ಬೊಬ್ಬರನ್ನಾಗಿ ಅವಳು ತನ್ನ ಮಕ್ಕಳನ್ನು ಪುನಃ ಪುನಃ ಮೈದಡವಿದಳು. ಅನಂತರ ಮಕ್ಕಳನ್ನು ಕಳೆದುಕೊಂಡು ದುಃಖಾರ್ತಳಾಗಿ ರೋದಿಸುತ್ತಾ ನೆಲದ ಬೇಲೆ ಬಿದ್ದ ಪಾಂಚಾಲೀ ದ್ರೌಪದಿಯನ್ನು ನೋಡಿ ಶೋಕಿಸಿದಳು.
ದ್ರೌಪದಿಯು ಹೇಳಿದಳು: “ಆರ್ಯೇ! ಸೌಭದ್ರ ಅಭಿಮನ್ಯು ಸಹಿತರಾಗಿ ನಿನ್ನ ಮೊಮ್ಮಕ್ಕಳೆಲ್ಲಾ ಎಲ್ಲಿ ಹೋದರು? ಬಹಳ ಕಾಲ ನೋಡದಿದ್ದ ತಪಸ್ವಿನೀ ನಿನ್ನನ್ನು ನೋಡಲು ಅವರು ಏಕೆ ಬಂದಿಲ್ಲ? ಮಕ್ಕಳನ್ನು ಕಳೆದುಕೊಂಡ ನನಗೆ ಈ ರಾಜ್ಯದಿಂದ ಏನಾಗಬೇಕಾಗಿದೆ?”
ವಿಶಾಲಲೋಚನೆ ಕುಂತಿಯು ಶೋಕಕರ್ಶಿತಳಾಗಿ ರೋದಿಸುತ್ತಿರುವ ಯಾಜ್ಞಸೇನೆಯನ್ನು ಮೇಲಕ್ಕೆತ್ತಿ ಸಮಾಧಾನಗೊಳಿಸತೊಡಗಿದಳು. ಅವಳನ್ನೂ ತನ್ನ ಪುತ್ರರನ್ನೂ ಜೊತೆಯಲ್ಲಿ ಕರೆದುಕೊಂಡು ಪೃಥೆಯು ತನಗಿಂತಲೂ ಆರ್ತಳಾಗಿದ್ದ ಮಾತೆ ಗಾಂಧಾರಿಯ ಬಳಿ ಹೋದಳು. ಯಶಸ್ವಿನೀ ಕುಂತಿಯೊಡನಿದ್ದ ಸೊಸೆಗೆ ಗಾಂಧಾರಿಯು ಹೇಳಿದಳು: “ಪುತ್ರೀ! ಹೀಗೆ ಶೋಕಾರ್ತಳಾಗಬೇಡ! ದುಃಖಿತಳಾಗಿರುವ ನನ್ನನ್ನೂ ನೋಡು! ಈ ಲೋಕವಿನಾಶವು ಕಾಲಚಕ್ರದಿಂದ ಪ್ರಚೋದಿತವಾದುದೆಂತು ನನಗನ್ನಿಸುತ್ತದೆ. ಅವಶ್ಯವಾಗಿ ಆಗಬೇಗಾಗಿದ್ದುದು ಆಗಿಹೋಯಿತು. ಸ್ವಾಭಾವಿಕವಾಗಿಯೇ ಇದು ರೋಮಹರ್ಷಣವಾದುದು. ಕೃಷ್ಣನು ಶಾಂತಿಗಾಗಿ ಬಂದಾಗ ಮಹಾಮತಿ ವಿದುರನು ಯಾವ ಮಹಾ ಮಾತುಗಳನ್ನಾಡಿದ್ದನೋ ಅದರಂತೆಯೇ ಆಗಿಹೋಯಿತು. ಯಾವುದಕ್ಕೆ ಪರಿಹಾರವೇ ಇಲ್ಲವೋ, ಅದರಲ್ಲೂ ವಿಶೇಷವಾಗಿ ಯಾವುದು ಆಗಿ ಮುಗಿದು ಹೋಗಿದೆಯೋ ಅದರ ಕುರಿತು ಶೋಕಿಸಬೇಡ! ಸಂಗ್ರಾಮದಲ್ಲಿ ನಿಧನಹೊಂದಿದವರ ಸಲುವಾಗಿ ನೀನು ಶೋಕಿಸಬೇಕಾಗಿಲ್ಲ. ನಿನ್ನಂತೆ ನಾನೂ ಕೂಡ. ಯಾರು ಯಾರನ್ನು ಸಮಾಧಾನಗೊಳಿಸಬಲ್ಲರು? ನನ್ನ ಅಪರಾಧದಿಂದಲೇ ಈ ಉಚ್ಛ ಕುಲವು ನಾಶವಾಯಿತು.”