Udyoga Parva: Chapter 36

ಉದ್ಯೋಗ ಪರ್ವ: ಪ್ರಜಾಗರ ಪರ್ವ

೩೬

ದತ್ತಾತ್ರೇಯ ಮತ್ತು ಸಾಧ್ಯರ ಸಂವಾದ

ವಿದುರನು ಧೃತರಾಷ್ಟ್ರನಿಗೆ ದತ್ತಾತ್ರೇಯ ಮತ್ತು ಸಾಧ್ಯರ ನಡುವೆ ನಡೆದ ಸಂಭಾಷಣೆಯನ್ನು ಉದಾಹರಿಸುವುದು (೧-೨೧). ಮಹಾಕುಲಗಳು ಹೇಗಾಗುತ್ತವೆಯೆಂದು ವಿವರಿಸುವುದು (೨೨-೪೬). ಮತ್ತು ತನ್ನ ನೀತಿಮಾತುಗಳನ್ನು ಮುಂದುವರಿಸಿದುದು (೪೭-೭೨).

Image result for dattatreya05036001 ವಿದುರ ಉವಾಚ|

05036001a ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಂ|

05036001c ಆತ್ರೇಯಸ್ಯ ಚ ಸಂವಾದಂ ಸಾಧ್ಯಾನಾಂ ಚೇತಿ ನಃ ಶ್ರುತಂ||

ವಿದುರನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ನಾವು ಕೇಳಿದ ಪುರಾತನವಾದ ಇತಿಹಾಸ - ಅತ್ರಿಯ ಮಗ ಮತ್ತು ಸಾಧ್ಯರ ಸಂವಾದವಿದೆ.

05036002a ಚರಂತಂ ಹಂಸರೂಪೇಣ ಮಹರ್ಷಿಂ ಸಂಶಿತವ್ರತಂ|

05036002c ಸಾಧ್ಯಾ ದೇವಾ ಮಹಾಪ್ರಾಜ್ಞಾಂ ಪರ್ಯಪೃಚ್ಚಂತ ವೈ ಪುರಾ||

ಹಿಂದೆ ಅತ್ರಿಯ ಮಗ ಸಂಶಿತವ್ರತ ಮಹರ್ಷಿಯು ಹಂಸರೂಪದಲ್ಲಿ ಸಂಚರಿಸುತ್ತಿರುವಾಗ ಆ ಮಹಾಪ್ರಾಜ್ಞನನ್ನು ಸಾಧ್ಯ ದೇವತೆಗಳು ಪ್ರಶ್ನಿಸಿದರು:

05036003a ಸಾಧ್ಯಾ ದೇವಾ ವಯಮಸ್ಮೋ ಮಹರ್ಷೇ

        ದೃಷ್ಟ್ವಾ ಭವಂತಂ ನ ಶಕ್ನುಮೋಽನುಮಾತುಂ|

05036003c ಶ್ರುತೇನ ಧೀರೋ ಬುದ್ಧಿಮಾಂಸ್ತ್ವಂ ಮತೋ ನಃ

        ಕಾವ್ಯಾಂ ವಾಚಂ ವಕ್ತುಮರ್ಹಸ್ಯುದಾರಾಂ||

“ಮಹರ್ಷೇ! ನಾವು ಸಾಧ್ಯಾ ದೇವತೆಗಳು. ನಿನ್ನನ್ನು ನೋಡಿ ನೀನು ಯಾರೆಂದು ಗುರುತಿಸಲಾರೆವು. ಶ್ರುತಿಗಳಿಂದ ನೀನು ಧೀರ ಮತ್ತು ಬುದ್ಧಿವಂತನೆಂದು ನಮಗನ್ನಿಸುತ್ತದೆ. ಆದುದರಿಂದ ಉದಾರವಾಗಿ ನಮ್ಮೊಂದಿಗೆ ಅರ್ಥಭರಿತ ಮಾತುಗಳನ್ನಾಡಬೇಕು.”

05036004 ಹಂಸ ಉವಾಚ|

05036004a ಏತತ್ಕಾರ್ಯಮಮರಾಃ ಸಂಶ್ರುತಂ ಮೇ

        ಧೃತಿಃ ಶಮಃ ಸತ್ಯಧರ್ಮಾನುವೃತ್ತಿಃ|

05036004c ಗ್ರಂಥಿಂ ವಿನೀಯ ಹೃದಯಸ್ಯ ಸರ್ವಂ

        ಪ್ರಿಯಾಪ್ರಿಯೇ ಚಾತ್ಮವಶಂ ನಯೀತ||

ಹಂಸವು ಹೇಳಿತು: “ಅಮರರೇ! ನಾನು ಈ ಕಾರ್ಯವನ್ನು ಚೆನ್ನಾಗಿ ಕೇಳಿದ್ದೇನೆ - ಧೃತಿ, ಶಮ, ಮತ್ತು ಸತ್ಯಧರ್ಮಗಳನ್ನುಪಯೋಗಿಸಿ ಹೃದಯದ ಎಲ್ಲ ಗಂಟುಗಳನ್ನು ಬಿಡಿಸಿ, ಪ್ರಿಯ-ಅಪ್ರಿಯಗಳೆರಡನ್ನೂ ತನ್ನ ವಶದಲ್ಲಿ ತಂದುಕೊಳ್ಳಬೇಕು.

05036005a ಆಕ್ರುಶ್ಯಮಾನೋ ನಾಕ್ರೋಶೇನ್ಮನ್ಯುರೇವ ತಿತಿಕ್ಷಿತಃ|

05036005c ಆಕ್ರೋಷ್ಟಾರಂ ನಿರ್ದಹತಿ ಸುಕೃತಂ ಚಾಸ್ಯ ವಿಂದತಿ||

ನೋವನ್ನು ನೀಡುವವರಿಗೆ ನೋವನ್ನು ನೀಡಬಾರದು. ಸುಮ್ಮನೇ ಸಹಿಸಿಕೊಂಡರೆ ಅದರಿಂದ ಉಂಟಾಗುವ ಕೋಪವೇ ಆ ನೋವನ್ನು ನೀಡಿದವನನ್ನು ಸುಡುತ್ತದೆ. ನೋವನ್ನು ಅನುಭವಿಸಿದವನಿಗೆ ನೋವನ್ನು ನೀಡಿದವನು ಮಾಡಿದ ಪುಣ್ಯವು ದೊರೆಯುತ್ತದೆ.

05036006a ನಾಕ್ರೋಶೀ ಸ್ಯಾನ್ನಾವಮಾನೀ ಪರಸ್ಯ

        ಮಿತ್ರದ್ರೋಹೀ ನೋತ ನೀಚೋಪಸೇವೀ|

05036006c ನ ಚಾತಿಮಾನೀ ನ ಚ ಹೀನವೃತ್ತೋ

        ರೂಕ್ಷಾಂ ವಾಚಂ ರುಶತೀಂ ವರ್ಜಯೀತ||

ಇನ್ನೊಬ್ಬರನ್ನು ನೋಯಿಸಬೇಡ, ಅಪಮಾನಿಸಬೇಡ. ಮಿತ್ರದ್ರೋಹಿಯಾಗಬೇಡ. ನೀಚರೊಂದಿಗೆ ಸಂಬಂಧವನ್ನಿಟ್ಟುಕೊಳ್ಳಬೇಡ. ಅತಿ ಅಭಿಮಾನಿಯಾಗಿ ಮತ್ತು ಹೀನನಾಗಿ ವರ್ತಿಸಬೇಡ. ಕ್ರೂರವಾದ ಮತ್ತು ರೋಷಯುಕ್ತವಾದ ಮಾತನ್ನು ವರ್ಜಿಸಬೇಕು.

05036007a ಮರ್ಮಾಣ್ಯಸ್ಥೀನಿ ಹೃದಯಂ ತಥಾಸೂನ್

        ಘೋರಾ ವಾಚೋ ನಿರ್ದಹಂತೀಹ ಪುಂಸಾಂ|

05036007c ತಸ್ಮಾದ್ವಾಚಂ ರುಶತೀಂ ರೂಕ್ಷರೂಪಾಂ

        ಧರ್ಮಾರಾಮೋ ನಿತ್ಯಶೋ ವರ್ಜಯೀತ||

ಘೋರ ಮಾತು ಮರ್ಮಗಳನ್ನು, ಎದೆ ಹೃದಯವನ್ನು ಮತ್ತು ಪುರುಷನ ಒಳಕೇಂದ್ರವನ್ನೇ ಸುಡುತ್ತದೆ. ಆದುದರಿಂದ, ಧರ್ಮವಂತನು ರೋಷಯುಕ್ತ, ಕ್ರೂರ ಮಾತನ್ನು ನಿತ್ಯವೂ ವರ್ಜಿಸಬೇಕು.

05036008a ಅರುಂತುದಂ ಪರುಷಂ ರೂಕ್ಷವಾಚಂ

        ವಾಕ್ಕಂಟಕೈರ್ವಿತುದಂತಂ ಮನುಷ್ಯಾನ್|

05036008c ವಿದ್ಯಾದಲಕ್ಷ್ಮೀಕತಮಂ ಜನಾನಾಂ

        ಮುಖೇ ನಿಬದ್ಧಾಂ ನಿರೃತಿಂ ವಹಂತಂ||

ಕ್ರೂರವಾಗಿ ಮಾತನಾಡುವ, ಮನುಷ್ಯರನ್ನು ಮಾತಿನ ಮುಳ್ಳಿನಿಂದ ಚುಚ್ಚುವ, ನಾಲಿಗೆಯಮೇಲೆ ನರಕವನ್ನು ಹೊತ್ತಿರುವ ಅತ್ಯಂತ ಅಧಮ ಪುರುಷನು ಮನುಷ್ಯರಿಗೆ ಯಾವಾಗಲೂ ಅಲಕ್ಷ್ಮಿಯನ್ನು ತರುವವನೆಂದು ತಿಳಿಯಬೇಕು.

05036009a ಪರಶ್ಚೇದೇನಮಧಿವಿಧ್ಯೇತ ಬಾಣೈಃ

        ಭೃಶಂ ಸುತೀಕ್ಷ್ಣೈರನಲಾರ್ಕದೀಪ್ತೈಃ|

05036009c ವಿರಿಚ್ಯಮಾನೋಽಪ್ಯತಿರಿಚ್ಯಮಾನೋ

        ವಿದ್ಯಾತ್ಕವಿಃ ಸುಕೃತಂ ಮೇ ದಧಾತಿ||

ಸುತೀಕ್ಷ್ಣ ಸೂರ್ಯನಂತೆ ಸುಡುತ್ತಿರುವ ಇನ್ನೊಬ್ಬರ ಮಾತಿನ ಬಾಣಗಳಿಂದ ಚೆನ್ನಾಗಿ ಗಾಯಗೊಂಡ ಬುದ್ಧಿವಂತನು ಇದು ನನಗೆ ಅವನ ಪುಣ್ಯಗಳನ್ನು ಕೊಡುತ್ತದೆ ಎಂದು ಅದನ್ನು ಸುಮ್ಮನೇ ಸಹಿಸಿಕೊಳ್ಳುತ್ತಾನೆ.

05036010a ಯದಿ ಸಂತಂ ಸೇವತೇ ಯದ್ಯಸಂತಂ

        ತಪಸ್ವಿನಂ ಯದಿ ವಾ ಸ್ತೇನಮೇವ|

05036010c ವಾಸೋ ಯಥಾ ರಂಗವಶಂ ಪ್ರಯಾತಿ

        ತಥಾ ಸ ತೇಷಾಂ ವಶಮಭ್ಯುಪೈತಿ||

ಯಾವ ಬಣ್ಣದ ಬಟ್ಟೆಯೊಂದಿಗೆ ನೆನೆಸಲ್ಪಟ್ಟಿದೆಯೋ ಆ ಬಟ್ಟೆಯ ಬಣ್ಣವನ್ನು ಪಡೆಯುವಂತೆ, ಯಾವ ಸಂತ, ಅಸಂತ, ತಪಸ್ವಿ, ಕಳ್ಳರ ಸೇವೆಯನ್ನು ಮಾಡುತ್ತೇವೋ ಅವರ ಗುಣಗಳನ್ನು ಪಡೆಯುತ್ತೇವೆ.

05036011a ವಾದಂ ತು ಯೋ ನ ಪ್ರವದೇನ್ನ ವಾದಯೇದ್

        ಯೋ ನಾಹತಃ ಪ್ರತಿಹನ್ಯಾನ್ನ ಘಾತಯೇತ್|

05036011c ಯೋ ಹಂತುಕಾಮಸ್ಯ ನ ಪಾಪಮಿಚ್ಚೇತ್

        ತಸ್ಮೈ ದೇವಾಃ ಸ್ಪೃಹಯಂತ್ಯಾಗತಾಯ||

ಕ್ರೂರವಾಗಿ ಮಾತನಾಡಿದವರಿಗೆ ಅದೇ ಕ್ರೂರತೆಯಿಂದ ಉತ್ತರವನ್ನು ಕೊಡದ, ಘಾಯಕ್ಕೊಳಗಾದರೂ ಘಾಯಗೊಳಿಸಿದವನಿಗೆ ತಿರುಗಿ ಘಾಯಗೊಳಿಸದ, ಪೆಟ್ಟುಕೊಟ್ಟವನಿಗೆ ತಿರುಗಿ ಪೆಟ್ಟುಕೊಡದವರನ್ನು ದೇವತೆಗಳೂ ಅರಸಿಕೊಂಡು ಬರುತ್ತಾರೆ.

05036012a ಅವ್ಯಾಹೃತಂ ವ್ಯಾಹೃತಾಚ್ಚ್ರೇಯ ಆಹುಃ

        ಸತ್ಯಂ ವದೇದ್ವ್ಯಾಹೃತಂ ತದ್ದ್ವಿತೀಯಂ|

05036012c ಪ್ರಿಯಂ ವದೇದ್ವ್ಯಾಹೃತಂ ತತ್ತೃತೀಯಂ

        ಧರ್ಮ್ಯಂ ವದೇದ್ವ್ಯಾಹೃತಂ ತಚ್ಚತುರ್ಥಂ||

ಮಾತನಾಡುವುದಕ್ಕಿಂತ ಮಾತನಾಡದೇ ಇರುವುದು ಶ್ರೇಯ. ಮಾತನಾಡಲೇ ಬೇಕಾಗಿಬಂದರೆ ಮೊದಲನೆಯದಾಗಿ ಶ್ರೇಯವಾದುದನ್ನು ಹೇಳಬೇಕು, ಎರಡನೆಯದಾಗಿ ಸತ್ಯವನ್ನೇ ಮಾತನಾಡಬೇಕು, ಮೂರನೆಯದಾಗಿ ಪ್ರಿಯವಾದುದನ್ನು ಹೇಳಬೇಕು ಮತ್ತು ನಾಲ್ಕನೆಯದಾಗಿ ಧರ್ಮವನ್ನು ಹೇಳಬೇಕು[1].

05036013a ಯಾದೃಶೈಃ ಸಂವಿವದತೇ ಯಾದೃಶಾಂಶ್ಚೋಪಸೇವತೇ|

05036013c ಯಾದೃಗಿಚ್ಚೇಚ್ಚ ಭವಿತುಂ ತಾದೃಗ್ಭವತಿ ಪೂರುಷಃ||

ಮನುಷ್ಯನು ಯಾರ ಜೊತೆಗೆ ಜೀವಿಸುತ್ತಾನೋ, ಯಾರ ಉಪಸೇವನೆಯನ್ನು ಮಾಡುತ್ತಾನೋ, ಯಾರ ಹಾಗೆ ಆಗಲು ಬಯಸುತ್ತಾನೋ ಅವರ ಹಾಗೆಯೇ ಆಗುತ್ತಾನೆ.

05036014a ಯತೋ ಯತೋ ನಿವರ್ತತೇ ತತಸ್ತತೋ ವಿಮುಚ್ಯತೇ|

05036014c ನಿವರ್ತನಾದ್ಧಿ ಸರ್ವತೋ ನ ವೇತ್ತಿ ದುಃಖಮಣ್ವಪಿ||

ಯಾವ ಯಾವ ವಿಷಯಗಳಿಂದ ದೂರವಿರುತ್ತಾನೋ ಅವುಗಳೆಲ್ಲವುಗಳಿಂದ ಮುಕ್ತಿ ದೊರೆಯುತ್ತದೆ. ಎಲ್ಲವುಗಳಿಂದ ದೂರವಿದ್ದರೆ ದುಃಖವೆನ್ನುವುದೇ ಇರುವುದಿಲ್ಲ.

05036015a ನ ಜೀಯತೇ ನೋತ ಜಿಗೀಷತೇಽನ್ಯಾನ್

        ನ ವೈರಕೃಚ್ಚಾಪ್ರತಿಘಾತಕಶ್ಚ|

05036015c ನಿಂದಾಪ್ರಶಂಸಾಸು ಸಮಸ್ವಭಾವೋ

        ನ ಶೋಚತೇ ಹೃಷ್ಯತಿ ನೈವ ಚಾಯಂ||

ಅಂಥಹ ವ್ಯಕ್ತಿಯು ಬೇರೆಯವರನ್ನು ಗೆಲ್ಲುವುದಿಲ್ಲ, ಗೆಲ್ಲಲ್ಪಡುವುದಿಲ್ಲ, ವೈರವನ್ನು ಬೆಳೆಸುವುದಿಲ್ಲ, ಬೇರೆಯವರಿಗೆ ಕಷ್ಟವನ್ನು ನೀಡುವುದಿಲ್ಲ ಮತ್ತು ನಿಂದಿಸುವುದಿಲ್ಲ. ನಿಂದೆ ಮತ್ತು ಪ್ರಶಂಸೆಗಳಲ್ಲಿ ಸಮಭಾವವನ್ನಿಟ್ಟುಕೊಂಡು ಶೋಕಿಸುವುದೂ ಇಲ್ಲ ಹರ್ಷಿಸುವುದೂ ಇಲ್ಲ.

05036016a ಭಾವಮಿಚ್ಚತಿ ಸರ್ವಸ್ಯ ನಾಭಾವೇ ಕುರುತೇ ಮತಿಂ|

05036016c ಸತ್ಯವಾದೀ ಮೃದುರ್ದಾಂತೋ ಯಃ ಸ ಉತ್ತಮಪೂರುಷಃ||

ಎಲ್ಲರಿಗೂ ಒಳ್ಳೆಯದನ್ನು ಬಯಸುವವನು, ಕೆಟ್ಟದಕ್ಕೆ ಮನಸ್ಸುಮಾಡದವನು, ಸತ್ಯವಾದೀ, ಮೃದು, ದಾಂತನು ಉತ್ತಮ ಪುರುಷನು.

05036017a ನಾನರ್ಥಕಂ ಸಾಂತ್ವಯತಿ ಪ್ರತಿಜ್ಞಾಯ ದದಾತಿ ಚ|

05036017c ರಾದ್ಧಾಪರಾದ್ಧೇ ಜಾನಾತಿ ಯಃ ಸ ಮಧ್ಯಮಪೂರುಷಃ||

ಕಷ್ಟದಲ್ಲಿರುವವರನ್ನು ಸಂತವಿಸದ, ಮಾತುಕೊಟ್ಟಂತೆ ನೀಡದ ಮತ್ತು ಇನ್ನೊಬ್ಬರ ಅಪರಾಧಗಳನ್ನು ಹುಡುಕುವವನು ಮಧ್ಯಮ ಪುರುಷ.

05036018a ದುಃಶಾಸನಸ್ತೂಪಹಂತಾ ನ ಶಾಸ್ತಾ

        ನಾವರ್ತತೇ ಮನ್ಯುವಶಾತ್ಕೃತಘ್ನಃ|

05036018c ನ ಕಸ್ಯ ಚಿನ್ಮಿತ್ರಮಥೋ ದುರಾತ್ಮಾ

        ಕಲಾಶ್ಚೈತಾ ಅಧಮಸ್ಯೇಹ ಪುಂಸಃ||

ಇವು ಅಧಮ ಪುರುಷನ ಲಕ್ಷಣಗಳು: ನಿಯಂತ್ರಿಸಲು ಅಸಾಧ್ಯನಾಗಿರುವುದು, ಆಪತ್ತನ್ನು ತರುವುದು, ಸುಲಭವಾಗಿ ಸಿಟ್ಟಾಗುವುದು, ಕೃತಘ್ನತೆ, ಯಾರೊಂದಿಗೂ ಮಿತ್ರನಾಗಿರದೇ ಇರುವುದು, ಮತ್ತು ದುರಾತ್ಮನಾಗಿರುವುದು.

05036019a ನ ಶ್ರದ್ದಧಾತಿ ಕಲ್ಯಾಣಂ ಪರೇಭ್ಯೋಽಪ್ಯಾತ್ಮಶಂಕಿತಃ|

05036019c ನಿರಾಕರೋತಿ ಮಿತ್ರಾಣಿ ಯೋ ವೈ ಸೋಽಧಮಪೂರುಷಃ||

ಇತರರು ಮಾಡುವ ಒಳ್ಳೆಯದರ ಮೇಲೆ ಶ್ರದ್ಧೆಯಿಲ್ಲದವನು, ಇತರರನ್ನು ಪಾಪಿಗಳೆಂದು ಶಂಕಿಸುವವನು, ಮಿತ್ರರನ್ನು ದೂರವಿಡುವವನನ್ನು ಕೂಡ ಅಧಮಪುರುಷನೆಂದು ಹೇಳುತ್ತಾರೆ.

05036020a ಉತ್ತಮಾನೇವ ಸೇವೇತ ಪ್ರಾಪ್ತೇ ಕಾಲೇ ತು ಮಧ್ಯಮಾನ್|

05036020c ಅಧಮಾಂಸ್ತು ನ ಸೇವೇತ ಯ ಇಚ್ಚೇಚ್ಚ್ರೇಯ ಆತ್ಮನಃ||

ತನಗೆ ಶ್ರೇಯಸ್ಸನ್ನು ಬಯಸುವವನು ಉತ್ತಮರ ಸೇವೆಯನ್ನೇ ಮಾಡಬೇಕು. ಸಮಯ ಬಂದರೆ ಮಧ್ಯಮರ ಸೇವೆಯನ್ನೂ ಮಾಡಬಹುದು. ಆದರೆ ಅಧಮರ ಸೇವೆಯನ್ನು ಎಂದೂ ಮಾಡಬಾರದು.

05036021a ಪ್ರಾಪ್ನೋತಿ ವೈ ವಿತ್ತಮಸದ್ಬಲೇನ

        ನಿತ್ಯೋತ್ಥಾನಾತ್ಪ್ರಜ್ಞಾಯಾ ಪೌರುಷೇಣ|

05036021c ನ ತ್ವೇವ ಸಮ್ಯಗ್ಲಭತೇ ಪ್ರಶಂಸಾಂ

        ನ ವೃತ್ತಮಾಪ್ನೋತಿ ಮಹಾಕುಲಾನಾಂ||

ಅಧಮನು ಬಲವನ್ನುಪಯೋಗಿಸಿ, ನಿತ್ಯವೂ ಪ್ರಯತ್ನಪಟ್ಟು, ಬುದ್ಧಿಶಕ್ತಿಯಿಂದ, ಪೌರುಷದಿಂದ ವಿತ್ತವನ್ನು ಗಳಿಸಬಲ್ಲ. ಆದರೆ ಅವನು ತನ್ನ ನಡತೆಯಿಂದ ಮಹಾಕುಲಗಳ ಪ್ರಶಂಸೆಯನ್ನು ಪಡೆಯುವುದಿಲ್ಲ.”

05036022 ಧೃತರಾಷ್ಟ್ರ ಉವಾಚ|

05036022a ಮಹಾಕುಲಾನಾಂ ಸ್ಪೃಹಯಂತಿ ದೇವಾ

        ಧರ್ಮಾರ್ಥವೃದ್ಧಾಶ್ಚ ಬಹುಶ್ರುತಾಶ್ಚ|

05036022c ಪೃಚ್ಚಾಮಿ ತ್ವಾಂ ವಿದುರ ಪ್ರಶ್ನಮೇತಂ

        ಭವಂತಿ ವೈ ಕಾನಿ ಮಹಾಕುಲಾನಿ||

ಧೃತರಾಷ್ಟ್ರನು ಹೇಳಿದನು: “ವಿದುರ! ದೇವತೆಗಳು ಧರ್ಮಾರ್ಥಗಳಲ್ಲಿ ವೃದ್ಧಿಹೊಂದಿದ ಬಹುಶ್ರುತ ಮಹಾಕುಲಗಳನ್ನು ಪ್ರಶಂಸಿಸುತ್ತಾರೆ. ನಿನ್ನಲ್ಲಿ ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ಆ ಮಹಾಕುಲಗಳು ಹೇಗಾಗುತ್ತವೆ?”

05036023 ವಿದುರ ಉವಾಚ|

05036023a ತಪೋ ದಮೋ ಬ್ರಹ್ಮವಿತ್ತ್ವಂ ವಿತಾನಾಃ

        ಪುಣ್ಯಾ ವಿವಾಹಾಃ ಸತತಾನ್ನದಾನಂ|

05036023c ಯೇಷ್ವೇವೈತೇ ಸಪ್ತ ಗುಣಾ ಭವಂತಿ

        ಸಮ್ಯಗ್ವೃತ್ತಾಸ್ತಾನಿ ಮಹಾಕುಲಾನಿ||

ವಿದುರನು ಹೇಳಿದನು: “ತಪಸ್ಸು, ಆತ್ಮನಿಯಂತ್ರಣ, ಬ್ರಹ್ಮಜ್ಞಾನ, ಯಜ್ಞಗಳು, ಪುಣ್ಯವಿವಾಹಗಳು, ಸತತ ಅನ್ನದಾನ - ಈ ಏಳು ಗುಣಗಳು ಮಹಾಕುಲಗಳಲ್ಲಿ ಇರುತ್ತವೆ ಮತ್ತು ಅವುಗಳನ್ನು ನಡೆಸಿಕೊಂಡು ಬರುತ್ತವೆ.

05036024a ಯೇಷಾಂ ನ ವೃತ್ತಂ ವ್ಯಥತೇ ನ ಯೋನಿರ್

        ವೃತ್ತಪ್ರಸಾದೇನ ಚರಂತಿ ಧರ್ಮಂ|

05036024c ಯೇ ಕೀರ್ತಿಮಿಚ್ಚಂತಿ ಕುಲೇ ವಿಶಿಷ್ಟಾಂ

        ತ್ಯಕ್ತಾನೃತಾಸ್ತಾನಿ ಮಹಾಕುಲಾನಿ||

05036025a ಅನಿಜ್ಯಯಾವಿವಾಹೈಶ್ಚ ವೇದಸ್ಯೋತ್ಸಾದನೇನ ಚ|

05036025c ಕುಲಾನ್ಯಕುಲತಾಂ ಯಾಂತಿ ಧರ್ಮಸ್ಯಾತಿಕ್ರಮೇಣ ಚ||

ಯಜ್ಞಗಳನ್ನು ಮಾಡದೇ ಇರುವುದರಿಂದ, ಪುಣ್ಯ ವಿವಾಹಗಳನ್ನು ಮಾಡದೇ ಇರುವುದರಿಂದ, ವೇದಗಳನ್ನು ತ್ಯಜಿಸುವುದರಿಂದ, ಧರ್ಮವನ್ನು ಅತಿಕ್ರಮಿಸಿ ಮಹಾಕುಲಗಳು ಅಧಮ ಕುಲಗಳಾಗುತ್ತವೆ.

05036026a ದೇವದ್ರವ್ಯವಿನಾಶೇನ ಬ್ರಹ್ಮಸ್ವಹರಣೇನ ಚ|

05036026c ಕುಲಾನ್ಯಕುಲತಾಂ ಯಾಂತಿ ಬ್ರಾಹ್ಮಣಾತಿಕ್ರಮೇಣ ಚ||

ಇನ್ನೊಬ್ಬರು ಇರಿಸಿದ ದ್ರವ್ಯವನ್ನು ವಿನಾಶಗೊಳಿಸುವುದರಿಂದ, ಬ್ರಾಹ್ಮಣರನ್ನು ಅತಿಕ್ರಮಿಸುವುದರಿಂದ, ಬ್ರಾಹ್ಮಣರನ್ನು ಗೌರವಿಸದೇ ಇರುವುದರಿಂದ ಮಹಾಕುಲಗಳು ಕೀಳು ಕುಲಗಳಾಗುತ್ತವೆ.

05036027a ಬ್ರಾಹ್ಮಣಾನಾಂ ಪರಿಭವಾತ್ಪರಿವಾದಾಚ್ಚ ಭಾರತ|

05036027c ಕುಲಾನ್ಯಕುಲತಾಂ ಯಾಂತಿ ನ್ಯಾಸಾಪಹರಣೇನ ಚ||

ಭಾರತ! ಬ್ರಾಹ್ಮಣರ ಕುರಿತು ಕೆಟ್ಟದ್ದನ್ನು ಮಾತನಾಡುವುದರಿಂದ, ಅವರೊಂದಿಗೆ ವಾದಿಸುವುದರಿಂದ ಮತ್ತು ನ್ಯಾಸವನ್ನು ಅಪಹರಿಸುವುದರಿಂದ ಮಹಾಕುಲಗಳು ಕೀಳು ಕುಲಗಳಾಗುತ್ತವೆ.

05036028a ಕುಲಾನಿ ಸಮುಪೇತಾನಿ ಗೋಭಿಃ ಪುರುಷತೋಽಶ್ವತಃ|

05036028c ಕುಲಸಂಖ್ಯಾಂ ನ ಗಚ್ಚಂತಿ ಯಾನಿ ಹೀನಾನಿ ವೃತ್ತತಃ||

ತುಂಬಾ ಜನರಿರುವ, ಸಂಪತ್ತಿರುವ ಕುಲಗಳು ಉತ್ತಮ ನಡತೆಯಿಲ್ಲದಿದ್ದರೆ ಹೀನ ಕುಲಗಳೆಂತೆನಿಸಿಕೊಳ್ಳುತ್ತವೆ.

05036029a ವೃತ್ತತಸ್ತ್ವವಿಹೀನಾನಿ ಕುಲಾನ್ಯಲ್ಪಧನಾನ್ಯಪಿ|

05036029c ಕುಲಸಂಖ್ಯಾಂ ತು ಗಚ್ಚಂತಿ ಕರ್ಷಂತಿ ಚ ಮಹದ್ಯಶಃ||

ಸ್ವಲ್ಪವೇ ಜನರಿದ್ದರೂ, ಅಲ್ಪವೇ ಧನವಿದ್ದರೂ ಉತ್ತಮ ನಡತೆಯುಳ್ಳ ಕುಲವು ಮಹಾ ಯಶಸ್ಸನ್ನು ಪಡೆಯುತ್ತದೆ.

05036030a ಮಾ ನಃ ಕುಲೇ ವೈರಕೃತ್ಕಶ್ಚಿದಸ್ತು

        ರಾಜಾಮಾತ್ಯೋ ಮಾ ಪರಸ್ವಾಪಹಾರೀ|

05036030c ಮಿತ್ರದ್ರೋಹೀ ನೈಕೃತಿಕೋಽನೃತೀ ವಾ

        ಪೂರ್ವಾಶೀ ವಾ ಪಿತೃದೇವಾತಿಥಿಭ್ಯಃ||

ನಮ್ಮ ಕುಲದಲ್ಲಿ ಯಾರೂ ವೈರವನ್ನು ಬೆಳೆಸದಿರಲಿ, ರಾಜರಿಗೆ ಅಮಾತ್ಯರಾಗದಿರಲಿ, ಪರರ ಸ್ವತ್ತನ್ನು ಅಪಹರಿಸದಿರಲಿ, ಮಿತ್ರದ್ರೋಹಿಗಳಾಗದಿರಲಿ, ಮೋಸ ಮತ್ತು ಅಪ್ರಾಮಾಣಿಕರಾಗದಿರಲಿ, ಮತ್ತು ಪಿತೃಗಳಿಗೆ, ದೇವತೆಗಳಿಗೆ ಮತ್ತು ಅತಿಥಿಗಳಿಗೆ ನೀಡುವ ಮೊದಲೇ ಊಟಮಾಡದಿರಲಿ.

05036031a ಯಶ್ಚ ನೋ ಬ್ರಾಹ್ಮಣಂ ಹನ್ಯಾದ್ಯಶ್ಚ ನೋ ಬ್ರಾಹ್ಮಣಾನ್ದ್ವಿಷೇತ್|

05036031c ನ ನಃ ಸ ಸಮಿತಿಂ ಗಚ್ಚೇದ್ಯಶ್ಚ ನೋ ನಿರ್ವಪೇತ್ಕೃಷಿಂ||

ನಮ್ಮಲ್ಲಿ ಯಾರು ಬ್ರಾಹ್ಮಣರನ್ನು ಕೊಲ್ಲುತ್ತಾನೋ, ಯಾರು ಬ್ರಾಹ್ಮಣರನ್ನು ದ್ವೇಷಿಸುತ್ತಾನೋ, ಕೃಷಿಯನ್ನು ಬೆಂಬಲಿಸುವುದಿಲ್ಲವೋ ಅವರೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳಬಾರದು.

05036032a ತೃಣಾನಿ ಭೂಮಿರುದಕಂ ವಾಕ್ಚತುರ್ಥೀ ಚ ಸೂನೃತಾ|

05036032c ಸತಾಮೇತಾನಿ ಗೇಹೇಷು ನೋಚ್ಚಿದ್ಯಂತೇ ಕದಾ ಚನ||

ಚಾಪೆ, ನೆಲ, ನೀರು ಮತ್ತು ಸೌಮ್ಯವಾದ ಮಾತು ಇವು ನಾಲ್ಕು ಉತ್ತಮ ಮನೆಗಳಲ್ಲಿ ಎಂದೂ ಇರುತ್ತವೆ.

05036033a ಶ್ರದ್ಧಯಾ ಪರಯಾ ರಾಜನ್ನುಪನೀತಾನಿ ಸತ್ಕೃತಿಂ|

05036033c ಪ್ರವೃತ್ತಾನಿ ಮಹಾಪ್ರಾಜ್ಞಾ ಧರ್ಮಿಣಾಂ ಪುಣ್ಯಕರ್ಮಣಾಂ||

05036034a ಸೂಕ್ಷ್ಮೋಽಪಿ ಭಾರಂ ನೃಪತೇ ಸ್ಯಂದನೋ ವೈ

        ಶಕ್ತೋ ವೋಢುಂ ನ ತಥಾನ್ಯೇ ಮಹೀಜಾಃ|

05036034c ಏವಂ ಯುಕ್ತಾ ಭಾರಸಹಾ ಭವಂತಿ

        ಮಹಾಕುಲೀನಾ ನ ತಥಾನ್ಯೇ ಮನುಷ್ಯಾಃ||

ನೃಪತೇ! ಸೂಕ್ಷ್ಮವಾದರೂ ಹೇಗೆ ಗಂಧದ ಮರವು ಇತರ ಮರಗಳ ರೆಂಬೆಗಳ ಭಾರವನ್ನು ಹೊರಲು ಶಕ್ತವಾಗಿರುತ್ತದೆಯೋ ಹಾಗೆ ಮಹಾಕುಲಗಳು ಕೂಡ ಇತರ ಮನುಷ್ಯರ ಭಾರವನ್ನು ಹೊರಲು ಸಮರ್ಥವಾಗಿರುತ್ತವೆ.

05036035a ನ ತನ್ಮಿತ್ರಂ ಯಸ್ಯ ಕೋಪಾದ್ಬಿಭೇತಿ

        ಯದ್ವಾ ಮಿತ್ರಂ ಶಂಕಿತೇನೋಪಚರ್ಯಂ|

05036035c ಯಸ್ಮಿನ್ಮಿತ್ರೇ ಪಿತರೀವಾಶ್ವಸೀತ

        ತದ್ವೈ ಮಿತ್ರಂ ಸಂಗತಾನೀತರಾಣಿ||

ಯಾರ ಕೋಪಕ್ಕೆ ಭಯಪಡುತ್ತೇವೋ ಅಥವಾ ಯಾರೊಂದಿಗೆ ಭಯದಿಂದ ನಡೆದುಕೊಳ್ಳಬೇಕಾಗುತ್ತದೆಯೋ ಅವನು ಮಿತ್ರನಲ್ಲ. ಆದರೆ ಯಾವ ಮಿತ್ರನ ಮೇಲೆ ತಂದೆಯ ಮೇಲಿಡುವ ವಿಶ್ವಾಸವನ್ನು ಇಡಬಹುದೋ ಅವನೇ ನಿಜವಾದ ಮಿತ್ರ. ಇತರ ಸಂಬಂಧಗಳು ಮಿತ್ರತ್ವಗಳಲ್ಲ.

05036036a ಯದಿ ಚೇದಪ್ಯಸಂಬಂಧೋ ಮಿತ್ರಭಾವೇನ ವರ್ತತೇ|

05036036c ಸ ಏವ ಬಂಧುಸ್ತನ್ಮಿತ್ರಂ ಸಾ ಗತಿಸ್ತತ್ಪರಾಯಣಂ||

ರಕ್ತಸಂಬಂಧಿಯಲ್ಲದಿದ್ದರೂ ಯಾರು ಮಿತ್ರಭಾವದಿಂದ ವರ್ತಿಸುತ್ತಾನೋ ಅವನೇ ಬಂಧುವೂ, ಮಿತ್ರನೂ, ಗತಿಯೂ, ತತ್ಪರಾಯಣನೂ ಆಗಿರುತ್ತಾನೆ.

05036037a ಚಲಚಿತ್ತಸ್ಯ ವೈ ಪುಂಸೋ ವೃದ್ಧಾನನುಪಸೇವತಃ|

05036037c ಪಾರಿಪ್ಲವಮತೇರ್ನಿತ್ಯಮಧ್ರುವೋ ಮಿತ್ರಸಂಗ್ರಹಃ||

ಚಂಚಲ ಚಿತ್ತವನ್ನುಳ್ಳ, ವೃದ್ಧರ ಸೇವೆ ಮಾಡಿರದ ಅಥವಾ ಧೃಢವಾದ ಮನಸ್ಸಿಲ್ಲದ ಪುರುಷನು ಮಿತ್ರರನ್ನು ಮಾಡಿಕೊಳ್ಳಲಾರ.

05036038a ಚಲಚಿತ್ತಮನಾತ್ಮಾನಮಿಂದ್ರಿಯಾಣಾಂ ವಶಾನುಗಂ|

05036038c ಅರ್ಥಾಃ ಸಮತಿವರ್ತಂತೇ ಹಂಸಾಃ ಶುಷ್ಕಂ ಸರೋ ಯಥಾ||

ಚಂಚಲ ಚಿತ್ತವುಳ್ಳ, ತನ್ನಂತಿರದ, ಇಂದ್ರಿಯಗಳ ವಶಕ್ಕೆ ಸಿಲುಕಿದವನನ್ನು ಯಶಸ್ಸು, ಒಣಗಿದ ಸರೋವರವನ್ನು ಹಂಸಗಳು ಬಿಟ್ಟು ಹೋಗುವಂತೆ ತೊರೆಯುತ್ತದೆ.

05036039a ಅಕಸ್ಮಾದೇವ ಕುಪ್ಯಂತಿ ಪ್ರಸೀದಂತ್ಯನಿಮಿತ್ತತಃ|

05036039c ಶೀಲಮೇತದಸಾಧೂನಾಮಭ್ರಂ ಪಾರಿಪ್ಲವಂ ಯಥಾ||

ಅಸಾಧುಗಳಂತೆ ವರ್ತಿಸುವ, ಅಕಸ್ಮಾತ್ತಾಗಿ ಕೋಪಿಸಿಕೊಳ್ಳುವ, ಕಾರಣವಿಲ್ಲದೇ ಸಂತೋಷಗೊಳ್ಳುವವರು ಮೋಡಗಳಂತೆ ಚಂಚಲರಾಗಿತ್ತಾರೆ.

05036040a ಸತ್ಕೃತಾಶ್ಚ ಕೃತಾರ್ಥಾಶ್ಚ ಮಿತ್ರಾಣಾಂ ನ ಭವಂತಿ ಯೇ|

05036040c ತಾನ್ಮೃತಾನಪಿ ಕ್ರವ್ಯಾದಾಃ ಕೃತಘ್ನಾನ್ನೋಪಭುಂಜತೇ||

ಮಿತ್ರರಿಂದ ಸತ್ಕೃತರಾಗಿ ಕೃತಾರ್ಥರಾಗಿದ್ದರೂ ಕೃತಘ್ನರಾಗಿರುವವರನ್ನು ಸತ್ತನಂತರವೂ ಹದ್ದುಗಳು ತಿನ್ನುವುದಿಲ್ಲ.

05036041a ಅರ್ಥಯೇದೇವ ಮಿತ್ರಾಣಿ ಸತಿ ವಾಸತಿ ವಾ ಧನೇ|

05036041c ನಾನರ್ಥಯನ್ವಿಜಾನಾತಿ ಮಿತ್ರಾಣಾಂ ಸಾರಫಲ್ಗುತಾಂ||

ಧನಿಕನಾಗಿರಲಿ ಅಥವಾ ಬಡವನಾಗಿರಲಿ ಮಿತ್ರರಿಗೆ ಸಹಾಯಮಾಡಬೇಕು. ಸಹಾಯವನ್ನು ಕೇಳದೇ ಮಿತ್ರರ ಸಾರ ಪಕ್ವತೆಯು ತಿಳಿಯುವುದಿಲ್ಲ.

05036042a ಸಂತಾಪಾದ್ಭ್ರಶ್ಯತೇ ರೂಪಂ ಸಂತಾಪಾದ್ಭ್ರಶ್ಯತೇ ಬಲಂ|

05036042c ಸಂತಾಪಾದ್ಭ್ರಶ್ಯತೇ ಜ್ಞಾನಂ ಸಂತಾಪಾದ್ವ್ಯಾಧಿಮೃಚ್ಚತಿ||

ಸಂತಾಪವು ರೂಪವನ್ನು ಕುಂದಿಸುತ್ತದೆ, ಸಂತಾಪವು ಬಲವನ್ನು ಕುಂದಿಸುತ್ತದೆ, ಸಂತಾಪದಿಂದ ಜ್ಞಾನವು ಕುಂದುತ್ತದೆ, ಮತ್ತು ಸಂತಾಪದಿಂದ ವ್ಯಾಧಿಯು ಹೆಚ್ಚಾಗುತ್ತದೆ.

05036043a ಅನವಾಪ್ಯಂ ಚ ಶೋಕೇನ ಶರೀರಂ ಚೋಪತಪ್ಯತೇ|

05036043c ಅಮಿತ್ರಾಶ್ಚ ಪ್ರಹೃಷ್ಯಂತಿ ಮಾ ಸ್ಮ ಶೋಕೇ ಮನಃ ಕೃಥಾಃ||

ಶೋಕವು ಬೇಕಾದುದನ್ನು ಪಡೆಯಲು ಸಹಾಯಮಾಡುವುದಿಲ್ಲ. ಶರೀರವನ್ನು ಒಣಗಿಸುತ್ತದೆ. ಇದರಿಂದ ಅಮಿತ್ರರು ಹರ್ಷಪಡುತ್ತಾರೆ. ಆದುದರಿಂದ ಮನಸ್ಸಿನಲ್ಲಿ ಶೋಕಿಸಬೇಡ.

05036044a ಪುನರ್ನರೋ ಮ್ರಿಯತೇ ಜಾಯತೇ ಚ

        ಪುನರ್ನರೋ ಹೀಯತೇ ವರ್ಧತೇ ಪುನಃ|

05036044c ಪುನರ್ನರೋ ಯಾಚತಿ ಯಾಚ್ಯತೇ ಚ

        ಪುನರ್ನರಃ ಶೋಚತಿ ಶೋಚ್ಯತೇ ಪುನಃ||

ನರರು ಸಾಯುತ್ತಾರೆ ಮತ್ತು ಪುನಃ ಹುಟ್ಟುತ್ತಾರೆ. ನರರು ಬೀಳುತ್ತಾರೆ ಮತ್ತು ಪುನಃ ಏಳುತ್ತಾರೆ. ನರರು ಕೇಳುತ್ತಾರೆ ಮತ್ತು ಪುನಃ ಕೊಡುತ್ತಾರೆ. ನರರು ಶೋಕಿಸುತ್ತಾರೆ ಮತ್ತು ಪುನಃ ಶೋಕವನ್ನು ಕೊಡುತ್ತಾರೆ.

05036045a ಸುಖಂ ಚ ದುಃಖಂ ಚ ಭವಾಭವೌ ಚ

        ಲಾಭಾಲಾಭೌ ಮರಣಂ ಜೀವಿತಂ ಚ|

05036045c ಪರ್ಯಾಯಶಃ ಸರ್ವಮಿಹ ಸ್ಪೃಶಂತಿ

        ತಸ್ಮಾದ್ಧೀರೋ ನೈವ ಹೃಷ್ಯೇನ್ನ ಶೋಚೇತ್||

ಸುಖ ಮತ್ತು ದುಃಖ, ಇರುವುದು ಮತ್ತು ಇಲ್ಲದಿರುವುದು (ಭಾವ ಮತ್ತು ಅಭಾವ), ಲಾಭ-ನಷ್ಟ ಮತ್ತು ಮರಣ-ಜೀವನ ಇವೆಲ್ಲವೂ ಒಂದರ ನಂತರ ಇನ್ನೊಂದರಂತೆ ಬರುತ್ತಲೇ ಇರುತ್ತವೆ. ಆದುದರಿಂದ ಧೀರನಾದವನು ಹರ್ಷಪಡುವುದೂ ಇಲ್ಲ, ಶೋಕಿಸುವುದೂ ಇಲ್ಲ.

05036046a ಚಲಾನಿ ಹೀಮಾನಿ ಷಡಿಂದ್ರಿಯಾಣಿ

        ತೇಷಾಂ ಯದ್ಯದ್ವರ್ತತೇ ಯತ್ರ ಯತ್ರ|

05036046c ತತಸ್ತತಃ ಸ್ರವತೇ ಬುದ್ಧಿರಸ್ಯ

        ಚಿದ್ರೋದಕುಂಭಾದಿವ ನಿತ್ಯಮಂಭಃ||

ಈ ಆರು ಇಂದ್ರಿಯಗಳು ಯಾವಾಗಲೂ ಚಂಚಲ. ಛಿದ್ರಗಳಿರುವ ಕೊಡದಿಂದ ನೀರು ಹರಿದು ಹೋಗುವಂತೆ, ಇವುಗಳು ಎಲ್ಲೆಲ್ಲಿ ನಡೆಯುತ್ತವೆಯೋ ಅಲ್ಲಲ್ಲಿಗೆ ಬುದ್ಧಿಯು ಹರಿದು ಹೋಗುತ್ತದೆ.”

05036047 ಧೃತರಾಷ್ಟ್ರ ಉವಾಚ|

05036047a ತನುರುಚ್ಚಃ ಶಿಖೀ ರಾಜಾ ಮಿಥ್ಯೋಪಚರಿತೋ ಮಯಾ|

05036047c ಮಂದಾನಾಂ ಮಮ ಪುತ್ರಾಣಾಂ ಯುದ್ಧೇನಾಂತಂ ಕರಿಷ್ಯತಿ||

ಧೃತರಾಷ್ಟ್ರನು ಹೇಳಿದನು: “ಉರಿಯುವ ಅಗ್ನಿ ಜ್ವಾಲೆಯಂತಿರುವ ರಾಜ ಯುಧಿಷ್ಠಿರನಿಗೆ ನಾನು ಮೋಸಮಾಡಿದೆ. ಅವನು ನನ್ನ ಮಂದ ಪುತ್ರರನ್ನು ಯುದ್ಧದಲ್ಲಿ ಮುಗಿಸಿಬಿಡುತ್ತಾನೆ.

05036048a ನಿತ್ಯೋದ್ವಿಗ್ನಮಿದಂ ಸರ್ವಂ ನಿತ್ಯೋದ್ವಿಗ್ನಮಿದಂ ಮನಃ|

05036048c ಯತ್ತತ್ಪದಮನುದ್ವಿಗ್ನಂ ತನ್ಮೇ ವದ ಮಹಾಮತೇ||

ಇವೆಲ್ಲವೂ ನನ್ನನ್ನು ನಿತ್ಯವೂ ಉದ್ವಿಗ್ನಗೊಳಿಸುತ್ತಿದೆ, ಈ ಮನಸ್ಸು ನಿತ್ಯವೂ ಉದ್ವಿಗ್ನವಾಗಿರುತ್ತದೆ. ಮಹಾಮತೇ! ನನ್ನನ್ನು ಅನುದ್ವಿಗ್ನನನ್ನಾಗಿ ಮಾಡಬಲ್ಲ ಮಾತುಗಳನ್ನು ಹೇಳು.”

05036049 ವಿದುರ ಉವಾಚ|

05036049a ನಾನ್ಯತ್ರ ವಿದ್ಯಾತಪಸೋರ್ನಾನ್ಯತ್ರೇಂದ್ರಿಯನಿಗ್ರಹಾತ್|

05036049c ನಾನ್ಯತ್ರ ಲೋಭಸಂತ್ಯಾಗಾಚ್ಚಾಂತಿಂ ಪಶ್ಯಾಮಿ ತೇಽನಘ||

ವಿದುರನು ಹೇಳಿದನು: “ಅನಘ! ವಿದ್ಯೆ-ತಪಸ್ಸುಗಳಲ್ಲದೇ, ಇಂದ್ರಿಯ ನಿಗ್ರಹವಲ್ಲದೇ, ಲೋಭವನ್ನು ತ್ಯಜಿಸುವುದಲ್ಲದೇ ಬೇರೆ ಯಾವುದರಲ್ಲಿಯೂ ನಿನಗೆ ಶಾಂತಿಯು ಕಾಣುತ್ತಿಲ್ಲ.

05036050a ಬುದ್ಧ್ಯಾ ಭಯಂ ಪ್ರಣುದತಿ ತಪಸಾ ವಿಂದತೇ ಮಹತ್|

05036050c ಗುರುಶುಶ್ರೂಷಯಾ ಜ್ಞಾನಂ ಶಾಂತಿಂ ತ್ಯಾಗೇನ ವಿಂದತಿ||

ಬುದ್ಧಿಯಿಂದ ಭಯವು ನಾಶವಾಗುತ್ತದೆ, ತಪಸ್ಸಿನಿಂದ ಮಹತ್ತರವಾದುದನ್ನೂ ಸಾಧಿಸಬಹುದು, ಗುರುಶುಶ್ರೂಷೆಯಿಂದ ಜ್ಞಾನ ಮತ್ತು ತ್ಯಾಗದಿಂದ ಶಾಂತಿಯನ್ನು ಗಳಿಸಬಹುದು.

05036051a ಅನಾಶ್ರಿತಾ ದಾನಪುಣ್ಯಂ ವೇದಪುಣ್ಯಮನಾಶ್ರಿತಾಃ|

05036051c ರಾಗದ್ವೇಷವಿನಿರ್ಮುಕ್ತಾ ವಿಚರಂತೀಹ ಮೋಕ್ಷಿಣಃ||

05036052a ಸ್ವಧೀತಸ್ಯ ಸುಯುದ್ಧಸ್ಯ ಸುಕೃತಸ್ಯ ಚ ಕರ್ಮಣಃ|

05036052c ತಪಸಶ್ಚ ಸುತಪ್ತಸ್ಯ ತಸ್ಯಾಂತೇ ಸುಖಮೇಧತೇ||

ಸ್ವ-ಅಧ್ಯಯನ, ಧರ್ಮಯುಕ್ತವಾದ ಯುದ್ಧ, ಚೆನ್ನಾಗಿ ಮಾಡಿದ ಕೆಲಸ, ಉತ್ತಮವಾಗಿ ತಪಿಸಿದ ತಪಸ್ಸು ಅಂತ್ಯದಲ್ಲಿ ಸುಖವನ್ನು ನೀಡುತ್ತವೆ.

05036053a ಸ್ವಾಸ್ತೀರ್ಣಾನಿ ಶಯನಾನಿ ಪ್ರಪನ್ನಾ

        ನ ವೈ ಭಿನ್ನಾ ಜಾತು ನಿದ್ರಾಂ ಲಭಂತೇ|

05036053c ನ ಸ್ತ್ರೀಷು ರಾಜನ್ರತಿಮಾಪ್ನುವಂತಿ

        ನ ಮಾಗಧೈಃ ಸ್ತೂಯಮಾನಾ ನ ಸೂತೈಃ||

ರಾಜನ್! ಉತ್ತಮ ಹಾಸಿಗೆಗಳಿದ್ದರೂ ಸುಖನಿದ್ರೆಯನ್ನು ಪಡೆಯದ ಮತ್ತು ಬಂಧುಗಳೊಂದಿಗೆ ಜಗಳವಾಡುವವರು ಸ್ತ್ರೀಯರಿಂದ ರತಿಸುಖವನ್ನು ಪಡೆಯುವುದಿಲ್ಲ ಮತ್ತು ಸೂತ-ಮಾಗಧರಿಂದ ಸ್ತುತಿಸಲ್ಪಟ್ಟರೂ ಸಂತೋಷವನ್ನು ಹೊಂದುವುದಿಲ್ಲ.

05036054a ನ ವೈ ಭಿನ್ನಾ ಜಾತು ಚರಂತಿ ಧರ್ಮಂ

        ನ ವೈ ಸುಖಂ ಪ್ರಾಪ್ನುವಂತೀಹ ಭಿನ್ನಾಃ|

05036054c ನ ವೈ ಭಿನ್ನಾ ಗೌರವಂ ಮಾನಯಂತಿ

        ನ ವೈ ಭಿನ್ನಾಃ ಪ್ರಶಮಂ ರೋಚಯಂತಿ||

ಅಂಥವರು ಧರ್ಮದಲ್ಲಿ ನಡೆಯಲಾರರು. ಅಂಥವರು ಸುಖವನ್ನು ಹೊಂದುವುದಿಲ್ಲ. ಅಂಥವರು ಗೌರವ-ಮಾನಗಳನ್ನು ಪಡೆಯುವುದಿಲ್ಲ. ಮತ್ತು ಅಂಥವರಿಗೆ ಶಾಂತಿಯು ಇಷ್ಟವಾಗುವುದಿಲ್ಲ.

05036055a ನ ವೈ ತೇಷಾಂ ಸ್ವದತೇ ಪಥ್ಯಮುಕ್ತಂ

        ಯೋಗಕ್ಷೇಮಂ ಕಲ್ಪತೇ ನೋತ ತೇಷಾಂ|

05036055c ಭಿನ್ನಾನಾಂ ವೈ ಮನುಜೇಂದ್ರ ಪರಾಯಣಂ

        ನ ವಿದ್ಯತೇ ಕಿಂ ಚಿದನ್ಯದ್ವಿನಾಶಾತ್||

ಅವರಿಗೆ ಒಳ್ಳೆಯ ಮಾತುಗಳು ಇಷ್ಟವಾಗುವುದಿಲ್ಲ. ಅವರಿಗೆ ಇಲ್ಲದುದನ್ನು ಪಡೆಯಲೂ ಇದ್ದುದನ್ನು ಉಳಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಮನುಜೇಂದ್ರ! ಅಂಥವರಿಗೆ ವಿನಾಶವೊಂದನ್ನು ಬಿಟ್ಟರೆ ಬೇರೆ ಏನೂ ಗತಿಯು ತಿಳಿಯುವುದಿಲ್ಲ.

05036056a ಸಂಭಾವ್ಯಂ ಗೋಷು ಸಂಪನ್ನಂ ಸಂಭಾವ್ಯಂ ಬ್ರಾಹ್ಮಣೇ ತಪಃ|

05036056c ಸಂಭಾವ್ಯಂ ಸ್ತ್ರೀಷು ಚಾಪಲ್ಯಂ ಸಂಭಾವ್ಯಂ ಜ್ಞಾತಿತೋ ಭಯಂ||

ಗೋವುಗಳಲ್ಲಿ ಸಂಪನ್ನತೆಯು ಸಂಭವಿಸಿರುವಂತೆ, ಬ್ರಾಹ್ಮಣರಲ್ಲಿ ತಪಸ್ಸು ಸಂಭವಿಸಿರುವಂತೆ, ಸ್ತ್ರೀಯರಲ್ಲಿ ಚಾಪಲ್ಯವು ಸಂಭವಿಸಿರುವಂತೆ, ಬಂಧುಗಳಿಂದ ಭಯವು ಸಂಭವಿಸುತ್ತದೆ.

05036057a ತಂತವೋಽಪ್ಯಾಯತಾ ನಿತ್ಯಂ ತಂತವೋ ಬಹುಲಾಃ ಸಮಾಃ|

05036057c ಬಹೂನ್ಬಹುತ್ವಾದಾಯಾಸಾನ್ಸಹಂತೀತ್ಯುಪಮಾ ಸತಾಂ||

05036058a ಧೂಮಾಯಂತೇ ವ್ಯಪೇತಾನಿ ಜ್ವಲಂತಿ ಸಹಿತಾನಿ ಚ|

05036058c ಧೃತರಾಷ್ಟ್ರೋಲ್ಮುಕಾನೀವ ಜ್ಞಾತಯೋ ಭರತರ್ಷಭ||

ಧೃತರಾಷ್ಟ್ರ! ಭರತರ್ಷಭ! ಒಂದೇ ಅಳತೆಯ ಸಣ್ಣ ಸಣ್ಣ ದಾರಗಳನ್ನು ಒಟ್ಟುಸೇರಿಸಿದ ಜಾಲವು ಬಹಳಷ್ಟು ಭಾರದ, ವೇಗವಾಗಿ ಹೋಗಬಲ್ಲ ವಸ್ತುವನ್ನು ಹೊರಬಲ್ಲದು. ಹಾಗೆಯೇ ಕಟ್ಟಿಗೆಗಳು ಒಂದೊಂದಾಗಿದ್ದರೆ ಕೇವಲ ಹೊಗೆಯನ್ನು ನೀಡುತ್ತವೆ. ಆದರೆ ಒಟ್ಟಾಗಿದ್ದರೆ ಚೆನ್ನಾಗಿ ಉರಿಯುತ್ತವೆ. ಬಂಧುಗಳು ಹಾಗೆ.

05036059a ಬ್ರಾಹ್ಮಣೇಷು ಚ ಯೇ ಶೂರಾಃ ಸ್ತ್ರೀಷು ಜ್ಞಾತಿಷು ಗೋಷು ಚ|

05036059c ವೃಂತಾದಿವ ಫಲಂ ಪಕ್ವಂ ಧೃತರಾಷ್ಟ್ರ ಪತಂತಿ ತೇ||

ಧೃತರಾಷ್ಟ್ರ! ಬ್ರಾಹ್ಮಣರನ್ನು, ಸ್ತ್ರೀಯರನ್ನು, ಬಂಧುಗಳನ್ನು ಮತ್ತು ಗೋವುಗಳನ್ನು ಕಾಡಿಸುವವರು ಗಳಿತ ಹಣ್ಣಿನಂತೆ ರೆಂಬೆಯಿಂದ ಬೀಳುತ್ತಾರೆ.

05036060a ಮಹಾನಪ್ಯೇಕಜೋ ವೃಕ್ಷೋ ಬಲವಾನ್ಸುಪ್ರತಿಷ್ಠಿತಃ|

05036060c ಪ್ರಸಹ್ಯ ಏವ ವಾತೇನ ಶಾಖಾಸ್ಕಂಧಂ ವಿಮರ್ದಿತುಂ||

ಒಂಟಿಯಾಗಿರುವ ಮರವು, ಎಷ್ಟೇ ದೊಡ್ಡದಾಗಿದ್ದರೂ, ಬಲಶಾಲಿಯಾಗಿದ್ದರೂ, ಚೆನ್ನಾಗಿ ಬೇರೂರಿದ್ದರೂ, ಭಿರುಗಾಳಿಗೆ ಸಿಲುಕಿ ಬೇಗ ರೆಂಬೆ-ಕಾಂಡಗಳು ಮುರಿದು ಕೆಳಗುರುಳುತ್ತದೆ.

05036061a ಅಥ ಯೇ ಸಹಿತಾ ವೃಕ್ಷಾಃ ಸಂಘಶಃ ಸುಪ್ರತಿಷ್ಠಿತಾಃ|

05036061c ತೇ ಹಿ ಶೀಘ್ರತಮಾನ್ವಾತಾನ್ಸಹಂತೇಽನ್ಯೋನ್ಯಸಂಶ್ರಯಾತ್||

ಆದರೆ ಒಟ್ಟಿಗೆ ಬೆಳೆದಿರುವ, ಒಟ್ಟಿಗೇ ಬೇರೂರಿರುವ ಮರಗಳು, ಪರಸ್ಪರರ ಬೆಂಬಲದಿಂದ, ಅಂಥಹ ಶೀಘ್ರವಾಗಿ ಬೀಸುವ ಗಾಳಿಗಳನ್ನು ಸಹಿಸಿಕೊಳ್ಳಬಲ್ಲವು.

05036062a ಏವಂ ಮನುಷ್ಯಮಪ್ಯೇಕಂ ಗುಣೈರಪಿ ಸಮನ್ವಿತಂ|

05036062c ಶಕ್ಯಂ ದ್ವಿಷಂತೋ ಮನ್ಯಂತೇ ವಾಯುರ್ದ್ರುಮಮಿವೈಕಜಂ||

ಹೀಗೆ ಒಂಟಿಯಾಗಿರುವ ಮನುಷ್ಯನನ್ನು, ಎಷ್ಟೇ ಗುಣಗಳಿಂದ ಕೂಡಿದ್ದರೂ, ಒಂಟಿಮರವನ್ನು ಗಾಳಿಯು ಉರುಳಿಸಬಹುದಂತೆ ಉರುಳಿಸಬಹುದು ಎಂದು ಶತ್ರುಗಳು ತಿಳಿದುಕೊಳ್ಳುತ್ತಾರೆ.

05036063a ಅನ್ಯೋನ್ಯಸಮುಪಷ್ಟಂಭಾದನ್ಯೋನ್ಯಾಪಾಶ್ರಯೇಣ ಚ|

05036063c ಜ್ಞಾತಯಃ ಸಂಪ್ರವರ್ಧಂತೇ ಸರಸೀವೋತ್ಪಲಾನ್ಯುತ||

ಬಂಧುಗಳು ಅನ್ಯೋನ್ಯರನ್ನು ಅವಲಂಬಿಸಿಕೊಂಡು ಅನ್ಯೋನ್ಯರಿಗೆ ಬೆಂಬಲವನ್ನು ನೀಡುತ್ತಾ ಸರೋವರದಲ್ಲಿರುವ ಕಮಲಗಳಂತೆ ಬೆಳೆಯುತ್ತಾರೆ.

05036064a ಅವಧ್ಯಾ ಬ್ರಾಹ್ಮಣಾ ಗಾವಃ ಸ್ತ್ರಿಯೋ ಬಾಲಾಶ್ಚ ಜ್ಞಾತಯಃ|

05036064c ಯೇಷಾಂ ಚಾನ್ನಾನಿ ಭುಂಜೀತ ಯೇ ಚ ಸ್ಯುಃ ಶರಣಾಗತಾಃ||

ಇವರು ಅವಧ್ಯರು: ಬ್ರಾಹ್ಮಣರು, ಗೋವುಗಳು, ಸ್ತ್ರೀಯರು, ಬಾಲಕರು, ಸಂಬಂಧಿಗಳು, ಯಾರ ಅನ್ನವನ್ನು ಉಂಡಿದ್ದೇವೋ ಅವರು ಮತ್ತು ಶರಣಾಗತರಾದವರು.

05036065a ನ ಮನುಷ್ಯೇ ಗುಣಃ ಕಶ್ಚಿದನ್ಯೋ ಧನವತಾಮಪಿ|

05036065c ಅನಾತುರತ್ವಾದ್ಭದ್ರಂ ತೇ ಮೃತಕಲ್ಪಾ ಹಿ ರೋಗಿಣಃ||

ನಿನಗೆ ಮಂಗಳವಾಗಲಿ! ಕೆಲವು ಮನುಷ್ಯರು ಧನವಂತರಾಗಿದ್ದರೂ ಅನಾರೋಗ್ಯದಿಂದಾಗ ಉತ್ತಮ ಗುಣದ ಜೀವನವನ್ನು ಬದುಕಲಿಕ್ಕಾಗುವುದಿಲ್ಲ. ಏಕೆಂದರೆ, ರೋಗಿಯು ಸತ್ತಹಾಗೆಯೇ.

05036066a ಅವ್ಯಾಧಿಜಂ ಕಟುಕಂ ಶೀರ್ಷರೋಗಂ

        ಪಾಪಾನುಬಂಧಂ ಪರುಷಂ ತೀಕ್ಷ್ಣಮುಗ್ರಂ|

05036066c ಸತಾಂ ಪೇಯಂ ಯನ್ನ ಪಿಬಂತ್ಯಸಂತೋ

        ಮನ್ಯುಂ ಮಹಾರಾಜ ಪಿಬ ಪ್ರಶಾಮ್ಯ||

ಸಿಟ್ಟು ವ್ಯಾಧಿಯಿಂದ ಹುಟ್ಟಿರದ, ಕಹಿಯಾದ ತಲೆನೋವು. ಪಾಪಕ್ಕೆ ಅಂಟಿಕೊಂಡಿರುತ್ತದೆ. ಖಾರ, ತೀಕ್ಷ್ಣ ಮತ್ತು ಉಗ್ರವಾದುದು. ಇದನ್ನು ಕುಡಿದು ಸಂತರೂ ಅಸಂತರಾಗುತ್ತಾರೆ. ಮಹಾರಾಜ! ಅದನ್ನು ನುಂಗಿ ಶಾಂತನಾಗು.

05036067a ರೋಗಾರ್ದಿತಾ ನ ಫಲಾನ್ಯಾದ್ರಿಯಂತೇ

        ನ ವೈ ಲಭಂತೇ ವಿಷಯೇಷು ತತ್ತ್ವಂ|

05036067c ದುಃಖೋಪೇತಾ ರೋಗಿಣೋ ನಿತ್ಯಮೇವ

        ನ ಬುಧ್ಯಂತೇ ಧನಭೋಗಾನ್ನ ಸೌಖ್ಯಂ||

ರೋಗದಿಂದ ಭಾದಿತರಾದವರು ಫಲಗಳನ್ನು ಸವಿಯುವುದಿಲ್ಲ. ವಿಷಯ ಭೋಗಗಳಲ್ಲಿರುವ ಸಾರವನ್ನು ಸವಿಯುವುದಿಲ್ಲ. ರೋಗಿಗಳು ನಿತ್ಯವೂ ದುಃಖಿಗಳಾಗಿರುತ್ತಾರೆ. ಧನ-ಭೋಗಗಳ ಸುಖವನ್ನೇ ತಿಳಿಯದವರಾಗಿರುತ್ತಾರೆ.

05036068a ಪುರಾ ಹ್ಯುಕ್ತೋ ನಾಕರೋಸ್ತ್ವಂ ವಚೋ ಮೇ

        ದ್ಯೂತೇ ಜಿತಾಂ ದ್ರೌಪದೀಂ ಪ್ರೇಕ್ಷ್ಯ ರಾಜನ್|

05036068c ದುರ್ಯೋಧನಂ ವಾರಯೇತ್ಯಕ್ಷವತ್ಯಾಂ

        ಕಿತವತ್ವಂ ಪಂಡಿತಾ ವರ್ಜಯಂತಿ||

ರಾಜನ್! ಹಿಂದೆ ದ್ಯೂತದಲ್ಲಿ ದ್ರೌಪದಿಯನ್ನು ಗೆದ್ದಾಗ ನಾನು ನಿನಗೆ ಹೇಳಿದ್ದೆ: ದುರ್ಯೋಧನನನ್ನು ನಿಲ್ಲಿಸು. ಮೋಸದ ಜೂಜನ್ನು ಪಂಡಿತರು ತಿರಸ್ಕರಿಸುತ್ತಾರೆ. ಆದರೆ ನೀನು ಅದನ್ನು ಮಾಡಲಿಲ್ಲ.

05036069a ನ ತದ್ಬಲಂ ಯನ್ಮೃದುನಾ ವಿರುಧ್ಯತೇ

        ಮಿಶ್ರೋ ಧರ್ಮಸ್ತರಸಾ ಸೇವಿತವ್ಯಃ|

05036069c ಪ್ರಧ್ವಂಸಿನೀ ಕ್ರೂರಸಮಾಹಿತಾ ಶ್ರೀರ್

        ಮೃದುಪ್ರೌಢಾ ಗಚ್ಚತಿ ಪುತ್ರಪೌತ್ರಾನ್||

ಮೃದುತ್ವವನ್ನು ವಿರೋಧಿಸುವುದು ಬಲವಲ್ಲ. ಆದರೆ ಅವುಗಳ ಮಿಶ್ರಣವು ಉತ್ತಮ ಧರ್ಮ. ಅದನ್ನು ಪಾಲಿಸಬೇಕು. ಕ್ರೂರತೆಯಿಂದ ಒಟ್ಟುಗೂಡಿಸಿದ ಸಂಪತ್ತು ನಾಶವಾಗುವಂಥಹುದು. ಆದರೆ ಮೃದುತ್ವ ಮತ್ತು ಪ್ರೌಢತೆಗಳಿಂದ ಒಟ್ಟುಗೂಡಿಸಿದ ಧನವು ಮಕ್ಕಳು-ಮೊಮ್ಮಕ್ಕಳಿಗೂ ಬರುತ್ತದೆ.

05036070a ಧಾರ್ತರಾಷ್ಟ್ರಾಃ ಪಾಂಡವಾನ್ಪಾಲಯಂತು

        ಪಾಂಡೋಃ ಸುತಾಸ್ತವ ಪುತ್ರಾಂಶ್ಚ ಪಾಂತು|

05036070c ಏಕಾರಿಮಿತ್ರಾಃ ಕುರವೋ ಹ್ಯೇಕಮಂತ್ರಾ

        ಜೀವಂತು ರಾಜನ್ಸುಖಿನಃ ಸಮೃದ್ಧಾಃ||

ರಾಜನ್! ಧಾರ್ತರಾಷ್ಟ್ರರು ಪಾಂಡವರನ್ನು ಪಾಲಿಸಲಿ. ಪಾಂಡುವಿನ ಮಕ್ಕಳು ನಿನ್ನ ಮಕ್ಕಳನ್ನು ಪಾಲಿಸಲಿ. ಒಂದೇ ಶತ್ರು-ಮಿತ್ರರನ್ನು ಹೊಂದಿ, ಒಂದೇ ಯೋಚನೆಯಿಂದ ಕುರುಗಳು ಸಮೃದ್ಧರಾಗಿ ಸುಖಿಗಳಾಗಿರಲಿ.

05036071a ಮೇಢೀಭೂತಃ ಕೌರವಾಣಾಂ ತ್ವಮದ್ಯ

        ತ್ವಯ್ಯಾಧೀನಂ ಕುರುಕುಲಮಾಜಮೀಢ|

05036071c ಪಾರ್ಥಾನ್ಬಾಲಾನ್ವನವಾಸಪ್ರತಪ್ತಾನ್

        ಗೋಪಾಯಸ್ವ ಸ್ವಂ ಯಶಸ್ತಾತ ರಕ್ಷನ್||

ಇಂದು ನೀನು ಕೌರವರ ರಕ್ಷಕ. ಅಜಮೀಢ! ಕುರುಕುಲವು ನಿನ್ನ ಅಧೀನದಲ್ಲಿದೆ. ನಿನ್ನ ಕೀರ್ತಿಯನ್ನೂ ರಕ್ಷಿಸಿಕೊಂಡು ವನವಾಸದಿಂದ ಸೋತುಹೋಗಿರುವ ಬಾಲಕ ಪಾರ್ಥರನ್ನು ಪಾಲಿಸು.

05036072a ಸಂಧತ್ಸ್ವ ತ್ವಂ ಕೌರವಾನ್ಪಾಂಡುಪುತ್ರೈರ್

        ಮಾ ತೇಂಽತರಂ ರಿಪವಃ ಪ್ರಾರ್ಥಯಂತು|

05036072c ಸತ್ಯೇ ಸ್ಥಿತಾಸ್ತೇ ನರದೇವ ಸರ್ವೇ

        ದುರ್ಯೋಧನಂ ಸ್ಥಾಪಯ ತ್ವಂ ನರೇಂದ್ರ||

ಕೌರವ! ಪಾಂಡುಪುತ್ರರೊಂದಿಗೆ ನೀನು ಸಂಧಿಯನ್ನು ಮಾಡಿಕೋ. ಶತ್ರುಗಳಿಗೆ ನಿನ್ನ ದರ್ಬಲತೆಯನ್ನು ತೋರಿಸಬೇಡ. ನರದೇವ! ನರೇಂದ್ರ! ಅವರೆಲ್ಲರೂ ಸತ್ಯದಲ್ಲಿ ನೆಲೆಸಿದ್ದಾರೆ. ನೀನು ದುರ್ಯೋಧನನನ್ನು ತಡೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಣಿ ವಿದುರನೀತಿವಾಕ್ಯೇ ಷಟ್‌ತ್ರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವದಲ್ಲಿ ವಿದುರನೀತಿವಾಕ್ಯದಲ್ಲಿ ಮೂವತ್ತಾರನೆಯ ಅಧ್ಯಾಯವು.

Image result for indian motifs diyas

[1] ಮಾತನಾಡುವುದಕ್ಕಿಂತ ಮಾತನಾಡದೇ ಇರುವುದು ಉತ್ತಮವೆಂದು ಹೇಳುತ್ತಾರೆ. ಮಾತನಾಡಲೇ ಬೇಕಾದರೆ ಸತ್ಯವನ್ನು ಹೇಳಬೇಕು. ಸತ್ಯವನ್ನೇ ಹೇಳಬೇಕಾಗಿಬಂದರೆ ಪ್ರಿಯವಾದ ಸತ್ಯವನ್ನು ಹೇಳಬೇಕು. ಪ್ರಿಯವಾದ ಸತ್ಯವನ್ನೇ ಹೇಳಬೇಕಾಗಿಬಂದರೆ ಧರ್ಮವಾದುದನ್ನು ಹೇಳಬೇಕು.

Comments are closed.