Shanti Parva: Chapter 289

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೮೯

ಯೋಗವಿಧಿ

ಸಾಂಖ್ಯಕ್ಕೂ ಮತ್ತು ಯೋಗಕ್ಕೂ ಇರುವ ವ್ಯತ್ಯಾಸ; ಯೋಗಮಾರ್ಗದ ಸ್ವರೂಪ, ಸಾಧನೆ, ಫಲ ಮತ್ತು ಪ್ರಭಾವಗಳು (೧-೬೨).

12289001 ಯುಧಿಷ್ಠಿರ ಉವಾಚ|

12289001a ಸಾಂಖ್ಯೇ ಯೋಗೇ ಚ ಮೇ ತಾತ ವಿಶೇಷಂ ವಕ್ತುಮರ್ಹಸಿ|

12289001c ತವ ಸರ್ವಜ್ಞ ಸರ್ವಂ ಹಿ ವಿದಿತಂ ಕುರುಸತ್ತಮ||

ಯುಧಿಷ್ಠಿರನು ಹೇಳಿದನು: “ಅಯ್ಯಾ! ಕುರುಸತ್ತಮ! ಸಾಂಖ್ಯ ಮತ್ತು ಯೋಗಗಳಲ್ಲಿರುವ ವಿಶೇಷಗಳನ್ನು ಹೇಳಬೇಕು. ನೀನು ಸರ್ವಜ್ಞ. ನಿನಗೆ ಎಲ್ಲವೂ ತಿಳಿದಿದೆ.”

12289002 ಭೀಷ್ಮ ಉವಾಚ|

12289002a ಸಾಂಖ್ಯಾಃ ಸಾಂಖ್ಯಂ ಪ್ರಶಂಸಂತಿ ಯೋಗಾ ಯೋಗಂ ದ್ವಿಜಾತಯಃ|

12289002c ವದಂತಿ ಕಾರಣೈಃ ಶ್ರೈಷ್ಠ್ಯಂ ಸ್ವಪಕ್ಷೋದ್ಭಾವನಾಯ ವೈ||

ಭೀಷ್ಮನು ಹೇಳಿದನು: “ಸಾಂಖ್ಯರು ಸಾಂಖ್ಯವನ್ನೇ ಪ್ರಶಂಸಿಸುತ್ತಾರೆ ಮತ್ತು ಯೋಗವನ್ನು ತಿಳಿದ ದ್ವಿಜರು ಯೋಗವನ್ನೇ ಪ್ರಶಂಸಿಸುತ್ತಾರೆ. ತಮ್ಮ ಪಕ್ಷಗಳು ಶ್ರೇಷ್ಠ ಎನ್ನುವುದಕ್ಕೆ ಉತ್ತಮ ಕಾರಣಗಳನ್ನೂ ನೀಡುತ್ತಾರೆ.

12289003a ಅನೀಶ್ವರಃ ಕಥಂ ಮುಚ್ಯೇದಿತ್ಯೇವಂ ಶತ್ರುಕರ್ಶನ|

12289003c ವದಂತಿ ಕಾರಣೈಃ ಶ್ರೈಷ್ಠ್ಯಂ ಯೋಗಾಃ ಸಮ್ಯಙ್ಮನೀಷಿಣಃ||

ಶತ್ರುಕರ್ಶನ! ಯೋಗವನ್ನು ಚೆನ್ನಾಗಿ ತಿಳಿದ ಮನೀಷಿಣರು ಕಾರಣಗಳನ್ನು ಕೊಟ್ಟು ಯೋಗದ ಹಿರಿಮೆಯನ್ನು ಪ್ರತಿಪಾದಿಸುತ್ತಾ ಈಶ್ವರನ ಅಸ್ತಿತ್ವವನ್ನೇ ಒಪ್ಪಿಕೊಳ್ಳದಿದ್ದರೆ ಮುಕ್ತಿಯು ಹೇಗಾಗುತ್ತದೆ ಎಂದು ಪ್ರಶ್ನಿಸುತ್ತಾರೆ.

12289004a ವದಂತಿ ಕಾರಣಂ ಚೇದಂ ಸಾಂಖ್ಯಾಃ ಸಮ್ಯಗ್ದ್ವಿಜಾತಯಃ|

12289004c ವಿಜ್ಞಾಯೇಹ ಗತೀಃ ಸರ್ವಾ ವಿರಕ್ತೋ ವಿಷಯೇಷು ಯಃ||

12289005a ಊರ್ಧ್ವಂ ಸ ದೇಹಾತ್ಸುವ್ಯಕ್ತಂ ವಿಮುಚ್ಯೇದಿತಿ ನಾನ್ಯಥಾ|

12289005c ಏತದಾಹುರ್ಮಹಾಪ್ರಾಜ್ಞಾಃ ಸಾಂಖ್ಯಂ ವೈ ಮೋಕ್ಷದರ್ಶನಮ್||

ಸಾಂಖ್ಯಮತವನ್ನು ತಿಳಿದ ಉತ್ತಮ ಜ್ಞಾನಿಗಳು ತಮ್ಮ ಮತವನ್ನು ಯುಕ್ತಿಯುಕ್ತ ಕಾರಣಗಳನ್ನಿತ್ತು ಹೀಗೆ ಪ್ರತಿಪಾದಿಸುತ್ತಾರೆ: ಊರ್ಧ್ವಗತಿ, ಮಧ್ಯಗತಿ ಮತ್ತು ಅಧೋಗತಿ ಇವುಗಳ ಸ್ವರೂಪ, ಕಾರಣ, ನಿವಾರಣೋಪಾಯಗಳನ್ನು ತಿಳಿದುಕೊಂಡು ವಿಷಯಸುಖಗಳಿಂದ ವಿರಕ್ತನಾಗುವವನು ದೇಹತ್ಯಾಗದ ನಂತರ ಮುಕ್ತನಾಗುತ್ತಾನೆ. ಈ ವಿಷಯವು ಸಾಕ್ಷಾತ್ತಾಗಿ ಎಲ್ಲರ ಅನುಭವಕ್ಕೂ ಬರುವಂಥಹುದು. ಬೇರೆ ಯಾವ ಉಪಾಯದಿಂದಲೂ ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲ. ಹೀಗೆ ಮಹಾಪ್ರಾಜ್ಞ ಸಾಂಖ್ಯರು ಮೋಕ್ಷವನ್ನು ತೋರಿಸಿಕೊಡುತ್ತಾರೆ.

12289006a ಸ್ವಪಕ್ಷೇ ಕಾರಣಂ ಗ್ರಾಹ್ಯಂ ಸಮರ್ಥಂ ವಚನಂ ಹಿತಮ್|

12289006c ಶಿಷ್ಟಾನಾಂ ಹಿ ಮತಂ ಗ್ರಾಹ್ಯಂ ತ್ವದ್ವಿಧೈಃ ಶಿಷ್ಟಸಂಮತೈಃ||

ಆಯಾ ಪಕ್ಷದವರಿಗೆ ಆಯಾ ಪಕ್ಷದ ವಿದ್ವಾಂಸರು ನೀಡುವ ಯುಕ್ತಿಯುಕ್ತ ಕಾರಣಗಳು ಗ್ರಾಹ್ಯವಾಗುತ್ತವೆ. ಹಿತವೂ ಆಗುತ್ತವೆ. ಆದರೆ ಶಿಷ್ಟಸಂಮತನಾದ ನಿನ್ನಂಥವರಿಗೆ ಶಿಷ್ಟರ ಮತವನ್ನೇ ಗ್ರಹಿಸಬೇಕು.

12289007a ಪ್ರತ್ಯಕ್ಷಹೇತವೋ ಯೋಗಾಃ ಸಾಂಖ್ಯಾಃ ಶಾಸ್ತ್ರವಿನಿಶ್ಚಯಾಃ|

12289007c ಉಭೇ ಚೈತೇ ಮತೇ ತತ್ತ್ವೇ ಮಮ ತಾತ ಯುಧಿಷ್ಠಿರ||

ಯೋಗವಿದ್ವಾಂಸರು ಪ್ರತ್ಯಕ್ಷ ಪ್ರಮಾಣವನ್ನೇ ಪ್ರಧಾನವಾಗಿಟ್ಟುಕೊಂಡಿರುತ್ತಾರೆ. ಸಾಂಖ್ಯರು ಶಾಸ್ತ್ರಪ್ರಮಾಣದಲ್ಲಿಯೇ ನಿಶ್ಚಯ ಬುದ್ಧಿಯುಳ್ಳವರಾಗಿರುತ್ತಾರೆ. ಯುಧಿಷ್ಠಿರ! ಈ ಎರಡೂ ಮತಗಳೂ ತಾತ್ತ್ವಿಕವಾಗಿವೆ ಎಂದು ನನ್ನ ಅಭಿಪ್ರಾಯ.

12289008a ಉಭೇ ಚೈತೇ ಮತೇ ಜ್ಞಾನೇ ನೃಪತೇ ಶಿಷ್ಟಸಂಮತೇ|

12289008c ಅನುಷ್ಠಿತೇ ಯಥಾಶಾಸ್ತ್ರಂ ನಯೇತಾಂ ಪರಮಾಂ ಗತಿಮ್||

ನೃಪತೇ! ಈ ಎರಡೂ ಮತಗಳೂ ಶಿಷ್ಟಸಂಮತವಾಗಿವೆ. ಯಥಾಶಾಸ್ತ್ರವಾಗಿ ಅನುಷ್ಠಾನ ಮಾಡಿದರೆ ಇವೆರಡೂ ಪರಮ ಗತಿಗೆ ಕೊಂಡೊಯ್ಯುತ್ತವೆ.

12289009a ತುಲ್ಯಂ ಶೌಚಂ ತಯೋರ್ಯುಕ್ತಂ[1] ದಯಾ ಭೂತೇಷು ಚಾನಘ|

12289009c ವ್ರತಾನಾಂ ಧಾರಣಂ ತುಲ್ಯಂ ದರ್ಶನಂ ನ ಸಮಂ ತಯೋಃ||

ಅನಘ! ಎರಡೂ ಅಂತಃಶುದ್ಧಿ-ಬಹಿಃಶುದ್ಧಿಗಳು ಮತ್ತು ಎಲ್ಲವುಗಳ ಮೇಲಿನ ದಯೆಯ ಕುರಿತು ಹೇಳುತ್ತವೆ. ವ್ರತನಿಯಮಗಳೂ ಕೂಡ ಈ ಎರಡೂ ದರ್ಶನಗಳಲ್ಲಿ ಸಮನಾಗಿವೇ ಇವೆ. ಆದರೆ ತತ್ತ್ವದಲ್ಲಿ ಎರಡಕ್ಕೂ ಮತಭೇದವಿದೆ.”

12289010 ಯುಧಿಷ್ಠಿರ ಉವಾಚ|

12289010a ಯದಿ ತುಲ್ಯಂ ವ್ರತಂ ಶೌಚಂ ದಯಾ ಚಾತ್ರ ಪಿತಾಮಹ|

12289010c ತುಲ್ಯಂ ನ ದರ್ಶನಂ ಕಸ್ಮಾತ್ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಒಂದುವೇಳೆ ವ್ರತ, ಶೌಚ ಮತ್ತು ದಯೆಗಳ ವಿಷಯದಲ್ಲಿ ಎರಡೂ ಸಮನಾಗಿದ್ದರೆ ದರ್ಶನದಲ್ಲಿ ಅವುಗಳು ಹೇಗೆ ಸಮನಲ್ಲ? ಪಿತಾಮಹ! ಅದನ್ನು ನನಗೆ ಹೇಳು.”

12289011 ಭೀಷ್ಮ ಉವಾಚ|

12289011a ರಾಗಂ ಮೋಹಂ ತಥಾ ಸ್ನೇಹಂ ಕಾಮಂ ಕ್ರೋಧಂ ಚ ಕೇವಲಮ್|

12289011c ಯೋಗಾಚ್ಚಿತ್ತ್ವಾದಿತೋ ದೋಷಾನ್ಪಂಚೈತಾನ್ಪ್ರಾಪ್ನುವಂತಿ ತತ್||

ಭೀಷ್ಮನು ಹೇಳಿದನು: “ಯೋಗಿಯು ಕೇವಲ ಯೋಗಬಲದಿಂದ ರಾಗ, ಮೋಹ, ಸ್ನೇಹ, ಕಾಮ, ಕ್ರೋಧ – ಈ ಐದು ದೋಷಗಳನ್ನು ಮೂಲೋಚ್ಛಾಟನೆ ಮಾಡಿ ಪರಮ ಪದವನ್ನು ಸೇರುತ್ತಾನೆ.

12289012a ಯಥಾ ಚಾನಿಮಿಷಾಃ ಸ್ಥೂಲಾ ಜಾಲಂ ಚಿತ್ತ್ವಾ ಪುನರ್ಜಲಮ್|

12289012c ಪ್ರಾಪ್ನುವಂತಿ ತಥಾ ಯೋಗಾಸ್ತತ್ಪದಂ ವೀತಕಲ್ಮಷಾಃ||

ದೊಡ್ಡ ದೊಡ್ಡ ಮೀನುಗಳು ಹೇಗೆ ತಮ್ಮನ್ನು ಬಂಧಿಸಿರುವ ಬಲೆಯನ್ನೇ ಕತ್ತರಿಸಿ ಪುನಃ ನೀರನ್ನು ಸೇರುತ್ತವೆಯೋ ಹಾಗೆ ಯೋಗಿಗಳು ಯೋಗಬಲದಿಂದಲೇ ಭವಬಂಧನಗಳೆಲ್ಲವನ್ನೂ ಬಿಡಿಸಿಕೊಂಡು ಪಾಪರಹಿತರಾಗಿ ಪರಮಪದವನ್ನು ಸೇರುತ್ತಾರೆ.

12289013a ತಥೈವ ವಾಗುರಾಂ ಚಿತ್ತ್ವಾ ಬಲವಂತೋ ಯಥಾ ಮೃಗಾಃ|

12289013c ಪ್ರಾಪ್ನುಯುರ್ವಿಮಲಂ ಮಾರ್ಗಂ ವಿಮುಕ್ತಾಃ ಸರ್ವಬಂಧನೈಃ||

12289014a ಲೋಭಜಾನಿ ತಥಾ ರಾಜನ್ಬಂಧನಾನಿ ಬಲಾನ್ವಿತಾಃ|

12289014c ಚಿತ್ತ್ವಾ ಯೋಗಾಃ ಪರಂ ಮಾರ್ಗಂ ಗಚ್ಚಂತಿ ವಿಮಲಾಃ ಶಿವಮ್||

ರಾಜನ್! ಹಾಗೆಯೇ ಬಲಿಷ್ಠ ಮೃಗಗಳು ತಮ್ಮನ್ನು ಬಂಧಿಸಿದ ಬಲೆಯನ್ನು ಕಡಿದು ಸರ್ವಬಂಧನಗಳಿಂದ ವಿಮುಕ್ತರಾಗಿ ವಿಮಲ ಮಾರ್ಗವನ್ನು ಹಿಡಿದುಹೋಗುತ್ತವೆ. ಅದೇ ರೀತಿಯಲ್ಲಿ ಯೋಗಬಲಾನ್ವಿತರು ಲೋಭದಿಂದ ಹುಟ್ಟುವ ಎಲ್ಲ ಬಂಧನಗಳನ್ನೂ ಕಡಿದುಹಾಕಿ ವಿಮಲ ಮಂಗಳಕರ ಶ್ರೇಷ್ಠ ಮಾರ್ಗವನ್ನು ಹಿಡಿದು ಹೋಗುತ್ತಾರೆ.

12289015a ಅಬಲಾಶ್ಚ ಮೃಗಾ ರಾಜನ್ವಾಗುರಾಸು ತಥಾಪರೇ|

12289015c ವಿನಶ್ಯಂತಿ ನ ಸಂದೇಹಸ್ತದ್ವದ್ಯೋಗಬಲಾದೃತೇ||

ರಾಜನ್! ದುರ್ಬಲ ಮೃಗಗಳು ಬಲೆಗಳಲ್ಲಿ ಸಿಲುಕಿರುವ ಇತರರೊಂದಿಗೆ ವಿನಾಶಹೊಂದುವ ಹಾಗೆ ಯೋಗಬಲವಿಲ್ಲದವರೂ ವಿನಾಶಹೊಂದುತ್ತಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

12289016a ಬಲಹೀನಾಶ್ಚ ಕೌಂತೇಯ ಯಥಾ ಜಾಲಗತಾ ಝಷಾಃ|

12289016c ಅಂತಂ[2] ಗಚ್ಚಂತಿ ರಾಜೇಂದ್ರ ತಥಾ ಯೋಗಾಃ ಸುದುರ್ಬಲಾಃ||

ಕೌಂತೇಯ! ರಾಜೇಂದ್ರ! ಬೆಸ್ತನ ಬಲೆಯಲ್ಲಿ ಸಿಲುಕಿಕೊಂಡ ಬಲಹೀನ ಮೀನುಗಳು ಬಲೆಯಿಂದ ಬಿಡಿಸಿಕೊಳ್ಳಲಾರದೇ ಹೇಗೆ ಸಾಯುತ್ತವೆಯೋ ಹಾಗೆ ಯೋಗಬಲವಿಲ್ಲದ ದುರ್ಬಲರೂ ಕೂಡ ಅಂತ್ಯವನ್ನು ಹೊಂದುತ್ತಾರೆ.

12289017a ಯಥಾ ಚ ಶಕುನಾಃ ಸೂಕ್ಷ್ಮಾಃ ಪ್ರಾಪ್ಯ ಜಾಲಮರಿಂದಮ|

12289017c ತತ್ರ ಸಕ್ತಾ ವಿಪದ್ಯಂತೇ ಮುಚ್ಯಂತೇ ಚ ಬಲಾನ್ವಿತಾಃ||

12289018a ಕರ್ಮಜೈರ್ಬಂಧನೈರ್ಬದ್ಧಾಸ್ತದ್ವದ್ಯೋಗಾಃ ಪರಂತಪ|

12289018c ಅಬಲಾ ವೈ ವಿನಶ್ಯಂತಿ ಮುಚ್ಯಂತೇ ಚ ಬಲಾನ್ವಿತಾಃ||

ಅರಿಂದಮ! ಪರಂತಪ! ಸೂಕ್ಷ್ಮ ಬಲೆಗಳಲ್ಲಿ ಸಿಕ್ಕಿಹಾಕಿಕೊಂಡ ದುರ್ಬಲ ಪಕ್ಷಿಗಳು ಬೇಡನ ಕೈಗೆ ಸಿಕ್ಕಿ ನಾಶಹೊಂದುವಂತೆ ಕರ್ಮಫಲಗಳ ಪಾಶಗಳಿಂದ ಬದ್ಧವಾದ ಮತ್ತು ಯೋಗವಿಲ್ಲದ ಮನುಷ್ಯರು ನಾಶಹೊಂದುತ್ತಾರೆ. ಬಲಿಷ್ಠ ಪಕ್ಷಿಗಳು ಬಲೆಯಿಂದ ಬಿಡಿಸಿಕೊಂಡು ಹೋಗುವಂತೆ ಯೋಗಬಲಾನ್ವಿತರು ಕರ್ಮಬಂಧನಗಳನ್ನು ಕತ್ತರಿಸಿಹಾಕಿ ಮುಕ್ತರಾಗುತ್ತಾರೆ.

12289019a ಅಲ್ಪಕಶ್ಚ ಯಥಾ ರಾಜನ್ವಹ್ನಿಃ ಶಾಮ್ಯತಿ ದುರ್ಬಲಃ|

12289019c ಆಕ್ರಾಂತ ಇಂಧನೈಃ ಸ್ಥೂಲೈಸ್ತದ್ವದ್ಯೋಗೋಽಬಲಃ ಪ್ರಭೋ||

ರಾಜನ್! ಪ್ರಭೋ! ದೊಡ್ಡ ದೊಡ್ಡ ಕಟ್ಟಿಗೆಗಳಿಂದ ಸಣ್ಣ ಬೆಂಕಿಯು ಹೇಗೆ ದುರ್ಬಲಗೊಂಡು ನಂದಿಹೋಗುವುದೋ ಹಾಗೆ ಯೋಗದ ಬಲವಿಲ್ಲದವನು ದುರ್ಬಲನಾಗುತ್ತಾನೆ.

12289020a ಸ ಏವ ಚ ಯದಾ ರಾಜನ್ವಹ್ನಿರ್ಜಾತಬಲಃ ಪುನಃ|

12289020c ಸಮೀರಣಯುತಃ ಕೃತ್ಸ್ನಾಂ ದಹೇತ್ ಕ್ಷಿಪ್ರಂ ಮಹೀಮಪಿ||

ರಾಜನ್! ಅದೇ ಸಣ್ಣ ಬೆಂಕಿಯು ಗಾಳಿಯ ಸಹಾಯದಿಂದ ದೊಡ್ಡದಾಗಿ ಇಡೀ ಭೂಮಿಯನ್ನೇ ಸುಟ್ಟುಹಾಕಬಲ್ಲದು.

12289021a ತದ್ವಜ್ಜಾತಬಲೋ ಯೋಗೀ ದೀಪ್ತತೇಜಾ ಮಹಾಬಲಃ|

12289021c ಅಂತಕಾಲ ಇವಾದಿತ್ಯಃ ಕೃತ್ಸ್ನಂ ಸಂಶೋಷಯೇಜ್ಜಗತ್||

ಹಾಗೆ ಮಹಾಬಲ ಯೋಗಿಯು ಯೋಗಾಭ್ಯಾಸದಿಂದ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡು ಪ್ರದೀಪ್ತ ತೇಜಸ್ಸನ್ನು ಪಡೆದು ಪ್ರಳಯಕಾಲದ ಸೂರ್ಯನು ಸಮಸ್ತ ಜಗತ್ತನ್ನೂ ಶೋಷಿಸಿಬಿಡುವಂತೆ ತನ್ನಲ್ಲಿರುವ ರಾಗಾದಿ ದೋಷಗಳನ್ನು ವಿನಾಶಗೊಳಿಸುತ್ತಾನೆ.

12289022a ದುರ್ಬಲಶ್ಚ ಯಥಾ ರಾಜನ್ ಸ್ರೋತಸಾ ಹ್ರಿಯತೇ ನರಃ|

12289022c ಬಲಹೀನಸ್ತಥಾ ಯೋಗೋ ವಿಷಯೈರ್ಹ್ರಿಯತೇಽವಶಃ||

ರಾಜನ್! ನದಿಯನ್ನು ದಾಟುವಾಗ ದುರ್ಬಲನಾದವನು ಪ್ರವಾಹದಿಂದ ಸೆಳೆಯಲ್ಪಡುವ ಹಾಗೆ ಬಲಹೀನ ಯೋಗಿಯು ಇಂದ್ರಿಯಾಧೀನನಾಗಿ ವಿಷಯಗಳಿಂದ ಸೆಳೆಯಲ್ಪಡುತ್ತಾನೆ.

12289023a ತದೇವ ಚ ಯಥಾ ಸ್ರೋತೋ ವಿಷ್ಟಂಭಯತಿ ವಾರಣಃ|

12289023c ತದ್ವದ್ಯೋಗಬಲಂ ಲಬ್ಧ್ವಾ ವ್ಯೂಹತೇ ವಿಷಯಾನ್ಬಹೂನ್||

ಆನೆಯು ಅದೇ ಮಹಾಪ್ರವಾಹವನ್ನೇ ಅಲ್ಲೋಲಕಲ್ಲೋಲಗೊಳಿಸುತ್ತದೆ. ಅದೇ ರೀತಿಯಲ್ಲಿ ಯೋಗಿಯು ಯೋಗಬಲವನ್ನು ಹೊಂದಿ ಬಹುಸಂಖ್ಯಾತ ವಿಷಯಗಳನ್ನು ತಡೆದುಬಿಡುತ್ತಾನೆ[3].

12289024a ವಿಶಂತಿ ಚಾವಶಾಃ ಪಾರ್ಥ ಯೋಗಾ ಯೋಗಬಲಾನ್ವಿತಾಃ|

12289024c ಪ್ರಜಾಪತೀನೃಷೀನ್ದೇವಾನ್ಮಹಾಭೂತಾನಿ ಚೇಶ್ವರಾಃ||

ಪಾರ್ಥ! ಯೋಗಬಲಾನ್ವಿತ ಯೋಗಿಗಳು ಯೋಗದ ಮೂಲಕ ಪ್ರಜಾಪತಿಗಳು, ಋಷಿಗಳು, ದೇವತೆಗಳು ಮತ್ತು ಪಂಚಮಹಾಭೂತಗಳು – ಈ ಎಲ್ಲದರಲ್ಲಿಯೂ ಸ್ವತಂತ್ರವಾಗಿ ಪ್ರವೇಶಿಸಲು ಸಮರ್ಥರಾಗಿರುತ್ತಾರೆ.

12289025a ನ ಯಮೋ ನಾಂತಕಃ ಕ್ರುದ್ಧೋ ನ ಮೃತ್ಯುರ್ಭೀಮವಿಕ್ರಮಃ|

12289025c ಈಶತೇ ನೃಪತೇ ಸರ್ವೇ ಯೋಗಸ್ಯಾಮಿತತೇಜಸಃ||

ನೃಪತೇ! ಕ್ರುದ್ಧ ಅಂತಕ ಯಮನಾಗಲೀ, ಭೀಮವಿಕ್ರಮಿ ಮೃತ್ಯುವಾಗಲೀ ಅಮಿತತೇಜಸ್ವೀ ಯೋಗಿಯ ಮೇಲೆ ತಮ್ಮ ಅಧಿಕಾರವನ್ನು ಚಲಾಯಿಸಲಾರರು.

12289026a ಆತ್ಮನಾಂ ಚ ಸಹಸ್ರಾಣಿ ಬಹೂನಿ ಭರತರ್ಷಭ|

12289026c ಯೋಗಃ ಕುರ್ಯಾದ್ಬಲಂ ಪ್ರಾಪ್ಯ ತೈಶ್ಚ ಸರ್ವೈರ್ಮಹೀಂ ಚರೇತ್||

ಭರತರ್ಷಭ! ಯೋಗಿಯು ಯೋಗಬಲದಿಂದ ತನ್ನನ್ನು ಅನೇಕ ಸಹಸ್ರ ದೇಹಗಳುಳ್ಳವನನ್ನಾಗಿ ಮಾಡಿಕೊಳ್ಳಬಲ್ಲನು. ಹಾಗೆ ಸೃಷ್ಟಿಸಿದ ಯೋಗಿಗಳೊಡನೆ ಪೃಥ್ವಿಯಲ್ಲಿ ಸಂಚರಿಸಬಲ್ಲನು.

12289027a ಪ್ರಾಪ್ನುಯಾದ್ವಿಷಯಾಂಶ್ಚೈವ ಪುನಶ್ಚೋಗ್ರಂ ತಪಶ್ಚರೇತ್|

12289027c ಸಂಕ್ಷಿಪೇಚ್ಚ ಪುನಃ ಪಾರ್ಥ ಸೂರ್ಯಸ್ತೇಜೋಗುಣಾನಿವ||

ಪಾರ್ಥ! ಯೋಗಬಲೋಯುಕ್ತನು ಅನೇಕ ಸ್ವರೂಪಗಳ ಮೂಲಕ ವಿಷಯಸುಖಗಳನ್ನೂ ಅನುಭವಿಸಬಲ್ಲನು. ಪುನಃ ಅತ್ಯುಗ್ರ ತಪಸ್ಸನ್ನೂ ಮಾಡಬಲ್ಲನು. ಸೂರ್ಯನು ಸಾಯಂಕಾಲವಾಗುತ್ತಲೇ ತನ್ನ ಕಿರಣಗಳನ್ನು ಒಳಕ್ಕೆ ಸೆಳೆದುಕೊಳ್ಳುವಂತೆ ಸೃಷ್ಟಿಸಿದ್ದ ಎಲ್ಲ ರೂಪಗಳನ್ನೂ ತನ್ನಲ್ಲಿಯೇ ಐಕ್ಯಮಾಡಿಕೊಳ್ಳಬಲ್ಲನು.

12289028a ಬಲಸ್ಥಸ್ಯ ಹಿ ಯೋಗಸ್ಯ ಬಂಧನೇಶಸ್ಯ ಪಾರ್ಥಿವ|

12289028c ವಿಮೋಕ್ಷಪ್ರಭವಿಷ್ಣುತ್ವಮುಪಪನ್ನಮಸಂಶಯಮ್||

ಪಾರ್ಥಿವ! ಅಂತಹ ಬಲಿಷ್ಠ ಯೋಗಿಯು ಯಾವ ತತ್ತ್ವವನ್ನೂ ಕಟ್ಟಿಹಾಕಬಲ್ಲನು. ಯಾವುದನ್ನೂ ಕಟ್ಟುವ ಸಾಮರ್ಥ್ಯವಿದ್ದವನಿಗೆ ಯಾವ ಬಂಧನದಿಂದಲೂ ತಪ್ಪಿಸಿಕೊಳ್ಳುವ ಸಾಮರ್ಥ್ಯವಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

12289029a ಬಲಾನಿ ಯೋಗೇ ಪ್ರೋಕ್ತಾನಿ ಮಯೈತಾನಿ ವಿಶಾಂ ಪತೇ|

12289029c ನಿದರ್ಶನಾರ್ಥಂ ಸೂಕ್ಷ್ಮಾಣಿ ವಕ್ಷ್ಯಾಮಿ ಚ ಪುನಸ್ತವ||

ವಿಶಾಂಪತೇ! ಯೋಗಬಲದ ನಿದರ್ಶನಾರ್ಥವಾಗಿ ನಾನು ನಿನಗೆ ಇನ್ನೂ ಕೆಲವು ಸೂಕ್ಷ್ಮ ವಿಷಯಗಳನ್ನು ಪುನಃ ಹೇಳುತ್ತೇನೆ.

12289030a ಆತ್ಮನಶ್ಚ ಸಮಾಧಾನೇ ಧಾರಣಾಂ ಪ್ರತಿ ಚಾಭಿಭೋ|

12289030c ನಿದರ್ಶನಾನಿ ಸೂಕ್ಷ್ಮಾಣಿ ಶೃಣು ಮೇ ಭರತರ್ಷಭ||

ವಿಭೋ! ಭರತರ್ಷಭ! ಆತ್ಮ ಸಮಾಧಾನ ಮತ್ತು ಧಾರಣೆಯ ಕುರಿತು ಕೆಲವು ಸೂಕ್ಷ್ಮ ನಿದರ್ಶನಗಳನ್ನು ಹೇಳುತ್ತೇನೆ. ಕೇಳು.

12289031a ಅಪ್ರಮತ್ತೋ ಯಥಾ ಧನ್ವೀ ಲಕ್ಷ್ಯಂ ಹಂತಿ ಸಮಾಹಿತಃ|

12289031c ಯುಕ್ತಃ ಸಮ್ಯಕ್ತಥಾ ಯೋಗೀ ಮೋಕ್ಷಂ ಪ್ರಾಪ್ನೋತ್ಯಸಂಶಯಮ್||

ಅಪ್ರಮತ್ತನಾದ ಧನ್ವಿಯು ಏಕಾಗ್ರಚಿತ್ತನಾಗಿ ಲಕ್ಷ್ಯವನ್ನು ಭೇದಿಸುವಂತೆ ಪರಮಾತ್ಮನ ಧ್ಯಾನದಲ್ಲಿಯೇ ಏಕಾಗ್ರತೆಯನ್ನು ಹೊಂದಿದ ಯೋಗಿಯು ನಿಸ್ಸಂದೇಹವಾಗಿ ಮೋಕ್ಷವನ್ನು ಹೊಂದುತ್ತಾನೆ.

12289032a ಸ್ನೇಹಪೂರ್ಣೇ ಯಥಾ ಪಾತ್ರೇ ಮನ ಆಧಾಯ ನಿಶ್ಚಲಮ್|

12289032c ಪುರುಷೋ ಯತ್ತ ಆರೋಹೇತ್ಸೋಪಾನಂ ಯುಕ್ತಮಾನಸಃ||

12289033a ಯುಕ್ತ್ವಾ ತಥಾಯಮಾತ್ಮಾನಂ ಯೋಗಃ ಪಾರ್ಥಿವ ನಿಶ್ಚಲಮ್|

12289033c ಕರೋತ್ಯಮಲಮಾತ್ಮಾನಂ ಭಾಸ್ಕರೋಪಮದರ್ಶನಮ್||

ತಲೆಯ ಮೇಲೆ ಎಣ್ಣೆತುಂಬಿದ ಪಾತ್ರೆಯನ್ನು ಹೊತ್ತುಕೊಂಡು ಪಾತ್ರೆಯಲ್ಲಿರುವ ಎಣ್ಣೆಯು ಸ್ವಲ್ಪವೂ ಬೀಳದಂತೆ ನಿಶ್ಚಲ ಮನಸ್ಸಿನಿಂದ ಮೆಟ್ಟಿಲುಗಳನ್ನೇರಿ ಹೋಗುವ ಕುಶಲನಂತೆ ಯೋಗಿಯು ಯೋಗಯುಕ್ತ ಮನಸ್ಸಿನ ಮೂಲಕ ಆತ್ಮವನ್ನು ಪರಮಾತ್ಮನಲ್ಲಿ ಸೇರಿಸಿದಾಗ ಅವನ ಆತ್ಮವು ಅತ್ಯಂತ ನಿರ್ಮಲವೂ, ಸ್ಥಿರವೂ, ಸೂರ್ಯತೇಜಸ್ಸಿಗೆ ಸಮಾನ ತೇಜಸ್ಸುಳ್ಳದ್ದೂ ಆಗುತ್ತದೆ.

12289034a ಯಥಾ ಚ ನಾವಂ ಕೌಂತೇಯ ಕರ್ಣಧಾರಃ ಸಮಾಹಿತಃ|

12289034c ಮಹಾರ್ಣವಗತಾಂ ಶೀಘ್ರಂ ನಯೇತ್ಪಾರ್ಥಿವ ಪತ್ತನಮ್||

12289035a ತದ್ವದಾತ್ಮಸಮಾಧಾನಂ ಯುಕ್ತ್ವಾ ಯೋಗೇನ ತತ್ತ್ವವಿತ್|

12289035c ದುರ್ಗಮಂ ಸ್ಥಾನಮಾಪ್ನೋತಿ ಹಿತ್ವಾ ದೇಹಮಿಮಂ ನೃಪ||

ಕೌಂತೇಯ! ನೃಪ! ಸಮುದ್ರದಲ್ಲಿರುವ ನೌಕೆಯನ್ನು ಸಮಾಹಿತನಾದ ನಾವಿಕನು ಶೀಘ್ರವಾಗಿ ನಿರ್ದಿಷ್ಠ ಸ್ಥಳಕ್ಕೆ ಹೇಗೆ ಕೊಂಡೊಯ್ಯುವನೋ ಹಾಗೆ ತತ್ತ್ವವಿದು ಯೋಗಿಯು ಯೋಗದ ಮೂಲಕ ಆತ್ಮನನ್ನು ಪರಮಾತ್ಮನಲ್ಲಿ ಯೋಜಿಸಿ ಸಮಾಧಿಯೋಗವನ್ನೇ ಅಭ್ಯಾಸಮಾಡುತ್ತಾ ದೇಹವನ್ನು ತ್ಯಜಿಸಿ ದುರ್ಗಮ ಸ್ಥಾನವನ್ನು ಹೊಂದುತ್ತಾನೆ.

12289036a ಸಾರಥಿಶ್ಚ ಯಥಾ ಯುಕ್ತ್ವಾ ಸದಶ್ವಾನ್ಸುಸಮಾಹಿತಃ|

12289036c ದೇಶಮಿಷ್ಟಂ ನಯತ್ಯಾಶು ಧನ್ವಿನಂ ಪುರುಷರ್ಷಭ||

12289037a ತಥೈವ ನೃಪತೇ ಯೋಗೀ ಧಾರಣಾಸು ಸಮಾಹಿತಃ|

12289037c ಪ್ರಾಪ್ನೋತ್ಯಾಶು ಪರಂ ಸ್ಥಾನಂ ಲಕ್ಷಂ ಮುಕ್ತ ಇವಾಶುಗಃ||

ಪುರುಷರ್ಷಭ! ನೃಪತೇ! ಸಮಾಹಿತನಾದ ಸಾರಥಿಯು ಹೇಗೆ ರಥಕ್ಕೆ ಉತ್ತಮ ಕುದುರೆಗಳನ್ನು ಹೂಡಿ, ಧನುರ್ಧರ ಯೋಧನನ್ನು ಅಭೀಷ್ಟ ಸ್ಥಳಕ್ಕೆ ಶೀಘ್ರವಾಗಿ ಕೊಂಡೊಯ್ಯುವನೋ ಹಾಗೆ ನಾಭಿಚಕ್ರ, ಹೃದಯ, ಜಿಹ್ವಾಗ್ರ, ನಾಸಾಗ್ರ, ಶಿರಸ್ಸು – ಇವೇ ಮೊದಲಾದ ಧಾರಣಗಳಲ್ಲಿ ಏಕಾಗ್ರಚಿತ್ತನಾಗಿರುವ ಯೋಗಿಯು ತನ್ನ ಮನಸ್ಸನ್ನು ತನಗೆ ಇಷ್ಟವಾದ ಪರಬ್ರಹ್ಮದ ಕಡೆಗೆ ಒಯ್ಯುತ್ತಾನೆ. ಧನುಸ್ಸಿನಿಂದ ಮುಕ್ತವಾದ ಬಾಣವು ಲಕ್ಷ್ಯದ ಕಡೆ ಶೀಘ್ರವಾಗಿ ಹೋಗವಂತೆ ಬಹುಬೇಗ ಪರಮ ಪದವನ್ನು ಸೇರುತ್ತಾನೆ.

12289038a ಆವೇಶ್ಯಾತ್ಮನಿ ಚಾತ್ಮಾನಂ ಯೋಗೀ ತಿಷ್ಠತಿ ಯೋಽಚಲಃ|

12289038c ಪಾಪಂ ಹಂತೇವ ಮೀನಾನಾಂ ಪದಮಾಪ್ನೋತಿ ಸೋಽಜರಮ್||

ಸಮಾಧಿಯ ಮೂಲಕ ಪರಮಾತ್ಮನಲ್ಲಿ ಆತ್ಮನನ್ನು ಸ್ಥಿರಗೊಳಿಸಿ ಅಚಲನಾಗಿರುವ ಯೋಗಿಯು ತನ್ನ ಪಾಪವನ್ನು ಕಳೆದುಕೊಳ್ಳುತ್ತಾನೆ ಮತ್ತು ಪವಿತ್ರಾತ್ಮರಿಗೆ ಲಭಿಸುವ ಅವಿನಾಶೀ ಪರಮ ಪದವನ್ನು ಪಡೆದುಕೊಳ್ಳುತ್ತಾನೆ.

12289039a ನಾಭ್ಯಾಂ ಕಂಠೇ ಚ ಶೀರ್ಷೇ ಚ ಹೃದಿ ವಕ್ಷಸಿ ಪಾರ್ಶ್ವಯೋಃ|

12289039c ದರ್ಶನೇ ಸ್ಪರ್ಶನೇ ಚಾಪಿ ಘ್ರಾಣೇ ಚಾಮಿತವಿಕ್ರಮ||

12289040a ಸ್ಥಾನೇಷ್ವೇತೇಷು ಯೋ ಯೋಗೀ ಮಹಾವ್ರತಸಮಾಹಿತಃ|

12289040c ಆತ್ಮನಾ ಸೂಕ್ಷ್ಮಮಾತ್ಮಾನಂ ಯುಂಕ್ತೇ ಸಮ್ಯಗ್ವಿಶಾಂ ಪತೇ||

12289041a ಸ ಶೀಘ್ರಮಮಲಪ್ರಜ್ಞಃ ಕರ್ಮ ದಗ್ಧ್ವಾ ಶುಭಾಶುಭಮ್|

12289041c ಉತ್ತಮಂ ಯೋಗಮಾಸ್ಥಾಯ ಯದೀಚ್ಚತಿ ವಿಮುಚ್ಯತೇ||

ಅಮಿತವಿಕ್ರಮೀ! ಯೋಗಾಭ್ಯಾಸವೆಂಬ ಮಹಾವ್ರತದಲ್ಲಿ ಏಕಾಗ್ರಚಿತ್ತನಾದ ಯೋಗಿಯು ಹೊಕ್ಕಳು, ಕುತ್ತಿಗೆ, ತಲೆ, ಹೃದಯ, ವಕ್ಷಃಸ್ಥಳ, ಎರಡು ಪಕ್ಕೆಗಳು, ಕಣ್ಣು, ಕಿವಿ, ಮೂಗು – ಈ ಸ್ಥಾನಗಳಲ್ಲಿ ಧಾರಣೆಯ ಮೂಲಕ ಪರಮಾತ್ಮನೊಡನೆ ಸೂಕ್ಷ್ಮಾತ್ಮ ಜೀವವನ್ನು ಸಮಾವೇಶಗೊಳಿಸುತ್ತಾನೆ. ವಿಶಾಂಪತೇ! ಅಂತಹ ಯೋಗಿಯು ಬಯಸಿದರೆ ಪರ್ವತೋಪಮ ಶುಭಾಶುಭಕರ್ಮಗಳನ್ನು ಯೋಗಶಕ್ತಿಯ ಮೂಲಕ ಭಸ್ಮಮಾಡಿ, ಉತ್ತಮ ಯೋಗವನ್ನಾಶ್ರಯಿಸಿ ಶೀಘ್ರದಲ್ಲಿಯೇ ಮುಕ್ತನಾಗಬಲ್ಲನು.”

12289042 ಯುಧಿಷ್ಠಿರ ಉವಾಚ|

12289042a ಆಹಾರಾನ್ಕೀದೃಶಾನ್ ಕೃತ್ವಾ ಕಾನಿ ಜಿತ್ವಾ ಚ ಭಾರತ|

12289042c ಯೋಗೀ ಬಲಮವಾಪ್ನೋತಿ ತದ್ಭವಾನ್ವಕ್ತುಮರ್ಹತಿ||

ಯುಧಿಷ್ಠಿರನು ಹೇಳಿದನು: “ಭಾರತ! ಯೋಗಿಯು ಎಂತಹ ಆಹಾರವನ್ನು ಮಾಡಿಕೊಳ್ಳುತ್ತಾನೆ ಮತ್ತು ಏನನ್ನು ಜಯಿಸಿ ಈ ಅಸಾಧಾರಣ ಬಲವನ್ನು ಪಡೆದುಕೊಳ್ಳುತ್ತಾನೆ? ಇದರ ಕುರಿತು ನನಗೆ ಹೇಳಬೇಕು.”

12289043 ಭೀಷ್ಮ ಉವಾಚ|

12289043a ಕಣಾನಾಂ ಭಕ್ಷಣೇ ಯುಕ್ತಃ ಪಿಣ್ಯಾಕಸ್ಯ ಚ ಭಕ್ಷಣೇ|

12289043c ಸ್ನೇಹಾನಾಂ ವರ್ಜನೇ ಯುಕ್ತೋ ಯೋಗೀ ಬಲಮವಾಪ್ನುಯಾತ್||

ಭೀಷ್ಮನು ಹೇಳಿದನು: “ನುಚ್ಚನ್ನು ಮತ್ತು ಎಣ್ಣೆಯ ಕಾಳುಗಳ ಹಿಂಡನ್ನು ತಿನ್ನುವ, ಜಿಡ್ಡಿನ ಪದಾರ್ಥಗಳನ್ನು ವರ್ಜಿಸಿದ ಯೋಗಿಯು ಬಲಿಷ್ಠನಾಗುತ್ತಾನೆ.

12289044a ಭುಂಜಾನೋ ಯಾವಕಂ ರೂಕ್ಷಂ ದೀರ್ಘಕಾಲಮರಿಂದಮ|

12289044c ಏಕಾರಾಮೋ ವಿಶುದ್ಧಾತ್ಮಾ ಯೋಗೀ ಬಲಮವಾಪ್ನುಯಾತ್||

ಬಹಳ ಸಮಯದವರೆಗೆ ದಿನಕ್ಕೆ ಒಪ್ಪತ್ತು ಜವೇಗೋಧಿಯ ಗಂಜಿಯನ್ನು ತಿನ್ನುವ ಯೋಗಿಯು ಶುದ್ಧಚಿತ್ತನೂ ಬಲಿಷ್ಠನೂ ಆಗುತ್ತಾನೆ.

12289045a ಪಕ್ಷಾನ್ಮಾಸಾನೃತೂಂಶ್ಚಿತ್ರಾನ್ಸಂಚರಂಶ್ಚ ಗುಹಾಸ್ತಥಾ|

12289045c ಅಪಃ ಪೀತ್ವಾ ಪಯೋಮಿಶ್ರಾ ಯೋಗೀ ಬಲಮವಾಪ್ನುಯಾತ್||

ಯೋಗಿಯು ಮೊದಲ ಹದಿನೈದು ದಿವಸಗಳ ವರೆಗೆ ಹಗಲಿನಲ್ಲಿ ಒಂದು ಹೊತ್ತು ಹಾಲನ್ನು ಸೇರಿಸಿದ ನೀರನ್ನು ಕುಡಿಯುತ್ತಿರಬೇಕು. ಅನಂತರ ಒಂದು ತಿಂಗಳವರೆಗೆ ಅದನ್ನೇ ಕುಡಿದುಕೊಂಡಿರಬೇಕು. ಅಭ್ಯಾಸವಾದಂತೆಲ್ಲ ಅನೇಕ ತಿಂಗಳುಗಳವರೆಗೆ ಅದನ್ನೇ ಕುಡಿಯುತ್ತಿರಬೇಕು. ಅನಂತರ ಅನೇಕ ವರ್ಷಗಳವರೆಗೆ ಅದನ್ನೇ ಕುಡಿಯುತ್ತಿರಬೇಕು. ಇಂತಹ ಆಹಾರಸೇವನೆಯಿಂದ ಯೋಗಿಯು ಬಲವನ್ನು ಹೊಂದುತ್ತಾನೆ.

12289046a ಅಖಂಡಮಪಿ ವಾ ಮಾಸಂ ಸತತಂ ಮನುಜೇಶ್ವರ|

12289046c ಉಪೋಷ್ಯ ಸಮ್ಯಕ್ಶುದ್ಧಾತ್ಮಾ ಯೋಗೀ ಬಲಮವಾಪ್ನುಯಾತ್||

ಮನುಜೇಶ್ವರ! ಜೀವನಪರ್ಯಂತ ಎಂದೂ ಮಾಂಸವನ್ನು ತಿನ್ನದಿರುವ ಪರಿಶುದ್ಧಾತ್ಮ ಯೋಗಿಯು ಯೋಗಬಲವನ್ನು ಹೊಂದುತ್ತಾನೆ.

12289047a ಕಾಮಂ ಜಿತ್ವಾ ತಥಾ ಕ್ರೋಧಂ ಶೀತೋಷ್ಣೇ ವರ್ಷಮೇವ ಚ|

12289047c ಭಯಂ ನಿದ್ರಾಂ ತಥಾ ಶ್ವಾಸಂ ಪೌರುಷಂ ವಿಷಯಾಂಸ್ತಥಾ||

12289048a ಅರತಿಂ ದುರ್ಜಯಾಂ ಚೈವ ಘೋರಾಂ ತೃಷ್ಣಾಂ ಚ ಪಾರ್ಥಿವ|

12289048c ಸ್ಪರ್ಶಾನ್ಸರ್ವಾಂಸ್ತಥಾ ತಂದ್ರೀಂ ದುರ್ಜಯಾಂ ನೃಪಸತ್ತಮ||

12289049a ದೀಪಯಂತಿ ಮಹಾತ್ಮಾನಃ ಸೂಕ್ಷ್ಮಮಾತ್ಮಾನಮಾತ್ಮನಾ|

12289049c ವೀತರಾಗಾ ಮಹಾಪ್ರಾಜ್ಞಾ ಧ್ಯಾನಾಧ್ಯಯನಸಂಪದಾ||

ಪಾರ್ಥಿವ! ನೃಪಸತ್ತಮ! ಕಾಮ, ಕ್ರೋಧ, ಶೀತ, ಉಷ್ಣ, ಮಳೆ, ಭಯ, ಶೋಕ, ಶ್ವಾಸ, ಪೌರುಷ ವಿಷಯಗಳು, ದುರ್ಜಯವಾದ ಅಸಂತೋಷ, ಘೋರ ತೃಷ್ಣೆ, ಸ್ಪರ್ಶ, ನಿದ್ರೆ, ದುರ್ಜಯ ಆಲಸ್ಯ – ಇವೆಲ್ಲವನ್ನೂ ಜಯಿಸಿದ ರಾಗರಹಿತನಾದ ಮಹಾಪ್ರಾಜ್ಞ ಮಹಾತ್ಮ ಯೋಗಿಗಳು ಧ್ಯಾನ ಮತ್ತು ಅಧ್ಯಯನಗುಣಗಳ ಸಂಪತ್ತಿನಿಂದ ಬುದ್ಧಿಯ ಮೂಲಕ ಸೂಕ್ಷ್ಮನಾದ ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾರೆ.

12289050a ದುರ್ಗಸ್ತ್ವೇಷ ಮತಃ ಪಂಥಾ ಬ್ರಾಹ್ಮಣಾನಾಂ ವಿಪಶ್ಚಿತಾಮ್|

12289050c ನ ಕಶ್ಚಿದ್ವ್ರಜತಿ ಹ್ಯಸ್ಮಿನ್ ಕ್ಷೇಮೇಣ ಭರತರ್ಷಭ||

ಭರತರ್ಷಭ! ಈ ಯೋಗಮಾರ್ಗವು ಅತ್ಯಂತ ದುರ್ಗಮವಾದುದು ಎಂದು ಬ್ರಾಹ್ಮಣರ ಅಭಿಪ್ರಾಯವಾಗಿದೆ. ಕೆಲವರು ಮಾತ್ರವೇ ಈ ಮಾರ್ಗದಲ್ಲಿ ಕ್ಷೇಮದಿಂದ ಮುಂದುವರೆಯುತ್ತಾರೆ.

12289051a ಯಥಾ ಕಶ್ಚಿದ್ವನಂ ಘೋರಂ ಬಹುಸರ್ಪಸರೀಸೃಪಮ್|

12289051c ಶ್ವಭ್ರವತ್ತೋಯಹೀನಂ ಚ ದುರ್ಗಮಂ ಬಹುಕಂಟಕಮ್||

12289052a ಅಭಕ್ತಮಟವೀಪ್ರಾಯಂ ದಾವದಗ್ಧಮಹೀರುಹಮ್|

12289052c ಪಂಥಾನಂ ತಸ್ಕರಾಕೀರ್ಣಂ ಕ್ಷೇಮೇಣಾಭಿಪತೇದ್ಯುವಾ||

12289053a ಯೋಗಮಾರ್ಗಂ ತಥಾಸಾದ್ಯ ಯಃ ಕಶ್ಚಿದ್ಭಜತೇ ದ್ವಿಜಃ|

12289053c ಕ್ಷೇಮೇಣೋಪರಮೇನ್ಮಾರ್ಗಾದ್ಬಹುದೋಷೋ ಹಿ ಸ ಸ್ಮೃತಃ||

ಅನೇಕ ಸರ್ಪಗಳಿಂದಲೂ, ವಿಷಜಂತುಗಳಿಂದಲೂ ವ್ಯಾಪ್ತವಾಗಿರುವ, ಗುಹೆಗಳುಳ್ಳ, ನೀರಿಲ್ಲದ, ದುರ್ಗಮವಾದ, ಹೆಚ್ಚು ಮುಳ್ಳುಗಳಿಂದ ಆವೃತವಾಗಿರುವ, ತಿನ್ನಲು ಏನೂ ಸಿಕ್ಕದಿರುವ, ದಾವಾಗ್ನಿಯಿಂದ ಭಸ್ಮವಾದ ವೃಕ್ಷಗಳಿರುವ, ಕಳ್ಳರಿಂದ ವ್ಯಾಪ್ತವಾದ, ಗೊಂಡಾರಣ್ಯದ ಮಾರ್ಗದಲ್ಲಿ ಧೀರ ಯುವಕನು ಮಾತ್ರ ಕ್ಷೇಮದಿಂದ ಸಾಗಬಲ್ಲನು. ಹಾಗೆಯೇ ಯೋಗಮಾರ್ಗವನ್ನು ಆಶ್ರಯಿಸಿ ಕೇವಲ ಕೆಲವೇ ದ್ವಿಜರು ಆ ಮಾರ್ಗದಲ್ಲಿ ಕ್ಷೇಮದಿಂದ ಹೋಗಿ ಪರಮಪದವನ್ನು ತಲುಪುತ್ತಾರೆ. ಏಕೆಂದರೆ ಯೋಗಮಾರ್ಗವು ಬಹಳ ಕಠೋರ ಸಾಧನೆ-ದೋಷಗಳಿಂದ ಕೂಡಿದೆಯೆಂದು ಹೇಳುತ್ತಾರೆ.

12289054a ಸುಸ್ಥೇಯಂ ಕ್ಷುರಧಾರಾಸು ನಿಶಿತಾಸು ಮಹೀಪತೇ|

12289054c ಧಾರಣಾಸು ತು ಯೋಗಸ್ಯ ದುಃಸ್ಥೇಯಮಕೃತಾತ್ಮಭಿಃ||

ಮಹೀಪತೇ! ಹರಿತ ಕತ್ತಿಯ ಅಲುಗಿನ ಮೇಲಾದರೂ ಸುಖವಾಗಿ ನಿಂತಿರಬಹುದು, ಆದರೆ ಜಿತೇಂದ್ರಿಯರಲ್ಲವರಿಗೆ ಯೋಗ ಧಾರಣೆಗಳಲ್ಲಿ[4] ಏಕಾಗ್ರತೆಯಿಂದ ಮನಸ್ಸನ್ನು ನಿಲ್ಲಿಸುವುದು ದುಷ್ಕರವೇ ಸರಿ.

12289055a ವಿಪನ್ನಾ ಧಾರಣಾಸ್ತಾತ ನಯಂತಿ ನಶುಭಾಂ ಗತಿಮ್|

12289055c ನೇತೃಹೀನಾ ಯಥಾ ನಾವಃ ಪುರುಷಾನರ್ಣವೇ ನೃಪ||

ನೃಪ! ನಾವಿಕನಿಲ್ಲದ ನೌಕೆಯು ಮನುಷ್ಯನನ್ನು ಸಮುದ್ರದಿಂದ ಹೇಗೆ ಪಾರುಮಾಡುವುದಿಲ್ಲವೋ ಹಾಗೆ ಸಿದ್ಧಿಸದಿರದ ಧಾರಣೆಗಳು ಸಾಧಕನನ್ನು ಶುಭಗತಿಗೆ ಒಯ್ಯುವುದಿಲ್ಲ.

12289056a ಯಸ್ತು ತಿಷ್ಠತಿ ಕೌಂತೇಯ ಧಾರಣಾಸು ಯಥಾವಿಧಿ|

12289056c ಮರಣಂ ಜನ್ಮ ದುಃಖಂ ಚ ಸುಖಂ ಚ ಸ ವಿಮುಂಚತಿ||

ಕೌಂತೇಯ! ಧಾರಣೆಗಳಲ್ಲಿ ಯಥಾವಿಧಿಯಾಗಿ ಮನಸ್ಸನ್ನು ಸ್ಥಿರಗೊಳಿಸುವ ಮಹಾಯೋಗಿಯು ಮರಣ-ಜನ್ಮ-ದುಃಖ-ಸುಖಗಳೆಲ್ಲವನ್ನೂ ಸುಲಭವಾಗಿಯೇ ತ್ಯಜಿಸುತ್ತಾನೆ. ಎಲ್ಲ ಬಂಧನಗಳಿಂದ ವಿಮುಕ್ತನಾಗುತ್ತಾನೆ.

12289057a ನಾನಾಶಾಸ್ತ್ರೇಷು ನಿಷ್ಪನ್ನಂ ಯೋಗೇಷ್ವಿದಮುದಾಹೃತಮ್|

12289057c ಪರಂ ಯೋಗಂ ತು ಯತ್ ಕೃತ್ಸ್ನಂ ನಿಶ್ಚಿತಂ ತದ್ದ್ವಿಜಾತಿಷು||

ನಾನಾಶಾಸ್ತ್ರಗಳಲ್ಲಿರುವ ಯೋಗ ಸಿದ್ಧಾಂತವನ್ನೇ ನಾನು ನಿನಗೆ ಉದಾಹರಿಸಿದ್ದೇನೆ. ಪರಮ ಯೋಗಸಾಧನೆಗೆ ಮಾಡಬೇಕಾದುದೆಲ್ಲವನ್ನೂ ದ್ವಿಜಾತಿಯವರು ನಿಶ್ಚಯಿಸಿದ್ದಾರೆ.

12289058a ಪರಂ ಹಿ ತದ್ಬ್ರಹ್ಮ ಮಹನ್ಮಹಾತ್ಮನ್

ಬ್ರಹ್ಮಾಣಮೀಶಂ ವರದಂ ಚ ವಿಷ್ಣುಮ್|

12289058c ಭವಂ ಚ ಧರ್ಮಂ ಚ ಷಡಾನನಂ ಚ

ಷಡ್ಬ್ರಹ್ಮಪುತ್ರಾಂಶ್ಚ ಮಹಾನುಭಾವಾನ್||

12289059a ತಮಶ್ಚ ಕಷ್ಟಂ ಸುಮಹದ್ರಜಶ್ಚ

ಸತ್ತ್ವಂ ಚ ಶುದ್ಧಂ ಪ್ರಕೃತಿಂ ಪರಾಂ ಚ|

12289059c ಸಿದ್ಧಿಂ ಚ ದೇವೀಂ ವರುಣಸ್ಯ ಪತ್ನೀಂ

ತೇಜಶ್ಚ ಕೃತ್ಸ್ನಂ ಸುಮಹಚ್ಚ ಧೈರ್ಯಮ್||

12289060a ತಾರಾಧಿಪಂ ವೈ ವಿಮಲಂ ಸತಾರಂ

ವಿಶ್ವಾಂಶ್ಚ ದೇವಾನುರಗಾನ್ಪಿತೃಂಶ್ಚ|

12289060c ಶೈಲಾಂಶ್ಚ ಕೃತ್ಸ್ನಾನುದಧೀಂಶ್ಚ ಘೋರಾನ್

ನದೀಶ್ಚ ಸರ್ವಾಃ ಸವನಾನ್ ಘನಾಂಶ್ಚ||

12289061a ನಾಗಾನ್ನಗಾನ್ಯಕ್ಷಗಣಾನ್ದಿಶಶ್ಚ

ಗಂಧರ್ವಸಂಘಾನ್ಪುರುಷಾನ್ ಸ್ತ್ರಿಯಶ್ಚ|

12289061c ಪರಸ್ಪರಂ ಪ್ರಾಪ್ಯ ಮಹಾನ್ಮಹಾತ್ಮಾ

ವಿಶೇತ ಯೋಗೀ ನಚಿರಾದ್ವಿಮುಕ್ತಃ||

ಮಹಾತ್ಮನ್! ಯೋಗಸಿದ್ಧ ಮಹಾತ್ಮನು ಇಚ್ಛಿಸಿದ್ದೇ ಆದರೆ ಒಡನೆಯೇ ಮುಕ್ತನಾಗಿ ಪರಬ್ರಹ್ಮವನ್ನು ಸೇರಬಹುದು. ಯೋಗಬಲದಿಂದ ಭಗವಾನ್ ಬ್ರಹ್ಮನನ್ನೂ, ವರದ ವಿಷ್ಣುವನ್ನೂ, ಈಶ್ವರನನ್ನೂ, ಯಮಧರ್ಮನನ್ನೂ, ಕಾರ್ತಿಕೇಯನನ್ನೂ, ಬ್ರಹ್ಮಮಾನಸ ಪುತ್ರರಾದ ಮಹಾನುಭಾವ ಸನಕಾದಿಗಳನ್ನೂ, ಕಷ್ಟದಾಯಕವಾದ ತಮೋಗುಣದೇವತಾಭಾವವನ್ನೂ, ಮಹತ್ತಾದ ರಜೋಗುಣದೇವತಾಭಾವವನ್ನೂ, ವಿಶುದ್ಧ ಸತ್ತ್ವಗುಣದೇವತಾಭಾವವನ್ನೂ, ಮೂಲ ಪ್ರಕೃತಿಯನ್ನೂ, ವರುಣನ ಪತ್ನಿ ಸಿದ್ಧಿದೇವಿಯನ್ನೂ, ಸಂಪೂರ್ಣ ತೇಜಸ್ಸನ್ನೂ, ಮಹಾಧೈರ್ಯದೇವತಾಭಾವವನ್ನೂ, ನಕ್ಷತ್ರಗಳೊಡನೆ ಆಕಾಶದಲ್ಲಿ ಪ್ರಕಾಶಿಸುವ ನಿರ್ಮಲ ತಾರಾಧಿಪತಿ ಚಂದ್ರನನ್ನೂ, ವಿಶ್ವೇದೇವತೆಗಳನ್ನೂ, ಉರಗಗಳನ್ನೂ, ಪಿತೃಗಳನ್ನೂ, ಸಮಸ್ತ ಪರ್ವತಗಳನ್ನೂ, ಭಯಂಕರ ಸಮುದ್ರಗಳನ್ನೂ, ಅಖಿಲ ನದಿಗಳನ್ನೂ, ವನಗಳನ್ನೂ, ಮೇಘಗಳನ್ನೂ, ನಾಗಗಳನ್ನೂ, ವೃಕ್ಷಗಳನ್ನೂ, ದಿಕ್ಕುಗಳನ್ನೂ, ಗಂಧರ್ವಗಣಗಳನ್ನೂ, ಸಮಸ್ತ ಸ್ತ್ರೀ-ಪುರುಷರನ್ನೂ ಸಂಧಿಸಿ ಅವರಲ್ಲಿ ಪ್ರವೇಶಿಸಲು ಸಮರ್ಥನಾಗುತ್ತಾನೆ.

12289062a ಕಥಾ ಚ ಯೇಯಂ ನೃಪತೇ ಪ್ರಸಕ್ತಾ

ದೇವೇ ಮಹಾವೀರ್ಯಮತೌ ಶುಭೇಯಮ್|

12289062c ಯೋಗಾನ್ಸ ಸರ್ವಾನಭಿಭೂಯ ಮರ್ತ್ಯಾನ್

ನಾರಾಯಣಾತ್ಮಾ ಕುರುತೇ ಮಹಾತ್ಮಾ||

ನೃಪತೇ! ಬಲ-ಬುದ್ಧಿಸಂಪನ್ನವಾದ ಪರಮಾತ್ಮನ ಸಂಬಂಧವನ್ನು ಕಲ್ಪಿಸುವ ಕಲ್ಯಾಣಕರವಾದ ಈ ಕಥೆಯನ್ನು ನಾನು ಪ್ರಸಂಗವಶದಿಂದ ನಿನಗೆ ಹೇಳಿದ್ದೇನೆ. ಒಟ್ಟಿನಲ್ಲಿ ಹೇಳುವುದಾದರೆ, ಯೋಗಸಿದ್ಧಿಯನ್ನು ಪಡೆದಿರುವ ಮಹಾತ್ಮನು ಎಲ್ಲ ಮನುಷ್ಯರನ್ನೂ ಅತಿಕ್ರಮಿಸಿ ನಾರಾಯಣಸ್ವರೂಪನಾಗಿ ಸಂಕಲ್ಪಮಾತ್ರದಿಂದಲೇ ಸೃಷ್ಟಿಯನ್ನೂ ಮಾಡಬಲ್ಲನು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಯೋಗವಿಧೌ ನವನವತ್ಯತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಯೋಗವಿಧಿ ಎನ್ನುವ ಇನ್ನೂರಾಎಂಭತ್ತೊಂಭತ್ತನೇ ಅಧ್ಯಾಯವು.

[1] ತಪೋಯುಕ್ತಂ (ಭಾರತ ದರ್ಶನ).

[2] ವಧಂ (ಭಾರತ ದರ್ಶನ).

[3] ಇಂದ್ರಿಯಗಳೂ ಇಂದ್ರಿಯಾರ್ಥಗಳೂ ಯೋಗಿಯ ವಶದಲ್ಲಿರುತ್ತದೆಯೇ ಹೊರತು ಅವನು ಅವುಗಳ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿಹೋಗುವುದಿಲ್ಲ (ಭಾರತ ದರ್ಶನ).

[4] ಪಾತಂಜಲಯೋಗದರ್ಶನದಲ್ಲಿ ಧಾರಣಾ ಎಂಬ ಶಬ್ಧಕ್ಕೆ ಈ ಅರ್ಥವಿದೆ: ದೇಶಬಂಧಶ್ಚಿತ್ತಸ್ಯ ಧಾರಣಾ – ಧಾರಣೆ ಎಂದರೆ ಒಂದು ನಿರ್ದಿಷ್ಟ ಸ್ಥಾನದಲ್ಲಿ ಚಿತ್ತವನ್ನು ನಿಲ್ಲಿಸುವುದು. ನಾಭಿಚಕ್ರದಲ್ಲಿ, ಹೃದಯಕಮಲದಲ್ಲಿ, ತಲೆಯ ಜ್ಯೋತಿಸ್ಸಿನಲ್ಲಿ, ನಾಸಿಕಾಗ್ರದಲ್ಲಿ, ನಾಲಿಗೆಯ ತುದಿಯಲ್ಲಿ – ಅಥವಾ ಬಾಹ್ಯವಿಷಯದಲ್ಲಿ ಚಿತ್ತದ ವೃತ್ತಿಮಾತ್ರವನ್ನು ನಿಲ್ಲಿಸುವುದು ಧಾರಣೆ (ಭಾರತ ದರ್ಶನ).

Comments are closed.