Shanti Parva: Chapter 178

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೭೮

ಶರೀರದಲ್ಲಿರುವ ಜಠರಾನಲ ಮತ್ತು ಪ್ರಾಣ-ಅಪಾನಾದಿ ವಾಯುಗಳ ವರ್ಣನೆ (೧-೧೭).

12178001 ಭರದ್ವಾಜ ಉವಾಚ

12178001a ಪಾರ್ಥಿವಂ ಧಾತುಮಾಶ್ರಿತ್ಯ ಶಾರೀರೋಽಗ್ನಿಃ ಕಥಂ ಭವೇತ್[1]|

12178001c ಅವಕಾಶವಿಶೇಷೇಣ ಕಥಂ ವರ್ತಯತೇಽನಿಲಃ||

ಭರದ್ವಾಜನು ಹೇಳಿದನು: “ಶರೀರದಲ್ಲಿರುವ ಅಗ್ನಿಯು ಪೃಥ್ವೀಧಾತುವನ್ನಾಶ್ರಯಿಸಿ ಹೇಗಿರುತ್ತದೆ? ವಾಯುವೂ ಕೂಡ ಪೃಥ್ವೀಧಾತುವನ್ನಾಶ್ರಯಿಸಿ ಅವಕಾಶ ವಿಶೇಷದಿಂದ ಹೇಗೆ ಶರೀರವನ್ನು ಚಲನಾಶೀಲವನ್ನಾಗಿ ಮಾಡುತ್ತದೆ?”

12178002 ಭೃಗುರುವಾಚ|

12178002a ವಾಯೋರ್ಗತಿಮಹಂ ಬ್ರಹ್ಮನ್ಕೀರ್ತಯಿಷ್ಯಾಮಿ ತೇಽನಘ|

12178002c ಪ್ರಾಣಿನಾಮನಿಲೋ ದೇಹಾನ್ಯಥಾ ಚೇಷ್ಟಯತೇ ಬಲೀ||

ಭೃಗುವು ಹೇಳಿದನು: “ಅನಘ! ಬ್ರಹ್ಮನ್! ವಾಯುವಿನ ಗತಿ ಮತ್ತು ಪ್ರಾಣಿಗಳ ದೇಹಗಳಲ್ಲಿರುವ ಬಲಶಾಲೀ ವಾಯುವು ಹೇಗೆ ದೇಹಗಳನ್ನು ಚಲಿಸುವಂತೆ ಮಾಡುತ್ತಾನೆ ಎನ್ನುವುದನ್ನು ಹೇಳುತ್ತೇನೆ.

12178003a ಶ್ರಿತೋ ಮೂರ್ಧಾನಮಗ್ನಿಸ್ತು[2] ಶರೀರಂ ಪರಿಪಾಲಯನ್|

12178003c ಪ್ರಾಣೋ ಮೂರ್ಧನಿ ಚಾಗ್ನೌ ಚ ವರ್ತಮಾನೋ ವಿಚೇಷ್ಟತೇ||

ಅಗ್ನಿಯು ನೆತ್ತಿಯಲ್ಲಿರುವ ಸಹಸ್ರಾರವನ್ನಾಶ್ರಯಿಸಿ ಶರೀರವನ್ನು ಪರಿಪಾಲಿಸುತ್ತದೆ. ನೆತ್ತಿಯಲ್ಲಿರುವ ಪ್ರಾಣ-ಅಗ್ನಿ ಇವೆರಡೂ ಶರೀರವು ಚಲಿಸುವಂತೆ ಮಾಡುತ್ತವೆ.

12178004a ಸ ಜಂತುಃ ಸರ್ವಭೂತಾತ್ಮಾ ಪುರುಷಃ ಸ ಸನಾತನಃ|

12178004c ಮನೋ ಬುದ್ಧಿರಹಂಕಾರೋ ಭೂತಾನಿ ವಿಷಯಾಶ್ಚ ಸಃ||

ಆ ಪ್ರಾಣಸಂಯುಕ್ತ ಅಗ್ನಿಯೇ ಸರ್ವಭೂತಾತ್ಮನು. ಅವನೇ ಸನಾತನ ಪುರುಷನು. ಅವನೇ ಮನಸ್ಸು, ಬುದ್ಧಿ, ಅಹಂಕಾರ, ಪಂಚಭೂತಗಳು ಮತ್ತು ವಿಷಯಗಳು.

12178005a ಏವಂ ತ್ವಿಹ ಸ ಸರ್ವತ್ರ ಪ್ರಾಣೇನ ಪರಿಪಾಲ್ಯತೇ|

12178005c ಪೃಷ್ಠತಶ್ಚ ಸಮಾನೇನ ಸ್ವಾಂ ಸ್ವಾಂ ಗತಿಮುಪಾಶ್ರಿತಃ||

ಹೀಗೆ ಅಗ್ನಿಯಿಂದ ಯುಕ್ತವಾದ ಪ್ರಾಣದಿಂದ ಶರೀರದೊಳಗಿನ ಸಮಸ್ತ ವಿಭಾಗಗಳೂ ಮತ್ತು ಇಂದ್ರಿಯಾದಿ ಎಲ್ಲ ಬಾಹ್ಯ ಅಂಗಗಳೂ ಚಲಿಸುತ್ತವೆ. ಅನಂತರ ಪ್ರಾಣವು ಸಮಾನವಾಗಿ ಪರಿವರ್ತನೆಗೊಂಡು ತನ್ನ ಗತಿಯನ್ನಾಶ್ರಯಿಸಿ ಶರೀರದ ಸಂಚಾಲಕವಾಗುತ್ತದೆ.

12178006a ವಸ್ತಿಮೂಲಂ[3] ಗುದಂ ಚೈವ ಪಾವಕಂ ಚ ಸಮಾಶ್ರಿತಃ|

12178006c ವಹನ್ಮೂತ್ರಂ ಪುರೀಷಂ ಚಾಪ್ಯಪಾನಃ ಪರಿವರ್ತತೇ||

ಅಪಾನ ವಾಯುವು ಜಠರಾನಲ, ಮೂತ್ರಾಶಯ ಮತ್ತು ಗುದಗಳನ್ನಾಶ್ರಯಿಸಿ ಮಲ-ಮೂತ್ರಗಳನ್ನು ವಿಸರ್ಜಿಸುತ್ತಾ ಮೇಲಿಂದ ಕೆಳಗೆ ಚಲಿಸುತ್ತಿರುತ್ತದೆ.

12178007a ಪ್ರಯತ್ನೇ ಕರ್ಮಣಿ ಬಲೇ ಯ ಏಕಸ್ತ್ರಿಷು ವರ್ತತೇ|

12178007c ಉದಾನ ಇತಿ ತಂ ಪ್ರಾಹುರಧ್ಯಾತ್ಮವಿದುಷೋ ಜನಾಃ||

ಪ್ರಯತ್ನ, ಕರ್ಮ ಮತ್ತು ಬಲ ಈ ಮೂರರರಲ್ಲಿಯೂ ಪ್ರವೃತ್ತವಾಗಿರುವ ಆ ಒಂದು ವಾಯುವನ್ನು ಅಧ್ಯಾತ್ಮವಿದುಷ ಜನರು ಉದಾನ ಎಂದು ಕರೆಯುತ್ತಾರೆ.

12178008a ಸಂಧಿಷ್ವಪಿ ಚ ಸರ್ವೇಷು ಸಂನಿವಿಷ್ಟಸ್ತಥಾನಿಲಃ|

12178008c ಶರೀರೇಷು ಮನುಷ್ಯಾಣಾಂ ವ್ಯಾನ ಇತ್ಯುಪದಿಶ್ಯತೇ||

ಶರೀರದ ಸಂಧಿಗಳನ್ನೂ ಸೇರಿ ಎಲ್ಲಕಡೆ ವ್ಯಾಪ್ತವಾಗಿರುವ ವಾಯುವನ್ನು ವ್ಯಾನ ಎಂದು ಕರೆಯುತ್ತಾರೆ.

12178009a ಧಾತುಷ್ವಗ್ನಿಸ್ತು ವಿತತಃ ಸಮಾನೇನ ಸಮೀರಿತಃ|

12178009c ರಸಾನ್ಧಾತೂಂಶ್ಚ ದೋಷಾಂಶ್ಚ ವರ್ತಯನ್ನವತಿಷ್ಠತಿ||

ಶರೀರದ ಸಮಸ್ತ ಧಾತುಗಳಲ್ಲಿ ವ್ಯಾಪ್ತವಾಗಿರುವ ಅಗ್ನಿಯನ್ನು ಸಮಾನ ವಾಯುವು ಸಂಚಾಲಿತಗೊಳಿಸುತ್ತದೆ. ಆ ಸಮಾನವಾಯುವೇ ಶರೀರದಲ್ಲಿರುವ ರಸಗಳು, ಇಂದ್ರಿಯಗಳು ಮತ್ತು ಕಫ ಇತ್ಯಾದಿ ದೋಷಗಳನ್ನು ಸಂಚಲಿಸುತ್ತಾ ಸಂಪೂರ್ಣಶರೀರದಲ್ಲಿ ಸ್ಥಿತವಾಗಿದೆ.

12178010a ಅಪಾನಪ್ರಾಣಯೋರ್ಮಧ್ಯೇ ಪ್ರಾಣಾಪಾನಸಮಾಹಿತಃ|

12178010c ಸಮನ್ವಿತಃ ಸ್ವಧಿಷ್ಠಾನಃ ಸಮ್ಯಕ್ಪಚತಿ ಪಾವಕಃ||

ಅಪಾನ ಮತ್ತು ಪ್ರಾಣ ವಾಯುಗಳ ಮಧ್ಯೆ ನಾಭಿಭಾಗದಲ್ಲಿ ಪ್ರಾಣ ಮತ್ತು ಅಪಾನವಾಯುಗಳ ಆಶ್ರಯವನ್ನು ಪಡೆದು ಸ್ಥಿತವಾಗಿರುವ ಜಠರಾಗ್ನಿಯು ತಿಂದ ಅನ್ನವನ್ನು ಚೆನ್ನಾಗಿ ಪಚನಮಾಡುತ್ತದೆ.

12178011a ಆಸ್ಯಂ ಹಿ ಪಾಯುಸಂಯುಕ್ತಮಂತೇ ಸ್ಯಾದ್ಗುದಸಂಜ್ಞಿತಮ್|

12178011c ಸ್ರೋತಸ್ತಸ್ಮಾತ್ಪ್ರಜಾಯಂತೇ ಸರ್ವಸ್ರೋತಾಂಸಿ ದೇಹಿನಾಮ್||

ಬಾಯಿಯಿಂದ ಪಾಯುವಿನವರೆಗಿರುವ ಈ ಪ್ರಾಣಪ್ರವಹಿಸುವ ಮಾರ್ಗದ ತುದಿಗೇ ಗುದವೆಂಬ ಹೆಸರಿದೆ. ಅದೇ ಮಹಾಮಾರ್ಗದಿಂದ ದೇಹಧಾರಿಗಳ ಅನ್ಯ ಎಲ್ಲ ಸಣ್ಣ ಸಣ್ಣ ಮಾರ್ಗಗಳೂ ಪ್ರಕಟವಾಗುತ್ತವೆ.

12178012a ಪ್ರಾಣಾನಾಂ ಸಂನಿಪಾತಾಚ್ಚ ಸಂನಿಪಾತಃ ಪ್ರಜಾಯತೇ|

12178012c ಊಷ್ಮಾ ಚಾಗ್ನಿರಿತಿ ಜ್ಞೇಯೋ ಯೋಽನ್ನಂ ಪಚತಿ ದೇಹಿನಾಮ್||

ಆ ಮಾರ್ಗಗಳ ಮೂಲಕ ಎಲ್ಲ ಅಂಗಾಂಗಗಳಲ್ಲಿ ಪ್ರಾಣದ ಪ್ರಸಾರವು ಆಗುವುದರಿಂದ ಜಠರಾಗ್ನಿಯೂ ಕೂಡ ಪ್ರಾಣದೊಡನೆ ಎಲ್ಲ ಅಂಗಾಂಗಗಳಲ್ಲಿ ಪ್ರಸಾರವಾಗುತ್ತಿರುತ್ತದೆ. ಶರೀರದಲ್ಲಿರುವ ಉಷ್ಣತೆಯು ಶರೀರಿಗಳು ತಿನ್ನುವ ಅನ್ನವನ್ನು ಜೀರ್ಣಿಸುವ ಜಠರಾಗ್ನಿಯ ತಾಪ ಎಂದು ತಿಳಿದುಕೊಳ್ಳಬೇಕು.

12178013a ಅಗ್ನಿವೇಗವಹಃ ಪ್ರಾಣೋ ಗುದಾಂತೇ ಪ್ರತಿಹನ್ಯತೇ|

12178013c ಸ ಊರ್ಧ್ವಮಾಗಮ್ಯ ಪುನಃ ಸಮುತ್ಕ್ಷಿಪತಿ ಪಾವಕಮ್||

ಅಗ್ನಿಯ ವೇಗದಿಂದ ಪ್ರವಹಿಸುವ ಪ್ರಾಣವಾಯುವು ಗುದದ ಅಂತ್ಯದಲ್ಲಿ ಪ್ರತಿಹತವಾಗುತ್ತದೆ. ಪುನಃ ಪ್ರಾಣವಾಯುವು ಮೇಲಕ್ಕೆ ಪ್ರವಹಿಸಿ ಅಗ್ನಿಯನ್ನು ಮೇಲಕ್ಕೆತ್ತುತ್ತದೆ.

12178014a ಪಕ್ವಾಶಯಸ್ತ್ವಧೋ ನಾಭೇರೂರ್ಧ್ವಮಾಮಾಶಯಃ ಸ್ಥಿತಃ|

12178014c ನಾಭಿಮಧ್ಯೇ ಶರೀರಸ್ಯ ಸರ್ವೇ ಪ್ರಾಣಾಃ ಸಮಾಹಿತಾಃ||

ನಾಭಿಯ ಕೆಳಭಾಗವು ತಿಂದ ಆಹಾರವು ಜೀರ್ಣವಾಗುವ ಸ್ಥಳ. ಇದಕ್ಕೆ ಪಕ್ವಾಶಯವೆಂದು ಹೆಸರು. ನಾಭಿಯ ಮೇಲ್ಭಾಗವು ತಿಂದ ಆಹಾರವು ಸಂಗ್ರಹವಾಗುವ ಸ್ಥಳ. ಇದಕ್ಕೆ ಆಮಾಶಯವೆಂದು ಹೆಸರು. ನಾಭಿಮಧ್ಯದಲ್ಲಿ ಶರೀರದ ಸರ್ವಪ್ರಾಣಗಳೂ ಇವೆ.

12178015a ಪ್ರಸೃತಾ[4] ಹೃದಯಾತ್ಸರ್ವೇ ತಿರ್ಯಗೂರ್ಧ್ವಮಧಸ್ತಥಾ|

12178015c ವಹಂತ್ಯನ್ನರಸಾನ್ನಾಡ್ಯೋ ದಶ ಪ್ರಾಣಪ್ರಚೋದಿತಾಃ||

ಹೃದಯದಿಂದ ಹೊರಟು ಮೇಲಕ್ಕೂ, ಕೆಳಗೂ, ಮತ್ತು ಪಾರ್ಶ್ವಗಳಿಗೂ ಹೋಗುವ ನಾಡಿಗಳು ದಶಪ್ರಾಣವಾಯುಗಳಿಂದ[5] ಪ್ರಚೋದಿತಗೊಂಡು ಅನ್ನರಸವನ್ನು ಶರೀರಾದ್ಯಂತ ಒಯ್ಯುತ್ತವೆ.

12178016a ಏಷ ಮಾರ್ಗೋಽಥ ಯೋಗಾನಾಂ ಯೇನ ಗಚ್ಚಂತಿ ತತ್ಪದಮ್|

12178016c ಜಿತಕ್ಲಮಾಸನಾ ಧೀರಾ ಮೂರ್ಧನ್ಯಾತ್ಮಾನಮಾದಧುಃ||

ಮುಖದಿಂದ ಗುದದವರೆಗಿನ ವಾಯುಪ್ರವಾಹಮಾರ್ಗವೇ ಯೋಗಿಗಳ ಮಾರ್ಗವೂ ಆಗಿದೆ. ಈ ಮಾರ್ಗದ ಮೂಲಕವೇ ಕ್ಲೇಷಗಳನ್ನು ಜಯಿಸಿದ ಸರ್ವಸಮಭಾವದಿಂದಿರುವ ಧೀರ ಯೋಗಿಗಳು ಸುಷುಮ್ನಾನಾಡಿಯ ಮೂಲಕ ಆತ್ಮನನ್ನು ಸಹಸ್ರಾರದಲ್ಲಿ ನಿಲ್ಲಿಸುತ್ತಾರೆ.

12178017a ಏವಂ ಸರ್ವೇಷು ವಿಹಿತಃ ಪ್ರಾಣಾಪಾನೇಷು ದೇಹಿನಾಮ್|

12178017c ತಸ್ಮಿನ್ ಸ್ಥಿತೋ ನಿತ್ಯಮಗ್ನಿಃ ಸ್ಥಾಲ್ಯಾಮಿವ ಸಮಾಹಿತಃ||

ಹೀಗೆ ಪ್ರಾಣಾಪಾನಗಳೇ ಮೊದಲಾದ ಸರ್ವವಾಯುಗಳಲ್ಲಿಯೂ ಸಮಾವೇಶಗೊಂಡಿರುವ ಜಠರಾಗ್ನಿಯು ಅಗ್ನಿಕುಂಡದಲ್ಲಿರುವ ಅಗ್ನಿಯಂತೆ ಶರೀರದಲ್ಲಿ ಪ್ರಜ್ವಲಿಸುತ್ತಿರುತ್ತದೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಅಷ್ಟಸಪ್ತತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಭೃಗುಭರದ್ವಾಜಸಂವಾದ ಎನ್ನುವ ನೂರಾಎಪ್ಪತ್ತೆಂಟನೇ ಅಧ್ಯಾಯವು.

 

[1] ಪ್ರಭೋ (ಗೀತಾ ಪ್ರೆಸ್/ಭಾರತ ದರ್ಶನ).

[2] ಮೂರ್ಧಾನಮಾತ್ಮಾ (ಗೀತಾ ಪ್ರೆಸ್/ಭಾರತ ದರ್ಶನ).

[3] ಬಸ್ತಿಮೂಲಂ (ಗೀತಾ ಪ್ರೆಸ್/ಭಾರತ ದರ್ಶನ).

[4] ಪ್ರಸ್ಥಿತಾ (ಗೀತಾ ಪ್ರೆಸ್/ಭಾರತ ದರ್ಶನ).

[5] ಪ್ರಾಣ, ಅಪಾನ, ಸಮಾನ, ವ್ಯಾನ, ಉದಾನ, ನಾಗ, ಕೂರ್ಮ, ಕೃಕರ, ದೇವದತ್ತ ಮತ್ತು ಧನಂಜಯ ಇವೇ ದಶಪ್ರಾಣವಾಯುಗಳು. ಇವುಗಳಲ್ಲಿ ಕೊನೆಯ ಐದು ಪಂಚ ಉಪವಾಯುಗಳು (ಭಾರತ ದರ್ಶನ).

Comments are closed.