Shanti Parva: Chapter 176

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೧೭೬

ಆಕಾಶದಿಂದ ಅನ್ಯ ನಾಲ್ಕು ಸ್ಥೂಲಭೂತಗಳ ಉತ್ಪತ್ತಿಯ ವರ್ಣನೆ (೧-೧೭).

12176001 ಭರದ್ವಾಜ ಉವಾಚ|

12176001a ಪ್ರಜಾವಿಸರ್ಗಂ ವಿವಿಧಂ ಕಥಂ ಸ ಸೃಜತೇ ಪ್ರಭುಃ|

12176001c ಮೇರುಮಧ್ಯೇ ಸ್ಥಿತೋ ಬ್ರಹ್ಮಾ ತದ್ಬ್ರೂಹಿ ದ್ವಿಜಸತ್ತಮ||

ಭರದ್ವಾಜನು ಹೇಳಿದನು: “ದ್ವಿಜಸತ್ತಮ! ಮೇರುಮಧ್ಯದಲ್ಲಿ ಸ್ಥಿತನಾದ ಬ್ರಹ್ಮನು ವಿವಿಧ ಪ್ರಜಾಸೃಷ್ಟಿಯನ್ನು ಹೇಗೆ ಮಾಡುತ್ತಾನೆ ಎನ್ನುವುದನ್ನು ನನಗೆ ಹೇಳು.”

12176002 ಭೃಗುರುವಾಚ|

12176002a ಪ್ರಜಾವಿಸರ್ಗಂ ವಿವಿಧಂ ಮಾನಸೋ ಮನಸಾಸೃಜತ್|

12176002c ಸಂಧುಕ್ಷಣಾರ್ಥಂ[1] ಭೂತಾನಾಂ ಸೃಷ್ಟಂ ಪ್ರಥಮತೋ ಜಲಮ್||

ಭೃಗುವು ಹೇಳಿದನು: “ಆ ಮಾನಸ ದೇವನು ತನ್ನ ಮಾನಸಿಕ ಸಂಕಲ್ಪದಿಂದಲೇ ವಿವಿಧ ಪ್ರಜೆಗಳನ್ನು ಸೃಷ್ಟಿಸಿದನು. ಅವನು ಭೂತಗಳ ಸಂರಕ್ಷಣೆಗಾಗಿ ಮೊಟ್ಟ ಮೊದಲು ಜಲವನ್ನು  ಸೃಷ್ಟಿಸಿದನು.

12176003a ಯತ್ಪ್ರಾಣಾಃ ಸರ್ವಭೂತಾನಾಂ ವರ್ಧಂತೇ ಯೇನ ಚ ಪ್ರಜಾಃ|

12176003c ಪರಿತ್ಯಕ್ತಾಶ್ಚ ನಶ್ಯಂತಿ ತೇನೇದಂ ಸರ್ವಮಾವೃತಮ್||

ಅದೇ ಜಲವು ಸರ್ವಭೂತಗಳ ಪ್ರಾಣವು. ಅದರಿಂದಲೇ ಪ್ರಜೆಗಳ ವೃದ್ಧಿಯಾಗುತ್ತದೆ. ಜಲವಿಲ್ಲದೇ ಇದ್ದರೆ ನಾಶವಾಗುತ್ತವೆ. ಅದರಿಂದಲೇ ಈ ಎಲ್ಲವೂ ಆವೃತವಾಗಿದೆ.

12176004a ಪೃಥಿವೀ ಪರ್ವತಾ ಮೇಘಾ ಮೂರ್ತಿಮಂತಶ್ಚ ಯೇ ಪರೇ|

12176004c ಸರ್ವಂ ತದ್ವಾರುಣಂ ಜ್ಞೇಯಮಾಪಸ್ತಸ್ತಂಭಿರೇ ಪುನಃ||

ಪೃಥ್ವಿ, ಪರ್ವತ, ಮೇಘಗಳು, ಮತ್ತು ಅನ್ಯ ಯಾವ ಮೂರ್ತಿವಂತ ವಸ್ತುಗಳಿವೆಯೋ ಆ ಎಲ್ಲವೂ ಜಲಮಯ ಎಂದು ತಿಳಿಯಬೇಕು. ಏಕೆಂದರೆ ಜಲವೇ ಅವೆಲ್ಲವನ್ನೂ ಸ್ಥಿರವಾಗಿರಿಸಿದೆ.”

12176005 ಭರದ್ವಾಜ ಉವಾಚ|

12176005a ಕಥಂ ಸಲಿಲಮುತ್ಪನ್ನಂ ಕಥಂ ಚೈವಾಗ್ನಿಮಾರುತೌ|

12176005c ಕಥಂ ಚ ಮೇದಿನೀ ಸೃಷ್ಟೇತ್ಯತ್ರ ಮೇ ಸಂಶಯೋ ಮಹಾನ್||

ಭರದ್ವಾಜನು ಹೇಳಿದನು: “ಜಲದ ಉತ್ಪತ್ತಿಯು ಹೇಗಾಯಿತು? ಆಗ್ನಿ ಮತ್ತು ವಾಯುಗಳ ಉತ್ಪನ್ನವು ಹೇಗಾಯಿತು? ಪೃಥ್ವಿಯ ಸೃಷ್ಟಿಯು ಹೇಗಾಯಿತು? ಇವುಗಳ ಕುರಿತು ನನ್ನಲ್ಲಿ ಮಹಾ ಸಂಶಯವಿದೆ.”

12176006 ಭೃಗುರುವಾಚ

12176006a ಬ್ರಹ್ಮಕಲ್ಪೇ ಪುರಾ ಬ್ರಹ್ಮನ್ ಬ್ರಹ್ಮರ್ಷೀಣಾಂ ಸಮಾಗಮೇ|

12176006c ಲೋಕಸಂಭವಸಂದೇಹಃ ಸಮುತ್ಪನ್ನೋ ಮಹಾತ್ಮನಾಮ್||

ಭೃಗುವು ಹೇಳಿದನು: “ಹಿಂದೆ ಬ್ರಹ್ಮಕಲ್ಪದಲ್ಲಿ ಬ್ರಹ್ಮರ್ಷಿಗಳ ಸಮಾಗಮವಾಗಿತ್ತು. ಆ ಮಹಾತ್ಮರಲ್ಲಿ ಲೋಕಸೃಷ್ಟಿಯ ವಿಷಯದಲ್ಲಿ ಸಂದೇಹವು ಉತ್ಪನ್ನವಾಗಿತ್ತು.

12176007a ತೇಽತಿಷ್ಠನ್ ಧ್ಯಾನಮಾಲಂಬ್ಯ ಮೌನಮಾಸ್ಥಾಯ ನಿಶ್ಚಲಾಃ|

12176007c ತ್ಯಕ್ತಾಹಾರಾಃ ಪವನಪಾ ದಿವ್ಯಂ ವರ್ಷಶತಂ ದ್ವಿಜಾಃ||

ಆ ದ್ವಿಜರು ಆಹಾರಗಳನ್ನು ತ್ಯಜಿಸಿ ಗಾಳಿಯನ್ನೇ ಸೇವಿಸುತ್ತಾ ನೂರು ದಿವ್ಯವರ್ಷಗಳ ಕಾಲ ಧ್ಯಾನಾಸಕ್ತರಾಗಿ ಮೌನವನ್ನಾಶ್ರಯಿಸಿ ನಿಶ್ಚಲರಾಗಿ ನಿಂತುಕೊಂಡರು.

12176008a ತೇಷಾಂ ಧರ್ಮಮಯೀ ವಾಣೀ ಸರ್ವೇಷಾಂ ಶ್ರೋತ್ರಮಾಗಮತ್|

12176008c ದಿವ್ಯಾ ಸರಸ್ವತೀ ತತ್ರ ಸಂಬಭೂವ ನಭಸ್ತಲಾತ್||

ಧ್ಯಾನಾಸಕ್ತರಾಗಿದ್ದ ಅವರೆಲ್ಲರ ಕಿವಿಗಳಲ್ಲಿ ಬ್ರಹ್ಮಮಯೀ ವಾಣಿಯು ಕೇಳಿಬಂದಿತು. ಆಕಾಶದಲ್ಲಿ ದಿವ್ಯ ಸರಸ್ವತಿಯು ಪ್ರಕಟವಾಗಿ ಹೀಗೆ ಹೇಳಿದಳು:

12176009a ಪುರಾ ಸ್ತಿಮಿತನಿಃಶಬ್ದಮಾಕಾಶಮಚಲೋಪಮಮ್|

12176009c ನಷ್ಟಚಂದ್ರಾರ್ಕಪವನಂ ಪ್ರಸುಪ್ತಮಿವ ಸಂಬಭೌ||

“ಪೂರ್ವಕಾಲದಲ್ಲಿ ಅನಂತ ಆಕಾಶವು ಪರ್ವತದಂತೆ ನಿಶ್ಚಲವಾಗಿತ್ತು. ಅದರಲ್ಲಿ ಚಂದ್ರ, ಸೂರ್ಯ, ವಾಯು ಯಾರೂ ಕಾಣುತ್ತಿರಲಿಲ್ಲ. ಎಲ್ಲವೂ ನಿದ್ರಿಸುತ್ತಿದ್ದಂತೆ ತೋರುತ್ತಿತ್ತು.

12176010a ತತಃ ಸಲಿಲಮುತ್ಪನ್ನಂ ತಮಸೀವಾಪರಂ ತಮಃ|

12176010c ತಸ್ಮಾಚ್ಚ ಸಲಿಲೋತ್ಪೀಡಾದುದತಿಷ್ಠತ ಮಾರುತಃ||

ಆಗ ಅಂಧಕಾರದಿಂದ ಇನ್ನೊಂದು ಅಂಧಕಾರವು ಪ್ರಕಟಗೊಂಡಂತೆ ಆಕಾಶದಿಂದ ಜಲವು ಉತ್ಪನ್ನವಾಯಿತು. ಆ ಜಲಪ್ರವಾಹದಿಂದ ವಾಯುವು ಮೇಲೆದ್ದನು.

12176011a ಯಥಾ ಭಾಜನಮಚ್ಚಿದ್ರಂ ನಿಃಶಬ್ದಮಿವ ಲಕ್ಷ್ಯತೇ|

12176011c ತಚ್ಚಾಂಭಸಾ ಪೂರ್ಯಮಾಣಂ ಸಶಬ್ದಂ ಕುರುತೇಽನಿಲಃ||

ರಂಧ್ರವಿಲ್ಲದ ಪಾತ್ರೆಯು ಹೇಗೆ ನಿಃಶಬ್ದವಾಗಿರುವಂತೆ ತೋರುತ್ತದೆಯೋ ಮತ್ತು ಅದರಲ್ಲಿ ನೀರನ್ನು ತುಂಬಿಸುವಾಗ ಹೇಗೆ ವಾಯುವು ಶಬ್ದಮಾಡುತ್ತದೆಯೋ ಹಾಗೆ ನೀರಿನ ಪ್ರವಾಹದಿಂದ ವಾಯುವು ಚಲಿಸತೊಡಗಿತು.

12176012a ತಥಾ ಸಲಿಲಸಂರುದ್ಧೇ ನಭಸೋಽಂತೇ ನಿರಂತರೇ|

12176012c ಭಿತ್ತ್ವಾರ್ಣವತಲಂ ವಾಯುಃ ಸಮುತ್ಪತತಿ ಘೋಷವಾನ್||

ಹೀಗೆ ಆಕಾಶದ ಕೊನೆಯವರೆಗೂ ನಿರಂತರವಾಗಿ, ಸ್ವಲ್ಪವೂ ಜಾಗವಿಲ್ಲದೇ ನೀರೇ ತುಂಬಿಕೊಂಡಿತ್ತು. ಆಗ ಆ ಏಕಾರ್ಣವ ಜಲಪ್ರದೇಶವನ್ನು ಭೇದಿಸಿ ಅತಿ ದೊಡ್ಡ ಶಬ್ದದೊಂದಿಗೆ ವಾಯುವು ಪ್ರಕಟಗೊಂಡಿತು.

12176013a ಸ ಏಷ ಚರತೇ ವಾಯುರರ್ಣವೋತ್ಪೀಡಸಂಭವಃ|

12176013c ಆಕಾಶಸ್ಥಾನಮಾಸಾದ್ಯ ಪ್ರಶಾಂತಿಂ ನಾಧಿಗಚ್ಚತಿ||

ಹೀಗೆ ಸಮುದ್ರದ ಜಲಸಮುದಾಯದಿಂದ ಪ್ರಕಟವಾದ ವಾಯುವು ಸರ್ವತ್ರ ಸಂಚರಿಸತೊಡಗಿತು ಮತ್ತು ಆಕಾಶದಲ್ಲಿ ಎಲ್ಲಿ ತಲುಪಿದರೂ ಅದು ಶಾಂತವಾಗಲಿಲ್ಲ.

12176014a ತಸ್ಮಿನ್ವಾಯ್ವಂಬುಸಂಘರ್ಷೇ ದೀಪ್ತತೇಜಾ ಮಹಾಬಲಃ|

12176014c ಪ್ರಾದುರ್ಭವತ್ಯೂರ್ಧ್ವಶಿಖಃ ಕೃತ್ವಾ ವಿತಿಮಿರಂ ನಭಃ||

ವಾಯು ಮತ್ತು ಜಲದ ಆ ಸಂಘರ್ಷದಿಂದ ಅತ್ಯಂತ ತೇಜೋಮಯ ಮಹಾಬಲೀ ಅಗ್ನಿದೇವನ ಉತ್ಪನ್ನವಾಯಿತು. ಅವನ ಜ್ವಾಲೆಗಳು ಮೇಲ್ಮುಖವಾಗಿದ್ದವು. ಆ ಅಗ್ನಿಯು ಆಕಾಶದ ಎಲ್ಲ ಅಂಧಕಾರವನ್ನೂ ನಾಶಗೊಳಿಸಿ ಪ್ರಕಟವಾಯಿತು.

12176015a ಅಗ್ನಿಃ ಪವನಸಂಯುಕ್ತಃ ಖಾತ್ಸಮುತ್ಪತತೇ ಜಲಮ್|

12176015c ಸೋಽಗ್ನಿರ್ಮಾರುತಸಂಯೋಗಾದ್ಘನತ್ವಮುಪಪದ್ಯತೇ||

ವಾಯುವಿನ ಸಂಯೋಗವನ್ನು ಪಡೆದುಕೊಂಡು ಅಗ್ನಿಯು ಜಲವನ್ನು ಆಕಾಶಕ್ಕೆ ಬೀಸತೊಡಗಿತು. ಅನಂತರ ಅದೇ ಜಲ, ಅಗ್ನಿ ಮತ್ತು ವಾಯುಗಳ ಸಂಯೋಗದಿಂದ ಘನೀಭೂತವಾಯಿತು.

12176016a ತಸ್ಯಾಕಾಶೇ ನಿಪತಿತಃ ಸ್ನೇಹಸ್ತಿಷ್ಠತಿ ಯೋಽಪರಃ|

12176016c ಸ ಸಂಘಾತತ್ವಮಾಪನ್ನೋ ಭೂಮಿತ್ವಮುಪಗಚ್ಚತಿ||

ಅದರ ಆ ತೇವವು ಆಕಾಶದಲ್ಲಿ ಬಿದ್ದಾಗ ಅದೇ ಘನೀಭೂತವಾಗಿ ಪೃಥ್ವಿಯ ರೂಪದಲ್ಲಿ ಬದಲಾಯಿತು.

12176017a ರಸಾನಾಂ ಸರ್ವಗಂಧಾನಾಂ ಸ್ನೇಹಾನಾಂ ಪ್ರಾಣಿನಾಂ ತಥಾ|

12176017c ಭೂಮಿರ್ಯೋನಿರಿಹ ಜ್ಞೇಯಾ ಯಸ್ಯಾಂ ಸರ್ವಂ ಪ್ರಸೂಯತೇ||

ಈ ಪೃಥ್ವಿಯನ್ನೇ ಸಂಪೂರ್ಣ ರಸ, ಗಂಧ, ಸ್ನೇಹ ಮತ್ತು ಪ್ರಾಣಿಗಳ ಕಾರಣವೆಂದು ತಿಳಿಯಬೇಕು. ಇದರಿಂದಲೇ ಎಲ್ಲವುಗಳ ಉತ್ಪತ್ತಿಯಾಯಿತು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಭೃಗುಭರದ್ವಾಜಸಂವಾದೇ ಮಾನಸಭೂತೋತ್ಪತ್ತಿಕಥನೇ ಷಟ್ಸಪ್ತತ್ಯಧಿಕಶತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಭೃಗುಭರದ್ವಾಜಸಂವಾದೇ ಮಾನಸಭೂತೋತ್ಪತ್ತಿಕಥನ ಎನ್ನುವ ನೂರಾಎಪ್ಪತ್ತಾರನೇ ಅಧ್ಯಾಯವು.

[1] ಸಂರಕ್ಷಣಾರ್ಥಂ (ಗೀತಾ ಪ್ರೆಸ್).

Comments are closed.