Shanti Parva: Chapter 142

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೪೨[1]

ಪಾರಿವಾಳವು ತನ್ನ ಭಾರ್ಯೆಯ ಗುಣಗಾನವನ್ನು ಮಾಡುವುದು ಮತ್ತು ಪತಿವ್ರತೆಯ ಪ್ರಶಂಸೆ (1-12). ಕಪೋತಿಯು ಶರಣಾಗತ ವ್ಯಾಧನ ಸೇವೆಗೈಯಲು ಪತಿಯಲ್ಲಿ ಕೇಳಿಕೊಂಡಿದುದು (13-20). ಪಾರಿವಾಳದ ಅತಿಥಿಸತ್ಕಾರ ಮತ್ತು ವ್ಯಾಧನಿಗಾಗಿ ತನ್ನ ಶರೀರವನ್ನು ಪರಿತ್ಯಜಿಸುವುದು (21-44).

12142001 ಭೀಷ್ಮ ಉವಾಚ|

12142001a ಅಥ ವೃಕ್ಷಸ್ಯ ಶಾಖಾಯಾಂ ವಿಹಂಗಃ ಸಸುಹೃಜ್ಜನಃ|

12142001c ದೀರ್ಘಕಾಲೋಷಿತೋ ರಾಜಂಸ್ತತ್ರ ಚಿತ್ರತನೂರುಹಃ||

ಭೀಷ್ಮನು ಹೇಳಿದನು: “ರಾಜನ್! ಆ ವೃಕ್ಷದ ರೆಂಬೆಯ ಮೇಲೆ ಬಹಳ ಕಾಲದಿಂದ ಒಂದು ಪಾರಿವಾಳವು ತನ್ನ ಸುಹೃದಯರೊಂದಿಗೆ ನಿವಾಸಿಸುತ್ತಿತ್ತು. ಅದರ ಶರೀರದ ರೋಮಗಳು ಬಣ್ಣಬಣ್ಣದ್ದಾಗಿದ್ದವು.

12142002a ತಸ್ಯ ಕಾಲ್ಯಂ ಗತಾ ಭಾರ್ಯಾ ಚರಿತುಂ ನಾಭ್ಯವರ್ತತ|

12142002c ಪ್ರಾಪ್ತಾಂ ಚ ರಜನೀಂ ದೃಷ್ಟ್ವಾ ಸ ಪಕ್ಷೀ ಪರ್ಯತಪ್ಯತ||

ಮುಂಜಾನೆಯೇ ಹೊರಗೆ ತಿರುಗಾಡಲು ಹೋಗಿದ್ದ ಅದರ ಪತ್ನಿಯು ಇನ್ನೂ ಹಿಂದಿರುಗಿರಲಿಲ್ಲ. ರಾತ್ರಿಯಾದುದನ್ನು ನೋಡಿ ಆ ಪಕ್ಷಿಯು ಅವಳಿಗಾಗಿ ಪರಿತಪಿಸಿತು.

12142003a ವಾತವರ್ಷಂ ಮಹಚ್ಚಾಸೀನ್ನ ಚಾಗಚ್ಚತಿ ಮೇ ಪ್ರಿಯಾ|

12142003c ಕಿಂ ನು ತತ್ಕಾರಣಂ ಯೇನ ಸಾದ್ಯಾಪಿ ನ ನಿವರ್ತತೇ||

“ಭಿರುಗಾಳಿ ಮತ್ತು ಅತಿ ದೊಡ್ಡ ಮಳೆಯು ಸುರಿಯಿತು. ನನ್ನ ಪ್ರಿಯೆಯೂ ಇನ್ನೂ ಹಿಂದುರಿಗಿ ಬಂದಿಲ್ಲ. ಯಾವ ಕಾರಣದಿಂದ ಅವಳು ಇನ್ನೂ ಹಿಂದುರಗಲಿಲ್ಲ?

12142004a ಅಪಿ ಸ್ವಸ್ತಿ ಭವೇತ್ತಸ್ಯಾಃ ಪ್ರಿಯಾಯಾ ಮಮ ಕಾನನೇ|

12142004c ತಯಾ ವಿರಹಿತಂ ಹೀದಂ ಶೂನ್ಯಮದ್ಯ ಗೃಹಂ ಮಮ||

ನನ್ನ ಪ್ರಿಯೆಯು ಈ ಕಾನನದಲ್ಲಿ ಕುಶಲದಿಂದಿದ್ದಾಳೆಯೇ? ಅವಳಿಲ್ಲದೇ ನನ್ನ ಈ ಮನೆಯು ಇಂದು ಶೂನ್ಯವಾಗಿದೆ.

[2]12142005a ಯದಿ ಸಾ ರಕ್ತನೇತ್ರಾಂತಾ ಚಿತ್ರಾಂಗೀ ಮಧುರಸ್ವರಾ|

12142005c ಅದ್ಯ ನಾಭ್ಯೇತಿ ಮೇ ಕಾಂತಾ ನ ಕಾರ್ಯಂ ಜೀವಿತೇನ ಮೇ||

ಆ ರಕ್ತನೇತ್ರಾಂತಾ, ಚಿತ್ರಾಂಗೀ, ಮಧುಸ್ವರಾ, ನನ್ನ ಕಾಂತೆಯು ಇಂದು ಬರದೇ ಇದ್ದರೆ ನಾನು ಬದುಕಿರುವುದರಿಂದ ಏನು ಪ್ರಯೋಜನ?

[3]12142006a ಪತಿಧರ್ಮರತಾ ಸಾಧ್ವೀ ಪ್ರಾಣೇಭ್ಯೋಽಪಿ ಗರೀಯಸೀ|

12142006c ಸಾ ಹಿ ಶ್ರಾಂತಂ ಕ್ಷುಧಾರ್ತಂ ಚ ಜಾನೀತೇ ಮಾಂ ತಪಸ್ವಿನೀ||

ಪತಿಧರ್ಮರತಳಾಗಿದ್ದ ಆ ಸಾಧ್ವಿಯು ನನಗೆ ಪ್ರಾಣಕ್ಕಿಂತಲೂ ಹೆಚ್ಚಿನದಾಗಿದ್ದಳು. ನಾನು ಬಳಲಿದ್ದೇನೆ ಮತ್ತು ಹಸಿದಿದ್ದೇನೆ ಎಂದು ಆ ತಪಸ್ವಿನಿಯು ತಿಳಿದಿದ್ದಾಳೆ.

12142007a ಅನುರಕ್ತಾ ಹಿತಾ ಚೈವ ಸ್ನಿಗ್ಧಾ ಚೈವ ಪತಿವ್ರತಾ|

12142007c ಯಸ್ಯ ವೈ ತಾದೃಶೀ ಭಾರ್ಯಾ ಧನ್ಯಃ ಸ ಮನುಜೋ ಭುವಿ||

ಆ ಪತಿವ್ರತೆಯು ನನ್ನಲ್ಲಿಯೇ ಅನುರಕ್ತಳಾಗಿದ್ದಾಳೆ. ನನ್ನ ಹಿತವನ್ನೇ ಬಯಸುತ್ತಾಳೆ. ನನ್ನಲ್ಲಿ ಪರಮ ಸ್ನೇಹವನ್ನಿಟ್ಟುಕೊಂಡಿದ್ದಾಳೆ. ಅಂಥವಳನ್ನು ಭಾರ್ಯೆಯಾಗಿ ಹೊಂದಿದ ಮನುಷ್ಯನು ಈ ಭುವಿಯಲ್ಲಿಯೇ ಧನ್ಯನು.

[4]12142008a ಭಾರ್ಯಾ ಹಿ ಪರಮೋ ನಾಥಃ[5] ಪುರುಷಸ್ಯೇಹ ಪಠ್ಯತೇ|

12142008c ಅಸಹಾಯಸ್ಯ ಲೋಕೇಽಸ್ಮಿಽಲ್ಲೋಕಯಾತ್ರಾಸಹಾಯಿನೀ||

ಭಾರ್ಯೆಯೇ ಪುರುಷನ ಪರಮ ನಾಥಳು ಎಂದು ಹೇಳುತ್ತಾರೆ. ಈ ಲೋಕದಲ್ಲಿರುವ ಅಸಹಾಯಕರಿಗೆ ಪತ್ನಿಯೇ ಲೋಕಯಾತ್ರೆಯಲ್ಲಿ ಸಹಾಯಕಳಾಗಿರುತ್ತಾಳೆ.

12142009a ತಥಾ ರೋಗಾಭಿಭೂತಸ್ಯ ನಿತ್ಯಂ ಕೃಚ್ಚ್ರಗತಸ್ಯ ಚ|

12142009c ನಾಸ್ತಿ ಭಾರ್ಯಾಸಮಂ ಕಿಂ ಚಿನ್ನರಸ್ಯಾರ್ತಸ್ಯ ಭೇಷಜಮ್||

ರೋಗಪೀಡಿತನಾಗಿ ನಿತ್ಯವೂ ಕಷ್ಟದಲ್ಲಿರುವ ಆರ್ತನಿಗೆ ಪತ್ನಿಯ ಸಮನಾದ ಚಿಕಿತ್ಸೆಯು ಬೇರೆ ಯಾವುದೂ ಇಲ್ಲ.

12142010a ನಾಸ್ತಿ ಭಾರ್ಯಾಸಮೋ ಬಂಧುರ್ನಾಸ್ತಿ ಭಾರ್ಯಾಸಮಾ ಗತಿಃ|

12142010c ನಾಸ್ತಿ ಭಾರ್ಯಾಸಮೋ ಲೋಕೇ ಸಹಾಯೋ ಧರ್ಮಸಾಧನಃ[6]||

ಭಾರ್ಯೆಯ ಸಮನಾದ ಬಂಧುವಿಲ್ಲ. ಭಾರ್ಯೆಯ ಸಮನಾದ ಗತಿಯಿಲ್ಲ. ಲೋಕದಲ್ಲಿ ಧರ್ಮಸಾಧನೆಗೆ ಭಾರ್ಯೆಯ ಸಮನಾದ ಸಹಾಯಕರಿಲ್ಲ.”

12142011a ಏವಂ ವಿಲಪತಸ್ತಸ್ಯ ದ್ವಿಜಸ್ಯಾರ್ತಸ್ಯ ತತ್ರ ವೈ|

12142011c ಗೃಹೀತಾ ಶಕುನಘ್ನೇನ ಭಾರ್ಯಾ ಶುಶ್ರಾವ ಭಾರತೀಮ್||

ಹೀಗೆ ವಿಲಪಿಸುತ್ತಿದ್ದ ಪಕ್ಷಿಯ ಆರ್ತ ಸ್ವರವನ್ನು ಹಕ್ಕಿಹಿಡಿಯುವ ವ್ಯಾಧನ ಬಲೆಯಲ್ಲಿ ಸಿಕ್ಕಿಬಿದ್ದಿದ್ದ ಪಾರಿವಾಳದ ಪತ್ನಿಯು ಕೇಳಿದಳು.

[7]12142012a ನ ಸಾ ಸ್ತ್ರೀತ್ಯಭಿಭಾಷಾ ಸ್ಯಾದ್ಯಸ್ಯಾ ಭರ್ತಾ ನ ತುಷ್ಯತಿ|

[8]12142012c ಅಗ್ನಿಸಾಕ್ಷಿಕಮಪ್ಯೇತದ್ಭರ್ತಾ ಹಿ ಶರಣಂ ಸ್ತ್ರಿಯಃ[9]||

“ಯಾರ ಕುರಿತು ಪತಿಯು ಸಂತುಷ್ಟನಾಗಿಲ್ಲವೋ ಆ ಸ್ತ್ರೀಯನ್ನು ಸ್ತ್ರೀಯೆಂದು ಪರಿಗಣಿಸಬಾರದು. ಅಗ್ನಿಯನ್ನು ಸಾಕ್ಷಿಯಾಗಿರಿಸಿಕೊಂಡು ಯಾರೊಡನೆ ಸ್ತ್ರೀಯ ವಿವಾಹವಾಗಿದೆಯೋ ಅವನೇ ಅವಳ ಪತಿ ಮತ್ತು ಶರಣ್ಯನು.”

12142013a ಇತಿ ಸಂಚಿಂತ್ಯ ದುಃಖಾರ್ತಾ ಭರ್ತಾರಂ ದುಃಖಿತಂ ತದಾ|

12142013c ಕಪೋತೀ ಲುಬ್ಧಕೇನಾಥ ಯತ್ತಾ ವಚನಮಬ್ರವೀತ್||

ಹೀಗೆ ಆಲೋಚಿಸಿ ವ್ಯಾಧನ ಬಲೆಯಲ್ಲಿ ಸಿಕ್ಕಿಬಿದ್ದಿದ್ದ ದುಃಖಾರ್ತ ಕಪೋತಿಯು ದುಃಖಿತನಾಗಿದ್ದ ತನ್ನ ಪತಿಗೆ ಹೀಗೆ ಹೇಳಿದಳು:

12142014a ಹಂತ ವಕ್ಷ್ಯಾಮಿ ತೇ ಶ್ರೇಯಃ ಶ್ರುತ್ವಾ ಚ ಕುರು ತತ್ತಥಾ|

12142014c ಶರಣಾಗತಸಂತ್ರಾತಾ ಭವ ಕಾಂತ ವಿಶೇಷತಃ||

“ನಿಲ್ಲು! ನಿನಗೆ ಶ್ರೇಯಸ್ಕರವಾದುದನ್ನು ಹೇಳುತ್ತೇನೆ. ಅದನ್ನು ಕೇಳಿ ಅದರಂತೆಯೇ ಮಾಡು. ಕಾಂತ! ಈಗ ಇಲ್ಲಿ ಕಷ್ಟದಲ್ಲಿ ಸಿಲುಕಿ ಶರಣಾಗತನಾಗಿರುವ ಇವನನ್ನು ವಿಶೇಷವಾಗಿ ರಕ್ಷಿಸು!

12142015a ಏಷ ಶಾಕುನಿಕಃ ಶೇತೇ ತವ ವಾಸಂ ಸಮಾಶ್ರಿತಃ|

12142015c ಶೀತಾರ್ತಶ್ಚ ಕ್ಷುಧಾರ್ತಶ್ಚ ಪೂಜಾಮಸ್ಮೈ ಪ್ರಯೋಜಯ||

ಹಕ್ಕಿ ಹಿಡಿಯುವ ವ್ಯಾಧನು ಇಲ್ಲಿ ಛಳಿ-ಹಸಿವೆಗಳಿಂದ ಆರ್ತನಾಗಿ ನಿನ್ನ ವಾಸಸ್ಥಾನವನ್ನೇ ಆಶ್ರಯಿಸಿ ಮಲಗಿದ್ದಾನೆ. ನೀನು ಇವನನ್ನು ಸತ್ಕರಿಸುವವನಾಗು.

12142016a ಯೋ ಹಿ ಕಶ್ಚಿದ್ದ್ವಿಜಂ ಹನ್ಯಾದ್ಗಾಂ ವಾ ಲೋಕಸ್ಯ ಮಾತರಮ್|

12142016c ಶರಣಾಗತಂ ಚ ಯೋ ಹನ್ಯಾತ್ತುಲ್ಯಂ ತೇಷಾಂ ಚ ಪಾತಕಮ್||

ಯಾರು ದ್ವಿಜನನ್ನು, ಲೋಕಮಾತೆ ಗೋವನ್ನು ಅಥವಾ ಶರಣಾಗತನನ್ನು ಕೊಲ್ಲುತ್ತಾನೋ ಅವನಿಗೆ ಒಂದೇ ಸಮನಾದ ಪಾಪವು ತಗಲುತ್ತದೆ.

12142017a ಯಾಸ್ಮಾಕಂ ವಿಹಿತಾ ವೃತ್ತಿಃ ಕಾಪೋತೀ ಜಾತಿಧರ್ಮತಃ|

12142017c ಸಾ ನ್ಯಾಯ್ಯಾತ್ಮವತಾ ನಿತ್ಯಂ ತ್ವದ್ವಿಧೇನಾಭಿವರ್ತಿತುಮ್||

ಜಾತಿಧರ್ಮಕ್ಕನುಸಾರವಾಗಿ ನಮಗೆ ಕಾಪೋತೀ ವೃತ್ತಿಯು ವಿಹಿತವಾಗಿದೆ. ನಿನ್ನಂತಹ ಆತ್ಮವಂತನು ನಿತ್ಯವೂ ಆ ವೃತ್ತಿಯನ್ನು ಪರಿಪಾಲಿಸಬೇಕು.

12142018a ಯಸ್ತು ಧರ್ಮಂ ಯಥಾಶಕ್ತಿ ಗೃಹಸ್ಥೋ ಹ್ಯನುವರ್ತತೇ|

12142018c ಸ ಪ್ರೇತ್ಯ ಲಭತೇ ಲೋಕಾನಕ್ಷಯಾನಿತಿ ಶುಶ್ರುಮ||

ಯಥಾಶಕ್ತಿ ತನ್ನ ಧರ್ಮವನ್ನು ಪಾಲಿಸುವ ಗೃಹಸ್ಥನು ಮರಣಾನಂತರ ಅಕ್ಷಯ ಲೋಕಗಳನ್ನು ಪಡೆದುಕೊಳ್ಳುತ್ತಾನೆ ಎಂದು ಕೇಳಿದ್ದೇವೆ.

12142019a ಸ ತ್ವಂ ಸಂತಾನವಾನದ್ಯ ಪುತ್ರವಾನಪಿ ಚ ದ್ವಿಜ|

12142019c ತತ್ಸ್ವದೇಹೇ ದಯಾಂ ತ್ಯಕ್ತ್ವಾ ಧರ್ಮಾರ್ಥೌ ಪರಿಗೃಹ್ಯ ವೈ|

12142019e ಪೂಜಾಮಸ್ಮೈ ಪ್ರಯುಂಕ್ಷ್ವ ತ್ವಂ ಪ್ರೀಯೇತಾಸ್ಯ ಮನೋ ಯಥಾ[10]||

ದ್ವಿಜ! ಇಂದು ನೀನು ಸಂತಾನವಂತನೂ ಪುತ್ರವಂತನೂ ಆಗಿದ್ದೀಯೆ. ಆದುದರಿಂದ ನಿನ್ನ ದೇಹದ ಮೇಲಿನ ದಯೆಯನ್ನು ತೊರೆದು ಧರ್ಮಾರ್ಥಗಳನ್ನು ಸ್ವೀಕರಿಸಿ ಇವನ ಮನಸ್ಸು ಪ್ರಸನ್ನಗೊಳ್ಳುವ ರೀತಿಯಲ್ಲಿ ಸತ್ಕರಿಸು.”

12142020a ಇತಿ ಸಾ ಶಕುನೀ ವಾಕ್ಯಂ ಕ್ಷಾರಕಸ್ಥಾ ತಪಸ್ವಿನೀ|

12142020c ಅತಿದುಃಖಾನ್ವಿತಾ ಪ್ರೋಚ್ಯ ಭರ್ತಾರಂ ಸಮುದೈಕ್ಷತ[11]||

ಆ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ತಪಸ್ವಿನೀ ಹೆಣ್ಣು ಪಕ್ಷಿಯು ಅತಿ ದುಃಖಾನ್ವಿತಳಾಗಿ ಹೀಗೆ ಹೇಳಿ ತನ್ನ ಪತಿಯ ಕಡೆ ನೋಡತೊಡಗಿದಳು.

12142021a ಸ ಪತ್ನ್ಯಾ ವಚನಂ ಶ್ರುತ್ವಾ ಧರ್ಮಯುಕ್ತಿಸಮನ್ವಿತಮ್|

12142021c ಹರ್ಷೇಣ ಮಹತಾ ಯುಕ್ತೋ ಬಾಷ್ಪವ್ಯಾಕುಲಲೋಚನಃ||

ಪತ್ನಿಯ ಆ ಧರ್ಮಯುಕ್ತಿಸಮನ್ವಿತ ಮಾತನ್ನು ಕೇಳಿ ಗಂಡುಪಾರಿವಾಳವು ಮಹಾ ಹರ್ಷಯುಕ್ತಗೊಂಡು ಕಣ್ಣೀರು ತುಂಬಿ ವ್ಯಾಕುಲಲೋಚನನಾದನು.

12142022a ತಂ ವೈ ಶಾಕುನಿಕಂ ದೃಷ್ಟ್ವಾ ವಿಧಿದೃಷ್ಟೇನ ಕರ್ಮಣಾ|

12142022c ಪೂಜಯಾಮಾಸ ಯತ್ನೇನ ಸ ಪಕ್ಷೀ ಪಕ್ಷಿಜೀವಿನಮ್||

ಆ ಪಕ್ಷಿಯು ಪಕ್ಷಿಗಳನ್ನು ಹಿಂಸಿಸಿ ಜೀವಿಸುತ್ತಿದ್ದ ವ್ಯಾಧನನ್ನು ನೋಡಿ ವಿಧಿದೃಷ್ಟ ಕರ್ಮಗಳಿಂದ ಪ್ರಯತ್ನಪಟ್ಟು ಪೂಜಿಸತೊಡಗಿತು.

12142023a ಉವಾಚ ಚ ಸ್ವಾಗತಂ ತೇ ಬ್ರೂಹಿ ಕಿಂ ಕರವಾಣ್ಯಹಮ್|

12142023c ಸಂತಾಪಶ್ಚ ನ ಕರ್ತವ್ಯಃ ಸ್ವಗೃಹೇ ವರ್ತತೇ ಭವಾನ್||

ಅವನು ಹೇಳಿದನು: “ನಿನಗೆ ಸ್ವಾಗತ. ಹೇಳು ನಾನು ನಿನಗೆ ಏನು ಮಾಡಲಿ? ಸಂತಾಪಪಡಬೇಡ. ನೀನು ಈಗ ನಿನ್ನದೇ ಮನೆಯಲ್ಲಿ ಇದ್ದೀಯೆ.

12142024a ತದ್ ಬ್ರವೀತು ಭವಾನ್ ಕ್ಷಿಪ್ರಂ ಕಿಂ ಕರೋಮಿ ಕಿಮಿಚ್ಚಸಿ|

12142024c ಪ್ರಣಯೇನ ಬ್ರವೀಮಿ ತ್ವಾಂ ತ್ವಂ ಹಿ ನಃ ಶರಣಾಗತಃ||

ಆದುದರಿಂದ ಬೇಗ ಹೇಳು. ನಿನಗೆ ಏನು ಬೇಕು? ನಾನೇನು ಮಾಡಲಿ? ನಾನು ಅತಿ ಪ್ರೀತಿಯಿಂದ ಕೇಳುತ್ತಿದ್ದೇನೆ. ಏಕೆಂದರೆ ನೀನು ನಮ್ಮ ಮನೆಗೆ ಬಂದಿದ್ದೀಯೆ.

12142025a ಶರಣಾಗತಸ್ಯ ಕರ್ತವ್ಯಮಾತಿಥ್ಯಮಿಹ ಯತ್ನತಃ|

12142025c ಪಂಚಯಜ್ಞಪ್ರವೃತ್ತೇನ ಗೃಹಸ್ಥೇನ ವಿಶೇಷತಃ||

ಮನೆಗೆ ಬಂದಿರುವ ಅತಿಥಿಗೆ ಪ್ರಯತ್ನಪೂರ್ವಕ ಸತ್ಕಾರವನ್ನು ಎಲ್ಲರೂ ಮಾಡಬೇಕಿಂದಿದ್ದರೂ ಪಂಚಯಜ್ಞದ ಅಧಿಕಾರಿಯಾದ ಗೃಹಸ್ಥನಿಗೆ ಇದು ಪ್ರಧಾನ ಧರ್ಮವು.

12142026a ಪಂಚಯಜ್ಞಾಂಸ್ತು ಯೋ ಮೋಹಾನ್ನ ಕರೋತಿ ಗೃಹಾಶ್ರಮೀ|

12142026c ತಸ್ಯ ನಾಯಂ ನ ಚ ಪರೋ ಲೋಕೋ ಭವತಿ ಧರ್ಮತಃ||

ಗೃಹಸ್ಥಾಶ್ರಮದಲ್ಲಿದ್ದುಕೊಂಡೂ ಮೋಹದಿಂದ ಪಂಚಯಜ್ಞಗಳನ್ನು ಅನುಷ್ಠಾನಮಾಡದ ಗೃಹಸ್ಥನಿಗೆ ಧರ್ಮದ ಅನುಸಾರ ಈ ಲೋಕವೂ ಮತ್ತು ಪರ ಲೋಕವೂ ದೊರಕುವುದಿಲ್ಲ.

12142027a ತದ್ ಬ್ರೂಹಿ ತ್ವಂ ಸುವಿಸ್ರಬ್ಧೋ ಯತ್ತ್ವಂ ವಾಚಾ ವದಿಷ್ಯಸಿ|

12142027c ತತ್ಕರಿಷ್ಯಾಮ್ಯಹಂ ಸರ್ವಂ ಮಾ ತ್ವಂ ಶೋಕೇ ಮನಃ ಕೃಥಾಃ||

ಆದುದರಿಂದ ನೀನು ಪೂರ್ಣ ವಿಶ್ವಾಸದಿಂದ ನನ್ನಲ್ಲಿ ನಿನ್ನ ಮನಸ್ಸನ್ನು ತಿಳಿಸು. ನೀನು ಏನು ಹೇಳುತ್ತೀಯೋ ಅವೆಲ್ಲವನ್ನೂ ನಾನು ಮಾಡುತ್ತೇನೆ. ಆದುದರಿಂದ ನೀನು ಮನಸ್ಸಿನಲ್ಲಿ ಶೋಕಿಸಬೇಡ.”

12142028a ತಸ್ಯ ತದ್ವಚನಂ ಶ್ರುತ್ವಾ ಶಕುನೇರ್ಲುಬ್ಧಕೋಽಬ್ರವೀತ್|

12142028c ಬಾಧತೇ ಖಲು ಮಾ ಶೀತಂ ಹಿಮತ್ರಾಣಂ ವಿಧೀಯತಾಮ್||

ಪಕ್ಷಿಯ ಆ ಮಾತನ್ನು ಕೇಳಿ ವ್ಯಾಧನು “ಛಳಿಯು ನನ್ನನ್ನು ಅತಿಯಾಗಿ ಬಾಧಿಸುತ್ತಿದೆ. ಛಳಿಯನ್ನು ಹೋಗಲಾಡಿಸುವಂತೆ ಏನಾದರೂ ಮಾಡು” ಎಂದನು.

12142029a ಏವಮುಕ್ತಸ್ತತಃ ಪಕ್ಷೀ ಪರ್ಣಾನ್ಯಾಸ್ತೀರ್ಯ ಭೂತಲೇ|

12142029c ಯಥಾಶುಷ್ಕಾಣಿ ಯತ್ನೇನ ಜ್ವಲನಾರ್ಥಂ ದ್ರುತಂ ಯಯೌ||

ಅವನು ಹೀಗೆ ಹೇಳಲು ಪಕ್ಷಿಯು ನೆಲದ ಮೇಲೆ ಬಹಳಷ್ಟು ಎಲೆಗಳನ್ನು ತಂದು ಹಾಕಿತು ಮತ್ತು ಬೆಂಕಿಯನ್ನು ಹೊತ್ತಿಸಲು ತನ್ನ ರೆಕ್ಕೆಗಳನ್ನು ಬೀಸಿ ಆ ಎಲೆಗಳನ್ನು ಒಣಗಿಸಿತು.

12142030a ಸ ಗತ್ವಾಂಗಾರಕರ್ಮಾಂತಂ ಗೃಹೀತ್ವಾಗ್ನಿಮಥಾಗಮತ್|

12142030c ತತಃ ಶುಷ್ಕೇಷು ಪರ್ಣೇಷು ಪಾವಕಂ ಸೋಽಭ್ಯದೀದಿಪತ್||

ಅವನು ಕುಲುಮೆಯವನಲ್ಲಿಗೆ ಹೋಗಿ ಬೆಂಕಿಯನ್ನು ತಂದು ಅದನ್ನು ಒಣಗಿದ ಎಲೆಗಳ ಮೇಲಿಟ್ಟು ಅಲ್ಲಿ ಅಗ್ನಿಯನ್ನು ಪ್ರಜ್ವಲಿಸಿತು.

12142031a ಸುಸಂದೀಪ್ತಂ ಮಹತ್ ಕೃತ್ವಾ ತಮಾಹ ಶರಣಾಗತಮ್|

12142031c ಪ್ರತಾಪಯ ಸುವಿಸ್ರಬ್ಧಂ ಸ್ವಗಾತ್ರಾಣ್ಯಕುತೋಭಯಃ||

ಹೀಗೆ ಅಗ್ನಿಯನ್ನು ದೊಡ್ಡದಾಗಿ ಪ್ರಜ್ವಲಿಸಿ ಪಕ್ಷಿಯು ಶರಣಾಗತನಿಗೆ ಹೇಳಿತು: “ಈಗ ನಿನಗೆ ಯಾವ ರೀತಿಯ ಭಯವೂ ಇಲ್ಲ. ನಿಶ್ಚಿಂತನಾಗಿ ನಿನ್ನ ಎಲ್ಲ ಅಂಗಾಗಗಳನ್ನೂ ಚೆನ್ನಾಗಿ ಕಾಯಿಸಿಕೋ.”

12142032a ಸ ತಥೋಕ್ತಸ್ತಥೇತ್ಯುಕ್ತ್ವಾ ಲುಬ್ಧೋ ಗಾತ್ರಾಣ್ಯತಾಪಯತ್|

12142032c ಅಗ್ನಿಪ್ರತ್ಯಾಗತಪ್ರಾಣಸ್ತತಃ ಪ್ರಾಹ ವಿಹಂಗಮಮ್[12]||

ಹಾಗೆಯೇ ಆಗಲೆಂದು ಹೇಳಿ ವ್ಯಾಧನು ತನ್ನ ಶರೀರವನ್ನು ಕಾಯಿಸಿಕೊಂಡನು. ಅಗ್ನಿಯ ಹತ್ತಿರ ಕುಳಿತಿದ್ದ ಅವನಿಗೆ ಪ್ರಾಣವು ಪುನಃ ಬಂದಂತಾಯಿತು. ಆಗ ಅವನು ಪಕ್ಷಿಗೆ ಹೇಳಿದನು:

12142033a ದತ್ತಮಾಹಾರಮಿಚ್ಚಾಮಿ ತ್ವಯಾ ಕ್ಷುದ್ಭಾಧತೇ ಹಿ ಮಾಮ್|

12142033c ತದ್ವಚಃ ಸ ಪ್ರತಿಶ್ರುತ್ಯ ವಾಕ್ಯಮಾಹ ವಿಹಂಗಮಃ||

12142034a ನ ಮೇಽಸ್ತಿ ವಿಭವೋ ಯೇನ ನಾಶಯಾಮಿ ತವ ಕ್ಷುಧಾಮ್|

12142034c ಉತ್ಪನ್ನೇನ ಹಿ ಜೀವಾಮೋ ವಯಂ ನಿತ್ಯಂ ವನೌಕಸಃ||

12142035a ಸಂಚಯೋ ನಾಸ್ತಿ ಚಾಸ್ಮಾಕಂ ಮುನೀನಾಮಿವ ಕಾನನೇ|

“ಹಸಿವೆಯು ನನ್ನನ್ನು ಬಾಧಿಸುತ್ತಿದೆ. ನೀನು ನೀಡುವ ಆಹಾರವನ್ನು ಬಯಸುತ್ತೇನೆ.” ಅವನ ಆ ಮಾತನ್ನು ಕೇಳಿ ಪಕ್ಷಿಯು ಹೇಳಿತು: “ನಿನ್ನ ಹಸಿವೆಯನ್ನು ನಾಶಪಡಿಸಲು ನನ್ನಲ್ಲಿ ಸಂಪತ್ತಿಲ್ಲ. ನಾನು ಒಂದು ವನವಾಸೀ ಪಕ್ಷಿ. ನಿತ್ಯವೂ ವನೌಕಸ ಉತ್ಪತ್ತಿಗಳಿಂದಲೇ ನಾವು ಜೀವಿಸುತ್ತೇವೆ. ಕಾನನದಲ್ಲಿರುವ ಮುನಿಗಳಂತೆ ನಮ್ಮಲ್ಲಿ ಯಾವ ಭೋಜನ ಸಂಗ್ರಹವೂ ಇಲ್ಲ.”

12142035c ಇತ್ಯುಕ್ತ್ವಾ ಸ ತದಾ ತತ್ರ ವಿವರ್ಣವದನೋಽಭವತ್||

12142036a ಕಥಂ ನು ಖಲು ಕರ್ತವ್ಯಮಿತಿ ಚಿಂತಾಪರಃ ಸದಾ|

12142036c ಬಭೂವ ಭರತಶ್ರೇಷ್ಠ ಗರ್ಹಯನ್ ವೃತ್ತಿಮಾತ್ಮನಃ||

ಹೀಗೆ ಹೇಳಿ ಆ ಪಾರಿವಾಳದ ಮುಖವು ಸ್ವಲ್ಪ ಉದಾಸಗೊಂಡಿತು. ಈಗ ನಾನು ಏನು ಮಾಡಬೇಕು ಎಂದು ಚಿಂತಾಪರನಾದನು. ಭರತಶ್ರೇಷ್ಠ! ಅವನು ತನ್ನ ಕಪೋತೀ ವೃತ್ತಿಯನ್ನು ನಿಂದಿಸತೊಡಗಿದನು.

12142037a ಮುಹೂರ್ತಾಲ್ಲಬ್ಧಸಂಜ್ಞಸ್ತು ಸ ಪಕ್ಷೀ ಪಕ್ಷಿಘಾತಕಮ್|

12142037c ಉವಾಚ ತರ್ಪಯಿಷ್ಯೇ ತ್ವಾಂ ಮುಹೂರ್ತಂ ಪ್ರತಿಪಾಲಯ||

ಸ್ವಲ್ಪವೇ ಸಮಯದಲ್ಲಿ ಅದಕ್ಕೆ ಏನೋ ನೆನಪಾಯಿತು. ಪಕ್ಷಿಯು ಪಕ್ಷಿಘಾತಕನಿಗೆ ಹೇಳಿತು: “ಒಂದು ಕ್ಷಣ ನಿಲ್ಲು. ನಿನ್ನನ್ನು ತೃಪ್ತಿಗೊಳಿಸುತ್ತೇನೆ.”

12142038a ಇತ್ಯುಕ್ತ್ವಾ ಶುಷ್ಕಪರ್ಣೈಃ ಸ ಸಂಪ್ರಜ್ವಾಲ್ಯ ಹುತಾಶನಮ್|

12142038c ಹರ್ಷೇಣ ಮಹತಾ ಯುಕ್ತಃ ಕಪೋತಃ ಪುನರಬ್ರವೀತ್||

ಹೀಗೆ ಹೇಳಿ ಆ ಪಕ್ಷಿಯು ಒಣಗಿದ ಎಲೆಗಳಿಂದ ಪುನಃ ಅಗ್ನಿಯನ್ನು ಪ್ರಜ್ವಲಿತಗೊಳಿಸಿ ಅತ್ಯಂತ ಹರ್ಷದಿಂದ ವ್ಯಾಧನಿಗೆ ಹೇಳಿತು:

12142039a ದೇವಾನಾಂ ಚ ಮುನೀನಾಂ ಚ ಪಿತೃಣಾಂ ಚ ಮಹಾತ್ಮನಾಮ್|

12142039c ಶ್ರುತಪೂರ್ವೋ ಮಯಾ ಧರ್ಮೋ ಮಹಾನತಿಥಿಪೂಜನೇ||

“ದೇವತೆಗಳ, ಮುನಿಗಳ, ಮತ್ತು ಮಹಾತ್ಮ ಪಿತೃಗಳ ಪೂಜೆಗಿಂತಲೂ ಅತಿಥಿಪೂಜನವು ಮಹಾ ಧರ್ಮವೆಂದು ಹಿಂದೆ ನಾನು ಕೇಳಿದ್ದೇನೆ[13].

12142040a ಕುರುಷ್ವಾನುಗ್ರಹಂ ಮೇಽದ್ಯ ಸತ್ಯಮೇತದ್ ಬ್ರವೀಮಿ ತೇ|

12142040c ನಿಶ್ಚಿತಾ ಖಲು ಮೇ ಬುದ್ಧಿರತಿಥಿಪ್ರತಿಪೂಜನೇ||

ಇಂದು ನೀನು ನನ್ನನ್ನು ಅನುಗ್ರಹಿಸು. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಅತಿಥಿಪೂಜನೆಯ ಕುರಿತು ಇಂದು ನನ್ನ ಬುದ್ಧಿಯು ನಿಶ್ಚಯಿಸಿಬಿಟ್ಟಿದೆ.”

12142041a ತತಃ ಸತ್ಯಪ್ರತಿಜ್ಞೋ ವೈ ಸ ಪಕ್ಷೀ ಪ್ರಹಸನ್ನಿವ|

12142041c ತಮಗ್ನಿಂ ತ್ರಿಃ ಪರಿಕ್ರಮ್ಯ ಪ್ರವಿವೇಶ ಮಹೀಪತೇ||

ಮಹೀಪತೇ! ಅನಂತರ ಅತಿಥಿಪೂಜೆಯ ಸತ್ಯಪ್ರತಿಜ್ಞೆಯನ್ನು ಮಾಡಿದ ಆ ಪಕ್ಷಿಯು ನಗುನಗುತ್ತಲೇ ಮೂರು ಬಾರಿ ಪ್ರದಕ್ಷಿಣೆ ಮಾಡಿ ಅಗ್ನಿಯನ್ನು ಪ್ರವೇಶಿಸಿತು.

12142042a ಅಗ್ನಿಮಧ್ಯಂ ಪ್ರವಿಷ್ಟಂ ತಂ ಲುಬ್ಧೋ ದೃಷ್ಟ್ವಾಥ ಪಕ್ಷಿಣಮ್|

12142042c ಚಿಂತಯಾಮಾಸ ಮನಸಾ ಕಿಮಿದಂ ನು ಕೃತಂ ಮಯಾ||

ಅಗ್ನಿಮಧ್ಯವನ್ನು ಪ್ರವೇಶಿಸಿದ ಆ ಪಕ್ಷಿಯನ್ನು ನೋಡಿದ ವ್ಯಾಧನು “ಇದೇನು ಮಾಡಿಬಿಟ್ಟೆ!” ಎಂದು ಮನಸ್ಸಿನಲ್ಲಿಯೇ ಚಿಂತಿಸತೊಡಗಿದನು.

12142043a ಅಹೋ ಮಮ ನೃಶಂಸಸ್ಯ ಗರ್ಹಿತಸ್ಯ ಸ್ವಕರ್ಮಣಾ|

12142043c ಅಧರ್ಮಃ ಸುಮಹಾನ್ ಘೋರೋ ಭವಿಷ್ಯತಿ ನ ಸಂಶಯಃ||

“ಅಯ್ಯೋ! ನನ್ನದೇ ಕ್ರೂರ ಕರ್ಮದಿಂದ ನಿಂದಿತನಾದ ನನ್ನಿಂದ ಮಹಾ ಘೋರ ಅಧರ್ಮವು ನಡೆದುಹೋಯಿತು. ಇದರಲ್ಲಿ ಸಂಶಯವೇ ಇಲ್ಲ.”

12142044a ಏವಂ ಬಹುವಿಧಂ ಭೂರಿ ವಿಲಲಾಪ ಸ ಲುಬ್ಧಕಃ|

12142044c ಗರ್ಹಯನ್ ಸ್ವಾನಿ ಕರ್ಮಾಣಿ ದ್ವಿಜಂ ದೃಷ್ಟ್ವಾ ತಥಾಗತಮ್||

ಪಕ್ಷಿಯ ಆ ಅವಸ್ಥೆಯನ್ನು ನೋಡಿ ಹೀಗೆ ಬಹುವಿಧದಲ್ಲಿ  ತನ್ನ ಕರ್ಮಗಳನ್ನು ನಿಂದಿಸುತ್ತಾ ವ್ಯಾಧನು ಅತಿಯಾಗಿ ವಿಲಪಿಸಿದನು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಆಪದ್ಧರ್ಮಪರ್ವಣಿ ಕಪೋತಲುಬ್ಧಕಸಂವಾದೇ ದ್ವಾಚತ್ವಾರಿಂಶದಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವದಲ್ಲಿ ಕಪೋತಲುಬ್ಧಕಸಂವಾದ ಎನ್ನುವ ನೂರಾನಲ್ವತ್ತೆರಡನೇ ಅಧ್ಯಾಯವು.

Flower On White Background Free Stock Photo - Public Domain Pictures

[1] ಗೀತಾ ಪ್ರೆಸ್ ಗೋರಖಪುರದ ಸಂಪುಟದಲ್ಲಿ ಈ ಅಧ್ಯಾಯವು ಮೂರು ಅಧ್ಯಾಯಗಳಲ್ಲಿ ಬರುತ್ತದೆ.

[2] ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಎರಡು ಅಧಿಕ ಶ್ಲೋಕಗಳಿವೆ: ಪುತ್ರಪೌತ್ರವಧೂಭೃತ್ಯೈರಾಕೀರ್ಣಮಪಿ ಸರ್ವತಃ| ಭಾರ್ಯಾಹೀನಂ ಗೃಹಸ್ಥಸ್ಯ ಶೂನ್ಯಮೇವ ಗೃಹಂ ಭವೇತ್|| ನ ಗೃಹಂ ಗೃಹಮಿತ್ಯಾಹುರ್ಗೃಹಿಣೀ ಗೃಹಮುಚ್ಯತೇ| ಗೃಹಂ ತು ಗೃಹಿಣೀಹೀನಮನರಣ್ಯಸದೃಶಂ ಮತಮ್||

[3] ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಮೂರು ಅಧಿಕ ಶ್ಲೋಕಗಳಿವೆ: ನ ಭುಂಕ್ತೇಮಯ್ಯಭುಂಕ್ತೇ ಯಾ ನಾಸ್ನಾತೇ ಸ್ನಾತಿ ಸುವ್ರತಾ| ನಾತಿಷ್ಠತ್ಯುಪತಿಷ್ಠೇತ ಶೇತೇ ಚ ಶಯಿತೇ ಮಯಿ|| ಹೃಷ್ಟೇ ಭವತಿ ಸಾ ಹೃಷ್ಟಾ ದುಃಖಿತೇ ಮಯಿ ದುಃಖಿತಾ| ಪ್ರೋಷಿತೇ ದೀನವದನಾ ಕ್ರುದ್ಧೇ ಚ ಪ್ರಿಯವಾದಿನೀ|| ಪತಿವ್ರತಾ ಪತಿಗತಿಃ ಪತಿಪ್ರಿಯಹಿತೇ ರತಾ| ಯಸ್ಯ ಸ್ಯಾತ್ತಾದೃಶೀ ಭಾರ್ಯಾ ಧನ್ಯಃ ಸ ಪುರುಷೋ ಭುವಿ||

[4] ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಎರಡು ಅಧಿಕ ಶ್ಲೋಕಗಳಿವೆ: ವೃಕ್ಷಮೂಲೇಽಪಿ ದಯಿತಾ ಯಸ್ಯ ತಿಷ್ಠತಿ ತದ್ಗೃಹಮ್| ಪ್ರಾಸಾದೋಽಪಿ ತಯಾ ಹೀನಃ ಕಾಂತಾರ ಇತಿ ನಿಶ್ಚಿತಮ್|| ಧರ್ಮಾರ್ಥಕಾಮಕಾಲೇಷು ಭಾರ್ಯಾ ಪುಂಸಃ ಸಹಾಯಿನೀ| ವಿದೇಶಗಮನೇ ಚಾಸ್ಯ ಸೈವ ವಿಶ್ವಾಸಕಾರಿಕಾ||

[5] ಹ್ಯರ್ಥಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[6] ಇದರ ನಂತರ ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಯಸ್ಯ ಭಾರ್ಯಾ ಗೃಹೇ ನಾಸ್ತಿ ಸಾಧ್ವೀ ಚ ಪ್ರಿಯವಾದಿನೀ| ಅರಣ್ಯಂ ತೇನ ಗಂತವ್ಯಂ ಯಥಾರಣ್ಯಂ ತಥಾ ಗೃಹಮ್|| ಗೀತಾ ಪ್ರೆಸ್ ನಲ್ಲಿ ಇದರ ನಂತರ ಇನ್ನೊಂದು ಅಧ್ಯಾಯವು ಪ್ರಾರಂಭವಾಗುತ್ತದೆ. ಆದರೆ ಪುಣೆಯ ಸಂಪುಟದಲ್ಲಿ ಎರಡು ಅಧ್ಯಾಯಗಳನ್ನು ಒಂದೇ ಅಧ್ಯಾಯದಲ್ಲಿ ನೀಡಲಾಗಿದೆ.

[7] ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಕಪೋತ್ಯುವಾಚ| ಅಹೋಽತೀವ ಸುಭಾಗ್ಯಾಹಂ ಯಸ್ಯಾ ಮೇ ದಯಿತಃ ಪತಿಃ| ಅಸತೋ ವಾ ಸತೋ ವಾಪಿ ಗುಣಾನೇವಂ ಪ್ರಭಾಷತೇ||

[8] ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕಾರ್ಧವಿದೆ: ತುಷ್ಟೇ ಭರ್ತರಿ ನಾರೀಣಾಂ ತುಷ್ಟಾಃ ಸ್ಯುಃ ಸರ್ವದೇವತಾಃ||

[9] ಇದರ ನಂತರ ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ದಾವಾಗ್ನಿನೇವ ನಿರ್ದಗ್ಧಾ ಸಪುಷ್ಪಸ್ತವಕಾ ಲತಾ| ಭಸ್ಮೀಭವತಿ ಸಾ ನಾರೀ ಯಸ್ಯಾ ಭರ್ತಾ ನ ತುಷ್ಯತಿ||

[10] ಇದರ ನಂತರ ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಮತ್ಕೃತೇ ಮಾ ಚ ಸಂತಾಪಂ ಕುರ್ವೀಥಾಸ್ತ್ವಂ ವಿಹಂಗಮ| ಶರೀರಯಾತ್ರಾಕೃತ್ಯರ್ಥಮನ್ಯಾನ್ ದಾರಾನುಪೈಷ್ಯಸಿ||

[11] ಇದರ ನಂತರ ಗೀತಾ ಪ್ರೆಸ್ ನಲ್ಲಿ ಇನ್ನೊಂದು ಅಧ್ಯಾಯವು ಪ್ರಾರಂಭವಾಗುತ್ತದೆ.

[12] ಇದರ ನಂತರ ಗೀತಾ ಪ್ರೆಸ್ ಗೋರಖಪುರದ ಸಂಪುಟದಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಹರ್ಷೇಣ ಮಹತಾಽಽವಿಷ್ಠೋ ವಾಕ್ಯಂ ವ್ಯಾಕುಲಲೋಚನಃ| ತಥೇಮಂ ಶಕುನಿಂ ದೃಷ್ಟ್ವಾ ವಿಧಿದೃಷ್ಟೇನ ಕರ್ಮಣಾ||

[13] ನಾನು ಋಷಿಗಳು, ದೇವತೆಗಳು, ಪಿತೃಗಳು ಮತ್ತು ಮಹಾತ್ಮರ ಬಾಯಿಂದ ಅತಿಥಿಪೂಜೆಯು ಮಹಾ ಧರ್ಮವೆಂದು ಈ ಮೊದಲೇ ಕೇಳಿದ್ದೇನೆ (ಗೀತಾ ಪ್ರೆಸ್ ಗೋರಖಪುರ ಸಂಪುಟ).

Comments are closed.