Shanti Parva: Chapter 140

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೪೦

ಆಪತ್ಕಾಲದಲ್ಲಿ ರಾಜನ ಧರ್ಮನಿಶ್ಚಯ ಮತ್ತು ಉತ್ತಮ ಬ್ರಾಹ್ಮಣರ ಸೇವೆಯ ಆದೇಶ (1-37).

12140001 ಯುಧಿಷ್ಠಿರ ಉವಾಚ|

12140001a ಯದಿದಂ ಘೋರಮುದ್ದಿಷ್ಟಮಶ್ರದ್ಧೇಯಮಿವಾನೃತಮ್|

12140001c ಅಸ್ತಿ ಸ್ವಿದ್ದಸ್ಯುಮರ್ಯಾದಾ ಯಾಮಹಂ ಪರಿವರ್ಜಯೇ||

ಯುಧಿಷ್ಠಿರನು ಹೇಳಿದನು: “ಮಹಾಪುರುಷರಿಗೇ ಇಂತಹ ಭಯಂಕರ ಕರ್ಮವನ್ನು ಸಂಕಟಕಾಲದಲ್ಲಿ ಕರ್ತವ್ಯವೆಂದು ವಿಹಿಸಿರುವಾಗ ದುರಾಚಾರೀ ದಸ್ಯುಗಳ ದುಷ್ಕರ್ಮಗಳಿಗೆ ಯಾವ ಸೀಮೆಯು ಉಳಿದುಕೊಂಡಿದೆ? ಯಾವುದನ್ನು ನಾನು ಸದಾ ಪರಿತ್ಯಜಿಸಬೇಕು?

12140002a ಸಂಮುಹ್ಯಾಮಿ ವಿಷೀದಾಮಿ ಧರ್ಮೋ ಮೇ ಶಿಥಿಲೀಕೃತಃ|

12140002c ಉದ್ಯಮಂ ನಾಧಿಗಚ್ಚಾಮಿ ಕುತಶ್ಚಿತ್ ಪರಿಚಿಂತಯನ್||

ನಿನ್ನಿಂದ ಈ ಉಪಾಖ್ಯಾನವನ್ನು ಕೇಳಿ ನಾನು ಮೋಹಿತನೂ ವಿಷಾದಗ್ರಸ್ತನೂ ಆಗಿದ್ದೇನೆ. ನೀನು ನನ್ನಲ್ಲಿರುವ ಧರ್ಮವಿಷಯಕ ಉತ್ಸಾಹವನ್ನು ಶಿಥಿಲಮಾಡಿಬಿಟ್ಟೆ! ಎಷ್ಟೇ ಆಲೋಚಿಸಿದರೂ ನನಗೆ ಧರ್ಮದ ಕುರಿತಾದ ಉತ್ಸಾಹವನ್ನು ಪಡೆದುಕೊಳ್ಳಲಾಗುತ್ತಿಲ್ಲ.”

12140003 ಭೀಷ್ಮ ಉವಾಚ|

12140003a ನೈತಚ್ಚುದ್ಧಾಗಮಾದೇವ[1] ತವ ಧರ್ಮಾನುಶಾಸನಮ್|

12140003c ಪ್ರಜ್ಞಾಸಮವತಾರೋಽಯಂ ಕವಿಭಿಃ ಸಂಭೃತಂ ಮಧು||

ಭೀಷ್ಮನು ಹೇಳಿದನು: “ನಾನು ಕೇವಲ ಆಗಮಗಳನ್ನು ಕೇಳಿ ನಿನಗೆ ಧರ್ಮಾನುಶಾಸನವನ್ನು ನೀಡುತ್ತಿಲ್ಲ. ದುಂಬಿಗಳು ಅನೇಕ ಸ್ಥಳಗಳಿಂದ ಅನೇಕ ಹೂವುಗಳಿಂದ ರಸವನ್ನು ಸಂಗ್ರಹಿಸುವಂತೆ ವಿದ್ವಾಂಸರು ಇಲ್ಲಿ ನಾನಾ ಪ್ರಕಾರದ ಬುದ್ಧಿ-ವಿಚಾರಗಳ ಸಂಕಲನವನ್ನು ಮಾಡಿದ್ದಾರೆ.

12140004a ಬಹ್ವ್ಯಃ ಪ್ರತಿವಿಧಾತವ್ಯಾಃ ಪ್ರಜ್ಞಾ ರಾಜ್ಞಾ ತತಸ್ತತಃ|

12140004c ನೈಕಶಾಖೇನ ಧರ್ಮೇಣ ಯಾತ್ರೈಷಾ ಸಂಪ್ರವರ್ತತೇ||

ರಾಜನಾದವನು ಬೇರೆ ಬೇರೆ ಕಡೆಗಳಿಂದ ಮತ್ತು ನಾನಾ  ತರಹದ ಮನುಷ್ಯರಿಂದ ಭಿನ್ನ ಭಿನ್ನ ಪ್ರಕಾರದ ಬುದ್ಧಿಗಳನ್ನು ಕಲಿಯಬೇಕು. ಅವನು ಒಂದೇ ಒಂದು ಶಾಖೆಯ ಧರ್ಮವನ್ನು ಹಿಡಿದು ಕುಳಿತುಕೊಳ್ಳಬಾರದು. ಯಾವ ರಾಜನಲ್ಲಿ ಸಂಕಟದ ಸಮಯದಲ್ಲಿ ಈ ಬುದ್ಧಿಯು ಸ್ಫುರಿತಗೊಳ್ಳುವುದೋ ಅವನು ಆತ್ಮರಕ್ಷಣೆಗಾಗಿ ಯಾವುದಾದರೂ ಉಪಾಯವನ್ನು ಹುಡುಕಿಕೊಳ್ಳುತ್ತಾನೆ.

12140005a ಬುದ್ಧಿಸಂಜನನಂ ರಾಜ್ಞಾಂ ಧರ್ಮಮಾಚರತಾಂ ಸದಾ|

12140005c ಜಯೋ ಭವತಿ ಕೌರವ್ಯ ತದಾ ತದ್ವಿದ್ಧಿ ಮೇ ವಚಃ||

ಕೌರವ್ಯ! ಧರ್ಮ ಮತ್ತು ಸತ್ಪುರುಷರ ಆಚಾರ – ಬುದ್ಧಿಯಿಂದಲೇ ಪ್ರಕಟವಾಗುತ್ತವೆ ಮತ್ತು ಸದಾ ಅದರಿಂದಲೇ ತಿಳಿಯುತ್ತದೆ. ನನ್ನ ಈ ಮಾತನ್ನು ನೀನು ಚೆನ್ನಾಗಿ ಅರ್ಥಮಾಡಿಕೋ.

12140006a ಬುದ್ಧಿಶ್ರೇಷ್ಠಾ ಹಿ ರಾಜಾನೋ ಜಯಂತಿ ವಿಜಯೈಷಿಣಃ|

12140006c ಧರ್ಮಃ ಪ್ರತಿವಿಧಾತವ್ಯೋ ಬುದ್ಧ್ಯಾ ರಾಜ್ಞಾ ತತಸ್ತತಃ||

ಏಕೆಂದರೆ ವಿಜಯದಲ್ಲಿ ಅಭಿಲಾಷೆಯನ್ನಿಟ್ಟಿರುವ ರಾಜರಿಗೆ ಶ್ರೇಷ್ಠ ಬುದ್ಧಿಯೇ ಜಯವನ್ನು ನೀಡುತ್ತದೆ. ರಾಜನಾದವನು ಇಲ್ಲಿ-ಅಲ್ಲಿಂದ ಬುದ್ಧಿಶಿಕ್ಷಣವನ್ನು ಪಡೆದುಕೊಂಡು ಧರ್ಮವನ್ನು ಚೆನ್ನಾಗಿ ಆಚರಿಸಬೇಕು.

12140007a ನೈಕಶಾಖೇನ ಧರ್ಮೇಣ ರಾಜ್ಞಾಂ ಧರ್ಮೋ ವಿಧೀಯತೇ|

12140007c ದುರ್ಬಲಸ್ಯ ಕುತಃ ಪ್ರಜ್ಞಾ ಪುರಸ್ತಾದನುದಾಹೃತಾ||

ಒಂದೇ ಶಾಖೆಯ ಧರ್ಮದಿಂದ ರಾಜನ ಧರ್ಮವು ನಿರ್ವಹಿಸುವುದಿಲ್ಲ. ಒಂದೇ ಶಾಖೆಯ ಬುದ್ಧಿಯ ಶಿಕ್ಷಣವನ್ನು ಪಡೆದ ದುರ್ಬಲ ರಾಜನಿಗೆ ಪೂರ್ಣ ಪ್ರಜ್ಞೆಯು ಹೇಗೆ ತಾನೇ ಬರುತ್ತದೆ?

12140008a ಅದ್ವೈಧಜ್ಞಃ ಪಥಿ ದ್ವೈಧೇ ಸಂಶಯಂ ಪ್ರಾಪ್ತುಮರ್ಹತಿ|

12140008c ಬುದ್ಧಿದ್ವೈಧಂ ವೇದಿತವ್ಯಂ ಪುರಸ್ತಾದೇವ ಭಾರತ||

ಭಾರತ! ಒಂದೇ ಧರ್ಮ ಅಥವಾ ಕರ್ಮವು ಒಂದು ಸಮಯದಲ್ಲಿ ಧರ್ಮವೆನಿಸಿಕೊಳ್ಳುತ್ತದೆ ಮತ್ತು ಇನ್ನೊಂದು ಸಮಯದಲ್ಲಿ ಅಧರ್ಮವೆಂದೆನಿಸಿಕೊಳ್ಳುತ್ತದೆ. ಇದನ್ನು ದ್ವೈಧ ಎಂದು ಕರೆಯುತ್ತಾರೆ. ಈ ದ್ವೈಧವನ್ನು ತಿಳಿಯದವನು ದ್ವೈಧವನ್ನು ತಲುಪಿದಾಗ ಸಂಶಯಕ್ಕೊಳಗಾಗುತ್ತಾನೆ. ಆದುದರಿಂದ ಬುದ್ಧಿಯ ಮೂಲಕ ಈ ದ್ವೈಧವನ್ನು ಮೊದಲೇ ತಿಳಿದುಕೊಂಡಿರಬೇಕು.

12140009a ಪಾರ್ಶ್ವತಃಕರಣಂ ಪ್ರಜ್ಞಾ ವಿಷೂಚೀ ತ್ವಾಪಗಾ ಇವ[2]|

12140009c ಜನಸ್ತೂಚ್ಚಾರಿತಂ ಧರ್ಮಂ ವಿಜಾನಾತ್ಯನ್ಯಥಾನ್ಯಥಾ||

ಪ್ರಾಜ್ಞನು ಪ್ರತ್ಯೇಕ ಕಾರ್ಯಗಳನ್ನೂ ಗುಪ್ತವಾಗಿಯೇ ಪ್ರಾರಂಭಿಸಿ ನಂತರ ಅದನ್ನು ಸರ್ವತ್ರ ಪ್ರಕಾಶಗೊಳಿಸಬೇಕು. ಇಲ್ಲದಿದ್ದರೆ ಅವನು ಆಚರಿಸುವ ಧರ್ಮವನ್ನು ಜನರು ಅನ್ಯಥಾ ತಿಳಿದುಕೊಳ್ಳುತ್ತಾರೆ.

12140010a ಸಮ್ಯಗ್ವಿಜ್ಞಾನಿನಃ[3] ಕೇ ಚಿನ್ಮಿಥ್ಯಾವಿಜ್ಞಾನಿನೋಽಪರೇ|

12140010c ತದ್ವೈ ಯಥಾತಥಂ ಬುದ್ಧ್ವಾ ಜ್ಞಾನಮಾದದತೇ ಸತಾಮ್||

ಕೆಲವರು ಉತ್ತಮ ಜ್ಞಾನಿಗಳಾಗಿರುತ್ತಾರೆ ಮತ್ತು ಇನ್ನು ಕೆಲವರು ಮಿಥ್ಯ ಜ್ಞಾನಿಗಳಾಗಿರುತ್ತಾರೆ. ರಾಜನಾದವನು ಈ ವಿಷಯವನ್ನು ಚೆನ್ನಾಗಿ ತಿಳಿದುಕೊಂಡು ಸತ್ಯಜ್ಞಾನಸಂಪನ್ನ ಸತ್ಪುರುಷರಿಂದಲೇ ಜ್ಞಾನವನ್ನು ಪಡೆದುಕೊಳ್ಳಬೇಕು.

12140011a ಪರಿಮುಷ್ಣಂತಿ ಶಾಸ್ತ್ರಾಣಿ ಧರ್ಮಸ್ಯ ಪರಿಪಂಥಿನಃ|

12140011c ವೈಷಮ್ಯಮರ್ಥವಿದ್ಯಾನಾಂ ನೈರರ್ಥ್ಯಾತ್[4] ಖ್ಯಾಪಯಂತಿ ತೇ||

ಧರ್ಮದ್ರೋಹಿಗಳು ಶಾಸ್ತ್ರಗಳನ್ನು ಕೊಳ್ಳೆಹೊಡೆಯುತ್ತಾರೆ. ಅರ್ಥವಿದ್ಯೆಯ ವೈಷಮ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಮಿಥ್ಯಪ್ರಚಾರ ಮಾಡುತ್ತಾರೆ.

12140012a ಆಜಿಜೀವಿಷವೋ ವಿದ್ಯಾಂ ಯಶಸ್ಕಾಮಾಃ ಸಮಂತತಃ|

12140012c ತೇ ಸರ್ವೇ ನರಪಾಪಿಷ್ಠಾ ಧರ್ಮಸ್ಯ ಪರಿಪಂಥಿನಃ||

ಜೀವನ ಉದ್ಯೋಗಕ್ಕಾಗಿ ವಿದ್ಯೆಯನ್ನು ಕಲಿಯುವವರು, ಸರ್ವತ್ರ ಯಶಸ್ಸನ್ನು ಗಳಿಸಲು ವಿದ್ಯೆಯನ್ನು ಪಡೆದುಕೊಳ್ಳುವವರು ಮತ್ತು ಮನೋವಾಂಛಿತ ಪದಾರ್ಥಗಳನ್ನು ಪಡೆದುಕೊಳ್ಳಲು ವಿದ್ಯೆಯನ್ನು ಕಲಿಯುವವರು – ಅವರೆಲ್ಲರೂ ಪಾಪಿಷ್ಠ ನರರು ಮತ್ತು ಧರ್ಮದ್ರೋಹಿಗಳು.

12140013a ಅಪಕ್ವಮತಯೋ ಮಂದಾ ನ ಜಾನಂತಿ ಯಥಾತಥಮ್|

12140013c ಸದಾ ಹ್ಯಶಾಸ್ತ್ರಕುಶಲಾಃ ಸರ್ವತ್ರಾಪರಿನಿಷ್ಠಿತಾಃ||

ಬುದ್ಧಿಯು ಪರಿಪಕ್ವವಾಗಿಲ್ಲದ ಮಂದಮತಿ ಜನರು ಯಥಾರ್ಥ ತತ್ತ್ವವನ್ನು ತಿಳಿಯಲಾರರು. ಶಾಸ್ತ್ರಜ್ಞಾನದಲ್ಲಿ ನಿಪುಣರಾಗಿರದೇ ಸರ್ವತ್ರ ಅಸಂಗತ ಯುಕ್ತಿಯನ್ನೇ ಅವರು ಅವಲಂಬಿಸಿರುತ್ತಾರೆ.

12140014a ಪರಿಮುಷ್ಣಂತಿ ಶಾಸ್ತ್ರಾಣಿ ಶಾಸ್ತ್ರದೋಷಾನುದರ್ಶಿನಃ|

12140014c ವಿಜ್ಞಾನಮಥ ವಿದ್ಯಾನಾಂ[5] ನ ಸಮ್ಯಗಿತಿ ವರ್ತತೇ||

ಯಾವಾಗಲೂ ಶಾಸ್ತ್ರಗಳಲ್ಲಿ ದೋಷವನ್ನೇ ಹುಡುಕುವ ಜನರು ಶಾಸ್ತ್ರಗಳ ಮರ್ಯಾದೆಯನ್ನು ಕದಿಯುತ್ತಾರೆ ಮತ್ತು ಈ ವಿಜ್ಞಾನ ವಿದ್ಯೆಯು ಉತ್ತಮವಾದುದಲ್ಲ ಎಂದೂ ಹೇಳುತ್ತಾರೆ.

12140015a ನಿಂದಯಾ ಪರವಿದ್ಯಾನಾಂ ಸ್ವಾಂ ವಿದ್ಯಾಂ ಖ್ಯಾಪಯಂತಿ ಯೇ|

12140015c ವಾಗಸ್ತ್ರಾ ವಾಕ್ಚುರೀಮತ್ತ್ವಾ ದುಗ್ಧವಿದ್ಯಾಫಲಾ ಇವ|

ಯಾರ ಮಾತೇ ಅಸ್ತ್ರವಾಗಿರುವುದೋ ಮತ್ತು ಯಾರ ಮಾತು ಬಾಣದಂತೆ ತಗಲುವುದೋ ಅವರು ವಿದ್ಯೆಯ ಫಲ ತತ್ತ್ವಜ್ಞಾನಕ್ಕೇ ವಿದ್ರೋಹಗೈಯುತ್ತಾರೆ. ಇಂಥಹ ಜನರು ಇನ್ನೊಬ್ಬರ ವಿದ್ಯೆಯನ್ನು ನಿಂದಿಸಿ ತಮ್ಮ ವಿದ್ಯೆಯ ಶ್ರೇಷ್ಠತೆಯನ್ನು ಮಿಥ್ಯವಾಗಿ ಪ್ರಚಾರಮಾಡುತ್ತಾರೆ.

12140015e ತಾನ್ವಿದ್ಯಾವಣಿಜೋ ವಿದ್ಧಿ ರಾಕ್ಷಸಾನಿವ ಭಾರತ||

12140016a ವ್ಯಾಜೇನ ಕೃತ್ಸ್ನೋ ವಿದಿತೋ ಧರ್ಮಸ್ತೇ ಪರಿಹಾಸ್ಯತೇ|

ಭಾರತ! ಇಂಥಹ ಜನರು ವಿದ್ಯೆಯನ್ನು ವ್ಯಾಪಾರಮಾಡುವವರು ಮತ್ತು ರಾಕ್ಷಸ ಸಮಾನ ಪರದ್ರೋಹಿಗಳು ಎಂದು ತಿಳಿದುಕೋ. ಅವರ ಆಡಂಬರಗಳಿಂದ ನೀನು ಸತ್ಪುರುಷರಿಂದ ಪ್ರತಿಪಾದಿಸಿದ ಆಚಾರ ಧರ್ಮಗಳು ನಷ್ಟವಾಗಿಬಿಡುತ್ತವೆ.

12140016c ನ ಧರ್ಮವಚನಂ ವಾಚಾ ನ ಬುದ್ಧ್ಯಾ ಚೇತಿ ನಃ ಶ್ರುತಮ್||

12140017a ಇತಿ ಬಾರ್ಹಸ್ಪತಂ ಜ್ಞಾನಂ ಪ್ರೋವಾಚ ಮಘವಾ ಸ್ವಯಮ್|

ಕೇವಲ ಮಾತಿನಿಂದ ಅಥವಾ ಕೇವಲ ಬುದ್ಧಿಯಿಂದ ಧರ್ಮದ ನಿಶ್ಚಯವಾಗುವುದಿಲ್ಲ ಎಂದು ನಾವು ಕೇಳಿದ್ದೇವೆ. ಶಾಸ್ತ್ರವಚನ ಮತ್ತು ತರ್ಕ ಇವೆರಡರ ಸಮುಚ್ಚಯದಿಂದ ಅದರ ನಿರ್ಣಯವಾಗುತ್ತದೆ. ಇದೇ ಸ್ವಯಂ ಇಂದ್ರನು ಹೇಳಿದ ಬೃಹಸ್ಪತಿಯ ಮತ.

12140017c ನ ತ್ವೇವ ವಚನಂ ಕಿಂ ಚಿದನಿಮಿತ್ತಾದಿಹೋಚ್ಯತೇ||

12140018a ಸ್ವವಿನೀತೇನ ಶಾಸ್ತ್ರೇಣ ವ್ಯವಸ್ಯಂತಿ ತಥಾಪರೇ|

ವಿದ್ವಾನ್ ಪುರುಷನು ಅಕಾರಣವಾಗಿ ಏನನ್ನೂ ಹೇಳುವುದಿಲ್ಲ ಮತ್ತು ಅನ್ಯ ಅನೇಕ ಜನರು ಚೆನ್ನಾಗಿ ಕಲಿತುಕೊಂಡ ಶಾಸ್ತ್ರದ ಅನುಸಾರವಾಗಿ ನಡೆದುಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ.

12140018c ಲೋಕಯಾತ್ರಾಮಿಹೈಕೇ ತು ಧರ್ಮಮಾಹುರ್ಮನೀಷಿಣಃ||

12140019a ಸಮುದ್ದಿಷ್ಟಂ ಸತಾಂ ಧರ್ಮಂ ಸ್ವಯಮೂಹೇನ್ನ ಪಂಡಿತಃ|

ಈ ಜಗತ್ತಿನಲ್ಲಿ ಕೆಲವು ಮನೀಷಿಗಳು ಶಿಷ್ಠ ಪುರುಷರು ನಡೆದುಕೊಳ್ಳುವ ರೀತಿಯನ್ನೇ ಧರ್ಮವೆಂದು ಹೇಳುತ್ತಾರೆ. ಆದರೆ ವಿದ್ವಾನ್ ಪುರುಷನು ಸ್ವಯಂ ತಾನೇ ಊಹಿಸಿಕೊಂಡು ಸತ್ಪುರುಷರ ಶಾಸ್ತ್ರವಿಹಿತ ಧರ್ಮವನ್ನು ನಿಶ್ಚಯಿಸಿಕೊಳ್ಳಬೇಕು.

12140019c ಅಮರ್ಷಾಚ್ಚಾಸ್ತ್ರಸಂಮೋಹಾದವಿಜ್ಞಾನಾಚ್ಚ ಭಾರತ||

12140020a ಶಾಸ್ತ್ರಂ ಪ್ರಾಜ್ಞಸ್ಯ ವದತಃ ಸಮೂಹೇ ಯಾತ್ಯದರ್ಶನಮ್|

ಭಾರತ! ಬುದ್ಧಿವಂತನಾಗಿದ್ದರೂ ಶಾಸ್ತ್ರವನ್ನು ಸರಿಯಾಗಿ ತಿಳಿಯದೇ ಮೋಹಬದ್ಧನಾಗಿ ಶಾಸ್ತ್ರದ ಕುರಿತು ಜೋರಾಗಿ ಪ್ರವಚನ ಮಾಡುವುದರಿಂದ ಲೋಕಸಮಾಜದಲ್ಲಿ ಯಾವ ಪ್ರಭಾವವೂ ಬೀಳುವುದಿಲ್ಲ.

12140020c ಆಗತಾಗಮಯಾ ಬುದ್ಧ್ಯಾ ವಚನೇನ ಪ್ರಶಸ್ಯತೇ||

12140021a ಅಜ್ಞಾನಾಜ್ಜ್ಞಾನಹೇತುತ್ವಾದ್ವಚನಂ ಸಾಧು ಮನ್ಯತೇ|

ವೇದ-ಶಾಸ್ತ್ರಗಳು ಅನುಮೋದಿಸುವ ತರ್ಕಯುಕ್ತ ಬುದ್ಧಿಯ ಮಾತೇ ಜನರಿಗೆ ಮನದಟ್ಟಾಗುತ್ತದೆ. ಕೆಲವರು ತಿಳಿಯದೇ ಇದ್ದ ವಿಷಯವನ್ನು ತಿಳಿಯಲು ಕೇವಲ ತರ್ಕವೇ ಶ್ರೇಷ್ಠವೆಂದು ಅಭಿಪ್ರಾಯಪಡುತ್ತಾರೆ. ಆದರೆ ಇದು ಅವರ ಅಜ್ಞಾನವನ್ನು ತೋರಿಸುತ್ತದೆ.

12140021c ಅನಪಾಹತಮೇವೇದಂ ನೇದಂ ಶಾಸ್ತ್ರಮಪಾರ್ಥಕಮ್||

12140022a ದೈತೇಯಾನುಶನಾಃ ಪ್ರಾಹ ಸಂಶಯಚ್ಚೇದನೇ ಪುರಾ|

ಕೇವಲ ತರ್ಕಕ್ಕೆ ಪ್ರಧಾನತೆಯನ್ನು ನೀಡಿ ಅಮುಕ ಯುಕ್ತಿಯಿಂದ ಶಾಸ್ತ್ರದ ಈ ಮಾತನ್ನು ಅಪಾರ್ಥಮಾಡಿಕೊಳ್ಳುತ್ತಾರೆ. ಈ ಸಂಶಯವನ್ನು ತೆಗೆದುಹಾಕುವುದಕ್ಕಾಗಿಯೇ ಹಿಂದೆ ಉಶನನು ದೈತ್ಯರಿಗೆ ಈ ಮಾತನ್ನು ಹೇಳಿದ್ದನು.

12140022c ಜ್ಞಾನಮವ್ಯಪದೇಶ್ಯಂ ಹಿ ಯಥಾ ನಾಸ್ತಿ ತಥೈವ ತತ್||

12140023a ತೇನ ತ್ವಂ ಚಿನ್ನಮೂಲೇನ ಕಂ ತೋಷಯಿತುಮರ್ಹಸಿ|

ಸಂಶಯಾತ್ಮಕವಾದ ಜ್ಞಾನವು ಇದ್ದರೂ ಒಂದೇ ಮತ್ತು ಇಲ್ಲದಿದ್ದರೂ ಒಂದೇ. ಆದುದರಿಂದ ನೀನು ಆ ಸಂಶಯದ ಮೂಲವನ್ನೇ ಛೇದಿಸಿ ದೂರ ಎಸೆ.

12140023c ಅತಥ್ಯವಿಹಿತಂ ಯೋ ವಾ ನೇದಂ ವಾಕ್ಯಮುಪಾಶ್ನುಯಾತ್||

12140024a ಉಗ್ರಾಯೈವ ಹಿ ಸೃಷ್ಟೋಽಸಿ ಕರ್ಮಣೇ ನ ತ್ವವೇಕ್ಷಸೇ|

ನನ್ನ ಈ ನೀತಿಯುಕ್ತ ಮಾತುಗಳನ್ನು ನೀನು ಸ್ವೀಕರಿಸದೇ ಇದ್ದರೆ ಅದು ಉಚಿತವಲ್ಲ. ಏಕೆಂದರೆ ನೀನು ಉಗ್ರ ಕರ್ಮಕ್ಕಾಗಿಯೇ ವಿಧಾತನಿಂದ ಸೃಷ್ಟಿಸಲ್ಪಟ್ಟಿದ್ದೀಯೆ. ಈ ವಿಷಯದ ಕುರಿತು ನಿನ್ನ ದೃಷ್ಟಿಯು ಹಾಯುತ್ತಿಲ್ಲ.

12140024c ಅಂಗೇಮಾಮನ್ವವೇಕ್ಷಸ್ವ ರಾಜನೀತಿಂ ಬುಭೂಷಿತುಮ್|

12140024e ಯಯಾ ಪ್ರಮುಚ್ಯತೇ ತ್ವನ್ಯೋ ಯದರ್ಥಂ ಚ ಪ್ರಮೋದತೇ||

ನನ್ನ ಕಡೆ ನೋಡು! ನಾನು ಏನು ಮಾಡಿದ್ದೇನೆನ್ನುವುದನ್ನು ನೋಡು! ಭೂಮಂಡಲದ ರಾಜ್ಯವನ್ನು ಪಡೆದುಕೊಳ್ಳುವ ಇಚ್ಛೆಯಿದ್ದ ಕ್ಷತ್ರಿಯ ರಾಜರೊಂದಿಗೆ ನಾನು ಅವರು ಸಂಸಾರಬಂಧನದಿಂದ ಮುಕ್ತರಾಗುವಂತೆಯೇ ನಡೆದುಕೊಂಡಿದ್ದೇನೆ. ಆದರೂ ನನ್ನ ಈ ಕೃತ್ಯವನ್ನು ಇತರರು ಅನುಮೋದಿಸುತ್ತಿರಲಿಲ್ಲ. ನನ್ನನ್ನು ಕ್ರೂರಿ ಮತ್ತು ಹಿಂಸಕನೆಂದು ಕರೆಯುತ್ತಿದ್ದರು.

12140025a ಅಜೋಽಶ್ವಃ ಕ್ಷತ್ರಮಿತ್ಯೇತತ್ ಸದೃಶಂ ಬ್ರಹ್ಮಣಾ ಕೃತಮ್|

12140025c ತಸ್ಮಾನ್ನತೀಕ್ಷ್ಣಭೂತಾನಾಂ ಯಾತ್ರಾ ಕಾ ಚಿತ್ ಪ್ರಸಿಧ್ಯತಿ||

ಆಡು, ಕುದುರೆ ಮತ್ತು ಕ್ಷತ್ರಿಯ – ಈ ಮೂವರನ್ನೂ ಬ್ರಹ್ಮನು ಒಂದೇ ರೀತಿಯಲ್ಲಿ ಮಾಡಿದ್ದಾನೆ. ಇವುಗಳ ಮೂಲಕ ಸಮಸ್ತ ಪ್ರಾಣಿಗಳ ಪುನಃ ಪುನಃ ಯಾವುದಾದರೂ ಜೀವನಯಾತ್ರೆಯು ಸಿದ್ಧಿಯಾಗುತ್ತಿರುತ್ತದೆ.

12140026a ಯಸ್ತ್ವವಧ್ಯವಧೇ ದೋಷಃ ಸ ವಧ್ಯಸ್ಯಾವಧೇ ಸ್ಮೃತಃ|

12140026c ಏಷೈವ ಖಲು ಮರ್ಯಾದಾ ಯಾಮಯಂ ಪರಿವರ್ಜಯೇತ್||

ಅವಧ್ಯನನ್ನು ವಧಿಸುವುದರಲ್ಲಿ ಯಾವ ದೋಷವಿದೆಯೆಂದು ಹೇಳುತ್ತಾರೋ ಅದೇ ವಧ್ಯನನ್ನು ವಧಿಸದೇ ಇರುವುದರಲ್ಲಿಯೂ ಇದೆ. ಆ ದೋಷವೇ ಅಕರ್ತವ್ಯದ ಮರ್ಯಾದೆಯು. ಇದನ್ನು ಕ್ಷತ್ರಿಯ ರಾಜನು ಪರಿತ್ಯಜಿಸಬಾರದು.

12140027a ತಸ್ಮಾತ್ತೀಕ್ಷ್ಣಃ ಪ್ರಜಾ ರಾಜಾ ಸ್ವಧರ್ಮೇ ಸ್ಥಾಪಯೇದುತ|

12140027c ಅನ್ಯೋನ್ಯಂ ಭಕ್ಷಯಂತೋ ಹಿ ಪ್ರಚರೇಯುರ್ವೃಕಾ ಇವ||

ಆದುದರಿಂದ ತೀಕ್ಷ್ಣಸ್ವಭಾವದ ರಾಜನೇ ಪ್ರಜೆಗಳನ್ನು ಅವರವರ ಧರ್ಮಗಳಲ್ಲಿ ಸ್ಥಾಪಿತಗೊಳಿಸಬಲ್ಲನು. ಅನ್ಯಥಾ ಪ್ರಜಾವರ್ಗದ ಸರ್ವ ಜನರೂ ತೋಳಗಳಂತೆ ಒಬ್ಬರು ಇನ್ನೊಬ್ಬರನ್ನು ಭಕ್ಷಿಸುತ್ತಾ ತಿರುಗಾಡುತ್ತಿರುತ್ತಾರೆ.

12140028a ಯಸ್ಯ ದಸ್ಯುಗಣಾ ರಾಷ್ಟ್ರೇ ಧ್ವಾಂಕ್ಷಾ ಮತ್ಸ್ಯಾನ್ ಜಲಾದಿವ|

12140028c ವಿಹರಂತಿ ಪರಸ್ವಾನಿ ಸ ವೈ ಕ್ಷತ್ರಿಯಪಾಂಸನಃ||

ಯಾರ ರಾಷ್ಟ್ರದಲ್ಲಿ ದಸ್ಯುಗಣಗಳು ನೀರಿನಿಂದ ಮೀನನ್ನು ಹಿಡಿದು ತಿನ್ನುವ ಬಕಪಕ್ಷಿಯಂತೆ ಪರರ ಧನವನ್ನು ಅಪರಹರಿಸುತ್ತಿರುತ್ತಾರೋ ಆ ರಾಜನು ನಿಶ್ಚಯವಾಗಿಯೂ ಕ್ಷತ್ರಿಯಕುಲಕ್ಕೆ ಕಲಂಕನು.

12140029a ಕುಲೀನಾನ್ ಸಚಿವಾನ್ ಕೃತ್ವಾ ವೇದವಿದ್ಯಾಸಮನ್ವಿತಾನ್|

12140029c ಪ್ರಶಾಧಿ ಪೃಥಿವೀಂ ರಾಜನ್ ಪ್ರಜಾ ಧರ್ಮೇಣ ಪಾಲಯನ್||

ರಾಜನ್! ಉತ್ತಮ ಕುಲದಲ್ಲಿ ಜನಿಸಿದ, ಮತ್ತು ವೇದವಿದ್ಯಾಸಂಪನ್ನ ಪುರುಷರನ್ನೇ ಮಂತ್ರಿಗಳನ್ನಾಗಿಸಿಕೊಂಡು ಪ್ರಜೆಗಳನ್ನು ಧರ್ಮಪೂರ್ವಕವಾಗಿ ಪಾಲಿಸುತ್ತಾ ನೀನು ಈ ಪೃಥ್ವಿಯನ್ನು ಆಳು.

12140030a ವಿಹೀನಜಮಕರ್ಮಾಣಂ ಯಃ ಪ್ರಗೃಹ್ಣಾತಿ ಭೂಮಿಪಃ|

12140030c ಉಭಯಸ್ಯಾವಿಶೇಷಜ್ಞಸ್ತದ್ವೈ ಕ್ಷತ್ರಂ ನಪುಂಸಕಮ್||

ಸತ್ಕರ್ಮರಹಿತನಾದ ನ್ಯಾಯಶೂನ್ಯ ಮತ್ತು ಕಾರ್ಯಸಾಧನೆಯ ಉಪಾಯಗಳನ್ನು ತಿಳಿಯದಿರುವ ಪುರುಷನನ್ನು ಸಚಿವನ ರೂಪದಲ್ಲಿ ಸ್ವೀಕರಿಸುವ ರಾಜನು ನಪುಂಸಕನೇ ಸರಿ.

12140031a ನೈವೋಗ್ರಂ ನೈವ ಚಾನುಗ್ರಂ ಧರ್ಮೇಣೇಹ ಪ್ರಶಸ್ಯತೇ|

12140031c ಉಭಯಂ ನ ವ್ಯತಿಕ್ರಾಮೇದುಗ್ರೋ ಭೂತ್ವಾ ಮೃದುರ್ಭವ||

ರಾಜಧರ್ಮದ ಪ್ರಕಾರ ಕೇವಲ ಉಗ್ರಭಾವವನ್ನಾಗಲೀ ಅಥವಾ ಕೇವಲ ಮೃದುಭಾವವನ್ನಾಗಲೀ ಪ್ರಶಂಸಿಸುವುದಿಲ್ಲ. ಆದರೆ ಅವೆರಡರಲ್ಲಿ ಯಾವುದನ್ನೂ ಪರಿತ್ಯಜಿಸಬಾರದು. ಆದುದರಿಂದ ನೀನು ಮೊದಲು ಉಗ್ರನಾಗಿದ್ದುಕೊಂಡು ನಂತರ ಮೃದುವಾಗು.

12140032a ಕಷ್ಟಃ ಕ್ಷತ್ರಿಯಧರ್ಮೋಽಯಂ ಸೌಹೃದಂ ತ್ವಯಿ ಯತ್ ಸ್ಥಿತಮ್|

12140032c ಉಗ್ರೇ ಕರ್ಮಣಿ ಸೃಷ್ಟೋಽಸಿ ತಸ್ಮಾದ್ರಾಜ್ಯಂ ಪ್ರಶಾಧಿ ವೈ||

ಕ್ಷತ್ರಿಯ ಧರ್ಮವು ಕಷ್ಟಸಾಧ್ಯವು. ನಿನ್ನ ಮೇಲೆ ನನ್ನ ಸ್ನೇಹವಿದೆ. ಆದುದರಿಂದ ಹೇಳುತ್ತಿದ್ದೇನೆ. ವಿಧಾತನು ನಿನ್ನನ್ನು ಉಗ್ರಕರ್ಮಕ್ಕಾಗಿಯೇ ಹುಟ್ಟಿಸಿದ್ದಾನೆ. ಆದುದರಿಂದ ನೀನು ನಿನ್ನ ಧರ್ಮದಲ್ಲಿಯೇ ಸ್ಥಿತನಾಗಿದ್ದುಕೊಂಡು ರಾಜ್ಯ ಶಾಸನವನ್ನು ಮಾಡು.

12140033a ಅಶಿಷ್ಟನಿಗ್ರಹೋ ನಿತ್ಯಂ ಶಿಷ್ಟಸ್ಯ ಪರಿಪಾಲನಮ್|

12140033c ಇತಿ ಶಕ್ರೋಽಬ್ರವೀದ್ಧೀಮಾನಾಪತ್ಸು ಭರತರ್ಷಭ||

ಭರತರ್ಷಭ! ಆಪತ್ಕಾಲದಲ್ಲಿಯೂ ಸದಾ ದುಷ್ಟರ ದಮನ ಮತ್ತು ಶಿಷ್ಟರ ಪರಿಪಾಲನೆಯನ್ನು ಮಾಡಬೇಕು ಎಂದು ಬುದ್ಧಿಮಾನ್ ಶುಕ್ರಾಚಾರ್ಯನು ಹೇಳಿದ್ದಾನೆ.”

12140034 ಯುಧಿಷ್ಠಿರ ಉವಾಚ |

12140034a ಅಸ್ತಿ ಸ್ವಿದ್ದಸ್ಯುಮರ್ಯಾದಾ ಯಾಮನ್ಯೋ ನಾತಿಲಂಘಯೇತ್|

12140034c ಪೃಚ್ಚಾಮಿ ತ್ವಾಂ ಸತಾಂ ಶ್ರೇಷ್ಠ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಸತ್ಪುರುಷರಲ್ಲಿ ಶ್ರೇಷ್ಠ! ಪಿತಾಮಹ! ಈ ಜಗತ್ತಿನಲ್ಲಿ ಬೇರೆ ಯಾವುದೂ ಉಲ್ಲಂಘನ ಮಾಡಲಾರದ ಮರ್ಯಾದೆಯೊಂದಿದ್ದರೆ ಅದರ ಕುರಿತು ಕೇಳ ಬಯಸುತ್ತೇನೆ. ಅದರ ಕುರಿತು ನನಗೆ ಹೇಳು.”

12140035 ಭೀಷ್ಮ ಉವಾಚ |

12140035a ಬ್ರಾಹ್ಮಣಾನೇವ ಸೇವೇತ ವಿದ್ಯಾವೃದ್ಧಾಂಸ್ತಪಸ್ವಿನಃ|

12140035c ಶ್ರುತಚಾರಿತ್ರವೃತ್ತಾಢ್ಯಾನ್ ಪವಿತ್ರಂ ಹ್ಯೇತದುತ್ತಮಮ್||

ಭೀಷ್ಮನು ಹೇಳಿದನು: “ವಿದ್ಯಾವೃದ್ಧನೂ ತಪಸ್ವಿಯೂ ಶಾಸ್ತ್ರಜ್ಞಾನ ಮತ್ತು ಉತ್ತಮ ಚಾರಿತ್ರವಂತನೂ ಸದಾಚಾರ ಸಂಪನ್ನನೂ ಆದ ಬ್ರಾಹ್ಮಣನ ಸೇವೆಮಾಡುವುದೇ ಪರಮ ಉತ್ತಮ ಮತ್ತು ಪವಿತ್ರ ಕಾರ್ಯವು.

12140036a ಯಾ ದೇವತಾಸು ವೃತ್ತಿಸ್ತೇ ಸಾಸ್ತು ವಿಪ್ರೇಷು ಸರ್ವದಾ|

12140036c ಕ್ರುದ್ಧೈರ್ಹಿ ವಿಪ್ರೈಃ ಕರ್ಮಾಣಿ ಕೃತಾನಿ ಬಹುಧಾ ನೃಪ||

ನೃಪ! ದೇವತೆಗಳ ಕುರಿತು ನಿನ್ನ ವರ್ತನೆಯು ಹೇಗಿದೆಯೋ ಅದೇ ಭಾವ ಮತ್ತು ವರ್ತನೆಗಳು ಬ್ರಾಹ್ಮಣರ ಕುರಿತೂ ಸದಾ ಇರಬೇಕು.  ಏಕೆಂದರೆ ಕ್ರೋಧದಿಂದ ತುಂಬಿದ ಬ್ರಾಹ್ಮಣರು ಅನೇಕ ಪ್ರಕಾರದ ಅದ್ಭುತ ಕರ್ಮಗಳನ್ನು ಮಾಡಿದ್ದಾರೆ.

12140037a ತೇಷಾಂ ಪ್ರೀತ್ಯಾ ಯಶೋ ಮುಖ್ಯಮಪ್ರೀತ್ಯಾ ತು ವಿಪರ್ಯಯಃ|

12140037c ಪ್ರೀತ್ಯಾ ಹ್ಯಮೃತವದ್ವಿಪ್ರಾಃ ಕ್ರುದ್ಧಾಶ್ಚೈವ ಯಥಾ ವಿಷಮ್||

ಬ್ರಾಹ್ಮಣರ ಪ್ರಸನ್ನತೆಯಿಂದ ಶ್ರೇಷ್ಠ ಯಶಸ್ಸಿನ ವಿಸ್ತಾರವಾಗುತ್ತದೆ. ಅವರ ಅಪ್ರಸನ್ನತೆಯಿಂದ ಮಹಾ ಭಯವು ಪ್ರಾಪ್ತವಾಗುತ್ತದೆ. ಪ್ರಸನ್ನರಾದರೆ ಬ್ರಾಹ್ಮಣರು ಅಮೃತ ಸಮಾನ ಜೀವನದಾಯಕರಾಗುತ್ತಾರೆ ಮತ್ತು ಕುಪಿತರಾದರೆ ವಿಷ ಸಮಾನ ಭಯಂಕರರಾಗಿಬಿಡುತ್ತಾರೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಚತ್ವಾರಿಂಶದಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ  ನೂರಾನಲ್ವತ್ತನೇ ಅಧ್ಯಾಯವು.

[1] ನೈತಚ್ಛೃತ್ವಾಗಮಾಽಽಗಮಾದೇವ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[2] ಪ್ರಾಜ್ಞೋ ವಿಷ್ಟಂಭಿತ್ವಾ ಪ್ರಕಾರಯೇತ್| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[3] ಅಮಿಥ್ಯಾಜ್ಞಾನಿನಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[4] ನಿರರ್ಥಾಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[5] ವಿಜ್ಞಾನಮರ್ಥವಿದ್ಯಾನಾಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

Comments are closed.