Shanti Parva: Chapter 138

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೩೮

ಕಣಿಕ-ಶತ್ರುಂತಪ ಸಂವಾದ

ಭಾರದ್ವಾಜ ಕಣಿಕನಿಂದ ಸೌವೀರ ದೇಶದ ರಾಜ ಶತ್ರುಂತಪನಿಗೆ ಕೂಟನೀತಿಯ ಉಪದೇಶ (1-70).

12138001 ಯುಧಿಷ್ಠಿರ ಉವಾಚ|

12138001a ಯುಗಕ್ಷಯಾತ್ಪರಿಕ್ಷೀಣೇ ಧರ್ಮೇ ಲೋಕೇ ಚ ಭಾರತ|

12138001c ದಸ್ಯುಭಿಃ ಪೀಡ್ಯಮಾನೇ ಚ ಕಥಂ ಸ್ಥೇಯಂ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಭಾರತ! ಪಿತಾಮಹ! ಯುಗಕ್ಷಯದಲ್ಲಿ ಲೋಕದಲ್ಲಿ ಧರ್ಮವು ಕ್ಷೀಣಿಸಿ ದಸ್ಯುಗಳ ಪೀಡೆಗೊಳಗಾದಾಗ ಹೇಗಿರಬೇಕು?”

12138002 ಭೀಷ್ಮ ಉವಾಚ|

12138002a ಹಂತ ತೇ ಕಥಯಿಷ್ಯಾಮಿ ನೀತಿಮಾಪತ್ಸು ಭಾರತ|

12138002c ಉತ್ಸೃಜ್ಯಾಪಿ ಘೃಣಾಂ ಕಾಲೇ ಯಥಾ ವರ್ತೇತ ಭೂಮಿಪಃ||

ಭೀಷ್ಮನು ಹೇಳಿದನು: “ಭಾರತ! ನಿಲ್ಲು! ಅಂತಹ ಆಪತ್ತಿನ ಕಾಲದಲ್ಲಿ ಭೂಮಿಪನು ಕರುಣೆಯನ್ನು ತೊರೆದು ವರ್ತಿಸಬೇಕಾದ ನೀತಿಯನ್ನು ನಿನಗೆ ಹೇಳುತ್ತೇನೆ.

12138003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12138003c ಭರದ್ವಾಜಸ್ಯ ಸಂವಾದಂ ರಾಜ್ಞಃ ಶತ್ರುಂತಪಸ್ಯ ಚ||

ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ರಾಜ ಶತ್ರುಂತಪನೊಡನೆ ಭರದ್ವಾಜನು ನಡೆಸಿದ ಸಂವಾದವನ್ನು ಉದಾಹರಿಸುತ್ತಾರೆ.

12138004a ರಾಜಾ ಶತ್ರುಂತಪೋ ನಾಮ ಸೌವೀರಾಣಾಂ ಮಹಾರಥಃ|

12138004c ಕಣಿಂಕಮುಪಸಂಗಮ್ಯ ಪಪ್ರಚ್ಚಾರ್ಥವಿನಿಶ್ಚಯಮ್||

ಸೌವೀರರ ರಾಜ ಶತ್ರುಂತಪ ಎಂಬ ಹೆಸರಿನ ಮಹಾರಥನು ಕಣಿಂಕನ ಬಳಿಸಾರಿ ತನ್ನ ಕರ್ತ್ಯವ್ಯವನ್ನು ನಿಶ್ಚಯಿಸಲು ಪ್ರಶ್ನಿಸಿದನು:

12138005a ಅಲಬ್ಧಸ್ಯ ಕಥಂ ಲಿಪ್ಸಾ ಲಬ್ಧಂ ಕೇನ ವಿವರ್ಧತೇ|

12138005c ವರ್ಧಿತಂ ಪಾಲಯೇತ್ಕೇನ ಪಾಲಿತಂ ಪ್ರಣಯೇತ್ಕಥಮ್||

“ದೊರಕದ ವಸ್ತುವನ್ನು ಹೇಗೆ ಪಡೆದುಕೊಳ್ಳಬಹುದು? ಪಡೆದುಕೊಂಡಿದುದನ್ನು ಹೇಗೆ ವೃದ್ಧಿಗೊಳಿಸಿಕೊಳ್ಳಬಹುದು? ವೃದ್ಧಿಯಾದ ದ್ರವ್ಯವನ್ನು ಹೇಗೆ ರಕ್ಷಿಸಿಕೊಳ್ಳಬೇಕು? ಮತ್ತು ಹಾಗೆ ಸುರಕ್ಷಿತವಾಗಿರಿಸಿಕೊಂಡ ಧನವನ್ನು ಹೇಗೆ ಸದುಪಯೋಗಮಾಡಿಕೊಳ್ಳಬೇಕು?”

12138006a ತಸ್ಮೈ ವಿನಿಶ್ಚಯಾರ್ಥಂ ಸ ಪರಿಪೃಷ್ಟಾರ್ಥನಿಶ್ಚಯಃ|

12138006c ಉವಾಚ ಬ್ರಾಹ್ಮಣೋ ವಾಕ್ಯಮಿದಂ ಹೇತುಮದುತ್ತರಮ್||

ಶಾಸ್ತ್ರಗಳ ತಾತ್ಪರ್ಯವನ್ನು ನಿಶ್ಚಿತರೂಪದಲ್ಲಿ ತಿಳಿದಿದ್ದ ಅವನು ತನ್ನ ಕರ್ತವ್ಯವನ್ನು ನಿಶ್ಚಯಿಸಲು ಈ ರೀತಿ ಪ್ರಶ್ನಿಸಲು ಬ್ರಾಹ್ಮಣನು ಯುಕ್ತಿಯುಕ್ತ ಉತ್ತಮ ಮಾತನ್ನಾಡಲು ಪ್ರಾರಂಭಿಸಿದನು.

12138007a ನಿತ್ಯಮುದ್ಯತದಂಡಃ ಸ್ಯಾನ್ನಿತ್ಯಂ ವಿವೃತಪೌರುಷಃ|

12138007c ಅಚ್ಚಿದ್ರಶ್ಚಿದ್ರದರ್ಶೀ ಚ ಪರೇಷಾಂ ವಿವರಾನುಗಃ||

“ರಾಜನು ನಿತ್ಯವೂ ದಂಡವನ್ನು ನೀಡಲು ಉದ್ಯತನಾಗಿರಬೇಕು ಮತ್ತು ನಿತ್ಯವೂ ಪೌರುಷವನ್ನು ತೋರಿಸುತ್ತಿರಬೇಕು. ತನ್ನ ದುರ್ಬಲತೆಯನ್ನು ತೋರಿಸಿಕೊಳ್ಳಬಾರದು. ಶತ್ರುಗಳ ದುರ್ಬಲತೆಯನ್ನು ಹುಡುಕುತ್ತಿರಬೇಕು ಮತ್ತು ಅವರಲ್ಲಿ ದುರ್ಬಲತೆಯು ಕಂಡಕೂಡಲೇ ಅವರನ್ನು ಆಕ್ರಮಣಿಸಬೇಕು.

12138008a ನಿತ್ಯಮುದ್ಯತದಂಡಸ್ಯ ಭೃಶಮುದ್ವಿಜತೇ ಜನಃ|

12138008c ತಸ್ಮಾತ್ಸರ್ವಾಣಿ ಭೂತಾನಿ ದಂಡೇನೈವ ಪ್ರರೋಧಯೇತ್[1]||

ಸದಾ ದಂಡವನ್ನು ನೀಡಲು ಉದ್ಯತನಾಗಿರುವ ರಾಜನಿಗೆ ಪ್ರಜೆಗಳು ಹೆದರುತ್ತಾರೆ. ಆದುದರಿಂದ ಸಮಸ್ತ ಪ್ರಾಣಿಗಳನ್ನೂ ದಂಡದಿಂದಲೇ ವಶದಲ್ಲಿಟ್ಟುಕೊಳ್ಳಬೇಕು.

12138009a ಏವಮೇವ ಪ್ರಶಂಸಂತಿ ಪಂಡಿತಾಸ್ತತ್ತ್ವದರ್ಶಿನಃ|

12138009c ತಸ್ಮಾಚ್ಚತುಷ್ಟಯೇ ತಸ್ಮಿನ್ ಪ್ರಧಾನೋ ದಂಡ ಉಚ್ಯತೇ||

ಈ ರೀತಿಯಲ್ಲಿ ತತ್ತ್ವದರ್ಶೀ ಪಂಡಿತರು ದಂಡವನ್ನೇ ಪ್ರಶಂಸಿಸುತ್ತಾರೆ. ಆದುದರಿಂದ ಸಾಮ-ದಾನ ಮೊದಲಾದ ನಾಲ್ಕು ಉಪಾಯಗಳಲ್ಲಿ ದಂಡವೇ ಪ್ರಧಾನವೆಂದು ಹೇಳುತ್ತಾರೆ.

12138010a ಚಿನ್ನಮೂಲೇ ಹ್ಯಧಿಷ್ಠಾನೇ ಸರ್ವೇ ತಜ್ಜೀವಿನೋ ಹತಾಃ|

12138010c ಕಥಂ ಹಿ ಶಾಖಾಸ್ತಿಷ್ಠೇಯುಶ್ಚಿನ್ನಮೂಲೇ ವನಸ್ಪತೌ||

ಮೂಲವೇ ನಾಶವಾಗಿಹೋದಮೇಲೆ ಅದನ್ನು ಆಶ್ರಯಿಸಿರುವ ಸರ್ವ ಶತ್ರುಗಳೂ ಹತರಾಗುತ್ತಾರೆ. ವೃಕ್ಷದ ಬೇರನ್ನೇ ಕತ್ತರಿಸಿದ ಮೇಲೆ ಅದರ ಶಾಖೆಗಳು ಹೇಗೆ ಇರಬಹುದು?

12138011a ಮೂಲಮೇವಾದಿತಶ್ಚಿಂದ್ಯಾತ್ಪರಪಕ್ಷಸ್ಯ ಪಂಡಿತಃ|

12138011c ತತಃ ಸಹಾಯಾನ್ಪಕ್ಷಂ ಚ ಸರ್ವಮೇವಾನುಸಾರಯೇತ್||

ಪಂಡಿತನಾದವನು ಮೊದಲು ಶತ್ರುಪಕ್ಷದ ಮೂಲವನ್ನೇ ಕಿತ್ತೊಗೆಯಬೇಕು. ಅನಂತರ ಅವರ ಸಹಾಯಕರು ಮತ್ತು ಪಕ್ಷಪಾತಿಗಳನ್ನೂ ಕೂಡ ಅವರ ಮೂಲವನ್ನು ಅನುಸರಿಸುವಂತೆ ಮಾಡಬೇಕು.

12138012a ಸುಮಂತ್ರಿತಂ ಸುವಿಕ್ರಾಂತಂ ಸುಯುದ್ಧಂ ಸುಪಲಾಯಿತಮ್|

12138012c ಆಪದಾಂ ಪದಕಾಲೇಷು ಕುರ್ವೀತ ನ ವಿಚಾರಯೇತ್||

ಆಪತ್ತಿನ ಕಾಲದಲ್ಲಿ ರಾಜನು ಉತ್ತಮ ಸಮಾಲೋಚನೆ, ಉತ್ತಮ ಪರಾಕ್ರಮ ಮತ್ತು ಉತ್ಸಾಹಪೂರ್ವಕ ಯುದ್ಧ ಹಾಗೂ ಅವಶ್ಯವಾದರೆ ಉತ್ತಮರೀತಿಯಲ್ಲಿ ಪಲಾಯನವನ್ನೂ ಮಾಡಬೇಕು. ಅವಶ್ಯ ಕರ್ಮವನ್ನು ಮಾಡಬೇಕು. ತುಂಬಾ ವಿಚಾರಿಸಬಾರದು.

12138013a ವಾಙ್ಮಾತ್ರೇಣ ವಿನೀತಃ ಸ್ಯಾದ್ಧೃದಯೇನ ಯಥಾ ಕ್ಷುರಃ|

12138013c ಶ್ಲಕ್ಷ್ಣಪೂರ್ವಾಭಿಭಾಷೀ ಚ ಕಾಮಕ್ರೋಧೌ ವಿವರ್ಜಯೇತ್||

ಮಾತಿನಲ್ಲಿ ಮಾತ್ರ ವಿನೀತನಾಗಿರಬೇಕು. ಹೃದಯದಲ್ಲಿ ಕ್ಷೌರಿಕನ ಕತ್ತಿಯಂತೆ ಹರಿತನಾಗಿರಬೇಕು. ಮೊದಲು ಕಾಮಕ್ರೋಧಗಳನ್ನು ವರ್ಜಿಸಬೇಕು ಮತ್ತು ನಸುನಗುತ್ತಾ ಮಧುರವಾಗಿ ಮಾತನಾಡಬೇಕು.

12138014a ಸಪತ್ನಸಹಿತೇ ಕಾರ್ಯೇ ಕೃತ್ವಾ ಸಂಧಿಂ ನ ವಿಶ್ವಸೇತ್|

12138014c ಅಪಕ್ರಾಮೇತ್ತತಃ ಕ್ಷಿಪ್ರಂ ಕೃತಕಾರ್ಯೋ ವಿಚಕ್ಷಣಃ||

ಶತ್ರುವಿನೊಂದಿಗೆ ಸಂಧಿಯನ್ನು ಮಾಡಿಕೊಂಡರೂ ಅವನ ಮೇಲೆ ವಿಶ್ವಾಸವನ್ನಿಡಬಾರದು. ತನ್ನ ಕಾರ್ಯವು ಆದ ನಂತರ ಬುದ್ಧಿವಂತನು ಬೇಗನೇ ಅಲ್ಲಿಂದ ಹೊರಟುಹೋಗಬೇಕು.

12138015a ಶತ್ರುಂ ಚ ಮಿತ್ರರೂಪೇಣ ಸಾಂತ್ವೇನೈವಾಭಿಸಾಂತ್ವಯೇತ್|

12138015c ನಿತ್ಯಶಶ್ಚೋದ್ವಿಜೇತ್ತಸ್ಮಾತ್ಸರ್ಪಾದ್ವೇಶ್ಮಗತಾದಿವ||

ಶತ್ರುವನ್ನು ಮಿತ್ರರೂಪದಲ್ಲಿ ಸಾಂತ್ವನದ ಮಾತುಗಳಿಂದ ಸಂತವಿಸುತ್ತಿದ್ದರೂ ಮನೆಯ ಒಳಹೊಕ್ಕ ಸರ್ಪದಂತೆ ನಿತ್ಯವೂ ಅವನ ಕುರಿತು ಉದ್ವೇಗದಿಂದಿರಬೇಕು.

12138016a ಯಸ್ಯ ಬುದ್ಧಿಂ ಪರಿಭವೇತ್ತಮತೀತೇನ ಸಾಂತ್ವಯೇತ್|

12138016c ಅನಾಗತೇನ ದುಷ್ಪ್ರಜ್ಞಂ ಪ್ರತ್ಯುತ್ಪನ್ನೇನ ಪಂಡಿತಮ್||

ಸಂಕಟದಲ್ಲಿ ಪರಿತಪಿಸುತ್ತಿರುವವನಿಗೆ ಹಿಂದೆ ನಡೆದ ವಿಷಯಗಳನ್ನು ಹೇಳಿ ಸಂತವಿಸಬೇಕು. ಪಂಡಿತನಾದವನು ಅಷ್ಟೊಂದು ಪ್ರಜ್ಞೆಯಿಲ್ಲದಿರುವವನನ್ನು ಮುಂದಾಗುವ ಲಾಭದ ಆಸೆಗಳನ್ನು ತೋರಿಸಿ ಸಂತವಿಸಬೇಕು.

12138017a ಅಂಜಲಿಂ ಶಪಥಂ ಸಾಂತ್ವಂ ಪ್ರಣಮ್ಯ ಶಿರಸಾ ವದೇತ್|

12138017c ಅಶ್ರುಪ್ರಪಾತನಂ ಚೈವ ಕರ್ತವ್ಯಂ ಭೂತಿಮಿಚ್ಚತಾ||

ಐಶ್ವರ್ಯವನ್ನು ಬಯಸುವ ರಾಜನು ಸಮಯವನ್ನು ನೋಡಿಕೊಂಡು ಶತ್ರುವಿನ ಎದಿರು ಕೈಜೋಡಿಸಿ, ಆಣೆಯಿಟ್ಟು, ಆಶ್ವಾಸನೆಯನ್ನು ನೀಡಬೇಕು ಮತ್ತು ಶಿರಸಾ ನಮಸ್ಕರಿಸಿ ಮಾತನಾಡಬೇಕು. ಅಷ್ಟೇ ಅಲ್ಲದೆ ಅವನಿಗೆ ಕಣ್ಣೀರನ್ನೂ ಸುರಿಸಬೇಕಾಗುತ್ತದೆ.

12138018a ವಹೇದಮಿತ್ರಂ ಸ್ಕಂಧೇನ ಯಾವತ್ಕಾಲವಿಪರ್ಯಯಃ|

12138018c ಅಥೈನಮಾಗತೇ ಕಾಲೇ ಭಿಂದ್ಯಾದ್ಘಟಮಿವಾಶ್ಮನಿ||

ಎಲ್ಲಿಯ ವರೆಗೆ ಕಾಲವು ಬದಲಾಗಿ ತನಗೆ ಅನುಕೂಲವಾಗುವುದಿಲ್ಲವೋ ಅಲ್ಲಿಯ ವರೆಗೆ ಶತ್ರುವನ್ನು ಹೆಗಲ ಮೇಲೆ ಕೂರಿಸಿಕೊಂಡು ಹೋಗಬೇಕಾದರೆ ಅದನ್ನೂ ಮಾಡಬೇಕು. ಆದರೆ ಅನುಕೂಲ ಸಮಯವು ಬಂದಾಗ ಗಡಿಗೆಯನ್ನು ಬಂಡೆಯ ಮೇಲೆ ಕುಕ್ಕಿ ಒಡೆಯುವಂತೆ ಅವನನ್ನು ನಾಶಗೊಳಿಸಬೇಕು.

12138019a ಮುಹೂರ್ತಮಪಿ ರಾಜೇಂದ್ರ ತಿಂದುಕಾಲಾತವಜ್ಜ್ವಲೇತ್|

12138019c ನ ತುಷಾಗ್ನಿರಿವಾನರ್ಚಿರ್ಧೂಮಾಯೇತ ನರಶ್ಚಿರಮ್||

ರಾಜೇಂದ್ರ! ಒಂದು ಕ್ಷಣಕ್ಕಾದರೂ ಶತ್ರುವಿನ ಮುಂದೆ ತುಂಬೆಗಿಡವು ಜೋರಾಗಿ ಹತ್ತಿ ಉರಿಯುವಂತೆ ಪ್ರತಾಪವನ್ನು ತೋರಿಸಬೇಕು. ಮನುಷ್ಯನು ಹೆಚ್ಚುಸಮಯಗಳವರೆಗೆ ತೌಡಿಗೆ ತಾಗಿದ ಅಗ್ನಿಯಂತೆ ಪ್ರಜ್ವಲಿಸದೇ ಕೇವಲ ಹೊಗೆಯನ್ನು ತೋರಿಸುವಂತಿರಬಾರದು.

12138020a ನಾನರ್ಥಕೇನಾರ್ಥವತ್ತ್ವಂ[2] ಕೃತಘ್ನೇನ ಸಮಾಚರೇತ್|

12138020c ಅರ್ಥೇ ತು ಶಕ್ಯತೇ ಭೋಕ್ತುಂ ಕೃತಕಾರ್ಯೋಽವಮನ್ಯತೇ|

12138020e ತಸ್ಮಾತ್ಸರ್ವಾಣಿ ಕಾರ್ಯಾಣಿ ಸಾವಶೇಷಾಣಿ ಕಾರಯೇತ್||

ಉದ್ದೇಶಗಳನ್ನಿಟ್ಟುಕೊಂಡಿರುವವನು ಕೃತಘ್ನನೊಡನೆ ಆರ್ಥಿಕ ಸಂಬಂಧವನ್ನು ಇಟ್ಟುಕೊಳ್ಳಬಾರದು. ಆರ್ಥಿಯಿಂದ ಕೆಲಸಮಾಡಿಸಿಕೊಳ್ಳುವುದು ಸುಲಭ. ಆದರೆ ಒಮ್ಮೆ ಕೆಲಸವಾಯಿತೆಂದರೆ ಅದೇ ಆರ್ಥಿಯು ಕೆಲಸಮಾಡಿಕೊಟ್ಟವನನ್ನು ಅಪೇಕ್ಷಿಸಬಹುದು. ಆದುದರಿಂದ ಇತರರ ಎಲ್ಲ ಕೆಲಸಗಳನ್ನೂ ಸ್ವಲ್ಪ ಉಳಿಸಿಯೇ ಮಾಡಬೇಕು.

12138021a ಕೋಕಿಲಸ್ಯ ವರಾಹಸ್ಯ ಮೇರೋಃ ಶೂನ್ಯಸ್ಯ ವೇಶ್ಮನಃ|

12138021c ವ್ಯಾಡಸ್ಯ ಭಕ್ತಿಚಿತ್ರಸ್ಯ[3] ಯಚ್ಚ್ರೇಷ್ಠಂ ತತ್ ಸಮಾಚರೇತ್||

ಕೋಗಿಲೆ, ಹಂದಿ, ಮೇರು ಪರ್ವತ, ಶೂನ್ಯಗೃಹ, ಹಾವು ಮತ್ತು ಭಕ್ತಿಚಿತ್ರ ಇವುಗಳಲ್ಲಿ ಯಾವ ಗುಣವು ಶ್ರೇಷ್ಠವಾಗಿರುವುದೋ ಅದನ್ನೇ ಆಚರಿಸಬೇಕು.

12138022a ಉತ್ಥಾಯೋತ್ಥಾಯ ಗಚ್ಚೇಚ್ಚ ನಿತ್ಯಯುಕ್ತೋ ರಿಪೋರ್ಗೃಹಾನ್|

12138022c ಕುಶಲಂ ಚಾಪಿ ಪೃಚ್ಚೇತ ಯದ್ಯಪ್ಯಕುಶಲಂ ಭವೇತ್||

ನಿತ್ಯವೂ ಎದ್ದವನು ಶತ್ರುವಿನ ಮನೆಗೆ ಹೋಗಿ ಅವನಿಗೆ ಅಕುಶಲವು ನಡೆಯುತ್ತಿದ್ದರೂ ಸಾವಧಾನದಿಂದ ಅವನ ಕುಶಲವನ್ನು ಕೇಳುತ್ತಿರಬೇಕು.

12138023a ನಾಲಸಾಃ ಪ್ರಾಪ್ನುವಂತ್ಯರ್ಥಾನ್ನ ಕ್ಲೀಬಾ ನ ಚ ಮಾನಿನಃ|

12138023c ನ ಚ ಲೋಕರವಾದ್ಭೀತಾ ನ ಚ ಶಶ್ವತ್ ಪ್ರತೀಕ್ಷಿಣಃ||

ಆಲಸಿ, ಹೇಡಿಗಳು, ಅಭಿಮಾನಿಗಳು, ಜನರ ಮಾತಿಗೆ ಹೆದರುವವರು ಮತ್ತು ಸಮಯವನ್ನೇ ಕಾಯುತ್ತಾ ಕುಳಿತಿರುವವರು ತಮ್ಮ ಅಭೀಷ್ಟ ಸಿದ್ಧಿಗಳನ್ನು ಪಡೆದುಕೊಳ್ಳುವುದಿಲ್ಲ.

12138024a ನಾಸ್ಯ ಚಿದ್ರಂ ಪರೋ ವಿದ್ಯಾದ್ವಿದ್ಯಾಚ್ಚಿದ್ರಂ ಪರಸ್ಯ ತು|

12138024c ಗೂಹೇತ್ಕೂರ್ಮ ಇವಾಂಗಾನಿ ರಕ್ಷೇದ್ವಿವರಮಾತ್ಮನಃ||

ತನ್ನ ನ್ಯೂನತೆಗಳನ್ನು ಶತ್ರುವಿಗೆ ತೋರಿಸಬಾರದು ಆದರೆ ಶತ್ರುವಿನ ನ್ಯೂನತೆಗಳನ್ನು ತಿಳಿದುಕೊಂಡಿರಬೇಕು. ಆಮೆಯು ತನ್ನ ಅಂಗಗಳನ್ನು ಒಳಗೆ ಎಳೆದುಕೊಂಡು ರಕ್ಷಿಸಿಕೊಂಡಿರುವಂತೆ ತನ್ನ ನ್ಯೂನತೆಗಳನ್ನು ಮುಚ್ಚಿಕೊಂಡಿರಬೇಕು.

12138025a ಬಕವಚ್ಚಿಂತಯೇದರ್ಥಾನ್ಸಿಂಹವಚ್ಚ ಪರಾಕ್ರಮೇತ್|

12138025c ವೃಕವಚ್ಚಾವಲುಂಪೇತ ಶಶವಚ್ಚ[4] ವಿನಿಷ್ಪತೇತ್||

ಬಕಪಕ್ಷಿಯಂತೆ ಏಕಾಗ್ರಚಿತ್ತನಾಗಿ ಕರ್ತವ್ಯವಿಷಯದ ಕುರಿತು ಚಿಂತಿಸಬೇಕು. ಸಿಂಹದಂತೆ ಪರಾಕ್ರಮವನ್ನು ಪ್ರಕಟಿಸಬೇಕು. ತೋಳದಂತೆ ಒಮ್ಮಿಂದೊಮ್ಮೆಲೇ ಆಕ್ರಮಣ ಮಾಡಿ ಶತ್ರುವಿನ ಧನವನ್ನು ಕಸಿದುಕೊಳ್ಳಬೇಕು ಮತ್ತು ಮೊಲದಂತೆ ಶತ್ರುವಿನ ಮೇಲೆ ಕುಪ್ಪಳಿಸಬೇಕು.

12138026a ಪಾನಮಕ್ಷಾಸ್ತಥಾ ನಾರ್ಯೋ ಮೃಗಯಾ ಗೀತವಾದಿತಮ್|

12138026c ಏತಾನಿ ಯುಕ್ತ್ಯಾ ಸೇವೇತ ಪ್ರಸಂಗೋ ಹ್ಯತ್ರ ದೋಷವಾನ್||

ಪಾನ, ದ್ಯೂತ, ನಾರಿಯರು, ಬೇಟೆ ಮತ್ತು ಗೀತ-ವಾದ್ಯಗಳು ಇವುಗಳನ್ನು ಸಂಯಮಪೂರ್ವಕ ಅನಾಸಕ್ತಭಾವದಿಂದ ಸೇವಿಸಬೇಕು. ಏಕೆಂದರೆ ಇವುಗಳಲ್ಲಿನ ಆಸಕ್ತಿಯು ಅನಿಷ್ಟಕಾರಕವು.

12138027a ಕುರ್ಯಾತ್ತೃಣಮಯಂ ಚಾಪಂ ಶಯೀತ ಮೃಗಶಾಯಿಕಾಮ್|

12138027c ಅಂಧಃ ಸ್ಯಾದಂಧವೇಲಾಯಾಂ ಬಾಧಿರ್ಯಮಪಿ ಸಂಶ್ರಯೇತ್||

ಧನುಸ್ಸನ್ನು ತೃಣಮಯವನ್ನಾಗಿ ಮಾಡಬೇಕು. ಜಿಂಕೆಯಂತೆ ಜಾಗರೂಕನಾಗಿದ್ದು ನಿದ್ರಿಸಬೇಕು. ಅಂಧನಾಗಿರಬೇಕಾದ ವೇಳೆಯಲ್ಲಿ ಅಂಧನಾಗಿರಬೇಕು. ಸಮಯಕ್ಕೆ ಅನುಸಾರವಾಗಿ ಕಿವುಡನ ಭಾವವನ್ನೂ ಸ್ವೀಕರಿಸಬೇಕು.

12138028a ದೇಶಂ ಕಾಲಂ ಸಮಾಸಾದ್ಯ ವಿಕ್ರಮೇತ ವಿಚಕ್ಷಣಃ|

12138028c ದೇಶಕಾಲಾಭ್ಯತೀತೋ ಹಿ ವಿಕ್ರಮೋ ನಿಷ್ಫಲೋ ಭವೇತ್||

ಬುದ್ಧಿಶಾಲಿಯು ದೇಶ ಕಾಲಗಳನ್ನು ನೋಡಿಕೊಂಡು ವಿಕ್ರಮವನ್ನು ತೋರಿಸಬೇಕು. ದೇಶಕಾಲಗಳನ್ನು ಮೀರಿ ಮಾಡಿದ ವಿಕ್ರಮವು ನಿಷ್ಫಲವಾಗುತ್ತದೆ.

12138029a ಕಾಲಾಕಾಲೌ ಸಂಪ್ರಧಾರ್ಯ ಬಲಾಬಲಮಥಾತ್ಮನಃ|

12138029c ಪರಸ್ಪರಬಲಂ ಜ್ಞಾತ್ವಾ ತಥಾತ್ಮಾನಂ ನಿಯೋಜಯೇತ್||

ಕಾಲಾಕಾಲಗಳನ್ನು ಮತ್ತು ತನ್ನ ಬಲಾಬಲಗಳನ್ನು ನೋಡಿಕೊಂಡೇ ಮತ್ತು ಶತ್ರುವಿನ ಬಲವನ್ನೂ ತಿಳಿದುಕೊಂಡು ತನ್ನನ್ನು ಯುದ್ಧ ಅಥವಾ ಸಂಧಿಯಲ್ಲಿ ತೊಡಗಿಸಿಕೊಳ್ಳಬೇಕು.

12138030a ದಂಡೇನೋಪನತಂ ಶತ್ರುಂ ಯೋ ರಾಜಾ ನ ನಿಯಚ್ಚತಿ|

12138030c ಸ ಮೃತ್ಯುಮುಪಗೂಹ್ಯಾಸ್ತೇ ಗರ್ಭಮಶ್ವತರೀ ಯಥಾ||

ನತಮಸ್ತಕನಾದ ಶತ್ರುವನ್ನು ದಂಡದಿಂದ ನಾಶಪಡಿಸದ ರಾಜನು ಮೃತ್ಯುವನ್ನು ಗರ್ಭಧಾರಣೆ ಮಾಡುವ ಹೇಸರಗತ್ತೆಯಂತೆ ಮೃತ್ಯುವನ್ನು ಆಮಂತ್ರಿಸುತ್ತಾನೆ.

12138031a ಸುಪುಷ್ಪಿತಃ ಸ್ಯಾದಫಲಃ ಫಲವಾನ್ ಸ್ಯಾದ್ದುರಾರುಹಃ|

12138031c ಆಮಃ ಸ್ಯಾತ್ಪಕ್ವಸಂಕಾಶೋ ನ ಚ ಶೀರ್ಯೇತ ಕಸ್ಯ ಚಿತ್||

ನೀತಿಜ್ಞ ರಾಜನು  ಚೆನ್ನಾಗಿ ಹೂವುಗಳು ತುಂಬಿದ ಆದರೆ ಹಣ್ಣುಗಳಿಲ್ಲದ ವೃಕ್ಷದಂತಿರಬೇಕು. ಫಲವು ಬಂದರೂ ಇನ್ನೂ ಕಾಯಾಗಿದ್ದ ಹಾಗೆ ಕಾಣಿಸಬೇಕು. ತಾನೂ ಎಂದೂ ಶಿಥಿಲನಾದವನಂತೆ ತೋರಬಾರದು.

12138032a ಆಶಾಂ ಕಾಲವತೀಂ ಕುರ್ಯಾತ್ತಾಂ ಚ ವಿಘ್ನೇನ ಯೋಜಯೇತ್|

12138032c ವಿಘ್ನಂ ನಿಮಿತ್ತತೋ ಬ್ರೂಯಾನ್ನಿಮಿತ್ತಂ ಚಾಪಿ ಹೇತುತಃ||

ರಾಜನು ಶತ್ರುವಿನ ಆಶಯಗಳನ್ನು ಪೂರ್ಣಗೊಳಿಸುವಲ್ಲಿ ವಿಲಂಬಮಾಡಬೇಕು. ಏನಾದರೂ ವಿಘ್ನಗಳನ್ನು ತಂದೊಡ್ಡಬೇಕು. ಆ ವಿಘ್ನಕ್ಕೆ ಯಾವುದಾದರೂ ಕಾರಣವನ್ನು ಹೇಳಬೇಕು. ಆದರೆ ಆ ಕಾರಣವು ಚೆನ್ನಾಗಿ ಯೋಚಿಸಿದ್ದಾಗಿರಬೇಕು.

12138033a ಭೀತವತ್ಸಂವಿಧಾತವ್ಯಂ ಯಾವದ್ ಭಯಮನಾಗತಮ್|

12138033c ಆಗತಂ ತು ಭಯಂ ದೃಷ್ಟ್ವಾ ಪ್ರಹರ್ತವ್ಯಮಭೀತವತ್||

ಭಯವುಂಟಾಗದ ವರೆಗೆ ಭಯದಲ್ಲಿರುವವನಂತೆಯೇ ತೋರಿಸಿಕೊಂಡು ಭಯವುಂಟಾಗದ ಹಾಗೆ ಪ್ರಯತ್ನಿಸುತ್ತಿರಬೇಕು. ಆದರೆ ಭಯವು ಬರುತ್ತಿರುವುದನ್ನು ನೋಡಿ ನಿರ್ಭೀತನಾಗಿ ಶತ್ರುವನ್ನು ಪ್ರಹರಿಸಬೇಕು.

12138034a ನ ಸಂಶಯಮನಾರುಹ್ಯ ನರೋ ಭದ್ರಾಣಿ ಪಶ್ಯತಿ|

12138034c ಸಂಶಯಂ ಪುನರಾರುಹ್ಯ ಯದಿ ಜೀವತಿ ಪಶ್ಯತಿ||

ಪ್ರಾಣದ ಸಂಶವಿದ್ದಾಗ ಆ ಸಂಕಟವನ್ನು ಸ್ವೀಕರಿಸದೇ ಮನುಷ್ಯನು ಒಳಿತನ್ನು ಕಾಣುವುದಿಲ್ಲ. ಪ್ರಾಣಸಂಕಟದಿಂದ ತನ್ನನ್ನು ಉಳಿಸಿಕೊಂಡರೆ ಮಾತ್ರ ಮುಂದೆ ತನ್ನ ಉಳಿತನ್ನು ಕಾಣಬಹುದು.

12138035a ಅನಾಗತಂ ವಿಜಾನೀಯಾದ್ಯಚ್ಚೇದ್ ಭಯಮುಪಸ್ಥಿತಮ್|

12138035c ಪುನರ್ವೃದ್ಧಿಕ್ಷಯಾತ್ಕಿಂ ಚಿದಭಿವೃತ್ತಂ ನಿಶಾಮಯೇತ್||

ಮುಂದಾಗಲಿರುವ ಸಂಕಟವನ್ನು ಮೊದಲೇ ತಿಳಿದುಕೊಳ್ಳಲು ಪ್ರಯತ್ನಿಸಬೇಕು ಮತ್ತು ಭಯಬಂದೊದಗಿದಾಗ ಅದನ್ನು ಮುಚ್ಚಿಡಲು ಪ್ರಯತ್ನಿಸಬಾರದು. ಮುಚ್ಚಿಡಲ್ಪಟ್ಟ ಭಯವೂ ಪುನಃ ಹೆಚ್ಚಾಗಬಹುದು. ಆದುದರಿಂದ ಭಯವು ಎಂದೂ ಮುಗಿದಿಲ್ಲ ಎಂದೇ ಯೋಚಿಸಿ ಜಾಗೃತನಾಗಿರಬೇಕು.

12138036a ಪ್ರತ್ಯುಪಸ್ಥಿತಕಾಲಸ್ಯ ಸುಖಸ್ಯ ಪರಿವರ್ಜನಮ್|

12138036c ಅನಾಗತಸುಖಾಶಾ ಚ ನೈಷ ಬುದ್ಧಿಮತಾಂ ನಯಃ||

ಬಂದಿರುವ ಸುಖದ ಕಾಲವನ್ನು ಪರಿತ್ಯಜಿಸಿ ಮುಂದೆ ಬರುವ ಸುಖವನ್ನು ಆಶಿಸುವುದು ಬುದ್ಧಿವಂತರ ನೀತಿಯಲ್ಲ.

12138037a ಯೋಽರಿಣಾ ಸಹ ಸಂಧಾಯ ಸುಖಂ ಸ್ವಪಿತಿ ವಿಶ್ವಸನ್|

12138037c ಸ ವೃಕ್ಷಾಗ್ರಪ್ರಸುಪ್ತೋ ವಾ ಪತಿತಃ ಪ್ರತಿಬುಧ್ಯತೇ||

ಶತ್ರುವಿನೊಂದಿಗೆ ಸಂಧಿಮಾಡಿಕೊಂದು ವಿಶ್ವಾಸದಿಂದ ಸುಖವಾಗಿ ಮಲಗುವವನು ಮರದ ರೆಂಬೆಯ ಮೇಲೆ ಮಲಗಿ ನಿದ್ದೆ ಮಾಡಿದವನಂತೆ. ಕೆಳಗೆ ಬಿದ್ದಾಗಲೇ ಅವನಿಗೆ ಎಚ್ಚರವಾಗುತ್ತದೆ.

12138038a ಕರ್ಮಣಾ ಯೇನ ತೇನೇಹ ಮೃದುನಾ ದಾರುಣೇನ ವಾ|

12138038c ಉದ್ಧರೇದ್ದೀನಮಾತ್ಮಾನಂ ಸಮರ್ಥೋ ಧರ್ಮಮಾಚರೇತ್||

ಮನುಷ್ಯನು ಮೃದುವಾಗಿರಲಿ ಕಠೋರನಾಗಿರಲಿ ಯಾವುದೇ ಉಪಾಯದಿಂದಲೂ ದೀನದಶೆಯಿಂದ ತನ್ನನ್ನು ಉದ್ಧರಿಸಿಕೊಳ್ಳಬೇಕು. ಇದರ ನಂತರ ಸಮರ್ಥನಾಗಿ ಧರ್ಮವನ್ನು ಆಚರಿಸಬಹುದು.

12138039a ಯೇ ಸಪತ್ನಾಃ ಸಪತ್ನಾನಾಂ ಸರ್ವಾಂಸ್ತಾನಪವತ್ಸಯೇತ್|

12138039c ಆತ್ಮನಶ್ಚಾಪಿ ಬೋದ್ಧವ್ಯಾಶ್ಚಾರಾಃ ಪ್ರಣಿಹಿತಾಃ ಪರೈಃ||

ಶತ್ರುಗಳ ಸೇವೆಯನ್ನೂ ಮಾಡಬೇಕಾಗುತ್ತದೆ. ತನ್ನ ಮೇಲೆ ಶತ್ರುಗಳು ಕಳುಹಿಸಿರುವ ಗುಪ್ತಚರರನ್ನೂ ಗುರುತಿಸುವ ಪ್ರಯತ್ನಮಾಡುತ್ತಿರಬೇಕು.

12138040a ಚಾರಃ ಸುವಿಹಿತಃ ಕಾರ್ಯ ಆತ್ಮನೋಽಥ ಪರಸ್ಯ ಚ|

12138040c ಪಾಷಂಡಾಂಸ್ತಾಪಸಾದೀಂಶ್ಚ ಪರರಾಷ್ಟ್ರಂ ಪ್ರವೇಶಯೇತ್||

ತನ್ನ ಮತ್ತು ಶತ್ರುಗಳ ರಾಜ್ಯಗಳಲ್ಲಿ ಯಾರಿಗೂ ಪರಿಚಯವಿರದವನ್ನು ಗುಪ್ತಚರರನ್ನಾಗಿ ನಿಯೋಜಿಸಬೇಕು. ಪರರಾಷ್ಟ್ರಗಳಿಗೆ ಪಾಖಂಡವೇಷಧಾರೀ ಮತ್ತು ತಪಸ್ವೀ ಮೊದಲಾದವರನ್ನು ಗುಪ್ತಚರರನ್ನಾಗಿ ಕಳುಹಿಸಬೇಕು.

12138041a ಉದ್ಯಾನೇಷು ವಿಹಾರೇಷು ಪ್ರಪಾಸ್ವಾವಸಥೇಷು ಚ|

12138041c ಪಾನಾಗಾರೇಷು ವೇಶೇಷು ತೀರ್ಥೇಷು ಚ ಸಭಾಸು ಚ||

ಆ ಗುಪ್ತಚರರು ಉದ್ಯಾನಗಳಲ್ಲಿ, ವಿಹಾರಗಳಲ್ಲಿ, ಯಾಗಶಾಲೆಗಳಲ್ಲಿ, ವಸತಿಗೃಹಗಳಲ್ಲಿ, ಪಾನಾಗಾರಗಳಲ್ಲಿ, ಪ್ರವೇಶದ್ವಾರಗಳಲ್ಲಿ, ತೀರ್ಥಸ್ಥಾನಗಳಲ್ಲಿ ಮತ್ತು ಸಭಾಭವನಗಳಲ್ಲಿ ತಿರುಗಾಡುತ್ತಿರಬೇಕು.

12138042a ಧರ್ಮಾಭಿಚಾರಿಣಃ ಪಾಪಾಶ್ಚಾರಾ ಲೋಕಸ್ಯ ಕಂಟಕಾಃ|

12138042c ಸಮಾಗಚ್ಚಂತಿ ತಾನ್ ಬುದ್ಧ್ವಾ ನಿಯಚ್ಚೇಚ್ಚಮಯೇದಪಿ||

ಕಪಟ ಧರ್ಮಚಾರಿಗಳು, ಪಾಪಾತ್ಮರು, ಲೋಕಕಂಟಕರು ಅಂಥಹ ಸ್ಥಳಗಳಲ್ಲಿ ಸೇರುತ್ತಾರೆ. ಅವರನ್ನು ಗುರುತಿಸಿ ಶಿಕ್ಷಿಸಿಯಾದರೂ ಶಾಂತರನ್ನಾಗಿಸಬೇಕು.

12138043a ನ ವಿಶ್ವಸೇದವಿಶ್ವಸ್ತೇ ವಿಶ್ವಸ್ತೇ ನಾಪಿ ವಿಶ್ವಸೇತ್|

12138043c ವಿಶ್ವಸ್ತಂ ಭಯಮನ್ವೇತಿ ನಾಪರೀಕ್ಷ್ಯ ಚ ವಿಶ್ವಸೇತ್||

ವಿಶ್ವಾಸಪಾತ್ರನಲ್ಲದವನ ಮೇಲೆ ವಿಶ್ವಾಸವನ್ನಿಡಬಾರದು. ವಿಶ್ವಾಸಪಾತ್ರನಾಗಿರುವವನಲ್ಲಿಯೂ ಅಧಿಕ ವಿಶ್ವಾಸವನ್ನಿಡಬಾರದು. ಏಕೆಂದರೆ ಅಧಿಕ ವಿಶ್ವಾಸದಿಂದ ಭಯವುತ್ಪನ್ನವಾಗುತ್ತದೆ. ಆದುದರಿಂದ ಪರೀಕ್ಷಿಸದೇ ಯಾರ ಮೇಲೂ ವಿಶ್ವಾಸವನ್ನಿಡಬಾರದು.

12138044a ವಿಶ್ವಾಸಯಿತ್ವಾ ತು ಪರಂ ತತ್ತ್ವಭೂತೇನ ಹೇತುನಾ|

12138044c ಅಥಾಸ್ಯ ಪ್ರಹರೇತ್ಕಾಲೇ ಕಿಂ ಚಿದ್ವಿಚಲಿತೇ ಪದೇ||

ತತ್ತ್ವಭೂತ ಕಾರಣದಿಂದ ಶತ್ರುವಿನಲ್ಲಿ ವಿಶ್ವಾಸವನ್ನು ಹುಟ್ಟಿಸಿ ಅವನು ಸ್ವಲ್ಪವಾದರೂ ದುರ್ಬಲನಾದುದು ಕಂಡುಬಂದರೆ ಆಗಲೇ ಅವನನ್ನು ಪ್ರಹರಿಸಬೇಕು.

12138045a ಅಶಂಕ್ಯಮಪಿ ಶಂಕೇತ ನಿತ್ಯಂ ಶಂಕೇತ ಶಂಕಿತಾತ್|

12138045c ಭಯಂ ಹಿ ಶಂಕಿತಾಜ್ಜಾತಂ[5] ಸಮೂಲಮಪಿ ಕೃಂತತಿ||

ಶಂಕೆಗೆ ಯೋಗ್ಯರಲ್ಲದಿದ್ದವರನ್ನೂ ಶಂಕಿಸಬೇಕು. ಶಂಕಿಸಬೇಕಾದವರನ್ನಂತೂ ನಿತ್ಯವೂ ಶಂಕಿಸಬೇಕು. ಶಂಕಿತರಿಂದಾಗುವ ಭಯವೇ ಸಮೂಲವಾಗಿ ನಾಶಪಡಿಸುತ್ತದೆ.

12138046a ಅವಧಾನೇನ ಮೌನೇನ ಕಾಷಾಯೇಣ ಜಟಾಜಿನೈಃ|

12138046c ವಿಶ್ವಾಸಯಿತ್ವಾ ದ್ವೇಷ್ಟಾರಮವಲುಂಪೇದ್ಯಥಾ ವೃಕಃ||

ಮನೋಯೋಗವನ್ನು ತೋರಿಸಿ, ಮೌನದಿಂದಿದ್ದು, ಕಾಷಾಯವಸ್ತ್ರವನ್ನುಟ್ಟು, ಜಟಾಜಿನಗಳನ್ನು ಧರಿಸಿ, ಶತ್ರುವಿನ ವಿಶ್ವಾಸವನ್ನು ಪಡೆದುಕೊಂಡು ನಂತರ ಅವಕಾಶ ಸಿಕ್ಕಿದಾಗ ಹಸಿದ ತೋಳದಂತೆ ಅವನನ್ನು ಆಕ್ರಮಣಿಸಬೇಕು.

12138047a ಪುತ್ರೋ ವಾ ಯದಿ ವಾ ಭ್ರಾತಾ ಪಿತಾ ವಾ ಯದಿ ವಾ ಸುಹೃತ್|

12138047c ಅರ್ಥಸ್ಯ ವಿಘ್ನಂ ಕುರ್ವಾಣಾ ಹಂತವ್ಯಾ ಭೂತಿವರ್ಧನಾಃ||

ಪುತ್ರ, ಭ್ರಾತಾ, ಪಿತ, ಅಥವಾ ಮಿತ್ರ ಯಾರೇ ಆಗಲೀ ಅರ್ಥಪ್ರಾಪ್ತಿಗೆ ವಿಘ್ನವನ್ನುಂಟುಮಾಡುವವರಾದರೆ ಐಶ್ವರ್ಯವನ್ನು ಬಯಸುವ ರಾಜನು ಅವಶ್ಯವಾಗಿ ಅವರನ್ನು ಸಂಹರಿಸಬೇಕು.

12138048a ಗುರೋರಪ್ಯವಲಿಪ್ತಸ್ಯ ಕಾರ್ಯಾಕಾರ್ಯಮಜಾನತಃ|

12138048c ಉತ್ಪಥಪ್ರತಿಪನ್ನಸ್ಯ ದಂಡೋ ಭವತಿ ಶಾಸನಮ್||

ಗುರುವೇ ಆಗಿದ್ದರೂ ಸೊಕ್ಕಿನಿಂದ ಕರ್ತವ್ಯ ಮತ್ತು ಅಕರ್ತವ್ಯಗಳನ್ನು ತಿಳಿಯದೇ ತಪ್ಪು ಮಾರ್ಗದಲ್ಲಿ ಹೋಗುತ್ತಿರುವವನಾದರೆ ಅವನಿಗೂ ಕೂಡ ದಂಡವನ್ನು ವಿಧಿಸಬೇಕು. ದಂಡವು ಅವನನ್ನು ಸರಿ ಮಾರ್ಗಕ್ಕೆ ತರುತ್ತದೆ.

12138049a ಪ್ರತ್ಯುತ್ಥಾನಾಭಿವಾದಾಭ್ಯಾಂ ಸಂಪ್ರದಾನೇನ ಕಸ್ಯ ಚಿತ್|

12138049c ಪ್ರತಿಪುಷ್ಕಲಘಾತೀ ಸ್ಯಾತ್ತೀಕ್ಷ್ಣತುಂಡ ಇವ ದ್ವಿಜಃ|

ಶತ್ರುವು ಆಗಮಿಸಿದಾಗ ಎದ್ದು ಅವನನ್ನು ಸ್ವಾಗತಿಸಬೇಕು. ನಮಸ್ಕರಿಸಿ ಏನಾದರೂ ಉಪಹಾರವನ್ನು ನೀಡಬೇಕು. ಈ ರೀತಿ ಮೊದಲು ಅವನನ್ನು ತನ್ನ ವಶದಲ್ಲಿ ತಂದುಕೊಳ್ಳಬೇಕು. ಅನಂತರ ತೀಕ್ಷ್ಣ ಕೊಕ್ಕುಳ್ಳ ಪಕ್ಷಿಯು ಮರದಲ್ಲಿದ್ದ ಹಣ್ಣುಗಳೆಲ್ಲವನ್ನೂ ಕುಕ್ಕಿ ಗಾಯಗೊಳಿಸುವಂತೆ ಅವನ ಎಲ್ಲ ಸಾಧನ-ಸಾಧ್ಯತೆಗಳನ್ನೂ ಆಘಾತಗೊಳಿಸಬೇಕು.

12138050a ನಾಚ್ಚಿತ್ತ್ವಾ ಪರಮರ್ಮಾಣಿ ನಾಕೃತ್ವಾ ಕರ್ಮ ದಾರುಣಮ್|

12138050c ನಾಹತ್ವಾ ಮತ್ಸ್ಯಘಾತೀವ ಪ್ರಾಪ್ನೋತಿ ಪರಮಾಂ ಶ್ರಿಯಮ್||

ಮೀನು ಹಿಡಿಯುವ ಬೆಸ್ತನಂತೆ ರಾಜನಾದವನು ಇನ್ನೊಬ್ಬರ ಮರ್ಮವನ್ನು ಸೀಳದೇ, ಅತ್ಯಂತ ಕ್ರೂರಕರ್ಮವನ್ನು ಮಾಡದೇ, ಮತ್ತು ಅನೇಕರ ಪ್ರಾಣಗಳನ್ನು ತೆಗೆದುಕೊಳ್ಳದೇ ಮಹಾ ಸಂಪತ್ತನ್ನು ಪಡೆದುಕೊಳ್ಳಲಾರನು.

12138051a ನಾಸ್ತಿ ಜಾತ್ಯಾ ರಿಪುರ್ನಾಮ ಮಿತ್ರಂ ನಾಮ ನ ವಿದ್ಯತೇ|

12138051c ಸಾಮರ್ಥ್ಯಯೋಗಾಜ್ಜಾಯಂತೇ ಮಿತ್ರಾಣಿ ರಿಪವಸ್ತಥಾ||

ಹುಟ್ಟಿನಿಂದಲೇ ಯಾರೂ ಮಿತ್ರ ಅಥವಾ ಶತ್ರುವಾಗಿರುವುದಿಲ್ಲ. ಸಾಮರ್ಥ್ಯಯೋಗದಿಂದಲೇ ಮಿತ್ರರು ಮತ್ತು ಶತ್ರುಗಳು ಉತ್ಪನ್ನರಾಗುತ್ತಿರುತ್ತಾರೆ.

12138052a ಅಮಿತ್ರಂ ನೈವ ಮುಂಚೇತ ಬ್ರುವಂತಂ ಕರುಣಾನ್ಯಪಿ|

12138052c ದುಃಖಂ ತತ್ರ ನ ಕುರ್ವೀತ ಹನ್ಯಾತ್ಪೂರ್ವಾಪಕಾರಿಣಮ್||

ಅಮಿತ್ರನನ್ನು, ಅವನು ಕರುಣಾಜನಕವಾಗಿ ಕೇಳಿಕೊಂಡರೂ, ಬಿಟ್ಟುಬಿಡಬಾರದು. ಹಿಂದೆ ಅಪಕಾರ ಮಾಡಿದವನನ್ನು ಅವಶ್ಯವಾಗಿ ಕೊಲ್ಲಬೇಕು ಮತ್ತು ಅದರ ಕುರಿತು ದುಃಖಿಸಬಾರದು.

12138053a ಸಂಗ್ರಹಾನುಗ್ರಹೇ ಯತ್ನಃ ಸದಾ ಕಾರ್ಯೋಽನಸೂಯತಾ|

12138053c ನಿಗ್ರಹಶ್ಚಾಪಿ ಯತ್ನೇನ ಕರ್ತವ್ಯೋ ಭೂತಿಮಿಚ್ಚತಾ||

ಐಶ್ವರ್ಯವನ್ನು ಬಯಸುವ ರಾಜನು ದೋಷದೃಷ್ಟಿಯನ್ನು ಪರಿತ್ಯಜಿಸಿ ಸದಾ ಜನರನ್ನು ತನ್ನ ಪಕ್ಷದಲ್ಲಿ ಸೇರಿಸಿಕೊಳ್ಳುತ್ತಿರಬೇಕು ಮತ್ತು ಇತರರ ಮೇಲೆ ಅನುಗ್ರಹ ತೋರಿಸುವಲ್ಲಿ ಯತ್ನಶೀಲನಾಗಿರಬೇಕು. ಶತ್ರುಗಳ ನಿಗ್ರಹವನ್ನೂ ಪ್ರಯತ್ನಪೂರ್ವಕವಾಗಿಯೇ ಮಾಡಬೇಕು.

12138054a ಪ್ರಹರಿಷ್ಯನ್ಪ್ರಿಯಂ ಬ್ರೂಯಾತ್ಪ್ರಹೃತ್ಯಾಪಿ ಪ್ರಿಯೋತ್ತರಮ್|

12138054c ಅಪಿ ಚಾಸ್ಯ ಶಿರಶ್ಚಿತ್ತ್ವಾ ರುದ್ಯಾಚ್ಚೋಚೇದಥಾಪಿ ವಾ||

ಪ್ರಹರಿಸಲು ಸಿದ್ಧನಾಗಿರುವಾಗಲೂ ಪ್ರಿಯ ಮಾತನ್ನಾಡಬೇಕು. ಪ್ರಹರಿಸದ ನಂತರವೂ ಪ್ರಿಯವಾದುದನ್ನೇ ಹೇಳಬೇಕು. ಖಡ್ಗದಿಂದ ಶತ್ರುವಿನ ಶಿರವನ್ನು ತುಂಡರಿಸಿದರೂ ಅವನಿಗಾಗಿ ಶೋಕಿಸಬಾರದು ಮತ್ತು ರೋದಿಸಬಾರದು.

12138055a ನಿಮಂತ್ರಯೇತ ಸಾಂತ್ವೇನ ಸಂಮಾನೇನ ತಿತಿಕ್ಷಯಾ|

12138055c ಆಶಾಕಾರಣಮಿತ್ಯೇತತ್ ಕರ್ತವ್ಯಂ ಭೂತಿಮಿಚ್ಚತಾ||

ಐಶ್ವರ್ಯವನ್ನು ಬಯಸುವ ರಾಜನು ಮಧುರ ವಚನದಿಂದ ಇನ್ನೊಬ್ಬರನ್ನು ಸಮ್ಮಾನಿಸಿ ಸಹನಶೀಲನಾಗಿ ಜನರನ್ನು ತನ್ನ ಬಳಿ ಬರಲು ನಿಮಂತ್ರಿಸಬೇಕು. ಇದೇ ಜನರ ಆರಾಧನೆ ಮತ್ತು ಸಾಮಾನ್ಯ ಜನತೆಯ ಸಮ್ಮಾನವು. ಇದನ್ನು ಅವಶ್ಯವಾಗಿ ಮಾಡಬೇಕು.

12138056a ನ ಶುಷ್ಕವೈರಂ ಕುರ್ವೀತ ನ ಬಾಹುಭ್ಯಾಂ ನದೀಂ ತರೇತ್|

12138056c ಅಪಾರ್ಥಕಮನಾಯುಷ್ಯಂ ಗೋವಿಷಾಣಸ್ಯ ಭಕ್ಷಣಮ್|

12138056e ದಂತಾಶ್ಚ ಪರಿಘೃಷ್ಯಂತೇ ರಸಶ್ಚಾಪಿ ನ ಲಭ್ಯತೇ||

ಶುಷ್ಕವೈರವನ್ನು ಮಾಡಬಾರದು. ಎರಡೂ ಬಾಹುಗಳಿಂದ ಈಜಿ ನದಿಯನ್ನು ದಾಟಬಾರದು. ಇದು ನಿರರ್ಥಕ ಮತ್ತು ಆಯುನಾಶಕ ಕರ್ಮವು. ಇದು ನಾಯಿಯು ಗೋವಿನ ಕೋಡನ್ನು ತಿನ್ನುವಂತಹ ಕರ್ಮವು. ಇದರಿಂದ ನಾಯಿಯ ಹಲ್ಲು ಸವೆಯುವುದೇ ಹೊರತು ಅದಕ್ಕೆ ಯಾವ ರಸವೂ ದೊರೆಯುವುದಿಲ್ಲ.

12138057a ತ್ರಿವರ್ಗೇ ತ್ರಿವಿಧಾ ಪೀಡಾನುಬಂಧಾಸ್ತ್ರಯ ಏವ ಚ|

12138057c ಅನುಬಂಧವಧೌ ಜ್ಞಾತ್ವಾ ಪೀಡಾಂ ಹಿ ಪರಿವರ್ಜಯೇತ್||

ಧರ್ಮ-ಅರ್ಥ-ಕಾಮ ಈ ಮೂರು ಪುರುಷಾರ್ಥಗಳ ಸೇವನೆಯಲ್ಲಿ ಲೋಭ, ಮೂರ್ಖತನ ಮತ್ತು ದುರ್ಬಲತೆ – ಈ ಮೂರು ಪ್ರಕಾರದ ಬಾಧೆ/ಪೀಡೆಗಳುಂಟಾಗುತ್ತವೆ. ಇವುಗಳ ಫಲವೂ ಮೂರು ಪ್ರಕಾರವಾಗಿವೆ: ಶಾಂತಿ, ಸರ್ವಹಿತಕಾರೀ ಕರ್ಮ ಮತ್ತು ಉಪಭೋಗ. ಈ ಫಲಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು ಮತ್ತು ಪೀಡೆಗಳನ್ನು ತೊರೆಯಬೇಕು.

12138058a ಋಣಶೇಷೋಽಗ್ನಿಶೇಷಶ್ಚ ಶತ್ರುಶೇಷಸ್ತಥೈವ ಚ|

12138058c ಪುನಃ ಪುನರ್ವಿವರ್ಧೇತ ಸ್ವಲ್ಪೋಽಪ್ಯನಿವಾರಿತಃ||

ಋಣ, ಅಗ್ನಿ ಮತ್ತು ಶತ್ರುಗಳು ಸ್ವಲ್ಪವಾದರೂ ಉಳಿದುಕೊಂಡರೆ ಅದು ಪುನಃ ಪುನಃ ವೃದ್ಧಿಯಾಗುತ್ತಲೇ ಇರುತ್ತದೆ. ಆದುದರಿಂದ ಇವುಗಳಲ್ಲಿ ಯಾವುದನ್ನೂ ಉಳಿಸಬಾರದು.

12138059a ವರ್ಧಮಾನಮೃಣಂ ತಿಷ್ಠತ್ಪರಿಭೂತಾಶ್ಚ ಶತ್ರವಃ|

12138059c ಆವಹಂತ್ಯನಯಂ ತೀವ್ರಂ ವ್ಯಾಧಯಶ್ಚಾಪ್ಯುಪೇಕ್ಷಿತಾಃ||

ಹೆಚ್ಚಾಗುತ್ತಿರುವ ಋಣ, ತಿರಸ್ಕೃತ ಶತ್ರುವು ಜೀವಿತವಿರುವುದು ಮತ್ತು ಉಪೇಕ್ಷಿತ ರೋಗವು ಉಳಿದುಕೊಂಡಿರುವುದು – ಈ ಮೂರರಿಂದಲೂ ತೀವ್ರ ಭಯವುಂಟಾಗುತ್ತದೆ.

12138060a ನಾಸಮ್ಯಕ್ಕೃತಕಾರೀ ಸ್ಯಾದಪ್ರಮತ್ತಃ ಸದಾ ಭವೇತ್|

12138060c ಕಂಟಕೋಽಪಿ ಹಿ ದುಶ್ಚಿನ್ನೋ ವಿಕಾರಂ ಕುರುತೇ ಚಿರಮ್||

ಯಾವುದೇ ಕೆಲಸವನ್ನು ಪೂರ್ಣಗೊಳಿಸದೇ ಇರಬಾರದು ಮತ್ತು ಸದಾ ಸಾವಧಾನದಿಂದ ಇರಬೇಕು. ಶರೀರಕ್ಕೆ ಚುಚ್ಚಿಕೊಂಡ ಸಣ್ಣ ಮುಳ್ಳನ್ನೂ ಕೂಡ ಸಂಪೂರ್ಣವಾಗಿ ತೆಗಿಯದೇ ಇದ್ದರೆ ಅದು ಬಹಳ ಕಾಲದವರೆಗೆ ವಿಕಾರವನ್ನುಂಟುಮಾಡಬಲ್ಲದು.

12138061a ವಧೇನ ಚ ಮನುಷ್ಯಾಣಾಂ ಮಾರ್ಗಾಣಾಂ ದೂಷಣೇನ ಚ|

12138061c ಆಕರಾಣಾಂ ವಿನಾಶೈಶ್ಚ ಪರರಾಷ್ಟ್ರಂ ವಿನಾಶಯೇತ್||

ಮನುಷ್ಯರನ್ನು ವಧಿಸಿ, ಮಾರ್ಗಗಳನ್ನು ನಾಶಪಡಿಸಿ, ಮನೆಗಳನ್ನು ವಿನಾಶಗೊಳಿಸಿ ಪರರಾಷ್ಟ್ರವನ್ನು ಧ್ವಂಸಗೊಳಿಸಬೇಕು.

12138062a ಗೃಧ್ರದೃಷ್ಟಿರ್ಬಕಾಲೀನಃ ಶ್ವಚೇಷ್ಟಃ ಸಿಂಹವಿಕ್ರಮಃ|

12138062c ಅನುದ್ವಿಗ್ನಃ ಕಾಕಶಂಕೀ ಭುಜಂಗಚರಿತಂ ಚರೇತ್||

ರಾಜನು ಹದ್ದಿನಂತೆ ದೂರದವರೆಗೂ ದೃಷ್ಟಿಯನ್ನು ಹಾಯಿಸಬೇಕು. ಬಕಪಕ್ಷಿಯಂತೆ ಲಕ್ಷ್ಯದ ಮೇಲೇ ದೃಷ್ಟಿಯನ್ನಿಟ್ಟರಬೇಕು. ನಾಯಿಯಂತೆ ಎಚ್ಚೆತ್ತಿರಬೇಕು ಮತ್ತು ಸಿಂಹದಂತೆ ಪರಕ್ರಮವನ್ನು ತೋರಿಸಬೇಕು. ಮನಸ್ಸಿನಲ್ಲಿ ಉದ್ವಿಗ್ನನಾಗಿರಬಾರದು. ಕಾಗೆಯಂತೆ ಶಂಕೆಯಿಂದಿದ್ದು ಇನ್ನೊಬ್ಬರ ವರ್ತನೆಗಳನ್ನು ನೋಡುತ್ತಿರಬೇಕು ಮತ್ತು ಸರ್ಪದಂತೆ ಶತ್ರುವಿನ ಛಿದ್ರವನ್ನು ನೋಡಿಕೊಂಡು ಅವಸರ ಸಿಕ್ಕೊಡನೆಯೇ ಆಕ್ರಮಣಮಾಡಬೇಕು.

[6]12138063a ಶ್ರೇಣಿಮುಖ್ಯೋಪಜಾಪೇಷು ವಲ್ಲಭಾನುನಯೇಷು ಚ|

12138063c ಅಮಾತ್ಯಾನ್ ಪರಿರಕ್ಷೇತ ಭೇದಸಂಘಾತಯೋರಪಿ||

ರಾಜನು ತನ್ನ ಅಮಾತ್ಯರನ್ನು ಶ್ರೇಣಿಮುಖ್ಯರಲ್ಲುಂಟಾಗುವ ಭೇದಗಳಿಂದ ಮತ್ತು ಮಿತ್ರರು ತಮ್ಮ ಕಡೆ ಸೆಳೆದುಕೊಳ್ಳುವ ಭೇದನೀತಿಗಳಿಂದ ಹಾಗೂ ಪರಸ್ಪರರ ಭೇದಗಳಿಂದುಂಟಾಗುವ ಜಗಳಗಳಿಂದ ರಕ್ಷಿಸಿಕೊಳ್ಳಬೇಕು.

12138064a ಮೃದುರಿತ್ಯವಮನ್ಯಂತೇ ತೀಕ್ಷ್ಣ ಇತ್ಯುದ್ವಿಜಂತಿ ಚ|

12138064c ತೀಕ್ಷ್ಣಕಾಲೇ ಚ ತೀಕ್ಷ್ಣಃ ಸ್ಯಾನ್ಮೃದುಕಾಲೇ ಮೃದುರ್ಭವೇತ್||

ರಾಜನು ಸದಾ ಮೃದುವಾಗಿದ್ದರೆ ಅವನನ್ನು ಅವಹೇಳನ ಮಾಡುತ್ತಾರೆ. ಸದಾ ತೀಕ್ಷ್ಣವಾಗಿದ್ದರೆ ಜನರು ಉದ್ವಿಗ್ನರಾಗುತ್ತಾರೆ. ಆದುದರಿಂದ ಅವನು ಕಠೋರನಾಗಿರಬೇಕಾದ ಸಮಯದಲ್ಲಿ ಕಠೋರನಾಗಿರಬೇಕು ಮತ್ತು ಮೃದುವಾಗಿರಬೇಕಾದ ಸಮಯದಲ್ಲಿ ಮೃದುವಾಗಿರಬೇಕು.

12138065a ಮೃದುನಾ ಸುಮೃದುಂ ಹಂತಿ ಮೃದುನಾ ಹಂತಿ ದಾರುಣಮ್|

12138065c ನಾಸಾಧ್ಯಂ ಮೃದುನಾ ಕಿಂ ಚಿತ್ತಸ್ಮಾತ್ತೀಕ್ಷ್ಣತರಂ ಮೃದು||

ಬುದ್ಧಿವಂತ ರಾಜನು ಮೃದುಸ್ವಭಾವದ ಶತ್ರುಗಳನ್ನು ಮೃದುವಾಗಿದ್ದುಕೊಂಡೇ ನಾಶಗೊಳಿಸುತ್ತಾನೆ. ಮೃದುವಾದ ಉಪಾಯದಿಂದಲೇ ದಾರುಣ ಶತ್ರುವನ್ನೂ ಕೊಲ್ಲಬಲ್ಲನು. ಕೋಮಲ ಉಪಾಯದಿಂದ ಯಾವುದೂ ಅಸಾಧ್ಯವಲ್ಲ. ಆದುದರಿಂದ ಮೃದುವಾಗಿರುವುದೇ ಅತ್ಯಂತ ತೀಕ್ಷ್ಣವಾಗಿರುತ್ತದೆ.

12138066a ಕಾಲೇ ಮೃದುರ್ಯೋ ಭವತಿ ಕಾಲೇ ಭವತಿ ದಾರುಣಃ|

12138066c ಸ ಸಾಧಯತಿ ಕೃತ್ಯಾನಿ ಶತ್ರೂಂಶ್ಚೈವಾಧಿತಿಷ್ಠತಿ||

ಯಾರು ಸಮಯಬಂದಾಗ ಮೃದುವಾಗುತ್ತಾನೋ ಮತ್ತು ಸಮಯಬಂದಾಗ ಕಠೋರನಾಗುತ್ತಾನೋ ಅವನು ತನ್ನ ಎಲ್ಲ ಕಾರ್ಯಗಳಲ್ಲಿಯೂ ಯಶಸ್ವಿಯಾಗುತ್ತಾನೆ ಮತ್ತು ಶತ್ರುವಿನ ಮೇಲೂ ಅಧಿಕಾರವನ್ನು ಪಡೆದುಕೊಳ್ಳುತ್ತಾನೆ.

12138067a ಪಂಡಿತೇನ ವಿರುದ್ಧಃ ಸನ್ದೂರೇಽಸ್ಮೀತಿ ನ ವಿಶ್ವಸೇತ್|

12138067c ದೀರ್ಘೌ ಬುದ್ಧಿಮತೋ ಬಾಹೂ ಯಾಭ್ಯಾಂ ಹಿಂಸತಿ ಹಿಂಸಿತಃ||

ವಿದ್ವಾಂಸನ ವಿರುದ್ಧವಾಗಿದ್ದುಕೊಂಡು ನಾನು ಅವನಿಂದ ದೂರವಿದ್ದೇನೆ ಎಂದು ತಿಳಿದು ನಿಶ್ಚಿಂತನಾಗಬಾರದು. ಏಕೆಂದರೆ ಬುದ್ಧಿವಂತನ ಬಾಹುಗಳು ಬಹಳ ಉದ್ದವಾಗಿರುತ್ತವೆ. ಆದುದರಿಂದ ಗಾಯಗೊಂಡ ಬುದ್ಧಿವಂತನು ತನ್ನ ವಿಶಾಲ ಬಾಹುಗಳಿಂದ ದೂರದಿಂದಲೂ ಶತ್ರುವನ್ನು ನಾಶಗೊಳಿಸಬಲ್ಲನು.

12138068a ನ ತತ್ತರೇದ್ಯಸ್ಯ ನ ಪಾರಮುತ್ತರೇನ್

ನ ತದ್ಧರೇದ್ಯತ್ ಪುನರಾಹರೇತ್ ಪರಃ|

12138068c ನ ತತ್ಖನೇದ್ಯಸ್ಯ ನ ಮೂಲಮುತ್ಖನೇನ್

ನ ತಂ ಹನ್ಯಾದ್ಯಸ್ಯ ಶಿರೋ ನ ಪಾತಯೇತ್||

ಯಾವ ನದಿಯಲ್ಲಿ ಇಳಿಯಲಿಕ್ಕಾಗುವುದಿಲ್ಲವೋ ಆ ನದಿಯನ್ನು ದಾಟುವ ಸಾಹಸವನ್ನು ಮಾಡಬಾರದು. ಶತ್ರುವು ಪುನಃ ಬಲವನ್ನುಪಯೋಗಿಸಿ ಹಿಂದೆ ಕಸಿದುಕೊಳ್ಳುವ ವಸ್ತುವನ್ನು ಅಪಹರಿಸಬಾರದು. ಸಮೂಲವಾಗಿ ಕಿತ್ತೊಗೆಯಲು ಸಾಧ್ಯವಿಲ್ಲದ ಮರವನ್ನು ಅಥವಾ ಶತ್ರುವನ್ನು ನಾಶಪಡಿಸಲು ಪ್ರಯತ್ನಿಸಬಾರದು. ಮತ್ತು ಯಾರ ಮಸ್ತಕವನ್ನು ಕತ್ತರಿಸಿ ನೆಲದಮೇಲೆ ಬೀಳಿಸಲು ಸಾಧ್ಯವಿಲ್ಲವೋ ಆ ವೀರನನ್ನು ಆಕ್ರಮಣಿಸಬಾರದು.

12138069a ಇತೀದಮುಕ್ತಂ ವೃಜಿನಾಭಿಸಂಹಿತಂ

ನ ಚೈತದೇವಂ ಪುರುಷಃ ಸಮಾಚರೇತ್|

12138069c ಪರಪ್ರಯುಕ್ತಂ ತು ಕಥಂ ನಿಶಾಮಯೇದ್

ಅತೋ ಮಯೋಕ್ತಂ ಭವತೋ ಹಿತಾರ್ಥಿನಾ||

ನಾನು ಉಪದೇಶಿಸಿದ ಈ ಪಾಪಪೂರ್ಣನಡತೆಯನ್ನು ಸಮರ್ಥ ರಾಜನು ಸಂಪತ್ತಿನ ಸಮಯದಲ್ಲಿ ಎಂದೂ ಆಚರಿಸಬಾರದು. ಆದರೆ ಶತ್ರುವು ಇದೇ ರೀತಿಯ ವರ್ತನೆಯಿಂದ ತನ್ನ ಮೇಲೆ ಆಪತ್ತನ್ನು ತಂದೊಡ್ಡಿದರೆ ಅದಕ್ಕೆ ಪ್ರತೀಕಾರವಾಗಿ ಅವನು ಇದೇ ಉಪಾಯಗಳನ್ನು ಏಕೆ ಬಳಸಬಾರದು? ಆದುದರಿಂದ ನಿನ್ನ ಹಿತವನ್ನು ಬಯಸಿ ನಾನು ನಿನಗೆ ಇದನ್ನು ಹೇಳಿದ್ದೇನೆ.”

12138070a ಯಥಾವದುಕ್ತಂ ವಚನಂ ಹಿತಂ ತದಾ

ನಿಶಮ್ಯ ವಿಪ್ರೇಣ ಸುವೀರರಾಷ್ಟ್ರಿಯಃ|

12138070c ತಥಾಕರೋದ್ವಾಕ್ಯಮದೀನಚೇತನಃ

ಶ್ರಿಯಂ ಚ ದೀಪ್ತಾಂ ಬುಭುಜೇ ಸಬಾಂಧವಃ||

ಹೀಗೆ ಹೇಳಿದ ವಿಪ್ರನ ಹಿತ ಮಾತನ್ನು ಕೇಳಿ ಸುವೀರರಾಷ್ಟ್ರದ ರಾಜನು ಅದನ್ನು ಯಥೋಚಿತವಾಗಿ ಪಾಲಿಸಿದನು ಮತ್ತು ಅದರಿಂದ ಬಂಧು-ಬಾಂಧವರೊಡನೆ ಉಜ್ವಲ ರಾಜಲಕ್ಷ್ಮಿಯನ್ನು ಉಪಭೋಗಿಸಿದನು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಆಪದ್ಧರ್ಮಪರ್ವಣಿ ಕಣಿಕೋಪದೇಶೇ ಅಷ್ಟತ್ರಿಂಶಾತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವದಲ್ಲಿ  ಕಣಿಕೋಪದೇಶ ಎನ್ನುವ ನೂರಾಮೂವತ್ತೆಂಟನೇ ಅಧ್ಯಾಯವು.

[1] ಪ್ರಸಾಧಯೇತ್| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[2] ನಾನಾರ್ಥಿಕೋಽರ್ಥಸಂಬಂಧಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[3] ನಟಸ್ಯ ಭಕ್ತಿಮಿತ್ರಸ್ಯ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[4] ಶರವಚ್ಚ ಎಂಬ ಪಠಾಂತರವಿದೆ (ಗೀತಾ ಪ್ರೆಸ್).

[5] ಭಯಂ ಹ್ಯಶಂಕಿತಾಜ್ಜಾತಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[6] ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಶೂರಮಂಜಲಿಪಾತೇನ ಭೀರುಂ ಭೇದೇನ ಭೇದಯೇತ್| ಲುಬ್ಧಮರ್ಥಪ್ರದಾನೇನ ಸಮಂ ತುಲ್ಯೇನ ವಿಗ್ರಹಃ||

Comments are closed.