ಹರಿವಂಶ: ವಿಷ್ಣುಪರ್ವಃ
Contents
Toggle67
ಕಾಲಿಯದಮನಮ್
ಕೃಷ್ಣನಿಂದ ಕಾಲಿಯನಾಗನ ದಮನ, ಕಾಲಿಯನು ಸಮುದ್ರಕ್ಕೆ ಹೋಗಿ ಸೇರಿದುದು, ಗೋಪರು ಕೃಷ್ಣನ ಮಹತ್ವವನ್ನು ಅನುಭವಿಸಿದುದು (1-49).
19067001 ವೈಶಂಪಾಯನ ಉವಾಚ ।
19067001a ಸೋಽಪಸೃತ್ಯ ನದೀತೀರಂ ಬದ್ಧ್ವಾ ಪರಿಕರಂ ದೃಢಮ್ ।
19067001c ಆರೋಹಚ್ಚಪಲಃ ಕೃಷ್ಣಃ ಕದಂಬಶಿಖರಂ ಮುದಾ ।।
ವೈಶಂಪಾಯನನು ಹೇಳಿದನು: “ಚಪಲ ಕೃಷ್ಣನು ನದೀತೀರವನ್ನು ತಲುಪಿ ತನ್ನ ಸೊಂಟವನ್ನು ದೃಢವಾಗಿ ಕಟ್ಟಿಕೊಂಡು ಸಂತೋಷದಿಂದ ಕದಂಬವೃಕ್ಷದ ತುದಿಯನ್ನೇರಿದನು.
19067002a ಕೃಷ್ಣಃ ಕದಂಬಶಿಖರಾಲ್ಲಂಬಮಾನೋ ಘನಾಕೃತಿಃ ।
19067002c ಹ್ರದಮಧ್ಯೇಽಕರೋಚ್ಛಬ್ದಂ ನಿಪತನ್ನಂಬುಜೇಕ್ಷಣಃ ।।
ಮೇಘಸಮಾನ ಶ್ಯಾಮ ಶರೀರಿ ಕಮಲನಯನ ಕೃಷ್ಣನು ಕದಂಬದ ತುದಿಯಿಂದ ನೇತಾಡಿಕೊಂಡು ಜೋರಾಗಿ ಕೂಗುತ್ತಾ ಕುಂಡದ ಮಧ್ಯೆ ಧುಮುಕಿದನು.
19067003a ಕೃಷ್ಣೇನ ತತ್ರ ಪತತಾ ಕ್ಷುಭಿತೋ ಯಮುನಾಹ್ರದಃ ।
19067003c ಸಂಪ್ರಾಸಿಚ್ಯತ ವೇಗೇನ ಭಿದ್ಯಮಾನ ಇವಾಂಬುದಃ ।।
ಕೃಷ್ಣನು ಅಲ್ಲಿ ಹಾರಿಬೀಳಲು ಯಮುನೆಯ ಕುಂಡವು ಕ್ಷೋಭೆಗೊಂಡು ನೀರು ತುಂಬಿದ ಮೋಡವು ಸೀಳಿತೋ ಎನ್ನುವಂತೆ ಎಲ್ಲಕಡೆ ನೀರು ಸಿಡಿಯಿತು.
19067004a ತೇನ ಶಬ್ದೇನ ಸಂಕ್ಷುಬ್ಧಂ ಸರ್ಪಸ್ಯ ಭವನಂ ಮಹತ್ ।
19067004c ಉದತಿಷ್ಠಜ್ಜಲಾತ್ಸರ್ಪೋ ರೋಷಪರ್ಯಾಕುಲೇಕ್ಷಣಃ ।।
ಆ ಶಬ್ದದಿಂದ ಸರ್ಪನ ಮಹಾ ಭವನವು ಸಂಕ್ಷುಬ್ಧಗೊಂಡಿತು. ರೋಷದಿಂದ ಕಣ್ಣುಗಳನ್ನು ತಿರುಗಿಸುತ್ತಾ ಆ ಸರ್ಪನು ನೀರಿನಿಂದ ಮೇಲೆದ್ದನು.
19067005a ಸ ಚೋರಗಪತಿಃ ಕ್ರುದ್ಧೋ ಮೇಘರಾಶಿಸಮಪ್ರಭಃ ।
19067005c ತತೋ ರಕ್ತಾಂತನಯನಃ ಕಾಲಿಯಃ ಸಮದೃಶ್ಯತ ।।
ಕ್ರುದ್ಧನಾಗಿದ್ದ ಆ ಉರಗಪತಿಯ ಕಾಂತಿಯು ಮೇಘರಾಶಿಯ ಸಮನಾಗಿತ್ತು. ಕಣ್ಣಿನ ತುದಿಗಳು ರಕ್ತದಂತೆ ಕೆಂಪಾಗಿದ್ದ ಕಾಲಿಯನು ಕಾಣಿಸಿಕೊಂಡನು.
19067006a ಪಂಚಾಸ್ಯಃ ಪಾವಕೋಛ್ವಾಸಶ್ಚಲಜ್ಜಿಹ್ವೋಽನಲಾನನಃ ।
19067006c ಪೃಥುಭಿಃ ಪಂಚಭಿರ್ಘೋರೈಃ ಶಿರೋಭಿಃ ಪರಿವಾರಿತಃ ।।
ಐದು ಮುಖಗಳಿದ್ದ ಅವನ ಉಚ್ಛ್ವಾಸದಿಂದ ಬೆಂಕಿಯು ಹೊರಹೊಮ್ಮುತ್ತಿತ್ತು. ನಾಲಿಗೆಗಳು ವೇಗದಿಂದ ಚಲಿಸುತ್ತಿದ್ದವು ಮತ್ತು ಮುಖವು ಬೆಂಕಿಯಿಂದ ಉರಿಯುತ್ತಿತ್ತು. ಐದು ಘೋರ ಮತ್ತು ವಿಶಾಲ ಹೆಡೆಗಳಿಂದ ಸುತ್ತುವರೆಯಲ್ಪಟ್ಟಿದ್ದನು.
19067007a ಪೂರಯಿತ್ವಾ ಹ್ರದಂ ಸರ್ವಂ ಭೋಗೇನಾನಲವರ್ಚಸಾ ।
19067007c ಸ್ಫುರನ್ನಿವ ಚ ರೋಷೇಣ ಜ್ವಲನ್ನಿವ ಚ ತೇಜಸಾ ।।
ಅಗ್ನಿಯಂತೆ ಪ್ರಕಾಶಿಸುತ್ತಿದ್ದ ಆ ಸರ್ಪವು ಕುಂಡವೆಲ್ಲವನ್ನೂ ಆವರಿಸಿ, ತೇಜಸ್ಸಿನಿಂದ ಪ್ರಜ್ವಲಿಸುತ್ತಾ ರೋಷದಿಂದ ಕಂಪಿಸುತ್ತಿತ್ತು.
19067008a ಕ್ರೋಧೇನ ಜ್ವಲತಸ್ತಸ್ಯ ಜಲಂ ಶೃತಮಿವಾಭವತ್ ।
19067008c ಪ್ರತಿಸ್ರೋತಾಶ್ಚ ಭೀತೇವ ಜಗಾಮ ಯಮುನಾ ನದೀ ।।
ಅವನ ಕ್ರೋಧಾಗ್ನಿಯಿಂದ ನೀರು ಕುದಿಯುತ್ತಿದೆಯೋ ಎಂಬಂತಾಯಿತು. ಭಯದಿಂದ ಯಮುನಾನದಿಯು ಹಿಂದೆ ಹರಿಯತೊಡಗಿದಳು.
19067009a ತಸ್ಯ ಕ್ರೋಧಾಗ್ನಿಪೂರ್ಣೇಭ್ಯೋ ವಕ್ತ್ರೇಭ್ಯೋಽಭೂಚ್ಚ ಮಾರುತಃ।
19067009c ದೃಷ್ಟ್ವಾ ಕೃಷ್ಣಂ ಹ್ರದಗತಂ ಕ್ರೀಡಂತಂ ಶಿಶುಲೀಲಯಾ ।।
19067010a ಸಧೂಮಾಃ ಪನ್ನಗೇಂದ್ರಸ್ಯ ಮುಖಾನ್ನಿಶ್ಚೇರುರರ್ಚಿಷಃ ।
ಶಿಶುಲೀಲೆಯಿಂದ ಕುಂಡವನ್ನು ಪ್ರವೇಶಿಸಿ ಆಟವಾಡುತ್ತಿದ್ದ ಕೃಷ್ಣನನ್ನು ನೋಡಿ ಪನ್ನಗೇಂದ್ರನ ಕ್ರೋಧಾಗ್ನಿಪೂರ್ಣ ಮುಖಗಳಿಂದ ಉಚ್ಛಾಸವಾಯುವು ಪ್ರಕಟವಾಯಿತು. ಅವನ ಮುಖದಿಂದ ಹೊಗೆಯೊಂದಿಗೆ ಬೆಂಕಿಯ ಜ್ವಾಲೆಗಳು ಹೊರಬಿದ್ದವು.
19067010c ಸೃಜತಾ ತೇನ ರೋಷಾಗ್ನಿಂ ಸಮೀಪೇ ತೀರಜಾ ದ್ರುಮಾಃ ।।
19067011a ಕ್ಷಣೇನ ಭಸ್ಮಸಾನ್ನೀತಾ ಯುಗಾಂತಪ್ರತಿಮೇನ ವೈ ।
ತನ್ನ ಕ್ರೋಧಾಗ್ನಿಯನ್ನು ಪ್ರಕಟಗೊಳಿಸಿ ಆ ಯುಗಾಂತನಂತಿದ್ದ ಸರ್ಪನು ತೀರದ ಸಮೀಪದಲ್ಲಿ ಹುಟ್ಟಿದ್ದ ಮರಗಳನ್ನು ಕ್ಷಣದಲ್ಲಿಯೇ ಭಸ್ಮಗೊಳಿಸಿದನು.
19067011c ತಸ್ಯ ಪುತ್ರಾಶ್ಚ ದಾರಾಶ್ಚ ಭೃತ್ಯಾಶ್ಚಾನ್ಯೇ ಮಹೋರಗಾಃ ।।
19067012a ವಮಂತಃ ಪಾವಕಂ ಘೋರಂ ವಕ್ತ್ರೇಭ್ಯೋ ವಿಷಸಂಭವಮ್ ।
19067012c ಸಧೂಮಂ ಪನ್ನಗೇಂದ್ರಾಸ್ತೇ ನಿಪೇತುರಮಿತೌಜಸಃ ।।
ಅವನ ಪುತ್ರರು, ಪತ್ನಿಯರು ಮತ್ತು ಸೇವಕ ಅಮಿತೌಜಸ ಮಹೋರಗಗಳು ತಮ್ಮ ಬಾಯಿಗಳಿಂದ ವಿಷಸಂಭವ ಧೂಮಯುಕ್ತ ಘೋರ ಅಗ್ನಿಯನ್ನು ಕಾರುತ್ತಾ ಅವನ ಮೇಲೆ ಎರಗಿದವು.
19067013a ಪ್ರವೇಶಿತಶ್ಚ ತೈಃ ಸರ್ಪೈಃ ಸ ಕೃಷ್ಣೋ ಭೋಗಬಂಧನಮ್ ।
19067013c ನಿರ್ಯತ್ನಚರಣಾಕಾರಸ್ತಸ್ಥೌ ಗಿರಿರಿವಾಚಲಃ ।।
ಆ ಸರ್ಪಗಳು ಕೃಷ್ಣನನ್ನು ತಮ್ಮ ಶರೀರಗಳ ಬಂಧನದಲ್ಲಿ ಬಂಧಿಸಿಬಿಟ್ಟವು. ಅವನ ಕೈ-ಕಾಲುಗಳು ನಿಶ್ಚೇಷ್ಟವಾಗಿ ಅವನು ಪರ್ವತಂತೆ ಚಲನೆಯಿಲ್ಲದವನಾಗಿಬಿಟ್ಟನು.
19067014a ಅದಶಂದಶನೈಸ್ತೀಕ್ಷ್ಣೈರ್ವಿಷೋತ್ಪೀಡಜಲಾವಿಲೈಃ ।
19067014c ತೇ ಕೃಷ್ಣಂ ಸರ್ಪಪತಯೋ ನ ಮಮಾರ ಚ ವೀರ್ಯವಾನ್ ।।
ಆ ಸರ್ಪಪತಿಗಳು ತಮ್ಮ ವಿಷಪ್ರವಾಹ ಮಿಶ್ರಿತ ಜಲದಿಂದ ಮಲಿನಗೊಂಡ ತೀಕ್ಷ್ಣ ಹಲ್ಲುಗಳಿಂದ ಕೃಷ್ಣನನ್ನು ಕಡಿಯತೊಡಗಿದವು. ಆದರೆ ವೀರವಾನ್ ಕೃಷ್ಣನು ಸಾಯಲಿಲ್ಲ.
19067015a ಏತಸ್ಮಿನ್ನಂತರೇ ಭೀತಾ ಗೋಪಾಲಾಃ ಸರ್ವ ಏವ ತೇ ।
19067015c ಕ್ರಂದಮಾನಾ ವ್ರಜಂ ಜಗ್ಮುರ್ಬಾಷ್ಪಗದ್ಗದಯಾ ಗಿರಾ ।।
ಈ ಮಧ್ಯೆ ಸಮಸ್ತ ಗೋಪಾಲಕರು ಭಯಭೀತರಾಗಿ ವ್ರಜಕ್ಕೆ ಹೋಗಿ ಬಾಷ್ಪದದ್ಗದ ಧ್ವನಿಯಲ್ಲಿ ಕೂಗುತ್ತಾ ಹೀಗೆ ಹೇಳಿದರು:
19067016 ಗೋಪಾ ಊಚುಃ ।
19067016a ಏಷ ಮೋಹಂ ಗತಃ ಕೃಷ್ಣೋ ಮಗ್ನೋ ವೈ ಕಾಲಿಯೇ ಹ್ರದೇ।
19067016c ಭಕ್ಷ್ಯತೇ ಸರ್ಪರಾಜೇನ ತದಾಗಚ್ಛತ ಮಾ ಚಿರಮ್ ।।
ಗೋಪರು ಹೇಳಿದರು: “ಕೃಷ್ಣನು ಕಾಲಿಯಹ್ರದದಲ್ಲಿ ಮುಳುಗಿ ಮೂರ್ಛಿತನಾಗಿದ್ದಾನೆ. ಸರ್ಪರಾಜನು ಅವನನ್ನು ಭಕ್ಷಿಸುತ್ತಿದ್ದಾನೆ. ಆದುದರಿಂದ ಬೇಗ ಬನ್ನಿ.
19067017a ನಂದಗೋಪಾಯ ವೈ ಕ್ಷಿಪ್ರಂ ಸಬಲಾಯ ನಿವೇದ್ಯತಾಮ್ ।
19067017c ಏಷ ತೇ ಕೃಷ್ಯತೇ ಕೃಷ್ಣಃ ಸರ್ಪೇಣೇತಿ ಮಹಾಹ್ರದೇ ।।
“ಮಹಾಕುಂಡದಲ್ಲಿ ಸರ್ಪವು ಕೃಷ್ಣನನ್ನು ಎಳೆದೊಯ್ಯುತ್ತಿದೆ” ಎಂದು ಬೇಗನೆ ಹೋಗಿ ದಲಸಹಿತ ನಂದಗೋಪನಿಗೆ ತಿಳಿಸಿ.
19067018a ನಂದಗೋಪಸ್ತು ತಚ್ಛ್ರುತ್ವಾ ವಜ್ರಪಾತೋಪಮಂ ವಚಃ ।
19067018c ಆರ್ತಃ ಸ್ಖಲಿತವಿಕ್ರಾಂತಸ್ತಂ ಜಗಾಮ ಹ್ರದೋತ್ತಮಮ್ ।।
ವಜ್ರಪಾತಕ್ಕೆ ಸಮಾನ ಆ ಮಾತನ್ನು ಕೇಳಿ ನಂದಗೋಪನಾದರೋ ಆರ್ತನಾಗಿ ತನ್ನ ಧೈರ್ಯವನ್ನು ಕಳೆದುಕೊಂಡು ಆ ಉತ್ತಮ ಕುಂಡದ ಬಳಿ ಹೋದನು.
19067019a ಸಬಾಲಯುವತೀವೃದ್ಧಃ ಸ ಚ ಸಂಕರ್ಷಣೋ ಯುವಾ ।
19067019c ಆಕ್ರೀಡಂ ಪನ್ನಗೇಂದ್ರಸ್ಯ ಜಲಸ್ಥಂ ಸಮುಪಾಗಮತ್ ।।
ಬಾಲಕ, ಯುವತೀ, ವೃದ್ಧರೊಂದಿಗೆ ಯುವಕ ಸಂಕರ್ಷಣನೂ ಸೇರಿ ಜಲಸ್ಥನಾಗಿದ್ದ ಪನ್ನಗೇಂದ್ರನ ಆ ಕ್ರೀಡಾಸ್ಥಳಕ್ಕೆ ಬಂದರು.
19067020a ನಂದಗೋಪಮುಖಾ ಗೋಪಾಸ್ತೇ ಸರ್ವೇ ಸಾಶ್ರುಲೋಚನಾಃ।
19067020c ಹಾಹಾಕಾರಂ ಪ್ರಕುರ್ವಂತಸ್ತಸ್ಥುಸ್ತೀರೇ ಹ್ರದಸ್ಯ ವೈ ।।
ನಂದಗೋಪನೇ ಮೊದಲಾದ ಸರ್ವ ಗೋಪರೂ ಕಣ್ಣೀರುಸುರಿಸುತ್ತಾ ಹಾಹಾಕಾರಗೈಯುತ್ತಾ ಕುಂಡದ ತೀರದಲ್ಲಿ ನಿಂತುಕೊಂಡರು.
19067021a ವ್ರೀಡಿತಾ ವಿಸ್ಮಿತಾಶ್ಚೈವ ಶೋಕಾರ್ತಾಶ್ಚ ಪುನಃ ಪುನಃ ।
19067021c ಕೇಚಿತ್ತು ಪುತ್ರ ಹಾ ಹೇತಿ ಹಾ ಧಿಗಿತ್ಯಪರೇ ಪುನಃ ।।
ಅವರು ಲಜ್ಜಿತರೂ, ವಿಸ್ಮಿತರೂ ಪುನಃ ಪುನಃ ಶೋಕಾರ್ತರೂ ಆಗುತ್ತಿದ್ದರು. ಕೆಲವರು “ಹಾ ಪುತ್ರ! ಹಾ ಪುತ್ರ!” ಎಂದು ಕೂಗಿಕೊಳ್ಳುತ್ತಿದ್ದರೆ ಇತರರು ಪುನಃ ಪುನಃ ಧಿಕ್ಕರಿಸುತ್ತಿದ್ದರು.
19067022a ಅಪರೇ ಹಾ ಹತಾಃ ಸ್ಮೇತಿ ರುರುದುರ್ಭೃಶದುಃಖಿತಾಃ ।
19067022c ಸ್ತ್ರಿಯಶ್ಚೈವ ಯಶೋದಾಂ ತಾಂ ಹಾ ಹತಾಸೀತಿ ಚುಕ್ರುಶುಃ ।।
19067023a ಯಾ ಪಶ್ಯಸಿ ಪ್ರಿಯಂ ಪುತ್ರಂ ಸರ್ಪರಾಜವಶಂ ಗತಮ್ ।
19067023c ಸ್ಪಂದಿತಂ ಸರ್ಪಭೋಗೇನ ಕೃಷ್ಯಮಾಣಂ ಯಥಾ ಮೃತಮ್ ।।
ಇತರರು “ ಅಯ್ಯೋ! ನಾವು ಹತರಾದೆವು!” ಎಂದು ತುಂಬಾ ದುಃಖಿತರಾಗಿ ರೋದಿಸಿದರು. ಸ್ತ್ರೀಯರು ಯಶೋದೆಗೆ “ಅಯ್ಯೋ! ಸರ್ಪರಾಜನ ವಶನಾಗಿರುವ ಪ್ರಿಯ ಪುತ್ರನನ್ನು ನೋಡುತ್ತಿರುವ ನೀನು ಹತಳಾದೆ! ಸರ್ಪಶರೀರಗಳಿಂದ ಬಂಧಿತನಾದ ಅವನನ್ನು ಸತ್ತವನಂತೆ ಎಳೆದುಕೊಂಡು ಹೋಗುತ್ತಿವೆ!” ಎಂದು ಕೂಗಿ ಹೇಳುತ್ತಿದ್ದರು.
19067024a ಅಶ್ಮಸಾರಮಯಂ ನೂನಂ ಹೃದಯಂ ತೇ ವಿಲಕ್ಷ್ಯತೇ ।
19067024c ಪುತ್ರಂ ಕಥಮಿಮಂ ದೃಷ್ಟ್ವಾ ಯಶೋದೇ ನಾವದೀರ್ಯಸೇ ।।
“ಯಶೋದೇ! ನಿನ್ನ ಹೃದಯವು ನಿಶ್ಚಯವಾಗಿಯೂ ಲೋಹಮಯವೆಂದು ತೋರುತ್ತದೆ. ಪುತ್ರನನ್ನು ಈ ಅವಸ್ಥೆಯಲ್ಲಿ ನೋಡಿಯೂ ನಿನ್ನ ಹೃದಯವು ಹೇಗೆ ಒಡೆದುಹೋಗುತ್ತಿಲ್ಲ?
19067025a ದುಃಖಿತಂ ಬತ ಪಶ್ಯಾಮೋ ನಂದಗೋಪಂ ಹ್ರದಾಂತಿಕೇ ।
19067025c ನ್ಯಸ್ಯ ಪುತ್ರಮುಖೇ ದೃಷ್ಟಿಂ ನಿಶ್ಚೇತನಮವಸ್ಥಿತಮ್ ।।
ಸರೋವರದ ಬಳಿಯಲ್ಲಿ ಪುತ್ರನ ಮುಖದಮೇಲೆ ತನ್ನ ದೃಷ್ಟಿಯನ್ನಿತ್ತು ದುಃಖಿತನಾಗಿ ನಿಶ್ಚೇತಸನಾಗಿ ನಂದಗೋಪನು ನಿಂತಿರುವುದನ್ನು ನೋಡುತ್ತಿದ್ದೇವೆ.
19067026a ಯಶೋದಾಮನುಗಚ್ಛಂತ್ಯಃ ಸರ್ಪಾವಾಸಮಿಮಂ ಹ್ರದಮ್ ।
19067026c ಪ್ರವಿಶಾಮೋ ನ ಯಾಸ್ಯಾಮೋ ವಿನಾ ದಾಮೋದರಂ ವ್ರಜಮ್ ।।
ನಾವೆಲ್ಲರೂ ಯಶೋದೆಯನ್ನು ಅನುಸರಿಸಿ ಸರ್ಪಗಳ ಮನೆಯಾಗಿರುವ ಈ ಕುಂಡವನ್ನು ಪ್ರವೇಶಿಸುತ್ತೇವೆ. ದಾಮೋದರನ ವಿನಃ ವ್ರಜಕ್ಕೆ ತೆರಳುವುದಿಲ್ಲ.
19067027a ದಿವಸಃ ಕೋ ವಿನಾ ಸೂರ್ಯಂ ವಿನಾ ಚಂದ್ರೇಣ ಕಾ ನಿಶಾ ।
19067027c ವಿನಾ ವೃಷೇಣ ಕಾ ಗಾವೋ ವಿನಾ ಕೃಷ್ಣೇನ ಕೋ ವ್ರಜಃ ।।
19067028a ವಿನಾ ಕೃಷ್ಣಂ ನ ಯಾಸ್ಯಾಮೋ ವಿವತ್ಸಾ ಇವ ಧೇನವಃ ।
ಸೂರ್ಯನಿಲ್ಲದೇ ಹಗಲು ಹೇಗೆ? ಚಂದ್ರನಿಲ್ಲದೇ ರಾತ್ರಿಯು ಹೇಗೆ? ಹೋರಿಗಳಿಲ್ಲದೇ ಗೋವುಗಳು ಹೇಗೆ? ಕೃಷ್ಣನಿಲ್ಲದೇ ವ್ರಜವು ಹೇಗೆ? ಕರುಗಳಿಲ್ಲದೇ ಹಸುಗಳು ಹೇಗೋ ಹಾಗೆ ಕೃಷ್ಣನಿಲ್ಲದೇ ನಾವಿರಲಾರೆವು!”
19067028c ತಾಸಾಂ ವಿಲಪಿತಂ ಶ್ರುತ್ವಾ ತೇಷಾಂ ಚ ವ್ರಜವಾಸಿನಾಮ್ ।
19067028e ವಿಲಾಪಂ ನಂದಗೋಪಸ್ಯ ಯಶೋದಾರುದಿತಂ ತಥಾ ।।
19067029a ಏಕಭಾವಶರೀರಜ್ಞ ಏಕದೇಹೋ ದ್ವಿಧಾ ಕೃತಃ ।
19067029c ಸಂಕರ್ಷಣಸ್ತು ಸಂಕ್ರುದ್ಧೋ ಬಭಾಷೇ ಕೃಷ್ಣಮವ್ಯಯಮ್ ।।
ವ್ರಜವಾಸಿಗಳ ವಿಲಾಪ, ನಂದಗೋಪನ ವಿಲಾಪ ಮತ್ತು ಯಶೋದೆಯ ರೋದನವನ್ನು ಕೇಳಿ, ಕೃಷ್ಣನೊಂದಿಗಿದ್ದ ಏಕಶರೀರ ಮತ್ತು ಏಕಭಾವಗಳನ್ನು ತಿಳಿದುಕೊಂಡಿದ್ದ, ಒಂದೇ ಶರೀರದ ಎರಡು ಭಾಗಗಳಲ್ಲಿ ಒಂದಾಗಿದ್ದ ಸಂಕರ್ಷಣನಾದರೋ ಸಂಕೃದ್ಧನಾಗಿ ಅವ್ಯಯ ಕೃಷ್ಣನಿಗೆ ಹೇಳಿದನು:
19067030a ಕೃಷ್ಣ ಕೃಷ್ಣ ಮಹಾಬಾಹೋ ಗೋಪಾನಾಂ ನಂದವರ್ಧನ ।
19067030c ದಮ್ಯತಾಮೇಷ ವೈ ಕ್ಷಿಪ್ರಂ ಸರ್ಪರಾಜೋ ವಿಷಾಯುಧಃ ।।
“ಕೃಷ್ಣ! ಕೃಷ್ಣ! ಮಹಾಬಾಹೋ! ಗೋಪರ ನಂದವರ್ಧನ! ಬೇಗನೇ ವಿಷಾಯುಧ ಸರ್ಪರಾಜನನ್ನು ದಮನಗೊಳಿಸು.
19067031a ಇಮೇ ನೋ ಬಾಂಧವಾಸ್ತಾತ ತ್ವಾಂ ಮತ್ವಾ ಮಾನುಷಂ ವಿಭೋ ।
19067031c ಪರಿದೇವಂತಿ ಕರುಣಂ ಸರ್ವೇ ಮಾನುಷಬುದ್ಧಯಃ ।।
ವಿಭೋ! ಅಯ್ಯಾ! ನಮ್ಮ ಈ ಬಾಂಧವರು ಎಲ್ಲರೂ ನಿನ್ನನ್ನು ಮನುಷ್ಯನೆಂದೇ ತಿಳಿದು ತಮ್ಮ ಮನುಷ್ಯಬುದ್ಧಿಯಿಂದ ಕರುಣಾಪೂರ್ವಕವಾಗಿ ರೋದಿಸುತ್ತಿದ್ದಾರೆ.”
19067032a ತಚ್ಛ್ರುತ್ವಾ ರೌಹಿಣೇಯಸ್ಯ ವಾಕ್ಯಂ ಸಂಜ್ಞಾಸಮೀರಿತಮ್ ।
19067032c ವಿಕ್ರಮ್ಯಾಸ್ಫೋಟಯದ್ಬಾಹೂ ಭಿತ್ತ್ವಾ ತನ್ನಾಗಬಂಧನಮ್ ।।
ರೌಹಿಣೇಯನ ಆ ಸಾಂಕೇತಿಕ ಮಾತನ್ನು ಕೇಳಿ ಕೃಷ್ಣನು ಆ ನಾಗಬಂಧನವನ್ನು ಹರಿದು ವಿಕ್ರಮದಿಂದ ತನ್ನ ತೋಳುಗಳನ್ನು ತಟ್ಟಿದನು.
19067033a ತಸ್ಯ ಪದ್ಭ್ಯಾಮಥಾಕ್ರಮ್ಯ ಭೋಗರಾಶಿಂ ಜಲೋತ್ಥಿತಮ್ ।
19067033c ಶಿರಸ್ತು ಕೃಷ್ಣೋ ಜಗ್ರಾಹ ಸ್ವಹಸ್ತೇನಾವನಾಮ್ಯ ಚ ।।
ಅನಂತರ ನೀರಿನ ಮೇಲೆದ್ದಿದ್ದ ಸರ್ಪದ ಆ ಮಹಾಶರೀರವನ್ನು ತನ್ನ ಎರಡೂ ಕಾಲುಗಳಿಂದ ಒತ್ತಿ ಕೃಷ್ಣನು ತನ್ನ ಕೈಗಳಿಂದ ಅವನ ಶಿರವನ್ನು ಬಗ್ಗಿಸಿ ಹಿಡಿದುಕೊಂಡನು.
19067034a ತಸ್ಯಾರುರೋಹ ಸಹಸಾ ಮಧ್ಯಮಂ ತನ್ಮಹಚ್ಛಿರಃ ।
19067034c ಸೋಽಸ್ಯ ಮೂರ್ಧ್ನಿ ಸ್ಥಿತಃ ಕೃಷ್ಣೋ ನನರ್ತ ರುಚಿರಾಂಗದಃ ।।
ಕೂಡಲೇ ಆ ರುಚಿರಾಂಗದ[1]ನು ಸರ್ಪದ ಆ ಮಹಾಶಿರವನ್ನೇರಿ ಅವನ ನೆತ್ತಿಯ ಮಧ್ಯದಲ್ಲಿ ನಿಂತು ನರ್ತಿಸಿದನು.
19067035a ಮೃದ್ಯಮಾನಃ ಸ ಕೃಷ್ಣೇನ ಶಾಂತಮೂರ್ಧಾ ಭುಜಂಗಮಃ ।
19067035c ಆಸ್ಯೈಃ ಸರುಧಿರೋದ್ಗಾರೈಃ ಕಾತರೋ ವಾಕ್ಯಮಬ್ರವೀತ್ ।।
ಕೃಷ್ಣನಿಂದ ಹಾಗೆ ತುಳಿಯಲ್ಪಟ್ಟ ಭುಜಂಗಮನ ನೆತ್ತಿಯ ಬಿಸಿಯು ಶಾಂತವಾಯಿತು. ಅವನು ಬಾಯಿಗಳಿಂದ ರಕ್ತಕಾರುತ್ತಾ ಕಾತರನಾಗಿ ಹೇಳಿದನು:
19067036a ಅವಿಜ್ಞಾನನ್ಮಯಾ ಕೃಷ್ಣ ರೋಷೋಽಯಂ ಸಂಪ್ರದರ್ಶಿತಃ ।
19067036c ದಮಿತೋಽಹಂ ಹತವಿಷೋ ವಶಗಸ್ತೇ ವರಾನನ ।।
“ಕೃಷ್ಣ! ವರಾನನ! ಅವಿಜ್ಞಾನದಿಂದ ನಾನು ಈ ರೋಷವನ್ನು ಪ್ರದರ್ಶಿಸಿದೆ. ನೀನು ನನ್ನನ್ನು ದಮನಗೊಳಿಸಿದ್ದೀಯೆ. ನಿನ್ನ ವಶದಲ್ಲಿರುವ ನಾನು ವಿಷವನ್ನು ಕಳೆದುಕೊಂಡಿದ್ದೇನೆ.
19067037a ತದಾಜ್ಞಾಪಯ ಕಿಂ ಕುರ್ಯಾಂ ಸದಾ ಸಾಪತ್ಯಬಾಂಧವಃ ।
19067037c ಕಸ್ಯ ವಾ ವಶತಾಂ ಯಾಮಿ ಜೀವಿತಂ ಮೇ ಪ್ರದೀಯತಾಂ ।।
ಆದುದರಿಂದ ಆಜ್ಞಾಪಿಸು! ಪುತ್ರಬಾಂಧವರೊಂದಿಗೆ ನಾನು ಸದಾ ಏನನ್ನು ಮಾಡಲಿ? ಅಥವಾ ಯಾರ ಅಧೀನನಾಗಿರಲಿ? ನನಗೆ ಜೀವದಾನ ಮಾಡು!”
19067038a ಪಂಚಮೂರ್ಧಾನತಂ ದೃಷ್ಟ್ವಾ ಸರ್ಪಂ ಸರ್ಪಾರಿಕೇತನಃ । 19067038c ಅಕೃದ್ಧ ಏವ ಭಗವಾನ್ಪ್ರತ್ಯುವಾಚೋರಗೇಶ್ವರಮ್ ।।
ಐದೂ ಹೆಡೆಗಳನ್ನು ಬಗ್ಗಿಸಿದ್ದ ಸರ್ಪವನ್ನು ನೋಡಿ ಸರ್ಪಾರಿಕೇತನ[2] ಭಗವಾನನು ಕ್ರೋಧವಿಲ್ಲದೇ ಆ ಉರಗೇಶ್ವರನಿಗೆ ಹೇಳಿದನು:
19067039a ತವಾಸ್ಮಿನ್ಯಮುನಾತೋಯೇ ನೈವ ಸ್ಥಾನಂ ದದಾಮ್ಯಹಮ್ ।
19067039c ಗಚ್ಛಾರ್ಣವಜಲಂ ಸರ್ಪ ಸಭಾರ್ಯಃ ಸಹಬಾಂಧವಃ ।।
“ಸರ್ಪ! ಈ ಯಮುನೆಯ ನೀರಿನಲ್ಲಿ ನಿನಗೆ ಸ್ಥಾನವನ್ನು ನಾನು ಕೊಡುವುದಿಲ್ಲ. ಭಾರ್ಯೆಯರೊಂದಿಗೆ ಮತ್ತು ಬಾಂಧವರೊಂದಿಗೆ ಸಮುದ್ರಜಲಕ್ಕೆ ಹೋಗು.
19067040a ಯಶ್ಚೇಹ ಭೂಯೋ ದೃಶ್ಯೇತ ಸ್ಥಾನೇ ವಾ ಯದಿ ವಾ ಜಲೇ ।
19067040c ತವ ಭೃತ್ಯಸ್ತನೂಜೋ ವಾ ಕ್ಷಿಪ್ರಂ ವಧ್ಯಃ ಸ ಮೇ ಭವೇತ್ ।।
ಇನ್ನು ಪುನಃ ಈ ಸ್ಥಾನದಲ್ಲಿ ಅಥವಾ ಈ ನೀರಿನಲ್ಲಿ ಸರ್ಪವೇನಾದರೂ ಕಂಡರೆ ನಿನ್ನ ಭೃತ್ಯನಾಗಿರಲಿ ಅಥವಾ ಪುತ್ರನಾಗಿರಲಿ ನಾನು ಅದನ್ನು ವಧಿಸುತ್ತೇನೆ.
19067041a ಶಿವಂ ಚಾಸ್ಯ ಜಲಸ್ಯಾಸ್ತು ತ್ವಂ ಚ ಗಚ್ಛ ಮಹಾರ್ಣವಮ್ ।
19067041c ಸ್ಥಾನೇ ತ್ವಿಹ ಭವೇದ್ದೋಷಸ್ತವಾಂತಕರಣೋ ಮಹಾನ್ ।।
ಈ ಮಂಗಲ ಜಲದಿಂದ ನೀನು ಮಹಾಸಮುದ್ರಕ್ಕೆ ಹೋಗು. ಇಲ್ಲಿ ನಿನ್ನ ಅಂತ್ಯವಾಗುವ ಮಹಾ ದೋಷವುಂಟಾಗುತ್ತದೆ.
19067042a ಮತ್ಪದಾನಿ ಚ ತೇ ಸರ್ಪ ದೃಷ್ಟ್ವಾ ಮೂರ್ಧಸು ಸಾಗರೇ ।
19067042c ಗರುಡಃ ಪನ್ನಗರಿಪುಸ್ತ್ವಯಿ ನ ಪ್ರಹರಿಷ್ಯತಿ ।।
ಸರ್ಪ! ನಿನ್ನ ನೆತ್ತಿಯ ಮೇಲೆ ನನ್ನ ಹೆಜ್ಜೆಗಳ ಗುರುತನ್ನು ನೋಡಿ ಪನ್ನಗರಿಪು ಗರುಡನು ನಿನ್ನ ಮೇಲೆ ಪ್ರಹಾರಮಾಡುವುದಿಲ್ಲ.
19067043a ಗೃಹ್ಯ ಮೂರ್ಧ್ನಾ ತು ಚರಣೌ ಕೃಷ್ಣಸ್ಯೋರಗಪುಂಗವಃ ।
19067043c ಪಶ್ಯತಾಮೇವ ಗೋಪಾನಾಂ ಜಗಾಮಾದರ್ಶನಂ ಹ್ರದಾತ್ ।।
ಆ ಉರಗಪುಂಗವನು ತನ್ನ ನೆತ್ತಿಯನ್ನು ಕೃಷ್ಣನ ಚರಣಗಳಲ್ಲಿತ್ತು ಗೋಪರು ನೋಡುತ್ತಿದ್ದಂತೆಯೇ ಕುಂಡದಿಂದ ಅದೃಶ್ಯನಾದನು.
19067044a ನಿರ್ಜಿತೇ ತು ಗತೇ ಸರ್ಪೇ ಕೃಷ್ಣಮುತ್ತೀರ್ಯ ಧಿಷ್ಠಿತಮ್ ।
19067044c ವಿಸ್ಮಿತಾಸ್ತುಷ್ಟುವುರ್ಗೋಪಾಶ್ಚಕ್ರುಶ್ಚೈವ ಪ್ರದಕ್ಷಿಣಮ್ ।।
ಆ ಸರ್ಪವು ಹೊರಟುಹೋಗಲು ಕೃಷ್ಣನು ಮೇಲೆದ್ದು ನಿಂತಿದ್ದ ಕೃಷ್ಣನನ್ನು ನೋಡಿ ವಿಸ್ಮಿತರಾದ ಗೋಪರು ಅವನ ಪ್ರದಕ್ಷಿಣೆಗೈಯುತ್ತಾ ಸ್ತುತಿಸತೊಡಗಿದರು.
19067045a ಊಚುಃ ಸರ್ವೇ ಚ ಸಂಪ್ರೀತಾ ನಂದಗೋಪಂ ವನೇಚರಾಃ ।
19067045a ಧನ್ಯೋಽಸ್ಯನುಗೃಹೀತೋಽಸಿ ಯಸ್ಯ ತೇ ಪುತ್ರ ಈದೃಶಃ ।।
ಆ ಸರ್ವ ವನಚರರೂ ಸಂಪ್ರೀತರಾಗಿ ನಂದಗೋಪನಿಗೆ ಹೇಳಿದರು: “ಇಂತಹ ಪುತ್ರನನ್ನು ಪಡೆದು ನೀನು ಧನ್ಯನಾದೆ! ಅನುಗೃಹೀತನಾದೆ!
19067046a ಅದ್ಯಪ್ರಭೃತಿ ಗೋಪಾನಾಂ ಗವಾಂ ಗೋಷ್ಠಸ್ಯ ಚಾನಘ ।
19067046c ಆಪತ್ಸು ಶರಣಂ ಕೃಷ್ಣಃ ಪ್ರಭುಶ್ಚಾಯತಲೋಚನಃ ।।
ಅನಘ! ಇಂದಿನಿಂದ ಗೋಪರ, ಗೋವುಗಳ ಮತ್ತು ಗೋವ್ರಜದ ಎಲ್ಲ ಆಪತ್ತುಗಳಿಗೂ ಪ್ರಭು, ಆಯತಲೋಚನ ಕೃಷ್ಣನೇ ಶರಣದಾತನು.
19067047a ಜಾತಾ ಶಿವಜಲಾ ಸರ್ವಾ ಯಮುನಾ ಮುನಿಸೇವಿತಾ ।
19067047c ತಿರೇ ಚಾಸ್ಯಾಃ ಸುಖಂ ಗಾವೋ ವಿಚರಿಷ್ಯಂತಿ ನಃ ಸದಾ ।।
ಮುನಿಸೇವಿತೆ ಯಮುನೆಯ ಸರ್ವ ಜಲವೂ ಮಂಗಳಮಯವಾಯಿತು. ಇನ್ನು ಗೋವುಗಳು ಇವಳ ತೀರದಲ್ಲಿ ಸದಾ ಸುಖವಾಗಿ ಸುತ್ತಾಡುತ್ತವೆ.
19067048a ವ್ಯಕ್ತಮೇವ ವಯಂ ಗೋಪಾ ವನೇ ಯತ್ಕೃಷ್ಣಮೀದೃಶಮ್ ।
19067048c ಮಹದ್ಭೂತಂ ನ ಜಾನೀಮಶ್ಛನ್ನಮಗ್ನಿಮಿವ ವ್ರಜೇ ।।
ಕೃಷ್ಣನಂಥಹ ಮಹದ್ಭೂತವು ಅಡಗಿಕೊಂಡ ಅಗ್ನಿಯಂತೆ ವ್ರಜದಲ್ಲಿದ್ದರೂ ಅವನನ್ನು ಅರಿತುಕೊಂಡಿಲ್ಲ ಅಂದರೆ ನಾವು ಗೋಪರು ವನಚರರೆಂದೇ ವ್ಯಕ್ತವಾಗುತ್ತಿದೆ.”
19067049a ಏವಂ ತೇ ವಿಸ್ಮಿತಾಃ ಸರ್ವೇ ಸ್ತುವಂತಃ ಕೃಷ್ಣಮವ್ಯಯಮ್ ।
19067049c ಜಗ್ಮುರ್ಗೋಪಗಣಾ ಘೋಷಂ ದೇವಾಶ್ಚೈತ್ರರಥಂ ಯಥಾ ।।
ಹೀಗೆ ವಿಸ್ಮಿತರಾದ ಸರ್ವ ಗೋಪಗಣಗಳೂ ಅವ್ಯಯ ಕೃಷ್ಣನನ್ನು ಸ್ತುತಿಸುತ್ತಾ ದೇವತೆಗಳು ಚೈತ್ರರಥವನ್ನು ಹೇಗೋ ಹಾಗೆ ಗೋವ್ರಜವನ್ನು ತಲುಪಿದರು.”
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಶಿಶುಚರ್ಯಾಯಾಂ ಕಾಲಿಯದಮನೇ ಸಪ್ತಷಷ್ಟಿತಮೋಽಧ್ಯಾಯಃ ।।
ಇದು ಶ್ರೀಮಹಾಭಾರತದ ಖಿಲಭಾಗ ಹರಿವಂಶದಲ್ಲಿ ವಿಷ್ಣುಪರ್ವದಲ್ಲಿ ಶಿಶುಚರ್ಯೆಯಲ್ಲಿ ಕಾಲಿಯದಮನ ಎಂಬ ಅರವತ್ತೇಳನೇ ಅಧ್ಯಾಯವು.
[1] ಸುಂದರ ತೋಳ್ಬಂದಿಗಳನ್ನು ಕಟ್ಟಿಕೊಂಡಿದ್ದವನು.
[2] ಸರ್ಪಾರಿ=ಸರ್ಪಗಳ ಶತ್ರು=ಗರುಡ, ಕೇತನ=ಧ್ವಜ. ಸರ್ಪಾರಿಕೇತನ=ಗರುಡಧ್ವಜ.