Harivamsha: Chapter 64

ಹರಿವಂಶ: ವಿಷ್ಣುಪರ್ವಃ

64

ವೃಂದಾವನಪ್ರವೇಶಃ

ತೋಳಗಳ ಉತ್ಪಾತದಿಂದ ಪೀಡಿತರಾದ ವ್ರಜವಾಸಿಗಳು ಆ ಸ್ಥಾನವನ್ನು ತೊರೆದು ವೃಂದಾವನಕ್ಕೆ ಹೋದುದು (1-35).

19064001  ವೈಶಂಪಾಯನ ಉವಾಚ । 

19064001a ಏವಂ ವೃಕಾಂಶ್ಚ ತಾಂದೃಷ್ಟ್ವಾ ವರ್ಧಮಾನಾಂದುರಾಸದಾನ್ । 

19064001c ಸಸ್ತ್ರೀಪುಮಾನ್ಸ ಘೋಷೋ ವೈ ಸಮಸ್ತೋಽಮಂತ್ರಯತ್ತದಾ ।।   

ವೈಶಂಪಾಯನನು ಹೇಳಿದನು: "ಹೀಗೆ ಆ ದುರಾಸದ ತೋಳಗಳ ಸಂಖ್ಯೆಯು ವೃದ್ಧಿಯಾಗುತ್ತಿರುವುದನ್ನು ಕಂಡ ವ್ರಜದ ಸ್ತ್ರೀಪುರುಷರೆಲ್ಲರೂ ಒಟ್ಟಾಗಿ ಸಮಾಲೋಚಿಸಿದರು.

19064002a ಸ್ಥಾನೇ ನೇಹ ನ ನಃ ಕಾರ್ಯಂ ವ್ರಜಾಮೋಽನ್ಯನ್ಮಹದ್ವನಮ್ । 

19064002c ಯಚ್ಛಿವಂ ಚ ಸುಖೋಷ್ಯಂ ಚ ಗವಾಂ ಚೈವ ಸುಖಾವಹಮ್ ।।   

"ಇನ್ನು ಇಲ್ಲಿ ನಮಗೆ ಯಾವ ಕಾರ್ಯವೂ ಇಲ್ಲ. ಬೇರೆ ಯಾವುದಾದರೂ ಮಂಗಳಕರವಾದ, ಸುಖವನ್ನು ನೀಡುವ ಮತ್ತು ಗೋವುಗಳಿಗೆ ಸುಖದಾಯಕವಾದ ಮಹಾವನಕ್ಕೆ ಹೋಗೋಣ!

19064003a ಅದ್ಯೈವ ಕಿಂ ಚಿರೇಣ ಸ್ಮ ವ್ರಜಾಮಃ ಸಹ ಗೋಧನೈಃ । 

19064003c ಯಾವದ್ವೃಕೈರ್ವಧಂ ಘೋರಂ ನ ನಃ ಸರ್ವೋ ವ್ರಜೋ ವ್ರಜೇತ್ ।।   

ತಡಮಾಡುವುದೇಕೆ? ಇಂದೇ ನಾವು ನಮ್ಮ ಗೋಧನಗಳೊಂದಿಗೆ ಹೊರಡೋಣ. ಘೋರ ತೋಳಗಳು ಎಲ್ಲವನ್ನೂ ನಾಶಗೊಳಿಸುವ ಮೊದಲೇ ನಾವು ವ್ರಜದಿಂದ ಹೊರಡಬೇಕು.

19064004a ಏಷಾಂ ಧೂಮ್ರಾರುಣಾಂಗಾನಾಂ ದಂಷ್ಟ್ರಿಣಾಂ ನಖಕರ್ಷಿಣಾಮ್ । 

19064004c ವೃಕಾಣಾಂ ಕೃಷ್ಣವಕ್ತ್ರಾಣಾಂ ಬಿಭೀಮೋ ನಿಶಿ ಗರ್ಜತಾಮ್ ।।   

ಬೂದು ಮತ್ತು ಕೆಂಪುಬಣ್ಣದ, ಕೋರೆದಾಡೆಗಳುಳ್ಳ, ಚೂಪಾದ ಉಗುರುಗಳುಳ್ಳ, ಮತ್ತು ರಾತ್ರಿಯಲ್ಲಿ ಗರ್ಜಿಸುವ ಈ ಕಪ್ಪುಮುಖಗಳ ತೊಳಗಳಿಂದ ನಾವು ಭಯಭೀತರಾಗಿದ್ದೇವೆ.

19064005a ಮಮ ಪುತ್ರೋ ಮಮ ಭ್ರಾತಾ ಮಮ ವತ್ಸೋಽಥ ಗೌರ್ಮಮ । 

19064005c ವೃಕೈರ್ವ್ಯಾಪಾದಿತಾ ಹ್ಯೇವಂ ಕ್ರಂದಂತಿ ಸ್ಮ ಗೃಹೇ ಗೃಹೇ ।।   

ಮನೆ-ಮನೆಗಳಲ್ಲಿ "ಅಯ್ಯೋ! ಈ ತೋಳಗಳು ನನ್ನ ಮಗ ನನ್ನ ಅಣ್ಣ ನನ್ನ ಕರು ಮತ್ತು ನನ್ನ ಹಸುಗಳನ್ನು ಕೊಂದುಹಾಕಿವೆ" ಎಂಬ ಕೂಗು ಕೇಳಿಬರುತ್ತಿದೆ."

19064006a ತಾಸಾಂ ರುದಿತಶಬ್ದೇನ ಗವಾಂ ಹಂಭಾರವೇಣ ಚ । 

19064006c ವ್ರಜಸ್ಯೋತ್ಥಾಪನಂ ಚಕ್ರುರ್ಘೋಷವೃದ್ಧಾಃ ಸಮಾಗತಾಃ ।।   

ಅವರ ರೋದನ ಶಬ್ದದಿಂದ ಮತ್ತು ಗೋವುಗಳ ಕೂಗಿನಿಂದ ಚಿಂತಿತರಾದ ವ್ರಜದ ವೃದ್ಧರು ಒಟ್ಟಾಗಿ ಅಲ್ಲಿಂದ ಹೊರಟುಹೋಗಲು ನಿಶ್ಚಯಿಸಿದರು.

19064007a ತೇಷಂ ಮತಮಥಾಜ್ಞಾಯ ಗಂತುಂ ವೃಂದಾವನಂ ಪ್ರತಿ । 

19064007c ವ್ರಜಸ್ಯ ವಿನಿವೇಶಾಯ ಗವಾಂ ಚೈವ ಹಿತಾಯ ಚ ।।   

19064008a ವೃಂದಾವನನಿವಾಸಾಯ ತಾಂಜ್ಞಾತ್ವಾ ಕೃತನಿಶ್ಚಯಾನ್ । 

19064008c ನಂದಗೋಪೋ ಬೃಹದ್ವಾಕ್ಯಂ ಬೃಹಸ್ಪತಿರಿವಾದದೇ ।।   

ಗೋವುಗಳ ಹಿತಕ್ಕಾಗಿ ವ್ರಜವನ್ನು ಬಿಟ್ಟು ವೃಂದಾವನಕ್ಕೆ ಹೋಗುವ ಅವರ ಮತವನ್ನು ತಿಳಿದ ಮತ್ತು ವೃಂದಾವನದಲ್ಲಿ ವಾಸಿಸುವ ಅವರ ನಿಶ್ಚಯವನ್ನು ತಿಳಿದ ನಂದಗೋಪನು ಬೃಹಸ್ಪತಿಯಂತೆ ಈ ಮಹಾಮಾತನ್ನು ಆಡಿದನು:

19064009a ಅದ್ಯೈವ ನಿಶ್ಚಯಪ್ರಾಪ್ತಿರ್ಯದಿ ಗಂತವ್ಯಮೇವ ನಃ । 

19064009c ಶೀಘ್ರಮಾಜ್ಞಾಪ್ಯತಾಂ ಘೋಷಃ ಸಜ್ಜೀಭವತ ಮಾ ಚಿರಮ್ ।।   

"ನಮಗೆ ಇಲ್ಲಿಂದ ಹೋಗಬೇಕೆಂಬ ನಿಶ್ಚಯವನ್ನು ಮಾಡಿದ್ದಾದರೆ ಇಂದೇ ಹೊರಡಬೇಕು. ಶೀಘ್ರದಲ್ಲಿಯೇ ಹೊರಡಬೇಕು, ತಡಮಾಡಬಾರದು ಎಂದು ಬೇಗನೇ ಗೋವಳಕ್ಕೆ ಆಜ್ಞಾಪಿಸಬೇಕು."

19064010a ತತೋಽವಘುಷ್ಯತ ತದಾ ಘೋಷೇ ತತ್ಪ್ರಾಕೃತೈರ್ಜನೈಃ । 

19064010c ಶೀಘ್ರಂ ಗಾವಃ ಪ್ರಕಲ್ಪ್ಯಂತಾಂ ಭಾಂದಾಂಸಮಭಿರೋಪ್ಯತಾಮ್।।   

19064011a ವತ್ಸಯೂಥಾನಿ ಕಾಲ್ಯಂತಾಂ ಯುಜ್ಯಂತಾಂ ಶಕಟಾನಿ ಚ । 

19064011c ವೃಂದಾವನಮಿತಃ ಸ್ಥಾನಾನ್ನಿವೇಶಾಯ ಚ ಗಮ್ಯತಾಮ್ ।।   

ಅನಂತರ ಪ್ರಾಕೃತ ಜನರ ಮೂಲಕ ಗೋವಳದಲ್ಲಿ ಈ ಘೋಷಣೆಯನ್ನು ಮಾಡಿಸಲಾಯಿತು: "ಶೀಘ್ರವೇ ಗೋವುಗಳನ್ನು ಸಿದ್ಧಗೊಳಿಸಿ! ಪಾತ್ರೆ-ಪಗಡಗಳನ್ನು ಬಂಡಿಗಳಲ್ಲಿ ತುಂಬಿಸಿ. ಕರುಗಳನ್ನು ಗುಂಪಾಗಿ ಸೇರಿಸಿ ಭದ್ರಗೊಳಿಸಿ! ಬಂಡಿಗಳನ್ನು ಕಟ್ಟಿ! ವಾಸಿಸಲು ವೃಂದಾವನ ಪ್ರದೇಶಕ್ಕೆ ಹೋಗೋಣ!"

19064012a ತಚ್ಛ್ರುತ್ವಾ ನಂದಗೋಪಸ್ಯ ವಚನಂ ಸಾಧು ಭಾಷಿತಮ್ । 

19064012c ಉದತಿಷ್ಠದ್ವ್ರಜಃ ಸರ್ವಃ ಶೀಘ್ರಂ ಗಮನಲಾಲಸಃ ।।   

ಉತ್ತಮವಾಗಿ ಆಡಿದ ನಂದಗೋಪನ ಆ ಮಾತನ್ನು ಕೇಳುತ್ತಲೇ ಪ್ರಯಾಣಿಸಲು ಉತ್ಸುಕರಾಗಿದ್ದ ಸರ್ವ ವ್ರಜವಾಸಿಗಳೂ ಎದ್ದು ನಿಂತರು.

19064013a ಪ್ರಯಾಹ್ಯುತ್ತಿಷ್ಠ ಗಚ್ಛಾಮಃ ಕಿಂ ಶೇಷೇ ಸಾಧು ಯೋಜಯ । 

19064013c ಉತ್ತಿಷ್ಠತಿ ವ್ರಜೇ ತಸ್ಮಿನ್ಗೋಪಕೋಲಾಹಲೋ ಹ್ಯಭೂತ್ ।।   

"ಏಳಿ! ಹೋಗೋಣ! ಏಕೆ ಮಲಗಿದ್ದೀರಿ? ಗಾಡಿಗಳನ್ನು ಕಟ್ಟಿ!" ಇವೇ ಮುಂತಾದ ಕೋಲಾಹಲಗಳು ಹೊರಟಿದ್ದ ಆ ಗೋಪರಲ್ಲಿ ಕೇಳಿಬಂದವು.

19064014a ಉತ್ತಿಷ್ಠಮಾನಃ ಶುಶುಭೇ ಶಕಟೀಶಕಟಸ್ತು ಸಃ । 

19064014c ವ್ಯಾಘ್ರಘೋಷಮಹಾಘೋಷೋ ಘೋಷಃ ಸಾಗರಘೋಷವಾನ್ ।।   

ಬಂಡಿಗಳಿಂದ ಕೂಡಿದ ಅವರು ಶೋಭಿಸಿದರು. ಅವರ ಕೋಲಾಹಲವು ಹುಲಿಯ ಗರ್ಝನೆಯಂತೆ ಅಥವಾ ಸಮುದ್ರದ ಭೋರ್ಗರೆತದಂತೆ ಕೇಳಿಬರುತ್ತಿತ್ತು.

19064015a ಗೋಪೀನಾಂ ಗರ್ಗರೀಭಿಶ್ಚ ಮೂರ್ಧ್ನಿ ಚೋತ್ತಮ್ಭಿತೈರ್ಘಟೈಃ । 

19064015c ನಿಷ್ಪಪಾತ ವ್ರಜಾತ್ಪಂಕ್ತಿಸ್ತಾರಾಪಂಕ್ತಿರಿವಾಂಬರಾತ್ ।।   

ತಲೆಯಮೇಲೆ ಮಡಿಕೆ-ಪಾತ್ರೆಗಳನ್ನು ಹೊತ್ತು ಹೊರಟಿದ್ದ ಆ ಗೋಪಿಯರ ಸಾಲು ಆಕಾಶದಿಂದ ನಕ್ಷತ್ರಗಳ ಪಂಕ್ತಿಯೇ ವ್ರಜದ ಮೇಲೆ ಬಿದ್ದಿದೆಯೋ ಎಂಬಂತೆ ತೋರುತ್ತಿತ್ತು.

19064016a ನೀಲಪೀತಾರುಣೈಸ್ತಾಸಾಂ ವಸ್ತ್ರೈರಗ್ರಸ್ತನೋಚ್ಛ್ರಿತೈಅಃ । 

19064016c ಶಕ್ರಚಾಪಾಯತೇ ಪಂಕ್ತಿರ್ಗೋಪೀನಾಂ ಮಾರ್ಗಗಾಮಿನೀ ।।   

ಮಾರ್ಗಗಾಮಿನೀ ಗೋಪಿಯರ ಸಾಲು ಅವರ ಸ್ತನಗಳ ಅಗ್ರಭಾಗಗಳನ್ನು ಮುಚ್ಚಿದ್ದ ನೀಲಿ, ಹಳದಿ ಮತ್ತು ಕೆಂಪು ವಸ್ತ್ರಗಳಿಂದಾಗಿ ಕಾಮನಬಿಲ್ಲಿನಂತೆಯೇ ಕಾಣುತ್ತಿತ್ತು.

19064017a ದಾಮನೀ ದಾಮಭಾರೈಶ್ಚ ಕೈಶ್ಚಿತ್ಕಾಯಾವಲಂಬಿಭಿಃ। 

19064017c ಗೋಪಾ ಮಾರ್ಗಗತಾ ಭಾಂತಿ ಸಾವರೋಹಾ ಇವ ದ್ರುಮಾಃ ।।   

ಕೆಲವು ಮಾರ್ಗಗಾಮಿನೀ ಗೋಪಿಯರು ಹಗ್ಗಗಳ ಭಾರವನ್ನು ಹೊತ್ತು ಹೋಗುತ್ತಿರುವಾಗ ಆ ಹಗ್ಗಗಳು ಅವರ ಅಂಗಾಂಗಗಳ ಮೇಲೆ ನೇತಾಡುತ್ತಿರುವಾಗ ಅವರು ಬೇರುಗಳು ನೇತುಬಿದ್ದಿರುವ ಆಲದ ಮರಗಳಂತೆ ಕಾಣುತ್ತಿದ್ದರು.

19064018a ಸ ವ್ರಜೋ ವ್ರಜತಾ ಭಾತಿ ಶಕಟೌಘೇನ ಭಾಸ್ವತಾ । 

19064018c ಪೋತೈಃ ಪವನವಿಕ್ಷಿಪ್ತೈರ್ನಿಷ್ಪತದ್ಭಿರಿವಾರ್ಣವಃ ।।   

ಆ ವ್ರಜದಲ್ಲಿ ಮುಂದೆ ಸಾಗುತ್ತಿದ್ದ ಬಂಡಿಗಳ ಸಮೂಹವು ಗಾಳಿಗೆ ಸಿಕ್ಕಿ ಮಹಾಸಾಗರದಲ್ಲಿ ಸಾಗುತ್ತಿರುವ ಹಡಗುಗಳ ಸಮೂಹದಂತೆ ತೋರುತ್ತಿತ್ತು.

19064019a ಕ್ಷಣೇನ ತದ್ವ್ರಜಸ್ಥಾನಮೀರಿಣಂ ಸಮಪದ್ಯತ । 

19064019c ದ್ರವ್ಯಾವಯವನಿರ್ಧೂತಂ ಕೀರ್ಣಂ ವಾಯಸಮಂಡಲೈಃ ।।   

ಕ್ಷಣದಲ್ಲಿಯೇ ಆ ವ್ರಜಸ್ಥಾನವು ಮರುಭೂಮಿಯಂತಾಯಿತು. ಅನ್ನಾದಿ ದ್ರವ್ಯಗಳು ಹರಡಿ ಬಿದ್ದುದರ ಕಾರಣದಿಂದ ಅಲ್ಲಿ ಕಾಗೆಗಳ ಸಮೂಹಗಳೇ ಬಂದು ಸೇರಿದವು.

19064020a ತತಃ ಕ್ರಮೇಣ ಘೋಷಃ ಸ ಪ್ರಾಪ್ತೋ ವೃಂದಾವನಂ ವನಮ್ । 

19064020c ನಿವೇಶಂ ವಿಪುಲಂ ಚಕ್ರೇ ಗವಾಂ ಚೈವ ಹಿತಾಯ ಚ ।।   

ಅನಂತರ ಕ್ರಮೇಣವಾಗಿ ಆ ಗೋವಳವು ವೃಂದಾವನ ವನವನ್ನು ತಲುಪಿತು. ಗೋವುಗಳ ಹಿತಕ್ಕಾಗಿ ಅವರು ಅಲ್ಲಿ ದೂರದೂರ ಮನೆಮಾಡಿಕೊಂಡರು.

19064021a ಶಕಟಾವರ್ತಪರ್ಯಂತಂ ಚಂದ್ರಾರ್ಧಾಕಾರಸಂಸ್ಥಿತಮ್ । 

19064021c ಮಧ್ಯೇ ಯೋಜನವಿಸ್ತೀರ್ಣಂ ತಾವದ್ದ್ವಿಗುಣಮಾಯತಮ್ ।।   

ಅರ್ಧಚಂದ್ರಾಕಾರ ಆಕೃತಿಯಲ್ಲಿ ನೆಲೆಸಿ ಗಡಿಗಳಲ್ಲಿ ಬಂಡಿಗಳನ್ನು ನಿಲ್ಲಿಸಿದರು. ಮಧ್ಯದಲ್ಲಿ ಅವರ ವಾಸಸ್ಥಾನದ ವಿಸ್ತೀರ್ಣವು ಒಂದು ಯೋಜನ ಅಗಲ ಮತ್ತು ಎರಡು ಯೋಜನ ಉದ್ದವಾಗಿತ್ತು.

19064022a ಕಂಟಕೀಭಿಃ ಪ್ರವೃದ್ಧಾಭಿಸ್ತಥಾ ಕಂಟಕಿತದ್ರುಮೈಃ । 

19064022c ನಿಖಾತೋಚ್ಛ್ರಿತಶಾಖಾಗ್ರೈರಭಿಗುಪ್ತಂ ಸಮಂತತಃ ।।   

ಆ ನಿವಾಸಸ್ಥಾನವು ಬೆಳೆದಿದ್ದ ಮುಳ್ಳಿನ ಗಿಡಗಳಿಂದಲೂ, ಎತ್ತರವಾಗಿ ಬೆಳೆದಿದ್ದ ಮುಳ್ಳಿನ ಮರಗಳಿಂದಲೂ ಸುತ್ತಲೂ ಸುರಕ್ಷಿತವಾಗಿತ್ತು.

19064023a ಮಂಥೈರಾರೋಪ್ಯಮಾಣೈಶ್ಚ  ಮಂಥಬಂಧಾನುಕರ್ಷಣೈಃ । 

19064023c ಅದ್ಭಿಃ ಪ್ರಕ್ಷಾಲ್ಯಮಾನಾಭಿರ್ಗರ್ಗರೀಭಿರಿತಸ್ತತಃ ।।   

ಅಲ್ಲಲ್ಲಿ ಕಡಗೋಲುಗಳನ್ನು ಏರಿಸುತ್ತಿದ್ದರು, ಕಡಗೋಲುಗಳನ್ನು ಕಟ್ಟುತ್ತಿದ್ದರು, ಮತ್ತು ಮಡಿಕೆಗಳನ್ನು ನೀರಿನಿಂದ ತೊಳೆಯುತ್ತಿದ್ದರು.

19064024a ಕೀಲೈರಾರೋಪ್ಯಮಾಣೈಶ್ಚ ದಾಮನೀಪಾಶಪಾಶಿತೈಃ । 

19064024c ಸ್ತಂಭನೀಭಿರ್ಧೃತಾಭಿಶ್ಚ ಶಕಟೈಃ ಪರಿವರ್ತಿತೈಃ ।।   

ಅಲ್ಲಲ್ಲಿ ಬಂಡಿಗಳಿಗೆ ಕೀಲಿಗಳನ್ನು ಬಡಿಯುತ್ತಿದ್ದರು, ಹಗ್ಗಗಳನ್ನು ಕಟ್ಟುತ್ತಿದ್ದರು, ಕಂಭಗಳನ್ನು ನಿಲ್ಲಿಸುತ್ತಿದ್ದರು ಮತ್ತು ಬಂಡಿಗಳನ್ನು ತಿರುಗಿಸುತ್ತಿದ್ದರು.

19064025a ನಿಯೋಗಪಾಶೈರಾಸಕ್ತೈರ್ಗರ್ಗರೀಸ್ತಂಭಮೂರ್ಧಸು ।   

19064025c ಚಾದನಾರ್ಥಂ ಪ್ರಕೀರ್ಣೈಶ್ಚ ಕಟಕೈಸ್ತೃಣಸಂಕಟೈಃ ।।   

ಮೊಸರು ತುಂಬಿದ ಪಾತ್ರೆಗಳಿಗೆ ಹಗ್ಗಕಟ್ಟಿ ಕಂಭಗಳ ಮೇಲೆ ಏರಿಸುತ್ತಿದ್ದರು. ಮನೆಗಳಿಗೆ ಹೊದಿಸಲು ತಂದಿದ್ದ ಚಾಪೆ ಮತ್ತು ಸೋಗೆಗಳು ಅಲ್ಲಲ್ಲಿ ಹರಡಿ ಬಿದ್ದಿದ್ದವು.

19064026a ಶಾಖಾವಿಟಂಕೈರ್ವೃಕ್ಷಾಣಾಂ ಕ್ರಿಯಮಾಣೈರಿತಸ್ತತಃ । 

19064026c ಶೋಧ್ಯಮಾನೈರ್ಗವಾಂ ಸ್ಥಾನೈಃ ಸ್ಥಾಪ್ಯಮಾನೈರುಲೂಖಲೈಃ ।।   

ಅಲ್ಲಲ್ಲಿ ಮರಗಳ ರೆಂಬೆಗಳ ಮೇಲೆ ಪಕ್ಷಿಗಳ ವಾಸಯೋಗ್ಯ ಸ್ಥಳಗಳನ್ನು ಮಾಡುತ್ತಿದ್ದರು; ಇನ್ನು ಕೆಲವೆಡೆ ಗೋವುಗಳಿಗೆ ವಾಸಯೋಗ್ಯ ಸ್ಥಳಗಳನ್ನು ಹುಡುಕುತ್ತಿದ್ದರು.

19064027a ಪ್ರಾಙ್ಮುಖೈಃ ಸಿಚ್ಯಮಾನೈಶ್ಚ ಸಂದೀಪ್ಯದ್ಭಿಶ್ಚ ಪಾವಕೈಃ । 

19064027c ಸವತ್ಸಚರ್ಮಾಸ್ತರಣೈಃ ಪರ್ಯಂಕೈಶ್ಚಾವರೋಪಿತೈಃ ।।   

ಕೆಲವೆಡೆ ಒರಳುಗಳನ್ನು ಇಡುತ್ತಿದ್ದರು. ಅವುಗಳನ್ನು ಪೂರ್ವಾಭಿಮುಖವಾಗಿ ಇರಿಸಿ ತೊಳೆಯುತ್ತಿದ್ದರು. ಕೆಲವೆಡೆ ಬೆಂಕಿಯನ್ನು ಹೊತ್ತಿಸುತ್ತಿದ್ದರು. ಇನ್ನು ಕೆಲವೊಮ್ಮೆ ಗೋಚರ್ಮಗಳಿಂದ ಮಾಡಿದ ಹೊದಿಕೆಗಳನ್ನು ಮಂಚಗಳ ಮೇಲೆ ಹೊದೆಸುತ್ತಿದ್ದರು.

19064028a ತೋಯಮುತ್ತಾರಯಂತೀಭಿಃ ಪ್ರೇಕ್ಷಂತೀಭಿಶ್ಚ ತದ್ವನಮ್ । 

19064028c ಶಾಖಾಶ್ಚಾಕರ್ಷಮಾಣಾಭಿರ್ಗೋಪೀಭಿಶ್ಚ ಸಮಂತತಃ ।।   

ಗೋಪಿಯರು ತಮ್ಮ ತಲೆಗೂದಲಿನ ನೀರನ್ನು ಕೊಡವಿಕೊಳ್ಳುತ್ತಾ ಆಕರ್ಷಣೀಯ ವನವನ್ನು ವೀಕ್ಷಿಸುತ್ತಿದ್ದರು. ಕೆಲವರು ಸುತ್ತಾಡುತ್ತಾ ಮರಗಳ ರೆಂಬೆಗಳನ್ನು ಎಳೆಯುತ್ತಿದ್ದರು.

19064029a ಯುವಭಿಃ ಸ್ಥವಿರೈಶ್ಚೈವ ಗೋಪೈರ್ವ್ಯಗ್ರಕರೈರ್ಭೃಶಮ್ । 

19064029c ವಿಶಸದ್ಭಿಃ ಕುಠಾರೈಶ್ಚ ಕಾಷ್ಠಾನ್ಯಪಿ ತರೂನಪಿ ।।   ೨-೬೪-೨೯

ವೃದ್ಧರಾಗಿರಲಿ ಅಥವಾ ಯುವಕರಾಗಿರಲಿ ಎಲ್ಲ ಗೋಪರೂ ಕೆಲಸಗಳಲ್ಲಿ ಅತ್ಯಂತ ವ್ಯಸ್ತರಾಗಿದ್ದರು. ಕತ್ತಿ-ಕೊಡಲಿಗಳಿಂದ ಕಟ್ಟಿಗೆ ಮತ್ತು ಹುಲ್ಲುಗಳನ್ನು ಕಡಿಯುತ್ತಿದ್ದರು. 

19064030a ತದ್ವ್ರಜಸ್ಥಾನಮಧಿಕಂ ಶುಶುಭೇ ಕಾನನಾವೃತಮ್ । 

19064030c ರಮ್ಯಂ ವನನಿವೇಶಂವೈ ಸ್ವಾದುಮೂಲಫಲೋದಕಮ್ ।।   

ಕಾನನಾವೃತವಾಗಿದ್ದ ಆ ವ್ರಜಸ್ಥಾನವು ಅಧಿಕವಾಗಿ ಶೋಭಿಸಿತು. ಆ ರಮ್ಯ ವನನಿವೇಶವು ಸ್ವಾದಿಷ್ಠ ಫಲ-ಮೂಲಗಳಿಂದಲೂ ನೀರಿನಿಂದಲೂ ಕೂಡಿತ್ತು.

19064031a ತಾಸ್ತು ಕಾಮದುಘಾ ಗಾವಃ ಸರ್ವಪಕ್ಷಿರುತಂ ವನಮ್ । 

19064031c ವೃಂದಾವನಮನುಪ್ರಾಪ್ತಾ ನಂದನೋಪಮಕಾನನಮ್ ।।   

ಹಾಲುನೀಡುತ್ತಿದ್ದ ಆ ಎಲ್ಲ ಗೋವುಗಳೂ ಪಕ್ಷಿಗಳ ಕಲರವದಿಂದ ತುಂಬಿ ನಂದನವನದಂತಿದ್ದ ವೃಂದಾವನ ವನವನ್ನು ಸೇರಿದವು.

19064032a ಪೂರ್ವಮೇವ ತು ಕೃಷ್ಣೇನ ಗವಾಂವೈ ಹಿತಕಾರಿಣಾ ।   

19064032c ಶಿವೇನ ಮನಸಾ ದೃಷ್ಟಂ ತದ್ವನಂ ವನಚಾರಿಣಾ ।।   

ವನಚಾರೀ ಗೋವುಗಳ ಹಿತಕಾರಿ ಕೃಷ್ಣನು ಹಿಂದೆಯೇ ತನ್ನ ಕಲ್ಯಾಣಚಿಂತನ ಮನಸ್ಸಿನಿಂದ ಆ ವನವನ್ನು ಕಂಡಿದ್ದನು.

19064033a ಪಶ್ಚಿಮೇ ತು ತತೋ ರೂಕ್ಷೇ ಧರ್ಮೇ ಮಾಸೇ ನಿರಾಮಯೇ । 

19064033c ವರ್ಷತೀವಾಮೃತಂ ದೇವೇ ತೃಣಂ ತತ್ರ ವ್ಯವರ್ಧತ ।।   

ಆಗ ಅಲ್ಲಿ ಕಠೋರ ಬೇಸಗೆಯ ಕಾಲವು ಕಳೆಯುತ್ತಾ ಬಂದಿದ್ದರೂ ಇಂದ್ರದೇವನು ಅಮೃತದ ಮಳೆಯನ್ನು ಸುರಿಸಿದನೋ ಎನ್ನುವಂತೆ ಹುಲ್ಲು ಹಸಿರಾಗಿ ಬೆಳೆದಿತ್ತು.

19064034a ನ ತತ್ರ ವತ್ಸಾಃ ಸೀದಂತಿ ನ ಗಾವೋ ನೇತರೇ ಜಾನಾಃ । 

19064034c ಯತ್ರ ತಿಷ್ಠತಿ ಲೋಕಾಣಾಂ ಭವಾಯ ಮಧುಸೂದನಃ ।।   

ಲೋಕಗಳ ಕಲ್ಯಾಣಕಾರಕ ಮಧುಸೂದನನು ಎಲ್ಲಿದ್ದನೋ ಅಲ್ಲಿ ಕರುಗಳಾಗಲೀ, ಗೋವುಗಳಾಗಲೀ ಅಥವಾ ಇತರ ಜನರಾಗಲೀ ಕೃಶರಾಗುತ್ತಿರಲಿಲ್ಲ.

19064035a ತಾಶ್ಚ ಗಾವಃ ಸ ಘೋಷಸ್ತು ಸ ಚ ಸಂಕರ್ಷಣೋ ಯುವಾ । 

19064035c ಕೃಷ್ಣೇನ ವಿಹಿತಂ ವಾಸಂ ಸಮಧ್ಯಾಸತ ನಿರ್ವೃತಾಃ ।।   

ಕೃಷ್ಣನು ವಿಹಿಸಿದ್ದ ಆ ಸ್ಥಳದಲ್ಲಿ ಗೋವುಗಳು, ಗೋಪರು ಮತ್ತು ಯುವ ಸಂಕರ್ಷಣ ಎಲ್ಲರೂ ಆನಂದದಿಂದ ವಾಸಿಸತೊಡಗಿದರು.

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ವೃಂದಾವನಪ್ರವೇಶೇ ಚತುಷಷ್ಟಿತಮೋಽಧ್ಯಾಯಃ ।।

ಇದು ಶ್ರೀಮಹಾಭಾರತದ ಖಿಲಭಾಗ ಹರಿವಂಶದಲ್ಲಿ ವಿಷ್ಣುಪರ್ವದಲ್ಲಿ ವೃಂದಾವನಪ್ರವೇಶದಲ್ಲಿ ಅರವತ್ನಾಲ್ಕನೇ ಅಧ್ಯಾಯವು.

Comments are closed.