Harivamsha: Chapter 52

ಹರಿವಂಶ: ಹರಿವಂಶ ಪರ್ವ

೫೨

ವಿಷ್ಣುಂ ಪ್ರತಿ ಪೃಥಿವ್ಯಾ ವಾಕ್ಯಮ್

ಮೇರು ಪರ್ವತದಲ್ಲಿ ಭಗವಾನ್ ವಿಷ್ಣು ಮತ್ತು ದೇವತೆಗಳ ದಿವ್ಯ ಸಭೆ; ಅಲ್ಲಿ ಪೃಥ್ವಿಯು ಭಗವಂತನಲ್ಲಿ ಭಾರಹರಣಮಾಡಲು ಪ್ರಾರ್ಥಿಸಿಕೊಂಡಿದುದು (೧-೬೦).

ವೈಶಂಪಾಯನ ಉವಾಚ|

ಬಾಢಮಿತ್ಯೇವ ಸಹ ತೈರ್ದುರ್ದಿನಾಂಭೋದನಿಃಸ್ವನಃ |

ಪ್ರತಸ್ಥೇ ದುರ್ದಿನಾಕಾರಃ ಸದುರ್ದಿನ ಇವಾಚಲಃ ||೧-೫೨-೧

ವೈಶಂಪಾಯನನು ಹೇಳಿದನು: “ಮೇಘಯುಕ್ತ ಪರ್ವತದಂತೆ ಕಾಣುತ್ತಿದ್ದ ಮೇಘದ ಆಕಾರವನ್ನೇ ಹೊಂದಿದ್ದ ವಿಷ್ಣುವು ವರ್ಷಾಕಾಲದ ಮೇಘದಂಥಹ ಗಂಭೀರ ಧ್ವನಿಯಲ್ಲಿ “ಒಳ್ಳೆಯದೇ ಆಯಿತು!” ಎಂದು ಹೇಳಿ ಅಲ್ಲಿಂದ ಹೊರಟನು.

ಸಮುಕ್ತಾಮಣಿವಿದ್ಯೋತಂ ಸಚಂದ್ರಾಂಭೋದವರ್ಚಸಮ್ |

ಸಜಟಾಮಂಡಲಂ ಕೃತ್ಸ್ನಂ ಸ ಬಿಭ್ರಚ್ಛ್ರೀಧರೋ ಹರಿಃ ||೧-೫೨-೨

ಶ್ರೀಧರ ಹರಿಯು ಮೊಳಕಾಲವರೆಗೂ ಮುಟ್ಟುವ, ಚಂದ್ರನ ಪ್ರಭೆಯಿದ್ದ ಮುಕ್ತಾಮಣಿಗಳ ಮಾಲೆಯನ್ನು ಧರಿಸಿದ್ದನು. ಬೇರೆ ಎಲ್ಲ ರೀತಿಯಲ್ಲಿಯೂ ಜಟಾಮಂಡಲಧರನಾಗಿ ಶೋಭಿಸುತ್ತಿದ್ದನು[1]

ಸ ಚಾಸ್ಯೋರಸಿ ವಿಸ್ತೀರ್ಣೇ ರೋಮಾಂಚೋದ್ಗತರಾಜಿಮಾನ್ |

ಶ್ರೀವತ್ಸೋ ರಾಜತೇ ಶ್ರೀಮಾಂಸ್ತನದ್ವಯಮುಖಾಂಚಿತಃ ||೧-೫೨-೩

ಅವನ ವಿಶಾಲ ವಕ್ಷಸ್ಥಲದಲ್ಲಿ ರೋಮಾಂಚನಮಾಡುವಂತೆ ರಾಜಿಸುತ್ತಿದ್ದ ಶ್ರೀವತ್ಸವು ರಾಜಿಸುತ್ತಿತ್ತು. ಅದು ಆ ಶ್ರೀಮಾನನ ಎರಡನೇ ಮುಖವೋ ಎಂಬಂತೆ ಕಾಣುತ್ತಿತ್ತು[2].

ಪೀತೇ ವಸಾನೋ ವಸನೇ ಲೋಕಾನಾಂ ಗುರುರವ್ಯಯಃ |

ಹರಿಃ ಸೋಽಭವದಾಲಕ್ಷ್ಯಃ ಸ ಸಂಧ್ಯಾಭ್ರ ಇವಾಚಲಃ ||೧-೫೨-೪

ಪೀತವಸ್ತ್ರವನ್ನುಟ್ಟಿದ್ದ ಆ ಲೋಕಗಳ ಗುರು ಅವ್ಯಯ ಹರಿಯು ಸಂಧ್ಯಾಕಾಲದ ಮೇಘಯುಕ್ತ ಪರ್ವತದಂತೆ ಮನೋಹರವಾಗಿ ಕಾಣುತ್ತಿದ್ದನು.

ತಂ ವ್ರಜಂತಂ ಸುಪರ್ಣೇನ ಪದ್ಮಯೋನಿಗತಾನುಗಮ್ |

ಅನುಜಗ್ಮುಃ ಸುರಾಃ ಸರ್ವೇ ತದ್ಗತಾಸಕ್ತಚಕ್ಷುಷಃ ||೧-೫೨-೫

ಸುಪರ್ಣನನ್ನೇರಿ ಹೋಗುತ್ತಿದ್ದ ಅವನನ್ನು ಪದ್ಮಯೋನಿ ಬ್ರಹ್ಮನು ಹಿಂಬಾಲಿಸಿದನು. ಅವನನ್ನು ಸರ್ವ ಸುರರೂ ಆಸಕ್ತರಾಗಿ ಅವನನ್ನೇ ನೋಡುತ್ತಾ ಹಿಂದೆ ಹಿಂದೆ ಹೋದರು.

ನಾತಿದೀರ್ಘೇಣ ಕಾಲೇನ ಸಂಪ್ರಾಪ್ತಾ ರತ್ನಪರ್ವತಮ್ |

ದದೃಶುರ್ದೇವತಾಸ್ತತ್ರ ತಾಂ ಸಭಾಂ ಕಾಮರೂಪಿಣೀಮ್ ||೧-೫೨-೬

ಸ್ವಲ್ಪವೇ ಸಮಯದಲ್ಲಿ ದೇವತೆಗಳು ರತ್ನಪರ್ವತ ಮೇರುವನ್ನು ಸೇರಿ ಅಲ್ಲಿ ಆ ಕಾಮರೂಪಿಣೀ ಬ್ರಹ್ಮಸಭೆಯನ್ನು ನೋಡಿದರು.

ಮೇರೋಃ ಶಿಖರವಿನ್ಯಸ್ತಾಂ ಸಂಯುಕ್ತಾಂ ಸೂರ್ಯವರ್ಚಸಾ |

ಕಾಂಚನಸ್ತಂಭರಚಿತಾಂ ವಜ್ರಸಂಧಾನತೋರಣಾಮ್ ||೧-೫೨-೭

ಮೇರುವಿನ ಶಿಖರದ ಮೇಲೆ ಸ್ಥಾಪಿತವಾಗಿದ್ದ ಆ ದಿವ್ಯ ಸಭೆಯು ಸೂರ್ಯನಂತೆ ತೇಜೋಯುಕ್ತವಾಗಿತ್ತು. ಕಂಚನ ಸ್ಥಂಬಗಳನ್ನು ರಚಿಸಲಾಗಿತ್ತು. ಅದಕ್ಕೆ ವಜ್ರಗಳ ತೋರಣಗಳನ್ನು ಕಟ್ಟಲಾಗಿತ್ತು.

ಮನೋನಿರ್ಮಾಣಚಿತ್ರಾಢ್ಯಾಂ ವಿಮಾನಶತಮಾಲಿನೀಮ್ |

ರತ್ನಜಾಲಾಂತರವತೀಂ ಕಾಮಗಾಂ ರತ್ನಭೂಷಿತಾಮ್ ||೧-೫೨-೮

ಮನಸ್ಸಿನಿಂದ ನಿರ್ಮಾಣವಾದ ಚಿತ್ರಗಳಿಂದ ಕೂಡಿತ್ತು. ನೂರಾರು ವಿಮಾನಗಳು ಮಾಲೆಯ ರೂಪದಲ್ಲಿದ್ದವು. ರತ್ನಜಾಲಗಳನ್ನು ಹೊಂದಿತ್ತು. ರತ್ನಭೂಷಿತವಾಗಿದ್ದ ಅದು ಕಾಮಗವಾಗಿತ್ತು.

ಕ್ಲೃಪ್ತರತ್ನಸಮಾಕೀರ್ಣಾಂ ಸರ್ವರ್ತುಕುಸುಮೋತ್ಕಟಾಮ್ |

ದೇವಮಾಯಾಧರಾಂ ದಿವ್ಯಾಂ ವಿಹಿತಾಂ ವಿಶ್ವಕರ್ಮಣಾ ||೧-೫೨-೯

ಬಹುಮೂಲ್ಯ ರತ್ನಗಳಿಂದ ತುಂಬಿಕೊಂಡಿತ್ತು. ಸರ್ವಋತುಗಳ ಕುಸುಮಗಳಿಂದ ಕೂಡಿತ್ತು. ದಿವ್ಯ ದೇವಮಾಯೆಗಳನ್ನು ಹೊಂದಿದ್ದ ವಿಶ್ವಕರ್ಮನಿಂದ ನಿರ್ಮಿತಗೊಂಡಿತ್ತು.

ತಾಂ ಹೃಷ್ಟಮನಸಃ ಸರ್ವೇ ಯಥಾಸ್ಥಾನಂ ಯಥಾವಿಧಿ |

ಯಥಾನಿದೇಶಂ ತ್ರಿದಶಾ ವಿವಿಶುಸ್ತೇ ಸಭಾಂ ಶುಭಾಮ್ ||೧-೫೨-೧೦

ಹೃಷ್ಟಮನಸ್ಕರಾದ ಆ ಎಲ್ಲ ತ್ರಿದಶರೂ ಬ್ರಹ್ಮನ ನಿರ್ದೇಶನದಂತೆ ಯಥಾವಿಧಿಯಾಗಿ ಬಂದು ಆ ಶುಭ ಸಭೆಯನ್ನು ಪ್ರವೇಶಿಸಿ ಯಥಾಸ್ಥಾನಗಳಲ್ಲಿ ಕುಳಿತುಕೊಂಡರು.

ತೇ ನಿಷೇದುರ್ಯಥೋಕ್ತೇಷು ವಿಮಾನೇಷ್ವಾಸನೇಷು ಚ |

ಭದ್ರಾಸನೇಷು ಪೀಠೇಷು ಕುಥಾಸ್ವಾಸ್ತರಣೇಷು ಚ ||೧-೫೨-೧೧

ಅವರು ಅಲ್ಲಿ ಯೋಗ್ಯತಾನುಸಾರವಾಗಿ ಹೇಳಿದ್ದ ವಿಮಾನಗಳು, ಆಸನಗಳು, ಭದ್ರಾಸನಗಳು, ಪೀಠಗಳು ಮತ್ತು ಇತರರು ಹಾಸಿದ ಹಚ್ಚಡಗಳ ಮೇಲೆ ವಿರಾಜಮಾನರಾದರು.

ತತಃ ಪ್ರಭಂಜನೋ ವಾಯುರ್ಬ್ರಹ್ಮಣಾ ಸಾಧು ಚೋದಿತಃ |

ಮಾ ಶಬ್ದಮಿತಿ ಸರ್ವತ್ರ ಪ್ರಚಕ್ರಾಮಾಥ ತಾಂ ಸಭಾಮ್ ||೧-೫೨-೧೨

ಆಗ ಸಾಧು ಬ್ರಹ್ಮನಿಂದ ಚೋದಿತನಾಗಿ ಪ್ರಭಂಜನ ವಾಯುವು ಶಬ್ದಮಾಡ ಬೇಡಿ ಎಂದು ಸಭೆಯ ಎಲ್ಲೆಡೆಯಲ್ಲಿ ಹೇಳಿ ಮೌನವಾಗಿರಿಸಿದನು.

ನಿಃಶಬ್ದಸ್ತಿಮಿತೇ ತಸ್ಮಿನ್ಸಮಾಜೇ ತ್ರಿದಿವೌಕಸಾಂ |

ಬಭಾಷೇ ಧರಣೀ ವಾಕ್ಯಂ ಖೇದಾತ್ಕರುಣಭಾಷಿನೀ ||೧-೫೨-೧೩

ತ್ರಿದಿವೌಕಸರ ಆ ಸಮಾಜವು ನಿಃಶಬ್ದವಾಗಲು ಕರುಣಭಾಷಿನೀ ಧರಣಿಯು ಖೇದದಿಂದ ಈ ಮಾತನ್ನಾಡಿದಳು.

ಧರಣ್ಯುವಾಚ|

ತ್ವಯಾ ಧಾರ್ಯಾ ತ್ವಹಂ ದೇವ ತ್ವಯಾ ವೈ ಧಾರ್ಯತೇ ಜಗತ್ |

ತ್ವಂ ಧಾರಯಸಿ ಭೂತಾನಿ ಭುವನಾನಿ ಬಿಭರ್ಷಿ ಚ ||೧-೫೨-೧೪

ಧರಣಿಯು ಹೇಳಿದಳು: “ದೇವ! ನಾನು ನಿನ್ನಿಂದ ಧರಿಸಲ್ಪಟ್ಟಿದ್ದೇನೆ. ನಿನ್ನಿಂದ ಈ ಜಗತ್ತೇ ಧರಿಸಲ್ಪಟ್ಟಿದೆ. ನೀನು ಭೂತಗಳನ್ನೂ ಭುವನಗಳನ್ನೂ ಧರಿಸುತ್ತೀಯೆ ಮತ್ತು ಭರಣ-ಪೋಷಣ ಮಾಡುತ್ತೀಯೆ.

ಯತ್ತ್ವಯಾ ಧಾರ್ಯತೇ ಕಿಂಚಿತ್ತೇಜಸಾ ಚ ಬಲೇನ ಚ |

ತತಸ್ತವ ಪ್ರಸಾದೇನ ಮಯಾ ಯತ್ನಾಚ್ಚ ಧಾರ್ಯತೇ |೧-೫೨-೧೫

ತೇಜಸ್ಸು ಬಲದಿಂದ ನೀನು ಧರಿಸುವುದನ್ನು ನಿನ್ನ ಪ್ರಸಾದವೆಂದು ತಿಳಿದು ಪ್ರಯತ್ನಪಟ್ಟು ನಾನು ಧರಿಸುತ್ತಿದ್ದೇನೆ.

ತ್ವಯಾ ಧೃತಂ ಧಾರಯಾಮಿ ನಾಧೃತಂ ಧಾರಯಾಮ್ಯಹಮ್ |

ನ ಹಿ ತದ್ವಿದ್ಯತೇ ಭೂತಂ ಯತ್ತ್ವಯಾ ನಾನುಧಾರ್ಯತೇ ||೧-೫೨-೧೬

ನೀನು ಧಾರಣೆಮಾಡಿರುವುದನ್ನೇ ನಾನು ಧರಿಸಿದ್ದೇನೆ. ನೀನು ಧರಿಸದೇ ಇದ್ದುದನ್ನು ನಾನು ಧರಿಸುವುದಿಲ್ಲ. ನೀನು ಧರಿಸದೇ ಇರುವ ಭೂತವು ಯಾವುದೂ ಇಲ್ಲ.

ತ್ವಮೇವ ಕುರುಷೇ ದೇವ ನಾರಾಯಣ ಯುಗೇ ಯುಗೇ |

ಮಮ ಭಾರಾವತರಣಂ ಜಗತೋ ಹಿತಕಾಮ್ಯಯಾ ||೧-೫೨-೧೭

ದೇವ! ನಾರಾಯಣ! ಜಗತ್ತಿನ ಹಿತವನ್ನು ಬಯಸಿ ನೀನೇ ಯುಗಯುಗದಲ್ಲಿಯೂ ನನ್ನ ಭಾರವನ್ನು ಹಗುರಾಗಿಸುತ್ತೀಯೆ.

ತವೈವ ತೇಜಸಾ ಕ್ರಾಂತಾಂ ರಸಾತಲತಲಂ ಗತಾಮ್ |

ತ್ರಾಯಸ್ವ ಮಾಂ ಸುರಶ್ರೇಷ್ಠ ತ್ವಾಮೇವ ಶರಣಂ ಗತಾಮ್ ||೧-೫೨-೧೮

ನಿನ್ನದೇ ತೇಜಸ್ಸಿನಿಂದ ಆಕ್ರಾಂತಳಾಗಿ ನಾನು ರಸಾತಲದ ಅಡಿಯನ್ನು ಸೇರಿದ್ದೇನೆ. ಸುರಶ್ರೇಷ್ಠ! ನಿನ್ನನ್ನೇ ಶರಣುಬಂದಿರುವ ನನ್ನನ್ನು ಉದ್ಧರಿಸು.

ದಾನವೈಃ ಪೀಡ್ಯಮಾನಾಹಂ ರಾಕ್ಷಸೈಶ್ಚ ದುರಾತ್ಮಭಿಃ |

ತ್ವಾಮೇವ ಶರಣಂ ನಿತ್ಯಮುಪಾಯಾಸ್ಯೇ ಸನಾತನಮ್ ||೧-೫೨-೧೯

ದುರಾತ್ಮರಾದ ರಾಕ್ಷಸರು ಮತ್ತು ದಾನವರಿಂದ ಪೀಡಿತಳಾದ ನಾಅನು ನಿತ್ಯವೂ ಉಪಾಸ್ಯನಾಗಿರುವ ಸನಾತನ ನಿನ್ನನ್ನೇ ಶರಣು ಬಂದಿದ್ದೇನೆ.

ತಾವನ್ಮೇಽಸ್ತಿ ಭಯಂ ಭೂಯೋ ಯಾವನ್ನ ತ್ವಾಂ ಕಕುದ್ಮಿನಮ್ |

ಶರಣಂ ಯಾಮಿ ಮನಸಾ ಶತಶೋ ಹ್ಯುಪಲಕ್ಷಯೇ ||೧-೫೨-೨೦

ಕಕುದ್ಮಿಯಾದ ನಿನ್ನನ್ನು ಮತ್ತೆ ಯಾವಾಗ ಕಾಣುತ್ತೀನೋ ಎಂಬ ಭಯವು ನನ್ನಲ್ಲಿತ್ತು. ನೂರಾರು ಸಲ ಮನಸ್ಸಿನಲ್ಲಿಯೇ ಯೋಚನೆಮಾಡಿ ನಿನ್ನ ಶರಣು ಬಂದಿದ್ದೇನೆ.

ಅಹಮಾದೌ ಪುರಾಣಸ್ಯ ಸಂಕ್ಷಿಪ್ತಾ ಪದ್ಮಯೋನಿನಾ |

ಮಾವರುಂಧಾಂ ಕೃತೌ ಪೂರ್ವಂ ಮೃನ್ಮಯೌ ದ್ವೌ ಮಹಾಸುರೌ ||೧-೫೨-೨೧

ಹಿಂದಿನ ಯುಗದ ಪ್ರಾರಂಭದಲ್ಲಿ ಪದ್ಮಯೋನಿಯು ನನ್ನನ್ನು ಜಲದ ಮೇಲೆ ಸ್ಥಾಪಿಸಿದ್ದನು ಮತ್ತು ನನ್ನ ಮೃತ್ತಿಕವನ್ನು ಮುಷ್ಟಿಯಲ್ಲಿ ಹಿಡಿದು ಅದರಿಂದ ಎರಡು ದೊಡ್ಡ ಅಸುರರ ಮೂರ್ತಿಗಳನ್ನು ರಚಿಸಿದನು.

ಕರ್ಣಸ್ರೋತೋದ್ಭವೌ ತೌ ಹಿ ವಿಷ್ಣೋರಸ್ಯ ಮಹಾತ್ಮನಃ |

ಮಹಾರ್ಣವೇ ಪ್ರಸ್ವಪತಃ ಕಾಷ್ಠಕುಡ್ಯಸಮೌ ಸ್ಥಿತೌ ||೧-೫೨-೨೨

ಅವರಿಬ್ಬರೂ ಮಹಾರ್ಣವದಲ್ಲಿ ನಿದ್ರಿಸುತ್ತಿದ್ದ ಮಹಾತ್ಮ ವಿಷ್ಣುವಿನ ಕಿವಿಗಳ ಮಲದಿಂದ ಉತ್ಪನ್ನರಾಗಿದ್ದರು ಮತ್ತು ಕಾಷ್ಠ ಮತ್ತು ಕುಂಡಗಳಂತೆ ಅಚೇತನರಾಗಿದ್ದರು.

ತೌ ವಿವೇಶ ಸ್ವಯಂ ವಾಯುರ್ಬ್ರಹ್ಮನಾ ಸಾಧು ಚೋದಿತಃ |

ದಿವಂ ಪ್ರಚ್ಛಾದಯಂತೌ ತು ವವೃಧಾತೇ ಮಹಾಸುರೌ ||೧-೫೨-೨೩

ಸಾಧು ಬ್ರಹ್ಮನಿಂದ ಪ್ರಚೋದಿತನಾದ ಸ್ವಯಂ ವಾಯುವು ಆ ಎರಡು ಮೂರ್ತಿಗಳನ್ನೂ ಪ್ರವೇಶಿಸಿದನು. ಅದರಿಂದ ದಿವವನ್ನು ಮುಚ್ಚಿಬಿಡುತ್ತಿರುವರೋ ಎಂಬಂತೆ ಇಬ್ಬರು ಮಹಾಸುರರು ಬೆಳೆದರು.

ವಾಯುಪ್ರಾಣೌ ತು ತೌ ಗೃಹ್ಯ ಬ್ರಹ್ಮಾ ಪರ್ಯಮೃಶಚ್ಛನೈಃ |

ಏಕಂ ಮೃದುತರಂ ಮೇನೇ ಕಠಿನಂ ವೇದ ಚಾಪರಮ್ ||೧-೫೨-೨೪

ವಾಯುವಿನಿಂದ ಪ್ರಾಣಗಳನ್ನು ಪಡೆದುಕೊಂಡ ಅವರಿಬ್ಬರನ್ನು ಎತ್ತಿಹಿಡಿದು ಬ್ರಹ್ಮನು ಮೆಲ್ಲನೇ ಅವರ ಅಂಗಾಂಗಗಳನ್ನು ಸವರತೊಡಗಿದನು. ಅವುಗಳಲ್ಲಿ ಒಬ್ಬನ ಶರೀರವು ಅತ್ಯಂತ ಮೃದುವಾಗಿತ್ತು ಮತ್ತು ಇನ್ನೊಬ್ಬನ ಶರೀರವು ಅತ್ಯಂತ ಕಠಿಣವಾಗಿತ್ತು.

ನಾಮನೀ ತು ತಯೋಶ್ಚಕ್ರೇ ಸ ವಿಭುಃ ಸಲಿಲೋದ್ಭವಃ |

ಮೃದುಸ್ತ್ವಯಂ ಮಧುರ್ನಾಮ ಕಠಿನಃ ಕೈಟಭೋಽಭವತ್ ||೧-೫೨-೨೫

ಸಲಿಲೋದ್ಭವ ವಿಭುವು ಅವರಿಗೆ ಹೆಸರನ್ನಿಟ್ಟನು: ಮೃದುವಾಗಿರುವವನ ಹೆಸರು ಮಧು ಎಂದಾಯಿತು ಮತ್ತು ಕಠಿಣನಾಗಿರುವವನ ಹೆಸರು ಕೈಟಭ ಎಂದಾಯಿತು.

ತೌ ದೈತ್ಯೌ ಕೃತನಾಮಾನೌ ಚೇರತುರ್ಬಲದರ್ಪಿತೌ |

ಸರ್ವಮೇಕಾರ್ಣವಂ ಲೋಕಂ ಯೋದ್ಧುಕಾಮೌ ಸುದುರ್ಜಯೌ ||೧-೫೨-೨೬

ನಾಮಕರಣಗಳನ್ನು ಮಾಡಿಸಿಕೊಂಡ ಆ ಇಬ್ಬರು ಸುದುರ್ಜಯ ದೈತ್ಯರೂ ಬಲದರ್ಪಿತರಾಗಿ ಯುದ್ಧವನ್ನು ಬಯಸಿ ಏಕಾರ್ಣವ ಲೋಕಗಳೆಲ್ಲಾ ಸಂಚರಿಸತೊಡಗಿದರು.

ತಾವಾಗತೌ ಸಮಾಲೋಕ್ಯ ಬ್ರಹ್ಮಾ ಲೋಕಪಿತಾಮಹಃ |

ಏಕಾರ್ಣವಾಂಬುನಿಚಯೇ ತತ್ರೈವಾಂತರಧೀಯತ ||೧-೫೨-೨೭

ಆಗಮಿಸಿದ ಅವರಿಬ್ಬರನ್ನೂ ನೋಡಿ ಲೋಕಪಿತಾಮಹ ಬ್ರಹ್ಮನು ಏಕಾರ್ಣವದ ಜಲರಾಶಿಯಲ್ಲಿಯೇ ಅಂತರ್ಧಾನನಾದನು.

ಸ ಪದ್ಮೇ ಪದ್ಮನಾಭಸ್ಯ ನಾಭಿಮಧ್ಯಾತ್ಸಮುತ್ಥಿತೇ |

ರೋಚಯಾಮಾಸ ವಸತಿಂ ಗುಹ್ಯಾಂ ಬ್ರಹ್ಮಾ ಚತುರ್ಮುಖಃ ||೧-೫೨-೨೮

ಚತುರ್ಮುಖ ಬ್ರಹ್ಮನು ಪದ್ಮನಾಭನ ನಾಭಿಮಧ್ಯದಿಂದ ಮೇಲೆದ್ದಿದ್ದ ಪದ್ಮದಲ್ಲಿ ಗುಪ್ತನಾಗಿ ವಾಸಮಾಡಲಿಚ್ಛಿಸಿದನು.

ತಾವುಭೌ ಜಲಗರ್ಭಸ್ಥೌ ನಾರಾಯಣಪಿತಾಮಹೌ |

ಬಹೂನ್ವರ್ಷಗಣಾನಪ್ಸು ಶಯಾನೌ ನ ಚಕಂಪತುಃ ||೧-೫೨-೨೯

ನಾರಾಯಣ ಮತ್ತು ಪಿತಾಮಹರು ಜಲಗರ್ಭಸ್ಥರಾಗಿದ್ದಾಗ ಆ ಇಬ್ಬರು ದೈತ್ಯರೂ ಅನೇಕ ವರ್ಷಗಳ ಕಾಲ ಜಲದಮೇಲೆಯೇ ಮಲಗಿದರು. ಹಂದಾಡಲೂ ಇಲ್ಲ.

ಅಥ ದೀರ್ಘಸ್ಯ ಕಾಲಸ್ಯ ತಾವುಭೌ ಮಧುಕೈಟಭೌ |

ಆಜಗ್ಮತುಸ್ತಮುದ್ದೇಶಂ ಯತ್ರ ಬ್ರಹ್ಮಾ ವ್ಯವಸ್ಥಿತಃ ||೧-೫೨-೩೦

ದೀರ್ಘಕಾಲದ ನಂತರ ಮಧುಕೈಟಭರಿಬ್ಬರೂ ಬ್ರಹ್ಮನು ವ್ಯವಸ್ಥಿತನಾಗಿದ್ದ ಪ್ರದೇಶಕ್ಕೆ ಬಂದರು.

ದೃಷ್ಟ್ವಾ ತಾವಸುರೌ ಘೋರೌ ಮಹಾಕಾಯೌ ದುರಾಸದೌ |

ಬ್ರಹ್ಮಣಾ ತಾಡಿತೋ ವಿಷ್ಣುಃ ಪದ್ಮನಾಲೇನ ವೈ ತದಾ |

ಉತ್ಪಪಾತಾಥ ಶಯನಾತ್ಪದ್ಮನಾಭೋ ಮಹಾದ್ಯುತಿಃ ||೧-೫೨-೩೧

ದುರಾಸದರೂ ಮಹಾಕಾಯರೂ ಆದ ಆ ಘೋರ ಅಸುರರನ್ನು ನೋಡಿ ಬ್ರಹ್ಮನು ಪದ್ಮನಾಲದಿಂದ ವಿಷ್ಣುವನ್ನು ಹೊಡೆದು ಎಬ್ಬಿಸಿದನು. ಆಗ ಮಹಾದ್ಯುತಿ ಪದ್ಮನಾಭನು ನಿದ್ರೆಯಿಂದ ಎಚ್ಚೆದ್ದನು.

ತದ್ಯುದ್ಧಮಭವದ್ಘೋರಂ ತಯೋಸ್ತಸ್ಯ ಚ ವೈ ತದಾ |

ಏಕಾರ್ಣವೇ ತದಾ ಲೋಕೇ ತ್ರೈಲೋಕ್ಯೇ ಜಲತಾಂ ಗತೇ ||೧-೫೨-೩೨

ಮೂರೂ ಲೋಕಗಳೂ ಜಲಮಯವಾಗಿದ್ದ ಆ ಏಕಾರ್ಣವ ಲೋಕದಲ್ಲಿ ಆಗ ಅವರಿಬ್ಬರು ಮತ್ತು ವಿಷ್ಣುವಿನ ನಡುವೆ ಘೋರ ಯುದ್ಧವು ನಡೆಯಿತು.

ತದಾಭೂತ್ತುಮುಲಂ ಯುದ್ಧಂ ವರ್ಷಸಂಖ್ಯಾಸಹಸ್ರಶಃ |

ನ ಚ ತಾವಸುರೌ ಯುದ್ಧೇ ತದಾ ಶ್ರಮಮವಾಪತುಃ ||೧-೫೨-೩೩

ಸಹಸ್ರಸಂಖ್ಯೆಗಳ ವರ್ಷಗಳ ಪರ್ಯಂತ ತುಮುಲ ಯುದ್ಧವು ನಡೆಯಿತು. ಆದರೂ ಆ ಇಬ್ಬರು ಅಸುರರು ಯುದ್ಧದಲ್ಲಿ ಬಳಲಲಿಲ್ಲ.

ಅಥಾತೋ ದೀರ್ಘಕಾಲಸ್ಯ ತೌ ದೈತ್ಯೌ ಯುದ್ಧದುರ್ಮದೌ |

ಊಚತುಃ ಪ್ರೀತಮನಸೌ ದೇವಂ ನಾರಾಯಣಂ ಹರಿಮ್ ||೧-೫೨-೩೪

ದೀರ್ಘಕಾಲದ ನಂತರ ಆ ಯುದ್ಧದುರ್ಮದ ದೈತ್ಯರಿಬ್ಬರೂ ಪ್ರೀತರಾಗಿ ದೇವ ನಾರಾಯಣ ಹರಿಗೆ ಹೇಳಿದರು:

ಪ್ರೀತೌ ಸ್ವಸ್ತವ ಯುದ್ಧೇನ ಶ್ಲಾಘ್ಯಸ್ತ್ವಂ ಮೃತ್ಯುರಾವಯೋಃ |

ಆವಾಂ ಜಹಿ ನ ಯತ್ರೋರ್ವೀ ಸಲಿಲೇನ ಪರಿಪ್ಲುತಾ ||೧-೫೨-೩೫

“ನಿನ್ನ ಈ ಯುದ್ಧದಿಂದ ನಾವಿಬ್ಬರೂ ಪಿತರಾಗಿದ್ದೇವೆ. ನಿನ್ನಿಂದ ಶ್ಲಾಘನೀಯ ಮೃತ್ಯುವನ್ನು ಬಯಸುತ್ತೇವೆ. ಎಲ್ಲಿ ಉರ್ವಿಯು ಜಲದಲ್ಲಿ ಮುಳುಗಿಲ್ಲವೋ ಅಲ್ಲಿ ನಮ್ಮನ್ನು ವಧಿಸು.

ಹತೌ ಚ ತವ ಪುತ್ರತ್ವಂ ಪ್ರಾಪ್ನುಯಾವಃ ಸುರೋತ್ತಮ |

ಯೋ ಹ್ಯಾವಾಂ ಯುಧಿ ನಿರ್ಜೇತಾ ತಸ್ಯಾವಾಂ ವಿಹಿತೌ ಸುತೌ ||೧-೫೨-೩೬

ಸುರೋತ್ತಮ! ಹತರಾದ ನಾವು ನಿನ್ನ ಪುತ್ರತ್ವವನ್ನು ಪಡೆದುಕೊಳ್ಳುತ್ತೇವೆ. ನಾವು ಯುದ್ಧದಲ್ಲಿ ನಮ್ಮನ್ನು ಜಯಿಸುವವನ ಪುತ್ರರಾಗುತ್ತೇವೆ ಎಂದು ವಿಹಿತವಾಗಿದೆ.”

ಸ ತು ಗೃಹ್ಯ ಮೃಧೇ ದೋರ್ಭ್ಯಾಂ ದೈತ್ಯೌ ತಾವಭ್ಯಪೀಡಯತ್ |

ಜಗ್ಮತುರ್ನಿಧನಂ ಚಾಪಿ ತಾವುಭೌ ಮಧುಕೈಟಭೌ ||೧-೫೨-೩೭

ಆಗ ಅವನು ಯುದ್ಧದಲ್ಲಿ ಅವರಿಬ್ಬರು ದೈತ್ಯರನ್ನೂ ಹಿಡಿದು ಪೀಡಿಸಿದನು. ಇದರಿಂದ ಮಧುಕೈಟಭರಿಬ್ಬರೂ ನಿಧನ ಹೊಂದಿದರು.

ತೌ ಹತೌ ಚಾಪ್ಲುತೌ ತೋಯೇ ವಪುರ್ಭ್ಯಾಮೇಕತಾಂ ಗತೌ |

ಮೇದೋ ಮುಮುಚತುರ್ದೈತ್ಯೌ ಮಥ್ಯಮಾನೌ ಜಲೋರ್ಮಿಭಿಃ ||೧-೫೨-೩೮

ಮೇದಸಾ ತಜ್ಜಲಂ ವ್ಯಾಪ್ತಂ ತಾಭ್ಯಾಮಂತರ್ದಧೇಽನಘಃ |

ನಾರಾಯಣಶ್ಚ ಭಗವಾನಸೃಜತ್ಸ ಪುನಃ ಪ್ರಜಾಃ ||೧-೫೨-೩೯

ಹತರಾಗಲು ಅವರಿಬ್ಬರ ಶರೀರಗಳು ನೀರಿನಲ್ಲಿ ಒಂದಾದವು. ನಂತರ ಜಲದ ಅಲೆಗಳಿಂದ ಮಥಿಸಲ್ಪಟ್ಟು ಆ ಇಬ್ಬರು ದೈತ್ಯರೂ ಬಿಟ್ಟ ಮೇದಸ್ಸು ಹರಡಿದಲ್ಲೆಲ್ಲಾ ನೀರು ಇಲ್ಲದಂತಾಯಿತು. ಅದರ ಮೇಲೆಯೇ ಭಗವಾನ್ ನಾರಾಯಣನು ಪುನಃ ಪ್ರಜೆಗಳನ್ನು ಸೃಷ್ಟಿಸಿದನು.

ದೈತ್ಯಯೋರ್ಮೇಧಸಾ ಚ್ಛನ್ನಾ ಮೇದಿನೀತಿ ತತಃ ಸ್ಮೃತಾ |

ಪ್ರಭಾವಾತ್ಪದ್ಮನಾಭಸ್ಯ ಶಾಶ್ವತೀ ಜಗತೀ ಕೃತಾ ||೧-೫೨-೪೦

ದೈತ್ಯರ ಮೇಧಸ್ಸಿನಿಂದ ಮುಚ್ಚಲ್ಪಟ್ಟಿದುದರಿಂದ ಮೇದಿನಿ ಎಂದು ಕರೆಯಲ್ಪಟ್ಟಿತು. ಪದ್ಮನಾಭನ ಪ್ರಭಾವದಿಂದ ಇದು ಜಗತ್ತಿಗೆ ಶಾಶತ ಆಧಾರವಾಯಿತು.

ವಾರಾಹೇಣ ಪುರಾ ಭೂತ್ವಾ ಮಾರ್ಕಂಡೇಯಸ್ಯ ಪಶ್ಯತಃ |

ವಿಷಾಣೇನಾಹಮೇಕೇನ ತೋಯಮಧ್ಯಾತ್ಸಮುದ್ಧೃತಾ ||೧-೫೨-೪೧

ಹಿಂದೆ ವಾರಾಹರೂಪವನ್ನು ಧರಿಸಿ ಇದೇ ಭಗವಾನ್ ನಾರಾಯಣನು ಮಾರ್ಕಂಡೇಯನು ನೋಡುತ್ತಿದ್ದಂತೆಯೇ ನನ್ನನ್ನು ಒಂದು ಕೋರೆದಾಡೆಯಿಂದ ಹಿಡಿದು ನೀರಿನೊಳಗಿಂದ ಮೇಲೆತ್ತಿದ್ದನು.

ಹೃತಾಹಂ ಕ್ರಮತೋ ಭೂಯಸ್ತದಾ ಯುಷ್ಮಾಕಮಗ್ರತಃ |

ಬಲೇಃ ಸಕಾಶಾದ್ದೈತ್ಯಸ ವಿಷ್ಣುನಾ ಪ್ರಭವಿಷ್ಣುನಾ ||೧-೫೨-೪೨

ಮತ್ತೆ ಇನ್ನೊಮ್ಮೆ ನಿಮ್ಮೆಲ್ಲರ ಎದುರಿಗೆ ವಿಷ್ಣು ಪ್ರಭುವಿಷ್ಣುವು ತ್ರಿವಿಕ್ರಮನಾಗಿ ಬಲಿಯ ಬಳಿಯಿಂದ ನನ್ನನ್ನು ಅಪಹರಿಸಿದನು.

ಸಾಂಪ್ರತಂ ಖಿದ್ಯಮಾನಾಹಮೇನಮೇವ ಗದಾಧರಮ್ |

ಅನಾಥಾ ಜಗತೋ ನಾಥಂ ಶರಣ್ಯಂ ಶರಣಂ ಗತಾ ||೧-೫೨-೪೩

ಈಗಲೂ ಕೂಡ ಅತ್ಯಂತ ಕಷ್ಟದಲ್ಲಿ ಬಿದ್ದು ಅನಾಥಳಂತಾಗಿದ್ದೇನೆ ಮತ್ತು ಅದೇ ಶರಣ್ಯ ಜಗನ್ನಾಥ ಗದಾಧರನ ಶರಣು ಬಂದಿದ್ದೇನೆ.

ಅಗ್ನಿಃ ಸುವರ್ಣಸ್ಯ ಗುರುರ್ಗವಾಂ ಸೂರ್ಯೋ ಗುರುಃ ಸ್ಮೃತಃ |

ನಕ್ಷತ್ರಾಣಾಂ ಗುರುಃ ಸೋಮೋ ಮಮ ನಾರಾಯಣೋ ಗುರುಃ ||೧-೫೨-೪೪

ಅಗ್ನಿಯು ಸುವರ್ಣದ ಗುರು. ಸೂರ್ಯನು ಕಿರಣಗಳಿಗೆ ಗುರು. ನಕ್ಷತ್ರಗಳ ಗುರು ಸೋಮ. ನನಗೆ ನಾರಾಯಣನು ಗುರು.

ಯದಹಂ ಧಾರಯಾಮ್ಯೇಕಾ ಜಗತ್ಸ್ಥಾವರಜಂಗಮಂ |

ಮಯಾ ಧೃತಂ ಧಾರಯತೇ ಸರ್ವಮೇತದ್ಗದಾಧರಃ ||೧-೫೨-೪೫

ನಾನೊಬ್ಬಳೇ ಹೊತ್ತಿರುವ ಈ ಸ್ಥಾವರಜಂಗಮ ಜಗತ್ತನ್ನೂ ಮತ್ತು ನನ್ನನ್ನೂ ಎಲ್ಲವನ್ನೂ ಗದಾಧರನು ಧರಿಸಿಕೊಂಡಿದ್ದಾನೆ.

ಜಾಮದಗ್ನ್ಯೇನ ರಾಮೇಣ ಭಾರಾವತರಣೇಪ್ಸಯಾ |

ರೋಷಾತ್ತ್ರಿಃಸಪ್ತಕ್ರಿತ್ತ್ವೋಹಂ ಕ್ಷತ್ರಿಯೈರ್ವಿಪ್ರಯೋಜಿತಾ ||೧-೫೨-೪೬

ನನ್ನ ಭಾರವನ್ನು ಹಗುರಗೊಳಿಸಲೋಸುಗ ರೋಷದಿಂದ ಇವನು ಜಾಮದಗ್ನಿ ರಾಮನಾಗಿ ಇಪ್ಪತೊಂದು ಬಾರಿ ನನ್ನನ್ನು ಕ್ಷತ್ರಿಯರಿಲ್ಲದಂತೆ ಮಾಡಿದ್ದನು.

ಸಾಽಸ್ಮಿ ವೇದ್ಯಾಂ ಸಮಾರೋಪ್ಯ ತರ್ಪಿತಾ ನೃಪಶೋಣಿತೈಃ |

ಭಾರ್ಗವೇಣ ಪಿತುಃ ಶ್ರಾದ್ಧೇ ಕಶ್ಯಪಾಯ ನಿವೇದಿತಾ ||೧-೫೨-೪೭

ಆ ರಣಯಜ್ಞದ ವೇದಿಯಲ್ಲಿ ನನ್ನನ್ನು ಪ್ರತಿಷ್ಠಾಪಿಸಿ ಆ ಭಾರ್ಗವನು ನೃಪರ ರಕ್ತದಿಂದ ಅವನು ತೃಪ್ತಿಪಡಿಸಿದ್ದನು ಮತ್ತು ಪಿತೃಶ್ರಾದ್ಧದಲ್ಲಿ ನನ್ನನ್ನು ಕಶ್ಯಪನಿಗೆ ದಾನವನ್ನಾಗಿತ್ತಿದ್ದನು.

ಮಾಮ್ಸಮೇದೋಸ್ಥಿದುರ್ಗಂಧಾ ದಿಗ್ಧಾ ಕ್ಷತ್ರಿಯಶೋಣಿತೈಃ |

ರಜಸ್ವಲೇವ ಯುವತಿಃ ಕಶ್ಯಪಂ ಸಮುಪಸ್ಥಿತಾ ||೧-೫೨-೪೮

ಕ್ಷತ್ರಿಯರ ರಕ್ತದಿಂದ ತೋಯ್ದುಹೋಗಿದ್ದ, ಮಾಂಸ-ಮೇದ-ಅಸ್ಥಿಗಳ ದುರ್ಗಂಧದಿಂದ ಕೂಡಿದ್ದ ನಾನು ರಜಸ್ವಲೆಯಾಗಿದ್ದ ಯುವತಿಯಂತೆ ಕಾಣುತ್ತಾ ಕಶ್ಯಪನ ಸೇವೆಯಲ್ಲಿ ಉಪಸ್ಥಿತಳಾಗಿದ್ದೆ.

ಸ ಮಾಂ ಬ್ರಹ್ಮರ್ಷಿರಪ್ಯಾಹ ಕಿಮುರ್ವಿ ತ್ವಮವಾಙ್ಮುಖೀ |

ವೀರಪತ್ನೀವ್ರತಮಿದಂ ಧಾರಯಂತೀ ವಿಷೀದಸಿ ||೧-೫೨-೪೯

ಆ ಬ್ರಹ್ಮರ್ಷಿ ಕಶ್ಯಪನು ನನಗೆ ಹೇಳಿದ್ದನು: “ಉರ್ವೀ! ನೀನು ತಲೆತಗ್ಗಿಸಿರುವೆಯೇಕೆ? ವೀರಪತ್ನಿಯ ಈ ವ್ರತವನ್ನು ಧರಿಸಿ ವಿಷಾದಿಸುತ್ತಿದ್ದೀಯೆ ಏಕೆ?”

ಸಾಹಂ ವಿಜ್ಞಾಪಿತವತೀ ಕಶ್ಯಪಂ ಲೋಕಭಾವನಮ್ |

ಪತಯೋ ಮೇ ಹತಾ ಬ್ರಹ್ಮನ್ಭಾರ್ಗವೇಣ ಮಹಾತ್ಮನಾ ||೧-೫೨-೫೦

ಆಗ ನಾನು ಲೋಕಭಾವನ ಕಶ್ಯಪನಿಗೆ ವಿಜ್ಞಾಪಿಸಿದ್ದೆನು: “ಬ್ರಹ್ಮನ್! ಮಹಾತ್ಮ ಭಾರ್ಗವನು ನನ್ನ ಪತಿಗಳನ್ನು ಸಂಹರಿಸಿದ್ದಾನೆ.

ಸಾಹಂ ವಿಹೀನಾ ವಿಕ್ರಾಂತೈಃ ಕ್ಷತ್ರಿಯೈಃ ಶಸ್ತ್ರವೃತ್ತಿಭಿಃ |

ವಿಧವಾ ಶೂನ್ಯನಗರಾ ನ ಧಾರಯಿತುಮುತ್ಸಹೇ ||೧-೫೨-೫೧

ಶಸ್ತ್ರವೃತ್ತಿಯಲ್ಲಿದ್ದ ವಿಕ್ರಾಂತ ಕ್ಷತ್ರಿಯರಿಂದ ನಾನು ವಿಹೀನಳಾಗಿ ವಿಧವೆಯಾಗಿಬಿಟ್ಟಿದ್ದೇನೆ. ರಾಜರಿಂದ ಶೂನ್ಯವಾದ ನಗರಗಳನ್ನು ಧರಿಸಲು ಇಚ್ಛಿಸುವುದಿಲ್ಲ.

ತನ್ಮಹ್ಯಂ ದೀಯತಾಂ ಭರ್ತಾ ಭಗವಂಸ್ತ್ವತ್ಸಮೋ ನೃಪಃ |

ರಕ್ಷೇತ್ಸಗ್ರಾಮನಗರಾಂ ಯೋ ಮಾಂ ಸಾಗರಮಾಲಿನೀಮ್ ||೧-೫೨-೫೨

ಭಗವನ್! ಸಾಗರ ಮಾಲಿನಿಯಾದ ಮತ್ತು ಗ್ರಾಮನಗರಗಳಿಂದ ಕೂಡಿದ ನನ್ನನ್ನು ರಕ್ಷಿಸಬಲ್ಲ ನಿನ್ನ ಸಮನಾಗಿರುವ ಭರ್ತಾ ನೃಪನನ್ನು ನೀಡು.”

ಸ ಶ್ರುತ್ವಾ ಭಗವಾನ್ವಾಕ್ಯಂ ಬಾಢಮಿತ್ಯಬ್ರವೀತ್ಪ್ರಭುಃ |

ತತೋ ಮಾಂ ಮಾನವೇಂದ್ರಾಯ ಮನವೇ ಸ ಪ್ರದತ್ತವಾನ್ ||೧-೫೨-೫೩

ನನ್ನ ಮಾತನ್ನು ಕೇಳಿ ಭಗವಾನ್ ಪ್ರಭುವು ಒಳ್ಳೆಯದು ಎಂದು ಹೇಳಿ ನನಗೆ ಮಾನವೇಂದ್ರ ಮನುವನ್ನು ನೀಡಿದ್ದನು.

ಸಾ ಮನುಪ್ರಭವಂ ದಿವ್ಯಂ ಪ್ರಾಪ್ಯೇಕ್ಷ್ವಾಕುಕುಲಂ ನೃಪಮ್ |

ವಿಪುಲೇನಾಸ್ಮಿ ಕಾಲೇನ ಪಾರ್ಥಿವಾತ್ಪಾರ್ಥಿವಂ ಗತಾ ||೧-೫೨-೫೪

ವೈವಸ್ವತ ಮನುವಿನಿಂದ ಹುಟ್ಟಿದ್ದ ಆ ಇಕ್ಷ್ವಾಕುನೃಪನ ಕುಲವನ್ನು ನಾನು ಪಡೆದುಕೊಂಡೆನು. ದೀರ್ಘಕಾಲದವರೆಗೆ ಆ ಕುಲದ ಒಬ್ಬ ಪಾರ್ಥಿವನಿಂದ ಇನ್ನೊಬ್ಬ ಪಾರ್ಥಿವನ ಬಳಿಯಲ್ಲಿದ್ದೆ.

ಏವಂ ದತ್ತಾಸ್ಮಿ ಮನವೇ ಮಾನವೇಂದ್ರಾಯ ಧೀಮತೇ |

ಭುಕ್ತಾ ರಾಜಸಹಸ್ರೈಶ್ಚ ಮಹರ್ಷಿಕುಲಸಂಮಿತೈಃ ||೧-೫೨-೫೫

ಹೀಗೆ ಧೀಮತ್ ರಾಜ ಮನುವಿಗೆ ಕೊಡಲ್ಪಟ್ಟ ನಾನು ಸಹಸ್ರಾರು ಮಹರ್ಷಿಕುಲಸಂಮಿತ ರಾಜರ ಉಪಭೋಗ್ಯಳಾದೆ.

ಬಹವಃ ಕ್ಷತ್ರಿಯಾಃ ಶೂರಾ ಮಾಂ ಜಿತ್ವಾ ದಿವಮಾಶ್ರಿತಾಃ |

ತೇ ಚ ಕಾಲವಶಂ ಪ್ರಾಪ್ಯ ಮಯ್ಯೇವ ಪ್ರಲಯಂ ಗತಾಃ ||೧-೫೨-೫೬

ಅನೇಕ ಕ್ಷತ್ರಿಯ ಶೂರರು ನನ್ನನ್ನು ಗೆದ್ದು ದಿವವನ್ನು ಆಶ್ರಯಿಸಿದ್ದಾರೆ. ಅವರು ಕಾಲವಶರಾಗಿ ನನ್ನಲ್ಲಿಯೇ ಲಯಹೊಂದಿದರು.

ಮತ್ಕೃತೇ ವಿಗ್ರಹಾ ಲೋಕೇ ವೃತ್ತಾ ವರ್ತಂತ ಏವ ಚ |

ಕ್ಷತ್ರಿಯಾಣಾಂ ಬಲವತಾಂ ಸಂಗ್ರಾಮೇಷ್ವನಿವರ್ತಿನಾಮ್ ||೧-೫೨-೫೭

ಲೋಕದಲ್ಲಿ ನನಗಾಗಿಯೇ ಸಂಗ್ರಾಮದಿಂದ ಪಲಾಯನಮಾಡದಿದ್ದ ಬಲವಂತ ಕ್ಷತ್ರಿಯರ ನಡುವೆ ಯುದ್ಧವು ನಡೆಯಿತು ಮತ್ತು ನಡೆಯುತ್ತಿದೆ.

ಏತದ್ಯುಷ್ಮತ್ಪ್ರವೃತ್ತೇನ ದೈವೇನ ಪರಿಪಾಲ್ಯತೇ |

ಜಗದ್ಧಿತಾರ್ಥಂ ಕುರುತ ರಾಜ್ಞಾಂ ಹೇತುಂ ರಣಕ್ಷಯೇ ||೧-೫೨-೫೮

ನಿಮ್ಮ ಪ್ರವೃತ್ತಿಯ ದೈವದಿಂದ ಈ ಜಗತ್ತು ಪರಿಪಾಲಿತಗೊಂಡಿದೆ. ಆದುದರಿಂದ ನೀವು ಜಗತ್ತಿನ ಹಿತಕ್ಕಾಗಿ ರಣದಲ್ಲಿ ರಾಜರ ಕ್ಷಯವಾಗುವಂತೆ ಮಾಡಿ.

ಯದ್ಯಸ್ತಿ ಮಯಿ ಕಾರುಣ್ಯಂ ಭಾರಶೈಥಿಲ್ಯಕಾರಣಾತ್ |

ಏಕಶ್ಚಕ್ರಧರಃ ಶ್ರೀಮಾನಭಯಂ ಮೇ ಪ್ರಯಚ್ಛತು ||೧-೫೨-೫೯

ನನ್ನಮೇಲೆ ಕಾರುಣ್ಯಭಾವವಿದ್ದರೆ ಚಕ್ರಧರ ಶೀಮಾನ್ ವಿಷ್ಣುವು ಭಾರವನ್ನು ಕಡಿಮೆಮಾಡುವ ಕಾರಣದಿಂದ ನನಗೆ ಅಭಯವನ್ನು ನೀಡಲಿ.

ಯಮಹಂ ಭಾರಸಂತಪ್ತಾ ಸಂಪ್ರಾಪ್ತಾ ಶರಣಾರ್ಥಿನೀ |

ಭಾರೋ ಯದ್ಯವರೋಪ್ತವ್ಯೋ ವಿಷ್ಣುರೇಷ ಬ್ರವೀತು ಮಾಮ್ ||೧-೫೨-೬೦

ಭಾರದಿಂದ ಸಂತಪ್ತಳಾಗಿ ಶರಣಾರ್ಥಿನಿಯಾಗಿ ಯಾರ ಬಳಿ ಬಂದಿದ್ದೇನೋ ಆ ವಿಷ್ಣುವು ನನ್ನ ಭಾರವನ್ನು ಇಳಿಸುವುದು ಉಚಿತವೆಂದು ತಿಳಿದರೆ ನನಗೆ ಆಶ್ವಾಸನೆಯನ್ನು ನೀಡಲಿ.””

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಧರಣೀವಾಕ್ಯೇ ದ್ವಿಪಂಚಾಶತ್ತಮೋಽಧ್ಯಾಯಃ |

 

[1] ಅವನ ಜಟಾಮಂಡಲಮಂಡಿತ ಉದರಭಾಗವು ಮುಕ್ತಾಮಣಿಯ ಮಾಲೆಯು ಬೆಳಗಿ ಚಂದ್ರಮನ ಪ್ರಭಾಯುಕ್ತ ಮೇಘದ ಸಮಾನ ಕಾಂತಿಯುಕ್ತವಾಗಿತ್ತು. ಆ ಉದರವನ್ನು ಧರಿಸಿದ್ದ ಭಗವಾನ್ ಶ್ರೀಹರಿಯು ಅಪೂರ್ವ ಶೋಭಸಂಪನ್ನನಾಗಿ ಕಾಣುತ್ತಿದ್ದನು (ಗೀತಾ ಪ್ರೆಸ್).

[2] ಅವನ ವಿಸ್ತೃತ ವಕ್ಷಸ್ಥಲದಲ್ಲಿ ರೋಮಾಂಚಕಾರಯುಕ್ತ ಶೋಭೆಯ ಶ್ರೀವತ್ಸವು ಎರಡೂ ಸ್ತನಗಳ ಮುಖಗಳ ವರೆಗೆ ಹರಡಿ ಉದ್ಭಾಸಿಸುತ್ತಿತ್ತು (ಗೀತಾ ಪ್ರೆಸ್).

Comments are closed.