ಹರಿವಂಶ: ಹರಿವಂಶ ಪರ್ವ
Contents
Toggle೪೫
ದೇವಾಸುರಸಂಗ್ರಾಮವರ್ಣನಮ್
ದೇವಾಸುರಸಂಗ್ರಾಮ ಮತ್ತು ಔರ್ವ ಅಗ್ನಿಯ ಉತ್ಪತ್ತಿ (೧-೭೭).
ವೈಶಂಪಾಯನ ಉವಾಚ |
ತಾಭ್ಯಾಂ ಬಲಾಭ್ಯಾಂ ಸಂಜಜ್ಞೇ ತುಮುಲೋ ವಿಗ್ರಹಸ್ತದಾ |
ಸುರಾಣಾಮಸುರಾಣಾಂ ಚ ಪರಸ್ಪರಜಯೈಷಿಣಾಮ್ ||೧-೪೫-೧
ವೈಶಂಪಾಯನನು ಹೇಳಿದನು: “ಆಗ ಪರಸ್ಪರರನ್ನು ಜಯಿಸಲು ಬಯಸಿದ್ದ ಆ ಸುರ ಮತ್ತು ಅಸುರಸೇನೆಗಳ ತುಮುಲಯುದ್ಧವು ಪ್ರಾರಂಭವಾಯಿತು.
ದಾನವಾ ದೈವತೈಃ ಸಾರ್ಧಂ ನಾನಾಪ್ರಹರಣೋದ್ಯತಾಃ |
ಸಮೀಯುರ್ಯುಧ್ಯಮಾನಾ ವೈ ಪರ್ವತಾಃ ಪರ್ವತೈರಿವ ||೧-೪೫-೨
ನಾನಾಪ್ರಹರಣಗಳನ್ನು ಮೇಲೆತ್ತಿ ದಾನವರು ಪರ್ವತಗಳು ಪರ್ವತಗಳೊಡನೆ ಯುದ್ಧಮಾಡುತ್ತಿರುವವೋ ಎನ್ನುವಂತೆ ದೇವತೆಗಳೊಡನೆ ಯುದ್ಧಮಾಡತೊಡಗಿದರು.
ತತ್ಸುರಾಸುರಸಂಯುಕ್ತಂ ಯುದ್ಧಮತ್ಯದ್ಭುತಂ ಬಭೌ |
ಧರ್ಮಾಧರ್ಮಸಮಾಯುಕ್ತಂ ದರ್ಪೇಣ ವಿನಯೇನ ಚ ||೧-೪೫-೩
ಸುರಾಸುರಸಂಯುಕ್ತವಾಗಿದ್ದ ಆ ಯುದ್ಧವು ಧರ್ಮ ಮತ್ತು ಅಧರ್ಮಗಳು ಯುದ್ಧಮಾಡುತ್ತಿವೆಯೋ ಅಥಾವ ದರ್ಪವು ವಿನಯೊಂದಿಗೆ ಯುದ್ಧಮಾಡುತ್ತಿವೆಯೋ ಎಂಬಂತೆ ಅತ್ಯದ್ಭುತವಾಗಿತ್ತು.
ತತೋ ರಥೈಃ ಪ್ರಜವಿಭಿರ್ವಾಹನೈಶ್ಚ ಪ್ರಚೋದಿತೈಃ |
ಉತ್ಪತದ್ಭಿಶ್ಚ ಗಗನಂ ಸಾಸಿಹಸ್ತೈಃ ಸಮಂತತಃ ||೧-೪೫-೪
ವಿಕ್ಷಿಪ್ಯಮಾಣೈರ್ಮುಸಲೈಃ ಸಂ ಪ್ರೇಷ್ಯದ್ಭಿಶ್ಚ ಸಾಯಕೈಃ |
ಚಾಪೈರ್ವಿಸ್ಫಾರ್ಯಮಾಣೈಶ್ಚ ಪಾತ್ಯಮಾನೈಶ್ಚ ಮುದ್ಗರೈಃ ||೧-೪೫-೫
ತದ್ಯುದ್ಧಮಭವದ್ಘೋರಂ ದೇವದಾನವಸಂಕುಲಮ್ |
ಜಗತಸ್ತ್ರಾಸಜನನಂ ಯುಗಸಂವರ್ತಕೋಪಮಮ್ ||೧-೪೫-೬
ಆಗ, ಪ್ರಜೋದಿತ ವಾಹನ-ರಥಗಳ ವೇಗದಿಂದ, ಎಲ್ಲಕಡೆ ಗಗನಕ್ಕೆ ಹಾರುತ್ತಿದ್ದ ಖಡ್ಗಧಾರಿಗಳಿಂದ, ಮುಸಲಗಳ ಎಸೆತದಿಂದ, ಸಾಯಕಗಳ ಪ್ರಯೋಗದಿಂದ, ಧನುಸ್ಸುಗಳ ಟೇಂಕಾರದಿಂದ, ಮುದ್ಗರಗಳು ಬೀಳುವುದರಿಂದ ದೇವ-ದಾನವರಿಂದ ತುಂಬಿಹೋಗಿದ್ದ ಆ ಘೋರ ರಣಭೂಮಿಯು ಪ್ರಲಯಕಾಲದ ಅಗ್ನಿಯಂತೆ ಸಂಪೂರ್ಣ ಜಗತ್ತನ್ನು ಭಯಪಡಿಸಿತು.
ಸ್ವಹಸ್ತಮುಕ್ತೈಃ ಪರಿಘೈಃ ಕ್ಷಿಪ್ಯಮಾಣೈಶ್ಚ ಪರ್ವತೈಃ |
ದಾನವಾ ಸಮರೇ ಜಘ್ನುರ್ದೇವಾನಿಂದ್ರಪುರೋಗಮಾನ್ ||೧-೪೫-೭
ಆ ಸಮರದಲ್ಲಿ ದಾನವರು ತಮ್ಮ ಕೈಗಳಿಂದ ಎಸೆಯಬಹುದಾದ ಪರ್ವತದಂಥಹ ಪರಿಘಗಳಿಂದ ಇಂದ್ರನ ನಾಯಕತ್ವದಲ್ಲಿದ್ದ ದೇವತೆಗಳನ್ನು ಗಾಯಗೊಳಿಸಿದರು.
ತೇ ವಧ್ಯಮಾನಾ ಬಲಿಭಿರ್ದಾನವೈರ್ಜಿತಕಾಶಿಭಿಃ |
ವಿಷಣ್ಣಮನಸೋ ದೇವಾ ಜಗ್ಮುರಾರ್ತಿಂ ಪರಾಮ್ಮೃಧೇ ||೧-೪೫-೮
ಜಿತಕಾಶೀ ಬಲಶಾಲೀ ದಾನವರಿಂದ ವಧಿಸಲ್ಪಡುತ್ತಿದ್ದ ದೇವತೆಗಳು ವಿಷಣ್ಣಮನಸ್ಕರಾದರು ಮತ್ತು ಯುದ್ಧದಲ್ಲಿ ಅತ್ಯಂತ ಪೀಡಿತರಾದರು.
ತೇಽಸ್ತ್ರಜಾಲೈಃ ಪ್ರಮಥಿತಾಃ ಪರಿಘೈರ್ಭಿನ್ನಮಸ್ತಕಾಃ |
ಭಿನ್ನೋರಸ್ಕಾ ದಿತಿಸುತೈರ್ವೇಮೂ ರಕ್ತಂ ವ್ರಣೈರ್ಬಹು ||೧-೪೫-೯
ದಿತಿಸುತರು ಅವರನ್ನು ಅಸ್ತ್ರಜಾಲಗಳಿಂದ ಪ್ರಮಥಿಸಿ ಪರಿಘಗಳಿಂದ ಅವರ ಮಸ್ತಕಗಳನ್ನು ಒಡೆದರು ಮತ್ತು ಎದೆಗಳನ್ನು ಸೀಳಿದರು. ಗಾಯಗೊಂಡವರು ಅಧಿಕ ರಕ್ತವನ್ನು ಸುರಿಸಿದರು.
ಸ್ಪಂದಿತಾಃ ಪಾಶಜಾಲೈಶ್ಚ ನಿಯತ್ನಾಶ್ಚ ಶರೈಃ ಕೃತಾಃ |
ಪ್ರವಿಷ್ಟ ದಾನವೀಂ ಮಾಯಾಂ ನ ಶೇಕುಸ್ತೇ ವಿಚೇಷ್ಟಿತುಮ್ ||೧-೪೫-೧೦
ದೈತ್ಯರು ಪಾಶಜಾಲ[1]ಗಳನ್ನು ಬೀಸಿ ದೇವತೆಗಳನ್ನು ನಿರುಪಾಯರನ್ನಾಗಿ[2] ಮಾಡಿದರು ಮತ್ತು ಬಾಣಗಳ ಪ್ರಯೋಗದಿಂದ ಅವರ ಅಂಗಾಂಗಗಳು ರಕ್ತಸುರಿಸುವಂತೆ ಗಾಯಗೊಳಿಸಿದರು.
ಸಂಸ್ತಂಭಿತಮಿವಾಭಾತಿ ನಿಷ್ಪ್ರಾಣಸದೃಶಾಕೃತಿ |
ಬಲಂ ಸುರಾಣಾಮಸುರೈರ್ನಿಷ್ಪ್ರಯತ್ನಾಯುಧಂ ಕೃತಮ್ ||೧-೪೫-೧೧
ದೇವತೆಗಳು ಸ್ತಂಭಿತರಾದಂತೆ ತೋರುತ್ತಿದ್ದರು. ಪ್ರಾಣರಹಿತ ಶವಗಳಂತೆ ತೋರುತ್ತಿದ್ದರು. ಅಸುರರು ಸುರಸೇನೆಯನ್ನು ನಿಷ್ಪ್ರಯತ್ನರನ್ನಾಗಿಯೂ ನಿರಾಯುಧರನ್ನಾಗಿಯೂ ಮಾಡಿದರು.
ಮಾಯಾಪಾಶಾನ್ವಿಕರ್ಷಂಶ್ಚ ಭಿಂದನ್ವಜ್ರೇಣ ತಾನ್ ಶರಾನ್ |
ಶಕ್ರೋ ದೈತ್ಯಬಲಂ ಘೋರಂ ವಿವೇಶ ಬಹುಲೋಚನಃ || ೧-೪೫-೧೨
ಆಗ ಬಹುಲೋಚನ ಶಕ್ರನು ವಜ್ರದಿಂದ ಆ ಮಾಯಾಪಾಶಗಳನ್ನು ಕಡಿಯುತ್ತಾ ಮತ್ತು ಶರಗಳನ್ನು ತುಂಡುಮಾಡುತ್ತಾ ಘೋರ ದೈತ್ಯಬಲವನ್ನು ಪ್ರವೇಶಿಸಿದನು.
ಸ ದೈತ್ಯಾನ್ಪ್ರಮುಖೇ ಹತ್ವಾ ತದ್ದಾನವಬಲಂ ಮಹತ್ |
ತಾಮಸೇನಾಸ್ತ್ರಜಾಲೇನ ತಮೋಭೂತಮಥಾಕರೋತ್ ||೧-೪೫-೧೩
ಅವನು ದೈತ್ಯಪ್ರಮುಖರನ್ನು ಸಂಹರಿಸಿ ಆ ಮಹಾ ದಾನವ ಬಲವನ್ನು ತಾಮಾಸ್ತ್ರದ ಜಾಲದಿಂದ ಅಂಧಕಾರಮಯವನ್ನಾಗಿಸಿದನು.
ತೇಽನ್ಯೋನ್ಯಂ ನಾವಬುಧ್ಯಂತ ದೇವಾನ್ವಾ ದಾನವಾನಪಿ |
ಘೋರೇಣ ತಮಸಾವಿಷ್ಟಾಃ ಪುರುಹೂತಸ್ಯ ತೇಜಸಾ ||೧-೪೫-೧೪
ಪುರುಹೂತನ ತೇಜಸ್ಸಿನಿಂದ ಘೋರ ಅಂಧಕಾರದಲ್ಲಿ ಸಿಲುಕಿದ ಅವರು ಅನ್ಯೋನ್ಯರು ದೇವತೆಗಳೋ ಅಥವಾ ದಾನವರೋ ಎಂದು ಅರಿಯದಂತಾದರು.
ಮಾಯಾಪಾಶೈರ್ವಿಮುಕ್ತಾಶ್ಚ ಯತ್ನವಂತಃ ಸುರೋತ್ತಮಾಃ |
ವಪೂಂಷಿ ದೈತ್ಯಸಂಘಾನಾಂ ತಮೋಭೂತಾನ್ಯಪಾತಯನ್ ||೧-೪೫-೧೫
ಮಾಯಾಪಾಶದಿಂದ ವಿಮುಕ್ತರಾದ ಯತ್ನಶೀಲ ಸುರೋತ್ತಮರು ಆ ದೈತ್ಯಸಂಘಗಳನ್ನು ಅಂಧಕಾರದಲ್ಲಿ ಮುಳುಗಿಸಿ ಭೂಮಿಯ ಮೇಲೆ ಬೀಳಿಸತೊಡಗಿದರು.
ಅಪಧ್ವಸ್ತಾ ವಿಸಂಜ್ಞಾಶ್ಚ ತಮಸಾ ನೀಲವರ್ಚಸಃ |
ಪೇತುಸ್ತೇ ದಾನವಗಣಾಶ್ಛಿನ್ನಪಕ್ಷಾ ಇವಾಚಲಾಃ ||೧-೪೫-೧೬
ಅಂಧಕಾರದಲ್ಲಿ ಮುಳುಗಿ ನೀಲವರ್ಚಸರಾದ ಆ ದಾನವಗಣಗಳು ಮೂರ್ಛಿತಗೊಂಡು ರೆಕ್ಕೆಗಳು ಕತ್ತರಿಸಲ್ಪಟ್ಟ ಪರ್ವತಗಳಮ್ತೆ ಭೂಮಿಗೊರಗಿದವು.
ತದ್ಘನೀಭೂತದೈತ್ಯಾನಾಮಂಧಕಾರಮಹಾರ್ಣವಮ್ |
ಪ್ರವಿಷ್ಟಂ ಬಲಮುತ್ತ್ರಸ್ತಂ ತಮೋಭೂತಮಿವಾಬಭೌ ||೧-೪೫-೧೭
ಅಂಧಕಾರದ ಮಾಹಾಸಾಗರದಲ್ಲಿ ಮುಳುಗಿದ್ದ ದೈತ್ಯರ ಆ ಘನೀಭೂತ ಸೇನೆಯು ಅತ್ಯಂತ ಭಯಭೀತಗೊಂಡು ಅದೇ ತಮೋಭೂತವಾದಂತೆ ತೋರುತ್ತಿತ್ತು.
ತದಾಸೃಜನ್ಮಹಾಮಾಯಾಂ ಮಯಸ್ತಾಂ ತಾಮಸೀಂ ದಹನ್ |
ಯುಗಾಂತಾಗ್ನಿಮಿವಾತ್ಯುಗ್ರಾಂ ಸೃಷ್ಟಾಮೌರ್ವೇಣ ವಹ್ನಿನಾ ||೧-೪೫-೧೮
ಆಗ ಮಯನು ಮಾಹಾಮಾಯೆಯಿಂದ ಔರ್ವನಿಂದ ಸೃಷ್ಟಿಸಲ್ಪಟ್ಟ ಅಗ್ನಿಯನ್ನು[3] ಪ್ರಯೋಗಿಸಿ ಆ ತಮಸ್ಸನ್ನು ಸುಟ್ಟುಹಾಕಿದನು.
ಸಾ ದದಾಹ ತಮಃ ಸರ್ವಂ ಮಾಯಾ ಮಯವಿಕಲ್ಪಿತಾ |
ದೈತ್ಯಾಶ್ಚ ದೀಪ್ತವಪುಷಃ ಸದ್ಯ ಉತ್ತಸ್ಥುರಾಹವೇ ||೧-೪೫-೧೯
ಮಯನಿಂದ ಕಲ್ಪಿತವಾದ ಆ ಮಾಯೆಯು ಸರ್ವತಮವನ್ನೂ ಸುಟ್ಟುಭಸ್ಮಮಾಡಿತು. ಬೆಳಗುವ ಶರೀರಗಳಿಂದ ದೈತ್ಯರು ಯುದ್ಧದಲ್ಲಿ ಮೇಲೆದ್ದರು.
ಮಾಯಾಮೌರ್ವೀಂ ಸಮಾಸಾದ್ಯ ದಹ್ಯಮಾನಾ ದಿವೌಕಸಃ |
ಭೇಜಿರೇ ಚಂದ್ರವಿಷಯಂ ಶೀತಾಂಶುಸಲಿಲೇ ಶಯಾತ್ ||೧-೪೫-೨೦
ಮಾಯೆಯ ಔರ್ವೀ ಅಗ್ನಿಗೆ ಸಿಲುಕಿದ ದಿವೌಕಸರು ದಹಿಸತೊಡಗಿದರು ಮತ್ತು ಶೀತಲ ಸಲಿಲದಲ್ಲಿ ಮಲಗಲು ಚಂದ್ರನ ಬಳಿ ಬಂದರು.
ತೇ ದಹ್ಯಮಾನಾ ಹ್ಯೌರ್ವೇಣ ತೇಜಸಾ ಭ್ರಷ್ಟತೇಜಸಃ |
ಶಶಂಸುರ್ವಜ್ರಿಣೇ ದೇವಾಃ ಸಂತಪ್ತಾಃ ಶರಣೈಷಿಣಃ ||೧-೪೫-೨೧
ಔರ್ವಾಗ್ನಿಯ ತೇಜಸ್ಸಿನಿಂದ ಸುಟ್ಟು ಭ್ರಷ್ಟತೇಜಸರಾಗಿ ಸಂತಪ್ತರಾದ ದೇವತೆಗಳು ಶರಣ್ಯನನ್ನು ಬಯಸಿ ವಜ್ರಿಣಿಯ ಬಳಿಸಾರಿದರು.
ಸಂತಪ್ತೇ ಮಾಯಯಾ ಸೈನ್ಯೇ ದಹ್ಯಮಾನೇ ಚ ದಾನವೈಃ |
ಚೋದಿತೋ ದೇವರಾಜೇನ ವರುಣೋ ವಾಕ್ಯಮಬ್ರವೀತ್ ||೧-೪೫-೨೨
ಮಾಯೆಯಿಂದ ಸಂತಪ್ತಗೊಂಡ ಸೈನ್ಯವು ದಾನವರಿಂದ ಸುಡಲ್ಪಟ್ಟು ದೇವರಾಜನಿಂದ ಪ್ರೇರಿತನಾಗಿ ವರುಣನು ಈ ಮಾತನ್ನಾಡಿದನು.
ವರುಣ ಉವಾಚ |
ಪುರಾ ಬ್ರಹ್ಮರ್ಷಿಜಃ ಶಕ್ರ ತಪಸ್ತೇಪೇಽತಿದಾರುಣಮ್ |
ಊರ್ವೋ ಮುನಿಃ ಸ ತೇಜಸ್ವೀ ಸದೃಶೋ ಬ್ರಹ್ಮಣೋ ಗುಣೈಃ ||೧-೪೫-೨೩
ವರುಣನು ಹೇಳಿದನು: “ಶಕ್ರ! ಹಿಂದೆ ಬ್ರಹ್ಮನ ಗುಣಗಳನ್ನೇ ಹೊಂದಿದ್ದ ಬ್ರಹ್ಮರ್ಷಿ ಭೃಗುವಿನ ಮಗ ಊರ್ವನೆಂಬ ತೇಜಸ್ವೀ ಮುನಿಯು ಅತಿದಾರುಣ ತಪಸ್ಸನ್ನು ತಪಿಸಿದನು.
ತಂ ತಪಂತಮಿವಾದಿತ್ಯಂ ತಪಸಾ ಜಗದವ್ಯಯಮ್ |
ಉಪತಸ್ಥುರ್ಮುನಿಗಣಾ ದೇವಾ ಬ್ರಹ್ಮರ್ಷಿಭಿಃ ಸಹ ||೧-೪೫-೨೪
ಆದಿತ್ಯನು ಈ ಅವ್ಯಯ ಜಗತ್ತನ್ನು ಸುಡುವಂತೆ ಅವನು ತಪಸ್ಸಿನಿಂದ ಸುಡತೊಡಗಿದನು. ಆಗ ಬ್ರಹ್ಮರ್ಷಿಗಳೊಂದಿದೆ ದೇವ-ಮುನಿಗಣಗಳು ಅವನ ಬಳಿ ಹೋದರು.
ಹಿರಣ್ಯಕಶಿಪುಶ್ಚೈವ ದಾನವೋ ದಾನವೇಶ್ವರಃ |
ಋಷಿಂ ವಿಜ್ಞಾಪಯಾಮಾಸ ಪುರಾ ಪರಮತೇಜಸಮ್ ||೧-೪೫-೨೫
ದಾನವೇಶ್ವರ ದಾನವ ಹಿರಣ್ಯಕಶಿಪುವೂ ಕೂಡ ಹಿಂದೆ ಈ ಪರಮತೇಜಸ್ವಿ ಋಷಿಯಲ್ಲಿ ವಿಜ್ಞಾಪಿಸಿಕೊಂಡಿದ್ದನು.
ತಮೂಚುರ್ಬ್ರಹ್ಮಋಷಯೋ ವಚನಂ ಬ್ರಹ್ಮಸಂಮಿತಮ್ |
ಋಷಿವಂಶೇಷು ಭಗವಂನ್ಛಿನ್ನಮೂಲಮಿದಂ ಕುಲಮ್ ||೧-೪೫-೨೬
ಬ್ರಹ್ಮರ್ಷಿಗಳು ಅವನಿಗೆ ಬ್ರಹ್ಮಸಂಮಿತವಾದ ಈ ಮಾತನ್ನಾಡಿದರು: “ಭಗವನ್! ಋಷಿವಂಶದ ಈ ಕುಲವು ಬೇರುಸಹಿತವಾಗಿ ಕೀಳಲ್ಪಟ್ಟಿದೆ.
ಏಕಸ್ತ್ವಮನಪತ್ಯಶ್ಚ ಗೋತ್ರಂ ಯನ್ನಾನುವರ್ತಸೇ |
ಕೌಮಾರಂ ವ್ರತಮಾಸ್ಥಾಯ ಕ್ಲೇಶಮೇವಾನುವರ್ತಸೇ ||೧-೪೫-೨೭
ಈ ಗೋತ್ರವನ್ನು ಮುಂದುವರಿಸಿಕೊಂಡು ಹೋಗಬಲ್ಲ ನೀನೊಬ್ಬನೇ ಉಳಿದುಕೊಂಡಿದ್ದೀಯೆ. ಆದರೆ ನಿನಗೆ ಮಕ್ಕಳಿಲ್ಲ. ಕೌಮಾರವ್ರತವನ್ನಾಶ್ರಯಿಸಿ ಕ್ಲೇಶವನ್ನೇ ತಂದೊಡ್ಡುತ್ತಿದ್ದೀಯೆ.
ಬಹೂನಿ ವಿಪ್ರಗೋತ್ರಾಣಿ ಮುನೀನಾಂ ಭಾವಿತಾತ್ಮನಾಮ್ |
ಏಕದೇಹಾನಿ ತಿಷ್ಠಂತಿ ವಿಭಕ್ತಾನಿ ವಿನಾ ಪ್ರಜಾಃ ||೧-೪೫-೨೮
ಭಾವಿತಾತ್ಮ ಮುನಿಗಳ ಅನೇಕ ವಿಪ್ರಗೋತ್ರಗಳು ಒಬ್ಬನೇ ಒಬ್ಬನ ಮೇಲೆ ಅವಲಂಬಿತಗೊಂಡಿವೆ ಮತ್ತು ಸಂತಾನಗಳಲ್ಲಿದೇ ಬೇರಿನಿಂದ ಕತ್ತರಿಸಲ್ಪಟ್ಟಿವೆ.
ಕುಲೇಷು ಛಿನ್ನಮೂಲೇಷು ತೇಷು ನೋ ನಾಸ್ತಿ ಕಾರಣಮ್ |
ಭವಾಂಸ್ತು ತಪಸಾ ಶ್ರೇಷ್ಠಃ ಪ್ರಜಾಪತಿಸಮದ್ಯುತಿಃ ||೧-೪೫-೨೯
ಬೇರೇ ಛಿನ್ನವಾಗಿರುವ ಆ ಕುಲಗಳ ವೃದ್ಧಿಗೆ ಕಾರಣವನ್ನೇ ನಾವು ಕಾಣುತ್ತಿಲ್ಲ. ಆದರೆ ನೀನಾದರೋ ತಪಸ್ಸಿನಲ್ಲಿ ಶ್ರೇಷ್ಠನು ಮತ್ತು ಪ್ರಜಾಪತಿಸಮದ್ಯುತಿಯು.
ತತ್ಪ್ರವರ್ತಸ್ವ ವಂಶಾಯ ವರ್ಧಯಾತ್ಮಾನಮಾತ್ಮನಾ |
ತ್ವಮಾಧತ್ಸ್ವೋರ್ಜಿತಂ ತೇಜೋ ದ್ವಿತೀಯಾಂ ವೈ ತನುಂ ಕುರು ||೧-೪೫-೩೦
ಆದುದರಿಂದ ನಿನ್ನ ವಂಶದ ವೃದ್ಧಿಗಾಗಿ ಪ್ರಯತ್ನಿಸು. ನಿನ್ನನ್ನು ನೀನೇ ಬೆಳೆಯಿಸಿಕೋ. ನಿನ್ನ ಓಜಸ್ಸಿನ ತೇಜಸ್ಸನ್ನು ನೀಡಿ ನಿನ್ನ ಎರಡನೇ ಶರೀರವನ್ನು ಪ್ರಕಟಗೊಳಿಸು.”
ಸ ಏವಮುಕ್ತೋ ಮುನಿಭಿರ್ಮುನಿರ್ಮನಸಿ ತಾಡಿತಃ |
ಜಗರ್ಹೇ ತಾಣೃಷಿಗಣಾನ್ವಚನಂ ಚೇದಮಬ್ರವೀತ್ ||೧-೪೫-೩೧
ಅವರ ಮಾತುಗಳು ಮುನಿಯ ಮನಸ್ಸನ್ನು ಘಾತಿಸಿದವು. ಅವನು ಆ ಋಷಿಗಳನ್ನು ನಿಂದಿಸುತ್ತಾ ಈ ಮಾತನ್ನಾಡಿದನು:
ಯಥಾಯಂ ಶಾಶ್ವತೋ ಧರ್ಮೋ ಮುನೀನಾಂ ವಿಹಿತಃ ಪುರಾ |
ಸದಾಽಽರ್ಷಂ ಸೇವತಾಂ ಕರ್ಮ ವನ್ಯಮೂಲಫಲಾಶಿನಾಮ್ ||೧-೪೫-೩೨
“ವನದ ಫಲಮೂಲಗಳನ್ನು ತಿಂದುಕೊಂಡು ಇರುವವರಿಗೆ ಮತ್ತು ಸದಾ ಆರ್ಷಶಾಸ್ತ್ರಗಳಲ್ಲಿ ಹೇಳಿರುವ ಕರ್ಮಗಳನ್ನೇ ಮಾಡುವವರಿಗೇ ಪುರಾತನ ಕಾಲದಿಂದ ಈ ತಪ ಮತ್ತು ಬ್ರಹ್ಮಚರ್ಯವೆಂಬ ಶಾಶ್ವತ ಧರ್ಮವು ವಿಹಿತವಾಗಿದೆ ತಾನೇ?
ಬ್ರಹ್ಮಯೋನೌ ಪ್ರಸೂತಸ್ಯ ಬ್ರಾಹ್ಮಣಸ್ಯಾನುವರ್ತಿನಃ |
ಬ್ರಹ್ಮಚರ್ಯಂ ಸುಚರಿತಂ ಬ್ರಹ್ಮಾಣಮಪಿ ಚಾಲಯೇತ್ ||೧-೪೫-೩೩
ಬ್ರಹ್ಮಯೋನಿಯಲ್ಲಿ ಹುಟ್ಟಿ ಬ್ರಾಹ್ಮಣಧರ್ಮವನ್ನು ಅನುಸರಿಸಿದವನು ಉತ್ತಮವಾಗಿ ಬ್ರಹ್ಮಚರ್ಯವನ್ನು ಪರಿಪಾಲಿಸಿದರೆ ಅವನು ಬ್ರಹ್ಮನನ್ನೂ ವಿಚಲಿತಗೊಳಿಸಬಲ್ಲನು.
ದ್ವಿಜಾನಾಂ ವೃತ್ತಯಸ್ತಿಸ್ರೋ ಯೇ ಗೃಹಾಶ್ರಮವಾಸಿನಃ |
ಅಸ್ಮಾಕಂ ತು ವನಂ ವೃತ್ತಿರ್ವನಾಶ್ರಮನಿವಾಸಿನಾಮ್||೧-೪೫-೩೪
ಗೃಹಸ್ಥಾಶ್ರಮವಾಸೀ ದ್ವಿಜರಿಗೆ ಮಾತ್ರ ಶಾಸ್ತ್ರಗಳಲ್ಲಿ ಯಜ್ಞಮಾಡಿಸುವುದು, ವೇದವನ್ನು ಹೇಳಿಕೊಡುವುದು ಮತ್ತು ದಾನಗ್ರಹಣಮಾಡುವುದು – ಈ ಮೂರು ವೃತ್ತಿಗಳನ್ನು ಹೇಳಲಾಗಿದೆ. ನಮ್ಮಂಥಹ ವನವಾಸಿಗಳಿಗೆ ವನದ ಫಲಮೂಲಗಳೇ ಜೀವನಸಾಧನಗಳಾಗಿವೆ.
ಅಂಬುಭಕ್ಷಾ ವಾಯುಭಕ್ಷಾ ದಂತೋಲೂಖಲಿಕಾಸ್ತಥಾ |
ಅಶ್ಮಕುಟ್ಟಾ ದಶನಪಾಃ ಪಂಚಾತಪತಪಾಶ್ಚ ಯೇ ||೧-೪೫-೩೫
ಕೆಲವರು ಕೇವಲ ನೀರನ್ನೇ ಕುಡಿದುಕೊಂಡಿರುತ್ತಾರೆ. ಕೆಲವರು ವಾಯುವನ್ನೇ ಕುಡಿದುಕೊಂಡಿರುತ್ತಾರೆ. ಕೆಲವರು ಹಲ್ಲಿನಿಂದಲೇ ಕೀಳುವ ಮತ್ತು ಕುಟ್ಟುವ ಕಾರ್ಯಗಳನ್ನು ಮಾಡುವ ದಶನಪರಿದ್ದಾರೆ. ಆಶ್ಮಕುಟ್ಟರಿದ್ದಾರೆ. ಪಂಚಾಗ್ನಿಯನ್ನೇ ಸೇವಿಸುವವರಿದ್ದಾರೆ.
ಏತೇ ತಪಸಿ ತಿಷ್ಠಂತೋ ವ್ರತೈರಪಿ ಸುದುಷ್ಕರೈಃ |
ಬ್ರಹ್ಮಚರ್ಯಂ ಪುರಸ್ಕೃತ್ಯ ಪ್ರಾರ್ಥಯಂತೇ ಪರಾಂ ಗತಿಮ್ ||೧-೪೫-೩೬
ಇವರು ದುಷ್ಕರ ವ್ರತಗಳನ್ನು ಆಚರಿಸುತ್ತಾ ತಪಸ್ಸನ್ನಾಚರಿಸುತ್ತಾ ಬ್ರಹ್ಮಚರ್ಯವನ್ನು ಪ್ರಧಾನವಾಗಿಟ್ಟುಕೊಂಡು ಪರಮ ಗತಿಯನ್ನು ಪ್ರಾರ್ಥಿಸುತ್ತಾರೆ.
ಬ್ರಹ್ಮಚರ್ಯಾದ್ಬ್ರಾಹ್ಮಣಸ್ಯ ಬ್ರಾಹ್ಮಣತ್ವಂ ವಿಧೀಯತೇ |
ಏವಮಾಹುಃ ಪರೇ ಲೋಕೇ ಬ್ರಹ್ಮ ಬ್ರಹ್ಮವಿದೋ ಜನಾಃ ||೧-೪೫-೩೭
ಬ್ರಹ್ಮಚರ್ಯದಿಂದ ಬ್ರಾಹ್ಮಣನಿಗೆ ಬ್ರಾಹ್ಮಣತ್ವವು ದೊರೆಯುತ್ತದೆ. ಬ್ರಹ್ಮವಿದ ಜನರು ಇದು ಪರಲೋಕದಲ್ಲಿ ಬ್ರಹ್ಮನನ್ನು ನೀಡುತ್ತದೆ ಎಂದು ಹೇಳುತ್ತಾರೆ.
ಬ್ರಹ್ಮಚರ್ಯೇ ಸ್ಥಿತಂ ಧೈರ್ಯಂ ಬ್ರಹ್ಮಚರ್ಯೇ ಸ್ಥಿತಂ ತಪಃ |
ಯೇ ಸ್ಥಿತಾ ಬ್ರಹ್ಮಚರ್ಯೇಷು ಬ್ರಾಹ್ಮಣಾಸ್ತೇ ದಿವಿ ಸ್ಥಿತಾಃ ||೧-೪೫-೩೮
ಧೈರ್ಯವು ಬ್ರಹ್ಮಚರ್ಯದಲ್ಲಿಯೇ ಸ್ಥಿತವಾಗಿದೆ. ಬ್ರಹ್ಮಚರ್ಯದಲ್ಲಿ ತಪಸ್ಸು ಸ್ಥಿತವಾಗಿದೆ. ಬ್ರಹ್ಮಚರ್ಯದಲ್ಲಿ ಸ್ಥಿತರಾಗಿರುವವರು ಬ್ರಹ್ಮಲೋಕದಲ್ಲಿ ವಿರಾಜಿಸುತ್ತಾರೆ.
ನಾಸ್ತಿ ಯೋಗಂ ವಿನಾ ಸಿದ್ಧಿಃ ನಾಸ್ತಿ ಸಿದ್ಧಿಂ ವಿನಾ ಯಶಃ |
ನಾಸ್ತಿ ಲೋಕೇ ಯಶೋಮೂಲಂ ಬ್ರಹ್ಮಚರ್ಯಾತ್ಪರಂ ತಪಃ ||೧-೪೫-೩೯
ಯೋಗವಿಲ್ಲದೇ ಸಿದ್ಧಿಯಾಗುವುದಿಲ್ಲ. ಸಿದ್ಧಿಯಿಲ್ಲದೇ ಯಶಸ್ಸಿಲ್ಲ. ಯಶಸ್ಸಿನ ಮೂಲವು ತಪಸ್ಸು. ಆದರೆ ಈ ಲೋಕದಲ್ಲಿ ಬ್ರಹ್ಮಚರ್ಯಕ್ಕಿಂತ ಹೆಚ್ಚಿನ ತಪಸ್ಸಿಲ್ಲ.
ತನ್ನಿಗೃಹ್ಯೇಂದ್ರಿಯಗ್ರಾಮಂ ಭೂತಗ್ರಾಮಂ ಚ ಪಂಚಮಮ್ |
ಬ್ರಹ್ಮಚರ್ಯೇಣ ವರ್ತೇತ ಕಿಮತಃ ಪರಮಂ ತಪಃ ||೧-೪೫-೪೦
ಆದುದರಿಂದ ಇಂದ್ರಿಯಗ್ರಾಮಗಳನ್ನೂ ಐದು ಭೂತಗ್ರಾಮಗಳನ್ನೂ[4] ನಿಯಂತ್ರಿಸಿ ಬ್ರಹ್ಮಚರ್ಯದಿಂದ ಇರಬೇಕು. ಇದಕ್ಕಿಂತಲೂ ಪರಮ ತಪವು ಯಾವುದಿದೆ?
ಅಯೋಗೇ ಕೇಶಹರಣಮಸಂಕಲ್ಪೇ ವ್ರತಕ್ರಿಯಾ |
ಅಬ್ರಹ್ಮಚರ್ಯೇ ಚರ್ಯಾ ಚ ತ್ರಯಂ ಸ್ಯಾದ್ದಂಭಸಂಜ್ಞಿತಮ್ || ೧-೪೫-೪೧
ಅಯೋಗದಲ್ಲಿ ಮುಂಡನಮಾಡಿಕೊಳ್ಳುವುದು ಮತ್ತು ಸಂಕಲ್ಪವಿಲ್ಲದೇ ವ್ರತಗಳನ್ನು ನಡೆಸುವುದು ಮತ್ತು ಬ್ರಹ್ಮಚರ್ಯವನ್ನು ನಡೆಸದೇ ಇರುವುದು ಈ ಮೂರೂ ದಂಭದ ಲಕ್ಷಣಗಳು[5].
ಕ್ವ ದಾರಾಃ ಕ್ವ ಚ ಸಂಯೋಗಃ ಕ್ವ ಚ ಭಾವವಿಪರ್ಯಯಃ |
ಯದೇಯಂ ಬ್ರಹ್ಮಣಾ ಸೃಷ್ಟಾ ಮನಸಾ ಮಾನಸೀ ಪ್ರಜಾ ||೧-೪೫-೪೨
ಬ್ರಹ್ಮನು ಮನಸ್ಸಿನಿಂದಲೇ ಮಾನಸೀ ಪ್ರಜೆಗಳನ್ನು ಸೃಷ್ಟಿಸುವ ಸಮಯದಲ್ಲಿ ಪತ್ನಿಯು ಎಲ್ಲಿದ್ದಳು? ಸ್ತ್ರೀ-ಪುರುಷರ ಸಂಯೋಗವು ಎಲಿತ್ತು? ಮತ್ತು ಭಾವವಿಪರ್ಯಾಸವು[6] ಎಲ್ಲಿತ್ತು?
ಯದ್ಯಸ್ತಿ ತಪಸೋ ವೀರ್ಯಂ ಯುಷ್ಮಾಕಮಮಿತಾತ್ಮನಾಮ್ |
ಸೃಜಧ್ವಂ ಮಾನಸಾನ್ಪುತ್ರಾನ್ಪ್ರಾಜಾಪತ್ಯೇನ ಕರ್ಮಣಾ ||೧-೪೫-೪೩
ಅಮಿತಾತ್ಮರಾದ ನಿಮ್ಮಲ್ಲಿ ತಪಸ್ಸಿನ ವೀರ್ಯವಿದ್ದರೆ ಪ್ರಜಾಪತಿಯ ಕರ್ಮದಂತೆ ಮಾನಸಪುತ್ರರನ್ನು ಸೃಷ್ಟಿಸಿ.
ಮನಸಾ ನಿರ್ಮಿತಾ ಯೋನಿರಾಧಾತವ್ಯಾ ತಪಸ್ವಿನಾ |
ನ ದಾರಯೋಗಂ ಬೀಜಂ ವಾ ವ್ರತಮುಕ್ತಂ ತಪಸ್ವಿನಾಮ್ ||೧-೪೫-೪೪
ತಪಸ್ವಿಯು ತನ್ನ ಮನೋಕಲ್ಪಿತ ಯೋನಿಯಲ್ಲಿ ಮಾನಸಿಕ ಗರ್ಭಾದಾನವನ್ನು ಮಾಡಬೇಕು. ಸ್ತ್ರೀಯೊಡನೆ ಸಂಯೋಗ ಅಥವಾ ವೀರವನ್ನು ನೀಡುವುದು ಇವು ತಪಸ್ವಿಗಳಿಗೆ ವ್ರತಗಳೆಂದು ಹೇಳಲ್ಪಟ್ಟಿಲ್ಲ.
ಯದಿದಂ ಲುಪ್ತಧರ್ಮಾರ್ಥಂ ಯುಷ್ಮಾಭಿರಿಹ ನಿರ್ಭಯೈಃ |
ವ್ಯಾಹೃತಂ ಸದ್ಭಿರತ್ಯರ್ಥಮಸದ್ಭಿರಿವ ಮೇ ಮತಿಃ ||೧-೪೫-೪೫
ನೀವು ಸಜ್ಜನರಾಗಿದ್ದರೂ ಅಸಜ್ಜನರಂತೆ ನಿರ್ಭಯರಾಗಿ ಧರ್ಮಾರ್ಥ ಶೂನ್ಯವಾದ ಮಾತುಗಳನ್ನಾಡಿದ್ದೀರಿ ಎಂದು ನನಗನ್ನಿಸುತ್ತಿದೆ.
ವಪುರ್ದೀಪ್ತಾಂತರಾತ್ಮಾನಮೇಷ ಕೃತ್ವಾ ಮನೋಮಯಮ್ |
ದಾರಯೋಗಂ ವಿನಾ ಸ್ರಕ್ಷ್ಯೇ ಪುತ್ರಮಾತ್ಮತನೂರುಹಮ್ ||೧-೪೫-೪೬
ಇಗೋ! ಅಂತರಾತ್ಮನು ಬೆಳಗುತ್ತಿರುವ ಈ ಶರೀರವನ್ನು ಮನೋಮಯವನ್ನಾಗಿ ಮಾಡಿಕೊಂಡು ಸ್ತ್ರೀಸಂಯೋಗವಿಲ್ಲದೇ ನನ್ನಂತೆಯೇ ಇರುವ ಪುತ್ರನನ್ನು ಸೃಷ್ಟಿಸುತ್ತೇನೆ[7].
ಏವಮಾತ್ಮಾನಮಾತ್ಮಾ ಮೇ ದ್ವಿತೀಯಂ ಜನಯಿಷ್ಯತಿ |
ವನ್ಯೇನಾನೇನ ವಿಧಿನಾ ದಿಧಕ್ಷಂತಮಿವ ಪ್ರಜಾಃ ||೧-೪೫-೪೭
ಈ ಪ್ರಕಾರ ನನ್ನ ಈ ಶರೀರವು ವನವಾಸಿಗೆ ಉಚಿತವಾದ ವಿಧಾನದಿಂದಲೇ ಸಮಸ್ತ ಪ್ರಜೆಗಳನ್ನೂ ಸುಡುವಂತಿರುವ ನನ್ನ ಎರಡನೇ ಸ್ವರೂಪಕ್ಕೆ ಜನ್ಮವೀಯುತ್ತದೆ.”
ಊರ್ವಸ್ತು ತಪಸಾವಿಷ್ಟೋ ನಿವೇಶ್ಯೋರುಂ ಹುತಾಶನೇ |
ಮಮಂಥೈಕೇನ ದರ್ಭೇಣ ಪುತ್ರಸ್ಯ ಪ್ರಭವಾರಣಿಮ್ ||೧-೪೫-೪೮
ತಪಸ್ಸಿನಿಂದ ಆವಿಷ್ಟನಾಗಿದ್ದ ಊರ್ವನಾದರೋ ತನ್ನ ತೊಡೆಯನ್ನು ಅಗ್ನಿಯಲ್ಲಿ ಹಾಕಿದನು ಮತ್ತು ಪುತ್ರನ ಉತ್ಪತ್ತಿಗಾಗಿ ಅರಣಿರೂಪದಲ್ಲಿದ್ದ ಆ ತೊಡೆಯನ್ನು ದರ್ಭೆಯಿಂದ ಮಥಿಸತೊಡಗಿದನು.
ತಸ್ಯೋರುಂ ಸಹಸಾ ಭಿತ್ತ್ವಾ ಜ್ವಾಲಾಮಾಲೀ ನಿರಿಂಧನಃ |
ಜಗತೋ ನಿಧನಾಕಾಂಕ್ಷೀ ಪುತ್ರೋಽಗ್ನಿಃ ಸಮಪದ್ಯತ ||೧-೪೫-೪೯
ಆಗ ಒಮ್ಮೆಲೇ ಅವನ ತೊಡೆಯನ್ನು ಸೀಳಿಕೊಂಡು ಓರ್ವ ಅಗ್ನಿಸ್ವರೂಪ ಪುತ್ರನು ಉತ್ಪನ್ನನಾದನು. ಜಗತ್ತನ್ನೇ ಅಂತ್ಯಕೊಳಿಸಲು ಬಯಸುತ್ತಿದ್ದ ಅವನು ಇಂಧನವಿಲ್ಲದೇ ಜ್ವಾಲಾಮಾಲಿಯಾಗಿ ಉರಿಯುತ್ತಿದ್ದನು.
ಊರ್ವಸ್ಯೋರುಂ ವಿನಿರ್ಭಿದ್ಯ ಔರ್ವೋ ನಾಮಾಂತಕೋಽನಲಃ |
ದಿಧಕ್ಷನ್ನಿವ ಲೋಕಾಂಸ್ತ್ರೀಂಜಜ್ಞೇ ಪರಮಕೋಪನಃ || ೧-೪೫-೫೦
ಊರ್ವನ ತೊಡೆಯನ್ನು ಸೀಳಿ ಹುಟ್ಟಿದ ಮೂರುಲೋಕಗಳನ್ನೂ ಸುಟ್ಟುಬಿಡುವಂಥಹ ಪರಮ ಕೋಪನನಾದ ಅಂತಕ ಅನಲನಂತಿದ್ದ ಅವನ ಹೆಸರು ಔರ್ವ ಎಂದಾಯಿತು.
ಉತ್ಪನ್ನಮಾತ್ರಶ್ಚೋವಾಚ ಪಿತರಂ ದೀಪ್ತಯಾ ಗಿರಾ |
ಕ್ಷುಧಾ ಮೇ ಬಾಧತೇ ತಾತ ಜಗದ್ಭಕ್ಷೇ ತ್ಯಜಸ್ವ ಮಾಮ್ ||೧-೪೫-೫೧
ಉತ್ಪನ್ನನಾಗುತ್ತಲೇ ಅವನು ಪ್ರದೀಪ್ತ ಧ್ವನಿಯಲ್ಲಿ ತಂದೆಗೆ ಹೇಳಿದನು: “ಅಪ್ಪಾ! ಹಸಿವೆಯು ನನ್ನನ್ನು ಕಾಡುತ್ತಿದೆ. ನನ್ನ ಭೋಜನಕ್ಕಾಗಿ ಇಡೀ ಜಗತ್ತನ್ನೇ ನೀಡಿಬಿಡು!”
ತ್ರಿದಿವಾರೋಹಿಭಿರ್ಜ್ವಾಲೈರ್ಜೃಂಭಮಾಣೋ ದಿಶೋ ದಶ |
ನಿರ್ದಹನ್ನಿವ ಭೂತಾನಿ ವವೃಧೇ ಸೋಽಂತಕೋಽನಲಃ ||೧-೪೫-೫೨
ಆ ಕಾಲರೂಪ ಅಗ್ನಿಯು ಸಮಸ್ತ ಪ್ರಾಣಿಗಳನ್ನೂ ಸುಡುತ್ತಾ ಬೆಳೆಯತೊಡಗಿದನು. ಸ್ವರ್ಗದವರೆಗೂ ತಲುಪಿದ್ದ ತನ್ನ ಜ್ವಾಲೆಗಳಿಂದ ಅವನು ಹತ್ತು ದಿಕ್ಕುಗಳಲ್ಲಿಯೂ ಪಸರಿಸತೊಡಗಿದನು.
ಏತಸ್ಮಿನ್ನಂತರೇ ಬ್ರಹ್ಮಾ ಸರ್ವಲೋಕಪತಿಃ ಪ್ರಭುಃ |
ಆಜಗಾಮ ಮುನಿರ್ಯತ್ರ ವ್ಯಸೃಜತ್ಪುತ್ರಮುತ್ತಮಮ್ ||೧-೪೫-೫೩
ಈ ಮಧ್ಯದಲ್ಲಿ ಸರ್ವಲೋಕಪತಿ ಪ್ರಭು ಬ್ರಹ್ಮನು ಉತಮ ಪುತ್ರನನ್ನು ಸೃಷ್ಟಿಸಿದ ಮುನಿಯಿದ್ದಲ್ಲಿಗೆ ಆಗಮಿಸಿದನು.
ಸ ದದರ್ಶೋರುಮೂರ್ವಸ್ಯ ದೀಪ್ಯಮಾನಂ ಸುತಾಗ್ನಿನಾ |
ಔರ್ವಕೋಪಾಗ್ನಿಸಂತಪ್ತಾಽನ್ಲ್ಲೋಕಾಂಶ್ಚ ಋಷಿಭಿಃ ಸಹ |
ತಮುವಾಚ ತತೋ ಬ್ರಹ್ಮಾ ಮುನಿಮೂರ್ವಂ ಸಭಾಜಯನ್ ||೧-೪೫-೫೪
ಊರ್ವನ ತೊಡೆಯಿಂದ ಹುಟ್ಟಿದ ಉರಿಯುತ್ತಿರುವ ಅಗ್ನಿಯ ರೂಪದಲ್ಲಿದ್ದ ಔರ್ವನನ್ನೂ, ಅವನ ಕೋಪಾಗ್ನಿಯಿಂದ ಋಷಿಗಳೊಂದಿಗೆ ಲೋಕಗಳು ಸಂತಪ್ತವಾದುದನ್ನೂ ಅವನು ನೋಡಿದನು. ಆಗ ಬ್ರಹ್ಮನು ಮುನಿ ಊರ್ವನನ್ನು ಗೌರವಿಸಿ ಹೇಳಿದನು:
ಧಾರ್ಯತಾಂ ಪುತ್ರಜಂ ತೇಜೋ ಲೋಕಾನಾಂ ಹಿತಕಾಮ್ಯಯಾ |
ಅಸ್ಯಾಪತ್ಯಸ್ಯ ತೇ ವಿಪ್ರ ಕರಿಷ್ಯೇ ಸಾಹ್ಯಮುತ್ತಮಮ್ ||೧-೪೫-೫೫
“ವಿಪ್ರ! ಲೋಕಗಳ ಹಿತವನ್ನು ಬಯಸಿ ನಿನ್ನ ಪುತ್ರನ ತೇಜಸ್ಸನ್ನು ಹಿಡಿದಿಟ್ಟುಕೋ. ನಾನು ನಿನ್ನ ಈ ಪುತ್ರನಿಗೆ ಉತ್ತಮ ಸಹಾಯವನ್ನು ಮಾಡುತ್ತೇನೆ.
ವಾಸಂ ಚಾಸ್ಯ ಪ್ರದಾಸ್ಯಾಮಿ ಪ್ರಾಶನಂ ಚಾಮೃತೋಪಮಮ್ |
ತಥ್ಯಮೇತನ್ಮಮ ವಚಃ ಶೃಣು ತ್ವಂ ವದತಾಂ ವರ ||೧-೪೫-೫೬
ಮಾತನಾಡುವವರಲ್ಲಿ ಶ್ರೇಷ್ಠ! ನನ್ನ ಈ ತಥ್ಯ ವಚನವನ್ನು ಕೇಳು. ನಾನು ಇವನಿಗೆ ಅಮೃತಸಮಾನ ಭೋಜನವನ್ನು ಮತ್ತು ವಾಸಿಸಲು ಸ್ಥಳವನ್ನು ನೀಡುತ್ತೇನೆ.”
ಊರ್ವ ಉವಾಚ |
ಧನ್ಯೋಽಸ್ಮ್ಯನುಗೃಹೀತೋಽಸ್ಮಿ ಯನ್ಮಮಾದ್ಯ ಭವಾಂಶಿಶೋಃ |
ಮತಿಮೇತಾಂ ದದಾತೀಹ ಪರಮಾನುಗ್ರಹಾಯ ವೈ ||೧-೪೫-೫೭
ಊರ್ವನು ಹೇಳಿದನು: “ಧನ್ಯನಾದೆ! ಅನುಗೃಹೀತನಾದೆ! ಇಂದು ನೀನು ನನ್ನ ಶಿಶುವಿಗೆ ಪರಮ ಅನುಗ್ರಹ ಮಾಡುವ ಸಲಹೆಯನ್ನು ನೀಡುತ್ತಿದ್ದೀಯೆ!
ಪ್ರಭಾವಕಾಲೇ ಸಂಪ್ರಾಪ್ತೇ ಕಾಂಕ್ಷಿತವ್ಯೇ ಸಮಾಗಮೇ |
ಭಗವಂಸ್ತರ್ಪಿತಃ ಪುತ್ರಃ ಕೈರ್ಹವ್ಯೈಃ ಪ್ರಾಪ್ಸ್ಯತೇ ಸುಖಂ ||೧-೪೫-೫೮
ಕುತ್ರ ಚಾಸ್ಯ ನಿವಾಸೋ ವೈ ಭೋಜನಂ ಚ ಕಿಮಾತ್ಮಕಮ್ |
ವಿಧಾಸ್ಯತಿ ಭವಾನಸ್ಯ ವೀರ್ಯತುಲ್ಯಂ ಮಹೌಜಸಃ || ೧-೪೫-೫೯
ಭಗವನ್! ಇವನ ಯೌವನಾವಸ್ಥೆಯ ಕಾಲವು ಎಂದಾಗುವುದು ಮತ್ತು ಇವನಿಗೆ ವ್ಯವಸ್ಥಿತವಾಗಿರುವ ಭೋಜನವು ಅವನಿಗಿಷ್ಟವಾಗುವುದೇ? ಇವನು ಯಾವ ಹವಿಸ್ಸಿನಿಂದ ತೃಪ್ತನಾಗಿ ಸುಖಿಯಾಗುತ್ತಾನೆ? ಇವನ ನಿವಾಸಸ್ಥಾನವು ಎಲ್ಲಿರುವುದು? ಈ ಮಹೌಜಸನ ವೀರ್ಯಕ್ಕೆ ಸರಿಸಾಟಿಯಾದ ಎಂಥಹ ಭೋಜನವನ್ನು ಇವನಿಗೆ ನೀನು ವಿಧಿಸುತ್ತೀಯೆ?”
ಬ್ರಹ್ಮೋವಾಚ |
ವಡವಾಮುಖೇಽಸ್ಯ ವಸತಿಃ ಸಮುದ್ರಾಸ್ಯೇ ಭವಿಷ್ಯತಿ|
ಮಮ ಯೋನಿರ್ಜಲಂ ವಿಪ್ರ ತಚ್ಚ ತೋಯಮಯಂ ವಪುಃ ||೧-೪೫-೬೦
ಬ್ರಹ್ಮನು ಹೇಳಿದನು: “ವಿಪ್ರ! ಸಮುದ್ರದ ವಡವಾಮುಖವು ಇವನ ವಾಸಸ್ಥಾನವಾಗುವುದು. ನನ್ನ ಯೋನಿಯು ಜಲ ಮತ್ತು ವಡವಾಮುಖದ ಶರೀರವೂ ತೋಯಮಯವು.
ತದ್ಧವಿಸ್ತವ ಪುತ್ರಸ್ಯ ವಿಸೃಜಾಮ್ಯಾಲಯಂ ತು ತತ್ |
ತತ್ರಾಯಮಾಸ್ತಾಂ ನಿಯತಃ ಪಿಬನ್ವಾರಿಮಯಂ ಹವಿಃ ||೧-೪೫-೬೧
ಅದೇ ಜಲವನ್ನು ನಿನ್ನ ಪುತ್ರನಿಗೆ ಹವಿಸ್ಸಿನ ರೂಪದಲ್ಲಿ ಅರ್ಪಿಸುತ್ತೇನೆ ಮತ್ತು ಅವನ ವಾಸಸ್ಥಾನವೂ ಅದೇ ಆಗುತ್ತದೆ. ಅವನು ಈ ಜಲಮಯ ಹವಿಸ್ಸನ್ನು ಕೂಡಿಯುತ್ತಾ ಸದಾ ಅಲ್ಲಿಯೇ ಇರಲಿ.
ತತೋ ಯುಗಾಂತೇ ಭೂತಾನಾಮೇಷ ಚಾಹಂ ಚ ಸುವ್ರತ |
ಸಹಿತೌ ವಿಚರಿಷ್ಯಾವೋ ಲೋಕಾನಿತಿ ಪುನಃ ಪುನಃ ||೧-೪೫-೬೨
ಸುವ್ರತ! ಅನಂತರ ಭೂತಗಳ ಯುಗಾಂತದಲ್ಲಿ ಇವನು ಮತ್ತು ನಾನು ಇಬ್ಬರೂ ಒಟ್ಟಿಗೇ ಸಂಪೂರ್ಣ ಲೋಕಗಳಲ್ಲಿ ಪುನಃ ಪುನಃ ವಿಚರಿಸುತ್ತೇವೆ.
ಏಷೋಽಗ್ನಿರಂತಕಾಲೇ ತು ಸಲಿಲಾಶೀ ಮಯಾ ಕೃತಃ |
ದಹನಃ ಸರ್ವಭೂತಾನಾಂ ಸದೇವಾಸುರರಕ್ಷಸಾಮ್ || ೧-೪೫-೬೩
ಈ ಅಗ್ನಿಯನ್ನು ನಾನು ಜಲಾಹಾರಿಯನ್ನಾಗಿ ಮಾಡಿದ್ದೇನೆ. ಅಂತಕಾಲದಲ್ಲಿ ಇವನು ದೇವಾಸುರರಾಕ್ಷಸರೊಂದಿಗೆ ಸರ್ವಭೂತಗಳನ್ನೂ ದಹಿಸುತ್ತಾನೆ.”
ಏವಮಸ್ತ್ವಿತಿ ಸೋಽಪ್ಯಗ್ನಿಃ ಸಂವೃತಜ್ವಾಲಮಂಡಲಃ |
ಪ್ರವಿವೇಶಾರ್ಣವಮುಖಂ ನಿಕ್ಷಿಪ್ಯ ಪಿತರಿ ಪ್ರಭಾಮ್ ||೧-೪೫-೬೪
ಆಗ “ಹಾಗೆಯೇ ಆಗಲಿ!” ಎಂದು ಹೇಳಿ ಆ ಅಗ್ನಿಯು ತನ್ನ ಜ್ವಾಲಮಂಡಲವನ್ನು ಸಂಕ್ಷಿಪ್ತಗೊಳಿಸಿದನು. ತನ್ನ ಪ್ರಭೆಯನ್ನು ತಂದೆಯಲ್ಲಿರಿಸಿ ಸಮುದ್ರಮುಖವನ್ನು ಪ್ರವೇಶಿಸಿದನು.
ಪ್ರತಿಯಾತಸ್ತತೋ ಬ್ರಹ್ಮಾ ತೇ ಚ ಸರ್ವೇ ಮಹರ್ಷಯಃ |
ಔರ್ವಸ್ಯಾಗ್ನೇಃ ಪ್ರಭಾವಜ್ಞಾಃ ಸ್ವಾಂ ಸ್ವಾಂ ಗತಿಮುಪಾಶ್ರಿತಾಃ ||೧-೪೫-೬೫
ಅನಂತರ ಬ್ರಹ್ಮನು ಹಿಂದಿರುಗಿದನು ಮತ್ತು ಔರ್ವನ ಅಗ್ನಿಯ ಪ್ರಭಾವವನ್ನು ತಿಳಿದ ಸರ್ವ ಮಹರ್ಷಿಗಳೂ ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು.
ಹಿರಣ್ಯಕಶಿಪುರ್ದೃಷ್ಟ್ವಾ ತದದ್ಭುತಮಪೂಜಯತ್ |
ಊರ್ವಂ ಪ್ರಣತಸರ್ವಾಂಗೋ ವಾಕ್ಯಂ ಚೇದಮುವಾಚ ಹ ||೧-೪೫-೬೬
ಆ ಅದ್ಭುತವನ್ನು ಕಂಡು ಹಿರಣ್ಯಕಶಿಪುವು ಊರ್ವನಿಗೆ ಸಾಷ್ಟಾಂಗ ನಮಸ್ಕಾರಮಾಡಿ ಈ ಮಾತನ್ನಾಡಿದನು:
ಭಗವನ್ನದ್ಭುತಮಿದಂ ನಿವೃತ್ತಂ ಲೋಕಸಾಕ್ಷಿಕಮ್ |
ತಪಸಾ ತೇ ಮುನಿಶ್ರೇಷ್ಠ ಪರಿತುಷ್ಟಃ ಪಿತಾಮಹಃ ||೧-೪೫-೬೭
“ಭಗವನ್! ನೀನು ಲೋಕಸಾಕ್ಷಿಕವಾದ ಈ ಅದ್ಭುತವನ್ನು ಮಾಡಿ ತೋರಿಸಿದೆ. ಮುನಿಶ್ರೇಷ್ಠ! ನಿನ್ನ ತಪಸ್ಸಿನಿಂದ ಪಿತಾಮಹನು ಪರಿತುಷ್ಟನಾದನು.
ಅಹಂ ತು ತವ ಪುತ್ರಸ್ಯ ತವ ಚೈವ ಮಹಾವ್ರತ |
ಭೃತ್ಯ ಇತ್ಯವಗಂತವ್ಯಃ ಶ್ಲಾಘ್ಯೋಽಸ್ಮಿ ಯದಿ ಕರ್ಮಣಾ ||೧-೪೫-೬೮
ಮಹಾವ್ರತ! ಒಂದುವೇಳೆ ನೀನು ನನ್ನ ಕರ್ಮಗಳಿಂದ ನಾನು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟಿದ್ದರೆ ನಾನು ನನ್ನನ್ನು ನಿನ್ನ ಪುತ್ರ ಮತ್ತು ಕಿಂಕರನೆಂದು ತಿಳಿ.
ತನ್ಮಾಂ ಪಶ್ಯ ಸಮಾಪನ್ನಂ ತವೈವಾರಾಧನೇ ರತಮ್ |
ಯದಿ ಸೀದೇ ಮುನಿಶ್ರೇಷ್ಠ ತವೈವ ಸ್ಯಾತ್ಪರಾಜಯಃ ||೧-೪೫-೬೯
ಮುನಿಶ್ರೇಷ್ಠ! ಆದುದರಿಂದ ನಾನು ನಿನ್ನ ಶರಣುಬಂದು ನಿನ್ನ ಆರಾಧನೆಯಲ್ಲಿಯೇ ತತ್ಪರನಾಗಿರುವುದನ್ನು ನೋಡು. ನನಗೆ ಕಷ್ಟವೊದಗಿದರೆ ನಿನ್ನದೇ ಪರಾಜಯವಾಗುವುದು!”
ಊರ್ವ ಉವಾಚ|
ಧನ್ಯೋಽಸ್ಮ್ಯನುಗೃಹೀತೋಽಸ್ಮಿ ಯಸ್ಯ ತೇಽಹಂ ಗುರುರ್ಮತಃ |
ನಾಸ್ತಿ ತೇ ತಪಸಾನೇನ ಭಯಮದ್ಯೇಹ ಸುವ್ರತ ||೧-೪೫-೭೦
ಊರ್ವನು ಹೇಳಿದನು: “ಸುವ್ರತ! ನೀನು ನನ್ನನ್ನು ಗುರುವೆಂದು ತಿಳಿದಿದ್ದೀಯೆ! ಧನ್ಯನಾದೆ ಮತ್ತು ಅನುಗೃಹೀತನಾದೆ. ನನ್ನ ತಪಸ್ಸಿನ ಪ್ರಭಾವದಿಂದ ನಿನಗೆ ಇನ್ನು ಯಾವ ಭಯವೂ ಉಂಟಾಗುವುದಿಲ್ಲ.
ಇಮಾಂ ಚ ಮಾಯಾಂ ಗೃಹ್ಣೀಷ್ವ ಮಮ ಪುತ್ರೇಣ ನಿರ್ಮಿತಾಮ್ |
ನಿರಿಂಧನಾಮಗ್ನಿಮಯೀಂ ದುಃಸ್ಪರ್ಶಾಂ ಪಾವಕೈರಪಿ ||೧-೪೫-೭೧
ಜೊತೆಗೆ ನನ್ನ ಪುತ್ರನು ನಿರ್ಮಿಸಿದ ಈ ಮಾಯೆಯನ್ನೂ ಸ್ವೀಕರಿಸು. ಇಂಧನ ರಹಿತವಾಗಿರುವ ಈ ಅಗ್ನಿಯನ್ನು ಸ್ವಯಂ ಪಾವಕನಿಗೂ ಸ್ಪರ್ಷಿಸಲು ಕಷ್ಟವಾಗುವುದು.
ಏಷಾ ತೇ ಸ್ವಸ್ಯ ವಂಶಸ್ಯ ವಶಗಾರಿವಿನಿಗ್ರಹೇ |
ರಕ್ಷಿಷ್ಯತ್ಯಾತ್ಮಪಕ್ಷಂ ಸಾ ಪರಾಂಶ್ಚ ಪ್ರಹರಿಷ್ಯತಿ ||೧-೪೫-೭೨
ಇದು ನೀನಿರುವ ವರೆಗೆ ನಿನ್ನ ವಂಶದ ವಶದಲ್ಲಿದ್ದುಕೊಂಡು ಶತ್ರುಗಳನ್ನು ನಿಗ್ರಹಿಸಿ ನಿನ್ನ ಪಕ್ಷವನ್ನು ರಕ್ಷಿಸುತ್ತದೆ. ಶತ್ರುಗಳನ್ನು ಸಂಹರಿಸುತ್ತದೆ.”
ಏವಮಸ್ತ್ವಿತಿ ತಾಂ ಗೃಹ್ಯ ಪ್ರಣಮ್ಯ ಮುನಿಪುಂಗವಮ್ |
ಜಗಾಮ ತ್ರಿದಿವಂ ಹೃಷ್ಟಃ ಕೃತಾರ್ಥೋ ದಾನವೇಶ್ವರಃ ||೧-೪೫-೭೩
ಹಾಗೆಯೇ ಆಗಲೆಂದು ಹೇಳಿ ದಾನವೇಶ್ವರನು ಮುನಿಪುಂಗವನಿಗೆ ನಮಸ್ಕರಿಸಿ ಆ ಮಾಯೆಯನ್ನು ಸ್ವೀಕರಿಸಿದನು ಮತ್ತು ಕೃತಾರ್ಥನಾದೆನೆಂಬ ಸಂತೋಷದಿಂದ ತ್ರಿದಿವಕ್ಕೆ ತೆರಳಿದನು.”
ವರುಣ ಉವಾಚ|
ಸೈಷಾ ದುರ್ವಿಷಹಾ ಮಾಯಾ ದೇವೈರಪಿ ದುರಾಸದಾ |
ಔರ್ವೇಣ ನಿರ್ಮಿತಾ ಪೂರ್ವಂ ಪಾವಕೇನೋರ್ವಸೂನುನಾ ||೧-೪೫-೭೪
ವರುಣನು ಹೇಳಿದನು: “ಹೀಗೆ ಹಿಂದೆ ಊರ್ವಮಹರ್ಷಿಯ ಪುತ್ರ ಔರ್ವನೆನ್ನುವ ಅಗ್ನಿಯು ದೇವತೆಗಳಿಗೂ ದುಃಸ್ಸಹ ಮತ್ತು ದುರ್ಜಯವಾದ ಈ ಮಾಯೆಯನ್ನು ರಚಿಸಿದ್ದನು.
ತಸ್ಮಿಂಸ್ತು ವ್ಯುತ್ಥಿತೇ ದೈತ್ಯೇ ನಿವೀರ್ಯೈಷಾ ನ ಸಂಶಯಃ |
ಶಾಪೋ ಹ್ಯಸ್ಯಾಃ ಪುರಾ ದತ್ತಃ ಸೃಷ್ಟಾ ಯೇನೈವ ತೇಜಸಾ ||೧-೪೫-೭೫
ಈ ದೈತ್ಯನು ಈ ಸಂಸಾರದಿಂದ ಎದ್ದುಬಿಟ್ಟಿದ್ದಾನೆ. ಆದುದರಿಂದ ಈ ಮಾಯೆಯು ನಿರ್ಬಲವಾಗಿಬಿಟ್ಟಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಏಕೆಂದರೆ ಯಾರು ತನ್ನ ತೇಜಸ್ಸಿನಿಂದ ಇದನ್ನು ರಚಿಸಿದ್ದನೋ ಅವನೇ ಇವನಿಗೆ ಶಾಪವನ್ನೂ ಇತ್ತಿದ್ದನು[8].
ಯದ್ಯೇಷಾ ಪ್ರತಿಹಂತವ್ಯಾ ಕರ್ತವ್ಯೋ ಭಗವಾನ್ಸುಖೀ |
ದೀಯತಾಮ್ಮೇ ಸಖಾ ಶಕ್ರ ತೋಯಯೋನಿರ್ನಿಶಾಕರಃ ||೧-೪೫-೭೬
ಭಗವಾನ್! ಶಕ್ರ! ಇಂದು ಈ ಮಾಯೆಯನ್ನು ನಾಶಪಡಿಸಿ ಸುಖವಾಗಿರಲು ನೀನು ಜಲದ ಉತ್ಪತ್ತಿಸ್ಥಾನವಾದ ಸಖ ಚಂದ್ರಮನನ್ನು ನನ್ನ ಸಹಾಯಕ್ಕೆ ಕಳುಹಿಸು.
ತೇನಾಹಂ ಸಹ ಸಂಗಮ್ಯ ಯಾದೋಭಿಶ್ಚ ಸಮಾವೃತಃ |
ಮಾಯಾಮೇತಾಂ ಹನಿಷ್ಯಾಮಿ ತ್ವತ್ಪ್ರಸಾದಾನ್ನ ಸಂಶಯಃ ||೧-೪೫-೭೭
ನಿನ್ನ ಪ್ರಸಾದದಿಂದ ಮತ್ತು ಚಂದ್ರಮನ ಸಹಯೋಗದಿಂದ ನಾನು ಜಲಚರಜೀವಿಗಳಿಂದ ಆವೃತನಾಗಿ ಈ ಮಾಯೆಯನ್ನು ನಾಶಪಡಿಸುತ್ತೇನೆ. ಇದರಲ್ಲಿ ಸಂಶಯವಿಲ್ಲ.”
ಇತಿ ಶ್ರೀಮನ್ಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಔರ್ವಾಗ್ನಿಸಂಭವೋನಾಮ ಪಂಚಚತ್ವಾರಿಂಶೋಽಧ್ಯಾಯಃ
[1] ಮೂರ್ಛೆಗೊಳಿಸುವ ಅಸ್ತ್ರಗಳು.
[2] ಮೂರ್ಛಿತರಾದವರು ಹೇಗೆ ಉಪಾಯ ಮಾಡಬಲ್ಲರು?
[3] ಔರ್ವನು ತನ್ನ ಕ್ರೋಧಾಗ್ನಿಯನ್ನು ಸಮುದ್ರದಲ್ಲಿ ಬಡವಾಗ್ನಿಯಾಗಿ ಇರಿಸಿದ್ದನು (ಆದಿ ಪರ್ವ: ಅಧ್ಯಾಯ೧ ೭೧). ಆದರೆ ಹರಿವಂಶದ ಈ ಕಥೆಯು ಅನ್ಯ ಔರ್ವನ ಕುರಿತಾಗಿದೆ.
[4] ಶಬ್ಧ ಮೊದಲಾದ ಸೂಕ್ಷ್ಮ ಭೂತಸ್ವರೂಪ ವಿಷಯಸಮೂಹಗಳು (ಗೀತಾ ಪ್ರೆಸ್).
[5] ಅವಶ್ಯವಾಗಿ ಮಾಡಬೇಕಾದ ಧ್ಯಾನರೂಪ ಯೋಗದ ಅಭಾವದಲ್ಲಿಯೂ ಮುಂಡನ ಮಾಡಿಕೊಳ್ಳುವುದು, ಉತ್ತಮ ಪರಲೋಕದ ಸಂಕಲ್ಪವಿಲ್ಲದೇ ಕೇವಲ ಲೋಕರಂಜನೆಗಾಗಿ ಕೃಚ್ಛ್ರ ಮೊದಲಾದ ವ್ರತಗಳನ್ನು ಆಚರಿಸುವುದು ಮತ್ತು ಬ್ರಹ್ಮಪ್ರಾಪ್ತಿಯನ್ನು ಲಕ್ಷ್ಯವನ್ನಾಗಿಟ್ಟುಕೊಂಡು ನಿಯಮಿತ ವೇದಾಧ್ಯಯನವಿಲ್ಲದೇ ಬ್ರಹ್ಮಚರ್ಯ ನಿಯಮಗಳನ್ನು ಆಶ್ರಯಿಸುವುದು – ಈ ಮೂರೂ ದಂಭವೆನಿಸಿಕೊಳ್ಳುತ್ತವೆ (ಗೀತಾ ಪ್ರೆಸ್).
[6] ಚಿತ್ತದ ವಿಕಾರ, ಕಾಮಾನುರಾಗ (ಗೀತಾ ಪ್ರೆಸ್).
[7] ನಾನೀಗ ಮನೋಮಯ ವಪು (ಯೋನಿ)ವನ್ನು ನಿರ್ಮಿಸಿ ಸ್ತ್ರೀಸಹವಾಸವಿಲ್ಲದೇ ನನ್ನ ಶರೀರದಿಂದ ಉತ್ಪನ್ನನಾಗುವ ನನ್ನಂತಹ ಪುತ್ರನ ಸೃಷ್ಟಿಯನ್ನು ಮಾಡುತ್ತೇನೆ. ಅವನ ಅಂತರಾತ್ಮವು ಅತ್ಯಂತ ಉದ್ದೀಪ್ತವಾಗಿರುತ್ತದೆ. (ಗೀತಾ ಪ್ರೆಸ್).
[8] ಈ ಮಾಯೆಯು ಹಿರಣ್ಯಕಶಿಪುವಿನ ಜೀವವಿರುವ ವರೆಗೆ ಬಲಶಾಲಿಯಾಗಿರುತ್ತದೆ ಎಂಬ ಶಾಪ (ಗೀತಾ ಪ್ರೆಸ್).