Harivamsha: Chapter 29

ಹರಿವಂಶ: ಹರಿವಂಶ ಪರ್ವ

ಏಕೋನತ್ರಿಂಶೋಽಧ್ಯಾಯಃ

ಕಾಶ್ಯಪವರ್ಣನಮ್

ಅನೇನನ ವಂಶದ ವರ್ಣನೆ; ಕ್ಷತ್ರವೃದ್ಧನ ವಂಶದ ವರ್ಣನೆ; ಧನ್ವಂತರಿಯು ಕಾಶಿರಾಜ ಧನ್ವನ ಮಗನಾಗಿ ಅವತರಿಸಿದುದು; ದಿವೋದಾಸನ ರಾಜ್ಯಕಾಲದಲ್ಲಿ ಶಿವನ ಆಜ್ಞೆಯಂತೆ ನಿಕುಂಭನು ವಾರಾಣಸಿಯನ್ನು ಜನಶೂನ್ಯವಾಗಿ ಮಾಡಿದುದು; ಅಲ್ಲಿ ಶಿವ-ಪಾರ್ವತಿಯರ ವಾಸ; ವಾರಾಣಸಿಯಲ್ಲಿ ದಿವೋದಾಸನ ರಾಜ್ಯಭಾರ; ಅಲರ್ಕನೇ ಮೊದಲಾದ ನಂತರದ ಕಾಶಿರಾಜರ ವರ್ಣನೆ.

19029001 ವೈಶಂಪಾಯನ ಉವಾಚ|

19029001a ರಂಭೋಽನಪತ್ಯಸ್ತತ್ರಾಸೀದ್ವಂಶಂ ವಕ್ಷ್ಯಾಮ್ಯನೇನಸಃ |

19028001c ಅನೇನಸಃ ಸುತೋ ರಾಜಾ ಪ್ರತಿಕ್ಷತ್ರೋ ಮಹಾಯಶಾಃ ||

ವೈಶಂಪಾಯನನು ಹೇಳಿದನು: “ಆಯುಪುತ್ರ ರಂಭನಿಗೆ ಮಕ್ಕಳಿರಲಿಲ್ಲ.  ಈಗ ನಾನು ಅನೇನನ ವಂಶದ ಕುರಿತು ಹೇಳುತ್ತೇನೆ. ಮಹಾಯಶಸ್ವೀ ರಾಜಾ ಪ್ರತಿಕ್ಷತ್ರನು ಅನೇನನ ಮಗನಾಗಿದ್ದನು.

19029002a ಪ್ರತಿಕ್ಷತ್ರಸುತಶ್ಚಾಪಿ ಸೃಂಜಯೋ ನಾಮ ವಿಶ್ರುತಃ |

19029002c ಸೃಂಜಯಸ್ಯ ಜಯಃ ಪುತ್ರೋ ವಿಜಯಸ್ತಸ್ಯ ಚಾತ್ಮಜಃ ||

ಪ್ರತಿಕ್ಷತ್ರನ ಮಗನು ಸೃಂಜಯ ಎಂಬ ಹೆಸರಿನಿಂದ ವಿಶ್ರುತನಾದನು. ಸೃಂಜಯನ ಮಗನು ಜಯ ಮತ್ತು ವಿಜಯನು ಅವನ ಮಗ.

19029003a ವಿಜಯಸ್ಯ ಕೃತಿಃ ಪುತ್ರಸ್ತಸ್ಯ ಹರ್ಯಶ್ವತಃ ಸುತಃ |

19029003c ಹರ್ಯಶ್ವತಸುತೋ ರಾಜಾ ಸಹದೇವಃ ಪ್ರತಾಪವಾನ್ ||

ವಿಜಯನ ಮಗನು ಕೃತಿ ಮತ್ತು ಹರ್ಯಶ್ವನು ಅವನ ಮಗ. ಹರ್ಯಶ್ವನ ಮಗನು ಪ್ರತಾಪವಾನ್ ರಾಜ ಸಹದೇವನು.

19029004a ಸಹದೇವಸ್ಯ ಧರ್ಮಾತ್ಮಾ ನದೀನ ಇತಿ ವಿಶ್ರುತಃ |

19029004c ನದೀನಸ್ಯ ಜಯತ್ಸೇನೋ ಜಯತ್ಸೇನಸ್ಯ ಸಂಕೃತಿಃ ||

ಸಹದೇವನ ಮಗನು ಧರ್ಮಾತ್ಮಾ ನದೀನನೆಂದು ವಿಶ್ರುತನಾದನು. ನದೀನನ ಮಗನು ಜಯತ್ಸೇನ ಮತ್ತು ಜಯತ್ಸೇನನ ಮಗನು ಸಂಕೃತಿ.

19029005a ಸಂಕೃತೇರಪಿ ಧರ್ಮಾತ್ಮಾ ಕ್ಷತ್ರಧರ್ಮಾ ಮಹಾಯಶಾಃ |

19029005c ಅನೇನಸಃ ಸಮಾಖ್ಯಾತಾಃ ಕ್ಷತ್ರವೃದ್ಧಸ್ಯ ಮೇ ಶೃಣು ||

ಸಂಕೃತಿಯ ಮಗನು ಧರ್ಮಾತ್ಮಾ ಮಹಾಯಶಸ್ವೀ ಕ್ಷತ್ರಧರ್ಮನಾದನು. ಇಲ್ಲಿಯವರೆಗೆ ಅನೇನನ ವಂಶದ ಕುರಿತು ಹೇಳಿದ್ದಾಯಿತು. ಈಗ ಆಯುಪುತ್ರ ಕ್ಷತ್ರವೃದ್ಧನ[1] ಕುರಿತು ಕೇಳು.

19029006a ಕ್ಷತ್ರವೃದ್ಧಾತ್ಮಜಸ್ತತ್ರ ಸುನಹೋತ್ರೋ ಮಹಾಯಶಾಃ |

19029006c ಸುನಹೋತ್ರಸ್ಯ ದಾಯಾದಾಸ್ತ್ರಯಃ ಪರಮಧಾರ್ಮಿಕಾಃ ||

19029007a ಕಾಶಃ ಶಲಶ್ಚ ದ್ವಾವೇತೌ ತಥಾ ಗೃತ್ಸಮದಃ ಪ್ರಭುಃ |

19029007c ಪುತ್ರೋ ಗೃತ್ಸಮದಸ್ಯಾಪಿ ಶುನಕೋ ಯಸ್ಯ ಶೌನಕ ||

19029008a ಬ್ರಾಹ್ಮಣಾಃ ಕ್ಷತ್ರಿಯಾಶ್ಚೈವಂ ವೈಶ್ಯಾಃ ಶೂದ್ರಾಸ್ತಥೈವ ಚ |

ಕ್ಷತ್ರವೃದ್ಧನ ಮಗನು ಮಹಾಯಶಸ್ವೀ ಸುನಹೋತ್ರನು. ಸುನಹೋತ್ರನಿಗೆ ಪರಮಧಾರ್ಮಿಕರಾದ ಮೂವರು ಪುತ್ರರಿದ್ದರು: ಕಾಶ, ಶಲ ಇವರಿಬ್ಬರು ಮತ್ತು ಪ್ರಭು ಗೃತ್ಸಮದ. ಗೃತ್ಸಮದನ ಮಗನು ಶುನಕ ಮತ್ತು ಶುನಕನಿಂದ ಶೌನಕರಾದರು. ಶೌನಕರಲ್ಲಿ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಆದರು.

19029008c ಶಲಾತ್ಮಜಶ್ಚಾರ್ಷ್ಟಿಷೇಣಸ್ತನಯಸ್ತಸ್ಯ ಕಾಶಕಃ ||

19029009a ಕಾಶಸ್ಯ ಕಾಶಯೋ ರಾಜನ್ಪುತ್ರೋ ದೀರ್ಘತಪಾಸ್ತಥಾ |

19029009c ಧನ್ವಸ್ತು ದೀರ್ಘತಪಸೋ ವಿದ್ವಾಂಧನ್ವಂತರಿಸ್ತತಃ ||

ಶಲನ ಮಗನು ಆರ್ಷ್ಟಿಷೇಣನು. ಅವನ ಮಗನು ಕಾಶಕನು. ರಾಜನ್! ಕಾಶನ ಪುತ್ರರು ಕಾಶಯರಾದರು. ಅವರಲ್ಲಿ ದೀರ್ಘತಪನು ಹಿರಿಯವನು. ದೀರ್ಘತಪನಿಗೆ ಧನ್ವನು ಮಗನಾದನು. ಮತ್ತು ಧನ್ವನಿಗೆ ಧನ್ವಂತರಿಯು ಮಗನಾದನು.

19029010a ತಪಸೋಽಂತೇ ಸುಮಹತೋ ಜಾತೋ ವೃದ್ಧಸ್ಯ ಧೀಮತಃ |

19029010c ಪುನರ್ಧನ್ವಂತರಿರ್ದೇವೋ ಮಾನುಷೇಷ್ವಿಹ ಜಜ್ಞಿವಾನ್ ||

ಮಹಾತಪಸ್ಸಿನ ಅಂತ್ಯದಲ್ಲಿ ದೇವ ಧನ್ವಂತರಿಯು ಧೀಮತ ವೃದ್ಧ ಧನ್ವನಿಗೆ ಮಗನಾಗೆ ಪುನಃ ಇಲ್ಲಿ ಮನುಷ್ಯನಾಗಿ ಜನ್ಮತಾಳಿದನು.”

19029011 ಜನಮೇಜಯ ಉವಾಚ |

19029011a ಕಥಂ ಧನ್ವಂತರಿರ್ದೇವೋ ಮಾನುಷೇಷ್ವಿಹ ಜಜ್ಞಿವಾನ್ |

19029011c ಏತದ್ವೇದಿತುಮಿಚ್ಛಾಮಿ ತನ್ಮೇ ಬ್ರೂಹಿ ಯಥಾತಥಮ್ ||

ಜನಮೇಜಯನು ಹೇಳಿದನು: “ದೇವ ಧನ್ವಂತರಿಯು ಹೇಗೆ ಇಲ್ಲಿ ಮನುಷ್ಯನಾಗಿ ಜನ್ಮತಾಳಿದನು? ಇದನ್ನು ಕೇಳಲು ಬಯಸುತ್ತೇನೆ. ನಡೆದಹಾಗೆ ನನಗೆ ಹೇಳು.”

19029012 ವೈಶಂಪಾಯನ ಉವಾಚ |

19029012a ಧನ್ವಂತರೇಃ ಸಂಭವೋಽಯಂ ಶ್ರೂಯತಾಂ ಭರತರ್ಷಭ |

19029012c ಜಾತಃ ಸ ಹಿ ಸಮುದ್ರಾತ್ತು ಮಥ್ಯಮಾನೇ ಪುರಾಮೃತೇ ||

ವೈಶಂಪಾಯನನು ಹೇಳಿದನು: “ಭರತರ್ಷಭ! ಧನ್ವಂತರಿಯ ಜನ್ಮದ ಕುರಿತು ಕೇಳಬೇಕು. ಅವನು ಹಿಂದೆ ಅಮೃತಕ್ಕಾಗಿ ಸಮುದ್ರವನ್ನು ಮಥಿಸುವಾಗ ಸಮುದ್ರದಿಂದ ಉತ್ಪನ್ನನಾಗಿದ್ದನಷ್ಟೇ.

19029013a ಉತ್ಪನ್ನಃ ಕಲಶಾತ್ಪೂರ್ವಂ ಸರ್ವತಶ್ಚ ಶ್ರಿಯಾ ವೃತಃ |

19029013c ಅಭ್ಯಸನ್ಸಿದ್ಧಿಕಾರ್ಯೇ ಹಿ ವಿಷ್ಣುಂ ದೃಷ್ಟ್ವಾ ಹಿ ತಸ್ಥಿವಾನ್ ||

ಮೊದಲು ಅವನು ಸಮುದ್ರದಿಂದ ಉತ್ಪನ್ನನಾದಾಗ ಅವನು ವಿಷ್ಣುವಿನ ನಾಮಗಳನ್ನು ಜಪಿಸುತ್ತಿದ್ದನು ಮತ್ತು ಆರೋಗ್ಯ ಸಾಧಕ ಕಾರ್ಯದ ಕುರಿತು ಚಿಂತಿಸುತ್ತಾ ಎಲ್ಲ ಕಡೆಗಳಿಂದಲೂ ದಿವ್ಯ ಕಾಂತಿಯಿಂದ ಪ್ರಕಾಶಿತನಾಗಿದ್ದನು. ಅವನು ತನ್ನ ಎದಿರು ವಿಷ್ಣುವನ್ನು ನೋಡಿ ಎದ್ದು ನಿಂತನು.

19029014a ಅಬ್ಜಸ್ತ್ವಮಿತಿ ಹೋವಾಚ ತಸ್ಮಾದಬ್ಜಸ್ತು ಸ ಸ್ಮೃತಃ |

19029014c ಅಬ್ಜಃ ಪ್ರೋವಾಚ ವಿಷ್ಣುಂ ವೈ ತವ ಪುತ್ರೋಽಸ್ಮಿ ವೈ ಪ್ರಭೋ ||

ಆಗ ವಿಷ್ಣುವು “ನೀನು ಆಪದಿಂದ ಉತ್ಪನ್ನನಾಗಿರುವುದರಿಂದ ಅಬ್ಜ” ಎಂದನು. ಅಂದಿನಿಂದ ಅವನು ಅಬ್ಜನೆಂದೇ ಆದನು. ಅಬ್ಜನು ವಿಷ್ಣುವಿಗೆ “ಪ್ರಭೋ! ನಾನು ನಿನ್ನ ಪುತ್ರನು!” ಎಂದು ಹೇಳಿದನು.

19029015a ವಿಧತ್ಸ್ವ ಭಾಗಂ ಸ್ಥಾನಂ ಚ ಮಮ ಲೋಕೇ ಸುರೇಶ್ವರ |

19029015c ಏವಮುಕ್ತಃ ಸ ದೃಷ್ಟ್ವಾ ವೈ ತಥ್ಯಂ ಪ್ರೋವಾಚ ತಂ ಪ್ರಭುಃ||

“ಸುರೇಶ್ವರ! ನನಗಾಗಿ ಯಜ್ಞಭಾಗದ ವ್ಯವಸ್ಥೆಯನ್ನು ಮಾಡು ಮತ್ತು ಲೋಕದಲ್ಲಿ ನನಗೆ ಒಂದು ಸ್ಥಾನವನ್ನು ಕೊಡು!” ಹೀಗೆ ಹೇಳಲು ಪ್ರಭುವು ಅವನಿಗೆ ಯಥಾರ್ಥವಾದ ಈ ಮಾತನ್ನು ಹೇಳಿದನು.

19029016a ಕೃತೋ ಯಜ್ಞವಿಭಾಗೋ ಹಿ ಯಜ್ಞಿಯೈರ್ಹಿ ಸುರೈಃ ಪುರಾ |

19029016c ದೇವೇಷು ವಿನುಯುಕ್ತಂ ಹಿ ವಿದ್ಧಿ ಹೋತ್ರಂ ಮಹರ್ಷಿಭಿಃ ||

“ಹಿಂದೆಯೇ ಸುರರು ಯಜ್ಞಸಂಬಂಧೀ ದೇವತೆಗಳಿಗೆ ಯಜ್ಞವಿಭಾಗಗಳನ್ನು ಮಾಡಿಬಿಟ್ಟಿದ್ದಾರೆ. ಮಹರ್ಷಿಗಳು ಯಜ್ಞದ ಆಹುತಿಗಳನ್ನು ದೇವತೆಗಳಿಗಾಗಿಯೇ ವಿನಿಯೋಜಿಸಿದ್ದಾರೆ. ಇದನ್ನು ನೀನು ಚೆನ್ನಾಗಿ ಅರ್ಥಮಾಡಿಕೋ.

19029017a ನ ಶಕ್ಯಮುಪಹೋಮಾ ವೈ ತುಭ್ಯಂ ಕರ್ತುಂ ಕದಾಚನ |

19029017c ಅರ್ವಾಗ್ಭೂತೋಽಸಿ ದೇವಾನಾಂ ಪುತ್ರ ತ್ವಂ ತು ನ ಹೀಶ್ವರಃ||

ಪುತ್ರ! ನಿನಗಾಗಿ ಎಂದೂ ಉಪಹೋಮಗಳನ್ನೂ ಮಾಡಲು ಸಾಧ್ಯವಿಲ್ಲ. ನೀನು ದೇವತೆಗಳ ನಂತರ ಹುಟ್ಟಿರುವೆ. ನೀನು ಯಜ್ಞಭಾಗಗಳ ಈಶ್ವರನಾಗುವುದಿಲ್ಲ.

19029018a ದ್ವಿತೀಯಾಯಾಂ ತು ಸಂಭೂತ್ಯಾಂ ಲೋಕೇ ಖ್ಯಾತಿಂ ಗಮಿಷ್ಯಸಿ |

19029018c ಅಣಿಮಾದಿಶ್ಚ ತೇ ಸಿದ್ಧಿರ್ಗರ್ಭಸ್ಥಸ್ಯ ಭವಿಷ್ಯತಿ ||

ಎರಡನೇ ಜನ್ಮದಲ್ಲಿ ನೀನು ಲೋಕದಲ್ಲಿ ವಿಖ್ಯಾತನಾಗುತ್ತೀಯೆ. ನೀನು ಗರ್ಭದಲ್ಲಿರುವಾಗಲೇ ನಿನಗೆ ಅಣಿಮಾದಿ ಸಿದ್ಧಿಗಳು ದೊರೆಯುತ್ತವೆ.

19029019a ತೇನೈವ ತ್ವಂ ಶರೀರೇಣ ದೇವತ್ವಂ ಪ್ರಾಪ್ಸ್ಯಸೇ ಪ್ರಭೋ |

19029019c ಚರುಮಂತ್ರೈರ್ವ್ರತೈರ್ಜಾಪ್ಯೈರ್ಯಕ್ಷ್ಯಂತಿ ತ್ವಾಂ ದ್ವಿಜಾತಯಃ||

ಪ್ರಭೋ! ನಿನ್ನ ಆ ಶರೀರದಿಂದಲೇ ನೀನು ದೇವತ್ವವನ್ನು ಪಡೆದುಕೊಳ್ಳುತ್ತೀಯೆ. ದ್ವಿಜಾತಿಯವರು ನಿನ್ನನ್ನು ಚರು-ಮಂತ್ರ-ವ್ರತ-ಮತ್ತು ಜಪಗಳಿಂದ ಅರ್ಚಿಸುತ್ತಾರೆ.

19029020a ಅಷ್ಟಧಾ ತ್ವಂ ಪುನಶ್ಚೈವಮಾಯುರ್ವೇದಂ ವಿಧಾಸ್ಯಸಿ |

19029020c ಅವಶ್ಯಭಾವೀ ಹ್ಯರ್ಥೋಽಯಂ ಪ್ರಾಗ್ದೃಷ್ಟಸ್ತ್ವಬ್ಜಯೋನಿನಾ ||

ಪುನಃ ನೀನು ಆಯುರ್ವೇದವನ್ನು ಎಂಟು ಭಾಗಗಳನ್ನಾಗಿ[2] ವಿಂಗಡಿಸುತ್ತೀಯೆ. ಇದು ಅವಶ್ಯವಾಗಿ ನಡೆಯುತ್ತದೆ. ಕಮಲಯೋನೀ ಬ್ರಹ್ಮನು ಮೊದಲೇ ಇದನ್ನು ಕಂಡಿದ್ದನು.

19029021a ದ್ವಿತೀಯಂ ದ್ವಾಪರಂ ಪ್ರಾಪ್ಯ ಭವಿತಾ ತ್ವಂ ನ ಸಂಶಯಃ |

19029021c ಇಮಂ ತಸ್ಮೈ ವರಂ ದತ್ತ್ವಾ ವಿಷ್ಣುರಂತರ್ದಧೇ ಪುನಃ ||

ಎರಡನೇ ದ್ವಾಪರವು ಪ್ರಾಪ್ತವಾದಾಗ ನೀನು ಪುನಃ ಪ್ರಕಟನಾಗುತ್ತೀಯೆ. ಇದರಲ್ಲಿ ಸಂಶಯವಿಲ್ಲ.” ಹೀಗೆ ಅವನಿಗೆ ವರವನ್ನಿತ್ತು ವಿಷ್ಣುವು ಪುನಃ ಅಂತರ್ಧಾನನಾದನು.

19029022a ದ್ವಿತೀಯೇ ದ್ವಾಪರಂ ಪ್ರಾಪ್ತೇ ಸೌನಹೋತ್ರಿಃ ಸ ಕಾಶಿರಾಟ್ |

19029022c ಪುತ್ರಕಾಮಸ್ತಪಸ್ತೇಪೇ ಧನ್ವೋ ದೀರ್ಘತಪಾಸ್ತದಾ ||

ಎರಡನೆಯ ದ್ವಾಪರವು ಪ್ರಾಪ್ತವಾಗಲು ಸುನಹೋತ್ರನ ಪುತ್ರ ಕಾಶಿರಾಜ ಧನ್ವನು ಪುತ್ರನನ್ನು ಬಯಸಿ ದೀರ್ಘ ತಪಸ್ಸನ್ನು ತಪಿಸಿದನು.

19029023a ಪ್ರಪದ್ಯೇ ದೇವತಾಂ ತಾಂ ತು ಯಾ ಮೇ ಪುತ್ರಂ ಪ್ರದಾಸ್ಯತಿ |

19029023c ಅಬ್ಜಂ ದೇವಂ ಸುತಾರ್ಥಾಯ ತದಾಽಽರಾಧಿತವಾನ್ನೃಪಃ ||

ಯಾವದೇವತೆಯು ನನಗೆ ಪುತ್ರನನ್ನು ಕೊಡುವನೋ ಆ ದೇವತೆಯನ್ನೇ ಪೂಜಿಸುತ್ತೇನೆ ಎಂದು ಆ ನೃಪನು ಮಗನಿಗಾಗಿ ಅಬ್ಜ ದೇವನನ್ನೇ ಆರಾಧಿಸಿದನು.

19029024a ತತಸ್ತುಷ್ಟಃ ಸ ಭಗವಾನಬ್ಜಃ ಪ್ರೋವಾಚ ತಂ ನೃಪಮ್ |

19029024c ಯದಿಚ್ಛಸಿ ವರಂ ಬ್ರೂಹಿ ತತ್ತೇ ದಾಸ್ಯಾಮಿ ಸುವ್ರತ ||

ಆಗ ತುಷ್ಟನಾದ ಭಗವಾನ್ ಅಬ್ಜನು ಆ ನೃಪತಿಗೆ ಹೇಳಿದನು: “ಸುವ್ರತ! ನೀನು ಬಯಸಿದ ವರವನ್ನು ಕೇಳು. ಅದನ್ನು ನಿನಗೆ ನೀಡುತ್ತೇನೆ.”

19029025 ನೃಪ ಉವಾಚ|

19029025a ಭಗವನ್ಯದಿ ತುಷ್ಟಸ್ತ್ವಂ ಪುತ್ರೋ ಮೇ ಖ್ಯಾತಿಮಾನ್ಭವ |

19029025c ತಥೇತಿ ಸಮನುಜ್ಞಾಯ ತತ್ರೈವಾಂತರಧೀಯತ ||

ನೃಪನು ಹೇಳಿದನು: “ಭಗವನ್! ಒಂದು ವೇಳೆ ನೀನು ತುಷ್ಟನಾಗಿರುವೆಯಾದರೆ ನನ್ನ ಪುತ್ರನಾಗಿ ಖ್ಯಾತಿವಂತನಾಗು.” ಹಾಗೆಯೇ ಆಗಲೆಂದು ಅನುಜ್ಞೆಯನ್ನಿತ್ತು ಅಬ್ಜನು ಅಲ್ಲಿಯೇ ಅಂತರ್ಧಾನನಾದನು.

19029026a ತಸ್ಯ ಗೇಹೇ ಸಮುತ್ಪನ್ನೋ ದೇವೋ ಧನ್ವಂತರಿಸ್ತದಾ |

19029026c ಕಾಶಿರಾಜೋ ಮಹಾರಾಜ ಸರ್ವರೋಗಪ್ರಣಾಶನಃ ||

ಮಹಾರಾಜ! ಅನಂತರ ದೇವ ಧನ್ವಂತರಿಯು ಧನ್ವನ ಮನೆಯಲ್ಲಿ ಹುಟ್ಟಿಕೊಂಡನು. ಆ ಕಾಶಿರಾಜನು ಸರ್ವರೋಗಗಳನ್ನೂ ನಾಶಪಡಿಸಲು ಸಮರ್ಥನಾಗಿದ್ದನು.

19029027a ಆಯುರ್ವೇದಂ ಭರದ್ವಾಜಾತ್ಪ್ರಾಪ್ಯೇಹ ಭಿಷಜಾಂ ಕ್ರಿಯಾಮ್|

19029027c ತಮಷ್ಟಧಾ ಪುನರ್ವ್ಯಸ್ಯ ಶಿಷ್ಯೇಭ್ಯಃ ಪ್ರತ್ಯಪಾದಯತ್ ||

ಭರದ್ವಾಜನಿಂದ ಆಯುರ್ವೇದ ಮತ್ತು ಚಿಕಿತ್ಸಾಕರ್ಮಗಳನ್ನು ಪಡೆದುಕೊಂಡು ಪುನಃ ಅದನ್ನು ಎಂಟು ಭಾಗಗಳನ್ನಾಗಿ ವಿಭಜಿಸಿ, ಶಿಷ್ಯರಿಗೂ ಅದನ್ನು ಹೇಳಿಕೊಟ್ಟನು.

19029028a ಧನ್ವಂತರೇಸ್ತು ತನಯಃ ಕೇತುಮಾನಿತಿ ವಿಶ್ರುತಃ |

19029028c ಅಥ ಕೇತುಮತಃ ಪುತ್ರೋ ವೀರೋ ಭೀಮರಥಃ ಸ್ಮೃತಃ ||

ಧನ್ವಂತರಿಯ  ತನಯನು ಕೇತುಮಾನನೆಂದು ವಿಶ್ರುತನಾದನು. ಕೇತುಮತನ ಪುತ್ರನು ವೀರ ಭೀಮರಥನು.

19029029a ಸುತೋ ಭೀಮರಥಸ್ಯಾಪಿ ದಿವೋದಾಸಃ ಪ್ರಜೇಶ್ವರಃ |

19029029c ದಿವೋದಾಸಸ್ತು ಧರ್ಮಾತ್ಮಾ ವಾರಾಣಸ್ಯಧಿಪೋಽಭವತ್ ||

ಭೀಮರಥನ ಮಗನು ಪ್ರಜೇಶ್ವರ ದಿವೋದಾಸನು. ಧರ್ಮಾತ್ಮ ದಿವೋದಾಸನಾದರೋ ವಾರಾಣಸಿಯ ಅಧಿಪನಾದನು.

19029030a ಏತಸ್ಮಿನ್ನೇವ ಕಾಲೇ ತು ಪುರೀಂ ವಾರಾಣಸೀಂ ನೃಪ |

19029030c ಶೂನ್ಯಾಂ ನಿವಾಸಯಾಮಾಸ ಕ್ಷೇಮಕೋ ನಾಮ ರಾಕ್ಷಸಃ ||

ನೃಪ! ಈ ಕಾಲದಲ್ಲಿಯೇ ವಾರಾಣಸೀ ಪುರವು ಜನಶೂನ್ಯವಾಗಿದ್ದು ಅಲ್ಲಿ ಕ್ಷೇಮಕ ಎಂಬ ರಾಕ್ಷಸನು ವಾಸಿಸುತ್ತಿದ್ದನು.

19029031a ಶಪ್ತಾ ಹಿ ಸಾ ಮತಿಮತಾ ನಿಕುಂಭೇನ ಮಹಾತ್ಮನಾ |

19029031c ಶೂನ್ಯಾ ವರ್ಷಸಹಸ್ರಂ ವೈ ಭವಿತ್ರೀ ನಾತ್ರ ಸಂಶಯಃ ||

ಮಹಾತ್ಮ ಮತಿಮತ ನಿಕುಂಭನು ವಾರಾಣಸೀ ಪುರಿಗೆ “ಸಹಸ್ರವರ್ಷಗಳು ನೀನು ಜನಶೂನ್ಯಳಾಗಿರುವೆ. ಇದರಲ್ಲಿ ಸಂಶಯವಿಲ್ಲ” ಎಂದು ಶಪಿಸಿದ್ದನು.

19029032a ತಸ್ಯಾಂ ತು ಶಪ್ತಮಾತ್ರಾಯಾಂ ದಿವೋದಾಸಃ ಪ್ರಜೇಶ್ವರಃ |

19029032c ವಿಷಯಾಂತೇ ಪುರೀಂ ರಮ್ಯಾಂ ಗೋಮತ್ಯಾಂ ಸಂನ್ಯವೇಶಯತ್ ||

ವಾರಾಣಸಿಯು ಹಾಗೆ ಶಾಪಕ್ಕೊಳಗಾಗಲು ಪ್ರಜೇಶ್ವರ ದಿವೋದಾಸನು ರಾಜ್ಯದ ಗಡಿಯಲ್ಲಿ ಗೋಮತಿಯ ಬಳಿ ರಮ್ಯ ಪುರಿಯನ್ನು ನಿರ್ಮಿಸಿ ವಾಸಿಸುತ್ತಿದ್ದನು.

19029033a ಭದ್ರಶ್ರೇಣ್ಯಸ್ಯ ಪೂರ್ವಂ ತು ಪುರೀ ವಾರಾಣಸೀತ್ಯಭೂತ್ |

19029033c ಭದ್ರಶ್ರೇಣ್ಯಸ್ಯ ಪುತ್ರಾಣಾಂ ಶತಮುತ್ತಮಧನ್ವಿನಾಮ್ ||

ಮೊದಲು ವಾರಾಣಸೀ ಪುರಿಯು ಭದ್ರಶ್ರೇಣ್ಯ[3]ನ ಅಧಿಕಾರದಲ್ಲಿತ್ತು. ಭದ್ರಶ್ರೇಣ್ಯನಿಗೆ ಉತ್ತಮ ಧನ್ವಿಗಳಾದ ನೂರು ಪುತ್ರರಿದ್ದರು.

19029034a ಹತ್ವಾ ನಿವೇಶಯಾಮಾಸ ದಿವೋದಾಸೋ ನರರ್ಷಭಃ |

19029034c ಭದ್ರಶ್ರೇಣ್ಯಸ್ಯ ತದ್ರಾಜ್ಯಂ ಹೃತಂ ತೇನ ಬಲೀಯಸಾ ||

ನರರ್ಷಭ ದಿವೋದಾಸನು ಅವನನ್ನು ಸಂಹರಿಸಿ ಅಲ್ಲಿ ತನ್ನ ರಾಜ್ಯವನ್ನು ಸ್ಥಾಪಿಸಿದ್ದನು. ಭದ್ರಶ್ರೇಣ್ಯನ ಆ ರಾಜ್ಯವನ್ನು ಅವನು ಬಲವನ್ನುಪಯೋಗಿಸಿ ಅಪಹರಿಸಿದ್ದನು.”

19029035 ಜನಮೇಜಯ ಉವಾಚ |

19029035a ವಾರಾಣಸೀಂ ನಿಕುಂಭಸ್ತು ಕಿಮರ್ಥಂ ಶಪ್ತವಾನ್ಪ್ರಭುಃ |

19029035c ನಿಕುಂಭಕಶ್ಚ ಧರ್ಮಾತ್ಮಾ ಸಿದ್ಧಿಕ್ಷೇತ್ರಂ ಶಶಾಪ ಯಃ ||

ಜನಮೇಜಯನು ಹೇಳಿದನು: “ಪ್ರಭು ನಿಕುಂಭನಾದರೋ ವಾರಾಣಸಿಯನ್ನು ಯಾವಕಾರಣಕ್ಕಾಗಿ ಶಪಿಸಿದನು? ನಿಕುಂಭನು ಧರ್ಮಾತ್ಮನಾಗಿದ್ದನು ಮತ್ತು ಅವನು ಶಪಿಸಿದ ವಾರಾಣಸಿಯಾದರೋ ಸಿದ್ಧಿಕ್ಷೇತ್ರವು.”

19029036 ವೈಶಂಪಾಯನ ಉವಾಚ |

19029036a ದಿವೋದಾಸಸ್ತು ರಾಜರ್ಷಿರ್ನಗರೀಂ ಪ್ರಾಪ್ಯ ಪಾರ್ಥಿವಃ |

19029036c ವಸತಿ ಸ್ಮ ಮಹಾತೇಜಾಃ ಸ್ಫೀತಾಯಾಂ ತು ನರಾಧಿಪಃ ||

ವೈಶಂಪಾಯನನು ಹೇಳಿದನು: “ಪಾರ್ಥಿವ ನರಾಧಿಪ ರಾಜರ್ಷಿ ದಿವೋದಾಸನಾದರೋ ಆ ನಗರಿಯನ್ನು ಪಡೆದು ಅಲ್ಲಿ ಮಹಾತೇಜಸ್ಸಿನಿಂದ ಸಮೃದ್ಧಿಯಿಂದ ವಾಸಿಸುತ್ತಿದ್ದನು.

19029037a ಏತಸ್ಮಿನ್ನೇವ ಕಾಲೇ ತು ಕೃತದಾರೋ ಮಹೇಶ್ವರಃ |

19029037c ದೇವ್ಯಾಃ ಸ ಪ್ರಿಯಕಾಮಸ್ತು ನ್ಯವಸಚ್ಛ್ವಶುರಾಂತಿಕೇ ||

ಇದೇ ಸಮಯದಲ್ಲಿ ಮಹೇಶ್ವರನು ವಿವಾಹವಾಗಿ ದೇವಿಗೆ ಪ್ರಿಯವಾದುದನ್ನು ಮಾಡಲು ಬಯಸಿ ತನ್ನ ಮಾವನ ಮನೆಯಲ್ಲಿಯೇ ವಾಸಿಸುತ್ತಿದ್ದನು.

19029038a ದೇವಾಜ್ಞಯಾ ಪಾರ್ಷದಾ ಯೇ ತ್ವಧಿರೂಪಾಸ್ತಪೋಧನಾಃ |

19029038c ಪೂರ್ವೋಕ್ತೈರುಪದೇಶೈಶ್ಚ ತೋಷಯಂತಿ ಸ್ಮ ಪಾರ್ವತೀಮ್||

ದೇವನ ಆಜ್ಞೆಯಂತೆ ಮತ್ತು ಅವನು ಮೊದಲೇ ನೀಡಿದ್ದ ಉಪದೇಶದಂತೆ ತಪೋಧನರಾಗಿದ್ದ ಶಿವನ ಪಾರ್ಷದರು ಪಾರ್ವತಿಯನ್ನು ಸಂತೋಷಪಡಿಸುವುದರಲ್ಲಿಯೇ ನಿರತರಾಗಿದ್ದರು.

19029039a ಹೃಷ್ಯತೇ ವೈ ಮಹಾದೇವೀ ಮೇನಾ ನೈವ ಪ್ರಹೃಷ್ಯತಿ |

19029039c ಜುಗುಪ್ಸತ್ಯಸಕೃತ್ತಾಂ ವೈ ದೇವೀಂ ದೇವಂ ತಥೈವ ಸಾ ||

ಇದರಿಂದ ಮಹಾದೇವಿಯು ಹರ್ಷಿತಳಾಗುತ್ತಿದ್ದಳು. ಆದರೆ ಮೇನಳು ಸಂತೋಷಪಡುತ್ತಿರಲಿಲ್ಲ. ಅವಳು ಜುಗುಪ್ಸೆಯಿಂದ ಮತ್ತೆ ಮತ್ತೆ ದೇವೀ ಮತ್ತು ದೇವನನ್ನು ಅಪಮಾನಿಸುತ್ತಿದ್ದಳು.

19029040a ಸಪಾರ್ಷದಸ್ತ್ವನಾಚಾರಸ್ತವ ಭರ್ತಾ ಮಹೇಶ್ವರಃ |

19029040c ದರಿದ್ರಃ ಸರ್ವದೈವಾಸೌ ಶೀಲಂ ತಸ್ಯ ನ ವರ್ತತೇ ||

“ನಿನ್ನ ಪತಿ ಮಹೇಶ್ವರ ಮತ್ತು ಅವನ ಪಾರ್ಷದರೆಲ್ಲರೂ ಅನಾಚಾರಿಗಳು. ಅವನು ದರಿದ್ರನೂ ಕೂಡ. ಅವನ ವರ್ತನೆಯಲ್ಲಿ ಶೀಲವೆನ್ನುವುದೇ ಇಲ್ಲ.”

19029041a ಮಾತ್ರಾ ತಥೋಕ್ತಾ ವರದಾ ಸ್ತ್ರೀಸ್ವಭಾವಾಚ್ಚ ಚುಕ್ರುಧೇ |

19029041c ಸ್ಮಿತಂ ಕೃತ್ವಾ ಚ ವರದಾ ಭವಪಾರ್ಶ್ವಮಥಾಗಮತ್ ||

ತಾಯಿಯು ಹೀಗೆ ಹೇಳಲು ವರದೆಯು ಸ್ತ್ರಿಸ್ವಭಾವದಿಂದ ಕ್ರುದ್ಧಳಾದಳು. ಆ ವರದೆಯು ಮುಗುಳ್ನಗುತ್ತಾ ಭವನ ಬಳಿ ಬಂದಳು.

19029042a ವಿವರ್ಣವದನಾ ದೇವೀ ಮಹಾದೇವಮಭಾಷತ |

19029042c ನೇಹ ವತ್ಸ್ಯಾಮ್ಯಹಂ ದೇವ ನಯ ಮಾಂ ಸ್ವಂ ನಿಕೇತನಮ್ ||

ವಿವರ್ಣವದನಳಾದ ದೇವಿಯು ಮಹಾದೇವನಿಗೆ ಹೇಳಿದಳು: “ದೇವ! ನನಗಿನ್ನು ಇಲ್ಲಿ ವಾಸಿಸುವುದು ಬೇಡವಾಗಿದೆ. ನನಗೆ ನಮ್ಮದೇ ಸ್ವಂತ ಹೊಸ ಮನೆಯು ಬೇಕು.”

19029043a ತಥಾ ಕರ್ತುಂ ಮಹಾದೇವಃ ಸರ್ವಲೋಕಾನವೈಕ್ಷತ |

19029043c ವಾಸಾರ್ಥಂ ರೋಚಯಾಮಾಸ ಪೃಥಿವ್ಯಾಂ ಕುರುನಂದನ ||

19029044a ವಾರಾಣಸೀ ಮಹಾತೇಜಾಃ ಸಿದ್ಧಿಕ್ಷೇತ್ರಂ ಮಹೇಶ್ವರಃ |

ಕುರುನಂದನ! ಹಾಗೆ ಮಾಡಲು ಮಹಾದೇವನು ಲೋಕಗಳೆಲ್ಲವನ್ನೂ ವೀಕ್ಷಿಸಿದನು. ಆಗ ಮಹಾತೇಜಸ್ವೀ ಮಹೇಶ್ವರನು ಆವಾಸಕ್ಕೆ ಪೃಥ್ವಿಯಲ್ಲಿ ಸಿದ್ಧಿಕ್ಷೇತ್ರ ವಾರಾಣಸೀ ಪುರಿಯನ್ನೇ ಮೆಚ್ಚಿಕೊಂಡನು.

19029044c ದಿವೋದಾಸೇನ ತಾಂ ಜ್ಞಾತ್ವಾ ನಿವಿಷ್ಟಾಂ ನಗರೀಂ ಭವಃ ||

19029045a ಪಾರ್ಶ್ವೇ ತಿಷ್ಠಂತಮಾಹೂಯ ನಿಕುಂಭಮಿದಮಬ್ರವೀತ್ |

19029045c ಗಣೇಶ್ವರ ಪುರೀಂ ಗತ್ವಾ ಶೂನ್ಯಾಂ ವಾರಾಣಸೀಂ ಕುರು ||

19029046a ಮೃದುನೈವಾಭ್ಯುಪಾಯೇನ ಹ್ಯತಿವೀರ್ಯಃ ಸ ಪಾರ್ಥಿವಃ |

ಆ ನಗರಿಯಲ್ಲಿ ದಿವೋದಾಸನು ವಾಸಿಸುತ್ತಿದ್ದಾನೆ ಎಂದು ತಿಳಿದು ಭವನು ಪಕ್ಕದಲ್ಲಿ ನಿಂತಿದ್ದ ನಿಕುಂಭನನ್ನು ಕರೆದು ಹೇಳಿದನು: “ಗಣೇಶ್ವರ! ವಾರಾಣಸೀ ಪುರಿಗೆ ಹೋಗಿ ಅದನ್ನು ಶೂನ್ಯವನ್ನಾಗಿ ಮಾಡು. ಇದನ್ನು ನಯದಿಂದ ಮತ್ತು ಉಪಾಯದಿಂದ ಮಾಡು. ಏಕೆಂದರೆ ಆ ಪಾರ್ಥಿವನು ಅತಿವೀರ್ಯನು.”

19029046c ತತೋ ಗತ್ವಾ ನಿಕುಂಭಸ್ತು ಪೂರೀಂ ವಾರಾಣಸೀಂ ತದಾ ||

19029047a ಸ್ವಪ್ನೇ ನಿದರ್ಶಯಾಮಾಸ ಕಂಡುಕಂ ನಾಮ ನಾಪಿತಮ್ |

19029047c ಶ್ರೇಯಸ್ತೇಽಹಂ ಕರಿಷ್ಯಾಮಿ ಸ್ಥಾನಂ ಮೇ ರೋಚಯಾನಘ ||

19029048a ಮದ್ರೂಪಾಂ ಪ್ರತಿಮಾಂ ಕೃತ್ವಾ ನಗರ್ಯಂತೇ ತಥೈವ ಚ |

ಅನಂತರ ನಿಕುಂಭನು ವಾರಾಣಸೀ ಪುರಿಗೆ ಹೋಗಿ ಕಂಡುಕ ಎಂಬ ಹೆಸರಿನ ಕ್ಷೌರಿಕನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಹೇಳಿದನು: “ಅನಘ! ಈ ನಗರದ ಗಡಿಯಲ್ಲಿ ನನ್ನ ರೂಪದ ಪ್ರತಿಮೆಯನ್ನು ಮಾಡಿ ನನಗೆ ಇಷ್ಟವಾಗುವಂಥಹ ಸ್ಥಾನವನ್ನು ಕಲ್ಪಿಸು. ನಿನಗೆ ನಾನು ಶ್ರೇಯಸ್ಸನ್ನುಂಟುಮಾಡುತ್ತೇನೆ.”

19029048c ತತಃ ಸ್ವಪ್ನೇ ಯಥೋದ್ದಿಷ್ಟಂ ಸರ್ವಂ ಕಾರಿತವಾನ್ನೃಪ ||

19029049a ಪುರೀದ್ವಾರೇ ತು ವಿಜ್ಞಾಪ್ಯ ರಾಜಾನಂ ಚ ಯಥಾವಿಧಿ |

19029049c ಪೂಜಾಂ ತು ಮಹತೀಂ ತಸ್ಯ ನಿತ್ಯಮೇವ ಪ್ರಯೋಜಯತ್ ||

19029050a ಗಂಧೈಶ್ಚ ಧೂಪಮಾಲ್ಯೈಶ್ಚ ಪ್ರೋಕ್ಷಣೀಯೈಸ್ತಥೈವ ಚ |

19029050c ಅನ್ನಪಾನಪ್ರಯೋಗೈಶ್ಚ ಅತ್ಯದ್ಭುತಮಿವಾಭವತ್ ||

ನೃಪ! ಅನಂತರ ಕಂಡುಕನು ಸ್ವಪ್ನದಲ್ಲಿ ಕಂಡಂತೆ ಎಲ್ಲವನ್ನೂ ಮಾಡಿಸಿದನು. ಯಥಾವಿಧಿಯಾಗಿ ರಾಜನಿಗೆ ತಿಳಿಸಿ ಪುರೀದ್ವಾರದಲ್ಲಿ ನಿತ್ಯವೂ ನಿಕುಂಭನಿಗೆ ಮಹಾ ಪೂಜೆಯನ್ನು ನಿಯೋಜಿಸಿದನು. ಗಂಧ, ಧೂಪ, ಮಾಲೆ, ಪ್ರೋಕ್ಷಣೀಯಗಳು, ಅನ್ನ-ಪಾನ ನೈವೇದ್ಯಗಳು ಇವೇ ಮೊದಲಾದವುಗಳಿಂದ ಆ ಪೂಜೆಯು ಅತ್ಯದ್ಭುತವಾಗಿತ್ತು.

19029051a ಏವಂ ಸಂಪೂಜ್ಯತೇ ತತ್ರ ನಿತ್ಯಮೇವ ಗಣೇಶ್ವರಃ |

19029051c ತತೋ ವರಸಹಸ್ರಂ ತು ನಾಗರಾಣಾಂ ಪ್ರಯಚ್ಛತಿ |

19029051e ಪುತ್ರಾನ್ಹಿರಣ್ಯಮಾಯುಶ್ಚ ಸರ್ವಾನ್ಕಾಮಾಂಸ್ತಥೈವ ಚ ||

ಹೀಗೆ ನಿತ್ಯವೂ ಪೂಜಿಸಲ್ಪಡುತ್ತಿದ್ದ ಗಣೇಶ್ವರನು ನಾಗರಿಕರಿಗೆ ಸಹಸ್ರಾರು ವರಗಳನ್ನಿತ್ತನು – ಪುತ್ರರು, ಚಿನ್ನ, ಆಯಸ್ಸು, ಮತ್ತು ಸರ್ವ ಕಾಮನೆಗಳನ್ನೂ ಪೂರೈಸಿದನು.

19029052a ರಾಜ್ಞಸ್ತು ಮಹಿಷೀ ಶ್ರೇಷ್ಠಾ ಸುಯಶಾ ನಾಮ ವಿಶ್ರುತಾ |

19029052c ಪುತ್ರಾರ್ಥಮಾಗತಾ ದೇವೀ ಸಾಧ್ವೀ ರಾಜ್ಞಾ ಪ್ರಚೋದಿತಾ ||

ರಾಜಾ ದಿವೋದಾಸನ ಮಹಿಷೀ ಶ್ರೇಷ್ಠಳು ಸುಯಶಾ ಎಂಬ ಹೆಸರಿನಿಂದ ವಿಶ್ರುತಳಾಗಿದ್ದಳು. ರಾಜನಿಂದ ಪ್ರಚೋದಿತಳಾದ ಆ ಸಾಧ್ವೀ ದೇವಿಯು ಪುತ್ರನಿಗಾಗಿ ಅಲ್ಲಿಗೆ ಆಗಮಿಸಿದಳು.

19029053a ಪೂಜಾಂ ತು ವಿಪುಲಾಂ ಕೃತ್ವಾ ದೇವೀ ಪುತ್ರಮಯಾಚತ |

19029053c ಪುನಃ ಪುನರಥಾಗಮ್ಯ ಬಹುಶಃ ಪುತ್ರಕಾರಣಾತ್ ||

ಆ ದೇವಿಯು ವಿಪುಲ ಪೂಜೆಗೈದು ಪುತ್ರನನ್ನು ಯಾಚಿಸಿದಳು. ಪುತ್ರಕಾರಣದಿಂದ ಅವಳು ಅನೇಕ ಬಾರಿ ಪುನಃ ಪುನಃ ಅಲ್ಲಿಗೆ ಬಂದಳು.

19029054a ನ ಪ್ರಯಚ್ಛತಿ ಪುತ್ರಂ ಹಿ ನಿಕುಂಭಃ ಕಾರಣೇನ ಹಿ |

19029054e ರಾಜಾ ತು ಯದಿ ನಃ ಕುಪ್ಯೇತ್ಕಾರ್ಯಸಿದ್ಧಿಸ್ತತೋ ಭವೇತ್ ||

“ರಾಜನು ನನ್ನ ಮೇಲೆ ಕುಪಿತನಾದರೆ ಕಾರ್ಯಸಿದ್ಧಿಯಾಗುತ್ತದೆ” ಎಂಬ ಕಾರಣದಿಂದ ನಿಕುಂಭನು ಅವಳಿಗೆ ಪುತ್ರನನ್ನು ನೀಡಲಿಲ್ಲ.

19029055a ಅಥ ದೀರ್ಘೇಣ ಕಾಲೇನ ಕ್ರೋಧೋ ರಾಜಾನಮಾವಿಶತ್ |

19029055c ಭೂತ ಏಷ ಮಹಾಂದ್ವಾರಿ ನಾಗರಾಣಾಂ ಪ್ರಯಚ್ಛತಿ ||

19029056a ಪ್ರೀತೋ ವರಾನ್ವೈ ಶತಶೋ ಮಮ ಕಿಂ ನ ಪ್ರಯಚ್ಛತಿ |

ದೀರ್ಘ ಕಾಲದ ನಂತರ ಕ್ರೋಧವು ರಾಜನನ್ನು ಆವೇಶಿಸಿತು. “ಮಹಾದ್ವಾರದಲ್ಲಿರುವ ಈ ಭೂತನು ನಾಗರಿಕರಿಗೆ ಪ್ರೀತನಾಗಿ ನೂರಾರು ವರಗಳನ್ನು ನೀಡುತ್ತಾನೆ. ಆದರೆ ನನಗೆ ಏಕೆ ನೀಡುತ್ತಿಲ್ಲ?

19029056c ಮಾಮಕೈಃ ಪೂಜ್ಯತೇ ನಿತ್ಯಂ ನಗರ್ಯಾ ಮೇ ಸದೈವ ಹಿ ||

19029057a ವಿಜ್ಞಾಪಿತೋ ಮಯಾತ್ಯರ್ಥಂ ದೇವ್ಯಾ ಮೇ ಪುತ್ರಕಾರಣಾತ್|

19029057c ನ ದದಾತಿ ಚ ಪುತ್ರಂ ಮೇ ಕೃತಘ್ನಃ ಕೇನ ಹೇತುನಾ ||

ನನ್ನದೇ ನಗರದಲ್ಲಿ ನನ್ನದೇ ಜನರು ಸದಾ ಇವನನ್ನು ಪೂಜಿಸುತ್ತಿದ್ದಾರೆ. ನನ್ನ ದೇವಿಗೆ ಪುತ್ರನು ಬೇಕೆಂದು ನಾನೂ ಕೂಡ ವಿಜ್ಞಾಪಿಸಿಕೊಂಡಿದ್ದೇನೆ. ಆದರೂ ಈ ಕೃತಘ್ನನು ಯಾವುದೋ ಕಾರಣದಿಂದ ನನಗೆ ಪುತ್ರನನ್ನು ನೀಡುತ್ತಿಲ್ಲ.

19029058a ತತೋ ನಾರ್ಹತಿ ಸತ್ಕಾರಂ ಮತ್ಸಕಾಶಾದ್ವಿಶೇಷತಃ |

19029058c ತಸ್ಮಾತ್ತು ನಾಶಯಿಷ್ಯಾಮಿ ಸ್ಥಾನಮಸ್ಯ ದುರಾತ್ಮನಃ ||

ಆದುದರಿಂದ ಇವನು ನನ್ನ ವಿಶೇಷ ಸತ್ಕಾರಗಳಿಗೆ ಅರ್ಹನಲ್ಲ. ಈ ದುರಾತ್ಮನ ಸ್ಥಾನವನ್ನು ನಾಶಪಡಿಸುತ್ತೇನೆ.”

19029059a ಏವಂ ಸ ತು ವಿನಿಶ್ಚಿತ್ಯ ದುರಾತ್ಮಾ ರಾಜಕಿಲ್ಬಿಷೀ |

19029059c ಸ್ಥಾನಂ ಗಣಪತೇಸ್ತಸ್ಯ ನಾಶಯಾಮಾಸ ದುರ್ಮತಿಃ ||

ಹೀಗೆ ನಿಶ್ಚಯಿಸಿ ದುರಾತ್ಮಾ ರಾಜಕಿಲ್ಬಿಷೀ ದುರ್ಮತಿಯು ಗಣಪತಿಯ ಸ್ಥಾನವನ್ನು ನಾಶಗೊಳಿಸತೊಡಗಿದನು.

19029060a ಭಗ್ನಮಾಯತನಂ ದೃಷ್ಟ್ವಾ ರಾಜಾನಮಶಪತ್ಪ್ರಭುಃ |

19029060c ಯಸ್ಮಾದನಪರಾಧಸ್ಯ ತ್ವಯಾ ಸ್ಥಾನಂ ವಿನಾಶಿತಮ್ |

19029060e ಪುರ್ಯಕಸ್ಮಾದಿಯಂ ಶೂನ್ಯಾ ತವ ನೂನಂ ಭವಿಷ್ಯತಿ ||

ತನ್ನ ವಾಸಸ್ಥಾನವು ಭಗ್ನವಾದುದನ್ನು ಕಂಡ ಪ್ರಭು ನಿಕುಂಭನು ರಾಜನನ್ನು ಶಪಿಸುತ್ತಾ ಹೇಳಿದನು: “ನೀನು ಅನಪರಾಧಿಯಾದ ನನ್ನ ಸ್ಥಾನವನ್ನು ನಾಶಗೊಳಿಸಿದ್ದೀಯೆ. ಆದುದರಿಂದ ನಿನ್ನ ಈ ಪುರಿಯೂ ಅಕಸ್ಮಾತ್ ಜನಶೂನ್ಯವಾಗುತ್ತದೆ.”

19029061a ತತಸ್ತೇನ ತು ಶಾಪೇನ ಶೂನ್ಯಾ ವಾರಾಣಸೀ ತದಾ |

19029061c ಶಪ್ತ್ವಾ ಪುರೀಂ ನಿಕುಂಭಸ್ತು ಮಹಾದೇವಮಥಾಗಮತ್ ||

ಅನಂತರ ಅವನ ಶಾಪದಿಂದ ವಾರಾಣಸಿಯು ಶೂನ್ಯವಾಯಿತು. ಪುರಿಯನ್ನು ಶಪಿಸಿ ನಿಕುಂಭನಾದರೋ ಮಹಾದೇವನ ಬಳಿ ಆಗಮಿಸಿದನು.

19029062a ಅಕಸ್ಮಾತ್ತು ಪುರೀ ಸಾ ತು ವಿದ್ರುತಾ ಸರ್ವತೋದಿಶಮ್ |

19029062c ತಸ್ಯಾಂ ಪುರ್ಯಾಂ ತತೋ ದೇವೋ ನಿರ್ಮಮೇ ಪದಮಾತ್ಮನಃ ||

ಅಕಸ್ಮಾತ್ತಾಗಿ ಆ ಪುರಿಯ ಜನರು ಎಲ್ಲಕಡೆ ಓಡಿ ಹೋದರು. ಅನಂತರ ದೇವನು ಆ ಪುರಿಯಲ್ಲಿ ವಾಸಿಸತೊಡಗಿದನು.

19029063a ರಮತೇ ತತ್ರ ವೈ ದೇವೋ ರಮಮಾಣೋ ಗಿರೇಃ ಸುತಾಮ್ |

19029063c ನ ರತಿಂ ತತ್ರ ವೈ ದೇವೀ ಲಭತೇ ಗೃಹವಿಸ್ಮಯಾತ್ |

19029063e ವಸಾಮ್ಯತ್ರ ನ ಪುರ್ಯಾಂ ತು ದೇವೀ ದೇವಮಥಾಬ್ರವೀತ್||

ಗಿರಿಯ ಸುತೆಯನ್ನು ರಮಿಸುತ್ತಾ ಅಲ್ಲಿ ದೇವನು ಆನಂದದಿಂದ ಇರುತ್ತಿದ್ದನು. ಆದರೆ ದೇವಿಯು ಅಲ್ಲಿ ಸಂತೋಷದಿಂದಿರಲಿಲ್ಲ. ಯಾವುದು ತನ್ನ ಮನೆಯೆಂದು ವಿಸ್ಮಯದಿಂದಲೇ ಇರುತ್ತಿದ್ದಳು. ಆ ದೇವಿಯು “ಈ ಪುರಿಯಲ್ಲಿ ನನಗೆ ಇರುವುದು ಬೇಡ” ಎಂದು ದೇವನಿಗೆ ಹೇಳಿದಳು.

19029064 ದೇವ ಉವಾಚ|

19029064a ನಾಹಂ ವೇಶ್ಮನಿ ವತ್ಸ್ಯಾಮಿ ಅವಿಮುಕ್ತಂ ಹಿ ಮೇ ಗೃಹಮ್ |

19029064c ನಾಹಂ ತತ್ರ ಗಮಿಷ್ಯಾಮಿ ಗಚ್ಛ ದೇವಿ ಗೃಹಂ ಪ್ರತಿ ||

ದೇವನು ಹೇಳಿದನು: “ನಾನು ಬೇರೆ ಯಾವ ಮನೆಯಲ್ಲಿಯೂ ವಾಸಿಸುವುದಿಲ್ಲ. ಈ ಅವಿಮುಕ್ತ ಕ್ಷೇತ್ರವೇ ನನ್ನ ಮನೆಯು. ನಾನು ಬೇರೆ ಎಲ್ಲಿಗೂ ಹೋಗುವುದಿಲ್ಲ. ದೇವೀ! ನೀನೇ ಆ ಮನೆಗೆ ಹೋಗು.”

19029065a ಹಸನ್ನುವಾಚ ಭಗವಾಂಸ್ತ್ರ್ಯಂಬಕಸ್ತ್ರಿಪುರಾಂತಕಃ |

19029065c ತಸ್ಮಾತ್ತದವಿಮುಕ್ತಂ ಹಿ ಪ್ರೋಕ್ತಂ ದೇವೇನ ವೈ ಸ್ವಯಮ್ ||

ಭಗವಾನ್ ತ್ರ್ಯಂಬಕ ತ್ರಿಪುರಾಂತಕ ದೇವನು ಸ್ವಯಂ ನಸುನಗುತ್ತಾ ಹೀಗೆ ಹೇಳಿದ್ದನು.

19029066a ಏವಂ ವಾರಾಣಸೀ ಶಪ್ತಾ ಅವಿಮುಕ್ತಂ ಚ ಕೀರ್ತಿತಮ್ ||

ಆದುದರಿಂದ ಶಪಿತ ವಾರಾಣಸಿಯು ಅವಿಮುಕ್ತ ಎಂಬ ಹೆಸರನ್ನು ಪಡೆದುಕೊಂಡಿತು.

19029067a ಯಸ್ಮಿನ್ವಸತಿ ವೈ ದೇವಃ ಸರ್ವದೇವನಮಸ್ಕೃತಃ |

19029067c ಯುಗೇಷು ತ್ರಿಷು ಧರ್ಮಾತ್ಮಾ ಸಹ ದೇವ್ಯಾ ಮಹೇಶ್ವರಃ ||

ಸರ್ವದೇವ ನಮಸ್ಕೃತ ಮಹೇಶ್ವರ ದೇವನು ಧರ್ಮಾತ್ಮ ದೇವಿಯ ಸಹಿತ ಮೂರು ಯುಗಗಳು ಅಲ್ಲಿಯೇ ವಾಸಿಸುತ್ತಾನೆ.

19029068a ಅಂತರ್ಧಾನಂ ಕಲೌ ಯಾತಿ ತತ್ಪುರಂ ಹಿ ಮಹಾತ್ಮನಃ |

19029068c ಅಂತರ್ಹಿತೇ ಪುರೇ ತಸ್ಮಿನ್ ಪುರೀ ಸಾ ವಸತೇ ಪುನಃ |

19029068e ಏವಂ ವಾರಾಣಸೀ ಶಪ್ತಾ ನಿವೇಶಂ ಪುನರಾಗತಾ ||

ಕಲಿಯುಗದಲ್ಲಿ ಮಹಾತ್ಮನ ಆ ಪುರಿಯು ಅಂತರ್ಧಾನವಾಗುತ್ತದೆ. ಆ ಪುರಿಯು ಅಂತರ್ಧಾನವಾಗಲು ವಾರಾಣಸೀ ಪುರಿಯಲ್ಲಿ ಪುನಃ ಜನರು ವಾಸಿಸತೊಡಗುತ್ತಾರೆ. ಹೀಗೆ ವಾರಾಣಸಿಯು ಶಪಿಸಲ್ಪಟ್ಟು ಪುನಃ ಜನರು ನಿವಾಸಿಸುತ್ತಾರೆ.

19029069a ಭದ್ರಶ್ರೇಣ್ಯಸ್ಯ ಪುತ್ರೋ ವೈ ದುರ್ದಮೋ ನಾಮ ವಿಶ್ರುತಃ |

19029069c ದಿವೋದಾಸೇನ ಬಾಲೇತಿ  ಘೃಣಯಾ ಸ ವಿವರ್ಜಿತಃ ||

ಭದ್ರಶ್ರೇಣ್ಯನಿಗೆ ದುರ್ದಮ ಎಂಬ ಹೆಸರಿನ ವಿಶ್ರುತ ಪುತ್ರನಿದ್ದನು. ದಿವೋದಾಸನು ಅವನನ್ನು ಬಾಲಕನೆಂದು ಕರುಣಿಯಿಂದ ಜೀವಂತ ಬಿಟ್ಟುಬಿಟ್ಟಿದ್ದನು.

19029070a ಹೈಹಯಸ್ಯ ತು ದಾಯಾದ್ಯಂ ಕೃತವಾನ್ವೈ ಮಹೀಪತಿಃ |

19029070c ಆಜಹ್ರೇ ಪಿತೃದಾಯಾದ್ಯಂ ದಿವೋದಾಸಹೃತಂ ಬಲಾತ್ ||

ಆ ಮಹೀಪತಿಯು ಹೈಹಯನ ಪುತ್ರನಾಗಲು ಒಪ್ಪಿಕೊಂಡು ಅವನ ಸಹಾಯದಿಂದ ಬಲವನ್ನುಪಯೋಗಿಸಿ ದಿವೋದಾಸನು ಅಪಹರಿಸಿದ್ದ ತನ್ನ ಪಿತೃ ಸಂಪತ್ತಿಯನ್ನು ಹಿಂದೆ ಪಡೆದುಕೊಂಡನು.

19029071a ಭದ್ರಶ್ರೇಣ್ಯಸ್ಯ ಪುತ್ರೇಣ ದುರ್ದಮೇನ ಮಹಾತ್ಮನಾ |

19029071c ವೈರಸ್ಯಾಂತಂ ಮಹಾರಾಜ ಕ್ಷತ್ರಿಯೇಣ ವಿಧಿತ್ಸತಾ ||

ಮಹಾರಾಜ! ವೈರವನ್ನು ಅಂತ್ಯಗೊಳಿಸಲೇ ಭದ್ರಶ್ರೇಣ್ಯನ ಆ ಮಹಾತ್ಮ ಕ್ಷತ್ರಿಯ ಪುತ್ರ ದುರ್ದಮನು ಹಾಗೆ ಮಾಡಿದನು.

19029072a ದಿವೋದಾಸಾದ್ದೃಷದ್ವತ್ಯಾಂ ವೀರೋ ಜಜ್ಞೇ ಪ್ರತರ್ದನಃ |

19029072c ತೇನ ಪುತ್ರೇಣ ಬಾಲೇನ ಪ್ರಹೃತಂ ತಸ್ಯ ವೈ ಪುನಃ ||

ದೃಷದ್ವತಿಯಲ್ಲಿ ದಿವೋದಾಸನಿಗೆ ವೀರ ಪ್ರತರ್ದನನು ಜನಿಸಿದನು. ಆ ಪುತ್ರನು ಬಾಲಕನಾಗಿದ್ದಾಗಲೇ ದುರ್ದಮನಿಂದ ರಾಜ್ಯವನ್ನು ಪುನಃ ಅಪಹರಿಸಿದನು.

19029073a ಪ್ರತರ್ದನಸ್ಯ ಪುತ್ರೌ ದ್ವೌ ವತ್ಸಭಾರ್ಗೌ ಬಭೂವತುಃ |

19029073c ವತ್ಸಪುತ್ರೋ ಹ್ಯಲರ್ಕಸ್ತು ಸನ್ನತಿಸ್ತಸ್ಯ ಚಾತ್ಮಜಃ ||

ಪ್ರತರ್ದನನಿಗೆ ವತ್ಸ ಮತ್ತು ಭಾರ್ಗ ಎಂಬ ಇಬ್ಬರು ಪುತ್ರರಾದರು. ವತ್ಸನ ಮಗನು ಅಲರ್ಕ ಮತ್ತು ಸನ್ನತಿಯು ಅವನ ಮಗ.

19029074a ಅಲರ್ಕಃ ಕಾಶಿರಾಜಸ್ತು ಬ್ರಹ್ಮಣ್ಯಃ ಸತ್ಯಸಂಗರಃ |

19029074c ಅಲರ್ಕಂ ಪ್ರತಿ ರಾಜರ್ಷಿಂ ಶ್ಲೋಕೋ ಗೀತಃ ಪುರಾತನೈಃ ||

ಕಾಶಿರಾಜ ಅಲರ್ಕನಾದರೋ ಬ್ರಹ್ಮಣ್ಯನೂ ಸತ್ಯಸಂಗರನೂ ಆಗಿದ್ದನು. ರಾಜರ್ಷಿ ಅಲರ್ಕನ ಕುರಿತು ಪುರಾತನರು ಈ ಶ್ಲೋಕವನ್ನು ಹಾಡುತ್ತಾರೆ.

19029075a ಷಷ್ಟಿವರ್ಷಸಹಸ್ರಾಣಿ ಷಷ್ಟಿಂ ವರ್ಷಶತಾನಿ ಚ |

19029075c ಯುವಾ ರೂಪೇಣ ಸಂಪನ್ನ ಆಸೀತ್ಕಾಶಿಕುಲೋದ್ವಹಃ ||

“ಕಾಶಿಕುಲೋದ್ವಹ ಅಲರ್ಕನು ಅರವತ್ತಾರು ಸಾವಿರ ಆರುನೂರು ವರ್ಷಗಳ ಪರ್ಯಂತ ಯೌವನ ಮತ್ತು ರೂಪ ಸಂಪನ್ನನಾಗಿದ್ದನು.”

19029076a ಲೋಪಾಮುದ್ರಾಪ್ರಸಾದೇನ ಪರಮಾಯುರವಾಪ ಸಃ |

19029076c ತಸ್ಯಾಸೀತ್ಸುಮಹದ್ರಾಜ್ಯಂ ರೂಪಯೌವನಶಾಲಿನಃ |

ಲೋಪಾಮುದ್ರೆಯ ಪ್ರಸಾದದಿಂದ ಅವನು ದೀರ್ಘಾಯುವಾಗಿದ್ದನು. ಆ ರೂಪಯೌವನಶಾಲಿಯ ರಾಜ್ಯವು ಅತಿ ವಿಶಾಲವಾಗಿತ್ತು.

19029076e ಶಾಪಸ್ಯಾಂತೇ ಮಹಾಬಾಹುರ್ಹತ್ವಾ ಕ್ಷೇಮಕರಾಕ್ಷಸಮ್ ||

19029077a ರಮ್ಯಾಂ ನಿವೇಶಯಾಮಾಸ ಪುರೀಂ ವಾರಾಣಸೀಂ ಪುನಃ |

ಮಹಾಬಾಹು ಅಲರ್ಕನು ನಿಕುಂಭನ ಶಾಪವು ಅಂತ್ಯವಾಗಲು ಕ್ಷೇಮಕನೆನ್ನುವ ರಾಕ್ಷಸನನ್ನು ಸಂಹರಿಸಿ ರಮ್ಯವಾದ ವಾರಾಣಸೀ ಪುರಿಯಲ್ಲಿ ಜನರು ಪುನಃ ವಾಸಿಸುವಂತೆ ಮಾಡಿದನು.

19029077c ಸನ್ನತೇರಪಿ ದಾಯಾದಃ ಸುನೀಥೋ ನಾಮ ಧಾರ್ಮಿಕಃ ||

19029078a ಸುನೀಥಸ್ಯ ತು ದಾಯಾದಃ ಕ್ಷೇಮ್ಯೋ ನಾಮ ಮಹಾಯಶಾಃ |

19029078c ಕ್ಷೇಮ್ಯಸ್ಯ ಕೇತುಮಾನ್ಪುತ್ರಃ ಸುಕೇತುಸ್ತಸ್ಯ ಚಾತ್ಮಜಃ ||

ಸನ್ನತಿಯ ಪುತ್ರನು ಸುನೀಥ ಎಂಬ ಹೆಸರಿನ ಪರಮ ಧಾರ್ಮಿಕನಾಗಿದ್ದನು. ಸುನೀಥನ ಮಗನು ಕ್ಷೇಮ ಎಂಬ ಹೆಸರಿನ ಮಹಾಯಶಸ್ವಿಯು. ಕ್ಷೇಮನ ಪುತ್ರನು ಕೇತುಮಾನ್ ಮತ್ತು ಸುಕೇತುವು ಅವನ ಮಗನು.

19029079a ಸುಕೇತೋಸ್ತನಯಶ್ಚಾಪಿ ಧರ್ಮಕೇತುರಿತಿ ಸ್ಮೃತಃ |

19029079c ಧರ್ಮಕೇತೋಸ್ತು ದಾಯಾದಃ ಸತ್ಯಕೇತುರ್ಮಹಾರಥಃ ||

ಸುಕೇತುವಿನ ತನಯನು ಧರ್ಮಕೇತು ಎಂದು ಹೇಳುತ್ತಾರೆ. ಧರ್ಮಕೇತುವಿನ ಮಗನು ಮಹಾರಥ ಸತ್ಯಕೇತುವು.

19029080a ಸತ್ಯಕೇತುಸುತಶ್ಚಾಪಿ ವಿಭುರ್ನಾಮ ಪ್ರಜೇಶ್ವರಃ |

19029080c ಆನರ್ತಸ್ತು ವಿಭೋಃ ಪುತ್ರಃ ಸುಕುಮಾರಸ್ತು ತತ್ಸುತಃ ||

ಸತ್ಯಕೇತುವಿನ ಮಗನು ವಿಭು ಎಂಬ ಹೆಸರಿನ ಪ್ರಜೇಶ್ವರನು. ಆನರ್ತನು ವಿಭುವಿನ ಪುತ್ರನು ಮತ್ತು ಸುಕುಮಾರನು ಅವನ ಮಗನು.

19029081a ಸುಕುಮಾರಸ್ಯ ಪುತ್ರಸ್ತು ಧೃಷ್ಟಕೇತುಃ ಸುಧಾರ್ಮಿಕಃ |

19029081c ಧೃಷ್ಟಕೇತೋಸ್ತು ದಾಯಾದೋ ವೇಣುಹೋತ್ರಃ ಪ್ರಜೇಶ್ವರಃ||

ಸುಧಾರ್ಮಿಕ ಧೃಷ್ಟಕೇತುವು ಸುಕುಮಾರನ ಮಗನು. ಪ್ರಜೇಶ್ವರ ವೇಣುಹೋತ್ರನು ಧೃಷ್ಟಕೇತುವಿನ ಮಗನು.

19029082a ವೇಣುಹೋತ್ರಸುತಶ್ಚಾಪಿ ಭರ್ಗೋ ನಾಮ ಪ್ರಜೇಶ್ವರಃ |

19029082c ವತ್ಸಸ್ಯ ವತ್ಸಭೂಮಿಸ್ತು ಭೃಗುಭೂಮಿಸ್ತು ಭಾರ್ಗವಾತ್ ||

ಭರ್ಗ ಎಂಬ ಹೆಸರಿನ ಪ್ರಜೇಶ್ವರನು ವೇಣುಹೋತ್ರನ ಮಗನು. ಪ್ರತರ್ದನನ ಮಕ್ಕಳಾದ ವತ್ಸನಿಗೆ ವತ್ಸಭೂಮಿ ಮತ್ತು ಭಾರ್ಗನಿಗೆ ಭೃಗುಭೂಮಿ ಎಂಬ ಮಕ್ಕಳಾದರು.

19029083a ಏತೇ ತ್ವಂಗಿರಸಃ ಪುತ್ರಾ ಜಾತಾ ವಂಶೇಽಥ ಭಾರ್ಗವೇ |

19029083c ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಸ್ತಯೋಃ ಪುತ್ರಾಃ ಸಹಸ್ರಶಃ |

19029083e ಇತ್ಯೇತೇ ಕಾಶಯಃ ಪ್ರೋಕ್ತಾ ನಹುಷಸ್ಯ ನಿಬೋಧ ಮೇ ||

ಇವರು ಅಂಗಿರಸ ಗೋತ್ರದಲ್ಲಿ ಭಾರ್ಗವ ವಂಶದಲ್ಲಿ ಆದ ಗಾಲವನ ವಂಶಜರು. ಅವರಿಗೆ ಸಹಸ್ರಾರು  ಬ್ರಾಹ್ಮಣ, ಕ್ಷತ್ರಿಯ, ಮತ್ತು ವೈಶ್ಯ ಪುತ್ರರಾದರು. ಈಗ ನಾನು ಹೇಳಿದುದು ಕಾಶಿಯ ಕುಲದಲ್ಲಿ ಹುಟ್ಟಿದ ಕ್ಷತ್ರಿಯರ ಕುರಿತು. ನಹುಷನ ವಂಶದ ಕುರಿತು ನನ್ನನ್ನು ಕೇಳು.”

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಕಾಶ್ಯಪವರ್ಣನಂ ನಾಮ ಏಕೋನತ್ರಿಂಶೋಽಧ್ಯಾಯಃ|

Close-up of two pink gerbera flowers against white background Wall Mural •  Pixers® • We live to change

[1] ಹಿಂದಿನ ಅಧ್ಯಾಯದಲ್ಲಿ ಹೇಳಿದ ವೃದ್ಧಶರ್ಮ?

[2] ಆಯುರ್ವೇದದ ಎಂಟು ಭಾಗಗಳನ್ನು ಈ ರೀತಿ ವರ್ಣಿಸಲಾಗಿದೆ: ಕಾಯಬಾಲಗ್ರಹೋರ್ಧ್ವಾಂಗಶಲ್ಯದಂಷ್ಟ್ರಾಜರಾವೃಷಾನ್| ಅಷ್ಟಾವಂಗಾನಿ ತಸ್ಯಾಹುಶ್ಚಿಕಿತ್ಸಾ ಯೇಷು ಸಂಶ್ರಿತಾ|| (1) ಕಾಯ ಚಿಕಿತ್ಸಾ (2) ಬಾಲಚಿಕಿತ್ಸಾ (3) ಗ್ರಹಚಿಕಿತ್ಸಾ (4) ಊರ್ಧ್ವಾಂಗ ಚಿಕಿತ್ಸಾ (5) ಶಲ್ಯಚಿಕಿತ್ಸಾ (6) ದಂಷ್ಟ್ರಾಚಿಕಿತ್ಸಾ (7) ಜರಾಚಿಕಿತ್ಸಾ (8) ವೃಷಚಿಕಿತ್ಸಾ.

[3] ಯದುವಂಶೀ ಮಹಿಷ್ಮಾನನ ಮಗ.

Comments are closed.