Harivamsha: Chapter 182

ಹರಿವಂಶ: ಭವಿಷ್ಯ ಪರ್ವ

೧೮೨

ವ್ಯಾಸಂ ಪ್ರತಿ ರಾಜಸೂಯವಿಷಯೇ ಜನಮೇಜಯಪ್ರಶ್ನಃ

ರಾಜಾ ಜನಮೇಜಯನು ಅಶ್ವಮೇಧ ಯಜ್ಞವನ್ನು ಕೈಗೊಳ್ಳಲು ಯೋಚಿಸುವುದು, ವ್ಯಾಸನ ಆಗಮನ ಮತ್ತು ರಾಜನು ಅವನನ್ನು ಸತ್ಕರಿಸಿದುದು. “ಪಾಂಡವರು ರಾಜಸೂಯ ಯಜ್ಞವನ್ನು ಮಾಡುವುದನ್ನು ಏಕೆ ತಡೆಯಲಿಲ್ಲ?” ಎಂದು ಜನಮೇಜಯನು ವ್ಯಾಸನನ್ನು ಪ್ರಶ್ನಿಸಿದುದು ಮತ್ತು ಅದಕ್ಕೆ ಉತ್ತರವಾಗಿ ವ್ಯಾಸನು ಕಾಲದ ಪ್ರಬಲತೆಯನ್ನು ಪ್ರತಿಪಾದಿಸಿದುದು (೧-೪೫).

ಶೌನಕ ಉವಾಚ |

ಉಕ್ತೋಽಯಂ ಹರಿವಂಶಸ್ತೇ ಪರ್ವಾಣಿ ನಿಖಿಲಾನಿ ಚ |

ಯಥಾ ಪುರೋಕ್ತಾನಿ ತಥಾ ವ್ಯಾಸಶಿಷ್ಯೇಣ ಧೀಮತಾ ||೩-೧೮೨-೧

ಶೌನಕನು ಹೇಳಿದನು: “ಹಿಂದೆ ವ್ಯಾಸಶಿಷ್ಯ ಧೀಮತ ವೈಶಂಪಾಯನನು ಹೇಳಿದ ಹರಿವಂಶದ ನಿಖಿಲ ಪರ್ವಗಳೆಲ್ಲವನ್ನೂ ನೀನು ಹೇಳಿದೆ.

ತತ್ಕಥ್ಯಮಾನಮಮಿತಮಿತಿಹಾಸಸಮನ್ವಿತಮ್ |

ಪ್ರೀಣಾತ್ಯಸ್ಮಾನಮೃತವತ್ಸರ್ವಪಾಪವಿನಾಶನಮ್ ||೩-೧೮೨-೨

ನೀನು ಹೇಳಿದ ಸರ್ವಪಾಪಗಳನ್ನೂ ನಾಶಗೊಳಿಸುವ ಅಮಿತ ಇತಿಹಾಸ ಸಮನ್ವಿತ ಗ್ರಂಥವು ಅಮೃತದಂತೆ ನಮಗೆ ತೃಪ್ತಿಯನ್ನು ನೀಡಿದೆ.

ಸುಖಶ್ರಾವ್ಯತಯಾ ಧೀರ ಮನೋಹ್ಲಾದಯತೀವ ನಃ |

ಜನಮೇಜಯಸ್ತು ನೃಪತಿಃ ಶ್ರುತ್ವಾ ಚಾಖ್ಯಾನಮುತ್ತಮಮ್ |

ಸೌತೇ ಕಿಮಕರೋತ್ಪಶ್ಚಾತ್ಸರ್ಪಸತ್ರಾದನಂತರಮ್ ||೩-೧೮೨-೩

ಧೀರ ಸೂತಕುಮಾರ! ಕೇಳಲು ಮತ್ತು ಹೇಳಲು ಸುಖಕರವಾಗಿರುವ ಈ ಕಥೆಯು ನಮ್ಮ ಮನಸ್ಸಿಗೆ ಪರಮ ಆಹ್ಲಾದವನ್ನುಂಟುಮಾಡಿದೆ. ಸರ್ಪಸತ್ರದ ನಂತರ ಈ ಉತ್ತಮ ಆಖ್ಯಾನವನ್ನು ಕೇಳಿ ರಾಜಾ ಜನಮೇಜಯನು ಏನು ಮಾಡಿದನು?”

ಸೌತಿರುವಾಚ |

ಜನಮೇಜಯಸ್ತು ಸ ನೃಪಃ ಶ್ರುತ್ವಾ ಚಾಖ್ಯಾನಮುತ್ತಮಮ್ |

ಯದಾರಭತ್ತದಾಖ್ಯಾಸ್ಯೇ ಸರ್ಪಸತ್ರಾದನಂತರಮ್ ||೩-೧೮೨-೪

ಸೌತಿಯು ಹೇಳಿದನು: “ನೃಪ ಜನಮೇಜಯನಾದರೋ ಈ ಉತ್ತಮ ಆಖ್ಯಾನವನ್ನು ಕೇಳಿ ಸಪ್ರಸತ್ರದ ನಂತರ ಏನು ಮಾಡಿದನೋ ಅದನ್ನು ಹೇಳುತ್ತೇನೆ.

ತಸ್ಮಿನ್ಸತ್ರೇ ಸಮಾಪ್ತೇಽಥ ರಾಜಾ ಪಾರೀಕ್ಷಿತಸ್ತದಾ |

ಯಷ್ಟುಂ ಸ ವಾಜಿಮೇಧೇನ ಸಂಭಾರಾನುಪಚಕ್ರಮೇ ||೩-೧೮೨-೫

ಸರ್ಪಸತ್ರವು ಸಮಾಪ್ತವಾಗಲು ರಾಜಾ ಪಾರೀಕ್ಷಿತನು ಅಶ್ವಮೇಧ ಯಜ್ಞವನ್ನು ಮಾಡಲು ಅವಶ್ಯಕ ಸಾಮಾಗ್ರಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದನು.

ಋತ್ವಿಕ್ಪುರೋಹಿತಾಚಾರ್ಯಾನಾಹೂಯೇದಮುವಾಚ ಹ |

ಯಕ್ಷ್ಯೇಽಹಂ ವಾಜಿಮೇಧೇನ ಹಯಮುತ್ಸೃಜ್ಯತಾಮಿತಿ ||೩-೧೮೨-೬

ಋತ್ವಿಜರು, ಪುರೋಹಿತರು ಮತ್ತು ಆಚಾರ್ಯರನ್ನು ಕರೆಯಿಸಿ “ನಾನು ಅಶ್ವಮೇಧ ಯಜ್ಞವನ್ನು ಮಾಡುತ್ತೇನೆ. ಕುದುರೆಯನ್ನು ಬಿಡಿ!” ಎಂದು ಹೇಳಿದನು.

ತತೋಽಸ್ಯ ವಿಜ್ಞಾಯ ಚಿಕೀರ್ಷಿತಂ ತದಾ

ಕೃಷ್ಣೋ ಮಹಾತ್ಮಾ ಸಹಸಾಽಽಜಗಾಮ |

ಪಾರೀಕ್ಷಿತಂ ದ್ರಷ್ಟುಮದೀನಸತ್ತ್ವಮ್

ದ್ವೈಪಾಯನಃ ಸರ್ವಪರಾವರಜ್ಞಃ ||೩-೧೮೨-೭

ಅವನ ಇಂಗಿತವನ್ನು ತಿಳಿದ ಸರ್ವಪರಾವರಜ್ಞ ಮಹಾತ್ಮ ಕೃಷ್ಣ ದ್ವೈಪಾಯನನು ಅದೀನಸತ್ತ್ವ ಪಾರೀಕ್ಷಿತನನ್ನು ನೋಡಲು ಕೂಡಲೇ ಅಲ್ಲಿಗೆ ಆಗಮಿಸಿದನು.

ಪಾರೀಕ್ಷಿತಸ್ತು ನೃಪತಿರ್ದೃಷ್ಟ್ವಾ ತಮೃಷಿಮಾಗತಮ್ |

ಅರ್ಘ್ಯಪಾದ್ಯಾಸನಂ ದತ್ತ್ವಾ ಪೂಜಯಾಮಾಸ ಶಾಸ್ತ್ರತಃ ||೩-೧೮೨-೮

ನೃಪತಿ ಪಾರಿಕ್ಷಿತನಾದರೋ ಆಗಮಿಸಿದ ಋಷಿಯನ್ನು ನೋಡಿ ಅರ್ಘ್ಯ-ಪಾದ್ಯ-ಆಸನಗಳನ್ನಿತ್ತು ಶಾಸ್ತ್ರೋಕ್ತವಾಗಿ ಪೂಜಿಸಿದನು.

ತೌ ಚೋಪವಿಷ್ಟಾವಭಿತಃ ಸದಸ್ಯಾಸ್ತಸ್ಯ ಶೌನಕ |

ಕಥಾ ಬಹುವಿಧಾಶ್ಚಿತ್ರಾಶ್ಚಕ್ರಾತೇ ವೇದಸಂಹಿತಾಃ ||೩-೧೮೨-೯

ಶೌನಕ! ಅವರಿಬ್ಬರೂ ಮತ್ತು ಉಳಿದ ಸದಸ್ಯರೂ ಕುಳಿತುಕೊಂಡ ನಂತರ ಅವರಿಬ್ಬರ ನಡುವೆ ಬಹುವಿಧದ ವೇದಸಂಹಿತ ವಿಚಿತ್ರ ಮಾತುಕಥೆಗಳು ನಡೆದವು.

ತತಃ ಕಥಾಂತೇ ನೃಪತಿರ್ನೋದಯಾಮಾಸ ತಂ ಮುನಿಮ್ |

ಪಿತಾಮಹಂ ಪಾಂಡವಾನಾಮಾತ್ಮನಃ ಪ್ರಪಿತಾಮಹಮ್ ||೩-೧೮೨-೧೦

ಮಾತುಕಥೆಗಳ ಕೊನೆಯಲ್ಲಿ ನೃಪತಿಯು ಪಾಂಡವರ ಪಿತಾಮಹ ಮತ್ತು ತನ್ನ ಪ್ರಪಿತಾಮಹ ಮುನಿಗೆ ಹೇಳಿದನು:

ಮಹಾಭಾರತಮಾಖ್ಯಾನಂ ಬಹ್ವರ್ಥಂ ಶ್ರುತಿವಿಸ್ತರಮ್ |

ನಿಮೇಷಮಾತ್ರಮಪಿ ಮೇ ಸುಖಶ್ರಾವ್ಯತಯಾ ಗತಮ್ ||೩-೧೮೨-೧೧

“ಮಹಾಭಾರತ ಆಖ್ಯಾನವು ಬಹು ಅರ್ಥಗಳನ್ನೊಳಗೂಡಿದೆ ಮತ್ತು ಶ್ರುತಿಗಳ ಅರ್ಥಗಳನ್ನು ವಿಸ್ತರಿಸುತ್ತದೆ. ಆದರೂ ಇದು ಕೇಳಲು ಮತ್ತು ಹೇಳಲು ಎಷ್ಟೊಂದು ಸುಖದವಾಗಿದೆಯೆಂದರೆ ನನ್ನ ಅನೇಕ ದಿನಗಳು ಒಂದೇ ನಿಮಿಷದಂತೆ ಕಳೆದುಹೋದವು.

ವಿಭೂತಿವಿಸ್ತಾರಕರಂ ಸರ್ವೇಷಾಂ ವೈ ಯಶಸ್ಕರಮ್ |

ತ್ವಯಾ ಸುವಿಹಿತಂ ಬ್ರಹ್ಮಂಶಂಖೇ ಕ್ಷೀರಮಿವಾಹಿತಮ್ ||೩-೧೮೨-೧೨

ಬ್ರಹ್ಮನ್! ಇದು ಎಲ್ಲರಿಗೂ ಐಶ್ವರ್ಯವನ್ನು ವಿಸ್ತರಿಸುತ್ತದೆ ಮತ್ತು ಯಶಸ್ಸನ್ನುಂಟುಮಾಡುತ್ತದೆ. ಇದನ್ನು ನೀನು ಕ್ಷೀರಸಮುದ್ರವನ್ನು ಶಂಖದಲ್ಲಿ ತುಂಬಿಸಿಟ್ಟಷ್ಟು ಚೆನ್ನಾಗಿ ರಚಿಸಿದ್ದೀಯೆ.

ಅಮೃತೇನ ತು ತೃಪ್ತಿಃ ಸ್ಯಾದ್ಯಥಾ ಸ್ವರ್ಗಸುಖೇನ ಚ |

ತಥಾ ತೃಪ್ತಿಂ ನ ಗಚ್ಛಾಮಿ ಶ್ರುತ್ವೇಮಾಂ ಭಾರತೀಂ ಕಥಾಮ್ ||೩-೧೮೨-೧೩

ಅಮೃತವನ್ನು ಎಷ್ಟು ಕುಡಿದರೂ ತೃಪ್ತಿಯಾಗದಂತೆ ಮತ್ತು ಸ್ವರ್ಗಸುಖವನ್ನು ಎಷ್ಟು ಅನುಭವಿಸಿದರೂ ತೃಪ್ತಿಯಾಗದಂತೆ ಈ ಭಾರತ ಕಥೆಯನ್ನು ಕೇಳಿ ನಾನು ತೃಪ್ತನಾಗುತ್ತಿಲ್ಲ.

ಅನುಮಾನ್ಯ ತು ಸರ್ವಜ್ಞಂ ಪೃಚ್ಛಾಮಿ ಭಗವನ್ನಹಮ್ |

ಹೇತುಃ ಕುರೂಣಾಂ ನಾಶಸ್ಯ ರಾಜಸೂಯೋ ಮತೋ ಮಮ ||೩-೧೮೨-೧೪

ಭಗವನ್! ಸರ್ವಜ್ಞನ ಅನುಮತಿಯನ್ನು ಪಡೆದು ಕೇಳುತ್ತಿದ್ದೇನೆ. ನನ್ನ ಅಭಿಪ್ರಾಯದಲ್ಲಿ ರಾಜಸೂಯವೇ ಕುರುಗಳ ನಾಶಕ್ಕೆ ಕಾರಣವಾಗಿತ್ತು.

ದುಃಸಹಾನಾಂ ಯಥಾ ಧ್ವಂಸೋ ರಾಜನ್ಯಾನಾಮುಪಪ್ಲವೇ |

ರಾಜಸೂಯಂ ತಥಾ ಮನ್ಯೇ ಯುದ್ಧಾರ್ಥಮುಪಕಲ್ಪಿತಮ್ ||೩-೧೮೨-೧೫

ಮಹಾಭಾರತ ಯುದ್ಧದಲ್ಲಿ ದುಃಸಹ ರಾಜರ ವಿನಾಶವು ನಡೆದುದನ್ನು ನೋಡಿದರೆ ರಾಜಸೂಯದ ಕಲ್ಪನೆಯು ಯುದ್ಧಕ್ಕಾಗಿಯೇ ಆಗಿತ್ತು ಎಂದೆನಿಸುತ್ತದೆ.

ರಾಜಸೂಯಸ್ತು ಸೋಮೇನ ಶ್ರೂಯತೇ ಪೂರ್ವಮಾಹೃತಃ |

ತಸ್ಯಾಂತೇ ಸುಮಹದ್ಯುದ್ಧಮಭವತ್ತಾರಕಾಮಯಮ್ ||೩-೧೮೨-೧೬

ಪೂರ್ವಕಾಲದಲ್ಲಿ ಸೋಮನು ರಾಜಸೂಯ ಯಜ್ಞವನ್ನು ಮಾಡಿದ್ದನು ಮತ್ತು ಅವನ ಆ ಯಜ್ಞದ ಅಂತ್ಯದಲ್ಲಿ ತಾರಕಾಮಯವೆಂಬ ಮಹಾ ಯುದ್ಧವು ನಡೆಯಿತು ಎಂದು ಕೇಳಿದ್ದೇವೆ.

ಆಹೃತೋ ವರುಣೇನಾಥ ತಸ್ಯಾಂತೇ ಸುಮಹಾಕ್ರತೋಃ |

ದೇವಾಸುರಂ ಮಹಾಯುದ್ಧಂ ಸರ್ವಭೂತಕ್ಷಯಾವಹಮ್ ||೧೩-೧೮೨-೧೭

ಅನಂತರ ವರುಣನು ಆ ಯಜ್ಞವನ್ನು ಮಾಡಿದನು ಮತ್ತು ಆ ಮಹಾಯಜ್ಞದ ಅಂತ್ಯದಲ್ಲಿ ದೇವತೆಗಳು ಮತ್ತು ಅಸುರರ ನಡುವೆ ಸರ್ವ ಭೂತಗಳನ್ನೂ ನಾಶಗೊಳಿಸುವ ಮಹಾಯುದ್ಧವು ನಡೆಯಿತು.

ಹರಿಶ್ಚಂದ್ರಶ್ಚ ರಾಜರ್ಷಿಃ ಕ್ರತುಮೇನಮುಪಾಹರತ್ |

ತತ್ರಾಪ್ಯಾಡೀಬಕಂ ನಾಮ ಯುದ್ಧಂ ಕ್ಷತ್ರಿಯನಾಶನಮ್ ||೩-೧೮೨-೧೮

ರಾಜರ್ಷಿ ಹರಿಶ್ಚಂದ್ರನೂ ಕೂಡ ಈ ಕ್ರತುವನ್ನು ನಡೆಸಿದನು. ಆಗ ಕ್ಷತ್ರಿಯ ನಾಶಕ ಆಡೀಬಕ ಎಂಬ ಹೆಸರಿನ ಯುದ್ಧವು ನಡೆಯಿತು.

ತತೋಽನಂತರಮಾರ್ಯೇಣ ಪಾಂಡವೇನಾತಿದುಸ್ತರಃ |

ಮಹಾಭಾರತ ಆರಂಭಃ ಸಂಭೃತೋಽಗ್ನಿರಿವ ಕ್ರತುಃ ||೩-೧೮೨-೧೯

ಅನಂತರ ಆರ್ಯ ಪಾಂಡವೇಯನು ಅತಿದುಸ್ತರವಾದ ಅಗ್ನಿಯಂತೆಯೇ ಇರುವ ಆ ಕ್ರತುವನ್ನು ನಡೆಸಿ ಅಲ್ಲಿಂದಲೇ ಮಹಾಭಾರತ ಯುದ್ಧವು ಆರಂಭವಾಯಿತು.

ತದಸ್ಯ ಮೂಲಂ ಯುದ್ಧಸ್ಯ ಲೋಕಕ್ಷಯಕರಸ್ಯ ತು |

ರಾಜಸೂಯೋ ಮಹಾಯಜ್ಞಃ ಕಿಮರ್ಥಂ ನ ನಿವಾರಿತಃ ||೩-೧೮೨-೨೦

ಲೋಕವಿನಾಶಕಾರೀ ಯುದ್ಧದ ಮೂಲ ಕಾರಣವಾಗಿದ್ದ ಆ ರಾಜಸೂಯ ಮಹಾಯಜ್ಞವನ್ನು ನೀನು ಏಕೆ ತಡೆಯಲಿಲ್ಲ?

ರಾಜಸೂಯೋ ಹ್ಯಸಂಹಾರ್ಯೋ ಯಜ್ಞಾಂಗೈಶ್ಚ ದುರತ್ಯಯೈಃ |

ಮಿಥ್ಯಾ ಪ್ರಣೀತೇ ಯಜ್ಞಾಂಗೇ ಪ್ರಜಾನಾಂ ಸಂಕ್ಷಯೋ ಧ್ರುವಃ ||೩-೧೮೨-೨೧

ರಾಜಸೂಯ ಯಜ್ಞವನ್ನು ಸರ್ವಾಂಗಪೂರ್ಣರೂಪದಲ್ಲಿ ಸಂಪನ್ನಗೊಳಿಸಲು ಅಸಂಭವವು. ಏಕೆಂದರೆ ಆ ಯಜ್ಞದ ಅಂಗಭೂತ ಸಾಧನವು ದುರ್ಲಭವಾದುದು. ಸರಿಯಾದ ರೂಪದಲ್ಲಿ ಯಜ್ಞಾಂಗದ ಸಂಪಾದನವಾಗದಿದ್ದರೆ ಅದರಲ್ಲಿ ದೋಷವುಂಟಾಗಿ ಪ್ರಜಾಜನರ ನಾಶವು ಅವಶ್ಯಕವಾಗುತ್ತದೆ.

ಭವಾನಪಿ ಚ ಸರ್ವೇಷಾಂ ಪೂರ್ವೇಷಾಂ ನಃ ಪಿತಾಮಹಃ |

ಅತೀತಾನಾಗತಜ್ಞಶ್ಚ ನಾಥಶ್ಚಾದಿಕರಶ್ಚ ನಃ ||೩-೧೮೨-೨೨

ನೀನಾದರೂ ನಮ್ಮ ಪೂರ್ವಜರ ಪಿತಾಮಹನು. ನಿನಗೆ ಭೂತ-ಭವಿಷ್ಯಗಳ ಜ್ಞಾನವಿದೆ. ನೀನು ನಮ್ಮ ವಂಶದ ರಕ್ಷಕ ಮತ್ತು ಪೂರ್ವಜರ ಜನ್ಮದಾತನಾಗಿರುವೆ.

ತೇ ಕಥಂ ಭವತಾ ನೇತ್ರಾ ಬುದ್ಧಿಮಂತಶ್ಚ್ಯುತಾ ನಯಾತ್ |

ಅನಾಥಾ ಹ್ಯಪರಾಧ್ಯಂತೇ ಕುನೇತಾರಶ್ಚ ಮಾನವಾಃ ||೩-೧೮೨-೨೩

ನಿನ್ನಂತಹ ಮುಂದಾಳುವು ಇದ್ದಾಗಲೂ ಬುದ್ಧಿಮಾನ್ ಪಾಂಡವನು ಹೇಗೆ ನೀತಿಮಾರ್ಗದಿಂದ ಭ್ರಷ್ಟನಾದನು? ಏಕೆಂದರೆ ಅನಾಥನಾಗಿರುವ ಮತ್ತು ಶ್ರೇಷ್ಠ ಮುಂದಾಳುಗಳು ಇಲ್ಲದಿರುವ ಮನುಷ್ಯನು ಅಪರಾಧ ಮಾಡಬಹುದು.”

ವ್ಯಾಸ ಉವಾಚ |

ಕಾಲೇನ ವಿಪರೀತಾಸ್ತೇ ತವ ಪೂರ್ವಪಿತಾಮಹಃ |

ನ ಮಾಂ ಭವಿಷ್ಯಂ ಪೃಚ್ಛಂತಿ ನ ಚಾಪೃಷ್ಟೋ ಬ್ರವೀಮ್ಯಹಂ ||೩-೧೮೨-೨೪

ವ್ಯಾಸನು ಹೇಳಿದನು: “ನಿನ್ನ ಪೂರ್ವಪಿತಾಮಹನು ಕಾಲದ ಪ್ರೇರಣೆಯಂತೆ ವಿಪರೀತ ಅವಸ್ಥೆಯನ್ನು ಹೊಂದಿದ್ದನು. ಅವನು ನನ್ನಲ್ಲಿ ಭವಿಷ್ಯದ ಕುರಿತು ಕೇಳುತ್ತಿರಲಿಲ್ಲ. ಮತ್ತು ನಾನು ಕೇಳದೇ ಯಾರಿಗೂ ಏನನ್ನೂ ಹೇಳುವುದಿಲ್ಲ.

ಸಾಮರ್ಥ್ಯಂ ಚ ನ ಪಶ್ಯಾಮಿ ಭವಿಷ್ಯಸ್ಯ ನಿವರ್ತನೇ |

ಪರಿಹರ್ತುಂ ನ ಶಕ್ಯಾ ಹಿ ಕಾಲೇನ ವಿಹಿತಾ ಗತಿಃ ||೩-೧೮೨-೨೫

ಭವಿಷ್ಯವನ್ನು ತಡೆಯುವ ಸಾಮರ್ಥ್ಯವನ್ನು ನಾನು ಯಾರಲ್ಲಿಯೂ ಕಂಡಿಲ್ಲ. ಏಕೆಂದರೆ ಕಾಲನು ತಾವ ಗತಿಯನ್ನು ವಿಹಿಸಿದ್ದಾನೋ ಅದನ್ನು ತಪ್ಪಿಸುವುದು ಅಸಂಭವವು.

ತ್ವಯಾ ತ್ವಿದಮಹಂ ಪೃಷ್ಟೋ ವಕ್ಷ್ಯಾಮ್ಯಾಗಂತು ಭಾವಿ ಯತ್ |

ಅತಶ್ಚ ಬಲವಾನ್ಕಾಲಃ ಶ್ರುತ್ವಾಪಿ ನ ಕರಿಷ್ಯಸಿ ||೩-೧೮೨-೨೬

ನೀನು ನನ್ನಲ್ಲಿ ಕೇಳಿದುದರಿಂದ ನಾನು ನಿನಗೋಸ್ಕರ ಬರಲಿರುವ ಭವಿಷ್ಯದ ವರ್ಣನೆಯನ್ನು ಮಾಡುತ್ತೇನೆ. ಆದರೆ ಕಾಲವು ಇದಕ್ಕಿಂತಲೂ ಬಲಶಾಲಿಯು. ನೀನು ನನ್ನಿಂದ ಭವಿಷ್ಯದ ಕರ್ತವ್ಯದ ಕುರಿತು ಕೇಳಿಯೂ ಅದನ್ನು ಪಾಲಿಸುವುದಿಲ್ಲ.

ನ ಸಂರಂಭಾನ್ನ ಚಾರಂಭಾನ್ನ ವೈ ಸ್ಥಾಸ್ಯಸಿ ಪೌರುಷೇ |

ಲೇಖಾ ಹಿ ಕಾಲಲಿಖಿತಾಃ ಸರ್ವಥಾ ದುರತಿಕ್ರಮಃ ||೩-೧೮೨-೨೭

ಸಂರಂಭ (ಉತ್ತೇಜನ) ಮತ್ತು ಆರಂಭ (ಕಾರ್ಯಶೀಲತೆ) ಗಳ ಕಾರಣದಿಂದ ನಿನ್ನ ಪೌರುಷವನ್ನು ನೀನು ಸ್ಥಿರವಾಗಿರಿಸಿಕೊಳ್ಳುವುದಿಲ್ಲ. ಏಕೆಂದರೆ ಕಾಲವು ಬರೆದಿರುವುದನ್ನು ಉಲ್ಲಂಘಿಸಲು ಸರ್ವಥಾ ಸಾಧ್ಯವಿಲ್ಲ.

ಅಶ್ವಮೇಧಃ ಕ್ರತುಃ ಶ್ರೇಷ್ಠಃ ಕ್ಷತ್ರಿಯಾಣಾಂ ಪರಿಶ್ರುತಃ |

ತೇನ ಭಾವೇನ ತೇ ಯಜ್ಞಂ ವಾಸವೋ ಧರ್ಷಯಿಷ್ಯತಿ ||೩-೧೮೨-೨೮

ಅಶ್ವಮೇಧ ಕ್ರತುವು ಕ್ಷತ್ರಿಯರಿಗೆ ಶ್ರೇಷ್ಠವೆಂದು ಕೇಳಿದ್ದೇವೆ. ಅದರ ಈ ಮಹತ್ವದ ಕಾರಣದಿಂದ ನಿನ್ನ ಯಜ್ಞವನ್ನು ವಾಸವನು ಭ್ರಷ್ಟಗೊಳಿಸುತ್ತಾನೆ.

ಯದಿ ತಚ್ಛಕ್ಯತೇ ರಾಜನ್ಪರಿಹರ್ತುಂ ಕಥಂಚನ |

ದೈವಂ ಪುರುಷಕಾರೇಣ ಮಾ ಯಜೇಥಾಶ್ಚ ತಂ ಕ್ರತುಮ್ ||೩-೧೮೨-೨೯

ರಾಜನ್! ಪುರುಷಾರ್ಥದಿಂದ ದೈವದ ಈ ವಿಧಾನವನ್ನು ನಿವಾರಿಸಲು ಶಕ್ಯವಾದರೆ ನೀನು ಈ ಯಜ್ಞವನ್ನು ಕೈಗೊಳ್ಳಬೇಡ.

ನ ಚಾಪರಾಧಃ ಶಕ್ರಸ್ಯ ನೋಪಾಧ್ಯಾಯಗಣಸ್ಯ ತೇ |

ತವ ವಾ ಯಜಮಾನಸ್ಯ ಕಾಲೋಽತ್ರ ದುರತಿಕ್ರಮಃ ||೩-೧೮೨-೩೦

ಇದರಲ್ಲಿ ಇಂದ್ರನ, ನಿನ್ನ ಉಪಾಧ್ಯಾಯಗಣದ ಅಥವಾ ಯಜಮಾನನಾದ ನಿನ್ನ ಅಪರಾಧವೇನೂ ಇಲ್ಲ. ಇಲ್ಲಿ ಕಾಲವೇ ದುರ್ಲಂಘ್ಯವು.

ತಸ್ಯ ಸಂಸ್ಥಾಕೃತಮಿದಂ ಕಾಲಸ್ಯ ಪರಮೇಷ್ಠಿನಃ |

ಯಥಾ ದೃಷ್ಟಂ ಪ್ರಜಾಸರ್ಗಂ ಗಮಿಷ್ಯತಿ ಯುಗಕ್ಷಯೇ ||೩-೧೮೨-೩೧

ಈ ಭಾವೀ ಕಲಂಕವು ಕಾಲಸ್ವರೂಪೀ ಬ್ರಹ್ಮನ ಇಚ್ಛೆಯಂತೆ ಅಶ್ವಮೇಧ ಯಜ್ಞವನ್ನು ಭವಿಷ್ಯದಲ್ಲಿ ನಿಲ್ಲಿಸುವುದಕ್ಕಾಗಿ ಸಂಘಟಿಸುತ್ತಿದೆ. ಕಲಿಯುಗದಲ್ಲಿ ಸಮಸ್ತ ಪ್ರಜೆಗಳೂ ಪ್ರಾಯಶಃ ವಿನಾಶವನ್ನೇ ಹೊಂದುತ್ತಾರೆ. ಇದು ಜ್ಞಾನದೃಷ್ಟಿಯಿಂದ ಕಾಣುತ್ತಿದೆ.

ತಥಾ ಯಜ್ಞಫಲಾನಾಂ ಚ ವಿಕ್ರೇತಾರೋ ದ್ವಿಜಾತಯಃ |

ತತ್ಪ್ರಣೇಯಂ ನಿಬೋಧಸ್ವ ತ್ರೈಲೋಕ್ಯಂ ಸಚರಾಚರಮ್ ||೩-೧೮೨-೩೨

ಹಾಗೆಯೇ ಬ್ರಾಹ್ಮಣರು ಯಜ್ಞಫಲವನ್ನು ಮಾರುವವರಾಗುತ್ತಾರೆ. ಆದುದರಿಂದ ತ್ರೈಲೋಕ್ಯದ ಸಚರಾಚರಗಳೂ ಕಾಲಕ್ಕೆ ಅಧೀನವಾಗಿವೆ ಎನ್ನುವುದನ್ನು ತಿಳಿದುಕೋ.”

ಜನಮೇಜಯ ಉವಾಚ |

ನಿವೃತ್ತಾವಶ್ವಮೇಧಸ್ಯ ಕಿಂ ನಿಮಿತ್ತಂ ಭವಿಷ್ಯತಿ |

ಶ್ರುತ್ವಾ ಪರಿಹರಿಷ್ಯಾಮಿ ಭಗವನ್ಯದಿ ಮನ್ಯಸೇ ||೩-೧೮೨-೩೩

ಜನಮೇಜಯನು ಹೇಳಿದನು: “ಭಗವನ್! ಅಶ್ವಮೇಧ ಯಜ್ಞದ ನಿವೃತ್ತಿಗೆ ಯಾವ ಕಾರಣವುಂಟಾಗುತ್ತದೆ? ನಿನಗೆ ಅನುಮತಿಯಿದ್ದರೆ ಅದನ್ನು ಕೇಳಿ ಅದಕ್ಕೆ ಪರಿಹಾರ ಮಾಡಿಕೊಳ್ಳುತ್ತೇನೆ.”

ವ್ಯಾಸ ಉವಾಚ |

ನಿಮಿತ್ತಂ ಭವಿತಾ ತತ್ರ ಬ್ರಹ್ಮಕೋಪಕೃತಂ ಪ್ರಭೋ |

ಯತೇಥಾಃ ಪರಿಹರ್ತುಂ ತ್ವಮಿತ್ಯೇತದ್ಭದ್ರಮಸ್ತು ತೇ ||೩-೧೮೨-೩೪

ವ್ಯಾಸನು ಹೇಳಿದನು: “ಪ್ರಭೋ! ಬ್ರಾಹ್ಮಣರ ಕುರಿತು ನಿನಗೆ ಕೋಪವುಂಟಾಗುತ್ತದೆ. ಅದರಿಂದ ಈ ಯಜ್ಞವನ್ನು ನಿಲ್ಲಿಸಲು ನೀನೇ ಕಾರಣನಾಗುತ್ತೀಯೆ. ಇದರ ಪರಿಹಾರಕ್ಕಾಗಿ ಪ್ರಯತ್ನಿಸು. ಇದೇ ನಾನು ಹೇಳಬಲ್ಲೆ. ನಿನಗೆ ಮಂಗಳವಾಗಲಿ.

ತ್ವಯಾ ವೃತ್ತಂ ಕ್ರತುಂ ಚೈವ ವಾಜಿಮೇಧಂ ಪರಂತಪ |

ಕ್ಷತ್ರಿಯಾನಾಹರಿಷ್ಯಂತಿ ಯಾವದ್ಭೂಮಿರ್ಧರಿಷ್ಯತಿ ||೩-೧೮೨-೩೫

ಪರಂತಪ! ನೀನು ನಡೆಸುವ ಈ ಅಶ್ವಮೇಧವನ್ನು ಈ ಭೂಮಿಯು ಎಲ್ಲಿಯ ವರೆಗೆ ಇರುವುದೋ ಅಲ್ಲಿಯ ವರೆಗೆ ಯಾವ ಕ್ಷತ್ರಿಯನೂ ಮಾಡುವುದಿಲ್ಲ.”

ಜನಮೇಜಯ ಉವಾಚ |

ನಿವೃತ್ತಾವಶ್ವಮಧಸ್ಯ ಬ್ರಹ್ಮಶಾಪಾಗ್ನಿತೇಜಸಾ |

ಅಹಂ ನಿಮಿತ್ತಮಿತಿ ಮೇ ಭಯಂ ತೀವ್ರಂ ತು ಜಾಯತೇ ||೩-೧೮೨-೩೬

ಜನಮೇಜಯನು ಹೇಳಿದನು: “ಬ್ರಾಹ್ಮಣನ ಶಾಪಾಗ್ನಿಯ ತೇಜಸ್ಸಿನಿಂದ ಅಶ್ವಮೇಧ ಯಜ್ಞವು ನಿಲ್ಲುತ್ತದೆ ಮತ್ತು ನಾನು ಅದರ ಕಾರಣನಾಗುತ್ತೇನೆ ಎನ್ನುವುದನ್ನು ತಿಳಿದು ನನಗೆ ಅತಿ ದೊಡ್ಡ ಭಯವುಂಟಾಗಿದೆ.

ಕಥಂ ಹ್ಯಕೀರ್ತ್ಯಾ ಯುಜ್ಯೇತ ಸುಕೃತೀ ಮದ್ವಿಧೋ ಜನಃ |

ಲೋಕಾನುತ್ಸಹತೇ ಗಂತುಂ ಖಂ ಸಪಾಶ ಇವ ದ್ವಿಜಃ ||೩-೧೮೨-೩೭

ನನ್ನಂತಹ ಪುಣ್ಯಾತ್ಮನು ಹೇಗೆ ತಾನೇ ಅಪಯಶಸ್ಸನ್ನು ಪಡೆದುಕೊಳ್ಳಬಹುದು ಮತ್ತು ದಾರದಿಂದ ಕಟ್ಟಲ್ಪಟ್ಟ ಪಕ್ಷಿಯು ಆಕಾಶಕ್ಕೆ ಹಾರಿಹೋಗಲಾರದಂತೆ ಅಪಯಶಸ್ಸಿನಿಂದ ಕಲಂಕಿತನಾದ  ನನ್ನಂಥವನು ಹೇಗೆ ತಾನೇ ಜನರ ಮುಂದೆ ಹೋಗಬಲ್ಲೆನು?

ಯಥಾ ಹ್ಯನಾಗತಮಿದಂ ದೃಷ್ಟಮತ್ರ ಪ್ರಣಾಶನಮ್ |

ಯದ್ಯಸ್ತಿ ಪುನರಾವೃತ್ತಿರ್ಯಜ್ಞಸ್ಯಾಶ್ವಾಸಯಸ್ವ ಮಾಮ್ ||೩-೧೮೨-೩೮

ಹೇಗೆ ನೀನು ಯಜ್ಞದ ಭಾವೀ ವಿನಾಶವನ್ನು ನೋಡಿದ್ದೀಯೋ ಹಾಗೆಯೇ ಇದರ ಪುನರಾವೃತ್ತಿಯು ಸಂಭವಿಸುವುದಾದರೆ ಅದನ್ನು ಹೇಳಿ ನನಗೆ ಆಶ್ವಾಸನೆಯನ್ನು ನೀಡು.”

ವ್ಯಾಸ ಉವಾಚ |

ಉಪಾತ್ತಯಜ್ಞೋ ದೇವೇಷು ಬ್ರಾಹ್ಮಣೇಷೂಪಪತ್ಸ್ಯತೇ |

ತೇಜಸಾ ವ್ಯಾಹೃತಂ ತೇಜಸ್ತೇಜಸ್ಯೇವಾವತಿಷ್ಠತೇ||೩-೧೮೨-೩೯||

ವ್ಯಾಸನು ಹೇಳಿದನು: “ಅಶ್ವಮೇಧ ಯಜ್ಞದ ಉಪಸಂಹಾರವಾದ ನಂತರ ದೇವತೆಗಳು ಮತ್ತು ಬ್ರಾಹ್ಮಣರಲ್ಲಿ ಅದು ಜ್ಞಾನರೂಪದಲ್ಲಿ ನೆಲೆಸುತ್ತದೆ. ಏಕೆಂದರೆ ತೇಜಸ್ಸಿನಿಂದ ಹುಟ್ಟಿದ ತೇಜಸ್ಸು ತೇಜಸ್ಸಿನಲ್ಲಿಯೇ ನೆಲೆಗೊಳ್ಳುತ್ತದೆ.

ಔದ್ಭಿಜ್ಜೋ ಭವಿತಾ ಕಶ್ಚಿತ್ ಸೇನಾನೀಃ ಕಾಶ್ಯಪೋ ದ್ವಿಜಃ|

ಅಶ್ವಮೇಧಂ ಕಲಿಯುಗೇ ಪುನಃ ಪ್ರತ್ಯಾಹರಿಷ್ಯತಿ||೩-೧೮೨-೪೦||

ಮುಂದೆ ಕಲಿಯುಗದಲ್ಲಿ ಭೂಮಿಯನ್ನು ಅಗೆಯುವಾಗ ಸೇನಾನೀ ಎಂಬ ಹೆಸರಿನ ಕಾಶ್ಯಪ ದ್ವಿಜನು ಪ್ರಕಟನಾಗುತ್ತಾನೆ. ಅವನು ಅಶ್ವಮೇಧ ಯಜ್ಞವನ್ನು ಪುನಃ ಅನುಷ್ಠಾನ ಮಾಡುತ್ತಾನೆ.

ತದಂತೇ ತತ್ಕುಲೀನಶ್ಚ ರಾಜಸೂಯಮಪಿ ಕ್ರತುಮ್|

ಆಹರಿಷ್ಯತಿ ರಾಜೇಂದ್ರ ಶ್ವೇತಗ್ರಹಮಿವಾಂತಕಃ||೩-೧೮೨-೪೧||

ರಾಜೇಂದ್ರ! ಆ ಯಜ್ಞದ ಅಂತ್ಯದಲ್ಲಿ ಅದೇ ಕುಲದಲ್ಲಿ ಹುಟ್ಟುವ ಅನ್ಯ ಪುರುಷನು, ಪ್ರಲಯಕಾಲದಲ್ಲಿ ಶ್ವೇತಗ್ರಹದ ಸೃಷ್ಟಿಯಾಗುವಂತೆ ರಾಜಸೂಯ ಯಜ್ಞವನ್ನೂ ನಡೆಸುತ್ತಾನೆ.

ಯಥಾಬಲಂ ಮನುಷ್ಯಾಣಾಂ ಕರ್ತೄಣಾಂ ದಾಸ್ಯತೇ ಫಲಮ್|

ಯುಗಾಂತದ್ವಾರಮೃಷಿಭಿಃ ಸಂವೃತಂ ವಿಚರಿಷ್ಯತಿ||೨-೧೮೨-೪೨||

ಯಜ್ಞ ಮಾಡುವ ಮನುಷ್ಯರ ಬಲವಿದ್ದಷ್ಟೇ ಫಲವನ್ನು ಯಜ್ಞವು ನೀಡುತ್ತದೆ. ಆಗ ಋಷಿಗಳಿಂದ ಸುರಕ್ಷಿತವಾದ ಯುಗಾಂತಕಾಲದ ದ್ವಾರದಲ್ಲಿ ಜನರು ಸಂಚರಿಸುತ್ತಿರುತ್ತಾರೆ.

ತದಾ ಪ್ರಭೃತಿ ಹಾಸ್ಯಂತಿ ನೃಣಾಂ ಪ್ರಾಣಾಃ ಪುರಾಕೃತೀಃ|

ನ ನಿವರ್ತಿಷ್ಯತೇ ಲೋಕೇ ವೃತ್ತಾಂತಾವರ್ತನೇಷ್ವಿಹ||೩-೧೮೨-೪೩||

ಅಂದಿನಿಂದ ನರರ ಪ್ರಾಣಗಳು ಹಿಂದಿನದಕ್ಕಿಂತ ಹೃಸ್ವವಾಗುತ್ತವೆ. ಲೋಕದಲ್ಲಿ ಮೊದಲು ಇದ್ದಹಾಗಿನ ವರ್ತನೆಗಳೇ ಇಲ್ಲವಾಗುತ್ತವೆ.

ತದಾ ಸೂಕ್ಷ್ಮೋ ಮಹೋದರ್ಕೋ ದುಸ್ತರೋ ದಾನಮೂಲವಾನ್|

ಚಾತುರಾಶ್ರಮ್ಯಶಿಥಿಲೋ ಧರ್ಮಃ ಪ್ರವಿಚಲಿಷ್ಯತಿ||೩-೧೮೨-೪೪||

ಆಗ ಸೂಕ್ಷ್ಮಧರ್ಮವೂ ಮಹಾ ಫಲವನ್ನು ನೀಡುತ್ತದೆ. ಆದರೆ ಅಧಿಕ ವಿಘ್ನಗಳ ಕಾರಣದಿಂದ ಆ ಧರ್ಮವನ್ನು ಸಂಪೂರ್ಣವಾಗಿ ನಡೆಸುವುದೂ ಕಠಿಣವಾಗುತ್ತದೆ. ಆಗ ದಾನವೇ ಧರ್ಮದ ಮೂಲವಾಗುತ್ತದೆ. ಚತುರಾಶ್ರಮಗಳು ಶಿಥಿಲಗೊಳ್ಳುವುದರಿಂದ ಧರ್ಮವು ತನ್ನ ಸ್ವರೂಪದಿಂದ ವಿಚಲಿತವಾಗಿಬಿಡುತ್ತದೆ.

ತದಾ ಹ್ಯಲ್ಪೇನ ತಪಸಾ ಸಿದ್ಧಿಂ ಪ್ರಾಪ್ಸ್ಯಂತಿ ಮಾನವಾಃ|

ಧನ್ಯಾ ಧರ್ಮಂ ಚರಿಷ್ಯಂತಿ ಯುಗಾಂತೇ ಜನಮೇಜಯ||೩-೧೮೨-೪೫||

ಜನಮೇಜಯ! ಆ ಯುಗಾಂತ ಅಥವಾ ಕಲಿಯುಗದಲ್ಲಿ ಮನುಷ್ಯನು ಅಲ್ಪವೇ ತಪಸ್ಸಿನಿಂದ ಸಿದ್ಧಿಯನ್ನು ಪಡೆದುಕೊಳ್ಳುವವನಾಗುತ್ತಾನೆ. ಆ ಸಮಯದಲ್ಲಿಯೂ ಕೆಲವು ಧನ್ಯ ಪುರುಷರು ಧರ್ಮದ ಆಚರಣೆಯನ್ನು ಮಾಡುತ್ತಿರುತ್ತಾರೆ.”


ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಭವಿಷ್ಯಪರ್ವಣಿ ಜನಮೇಜಯಪ್ರಶ್ನೇ ದ್ವಿಶೀತ್ಯಧಿಕಶತತಮೋಽಧ್ಯಾಯಃ||

Comments are closed.