ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ
೨೦೭
ಅಂಗಿರಸ-ಅಗ್ನಿ
ಯುಧಿಷ್ಠಿರನು ಕೇಳಲು ಮಾರ್ಕಂಡೇಯನು ಅಗ್ನಿ ಮತ್ತು ಸ್ಕಂದರ ಕುರಿತು ಕಥೆಯನ್ನು ಪ್ರಾರಂಭಿಸಿದುದು (೧-೮). ಅಗ್ನಿಯನ್ನು ಅಂಗಿರಸನು ತನ್ನ ಔರಸಪುತ್ರನನ್ನಾಗಿ ಸ್ವೀಕರಿಸಿದುದು (೯-೨೦).
03207001 ವೈಶಂಪಾಯನ ಉವಾಚ|
03207001a ಶ್ರುತ್ವೇಮಾಂ ಧರ್ಮಸಂಯುಕ್ತಾಂ ಧರ್ಮರಾಜಃ ಕಥಾಂ ಶುಭಾಂ|
03207001c ಪುನಃ ಪಪ್ರಚ್ಚ ತಮೃಷಿಂ ಮಾರ್ಕಂಡೇಯಂ ತಪಸ್ವಿನಂ||
ವೈಶಂಪಾಯನನು ಹೇಳಿದನು: “ಧರ್ಮಸಂಯುಕ್ತ ಈ ಶುಭ ಕಥೆಯನ್ನು ಕೇಳಿದ ಧರ್ಮರಾಜನು ಆ ತಪಸ್ವಿನಿ ಋಷಿ ಮಾರ್ಕಂಡೇಯನನ್ನು ಪುನಃ ಪ್ರಶ್ನಿಸಿದನು.
03207002 ಯುಧಿಷ್ಠಿರ ಉವಾಚ|
03207002a ಕಥಮಗ್ನಿರ್ವನಂ ಯಾತಃ ಕಥಂ ಚಾಪ್ಯಂಗಿರಾಃ ಪುರಾ|
03207002c ನಷ್ಟೇಽಗ್ನೌ ಹವ್ಯಮವಹದಗ್ನಿರ್ಭೂತ್ವಾ ಮಹಾನೃಷಿಃ||
ಯುಧಿಷ್ಠಿರನು ಹೇಳಿದನು: “ಯಾವ ಕಾರಣಕ್ಕಾಗಿ ಹಿಂದೆ ಅಗ್ನಿಯು ವನಕ್ಕೆ ಹೋದನು ಮತ್ತು ಆ ಮಹಾನೃಷಿ ಅಂಗಿರಸನು ಅಗ್ನಿಯಿಲ್ಲದಿರುವಾಗ ಅಗ್ನಿಯಾಗಿ ಹವಿಸ್ಸುಗಳನ್ನು ಕೊಂಡೊಯ್ಯುವವನಾದನು?
03207003a ಅಗ್ನಿರ್ಯದಾ ತ್ವೇಕ ಏವ ಬಹುತ್ವಂ ಚಾಸ್ಯ ಕರ್ಮಸು|
03207003c ದೃಶ್ಯತೇ ಭಗವನ್ಸರ್ವಮೇತದಿಚ್ಚಾಮಿ ವೇದಿತುಂ||
ಅಗ್ನಿಯು ಒಬ್ಬನೇ ಆಗಿದ್ದರೂ ಕರ್ಮಗಳಲ್ಲಿ ಬಹುವಾಗಿ ಕಾಣುತ್ತಾನೇ. ಭಗವನ್! ಇದರ ಕುರಿತು ಎಲ್ಲವನ್ನೂ ತಿಳಿಯಲು ಬಯಸುತ್ತೇನೆ.
03207004a ಕುಮಾರಶ್ಚ ಯಥೋತ್ಪನ್ನೋ ಯಥಾ ಚಾಗ್ನೇಃ ಸುತೋಽಭವತ್|
03207004c ಯಥಾ ರುದ್ರಾಚ್ಚ ಸಂಭೂತೋ ಗಂಗಾಯಾಂ ಕೃತ್ತಿಕಾಸು ಚ||
ಕುಮಾರನು ಹೇಗೆ ಹುಟ್ಟಿದನು? ಅವನು ರುದ್ರ, ಗಂಗೆ ಮತ್ತು ಕೃತ್ತಿಕೆಯರಲ್ಲಿ ಹುಟ್ಟಿದರೂ ಅಗ್ನಿಯ ಮಗನು ಹೇಗಾದನು?
03207005a ಏತದಿಚ್ಚಾಮ್ಯಹಂ ತ್ವತ್ತಃ ಶ್ರೋತುಂ ಭಾರ್ಗವನಂದನ|
03207005c ಕೌತೂಹಲಸಮಾವಿಷ್ಟೋ ಯಥಾತಥ್ಯಂ ಮಹಾಮುನೇ||
ಭಾರ್ಗವನಂದನ! ಇದನ್ನು ನಿನ್ನಿಂದ ಕೇಳಲು ಬಯಸುತ್ತೇನೆ. ಮಹಾಮುನೇ! ಕುತೂಹಲವುಂಟಾಗಿರುವುದರಿಂದ ನಡೆದಂತೆ ಹೇಳು.”
03207006 ಮಾರ್ಕಂಡೇಯ ಉವಾಚ|
03207006a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಂ|
03207006c ಯಥಾ ಕ್ರುದ್ಧೋ ಹುತವಹಸ್ತಪಸ್ತಪ್ತುಂ ವನಂ ಗತಃ||
03207007a ಯಥಾ ಚ ಭಗವಾನಗ್ನಿಃ ಸ್ವಯಮೇವಾಂಗಿರಾಭವತ್|
03207007c ಸಂತಾಪಯನ್ಸ್ವಪ್ರಭಯಾ ನಾಶಯಂಸ್ತಿಮಿರಾಣಿ ಚ||
03207008a ಆಶ್ರಮಸ್ಥೋ ಮಹಾಭಾಗೋ ಹವ್ಯವಾಹಂ ವಿಶೇಷಯನ್|
03207008c ತಥಾ ಸ ಭೂತ್ವಾ ತು ತದಾ ಜಗತ್ಸರ್ವಂ ಪ್ರಕಾಶಯನ್||
ಮಾರ್ಕಂಡೇಯನು ಹೇಳಿದನು: “ಹೇಗೆ ಸಿಟ್ಟಾಗಿ ಅಗ್ನಿಯು ತಪಸ್ಸನ್ನು ತಪಿಸಲು ವನಕ್ಕೆ ತೆರಳಿದನು, ಹೇಗೆ ಭಗವಾನ್ ಅಂಗಿರಸನು ಹಳೆಯ ಅಗ್ನಿಗಿಂತಲೂ ಹೆಚ್ಚಿನ ಸ್ವಪ್ರಭೆಯಿಂದ ಸುಡುತ್ತಾ ಕತ್ತಲೆಯನ್ನು ನಾಶಪಡಿಸುತ್ತಾ ಸ್ವಯಂ ಅಗ್ನಿಯಾದನು ಮತ್ತು ಮಹಾಭಾಗ ಹವ್ಯವಾಹನನು ಆಶ್ರಮದಲ್ಲಿರುವಾಗ ಅವನಂತೆಯೇ ಆಗಿ ಹೇಗೆ ಸರ್ವ ಜಗತ್ತನ್ನೂ ಪ್ರಕಾಶಿಸಿದನು ಎನ್ನುವುದರ ಕುರಿತಾದ ಈ ಪುರಾತನ ಇತಿಹಾಸವನ್ನು ಹೇಳುತ್ತಾರೆ.
03207009a ತಪಶ್ಚರಂಶ್ಚ ಹುತಭುಕ್ಸಂತಪ್ತಸ್ತಸ್ಯ ತೇಜಸಾ|
03207009c ಭೃಶಂ ಗ್ಲಾನಶ್ಚ ತೇಜಸ್ವೀ ನ ಸ ಕಿಂ ಚಿತ್ಪ್ರಜಜ್ಞಿವಾನ್||
ಅಗ್ನಿಯು ತಪಸ್ಸನ್ನು ಆಚರಿಸಿದನು. ಅನ್ಯ ತಪಸ್ವಿಯ[1] (ಅಂಗಿರಸನ) ತೇಜಸ್ಸಿನಿಂದ ತುಂಬಾ ಸಂತಪ್ತನಾಗಿ ಆ ತೇಜಸ್ವಿಯು ಏನು ಯೋಚಿಸಬೇಕೆಂದು ತಿಳಿಯದಾದನು.
03207010a ಅಥ ಸಂಚಿಂತಯಾಮಾಸ ಭಗವಾನ್ ಹವ್ಯವಾಹನಃ|
03207010c ಅನ್ಯೋಽಗ್ನಿರಿಹ ಲೋಕಾನಾಂ ಬ್ರಹ್ಮಣಾ ಸಂಪ್ರವರ್ತಿತಃ|
03207010e ಅಗ್ನಿತ್ವಂ ವಿಪ್ರನಷ್ಟಂ ಹಿ ತಪ್ಯಮಾನಸ್ಯ ಮೇ ತಪಃ||
03207011a ಕಥಮಗ್ನಿಃ ಪುನರಹಂ ಭವೇಯಮಿತಿ ಚಿಂತ್ಯ ಸಃ|
ಆಗ ಭಗವಾನ್ ಹವ್ಯವಾಹನನು “ಈ ಲೋಕಗಳಿಗೆ ಬ್ರಹ್ಮನು ಅನ್ಯ ಅಗ್ನಿಯನ್ನು (ಅಂಗಿರಸನ ರೂಪದಲ್ಲಿ) ಕೊಟ್ಟಿದ್ದಾನೆ. ನಾನು ತಪಸ್ಸನ್ನು ತಪಿಸುತ್ತಿರುವಾಗ ನನ್ನ ಅಗ್ನಿತ್ವವು ನಷ್ಟವಾಯಿತು. ನಾನು ಹೇಗೆ ಪುನಃ ಅಗ್ನಿಯಾಗಬಹುದು” ಎಂದು ಚಿಂತಿಸಿದನು.
03207011c ಅಪಶ್ಯದಗ್ನಿವಲ್ಲೋಕಾಂಸ್ತಾಪಯಂತಂ ಮಹಾಮುನಿಂ||
03207012a ಸೋಪಾಸರ್ಪಚ್ಚನೈರ್ಭೀತಸ್ತಮುವಾಚ ತದಾಂಗಿರಾಃ|
ಈ ರೀತಿ ಚಿಂತೆಯಲ್ಲಿದ್ದ ಅಗ್ನಿಯು ಲೋಕಗಳನ್ನು ಸುಡುತ್ತಿದ್ದ ಮಹಾಮುನಿಯನ್ನು ನಿಧಾನವಾಗಿ ಭಯದಿಂದ ಕಾಣಲು, ಅಂಗಿರಸನು ಅವನಿಗೆ ಈ ಮಾತುಗಳನ್ನಾಡಿದನು.
03207012c ಶೀಘ್ರಮೇವ ಭವಸ್ವಾಗ್ನಿಸ್ತ್ವಂ ಪುನರ್ಲೋಕಭಾವನಃ|
03207012e ವಿಜ್ಞಾತಶ್ಚಾಸಿ ಲೋಕೇಷು ತ್ರಿಷು ಸಂಸ್ಥಾನಚಾರಿಷು||
03207013a ತ್ವಮಗ್ನೇ ಪ್ರಥಮಃ ಸೃಷ್ಟೋ ಬ್ರಹ್ಮಣಾ ತಿಮಿರಾಪಹಃ|
03207013c ಸ್ವಸ್ಥಾನಂ ಪ್ರತಿಪದ್ಯಸ್ವ ಶೀಘ್ರಮೇವ ತಮೋನುದ||
“ಅಗ್ನಿ! ಲೋಕಭಾವನ! ಶೀಘ್ರವಾಗಿ ನೀನು ನಿನ್ನ ಹಿಂದಿನ ಅಗ್ನಿತ್ವವನ್ನು ಪಡೆದುಕೋ! ಮೂರು ಲೋಕಗಳಲ್ಲಿರುವ ಸ್ಥಾವರ ಜಂಗಮಗಳಿಗೆ ನೀನು ತಿಳಿದವನಾಗಿದ್ದೀಯೆ. ಕತ್ತಲೆಯನ್ನು ಹೋಗಲಾಡಿಸಲು ಅಗ್ನಿ! ಬ್ರಹ್ಮನು ಮೊದಲು ನಿನ್ನನ್ನು ಸೃಷ್ಟಿಸಿದನು. ರಾತ್ರಿಯನ್ನು ಕಳೆಯುವವನೇ! ಶೀಘ್ರವಾಗಿ ನಿನ್ನ ಸ್ಥಾನವನ್ನು ಹಿಂದೆ ಪಡೆದುಕೋ.”
03207014 ಅಗ್ನಿರುವಾಚ|
03207014a ನಷ್ಟಕೀರ್ತಿರಹಂ ಲೋಕೇ ಭವಾಂ ಜಾತೋ ಹುತಾಶನಃ|
03207014c ಭವಂತಮೇವ ಜ್ಞಾಸ್ಯಂತಿ ಪಾವಕಂ ನ ತು ಮಾಂ ಜನಾಃ||
ಅಗ್ನಿಯು ಹೇಳಿದನು: “ಲೋಕದಲ್ಲಿ ನನ್ನ ಕೀರ್ತಿಯು ನಷ್ಟವಾಗಿ ನೀನು ಹುತಾಶನನಾಗಿದ್ದೀಯೆ. ಜನರು ನಿನ್ನನ್ನೇ ಪಾವಕನೆಂದು ತಿಳಿದಿದ್ದಾರೆ. ನನ್ನನ್ನಲ್ಲ.
03207015a ನಿಕ್ಷಿಪಾಮ್ಯಹಮಗ್ನಿತ್ವಂ ತ್ವಮಗ್ನಿಃ ಪ್ರಥಮೋ ಭವ|
03207015c ಭವಿಷ್ಯಾಮಿ ದ್ವಿತೀಯೋಽಹಂ ಪ್ರಾಜಾಪತ್ಯಕ ಏವ ಚ||
ನಾನು ಅಗ್ನಿತ್ವವನ್ನು ತೊರೆಯುತ್ತೇನೆ. ನೀನು ಪ್ರಥಮ ಅಗ್ನಿಯಾಗು. ನಾನು ಪ್ರಾಜಾಪತ್ಯಕನೆಂಬ ಎರಡನೆಯ ಅಗ್ನಿಯಾಗುತ್ತೇನೆ.”
03207016 ಅಂಗಿರಾ ಉವಾಚ|
03207016a ಕುರು ಪುಣ್ಯಂ ಪ್ರಜಾಸ್ವರ್ಗ್ಯಂ ಭವಾಗ್ನಿಸ್ತಿಮಿರಾಪಹಃ|
03207016c ಮಾಂ ಚ ದೇವ ಕುರುಷ್ವಾಗ್ನೇ ಪ್ರಥಮಂ ಪುತ್ರಮಂಜಸಾ||
ಅಂಗಿರಸನು ಹೇಳಿದನು: “ಪ್ರಜೆಗಳನ್ನು ಸ್ವರ್ಗಕ್ಕೆ ತೆಗೆದುಕೊಂಡು ಹೋಗುವ ಪುಣ್ಯವನ್ನು ನೀನೇ ಮಾಡು. ಕತ್ತಲೆಯನ್ನು ಹರಿಸುವ ಅಗ್ನಿಯೂ ನೀನೇ ಆಗು. ಅಗ್ನಿ ದೇವ! ನನ್ನನ್ನು ನಿನ್ನ ಪ್ರಥಮ ಪುತ್ರನನ್ನಾಗಿಸಿಕೋ[2]!””
03207017 ಮಾರ್ಕಂಡೇಯ ಉವಾಚ|
03207017a ತಚ್ಚ್ರುತ್ವಾಂಗಿರಸೋ ವಾಕ್ಯಂ ಜಾತವೇದಾಸ್ತಥಾಕರೋತ್|
03207017c ರಾಜನ್ಬೃಹಸ್ಪತಿರ್ನಾಮ ತಸ್ಯಾಪ್ಯಂಗಿರಸಃ ಸುತಃ||
ಮಾರ್ಕಂಡೇಯನು ಹೇಳಿದನು: “ರಾಜನ್! ಅಂಗಿರಸನ ಈ ಮಾತನ್ನು ಕೇಳಿ ಜಾತವೇದನು ಹಾಗೆಯೇ ಮಾಡಿದನು. ಮತ್ತು ಅಂಗಿರಸನು ಬೃಹಸ್ಪತಿ ಎಂಬ ಹೆಸರಿನ ಮಗನನ್ನು ಪಡೆದನು.
03207018a ಜ್ಞಾತ್ವಾ ಪ್ರಥಮಜಂ ತಂ ತು ವಹ್ನೇರಾಂಗಿರಸಂ ಸುತಂ|
03207018c ಉಪೇತ್ಯ ದೇವಾಃ ಪಪ್ರಚ್ಚುಃ ಕಾರಣಂ ತತ್ರ ಭಾರತ||
ಭಾರತ! ಅಗ್ನಿಯಿಂದ ಅಂಗಿರಸನ ಪ್ರಥಮ ಮಗನು ಹುಟ್ಟಿದನೆಂದು ತಿಳಿದ ದೇವತೆಗಳು ಅದರ ಕಾರಣವನ್ನು ತಿಳಿಯಲು ಬಂದು ಸೇರಿದರು.
03207019a ಸ ತು ಪೃಷ್ಟಸ್ತದಾ ದೇವೈಸ್ತತಃ ಕಾರಣಮಬ್ರವೀತ್|
03207019c ಪ್ರತ್ಯಗೃಹ್ಣಂಸ್ತು ದೇವಾಶ್ಚ ತದ್ವಚೋಽಂಗಿರಸಸ್ತದಾ||
ದೇವತೆಗಳು ಕೇಳಲು ಅವನು ಕಾರಣವನ್ನು ಹೇಳಿದನು. ಅಂಗಿರಸನು ಕೊಟ್ಟ ಉತ್ತರವನ್ನು ದೇವತೆಗಳು ಸ್ವೀಕರಿಸಿದರು[3].
03207020a ಅತ್ರ ನಾನಾವಿಧಾನಗ್ನೀನ್ಪ್ರವಕ್ಷ್ಯಾಮಿ ಮಹಾಪ್ರಭಾನ್|
03207020c ಕರ್ಮಭಿರ್ಬಹುಭಿಃ ಖ್ಯಾತಾನ್ನಾನಾತ್ವಂ ಬ್ರಾಹ್ಮಣೇಷ್ವಿಹ||
ಬಹುಸಂಖ್ಯೆಯ ಕರ್ಮಗಳಿಗೆ ಬ್ರಾಹ್ಮಣಗಳಲ್ಲಿ ಗೊತ್ತುಪಡಿಸಿದ ಮಹಾಪ್ರಭೆಗಳುಳ್ಳ ನಾನಾ ವಿಧದ ಅಗ್ನಿಗಳ ಕುರಿತು ಹೇಳುತ್ತೇನೆ.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗಿರಸೋಪಾಖ್ಯಾನೇ ಸಪ್ತಾಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗಿರಸೋಪಾಖ್ಯಾನದಲ್ಲಿ ಇನ್ನೂರಾಏಳನೆಯ ಅಧ್ಯಾಯವು.
[1]ಹಿಂದೆ ಅಂಗಿರಸ ಮಹರ್ಷಿಯು ಆಶ್ರಮಸ್ಥನಾಗಿ ಉತ್ತಮೋತ್ತಮ ತಪಸ್ಸನ್ನಾಚರಿಸಲು ಅವನು ಅಗ್ನಿಯನ್ನೂ ಮೀರಿಸುವ ತೇಜೋವಂತನಾದನು. ಅದೇ ಸಮಯದಲ್ಲಿ ನೀರಿನಲ್ಲಿ ಕುಳಿತು ತಪಸ್ಸನ್ನಾಚರಿಸುತ್ತಿದ್ದ ಅಗ್ನಿಯು ತನ್ನ ತೇಜಸ್ಸನ್ನು ಕಳೆದುಕೊಂಡಿದ್ದನು.
[2]“ನಿನ್ನ ಅನುಗ್ರಹದಿಂದ ನನಗೊಬ್ಬ ಮಗನಾಗಲಿ. ನನ್ನ ಪುತ್ರನೂ ನಾನೇ ಆಗಿರುವುದರಿಂದ ನಾನೂ ನಿನ್ನ ಪುತ್ರನಾದಂತಾಗುತ್ತೇನೆ.”
[3]ಮತ್ತು ಅಂಗೀರಸನ ಔರಸ ಪುತ್ರ ಬೃಹಸ್ಪತಿಯನ್ನು ತಮ್ಮ ಗುರುವನ್ನಾಗಿ ಅಂಗೀಕರಿಸಿದರು.