Aranyaka Parva: Chapter 206

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೨೦೬

ನಡತೆಯಿಂದಲೇ ದ್ವಿಜನಾಗುತ್ತಾನೆಂದು ಬ್ರಾಹ್ಮಣನು ಹೇಳಲು (೧-೧೪) ಜೀವಿಗಳಲ್ಲಿ ಯಾವುದೋ ಒಂದಕ್ಕೆ ಮಾತ್ರ ಶೋಕವಿರುತ್ತದೆ ಎನ್ನುವುದಿಲ್ಲ; ಆದರೆ ಜ್ಞಾನದಿಂದ ಅದನ್ನು ಅರ್ಥಮಾಡಿಕೊಂಡು ಕಾಲಾಕಾಂಕ್ಷಿಯಾಗಿದ್ದರೆ ಗೊಂದಲಕ್ಕೊಳಗಾಗುವುದಿಲ್ಲವೆಂದು ವ್ಯಾಧನು ಹೇಳಿದುದು (೧೫-೨೬). ಕೌಶಿಕನು ಹಿಂದಿರುಗಿ ತನ್ನ ತಂದೆ-ತಾಯಿಯರ ಶುಶ್ರೂಷೆಯಲ್ಲಿ ನಿರತನಾದುದು (೨೭-೩೪).

03206001 ವ್ಯಾಧ ಉವಾಚ|

03206001a ಏವಂ ಶಪ್ತೋಽಹಮೃಷಿಣಾ ತದಾ ದ್ವಿಜವರೋತ್ತಮ|

03206001c ಅಭಿಪ್ರಸಾದಯಮೃಷಿಂ ಗಿರಾ ವಾಕ್ಯವಿಶಾರದಂ||

03206002a ಅಜಾನತಾ ಮಯಾಕಾರ್ಯಮಿದಮದ್ಯ ಕೃತಂ ಮುನೇ|

03206002c ಕ್ಷಂತುಮರ್ಹಸಿ ತತ್ಸರ್ವಂ ಪ್ರಸೀದ ಭಗವನ್ನಿತಿ|

ವ್ಯಾಧನು ಹೇಳಿದನು: “ದ್ವಿಜವರೋತ್ತಮ! ಈ ರೀತಿ ಆ ಋಷಿಯಿಂದ ಶಪಿತನಾದ ನಾನು ಅವನನ್ನು ಪ್ರಸೀದಗೊಳಿಸಲು ಈ ವಾಕ್ಯವಿಶಾರದ ಮಾತುಗಳನ್ನು ಆ ಋಷಿಗೆ ಹೇಳಿದೆನು: “ಮುನೇ! ತಿಳಿಯದೇ ಇಂದು ನನ್ನಿಂದ ಈ ಕಾರ್ಯವು ನಡೆದುಹೋಯಿತು. ಅವೆಲ್ಲವನ್ನೂ ನೀನು ಕ್ಷಮಿಸಬೇಕು. ಭಗವನ್! ಕರುಣೆತೋರು!”

03206003 ಋಷಿರುವಾಚ|

03206003a ನಾನ್ಯಥಾ ಭವಿತಾ ಶಾಪ ಏವಮೇತದಸಂಶಯಂ|

03206003c ಆನೃಶಂಸ್ಯಾದಹಂ ಕಿಂ ಚಿತ್ಕರ್ತಾನುಗ್ರಹಮದ್ಯ ತೇ||

ಋಷಿಯು ಹೇಳಿದನು: “ಶಾಪವು ಅನ್ಯಥಾ ಆಗುವುದಿಲ್ಲ. ಇದರಲ್ಲಿ ಸಂಶಯವೇ ಇಲ್ಲ. ಆದರೆ ನಿನಗೆ ಅನುಗ್ರಹಿಸಲು ನಾನು ಕೊಂಚ ಸುಳ್ಳಾಗಿಸುತ್ತೇನೆ.

03206004a ಶೂದ್ರಯೋನೌ ವರ್ತಮಾನೋ ಧರ್ಮಜ್ಞೋ ಭವಿತಾ ಹ್ಯಸಿ|

03206004c ಮಾತಾಪಿತ್ರೋಶ್ಚ ಶುಶ್ರೂಷಾಂ ಕರಿಷ್ಯಸಿ ನ ಸಂಶಯಃ||

ಶೂದ್ರಯೋನಿಯಲ್ಲಿ ಹುಟ್ಟಿದರೂ ಧರ್ಮಜ್ಞನಾಗಿ ನಡೆಯುತ್ತೀಯೆ. ಮಾತಾಪಿತೃಗಳ ಶುಶ್ರೂಷೆಯನ್ನೂ ಮಾಡುತ್ತೀಯೆ. ಸಂಶಯವಿಲ್ಲ.

03206005a ತಯಾ ಶುಶ್ರೂಷಯಾ ಸಿದ್ಧಿಂ ಮಹತೀಂ ಸಮವಾಪ್ಸ್ಯಸಿ|

03206005c ಜಾತಿಸ್ಮರಶ್ಚ ಭವಿತಾ ಸ್ವರ್ಗಂ ಚೈವ ಗಮಿಷ್ಯಸಿ|

03206005e ಶಾಪಕ್ಷಯಾಂತೇ ನಿರ್ವೃತ್ತೇ ಭವಿತಾಸಿ ಪುನರ್ದ್ವಿಜಃ||

ನಿನ್ನ ಶುಶ್ರೂಷೆಯಿಂದ ಮಹಾ ಸಿದ್ಧಿಯನ್ನು ಪಡೆಯುತ್ತೀಯೆ. ನಿನ್ನ ಹಿಂದಿನ ಜನ್ಮಗಳನ್ನು ನೆನಪಿಸಿಕೊಳ್ಳುತ್ತೀಯೆ ಮತ್ತು ಸ್ವರ್ಗಕ್ಕೆ ಹೋಗುತ್ತೀಯೆ. ಶಾಪವು ಮುಗಿದನಂತರ ಪುನಃ ದ್ವಿಜನಾಗಿ ಹುಟ್ಟುತ್ತೀಯೆ.””

03206006 ವ್ಯಾಧ ಉವಾಚ|

03206006a ಏವಂ ಶಪ್ತಃ ಪುರಾ ತೇನ ಋಷಿಣಾಸ್ಮ್ಯುಗ್ರತೇಜಸಾ|

03206006c ಪ್ರಸಾದಶ್ಚ ಕೃತಸ್ತೇನ ಮಮೈವಂ ದ್ವಿಪದಾಂ ವರ||

ವ್ಯಾಧನು ಹೇಳಿದನು: “ದ್ವಿಪದರಲ್ಲಿ ಶ್ರೇಷ್ಠನೇ! ಹಿಂದೆ ಹೀಗೆ ಆ ಉಗ್ರತೇಜಸ್ವಿ ಋಷಿಯಿಂದ ಶಪಿತನಾಗಿ, ಅವನಿಂದ ಕರುಣೆಯನ್ನೂ ಪಡೆದೆ.

03206007a ಶರಂ ಚೋದ್ಧೃತವಾನಸ್ಮಿ ತಸ್ಯ ವೈ ದ್ವಿಜಸತ್ತಮ|

03206007c ಆಶ್ರಮಂ ಚ ಮಯಾ ನೀತೋ ನ ಚ ಪ್ರಾಣೈರ್ವ್ಯಯುಜ್ಯತ||

ದ್ವಿಜಸತ್ತಮ! ಅವನ ಶರೀರದಿಂದ ಆ ಬಾಣವನ್ನು ಕಿತ್ತೆ, ಅವನನ್ನು ಆಶ್ರಮಕ್ಕೆ ಕರೆದೊಯ್ದೆ. ಆದರೆ ಅವನು ಪ್ರಾಣದಿಂದ ವಂಚಿತನಾದನು.

03206008a ಏತತ್ತೇ ಸರ್ವಮಾಖ್ಯಾತಂ ಯಥಾ ಮಮ ಪುರಾಭವತ್|

03206008c ಅಭಿತಶ್ಚಾಪಿ ಗಂತವ್ಯಂ ಮಯಾ ಸ್ವರ್ಗಂ ದ್ವಿಜೋತ್ತಮ||

ದ್ವಿಜೋತ್ತಮ! ನನಗೆ ಹಿಂದೆ ಏನೆಲ್ಲ ಆಯಿತೋ ಅವೆಲ್ಲವನ್ನೂ ಮತ್ತು ಇಲ್ಲಿಂದ ನಾನು ಸ್ವರ್ಗಕ್ಕೆ ಹೋಗುವವನಿದ್ದೇನೆ ಎನ್ನುವುದನ್ನೂ ನಿನಗೆ ಹೇಳಿದ್ದೇನೆ.”

03206009 ಬ್ರಾಹ್ಮಣ ಉವಾಚ|

03206009a ಏವಮೇತಾನಿ ಪುರುಷಾ ದುಃಖಾನಿ ಚ ಸುಖಾನಿ ಚ|

03206009c ಪ್ರಾಪ್ನುವಂತಿ ಮಹಾಬುದ್ಧೇ ನೋತ್ಕಂಠಾಂ ಕರ್ತುಮರ್ಹಸಿ|

03206009e ದುಷ್ಕರಂ ಹಿ ಕೃತಂ ತಾತ ಜಾನತಾ ಜಾತಿಮಾತ್ಮನಃ||

ಬ್ರಾಹ್ಮಣನು ಹೇಳಿದನು: “ಮಹಾಬುದ್ಧೇ! ಹೀಗೆ ಪುರುಷರು ದುಃಖ ಮತ್ತು ಸಖಗಳನ್ನು ಪಡೆಯುತ್ತಾರೆ. ಅದರಲ್ಲಿ ಶಂಕೆಯನ್ನು ಮಾಡಬಾರದು. ಮಿತ್ರ! ನಿನ್ನ ಹುಟ್ಟಿನ ಕುರಿತು ತಿಳಿದು ನೀನು ದುಷ್ಕರವಾದುದನ್ನೇ ಮಾಡಿದ್ದೀಯೆ.

03206010a ಕರ್ಮದೋಷಶ್ಚ ವೈ ವಿದ್ವನ್ನಾತ್ಮಜಾತಿಕೃತೇನ ವೈ|

03206010c ಕಂ ಚಿತ್ಕಾಲಂ ಮೃಷ್ಯತಾಂ ವೈ ತತೋಽಸಿ ಭವಿತಾ ದ್ವಿಜಃ|

03206010e ಸಾಂಪ್ರತಂ ಚ ಮತೋ ಮೇಽಸಿ ಬ್ರಾಹ್ಮಣೋ ನಾತ್ರ ಸಂಶಯಃ||

ವಿದ್ವನ್! ನಿನ್ನ ಜಾತಿಯ ಕೆಲಸವನ್ನು ಮಾಡುತ್ತಿರುವುದರಿಂದ ನಿನ್ನಲ್ಲಿ ಕರ್ಮದೋಷವುಂಟಾಗುವುದಿಲ್ಲ. ಕೆಲವು ಕಾಲ ಹೀಗಿದ್ದುಕೊಂಡು ನಂತರ ನೀನು ದ್ವಿಜನಾಗುತ್ತೀಯೆ. ಈಗಲೂ ನೀನು ನನ್ನ ಅಭಿಪ್ರಾಯದಲ್ಲಿ ಬ್ರಾಹ್ಮಣನೇ! ಅದರಲ್ಲಿ ಸಂಶಯವಿಲ್ಲ.

03206011a ಬ್ರಾಹ್ಮಣಃ ಪತನೀಯೇಷು ವರ್ತಮಾನೋ ವಿಕರ್ಮಸು|

03206011c ದಾಂಭಿಕೋ ದುಷ್ಕೃತಪ್ರಾಯಃ ಶೂದ್ರೇಣ ಸದೃಶೋ ಭವೇತ್||

ಕೀಳುರೀತಿಯಲ್ಲಿ ನಡೆದುಕೊಳ್ಳುವ, ಕೆಟ್ಟಕೆಲಸಗಳಲ್ಲಿ ನಿರತನಾಗಿರುವ, ಢಾಂಬಿಕ, ದುಷ್ಕೃತಪ್ರಾಯ ಬ್ರಾಹ್ಮಣನು ಶೂದ್ರನಂತೆಯೇ.

03206012a ಯಸ್ತು ಶೂದ್ರೋ ದಮೇ ಸತ್ಯೇ ಧರ್ಮೇ ಚ ಸತತೋತ್ಥಿತಃ|

03206012c ತಂ ಬ್ರಾಹ್ಮಣಮಹಂ ಮನ್ಯೇ ವೃತ್ತೇನ ಹಿ ಭವೇದ್ದ್ವಿಜಃ||

ಯಾವ ಶೂದ್ರನು ದಮ, ಸತ್ಯ, ಮತ್ತು ಧರ್ಮಗಳಲ್ಲಿ ಸತತವೂ ನಿರತನಾಗಿರುತ್ತಾನೋ ಅವನನ್ನು ನಾನು ಬ್ರಾಹ್ಮಣನೆಂದು ಮನ್ನಿಸುತ್ತೇನೆ. ನಡತೆಯಿಂದಲೇ ದ್ವಿಜನಾಗುತ್ತಾನೆ ತಾನೇ?

03206013a ಕರ್ಮದೋಷೇಣ ವಿಷಮಾಂ ಗತಿಮಾಪ್ನೋತಿ ದಾರುಣಾಂ|

03206013c ಕ್ಷೀಣದೋಷಮಹಂ ಮನ್ಯೇ ಚಾಭಿತಸ್ತ್ವಾಂ ನರೋತ್ತಮ||

ತನ್ನದೇ ಕರ್ಮದೋಷಗಳಿಂದ ವಿಷಮ ದಾರುಣ ಗತಿಯನ್ನು ಹೊಂದುತ್ತಾನೆ. ನರೋತ್ತಮ! ನಿನ್ನ ದೋಷಗಳು ಕಡಿಮೆಯಾಗಿವೆ ಎಂದು ನನಗನ್ನಿಸುತ್ತದೆ.

03206014a ಕರ್ತುಮರ್ಹಸಿ ನೋತ್ಕಂಠಾಂ ತ್ವದ್ವಿಧಾ ಹ್ಯವಿಷಾದಿನಃ|

03206014c ಲೋಕವೃತ್ತಾಂತವೃತ್ತಜ್ಞಾ ನಿತ್ಯಂ ಧರ್ಮಪರಾಯಣಾಃ||

ಇದಕ್ಕೆ ನೀನು ಶೋಕಿಸಬೇಕಾದುದಿಲ್ಲ. ಲೋಕದ ಆಗುಹೋಗುಗಳ, ನಡವಳಿಕೆಗಳ ಜ್ಞಾನವಿರುವ ಮತ್ತು ನಿತ್ಯವೂ ಧರ್ಮ ಪರಾಯಣನಾಗಿರುವ ನೀನು ಶೋಕಿಸಲು ಕಾರಣವಿಲ್ಲ.”

03206015 ವ್ಯಾಧ ಉವಾಚ|

03206015a ಪ್ರಜ್ಞಯಾ ಮಾನಸಂ ದುಃಖಂ ಹನ್ಯಾಚ್ಚಾರೀರಮೌಷಧೈಃ|

03206015c ಏತದ್ವಿಜ್ಞಾನಸಾಮರ್ಥ್ಯಂ ನ ಬಾಲೈಃ ಸಮತಾಂ ವ್ರಜೇತ್||

ವ್ಯಾಧನು ಹೇಳಿದನು: “ಪ್ರಜ್ಞೆಯಿಂದ ಮನಸ್ಸಿನ ದುಃಖವನ್ನು, ಔಷಧಗಳಿಂದ ಶಾರೀರಿಕ ದುಃಖವನ್ನು ಹನನಮಾಡಿಕೊಳ್ಳಬೇಕು. ಇದು ವಿಜ್ಞಾನದ ಸಾಮರ್ಥ್ಯ. ಇದನ್ನು ತಿಳಿದವನು ಬಾಲಕನಂತೆ ನಡೆದುಕೊಳ್ಳುವುದನ್ನು ಬಿಟ್ಟುಬಿಡಬೇಕು.

03206016a ಅನಿಷ್ಟಸಂಪ್ರಯೋಗಾಚ್ಚ ವಿಪ್ರಯೋಗಾತ್ಪ್ರಿಯಸ್ಯ ಚ|

03206016c ಮಾನುಷಾ ಮಾನಸೈರ್ದುಃಖೈರ್ಯುಜ್ಯಂತೇ ಅಲ್ಪಬುದ್ಧಯಃ||

ಅಲ್ಪಬುದ್ಧಿಯ ಮನುಷ್ಯರು ತಮಗೆ ಪ್ರಿಯವಾಗದೇ ಇದ್ದ ಅನಿಷ್ಟ ಸಂಗತಿಗಳಾದಾಗ ಮಾನಸಿಕ ದುಃಖಗಳಿಂದ ಬಳಲುತ್ತಾರೆ.

03206017a ಗುಣೈರ್ಭೂತಾನಿ ಯುಜ್ಯಂತೇ ವಿಯುಜ್ಯಂತೇ ತಥೈವ ಚ|

03206017c ಸರ್ವಾಣಿ ನೈತದೇಕಸ್ಯ ಶೋಕಸ್ಥಾನಂ ಹಿ ವಿದ್ಯತೇ||

ಎಲ್ಲ ಭೂತಗಳೂ ಈ ಗುಣವನ್ನು ಹೊಂದಿರುತ್ತವೆ. ಯಾವುದೋ ಒಂದೇ ಈ ಶೋಕವನ್ನು ಪಡೆಯುತ್ತದೆ ಎನ್ನುವುದಿಲ್ಲ.

03206018a ಅನಿಷ್ಟೇನಾನ್ವಿತಂ ಪಶ್ಯಂಸ್ತಥಾ ಕ್ಷಿಪ್ರಂ ವಿರಜ್ಯತೇ|

03206018c ತತಶ್ಚ ಪ್ರತಿಕುರ್ವಂತಿ ಯದಿ ಪಶ್ಯಂತ್ಯುಪಕ್ರಮಂ|

03206018e ಶೋಚತೋ ನ ಭವೇತ್ಕಿಂ ಚಿತ್ಕೇವಲಂ ಪರಿತಪ್ಯತೇ||

ಈ ಅನಿಷ್ಟವನ್ನು ನೋಡಿ, ಜನರು ಬೇಗನೇ ತಮ್ಮ ರೀತಿಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಅದು ಬರುತ್ತಿರುವುದನ್ನು ಮೊದಲೇ ತಿಳಿದುಕೊಂಡಿದ್ದರೆ ಅದನ್ನು ನಿವಾರಿಸಲು ಸುಲಭವಾಗುತ್ತದೆ. ಇದರ ಕುರಿತು ಶೋಕಿಸುವವನು ತನ್ನನ್ನು ಕೇವಲ ಪರಿತಪಿಸಿಕೊಳ್ಳುತ್ತಾನೆ.

03206019a ಪರಿತ್ಯಜಂತಿ ಯೇ ದುಃಖಂ ಸುಖಂ ವಾಪ್ಯುಭಯಂ ನರಾಃ|

03206019c ತ ಏವ ಸುಖಮೇಧಂತೇ ಜ್ಞಾನತೃಪ್ತಾ ಮನೀಷಿಣಃ||

ಜ್ಞಾನದಿಂದ ತೃಪ್ತರಾದ ಮತ್ತು ಸುಖವನ್ನು ಹೊಂದಿದ ತಿಳುವಳಿಕೆಯಿದ್ದ ನರರು ಮಾತ್ರ ಈ ಸುಖ ದುಃಖಗಳೆರಡನ್ನೂ ತೊರೆದು ನಿಜವಾಗಿಯೂ ಸುಖಿಗಳಾಗಿರುತ್ತಾರೆ.

03206020a ಅಸಂತೋಷಪರಾ ಮೂಢಾಃ ಸಂತೋಷಂ ಯಾಂತಿ ಪಂಡಿತಾಃ|

03206020c ಅಸಂತೋಷಸ್ಯ ನಾಸ್ತ್ಯಂತಸ್ತುಷ್ಟಿಸ್ತು ಪರಮಂ ಸುಖಂ|

03206020e ನ ಶೋಚಂತಿ ಗತಾಧ್ವಾನಃ ಪಶ್ಯಂತಃ ಪರಮಾಂ ಗತಿಂ||

ಮೂಢರು ಯಾವಾಗಲೂ ಅಸಂತೋಷದಲ್ಲಿರುತ್ತಾರೆ ಮತ್ತು ಪಂಡಿತರು ಸಂತೋಷವನ್ನು ಹೊಂದಿರುತ್ತಾರೆ. ಅಸಂತೋಷಕ್ಕೆ ಅಂತ್ಯವೇ ಇಲ್ಲ. ತುಷ್ಟಿಯೇ ಪರಮ ಸುಖ. ಸರಿಯಾದ ಗತಿಯನ್ನು ಹೊಂದಿದವರು ಪರಮ ಗತಿಯನ್ನು ಕಂಡುಕೊಂಡು ದುಃಖಿಸುವುದಿಲ್ಲ.

03206021a ನ ವಿಷಾದೇ ಮನಃ ಕಾರ್ಯಂ ವಿಷಾದೋ ವಿಷಮುತ್ತಮಂ|

03206021c ಮಾರಯತ್ಯಕೃತಪ್ರಜ್ಞಂ ಬಾಲಂ ಕ್ರುದ್ಧ ಇವೋರಗಃ||

ಮನಸ್ಸನ್ನು ವಿಷಾದಕ್ಕೆ ಒಳಪಡಿಸಬಾರದು. ವಿಷಾದವು ಉತ್ತಮ ವಿಷದಂತೆ. ಪ್ರಜ್ಞೆಯು ಬೆಳೆದಿರುವವನನ್ನು ಅದು ಬಾಲಕನನ್ನು ಒಂದು ಕೃದ್ಧ ಸರ್ಪದಂತೆ ಕೊಲ್ಲುತ್ತದೆ.

03206022a ಯಂ ವಿಷಾದೋಽಭಿಭವತಿ ವಿಷಮೇ ಸಮುಪಸ್ಥಿತೇ|

03206022c ತೇಜಸಾ ತಸ್ಯ ಹೀನಸ್ಯ ಪುರುಷಾರ್ಥೋ ನ ವಿದ್ಯತೇ||

ವಿಷಮ ಪರಿಸ್ಥಿತಿಯಲ್ಲಿ ವಿಷಾದಪಡುವವನಲ್ಲಿ, ತನ್ನ ತೇಜಸ್ಸನ್ನು ಕಳೆದುಕೊಂಡವನಲ್ಲಿ ಪುರುಷಾರ್ಥವೇ ಇಲ್ಲ ಎಂದು ತಿಳಿಯಬೇಕು.

03206023a ಅವಶ್ಯಂ ಕ್ರಿಯಮಾಣಸ್ಯ ಕರ್ಮಣೋ ದೃಶ್ಯತೇ ಫಲಂ|

03206023c ನ ಹಿ ನಿರ್ವೇದಮಾಗಮ್ಯ ಕಿಂ ಚಿತ್ಪ್ರಾಪ್ನೋತಿ ಶೋಭನಂ||

ನಾವು ಮಾಡುವ ಕರ್ಮಗಳಿಗೆ ಅವಶ್ಯವಾಗಿಯೂ ಫಲವನ್ನು ಕಾಣುತ್ತೇವೆ. ಏನನ್ನೂ ಅರಿಯದೇ ಮಾಡುವುದರಿಂದ ಒಳ್ಳೆಯದೇನೂ ದೊರಕುವುದಿಲ್ಲ.

03206024a ಅಥಾಪ್ಯುಪಾಯಂ ಪಶ್ಯೇತ ದುಃಖಸ್ಯ ಪರಿಮೋಕ್ಷಣೇ|

03206024c ಅಶೋಚನ್ನಾರಭೇತೈವ ಯುಕ್ತಶ್ಚಾವ್ಯಸನೀ ಭವೇತ್||

ಶೋಕಿಸುವುದರ ಬದಲಾಗಿ ದುಃಖದ ಪರಿಮೋಕ್ಷಣದ ಉಪಾಯವನ್ನು ನೋಡಬೇಕು ಮತ್ತು ಅವ್ಯಸನಿಯಾಗಬೇಕು.

03206025a ಭೂತೇಷ್ವಭಾವಂ ಸಂಚಿಂತ್ಯ ಯೇ ತು ಬುದ್ಧೇಃ ಪರಂ ಗತಾಃ|

03206025c ನ ಶೋಚಂತಿ ಕೃತಪ್ರಜ್ಞಾಃ ಪಶ್ಯಂತಃ ಪರಮಾಂ ಗತಿಂ||

ಪರಮ ಬುದ್ಧಿಯನ್ನು ಪಡೆದವನು ಎಲ್ಲ ಭೂತಗಳ ಅಭಾವದ ಕುರಿತು ಯಾವಾಗಲೂ ಚಿಂತಿಸುತ್ತಿರುತ್ತಾನೆ. ಕೃತಪ್ರಜ್ಞನು ಶೋಕಿಸುವುದಿಲ್ಲ. ಪರಮ ಗತಿಯನ್ನೇ ಕಾಣುತ್ತಿರುತ್ತಾನೆ.

03206026a ನ ಶೋಚಾಮಿ ಚ ವೈ ವಿದ್ವನ್ಕಾಲಾಕಾಂಕ್ಷೀ ಸ್ಥಿತೋಽಸ್ಮ್ಯಹಂ|

03206026c ಏತೈರ್ನಿದರ್ಶನೈರ್ಬ್ರಹ್ಮನ್ನಾವಸೀದಾಮಿ ಸತ್ತಮ||

ವಿದ್ವನ್! ನಾನೂ ಕೂಡ ಶೋಕಿಸುವುದಿಲ್ಲ. ಕಾಲಾಕಾಂಕ್ಷಿಯಾಗಿ ಇಲ್ಲಿಯೇ ನಿಂತಿರುತ್ತೇನೆ. ಆದುದರಿಂದ ಬ್ರಹ್ಮನ್! ಸತ್ತಮ! ನಾನು ಗೊಂದಲಕ್ಕೊಳಗಾಗುವುದಿಲ್ಲ.”

03206027 ಬ್ರಾಹ್ಮಣ ಉವಾಚ|

03206027a ಕೃತಪ್ರಜ್ಞೋಽಸಿ ಮೇಧಾವೀ ಬುದ್ಧಿಶ್ಚ ವಿಪುಲಾ ತವ|

03206027c ನಾಹಂ ಭವಂತಂ ಶೋಚಾಮಿ ಜ್ಞಾನತೃಪ್ತೋಽಸಿ ಧರ್ಮವಿತ್||

ಬ್ರಾಹ್ಮಣನು ಹೇಳಿದನು: “ಮೇಧಾವೀ! ನೀನು ಕೃತಪ್ರಜ್ಞನಾಗಿರುವೆ. ನಿನ್ನ ಬುದ್ಧಿಯು ವಿಪುಲವಾದುದು. ಧರ್ಮವಿದನಾದ ನೀನು ಜ್ಞಾನತೃಪ್ತನಾಗಿದ್ದೀಯೆ. ನಿನಗಾಗಿ ನಾನು ಚಿಂತಿಸುವುದಿಲ್ಲ.

03206028a ಆಪೃಚ್ಚೇ ತ್ವಾಂ ಸ್ವಸ್ತಿ ತೇಽಸ್ತು ಧರ್ಮಸ್ತ್ವಾ ಪರಿರಕ್ಷತು|

03206028c ಅಪ್ರಮಾದಸ್ತು ಕರ್ತವ್ಯೋ ಧರ್ಮೇ ಧರ್ಮಭೃತಾಂ ವರ||

ಧರ್ಮಭೃತರಲ್ಲಿ ಶ್ರೇಷ್ಠನೇ! ನಿನಗೆ ಮಂಗಳವಾಗಲಿ. ನಿನ್ನಲ್ಲಿ ಅಪ್ಪಣೆಯನ್ನು ಕೇಳುತ್ತೇನೆ. ಧರ್ಮವು ನಿನ್ನನ್ನು ಪರಿರಕ್ಷಿಸಲಿ. ಧರ್ಮದ ಕರ್ತವ್ಯಗಳಲ್ಲಿ ನೀನು ತಪ್ಪದಿರುವಂತಾಗಲಿ.””

03206029 ಮಾರ್ಕಂಡೇಯ ಉವಾಚ|

03206029a ಬಾಢಮಿತ್ಯೇವ ತಂ ವ್ಯಾಧಃ ಕೃತಾಂಜಲಿರುವಾಚ ಹ|

03206029c ಪ್ರದಕ್ಷಿಣಮಥೋ ಕೃತ್ವಾ ಪ್ರಸ್ಥಿತೋ ದ್ವಿಜಸತ್ತಮಃ||

ಮಾರ್ಕಂಡೇಯನು ಹೇಳಿದನು: “ಹಾಗೆಯೇ ಆಗಲಿ ಎಂದು ವ್ಯಾಧನು ಕೈಮುಗಿದು ಹೇಳಿದನು. ಆ ದ್ವಿಜಸತ್ತಮನು ಪ್ರದಕ್ಷಿಣೆಯನ್ನು ಹಾಕಿ ಹೊರಟನು.

03206030a ಸ ತು ಗತ್ವಾ ದ್ವಿಜಃ ಸರ್ವಾಂ ಶುಶ್ರೂಷಾಂ ಕೃತವಾಂಸ್ತದಾ|

03206030c ಮಾತಾಪಿತೃಭ್ಯಾಂ ವೃದ್ಧಾಭ್ಯಾಂ ಯಥಾನ್ಯಾಯಂ ಸುಸಂಶಿತಃ||

ಆ ದ್ವಿಜನಾದರೋ ಹೋಗಿ ಯಥಾನ್ಯಾಯವಾಗಿ ವೃದ್ಧರಾಗಿದ್ದ ಮಾತಾಪಿತೃಗಳ ಎಲ್ಲ ಶುಶ್ರೂಷೆಗಳನ್ನು ಮಾಡಿದನು.

03206031a ಏತತ್ತೇ ಸರ್ವಮಾಖ್ಯಾತಂ ನಿಖಿಲೇನ ಯುಧಿಷ್ಠಿರ|

03206031c ಪೃಷ್ಟವಾನಸಿ ಯಂ ತಾತ ಧರ್ಮಂ ಧರ್ಮಭೃತಾಂ ವರ||

ಯುಧಿಷ್ಠಿರ! ಮಗೂ! ಧರ್ಮಭೃತರಲ್ಲಿ ಶ್ರೇಷ್ಠ! ನೀನು ಧರ್ಮದ ಕುರಿತು ಕೇಳಿದುದೆಲ್ಲವನ್ನೂ ಸಂಪೂರ್ಣವಾಗಿ ನಿನಗೆ ಹೇಳಿದ್ದೇನೆ.

03206032a ಪತಿವ್ರತಾಯಾ ಮಾಹಾತ್ಮ್ಯಂ ಬ್ರಾಹ್ಮಣಸ್ಯ ಚ ಸತ್ತಮ|

03206032c ಮಾತಾಪಿತ್ರೋಶ್ಚ ಶುಶ್ರೂಷಾ ವ್ಯಾಧೇ ಧರ್ಮಶ್ಚ ಕೀರ್ತಿತಃ||

ಪತಿವ್ರತೆಯ, ಸತ್ತಮ ಬ್ರಾಹ್ಮಣನ ಮತ್ತು ಮಾತಾಪಿತೃಗಳ ಶುಶ್ರೂಷಣೆಯಲ್ಲಿದ್ದ ವ್ಯಾಧನ ಧರ್ಮದ ಮಹಾತ್ಮೆಗಳನ್ನು ಹೇಳಿದ್ದೇನೆ.”

03206033 ಯುಧಿಷ್ಠಿರ ಉವಾಚ|

03206033a ಅತ್ಯದ್ಭುತಮಿದಂ ಬ್ರಹ್ಮನ್ಧರ್ಮಾಖ್ಯಾನಮನುತ್ತಮಂ|

03206033c ಸರ್ವಧರ್ಮಭೃತಾಂ ಶ್ರೇಷ್ಠ ಕಥಿತಂ ದ್ವಿಜಸತ್ತಮ||

ಯುಧಿಷ್ಠಿರನು ಹೇಳಿದನು: “ಸರ್ವಧರ್ಮಭೃತರಲ್ಲಿ ಶ್ರೇಷ್ಠ! ದ್ವಿಜಸತ್ತಮ! ಬ್ರಹ್ಮನ್! ನೀನು ಹೇಳಿದ ಈ ಧರ್ಮಾಖ್ಯಾನವು ಅನುತ್ತಮವಾದುದು! ಅದ್ಭುತವಾದುದು!

03206034a ಸುಖಶ್ರವ್ಯತಯಾ ವಿದ್ವನ್ಮುಹೂರ್ತಮಿವ ಮೇ ಗತಂ|

03206034c ನ ಹಿ ತೃಪ್ತೋಽಸ್ಮಿ ಭಗವಂ ಶೃಣ್ವಾನೋ ಧರ್ಮಮುತ್ತಮಂ||

ವಿದ್ವನ್! ಭಗವನ್! ನಿನ್ನನ್ನು ಕೇಳುತ್ತಾ ಸಮಯವು ಸುಖವಾಗಿ ಮುಹೂರ್ತದಂತೆ ಕಳೆದುಹೋಯಿತು. ಉತ್ತಮ ಧರ್ಮದ ಕುರಿತು ಕೇಳಿ ಇನ್ನೂ ತೃಪ್ತನಾಗಿಲ್ಲ.””

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಬ್ರಾಹ್ಮಣವ್ಯಾಧಸಂವಾದೇ ಷಷ್ಟಾಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಬ್ರಾಹ್ಮಣವ್ಯಾಧಸಂವಾದದಲ್ಲಿ ಇನ್ನೂರಾಆರನೆಯ ಅಧ್ಯಾಯವು.

Related image

Comments are closed.