Anushasana Parva: Chapter 97

ಅನುಶಾಸನ ಪರ್ವ: ದಾನಧರ್ಮ ಪರ್ವ

೯೭

ಛತ್ರೋಪಾನ ಉತ್ಪತ್ತಿ

ಜಮದಗ್ನಿಯು ರೇಣುಕೆಯ ನೆತ್ತಿ-ಕಾಲುಗಳನ್ನು ಬಿಸಿಲಿನಿಂದ ಸುಡುತ್ತಿದ್ದ ಸೂರ್ಯನ ಮೇಲೆ ಕುಪಿತನಾಗಿ ಬಾಣಪ್ರಯೋಗ ಮಾಡಲು ಸಿದ್ಧನಾದಾಗ ಸೂರ್ಯನು ಬ್ರಾಹ್ಮಣವೇಷದಲ್ಲಿ ಬಂದು ಪ್ರಸನ್ನನಾಗಲು ಕೇಳಿಕೊಂಡಿದುದು (೧-೨೭).

13097001 ಯುಧಿಷ್ಠಿರ ಉವಾಚ|

13097001a ಯದಿದಂ ಶ್ರಾದ್ಧಧರ್ಮೇಷು[1] ದೀಯತೇ ಭರತರ್ಷಭ|

13097001c ಚತ್ರಂ ಚೋಪಾನಹೌ ಚೈವ ಕೇನೈತತ್ಸಂಪ್ರವರ್ತಿತಮ್|

13097001e ಕಥಂ ಚೈತತ್ಸಮುತ್ಪನ್ನಂ ಕಿಮರ್ಥಂ ಚ ಪ್ರದೀಯತೇ||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಶ್ರಾದ್ಧಧರ್ಮಗಳಲ್ಲಿ ಛತ್ರಿಯನ್ನೂ ಪಾದರಕ್ಷೆಗಳನ್ನೂ ದಾನಮಾಡುವುದನ್ನು ಯಾರು ಪ್ರಾರಂಭಿಸಿದರು? ಇವು ಹೇಗೆ ಹುಟ್ಟಿದವು? ಯಾವ ಕಾರಣದಿಂದ ಇವುಗಳನ್ನು ದಾನಮಾಡುತ್ತಾರೆ?

13097002a ನ ಕೇವಲಂ ಶ್ರಾದ್ಧಧರ್ಮೇ ಪುಣ್ಯಕೇಷ್ವಪಿ ದೀಯತೇ|

13097002c ಏತದ್ವಿಸ್ತರತೋ ರಾಜನ್ ಶ್ರೋತುಮಿಚ್ಚಾಮಿ ತತ್ತ್ವತಃ||

ರಾಜನ್! ಶ್ರಾದ್ಧಧರ್ಮದಲ್ಲಿ ಮಾತ್ರವಲ್ಲದೇ ಪುಣ್ಯಕರ್ಮಗಳಲ್ಲಿಯೂ ಇವುಗಳನ್ನು ದಾನಮಾಡುತ್ತಾರೆ. ಇದರ ಕುರಿತು ವಿಸ್ತಾರವಾಗಿ ತತ್ತ್ವತಃ ಕೇಳ ಬಯಸುತ್ತೇನೆ.”

13097003 ಭೀಷ್ಮ ಉವಾಚ|

13097003a ಶೃಣು ರಾಜನ್ನವಹಿತಶ್ಚತ್ರೋಪಾನಹವಿಸ್ತರಮ್|

13097003c ಯಥೈತತ್ಪ್ರಥಿತಂ ಲೋಕೇ ಯೇನ ಚೈತತ್ ಪ್ರವರ್ತಿತಮ್||

ಭೀಷ್ಮನು ಹೇಳಿದನು: “ರಾಜನ್! ಛತ್ರಿ-ಪಾದರಕ್ಷೆಗಳು ಹೇಗೆ ಹುಟ್ಟಿದವು ಮತ್ತು ಹೇಗೆ ಪ್ರಸಿದ್ಧಿಯಾದವು ಹಾಗೂ ಅವುಗಳನ್ನು ಮೊದಲು ದಾನವನ್ನಾಗಿತ್ತವರ್ಯಾರು ಎನ್ನುವುದನ್ನು ವಿಸ್ತಾರವಾಗಿ ಹೇಳುತ್ತೇನೆ. ಮನಸ್ಸಿಟ್ಟು ಕೇಳು.

13097004a ಯಥಾ ಚಾಕ್ಷಯ್ಯತಾಂ ಪ್ರಾಪ್ತಂ ಪುಣ್ಯತಾಂ ಚ ಯಥಾ ಗತಮ್|

13097004c ಸರ್ವಮೇತದಶೇಷೇಣ ಪ್ರವಕ್ಷ್ಯಾಮಿ ಜನಾಧಿಪ||

ಜನಾಧಿಪ! ಇವುಗಳ ದಾನದ ಫಲಗಳು ಹೇಗೆ ಅಕ್ಷಯವಾಗುತ್ತವೆ ಮತ್ತು ಇವು ಹೇಗೆ ಪುಣ್ಯಕರಗಳಾದವು ಎನ್ನುವುದೆಲ್ಲವನ್ನೂ ಸಂಪೂರ್ಣವಾಗಿ ಹೇಳುತ್ತೇನೆ.

13097005a ಇತಿಹಾಸಂ ಪುರಾವೃತ್ತಮಿಮಂ ಶೃಣು ನರಾಧಿಪ|

13097005c ಜಮದಗ್ನೇಶ್ಚ ಸಂವಾದಂ ಸೂರ್ಯಸ್ಯ ಚ ಮಹಾತ್ಮನಃ||

ನರಾಧಿಪ! ಹಿಂದೆ ನಡೆದ ಜಮದಗ್ನಿ ಮತ್ತು ಮಹಾತ್ಮ ಸೂರ್ಯನ ಸಂವಾದವಾದ ಈ ಇತಿಹಾಸವನ್ನು ಕೇಳು.

13097006a ಪುರಾ ಸ ಭಗವಾನ್ಸಾಕ್ಷಾದ್ಧನುಷಾಕ್ರೀಡತ ಪ್ರಭೋ|

13097006c ಸಂಧಾಯ ಸಂಧಾಯ ಶರಾಂಶ್ಚಿಕ್ಷೇಪ ಕಿಲ ಭಾರ್ಗವಃ||

ಪ್ರಭೋ! ಹಿಂದೆ ಭಗವಾನ್ ಸಾಕ್ಷಾತ್ ಭಾರ್ಗವನು ಬಿಲ್ಲಿನೊಂದಿಗೆ ಆಟವಾಡುತ್ತಿದ್ದನು. ಅವನು ಬಾರಿಬಾರಿಗೂ ಧನುಸ್ಸಿನಲ್ಲಿ ಬಾಣಗಳನ್ನು ಹೂಡಿ ಬಿಡುತ್ತಿದ್ದನು.

13097007a ತಾನ್ ಕ್ಷಿಪ್ತಾನ್ರೇಣುಕಾ ಸರ್ವಾಂಸ್ತಸ್ಯೇಷೂನ್ದೀಪ್ತತೇಜಸಃ|

13097007c ಆನಾಯ್ಯ ಸಾ ತದಾ ತಸ್ಮೈ ಪ್ರಾದಾದಸಕೃದಚ್ಯುತ||

ಹಾಗೆ ಬಿಡುತ್ತಿದ್ದ ಪ್ರದೀಪ್ತ ತೇಜಸ್ಸಿನಿಂದ ಕೂಡಿದ ಬಾಣಗಳನ್ನು ಅವನ ಪತ್ನಿ ರೇಣುಕೆಯು ಹಿಂದಕ್ಕೆ ತಂದು ಕೊಡುತ್ತಿದ್ದಳು.

13097008a ಅಥ ತೇನ ಸ ಶಬ್ದೇನ ಜ್ಯಾತಲಸ್ಯ ಶರಸ್ಯ ಚ|

13097008c ಪ್ರಹೃಷ್ಟಃ ಸಂಪ್ರಚಿಕ್ಷೇಪ ಸಾ ಚ ಪ್ರತ್ಯಾಜಹಾರ ತಾನ್||

ಧನುಸ್ಸಿನ ಮತ್ತು ಬಾಣಗಳ ಶಬ್ದದಿಂದ ಹರ್ಷಿತನಾದ ಜಮದಗ್ನಿಯು ಪುನಃ ಪುನಃ ಬಾಣಗಳನ್ನು ಬಿಡುತ್ತಲೇ ಇದ್ದನು.

13097009a ತತೋ ಮಧ್ಯಾಹ್ನಮಾರೂಢೇ ಜ್ಯೇಷ್ಠಾಮೂಲೇ ದಿವಾಕರೇ|

13097009c ಸ ಸಾಯಕಾನ್ ದ್ವಿಜೋ ವಿದ್ಧ್ವಾ ರೇಣುಕಾಮಿದಮಬ್ರವೀತ್||

13097010a ಗಚ್ಚಾನಯ ವಿಶಾಲಾಕ್ಷಿ ಶರಾನೇತಾನ್ ಧನುಶ್ಚ್ಯುತಾನ್|

13097010c ಯಾವದೇತಾನ್ ಪುನಃ ಸುಭ್ರು ಕ್ಷಿಪಾಮೀತಿ ಜನಾಧಿಪ||

ಜನಾಧಿಪ! ಜ್ಯೇಷ್ಠಮಾಸದ ಸೂರ್ಯನು ನೆತ್ತಿಯ ಮೇಲೆ ಬರಲು ಆ ದ್ವಿಜನು ಬಾಣಗಳನ್ನು ಪ್ರಯೋಗಿಸಿ ರೇಣುಕೆಗೆ ಹೇಳಿದನು: “ವಿಶಾಲಾಕ್ಷೀ! ಬೇಗ ಹೋಗು. ಧನುಸ್ಸಿನಿಂದ ಬಿಟ್ಟಿರುವ ಬಾಣಗಳನ್ನು ಬೇಗನೆ ತೆಗೆದುಕೊಂಡು ಬಾ. ನೀನು ತರುವ ಬಾಣಗಳನ್ನು ಪುನಃ ಹೂಡುತ್ತೇನೆ.”

13097011a ಸಾ ಗಚ್ಚತ್ಯಂತರಾ ಚಾಯಾಂ ವೃಕ್ಷಮಾಶ್ರಿತ್ಯ ಭಾಮಿನೀ|

13097011c ತಸ್ಥೌ ತಸ್ಯಾ ಹಿ ಸಂತಪ್ತಂ ಶಿರಃ ಪಾದೌ ತಥೈವ ಚ||

ಬಿಸಿಲು ಅಧಿಕವಾದುದರಿಂದ ಭಾಮಿನೀ ರೇಣುಕೆಯು ಬಾಣಗಳನ್ನು ತರಲು ಮರಗಳ ಮಧ್ಯದ ನೆರಳಿನಲ್ಲಿಯೇ ಹೋಗುತ್ತಿದ್ದಳು. ಆದರೂ ಅವಳ ತಲೆಯೂ ಕಾಲುಗಳೂ ಸುಡುತ್ತಿದ್ದವು. ಆದುದರಿಂದ ವೃಕ್ಷದ ನೆರಳಿನಲ್ಲಿಯೇ ಸ್ವಲ್ಪ ಹೊತ್ತು ನಿಂತುಕೊಂಡಳು.

13097012a ಸ್ಥಿತಾ ಸಾ ತು ಮುಹೂರ್ತಂ ವೈ ಭರ್ತುಃ ಶಾಪಭಯಾಚ್ಚುಭಾ|

13097012c ಯಯಾವಾನಯಿತುಂ ಭೂಯಃ ಸಾಯಕಾನಸಿತೇಕ್ಷಣಾ|

13097012e ಪ್ರತ್ಯಾಜಗಾಮ ಚ ಶರಾಂಸ್ತಾನಾದಾಯ ಯಶಸ್ವಿನೀ||

ಆದರೆ ಪತಿಯ ಶಾಪದ ಭಯದಿಂದ ಅಲ್ಲಿ ಹೆಚ್ಚು ಹೊತ್ತು ನಿಲ್ಲದೇ ಬಾಣಗಳನ್ನು ತರಲು ಪುನಃ ಅಲ್ಲಿಂದ ಹೊರಟಳು. ಆ ಅಸಿತೇಕ್ಷಣೆ ಯಶಸ್ವಿನೀ ರೇಣುಕೆಯು ಜಮದಗ್ನಿಯು ಬಿಟ್ಟಿದ್ದ ಬಾಣಗಳೆಲ್ಲವನ್ನೂ ತೆಗೆದುಕೊಂಡು ಹಿಂದಿರುಗಿದಳು.

13097013a ಸಾ ಪ್ರಸ್ವಿನ್ನಾ ಸುಚಾರ್ವಂಗೀ ಪದ್ಭ್ಯಾಂ ದುಃಖಂ ನಿಯಚ್ಚತೀ|

13097013c ಉಪಾಜಗಾಮ ಭರ್ತಾರಂ ಭಯಾದ್ಭರ್ತುಃ ಪ್ರವೇಪತೀ||

ಆಗ ಅವಳು ಕಾಲುಗಳು ಸುಡುತ್ತಿದ್ದುದರಿಂದ ಬಹಳ ಖಿನ್ನಳಾಗಿ ದುಃಖವನ್ನು ಕಷ್ಟಪಟ್ಟು ಸಹಿಸಿಕೊಂಡಿದ್ದಳು. ಭಯದಿಂದ ನಡುಗುತ್ತಾ ಅವಳು ತನ್ನ ಪತಿಯ ಬಳಿ ಹೋದಳು.

13097014a ಸ ತಾಮೃಷಿಸ್ತತಃ ಕ್ರುದ್ಧೋ ವಾಕ್ಯಮಾಹ ಶುಭಾನನಾಮ್|

13097014c ರೇಣುಕೇ ಕಿಂ ಚಿರೇಣ ತ್ವಮಾಗತೇತಿ ಪುನಃ ಪುನಃ||

ಆ ಶುಭಾನನೆಯನ್ನು ನೋಡಿ ಋಷಿಯು “ರೇಣುಕೇ! ನೀನು ಬರಲು ಇಷ್ಟೇಕೆ ಹೊತ್ತಾಯಿತು?” ಎಂದು ಪುನಃ ಪುನಃ ಕೇಳಿದನು.

13097015 ರೇಣುಕೋವಾಚ|

13097015a ಶಿರಸ್ತಾವತ್ ಪ್ರದೀಪ್ತಂ ಮೇ ಪಾದೌ ಚೈವ ತಪೋಧನ|

13097015c ಸೂರ್ಯತೇಜೋನಿರುದ್ಧಾಹಂ ವೃಕ್ಷಚ್ಚಾಯಾಮುಪಾಶ್ರಿತಾ||

ರೇಣುಕೆಯು ಹೇಳಿದಳು: “ತಪೋಧನ! ನನ್ನ ತಲೆ ಮತ್ತು ಪಾದಗಳು ಸುಡುತ್ತಿದ್ದವು. ಸೂರ್ಯನ ತೇಜಸ್ಸನ್ನು ತಪ್ಪಿಸಿಕೊಳ್ಳಲು ಮರದ ನೆರಳಿನಲ್ಲಿ ನಿಂತಿದ್ದೆ.

13097016a ಏತಸ್ಮಾತ್ಕಾರಣಾದ್ಬ್ರಹ್ಮಂಶ್ಚಿರಮೇತತ್ಕೃತಂ ಮಯಾ|

13097016c ಏತಜ್ಜ್ಞಾತ್ವಾ ಮಮ ವಿಭೋ ಮಾ ಕ್ರುಧಸ್ತ್ವಂ ತಪೋಧನ||

ಬ್ರಹ್ಮನ್! ತಪೋಧನ! ಈ ಕಾರಣದಿಂದ ನಾನು ಬರುವುದು ಸ್ವಲ್ಪ ತಡವಾಯಿತು. ನನ್ನ ಸ್ವಾಮಿಯೇ! ಇದನ್ನು ತಿಳಿದು ನನ್ನ ಮೇಲೆ ಕುಪಿತನಾಗಬೇಡ.”

13097017 ಜಮದಗ್ನಿರುವಾಚ|

13097017a ಅದ್ಯೈನಂ ದೀಪ್ತಕಿರಣಂ ರೇಣುಕೇ ತವ ದುಃಖದಮ್|

13097017c ಶರೈರ್ನಿಪಾತಯಿಷ್ಯಾಮಿ ಸೂರ್ಯಮಸ್ತ್ರಾಗ್ನಿತೇಜಸಾ||

ಜಮದಗ್ನಿಯು ಹೇಳಿದನು: “ರೇಣುಕೇ! ಹಾಗಾದರೆ ನಿನಗೆ ದುಃಖವನ್ನುಂಟುಮಾಡಿದ ದೀಪ್ತಕಿರಣ ಸೂರ್ಯನನ್ನು ಅಗ್ನಿತೇಜಸ್ಸಿನ ಅಸ್ತ್ರದಿಂದ ಯುಕ್ತವಾದ ಶರಗಳಿಂದ ಕೆಳಗುರುಳಿಸುತ್ತೇನೆ.””

13097018 ಭೀಷ್ಮ ಉವಾಚ|

13097018a ಸ ವಿಸ್ಫಾರ್ಯ ಧನುರ್ದಿವ್ಯಂ ಗೃಹೀತ್ವಾ ಚ ಬಹೂನ್ಶರಾನ್|

13097018c ಅತಿಷ್ಠತ್ಸೂರ್ಯಮಭಿತೋ ಯತೋ ಯಾತಿ ತತೋಮುಖಃ||

ಭೀಷ್ಮನು ಹೇಳಿದನು: “ಅವನು ದಿವ್ಯ ಧನುಸ್ಸನ್ನು ಟೇಂಕರಿಸಿ, ಅನೇಕ ಶರಗಳನ್ನು ಹಿಡಿದು ಸೂರ್ಯನ ಕಡೆ ಮುಖವನ್ನು ತಿರುಗಿಸಿ ನಿಂತುಕೊಂಡನು. ಸೂರ್ಯನು ಎತ್ತ ಸಾಗುತ್ತಿದ್ದನೋ ಅತ್ತಕಡೆಯೇ ಅವನ ಮುಖವೂ ತಿರುಗುತ್ತಿತ್ತು.

13097019a ಅಥ ತಂ ಪ್ರಹರಿಷ್ಯಂತಂ ಸೂರ್ಯೋಽಭ್ಯೇತ್ಯ ವಚೋಽಬ್ರವೀತ್|

13097019c ದ್ವಿಜರೂಪೇಣ ಕೌಂತೇಯ ಕಿಂ ತೇ ಸೂರ್ಯೋಽಪರಾಧ್ಯತೇ||

ಕೌಂತೇಯ! ತನ್ನನ್ನು ಪ್ರಹರಿಸಲು ಸಿದ್ಧನಾಗಿದ್ದ ಜಮದಗ್ನಿಯನ್ನು ನೋಡಿ ಸೂರ್ಯನು ಬ್ರಾಹ್ಮಣವೇಷವನ್ನು ಧರಿಸಿ ಮುನಿಯ ಬಳಿ ಬಂದು ಕೇಳಿದನು: “ಸೂರ್ಯನು ಏನು ಅಪರಾಧವನ್ನೆಸಗಿದ್ದಾನೆ?

13097020a ಆದತ್ತೇ ರಶ್ಮಿಭಿಃ ಸೂರ್ಯೋ ದಿವಿ ವಿದ್ವಂಸ್ತತಸ್ತತಃ|

13097020c ರಸಂ ಸ ತಂ ವೈ ವರ್ಷಾಸು ಪ್ರವರ್ಷತಿ ದಿವಾಕರಃ||

ಸೂರ್ಯ ದಿವಾಕರನು ಆಕಾಶದಲ್ಲಿ ಸಂಚರಿಸುತ್ತಾ ತನ್ನ ಕಿರಣಗಳಿಂದ ಭೂಮಿಯ ರಸವನ್ನು ಅಯಾ ಸ್ಥಳಗಳಿಂದ ಸಂಗ್ರಹಿಸಿ, ವರ್ಷಾಕಾಲವು ಪ್ರಾರಂಭವಾದೊಡನೆಯೇ ಪುನಃ ಭೂಮಿಯ ಮೇಲೆ ಸುರಿಸುತ್ತಾನೆ.

13097021a ತತೋಽನ್ನಂ ಜಾಯತೇ ವಿಪ್ರ ಮನುಷ್ಯಾಣಾಂ ಸುಖಾವಹಮ್|

13097021c ಅನ್ನಂ ಪ್ರಾಣಾ ಇತಿ ಯಥಾ ವೇದೇಷು ಪರಿಪಠ್ಯತೇ||

ವಿಪ್ರ! ಅದರಿಂದ ಮನುಷ್ಯರಿಗೆ ಸುಖವನ್ನು ನೀಡುವ ಅನ್ನವು ಹುಟ್ಟುತ್ತದೆ. ಅನ್ನವೇ ಪ್ರಾಣ ಎಂದು ವೇದಗಳು ಸಾರುತ್ತವೆ.

13097022a ಅಥಾಭ್ರೇಷು ನಿಗೂಢಶ್ಚ ರಶ್ಮಿಭಿಃ ಪರಿವಾರಿತಃ|

13097022c ಸಪ್ತ ದ್ವೀಪಾನಿಮಾನ್ ಬ್ರಹ್ಮನ್ವರ್ಷೇಣಾಭಿಪ್ರವರ್ಷತಿ||

ಬ್ರಹ್ಮನ್! ಕಿರಣಗಳಿಂದ ಪರಿವೃತನಾದ ಸೂರ್ಯನು ಮೋಡಗಳಲ್ಲಿ ಅಡಗಿಕೊಂಡು ಈ ಸಪ್ತದ್ವೀಪಗಳಲ್ಲಿ ಮಳೆಯನ್ನು ಸುರಿಸುತ್ತಾನೆ.

13097023a ತತಸ್ತದೌಷಧೀನಾಂ ಚ ವೀರುಧಾಂ ಪತ್ರಪುಷ್ಪಜಮ್|

13097023c ಸರ್ವಂ ವರ್ಷಾಭಿನಿರ್ವೃತ್ತಮನ್ನಂ ಸಂಭವತಿ ಪ್ರಭೋ||

ಪ್ರಭೋ! ಅದರಿಂದಲೇ ಔಷಧಿಗಳೂ, ಲತೆಗಳೂ, ಪತ್ರ-ಪುಷ್ಪಗಳೂ, ಮತ್ತು ಹುಲ್ಲುಗಳು ಬೆಳೆಯುತ್ತವೆ. ಸಾಮಾನ್ಯವಾಗಿ ಎಲ್ಲ ಅನ್ನಗಳೂ ಮಳೆಯಿಂದಲೇ ಉತ್ಪನ್ನವಾಗುತ್ತವೆ.

13097024a ಜಾತಕರ್ಮಾಣಿ ಸರ್ವಾಣಿ ವ್ರತೋಪನಯನಾನಿ ಚ|

13097024c ಗೋದಾನಾನಿ ವಿವಾಹಾಶ್ಚ ತಥಾ ಯಜ್ಞಸಮೃದ್ಧಯಃ||

13097025a ಸತ್ರಾಣಿ ದಾನಾನಿ ತಥಾ ಸಂಯೋಗಾ ವಿತ್ತಸಂಚಯಾಃ|

13097025c ಅನ್ನತಃ ಸಂಪ್ರವರ್ತಂತೇ ಯಥಾ ತ್ವಂ ವೇತ್ಥ ಭಾರ್ಗವ||

ಭಾರ್ಗವ! ಜಾತಕರ್ಮ, ವ್ರತ, ಉಪನಯನ, ಗೋದಾನ, ವಿವಾಹ, ಯಜ್ಞಸಮೃದ್ಧಿ, ಹಾಗೂ ಸತ್ರಗಳು, ದಾನಗಳು, ಸಂಯೋಗ ಮತ್ತು ಧನ ಸಂಚಯ ಎಲ್ಲವೂ ಅನ್ನದಿಂದಲೇ ಆಗುತ್ತವೆ ಎನ್ನುವುದನ್ನು ನೀನು ತಿಳಿದುಕೋ.

13097026a ರಮಣೀಯಾನಿ ಯಾವಂತಿ ಯಾವದಾರಂಭಕಾಣಿ ಚ|

13097026c ಸರ್ವಮನ್ನಾತ್ ಪ್ರಭವತಿ ವಿದಿತಂ ಕೀರ್ತಯಾಮಿ ತೇ||

ರಮಣೀಯವಾದವುಗಳು ಮತ್ತು ಉತ್ಪಾದಿಸಬೇಕಾದವುಗಳೆಲ್ಲವೂ ಅನ್ನದಿಂದಲೇ ಹುಟ್ಟುತ್ತವೆ. ನನಗೆ ತಿಳಿದುದನ್ನು ನಿನಗೆ ಹೇಳಿದ್ದೇನೆ.

13097027a ಸರ್ವಂ ಹಿ ವೇತ್ಥ ವಿಪ್ರ ತ್ವಂ ಯದೇತತ್ಕೀರ್ತಿತಂ ಮಯಾ|

13097027c ಪ್ರಸಾದಯೇ ತ್ವಾ ವಿಪ್ರರ್ಷೇ ಕಿಂ ತೇ ಸೂರ್ಯೋ ನಿಪಾತ್ಯತೇ||

ವಿಪ್ರ! ನಿನಗೆ ಎಲ್ಲವೂ ತಿಳಿದಿದೆ. ಆದರೂ ನಾನು ನಿನಗೆ ಹೇಳಿದ್ದೇನೆ. ವಿಪ್ರರ್ಷೇ! ಪ್ರಸನ್ನನಾಗು. ನೀನು ಏಕೆ ಸೂರ್ಯನನ್ನು ಕೆಳಗುರುಳಿಸುತ್ತಿದ್ದೀಯೆ?”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಛತ್ರೋಪಾನಹೋತ್ಪತ್ತಿರ್ನಾಮ ಸಪ್ತನವತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಛತ್ರೋಪಾನಹೋತ್ಪತ್ತಿ ಎನ್ನುವ ತೊಂಭತ್ತೇಳನೇ ಅಧ್ಯಾಯವು.

[1] ಶ್ರಾದ್ಧಕೃತ್ಯೇಷು (ಭಾರತ ದರ್ಶನ/ಗೀತಾ ಪ್ರೆಸ್).

Comments are closed.