Anushasana Parva: Chapter 85

ಅನುಶಾಸನ ಪರ್ವ: ದಾನಧರ್ಮ ಪರ್ವ

೮೫[1]

13085001 ವಸಿಷ್ಠ ಉವಾಚ|

13085001a ಅಪಿ ಚೇದಂ ಪುರಾ ರಾಮ ಶ್ರುತಂ ಮೇ ಬ್ರಹ್ಮದರ್ಶನಮ್|

13085001c ಪಿತಾಮಹಸ್ಯ ಯದ್ವೃತ್ತಂ ಬ್ರಹ್ಮಣಃ ಪರಮಾತ್ಮನಃ||

ವಸಿಷ್ಠನು ಹೇಳಿದನು: “ಪರಮಾತ್ಮ ಪಿತಾಮಹ ಬ್ರಹ್ಮನ ಬ್ರಹ್ಮದರ್ಶನವೆಂಬ ವೃತ್ತಾಂತವನ್ನು ನಾನು ಹಿಂದೆ ಹೇಗೆ ಕೇಳಿದ್ದೆನೋ ಅದನ್ನು ಹೇಳುತ್ತೇನೆ. ಕೇಳು.

13085002a ದೇವಸ್ಯ ಮಹತಸ್ತಾತ ವಾರುಣೀಂ ಬಿಭ್ರತಸ್ತನುಮ್|

13085002c ಐಶ್ವರ್ಯೇ ವಾರುಣೇ ರಾಮ ರುದ್ರಸ್ಯೇಶಸ್ಯ ವೈ ಪ್ರಭೋ||

13085003a ಆಜಗ್ಮುರ್ಮುನಯಃ ಸರ್ವೇ ದೇವಾಶ್ಚಾಗ್ನಿಪುರೋಗಮಾಃ|

13085003c ಯಜ್ಞಾಂಗಾನಿ ಚ ಸರ್ವಾಣಿ ವಷಟ್ಕಾರಶ್ಚ ಮೂರ್ತಿಮಾನ್||

13085004a ಮೂರ್ತಿಮಂತಿ ಚ ಸಾಮಾನಿ ಯಜೂಂಷಿ ಚ ಸಹಸ್ರಶಃ|

13085004c ಋಗ್ವೇದಶ್ಚಾಗಮತ್ತತ್ರ ಪದಕ್ರಮವಿಭೂಷಿತಃ||

ಅಯ್ಯಾ! ಪ್ರಭೋ! ರಾಮ! ಒಮ್ಮೆ ದೇವ ರುದ್ರನು ವರುಣನ ರೂಪವನ್ನು ಧರಿಸಿ ವರುಣನ ರಾಜ್ಯದಲ್ಲಿ ಪ್ರತಿಷ್ಠಿತನಾಗಿದ್ದನು. ಆ ಸಮಯದಲ್ಲಿ ಅವನ ಯಜ್ಞದಲ್ಲಿ ಅಗ್ನಿಯೇ ಮೊದಲಾದ ಸಂಪೂರ್ಣ ದೇವತೆಗಳು ಮತ್ತು ಋಷಿಗಳು ಆಗಮಿಸಿದರು. ಮೂರ್ತಿಮಾನರಾಗಿ ಸಂಪೂರ್ಣ ಯಜ್ಞಾಂಗ, ವಷಟ್ಕಾರ, ಸಾಕಾರ ಸಾಮ, ಸಹಸ್ರಾರು ಯಜುರ್ಮಂತ್ರಗಳು ಮತ್ತು ಪದ-ಕ್ರಮ ವಿಭೂಷಿತ ಋಗ್ವೇದವೂ ಅಲ್ಲಿ ಉಪಸ್ಥಿತವಾದವು.

13085005a ಲಕ್ಷಣಾನಿ ಸ್ವರಾಃ ಸ್ತೋಭಾ ನಿರುಕ್ತಂ ಸ್ವರಭಕ್ತಯಃ|

13085005c ಓಂಕಾರಶ್ಚಾವಸನ್ನೇತ್ರೇ ನಿಗ್ರಹಪ್ರಗ್ರಹೌ ತಥಾ||

ವೇದಗಳ ಲಕ್ಷಣ, ಉದಾತ್ತಾದಿ ಸ್ವರಗಳು, ಸ್ತೋತ್ರ, ನಿರುಕ್ತ, ಸುರಪಂಕ್ತಿ, ಓಂಕಾರ ಮತ್ತು ಯಜ್ಞದ ನೇತ್ರಸ್ವರೂಪ ಪ್ರಗ್ರಹ ಮತ್ತು ನಿಗ್ರಹಗಳೂ ಅಲ್ಲಿ ಉಪಸ್ಥಿತರಾಗಿದ್ದರು.

13085006a ವೇದಾಶ್ಚ ಸೋಪನಿಷದೋ ವಿದ್ಯಾ ಸಾವಿತ್ರ್ಯಥಾಪಿ ಚ|

13085006c ಭೂತಂ ಭವ್ಯಂ ಭವಿಷ್ಯಚ್ಚ ದಧಾರ ಭಗವಾನ್ ಶಿವಃ|

13085006e ಜುಹ್ವಚ್ಚಾತ್ಮನ್ಯಥಾತ್ಮಾನಂ ಸ್ವಯಮೇವ ತದಾ ಪ್ರಭೋ||

ವೇದಗಳು, ಉಪನಿಷತ್ತುಗಳು, ವಿದ್ಯೆ, ಸಾವಿತ್ರಿಯರೂ ಅಲ್ಲಿದ್ದರು. ಭಗವಾನ್ ಶಿವನು ಭೂತ-ವರ್ತಮಾನ-ಭವಿಷ್ಯಗಳನ್ನು ಧರಿಸಿ ಸ್ವಯಂ ತಾನೇ ತನ್ನನ್ನು ಆಹುತಿಯನ್ನಾಗಿತ್ತನು.

[2]13085007a ದೇವಪತ್ನ್ಯಶ್ಚ ಕನ್ಯಾಶ್ಚ ದೇವಾನಾಂ ಚೈವ ಮಾತರಃ|

13085007c ಆಜಗ್ಮುಃ ಸಹಿತಾಸ್ತತ್ರ ತದಾ ಭೃಗುಕುಲೋದ್ವಹ||

ಭೃಗುಕುಲೋದ್ವಹ! ಆಗ ಅಲ್ಲಿಗೆ ದೇವಪತ್ನಿಯರು, ದೇವಕನ್ಯೆಯರು ಮತ್ತು ದೇವತೆಗಳ ಮಾತರರು ಒಟ್ಟಿಗೇ ಬಂದಿದ್ದರು.

13085008a ಯಜ್ಞಂ ಪಶುಪತೇಃ ಪ್ರೀತಾ ವರುಣಸ್ಯ ಮಹಾತ್ಮನಃ|

13085008c ಸ್ವಯಂಭುವಸ್ತು ತಾ ದೃಷ್ಟ್ವಾ ರೇತಃ ಸಮಪತದ್ಭುವಿ||

ಮಹಾತ್ಮ ವರುಣ ಪಶುಪತಿಯ ಆ ಯಜ್ಞದಿಂದ ದೇವಾಂಗನೆಯರು ಪ್ರೀತರಾಗಲು ಅವರನ್ನು ನೋಡಿದ ಸ್ವಯಂಭು ಬ್ರಹ್ಮನ ವೀರ್ಯವು ಸ್ಖಲಿತಗೊಂಡು ಭೂಮಿಯ ಮೇಲೆ ಬಿದ್ದಿತು.

13085009a ತಸ್ಯ ಶುಕ್ರಸ್ಯ ನಿಷ್ಪಂದಾತ್ಪಾಂಸೂನ್ಸಂಗೃಹ್ಯ ಭೂಮಿತಃ|

13085009c ಪ್ರಾಸ್ಯತ್ಪೂಷಾ ಕರಾಭ್ಯಾಂ ವೈ ತಸ್ಮಿನ್ನೇವ ಹುತಾಶನೇ||

ಆಗ ಭೂಮಿಯ ಮೇಲೆ ಬ್ರಹ್ಮನ ವೀರ್ಯದಿಂದ ನೆನೆದಿದ್ದ ಮಣ್ಣಿನ ಕಣಗಳನ್ನು ಎರಡು ಕೈಗಳಿಂದ ಎತ್ತಿ ಪೂಷನು ಅದೇ ಅಗ್ನಿಯಲ್ಲಿ ಹಾಕಿದನು.

13085010a ತತಸ್ತಸ್ಮಿನ್ಸಂಪ್ರವೃತ್ತೇ ಸತ್ರೇ ಜ್ವಲಿತಪಾವಕೇ|

13085010c ಬ್ರಹ್ಮಣೋ ಜುಹ್ವತಸ್ತತ್ರ ಪ್ರಾದುರ್ಭಾವೋ ಬಭೂವ ಹ||

ಅನಂತರ ಪ್ರಜ್ವಲಿತ ಅಗ್ನಿಯ ಆ ಯಜ್ಞವು ನಡೆಯುತ್ತಿರಲು ಬ್ರಹ್ಮನ ವೀರ್ಯವು ಪುನಃ ಸ್ಖಲನವಾಯಿತು.

13085011a ಸ್ಕನ್ನಮಾತ್ರಂ ಚ ತಚ್ಚುಕ್ರಂ ಸ್ರುವೇಣ ಪ್ರತಿಗೃಹ್ಯ ಸಃ|

13085011c ಆಜ್ಯವನ್ಮಂತ್ರವಚ್ಚಾಪಿ ಸೋಽಜುಹೋದ್ ಭೃಗುನಂದನ||

ಭೃಗುನಂದನ! ಸ್ಖಲಿತವಾಗುತ್ತಿದ್ದಂತೆಯೇ ಆ ವೀರ್ಯವನ್ನು ಬ್ರಹ್ಮನು ತಾನೇ ಹುಟ್ಟಿನಲ್ಲಿ ಹಿಡಿದು ಸ್ವಯಂ ಮಂತ್ರೋಚ್ಛಾರಣೆಗಳೊಂದಿಗೆ ತುಪ್ಪದಂತೆ ಅದನ್ನು ಹೋಮಿಸಿದನು.

13085012a ತತಃ ಸಂಜನಯಾಮಾಸ ಭೂತಗ್ರಾಮಂ ಸ ವೀರ್ಯವಾನ್|

13085012c ತತಸ್ತು ತೇಜಸಸ್ತಸ್ಮಾಜ್ಜಜ್ಞೇ ಲೋಕೇಷು ತೈಜಸಮ್||

ವೀರ್ಯವಾನ್ ಬ್ರಹ್ಮನು ಆ ತ್ರಿಗುಣಾತ್ಮಿಕ ತೇಜಸ್ಸಿನಿಂದ ಚತುರ್ವಿಧ ಪ್ರಾಣಿಸಮುದಾಯಕ್ಕೆ ಜನ್ಮವಿತ್ತನು. ಅವರ ವೀರ್ಯದ ರಜೋಗುಣದಿಂದ ಜಗತ್ತಿನಲ್ಲಿ ತೈಜಸ ಪ್ರವೃತ್ತಿಪ್ರಧಾನ ಜಂಗಮ ಪ್ರಾಣಿಗಳ ಉತ್ಪತ್ತಿಯಾಯಿತು.

13085013a ತಮಸಸ್ತಾಮಸಾ ಭಾವಾ ವ್ಯಾಪಿ ಸತ್ತ್ವಂ ತಥೋಭಯಮ್|

13085013c ಸಗುಣಸ್ತೇಜಸೋ ನಿತ್ಯಂ ತಮಸ್ಯಾಕಾಶಮೇವ ಚ||

ತಮೋಗುಣದ ಅಂಶದಿಂದ ತಾಮಸ ಪದಾರ್ಥಗಳಾದ ಸ್ಥಾವರ ವೃಕ್ಷ ಮೊದಲಾದವುಗಳು ಪ್ರಕಟಗೊಂಡವು. ವೀರ್ಯದಲ್ಲಿದ್ದ ಸತ್ತ್ವ ಗುಣದ ಅಂಶವು ರಾಜಸ ಮತ್ತು ತಾಮಸಗಳಲ್ಲಿ ಸೇರಿಕೊಂಡಿತು. ಆಕಾಶವೇ ಮೊದಲಾದ ಸಂಪೂರ್ಣ ವಿಶ್ವವೇ ಆ ನಿತ್ಯ ಪ್ರಕಾಶ ಬುದ್ಧಿ ಸತ್ತ್ವದ ಸ್ವರೂಪವೇ ಆಗಿದೆ.

13085014a ಸರ್ವಭೂತೇಷ್ವಥ ತಥಾ ಸತ್ತ್ವಂ ತೇಜಸ್ತಥಾ ತಮಃ|

13085014c ಶುಕ್ರೇ ಹುತೇಽಗ್ನೌ ತಸ್ಮಿಂಸ್ತು ಪ್ರಾದುರಾಸಂಸ್ತ್ರಯಃ ಪ್ರಭೋ||

13085015a ಪುರುಷಾ ವಪುಷಾ ಯುಕ್ತಾ ಯುಕ್ತಾಃ ಪ್ರಸವಜೈರ್ಗುಣೈಃ|

ಹೀಗೆ ಸರ್ವಭೂತಗಳಲ್ಲಿರುವ ಸತ್ತ್ವಗುಣ ಮತ್ತು ಉತ್ತಮ ತೇಜಸ್ಸು  ಪ್ರಜಾಪತಿಯ ವೀರ್ಯದಿಂದಲೇ ಪ್ರಕಟವಾಗಿವೆ. ಪ್ರಭೋ! ಬ್ರಹ್ಮನು ತನ್ನ ವೀರ್ಯವನ್ನು ಅಗ್ನಿಯಲ್ಲಿ ಆಹುತಿಯನ್ನಿತ್ತಾಗ ಮೂರು ಶರೀರಧಾರೀ ಪುರುಷರು ಉತ್ಪನ್ನರಾದರು. ಅವರು ತಮ್ಮ ತಮ್ಮ ಕಾರಣಜನಿತ ಗುಣಗಳಿಂದ ಸಂಪನ್ನರಾಗಿದ್ದರು.

13085015c ಭೃಗಿತ್ಯೇವ ಭೃಗುಃ ಪೂರ್ವಮಂಗಾರೇಭ್ಯೋಽಂಗಿರಾಭವತ್||

13085016a ಅಂಗಾರಸಂಶ್ರಯಾಚ್ಚೈವ ಕವಿರಿತ್ಯಪರೋಽಭವತ್|

13085016c ಸಹ ಜ್ವಾಲಾಭಿರುತ್ಪನ್ನೋ ಭೃಗುಸ್ತಸ್ಮಾದ್ ಭೃಗುಃ ಸ್ಮೃತಃ||

ಭೃಗ್ ಅರ್ಥಾತ್ ಅಗ್ನಿಯ ಜ್ವಾಲೆಯಿಂದ ಭೃಗು, ಅಂಗಾರ ಅರ್ಥಾತ್ ಕಿಡಿಗಳಿಂದ ಅಂಗಿರ, ಮತ್ತು ಅಂಗಾರಗಳಲ್ಲಿರುವ ಸ್ವಲ್ಪಮಾತ್ರ ಜ್ವಾಲೆಯಿಂದ ಕವಿ ಇವರು ಉದ್ಭವಿಸಿದರು. ಜ್ವಾಲೆಗಳೊಂದಿಗೆ ಉತ್ಪನ್ನನಾದುದರಿಂದ ಭೃಗುವು ಭೃಗು ಎಂದಾದನು.

13085017a ಮರೀಚಿಭ್ಯೋ ಮರೀಚಿಸ್ತು ಮಾರೀಚಃ ಕಶ್ಯಪೋ ಹ್ಯಭೂತ್|

13085017c ಅಂಗಾರೇಭ್ಯೋಽಂಗಿರಾಸ್ತಾತ ವಾಲಖಿಲ್ಯಾಃ ಶಿಲೋಚ್ಚಯಾತ್|

13085017e ಅತ್ರೈವಾತ್ರೇತಿ ಚ ವಿಭೋ ಜಾತಮತ್ರಿಂ ವದಂತ್ಯಪಿ||

ಅದೇ ಅಗ್ನಿಯ ಮರೀಚಿಗಳಿಂದ ಮರೀಚಿಯು ಉತ್ಪನ್ನನಾದನು. ಅವನ ಪುತ್ರ ಮಾರೀಚನು ಕಶ್ಯಪನೆಂದು ವಿಖ್ಯಾತನಾದನು. ಅಯ್ಯಾ! ಅಂಗಾರಗಳಿಂದ ಅಂಗಿರಾ ಮತ್ತು ದರ್ಭೆಗಳ ಗುಚ್ಚದಿಂದ ವಾಲಖಿಲ್ಯ ಋಷಿಗಳು ಪ್ರಕಟರಾದರು. ಅದೇ ದರ್ಭೆಗಳಿಂದ ಇನ್ನೊಬ್ಬ ಬ್ರಹ್ಮರ್ಷಿಯು ಉತ್ಪನ್ನನಾದನು – ಅವನನ್ನೇ ಅತ್ರಿ ಎಂದು ಕರೆಯುತ್ತಾರೆ.

13085018a ತಥಾ ಭಸ್ಮವ್ಯಪೋಹೇಭ್ಯೋ ಬ್ರಹ್ಮರ್ಷಿಗಣಸಂಮಿತಾಃ|

13085018c ವೈಖಾನಸಾಃ ಸಮುತ್ಪನ್ನಾಸ್ತಪಃಶ್ರುತಗುಣೇಪ್ಸವಃ|

13085018e ಅಶ್ರುತೋಽಸ್ಯ ಸಮುತ್ಪನ್ನಾವಶ್ವಿನೌ ರೂಪಸಂಮತೌ||

ಭಸ್ಮರಾಶಿಯಿಂದ ಬ್ರಹ್ಮರ್ಷಿಗಳು ಸಮ್ಮಾನಿಸುವ ತಪಸ್ಸು, ಶಾಸ್ತ್ರಜ್ಞಾನ ಮತ್ತು ಸದ್ಗುಣಗಳ ಅಭಿಲಾಷಿಗಳಾದ ವಿಖಾನಸರ ಉತ್ಪತ್ತಿಯಾಯಿತು. ಅಗ್ನಿಯ ಅಶ್ರುಗಳಿಂದ ರೂಪಸಮ್ಮತರಾದ ಅಶ್ವಿನೀಕುಮಾರರು ಪ್ರಕಟಗೊಂಡರು.

13085019a ಶೇಷಾಃ ಪ್ರಜಾನಾಂ ಪತಯಃ ಸ್ರೋತೋಭ್ಯಸ್ತಸ್ಯ ಜಜ್ಞಿರೇ|

13085019c ಋಷಯೋ ಲೋಮಕೂಪೇಭ್ಯಃ ಸ್ವೇದಾಚ್ಚಂದೋ ಮಲಾತ್ಮಕಮ್[3]||

ಉಳಿದ ಪ್ರಜಾಪತಿಗಳು ಅವನ ಶ್ರವಣ ಮೊದಲಾದ ಇಂದ್ರಿಯಗಳಿಂದ ಉತ್ಪನ್ನರಾದರು. ಅವನ ರೋಮಕೂಪಗಳಿಂದ ಋಷಿಗಳು, ಬೆವರಿನಿಂದ ಛಂದ ಮತ್ತು ವೀರ್ಯದ ಮಲದಿಂದ ಮನಸ್ಸು ಉತ್ಪನ್ನವಾದವು.

13085020a ಏತಸ್ಮಾತ್ಕಾರಣಾದಾಹುರಗ್ನಿಂ ಸರ್ವಾಸ್ತು ದೇವತಾಃ|

13085020c ಋಷಯಃ ಶ್ರುತಸಂಪನ್ನಾ ವೇದಪ್ರಾಮಾಣ್ಯದರ್ಶನಾತ್||

ಈ ಕಾರಣದಿಂದಲೇ ಶ್ರುತಸಂಪನ್ನ ಋಷಿಗಳು ವೇದಪ್ರಮಾಣಗಳನ್ನು ನೋಡಿ ಅಗ್ನಿಯು ಸರ್ವದೇವಮಯನೆಂದು ಹೇಳಿದ್ದಾರೆ.

13085021a ಯಾನಿ ದಾರೂಣಿ ತೇ ಮಾಸಾ ನಿರ್ಯಾಸಾಃ ಪಕ್ಷಸಂಜ್ಞಿತಾಃ|

13085021c ಅಹೋರಾತ್ರಾ ಮುಹೂರ್ತಾಸ್ತು ಪಿತ್ತಂ ಜ್ಯೋತಿಶ್ಚ ವಾರುಣಮ್[4]||

ಆ ಯಜ್ಞದಲ್ಲಿ ಬಳಸಲಾದ ಸಮ್ಮಿತ್ತುಗಳು ಮತ್ತು ಅವುಗಳ ರಸಗಳು ಮಾಸ, ಪಕ್ಷ, ದಿನ, ರಾತ್ರಿ ಮತ್ತು ಮುಹೂರ್ತರೂಪಗಳಾದವು ಮತ್ತು ಅಗ್ನಿಯ ಪಿತ್ತವು ಉಗ್ರತೇಜಸ್ಸಾಗಿ ಪ್ರಕಟವಾಯಿತು.

13085022a ರೌದ್ರಂ ಲೋಹಿತಮಿತ್ಯಾಹುರ್ಲೋಹಿತಾತ್ಕನಕಂ ಸ್ಮೃತಮ್|

13085022c ತನ್ಮೈತ್ರಮಿತಿ ವಿಜ್ಞೇಯಂ ಧೂಮಾಚ್ಚ ವಸವಃ ಸ್ಮೃತಾಃ||

ಅಗ್ನಿಯ ತೇಜಸ್ಸನ್ನು ಲೋಹಿತ ಎಂದು ಹೇಳುತ್ತಾರೆ. ಆ ಲೋಹಿತದಿಂದ ಕನಕವು ಉತ್ಪನ್ನವಾಯಿತೆಂದು ಹೇಳುತ್ತಾರೆ. ಅದನ್ನು ಮೈತ್ರ ಎಂದು ತಿಳಿಯಬೇಕು ಮತ್ತು  ಆ ಅಗ್ನಿಯ ಹೊಗೆಯಿಂದ ವಸುಗಳು ಹುಟ್ಟಿದರೆಂದು ಹೇಳುತ್ತಾರೆ.

13085023a ಅರ್ಚಿಷೋ ಯಾಶ್ಚ ತೇ ರುದ್ರಾಸ್ತಥಾದಿತ್ಯಾ ಮಹಾಪ್ರಭಾಃ|

13085023c ಉದ್ದಿಷ್ಟಾಸ್ತೇ ತಥಾಂಗಾರಾ ಯೇ ಧಿಷ್ಣ್ಯೇಷು ದಿವಿ ಸ್ಥಿತಾಃ||

ಆ ಅಗ್ನಿಯ ಕಿಡಿಗಳೇ ಏಕಾದಶ ರುದ್ರರು ಮತ್ತು ಮಹಾಪ್ರಭೆಯ ದ್ವಾದಶ ಆದಿತ್ಯರು. ಆ ಯಜ್ಞದಲ್ಲಿದ್ದ ಇತರ ಅಂಗಾರಗಳು ಆಕಾಶದಲ್ಲಿರುವ ನಕ್ಷತ್ರಮಂಡಲದಲ್ಲಿ ಜ್ಯೋತಿಪುಂಜದ ರೂಪಗಳಲ್ಲಿವೆ.

13085024a ಆದಿನಾಥಶ್ಚ[5] ಲೋಕಸ್ಯ ತತ್ಪರಂ ಬ್ರಹ್ಮ ತದ್ಧ್ರುವಮ್|

13085024c ಸರ್ವಕಾಮದಮಿತ್ಯಾಹುಸ್ತತ್ರ ಹವ್ಯಮುದಾವಹತ್[6]||

ಅಗ್ನಿಯು ಲೋಕದ ಆದಿನಾಥನು. ಪರಬ್ರಹ್ಮಸ್ವರೂಪನು. ಅವನು ಅವಿನಾಶಿಯು ಮತ್ತು ಸರ್ವಕಾಮಗಳನ್ನೂ ನೀಡುವವನು ಎಂದು ಹೇಳುತ್ತಾರೆ. ಈ ವಿಷಯದಲ್ಲಿ ಅಗ್ನಿಯನ್ನು ಉದಾಹರಿಸುತ್ತಾರೆ.

13085025a ತತೋಽಬ್ರವೀನ್ಮಹಾದೇವೋ ವರುಣಃ ಪರಮಾತ್ಮಕಃ|

13085025c ಮಮ ಸತ್ರಮಿದಂ ದಿವ್ಯಮಹಂ ಗೃಹಪತಿಸ್ತ್ವಿಹ||

ಆಗ ವರುಣರೂಪೀ ಮಹಾದೇವನು ಹೇಳಿದನು: “ಇದು ನನ್ನ ದಿವ್ಯ ಯಜ್ಞವು. ನಾನೇ ಈ ಯಜ್ಞದ ಗೃಹಪತಿಯು.

13085026a ತ್ರೀಣಿ ಪೂರ್ವಾಣ್ಯಪತ್ಯಾನಿ ಮಮ ತಾನಿ ನ ಸಂಶಯಃ|

13085026c ಇತಿ ಜಾನೀತ ಖಗಮಾ ಮಮ ಯಜ್ಞಫಲಂ ಹಿ ತತ್||

ಆಕಾಶಚಾರೀ ದೇವಗಣವೇ! ಮೊದಲು ಹುಟ್ಟಿದ ಮೂವರು – ಭೃಗು, ಅಂಗಿರಾ ಮತ್ತು ಕವಿ – ನನ್ನ ಪುತ್ರರು. ಇದರಲ್ಲಿ ಸಂಶಯವಿಲ್ಲ. ಈ ಯಜ್ಞಫಲದಲ್ಲಿ ನನ್ನದೇ ಅಧಿಕಾರವಿದೆ ಎನ್ನುವುದನ್ನು ನೀವು ತಿಳಿಯಿರಿ.”

13085027 ಅಗ್ನಿರುವಾಚ|

13085027a ಮದಂಗೇಭ್ಯಃ ಪ್ರಸೂತಾನಿ ಮದಾಶ್ರಯಕೃತಾನಿ ಚ|

13085027c ಮಮೈವ ತಾನ್ಯಪತ್ಯಾನಿ ವರುಣೋ ಹ್ಯವಶಾತ್ಮಕಃ||

ಅಗ್ನಿಯು ಹೇಳಿದನು: “ಆ ಮೂವರೂ ನನ್ನ ಅಂಗಗಳಿಂದಲೇ ಉತ್ಪನ್ನರಾದರು ಮತ್ತು ನನ್ನದೇ ಆಶ್ರಯದಲ್ಲಿ ವಿಧಾತನು ಅವರನ್ನು ಸೃಷ್ಟಿಸಿದ್ದಾನೆ. ಆದುದರಿಂದ ಆ ಮೂವರು ನನ್ನ ಪುತ್ರರೇ! ವರುಣರೂಪಧಾರೀ ಮಹಾದೇವನಿಗೆ ಇವರ ಮೇಲೆ ಅಧಿಕಾರವಿಲ್ಲ.”

13085028a ಅಥಾಬ್ರವೀಲ್ಲೋಕಗುರುರ್ಬ್ರಹ್ಮಾ ಲೋಕಪಿತಾಮಹಃ|

13085028c ಮಮೈವ ತಾನ್ಯಪತ್ಯಾನಿ ಮಮ ಶುಕ್ರಂ ಹುತಂ ಹಿ ತತ್||

ಆಗ ಲೋಕಗುರು ಲೋಕಪಿತಾಮಹ ಬ್ರಹ್ಮನು ಹೇಳಿದನು: “ನನ್ನ ವೀರ್ಯವನ್ನು ಹೋಮಮಾಡಿದುದರಿಂದ ಹುಟ್ಟಿದ ಅವರು ನನ್ನ ಮಕ್ಕಳು.

13085029a ಅಹಂ ವಕ್ತಾ ಚ ಮಂತ್ರಸ್ಯ[7] ಹೋತಾ ಶುಕ್ರಸ್ಯ ಚೈವ ಹ|

13085029c ಯಸ್ಯ ಬೀಜಂ ಫಲಂ ತಸ್ಯ ಶುಕ್ರಂ ಚೇತ್ಕಾರಣಂ ಮತಮ್||

ನಾನೇ ಮಂತ್ರದ ವಕ್ತಾರ ಮತ್ತು ವೀರ್ಯವನ್ನು ಹೋಮಿಸಿದವನೂ ನಾನೇ. ಬೀಜವು ಯಾರದ್ದೋ ಫಲವೂ ಅವರದ್ದೇ. ಇವರ ಜನ್ಮದಲ್ಲಿ ವೀರ್ಯವು ಕಾರಣವಾಗಿದ್ದರೆ ಅವರು ನನ್ನ ಪುತ್ರರು ಎಂದು ನನ್ನ ಮತ.”

13085030a ತತೋಽಬ್ರುವನ್ದೇವಗಣಾಃ ಪಿತಾಮಹಮುಪೇತ್ಯ ವೈ|

13085030c ಕೃತಾಂಜಲಿಪುಟಾಃ ಸರ್ವೇ ಶಿರೋಭಿರಭಿವಂದ್ಯ ಚ||

ಆಗ ದೇವಗಣಗಳೆಲ್ಲವೂ ಪಿತಾಮಹನ ಬಳಿಸಾರಿ ಅಂಜಲೀಬದ್ಧರಾಗಿ ಶಿರಬಾಗಿ ನಮಸ್ಕರಿಸಿ ಹೇಳಿದವು:

13085031a ವಯಂ ಚ ಭಗವನ್ಸರ್ವೇ ಜಗಚ್ಚ ಸಚರಾಚರಮ್|

13085031c ತವೈವ ಪ್ರಸವಾಃ ಸರ್ವೇ ತಸ್ಮಾದಗ್ನಿರ್ವಿಭಾವಸುಃ|

13085031e ವರುಣಶ್ಚೇಶ್ವರೋ ದೇವೋ ಲಭತಾಂ ಕಾಮಮೀಪ್ಸಿತಮ್||

“ಭಗವನ್! ನಾವು ಮತ್ತು ಚರಾಚರ ಜಗತ್ತೆಲ್ಲವೂ ನಿನ್ನದೇ ಮಕ್ಕಳು. ಆದುದರಿಂದ ಈ ವಿಭಾವಸು ಅಗ್ನಿ ಮತ್ತು ವರುಣರೂಪೀ ಈಶ್ವರ ಮಹಾದೇವ ಇವರು ಬಯಸಿದುದನ್ನು ಪಡೆದುಕೊಳ್ಳಲಿ.”

13085032a ನಿಸರ್ಗಾದ್ವರುಣಶ್ಚಾಪಿ ಬ್ರಹ್ಮಣೋ ಯಾದಸಾಂ ಪತಿಃ|

13085032c ಜಗ್ರಾಹ ವೈ ಭೃಗುಂ ಪೂರ್ವಮಪತ್ಯಂ ಸೂರ್ಯವರ್ಚಸಮ್||

13085033a ಈಶ್ವರೋಽಂಗಿರಸಂ ಚಾಗ್ನೇರಪತ್ಯಾರ್ಥೇಽಭ್ಯಕಲ್ಪಯತ್|

ಆಗ ಬ್ರಹ್ಮನ ಹೇಳಿಕೆಯಂತೆ ಜಲಜಂತುಗಳ ಸ್ವಾಮೀ ವರುಣರೂಪೀ ಭಗವಾನ್ ಶಿವನು ಸೂರ್ಯವರ್ಚಸ್ವೀ ಭೃಗುವನ್ನು ಪುತ್ರರೂಪದಲ್ಲಿ ಸ್ವೀಕರಿಸಿದನು. ಅನಂತರ ಅವನು ಅಂಗಿರನನ್ನು ಅಗ್ನಿಯ ಪುತ್ರನೆಂದು ನಿರ್ಣಯಿಸಿದನು.

13085033c ಪಿತಾಮಹಸ್ತ್ವಪತ್ಯಂ ವೈ ಕವಿಂ ಜಗ್ರಾಹ ತತ್ತ್ವವಿತ್|

13085034a ತದಾ ಸ ವಾರುಣಃ ಖ್ಯಾತೋ ಭೃಗುಃ ಪ್ರಸವಕರ್ಮಕೃತ್[8]||

13085034c ಆಗ್ನೇಯಸ್ತ್ವಂಗಿರಾಃ ಶ್ರೀಮಾನ್ಕವಿರ್ಬ್ರಾಹ್ಮೋ ಮಹಾಯಶಾಃ|

13085034e ಭಾರ್ಗವಾಂಗಿರಸೌ ಲೋಕೇ ಲೋಕಸಂತಾನಲಕ್ಷಣೌ||

ತತ್ತ್ವವಿದು ಪಿತಾಮಹನನಾದರೂ ಕವಿಯನ್ನು ತನ್ನ ಮಗನೆಂದು ಸ್ವೀಕರಿಸಿದನು. ಆಗ ಪ್ರಸವಕರ್ಮಗಳನ್ನು ಮಾಡುವ ಭೃಗುವು ವಾರುಣನೆಂದು ಖ್ಯಾತನಾದನು. ಶ್ರೀಮಾನ್ ಆಂಗಿರನು ಆಗ್ನೇಯನೆಂದೂ ಮಹಾಯಶಸ್ವೀ ಕವಿಯು ಬ್ರಾಹ್ಮ ಎಂದೂ ವಿಖ್ಯಾತರಾದರು. ಭೃಗು ಮತ್ತು ಅಂಗಿರಾ – ಇವರು ಲೋಕದಲ್ಲಿ ಸೃಷ್ಟಿಯನ್ನು ವಿಸ್ತರಿಸಿದವರೆಂದು ಕರೆಯಲ್ಪಟ್ಟರು.

13085035a ಏತೇ ವಿಪ್ರವರಾಃ[9] ಸರ್ವೇ ಪ್ರಜಾನಾಂ ಪತಯಸ್ತ್ರಯಃ|

13085035c ಸರ್ವಂ ಸಂತಾನಮೇತೇಷಾಮಿದಮಿತ್ಯುಪಧಾರಯ||

ಹೀಗೆ ಈ ಮೂವರು ವಿಪ್ರವರರೆಲ್ಲರೂ ಪ್ರಜಾಪತಿಗಳಾದರು. ಈ ಎಲ್ಲ ಜಗತ್ತೂ ಇವರದ್ದೇ ಸಂತಾನವಾಗಿದೆ. ಈ ವಿಷಯವನ್ನು ನೀನು ಚೆನ್ನಾಗಿ ಮನದಟ್ಟುಮಾಡಿಕೋ.

13085036a ಭೃಗೋಸ್ತು ಪುತ್ರಾಸ್ತತ್ರಾಸನ್ಸಪ್ತ ತುಲ್ಯಾ ಭೃಗೋರ್ಗುಣೈಃ|

13085036c ಚ್ಯವನೋ ವಜ್ರಶೀರ್ಷಶ್ಚ ಶುಚಿರೌರ್ವಸ್ತಥೈವ ಚ||

13085037a ಶುಕ್ರೋ ವರೇಣ್ಯಶ್ಚ ವಿಭುಃ ಸವನಶ್ಚೇತಿ ಸಪ್ತ ತೇ|

13085037c ಭಾರ್ಗವಾ ವಾರುಣಾಃ ಸರ್ವೇ ಯೇಷಾಂ ವಂಶೇ ಭವಾನಪಿ||

ಭೃಗುವಿಗೆ ಭೃಗುವಿನದ್ದೇ ಗುಣಗಳಿದ್ದ ಏಳು ಪುತ್ರರಾದರು: ಚ್ಯವನ, ವಜ್ರಶೀರ್ಷ, ಶುಚಿ, ಔರ್ವ, ಶುಕ್ರ, ವರೇಣ್ಯ, ಮತ್ತು ಸವನ. ಎಲ್ಲ ಭೃಗುವಂಶೀಯರನ್ನೂ ಸಾಮಾನ್ಯವಾಗಿ ವಾರುಣರೆಂದು ಹೇಳುತ್ತಾರೆ. ನೀನೂ ಕೂಡ ಅದೇ ವಂಶದಲ್ಲಿ ಹುಟ್ಟಿದವನಾಗಿದ್ದೀಯೆ.

13085038a ಅಷ್ಟೌ ಚಾಂಗಿರಸಃ ಪುತ್ರಾ ವಾರುಣಾಸ್ತೇಽಪ್ಯುದಾಹೃತಾಃ|

13085038c ಬೃಹಸ್ಪತಿರುತಥ್ಯಶ್ಚ ವಯಸ್ಯಃ[10] ಶಾಂತಿರೇವ ಚ||

13085039a ಘೋರೋ ವಿರೂಪಃ ಸಂವರ್ತಃ ಸುಧನ್ವಾ ಚಾಷ್ಟಮಃ ಸ್ಮೃತಃ|

13085039c ಏತೇಽಷ್ಟಾವಗ್ನಿಜಾಃ ಸರ್ವೇ ಜ್ಞಾನನಿಷ್ಠಾ ನಿರಾಮಯಾಃ||

ಆಂಗಿರಸನಿಗೆ ಎಂಟು ಪುತ್ರರಾದರು. ಅವರನ್ನೂ ವಾರುಣರೆಂದು ಹೇಳುತ್ತಾರೆ. ಅವರು – ಬೃಹಸ್ಪತಿ, ಉತಥ್ಯ, ವಯಸ್ಯ, ಶಾಂತಿ, ಘೋರ, ವಿರೂಪ, ಸಂವರ್ತ ಮತ್ತು ಎಂಟನೆಯವನು ಸುಧನ್ವಾ. ಈ ಎಂಟು ಜನರೂ ಅಗ್ನಿಜರು. ಸರ್ವರೂ ನಿರಾಮಯರು ಮತ್ತು ಜ್ಞಾನನಿಷ್ಠರು.

13085040a ಬ್ರಾಹ್ಮಣಸ್ಯ ಕವೇಃ ಪುತ್ರಾ ವಾರುಣಾಸ್ತೇಽಪ್ಯುದಾಹೃತಾಃ|

13085040c ಅಷ್ಟೌ ಪ್ರಸವಜೈರ್ಯುಕ್ತಾ ಗುಣೈರ್ಬ್ರಹ್ಮವಿದಃ ಶುಭಾಃ||

ಬ್ರಹ್ಮನ ಪುತ್ರನಾದ ಕವಿಯ ಪುತ್ರರನ್ನೂ ವಾರುಣರೆಂದು ಕರೆಯುತ್ತಾರೆ. ಸಂತಾನಯುಕ್ತರಾದ ಮತ್ತು ಬ್ರಹ್ಮಜ್ಞಾನಿಗಳೂ ಶುಭರೂ ಆದ ಅವರು ಎಂಟು ಮಂದಿ.

13085041a ಕವಿಃ ಕಾವ್ಯಶ್ಚ ವಿಷ್ಣುಶ್ಚ[11] ಬುದ್ಧಿಮಾನುಶನಾಸ್ತಥಾ|

13085041c ಭೃಗುಶ್ಚ ವಿರಜಾಶ್ಚೈವ ಕಾಶೀ ಚೋಗ್ರಶ್ಚ ಧರ್ಮವಿತ್||

ಅವರು – ಕವಿ, ಕಾವ್ಯ, ವಿಷ್ಣು, ಬುದ್ಧಿಮಾನ್ ಉಶನ[12], ಭೃಗು, ವಿರಜಾ, ಕಾಶೀ ಮತ್ತು ಧರ್ಮವಿದು ಉಗ್ರ.

13085042a ಅಷ್ಟೌ ಕವಿಸುತಾ ಹ್ಯೇತೇ ಸರ್ವಮೇಭಿರ್ಜಗತ್ತತಮ್|

13085042c ಪ್ರಜಾಪತಯ ಏತೇ ಹಿ ಪ್ರಜಾನಾಂ ಯೈರಿಮಾಃ ಪ್ರಜಾಃ||

ಈ ಎಂಟು ಮಂದಿ ಕವಿಯ ಪುತ್ರರು. ಇವರೆಲ್ಲರಿಂದ ಈ ಸಂಪೂರ್ಣ ಜಗತ್ತು ವ್ಯಾಪ್ತವಾಗಿದೆ. ಇವರು ಪ್ರಜಾಪತಿಗಳು ಮತ್ತು ಪ್ರಜೆಗಳ ಗುಣಗಳನ್ನು ಪಡೆದಿರುವುದರಿಂದ ಇವರನ್ನು ಪ್ರಜೆಗಳು ಎಂದೂ ಕರೆದಿದ್ದಾರೆ.

13085043a ಏವಮಂಗಿರಸಶ್ಚೈವ ಕವೇಶ್ಚ ಪ್ರಸವಾನ್ವಯೈಃ|

13085043c ಭೃಗೋಶ್ಚ ಭೃಗುಶಾರ್ದೂಲ ವಂಶಜೈಃ ಸತತಂ ಜಗತ್||

ಭೃಗುಶಾರ್ದೂಲ! ಹೀಗೆ ಅಂಗಿರಾ, ಕವಿ ಮತ್ತು ಭೃಗುವಿನ ವಂಶಜರಿಂದ ಈ ಸಂಪೂರ್ಣ ಜಗತ್ತು ವ್ಯಾಪ್ತವಾಗಿದೆ.

13085044a ವರುಣಶ್ಚಾದಿತೋ ವಿಪ್ರ ಜಗ್ರಾಹ ಪ್ರಭುರೀಶ್ವರಃ|

13085044c ಕವಿಂ ತಾತ ಭೃಗುಂ ಚೈವ ತಸ್ಮಾತ್ತೌ ವಾರುಣೌ ಸ್ಮೃತೌ||

ವಿಪ್ರ! ತಾತ! ಪ್ರಭು ಈಶ್ವರನು ವರುಣನ ರೂಪದಲ್ಲಿ ಮೊದಲು ಕವಿ ಮತ್ತು ಭೃಗುಗಳನ್ನು ಪುತ್ರರೂಪದಲ್ಲಿ ಸ್ವೀಕರಿಸಿದುದರಿಂದ ಅವರನ್ನು ವಾರುಣರೆಂದು ಕರೆಯುತ್ತಾರೆ.

13085045a ಜಗ್ರಾಹಾಂಗಿರಸಂ ದೇವಃ ಶಿಖೀ ತಸ್ಮಾದ್ಧುತಾಶನಃ|

13085045c ತಸ್ಮಾದಂಗಿರಸೋ ಜ್ಞೇಯಾಃ ಸರ್ವ ಏವ ತದನ್ವಯಾಃ||

ಶಿಖೀ ದೇವ ಹುತಾಶನನು ಆಂಗಿರಸನನ್ನು ಸ್ವೀಕರಿಸಿದನು. ಆದುದರಿಂದ ಅವನ ಕುಲದವರೆಲ್ಲರೂ ಅಂಗಿರಸರೆಂದಾದರು.

13085046a ಬ್ರಹ್ಮಾ ಪಿತಾಮಹಃ ಪೂರ್ವಂ ದೇವತಾಭಿಃ ಪ್ರಸಾದಿತಃ|

13085046c ಇಮೇ ನಃ ಸಂತರಿಷ್ಯಂತಿ ಪ್ರಜಾಭಿರ್ಜಗದೀಶ್ವರಾಃ||

13085047a ಸರ್ವೇ ಪ್ರಜಾನಾಂ ಪತಯಃ ಸರ್ವೇ ಚಾತಿತಪಸ್ವಿನಃ|

13085047c ತ್ವತ್ಪ್ರಸಾದಾದಿಮಂ ಲೋಕಂ ತಾರಯಿಷ್ಯಂತಿ ಶಾಶ್ವತಮ್||

ಹಿಂದೆಯೇ ದೇವತೆಗಳು ಪಿತಾಮಹ ಬ್ರಹ್ಮನನ್ನು ಪ್ರಸನ್ನಗೊಳಿಸಿ ಹೇಳಿದ್ದರು: “ನಿನ್ನ ಅನುಗ್ರಹದಿಂದ ಜಗದೀಶ್ವರರಾದ ಭೃಗ್ವಂಗಿರಸಕವಿಗಳು ತಮ್ಮ ಸಂತಾನ ಪರಂಪರೆಗಳ ಮೂಲಕ ನಮ್ಮನ್ನು ಸಂಕಟದಿಂದ ಉದ್ಧರಿಸುತ್ತಾರೆ. ಇವರೆಲ್ಲರೂ ಪ್ರಜಾಪತಿಗಳಾಗುವರು. ಎಲ್ಲರೂ ಅತಿ ತಪಸ್ವಿಗಳಾಗುವರು. ನಿನ್ನ ಪ್ರಸಾದದಿಂದ ಇವರು ಈ ಶಾಶ್ವತ ಲೋಕವನ್ನು ಉದ್ಧರಿಸುತ್ತಾರೆ.

13085048a ತಥೈವ ವಂಶಕರ್ತಾರಸ್ತವ ತೇಜೋವಿವರ್ಧನಾಃ|

13085048c ಭವೇಯುರ್ವೇದವಿದುಷಃ ಸರ್ವೇ ವಾಕ್ಪತಯಸ್ತಥಾ||

ಹಾಗೆಯೇ ಇವರೆಲ್ಲರೂ ನಿನ್ನ ವಂಶಪ್ರವರ್ತಕರಾಗುವರು. ನಿನ್ನ ತೇಜಸ್ಸನ್ನು ವೃದ್ಧಿಸುವರು. ವೇದವಿದುಷರಾಗುವರು ಮತ್ತು ಎಲ್ಲರೂ ವಾಕ್ಪತಿಗಳಾಗುವರು.

13085049a ದೇವಪಕ್ಷಧರಾಃ ಸೌಮ್ಯಾಃ ಪ್ರಾಜಾಪತ್ಯಾ ಮಹರ್ಷಯಃ|

13085049c ಆಪ್ನುವಂತಿ ತಪಶ್ಚೈವ ಬ್ರಹ್ಮಚರ್ಯಂ ಪರಂ ತಥಾ||

ದೇವಪಕ್ಷವನ್ನು ಸೇರುವ ಈ ಸೌಮ್ಯ ಪ್ರಜಾಪತಿ ಮಹರ್ಷಿಗಳು ತಪಸ್ಸು ಮತ್ತು ಪರಮ ಬ್ರಹ್ಮಚರ್ಯವನ್ನು ಪಾಲಿಸುತ್ತಾರೆ.

13085050a ಸರ್ವೇ ಹಿ ವಯಮೇತೇ ಚ ತವೈವ ಪ್ರಸವಃ ಪ್ರಭೋ|

13085050c ದೇವಾನಾಂ ಬ್ರಾಹ್ಮಣಾನಾಂ ಚ ತ್ವಂ ಹಿ ಕರ್ತಾ ಪಿತಾಮಹ||

ಪ್ರಭೋ! ಇವೆಲ್ಲವೂ ಮತ್ತು ನಾವೂ ಕೂಡ ನಿನ್ನದೇ ಮಕ್ಕಳು. ಪಿತಾಮಹ! ನೀನೇ ದೇವತೆಗಳ ಮತ್ತು ಬ್ರಾಹ್ಮಣರ ಕರ್ತಾರನು.

13085051a ಮರೀಚಿಮಾದಿತಃ ಕೃತ್ವಾ ಸರ್ವೇ ಚೈವಾಥ ಭಾರ್ಗವಾಃ|

13085051c ಅಪತ್ಯಾನೀತಿ ಸಂಪ್ರೇಕ್ಷ್ಯ ಕ್ಷಮಯಾಮ ಪಿತಾಮಹ||

ಪಿತಾಮಹ! ಮರೀಚಿಯಿಂದ ಮೊದಲ್ಗುಂಡು ಭಾರ್ಗವರೆಲ್ಲರೂ ನಿನ್ನ ಮಕ್ಕಳೆಂದೇ ತಿಳಿದು ನಮ್ಮನ್ನು ಕ್ಷಮಿಸು.

13085052a ತೇ ತ್ವನೇನೈವ ರೂಪೇಣ ಪ್ರಜನಿಷ್ಯಂತಿ ವೈ ಪ್ರಜಾಃ|

13085052c ಸ್ಥಾಪಯಿಷ್ಯಂತಿ ಚಾತ್ಮಾನಂ ಯುಗಾದಿನಿಧನೇ ತಥಾ||

ಇದೇ ರೂಪದಿಂದಲೇ ಇವರು ಪ್ರಜೆಗಳನ್ನು ಸೃಷ್ಟಿಸುತ್ತಾರೆ. ಯುಗಾಂತ್ಯದ ವರೆಗೆ ತಮ್ಮನ್ನು ಸ್ಥಾಪಿಸಿಕೊಳ್ಳುತ್ತಾರೆ.”

13085053a ಏವಮೇತತ್ಪುರಾ ವೃತ್ತಂ ತಸ್ಯ ಯಜ್ಞೇ ಮಹಾತ್ಮನಃ|

13085053c ದೇವಶ್ರೇಷ್ಠಸ್ಯ ಲೋಕಾದೌ ವಾರುಣೀಂ ಬಿಭ್ರತಸ್ತನುಮ್||

ಹೀಗೆ ಹಿಂದೆ ಲೋಕದ ಆದಿಕಾಲದಲ್ಲಿ ವರುಣನ ರೂಪವನ್ನು ಧರಿಸಿದ್ದ ಮಹಾತ್ಮ ದೇವಶ್ರೇಷ್ಠನ ಯಜ್ಞದ ಸಮಯದಲ್ಲಿ ಈ ವೃತ್ತಾಂತವು ನಡೆಯಿತು.

13085054a ಅಗ್ನಿರ್ಬ್ರಹ್ಮಾ ಪಶುಪತಿಃ ಶರ್ವೋ ರುದ್ರಃ ಪ್ರಜಾಪತಿಃ|

13085054c ಅಗ್ನೇರಪತ್ಯಮೇತದ್ವೈ ಸುವರ್ಣಮಿತಿ ಧಾರಣಾ||

ಅಗ್ನಿಯೇ ಬ್ರಹ್ಮನು. ಪಶುಪತಿಯು, ಶರ್ವನು, ರುದ್ರನು ಮತ್ತು ಪ್ರಜಾಪತಿಯು. ಸುವರ್ಣವೂ ಅಗ್ನಿಯ ಸಂತಾನವೇ ಆಗಿದೆ.

13085055a ಅಗ್ನ್ಯಭಾವೇ ಚ ಕುರ್ವಂತಿ ವಹ್ನಿಸ್ಥಾನೇಷು ಕಾಂಚನಮ್|

13085055c ಜಾಮದಗ್ನ್ಯ ಪ್ರಮಾಣಜ್ಞಾ ವೇದಶ್ರುತಿನಿದರ್ಶನಾತ್||

ಜಾಮದಗ್ನ್ಯ! ವೇದಶ್ರುತಿನಿದರ್ಶನಗಳ ಪ್ರಮಾಣಗಳನ್ನು ತಿಳಿದಿರುವವನು ಅಗ್ನಿಯ ಅಭಾವದಲ್ಲಿ ಅಗ್ನಿಯ ಸ್ಥಾನದಲ್ಲಿ ಸುವರ್ಣವನ್ನೇ ಇಡುತ್ತಾನೆ.

13085056a ಕುಶಸ್ತಂಬೇ ಜುಹೋತ್ಯಗ್ನಿಂ ಸುವರ್ಣಂ ತತ್ರ ಸಂಸ್ಥಿತಮ್|

[13]13085056c ಹುತೇ ಪ್ರೀತಿಕರೀಮೃದ್ಧಿಂ ಭಗವಾಂಸ್ತತ್ರ ಮನ್ಯತೇ||

ದರ್ಭೆಯ ಕುಡಿಯಲ್ಲಿ ಸುವರ್ಣವನ್ನಿಟ್ಟರೆ ಭಗವಾನನು ಪ್ರೀತಿಕರವಾದ ಆಹುತಿಸಮೃದ್ಧಿಯು ಲಭಿಸಿತೆಂದು ತಿಳಿಯುತ್ತಾನೆ.

13085057a ತಸ್ಮಾದಗ್ನಿಪರಾಃ ಸರ್ವಾ ದೇವತಾ ಇತಿ ಶುಶ್ರುಮ|

13085057c ಬ್ರಹ್ಮಣೋ ಹಿ ಪ್ರಸೂತೋಽಗ್ನಿರಗ್ನೇರಪಿ ಚ ಕಾಂಚನಮ್||

ಆದುದರಿಂದ ಸರ್ವ ದೇವತೆಗಳೂ ಅಗ್ನಿಯ ನಂತರ ಆದವರೆಂದು ಕೇಳಿದ್ದೇವೆ. ಅಗ್ನಿಯು ಬ್ರಹ್ಮನಿಂದಲೇ ಹುಟ್ಟಿದನು ಮತ್ತು ಅಗ್ನಿಯಿಂದ ಕಾಂಚನವು ಹುಟ್ಟಿತು.

13085058a ತಸ್ಮಾದ್ಯೇ ವೈ ಪ್ರಯಚ್ಚಂತಿ ಸುವರ್ಣಂ ಧರ್ಮದರ್ಶಿನಃ|

13085058c ದೇವತಾಸ್ತೇ ಪ್ರಯಚ್ಚಂತಿ ಸಮಸ್ತಾ ಇತಿ ನಃ ಶ್ರುತಮ್||

ಆದುದರಿಂದ ಸುವರ್ಣವನ್ನು ನೀಡುವ ಧರ್ಮದರ್ಶಿಗಳು ಸಮಸ್ತ ದೇವತೆಗಳನ್ನು ನೀಡಿದಂತೆ ಎಂದು ನಾವು ಕೇಳಿದ್ದೇವೆ.

13085059a ತಸ್ಯ ಚಾತಮಸೋ ಲೋಕಾ ಗಚ್ಚತಃ ಪರಮಾಂ ಗತಿಮ್|

13085059c ಸ್ವರ್ಲೋಕೇ ರಾಜರಾಜ್ಯೇನ ಸೋಽಭಿಷಿಚ್ಯೇತ ಭಾರ್ಗವ||

ಭಾರ್ಗವ! ಸುವರ್ಣದಾನಿಯ ಲೋಕಗಳು ಅಂಧಕಾರರಹಿತವಾಗಿ ಜ್ಯೋತಿರ್ಮಯವಾಗಿರುತ್ತವೆ. ಸ್ವರ್ಗಲೋಕದಲ್ಲಿ ಅವನನ್ನು ರಾಜರಾಜ ಕುಬೇರನ ಸ್ಥಾನದಲ್ಲಿ ಕುಳ್ಳಿರಿಸಿ ಅಭಿಷೇಕಿಸುತ್ತಾರೆ.

13085060a ಆದಿತ್ಯೋದಯನೇ ಪ್ರಾಪ್ತೇ ವಿಧಿಮಂತ್ರಪುರಸ್ಕೃತಮ್|

13085060c ದದಾತಿ ಕಾಂಚನಂ ಯೋ ವೈ ದುಃಸ್ವಪ್ನಂ ಪ್ರತಿಹಂತಿ ಸಃ||

ಸೂರ್ಯೋದಯಕಾಲದಲ್ಲಿ ವಿಧಿಮಂತ್ರಪುರಸ್ಸರವಾಗಿ ಕಾಂಚನವನ್ನು ದಾನಮಾಡುವವನು ದುಃಸ್ವಪ್ನವನ್ನು ವಿನಾಶಗೊಳಿಸುತ್ತಾನೆ.

13085061a ದದಾತ್ಯುದಿತಮಾತ್ರೇ ಯಸ್ತಸ್ಯ ಪಾಪ್ಮಾ ವಿಧೂಯತೇ|

13085061c ಮಧ್ಯಾಹ್ನೇ ದದತೋ ರುಕ್ಮಂ ಹಂತಿ ಪಾಪಮನಾಗತಮ್||

ಸೂರ್ಯನು ಹುಟ್ಟಿದೊಡನೆಯೇ ಸುವರ್ಣದಾನವನ್ನು ಮಾಡಿದವನ ಪಾಪಗಳೆಲ್ಲವೂ ನಾಶವಾಗುತ್ತವೆ. ಮಧ್ಯಾಹ್ನದಲ್ಲಿ ಚಿನ್ನವನ್ನು ದಾನಮಾಡುವವನ ಮುಂದಾಗುವ ಪಾಪಗಳೂ ವಿನಾಶಹೊಂದುತ್ತವೆ.

13085062a ದದಾತಿ ಪಶ್ಚಿಮಾಂ ಸಂಧ್ಯಾಂ ಯಃ ಸುವರ್ಣಂ ಧೃತವ್ರತಃ|

13085062c ಬ್ರಹ್ಮವಾಯ್ವಗ್ನಿಸೋಮಾನಾಂ ಸಾಲೋಕ್ಯಮುಪಯಾತಿ ಸಃ||

ಪಶ್ಚಿಮ ಸಂಧ್ಯಾಸಮಯದಲ್ಲಿ ಸುವರ್ಣವನ್ನು ದಾನಮಾಡುವ ಧೃತವ್ರತನು ಬ್ರಹ್ಮ, ವಾಯು, ಅಗ್ನಿ ಮತ್ತು ಸೋಮರ ಲೋಕಗಳನ್ನು ಪಡೆದುಕೊಳ್ಳುತ್ತಾನೆ.

13085063a ಸೇಂದ್ರೇಷು ಚೈವ ಲೋಕೇಷು ಪ್ರತಿಷ್ಠಾಂ ಪ್ರಾಪ್ನುತೇ ಶುಭಾಮ್|

13085063c ಇಹ ಲೋಕೇ ಯಶಃ ಪ್ರಾಪ್ಯ ಶಾಂತಪಾಪ್ಮಾ ಪ್ರಮೋದತೇ||

ಇಂದ್ರಲೋಕವೇ ಮೊದಲಾದ ಲೋಕಗಳಲ್ಲಿ ಅವನು ಶುಭ ಪ್ರತಿಷ್ಠೆಯನ್ನು ಪಡೆಯುತ್ತಾನೆ. ಈ ಲೋಕದಲ್ಲಿ ಕೂಡ ಯಶಸ್ಸನ್ನು ಪಡೆದು ಪಾಪರಹಿತನಾಗಿ ಆನಂದಿಸುತ್ತಾನೆ.

13085064a ತತಃ ಸಂಪದ್ಯತೇಽನ್ಯೇಷು ಲೋಕೇಷ್ವಪ್ರತಿಮಃ ಸದಾ|

13085064c ಅನಾವೃತಗತಿಶ್ಚೈವ ಕಾಮಚಾರೀ ಭವತ್ಯುತ||

ಸತ್ತನಂತರದ ಅನ್ಯ ಲೋಕಗಳಲ್ಲಿ ಅವನು ಸದಾ ಅಪ್ರತಿಮ ಖ್ಯಾತಿಯನ್ನು ಪಡೆಯುತ್ತಾನೆ. ಯಾವ ಅಡಚಣೆಗಳೂ ಇಲ್ಲದೇ ಅವನು ಕಾಮಚಾರಿಯಾಗುತ್ತಾನೆ.

13085065a ನ ಚ ಕ್ಷರತಿ ತೇಭ್ಯಃ ಸ ಶಶ್ವಚ್ಚೈವಾಪ್ನುತೇ[14] ಮಹತ್|

13085065c ಸುವರ್ಣಮಕ್ಷಯಂ ದತ್ತ್ವಾ ಲೋಕಾನಾಪ್ನೋತಿ ಪುಷ್ಕಲಾನ್||

ಅಕ್ಷಯ ಸುವರ್ಣವನ್ನು ದಾನಮಾಡಿ ಪುಷ್ಕಲ ಲೋಕಗಳನ್ನು ಪಡೆಯುತ್ತಾನೆ ಮತ್ತು ಅವುಗಳಿಂದ ಯಾವಾಗಲೂ ಜಾರುವುದೇ ಇಲ್ಲ. ಶಾಶ್ವತವಾದ ಮಹಾಸುಖವನ್ನು ಹೊಂದುತ್ತಾನೆ.

13085066a ಯಸ್ತು ಸಂಜನಯಿತ್ವಾಗ್ನಿಮಾದಿತ್ಯೋದಯನಂ ಪ್ರತಿ|

13085066c ದದ್ಯಾದ್ವೈ ವ್ರತಮುದ್ದಿಶ್ಯ ಸರ್ವಾನ್ಕಾಮಾನ್ಸಮಶ್ನುತೇ||

ಸೂರ್ಯೋದಯದ ಸಮಯದಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸಿ ಯಾವುದಾದರೂ ವ್ರತವನ್ನು ಉದ್ದೇಶಿಸಿ ಸುವರ್ಣದಾನವನ್ನು ಮಾಡುವವನು ಸರ್ವಕಾಮನೆಗಳನ್ನೂ ಪಡೆದುಕೊಳ್ಳುತ್ತಾನೆ.

13085067a ಅಗ್ನಿರಿತ್ಯೇವ ತತ್ಪ್ರಾಹುಃ ಪ್ರದಾನಂ ವೈ ಸುಖಾವಹಮ್|

13085067c ಯಥೇಷ್ಟಗುಣಸಂಪನ್ನಂ ಪ್ರವರ್ತಕಮಿತಿ ಸ್ಮೃತಮ್||

ಸುವರ್ಣವು ಅಗ್ನಿಯೆಂದೇ ಹೇಳುತ್ತಾರೆ. ಆದುದರಿಂದ ಅದರ ದಾನವು ಸುಖವನ್ನು ತರುತ್ತದೆ. ಯಥೇಷ್ಟ ಗುಣಗಳನ್ನು ನೀಡುತ್ತದೆ ಮತ್ತು ದಾನಮಾಡುವ ಇಚ್ಛೆಯನ್ನು ಹುಟ್ಟಿಸುತ್ತದೆ ಎಂದು ಹೇಳಿದ್ದಾರೆ.””

13085068 ಭೀಷ್ಮ ಉವಾಚ|

13085068a ಇತ್ಯುಕ್ತಃ ಸ ವಸಿಷ್ಠೇನ ಜಾಮದಗ್ನ್ಯಃ ಪ್ರತಾಪವಾನ್|

13085068c ದದೌ ಸುವರ್ಣಂ ವಿಪ್ರೇಭ್ಯೋ ವ್ಯಮುಚ್ಯತ ಚ ಕಿಲ್ಬಿಷಾತ್||

ಭೀಷ್ಮನು ಹೇಳಿದನು: “ವಸಿಷ್ಠನು ಹೀಗೆ ಹೇಳಲು ಪ್ರತಾಪವಾನ್ ಜಾಮದಗ್ನಿಯು ವಿಪ್ರರಿಗೆ ಸುವರ್ಣವನ್ನಿತ್ತು ದೋಷಗಳಿಂದ ವಿಮುಕ್ತನಾದನು.

13085069a ಏತತ್ತೇ ಸರ್ವಮಾಖ್ಯಾತಂ ಸುವರ್ಣಸ್ಯ ಮಹೀಪತೇ|

13085069c ಪ್ರದಾನಸ್ಯ ಫಲಂ ಚೈವ ಜನ್ಮ ಚಾಗ್ನ್ಯಮನುತ್ತಮಮ್||

ಮಹೀಪತೇ! ಹೀಗೆ ಸುವರ್ಣದ ಕುರಿತು ಎಲ್ಲವನ್ನೂ ಹೇಳಿದ್ದೇನೆ. ಅದರ ದಾನದ ಫಲ ಮತ್ತು ಅಗ್ನಿಯಿಂದ ಅದರ ಅನುತ್ತಮ ಜನ್ಮದ ಕುರಿತೂ ಹೇಳಿದ್ದೇನೆ.

13085070a ತಸ್ಮಾತ್ತ್ವಮಪಿ ವಿಪ್ರೇಭ್ಯಃ ಪ್ರಯಚ್ಚ ಕನಕಂ ಬಹು|

13085070c ದದತ್ಸುವರ್ಣಂ ನೃಪತೇ ಕಿಲ್ಬಿಷಾದ್ವಿಪ್ರಮೋಕ್ಷ್ಯಸಿ||

ನೃಪತೇ! ನೀನೂ ಕೂಡ ವಿಪ್ರರಿಗೆ ಅಧಿಕ ಕನಕವನ್ನು ದಾನಮಾಡು. ಸುವರ್ಣವನ್ನು ದಾನಮಾಡಿ ದೋಷಗಳಿಂದ ಮುಕ್ತನಾಗುವೆ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಸುವರ್ಣೋತ್ಪತ್ತಿರ್ನಾಮ ಪಂಚಾಶೀತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಸುವರ್ಣೋತ್ಪತ್ತಿ ಎನ್ನುವ ಎಂಭತ್ತೈದನೇ ಅಧ್ಯಾಯವು.

[1] ಗೀತಾ ಪ್ರೆಸ್ ನಲ್ಲಿ ಈ ಅಧ್ಯಾಯವು ಹಿಂದಿನ ಅಧ್ಯಾಯಕ್ಕೇ ಸೇರಿಕೊಂಡಿದೆ.

[2] ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ಯಜ್ಞಂ ಚ ಶೋಭಯಾಮಾಸ ಬಹುರೂಪಂ ಪಿನಾಕಧೃತ್| ಧೌರ್ನಭಃ ಪೃಥಿವೀ ಖಂ ಚ ತಥಾ ಚೈವೈಷ ಭೂಪತಿಃ| ಸರ್ವವಿದ್ಯೇಶ್ವರಃ ಶ್ರೀಮಾನೇಷ ಚಾಪಿ ವಿಭಾವಸುಃ|| ಏಷ ಬ್ರಹ್ಮಾ ಶಿವೋ ರುದ್ರೋ ವರುಣೋಽಗ್ನಿಃ ಪ್ರಜಾಪತಿಃ| ಕೀರ್ಯತೇ ಭಗವಾನ್ ದೇವಃ ಸರ್ವಭೂತಪತಿಃ ಶಿವಃ|| ತಸ್ಯ ಯಜ್ಞಃ ಪಶುಪತೇಸ್ತಪಃ ಕ್ರತವ ಏವ ಚ| ದೀಕ್ಷಾ ದೀಪ್ತವ್ರತಾ ದೇವೀ ದಿಶಾಶ್ಚ ಸದಿಗೀಶ್ವರಾಃ|| (ಗೀತಾ ಪ್ರೆಸ್).

[3] ಬಲಾತ್ಮನಃ|  ಅರ್ಥಾತ್ ವೀರ್ಯದಿಂದ ಮನಸ್ಸು (ಗೀತಾ ಪ್ರೆಸ್).

[4] ದಾರುಣಮ್| (ಗೀತಾ ಪ್ರೆಸ್).

[5] ಆದಿಕರ್ತಾ ಚ (ಗೀತಾ ಪ್ರೆಸ್).

[6] ಸರ್ವಕಾಮದಮಿತ್ಯಾಹುಸ್ತದ್ರಹಸ್ಯಮುವಾಚ ಹ||(ಗೀತಾ ಪ್ರೆಸ್).

[7] ಅಹಂ ಕರ್ತಾ ಹಿ ಸರ್ವಸ್ಯ (ಗೀತಾ ಪ್ರೆಸ್).

[8] ಪ್ರಸವಕರ್ಮವಿತ್| (ಗೀತಾ ಪ್ರೆಸ್).

[9] ಏತೇ ಹಿ ಪ್ರಸ್ರವಾಃ (ಗೀತಾ ಪ್ರೆಸ್).

[10] ಪಯಸ್ಯಃ (ಗೀತಾ ಪ್ರೆಸ್).

[11] ಧೃಷ್ಣುಶ್ಚ (ಗೀತಾ ಪ್ರೆಸ್).

[12] ಅಥವಾ ಶುಕ್ರಾಚಾರ್ಯ (ಗೀತಾ ಪ್ರೆಸ್).

[13] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ವಲ್ಮೀಕಸ್ಯ ವಪಾಯಾಂ ಚ ಕರ್ಣೇ ವಾಜಸ್ಯ ದಕ್ಷಿಣೇ| ಶಕಟೋರ್ವ್ಯಾಂ ಪರಸ್ಯಾಪ್ಸು ಬ್ರಾಹ್ಮಣಸ್ಯ ಕರೇ ತಥಾ|| (ಭಾರತ ದರ್ಶನ/ಗೀತಾ ಪ್ರೆಸ್).

[14] ಯಶಶ್ಚೈವಾಪ್ನುತೇ (ಭಾರತ ದರ್ಶನ/ಗೀತಾ ಪ್ರೆಸ್).

Comments are closed.