Anushasana Parva: Chapter 76

ಅನುಶಾಸನ ಪರ್ವ: ದಾನಧರ್ಮ ಪರ್ವ

೭೬

ಗೋಪ್ರಭವ ಕಥನ

13076001 ವೈಶಂಪಾಯನ ಉವಾಚ|

13076001a ತತೋ ಯುಧಿಷ್ಠಿರೋ ರಾಜಾ ಭೂಯಃ ಶಾಂತನವಂ ನೃಪ|

13076001c ಗೋದಾನೇ ವಿಸ್ತರಂ ಧೀಮಾನ್ಪಪ್ರಚ್ಚ ವಿನಯಾನ್ವಿತಃ||

ವೈಶಂಪಾಯನನು ಹೇಳಿದನು: “ನೃಪ! ಬಳಿಕ ರಾಜಾ ಯುಧಿಷ್ಠಿರನು ವಿನಯಾನ್ವಿತನಾಗಿ ಗೋದಾನದ ವಿಷಯವನ್ನು ಇನ್ನೂ ವಿಸ್ತಾರವಾಗಿ ಹೇಳಬೇಕೆಂದು ಶಾಂತನವನನ್ನು ಕೇಳಿಕೊಂಡನು.

13076002 ಯುಧಿಷ್ಠಿರ ಉವಾಚ|

13076002a ಗೋಪ್ರದಾನೇ ಗುಣಾನ್ಸಮ್ಯಕ್ಪುನಃ ಪ್ರಬ್ರೂಹಿ ಭಾರತ|

13076002c ನ ಹಿ ತೃಪ್ಯಾಮ್ಯಹಂ ವೀರ ಶೃಣ್ವಾನೋಽಮೃತಮೀದೃಶಮ್||

ಯುಧಿಷ್ಠಿರನು ಹೇಳಿದನು: “ಭಾರತ! ಗೋದಾನದ ಗುಣಗಳನ್ನು ಸಂಪೂರ್ಣವಾಗಿ ಪುನಃ ನನಗೆ ಹೇಳು. ವೀರ! ಇಂತಹ ಅಮೃತಮಯ ಉಪದೇಶವನ್ನು ಕೇಳಿ ನಾನಿನ್ನೂ ತೃಪ್ತನಾಗಿಲ್ಲ.”

13076003a ಇತ್ಯುಕ್ತೋ ಧರ್ಮರಾಜೇನ ತದಾ ಶಾಂತನವೋ ನೃಪ|

13076003c ಸಮ್ಯಗಾಹ ಗುಣಾಂಸ್ತಸ್ಮೈ ಗೋಪ್ರದಾನಸ್ಯ ಕೇವಲಾನ್||

ನೃಪ! ಧರ್ಮರಾಜನು ಹೀಗೆ ಹೇಳಲು ಶಾಂತನವನು ಅವನಿಗೆ ಕೇವಲ ಗೋದಾನದ ಕುರಿತಾದ ಗುಣಗಳನ್ನು ಸಂಪೂರ್ಣವಾಗಿ ಹೇಳಿದನು.

13076004 ಭೀಷ್ಮ ಉವಾಚ|

13076004a ವತ್ಸಲಾಂ ಗುಣಸಂಪನ್ನಾಂ ತರುಣೀಂ ವಸ್ತ್ರಸಂವೃತಾಮ್|

13076004c ದತ್ತ್ವೇದೃಶೀಂ ಗಾಂ ವಿಪ್ರಾಯ ಸರ್ವಪಾಪೈಃ ಪ್ರಮುಚ್ಯತೇ||

ಭೀಷ್ಮನು ಹೇಳಿದನು: “ವತ್ಸಲೆ ಗುಣಸಂಪನ್ನೆ ತರುಣೀ ಮತ್ತು ವಸ್ತ್ರಸಂವೃತೆ ಸುಶೀಲೆ ಗೋವನ್ನು ವಿಪ್ರನಿಗೆ ದಾನಮಾಡಿದರೆ ಸರ್ವಪಾಪಗಳಿಂದ ಮುಕ್ತನಾಗುತ್ತಾನೆ.

13076005a ಅಸುರ್ಯಾ ನಾಮ ತೇ ಲೋಕಾ ಗಾಂ ದತ್ತ್ವಾ ತತ್ರ ಗಚ್ಚತಿ[1]|

13076005c ಪೀತೋದಕಾಂ ಜಗ್ಧತೃಣಾಂ ನಷ್ಟದುಗ್ಧಾಂ ನಿರಿಂದ್ರಿಯಾಮ್||

13076006a ಜರೋಗ್ರಾಮುಪಯುಕ್ತಾರ್ಥಾಂ ಜೀರ್ಣಾಂ ಕೂಪಮಿವಾಜಲಮ್|

13076006c ದತ್ತ್ವಾ ತಮಃ ಪ್ರವಿಶತಿ ದ್ವಿಜಂ ಕ್ಲೇಶೇನ ಯೋಜಯೇತ್||

ಅಂತಹ ಹಸುವನ್ನು ದಾನಮಾಡಿದವನು ಅಸುರ್ಯಾ ಎಂಬ ಹೆಸರಿನ ಲೋಕಕ್ಕೆ ಹೋಗುತ್ತಾನೆ. ಹುಲ್ಲುತಿನ್ನುವುದನ್ನು ಮತ್ತು ನೀರು ಕುಡಿಯುವುದನ್ನು ಪ್ರಾಯಶಃ ನಿಲ್ಲಿಸಿಬಿಟ್ಟಿರುವ, ಹಾಲು ಬತ್ತಿಹೋಗಿರುವ, ಇಂದ್ರಿಯಗಳು ಕೆಲಸಮಾಡದೇ ಇರುವ, ವೃದ್ಧಾಪ್ಯ ಅಥವಾ ರೋಗದಿಂದ ಪೀಡಿತಳಾಗಿ ಶರೀರವು ಜೀರ್ಣವಾಗಿರುವ ಗೋವನ್ನು ದಾನಮಾಡಿದ ಮನುಷ್ಯನು ಅದನ್ನು ಪ್ರತಿಗ್ರಹಿಸಿದ ಬ್ರಾಹ್ಮಣನನ್ನು ಕಷ್ಟದಲ್ಲಿ ಹಾಕುವುದಲ್ಲದೇ ಸ್ವಯಂ ತಾನು ಘೋರ ಅಂಧಕಾರ ನರಕದಲ್ಲಿ ಬೀಳುತ್ತಾನೆ.

13076007a ದುಷ್ಟಾ ರುಷ್ಟಾ ವ್ಯಾಧಿತಾ ದುರ್ಬಲಾ ವಾ

ನ ದಾತವ್ಯಾ ಯಾಶ್ಚ ಮೂಲ್ಯೈರದತ್ತೈಃ|

13076007c ಕ್ಲೇಶೈರ್ವಿಪ್ರಂ ಯೋಽಫಲೈಃ ಸಂಯುನಕ್ತಿ

ತಸ್ಯಾವೀರ್ಯಾಶ್ಚಾಫಲಾಶ್ಚೈವ ಲೋಕಾಃ||

ದುಷ್ಟಳಾದ, ಸಿಟ್ಟಿರುವ, ರೋಗವಿರುವ, ದುರ್ಬಲ ಮತ್ತು ಸಂಪೂರ್ಣ ಮೌಲ್ಯವನ್ನು ಕೊಡದೇ ಕರೀದಿಸಿರುವ ಗೋವನ್ನು ದಾನಮಾಡುವುದು ಎಂದೂ ಉಚಿತವಲ್ಲ. ಇಂಥಹ ಗೋವನ್ನು ದಾನಮಾಡಿ ಬ್ರಾಹ್ಮಣನನ್ನು ವ್ಯರ್ಥ ಕಷ್ಟದಲ್ಲಿ ಹಾಕುವವನಿಗೆ ನಿರ್ಬಲ ಮತ್ತು ನಿಷ್ಫಲ ಲೋಕಗಳೇ ದೊರಕುತ್ತವೆ.

13076008a ಬಲಾನ್ವಿತಾಃ ಶೀಲವಯೋಪಪನ್ನಾಃ

ಸರ್ವಾಃ ಪ್ರಶಂಸಂತಿ ಸುಗಂಧವತ್ಯಃ|

13076008c ಯಥಾ ಹಿ ಗಂಗಾ ಸರಿತಾಂ ವರಿಷ್ಠಾ

ತಥಾರ್ಜುನೀನಾಂ ಕಪಿಲಾ ವರಿಷ್ಠಾ||

ದಷ್ಟ-ಪುಷ್ಟ, ಸುಲಕ್ಷಣೆ, ಯುವ ಮತ್ತು ಸುಗಂಧಯುಕ್ತ ಗೋವನ್ನು ಎಲ್ಲರೂ ಪ್ರಶಂಸಿಸುತ್ತಾರೆ. ನದಿಗಳಲ್ಲಿ ಗಂಗೆಯು ಹೇಗೆ ಶ್ರೇಷ್ಠಳೋ ಹಾಗೆ ಗೋವುಗಳಲ್ಲಿ ಕಪಿಲೆಯು ಶ್ರೇಷ್ಠಳೆಂಬ ಮಾನ್ಯತೆಯಿದೆ.”

13076009 ಯುಧಿಷ್ಠಿರ ಉವಾಚ|

13076009a ಕಸ್ಮಾತ್ಸಮಾನೇ ಬಹುಲಾಪ್ರದಾನೇ

ಸದ್ಭಿಃ ಪ್ರಶಸ್ತಂ ಕಪಿಲಾಪ್ರದಾನಮ್|

13076009c ವಿಶೇಷಮಿಚ್ಚಾಮಿ ಮಹಾನುಭಾವ

ಶ್ರೋತುಂ ಸಮರ್ಥೋ ಹಿ ಭವಾನ್ ಪ್ರವಕ್ತುಮ್||

ಯುಧಿಷ್ಠಿರನು ಹೇಳಿದನು: “ಮಹಾನುಭಾವ! ಯಾವುದೇ ಬಣ್ಣದ ಗೋವನ್ನು ದಾನಮಾಡಿದರೂ ಒಂದೇ ಸಮನಲ್ಲವೇ? ಆದರೂ ಸತ್ಪುರುಷರು ಕಪಿಲವರ್ಣದ ಗೋವನ್ನು ಏಕೆ ಅಧಿಕವಾಗಿ ಪ್ರಶಂಸಿಸುತ್ತಾರೆ? ನಾನು ಕಪಿಲೆಯ ವಿಶೇಷತೆಯನ್ನು ತಿಳಿಯಬಯಸುತ್ತೇನೆ. ನೀನು ಇದನ್ನು ಹೇಳುವುದಕ್ಕೆ ಸಮರ್ಥನಿದ್ದೀಯೆ ಮತ್ತು ನಾನು ಇದನ್ನು ಕೇಳಲು ಸಮರ್ಥನಾಗಿದ್ದೇನೆ.”

13076010 ಭೀಷ್ಮ ಉವಾಚ|

13076010a ವೃದ್ಧಾನಾಂ ಬ್ರುವತಾಂ ತಾತ ಶ್ರುತಂ ಮೇ ಯತ್ಪ್ರಭಾಷಸೇ|

13076010c ವಕ್ಷ್ಯಾಮಿ ತದಶೇಷೇಣ ರೋಹಿಣ್ಯೋ ನಿರ್ಮಿತಾ ಯಥಾ||

ಭೀಷ್ಮನು ಹೇಳಿದನು: “ಅಯ್ಯಾ! ರೋಹಿಣಿ[2]ಯು ಹೇಗೆ ಜನಿಸಿದಳು ಎನ್ನುವುದರ ಕುರಿತು ವೃದ್ಧರ ಮಾತನ್ನು ನಾನು ಕೇಳಿದುದನ್ನು ನಿನಗೆ ಹೇಳುತ್ತೇನೆ.

13076011a ಪ್ರಜಾಃ ಸೃಜೇತಿ ವ್ಯಾದಿಷ್ಟಃ ಪೂರ್ವಂ ದಕ್ಷಃ ಸ್ವಯಂಭುವಾ|

13076011c ಅಸೃಜದ್ವೃತ್ತಿಮೇವಾಗ್ರೇ ಪ್ರಜಾನಾಂ ಹಿತಕಾಮ್ಯಯಾ||

ಹಿಂದೆ ಸ್ವಯಂಭು ಬ್ರಹ್ಮನು ಪ್ರಜಾಪತಿ ದಕ್ಷನಿಗೆ “ಪ್ರಜೆಗಳನ್ನು ಸೃಷ್ಟಿಸು!” ಎಂದು ಆಜ್ಞೆಯನ್ನಿತ್ತನು. ಆದರೆ ಪ್ರಜಾಪತಿಯು ಪ್ರಜೆಗಳ ಹಿತವನ್ನು ಬಯಸಿ ಮೊದಲು ವೃತ್ತಿಯನ್ನೇ ಸೃಷ್ಟಿಸಿದನು.

13076012a ಯಥಾ ಹ್ಯಮೃತಮಾಶ್ರಿತ್ಯ ವರ್ತಯಂತಿ ದಿವೌಕಸಃ|

13076012c ತಥಾ ವೃತ್ತಿಂ ಸಮಾಶ್ರಿತ್ಯ ವರ್ತಯಂತಿ ಪ್ರಜಾ ವಿಭೋ||

ವಿಭೋ! ಅಮೃತವನ್ನು ಆಶ್ರಯಿಸಿ ಹೇಗೆ ದೇವತೆಗಳು ಜೀವನವನ್ನು ನಿರ್ವಹಿಸುವರೋ ಹಾಗೆ ಪ್ರಜೆಗಳು ವೃತ್ತಿಯನ್ನು ಆಶ್ರಯಿಸಿ ಜೀವನ ಧಾರಣೆ ಮಾಡುತ್ತಾರೆ.

13076013a ಅಚರೇಭ್ಯಶ್ಚ ಭೂತೇಭ್ಯಶ್ಚರಾಃ ಶ್ರೇಷ್ಠಾಸ್ತತೋ ನರಾಃ|

13076013c ಬ್ರಾಹ್ಮಣಾಶ್ಚ ತತಃ ಶ್ರೇಷ್ಠಾಸ್ತೇಷು ಯಜ್ಞಾಃ ಪ್ರತಿಷ್ಠಿತಾಃ||

ಸ್ಥಾವರ ಪ್ರಾಣಿಗಳಿಗಿಂತ ಜಂಗಮ ಪ್ರಾಣಿಗಳು ಶ್ರೇಷ್ಠರು. ಅವರಲ್ಲಿಯೂ ಮನುಷ್ಯರು ಶ್ರೇಷ್ಠರು ಮತ್ತು ಮನುಷ್ಯರಲ್ಲಿ ಬ್ರಾಹ್ಮಣರು ಶ್ರೇಷ್ಠರು. ಏಕೆಂದರೆ ಅವರಲ್ಲಿ ಯಜ್ಞಗಳು ಪ್ರತಿಷ್ಠಿತವಾಗಿವೆ.

13076014a ಯಜ್ಞೈರಾಪ್ಯಾಯತೇ ಸೋಮಃ[3] ಸ ಚ ಗೋಷು ಪ್ರತಿಷ್ಠಿತಃ|

13076014c ಸರ್ವೇ ದೇವಾಃ ಪ್ರಮೋದಂತೇ ಪೂರ್ವವೃತ್ತಾಸ್ತತಃ ಪ್ರಜಾಃ||

ಯಜ್ಞದಿಂದ ಸೋಮನು ಪ್ರೀತನಾಗುತ್ತಾನೆ ಮತ್ತು ಅವನು ಗೋವುಗಳಲ್ಲಿ ಪ್ರತಿಷ್ಠಿತನಾಗಿದ್ದಾನೆ. ಗೋವುಗಳಿಂದ ಸರ್ವ ದೇವತೆಗಳೂ ಆನಂದಿತರಾಗುತ್ತಾರೆ. ಆದುದರಿಂದ ಮೊದಲು ವೃತ್ತಿ ಮತ್ತು ನಂತರ ಪ್ರಜೆಗಳು.

13076015a ಏತಾನ್ಯೇವ ತು ಭೂತಾನಿ ಪ್ರಾಕ್ರೋಶನ್ ವೃತ್ತಿಕಾಂಕ್ಷಯಾ|

13076015c ವೃತ್ತಿದಂ ಚಾನ್ವಪದ್ಯಂತ ತೃಷಿತಾಃ ಪಿತೃಮಾತೃವತ್||

ಸಮಸ್ತ ಪ್ರಾಣಿಗಳೂ ಹುಟ್ಟುತ್ತಲೇ ಬದುಕಿಗಾಗಿ ಕೋಲಾಹಲಮಾಡಲು ಪ್ರಾರಂಭಿಸಿದವು. ಹಸಿವು-ಬಾಯಾರಿಕೆಗಳಿಂದ ಮಗುವು ತನ್ನ ತಾಯಿ-ತಂದೆಯರ ಬಳಿ ಹೋಗುವಂತೆ ಸಮಸ್ತ ಜೀವಿಗಳೂ ವೃತ್ತಿದಾತಾ ದಕ್ಷನ ಬಳಿ ಹೋದರು.

13076016a ಇತೀದಂ ಮನಸಾ ಗತ್ವಾ ಪ್ರಜಾಸರ್ಗಾರ್ಥಮಾತ್ಮನಃ|

13076016c ಪ್ರಜಾಪತಿರ್ಬಲಾಧಾನಮಮೃತಂ ಪ್ರಾಪಿಬತ್ತದಾ||

ಪ್ರಜಾಜನರ ಈ ಸ್ಥಿತಿಯನ್ನು ಮನಸ್ಸಲ್ಲಿಯೇ ವಿಚಾರಿಸಿ ಭಗವಾನ್ ಪ್ರಜಾಪತಿಯು ಪ್ರಜಾವರ್ಗದ ಆಜೀವಿಕೆಗಾಗಿ ಅಮೃತವನ್ನು ಕುಡಿದನು.

13076017a ಸ ಗತಸ್ತಸ್ಯ ತೃಪ್ತಿಂ ತು ಗಂಧಂ ಸುರಭಿಮುದ್ಗಿರನ್|

13076017c ದದರ್ಶೋದ್ಗಾರಸಂವೃತ್ತಾಂ ಸುರಭಿಂ ಮುಖಜಾಂ ಸುತಾಮ್||

ಅಮೃತವನ್ನು ಕುಡಿದು ತೃಪ್ತನಾಗಲು ಅವನ ಮುಖದಿಂದ ಸುರಭಿ ಗಂಧವು ಹೊರಸೂಸಿತು. ಅದರ ಜೊತೆಗೇ ಸುರಭಿ ಎಂಬ ಹೆಸರಿನ ಗೋವು ಪ್ರಕಟವಾಯಿತು. ತನ್ನ ಮುಖದಿಂದ ಪ್ರಕಟಳಾದ ಅವಳನ್ನು ಪ್ರಜಾಪತಿಯು ತನ್ನ ಮಗಳ ರೂಪದಲ್ಲಿ ಕಂಡನು.

13076018a ಸಾಸೃಜತ್ಸೌರಭೇಯೀಸ್ತು ಸುರಭಿರ್ಲೋಕಮಾತರಃ|

13076018c ಸುವರ್ಣವರ್ಣಾಃ ಕಪಿಲಾಃ ಪ್ರಜಾನಾಂ ವೃತ್ತಿಧೇನವಃ||

ಲೋಕಮಾತರ ಆ ಸುರಭಿಯು ಅನೇಕ ಸೌರಭೇಯೀ ನಾಮಕ ಗೋವುಗಳನ್ನು ಹುಟ್ಟಿಸಿದಳು. ಅವುಗಳ ವರ್ಣವು ಸುವರ್ಣದಂತೆ ದೇದೀಪ್ಯವಾಮವಾಗಿತ್ತು. ಈ ಕಪಿಲೆಯರು ಪ್ರಜಾಜನರಿಗೆ ವೃತ್ತಿರೂಪದಲ್ಲಿ ಹಾಲುನೀಡುವವರಾಗಿದ್ದವು.

13076019a ತಾಸಾಮಮೃತವರ್ಣಾನಾಂ ಕ್ಷರಂತೀನಾಂ ಸಮಂತತಃ|

13076019c ಬಭೂವಾಮೃತಜಃ ಫೇನಃ ಸ್ರವಂತೀನಾಮಿವೋರ್ಮಿಜಃ||

ನದಿಯ ಅಲೆಗಳಿಂದ ನೊರೆಯು ಉತ್ಪನ್ನವಾಗುವಂತೆ ನಾಲ್ಕೂ ಕಡೆಗಳಿಂದ ಅಮೃತವರ್ಣದ ಆ ಗೋವುಗಳ ಹಾಲು ಸುರಿಯುತ್ತಿರಲು ಹಾಲಿನ ನೊರೆಯು ಉತ್ಪನ್ನವಾಯಿತು.

13076020a ಸ ವತ್ಸಮುಖವಿಭ್ರಷ್ಟೋ ಭವಸ್ಯ ಭುವಿ ತಿಷ್ಠತಃ|

13076020c ಶಿರಸ್ಯವಾಪ ತತ್ಕ್ರುದ್ಧಃ ಸ ತದೋದೈಕ್ಷತ ಪ್ರಭುಃ|

13076020e ಲಲಾಟಪ್ರಭವೇನಾಕ್ಷ್ಣಾ ರೋಹಿಣೀಃ ಪ್ರದಹನ್ನಿವ||

ಭಗವಾನ್ ಶಂಕರನು ಭೂಮಿಯ ಮೇಲೆ ನಿಂತಿದ್ದಾಗ ಸುರಭಿಯ ಒಂದು ಕರುವಿನ ಬಾಯಿಯಿಂದ ಹಾಲಿನ ನೊರೆಯು ಅವನ ಶಿರದ ಮೇಲೆ ಬಿದ್ದಿತು. ಇದರಿಂದ ಕುಪಿತನಾದ ಅವನು ರೋಹಿಣಿಯನ್ನು ಭಸ್ಮಮಾಡಿಬಿಡುವನೋ ಎನ್ನುವಂತೆ ತನ್ನ ಲಲಾಟನೇತ್ರದಿಂದ ಅವಳ ಕಡೆ ನೋಡಿದನು.

13076021a ತತ್ತೇಜಸ್ತು ತತೋ ರೌದ್ರಂ ಕಪಿಲಾ ಗಾ ವಿಶಾಂ ಪತೇ|

13076021c ನಾನಾವರ್ಣತ್ವಮನಯನ್ಮೇಘಾನಿವ ದಿವಾಕರಃ||

ವಿಶಾಂಪತೇ! ರುದ್ರನ ಆ ಭಯಂಕರ ತೇಜಸ್ಸು ಯಾವ ಯಾವ ಕಪಿಲೆಯರ ಮೇಲೆ ಬಿದ್ದಿತೋ ಅವುಗಳು, ಮೋಡದ ಮೇಲೆ ಬಿದ್ದ ಸೂರ್ಯನ ಕಿರಣಗಳು ಹೇಗೋ ಹಾಗೆ ನಾನಾ ಪ್ರಕಾರದ ಬಣ್ಣಗಳನ್ನು ತಳೆದವು.

13076022a ಯಾಸ್ತು ತಸ್ಮಾದಪಕ್ರಮ್ಯ ಸೋಮಮೇವಾಭಿಸಂಶ್ರಿತಾಃ|

13076022c ಯಥೋತ್ಪನ್ನಾಃ ಸ್ವವರ್ಣಸ್ಥಾಸ್ತಾ ನೀತಾ ನಾನ್ಯವರ್ಣತಾಮ್||

13076023a ಅಥ ಕ್ರುದ್ಧಂ ಮಹಾದೇವಂ ಪ್ರಜಾಪತಿರಭಾಷತ|

ಆದರೆ ಅಲ್ಲಿಂದ ಓಡಿಹೋಗಿ  ಎಲ್ಲಿಂದ ಉತ್ಪನ್ನರಾಗಿದ್ದರೋ ಆ ಚಂದ್ರಮನ ಶರಣು ಹೊಕ್ಕ ಗೋವುಗಳ ಬಣ್ಣವು ಬದಲಾಗದೇ ಮೊದಲಿನ ಹಾಗೆಯೇ ಇದ್ದಿತು. ಆಗ ಕ್ರುದ್ಧನಾಗಿದ್ದ ಮಹಾದೇವನಿಗೆ ಪ್ರಜಾಪತಿಯು ಹೇಳಿದನು:

13076023c ಅಮೃತೇನಾವಸಿಕ್ತಸ್ತ್ವಂ ನೋಚ್ಚಿಷ್ಟಂ ವಿದ್ಯತೇ ಗವಾಮ್||

13076024a ಯಥಾ ಹ್ಯಮೃತಮಾದಾಯ ಸೋಮೋ ವಿಷ್ಯಂದತೇ ಪುನಃ|

13076024c ತಥಾ ಕ್ಷೀರಂ ಕ್ಷರಂತ್ಯೇತಾ ರೋಹಿಣ್ಯೋಽಮೃತಸಂಭವಾಃ||

“ನಿನ್ನ ಮೇಲೆ ಅಮೃತದ ಬಿಂದುವೇ ಬಿದ್ದಿದೆ. ಗೋವಿನ ಹಾಲು ಕರುವು ಕುಡಿದಿದುದರಿಂದ ಎಂಜಲಾಗುವುದಿಲ್ಲ. ಸೋಮನು ಹೇಗೆ ಅಮೃತವನ್ನು ಸಂಗ್ರಹಿಸಿ ಅದನ್ನು ಮಳೆಯ ರೂಪದಲ್ಲಿ ನೀಡುತ್ತಾನೋ ಹಾಗೆ ರೋಹಿಣೀ ಗೋವುಗಳು ಅಮೃತದಿಂದ ಉತ್ಪನ್ನವಾದ ಹಾಲನ್ನು ನೀಡುತ್ತವೆ.

13076025a ನ ದುಷ್ಯತ್ಯನಿಲೋ ನಾಗ್ನಿರ್ನ ಸುವರ್ಣಂ ನ ಚೋದಧಿಃ|

13076025c ನಾಮೃತೇನಾಮೃತಂ ಪೀತಂ ವತ್ಸಪೀತಾ ನ ವತ್ಸಲಾ||

13076026a ಇಮಾಽಲ್ಲೋಕಾನ್ ಭರಿಷ್ಯಂತಿ ಹವಿಷಾ ಪ್ರಸ್ನವೇನ ಚ|

13076026c ಆಸಾಮೈಶ್ವರ್ಯಮಶ್ನೀಹಿ ಸರ್ವಾಮೃತಮಯಂ ಶುಭಮ್||

ವಾಯು, ಅಗ್ನಿ, ಸುವರ್ಣ, ಸಮುದ್ರ ಮತ್ತು ದೇವತೆಗಳ ಪಾನೀಯ ಅಮೃತ – ಇವುಗಳು ಹೇಗೆ ಉಚ್ಛಿಷ್ಟವಾಗುವುದಿಲ್ಲವೋ ಹಾಗೆ ಕರುಗಳು ಕುಡಿದರೆ ಆ ಕರುಗಳ ಮೇಲೆ ಗೋವಿನ ಪ್ರೀತಿಯಿರುವುದರಿಂದ ಉಚ್ಛಿಷ್ಟವಾಗುವುದಿಲ್ಲ. ಈ ಗೋವುಗಳು ತಮ್ಮ ಹಾಲು ಮತ್ತು ತುಪ್ಪದಿಂದ ಈ ಸಂಪೂರ್ಣ ಜಗತ್ತನ್ನು ಪಾಲಿಸುತ್ತವೆ. ಸರ್ವರೂ ಈ ಗೋವುಗಳಲ್ಲಿ ಮಂಗಲಕಾರೀ ಅಮೃತಮಯ ಹಾಲಿನ ಸಂಪತ್ತು ಇರಲೆಂದು ಆಶಿಸುತ್ತಾರೆ.”

13076027a ವೃಷಭಂ ಚ ದದೌ ತಸ್ಮೈ ಸಹ ತಾಭಿಃ ಪ್ರಜಾಪತಿಃ|

13076027c ಪ್ರಸಾದಯಾಮಾಸ ಮನಸ್ತೇನ ರುದ್ರಸ್ಯ ಭಾರತ||

ಭಾರತ! ಹೀಗೆ ಹೇಳಿ ಪ್ರಜಾಪತಿಯು ಗೋವುಗಳೊಂದಿಗೆ ಒಂದು ಹೋರಿಯನ್ನೂ ಕೊಟ್ಟು ರುದ್ರನ ಮನಸ್ಸನ್ನು ಪ್ರಸನ್ನಗೊಳಿಸಿದನು.

13076028a ಪ್ರೀತಶ್ಚಾಪಿ ಮಹಾದೇವಶ್ಚಕಾರ ವೃಷಭಂ ತದಾ|

13076028c ಧ್ವಜಂ ಚ ವಾಹನಂ ಚೈವ ತಸ್ಮಾತ್ಸ ವೃಷಭಧ್ವಜಃ||

ಪ್ರೀತನಾದ ಮಹಾದೇವನು ಆ ವೃಷಭವನ್ನು ತನ್ನ ಧ್ವಜ ಮತ್ತು ವಾಹನವನ್ನಾಗಿ ಮಾಡಿಕೊಂಡನು. ಅದರಿಂದ ಅವನು ವೃಷಭಧ್ವಜನಾದನು.

13076029a ತತೋ ದೇವೈರ್ಮಹಾದೇವಸ್ತದಾ ಪಶುಪತಿಃ ಕೃತಃ|

13076029c ಈಶ್ವರಃ ಸ ಗವಾಂ ಮಧ್ಯೇ ವೃಷಾಂಕ ಇತಿ ಚೋಚ್ಯತೇ[4]||

ಅನಂತರ ದೇವತೆಗಳು ಮಹಾದೇವನನ್ನು ಪಶುಪತಿಯನ್ನಾಗಿ ಮಾಡಿದರು. ಗೋವುಗಳ ಮಧ್ಯದಲ್ಲಿರುವ ಈಶ್ವರನನ್ನು ವೃಷಾಂಕ ಎಂದು ಕರೆದರು.

13076030a ಏವಮವ್ಯಗ್ರವರ್ಣಾನಾಂ ಕಪಿಲಾನಾಂ ಮಹೌಜಸಾಮ್|

13076030c ಪ್ರದಾನೇ ಪ್ರಥಮಃ ಕಲ್ಪಃ ಸರ್ವಾಸಾಮೇವ ಕೀರ್ತಿತಃ||

ಹೀಗೆ ಕಪಿಲ ಗೋವುಗಳು ಅತ್ಯಂತ ತೇಜಸ್ವಿನೀ ಮತ್ತು ಶಾಂತ ವರ್ಣದವರಾಗಿರುತ್ತವೆ. ಇದರಿಂದಲೇ ಕಪಿಲೆಯ ದಾನವನ್ನು ಎಲ್ಲ ಗೋದಾನಗಳಲ್ಲಿ ಪ್ರಥಮ ಸ್ಥಾನವನ್ನು ನೀಡಲಾಗಿದೆ.

13076031a ಲೋಕಜ್ಯೇಷ್ಠಾ ಲೋಕವೃತ್ತಿಪ್ರವೃತ್ತಾ

ರುದ್ರೋಪೇತಾಃ ಸೋಮವಿಷ್ಯಂದಭೂತಾಃ|

13076031c ಸೌಮ್ಯಾಃ ಪುಣ್ಯಾಃ ಕಾಮದಾಃ ಪ್ರಾಣದಾಶ್ಚ

ಗಾ ವೈ ದತ್ತ್ವಾ ಸರ್ವಕಾಮಪ್ರದಃ ಸ್ಯಾತ್||

ಗೋವುಗಳು ಲೋಕದಲ್ಲಿಯೇ ಜ್ಯೇಷ್ಠರು. ಲೋಕವೃತ್ತಿಯನ್ನು ನಡೆಸುವವರು. ರುದ್ರನು ಸದಾ ಅವರೊಂದಿಗೆ ಇರುತ್ತಾನೆ. ಸೋಮನ ಅಮೃತದಿಂದ ಉತ್ಪನ್ನರಾಗಿರುವುದರಿಂದ ಅವು ಸೌಮ್ಯರೂ, ಪುಣ್ಯರೂ, ಕಾಮಪ್ರದರೂ, ಪ್ರಾಣದರೂ ಆಗಿರುತ್ತಾರೆ. ಗೋವನ್ನು ದಾನಮಾಡುವುದರಿಂದ ಸರ್ವಕಾಮಗಳೂ ಪೂರೈಸುತ್ತವೆ.

13076032a ಇಮಂ ಗವಾಂ ಪ್ರಭವವಿಧಾನಮುತ್ತಮಂ

ಪಠನ್ಸದಾ ಶುಚಿರತಿಮಂಗಲಪ್ರಿಯಃ|

13076032c ವಿಮುಚ್ಯತೇ ಕಲಿಕಲುಷೇಣ ಮಾನವಃ

ಪ್ರಿಯಂ ಸುತಾನ್ಪಶುಧನಮಾಪ್ನುಯಾತ್ತಥಾ||

ಗೋವುಗಳ ಉತ್ಪತ್ತಿಯ ವಿಷಯಕವಾದ ಈ ಉತ್ತಮ ಕಥೆಯನ್ನು ಪಠಿಸಿದವನು ಅಪವಿತ್ರನಾಗಿದ್ದರೂ ಮಂಗಲಪ್ರಿಯನಾಗುತ್ತಾನೆ ಮತ್ತು ಕಲಿಯುಗದ ಎಲ್ಲ ದೋಷಗಳಿಂದಲೂ ಮುಕ್ತನಾಗುತ್ತಾನೆ. ಇಷ್ಟೇ ಅಲ್ಲದೇ ಅವನಿಗೆ ಪುತ್ರ, ಲಕ್ಷ್ಮಿ, ಧನ ಮತ್ತು ಪಶು ಮೊದಲಾದವುಗಳು ಸದಾ ಪ್ರಾಪ್ತವಾಗುತ್ತವೆ.

13076033a ಹವ್ಯಂ ಕವ್ಯಂ ತರ್ಪಣಂ ಶಾಂತಿಕರ್ಮ

ಯಾನಂ ವಾಸೋ ವೃದ್ಧಬಾಲಸ್ಯ ಪುಷ್ಟಿಮ್|

13076033c ಏತಾನ್ಸರ್ವಾನ್ಗೋಪ್ರದಾನೇ ಗುಣಾನ್ವೈ

ದಾತಾ ರಾಜನ್ನಾಪ್ನುಯಾದ್ವೈ ಸದೈವ||

ರಾಜನ್! ಗೋದಾನಮಾಡುವವನಿಗೆ ಹವ್ಯ, ಕವ್ಯ, ತರ್ಪಣ, ಮತ್ತು ಶಾಂತಿಕರ್ಮಗಳ ಫಲ ಹಾಗೂ ವಾಹನ, ವಸ್ತ್ರ, ಮತ್ತು ಬಾಲಕ-ವೃದ್ಧರ ಸಂತೋಷವೂ ಪ್ರಾಪ್ತವಾಗುತ್ತದೆ. ಇವೆಲ್ಲವೂ ಗೋದಾನದ ಗುಣಗಳು. ಗೋದಾನಮಾಡಿದವನು ಸದಾ ಇವೆಲ್ಲವನ್ನೂ ಪಡೆದುಕೊಳ್ಳುತ್ತಿರುತ್ತಾನೆ.””

13076034 ವೈಶಂಪಾಯನ ಉವಾಚ|

13076034a ಪಿತಾಮಹಸ್ಯಾಥ ನಿಶಮ್ಯ ವಾಕ್ಯಂ

ರಾಜಾ ಸಹ ಭ್ರಾತೃಭಿರಾಜಮೀಢಃ|

13076034c ಸೌವರ್ಣಕಾಂಸ್ಯೋಪದುಹಾಸ್ತತೋ ಗಾಃ

ಪಾರ್ಥೋ ದದೌ ಬ್ರಾಹ್ಮಣಸತ್ತಮೇಭ್ಯಃ||

ವೈಶಂಪಾಯನನು ಹೇಳಿದನು: “ಪಿತಾಮಹನ ಈ ಮಾತನ್ನು ಕೇಳಿ ರಾಜಾ ಆಜಮೀಢ ಪಾರ್ಥ ಯುಧಿಷ್ಠಿರನು ಸಹೋದರರೊಂದಿಗೆ ಶ್ರೇಷ್ಠ ಬ್ರಾಹ್ಮಣರಿಗೆ ಸುವರ್ಣದ ಹಾಲುಕರೆಯುವ ಪಾತ್ರೆಗಳೊಂದಿಗೆ ಗೋವುಗಳನ್ನು ನೀಡಿದನು.

13076035a ತಥೈವ ತೇಭ್ಯೋಽಭಿದದೌ ದ್ವಿಜೇಭ್ಯೋ

ಗವಾಂ ಸಹಸ್ರಾಣಿ ಶತಾನಿ ಚೈವ|

13076035c ಯಜ್ಞಾನ್ಸಮುದ್ದಿಶ್ಯ ಚ ದಕ್ಷಿಣಾರ್ಥೇ

ಲೋಕಾನ್ವಿಜೇತುಂ ಪರಮಾಂ ಚ ಕೀರ್ತಿಮ್||

ಇದೇ ಪ್ರಕಾರವಾಗಿ ಯಜ್ಞದಕ್ಷಿಣೆಗಾಗಿ, ಪುಣ್ಯಲೋಕಗಳ ವಿಜಯಪ್ರಾಪ್ತಿಗಾಗಿ ಹಾಗೂ ಸಂಸಾರದಲ್ಲಿ ಉತ್ತಮ ಕೀರ್ತಿಗಾಗಿ ರಾಜನು ಬ್ರಾಹ್ಮಣರಿಗೆ ನೂರಾರು ಸಹಸ್ರಾರು ಗೋವುಗಳನ್ನು ದಾನಮಾಡಿದನು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಗೋಪ್ರಭವಕಥನೇ ಷಟ್ಸಪ್ತತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಗೋಪ್ರಭವಕಥನ ಎನ್ನುವ ಎಪ್ಪತ್ತಾರನೇ ಅಧ್ಯಾಯವು.

[1] ತಾನ್ನ ಗಚ್ಛತಿ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[2] ಕಪಿಲೆ.

[3] ಯಜ್ಞೈರವಾಪ್ಯತೇ ಸೋಮಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[4] ವೃಷಭಾಂಕಃ ಪ್ರಕೀರ್ತಿತಃ| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

Comments are closed.