Anushasana Parva: Chapter 47

ಅನುಶಾಸನ ಪರ್ವ: ದಾನಧರ್ಮ ಪರ್ವ

೪೭

ರಿಕ್ತವಿಭಾಗ

ಬ್ರಾಹ್ಮಣ ಮತ್ತು ಅನ್ಯ ಜಾತಿಗಳಲ್ಲಿ ದಾಯಾಭಾಗ ವಿಧಿಯ ವರ್ಣನೆ (೧-೬೧).

13047001 ಯುಧಿಷ್ಠಿರ ಉವಾಚ|

13047001a ಸರ್ವಶಾಸ್ತ್ರವಿಧಾನಜ್ಞ ರಾಜಧರ್ಮಾರ್ಥವಿತ್ತಮ|

13047001c ಅತೀವ ಸಂಶಯಚ್ಚೇತ್ತಾ ಭವಾನ್ವೈ ಪ್ರಥಿತಃ ಕ್ಷಿತೌ||

13047002a ಕಶ್ಚಿತ್ತು ಸಂಶಯೋ ಮೇಽಸ್ತಿ ತನ್ಮೇ ಬ್ರೂಹಿ ಪಿತಾಮಹ|

13047002c ಅಸ್ಯಾಮಾಪದಿ ಕಷ್ಟಾಯಾಮನ್ಯಂ ಪೃಚ್ಚಾಮ ಕಂ ವಯಮ್||

ಯುಧಿಷ್ಠಿರನು ಹೇಳಿದನು: “ಸರ್ವಶಾಸ್ತ್ರವಿಧಾನಜ್ಞ! ರಾಜಧರ್ಮಾರ್ಥವಿತ್ತಮ! ಪಿತಾಮಹ! ಈ ಭೂಮಂಡಲದಲ್ಲಿ ಸಂಪೂರ್ಣಸಂಶಯಗಳಿಗೆ ಸರ್ವಥಾ ನಿವಾರಣೆಯನ್ನು ನೀಡುವುದರಲ್ಲಿ ನೀನು ಪ್ರಸಿದ್ಧನಾಗಿದ್ದೀಯೆ. ನನ್ನಲ್ಲಿ ಒಂದು ಸಂಶಯವಿದೆ. ಅದನ್ನು ಬಗೆಹರಿಸು. ಈಗ ಒದಗಿರುವ ಈ ಸಂಶಯದ ಕುರಿತು ಬೇರೆ ಯಾರನ್ನೂ ಕೇಳುವುದಿಲ್ಲ.

13047003a ಯಥಾ ನರೇಣ ಕರ್ತವ್ಯಂ ಯಶ್ಚ ಧರ್ಮಃ ಸನಾತನಃ|

13047003c ಏತತ್ಸರ್ವಂ ಮಹಾಬಾಹೋ ಭವಾನ್ವ್ಯಾಖ್ಯಾತುಮರ್ಹತಿ||

ಮಹಾಬಾಹೋ! ಸನಾತನ ಧರ್ಮದಂತೆ ನರನು ಮಾಡಬೇಕಾದ ಕರ್ತ್ಯವ್ಯವು ಯಾವುದು? ಇವೆಲ್ಲವನ್ನೂ ನೀನು ವಿಸ್ತರಿಸಿ ಹೇಳಬೇಕು.

13047004a ಚತಸ್ರೋ ವಿಹಿತಾ ಭಾರ್ಯಾ ಬ್ರಾಹ್ಮಣಸ್ಯ ಪಿತಾಮಹ|

13047004c ಬ್ರಾಹ್ಮಣೀ ಕ್ಷತ್ರಿಯಾ ವೈಶ್ಯಾ ಶೂದ್ರಾ ಚ ರತಿಮಿಚ್ಚತಃ||

ಪಿತಾಮಹ! ಬ್ರಾಹ್ಮಣನಿಗೆ ನಾಲ್ಕೂ ಜಾತಿಯ ಪತ್ನಿಯರು ವಿಹಿತರಾಗಿದ್ದಾರೆ – ಬ್ರಾಹ್ಮಣೀ, ಕ್ಷತ್ರಿಯಾ, ವೈಶ್ಯಾ ಮತ್ತು ಶೂದ್ರಾ. ಇವರಲ್ಲಿ ಶೂದ್ರ ಪತ್ನಿಯು ಕೇವಲ ರತಿಸುಖಕ್ಕೆಂದು ವಿಹಿತಳಾಗಿದ್ದಾಳೆ.

13047005a ತತ್ರ ಜಾತೇಷು ಪುತ್ರೇಷು ಸರ್ವಾಸಾಂ ಕುರುಸತ್ತಮ|

13047005c ಆನುಪೂರ್ವ್ಯೇಣ ಕಸ್ತೇಷಾಂ ಪಿತ್ರ್ಯಂ ದಾಯಾದ್ಯಮರ್ಹತಿ||

ಕುರುಸತ್ತಮ! ಇವರಲ್ಲಿ ಹುಟ್ಟುವ ಎಲ್ಲ ಪುತ್ರರಲ್ಲಿ ಯಾರು ಕ್ರಮಶಃ ಪಿತೃಧನವನ್ನು ಪಡೆದುಕೊಳ್ಳುವ ಅಧಿಕಾರವನ್ನು ಹೊಂದಿರುತ್ತಾರೆ?

13047006a ಕೇನ ವಾ ಕಿಂ ತತೋ ಹಾರ್ಯಂ ಪಿತೃವಿತ್ತಾತ್ಪಿತಾಮಹ|

13047006c ಏತದಿಚ್ಚಾಮಿ ಕಥಿತಂ ವಿಭಾಗಸ್ತೇಷು ಯಃ ಸ್ಮೃತಃ||

ಪಿತಾಮಹ! ಯಾವ ಪುತ್ರನಿಗೆ ಪಿತನ ಧನದಲ್ಲಿ ಯಾವ ಭಾಗವು ದೊರೆಯಬೇಕು? ಅವರಿಗೆ ಯಾವರೀತಿಯಲ್ಲಿ ವಿಭಾಗವನ್ನು ಮಾಡಲಾಗಿದೆಯೋ ಅದನ್ನು ಕೇಳಲು ಬಯಸುತ್ತೇನೆ.”

13047007 ಭೀಷ್ಮ ಉವಾಚ|

13047007a ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಸ್ತ್ರಯೋ ವರ್ಣಾ ದ್ವಿಜಾತಯಃ|

13047007c ಏತೇಷು ವಿಹಿತೋ ಧರ್ಮೋ ಬ್ರಾಹ್ಮಣಸ್ಯ ಯುಧಿಷ್ಠಿರ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಈ ಮೂರು ವರ್ಣದವರು ದ್ವಿಜಾತಿಗಳು. ಆದುದರಿಂದ ಈ ಮೂರು ವರ್ಣದವರೊಡನೆ ಮಾತ್ರ ಬ್ರಾಹ್ಮಣನಿಗೆ ವಿವಾಹವು ಧರ್ಮತಃ ವಿಹಿತವಾಗಿದೆ.

13047008a ವೈಷಮ್ಯಾದಥ ವಾ ಲೋಭಾತ್ಕಾಮಾದ್ವಾಪಿ ಪರಂತಪ|

13047008c ಬ್ರಾಹ್ಮಣಸ್ಯ ಭವೇಚ್ಚೂದ್ರಾ ನ ತು ದೃಷ್ಟಾಂತತಃ ಸ್ಮೃತಾ||

ಪರಂತಪ! ಅನ್ಯಾಯದಲ್ಲಿ ಅಥವಾ ಲೋಭದಿಂದ ಅಥವಾ ಕಾಮದಿಂದ ಶೂದ್ರಳು ಬ್ರಾಹ್ಮಣನ ಪತ್ನಿಯಾಗಬಹುದೇನೋ. ಆದರೆ ಸ್ಮೃತಿಗಳಲ್ಲಿ ಅದರ ದೃಷ್ಟಾಂತವಿಲ್ಲ.

13047009a ಶೂದ್ರಾಂ ಶಯನಮಾರೋಪ್ಯ ಬ್ರಾಹ್ಮಣಃ ಪೀಡಿತೋ ಭವೇತ್|

13047009c ಪ್ರಾಯಶ್ಚಿತ್ತೀಯತೇ ಚಾಪಿ ವಿಧಿದೃಷ್ಟೇನ ಹೇತುನಾ||

13047010a ತತ್ರ ಜಾತೇಷ್ವಪತ್ಯೇಷು ದ್ವಿಗುಣಂ ಸ್ಯಾದ್ಯುಧಿಷ್ಠಿರ|

ಶೂದ್ರಳನ್ನು ಶಯನಕ್ಕೇರಿಸಿಕೊಂಡ ಬ್ರಾಹ್ಮಣನು ಪೀಡಿತನಾಗುತ್ತಾನೆ. ವಿಧಿದೃಷ್ಟಿಯಲ್ಲಿ ಅವನು ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕಾಗುತ್ತದೆ. ಅವಳಲ್ಲಿ ಸಂತಾನವನ್ನು ಪಡೆದರೆ ಅವನ ಪಾಪವು ದ್ವಿಗುಣವಾಗುತ್ತದೆ ಮತ್ತು ಅವನು ಪ್ರಾಯಶ್ಚಿತ್ತವನ್ನೂ ಎರಡುಪಟ್ಟು ಮಾಡಬೇಕಾಗುತ್ತದೆ.

13047010c ಅತಸ್ತೇ ನಿಯಮಂ ವಿತ್ತೇ ಸಂಪ್ರವಕ್ಷ್ಯಾಮಿ ಭಾರತ||

13047011a ಲಕ್ಷಣ್ಯೋ ಗೋವೃಷೋ ಯಾನಂ ಯತ್ಪ್ರಧಾನತಮಂ ಭವೇತ್|

13047011c ಬ್ರಾಹ್ಮಣ್ಯಾಸ್ತದ್ಧರೇತ್ಪುತ್ರ ಏಕಾಂಶಂ ವೈ ಪಿತುರ್ಧನಾತ್||

13047012a ಶೇಷಂ ತು ದಶಧಾ ಕಾರ್ಯಂ ಬ್ರಾಹ್ಮಣಸ್ವಂ ಯುಧಿಷ್ಠಿರ|

13047012c ತತ್ರ ತೇನೈವ ಹರ್ತವ್ಯಾಶ್ಚತ್ವಾರೋಽಂಶಾಃ ಪಿತುರ್ಧನಾತ್||

ಭಾರತ! ಈಗ ವಿತ್ತ ವಿಭಾಗದ ಕುರಿತಾದ ನಿಯಮವನ್ನು ಹೇಳುತ್ತೇನೆ. ಬ್ರಾಹ್ಮಣ ಪತ್ನಿಯಲ್ಲಿ ಹುಟ್ಟಿದ ಪುತ್ರನು ಪಿತುರ್ಧನದ ಅತ್ಯಂತ ಪ್ರಧಾನವಾದ ಲಕ್ಷಣಯುಕ್ತ ಹೋರಿ, ಯಾನ, ಮನೆ ಮೊದಲಾದವುಗಳನ್ನು ಪಡೆದುಕೊಳ್ಳುತ್ತಾನೆ. ಯುಧಿಷ್ಠಿರ! ಬ್ರಾಹ್ಮಣನ ಉಳಿದ ವಿತ್ತವನ್ನು ಹತ್ತು ಭಾಗಗಳನ್ನಾಗಿ ಮಾಡಬೇಕು. ಅ ಪಿತುರ್ದನದ ಪುನಃ ನಾಲ್ಕು ಭಾಗಗಳೂ ಬ್ರಾಹ್ಮಣಿಯಲ್ಲಿ ಹುಟ್ಟಿದ ಪುತ್ರನಿಗೇ ಸೇರುತ್ತವೆ.

13047013a ಕ್ಷತ್ರಿಯಾಯಾಸ್ತು ಯಃ ಪುತ್ರೋ ಬ್ರಾಹ್ಮಣಃ ಸೋಽಪ್ಯಸಂಶಯಃ|

13047013c ಸ ತು ಮಾತೃವಿಶೇಷೇಣ ತ್ರೀನಂಶಾನ್ ಹರ್ತುಮರ್ಹತಿ||

ಕ್ಷತ್ರಿಣಿಯ ಪುತ್ರನೂ ಬ್ರಾಹ್ಮಣನೇ ಎನ್ನುವುದರಲ್ಲಿ ಸಂಶಯವಿಲ್ಲ. ತಾಯಿಯ ವಿಶೇಷದಿಂದ ಅವನು ಪಿತೃಧನದ ಮೂರು ಭಾಗಗಳಿಗೆ ಅಧಿಕಾರಿಯಾಗುತ್ತಾನೆ.

13047014a ವರ್ಣೇ ತೃತೀಯೇ ಜಾತಸ್ತು ವೈಶ್ಯಾಯಾಂ ಬ್ರಾಹ್ಮಣಾದಪಿ|

13047014c ದ್ವಿರಂಶಸ್ತೇನ ಹರ್ತವ್ಯೋ ಬ್ರಾಹ್ಮಣಸ್ವಾದ್ಯುಧಿಷ್ಠಿರ||

ಯುಧಿಷ್ಠಿರ! ಮೂರನೆ ವರ್ಣದವಳಾದ ವೈಶ್ಯೆಯಲ್ಲಿ ಹುಟ್ಟಿದವನೂ ಕೂಡ ಬ್ರಾಹ್ಮಣನೇ ಆದರೂ ಅವನಿಗೆ ಬ್ರಾಹ್ಮಣ ಪಿತೃಧನದ ಎರಡು ಅಂಶಗಳು ಮಾತ್ರ ದೊರೆಯುತ್ತದೆ.

13047015a ಶೂದ್ರಾಯಾಂ ಬ್ರಾಹ್ಮಣಾಜ್ಜಾತೋ ನಿತ್ಯಾದೇಯಧನಃ ಸ್ಮೃತಃ|

13047015c ಅಲ್ಪಂ ವಾಪಿ ಪ್ರದಾತವ್ಯಂ ಶೂದ್ರಾಪುತ್ರಾಯ ಭಾರತ||

ಭಾರತ! ಬ್ರಾಹ್ಮಣನಿಗೆ ಶೂದ್ರಳಲ್ಲಿ ಹುಟ್ಟಿದವನಿಗೆ ಧನವನ್ನು ಕೊಡಬೇಕಾಗಿಲ್ಲ ಎಂಬ ವಿಧಾನವಿದ್ದರೂ ಶೂತ್ರಪುತ್ರನಿಗೆ ಅಲ್ಪವನ್ನಾದರೂ ಅಥವಾ ಒಂದಂಶವನ್ನಾದರೂ ಕೊಡಬೇಕು.

13047016a ದಶಧಾ ಪ್ರವಿಭಕ್ತಸ್ಯ ಧನಸ್ಯೈಷ ಭವೇತ್ಕ್ರಮಃ|

13047016c ಸವರ್ಣಾಸು ತು ಜಾತಾನಾಂ ಸಮಾನ್ಭಾಗಾನ್ಪ್ರಕಲ್ಪಯೇತ್||

ಹತ್ತು ಭಾಗಗಳನ್ನಾಗಿ ವಿಭಜಿಸಿದುದನ್ನು ಹಂಚುವ ಕ್ರಮವು ಇದು. ಆದರೆ ಸಮಾನ ವರ್ಣದ ಸ್ತ್ರೀಯಲ್ಲಿ ಜನಿಸಿದ ಪುತ್ರರೆಲ್ಲರಿಗೆ ಸಮನಾಗಿ ಹಂಚಬೇಕು.

13047017a ಅಬ್ರಾಹ್ಮಣಂ ತು ಮನ್ಯಂತೇ ಶೂದ್ರಾಪುತ್ರಮನೈಪುಣಾತ್|

13047017c ತ್ರಿಷು ವರ್ಣೇಷು ಜಾತೋ ಹಿ ಬ್ರಾಹ್ಮಣಾದ್ಬ್ರಾಹ್ಮಣೋ ಭವೇತ್||

ಬ್ರಾಹ್ಮಣನಿಗೆ ಶೂದ್ರಳಲ್ಲಿ ಹುಟ್ಟಿದ ಮಗನನ್ನು ನೈಪುಣ್ಯತೆಯಿಲ್ಲದ ಕಾರಣ ಅಬ್ರಾಹ್ಮಣನೆಂದು ಹೇಳುತ್ತಾರೆ. ಉಳಿದ ಮೂರು ವರ್ಣದವರಲ್ಲಿ ಬ್ರಾಹ್ಮಣನಿಂದ ಹುಟ್ಟಿದ ಮಕ್ಕಳು ಬ್ರಾಹ್ಮಣರೇ ಆಗಿರುತ್ತಾರೆ.

13047018a ಸ್ಮೃತಾ ವರ್ಣಾಶ್ಚ ಚತ್ವಾರಃ ಪಂಚಮೋ ನಾಧಿಗಮ್ಯತೇ|

13047018c ಹರೇತ್ತು ದಶಮಂ ಭಾಗಂ ಶೂದ್ರಾಪುತ್ರಃ ಪಿತುರ್ಧನಾತ್||

ನಾಲ್ಕೇ ವರ್ಣಗಳಿವೆ. ಐದನೆಯದು ಇಲ್ಲ. ಶ್ರೂದಳ ಮಗನು ಬ್ರಾಹ್ಮಣ ಪಿತನ ಧನದ ಹತ್ತನೇ ಒಂದು ಭಾಗವನ್ನು ಪಡೆದುಕೊಳ್ಳಬಹುದು.

13047019a ತತ್ತು ದತ್ತಂ ಹರೇತ್ಪಿತ್ರಾ ನಾದತ್ತಂ ಹರ್ತುಮರ್ಹತಿ|

13047019c ಅವಶ್ಯಂ ಹಿ ಧನಂ ದೇಯಂ ಶೂದ್ರಾಪುತ್ರಾಯ ಭಾರತ||

ಆದರೂ ಪಿತನು ಕೊಟ್ಟರೆ ಮಾತ್ರ ತೆಗೆದುಕೊಳ್ಳಬೇಕು. ಕೊಡದಿದ್ದರೆ ತೆಗೆದುಕೊಳ್ಳಬಾರದು. ಭಾರತ! ಶೂದ್ರಪುತ್ರನಿಗೆ ಅವಶ್ಯವಾಗಿಯೂ ಧನವನ್ನು ನೀಡಬೇಕು.

13047020a ಆನೃಶಂಸ್ಯಂ ಪರೋ ಧರ್ಮ ಇತಿ ತಸ್ಮೈ ಪ್ರದೀಯತೇ|

13047020c ಯತ್ರ ತತ್ರ ಸಮುತ್ಪನ್ನೋ ಗುಣಾಯೈವೋಪಕಲ್ಪತೇ||

ದಯೆಯು ಪರಮ ಧರ್ಮ ಎಂದು ತಿಳಿದು ಅವನಿಗೆ ಕೊಡಲಾಗುತ್ತದೆ. ದಯೆಯು ಎಲ್ಲೆಲ್ಲಿ ಉತ್ಪನ್ನವಾಗುತ್ತದೆಯೋ ಅದು ಗುಣಕಾರಕವೇ ಆಗುತ್ತದೆ.

13047021a ಯದಿ ವಾಪ್ಯೇಕಪುತ್ರಃ ಸ್ಯಾದಪುತ್ರೋ ಯದಿ ವಾ ಭವೇತ್|

13047021c ನಾಧಿಕಂ ದಶಮಾದ್ದದ್ಯಾಚ್ಚೂದ್ರಾಪುತ್ರಾಯ ಭಾರತ||

ಭಾರತ! ಬ್ರಾಹ್ಮಣನಿಗೆ ಅನ್ಯ ವರ್ಣದ ಸ್ತ್ರೀಯಲ್ಲಿ ಪುತ್ರನಿರಲಿ ಅಥವಾ ಇಲ್ಲದಿರಲಿ, ಶೂದ್ರಪುತ್ರನಿಗೆ ಹತ್ತರಲ್ಲಿ ಒಂದು ಭಾಗಕ್ಕಿಂತ ಹೆಚ್ಚನ್ನು ಕೊಡಬಾರದು.

13047022a ತ್ರೈವಾರ್ಷಿಕಾದ್ಯದಾ ಭಕ್ತಾದಧಿಕಂ ಸ್ಯಾದ್ದ್ವಿಜಸ್ಯ ತು|

13047022c ಯಜೇತ ತೇನ ದ್ರವ್ಯೇಣ ನ ವೃಥಾ ಸಾಧಯೇದ್ಧನಮ್||

ಒಂದುವೇಳೆ ದ್ವಿಜನಲ್ಲಿ ಮೂರುವರ್ಷ ಜೀವನ ನಿರ್ವಾಹಮಾಡುವುದಕ್ಕೆ ಬೇಕಾಗುವುದಕ್ಕಿಂತಲೂ ಹೆಚ್ಚಿನ ಧನವು ಇದ್ದರೆ ಆ ದ್ರವ್ಯದಿಂದ ಯಜ್ಞವನ್ನು ಮಾಡಬೇಕು. ವೃಥಾ ಧನವನ್ನು ಕೂಡಿಟ್ಟುಕೊಂಡಿರಬಾರದು.

13047023a ತ್ರಿಸಾಹಸ್ರಪರೋ ದಾಯಃ ಸ್ತ್ರಿಯೋ ದೇಯೋ ಧನಸ್ಯ ವೈ|

13047023c ತಚ್ಚ ಭರ್ತ್ರಾ ಧನಂ ದತ್ತಂ ನಾದತ್ತಂ ಭೋಕ್ತುಮರ್ಹತಿ||

ಮೂರುಸಾವಿರಕ್ಕಿಂತ ಹೆಚ್ಚು ಧನವನ್ನು ಸ್ತ್ರೀಗೆ ಕೊಡಬಾರದು. ಪತಿಯು ಕೊಟ್ಟರೂ ಅಥವಾ ಕೊಡದಿದ್ದರೂ ಅವಳು ಅಷ್ಟು ಧನವನ್ನು ಭೋಗಿಸಬಹುದು.

13047024a ಸ್ತ್ರೀಣಾಂ ತು ಪತಿದಾಯಾದ್ಯಮುಪಭೋಗಫಲಂ ಸ್ಮೃತಮ್|

13047024c ನಾಪಹಾರಂ ಸ್ತ್ರಿಯಃ ಕುರ್ಯುಃ ಪತಿವಿತ್ತಾತ್ಕಥಂ ಚನ||

ಸ್ತ್ರೀಗೆ ದೊರೆಯುವ ಪತಿಯ ಧನದ ಹಿಸೆಯು ಅವಳ ಉಪಭೋಗಕ್ಕೆಂದೇ ಹೇಳಲಾಗಿದೆ. ಸ್ತ್ರೀಧನದ ರೂಪದಲ್ಲಿ ಅವಳ ಪಾಲಿಗಾದ ಪತಿಯ ಧನವನ್ನು ಬೇರೆ ಯಾರೂ, ಮಕ್ಕಳೂ ಕೂಡ, ತೆಗೆದುಕೊಳ್ಳಬಾರದು.

13047025a ಸ್ತ್ರಿಯಾಸ್ತು ಯದ್ಭವೇದ್ವಿತ್ತಂ ಪಿತ್ರಾ ದತ್ತಂ ಯುಧಿಷ್ಠಿರ|

13047025c ಬ್ರಾಹ್ಮಣ್ಯಾಸ್ತದ್ಧರೇತ್ಕನ್ಯಾ ಯಥಾ ಪುತ್ರಸ್ತಥಾ ಹಿ ಸಾ|

13047025e ಸಾ ಹಿ ಪುತ್ರಸಮಾ ರಾಜನ್ವಿಹಿತಾ ಕುರುನಂದನ||

ಯುಧಿಷ್ಠಿರ! ಒಂದು ವೇಳೆ ಆ ಸ್ತ್ರೀಗೆ ಅವಳ ತಂದೆಯು ಕೊಟ್ಟ ಧನವಿದ್ದರೆ ಅದು ಆ ಬ್ರಾಹ್ಮಣಿಯ ಮಗಳಿಗೆ ಹೋಗುತ್ತದೆ. ಏಕೆಂದರೆ ಮಗನು ಹೇಗಿದ್ದಾನೋ ಹಾಗೆ ಮಗಳೂ ಕೂಡ. ರಾಜನ್! ಕುರುನಂದನ! ಪುತ್ರಿಯು ಪುತ್ರನ ಸಮಾನಳು ಎನ್ನುವುದು ಶಾಸ್ತ್ರೋಕ್ತ ವಿಧಾನವು.

13047026a ಏವಮೇತತ್ಸಮುದ್ದಿಷ್ಟಂ ಧರ್ಮೇಷು ಭರತರ್ಷಭ|

13047026c ಏತದ್ಧರ್ಮಮನುಸ್ಮೃತ್ಯ ನ ವೃಥಾ ಸಾಧಯೇದ್ಧನಮ್||

ಭರತರ್ಷಭ! ಹೀಗೆ ಇದೇ ಧನದ ವಿಭಜನದ ಧರ್ಮಯುಕ್ತ ಪ್ರಣಾಲೀ ಎಂದು ಹೇಳಲಾಗಿದೆ. ಈ ಧರ್ಮದ ಚಿಂತನ ಮತ್ತು ಅನುಸ್ಮರಣಮಾಡುತ್ತಲೇ ಧನದ ಸಂಪಾದನೆ ಮತ್ತು ಉಳಿತಾಯಗಳನ್ನು ಮಾಡಬೇಕು. ವೃಥಾ ಧನವನ್ನು ಸಂಗ್ರಹಿಸಬಾರದು.”

13047027 ಯುಧಿಷ್ಠಿರ ಉವಾಚ|

13047027a ಶೂದ್ರಾಯಾಂ ಬ್ರಾಹ್ಮಣಾಜ್ಜಾತೋ ಯದ್ಯದೇಯಧನಃ ಸ್ಮೃತಃ|

13047027c ಕೇನ ಪ್ರತಿವಿಶೇಷೇಣ ದಶಮೋಽಪ್ಯಸ್ಯ ದೀಯತೇ||

ಯುಧಿಷ್ಠಿರನು ಹೇಳಿದನು: “ಬ್ರಾಹ್ಮಣನಿಗೆ ಶೂದ್ರಳಲ್ಲಿ ಹುಟ್ಟಿದವನಿಗೆ ಧನವನ್ನು ಕೊಡಬಾರದೆಂದು ತಿಳಿದಿದ್ದರೂ ಯಾವ ವಿಶೇಷ ಕಾರಣದಿಂದ ಅವನಿಗೆ ಪಿತೃಧನದ ಹತ್ತನೇ ಒಂದು ಭಾಗವನ್ನು ನೀಡುತ್ತಾರೆ?

13047028a ಬ್ರಾಹ್ಮಣ್ಯಾಂ ಬ್ರಾಹ್ಮಣಾಜ್ಜಾತೋ ಬ್ರಾಹ್ಮಣಃ ಸ್ಯಾನ್ನ ಸಂಶಯಃ|

13047028c ಕ್ಷತ್ರಿಯಾಯಾಂ ತಥೈವ ಸ್ಯಾದ್ವೈಶ್ಯಾಯಾಮಪಿ ಚೈವ ಹಿ||

ಬ್ರಾಹ್ಮಣಿಯಲ್ಲಿ ಬ್ರಾಹ್ಮಣನಿಗೆ ಹುಟ್ಟಿದ ಮಗನು ಬ್ರಾಹ್ಮಣನೇ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಕ್ಷತ್ರಿಯೆಯಲ್ಲಿ ಮತ್ತು ವೈಶ್ಯೆಯಲ್ಲಿ ಹುಟ್ಟಿದ ಮಕ್ಕಳೂ ಬ್ರಾಹ್ಮಣರೇ ಆಗುತ್ತಾರೆ.

13047029a ಕಸ್ಮಾತ್ತೇ ವಿಷಮಂ ಭಾಗಂ ಭಜೇರನ್ನೃಪಸತ್ತಮ|

13047029c ಯದಾ ಸರ್ವೇ ತ್ರಯೋ ವರ್ಣಾಸ್ತ್ವಯೋಕ್ತಾ ಬ್ರಾಹ್ಮಣಾ ಇತಿ||

ನೃಪಸತ್ತಮ! ಆ ಮೂರು ವರ್ಣದ ಸ್ತ್ರೀಯರಲ್ಲಿ ಹುಟ್ಟಿದ ಎಲ್ಲರೂ ಬ್ರಾಹ್ಮಣರೇ ಎಂದು ಹೇಳಿದ ಮೇಲೆ, ಅವರಿಗೆ ಸಮಭಾಗವು ಏಕೆ ದೊರೆಯುವುದಿಲ್ಲ?”

13047030 ಭೀಷ್ಮ ಉವಾಚ|

13047030a ದಾರಾ ಇತ್ಯುಚ್ಯತೇ ಲೋಕೇ ನಾಮ್ನೈಕೇನ ಪರಂತಪ|

13047030c ಪ್ರೋಕ್ತೇನ ಚೈಕನಾಮ್ನಾಯಂ ವಿಶೇಷಃ ಸುಮಹಾನ್ಭವೇತ್||

ಭೀಷ್ಮನು ಹೇಳಿದನು: “ಪರಂತಪ! ಲೋಕದಲ್ಲಿ ಸ್ತ್ರೀಯನ್ನು ದಾರಾ[1] ಎಂಬ ಇನ್ನೊಂದು ಹೆಸರಿನಿಂದಲೂ ಕರೆಯುತ್ತಾರೆ. ಹೀಗೆ ಕರೆಯಲ್ಪಡುವ ಹೆಸರಿನಿಂದಲೇ ಅವರಲ್ಲಿ ಹುಟ್ಟುವ ಮಕ್ಕಳಲ್ಲಿ ಮಹಾ ವ್ಯತ್ಯಾಸಗಳು ಒಂಟಾಗುತ್ತವೆ.

13047031a ತಿಸ್ರಃ ಕೃತ್ವಾ ಪುರೋ ಭಾರ್ಯಾಃ ಪಶ್ಚಾದ್ವಿಂದೇತ ಬ್ರಾಹ್ಮಣೀಮ್|

13047031c ಸಾ ಜ್ಯೇಷ್ಠಾ ಸಾ ಚ ಪೂಜ್ಯಾ ಸ್ಯಾತ್ಸಾ ಚ ತಾಭ್ಯೋ ಗರೀಯಸೀ||

ಒಂದು ವೇಳೆ ಆ ಬ್ರಾಹ್ಮಣನು ಮೊದಲು ಮೂರುವರ್ಣದವರನ್ನು ಭಾರ್ಯೆಯರನ್ನಾಗಿ ಮಾಡಿಕೊಂಡು ನಂತರ ಬ್ರಾಹ್ಮಣಿಯನ್ನು ಮದುವೆಯಾದರೂ ಕೂಡ ಆ ಬ್ರಾಹ್ಮಣಿಯೇ ಉಳಿದ ಭಾರ್ಯೆಯರಿಗಿಂತ ಹಿರಿಯಳೂ, ಪೂಜ್ಯಳೂ[2] ಮತ್ತು ಹೆಚ್ಚಿನವಳು[3] ಆಗುತ್ತಾಳೆ.

13047032a ಸ್ನಾನಂ ಪ್ರಸಾಧನಂ ಭರ್ತುರ್ದಂತಧಾವನಮಂಜನಮ್|

13047032c ಹವ್ಯಂ ಕವ್ಯಂ ಚ ಯಚ್ಚಾನ್ಯದ್ಧರ್ಮಯುಕ್ತಂ ಭವೇದ್ ಗೃಹೇ||

13047033a ನ ತಸ್ಯಾಂ ಜಾತು ತಿಷ್ಠಂತ್ಯಾಮನ್ಯಾ ತತ್ಕರ್ತುಮರ್ಹತಿ|

13047033c ಬ್ರಾಹ್ಮಣೀ ತ್ವೇವ ತತ್ಕುರ್ಯಾದ್ಬ್ರಾಹ್ಮಣಸ್ಯ ಯುಧಿಷ್ಠಿರ||

ಯುಧಿಷ್ಠಿರ! ಪತಿಗೆ ಸ್ನಾನಮಾಡಿಸುವುದು, ವಸ್ತ್ರಾಲಂಕಾರಗಳನ್ನು ಕೊಡುವುದು, ಹಲ್ಲುಉಜ್ಜಲು ಸಾಧನಗಳನ್ನು ಮಾಡಿಕೊಡುವುದು, ಹವ್ಯ (ದೇವತಾಪೂಜೆ) -ಕವ್ಯ (ಶ್ರಾದ್ಧಾದಿ ಪಿತೃಕಾರ್ಯಗಳು) ಗಳಲ್ಲಿ ಮತ್ತು ಮನೆಯಲ್ಲಿ ನಡೆಯುವ ಅನ್ಯ ಬ್ರಾಹ್ಮಣ ಧರ್ಮಕರ್ಮಗಳಲ್ಲಿ ಬ್ರಾಹ್ಮಣಿಯೇ ಅವನಿಗೆ ಯೋಗದಾನಮಾಡಬೇಕು. ಅವಳು ಜೀವಿತವಾಗಿರುವಾಗಲೇ ಬೇರೆ ಯಾವ ವರ್ಣದವರಿಗೂ ಇವುಗಳನ್ನು ಮಾಡುವ ಅಧಿಕಾರವಿಲ್ಲ.    

13047034a ಅನ್ನಂ ಪಾನಂ ಚ ಮಾಲ್ಯಂ ಚ ವಾಸಾಂಸ್ಯಾಭರಣಾನಿ ಚ|

13047034c ಬ್ರಾಹ್ಮಣ್ಯೈ ತಾನಿ ದೇಯಾನಿ ಭರ್ತುಃ ಸಾ ಹಿ ಗರೀಯಸೀ||

ಪತಿಗೆ ಅನ್ನ, ಪಾನ, ಮಾಲೆ, ವಸ್ತ್ರ-ಆಭರಣಗಳು ಇವುಗಳನ್ನು ಕೊಡುವುದಕ್ಕೆ ಬ್ರಾಹ್ಮಣಿಯೇ ಅಧಿಕಾರಿಯಾಗುತ್ತಾಳೆ.

13047035a ಮನುನಾಭಿಹಿತಂ ಶಾಸ್ತ್ರಂ ಯಚ್ಚಾಪಿ ಕುರುನಂದನ|

13047035c ತತ್ರಾಪ್ಯೇಷ ಮಹಾರಾಜ ದೃಷ್ಟೋ ಧರ್ಮಃ ಸನಾತನಃ||

ಕುರುನಂದನ! ಮಹಾರಾಜ! ಪ್ರತಿಪಾದಿತವಾಗಿರುವ ಮನುವಿನ ಶಾಸ್ತ್ರದಲ್ಲಿಯೂ ಇದೇ ಸನಾತನ ಧರ್ಮವೆಂದು ಹೇಳಲಾಗಿದೆ.

13047036a ಅಥ ಚೇದನ್ಯಥಾ ಕುರ್ಯಾದ್ಯದಿ ಕಾಮಾದ್ಯುಧಿಷ್ಠಿರ|

13047036c ಯಥಾ ಬ್ರಾಹ್ಮಣಚಂಡಾಲಃ ಪೂರ್ವದೃಷ್ಟಸ್ತಥೈವ ಸಃ||

ಯುಧಿಷ್ಠಿರ! ಕಾಮದಿಂದಾಗಿ ಇದರ ಹಾಗೆ ಮಾಡದೇ ಇದ್ದರೆ ಅಂಥಹ ಬ್ರಾಹ್ಮಣನನ್ನು ಮೊದಲೇ ಹೇಳಿದಂತೆ ಚಂಡಾಲನೆಂದು ತಿಳಿಯಲಾಗುತ್ತದೆ.

13047037a ಬ್ರಾಹ್ಮಣ್ಯಾಃ ಸದೃಶಃ ಪುತ್ರಃ ಕ್ಷತ್ರಿಯಾಯಾಶ್ಚ ಯೋ ಭವೇತ್|

13047037c ರಾಜನ್ವಿಶೇಷೋ ನಾಸ್ತ್ಯತ್ರ ವರ್ಣಯೋರುಭಯೋರಪಿ||

ರಾಜನ್! ಬ್ರಾಹ್ಮಣಿಯ ಪುತ್ರನ ಸಮಾನ ಪುತ್ರನೇ ಕ್ಷತ್ರಿಣಿಯಲ್ಲಿ ಹುಟ್ಟಿದರೆ ಆ ಎರಡೂ ವರ್ಣದವರಲ್ಲಿಯೂ ವ್ಯತ್ಯಾಸವುಂಟಾಗಿಯೇ ಆಗುತ್ತದೆ.

13047038a ನ ತು ಜಾತ್ಯಾ ಸಮಾ ಲೋಕೇ ಬ್ರಾಹ್ಮಣ್ಯಾಃ ಕ್ಷತ್ರಿಯಾ ಭವೇತ್|

13047038c ಬ್ರಾಹ್ಮಣ್ಯಾಃ ಪ್ರಥಮಃ ಪುತ್ರೋ ಭೂಯಾನ್ಸ್ಯಾದ್ರಾಜಸತ್ತಮ|

13047038e ಭೂಯೋಽಪಿ ಭೂಯಸಾ ಹಾರ್ಯಂ ಪಿತೃವಿತ್ತಾದ್ಯುಧಿಷ್ಠಿರ|

ರಾಜಸತ್ತಮ! ಯುಧಿಷ್ಠಿರ! ಲೋಕದಲ್ಲಿ ಜಾತಿಯಲ್ಲಿ ಕ್ಷತ್ರಿಣಿಯು ಬ್ರಾಹ್ಮಣಿಯ ಸಮನಾಗಲಾರಳು. ಈ ಕಾರಣದಿಂದಲೇ ಬ್ರಾಹ್ಮಣಿಯಲ್ಲಿ ಹುಟ್ಟಿದ ಪುತ್ರನು ಕ್ಷತ್ರಿಣಿಯಲ್ಲಿ ಹುಟ್ಟಿದವನಿಗಿಂತ ಪ್ರಥಮನೂ ಜ್ಯೇಷ್ಠನೂ ಎಂದೆನಿಸಿಕೊಳ್ಳುತ್ತಾನೆ. ಆದುದರಿಂದ ಪಿತೃವಿತ್ತದ ವಿಭಜನೆಯಲ್ಲಿ ಬ್ರಾಹ್ಮಣಿಯ ಪುತ್ರನಿಗೇ ಅಧಿಕ-ಅಧಿಕ ಭಾಗವು ದೊರೆಯಬೇಕು.

13047039a ಯಥಾ ನ ಸದೃಶೀ ಜಾತು ಬ್ರಾಹ್ಮಣ್ಯಾಃ ಕ್ಷತ್ರಿಯಾ ಭವೇತ್|

13047039c ಕ್ಷತ್ರಿಯಾಯಾಸ್ತಥಾ ವೈಶ್ಯಾ ನ ಜಾತು ಸದೃಶೀ ಭವೇತ್||

ಹೇಗೆ ಕ್ಷತ್ರಿಣಿಯು ಬ್ರಾಹ್ಮಣಿಯ ಸಮಜಾತಿಯವಳಾಗುದಿಲ್ಲವೋ ಹಾಗೆ ವೈಶ್ಯೆಯೂ ಕ್ಷತ್ರಿಣಿಯ ಸಮಜಾತಿಯವಳಾಗುವುದಿಲ್ಲ.

13047040a ಶ್ರೀಶ್ಚ ರಾಜ್ಯಂ ಚ ಕೋಶಶ್ಚ ಕ್ಷತ್ರಿಯಾಣಾಂ ಯುಧಿಷ್ಠಿರ|

13047040c ವಿಹಿತಂ ದೃಶ್ಯತೇ ರಾಜನ್ಸಾಗರಾಂತಾ ಚ ಮೇದಿನೀ||

13047041a ಕ್ಷತ್ರಿಯೋ ಹಿ ಸ್ವಧರ್ಮೇಣ ಶ್ರಿಯಂ ಪ್ರಾಪ್ನೋತಿ ಭೂಯಸೀಮ್|

13047041c ರಾಜಾ ದಂಡಧರೋ ರಾಜನ್ರಕ್ಷಾ ನಾನ್ಯತ್ರ ಕ್ಷತ್ರಿಯಾತ್||

ಯುಧಿಷ್ಠಿರ! ಸಂಪತ್ತು, ರಾಜ್ಯ ಮತ್ತು ಕೋಶ ಇವುಗಳು ಕ್ಷತ್ರಿಯರದ್ದೆಂದೇ ವಿಹಿತವಾಗಿದೆ. ರಾಜನ್! ಕ್ಷತ್ರಿಯನು ತನ್ನ ಧರ್ಮಾನುಸಾರವಾಗಿ ಸಾಗರ ಪರ್ಯಂತದ ಈ ಮೇದಿನಿಯನ್ನೇ ತನ್ನದಾಗಿಸಿಕೊಳ್ಳಬಹುದು, ಮತ್ತು ಹೆಚ್ಚಿನ ಸಂಪತ್ತನ್ನು ಪಡೆದುಕೊಳ್ಳಬಹುದು. ರಾಜನ್! ಕ್ಷತ್ರಿಯ ರಾಜನಿಗೇ ದಂಡಧಾರಣೆಯ ಅಧಿಕಾರವಿದೆ. ಕ್ಷತ್ರಿಯರಲ್ಲದೇ ಬೇರೆ ಯಾರಿಂದಲೂ ರಕ್ಷಣೆಯು ದೊರೆಯುವುದಿಲ್ಲ.

13047042a ಬ್ರಾಹ್ಮಣಾ ಹಿ ಮಹಾಭಾಗಾ ದೇವಾನಾಮಪಿ ದೇವತಾಃ|

13047042c ತೇಷು ರಾಜಾ ಪ್ರವರ್ತೇತ ಪೂಜಯಾ ವಿಧಿಪೂರ್ವಕಮ್||

ಮಹಾಭಾಗ! ಬ್ರಾಹ್ಮಣರು ದೇವತೆಗಳಿಗೂ ದೇವರು. ರಾಜಾ! ವಿಧಿಪೂರ್ವಕವಾಗಿ ಅವರೊಡನೆ ಎಲ್ಲರೂ ಪೂಜ್ಯಭಾವದಿಂದಲೇ ನಡೆದುಕೊಳ್ಳಬೇಕು.

13047043a ಪ್ರಣೀತಮೃಷಿಭಿರ್ಜ್ಞಾತ್ವಾ ಧರ್ಮಂ ಶಾಶ್ವತಮವ್ಯಯಮ್|

13047043c ಲುಪ್ಯಮಾನಾಃ ಸ್ವಧರ್ಮೇಣ ಕ್ಷತ್ರಿಯೋ ರಕ್ಷತಿ ಪ್ರಜಾಃ||

ಋಷಿಗಳಿಂದ ಪ್ರತಿಪಾದಿತ ಈ ಅವಿನಾಶೀ ಶಾಶ್ವತ ಧರ್ಮವು ಲುಪ್ತವಾಗಬಾರದೆಂದು ಕ್ಷತ್ರಿಯರು ಸ್ವಧರ್ಮದ ಪ್ರಕಾರ ಪ್ರಜೆಗಳನ್ನು ರಕ್ಷಿಸುತ್ತಾರೆ.

13047044a ದಸ್ಯುಭಿರ್ಹ್ರಿಯಮಾಣಂ ಚ ಧನಂ ದಾರಾಶ್ಚ ಸರ್ವಶಃ|

13047044c ಸರ್ವೇಷಾಮೇವ ವರ್ಣಾನಾಂ ತ್ರಾತಾ ಭವತಿ ಪಾರ್ಥಿವಃ||

ದಸ್ಯುಗಳು ಅಪಹರಿಸಬಲ್ಲ ಎಲ್ಲ ವರ್ಣದವರ ಎಲ್ಲ ಧನ ಮತ್ತು ದಾರೆಯರ ರಕ್ಷಕನು ಪಾರ್ಥಿವನೇ ಆಗಿರುತ್ತಾನೆ.

13047045a ಭೂಯಾನ್ಸ್ಯಾತ್ಕ್ಷತ್ರಿಯಾಪುತ್ರೋ ವೈಶ್ಯಾಪುತ್ರಾನ್ನ ಸಂಶಯಃ|

13047045c ಭೂಯಸ್ತೇನಾಪಿ ಹರ್ತವ್ಯಂ ಪಿತೃವಿತ್ತಾದ್ಯುಧಿಷ್ಠಿರ||

ಯುಧಿಷ್ಠಿರ! ವೈಶ್ಯೆಯ ಪುತ್ರನಿಗಿಂತ ಕ್ಷತ್ರಿಣಿಯ ಪುತ್ರನು ಅಧಿಕ ಎನ್ನುವುದರಲ್ಲಿ ಸಂಶಯವಿಲ್ಲ. ಪಿತೃವಿತ್ತದಲ್ಲಿ ಅವನಿಗೆ ಅಧಿಕ ಭಾಗದ ಅಧಿಕಾರವಿದೆ.”

13047046 ಯುಧಿಷ್ಠಿರ ಉವಾಚ|

13047046a ಉಕ್ತಂ ತೇ ವಿಧಿವದ್ರಾಜನ್ಬ್ರಾಹ್ಮಣಸ್ವೇ ಪಿತಾಮಹ|

13047046c ಇತರೇಷಾಂ ತು ವರ್ಣಾನಾಂ ಕಥಂ ವಿನಿಯಮೋ ಭವೇತ್||

ಯುಧಿಷ್ಠಿರನು ಹೇಳಿದನು: “ರಾಜನ್! ಪಿತಾಮಹ! ಬ್ರಾಹ್ಮಣನ ಕುರಿತು ವಿಧಿವತ್ತಾಗಿ ನೀನು ಹೇಳಿದೆ. ಇತರ ವರ್ಣದವಲ್ಲಿ ಈ ವಿಭಜನೆಯು ಹೇಗೆ ಆಗಬೇಕು?”

13047047 ಭೀಷ್ಮ ಉವಾಚ|

13047047a ಕ್ಷತ್ರಿಯಸ್ಯಾಪಿ ಭಾರ್ಯೇ ದ್ವೇ ವಿಹಿತೇ ಕುರುನಂದನ|

13047047c ತೃತೀಯಾ ಚ ಭವೇಚ್ಚೂದ್ರಾ ನ ತು ದೃಷ್ಟಾಂತತಃ ಸ್ಮೃತಾ||

ಭೀಷ್ಮನು ಹೇಳಿದನು: “ಕುರುನಂದನ! ಕ್ಷತ್ರಿಯನಿಗೂ ಕೂಡ ಎರಡೇ[4] ವರ್ಣದ ಭಾರ್ಯೆಯರನ್ನು ಹೇಳಲಾಗಿದೆ. ಮೂರನೆಯ ಶೂದ್ರಳೂ ಭಾರ್ಯೆಯಾಗಬಹುದು. ಆದರೆ ಶಾಸ್ತ್ರಗಳಲ್ಲಿ ಅದರ ದೃಷ್ಟಾಂತವು ಇಲ್ಲ.

13047048a ಏಷ ಏವ ಕ್ರಮೋ ಹಿ ಸ್ಯಾತ್ಕ್ಷತ್ರಿಯಾಣಾಂ ಯುಧಿಷ್ಠಿರ|

13047048c ಅಷ್ಟಧಾ ತು ಭವೇತ್ಕಾರ್ಯಂ ಕ್ಷತ್ರಿಯಸ್ವಂ ಯುಧಿಷ್ಠಿರ||

ಯುಧಿಷ್ಠಿರ! ಕ್ಷತ್ರಿಯರಿಗೂ ಇದೇ ಕ್ರಮವನ್ನು ಹೇಳಲಾಗಿದೆ. ಯುಧಿಷ್ಠಿರ! ಕ್ಷತ್ರಿಯನ ಧನವನ್ನು ಎಂಟು ಭಾಗಗಳನ್ನಾಗಿ ವಿಂಗಡಿಸಬೇಕು.

13047049a ಕ್ಷತ್ರಿಯಾಯಾ ಹರೇತ್ಪುತ್ರಶ್ಚತುರೋಽಂಶಾನ್ಪಿತುರ್ಧನಾತ್|

13047049c ಯುದ್ಧಾವಹಾರಿಕಂ ಯಚ್ಚ ಪಿತುಃ ಸ್ಯಾತ್ಸ ಹರೇಚ್ಚ ತತ್||

ಕ್ಷತ್ರಿಣಿಯಲ್ಲಿ ಹುಟ್ಟಿದ ಮಗನು ಪಿತುರ್ಧನದ ನಾಲ್ಕು ಭಾಗಗಳನ್ನು ಪಡೆಯಬೇಕು ಮತ್ತು ತಂದೆಯದಾಗಿದ್ದ ಯುದ್ಧ ಸಾಮಗ್ರಿಗಳೂ ಕೂಡ ಅವನಿಗೇ ಸೇರುತ್ತವೆ.

13047050a ವೈಶ್ಯಾಪುತ್ರಸ್ತು ಭಾಗಾಂಸ್ತ್ರೀನ್ ಶೂದ್ರಾಪುತ್ರಸ್ತಥಾಷ್ಟಮಮ್|

13047050c ಸೋಽಪಿ ದತ್ತಂ ಹರೇತ್ಪಿತ್ರಾ ನಾದತ್ತಂ ಹರ್ತುಮರ್ಹತಿ||

ವೈಶ್ಯೆಯ ಪುತ್ರನು ಮೂರುಭಾಗಗಳನ್ನು ಸ್ವೀಕರಿಸಬೇಕು. ಎಂಟನೆಯ ಭಾಗವು ಶೂದ್ರನಿಗೆ. ಅದೂಕೂಡ ಶೂದ್ರಪುತ್ರನು ತಂದೆಯು ಕೊಟ್ಟರೆ ಮಾತ್ರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ತೆಗೆದುಕೊಳ್ಳಬಾರದು.

13047051a ಏಕೈವ ಹಿ ಭವೇದ್ಭಾರ್ಯಾ ವೈಶ್ಯಸ್ಯ ಕುರುನಂದನ|

13047051c ದ್ವಿತೀಯಾ ವಾ ಭವೇಚ್ಚೂದ್ರಾ ನ ತು ದೃಷ್ಟಾಂತತಃ ಸ್ಮೃತಾ||

ಕುರುನಂದನ! ವೈಶ್ಯನಿಗೆ ಒಂದೇ ವರ್ಣದವರು ಭಾರ್ಯೆಯಾಗಬಲ್ಲರು. ಎರಡನೆಯದಾಗಿ ಶೂದ್ರವರ್ಣದವಳೂ ಭಾರ್ಯೆಯಾಗಬಹುದು. ಆದರೆ ಶಾಸ್ತ್ರಗಳಲ್ಲಿ ಅದರ ದೃಷ್ಟಾಂತವಿಲ್ಲ.

13047052a ವೈಶ್ಯಸ್ಯ ವರ್ತಮಾನಸ್ಯ ವೈಶ್ಯಾಯಾಂ ಭರತರ್ಷಭ|

13047052c ಶೂದ್ರಾಯಾಂ ಚೈವ ಕೌಂತೇಯ ತಯೋರ್ವಿನಿಯಮಃ ಸ್ಮೃತಃ||

ಭರತರ್ಷಭ! ಕೌಂತೇಯ! ವೈಶ್ಯನಿಗೆ ವೈಶ್ಯೆ ಮತ್ತು ಶೂದ್ರೆಯಲ್ಲಿ ಮಕ್ಕಳಾದರೆ ಅವರೊಡನೆ ಪಿತುಧನದ ವಿಭಜನೆಯಲ್ಲಿ ಇದೇ ನಿಯಮವಿದೆ.

13047053a ಪಂಚಧಾ ತು ಭವೇತ್ಕಾರ್ಯಂ ವೈಶ್ಯಸ್ವಂ ಭರತರ್ಷಭ|

13047053c ತಯೋರಪತ್ಯೇ ವಕ್ಷ್ಯಾಮಿ ವಿಭಾಗಂ ಚ ಜನಾಧಿಪ||

ಭರತರ್ಷಭ! ಜನಾಧಿಪ! ವೈಶ್ಯನ ಧನವನ್ನು ಐದು ಭಾಗಗಳಾಗಿ ವಿಭಜಿಸಬೇಕು. ಇನ್ನು ವೈಶ್ಯೆ ಮತ್ತು ಶೂದ್ರಪುತ್ರರಲ್ಲಿ ವಿಭಾಗವನ್ನು ಹೇಗೆ ಮಾಡಬೇಕೆಂದು ಹೇಳುತ್ತೇನೆ.

13047054a ವೈಶ್ಯಾಪುತ್ರೇಣ ಹರ್ತವ್ಯಾಶ್ಚತ್ವಾರೋಽಂಶಾಃ ಪಿತುರ್ಧನಾತ್|

13047054c ಪಂಚಮಸ್ತು ಭವೇದ್ಭಾಗಃ ಶೂದ್ರಾಪುತ್ರಾಯ ಭಾರತ||

ಭಾರತ! ಪಿತೃಧನದ ನಾಲ್ಕು ಭಾಗಗಳು ವೈಶ್ಯೆಯ ಪುತ್ರನಿಗೆ ಹೋಗಬೇಕು. ಐದನೆಯ ಭಾಗವು ಶೂದ್ರಪುತ್ರನಿಗಾಗಬೇಕು.

13047055a ಸೋಽಪಿ ದತ್ತಂ ಹರೇತ್ಪಿತ್ರಾ ನಾದತ್ತಂ ಹರ್ತುಮರ್ಹತಿ|

13047055c ತ್ರಿಭಿರ್ವರ್ಣೈಸ್ತಥಾ ಜಾತಃ ಶೂದ್ರೋ ದೇಯಧನೋ ಭವೇತ್||

ಅದನ್ನೂ ತಂದೆಯು ಕೊಟ್ಟರೆ ಮಾತ್ರ ಶೂದ್ರಪುತ್ರನು ತೆಗೆದುಕೊಳ್ಳಬೇಕು. ಕೊಡದಿದ್ದರೆ ತೆಗೆದುಕೊಳ್ಳಬಾರದು. ಮೂರು ವರ್ಣದವರಲ್ಲಿ ಹುಟ್ಟಿದ ಶೂದ್ರನು ಧನವನ್ನು ಕೊಡಬಾರದವನೇ ಆಗಿದ್ದಾನೆ.

13047056a ಶೂದ್ರಸ್ಯ ಸ್ಯಾತ್ಸವರ್ಣೈವ ಭಾರ್ಯಾ ನಾನ್ಯಾ ಕಥಂ ಚನ|

13047056c ಶೂದ್ರಸ್ಯ ಸಮಭಾಗಃ ಸ್ಯಾದ್ಯದಿ ಪುತ್ರಶತಂ ಭವೇತ್||

ಶೂದ್ರ ಸ್ತ್ರೀಯಲ್ಲಿ ಹುಟ್ಟಿದವನಿಗೆ ಶೂದ್ರತಂದೆಯಿಂದ ಹುಟ್ಟಿದವನಿಗೆ ಮಾತ್ರ ಪಿತೃಧನದ ಅಧಿಕಾರವಿದೆ. ಅವನಿಗೆ ನೂರು ಮಕ್ಕಳಾದರೂ ಶೂದ್ರನ ಧನದ ಸಮಭಾಗವು ಅವರಿಗೆ ದೊರೆಯುತ್ತದೆ.

13047057a ಜಾತಾನಾಂ ಸಮವರ್ಣಾಸು ಪುತ್ರಾಣಾಮವಿಶೇಷತಃ|

13047057c ಸರ್ವೇಷಾಮೇವ ವರ್ಣಾನಾಂ ಸಮಭಾಗೋ ಧನೇ ಸ್ಮೃತಃ||

ಸಮಾನ ವರ್ಣದ ಸ್ತ್ರೀಯಿಂದ ಹುಟ್ಟಿದ ಎಲ್ಲ ವರ್ಣದ ಎಲ್ಲ ಪುತ್ರರೂ ಪಿತೃವಿತ್ತದ ಸಮಾನ ಭಾಗಿಗಳಾಗುತ್ತಾರೆಂದು ಹೇಳುತ್ತಾರೆ.

13047058a ಜ್ಯೇಷ್ಠಸ್ಯ ಭಾಗೋ ಜ್ಯೇಷ್ಠಃ ಸ್ಯಾದೇಕಾಂಶೋ ಯಃ ಪ್ರಧಾನತಃ|

13047058c ಏಷ ದಾಯವಿಧಿಃ ಪಾರ್ಥ ಪೂರ್ವಮುಕ್ತಃ ಸ್ವಯಂಭುವಾ||

ಜ್ಯೇಷ್ಠನ ಭಾಗವೇ ಅಧಿಕವಾಗಿರುತ್ತದೆ. ಪ್ರಧಾನತಃ ಅವನಿಗೆ ಒಂದು ಭಾಗ ಹೆಚ್ಚೇ ದೊರೆಯುತ್ತದೆ. ಪಾರ್ಥ! ಇದೇ ಹಿಂದೆ ಸ್ವಯಂಭುವ ಮನುವು ಹೇಳಿದ ಪಿತೃಧನವನ್ನು ವಿಭಜಿಸಿ ಕೊಡುವ ವಿಧಿ.

13047059a ಸಮವರ್ಣಾಸು ಜಾತಾನಾಂ ವಿಶೇಷೋಽಸ್ತ್ಯಪರೋ ನೃಪ|

13047059c ವಿವಾಹವೈಶೇಷ್ಯಕೃತಃ ಪೂರ್ವಃ ಪೂರ್ವೋ ವಿಶಿಷ್ಯತೇ||

ನೃಪ! ಸಮವರ್ಣದವರಲ್ಲಿ ಹುಟ್ಟಿದವರಲ್ಲಿ ಈ ಇನ್ನೊಂದು ವ್ಯತ್ಯಾಸವಿದೆ. ವಿವಾಹದ ವಿಶೇಷತೆಯ ಕಾರಣದಿಂದ ಹಿರಿಯವನು ಕಿರಿಯವನು ಎಂಬ ವ್ಯತ್ಯಾಸವುಂಟಾಗುತ್ತದೆ[5].

13047060a ಹರೇಜ್ಜ್ಯೇಷ್ಠಃ ಪ್ರಧಾನಾಂಶಮೇಕಂ ತುಲ್ಯಾಸುತೇಷ್ವಪಿ|

13047060c ಮಧ್ಯಮೋ ಮಧ್ಯಮಂ ಚೈವ ಕನೀಯಾಂಸ್ತು ಕನೀಯಸಮ್||

ಸಮವರ್ಣದವಳಲ್ಲಿ ಹುಟ್ಟಿದ ಜ್ಯೇಷ್ಠಪುತ್ರನು ಪ್ರಧಾನವಾಗಿ ಒಂದು ಭಾಗವನ್ನು ಹೆಚ್ಚಾಗಿ ಪಡೆದುಕೊಳ್ಳಬಹುದು. ಹಾಗೆಯೇ ಮಧ್ಯಮನಿಗೆ ಮಧ್ಯಮ ಭಾಗ ಮತ್ತು ಕನಿಷ್ಠನಿಗೆ ಕನಿಷ್ಠಭಾಗವು ದೊರೆಯುತ್ತದೆ.

13047061a ಏವಂ ಜಾತಿಷು ಸರ್ವಾಸು ಸವರ್ಣಾಃ ಶ್ರೇಷ್ಠತಾಂ ಗತಾಃ|

13047061c ಮಹರ್ಷಿರಪಿ ಚೈತದ್ವೈ ಮಾರೀಚಃ ಕಾಶ್ಯಪೋಽಬ್ರವೀತ್||

ಹೀಗೆ ಎಲ್ಲ ಜಾತಿಗಳಲ್ಲಿ ಸವರ್ಣಿಯಲ್ಲಿ ಹುಟ್ಟಿದ ಮಗನೇ ಶ್ರೇಷ್ಠತೆಯನ್ನು ಪಡೆದುಕೊಳ್ಳುತ್ತಾನೆ. ಮರೀಚನ ಮಗ ಕಾಶ್ಯಪ ಮಹರ್ಷಿಯೂ ಇದನ್ನೇ ಹೇಳಿದ್ದಾನೆ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ವಿವಾಹಧರ್ಮೇ ರಿಕ್ಥವಿಭಾಗೇ ಸಪ್ತಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವಿವಾಹಧರ್ಮೇ ರಿಕ್ಥವಿಭಾಗ ಎನ್ನುವ ನಲ್ವತ್ತೇಳನೇ ಅಧ್ಯಾಯವು.

Image result for flowers against white background

[1] “ದಾರಾ” ಶಬ್ಧದ ಉತ್ಪತ್ತಿಯು ಈ ಪ್ರಕಾರದಲ್ಲಿದೆ: ’ಆದ್ರಿಯಂತೇ ತ್ರಿವರ್ಗಾರ್ಥಿಭಿಃ ಇತಿ ದಾರಾ’ ಅರ್ಥಾತ್ ಧರ್ಮ-ಅರ್ಥ-ಕಾಮಗಳನ್ನು ಬಯಸುವವರು ಯಾರನ್ನು ಆದರಿಸುತ್ತಾರೋ ಅವಳೇ ದಾರಾ. ಕಾಮವಿಷಯಕ ಆದರಣೆಯಾದರೋ ಅದು ಎಲ್ಲ ಸ್ತ್ರೀಯರಿಗೂ ಸಮನಾಗಿರುತ್ತದೆ. ಆದರೆ ಈ ವ್ಯಾವಹಾರಿಕ ಜಗತ್ತಿನಲ್ಲಿ ಪತಿಯಿಂದ ದೊರೆಯುವ ಆದರವು ವರ್ಣಾನುಕ್ರಮವಾಗಿ ಹೆಚ್ಚು-ಕಡಿಮೆ ಉಪಲಬ್ದವಾತ್ತದೆ. ಇದೇ ವ್ಯತ್ಯಾಸವು ಅವರಲ್ಲಿ ಹುಟ್ಟಿದ ಮಕ್ಕಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಈ ಕಾರಣದಿಂದಲೇ ಅವರಲ್ಲಿ ಹುಟ್ಟುವ ಮಕ್ಕಳಲ್ಲಿ ಪಿತೃಧನದ ವಿಭಜನೆಯಲ್ಲಿ ಅಲ್ಪ ಮತ್ತು ಅಧಿಕ ಭಾಗಗಳನ್ನು ಸ್ವೀಕರಿಸುವ ಅಧಿಕಾರವಿರುತ್ತದೆ.

[2] ಅಧಿಕ ಆದರ-ಸತ್ಕಾರಗಳಿಗೆ ಯೋಗ್ಯಳು.

[3] ವಿಶೇಷ ಗೌರವದ ಅಧಿಕಾರಿಣಿ.

[4] ಕ್ಷತ್ರಿಯ ಮತ್ತು ವೈಶ್ಯ ವರ್ಣದವರು. ಕ್ಷತ್ರಿಯನು ಬ್ರಾಹ್ಮಣಿಯನ್ನು ಭಾರ್ಯೆಯನ್ನಾಗಿ ಮಾಡಿಕೊಳ್ಳುತ್ತಿರಲಿಲ್ಲ.

[5] ಮೊದಲು ಮದುವೆಯಾದ ಸ್ತ್ರೀಯಲ್ಲಿ ಹುಟ್ಟಿದವನು ಜ್ಯೇಷ್ಠ ಮತ್ತು ನಂತರ ಮದುವೆಯಾದ ಸ್ತ್ರೀಯಲ್ಲಿ ಹುಟ್ಟಿದವನು ಕನಿಷ್ಠನಾಗುತ್ತಾನೆ.

Comments are closed.