Anushasana Parva: Chapter 129

ಅನುಶಾಸನ ಪರ್ವ: ದಾನಧರ್ಮ ಪರ್ವ

೧೨೯

13129001 ಉಮೋವಾಚ|

13129001a ಉಕ್ತಾಸ್ತ್ವಯಾ ಪೃಥಗ್ಧರ್ಮಾಶ್ಚಾತುರ್ವರ್ಣ್ಯಹಿತಾಃ ಶುಭಾಃ|

13129001c ಸರ್ವವ್ಯಾಪೀ ತು ಯೋ ಧರ್ಮೋ ಭಗವಂಸ್ತಂ ಬ್ರವೀಹಿ ಮೇ||

ಉಮೆಯು ಹೇಳಿದಳು: “ನೀನು ಪ್ರತ್ಯೇಕವಾಗಿ ನಾಲ್ಕುವರ್ಣಗಳಿಗೆ ಹಿತವಾದ ಶುಭ ಧರ್ಮಗಳ ಕುರಿತು ಹೇಳಿದೆ. ಭಗವನ್! ಆದರೆ ಸರ್ವವ್ಯಾಪೀ ಧರ್ಮದ ಕುರಿತು ನನಗೆ ಹೇಳು.”

13129002 ಮಹೇಶ್ವರ ಉವಾಚ|

13129002a ಬ್ರಾಹ್ಮಣಾ ಲೋಕಸಾರೇಣ ಸೃಷ್ಟಾ ಧಾತ್ರಾ ಗುಣಾರ್ಥಿನಾ|

13129002c ಲೋಕಾಂಸ್ತಾರಯಿತುಂ ಕೃತ್ಸ್ನಾನ್ಮರ್ತ್ಯೇಷು ಕ್ಷಿತಿದೇವತಾಃ||

ಮಹೇಶ್ವರನು ಹೇಳಿದನು: “ಗುಣಾರ್ಥಿಯಾದ ಧಾತ್ರನು ಲೋಕಗಳನ್ನು ಉದ್ಧರಿಸಲು ಲೋಕಸಾರಗಳಿಂದ ಬ್ರಾಹ್ಮಣರನ್ನು ಸೃಷ್ಟಿಸಿದನು. ಭೂಮಿಯ ಎಲ್ಲ ಮನುಷ್ಯರಲ್ಲಿ ಅವರು ದೇವತೆಗಳು.

13129003a ತೇಷಾಮಿಮಂ ಪ್ರವಕ್ಷ್ಯಾಮಿ ಧರ್ಮಕರ್ಮಫಲೋದಯಮ್|

13129003c ಬ್ರಾಹ್ಮಣೇಷು ಹಿ ಯೋ ಧರ್ಮಃ ಸ ಧರ್ಮಃ ಪರಮೋ ಮತಃ||

ಅವರ ಧರ್ಮಕರ್ಮಗಳ ಕುರಿತು ಮತ್ತು ಅವುಗಳಿಂದಾಗುವ ಫಲಗಳ ಕುರಿತು ಹೇಳುತ್ತೇನೆ. ಬ್ರಾಹ್ಮಣರಲ್ಲಿ ಯಾವ ಧರ್ಮವಿದೆಯೋ ಅದೇ ಪರಮಧರ್ಮವೆಂಬ ಮತವಿದೆ.

13129004a ಇಮೇ ತು ಲೋಕಧರ್ಮಾರ್ಥಂ ತ್ರಯಃ ಸೃಷ್ಟಾಃ ಸ್ವಯಂಭುವಾ|

13129004c ಪೃಥಿವ್ಯಾಃ ಸರ್ಜನೇ ನಿತ್ಯಂ ಸೃಷ್ಟಾಸ್ತಾನಪಿ ಮೇ ಶೃಣು||

ಲೋಕಗಳಿಗಾಗಿ ಸ್ವಯಂಭುವು ಮೂರು ಧರ್ಮಗಳನ್ನು ಸೃಷ್ಟಿಸಿದನು. ಪೃಥ್ವಿಯ ಸೃಷ್ಟಿಯೊಂದಿಗೇ ಇವುಗಳ ಸೃಷ್ಟಿಯೂ ಆಯಿತು. ಅವುಗಳ ಕುರಿತು ಕೇಳು.

13129005a ವೇದೋಕ್ತಃ ಪರಮೋ ಧರ್ಮಃ ಸ್ಮೃತಿಶಾಸ್ತ್ರಗತೋಽಪರಃ|

13129005c ಶಿಷ್ಟಾಚೀರ್ಣಃ ಪರಃ ಪ್ರೋಕ್ತಸ್ತ್ರಯೋ ಧರ್ಮಾಃ ಸನಾತನಾಃ||

ವೇದೋಕ್ತವಾದುದು ಪರಮ ಧರ್ಮವು. ಸ್ಮೃತಿ-ಶಾಸ್ತ್ರಗಳಲ್ಲಿರುವುದು ಇನ್ನೊಂದು. ಶಿಷ್ಟರು ಆಚರಿಸುವುದು ಇನ್ನೊಂದು. ಈ ಮೂರೂ ಸನಾತನ ಧರ್ಮಗಳೆಂದು ಹೇಳಿದ್ದಾರೆ.

13129006a ತ್ರೈವಿದ್ಯೋ ಬ್ರಾಹ್ಮಣೋ ವಿದ್ವಾನ್ನ ಚಾಧ್ಯಯನಜೀವನಃ|

13129006c ತ್ರಿಕರ್ಮಾ ತ್ರಿಪರಿಕ್ರಾಂತೋ ಮೈತ್ರ ಏಷ ಸ್ಮೃತೋ ದ್ವಿಜಃ||

ಮೂರು ವೇದಗಳನ್ನು[1] ಅಧ್ಯಯನಮಾಡಿರುವ, ವೇದಗಳನ್ನು ಹೇಳಿಕೊಡುವ ವೃತ್ತಿಯಿಂದ ಜೀವನವನ್ನು ನಡೆಸದ, ಮೂರು ಕರ್ಮಗಳಲ್ಲಿ[2] ನಿರತನಾಗಿರುವ, ಮೂರನ್ನು[3] ಗೆದ್ದಿರುವ ಮತ್ತು ಎಲ್ಲ ಪ್ರಾಣಿಗಳ ವಿಷಯದಲ್ಲಿಯೂ ಮೈತ್ರಭಾವದಿಂದಿರುವ ದ್ವಿಜನೇ ಬ್ರಾಹ್ಮಣನು.

13129007a ಷಡಿಮಾನಿ ತು ಕರ್ಮಾಣಿ ಪ್ರೋವಾಚ ಭುವನೇಶ್ವರಃ|

13129007c ವೃತ್ತ್ಯರ್ಥಂ ಬ್ರಾಹ್ಮಣಾನಾಂ ವೈ ಶೃಣು ತಾನಿ ಸಮಾಹಿತಾ||

ಭುವನೇಶ್ವರನು ಬ್ರಾಹ್ಮಣರ ವೃತ್ತಿಯಾಗಿ ಈ ಆರು ಕರ್ಮಗಳನ್ನು ಹೇಳಿದ್ದಾನೆ. ಸಮಾಹಿತಳಾಗಿ ಅವುಗಳನ್ನು ಕೇಳು.

13129008a ಯಜನಂ ಯಾಜನಂ ಚೈವ ತಥಾ ದಾನಪ್ರತಿಗ್ರಹೌ|

13129008c ಅಧ್ಯಾಪನಮಧೀತಂ ಚ ಷಟ್ಕರ್ಮಾ ಧರ್ಮಭಾಗ್ದ್ವಿಜಃ||

ಯಜ್ಞಮಾಡುವುದು, ಯಜ್ಞಮಾಡಿಸುವುದು, ದಾನನೀಡುವುದು, ದಾನವನ್ನು ಸ್ವೀಕರಿಸುವುದು, ಅಧ್ಯಾಪನಮಾಡಿಸುವುದು, ಅಧ್ಯಯನ ಮಾಡುವುದು ಈ ಷಟ್ಕರ್ಮಗಳಲ್ಲಿ ತೊಡಗಿರುವ ದ್ವಿಜನು ಧರ್ಮಭಾಗಿಯಾಗುತ್ತಾನೆ.

13129009a ನಿತ್ಯಸ್ವಾಧ್ಯಾಯತಾ ಧರ್ಮೋ ಧರ್ಮೋ ಯಜ್ಞಃ ಸನಾತನಃ|

13129009c ದಾನಂ ಪ್ರಶಸ್ಯತೇ ಚಾಸ್ಯ ಯಥಾಶಕ್ತಿ ಯಥಾವಿಧಿ||

ನಿತ್ಯವೂ ಸ್ವಾಧ್ಯಾಯನಿರತನಾಗಿರುವುದು ಬ್ರಾಹ್ಮಣನ ಧರ್ಮ. ಯಜ್ಞವೂ ಅವನ ಸನಾತನ ಧರ್ಮ. ಯಥಾಶಕ್ತಿ ಯಥಾವಿಧಿಯ ದಾನವೂ ಅವನ ಪ್ರಶಸ್ತಧರ್ಮವು.

13129010a ಅಯಂ ತು ಪರಮೋ[4] ಧರ್ಮಃ ಪ್ರವೃತ್ತಃ ಸತ್ಸು ನಿತ್ಯಶಃ|

13129010c ಗೃಹಸ್ಥತಾ ವಿಶುದ್ಧಾನಾಂ ಧರ್ಮಸ್ಯ ನಿಚಯೋ ಮಹಾನ್||

ಇದು ಸತ್ಪುರುಷರಲ್ಲಿ ನಿತ್ಯವೂ ಜಾಗ್ರತವಾಗಿರುವ ಪರಮ ಧರ್ಮವು. ಇದನ್ನು ಪಾಲಿಸುವುದರಿಂದ ವಿಶುದ್ಧ ಗೃಹಸ್ಥರಿಗೆ ಧರ್ಮದ ಮಹಾಸಂಚಯವೇ ದೊರೆಯುತ್ತದೆ.

13129011a ಪಂಚಯಜ್ಞವಿಶುದ್ಧಾತ್ಮಾ ಸತ್ಯವಾಗನಸೂಯಕಃ|

13129011c ದಾತಾ ಬ್ರಾಹ್ಮಣಸತ್ಕರ್ತಾ ಸುಸಂಮೃಷ್ಟನಿವೇಶನಃ||

ಗೃಹಸ್ಥನು ಪಂಚಯಜ್ಞಗಳಿಂದ ಮನಸ್ಸನ್ನು ಶುದ್ಧೀಕರಿಸಿಕೊಳ್ಳಬೇಕು. ಸತ್ಯವನ್ನೇ ಹೇಳಬೇಕು. ಅನಸೂಯಕನಾಗಿರಬೇಕು. ದಾನಿಯೂ ಬ್ರಾಹ್ಮಣರನ್ನು ಸತ್ಕರಿಸುವವನೂ ಆಗಿರಬೇಕು. ಮನೆಯನ್ನು ಚೊಕ್ಕವಾಗಿ ಇಟ್ಟುಕೊಂಡಿರಬೇಕು.

13129012a ಅಮಾನೀ ಚ ಸದಾಜಿಹ್ಮಃ ಸ್ನಿಗ್ಧವಾಣೀಪ್ರದಸ್ತಥಾ|

13129012c ಅತಿಥ್ಯಭ್ಯಾಗತರತಿಃ ಶೇಷಾನ್ನಕೃತಭೋಜನಃ||

ಅಭಿಮಾನವನ್ನಿಟ್ಟುಕೊಂಡಿರಬಾರದು. ಸದಾ ಸರಳತೆಯಿಂದಿರಬೇಕು. ಸ್ನೇಯಯುಕ್ತ ಮಾತುಗಳನ್ನೇ ಆಡಬೇಕು. ಅತಿಥಿ-ಅಭ್ಯಾಗತರು ಬಂದರೆ ಸಂತೋಷದಿಂದ ಅವರ ಸೇವೆಗೈಯಬೇಕು. ಯಜ್ಞಶಿಷ್ಟವಾದ ಮತ್ತು ಎಲ್ಲರೂ ಊಟಮಾಡಿದ ನಂತರ ಉಳಿದ ಅನ್ನವನ್ನು ಊಟಮಾಡಬೇಕು.

13129013a ಪಾದ್ಯಮರ್ಘ್ಯಂ ಯಥಾನ್ಯಾಯಮಾಸನಂ ಶಯನಂ ತಥಾ|

13129013c ದೀಪಂ ಪ್ರತಿಶ್ರಯಂ ಚಾಪಿ ಯೋ ದದಾತಿ ಸ ಧಾರ್ಮಿಕಃ||

ಶಾಸ್ತ್ರಾನುಸಾರ ಅತಿಥಿಗಳನ್ನು ಅರ್ಘ್ಯ-ಪಾದ್ಯ-ಆಸನ-ಶಯ್ಯಾ-ದೀಪ-ನಿವಾಸಸ್ಥಾನಪ್ರದಾನಗಳಿಂದ ಸತ್ಕರಿಸಬೇಕು. ಇಂಥವನೇ ಧಾರ್ಮಿಕನು.

13129014a ಪ್ರಾತರುತ್ಥಾಯ ಚಾಚಮ್ಯ ಭೋಜನೇನೋಪಮಂತ್ರ್ಯ ಚ|

13129014c ಸತ್ಕೃತ್ಯಾನುವ್ರಜೇದ್ಯಶ್ಚ ತಸ್ಯ ಧರ್ಮಃ ಸನಾತನಃ||

ಬೆಳಿಗ್ಗೆ ಎದ್ದು ಆಚಮನಮಾಡಿ ಬ್ರಾಹ್ಮಣನನ್ನು ಭೋಜನಕ್ಕೆ ಆಮಂತ್ರಿಸಬೇಕು. ಅವನನ್ನು ಸತ್ಕರಿಸಿ, ಸ್ವಲ್ಪದೂರ ಹಿಂಬಾಲಿಸಿ ಹೋಗಿ ಕಳುಹಿಸಿ ಕೊಡಬೇಕು. ಇದೇ ಗೃಹಸ್ಥನ ಸನಾತನ ಧರ್ಮವು.

13129015a ಸರ್ವಾತಿಥ್ಯಂ ತ್ರಿವರ್ಗಸ್ಯ ಯಥಾಶಕ್ತಿ ದಿವಾನಿಶಮ್|

13129015c ಶೂದ್ರಧರ್ಮಃ ಸಮಾಖ್ಯಾತಸ್ತ್ರಿವರ್ಣಪರಿಚಾರಣಮ್||

ಹಗಲು ರಾತ್ರಿ ಎಲ್ಲರಿಗೂ ಯಥಾಶಕ್ತಿ ಆತಿಥ್ಯವನ್ನು ನೀಡುವುದು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ ಈ ತ್ರಿವರ್ಗದವರಿಗೆ ಧರ್ಮವು. ಈ ಮೂರು ವರ್ಣದವರ ಸೇವೆಮಾಡುವುದೇ ಶೂದ್ರಧರ್ಮವೆಂದು ಹೇಳಿದ್ದಾರೆ.

13129016a ಪ್ರವೃತ್ತಿಲಕ್ಷಣೋ ಧರ್ಮೋ ಗೃಹಸ್ಥೇಷು ವಿಧೀಯತೇ|

13129016c ತಮಹಂ ಕೀರ್ತಯಿಷ್ಯಾಮಿ ಸರ್ವಭೂತಹಿತಂ ಶುಭಮ್||

ಪ್ರವೃತ್ತಿಲಕ್ಷಣ ಧರ್ಮವನ್ನು ಗೃಹಸ್ಥರಿಗೆ ವಿಧಿಸಿದ್ದಾರೆ. ಸರ್ವಭೂತಹಿತವೂ ಶುಭವೂ ಆದ ಅದರ ಕುರಿತು ಹೇಳುತ್ತೇನೆ.

13129017a ದಾತವ್ಯಮಸಕೃಚ್ಚಕ್ತ್ಯಾ ಯಷ್ಟವ್ಯಮಸಕೃತ್ತಥಾ|

13129017c ಪುಷ್ಟಿಕರ್ಮವಿಧಾನಂ ಚ ಕರ್ತವ್ಯಂ ಭೂತಿಮಿಚ್ಚತಾ||

ಏಳ್ಗೆಯನ್ನು ಬಯಸುವವನು ತನ್ನ ಶಕ್ತಿಗೆ ಅನುಸಾರವಾಗಿ ದಾನಮಾಡುತ್ತಲೇ ಇರಬೇಕು. ಯಜ್ಞಗಳನ್ನು ಮಾಡುತ್ತಲೇ ಇರಬೇಕು. ಪುಷ್ಟಿಕರ್ಮವಿಧಾನಗಳಲ್ಲಿ ತೊಡಗಿರಬೇಕು.

13129018a ಧರ್ಮೇಣಾರ್ಥಃ ಸಮಾಹಾರ್ಯೋ ಧರ್ಮಲಬ್ಧಂ ತ್ರಿಧಾ ಧನಮ್|

13129018c ಕರ್ತವ್ಯಂ ಧರ್ಮಪರಮಂ ಮಾನವೇನ ಪ್ರಯತ್ನತಃ||

ಧರ್ಮಪ್ರಕಾರವೇ ಧನವನ್ನು ಸಂಪಾದಿಸಬೇಕು. ಸಂಪಾದಿಸಿದ ಧನವನ್ನು ಮೂರು ಭಾಗಗಳನ್ನಾಗಿ ವಿಭಾಗಿಸಬೇಕು. ಮಾನವನು ಪ್ರಯತ್ನತಃ ಪರಮ ಧರ್ಮಗಳನ್ನೇ ಮಾಡುತ್ತಿರಬೇಕು.

13129019a ಏಕೇನಾಂಶೇನ ಧರ್ಮಾರ್ಥಶ್ಚರ್ತವ್ಯೋ ಭೂತಿಮಿಚ್ಚತಾ|

13129019c ಏಕೇನಾಂಶೇನ ಕಾಮಾರ್ಥ ಏಕಮಂಶಂ ವಿವರ್ಧಯೇತ್||

ಏಳ್ಗೆಯನ್ನು ಬಯಸುವವನು ಗಳಿಸಿದ ಧನದ ಒಂದು ಅಂಶವನ್ನು ಧರ್ಮಕಾರ್ಯಗಳಿಗೆ ಬಳಸಬೇಕು. ಒಂದು ಅಂಶವನ್ನು ತನ್ನ ಕಾಮನೆಗಳನ್ನು ಪೂರೈಸಿಕೊಳ್ಳಲು ಬಳಸಬೇಕು. ಒಂದು ಅಂಶವನ್ನು ಧನವನ್ನು ವೃದ್ಧಿಸಲು ಬಳಸಬೇಕು[5].

13129020a ನಿವೃತ್ತಿಲಕ್ಷಣಸ್ತ್ವನ್ಯೋ ಧರ್ಮೋ ಮೋಕ್ಷ ಇತಿ ಸ್ಮೃತಃ|

13129020c ತಸ್ಯ ವೃತ್ತಿಂ ಪ್ರವಕ್ಷ್ಯಾಮಿ ಶೃಣು ಮೇ ದೇವಿ ತತ್ತ್ವತಃ||

ನಿವೃತ್ತಿಲಕ್ಷಣ ಧರ್ಮವು ಪ್ರವೃತ್ತಿಲಕ್ಷಣ ಧರ್ಮಕ್ಕಿಂತಲೂ ಭಿನ್ನವಾಗಿದೆ. ಇದನ್ನು ಮೋಕ್ಷಧರ್ಮವೆಂದೂ ಹೇಳಿದ್ದಾರೆ. ದೇವಿ! ಆ ವೃತ್ತಿಯನ್ನು ತತ್ತ್ವತಃ ಹೇಳುತ್ತೇನೆ. ಕೇಳು.

13129021a ಸರ್ವಭೂತದಯಾ ಧರ್ಮೋ ನ ಚೈಕಗ್ರಾಮವಾಸಿತಾ|

13129021c ಆಶಾಪಾಶವಿಮೋಕ್ಷಶ್ಚ ಶಸ್ಯತೇ ಮೋಕ್ಷಕಾಂಕ್ಷಿಣಾಮ್||

ಸರ್ವಭೂತಗಳ ಮೇಲಿನ ದಯೆಯೇ ಈ ಧರ್ಮವು. ಒಂದೇ ಗ್ರಾಮದಲ್ಲಿ ವಾಸಮಾಡಿಕೊಂಡಿರಬಾರದು. ಆಶಾಪಾಶಗಳಿಂದ ವಿಮುಕ್ತನಾಗಿರಬೇಕು. ಇದನ್ನೇ ಮೋಕ್ಷವನ್ನು ಬಯಸುವವರಿಗೆ ಹೇಳಿದ್ದಾರೆ.

13129022a ನ ಕುಂಡ್ಯಾಂ[6] ನೋದಕೇ ಸಂಗೋ ನ ವಾಸಸಿ ನ ಚಾಸನೇ|

13129022c ನ ತ್ರಿದಂಡೇ ನ ಶಯನೇ ನಾಗ್ನೌ ನ ಶರಣಾಲಯೇ||

ಕಮಂಡಲು, ನೀರು, ಬಟ್ಟೆ, ಆಸನ, ತ್ರಿದಂಡ, ಶಯನ, ಅಗ್ನಿ ಮತ್ತು ತಂಗಿದ ಸ್ಥಳಗಳ ಮೇಲೆ ಯಾವುದೇ ರೀತಿಯ ಆಸಕ್ತಿ-ಅನುರಾಗಗಳಿರಬಾರದು.

13129023a ಅಧ್ಯಾತ್ಮಗತಚಿತ್ತೋ ಯಸ್ತನ್ಮನಾಸ್ತತ್ಪರಾಯಣಃ|

13129023c ಯುಕ್ತೋ ಯೋಗಂ ಪ್ರತಿ ಸದಾ ಪ್ರತಿಸಂಖ್ಯಾನಮೇವ ಚ||

ಸದಾ ಅಧ್ಯಾತ್ಮಚಿಂತನೆಯನ್ನು ಮಾಡುತ್ತಿರಬೇಕು. ಮನಸಾ ಅದರಲ್ಲಿಯೇ ತತ್ಪರನಾಗಿರಬೇಕು. ಸದಾ ಯೋಗಯುಕ್ತನೂ ಸಾಂಖ್ಯಯುಕ್ತನೂ ಆಗಿರಬೇಕು.

13129024a ವೃಕ್ಷಮೂಲಶಯೋ ನಿತ್ಯಂ ಶೂನ್ಯಾಗಾರನಿವೇಶನಃ|

13129024c ನದೀಪುಲಿನಶಾಯೀ ಚ ನದೀತೀರರತಿಶ್ಚ ಯಃ||

ಅಂಥವನು ನಿತ್ಯವೂ ಮರದ ಬುಡದಲ್ಲಿ ಮಲಗುತ್ತಾನೆ. ಬರಿದಾದ ಮನೆಗಳಲ್ಲಿ ವಾಸಿಸುತ್ತಾನೆ. ನದೀದಂಡೆಯ ಮರಳ ರಾಶಿಯ ಮೇಲೆ ಮಲಗುತ್ತಾನೆ. ನದೀ ತೀರಗಳನ್ನು ಇಷ್ಟಪಡುತ್ತಾನೆ.

13129025a ವಿಮುಕ್ತಃ ಸರ್ವಸಂಗೇಷು ಸ್ನೇಹಬಂಧೇಷು ಚ ದ್ವಿಜಃ|

13129025c ಆತ್ಮನ್ಯೇವಾತ್ಮನೋ ಭಾವಂ ಸಮಾಸಜ್ಯಾಟತಿ[7] ದ್ವಿಜಃ||

ಅಂಥಹ ದ್ವಿಜನು ಸರ್ವಸಂಗಗಳಿಂದ ಮತ್ತು ಸ್ನೇಹಬಂಧನಗಳಿಂದ ವಿಮುಕ್ತನಾಗಿರುತ್ತಾನೆ. ಆತ್ಮನಲ್ಲಿಯೇ ಪರಮಾತ್ಮನ ಭಾವವನ್ನಿಟ್ಟುಕೊಂಡು ತಿರುಗಾಡುತ್ತಿರುತ್ತಾನೆ.

13129026a ಸ್ಥಾಣುಭೂತೋ ನಿರಾಹಾರೋ ಮೋಕ್ಷದೃಷ್ಟೇನ ಕರ್ಮಣಾ|

13129026c ಪರಿವ್ರಜತಿ ಯೋ ಯುಕ್ತಸ್ತಸ್ಯ ಧರ್ಮಃ ಸನಾತನಃ||

ಸ್ಥಾಣುಭೂತನಾಗಿ, ನಿರಾಹಾರಿಯಾಗಿ, ಮೋಕ್ಷಧರ್ಮದಲ್ಲಿ ಹೇಳಿರುವ ಕರ್ಮಯುಕ್ತನಾಗಿ ಸಂಚರಿಸುತ್ತಿರುವುದೇ ಅವನ ಸನಾತನ ಧರ್ಮವು.

13129027a ನ ಚೈಕತ್ರ ಚಿರಾಸಕ್ತೋ ನ ಚೈಕಗ್ರಾಮಗೋಚರಃ|

13129027c ಯುಕ್ತೋ ಹ್ಯಟತಿ ನಿರ್ಮುಕ್ತೋ ನ ಚೈಕಪುಲಿನೇಶಯಃ||

ಅಂಥವನು ಒಂದೇ ಸ್ಥಳದಲ್ಲಿ ಬಹುಕಾಲ ಆಸಕ್ತನಾಗಿರುವುದಿಲ್ಲ. ಒಂದೇ ಗ್ರಾಮದಲ್ಲಿ ಬಹುಕಾಲ ಕಾಣಿಸುವುದಿಲ್ಲ. ಒಂದೇ ಮರಳ ದಿಣ್ಣೆಯ ಮೇಲೆ ಹೆಚ್ಚುಕಾಲ ಮಲಗುವುದಿಲ್ಲ. ನಿರ್ಮುಕ್ತನಾಗಿ ಸಂಚರಿಸುತ್ತಲೇ ಇರುತ್ತಾನೆ.

13129028a ಏಷ ಮೋಕ್ಷವಿದಾಂ ಧರ್ಮೋ ವೇದೋಕ್ತಃ ಸತ್ಪಥಃ ಸತಾಮ್|

13129028c ಯೋ ಮಾರ್ಗಮನುಯಾತೀಮಂ ಪದಂ ತಸ್ಯ ನ ವಿದ್ಯತೇ||

ಇದೇ ಸತ್ಪುರುಷರ ಸನ್ಮಾರ್ಗವೆಂಬ ವೇದೋಕ್ತ ಮೋಕ್ಷವನ್ನು ತಿಳಿದವರ ಧರ್ಮವು. ಈ ಮಾರ್ಗದಲ್ಲಿ ಹೋಗುವವರು ಪರಮ ಪದವನ್ನು ಪಡೆದುಕೊಳ್ಳುತ್ತಾರೆ.

13129029a ಚತುರ್ವಿಧಾ ಭಿಕ್ಷವಸ್ತೇ ಕುಟೀಚರಕೃತೋದಕಃ[8]|

13129029c ಹಂಸಃ ಪರಮಹಂಸಶ್ಚ ಯೋ ಯಃ ಪಶ್ಚಾತ್ಸ ಉತ್ತಮಃ||

ಕುಟೀಚರ[9], ಕೃತೋದಕ[10], ಹಂಸ[11] ಮತ್ತು ಪರಮಹಂಸ[12]ರೆಂಬ ನಾಲ್ಕು ವಿಧದ ಸಂನ್ಯಾಸಿಗಳಿದ್ದಾರೆ. ಇವರಲ್ಲಿ ನಂತರದವರು ಮೊದಲಿನವರಿಗಿಂತ ಶ್ರೇಷ್ಠರು[13].

13129030a ಅತಃ ಪರತರಂ ನಾಸ್ತಿ ನಾಧರಂ ನ ತಿರೋಽಗ್ರತಃ|

13129030c ಅದುಃಖಮಸುಖಂ ಸೌಮ್ಯಮಜರಾಮರಮವ್ಯಯಮ್||

ಪರಮಹಂಸಧರ್ಮದಿಂದ ಪ್ರಾಪ್ತವಾಗುವ ಬ್ರಹ್ಮಜ್ಞಾನಕ್ಕಿಂತಲೂ ಮಿಗಿಲಾದುದು ಬೇರೆ ಯಾವುದೂ ಇಲ್ಲ. ಇದು ಯಾವ ಧರ್ಮಕ್ಕೂ ನಿಕೃಷ್ಟವಾದುದಲ್ಲ. ಅವರ ಆತ್ಮಜ್ಞಾನವು ಎಂದೂ ಮರೆಯಾಗುವುದಿಲ್ಲ. ಇದು ಸುಖ-ದುಃಖಗಳಿಂದ ರಹಿತವಾದುದು. ಮುಪ್ಪು ಸಾವುಗಳಿಂದ ರಹಿತವಾದುದು ಮತ್ತು ಅವಿನಾಶಿಯಾದುದು.”

13129031 ಉಮೋವಾಚ|

13129031a ಗಾರ್ಹಸ್ಥ್ಯೋ ಮೋಕ್ಷಧರ್ಮಶ್ಚ ಸಜ್ಜನಾಚರಿತಸ್ತ್ವಯಾ|

13129031c ಭಾಷಿತೋ ಮರ್ತ್ಯಲೋಕಸ್ಯ ಮಾರ್ಗಃ ಶ್ರೇಯಸ್ಕರೋ ಮಹಾನ್||

ಉಮೆಯು ಹೇಳಿದಳು: “ಸಜ್ಜನರು ಆಚರಿಸುವ ಗೃಹಸ್ಥ ಮತ್ತು ಮೋಕ್ಷಧರ್ಮಗಳ ಕುರಿತು ಹೇಳಿದೆ. ಇವೆರಡೂ ಮರ್ತ್ಯಲೋಕದವರಿಗೆ ಮಹಾ ಶ್ರೇಯಸ್ಕರ ಮಾರ್ಗಗಳೇ ಆಗಿವೆ.

13129032a ಋಷಿಧರ್ಮಂ ತು ಧರ್ಮಜ್ಞ ಶ್ರೋತುಮಿಚ್ಚಾಮ್ಯನುತ್ತಮಮ್|

13129032c ಸ್ಪೃಹಾ ಭವತಿ ಮೇ ನಿತ್ಯಂ ತಪೋವನನಿವಾಸಿಷು||

ಧರ್ಮಜ್ಞ! ಅನುತ್ತಮವಾದ ಋಷಿಧರ್ಮವನ್ನು ಕೇಳಬಯಸುತ್ತೇನೆ. ತಪೋವನವಾಸಿಗಳ ಕುರಿತು ನಿತ್ಯವೂ ನನಗೆ ಸ್ನೇಹವಿದೆ.

13129033a ಆಜ್ಯಧೂಮೋದ್ಭವೋ ಗಂಧೋ ರುಣದ್ಧೀವ ತಪೋವನಮ್|

13129033c ತಂ ದೃಷ್ಟ್ವಾ ಮೇ ಮನಃ ಪ್ರೀತಂ ಮಹೇಶ್ವರ ಸದಾ ಭವೇತ್||

ಮಹೇಶ್ವರ! ತಪೋವನದಾದ್ಯಂತ ಹರಡುವ ಆಜ್ಯಾಹುತಿಗಳಿಂದ ಬರುವ ಗಂಧವನ್ನು ನೋಡಿ ನನ್ನ ಮನಸ್ಸು ಸದಾ ಪ್ರೀತಗೊಳ್ಳುತ್ತದೆ.

13129034a ಏತಂ ಮೇ ಸಂಶಯಂ ದೇವ ಮುನಿಧರ್ಮಕೃತಂ ವಿಭೋ|

13129034c ಸರ್ವಧರ್ಮಾರ್ಥತತ್ತ್ವಜ್ಞ ದೇವದೇವ ವದಸ್ವ ಮೇ|

13129034e ನಿಖಿಲೇನ ಮಯಾ ಪೃಷ್ಟಂ ಮಹಾದೇವ ಯಥಾತಥಮ್||

ದೇವ! ವಿಭೋ! ಸರ್ವಧರ್ಮಾರ್ಥಗಳ ತತ್ತ್ವಜ್ಞ! ದೇವದೇವ! ಮಹಾದೇವ! ಈ ಮುನಿಧರ್ಮದ ಕುರಿತು ನನಗೆ ಸಂಶಯವಿದೆ. ನಾನು ಕೇಳಿದುದನ್ನು ಸಂಪೂರ್ಣವಾಗಿ ಹೇಗಿದೆಯೋ ಹಾಗೆ ಹೇಳಬೇಕು.”

13129035 ಮಹೇಶ್ವರ ಉವಾಚ|

13129035a ಹಂತ ತೇಽಹಂ ಪ್ರವಕ್ಷ್ಯಾಮಿ ಮುನಿಧರ್ಮಮನುತ್ತಮಮ್|

13129035c ಯಂ ಕೃತ್ವಾ ಮುನಯೋ ಯಾಂತಿ ಸಿದ್ಧಿಂ ಸ್ವತಪಸಾ ಶುಭೇ||

ಮಹೇಶ್ವರನು ಹೇಳಿದನು: “ಶುಭೇ! ನಿಲ್ಲು! ಯಾವುದನ್ನು ಆಚರಿಸಿ ತಮ್ಮ ತಪಸ್ಸುಗಳಿಂದ ಮುನಿಗಳು ಸಿದ್ಧಿಯನ್ನು ಹೊಂದುತ್ತಾರೋ ಆ ಅನುತ್ತಮ ಮುನಿಧರ್ಮವನ್ನು ಹೇಳುತ್ತೇನೆ.

13129036a ಫೇನಪಾನಾಮೃಷೀಣಾಂ ಯೋ ಧರ್ಮೋ ಧರ್ಮವಿದಾಂ ಸದಾ|

13129036c ತಂ ಮೇ ಶೃಣು ಮಹಾಭಾಗೇ ಧರ್ಮಜ್ಞೇ ಧರ್ಮಮಾದಿತಃ||

ಮಹಾಭಾಗೇ! ಧರ್ಮಜ್ಞೇ! ಸದಾ ಧರ್ಮವಿದರಾದ ಫೇನಪರೆಂಬ ಋಷಿಗಳ ಧರ್ಮವನ್ನು ಮೊದಲು ಹೇಳುತ್ತೇನೆ. ಅದನ್ನು ಕೇಳು.

13129037a ಉಂಚಂತಿ ಸತತಂ ತಸ್ಮಿನ್ಬ್ರಾಹ್ಮಂ ಫೇನೋತ್ಕರಂ ಶುಭಮ್|

13129037c ಅಮೃತಂ ಬ್ರಹ್ಮಣಾ ಪೀತಂ ಮಧುರಂ ಪ್ರಸೃತಂ ದಿವಿ||

ದಿವಿಯಲ್ಲಿ ಬ್ರಹ್ಮನು ಮಧುರವಾದ ಅಮೃತವನ್ನು ಕುಡಿಯುವಾಗ ಅವನ ಬಾಯಿಂದ ನೊರೆಯು ಸುರಿದಿತ್ತು. ಬ್ರಾಹ್ಮ ಎಂಬ ಹೆಸರಿನ ನೊರೆಯೊಂದಿಗೆ ಬರುವ ಅನ್ನವನ್ನು ಸತತವೂ ಸೇವಿಸುವವರೇ ಫೇನಪರು[14].

13129038a ಏಷ ತೇಷಾಂ ವಿಶುದ್ಧಾನಾಂ ಫೇನಪಾನಾಂ ತಪೋಧನೇ|

13129038c ಧರ್ಮಚರ್ಯಾಕೃತೋ ಮಾರ್ಗೋ ವಾಲಖಿಲ್ಯಗಣೇ ಶೃಣು||

ತಪೋಧನೇ! ನೊರೆಯೊಡನೆ ಬಂದ ಅಗ್ರಾನ್ನವನ್ನೇ ಸಂಗ್ರಹಿಸಿ ತಿನ್ನುವ ಈ ಧರ್ಮಾಚರಣೆಯ ಮಾರ್ಗವು ವಿಶುದ್ಧರಾದ ಫೇನಪರ ಮಾರ್ಗವು. ಈಗ ವಾಲಖಿಲ್ಯಗಣವು ಆಚರಿಸುವ ಧರ್ಮಮಾರ್ಗವನ್ನು ಕೇಳು.

13129039a ವಾಲಖಿಲ್ಯಾಸ್ತಪಃಸಿದ್ಧಾ ಮುನಯಃ ಸೂರ್ಯಮಂಡಲೇ|

13129039c ಉಂಚಮುಂಚಂತಿ ಧರ್ಮಜ್ಞಾಃ ಶಾಕುನೀಂ ವೃತ್ತಿಮಾಸ್ಥಿತಾಃ||

ಸೂರ್ಯಮಂಡಲದಲ್ಲಿರುವ ತಪಃಸಿದ್ಧರಾದ ಧರ್ಮಜ್ಞ ವಾಲಖಿಲ್ಯ ಮುನಿಗಳು ಪಕ್ಷಿಗಳಂತೆ ಒಂದೊಂದೇ ಕಾಳುಗಳನ್ನು ಆರಿಸಿಕೊಂಡಿ ಉಂಛವೃತ್ತಿಯಿಂದ ಜೀವವನ್ನು ಪೊರೆದುಕೊಳ್ಳುತ್ತಾರೆ.

13129040a ಮೃಗನಿರ್ಮೋಕವಸನಾಶ್ಚೀರವಲ್ಕಲವಾಸಸಃ|

13129040c ನಿರ್ದ್ವಂದ್ವಾಃ ಸತ್ಪಥಂ ಪ್ರಾಪ್ತಾ ವಾಲಖಿಲ್ಯಾಸ್ತಪೋಧನಾಃ||

ತಪೋಧನ ವಾಲಖಿಲ್ಯರು ಮೃಗಚರ್ಮಗಳನ್ನೂ ತೊಗಟೆಗಳನ್ನೂ ನಾರುಮಡಿಯನ್ನೂ ಉಡುತ್ತಾರೆ ಮತ್ತು ಹೊದೆಯುತ್ತಾರೆ. ಶೀತೋಷ್ಣ ಸುಖ-ದುಃಖಾದಿ ದ್ವಂದ್ವಗಳಿಂದ ರಹಿತರಾಗಿ ಸತ್ಪಥದಲ್ಲಿಯೇ ಇರುತ್ತಾರೆ.

13129041a ಅಂಗುಷ್ಠಪರ್ವಮಾತ್ರಾಸ್ತೇ ಸ್ವೇಷ್ವಂಗೇಷು ವ್ಯವಸ್ಥಿತಾಃ|

13129041c ತಪಶ್ಚರಣಮೀಹಂತೇ ತೇಷಾಂ ಧರ್ಮಫಲಂ ಮಹತ್||

ಅಂಗುಷ್ಠದಷ್ಟು ಮಾತ್ರ ಶರೀರಾಕೃತಿಯುಳ್ಳ ಅವರು ತಮ್ಮ ತಮ್ಮ ಕರ್ಮಗಳಲ್ಲಿ ನಿರತರಾಗಿರುತ್ತಾರೆ. ಯಾವಾಗಲೂ ತಪಶ್ಚರಣೆಯಲ್ಲಿಯೇ ಆಸಕ್ತರಾಗಿರುವ ಅವರ ಧರ್ಮದ ಫಲವೂ ಮಹತ್ತರವಾದುದು.

13129042a ತೇ ಸುರೈಃ ಸಮತಾಂ ಯಾಂತಿ ಸುರಕಾರ್ಯಾರ್ಥಸಿದ್ಧಯೇ|

13129042c ದ್ಯೋತಯಂತೋ ದಿಶಃ ಸರ್ವಾಸ್ತಪಸಾ ದಗ್ಧಕಿಲ್ಬಿಷಾಃ||

ಸುರರ ಕಾರ್ಯಾರ್ಥಸಿದ್ಧಿಗೆ ತೊಡಗಿದಾಗ ಅವರು ದೇವತೆಗಳ ಸಮಾನ ರೂಪವನ್ನೇ ಧರಿಸುತ್ತಾರೆ. ತಪಸ್ಸಿನಿಂದ ಪಾಪಗಳನ್ನು ದಗ್ಧಗೊಳಿಸಿದ ಅವರು ತಮ್ಮ ದಿವ್ಯತೇಜಸ್ಸಿನಿಂದ ಎಲ್ಲ ದಿಕ್ಕುಗಳನ್ನೂ ಬೆಳಗುತ್ತಾರೆ.

13129043a ಯೇ ತ್ವನ್ಯೇ ಶುದ್ಧಮನಸೋ ದಯಾಧರ್ಮಪರಾಯಣಾಃ|

13129043c ಸಂತಶ್ಚಕ್ರಚರಾಃ ಪುಣ್ಯಾಃ ಸೋಮಲೋಕಚರಾಶ್ಚ ಯೇ||

13129044a ಪಿತೃಲೋಕಸಮೀಪಸ್ಥಾಸ್ತ ಉಂಚಂತಿ ಯಥಾವಿಧಿ|

ಅನ್ಯ ಶುದ್ಧಮನಸ ದಯಾಧರ್ಮಪರಾಯಣ ಪುಣ್ಯ ಸಂತರು ಚಕ್ರಚರರು[15]. ಅವರು ಸೋಮಲೋಕದಲ್ಲಿ ಸಂಚರಿಸುತ್ತಿರುತ್ತಾರೆ. ಪಿತೃಲೋಕಸಮೀಪಸ್ಥರಾದ ಇವರು ಯಥಾವಿಧಿಯಾಗಿ ಉಂಛವೃತ್ತಿಯಿಂದ ಜೀವನವನ್ನು ನಿರ್ವಹಿಸುತ್ತಾರೆ.

13129044c ಸಂಪ್ರಕ್ಷಾಲಾಶ್ಮಕುಟ್ಟಾಶ್ಚ ದಂತೋಲೂಖಲಿನಸ್ತಥಾ||

13129045a ಸೋಮಪಾನಾಂ ಚ ದೇವಾನಾಮೂಷ್ಮಪಾಣಾಂ ತಥೈವ ಚ|

13129045c ಉಂಚಂತಿ ಯೇ ಸಮೀಪಸ್ಥಾಃ ಸ್ವಭಾವನಿಯತೇಂದ್ರಿಯಾಃ||

ಇವರೇ ಅಲ್ಲದೇ ಸಂಪ್ರಕ್ಷಾಲರು[16], ಆಶ್ಮಕುಟ್ಟರು[17], ದಂತೋಲೂಖಲಿಕರು[18] ಎಂಬ ಮುನಿಗಳೂ ಇದ್ದಾರೆ. ಅವರೆಲ್ಲರೂ ಸೋಮಪ[19] ಮತ್ತು ಊಷ್ಮಪ[20] ದೇವತೆಗಳ ಸಮೀಪದಲ್ಲಿ ಪತ್ನಿಯರೊಂದಿಗೆ ಇದ್ದುಕೊಂಡು ಜಿತೇಂದ್ರಿಯರಾಗಿ ಉಂಛವೃತ್ತಿಯ ಜೀವನವನ್ನು ನಿರ್ವಹಿಸುತ್ತಿರುತ್ತಾರೆ.

13129046a ತೇಷಾಮಗ್ನಿಪರಿಷ್ಯಂದಃ ಪಿತೃದೇವಾರ್ಚನಂ ತಥಾ|

13129046c ಯಜ್ಞಾನಾಂ ಚಾಪಿ ಪಂಚಾನಾಂ ಯಜನಂ ಧರ್ಮ ಉಚ್ಯತೇ||

ಅಗ್ನಿಹೋತ್ರ, ಪಿತೃ-ದೇವಾರ್ಚನೆ ಮತ್ತು ಪಂಚ ಮಹಾಯಜ್ಞಗಳ ಅನುಷ್ಠಾನ ಇವು ಅವರ ಧರ್ಮಗಳೆಂದು ಹೇಳಿದ್ದಾರೆ.

13129047a ಏಷ ಚಕ್ರಚರೈರ್ದೇವಿ ದೇವಲೋಕಚರೈರ್ದ್ವಿಜೈಃ|

13129047c ಋಷಿಧರ್ಮಃ ಸದಾ ಚೀರ್ಣೋ ಯೋಽನ್ಯಸ್ತಮಪಿ ಮೇ ಶೃಣು||

ದೇವಿ! ಚಕ್ರದಂತೆ ಯಾವಾಗಲೂ ಸಂಚರಿಸುವ ಮತ್ತು ದೇವಲೋಕದಲ್ಲಿ ಸಂಚರಿಸುವ ಬ್ರಾಹ್ಮಣ ಮುನಿಗಳು ಈ ಋಷಿಧರ್ಮವನ್ನು ಸದಾ ಅನುಷ್ಠಾನಮಾಡುತ್ತಾರೆ. ಉಳಿದ ಋಷಿಧರ್ಮಗಳನ್ನೂ ಹೇಳುತ್ತೇನೆ. ಕೇಳು.

13129048a ಸರ್ವೇಷ್ವೇವರ್ಷಿಧರ್ಮೇಷು ಜೇಯ ಆತ್ಮಾ ಜಿತೇಂದ್ರಿಯಃ[21]|

13129048c ಕಾಮಕ್ರೋಧೌ ತತಃ ಪಶ್ಚಾಜ್ಜೇತವ್ಯಾವಿತಿ ಮೇ ಮತಿಃ||

ಸರ್ವ ಋಷಿಧರ್ಮದವರೂ ಜಿತೇಂದ್ರಿಯರಾಗಿ ಆತ್ಮವನ್ನು ಗೆದ್ದಿರುತ್ತಾರೆ. ನಂತರ ಕಾಮಕ್ರೋಧಗಳನ್ನೂ ಜಯಿಸಿರುತ್ತಾರೆ. ಇದು ನನ್ನ ಅಭಿಪ್ರಾಯ.

13129049a ಅಗ್ನಿಹೋತ್ರಪರಿಸ್ಪಂದೋ ಧರ್ಮರಾತ್ರಿಸಮಾಸನಮ್|

13129049c ಸೋಮಯಜ್ಞಾಭ್ಯನುಜ್ಞಾನಂ ಪಂಚಮೀ ಯಜ್ಞದಕ್ಷಿಣಾ||

ಅಗ್ನಿಹೋತ್ರದ ಮೂಲಕ ಅಗ್ನಿಯನ್ನು ಉಪಚರಿಸುವುದು, ಧರ್ಮಕಾರ್ಯಗಳಲ್ಲಿಯೇ ಸಂಲಗ್ನನಾಗಿರುವುದು, ಸೋಮಯಾಗವನ್ನು ಮಾಡುವುದು ಮತ್ತು ಯಜ್ಞದಕ್ಷಿಣೆಗಳನ್ನು ಕೊಡುವುದು – ಈ ಐದು ಧರ್ಮಗಳನ್ನು ಎಲ್ಲ ಋಷಿಗಳೂ ಅವಶ್ಯವಾಗಿ ಅನುಷ್ಠಾನಮಾಡಬೇಕು.

13129050a ನಿತ್ಯಂ ಯಜ್ಞಕ್ರಿಯಾ ಧರ್ಮಃ ಪಿತೃದೇವಾರ್ಚನೇ ರತಿಃ|

13129050c ಸರ್ವಾತಿಥ್ಯಂ ಚ ಕರ್ತವ್ಯಮನ್ನೇನೋಂಚಾರ್ಜಿತೇನ ವೈ||

ಇವರಿಗೆ ನಿತ್ಯ ಯಜ್ಞಕ್ರಿಯೆಯು ಧರ್ಮ. ಪಿತೃದೇವಾರ್ಚನೆಗಳಲ್ಲಿ ತೊಡಗಿರುವುದು ಧರ್ಮ. ಉಂಛವೃತ್ತಿಯಿಂದ ಗಳಿಸಿದ ಅನ್ನದಿಂದ ಸರ್ವ ಅತಿಥಿಗಳನ್ನೂ ಸತ್ಕರಿಸಬೇಕಾದುದು ಇವರ ಧರ್ಮ.

13129051a ನಿವೃತ್ತಿರುಪಭೋಗಸ್ಯ ಗೋರಸಾನಾಂ ಚ ವೈ ರತಿಃ[22]|

13129051c ಸ್ಥಂಡಿಲೇ ಶಯನಂ ಯೋಗಃ ಶಾಕಪರ್ಣನಿಷೇವಣಮ್||

13129052a ಫಲಮೂಲಾಶನಂ ವಾಯುರಾಪಃ ಶೈವಲಭಕ್ಷಣಮ್|

13129052c ಋಷೀಣಾಂ ನಿಯಮಾ ಹ್ಯೇತೇ ಯೈರ್ಜಯಂತ್ಯಜಿತಾಂ ಗತಿಮ್||

ಗೋರಸ[23]ಗಳ ಉಪಭೋಗಗಳಿಂದ ನಿವೃತ್ತಿ, ನೆಲದ ಮೇಲೆ ಮಲಗುವುದು, ಯೋಗಾಭ್ಯಾಸಮಾಡುವುದು, ಕಾಯಿ-ಪಲ್ಯೆಗಳನ್ನೂ ಎಲೆಗಳನ್ನೂ ತಿನ್ನುವುದು, ಫಲಗಳನ್ನೂ ಗೆಡ್ಡೆ-ಗೆಣಸುಗಳನ್ನೂ ತಿನ್ನುವುದು, ಗಾಳಿ-ನೀರು-ಪಾಚಿ ಇವುಗಳನ್ನೇ ಆಹಾರವಾಗಿ ಸೇವಿಸುವುದು – ಇವೆಲ್ಲವೂ ಋಷಿಗಳು ಅನುಸರಿಸುವ ನಿಯಮಗಳು. ಇವುಗಳಿಂದ ಅವರು ಜಯಿಸಲಸಾಧ್ಯ ಗತಿಯನ್ನು ಪಡೆದುಕೊಳ್ಳುತ್ತಾರೆ.

13129053a ವಿಧೂಮೇ ನ್ಯಸ್ತಮುಸಲೇ ವ್ಯಂಗಾರೇ ಭುಕ್ತವಜ್ಜನೇ|

13129053c ಅತೀತಪಾತ್ರಸಂಚಾರೇ ಕಾಲೇ ವಿಗತಭೈಕ್ಷಕೇ||

13129054a ಅತಿಥಿಂ ಕಾಂಕ್ಷಮಾಣೋ ವೈ ಶೇಷಾನ್ನಕೃತಭೋಜನಃ|

13129054c ಸತ್ಯಧರ್ಮರತಿಃ ಕ್ಷಾಂತೋ ಮುನಿಧರ್ಮೇಣ ಯುಜ್ಯತೇ||

ಗೃಹಸ್ಥನ ಅಡುಗೆಮನೆಯಿಂದ ಹೊಗೆಯು ಬರುವುದು ನಿಂತಾಗ, ಭತ್ತದಿಂದ ಹೊಟ್ಟನ್ನು ಬೇರ್ಪಡಿಸುವ ಒನಕೆಯ ಶಬ್ದವು ನಿಂತಾಗ, ಎಲ್ಲರೂ ಊಟಮಾಡಿ ಮುಗಿಸಿರುವಾಗ, ಅಡುಗೆಮನೆಯ ಪಾತ್ರೆಯ ಶಬ್ದಗಳೂ ನಿಂತುಹೋದಾಗ, ಭಿಕ್ಷುಕರ್ಯಾರೂ ಇಲ್ಲದೇ ಇರುವಾಗ –ಕಾಯುತ್ತಿದ್ದು ಬೇರೆಲ್ಲೂ ಭೋಜನವು ಸಿಕ್ಕದೇ ತನ್ನ ಕುಟೀರಕ್ಕೆ ಬರುವ ಅತಿಥಿಯನ್ನು ಉಪಚರಿಸಿ ಸತ್ಕರಿಸಿ ಭೋಜನವನ್ನು ಮಾಡಿಸಿ ನಂತರ ಅನ್ನಶೇಷವನ್ನು ಭುಂಜಿಸುವ, ಸತ್ಯಧರ್ಮನಿರತ, ಶಾಂತ ಮನುಷ್ಯನು ಋಷಿಧರ್ಮದಿಂದ ಕೂಡಿದವನಾಗುತ್ತಾನೆ.

13129055a ನ ಸ್ತಂಭೀ ನ ಚ ಮಾನೀ ಯೋ ನ ಪ್ರಮತ್ತೋ ನ ವಿಸ್ಮಿತಃ|

13129055c ಮಿತ್ರಾಮಿತ್ರಸಮೋ ಮೈತ್ರೋ ಯಃ ಸ ಧರ್ಮವಿದುತ್ತಮಃ||

ಗರ್ವಾಭಿಮಾನಗಳಿಲ್ಲದ, ಪ್ರಮತ್ತನಾಗಿರದ, ಯಾವುದನ್ನು ನೋಡಿಯೂ ವಿಸ್ಮಿತನಾಗದ, ಮಿತ್ರರಲ್ಲಿಯೂ ಶತ್ರುಗಳಲ್ಲಿಯೂ ಸಮನಾಗಿರುವ ಮತ್ತು ಮೈತ್ರಿಯಿಂದಿರುವವನೇ ಉತ್ತಮ ಧರ್ಮವಿದುವು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಉಮಾಮಹೇಶ್ವರಸಂವಾದೇ ಏಕೋನತ್ರಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಉಮಾಮಹೇಶ್ವರಸಂವಾದ ಎನ್ನುವ ನೂರಾಇಪ್ಪತ್ತೊಂಭತ್ತನೇ ಅಧ್ಯಾಯವು.

[1] ಋಗ್ವೇದ, ಯಜುರ್ವೇದ ಮತ್ತು ಸಾಮವೇದ.

[2] ದಾನ, ಅಧ್ಯಯನ ಮತ್ತು ಯಜ್ಞ

[3] ಕಾಮ, ಕ್ರೋಧ, ಮತ್ತು ಲೋಭ.

[4] ಶಮಸ್ತೂಪರಮೋ (ಭಾರತ ದರ್ಶನ).

[5] ಏಕಮಂಶಂ ವಿವರ್ಧಯೇತ್| ಎನ್ನುವುದಕ್ಕೆ ಉಳಿದ ಒಂದು ಅಂಶವನ್ನು ಪುನಃ ಧರ್ಮಮೂಲಕವಾದ ಕಾರ್ಯದಲ್ಲಿ ತೊಡಗಿಸಿ ವೃದ್ಧಿಪಡಿಸಬೇಕು ಎಂಬ ಅನುವಾದವೂ ಇದೆ (ಭಾರತ ದರ್ಶನ).

[6] ಕುಟ್ಯಾಂ (ಭಾರತ ದರ್ಶನ).

[7] ಸಮಾಸಜ್ಜೇತಿ ವೈ (ಭಾರತ ದರ್ಶನ).

[8] ಕುಟೀಚಕಬಹೂದಕೌ (ಭಾರತ ದರ್ಶನ).

[9] ಕಷಾಯ-ತ್ರಿದಂಡಗಳನ್ನು ಧರಿಸಿ ಮಗನು ಕಟ್ಟಿದ ಕುಟೀರದಲ್ಲಿ ವಾಸಿಸುತ್ತಾ ತನ್ನ ಅಥವಾ ಬಂಧುಗಳ ಮನೆಯಲ್ಲಿ ಊಟಮಾಡುತ್ತಾ ಆಧ್ಯಾತ್ಮಪರನಾಗಿರುವವನು (ಭಾರತ ದರ್ಶನ). A kutichyara is someone who is deceitful in conduct (Bibek Debroy).

[10] ತೀರ್ಥಯಾತ್ರಾಪರನಾಗಿರುವ ಸಂನ್ಯಾಸಿಯು.

[11] ಏಕದಂಡಧಾರಿಯಾಗಿರುವವನು (ಭಾರತ ದರ್ಶನ).

[12] ಕೋಪ-ತಾಪಾದಿಗಳನ್ನು ತೊರೆದು ಸುಖ-ದುಃಖಾದಿ ದ್ವಂದ್ವಗಳನ್ನು ಸಮಾನವಾಗಿ ಭಾವಿಸಿ ಶುದ್ಧಮನಸ್ಸಿನಿಂದ ಪ್ರಾಣಧಾರಣೆಗೆ ಮಾತ್ರವೇ ಕ್ಲೃಪ್ತಕಾಲದಲ್ಲಿ ಭಿಕ್ಷಾಟನೆ ಮಾಡುತ್ತಾ ಶೂನ್ಯಗೃಹ, ದೇವಾಲಯ, ವೃಕ್ಷಸಮೂಹ, ನದೀತೀರ, ಪರ್ವತದ ಗುಹೆ – ಮೊದಲಾದ ನಿರ್ಜನ ಪ್ರದೇಶಗಳಲ್ಲಿ ವಾಸಿಸುತ್ತಾ ಅಹಂಕಾರ ಮಮಕಾರ ಶೂನ್ಯನ್ಅಗಿ ಸರ್ವದಾ ಪ್ರಣವವನ್ನು ಜಪಿಸುತ್ತಾ ಶುಭಾಶುಭಕರ್ಮಗಳ ನಿರ್ಮೂಲನಕ್ಕಾಗಿ ಸಂನ್ಯಾಸದಿಂದ ದೇಹವನ್ನು ತ್ಯಜಿಸಲು ಪ್ರಯತ್ನಿಸುವವನು ಪರಮಹಂಸನು (ಭಾರತ ದರ್ಶನ).

[13] ಕುಟೀಚರರಿಗಿಂತಲೂ ಕೃತೋದಕರು ಶ್ರೇಷ್ಠರು; ಕೃತೋದಕರಿಗಿಂತಲೂ ಹಂಸರು ಶ್ರೇಷ್ಠರು ಮತ್ತು ಹಂಸರಿಗಿಂತಲೂ ಪರಮಹಂಸರು ಶ್ರೇಷ್ಠರು (ಭಾರತ ದರ್ಶನ).

[14] ಫೇನಪ ಎಂದರೆ ನೊರೆಯನ್ನು ತಿಂದು ಜೀವಿಸುವವರು ಎಂದರ್ಥ. ಕರುವು ಹಸುವಿನ ಹಾಲನ್ನು ಕುಡಿಯುವಾಗ ಅದರ ಎರಡು ಕಟವಾಯಿಗಳಲ್ಲಿಯೂ ಬರುವ ನೊರೆಯನ್ನೇ ತಿಂದು ಜೀವಿಸುವ ಋಷಿಗಳಿಗೆ ಫೇನಪರೆಂದು ಹೆಸರು. ಆದರೆ ಇಲ್ಲಿ ವ್ಯಾಖ್ಯಾನಕಾರರು ಫೇನೋತ್ಕರಂ ಅಗ್ರಾನ್ನ ಸಮೂಹಂ ಉಂಛಂತಿ ಅಲ್ಪಶಃ ಆದದತೇ ಅರ್ಥಾತ್ ಅನ್ನವು ಕುದಿಯುವಾಗ ನೊರೆಯ ಜೊತೆಯಲ್ಲಿ ಮೇಲೆ ಬಂದ ಅನ್ನಕ್ಕೆ ಫೇನ ಎಂದು ಅರ್ಥೈಸಿದ್ದಾರೆ (ಭಾರತ ದರ್ಶನ).

[15] ಚಕ್ರದಂತೆ ಯಾವಾಗಲೂ ತಿರುಗುತ್ತಲೇ ಇರುವವರು (ಭಾರತ ದರ್ಶನ).

[16] ಒಂದು ದಿನಕ್ಕೆ ಬೇಕಾಗುವಷ್ಟು ಧಾನ್ಯವನ್ನು ಸಂಗ್ರಹಿಸಿ ಊಟವಾದನಂತರ ಅಡಿಗೆಯ ಪಾತ್ರೆಗಳನ್ನು ತೊಳೆದಿಟ್ಟು ಮರು ಊಟಕ್ಕಾಗಿ ಯೋಚಿಸದೇ ಇರುವವರು (ಭಾರತ ದರ್ಶನ).

[17] ಕಲ್ಲಿನಿಂದ ಭತ್ತವನ್ನು ಕುಟ್ಟಿ ಅಕ್ಕಿಮಾಡಿಕೊಂಡು ಭೋಜನ ಮಾಡುವವರು (ಭಾರತ ದರ್ಶನ).

[18] ಹಲ್ಲನ್ನೇ ಒನಕೆಯನ್ನಾಗಿ ಮಾಡಿಕೊಂಡು ಭತ್ತದಿಂದ ಹೊಟ್ಟನ್ನು ಬೇರ್ಪಡಿಸಿ ಸಂಗ್ರಹಿಸಿದ ಅಕ್ಕಿಯಿಂದ ಅನ್ನವನ್ನು ಮಾಡಿಕೊಂಡು ಭೋಜನ ಮಾಡುವವರು (ಭಾರತ ದರ್ಶನ).

[19] ಚಂದ್ರನ ಕಿರಣಗಳನ್ನೇ ತಿಂದು ಜೀವಿಸುವ ದೇವತೆಗಳು (ಭಾರತ ದರ್ಶನ).

[20] ಸೂರ್ಯನ ಕಿರಣಗಳನ್ನೇ ತಿಂದು ಜೀವಿಸುವ ದೇವತೆಗಳು (ಭಾರತ ದರ್ಶನ).

[21] ಜ್ಞೇಯೋಽಽತ್ಮಾ ಸಂಯತೇಂದ್ರಿಯೈಃ| (ಭಾರತ ದರ್ಶನ).

[22] ಗೋರಸಾನಾಂ ಶಮೇ ರತಿಃ| (ಭಾರತ ದರ್ಶನ).

[23] ಹಾಲು, ಮೊಸರು, ಬೆಣ್ಣೆ, ಮಜ್ಜಿಗೆ, ತುಪ್ಪ ಮೊದಲಾದ ಗೋವಿನಿಂದ ದೊರೆಯುವ ರಸಪದಾರ್ಥಗಳು.

Comments are closed.