ಹರಿವಂಶ: ಹರಿವಂಶ ಪರ್ವ
Contents
Toggle೨
ದಕ್ಷೋತ್ಪತ್ತಿಕಥನಮ್
19002001 ವೈಶಂಪಾಯನ ಉವಾಚ|
19002001a ಸ ಸೃಷ್ಟಾಸು ಪ್ರಜಾಸ್ವೇವಮಾಪವೋ ವೈ ಪ್ರಜಾಪತಿಃ |
19002001c ಲೇಭೇ ವೈ ಪುರುಷಃ ಪತ್ನೀಂ ಶತರೂಪಾಮಯೋನಿಜಾಮ್ ||
ವೈಶಂಪಾಯನನು ಹೇಳಿದನು: “ಹೀಗೆ ಸ್ವಯಂ ತಾನೇ ನೀರಿನಲ್ಲಿ ಪ್ರಜೆಗಳನ್ನು ಸೃಷ್ಟಿಸಿದ ಪ್ರಜಾಪತಿಯ ಅರ್ಧದೇಹದಿಂದ ಉಂಟಾದ ಪುರುಷನು ಅಯೋನಿಜೆ ಶತರೂಪಳನ್ನು ಪತ್ನಿಯನ್ನಾಗಿ ಪಡೆದುಕೊಂಡನು.
19002002a ಆಪವಸ್ಯ ಮಹಿಮ್ನಾ ತು ದಿವಮಾವೃತ್ಯ ತಿಷ್ಠತಃ |
19002002c ಧರ್ಮೇಣೈವ ಮಹಾರಾಜ ಶತರೂಪಾ ವ್ಯಜಾಯತ ||
ಮಹಾರಾಜ! ತನ್ನ ಮಹಿಮೆಯಿಂದ ದಿವವನ್ನು ಆವರಿಸಿ ನಿಂತಿದ್ದ ಪುರುಷನ ಧರ್ಮದಿಂದಲೇ ಶತರೂಪಳು ಹುಟ್ಟಿಕೊಂಡಳು.
19002003a ಸಾ ತು ವರ್ಷಾಯುತಂ ತಪ್ತ್ವಾ ತಪಃ ಪರಮದುಶ್ಚರಮ್ |
19002003c ಭರ್ತಾರಂ ದೀಪ್ತತಪಸಂ ಪುರುಷಂ ಪ್ರತ್ಯಪದ್ಯತ ||
ಅವಳಾದರೋ ಹತ್ತು ಸಾವಿರ ವರ್ಷಗಳ ಪರ್ಯಂತ ಪರಮದುಶ್ಚರ ತಪಸ್ಸನ್ನು ತಪಿಸಿ ತಪಸ್ಸಿನಿಂದ ಬೆಳಗುತ್ತಿದ್ದ ಪತಿ ಪುರುಷನ ಬಳಿಸಾರಿದಳು.
19002004a ಸ ವೈ ಸ್ವಾಯಂಭುವಸ್ತಾತ ಪುರುಷೋ ಮನುರುಚ್ಯತೇ |
19002004c ತಸ್ಯೈಕಸಪ್ತತಿಯುಗಂ ಮನ್ವಂತರಮಿಹೋಚ್ಯತೇ ||
ಆ ಪುರುಷನನ್ನು ಸ್ವಾಯಂಭುವ ಮನುವೆಂದು ಹೇಳುತ್ತಾರೆ. ಅವನ ಎಪ್ಪತ್ತೊಂದು ಮಹಾಯುಗ[1]ಗಳನ್ನು ಮನ್ವಂತರ ಎಂದು ಕರೆಯುತ್ತಾರೆ.
19002005a ವೈರಾಜಾತ್ಪುರುಷಾದ್ವೀರಂ ಶತರೂಪಾ ವ್ಯಜಾಯತ |
19002005c ಪ್ರಿಯವ್ರತೋತ್ತಾನಪಾದೌ ವೀರಾತ್ಕಾಮ್ಯಾ ವ್ಯಜಾಯತ ||
ಆ ವಿರಾಜಮಾನ ಪುರುಷನಿಂದ ಶತರೂಪಳು ವೀರನನ್ನು ಹುಟ್ಟಿಸಿದಳು. ವೀರನು ಕಾಮ್ಯಳಿಂದ ಪ್ರಿಯವ್ರತ ಮತ್ತು ಉತ್ತಾನಪಾದರನ್ನು ಹುಟ್ಟಿಸಿದನು.
19002006a ಕಾಮ್ಯಾ ನಾಮ ಮಹಾಬಾಹೋ ಕರ್ದಮಸ್ಯ ಪ್ರಜಾಪತೇಃ |
19002006c ಕಾಮ್ಯಾಪುತ್ರಾಸ್ತು ಚತ್ವಾರಃ ಸಮ್ರಾಟ್ಕುಕ್ಷಿರ್ವಿರಾಟ್ಪ್ರಭುಃ |
19002006e ಪ್ರಿಯವ್ರತಂ ಸಮಾಸಾದ್ಯ ಪತಿಂ ಸಾ ಸುಷುವೇ ಸುತಾನ್ ||
ಮಹಾಬಾಹೋ! ಪ್ರಜಾಪತಿ ಕರ್ದಮನಿಗೆ ಕಾಮ್ಯಾ ಎಂಬ ಹೆಸರಿನ ಪುತ್ರಿಯಿದ್ದಳು. ಆ ಕಾಮ್ಯಳು ಪತಿ ಪ್ರಿಯವ್ರತನನ್ನು ಸೇರಿ ಸಾಮ್ರಾಟ್, ಕುಕ್ಷಿ, ವಿರಾಟ್ ಮತ್ತು ಪ್ರಭು ಎಂಬ ನಾಲ್ವರು ಪುತ್ರರನ್ನು ಪಡೆದಳು.
19002007a ಉತ್ತಾನಪಾದಂ ಜಗ್ರಾಹ ಪುತ್ರಮತ್ರಿಃ ಪ್ರಜಾಪತಿಃ |
19002007c ಉತ್ತಾನಪಾದಾಚ್ಛತುರಃ ಸೂನೃತಾಜನಯತ್ಸುತಾನ್ ||
ಪ್ರಜಾಪತಿ ಅತ್ರಿಯು ಉತ್ತಾನಪಾದನನ್ನು ಪುತ್ರನಾಗಿ ಸ್ವೀಕರಿಸಿದನು. ಉತ್ತಾನಪಾದನು ಪತ್ನಿ ಸೂನೃತಳಲ್ಲಿ ನಾಲ್ವರು ಪುತ್ರರನ್ನು ಹುಟ್ಟಿಸಿದನು.
19002008a ಧರ್ಮಸ್ಯ ಕನ್ಯಾ ಸುಶ್ರೋಣೀ ಸೂನೃತಾ ನಾಮ ವಿಶ್ರುತಾ |
19002008c ಉತ್ಪನ್ನಾ ವಾಜಿಮೇಧೇನ ಧ್ರುವಸ್ಯ ಜನನೀ ಶುಭಾ ||
ಧ್ರುವನ ಶುಭ ಜನನಿ ಸೂನೃತಾ ಎಂದು ವಿಖ್ಯಾತಳಾದ ಸುಶ್ರೋಣಿ ಕನ್ಯೆಯು ಧರ್ಮನ ಅಶ್ವಮೇಧ ಯಾಗದಿಂದ ಜನಿಸಿದ್ದಳು.
19002009a ಧ್ರುವಂ ಚ ಕೀರ್ತಿಮಂತಂ ಚ ಶಿವಂ ಶಾಂತಮಯಸ್ಪತಿಮ್ |
19002009c ಉತ್ತಾನಪಾದೋಽಜನಯತ್ಸೂನೃತಾಯಾಂ ಪ್ರಜಾಪತಿಃ ||
ಪ್ರಜಾಪತಿ ಉತ್ತಾನಪಾದನು ಸೂನೃತಳಲ್ಲಿ ಧ್ರುವ, ಕೀರ್ತಿಮಂತ, ಶಿವ, ಶಾಂತ ಮತ್ತು ಅಯಸ್ಪತಿ ಎಂಬ ಪುತ್ರರನ್ನು ಪಡೆದನು.
19002010a ಧ್ರುವೋ ವರ್ಷಸಹಸ್ರಾಣಿ ತ್ರೀಣಿ ದಿವ್ಯಾನಿ ಭಾರತ |
19002010c ತಪಸ್ತೇಪೇ ಮಹಾರಾಜ ಪ್ರಾರ್ಥಯನ್ಸುಮಹದ್ಯಶಃ ||
ಭಾರತ! ಮಹಾರಾಜ! ಧ್ರುವನು ಮಹಾಯಶಸ್ಸನ್ನು ಪ್ರಾರ್ಥಿಸಿ ಮೂರು ಸಾವಿರ ದಿವ್ಯ ವರ್ಷಗಳ ಪರ್ಯಂತ ತಪಸ್ಸನ್ನು ತಪಿಸಿದನು.
19002011a ತಸ್ಮೈ ಬ್ರಹ್ಮಾ ದದೌ ಪ್ರೀತಃ ಸ್ಥಾನಮಪ್ರತಿಮಂ ಭುವಿ |
19002011c ಅಚಲಂ ಚೈವ ಪುರತಃ ಸಪ್ತರ್ಷೀಣಾಂ ಪ್ರಜಾಪತಿಃ ||
ಅವನ ಮೇಲೆ ಪ್ರೀತನಾಗಿ ಪ್ರಜಾಪತಿ ಬ್ರಹ್ಮನು ಅವನಿಗೆ ಸಪ್ತರ್ಷಿಗಳ ಎದಿರು ಭುವಿಯಲ್ಲಿಯೇ ಅಪ್ರತಿಮ ಅಚಲ ಸ್ಥಾನವನ್ನು ನೀಡಿದನು.
19002012a ತಸ್ಯಾತಿಮಾತ್ರಾಮೃದ್ಧಿಂ ಚ ಮಹಿಮಾನಂ ನಿರೀಕ್ಷ್ಯ ಚ |
19002012c ದೇವಾಸುರಾಣಾಮಾಚಾರ್ಯಃ ಶ್ಲೋಕಮಪ್ಯುಶನಾ ಜಗೌ ||
ಧ್ರುವನ ಅತಿಮಾತ್ರದ ವೃದ್ಧಿ ಮತ್ತು ಮಹಿಮೆಗಳನ್ನು ನೀರೀಕ್ಷಿಸಿ ದೇವಾಸುರರ ಆಚಾರ್ಯ ಶುಕ್ರನು ಈ ಶ್ಲೋಕವನ್ನು ಹಾಡಿದನು:
19002013a ಅಹೋಽಸ್ಯ ತಪಸೋ ವೀರ್ಯಮಹೋ ಶ್ರುತಮಹೋ ಬಲಮ್ |
19002013c ಯದೇನಂ ಪುರತಃ ಕೃತ್ವಾ ಧ್ರುವಂ ಸಪ್ತರ್ಷಯಃ ಸ್ಥಿತಾಃ ||
“ಅಹೋ! ಇವನ ತಪಸ್ಸು ಮತ್ತು ವೀರ್ಯಬಲಗಳು ಮಹತ್ತರವಾದುವೆಂದು ಕೇಳಿದ್ದೇವೆ. ಇದರಿಂದಲೇ ಸಪ್ತರ್ಷಿಗಳೂ ಕೂಡ ಧ್ರುವನನ್ನು ತಮ್ಮ ಮುಂದೆ ಇರಿಸಿಕೊಂಡಿದ್ದಾರೆ!”
19002014a ತಸ್ಮಾಚ್ಛ್ಲಿಷ್ಟಿಂ ಚ ಭವ್ಯಂ ಚ ಧ್ರುವಾಚ್ಛಂಭುರ್ವ್ಯಜಾಯತ|
19002014c ಶ್ಲಿಷ್ಟೇರಾಧತ್ತ ಸುಚ್ಛಾಯಾ ಪಂಚ ಪುತ್ರಾನಕಲ್ಮಷಾನ್ ||
19002015a ರಿಪುಂ ರಿಪುಂಜಯಂ ಪುಣ್ಯಂ ವೃಕಲಂ ವೃಕತೇಜಸಮ್ |
19002015c ರಿಪೋರಾಧತ್ತ ಬೃಹತೀ ಚಾಕ್ಷುಷಂ ಸರ್ವತೇಜಸಮ್ ||
ಆ ಧ್ರುವನು ಶಂಭುವಿನಲ್ಲಿ ಶ್ಲಿಷ್ಟಿ ಮತ್ತು ಭವ್ಯ ಎಂಬ ಪುತ್ರರನ್ನು ಹುಟ್ಟಿಸಿದನು. ಶ್ಲಿಷ್ಟನು ಸುಚ್ಛಾಯೆಯಲ್ಲಿ ಐವರು ಅಕಲ್ಮಷ ಪುತ್ರರನ್ನು ಪಡೆದನು: ರಿಪು, ರಿಪುಂಜಯ, ಪುಣ್ಯ, ವೃಕಲ ಮತ್ತು ವೃಕತೇಜಸ. ರಿಪುವು ಬೃಹತಿಯಲ್ಲಿ ಸರ್ವತೇಜಸ್ವಿ ಚಾಕ್ಷುಷನನ್ನು ಪಡೆದನು.
19002016a ಅಜೀಜನತ್ಪುಷ್ಕರಿಣ್ಯಾಂ ವೀರಣ್ಯಾಂ ಚಾಕ್ಷುಷೋ ಮನುಮ್|
19002016c ಪ್ರಜಾಪತೇರಾತ್ಮಜಾಯಾಮರಣ್ಯಸ್ಯ ಮಹಾತ್ಮನಃ ||
19002017a ಮನೋರಜಾಯಂತ ದಶ ನಡ್ವಲಾಯಾಂ ಮಹೌಜಸಃ |
19002017c ಕನ್ಯಾಯಾಮಭವಚ್ಛ್ರೇಷ್ಠಾ ವೈರಾಜಸ್ಯ ಪ್ರಜಾಪತೇಃ ||
ಚಾಕ್ಷುಷನು ವೀರಣನ ಪುತ್ರಿ ಪುಷ್ಕರಿಣಿಯಲ್ಲಿ ಮನುವನ್ನು ಹುಟ್ಟಿಸಿದನು. ವೈರಾಜ ಪ್ರಜಾಪತಿಯ ವಂಶದಲ್ಲಿ ಹುಟ್ಟಿದ ಈ ಮಹೌಜಸ ಮನುವು ಪ್ರಜಾಪತಿ ಅರಣ್ಯನ ಪುತ್ರಿ ನಡ್ವಲೆಯಲ್ಲಿ ಹತ್ತು ಪುತ್ರರನ್ನು ಪಡೆದುಕೊಂಡನು.
19002018a ಊರುಃ ಪುರುಃ ಶತದ್ಯುಮ್ನಸ್ತಪಸ್ವೀ ಸತ್ಯವಾನ್ಕವಿಃ |
19002018c ಅಗ್ನಿಷ್ಟುದತಿರಾತ್ರಶ್ಚ ಸುದ್ಯುಮ್ನಶ್ಚೇತಿ ತೇ ನವ ||
ಊರು, ಪುರು, ಶತದ್ಯುಮ್ನ, ತಪಸ್ವೀ, ಸತ್ಯವಾನ್, ಕವಿ, ಅಗ್ನಿಷ್ಟುತ್, ಅತಿರಾತ್ರ, ಮತ್ತು ಒಂಭತ್ತನೆಯವನು ಸುದ್ಯುಮ್ನ.
19002019a ಅಭಿಮನ್ಯುಶ್ಚ ದಶಮೋ ನಡ್ವಲಾಯಾಃ ಸುತಾಃ ಸ್ಮೃತಾಃ |
19002019c ಊರೋರಜನಯತ್ಪುತ್ರಾನ್ಷಡಾಗ್ನೇಯೀ ಮಹಾಪ್ರಭಾನ್ |
19002019e ಅಂಗಂ ಸುಮನಸಂ ಖ್ಯಾತಿಂ ಕ್ರತುಮಂಗಿರಸಂ ಗಯಮ್ ||
ಹತ್ತನೆಯವನು ಅಭಿಮನ್ಯು. ಇವರೇ ನಡ್ವಲೆಯ ಸುತರು. ಊರುವು ಅಗ್ನಿಯ ಪುತ್ರಿಯಲ್ಲಿ ಮಹಾಪ್ರಭೆಯಿದ್ದ ಅಂಗ, ಸುಮನಸ, ಖ್ಯಾತಿ, ಕ್ರತು, ಅಂಗಿರಸ ಮತ್ತು ಗಯ ಎಂಬ ಆರು ಪುತ್ರರನ್ನು ಪಡೆದನು.
19002020a ಅಂಗಾತ್ಸುನೀಥಾಪತ್ಯಂ ವೈ ವೇನಮೇಕಮಜಾಯತ |
19002020c ಅಪಚಾರಾತ್ತು ವೇನಸ್ಯ ಪ್ರಕೋಪಃ ಸುಮಹಾನಭೂತ್ ||
ಸುನೀಥೆ[2]ಯು ಅಂಗನಿಂದ ವೈನನೆಂಬ ಒಬ್ಬನೇ ಪುತ್ರನನ್ನು ಪಡೆದಳು. ಅಪಚಾರಿಯಾಗಿದ್ದ ವೇನನ ಮೇಲೆ ಅತಿಭಯಂಕರ ಪ್ರಕೋಪವುಂಟಾಯಿತು[3].
19002021a ಪ್ರಜಾರ್ಥಮೃಷಯೋ ಯಸ್ಯ ಮಮಂಥುರ್ದಕ್ಷಿಣಂ ಕರಮ್|
19002021c ವೇನಸ್ಯ ಪಾಣೌ ಮಥಿತೇ ಬಭೂವ ಮುನಿಭಿಃ ಪೃಥುಃ ||
ಸಂತಾನಕ್ಕಾಗಿ ಮುನಿಗಳು ಅವನ ಎಡಗೈಯನ್ನು ಮಥಿಸಲು, ಮಥಿಸಲ್ಪಟ್ಟ ವೇನನ ಕೈಗಳಿಂದ ಪೃಥುವು ಜನಿಸಿದನು.
19002022a ತಂ ದೃಷ್ಟ್ವಾ ಋಷಯಃ ಪ್ರಾಹುರೇಷ ವೈ ಮುದಿತಾಃ ಪ್ರಜಾಃ|
19002022c ಕರಿಷ್ಯತಿ ಮಹಾತೇಜಾ ಯಶಶ್ಚ ಪ್ರಾಪ್ಸ್ಯತೇ ಮಹತ್ ||
ಅವನನ್ನು ನೋಡಿ ಋಷಿಗಳು ಹೇಳಿದರು: “ಇವನು ಪ್ರಜೆಗಳನ್ನು ಸಂತೋಷಗೊಳಿಸುತ್ತಾನೆ ಮತ್ತು ಇವನಿಗೆ ಮಹಾತೇಜಸ್ಸು-ಮಹಾಕೀರ್ತಿಗಳು ಪ್ರಾಪ್ತವಾಗುತ್ತವೆ!”
19002023a ಸ ಧನ್ವೀ ಕವಚೀ ಖಡ್ಗೀ ತೇಜಸಾ ನಿರ್ದಹನ್ನಿವ |
19002023c ಪೃಥುರ್ವೈನ್ಯಸ್ತದಾ ಚೇಮಾಂ ರರಕ್ಷ ಕ್ಷತ್ರಪೂರ್ವಜಃ ||
ಧನುಸ್ಸು-ಖಡ್ಗ-ಕವಚಗಳನ್ನು ಧರಿಸಿ ತೇಜಸ್ಸಿನಿಂದ ಸುಡುವನೋ ಎಂತಿದ್ದ ಆ ಕ್ಷತ್ರಿಯರ ಪೂರ್ವಜ ವೈನ್ಯ ಪೃಥುವು ಈ ಭೂಮಿಯನ್ನು ರಕ್ಷಿಸಿದನು.
19002024a ರಾಜಸೂಯಾಭಿಷಿಕ್ತಾನಾಮಾದ್ಯಃ ಸ ವಸುಧಾಧಿಪಃ |
19002024c ತಸ್ಮಾಚ್ಚೈವ ಸಮುತ್ಪನ್ನೌ ನಿಪುಣೌ ಸೂತಮಾಗಧೌ ||
ರಾಜಸೂಯದಿಂದ ಅಭಿಷಿಕ್ತರಾದ ವಸುಧಾಧಿಪರಲ್ಲಿ ಪೃಥುವು ಮೊದಲನೆಯವನಾಗಿದ್ದನು. ಆ ಯಜ್ಞದಿಂದ ನಿಪುಣ ಸೂತ[4]-ಮಾಗಧ[5]ರು ಉತ್ಪನ್ನರಾದರು.
19002025a ತೇನೇಯಂ ಗೌರ್ಮಹಾರಾಜ ದುಗ್ಧಾ ಸಸ್ಯಾನಿ ಭಾರತ |
19002025c ಪ್ರಜಾನಾಂ ವೃತ್ತಿಕಾಮೇನ ದೇವೈಃ ಸರ್ಷಿಗಣೈಃ ಸಹ ||
ಭಾರತ! ಮಹಾರಾಜ! ಪ್ರಜೆಗಳಿಗೆ ವೃತ್ತಿಯನ್ನು ಬಯಸಿ ಅವನೇ ದೇವ-ಋಷಿಗಣಗಳೊಂದಿಗೆ ಗೋವಿನ ರೂಪದಲ್ಲಿದ್ದ ಪೃಥ್ವಿಯಿಂದ ಸಸ್ಯಗಳನ್ನು ಕರೆದನು.
19002026a ಪಿತೃಭಿರ್ದಾನವೈಶ್ಚೈವ ಗಂಧರ್ವೈಃ ಸಾಪ್ಸರೋಗಣೈಃ |
19002026c ಸರ್ಪೈಃ ಪುಣ್ಯಜನೈಶ್ಚೈವ ವೀರುದ್ಭಿಃ ಪರ್ವತೈಸ್ತಥಾ ||
ಪೃಥುವಿನೊಂದಿಗೆ ಆ ಗೋವನ್ನು ಪಿತೃಗಳು, ದಾನವರು, ಗಂಧರ್ವರು, ಅಪ್ಸರಗಣಗಳು, ಸರ್ಪಗಳು, ಯಕ್ಷರು, ವೃಕ್ಷಗಳು ಮತ್ತು ಪರ್ವತಗಳು ಕರೆದಿದ್ದರು.
19002027a ತೇಷು ತೇಷು ಚ ಪಾತ್ರೇಷು ದುಹ್ಯಮಾನಾ ವಸುಂಧರಾ |
19002027c ಪ್ರಾದಾದ್ಯಥೇಪ್ಸಿತಂ ಕ್ಷೀರಂ ತೇನ ಪ್ರಾಣಾನಧಾರಯನ್ ||
ಅವರವರ ಪಾತ್ರೆಗಳಲ್ಲಿ ವಸುಂಧರೆಯ ಹಾಲುಕರೆಯುತ್ತಿದ್ದ ಅವರಿಗೆ ಅವರಿಗಿಷ್ಟವಾದಷ್ಟು ಹಾಲನ್ನು ನೀಡಲು ಅದರಿಂದ ತಮ್ಮ ತಮ್ಮ ಪ್ರಾಣಗಳನ್ನು ಧರಿಸಿದ್ದರು.
19002028a ಪೃಥುಪುತ್ರೌ ತು ಧರ್ಮಜ್ಞೌ ಜಜ್ಞಾತೇಽಂತರ್ಧಿಪಾಲಿತೌ |
19002028c ಶಿಖಂಡಿನೀ ಹವಿರ್ಧಾನಮಂತರ್ಧಾನಾದ್ವ್ಯಜಾಯತ ||
ಪೃಥುವಿಗೆ ಅಂತರ್ಧಾನ ಮತ್ತು ಪಾಲಿತ ಎಂಬ ಇಬ್ಬರು ಮಕ್ಕಳು ಜನಿಸಿದರು. ಅಂತರ್ಧಾನನು ಶಿಖಂಡಿನಿಯಲ್ಲಿ ಹವಿರ್ಧಾನನನ್ನು ಹುಟ್ಟಿಸಿದನು.
19002029a ಹವಿರ್ಧಾನಾತ್ ಷಡಾಗ್ನೇಯೀ ಧಿಷಣಾಜನಯತ್ಸುತಾನ್ |
19002029c ಪ್ರಾಚೀನಬರ್ಹಿಷಂ ಶುಕ್ಲಂ ಗಯಂ ಕೃಷ್ಣಂ ವ್ರಜಾಜಿನೌ ||
ಅಗ್ನಿಯ ಪುತ್ರಿ ಧಿಷಣಳು ಹವಿರ್ಧಾನನ ಆರು ಪುತ್ರರಿಗೆ ಜನ್ಮವಿತ್ತಳು: ಪ್ರಾಚೀನಬರ್ಹಿ, ಶುಕ್ಲ, ಗಯ, ಕೃಷ್ಣ, ವ್ರಜ ಮತ್ತು ಅಜಿನ.
19002030a ಪ್ರಾಚೀನಬರ್ಹಿರ್ಭಗವಾನ್ಮಹಾನಾಸೀತ್ಪ್ರಜಾಪತಿಃ |
19002030c ಹವಿರ್ಧಾನಾನ್ಮಹಾರಾಜ ಯೇನ ಸಂವರ್ಧಿತಾಃ ಪ್ರಜಾಃ ||
ಮಹಾರಾಜ! ಭಗವಾನ್ ಪ್ರಜಾಪತಿ ಪ್ರಾಚೀನಬರ್ಹಿಯು ಪ್ರಜೆಗಳನ್ನು ಅಭಿವೃದ್ಧಿಗೊಳಿಸುವುದರಲ್ಲಿ ಹವಿರ್ಧಾನನಿಗಿಂತಲೂ ಅಧಿಕನಾಗಿದ್ದನು.
19002031a ಪ್ರಾಚೀನಾಗ್ರಾಃ ಕುಶಾಸ್ತಸ್ಯ ಪೃಥಿವ್ಯಾಂ ಜನಮೇಜಯ |
19002031c ಪ್ರಾಚೀನಬರ್ಹಿರ್ಭಗವಾನ್ಪೃಥಿವೀತಲಚಾರಿಣಃ ||
ಜನಮೇಜಯ! ಅವನ ಯಜ್ಞದ ಸಮಯದಲ್ಲಿ ಪ್ರಾಚೀನಾಗ್ರ ದರ್ಬೆಗಳನ್ನು ಸಂಪೂರ್ಣ ಭೂಮಿಯ ಮೇಲೆ ಹರಡಿದ್ದಿದುರಿಂದ ಅವನನ್ನು ಪೃಥ್ವೀಚಾರಿಗಳು ಭಗವಾನ್ ಪ್ರಾಚೀನಬರ್ಹನೆಂದು ಕರೆಯುತ್ತಾರೆ.
19002032a ಸಮುದ್ರತನಯಾಯಾಂ ತು ಕೃತದಾರೋಽಭವತ್ಪ್ರಭುಃ |
19002032c ಮಹತಸ್ತಪಸಃ ಪಾರೇ ಸವರ್ಣಾಯಾಂ ಮಹೀಪತಿಃ ||
ಪ್ರಭು ಮಹೀಪತಿ ಪ್ರಾಚೀನಬರ್ಹಿಯು ಮಹಾತಪಸ್ಸನ್ನು ತಪಿಸಿದ ನಂತರ ಸಮುದ್ರತನಯೆ ಸವರ್ಣಳನ್ನು ಪತ್ನಿಯನ್ನಾಗಿ ಮಾಡಿಕೊಂಡನು.
19002033a ಸವರ್ಣಾಧತ್ತ ಸಾಮುದ್ರೀ ದಶ ಪ್ರಾಚೀನಬರ್ಹಿಷಃ |
19002033c ಸರ್ವೇ ಪ್ರಚೇತಸೋ ನಾಮ ಧನುರ್ವೇದಸ್ಯ ಪಾರಗಾಃ ||
ಸಮುದ್ರನ ಮಗಳು ಸವರ್ಣಳು ಪ್ರಾಚೀನಬರ್ಹನಿಗೆ ಹತ್ತು ಮಕ್ಕಳನ್ನಿತ್ತಳು. ಆ ಎಲ್ಲ ಧನುರ್ವೇದಪಾರಂಗತರೂ ಪ್ರಚೇತಸರೆಂಬ ಹೆಸರಿನಿಂದ ತಿಳಿಯಲ್ಪಟ್ಟಿದ್ದಾರೆ.
19002034a ಅಪೃಥಗ್ಧರ್ಮಚರಣಾಸ್ತೇಽತಪ್ಯಂತ ಮಹತ್ತಪಃ |
19002034c ದಶವರ್ಷಸಹಸ್ರಾಣಿ ಸಮುದ್ರಸಲಿಲೇಶಯಾಃ ||
ಒಂದೇ ಧರ್ಮವನ್ನು ಆಚರಿಸುತ್ತಿದ್ದ ಅವರು ಸಮುದ್ರದಲ್ಲಿ ಮುಳುಗಿ ಹತ್ತು ಸಾವಿರ ವರ್ಷಗಳ ಪರ್ಯಂತ ಮಹಾ ತಪಸ್ಸನ್ನು ತಪಿಸಿದರು.
19002035a ತಪಶ್ಚರತ್ಸು ಪೃಥಿವೀಂ ಪ್ರಚೇತಸ್ಸು ಮಹೀರುಹಾಃ |
19002035c ಅರಕ್ಷ್ಯಮಾಣಾಮಾವವ್ರುರ್ಬಭೂವಾಥ ಪ್ರಜಾಕ್ಷಯಃ ||
ಪ್ರಚೇತಸರು ತಪಸ್ಸನ್ನಾಚರಿಸುತ್ತಿರಲು ರಕ್ಷಣೆಮಾಡುವ ರಾಜರಿಲ್ಲದ ಈ ಭೂಮಿಯಲ್ಲಿ ವೃಕ್ಷಗಳು ತುಂಬಿಕೊಂಡು ಪ್ರಜೆಗಳ ನಾಶವಾಗತೊಡಗಿತು.
19002036a ನಾಶಕನ್ಮಾರುತೋ ವಾತುಂ ವೃತಂ ಖಮಭವದ್ದ್ರುಮೈಃ |
19002036c ದಶವರ್ಷಸಹಸ್ರಾಣಿ ನ ಶೇಕುಶ್ಚೇಷ್ಟಿತುಂ ಪ್ರಜಾಃ ||
ಆ ಹತ್ತು ಸಾವಿರ ವರ್ಷಗಳಲ್ಲಿ ಆಕಾಶದಷ್ಟು ಎತ್ತರವಾಗಿ ಬೆಳೆಯುತ್ತಿದ್ದ ಮರಗಳಿಂದಾಗಿ ಭೂಮಿಯ ಮೇಲೆ ಗಾಳಿಯೇ ಬೀಸಲು ಶಕ್ಯವಾಗಿರಲಿಲ್ಲ. ಇದರಿಂದಾಗಿ ಜನರಿಗೆ ಹಂದಾಡಲೂ ಆಗುತ್ತಿರಲಿಲ್ಲ.
19002037a ತದುಪಸೃತ್ಯ ತಪಸಾ ಯುಕ್ತಾಃ ಸರ್ವೇ ಪ್ರಚೇತಸಃ |
19002037c ಮುಖೇಭ್ಯೋ ವಾಯುಮಗ್ನಿಂ ಚ ತೇಽಸಸೃಜಂಜಾತಮನ್ಯವಃ||
ತಪಸ್ಸಿನಿಂದ ಯುಕ್ತರಾಗಿದ್ದ ಆ ಎಲ್ಲ ಪ್ರಚೇತಸರೂ ಅದರ ಸುಳಿಯನ್ನು ತಿಳಿದುಕೊಂಡು ಕೋಪಗೊಂಡು ತಮ್ಮ ತಮ್ಮ ಮುಖಗಳಿಂದ ವಾಯು ಮತ್ತು ಅಗ್ನಿಯರನ್ನು ಸೃಷ್ಟಿಸಿದರು.
19002038a ಉನ್ಮೂಲಾನಥ ತಾನ್ಕೃತ್ವಾ ವೃಕ್ಷಾನ್ವಾಯುರಶೋಷಯತ್ |
19002038c ತಾನಗ್ನಿರದಹದ್ಘೋರ ಏವಮಾಸೀದ್ದ್ರುಮಕ್ಷಯಃ ||
ವಾಯುವು ವೃಕ್ಷಗಳನ್ನು ಬುಡಸಹಿತ ಉರುಳಿಸಿ ಒಣಗಿಸಿದನು. ಘೋರ ಅಗ್ನಿಯು ಅವುಗಳನ್ನು ಸುಟ್ಟನು. ಹೀಗೆ ವೃಕ್ಷಗಳ ನಾಶವಾಗತೊಡಗಿತು.
19002039a ದ್ರುಮಕ್ಷಯಮಥೋ ಬುದ್ಧ್ವಾ ಕಿಂಚಿಚ್ಛಿಷ್ಟೇಷು ಶಾಖಿಷು |
19002039c ಉಪಗಮ್ಯಾಬ್ರವೀದೇತಾನ್ರಾಜಾ ಸೋಮಃ ಪ್ರಜಾಪತೀನ್ ||
ಈ ರೀತಿ ವೃಕ್ಷ-ಕ್ಷಯವು ನಡೆಯುತ್ತಿದೆ ಎನ್ನುವುದನ್ನು ಸ್ವಲ್ಪವೇ ಅಳಿದುಳಿದಿದ್ದ ಮರಗಳಿಂದ ತಿಳಿದುಕೊಂಡ ಅವುಗಳ ರಾಜ ಸೋಮನು ಪ್ರಜಾಪತಿ ಪ್ರಾಚೇತಸರ ಬಳಿಬಂದು ಹೇಳಿದನು:
19002040a ಕೋಪಂ ಯಚ್ಛತ ರಾಜಾನಃ ಸರ್ವೇ ಪ್ರಾಚೀನಬರ್ಹಿಷಃ |
19002040c ವೃಕ್ಷಶೂನ್ಯಾ ಕೃತಾ ಪೃಥ್ವೀ ಶಾಮ್ಯತಾಮಗ್ನಿಮಾರುತೌ ||
“ಸರ್ವ ಪ್ರಾಚೀನಬರ್ಹಿಷರೇ! ರಾಜರೇ! ಕೋಪಗೊಂಡು ಭೂಮಿಯನ್ನೇ ವೃಕ್ಷಶೂನ್ಯಳನ್ನಾಗಿ ಮಾಡುವುದನ್ನು ನಿಲ್ಲಿಸಿ! ಈ ಅಗ್ನಿ-ವಾಯುಗಳನ್ನು ಶಾಂತಗೊಳಿಸಿ!
19002041a ರತ್ನಭೂತಾ ಚ ಕನ್ಯೇಯಂ ವೃಕ್ಷಾಣಾಂ ವರವರ್ಣಿನೀ |
19002041c ಭವಿಷ್ಯಂ ಜಾನತಾ ತತ್ತ್ವಂ ಧೃತಾ ಗರ್ಭೇಣ ವೈ ಮಯಾ ||
ಇಗೋ ಇವಳು ವೃಕ್ಷಗಳ ಕನ್ಯೆ ವರವರ್ಣಿನೀ ರತ್ನಭೂತಾ. ಭವಿಷ್ಯವನ್ನು ತಿಳಿದಿದ್ದ ನಾನು ಇವಳ ತತ್ತ್ವವನ್ನು ನನ್ನ ಗರ್ಭದಲ್ಲಿ ಧರಿಸಿದ್ದೆನು.
19002042a ಮಾರಿಷಾ ನಾಮ ಕನ್ಯೇಯಂ ವೃಕ್ಷಾಣಾಮಿತಿ ನಿರ್ಮಿತಾ |
19002042c ಭಾರ್ಯಾ ವೋಽಸ್ತು ಮಹಾಭಾಗಾಃ ಸೋಮವಂಶವಿವರ್ಧಿನೀ||
ಮಹಾಭಾಗರೇ! ವೃಕ್ಷಗಳಿಗೆಂದು ನಿರ್ಮಿತಳಾಗಿದ್ದ ಮಾರಿಷಾ ಎಂಬ ಹೆಸರಿನ ಈ ಕನ್ಯೆಯು ನಿಮ್ಮ ಭಾರ್ಯೆಯಾಗಲಿ! ಇವಳು ಮುಂದೆ ಸೋಮವಂಶವನ್ನು ವೃದ್ಧಿಗೊಳಿಸುತ್ತಾಳೆ.
19002043a ಯುಷ್ಮಾಕಂ ತೇಜಸೋಽರ್ಧೇನ ಮಮ ಚಾರ್ಧೇನ ತೇಜಸಃ|
19002043c ಅಸ್ಯಾಮುತ್ಪತ್ಸ್ಯತೇ ಪುತ್ರೋ ದಕ್ಷೋ ನಾಮ ಪ್ರಜಾಪತಿಃ ||
ನಿಮ್ಮ ಅರ್ಧತೇಜಸ್ಸಿನಿಂದ ಮತ್ತು ನನ್ನ ಅರ್ಧತೇಜಿಸ್ಸಿನಿಂದ ಇವಳಲ್ಲಿ ದಕ್ಷ ಎಂಬ ಹೆಸರಿನ ಪ್ರಜಾಪತಿ ಪುತ್ರನು ಜನಿಸುತ್ತಾನೆ.
19002044a ಯ ಇಮಾಂ ದಗ್ಧಭೂಯಿಷ್ಠಾಂ ಯುಷ್ಮತ್ತೇಜೋಮಯೇನ ವೈ|
19002044c ಅಗ್ನಿನಾಗ್ನಿಸಮೋ ಭೂಯಃ ಪ್ರಜಾಃ ಸಂವರ್ಧಯಿಷ್ಯತಿ ||
ನಿಮ್ಮ ತೇಜಸ್ಸಿನ ಅಗ್ನಿಯಿಂದ ಸಂಭವಿಸಿದ ಆ ಅಗ್ನಿಸಮ ದಕ್ಷನು ಅಧಿಕಾಂಶವಾಗಿ ಸುಟ್ಟುಹೋಗಿರುವ ಈ ಭೂಮಿಯಲ್ಲಿ ಪ್ರಜೆಗಳನ್ನು ಪುನಃ ವೃದ್ಧಿಗೊಳಿಸುತ್ತಾನೆ.”
19002045a ತತಃ ಸೋಮಸ್ಯ ವಚನಾಜ್ಜಗೃಹುಸ್ತೇ ಪ್ರಚೇತಸಃ |
19002045c ಸಂಹೃತ್ಯ ಕೋಪಂ ವೃಕ್ಷೇಭ್ಯಃ ಪತ್ನೀಂ ಧರ್ಮೇಣ ಮಾರಿಷಾಮ್||
ಸೋಮನ ಮಾತನ್ನು ಸ್ವೀಕರಿಸಿ ಪ್ರಚೇತಸರು ವೃಕ್ಷಗಳ ಮೇಲಿನ ತಮ್ಮ ಕೋಪವನ್ನು ಹಿಂತೆಗೆದುಕೊಂಡು ಮಾರಿಷಳನ್ನು ಧರ್ಮಪೂರ್ವಕವಾಗಿ ಪತ್ನಿಯನ್ನಾಗಿ ಮಾಡಿಕೊಂಡರು.
19002046a ಮಾರಿಷಾಯಾಂ ತತಸ್ತೇ ವೈ ಮನಸಾ ಗರ್ಭಮಾದಧುಃ |
19002046c ದಶಭ್ಯಸ್ತು ಪ್ರಚೇತೋಭ್ಯೋ ಮಾರಿಷಾಯಾಂ ಪ್ರಜಾಪತಿಃ |
19002046e ದಕ್ಷೋ ಜಜ್ಞೇ ಮಹಾತೇಜಾಃ ಸೋಮಸ್ಯಾಂಶೇನ ಭಾರತ ||
ನಂತರ ಅವರು ಮನಸ್ಸಿನಿಂದಲೇ ಅವಳಿಗೆ ಗರ್ಭವನ್ನಿತ್ತರು. ಭಾರತ! ಹತ್ತು ಪ್ರಾಚೇತಸರ ಮತ್ತು ಸೋಮನ ಅಂಶದಿಂದ ಮಾರಿಷಳಲ್ಲಿ ಮಹಾತೇಜಸ್ವೀ ಪ್ರಜಾಪತಿ ದಕ್ಷನು ಜನಿಸಿದನು.
19002047a ಪುತ್ರಾನುತ್ಪಾದಯಾಮಾಸ ಸೋಮವಂಶವಿವರ್ಧನಾನ್ |
19002047c ಅಚರಾಂಶ್ಚ ಚರಾಂಶ್ಚೈವ ದ್ವಿಪದೋಽಥ ಚತುಷ್ಪದಃ |
19002047e ಸ ದೃಷ್ಟ್ವಾ ಮನಸಾ ದಕ್ಷಃ ಪಶ್ಚಾದಪ್ಯಸೃಜತ್ಸ್ತ್ರಿಯಃ ||
ಅವನು ಸೋಮವಂಶವನ್ನು ವೃದ್ಧಿಗೊಳಿಸುವ ಪುತ್ರರಿಗೆ ಜನ್ಮವಿತ್ತನು. ಮತ್ತು ಚರಾಚರ ದ್ವಿಪದ-ಚತುಷ್ಪದ ಜೀವಿಗಳ ವೃದ್ಧಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಪುರಾಣ ಸ್ತ್ರೀಯರನ್ನೂ ಸೃಷ್ಟಿಸಿದನು.
19002048a ದದೌ ಸ ದಶ ಧರ್ಮಾಯ ಕಶ್ಯಪಾಯ ತ್ರಯೋದಶ |
19002048c ಶಿಷ್ಟಾಃ ಸೋಮಾಯ ರಾಜ್ಞೇಽಥ ನಕ್ಷತ್ರಾಖ್ಯಾ ದದೌ ಪ್ರಭುಃ||
ಪ್ರಭು ದಕ್ಷನು ಅವರಲ್ಲಿ ಹತ್ತು ಪುತ್ರಿಗಳನ್ನು ಧರ್ಮನಿಗೂ, ಹದಿಮೂರು ಪುತ್ರಿಯರನ್ನು ಕಶ್ಯಪನಿಗೂ ಮತ್ತು ನಕ್ಷತ್ರಗಳೆಂದು ಪ್ರಖ್ಯಾತರಾದ ಉಳಿದ ಪುತ್ರಿಯರನ್ನು ರಾಜ ಸೋಮನಿಗೂ ನೀಡಿದನು.
19002049a ತಾಸು ದೇವಾಃ ಖಗಾ ನಾಗಾ ಗಾವೋ ದಿತಿಜದಾನವಾಃ |
19002049c ಗಂಧರ್ವಾಪ್ಸರಸಶ್ಚೈವ ಜಜ್ಞಿರೇಽನ್ಯಾಶ್ಚ ಜಾತಯಃ ||
ಅವರಲ್ಲಿ ದೇವ-ಪಕ್ಷಿ-ನಾಗ-ಗೋವು-ದೈತ್ಯ-ದಾನವ-ಗಂಧರ್ವ-ಅಪ್ಸರೆ ಮತ್ತು ಅನ್ಯ ಜಾತಿಗಳು ಹುಟ್ಟಿದವು.
19002050a ತತಃ ಪ್ರಭೃತಿ ರಾಜೇಂದ್ರಾಃ ಪ್ರಜಾ ಮೈಥುನಸಂಭವಾಃ |
19002050c ಸಂಕಲ್ಪಾದ್ದರ್ಶನಾತ್ಸ್ಪರ್ಶಾತ್ ಪೂರ್ವೇಷಾಂ ಸೃಷ್ಟಿರುಚ್ಯತೇ||
ಅಂದಿನಿಂದ ಪ್ರಜೆಗಳು ಮೈಥುನದಿಂದ ಹುಟ್ಟಲು ತೊಡಗಿದರು. ಅದಕ್ಕೆ ಮೊದಲು ಅವುಗಳ ಸೃಷ್ಟಿಯು ಸಂಕಲ್ಪದಿಂದ, ಅಥವಾ ನೋಡುವುದರಿಂದ ಅಥವಾ ಮುಟ್ಟುವುದರಿಂದ ಉಂಟಾಗುತ್ತಿತ್ತು.”
19002051 ಜನಮೇಜಯ ಉವಾಚ
19002051a ದೇವಾನಾಂ ದಾನವಾನಾಂ ಚ ಗಂಧರ್ವೋರಗರಕ್ಷಸಾಮ್ |
19002051c ಸಂಭವಃ ಕಥಿತಃ ಪೂರ್ವಂ ದಕ್ಷಸ್ಯ ಚ ಮಹಾತ್ಮನಃ ||
ಜನಮೇಜಯನು ಹೇಳಿದನು: “ಈ ಮೊದಲೇ ದೇವ-ದಾನವ-ಗಂಧರ್ವ-ಉರಗ-ರಾಕ್ಷಸರ ಮತ್ತು ಮಹಾತ್ಮ ದಕ್ಷನ ಹುಟ್ಟಿನ ಕುರಿತು ಹೇಳಿಯಾಗಿದೆ.
19002052a ಅಂಗುಷ್ಠಾದ್ಬ್ರಹ್ಮಣೋ ಜಾತೋ ದಕ್ಷಃ ಪ್ರೋಕ್ತಸ್ತ್ವಯಾನಘ |
19002052c ವಾಮಾಂಗುಷ್ಠಾತ್ತಥಾ ಚೈವ ತಸ್ಯ ಪತ್ನೀ ವ್ಯಜಾಯತ ||
ಅನಘ! ದಕ್ಷನು ಬ್ರಹ್ಮನ ಬಲ ಅಂಗುಷ್ಠದಿಂದ ಜನಿಸಿದನು ಮತ್ತು ಬ್ರಹ್ಮನ ಎಡ ಅಂಗುಷ್ಠದಿಂದ ಅವನ ಪತ್ನಿಯು ಹುಟ್ಟಿದಳು ಎನ್ನುವುದನ್ನು ನೀನು ಹೇಳಿದ್ದೀಯೆ.
19002053a ಕಥಂ ಪ್ರಾಚೇತಸತ್ವಂ ಸ ಪುನರ್ಲೇಭೇ ಮಹಾತಪಾಃ |
19002053c ಏತನ್ಮೇ ಸಂಶಯಂ ವಿಪ್ರ ಸಮ್ಯಗಾಖ್ಯಾತುಮರ್ಹಸಿ |
19002053e ದೌಹಿತ್ರಶ್ಚೈವ ಸೋಮಸ್ಯ ಕಥಂ ಶ್ವಶುರತಾಂ ಗತಃ ||
ಅವನು ಪುನಃ ಹೇಗೆ ಪ್ರಾಚೇತಸರ ಮಗನಾಗಿ ಹುಟ್ಟಿದನು? ವಿಪ್ರ! ಇದರ ಕುರಿತು ನನಗಿರುವ ಸಂಶಯವನ್ನು ವಿಸ್ತಾರವಾಗಿ ಹೇಳಿ ಪರಿಹರಿಸಬೇಕು. ಸೋಮನ ಮಗಳು ಪುನಃ ಅವಳಿಗೆ ಹೇಗೆ ಅತ್ತೆಯಾದಳು?’
19002054 ವೈಶಂಪಾಯನ ಉವಾಚ
19002054a ಉತ್ಪತ್ತಿಶ್ಚ ನಿರೋಧಶ್ಚ ನಿತ್ಯೌ ಭೂತೇಷು ಪಾರ್ಥಿವ|
19002054c ಋಷಯೋಽತ್ರ ನ ಮುಹ್ಯಂತಿ ವಿದ್ವಾಂಸಶ್ಚೈವ ಯೇ ಜನಾಃ||
ವೈಶಂಪಾಯನನು ಹೇಳಿದನು: “ಪಾರ್ಥಿವ! ಭೂತಗಳ ಉತ್ಪತ್ತಿ ಮತ್ತು ವಿನಾಶಗಳು ನಿರಂತರವಾಗಿ ನಡೆಯುತ್ತಿರುತ್ತದೆ. ಇದರ ಕುರಿತು ಋಷಿಗಳು ಮತ್ತು ವಿದ್ವಾಂಸ ಜನರು ಮೋಹಗೊಳ್ಳುವುದಿಲ್ಲ.
19002055a ಯುಗೇ ಯುಗೇ ಭವಂತ್ಯೇತೇ ಸರ್ವೇ ದಕ್ಷಾದಯೋ ನೃಪ |
19002055c ಪುನಶ್ಚೈವ ನಿರುಧ್ಯಂತೇ ವಿದ್ವಾಂಸ್ತತ್ರ ನ ಮುಹ್ಯತಿ ||
ನೃಪ! ಯುಗ-ಯಗಗಳಲ್ಲಿಯೂ ದಕ್ಷಾದಿ ಎಲ್ಲರೂ ಹುಟ್ಟುತ್ತಾರೆ ಮತ್ತು ಪುನಃ ನಾಶಹೊಂದುತ್ತಾರೆ. ವಿದ್ವಾಂಸರು ಇದರ ಕುರಿತು ಮೋಹಗೊಳ್ಳುವುದಿಲ್ಲ.
19002056a ಜ್ಯೈಷ್ಠ್ಯಂ ಕಾನಿಷ್ಠ್ಯಮಪ್ಯೇಷಾಂ ಪೂರ್ವಂ ನಾಸೀಜ್ಜನಾಧಿಪ|
19002056c ತಪ ಏವ ಗರೀಯೋಽಭೂತ್ಪ್ರಭಾವಶ್ಚೈವ ಕಾರಣಮ್ ||
ಜನಾಧಿಪ! ಮೊದಲು ಇವರಲ್ಲಿ ಜ್ಯೇಷ್ಠ-ಕನಿಷ್ಠ ಎಂಬ ಭಾವವು ಇರಲಿಲ್ಲ. ತಪಸ್ಸೇ ಅವರ ಗರಿಮೆಯನ್ನು ಸೂಚಿಸುತ್ತಿತ್ತು. ಮತ್ತು ಪ್ರಭಾವದ ಕಾರಣದಿಂದಲೇ ಸಂಬಂಧಗಳಾಗುತ್ತಿದ್ದವು.
19002057a ಇಮಾಂ ವಿಸೃಷ್ಟಿಂ ದಕ್ಷಸ್ಯ ಯೋ ವಿದ್ಯಾತ್ಸಚರಾಚರಾಮ್ |
19002057c ಪ್ರಜಾವಾನಾಪದುತ್ತೀರ್ಣಃ ಸ್ವರ್ಗಲೋಕೇ ಮಹೀಯತೇ ||
ದಕ್ಷನ ಈ ಚರಾಚರಗಳ ಸೃಷ್ಟಿಯನ್ನು ಯಾರು ಅರಿತುಕೊಳ್ಳುತ್ತಾನೋ ಅವನು ಪ್ರಜಾವಂತನೂ ಉತ್ತೀರ್ಣನೂ ಆಗಿ ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ.”
ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಪ್ರಜಾಸರ್ಗೇ ದಕ್ಷೋತ್ಪತ್ತಿಕಥನೇ ದ್ವಿತೀಯೋಽಧ್ಯಾಯಃ||
ಇದು ಶ್ರೀಮಹಾಭಾರತದ ಖಿಲಭಾಗ ಹರಿವಂಶದಲ್ಲಿ ಹರಿವಂಶಪರ್ವದಲ್ಲಿ ಪ್ರಜಾಸರ್ಗದಲ್ಲಿ ದಕ್ಷೋತ್ಪತ್ತಿಕಥನ ಎನ್ನುವ ಎರಡನೆಯ ಅಧ್ಯಾಯವು.
[1] ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಗಳ ಒಂದು ಆವರ್ತನೆಯನ್ನು ಮಹಾಯುಗವೆನ್ನುತ್ತಾರೆ.
[2] ಸುನೀಥೆಯು ಮೃತ್ಯುವಿನ ಮಗಳು.
[3] ಋಷಿಗಳ ಪ್ರಕೋಪದಿಂದ ವೈನನು ಮೃತನಾದನು. ಋಷಿಗಳು ಅವನ ಸಂತಾನಕ್ಕಾಗಿ ಮೃತ ವೈನನ ಅವಯವಗಳನ್ನು ಕಡೆದರು.
[4] ರಾಜರ ಸ್ತುತಿ ಮಾಡುವವರು
[5] ರಾಜರ ವಂಶಾವಳಿಗಳನ್ನು ಹೇಳುವವರು.