ಹದಿನಾಲ್ಕನೇ ದಿನದ ಯುದ್ಧ – ೪
ಸಾತ್ಯಕಿಯು ದ್ರೋಣನನ್ನು ದಾಟಿ ಮುಂದುವರೆದುದು
ಯುದ್ಧಮಾಡಲು ಉತ್ಸಾಹದಿಂದ ಕೌರವ ಸೈನ್ಯದ ಕಡೆ ಯುಯುಧಾನನು ಹೊರಡಲು ಧರ್ಮರಾಜನು ತನ್ನ ಸೇನೆಯಿಂದ ಪರಿವೃತನಾಗಿ ದ್ರೋಣನ ರಥದ ಕಡೆ ಹೊರಟನು. ಆಗ ಪಾಂಚಾಲರಾಜನ ಮಗ ವಸುದಾನನು ಪಾಂಡವರ ಸೇನೆಗೆ ಕೂಗಿ ಹೇಳಿದನು: “ಬೇಗ ಬನ್ನಿ! ಸಾತ್ಯಕಿಯು ಸುಲಭವಾಗಿ ಹೋಗಬಲ್ಲಂತೆ ಮಾಡಲು ವೇಗದಿಂದ ಆಕ್ರಮಿಸಿ! ಅನೇಕ ಮಹಾರಥರು ಅವನನ್ನು ಜಯಿಸಲು ಪ್ರಯತ್ನಿಸುತ್ತಾರೆ!” ಹೀಗೆ ಹೇಳುತ್ತಾ ವೇಗದಿಂದ ಕೌರವ ಸೇನೆಯ ಮೇಲೆ ಆಕ್ರಮಣಿಸಿ “ಅವನನ್ನು ಗೆಲ್ಲಲು ಬಯಸುವವರನ್ನು ಸೋಲಿಸುತ್ತೇವೆ!” ಎಂದು ಎರಗಿದರು. ಆಗ ಯುಯುಧಾನನ ರಥದ ಬಳಿ ಮಹಾ ಶಬ್ಧವುಂಟಾಯಿತು. ಕಂಪಿಸುತ್ತಿದ್ದ ಕೌರವ ಮಹಾ ಸೇನೆಯು ಸಾತ್ವತನಿಂದ ನೂರು ವಾಹಿನಿಗಳಾಗಿ ಒಡೆಯಲ್ಪಟ್ಟಿತು. ಅವರು ಹೀಗೆ ಒಡೆದು ಹೋಗಲು ಶಿನಿಯ ಮೊಮ್ಮಗ ಮಹಾರಥನು ಸೇನೆಯ ಎದುರಿನಲ್ಲಿದ್ದ ಏಳು ಮಹೇಷ್ವಾಸ ವೀರರನ್ನು ಉರುಳಿಸಿದನು. ಆ ದೀರ್ಘಬಾಹುವಿನಿಂದ ಸದೆಬಡಿಯಲ್ಪಟ್ಟ ಅವರು ಹೆದರಿ, ಅವನ ಅತಿಮಾನುಷತ್ವವನ್ನು ಕಂಡು ವೀರರು ಯುದ್ಧಮಾಡುವುದನ್ನೇ ತೊರೆದರು. ನುಚ್ಚುನೂರಾದ ರಥಗಳಿಂದ, ಮುರಿದ ನೊಗಗಳಿಂದ, ಪುಡಿಪುಡಿಯಾದ ಚಕ್ರಗಳಿಂದ, ತುಂಡಾಗಿ ಬಿದ್ದ ಧ್ವಜಗಳಿಂದ, ಅನುಕರ್ಷಗಳಿಂದ, ಪತಾಕೆಗಳಿಂದ, ಕಾಂಚನ ಶಿರಸ್ತ್ರಾಣಗಳಿಂದ, ಚಂದನಲೇಪಿತ ಅಂಗದಗಳೊಂದಿಗೆ, ಆನೆಯ ಸೊಂಡಲಿನಂತಿರುವ ಬಾಹುಗಳಿಂದ, ಹಾವಿನ ಹೆಡೆಗಳಂತಿರುವ ಮನುಷ್ಯರ ಭುಜಗಳಿಂದ, ತೊಡೆಗಳಿಂದ ಭೂಮಿಯು ಸುಂದರವಾಗಿ ಕಾಣುತ್ತಿತ್ತು. ಬಿದ್ದಿರುವ ವೃಷಭಾಕ್ಷಣರ ಚಂದ್ರನ ಪ್ರಭೆಯುಳ್ಳ, ಸುಂದರ ಕುಂಡಲಗಳಿಂದ ಅಲಂಕೃತಗೊಂಡ ಮುಖಗಳಿಂದ ಮೇದಿನಿಯು ಶೋಭಿಸುತ್ತಿತ್ತು. ಪರ್ವತೋಪಮ ಅನೇಕ ಆನೆಗಳು ನಾಶಗೊಂಡು ಮಲಗಿದ್ದಿರಲು ಭೂಮಿಯು ಪರ್ವತಗಳು ಬಿದ್ದು ಹರಡಿರುವಂತೆ ರಾರಾಜಿಸುತ್ತಿತ್ತು. ಬಂಗಾರದಿಂದ ಮಾಡಲಟ್ಟ ಮುಕ್ತಾಜಾಲಗಳಿಂದ ವಿಭೂಷಿತವಾದ, ಬಣ್ಣ ಬಣ್ಣದ ಜಿನಸುಗಳಿಂದ ಶೋಭಿಸುತ್ತಿದ್ದ ತುರಂಗಗಳು ಆ ದೀರ್ಘಬಾಹುವಿನಿಂದ ಜೀವವನ್ನು ಕಳೆದುಕೊಂಡು ನೆಲವನ್ನು ಮುಕ್ಕಿದ್ದವು.
ಯಾವ ಮಾರ್ಗದಿಂದ ಧನಂಜಯನು ಹೋಗಿದ್ದನೋ ಅದೇ ಮಾರ್ಗದಲ್ಲಿ ಹೋಗಲು ಪ್ರಯತ್ನಿಸುತ್ತಿದ್ದ ಸಾತ್ಯಕಿಯನ್ನು ದ್ರೋಣನು ತಡೆದನು. ಭರಧ್ವಾಜನನ್ನು ಎದುರಿಸಿದ ಯುಯುಧಾನನಾದರೋ ಸಂಕ್ರುದ್ಧನಾಗಿ ಅಲೆಗಳನ್ನು ಜಲಾಶಯವು ಹೇಗೋ ಹಾಗೆ ಹಿಂದೆಸರಿಯಲಿಲ್ಲ. ಯುಯುಧಾನನನ್ನು ರಣದಲ್ಲಿ ತಡೆದು ದ್ರೋಣನು ಅವನನ್ನು ಐದು ಮರ್ಮಭೇದಿ ನಿಶಿತ ಬಾಣಗಳಿಂದ ಹೊಡೆದನು. ಸಾತ್ಯಕಿಯಾದರೋ ರಣದಲ್ಲಿ ದ್ರೋಣನನ್ನು ಏಳು ಹೇಮಪುಂಖಗಳ ಶಿಲಾಧೌತ ಕಂಕಬರ್ಹಿಣ ಬಾಣಗಳಿಂದ ಹೊಡೆದನು. ದ್ರೋಣನು ಕುದುರೆ-ಸಾರಥಿಗಳೊಂದಿಗೆ ಅವನನ್ನು ಆರು ಸಾಯಕಗಳಿಂದ ಹೊಡೆದನು. ಆಗ ಯುಯುಧಾನನು ದ್ರೋಣನನ್ನು ಸಹಿಸಿಕೊಳ್ಳಲಿಲ್ಲ. ಸಿಂಹನಾದವನ್ನು ಮಾಡಿ ದ್ರೋಣನನ್ನು ಹತ್ತು ಸಾಯಕಗಳಿಂದ ಮತ್ತು ಅನ್ಯ ಹದಿನಾಲ್ಕರಿಂದ ಹೊಡೆದನು. ಪುನಃ ಯುಯುಧಾನನು ಹತ್ತು ಶರಗಳಿಂದ ಹೊಡೆದನು. ಒಂದರಿಂದ ಸಾರಥಿಯನ್ನೂ, ನಾಲ್ಕರಿಂದ ನಾಲ್ಕು ಕುದುರೆಗಳನ್ನೂ, ಒಂದು ಬಾಣದಿಂದ ಧ್ವಜವನ್ನೂ ಹೊಡೆದನು. ದ್ರೋಣನು ತ್ವರೆಮಾಡಿ ಅವನನ್ನು, ಕುದುರೆ-ಸಾರಥಿ-ರಥ-ಧ್ವಜಗಳನ್ನು ಮಿಡಿತೆಯ ಹಿಂಡಿನಂತಿರುವ ಆಶುಗ ಬಾಣಗಳಿಂದ ಮುಚ್ಚಿಬಿಟ್ಟನು. ಹಾಗೆಯೇ ಯುಯುಧಾನನೂ ಕೂಡ ಅನೇಕ ಆಶುಗಗಳಿಂದ ದ್ರೋಣನನ್ನು ಮುಸುಕಿದನು. ಆಗ ಸಂಭ್ರಾಂತನಾದ ದ್ರೋಣನು ಹೇಳಿದನು: “ನಿನ್ನ ಆಚಾರ್ಯನು ಕಾಪುರುಷನಂತೆ ರಣವನ್ನು ತೊರೆದು ಹೊರಟುಹೋದನು. ಯುದ್ಧಮಾಡುತ್ತಿದ್ದ ನನ್ನನ್ನು ಪ್ರದಕ್ಷಿಣೆಮಾಡಿ ಮುಂದೆಸಾರಿದನು. ಒಂದುವೇಳೆ ನಿನ್ನ ಆಚಾರ್ಯನಂತೆ ನನ್ನನ್ನು ರಣದಲ್ಲಿ ಬಿಟ್ಟು ಹೋಗದೇ ನನ್ನೊಡನೆ ಯುದ್ಧಮಾಡಿದರೆ ಇಂದು ನೀನು ಜೀವಂತ ಉಳಿಯುವುದಿಲ್ಲ!”
ಸಾತ್ಯಕಿಯು ಹೇಳಿದನು: “ಬ್ರಹ್ಮನ್! ನಿನಗೆ ಮಂಗಳವಾಗಲಿ! ಧರ್ಮರಾಜನ ಶಾಸನದಂತೆ ಧನಂಜಯನ ಬಳಿ ಹೋಗುತ್ತಿದ್ದೇನೆ. ಕಾಲವು ಕಳೆದುಹೋಗುತ್ತಿದೆ!”
ಶೈನೇಯನು ಹೀಗೆ ಹೇಳಿ ಆಚಾರ್ಯನನ್ನು ಅಲ್ಲಿಯೇ ಬಿಟ್ಟು ಒಮ್ಮೆಲೇ ಹೊರಟು ಹೋಗುವಾಗ ಸಾರಥಿಗೆ ಇದನ್ನು ಹೇಳಿದನು: “ಸೂತ! ನನ್ನನ್ನು ತಡೆಯುವಲ್ಲಿ ದ್ರೋಣನು ಸರ್ವಥಾ ಪ್ರಯತ್ನಮಾಡುತ್ತಾನೆ. ಪ್ರಯತ್ನ ಪಟ್ಟು ರಣದಲ್ಲಿ ಓಡಿಸು! ಇನ್ನೂ ಹೆಚ್ಚಿನ ಈ ಮಾತನ್ನು ಕೇಳು! ಇಲ್ಲಿಂದ ಮಹಾಪ್ರಭೆಯುಳ್ಳ ಅವಂತಿಯವ ಸೇನೆಯು ಕಾಣುತ್ತಿದೆ. ಅದರ ನಂತರ ದಾಕ್ಷಿಣಾತ್ಯರ ಮಹಾಸೇನೆಯಿದೆ. ಅದರ ನಂತರವಿರುವುದು ಬಾಹ್ಲಿಕರ ಮಹಾ ಸೇನೆ. ಬಾಹ್ಲಿಕರ ಹತ್ತಿರವಿರುವುದು ಕರ್ಣನಿಂದೊಡಗೂಡಿದ ಮಹಾಸೇನೆ. ಆ ಸೇನೆಗಳು ಒಂದಕ್ಕಿಂದ ಒಂದು ಭಿನ್ನವಾಗಿವೆ. ಅನ್ಯೋನ್ಯರನ್ನು ಅವಲಂಬಿಸಿಕೊಂಡಿರುವುದರಿಂದ ಅವು ರಣರಂಗವನ್ನು ಬಿಟ್ಟುಕೊಡುವುದಿಲ್ಲ. ಇವುಗಳ ಮಧ್ಯದ ಜಾಗವನ್ನು ಬಳಸಿ ಸಂತೋಷದಿಂದ ಕುದುರೆಗಳನ್ನು ಓಡಿಸು. ಮಧ್ಯಮವೇಗವನ್ನು ಬಳಲಿ ನನ್ನನ್ನು ಅಲ್ಲಿಗೆ - ಎಲ್ಲಿ ನಾನಾಪ್ರಹರಣಗಳನ್ನು ಎತ್ತಿಹಿಡಿದಿರುವ ಬಾಹ್ಲಿಕರು ಕಾಣುತ್ತಾರೋ, ಅನೇಕ ದಾಕ್ಷಿಣಾತ್ಯರು ಇರುವರೋ, ಸೂತಪುತ್ರನ ನಾಯಕತ್ವದಲ್ಲಿ ಕಾಣುತ್ತಿರುವ ಆನೆ-ಕುದುರೆ-ರಥಗಳಿಂದ ಕೂಡಿದ ನಾನಾ ದೇಶಗಳಿಂದ ಒಂದುಗೂಡಿಸಿದ ಪದಾತಿಗಳಿಂದ ಕೂಡಿದ ಯಾವ ಸೇನೆಯು ಕಾಣಿಸುತ್ತದೆಯೋ ಅಲ್ಲಿಗೆ - ಕೊಂಡೊಯ್ಯಿ.”
ಸಾತ್ಯಕಿಯು ಕೃತವರ್ಮನನ್ನು ದಾಟಿ ಮುಂದುವರೆದುದು
ಹೀಗೆ ಸಾರಥಿಗೆ ಹೇಳಿ ಬ್ರಾಹ್ಮಣನನ್ನು ಪರಿತ್ಯಜಿಸಿ ಅವನು ಎಲ್ಲಿ ಕರ್ಣನ ಉಗ್ರ ಮಹಾಸೇನೆಯಿದೆಯೋ ಅಲ್ಲಿಗೆ ಹೊರಟನು. ಹಾಗೆ ಹೋಗುತ್ತಿರುವ ಯುಯುಧಾನನನ್ನು ಕ್ರುದ್ಧನಾದ ದ್ರೋಣನು ಅನೇಕ ವಿಶಿಖಗಳನ್ನು ಹರಡುತ್ತಾ ಹಿಂಬಾಲಿಸಿ ಹೋದನು. ಕರ್ಣನ ಸೇನೆಯನ್ನು ನಿಶಿತ ಶರಗಳಿಂದ ಜೋರಾಗಿ ಹೊಡೆದು ಆ ಸಾತ್ಯಕಿಯು ಅಪಾರವಾದ ಭಾರತೀಸೇನೆಯನ್ನು ಪ್ರವೇಶಿಸಿದನು.
ಯುಯುಧಾನನು ಪ್ರವೇಶಿಸಿಸಲು ಸೈನಿಕರು ಓಡತೊಡಗಿದರು. ಆಗ ಅಸಹನಶೀಲ ಕೃತವರ್ಮನು ಸಾತ್ಯಕಿಯನ್ನು ಮುತ್ತಿದನು. ಮೇಲೆ ಎರಗುತ್ತಿದ್ದ ಅವನನ್ನು ಸಾತ್ಯಕಿಯು ಆರು ವಿಶಿಖಗಳಿಂದ ಹೊಡೆದನು ಮತ್ತು ಆ ವೀರ್ಯವಾನನು ನಾಲ್ಕರಿಂದ ಅವನ ನಾಲ್ಕು ಕುದುರೆಗಳನ್ನು ಹೊಡೆದನು. ಅನಂತರ ಪುನಃ ಹದಿನಾರು ನತಪರ್ವ ಆಶುಗಗಳಿಂದ ಸಾತ್ಯಕಿಯು ಕೃತವರ್ಮನ ಎದೆಗೆ ಹೊಡೆದನು. ಸಾತ್ವತನ ಬಹಳ ತೀಕ್ಷ್ಣ ತೇಜಸ್ಸುಳ್ಳ ಅನೇಕ ವಿಶಿಖಗಳಿಂದ ಪೆಟ್ಟುತಿಂದ ಕೃತವರ್ಮನು ಸಹಿಸಿಕೊಳ್ಳಲಿಲ್ಲ. ಅವನು ಅಗ್ನಿಯ ಜ್ವಾಲೆಗೆ ಸಮನಾದ ವತ್ಸದಂತವನ್ನು ಹೂಡಿ ಕಿವಿಯವರೆಗೂ ಎಳೆದು ಸಾತ್ಯಕಿಯ ಎದೆಗೆ ಹೊಡೆದನು. ಅದು ಅವನ ಕವಚ-ಶರೀರಗಳನ್ನು ಭೇದಿಸಿ ಪತ್ರಪುಂಖಗಳೊಂದಿಗೆ ರಕ್ತದಲ್ಲಿ ತೋಯ್ದು ಭೂಮಿಯನ್ನು ಪ್ರವೇಶಿಸಿತು. ಆಗ ಪರಮಾಸ್ತ್ರವಿದು ಕೃತವರ್ಮನು ಅನೇಕ ಬಾಣಗಳಿಂದ ಅವನ ಧನುಸ್ಸನ್ನು ಕತ್ತರಿಸಿದನು. ರಣದಲ್ಲಿ ಕ್ರುದ್ಧನಾಗಿ ಅವನು ಸಾತ್ಯಕಿಯ ಎದೆಗೆ ಹತ್ತು ತೀಕ್ಷ್ಣ ವಿಶಿಖಗಳಿಂದ ಹೊಡೆದನು. ಧನುಸ್ಸು ತುಂಡಾಗಿ ಹೋಗಲು ಶಕ್ತಿಮತರಲ್ಲಿ ಶ್ರೇಷ್ಠ ಸಾತ್ಯಕಿಯು ಶಕ್ತಿಯಿಂದ ಕೃತವರ್ಮನ ಬಲತೋಳಿಗೆ ಹೊಡೆದನು. ಅನಂತರ ವೀರ ಸಾತ್ಯಕಿಯು ತಕ್ಷಣವೇ ಇನ್ನೊಂದು ಸುದೃಢ ಧನುಸ್ಸನ್ನು ತೆಗೆದುಕೊಂಡು ನೂರಾರು ಸಹಸ್ರಾರು ವಿಶಿಖಗಳನ್ನು ಬಿಟ್ಟನು. ಕೃತವರ್ಮನ ರಥವನ್ನು ಎಲ್ಲ ಕಡೆಗಳಿಂದ ಆಕ್ರಮಣಿಸಿ, ಆ ಸಾತ್ಯಕಿಯು ರಣದಲ್ಲಿ ಹಾರ್ದಿಕ್ಯನನ್ನು ಸಂಪೂರ್ಣವಾಗಿ ಮುಚ್ಚಿಬಿಟ್ಟನು. ಆಗ ಭಲ್ಲದಿಂದ ಸಾರಥಿಯ ಶಿರವನ್ನು ಕತ್ತರಿಸಲು ಹಾರ್ದಿಕ್ಯನ ಸೂತನು ಮಹಾರಥದಿಂದ ಹತನಾಗಿ ಬಿದ್ದನು. ಸಾರಥಿಯು ಹತನಾಗಲು ಕುದುರೆಗಳು ಓಡತೊಡಗಿದವು. ಆಗ ಭೋಜನು ಸಂಭ್ರಾಂತನಾಗದೇ ಸ್ವಯಂ ತಾನೇ ಕುದುರೆಗಳನ್ನು ನಿಯಂತ್ರಿಸಿ, ಧನುಸ್ಸನ್ನು ಹಿಡಿದು ರಥದಲ್ಲಿ ಕುಳಿತನು. ಅವನನ್ನು ಸೇನೆಗಳು ಶ್ಲಾಘಿಸಿದವು. ಕ್ಷಣಕಾಲ ಸುಧಾರಿಸಿಕೊಂಡು ಕುದುರೆಗಳನ್ನು ಚಪ್ಪರಿಸಿ, ಹೇಡಿಗಳಿಗೂ ಶತ್ರುಗಳಿಗೂ ಮಹಾಭಯವನ್ನುಂಟುಮಾಡಿದನು.
ಅಷ್ಟರಲ್ಲಿಯೇ ಸಾತ್ಯಕಿಯು ಅಲ್ಲಿಂದ ಹೋದನು. ಆದರೆ. ಭೀಮನು ಅವನನ್ನು ಆಕ್ರಮಣಿಸಿದನು. ಯುಯುಧಾನನಾದರೋ ದ್ರೋಣನ ಸೇನೆಯಿಂದ ಬಿಡುಗಡೆಹೊಂದಿ ತಕ್ಷಣವೇ ತ್ವರೆಮಾಡಿ ಕಾಂಬೋಜರ ಮಹಾಸೇನೆಯತ್ತ ತೆರಳಿದನು. ಅಲ್ಲಿ ಅವನು ಶೂರರಾದ ಅನೇಕ ಮಹಾರಥರಿಂದ ತಡೆಯಲಟ್ಟನು. ಆಗ ಸಾತ್ಯಕಿಯು ಸ್ವಲ್ಪವೂ ವಿಚಲಿತನಾಗಲಿಲ್ಲ. ದ್ರೋಣನು ಸೇನೆಗಳನ್ನು ಒಂದುಗೂಡಿಸಿ ಅವುಗಳ ಭಾರವನ್ನು ಭೋಜನಿಗೆ ಒಪ್ಪಿಸಿ ಯುಯುಧಾನನೊಡನೆ ಯುದ್ಧಮಾಡಲು ಬಯಸಿ ಅವನ ಹಿಂದೆ ಹೋದನು. ಹಾಗೆ ಯುಯುಧಾನನ ಹಿಂದೆ ಹೋಗುತ್ತಿದ್ದ ಅವನನ್ನು ಸಂಕ್ರುದ್ಧ ಪಾಂಡವರ ಸೇನೆಯು ತಡೆಯಿತು. ರಥಿಗಳಲ್ಲಿ ಪ್ರವರನಾದ ಹಾರ್ದಿಕ್ಯನ ರಥದ ಬಳಿ ಭೀಮಸೇನನನ್ನು ಮುಂದಿಟ್ಟುಕೊಂಡು ಹೋದ ಪಾಂಚಾಲರು ವೀರ ಕೃತವರ್ಮನ ವಿಕ್ರಮದಿಂದ ತಡೆಯಲ್ಪಟ್ಟು ಉತ್ಸಾಹವನ್ನು ಕಳೆದುಕೊಂಡರು. ಪ್ರಯತ್ನಿಸುತ್ತಿದ್ದ ಆ ಎಲ್ಲ ಸೇನೆಗಳನ್ನೂ ಅವನು ಶರೌಘಗಳಿಂದ ಹೊಡೆದು ಮೂರ್ಛೆಗೊಳಿಸಿ ಸೋಲಿಸಿ ತಡೆದನು. ಭೋಜ ಕೃತವರ್ಮನಿಂದ ಹೀಗೆ ತಡೆಹಿಡಿಯಲ್ಪಟ್ಟ ಆ ವೀರರು ಮಹಾಯಶಸ್ಸನ್ನು ಬಯಸುತ್ತಾ ರಣದಲ್ಲಿ ಭೋಜನ ಸೇನೆಯೊಂದಿಗೆ ಯುದ್ಧಮಾಡತೊಡಗಿದರು.
ಸತ್ಯವಿಕ್ರಮ ಶೈನೇಯನು ಕೌರವ ಸೇನೆಯನ್ನು ಪ್ರವೇಶಿಸಿದ ನಂತರ ಭೀಮಸೇನ ಪ್ರಮುಖರಾದ ಪಾರ್ಥರು ಕೌರವ ಸೇನೆಯನ್ನು ಆಕ್ರಮಣಿಸಿದರು. ಅನುಗರೊಂದಿಗೆ ಕ್ರುದ್ಧರಾಗಿ ಒಮ್ಮೆಲೇ ಎರಗಿದ ಪಾಂಡವರನ್ನು ರಣದಲ್ಲಿ ಮಹಾರಥ ಕೃತವರ್ಮನು ಒಬ್ಬನೇ ಎದುರಿಸಿದನು. ಉಕ್ಕಿಬರುವ ಸಾಗರದ ನೀರನ್ನು ದಡವು ತಡೆಹಿಡಿಯುವಂತೆ ಹಾರ್ದಿಕ್ಯನು ಪಾಂಡುಸೇನೆಯನ್ನು ರಣದಲ್ಲಿ ತಡೆಹಿಡಿದನು. ಆಹವದಲ್ಲಿ ಪಾರ್ಥರು ಒಟ್ಟಿಗೇ ಅತಿಕ್ರಮಿಸಲಾಗದ ಹಾರ್ದಿಕ್ಯನ ಪರಾಕ್ರಮವು ಅದ್ಭುತವಾಗಿತ್ತು. ಮಹಾಬಾಹು ಭೀಮನು ಕೃತವರ್ಮನನ್ನು ಮೂರು ಆಯಸಗಳಿಂದ ಹೊಡೆದು ಪಾಂಡವರನ್ನು ಹರ್ಷಗೊಳಿಸುತ್ತಾ ಶಂಖವನ್ನೂದಿದನು. ಸಹದೇವನು ಇಪ್ಪತ್ತರಿಂದ, ಧರ್ಮರಾಜನು ಐದರಿಂದ, ನಕುಲನು ನೂರರಿಂದ ಹಾರ್ದಿಕ್ಯನನ್ನು ಹೊಡೆದರು. ದ್ರೌಪದೇಯರು ಎಪ್ಪತ್ಮೂರರಿಂದ, ಘಟೋತ್ಕಚನು ಎಪ್ಪತ್ತರಿಂದ ಮತ್ತು ಧೃಷ್ಟದ್ಯುಮ್ನನು ಮೂರರಿಂದ, ವಿರಾಟ ಮತ್ತು ದ್ರುಪದರು ಐದರಿಂದ ಕೃತವರ್ಮನನ್ನು ಹೊಡೆದರು. ಶಿಖಂಡಿಯೂ ಕೂಡ ಹಾರ್ದಿಕ್ಯನನ್ನು ಐದು ಆಶುಗಗಳಿಂದ ಹೊಡೆದು ಪುನಃ ನಗುತ್ತಾ ಅವನ ಮೇಲೆ ಇಪ್ಪತ್ತು ಸಾಯಕಗಳನ್ನು ಪ್ರಯೋಗಿಸಿದನು. ಆಗ ಕೃತವರ್ಮನು ಸುತ್ತುವರೆದಿದ್ದ ಆ ಒಬ್ಬೊಬ್ಬ ಮಹಾರಥರನ್ನೂ ಐದೈದು ಬಾಣಗಳಿಂದ ಹೊಡೆದು ಭೀಮನನ್ನು ಏಳರಿಂದ ಹೊಡೆದನು. ಅವನ ಧ್ವಜವನ್ನೂ ಧನುಸ್ಸನ್ನೂ ರಥದಿಂದ ಭೂಮಿಗೆ ಬೀಳಿಸಿದನು. ಕೃತವರ್ಮನು ಕ್ರುದ್ಧನಾಗಿ ತ್ವರೆಮಾಡಿ ಧನುಸ್ಸನ್ನು ಕಳೆದುಕೊಂಡಿದ್ದ ಭೀಮಸೇನನ ಎದೆಗೆ ಎಪ್ಪತ್ತು ನಿಶಿತ ಬಾಣಗಳಿಂದ ಹೊಡೆದನು. ಹಾರ್ದಿಕ್ಯನ ಉತ್ತಮ ಶರಗಳಿಂದ ಆಳವಾಗಿ ಗಾಯಗೊಂಡ ರಥದ ಮಧ್ಯದಲ್ಲಿದ್ದ ಭೀಮನು ಭೂಕಂಪದಲ್ಲಿ ಪರ್ವತದಂತೆ ನಡುಗಿದನು.
ಭೀಮಸೇನನು ಹಾಗಾದುದನ್ನು ನೋಡಿ ಧರ್ಮರಾಜನೇ ಮೊದಲಾದವರು ಕೃತವರ್ಮನ ಮೇಲೆ ಘೋರ ಬಾಣಗಳನ್ನು ಪ್ರಯೋಗಿಸಿದರು. ಅವರು ಮಾರುತಿಯನ್ನು ರಕ್ಷಿಸಲೋಸುಗ ಕೃತವರ್ಮನನ್ನು ರಥಸಮೂಹಗಳ ಮಧ್ಯೆ ಸೇರಿಸಿಕೊಂಡು ಸಾಯಕಗಳಿಂದ ಅವನನ್ನು ಹೊಡೆದರು. ಆಗ ಭೀಮಸೇನನು ಪುನಃ ಪ್ರಜ್ಞೆಯನ್ನು ಪಡೆದು ಸುವರ್ಣಮಯ ದಂಡದಿಂದ ಕೂಡಿದ ಲೋಹಮಹ ಶಕ್ತಿಯನ್ನು ಕೈಗೆತ್ತಿಕೊಂಡು ಶೀಘ್ರವಾಗಿ ತನ್ನ ರಥದಿಂದ ಕೃತವರ್ಮನ ರಥದ ಕಡೆ ಎಸೆದನು. ಭೀಮನ ಭುಜದಿಂದ ಹೊರಟ ಪೊರೆಬಿಟ್ಟ ಸರ್ಪದಂತಿದ್ದ ಆ ಸುದಾರುಣ ಶಕ್ತ್ಯಾಯುಧವು ಪ್ರಜ್ವಲಿಸುತ್ತಾ ಕೃತವರ್ಮನ ಸಮೀಪಕ್ಕೆ ಬಂದಿತು. ತನ್ನ ಮೇಲೆ ರಭಸದಿಂದ ಬೀಳಲಿದ್ದ ಪ್ರಳಯಕಾಲದ ಅಗ್ನಿಯ ಪ್ರಭೆಗೆ ಸಮನಾಗಿದ್ದ ಆ ಶಕ್ತಿಯನ್ನು ಹಾರ್ದಿಕ್ಯನು ಎರಡು ಬಾಣಗಳಿಂದ ಎರಡಾಗಿ ಕತ್ತರಿಸಿದನು. ಕತ್ತರಿಸಲ್ಪಟ್ಟ ಆ ಕನಕಭೂಷಣ ಶಕ್ತಿಯು ದಿವದಿಂದ ಚ್ಯುತಗೊಂಡ ಮಹಾ ಉಲ್ಕೆಯಂತೆ ದಿಕ್ಕುಗಳನ್ನು ಬೆಳಗಿಸುತ್ತಾ ಭೂಮಿಯ ಮೇಲೆ ಬಿದ್ದಿತು.
ಶಕ್ತಿಯು ವಿನಾಶವಾದುದನ್ನು ಕಂಡು ಭೀಮನು ತುಂಬಾ ಕುಪಿತನಾದನು. ಕ್ರುದ್ಧ ಭೀಮಸೇನನು ಮಹಾಶಬ್ಧವುಳ್ಳ ವೇಗವತ್ತಾದ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಹಾರ್ದಿಕ್ಯನನ್ನು ಹೊಡೆದನು. ಭೀಮನು ಐದು ಬಾಣಗಳಿಂದ ಅವನ ವಕ್ಷಸ್ಥಳಕ್ಕೆ ಹೊಡೆದನು. ಭೋಜನಾದರೋ ಭೀಮಸೇನನಿಂದ ಸರ್ವಾಂಗಗಳಲ್ಲಿಯೂ ಗಾಯಗೊಂಡು ಕೆಂಪು ಹೂಬಿಟ್ಟ ಅಶೋಕವೃಕ್ಷದಂತೆ ರಣಾಜಿರದಲ್ಲಿ ಪ್ರಕಾಶಿಸಿದನು. ಕ್ರುದ್ಧ ಕೃತವರ್ಮನು ನಗುತ್ತಿರುವನೋ ಎಂಬಂತೆ ಭೀಮಸೇನನನ್ನು ದೃಢವಾಗಿ ಪ್ರಹರಿಸಿದನು. ಹಾಗೆಯೇ ತನ್ನೊಡನೆ ಪ್ರಯತ್ನಪಟ್ಟು ಯುದ್ಧಮಾಡುತ್ತಿದ್ದ ಆ ಎಲ್ಲ ಮಹಾರಥರನ್ನು ಮೂರು ಮೂರು ಬಾಣಗಳಿಂದ ಹೊಡೆದನು. ಅವರೂ ಕೂಡ ತಿರುಗಿ ಅವನನ್ನು ಏಳೇಳು ಬಾಣಗಳಿಂದ ಹೊಡೆದರು. ಅನಂತರ ಆ ಮಹಾರಥನು ಕ್ರುದ್ಧನಾಗಿ ನಗುತ್ತಾ ಕ್ಷುರಪ್ರದಿಂದ ಶಿಖಂಡಿಯ ಧನುಸ್ಸನ್ನು ತುಂಡರಿಸಿದನು. ಭಾರವುಳ್ಳ ಧನುಸ್ಸು ತುಂಡಾಗಲು ಕ್ರುದ್ಧ ಶಿಖಂಡಿಯು ನೂರುಚಂದ್ರಗಳಂತೆ ಹೊಳೆಯುತ್ತಿದ್ದ ಖಡ್ಗವನ್ನು ಕೈಯಲ್ಲಿ ತೆಗೆದುಕೊಂಡನು. ಸುವರ್ಣಭೂಷಿತ ವಿಶಾಲ ಗುರಾಣಿಯನ್ನು ತಿರುಗಿಸುತ್ತಾ ಕತ್ತಿಯನ್ನು ಕೃತವರ್ಮನ ರಥದ ಕಡೆ ಎಸೆದನು. ಆ ಮಹಾಖಡ್ಗವು ಶರದೊಂದಿಗೆ ಅವನ ಧನುಸ್ಸನ್ನು ತುಂಡರಿಸಿ ಅಂಬರದಿಂದ ಬಿದ್ದ ನಕ್ಷತ್ರದೋಪಾದಿಯಲ್ಲಿ ಭೂಮಿಯ ಮೇಲೆ ಬಿದ್ದಿತು.
ಇದೇ ಸಮಯದಲ್ಲಿ ಮಹಾರಥರು ತ್ವರೆಮಾಡಿ ಕೃತವರ್ಮನನ್ನು ಸಾಯಕಗಳಿಂದ ಗಾಢವಾಗಿ ಹೊಡೆದರು. ಪರವೀರಹ ಹಾರ್ದಿಕ್ಯನು ತುಂಡಾದ ಧನುಸ್ಸನ್ನು ತೊರೆದು ಇನ್ನೊಂದು ಮಹಾ ಧನುಸ್ಸನ್ನು ತೆಗೆದುಕೊಂಡು ಪಾಂಡವರನ್ನು ಮೂರು ಮೂರು ಜಿಹ್ಮಗಗಳಿಂದ ಹೊಡೆದನು. ಶಿಖಂಡಿಯನ್ನು ಮೂರು ಮತ್ತು ಐದು ಬಾಣಗಳಿಂದ ಹೊಡೆದನು. ಮಹಾಯಶಸ್ವೀ ಶಿಖಂಡಿಯಾದರೋ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಆಮೆಯ ಉಗುರಿನಂತೆ ಮೊನಚಾದ ಆಶುಗಗಳಿಂದ ಹಾರ್ದಿಕಾತ್ಮಜನನ್ನು ಹೊಡೆದನು. ಆಗ ಹೃದಿಕನ ಆತ್ಮಸಂಭವ ಶೂರನು ಕ್ರುದ್ಧನಾಗಿ ವೇಗದಿಂದ ಆನೆಯನ್ನು ಆಕ್ರಮಣಿಸುವ ಸಿಂಹದಂತೆ ಮಹಾತ್ಮ ಭೀಷ್ಮನ ಮೃತ್ಯುವಿಗೆ ಕಾರಣನಾದ ಮಹಾರಥ ಯಾಜ್ಞಸೇನಿಯನ್ನು ಆಕ್ರಮಣಿಸಿದನು. ದಿಗ್ಗಜಗಳಂತಿದ್ದ, ಅಗ್ನಿಗಳಂತೆ ಪ್ರಜ್ವಲಿಸುತ್ತಿದ್ದ ಆ ಇಬ್ಬರು ಅರಿಂದಮರೂ ಅನ್ಯೋನ್ಯರನ್ನು ಶರಸಂಘಗಳಿಂದ ಸಂಘರ್ಷಿಸಿದರು. ತಮ್ಮ ತಮ್ಮ ಶ್ರೇಷ್ಠ ಧನುಸ್ಸುಗಳನ್ನು ಟೇಂಕರಿಸುತ್ತಾ ಸಾಯಕಗಳನ್ನು ಹೂಡುತ್ತಾ ಇಬ್ಬರು ಸೂರ್ಯರು ತಮ್ಮ ತಮ್ಮ ಕಿರಣಗಳನ್ನು ಪಸರಿಸುವಂತೆ ನೂರಾರು ಬಾಣಗಳನ್ನು ಪರಸ್ಪರರ ಮೇಲೆ ಸುರಿಸಿದರು. ಆ ಇಬ್ಬರು ಅಪ್ರತಿಮ ವೀರ ಮಹಾರಥರು ತೀಕ್ಷ್ಣ ಶರಗಳಿಂದ ಅನ್ಯೋನ್ಯರನ್ನು ಸಂತಾಪಗೊಳಿಸುತ್ತಾ ಪ್ರಳಯಕಾಲದ ಭಾಸ್ಕರರಂತೆ ಪ್ರಕಾಶಿಸಿದರು. ಕೃತವರ್ಮನಾದರೋ ಯಾಜ್ಞಸೇನಿಯನ್ನು ರಭಸದಿಂದ ಎಪ್ಪತ್ಮೂರು ಬಾಣಗಳಿಂದ ಹೊಡೆದು ಪುನಃ ಏಳು ಬಾಣಗಳಿಂದ ಹೊಡೆದನು. ಅದರಿಂದ ವಿಪರೀತವಾಗಿ ಗಾಯಗೊಂಡ ಶಿಖಂಡಿಯು ವ್ಯಥಿತನಾಗಿ ರಥದಲ್ಲಿ ಆಸನದ ಪಕ್ಕಕ್ಕೆ ಜರುಗಿ ಕುಳಿತನು. ಧನುರ್ಬಾಣಗಳನ್ನು ಬಿಟ್ಟು ಮೂರ್ಛಿತನಾದನು. ರಥದಲ್ಲಿ ವಿಷಣ್ಣನಾಗಿದ್ದ ಶಿಖಂಡಿಯನ್ನು ನೋಡಿ ಕೌರವರು ಹಾರ್ದಿಕ್ಯನನ್ನು ಗೌರವಿಸಿ ಅಂಗವಸ್ತ್ರಗಳನ್ನು ಮೇಲಕ್ಕೆ ಹಾರಿಸಿದರು.
ಶಿಖಂಡಿಯು ಹಾರ್ದಿಕ್ಯನ ಶರಗಳಿಂದ ಹಾಗೆ ಪೀಡಿತನಾದುದನ್ನು ಕಂಡು ಅವನ ಸಾರಥಿಯು ಆ ಮಹಾರಥನನ್ನು ತ್ವರೆಮಾಡಿ ರಣದಿಂದ ದೂರಕ್ಕೆ ಕೊಂಡೊಯ್ದನು. ರಥದಲ್ಲಿ ಒರಗಿದ್ದ ಶಿಖಂಡಿಯನ್ನು ನೋಡಿದ ಪಾರ್ಥರು ತಕ್ಷಣವೇ ಕೃತವರ್ಮನನ್ನು ಸುತ್ತುವರೆದರು. ಅಲ್ಲಿ ಮಹಾರಥ ಕೃತವರ್ಮನು ಒಬ್ಬನೇ ಅನುಯಾಯಿಗಳೊಡನಿದ್ದ ಪಾರ್ಥರನ್ನು ತಡೆದು ಪರಮ ಅದ್ಭುತ ಕೃತ್ಯವನ್ನೆಸಗಿದನು. ಮಹಾರಥ ಕೃತವರ್ಮನು ಚೇದಿ-ಪಾಂಚಾಲ-ಸೃಂಜಯ-ಕೇಕಯ ಮಹಾವೀರ್ಯರನ್ನು ಸೋಲಿಸಿ ಪಾರ್ಥರನ್ನೂ ಗೆದ್ದನು. ಸಮರದಲ್ಲಿ ಹಾರ್ದಿಕ್ಯನಿಂದ ವಧಿಸಲ್ಪಡುತ್ತಿದ್ದ ಪಾಂಡವ ಯೋಧರು ರಣಾಂಗಣದಲ್ಲಿ ನಿಲ್ಲುವ ಮನಸ್ಸು ಮಾಡದೇ ಇಲ್ಲಿಂದಲ್ಲಿಗೆ ಓಡುತ್ತಿದ್ದರು. ಭೀಮಸೇನನ ನಾಯಕತ್ವದಲ್ಲಿದ್ದ ಪಾಂಡುಸುತರನ್ನು ಯುದ್ಧದಲ್ಲಿ ಗೆದ್ದು ಹಾರ್ದಿಕ್ಯನು ರಣದಲ್ಲಿ ಹೊಗೆಯಿಲ್ಲದ ಬೆಂಕಿಯಂತೆ ಪ್ರಕಾಶಿಸಿದನು. ಸಮರದಲ್ಲಿ ಹಾರ್ದಿಕ್ಯನಿಂದ ಪಲಾಯನಗೊಳಿಸಲ್ಪಟ್ಟ ಆ ಮಹಾರಥರು ಅವನ ಶರವೃಷ್ಟಿಯಿಂದ ಪೀಡಿತರಾಗಿ ವಿಮುಖರಾದರು.
ಮಹಾತ್ಮ ಹಾರ್ದಿಕ್ಯನಿಂದ ಪಲಾಯನಗೊಳಿಸಲ್ಪಟ್ಟ ಪಾಂಡವ ಸೇನೆಯು ನಾಚಿಕೆಯಿಂದ ತಲೆತಗ್ಗಿಸಿತು ಮತ್ತು ಕೌರವರು ಸಂತೋಷದಿಂದ ಕುಣಿದಾಡಿದರು. ಅಗಾಧ ಸಮುದ್ರದಲ್ಲಿ ಆಶ್ರಯವನ್ನು ಪಡೆಯಲು ಬಯಸಿದ ಪಾಂಡವರಿಗೆ ದ್ವೀಪವೊಂದು ದೊರಕಿತು. ಕೌರವರ ಕಡೆಯವರು ಮಾಡಿದ ಭಯಂಕರ ಜಯಘೋಷವನ್ನು ಕೇಳಿಸಿಕೊಂಡ ಸಾತ್ಯಕಿಯು ಕೃತವರ್ಮನ ಬಳಿಗೆ ಧಾವಿಸಿದನು. ಕೃತವರ್ಮನು ಶೈನೇಯನನ್ನು ನಿಶಿತ ಬಾಣಗಳಿಂದ ಮುಚ್ಚಿದನು. ಅದರಿಂದಾಗಿ ಸಾತ್ಯಕಿಯು ಅತ್ಯಂತ ಕ್ರೋಧಿತನಾದನು. ಆಗ ಶೈನೇಯನು ನಿಶಿತವಾದ ಭಲ್ಲವೊಂದನ್ನು ಕೃತವರ್ಮನ ಮೇಲೆ ಪ್ರಯೋಗಿಸಿ, ಪುನಃ ನಾಲ್ಕು ಬಾಣಗಳನ್ನು ಪ್ರಯೊಗಿಸಿದನು. ಅವನು ಕೃತವರ್ಮನ ಕುದುರೆಗಳನ್ನು ಕೊಂದು, ಭಲ್ಲದಿಂದ ಧನುಸ್ಸನ್ನು ಕತ್ತರಿಸಿದನು. ಹಾಗೆಯೇ ನಿಶಿತ ಶರಗಳಿಂದ ಅವನ ಪೃಷ್ಠರಕ್ಷಕನನ್ನೂ ಸಾರಥಿಯನ್ನೂ ಸಂಹರಿಸಿದನು. ಸತ್ಯವಿಕ್ರಮಿ ಸಾತ್ಯಕಿಯು ಅವನನ್ನು ವಿರಥನನ್ನಾಗಿ ಮಾಡಿ ಸನ್ನತಪರ್ವ ಶರಗಳಿಂದ ಸೇನೆಗಳನ್ನು ಸದೆಬಡಿಯತೊಡಗಿದನು. ಶೈನೇಯನ ಶರಗಳಿಂದ ಪೀಡಿತವಾದ ಸೇನೆಯು ಸಂಪೂರ್ಣವಾಗಿ ಭಗ್ನವಾಯಿತು. ಆಗ ಸತ್ಯವಿಕ್ರಮಿ ಸಾತ್ಯಕಿಯು ತ್ವರೆಮಾಡಿ ಮುಂದೆ ಸಾಗಿದನು. ಮಹಾಸಮುದ್ರದಂತಿದ್ದ ದ್ರೋಣನ ಸೇನೆಯನ್ನು ದಾಟಿ ಮುಂದುವರೆದ ಆ ವೀರ್ಯವಾನನು ಕೌರವ ಸೇನೆಯನ್ನು ಧ್ವಂಸಮಾಡತೊಡಗಿದನು.
ಸಾತ್ಯಕಿಯಿಂದ ಮಾಗಧ ಜಲಸಂಧನ ವಧೆ
ಯುದ್ಧದಲ್ಲಿ ಕೃತವರ್ಮನನ್ನು ಪರಾಜಯಗೊಳಿಸಿ ಸಂಹೃಷ್ಟನಾದ ಸಾತ್ಯಕಿಯು ಸಾರಥಿಗೆ “ಗಾಬರಿಗೊಳ್ಳದೇ ನಿಧಾನವಾಗಿ ಮುಂದೆ ಸಾಗು!” ಎಂದು ಹೇಳಿದನು. ರಥ-ಕುದುರೆ-ಆನೆಗಳ ಸಮೂಹಗಳಿಂದ ಮತ್ತು ಪದಾತಿ ಸೈನಿಕರಿಂದ ಸಂಪೂರ್ಣವಾಗಿದ್ದ ಆ ಕೌರವ ಸೈನ್ಯವನ್ನು ನೋಡಿ ಪುನಃ ಸಾರಥಿಗೆ ಹೇಳಿದನು: “ದ್ರೋಣನ ಸೇನೆಯ ಎಡಭಾಗಕ್ಕೆ ನೀನು ನೋಡುತ್ತಿರುವ ಮೋಡಗಳಂತಿರುವ ಸೇನೆಯು ಆನೆಗಳ ಸೇನೆ. ರುಕ್ಮರಥನು ಅದರ ನಾಯಕನು. ಸೂತ! ಬಹಳಷ್ಟು ಸಂಖ್ಯೆಯಲ್ಲಿರುವ ಆ ಸೇನೆಯನ್ನು ದಾಟಿ ಹೋಗುವುದು ಕಷ್ಟ. ದುರ್ಯೋಧನನಿಂದ ಆಜ್ಞಪ್ತರಾಗಿ ಅವು ನನಗಾಗಿ ಜೀವವನ್ನೇ ತೊರೆದು ಕಾಯುತ್ತಿವೆ. ಆ ಮಹೇಷ್ವಾಸ ತ್ರಿಗರ್ತರ ರಾಜಪುತ್ರರೆಲ್ಲರೂ ವೀರ ಯೋಧರು. ರಥೋದಾರರು. ಸುವರ್ಣಮಯ ವಿಕೃತ ಧ್ವಜವುಳ್ಳವರು. ನನ್ನೊಡನೆ ಯುದ್ಧಮಾಡಲು ನನ್ನನ್ನೇ ಎದುರಿಸಿ ಆ ವೀರರು ನಿಂತಿರುವರು. ಕುದುರೆಗಳನ್ನು ಓಡಿಸು. ಅಲ್ಲಿಗೆ ನನ್ನನ್ನು ತಲುಪಿಸು. ಭಾರದ್ವಾಜನು ನೋಡುತ್ತಿರುವಂತೆಯೇ ನಾನು ತ್ರಿಗರ್ತರೊಡನೆ ಯುದ್ಧಮಾಡುತ್ತೇನೆ.”
ಸಾತ್ವತನ ಮಾತಿನಂತೆ ನಡೆಯುವ ಸೂತನು ಹೊಳೆಯುತ್ತಿರುವ ಪತಾಕೆಗಳಿಂದ ಕೂಡಿದ ಆದಿತ್ಯವರ್ಣದ ರಥವನ್ನು ನಿಧಾನವಾಗಿ ನಡೆಸಿದನು. ಅವನು ಹೇಳಿದಂತೆಯೇ ಆ ಸಾರಥಿಯ ವಶದಲ್ಲಿದ್ದ ವಾಯುವೇಗ ಸಮ, ಕುಂದಪುಷ್ಪ ಅಥವಾ ಚಂದ್ರ ಅಥವಾ ಬೆಳ್ಳಿಯ ಬಣ್ಣದ ಉತ್ತಮ ಕುದುರೆಗಳು ರಣದಲ್ಲಿ ಮುಂದುವರೆದವು. ಆ ಶಂಖವರ್ಣದ ಉತ್ತಮ ಕುದುರೆಗಳೊಂದಿಗೆ ಆಕ್ರಮಣ ಮಾಡಿದ ಸಾತ್ಯಕಿಯನ್ನು ಆ ಶೂರರು ಆನೆಗಳ ಸೇನೆಗಳೊಂದಿಗೆ ಸುಲಭವಾಗಿ ಭೇದಿಸಬಲ್ಲ ವಿವಿಧ ತೀಕ್ಷ್ಣ ಸಾಯಕಗಳನ್ನು ಎರಚುತ್ತಾ ಅವನನ್ನು ಸುತ್ತುವರೆದರು. ಸಾತ್ವತನಾದರೋ ವರ್ಷಾಕಾಲದಲ್ಲಿ ಮಹಾಮೇಘವು ಜಲವರ್ಷದಿಂದ ಪರ್ವತಗಳನ್ನು ಮುಚ್ಚಿಬಿಡುವಂತೆ ನಿಶಿತ ಬಾಣಗಳಿಂದ ಆ ಗಜಸೇನೆಯನ್ನು ಮುಚ್ಚಿ ಯುದ್ಧಮಾಡಿದನು. ಶಿನಿವೀರನು ಬಿಟ್ಟ ವಜ್ರಸ್ಪರ್ಷಕ್ಕೆ ಸಮನಾದ ಶರಗಳಿಂದ ವಧಿಸಲ್ಪಡುತ್ತಿದ್ದ ಆನೆಗಳು ರಣವನ್ನು ಬಿಟ್ಟು ಓಡಿ ಹೋದವು. ಕತ್ತರಿಸಿಹೋದ ದಂತಗಳಿಂದಲೂ, ರಕ್ತಸಿಕ್ತವಾದ ಅಂಗಾಂಗಗಳಿಂದಲೂ, ಒಡೆದು ಹೋಗಿದ್ದ ತಲೆ-ಗಂಡಸ್ಥಲಗಳಿಂದಲೂ, ಸೀಳಿಹೋದ ಕಿವಿ-ಮುಖ-ಸೊಂಡಿಲುಗಳಿಂದಲೂ, ಸತ್ತುಹೋಗಿದ್ದ ಮಾವಟಿಗರಿಂದಲೂ, ಬಿದ್ದುಹೋಗಿದ್ದ ಪತಾಕೆಗಳಿಂದಲೂ, ಛಿನ್ನವಾದ ಮರ್ಮಸ್ಥಲಗಳಿಂದಲೂ, ಭಿನ್ನವಾದ ಗಂಟೆಗಳಿಂದಲೂ, ಕತ್ತರಿಸಲ್ಪಟ್ಟ ಮಹಾಧ್ವಜಗಳಿಂದಲೂ, ಹತಯೋಧರಿಂದಲೂ, ಜಾರಿಹೋಗಿದ್ದ ರತ್ನಗಂಬಳಿಗಳಿಂದಲೂ ಕೂಡಿದ್ದ ಆನೆಗಳು ಎಲ್ಲ ದಿಕ್ಕುಗಳಲ್ಲಿಯೂ ಪ್ರಕಾಶಿಸಿದವು. ಸಾತ್ವತನ ವಿವಿಧ ನಾರಾಚ-ವತ್ಸದಂತಗಳಿಂದ ಗಾಯಗೊಂಡ ಮೋಡಗಳಂತಿದ್ದ ಆನೆಗಳು ರೋದಿಸುತ್ತಾ ಸುತ್ತಲೂ ತಿರುಗುತ್ತಿದ್ದವು. ಹಾಗೆ ಆ ಗಜಸೇನೆಯು ದಿಕ್ಕಾಪಾಲಾಗಿ ಓಡಿಹೋಗುತ್ತಿರಲು ಮಹಾರಥ ಜಲಸಂಧನು ತನ್ನ ಆನೆಯನ್ನು ರಜತಾಶ್ವ ಸಾತ್ಯಕಿಯ ಬಳಿಗೆ ಕೊಂಡೊಯ್ದನು. ಸುವರ್ಣಮಯ ಕವಚವನ್ನು ಧರಿಸಿದ್ದ, ಶೂರ, ಶುಚಿ, ಕುಂಡಲೀ, ಮುಕುಟಿ, ಶಂಖೀ, ರಕ್ತಚಂದನಲೇಪಿತನಾಗಿದ್ದ, ಕತ್ತಿನಲ್ಲಿ ಜ್ವಾಜ್ವಲ್ಯಮಾನ ಚಿನ್ನದ ಸರವನ್ನು ಧರಿಸಿದ್ದ, ವಕ್ಷಃಸ್ಥಲವನ್ನು ಪದಕದಿಂದ ಅಲಂಕರಿಸಿಕೊಂಡಿದ್ದ, ಪ್ರಕಾಶಮಾನವಾದ ಕಂಠಸೂತ್ರವನ್ನು ಧರಿಸಿದ್ದ ಜಲಸಂಧನು ರಣಾಂಗಣದಲ್ಲಿ ಸುವರ್ಣಮಯ ಧನುಸ್ಸನ್ನು ಠೇಂಕರಿಸುತ್ತಾ ವಿದ್ಯುತ್ತಿನಿಂದ ಕೂಡಿದ ಮೇಘದಂತೆ ಪ್ರಕಾಶಿಸಿದನು,
ಅತ್ಯಂತ ತ್ವರೆಯಿಂದ ತನ್ನ ಮೇಲೆ ಬೀಳಲು ಬರುತ್ತಿದ್ದ ಮಗಧರಾಜನ ಆ ಗಜನಾಯಕನನ್ನು ಸಾತ್ಯಕಿಯು ಉಕ್ಕಿ ಬರುತ್ತಿರುವ ಸಮುದ್ರವನ್ನು ತೀರವು ತಡೆಯುವಂತೆ ತಡೆದು ನಿಲ್ಲಿಸಿದನು. ಶೈನೇಯನ ಉತ್ತಮ ಶರಗಳಿಂದ ಆ ಅನೆಯು ತಡೆಯಲ್ಪಟ್ಟಿದುದನ್ನು ನೋಡಿ ಮಹಾಬಲ ಜಲಸಂಧನು ಕ್ರುದ್ಧನಾದನು. ಜಲಸಂಧನು ಭಾರವನ್ನು ಹೊರಬಲ್ಲ ಮಾರ್ಗಣಗಳಿಂದ ಶಿನಿಯ ಮೊಮ್ಮೊಗನ ಮಹಾವಕ್ಷಸ್ಥಳಕ್ಕೆ ಹೊಡೆದನು. ಅನಂತರ ಇನ್ನೊಂದು ಹಿತ್ತಾಳೆಯ ನಿಶಿತ ಭಲ್ಲದಿಂದ ವೃಷ್ಣಿವೀರನ ಧನುಸ್ಸನ್ನು ಕತ್ತರಿಸಿದನು. ಅನಂತರ ನಗುತ್ತಾ ಧನುಸ್ಸಿನಿಂದ ವಿಹೀನನಾಗಿದ್ದ ಸಾತ್ಯಕಿಯನ್ನು ವೀರ ಮಾಗಧನು ನಗುತ್ತಾ ಐದು ನಿಶಿತ ಶರಗಳಿಂದ ಹೊಡೆದನು. ವೀರ್ಯವಾನ್ ಜಲಸಂಧನ ಅನೇಕ ಬಾಣಗಳಿಂದ ಗಾಯಗೊಂಡರೂ ಮಹಾಬಾಹು ಸಾತ್ಯಕಿಯು ವಿಚಲಿತನಾಗಲಿಲ್ಲ. ಅದೊಂದು ಮಹಾ ಅದ್ಭುತವಾಯಿತು. ತನ್ನಮೇಲೆ ಬೀಳುತ್ತಿರುವ ಬಾಣಗಳನ್ನು ಪರಿಗಣಿಸದೇ, ಗಾಬರಿಗೊಳ್ಳದೆ ಸಾತ್ಯಕಿಯು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ’ನಿಲ್ಲು! ನಿಲ್ಲು!’ ಎಂದು ಜಲಸಂಧನಿಗೆ ಕೂಗಿ ಹೇಳಿದನು. ಹೀಗೆ ಹೇಳಿ ನಗುತ್ತಾ ಶೈನೇಯನು ಜಲಸಂಧನ ಎದೆಗೆ ಗುರಿಯಿಟ್ಟು ಅರವತ್ತು ಬಾಣಗಳಿಂದ ಹೊಡೆದನು. ಸುತೀಕ್ಷ್ಣ ಕ್ಷುರಪ್ರದಿಂದ ಜಲಸಂಧನ ಮಹಾಧನುಸ್ಸನ್ನು ಮುಷ್ಟಿಪ್ರದೇಶದಲ್ಲಿ ಕತ್ತರಿಸಿ ಬಳಿಕ ಮೂರು ಬಾಣಗಳಿಂದ ಅವನನ್ನು ಹೊಡೆದನು. ಜಲಸಂಧನಾಧರೋ ಬಾಣಗಳಿಂದ ಯುಕ್ತವಾಗಿದ್ದ ಆ ಧನುಸ್ಸನ್ನು ಕೂಡಲೇ ವಿಸರ್ಜಿಸಿ ತೋಮರವನ್ನು ಕೈಗೆತ್ತಿಕೊಂಡು ಸಾತ್ಯಕಿಯ ಕಡೆಗೆ ರಭಸದಿಂದ ಎಸೆದನು. ಅದು ಮಾಧವನ ಎಡಭುಜವನ್ನು ಗಾಯಗೊಳಿಸಿ ಮಹಾಸರ್ಪವು ಭುಸುಗುಟ್ಟುವಂತೆ ಸೊಯ್ ಶಬ್ಧದೊಡನೆ ಭೂಮಿಯನ್ನು ಸೇರಿತು. ಎಡಭುಜವು ಗಾಯಗೊಳ್ಳಲು ಸಾತ್ಯಕಿಯು ಮೂವತ್ತು ತೀಕ್ಷ್ಣ ವಿಶಿಖಗಳಿಂದ ಜಲಸಂಧನನ್ನು ಹೊಡೆದನು. ಅದಕ್ಕೆ ಪ್ರತಿಯಾಗಿ ಮಹಾಬಲ ಜಲಸಂಧನು ಖಡ್ಗವನ್ನೂ, ಎತ್ತಿನ ಚರ್ಮದಿಂದ ಮಾಡಿದ್ದ ಚಂದ್ರಾಕಾರದ ನೂರು ಚಿಹ್ನೆಗಳನ್ನುಳ್ಳ ಗುರಾಣಿಯನ್ನೂ ತೆಗೆದುಕೊಂಡು ಖಡ್ಗವನ್ನು ತಿರುಗಿಸಿ ಸಾತ್ವತನ ಮೇಲೆ ಎಸೆದನು. ಆ ಖಡ್ಗವು ಶೈನೇಯನ ಧನುಸ್ಸನ್ನು ತುಂಡರಿಸಿ ಭೂಮಿಯ ಮೇಲೆ ಬಿದ್ದಿತು. ಭೂಮಿಯ ಮೇಲೆ ಬಿದ್ದಿದ್ದ ಆ ಖಡ್ಗವು ಕೊಳ್ಳಿಯ ಚಕ್ರದಂತೆ ತೋರುತ್ತಿತ್ತು.
ಒಡನೆಯೇ ಸಾತ್ಯಕಿಯು ಕ್ರುದ್ಧನಾಗಿ ಎಲ್ಲ ಶರೀರಗಳನ್ನೂ ತುಂಡರಿಸಬಲ್ಲ, ಶಾಲವೃಕ್ಷದ ಕೊಂಬೆಯಂತೆ ದೀರ್ಘವಾದ ಇಂದ್ರನ ವಜ್ರಾಯುಧಕ್ಕೆ ಸಮನಾದ ಠೇಂಕಾರಶಬ್ಧವುಳ್ಳ ಧನುಸ್ಸಿನ ಶಿಂಜಿನಿಯನ್ನು ಮೀಟಿ ನಿಶಿತ ಬಾಣದಿಂದ ಜಲಸಂಧನನ್ನು ಪ್ರಹರಿಸಿದನು. ಆಗ ಮಾಧವೋತ್ತಮನು ನಗುತ್ತಾ ಆಭರಣಗಳಿಂದ ಕೂಡಿದ್ದ ಜಲಸಂಧನ ಎರಡು ತೋಳುಗಳನ್ನೂ ಎರಡು ಕ್ಷುರಪ್ರಗಳಿಂದ ಕತ್ತರಿಸಿಬಿಟ್ಟನು. ಜಲಸಂಧನ ಪರಿಘೋಪಮ ಎರಡು ತೋಳುಗಳೂ ಪರ್ವತದ ಮೇಲಿಂದ ಜಾರಿಬಿದ್ದ ಐದು ಹೆಡೆಗಳುಳ್ಳ ಸರ್ಪಗಳಂತೆ ಆನೆಯ ಮೇಲಿಂದ ವಸುಂಧರೆ ಧರೆಯ ಮೇಲೆ ಬಿದ್ದವು. ಅನಂತರ ಸಾತ್ಯಕಿಯು ಮೂರನೆಯ ಕ್ಷುರದಿಂದ ಮುತ್ತಿನಂಥಹ ಸುಂದರ ಹಲ್ಲುಗಳನ್ನು ಹೊಂದಿದ್ದ ಮನೋಹರ ಕರ್ಣಕುಂಡಲಗಳಿಂದ ಸಮಲಂಕೃತವಾಗಿದ್ದ ಜಲಸಂಧನ ವಿಶಾಲ ಶಿರಸ್ಸನ್ನು ಕತ್ತರಿಸಿದನು. ತಲೆ ಮತ್ತು ಬಾಹುಗಳು ಕೆಳಗೆ ಬೀಳಲು ಅತ್ಯಂತ ಭಯಂಕರವಾಗಿ ಕಾಣುತ್ತಿದ್ದ ಜಲಸಂಧನ ಕಬಂಧವು ಚಿಮ್ಮುತ್ತಿರುವ ರಕ್ತದಿಂದ ಆ ಮಹಾಗಜವನ್ನು ತೋಯಿಸಿತು. ಈ ರೀತಿ ಜಲಸಂಧನನ್ನು ಸಂಹರಿಸಿ ಸಾತ್ವತನು ತ್ವರೆಮಾಡಿ ಆನೆಯ ಭುಜದ ಮೇಲಿಂದ ಅದರ ಅಂಬಾರಿಯನ್ನೂ ಕೆಳಗುರುಳಿಸಿದನು.
ಆದರೆ ರಕ್ತದಿಂದ ತೋಯ್ದು ಹೋಗಿದ್ದ ದೇಹದ ಜಲಸಂಧನ ಆನೆಯು ಅದಕ್ಕೆ ಕಟ್ಟಿದ್ದ ಆ ಶ್ರೇಷ್ಠ ಅಂಬಾರಿಯನ್ನು ಜೋತಾಡಿಸುತ್ತಾ ಎಳೆದು ಕೊಂಡೇ ಓಡಿಹೋಯಿತು. ಸಾತ್ವತನ ಬಾಣಗಳಿಂದ ಪುನಃ ಪೀಡಿತವಾದ ಆ ದೊಡ್ಡ ಆನೆಯು ಭಯಂಕರವಾಗಿ ಚೀತ್ಕಾರ ಮಾಡುತ್ತಾ ತನ್ನ ಕಡೆಯ ಸೇನೆಯನ್ನೇ ಪದಾಘಾತದಿಂದ ಮರ್ದಿಸುತ್ತಾ ಓಡಿಹೋಯಿತು. ವೃಷ್ಣಿಯರ ವೃಷಭನಿಂದ ಜಲಸಂಧನು ಹತನಾದುದನ್ನು ಕಂಡು ಕೌರವ ಸೇನೆಯಲ್ಲಿ ಮಹಾ ಹಾಹಾಕಾರವುಂಟಾಯಿತು. ಶತ್ರುವನ್ನು ಜಯಿಸುವುದರಲ್ಲಿ ನಿರುತ್ಸಾಹರಾಗಿದ್ದ ಪಲಾಯನದಲ್ಲಿ ಉತ್ಸಾಹಿತರಾಗಿದ್ದ ಕೌರವ ಯೋಧರು ಎಲ್ಲ ದಿಕ್ಕುಗಳಲ್ಲಿ ಹಿಮ್ಮೆಟ್ಟಿ ಓಡಿಹೋದರು.
ಈ ಮಧ್ಯದಲ್ಲಿ ದ್ರೋಣನು ವೇಗವಾದ ಕುದುರೆಗಳ ಮೂಲಕ ಮಹಾರಥ ಸಾತ್ಯಕಿಯ ಸಮೀಪ ಬಂದನು. ಅಡಿಗಡಿಯೂ ಜಯಶಾಲಿಯಾಗುತ್ತಿದ್ದ ಶೈನೇಯನನ್ನು ನೋಡಿ ಕ್ರುದ್ಧರಾದ ಕುರುಪುಂಗವರು ದ್ರೋಣನನ್ನು ಸೇರಿಕೊಂಡು ಸಾತ್ಯಕಿಯನ್ನು ಸುತ್ತುವರೆದರು. ಆಗ ದ್ರೋಣನೊಂದಿಗಿದ್ದ ಕುರುಗಳ ಮತ್ತು ಸಾತ್ವತನ ನಡುವೆ ದೇವಾಸುರರ ಮಧ್ಯೆ ನಡೆದಂತೆ ಘೋರವಾದ ಯುದ್ಧವು ನಡೆಯಿತು.
ಸಾತ್ಯಕಿಯಿಂದ ದುರ್ಯೋಧನ-ಕೃತವರ್ಮರ ಪರಾಜಯ
ಪ್ರಹಾರಕುಶಲರಾದ ಅವರೆಲ್ಲರೂ ಬಾಣಗಳ ಸಮೂಹಗಳನ್ನು ಪ್ರಯೋಗಿಸುತ್ತಾ ತ್ವರೆಮಾಡಿ ಯುಯುಧಾನನೊಡನೆ ಯುದ್ಧ ಮಾಡಿದರು. ಅವನನ್ನು ದ್ರೋಣನು ಎಪ್ಪತ್ತೇಳು ನಿಶಿತ ಬಾಣಗಳಿಂದ, ದುರ್ಮರ್ಷಣನು ಹನ್ನೆರಡು ಮತ್ತು ದುಃಸ್ಸಹನು ಹತ್ತು ಬಾಣಗಳಿಂದ ಹೊಡೆದರು. ಹಾಗೆಯೇ ವಿಕರ್ಣನೂ ಕೂಡ ರಣಹದ್ದಿನ ರೆಕ್ಕೆಗಳ ಮೂವತ್ತು ನಿಶಿತ ಕಂಕಪತ್ರಗಳಿಂದ ಅವನ ಎಡಪಾರ್ಶ್ವವನ್ನೂ ಮತ್ತು ವಕ್ಷಸ್ಥಳವನ್ನೂ ಪ್ರಹರಿಸಿದನು. ದುರ್ಮುಖನು ಹತ್ತು ಬಾಣಗಳಿಂದ, ಹಾಗೆಯೇ ದುಃಶಾಸನನು ಎಂಟು ಬಾಣಗಳಿಂದ ಮತ್ತು ಚಿತ್ರಸೇನನು ಎರಡರಿಂದ ಶೈನೇಯನನ್ನು ಹೊಡೆದರು. ದುರ್ಯೋಧನನೂ ಮತ್ತು ಅನ್ಯ ಮಹಾರಥ ಶೂರರೂ ಮಾಧವನನ್ನು ಮಹಾ ಶರವರ್ಷದಿಂದ ಪೀಡಿಸಿದರು. ಕೌರವ ಪುತ್ರರಿಂದ ಎಲ್ಲ ಕಡೆಗಳಿಂದ ಹೀಗೆ ಹೊಡೆಯಲ್ಪಡುತ್ತಿದ್ದ ಶೈನೇಯನು ಅವರಿಗೆ ಪ್ರತಿಯಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಒಬ್ಬೊಬ್ಬರನ್ನೂ ಜಿಹ್ಮಗಗಳಿಂದ ಹೊಡೆದನು. ಭಾರದ್ವಾಜನನ್ನು ಮೂರು ಬಾಣಗಳಿಂದ, ದುಃಸ್ಸಹನನ್ನು ಒಂಭತ್ತರಿಂದ, ವಿಕರ್ಣನನ್ನು ಇಪ್ಪತ್ತೈದರಿಂದ, ಚಿತ್ರಸೇನನನ್ನು ಏಳರಿಂದ, ದುರ್ಮರ್ಷಣನನ್ನು ಹನ್ನೆರಡರಿಂದ, ವಿವಿಂಶತಿಯನ್ನು ನಾಲ್ಕರಿಂದ, ಸತ್ಯವ್ರತನನ್ನು ಒಂಭತ್ತರಿಂದ ಮತ್ತು ವಿಜಯನನ್ನು ಹತ್ತು ಶರಗಳಿಂದ ಹೊಡೆದನು. ಆಗ ತಕ್ಷಣವೇ ಮಹಾರಥಿ ಸಾತ್ಯಕಿಯು ಧನುಸ್ಸನ್ನು ಟೇಂಕರಿಸುತ್ತಾ ದುರ್ಯೋಧನನನ್ನು ಎದುರಿಸಿ ಶರಗಳಿಂದ ಗಾಢವಾಗಿ ಪ್ರಹರಿಸಿದನು. ಹೀಗೆ ಅವರಿಬ್ಬರ ನಡುವೆ ಯುದ್ಧವು ನಡೆಯಿತು. ಆ ಇಬ್ಬರು ಮಹಾರಥರು ತೀಕ್ಷ್ಣ ಶರಗಳನ್ನು ಅನುಸಂಧಾನ ಮಾಡುತ್ತಾ, ಪ್ರಹರಿಸುತ್ತಾ, ಸಮರದಲ್ಲಿ ಅನ್ಯೋನ್ಯರನ್ನು ಬಾಣಗಳಿಂದ ಮುಚ್ಚಿ ಅದೃಶ್ಯರನ್ನಾಗಿಸಿಬಿಟ್ಟರು. ಕುರುರಾಜನಿಂದ ಬಹಳವಾಗಿ ಗಾಯಗೊಂಡ ಸಾತ್ಯಕಿಯು ರಕ್ತವನ್ನು ಸುರಿಸುತ್ತಾ ಕೆಂಪು ರಸವನ್ನು ಸುರಿಸುವ ಚಂದನ ವೃಕ್ಷದಂತೆ ಶೋಭಿಸಿದನು. ಸಾತ್ವತನ ಬಾಣಗಳ ಗುಂಪುಗಳಿಂದ ಗಾಯಗೊಂಡ ದುರ್ಯೋಧನನು ಸುವರ್ಣಮಯ ಶಿರೋಭೂಷಣವಿರುವ ಎತ್ತರವಾದ ಯೂಪಸ್ಥಂಭದಂತೆ ಶೋಭಿಸಿದನು.
ಮಾಧವನಾದರೋ ರಣದಲ್ಲಿ ಒಮ್ಮೆಲೇ ನಗುತ್ತಾ ಕುರುರಾಜನ ಧನುಸ್ಸನ್ನು ಕ್ಷುರಪ್ರದಿಂದ ಕತ್ತರಿಸಿದನು. ಕೂಡಲೇ ಧನುಸ್ಸನ್ನು ಕಳೆದುಕೊಂಡ ಅವನನ್ನು ಬಹಳ ಶರಗಳಿಂದ ಪ್ರಹರಿಸಿದನು. ಕ್ಷಿಪ್ರಕಾರೀ ಶತ್ರುವಿನ ಶರಗಳಿಂದ ತನ್ನ ಧನುಸ್ಸು ತುಂಡಾದುದನ್ನು ಮತ್ತು ಶತ್ರುವಿನ ವಿಜಯಲಕ್ಷಣವನ್ನು ದುರ್ಯೋಧನನು ಸಹಿಸಿಕೊಳ್ಳಲಿಲ್ಲ. ಆಗ ಅವನು ಹೇಮಪೃಷ್ಠದ ಇನ್ನೊಂದು ದುರಾಸದ ಧನುಸ್ಸನ್ನು ತೆಗೆದುಕೊಂಡು ತಕ್ಷಣವೇ ನೂರು ಸಾಯಕಗಳಿಂದ ಸಾತ್ಯಕಿಯನ್ನು ಹೊಡೆದನು. ಅವನಿಂದ ಅತಿಯಾಗಿ ಗಾಯಗೊಂಡ ಸಾತ್ಯಕಿಯು ಸಹಿಸಿಕೊಳ್ಳಲಾಗದೇ ದುರ್ಯೋಧನನನ್ನೂ ಬಹಳವಾಗಿ ಪೀಡಿಸಿದನು. ನೃಪತಿಯು ಪೀಡಿತನಾಗಿದ್ದುದನ್ನು ನೋಡಿ ದುರ್ಯೋಧನನ ಸಹೋದರರು ಸಾತ್ವತನನ್ನು ಶರವರ್ಷಗಳಿಂದ ಮುಚ್ಚಿಬಿಟ್ಟರು. ಅವರಿಂದ ಬಹಳವಾಗಿ ಗಾಯಗೊಂಡ ಸಾತ್ಯಕಿಯು ಒಬ್ಬೊಬ್ಬರನ್ನೂ ಐದೈದು ಮತ್ತು ಪುನಃ ಏಳೇಳರಿಂದ ಹೊಡೆದನು. ತ್ವರೆಮಾಡಿ ದುರ್ಯೋಧನನನ್ನೂ ಎಂಟು ಆಶುಗಗಳಿಂದ ಹೊಡೆದು ನಗುತ್ತಾ ರಿಪುಭೀಷಣವಾಗಿದ್ದ ಅವನ ಧನುಸ್ಸನ್ನು ತುಂಡರಿಸಿದನು. ಅನಂತರ ಆನೆಯ ಚಿಹ್ನೆಯುಳ್ಳ ಮಣಿಮಯವಾದ ಅವನ ಧ್ವಜವನ್ನು ಶರಗಳಿಂದ ಕೆಳಗುರುಳಿಸಿದನು. ಆ ಮಹಾಯಶಸ್ವಿಯು ನಿಶಿತ ಶರಗಳಿಂದ ನಾಲ್ಕು ಕುದುರೆಗಳನ್ನೂ ಕೊಂದು ಕ್ಷುರಪ್ರದಿಂದ ಸಾರಥಿಯನ್ನೂ ಕೆಳಗುರುಳಿಸಿದನು. ಇದರ ಮಧ್ಯದಲ್ಲಿಯೇ ಮಹಾರಥ ಕುರುರಾಜನನ್ನು ಹೃಷ್ಟನಾದ ಸಾತ್ಯಕಿಯು ಅನೇಕ ಮರ್ಮಭೇದಿ ಬಾಣಗಳಿಂದ ಮುಚ್ಚಿಬಿಟ್ಟನು. ಶೈನೇಯನ ಉತ್ತಮ ಶರಗಳಿಂದ ಗಾಯಗೊಂಡ ದುರ್ಯೋಧನನು ತಕ್ಷಣವೇ ಓಡಿಹೋದನು. ಓಡಿಹೋಗುವಾಗ ಧನ್ವಿ ಚಿತ್ರಸೇನನ ರಥವನ್ನು ಏರಿದನು. ಆಕಾಶದಲ್ಲಿ ರಾಹುವಿನಿಂದ ಗ್ರಸ್ತನಾದ ಸೂರ್ಯನಂತೆ ಸಾತ್ಯಕಿಯಿಂದ ಗ್ರಸ್ತನಾದ ರಾಜನನ್ನು ನೋಡಿ ಹಾಹಾಕಾರವುಂಟಾಯಿತು.
ಆ ಮಹಾಶಬ್ಧವನ್ನು ಕೇಳಿ ಮಹಾರಥ ಕೃತವರ್ಮನು ಧನುಸ್ಸನ್ನು ಟೇಂಕರಿಸಿ ಅಲ್ಲಾಡಿಸುತ್ತಾ, ಕುದುರೆಗಳನ್ನು ಬೇಗ ಹೋಗುವಂತೆ ಚಪ್ಪರಿಸುತ್ತಾ, “ಬೇಗ ಹೋಗು!” ಎಂದು ಸಾರಥಿಯನ್ನು ಗದರಿಸುತ್ತಾ ತಕ್ಷಣವೇ ಮಾಧವನು ಎಲ್ಲಿದ್ದನೋ ಅಲ್ಲಿಗೆ ಧಾವಿಸಿ ಬಂದನು. ಬಾಯ್ದೆರೆದ ಅಂತಕನಂತೆಯೇ ತನ್ನ ಮೇಲೆ ಬೀಳಲು ಬರುತ್ತಿದ್ದ ಅವನನ್ನು ನೋಡಿ ಯುಯುಧಾನನು ಸಾರಥಿಗೆ ಹೀಗೆ ಹೇಳಿದನು: “ಕೃತವರ್ಮನು ಕೈಯಲ್ಲಿ ಬಾಣವನ್ನು ಹಿಡಿಧು ರಥದಲ್ಲಿ ಕುಳಿತು ತೀವ್ರ ವೇಗದಿಂದ ನನ್ನ ಕಡೆಗೇ ಬರುತ್ತಿದ್ದಾನೆ. ಅವನನ್ನು ನಮ್ಮ ರಥದೊಂದಿಗೆ ಎದುರಿಸು!”
ಅನಂತರ ವಿಧಿವತ್ತಾಗಿ ಸಜ್ಜುಗೊಳಿಸಿದ್ದ ವೇಗದ ಕುದುರೆಗಳಿಂದ ಯುಕ್ತವಾಗಿದ್ದ ರಥದಲ್ಲಿ ಕುಳಿತು ಸಾತ್ಯಕಿಯು ಧನುಷ್ಮಂತರಿಗೆ ಆದರ್ಶಪ್ರಾಯನಾಗಿದ್ದ ಭೋಜನ ಸಮೀಪಕ್ಕೆ ಹೋದನು. ಆಗ ಪರಮ ಕ್ರುದ್ಧರಾಗಿದ್ದ, ಪ್ರಜ್ವಲಿಸುವ ಅಗ್ನಿಗಳಂತೆಯೇ ಕಾಣುತ್ತಿದ್ದ, ವೇಗಶಾಲಿಗಳಾದ, ಆ ನರಶ್ರೇಷ್ಠ ಸಾತ್ಯಕಿ-ಕೃತವರ್ಮರಿಬ್ಬರೂ ಕೊಬ್ಬಿದ ಎರಡು ವ್ಯಾಘ್ರಗಳೋಪಾದಿಯಲ್ಲಿ ಯುದ್ಧಕ್ಕೆ ತೊಡಗಿದರು. ಕೃತವರ್ಮನಾದರೋ ಶೈನೇಯನನ್ನು ಇಪ್ಪತ್ತಾರು ಬಾಣಗಳಿಂದ ಪ್ರಹರಿಸಿ ಅವನ ಸಾರಥಿಯನ್ನು ಏಳು ನಿಶಿತ ಬಾಣಗಳಿಂದ ಹೊಡೆದನು. ಪುನಃ ಶ್ರೇಷ್ಠವಾದ ನಾಲ್ಕು ಬಾಣಗಳಿಂದ ಸಾತ್ವತನ ಸುಶಿಕ್ಷಿತವೂ ವಿನೀತವೂ ಆಗಿದ್ದ ಸಿಂಧುದೇಶದ ನಾಲ್ಕು ಕುದುರೆಗಳನ್ನೂ ಗಾಯಗೊಳಿಸಿದನು. ಬಂಗಾರದ ಧ್ವಜವುಳ್ಳ, ಬಂಗಾರದ ಅಂಗದವನ್ನು ತೊಟ್ಟಿದ್ದ, ಬಂಗಾರದ ಕವಚವನ್ನು ತೊಟ್ಟಿದ್ದ ಕೃತವರ್ಮನು ಬಂಗಾರದ ಬೆನ್ನುಳ್ಳ ಧನುಸ್ಸನ್ನು ಟೇಂಕರಿಸಿ ಬಂಗಾರದ ರೆಕ್ಕೆಗಳನ್ನು ಹೊಂದಿದ್ದ ಬಾಣಗಳಿಂದ ಸಾತ್ಯಕಿಯನ್ನು ಮುಚ್ಚಿ ಬಿಟ್ಟನು. ಧನಂಜಯನನ್ನು ನೋಡುವ ಅವಸರದಲ್ಲಿದ್ದ ಶಿನಿಯ ಮೊಮ್ಮೊಗನು ಎಂಭತ್ತು ಬಾಣಗಳನ್ನು ಕೃತವರ್ಮನ ಮೇಲೆ ಪ್ರಯೋಗಿಸಿದನು. ಬಲಿಷ್ಠ ಶತ್ರುವಿನ ಬಾಣಗಳಿಂದ ಬಹಳವಾಗಿ ಗಾಯಗೊಂಡ ಕೃತವರ್ಮನು ಭೂಕಂಪವಾದಾಗ ಪರ್ವತವು ನಡುಗುವಂತೆ ತತ್ತರಿಸಿದನು. ಅದೇ ಸಮಯದಲ್ಲಿ ಸಾತ್ಯಕಿಯು ತಕ್ಷಣವೇ ಅರವತ್ಮೂರು ನಿಸಿತ ಬಾಣಗಳಿಂದ ಕೃತವರ್ಮನ ಕುದುರೆಗಳನ್ನೂ, ಏಳು ಬಾಣಗಳಿಂದ ಅವನ ಸಾರಥಿಯನ್ನೂ ಹೊಡೆದನು. ಅನಂತರ ಸಾತ್ಯಕಿಯು ಚಿನ್ನದ ರೆಕ್ಕೆಗಳನ್ನು ಹೊಂದಿದ್ದ ಕೋಪಗೊಂಡ ಸರ್ಪದಂತಿದ್ದ ಮಹಾಜ್ವಾಲೆಯಿಂದ ಯುಕ್ತವಾಗಿದ್ದ ವಿಶಿಖವನ್ನು ಹೂಡಿ ಕೃತವರ್ಮನ ಮೇಲೆ ಪ್ರಯೋಗಿಸಿದನು. ಯಮದಂಡ ಸದೃಶವಾಗಿದ್ದ ಆ ಅತ್ಯುಗ್ರ ಬಾಣವು ಸುವರ್ಣಮಯವೂ, ಚಿತ್ರಿತವೂ, ಪ್ರಕಾಶಮಾನವೂ ಆಗಿದ್ದ ಕೃತವರ್ಮನ ಕವಚವನ್ನು ಭೇದಿಸಿ, ಅವನ ಶರೀರವನ್ನು ಹೊಕ್ಕು, ರಕ್ತದಲ್ಲಿ ತೋಯ್ದು ಹೊರಬಂದು ಭೂಮಿಯ ಮೇಲೆ ಬಿದ್ದಿತು.
ಸಾತ್ವತನ ಬಾಣದಿಂದ ಗಾಯಗೊಂಡ ಕೃತವರ್ಮನ ದೇಹದಿಂದ ರಕ್ತವು ಧಾರಾಕಾರವಾಗಿ ಸುರಿಯತೊಡಗಿತು. ಧನುರ್ಬಾಣಗಳು ಶಕ್ತಿಗುಂದಿದ ಅವನ ಕೈಗಳಿಂದ ಜಾರಿದವು. ಅವನೂ ಕೂಡ ಉತ್ತಮ ರಥದಲ್ಲಿ ಕುಸಿದು ಬಿದ್ದನು. ಅಮಿತವಿಕ್ರಮಿ ಸಾತ್ಯಕಿಯ ಬಾಣಗಳಿಂದ ಪೀಡಿತನಾದ ಕೃತವರ್ಮನು ಮಂಡಿಗಳನ್ನು ಊರಿದ್ದಂತೆಯೇ ಆಸನದಲ್ಲಿ ಪಕ್ಕಕ್ಕೆ ಬಿದ್ದನು. ಸಹಸ್ರಬಾಹು ಕಾರ್ತವೀರ್ಯಾರ್ಜುನನಿಗೆ ಸಮಾನನಾಗಿದ್ದ, ಸಾಗರೋಪಾದಿಯಲ್ಲಿ ಕದಲಿಸಲು ಅಶಕ್ಯನಾಗಿದ್ದ ಕೃತವರ್ಮನನ್ನು ಪರಾಜಯಗೊಳಿಸಿ ಸಾತ್ಯಕಿಯು ಅಲ್ಲಿಂದ ಹೊರಟುಬಿಟ್ಟನು. ಖಡ್ಗ-ಶಕ್ತಿ-ಧನುಸ್ಸುಗಳಿಂದ ತುಂಬಿಹೋಗಿದ್ದ, ಗಜ-ಅಶ್ವ-ರಥ ಸಂಕುಲಗಳಿಂದ ಕೂಡಿದ್ದ, ನೂರಾರು ಕ್ಷತ್ರಿಯರ್ಷಭರಿಂದ ಪ್ರವರ್ತಿತವಾದ, ಭಯಂಕರ ರಕ್ತದ ಕೋಡಿಯೇ ಹರಿದುಹೋಗುತ್ತಿದ್ದ ಆ ಸೇನೆಯ ಮಧ್ಯದಿಂದಲೇ ಎಲ್ಲರೂ ನೋಡುತ್ತಿದ್ದಂತೆಯೇ, ಇಂದ್ರನು ಅಸುರರ ಸೇನೆಯನ್ನು ಹೇಗೋ ಹಾಗೆ, ಶಿನಿಪುಂಗವನು ಹೊರಟುಹೋದನು. ಬಲವಾನ್ ಹಾರ್ದಿಕ್ಯನಾದರೋ ಚೇತರಿಸಿಕೊಂಡು ಮತ್ತೊಂದು ಮಹಾಧನುಸ್ಸನ್ನು ಕೈಗೆತ್ತಿಕೊಂಡು ಪಾಂಡವರು ಮುಂದೆ ಹೋಗದಂತೆ ತಡೆಯುತ್ತಾ ಅಲ್ಲಿಯೇ ನಿಂತನು.
ದ್ರೋಣ-ಸಾತ್ಯಕಿಯರ ಯುದ್ಧ
ಶೈನೇಯನು ಅಲ್ಲಲ್ಲಿ ಸೇನೆಗಳನ್ನು ನಾಶಪಡಿಸುತ್ತಿರಲು ಭಾರದ್ವಾಜ ದ್ರೋಣನು ಮಹಾ ಶರವ್ರಾತಗಳಿಂದ ಅವನನ್ನು ಮುಚ್ಚಿದನು. ಆಗ ಎಲ್ಲ ಸೇನೆಗಳೂ ನೋಡುತ್ತಿದ್ದಂತೆ ಬಲಿ ಮತ್ತು ವಾಸವರ ನಡುವೆ ನಡೆದ ಯುದ್ಧದಂಥಹ ಸಂಪ್ರಹಾರ ತುಮುಲ ಯುದ್ಢವು ದ್ರೋಣ ಮತ್ತು ಸಾತ್ಯಕಿಯರ ನಡುವೆ ನಡೆಯಿತು. ದ್ರೋಣನು ಶಿನಿಯ ಮೊಮ್ಮೊಗನ ಹಣೆಗೆ ಚಿತ್ರಿತವಾದ, ಲೋಹಮಯವಾದ, ಸರ್ಪಸದೃಶವಾಗಿದ್ದ ಮೂರು ಬಾಣಗಳನ್ನು ಪ್ರಹರಿಸಿದನು. ಹಣೆಗೆ ಚುಚ್ಚಿಕೊಂಡ ಆ ಜಿಃಮಗಗಳಿಂದ ಯುಯುಧಾನನು ತ್ರಿಶೃಂಗ ಪರ್ವತದಂತೆ ಶೋಭಿಸಿದನು. ಶತ್ರುವಿನ ದುರ್ಬಲ ಛಿದ್ರವನ್ನೇ ಹುಡುಕುತ್ತಿದ್ದ ದ್ರೋಣನು ಇಂದ್ರನ ವಜ್ರಾಯುಧಕ್ಕೆ ಸಮಾನವಾದ ಧ್ವನಿಯಿಂದ ಕೂಡಿದ ಇನ್ನೂ ಅನೇಕ ಬಾಣಗಳನ್ನು ಸಂಯುಗದಲ್ಲಿ ಸಾತ್ಯಕಿಯ ಮೇಲೆ ಸಮಯವರಿತು ಪ್ರಯೋಗಿಸಿದನು. ದ್ರೋಣನ ಧನುಸ್ಸಿನಿಂದ ಹೊರಟು ಬೀಳುತ್ತಿದ್ದ ಆ ಶರಗಳನ್ನು ಪರಮಾಸ್ತ್ರವಿದು ದಾಶಾರ್ಹನು ಪುಂಖಗಳುಳ್ಳ ಎರೆಡೆರಡು ಬಾಣಗಳಿಂದ ಕತ್ತರಿಸಿದನು. ಅವನ ಹಸ್ತಲಾಘವವನ್ನು ನೋಡಿದ ದ್ರೋಣನು ಜೋರಾಗಿ ನಕ್ಕು ತಕ್ಷಣವೇ ಶಿನಿಪುಂಗವನನ್ನು ಇಪ್ಪತ್ತು ಬಾಣಗಳಿಂದ ಹೊಡೆದನು. ಯುಯುಧಾನನ ಹಸ್ತಲಾಘವವನ್ನು ತನ್ನ ಹಸ್ತಲಾಘವದಿಂದ ಮೀರಿಸುತ್ತಾ ದ್ರೋಣನು ಪುನಃ ಐವತ್ತು ನಿಶಿತ ಬಾಣಗಳಿಂದ ಪ್ರಹರಿಸಿದನು. ಕ್ರುದ್ಢ ಮಹಾಸರ್ಪಗಳು ಹುತ್ತದಿಂದ ಹೇಗೆ ಒಂದೊಂದಾಗಿ ಹೊರಬರುತ್ತವೆಯೋ ಹಾಗೆ ದ್ರೋಣನ ರಥದಿಂದ ದೇಹವನ್ನು ಸೀಳಬಲ್ಲ ಬಾಣಗಳು ಹೊರಬರುತ್ತಿದ್ದವು. ಅದೇ ರೀತಿಯಲ್ಲಿ ಯುಯುಧಾನನು ಸೃಷ್ಟಿಸಿದ ನೂರಾರು ಸಾವಿರಾರು ರಕ್ತವನ್ನು ಕುಡಿಯುವ ಶರಗಳು ದ್ರೋಣನ ರಥವನ್ನು ಮುತ್ತಿದವು.
ದ್ವಿಜಮುಖ್ಯ ದ್ರೋಣ ಮತ್ತು ಸಾತ್ವತ ಇವರಿಬ್ಬರು ನರರ್ಷಭರ ನಡುವೆ ಹಸ್ತ ಲಾಘವದಲ್ಲಿ ಯಾವ ರೀತಿಯ ವ್ಯತ್ಯಾಸವೂ ಕಾಣುತ್ತಿರಲಿಲ್ಲ. ಸಾತ್ಯಕಿಯು ದ್ರೋಣನನ್ನು ಒಂಭತ್ತು ನತಪರ್ವಗಳಿಂದ ಹೊಡೆದನು. ಮತ್ತು ಅತ್ಯಂತ ಕ್ರುದ್ಧನಾಗಿ ಭಾರದ್ವಾಜನು ನೋಡುತ್ತಿದ್ದಂತೆಯೇ ನೂರು ನಿಶಿತ ಶರಗಳಿಂದ ಅವನ ಧ್ವಜವನ್ನೂ ಸಾರಥಿಯನ್ನೂ ಹೊಡೆದನು. ಯುಯುಧಾನನ ಹಸ್ತಲಾಘವವನ್ನು ಕಂಡು ಮಹಾರಥ ದ್ರೋಣನು ಸಾತ್ಯಕಿಯನ್ನು ಎಪ್ಪತ್ತು ಬಾಣಗಳಿಂದ ಹೊಡೆದು, ಮೂರರಿಂದ ಕುದುರೆಗಳನ್ನೂ, ಒಂದರಿಂದ ಮಾಧವನ ರಥದಲ್ಲಿದ್ದ ಧ್ವಜವನ್ನೂ ಹೊಡೆದನು. ದ್ರೋಣನು ಚಿನ್ನದ ರೆಕ್ಕೆಗಳಿದ್ದ ಇನ್ನೊಂದು ಭಲ್ಲದಿಂದ ಮಾಧವನ ಧನುಸ್ಸನ್ನು ತುಂಡರಿಸಿದನು. ಆಗ ಸಾತ್ಯಕಿಯಾದರೋ ಕ್ರುದ್ಢನಾಗಿ ಧನುಸ್ಸನ್ನು ಬಿಸುಟು ಮಹಾ ಗದೆಯೊಂದನ್ನು ಹಿಡಿದು ಭಾರದ್ವಾಜನ ಮೇಲೆ ಎಸೆದನು. ತನ್ನ ಮೇಲೆ ರಭಸದಿಂದ ಬರುತ್ತಿದ್ದ ಆ ಚಿನ್ನದ ಪಟ್ಟಿಯಿಂದ ಸುತ್ತಲ್ಪಟ್ಟಿದ್ದ ಲೋಹಮಯ ಗದೆಯನ್ನು ದ್ರೋಣನು ಅನೇಕ ಬಹುರೂಪೀ ಬಾಣಗಳಿಂದ ನಿರಸನಗೊಳಿಸಿದನು. ಅನಂತರ ಸತ್ಯವಿಕ್ರಮಿ ಸಾತ್ಯಕಿಯು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ವೀರ ಭಾರದ್ವಾಜನನ್ನು ಅನೇಕ ಶಿಲಾಶಿತ ಶರಗಳಿಂದ ಗಾಯಗೊಳಿಸಿದನು. ದ್ರೋಣನನ್ನು ಹಾಗೆ ಗಾಯಗೊಳಿಸಿ ಸಾತ್ಯಕಿಯು ಸಿಂಹನಾದಗೈದನು. ದ್ರೋಣನು ಅವನ ಆ ಕೃತ್ಯವನ್ನು ಸಹಿಸಿಕೊಳ್ಳಲಿಲ್ಲ. ಚಿನ್ನದ ದಂಡದಿಂದ ಕೂಡಿದ್ದ ಲೋಹಮಯ ಶಕ್ತ್ಯಾಯುಧವನ್ನೆತ್ತಿಕೊಂಡು ಮಾಧವನ ರಥದ ಮೇಲೆ ರಭಸದಿಂದ ಎಸೆದನು. ಕಾಲನಂತಿದ್ದ ಆ ಶಕ್ತಿಯು ಶೈನೇಯನನ್ನು ಮುಟ್ಟದೇ ಅವನ ರಥವನ್ನು ಮಾತ್ರ ಭೇದಿಸಿ ಉಗ್ರ ದಾರುಣ ಸ್ವರದೊಂದಿಗೆ ಭೂಮಿಯ ಮೇಲೆ ಬಿದ್ದಿತು. ಆಗ ಶಿನಿಯ ಮೊಮ್ಮಗನು ದ್ರೋಣನನ್ನು ಪತ್ರಿಗಳಿಂದ ಹೊಡೆದನು. ಅದು ದ್ರೋಣನ ಬಲಭುಜಕ್ಕೆ ತಾಗಿ ಪೀಡೆಯನ್ನುಂಟುಮಾಡಿತು. ದ್ರೋಣನಾದರೋ ಮಾಧವನ ಮಹಾ ಧನುಸ್ಸನ್ನು ಅರ್ಧಚಂದ್ರದಿಂದ ತುಂಡರಿಸಿ ರಥಶಕ್ತಿಯಿಂದ ಸಾರಥಿಯನ್ನು ಹೊಡೆದನು.
ರಥಶಕ್ತಿಯಿಂದ ಪ್ರಹೃತನಾದ ಸಾರಥಿಯು ಮೂರ್ಛೆಹೊಂದಿ ಮುಹೂರ್ತಕಾಲ ರಥಪೀಠದ ಹಿಂಬದಿಯಲ್ಲಿ ಸುಮ್ಮನೇ ಕುಳಿತುಕೊಂಡನು. ಆಗ ಸಾತ್ಯಕಿಯು ಅಲ್ಲಿ ಅತಿಮಾನುಷ ಕರ್ಮವನ್ನು ಮಾಡಿದನು. ಸ್ವಯಂ ತಾನೇ ಕುದುರೆಗಳ ಕಡಿವಾಣಗಳನ್ನು ಹಿಡಿದುಕೊಂಡು ದ್ರೋಣನೊಂದಿಗೆ ಯುದ್ಢಮಾಡಿದನು. ಮಹಾರಥ ಯುಯುಧಾನನು ಬ್ರಾಹ್ಮಣನನ್ನು ನೂರು ಬಾಣಗಳಿಂದ ಹೊಡೆದನು. ಆಗ ದ್ರೋಣನು ಅವನ ಮೇಲೆ ಐದು ಬಾಣಗಳನ್ನು ಪ್ರಯೋಗಿಸಲು ಅವು ಅವನ ಕವಚವನ್ನು ಕತ್ತರಿಸಿ ರಕ್ತವನ್ನು ಕುಡಿದವು. ಘೋರ ಶರಗಳಿಂದ ಗಾಯಗೊಂಡ ಸಾತ್ಯಕಿಯು ತುಂಬಾ ಕ್ರುದ್ಧನಾದನು. ಆ ವೀರನು ದ್ರೋಣನ ರಥದ ಮೇಲೆ ಸಾಯಕಗಳ ಮಳೆಯನ್ನೇ ಸುರಿಸಿದನು. ಅನಂತರ ಅವನು ಒಂದೇ ಬಾಣದಿಂದ ಮಹಾತ್ಮ ದ್ರೋಣನ ಸಾರಥಿಯನ್ನು ಹೊಡೆದು ನೆಲಕ್ಕೆ ಬೀಳಿಸಿದನು. ಸೂತನು ಹತನಾಗಲು ಬಾಣಗಳಿಂದ ಹೊಡೆದು ಕುದುರೆಗಳನ್ನು ಓಡಿಸಿದನು. ಬೆಳ್ಳಿಯಂತೆ ಹೊಳೆಯುತ್ತಿದ್ದ ಆ ರಥವು ರಣದಲ್ಲಿ ಸಹಸ್ರಾರು ಸುತ್ತುಗಳನ್ನು ಹಾಕಿ, ಸೂರ್ಯನಂತೆ ಪ್ರಕಾಶಿಸಿತು. ಆಗ ಅಲ್ಲಿದ್ದ ರಾಜರು ಮತ್ತು ರಾಜಪುತ್ರರು ಎಲ್ಲರೂ “ಓಡಿಹೋಗಿ! ಹಿಡಿಯಿರಿ! ದ್ರೋಣನ ಕುದುರೆಗಳನ್ನು ತಡೆಯಿರಿ!” ಎಂದು ಕೂಗಿಕೊಳ್ಳುತ್ತಿದ್ದರು.
ಯುದ್ಧದಲ್ಲಿ ಸಾತ್ಯಕಿಯನ್ನು ಅಲ್ಲಿಯೇ ಬಿಟ್ಟು ಮಹಾರಥರೆಲ್ಲರೂ ಕೂಡಲೇ ದ್ರೋಣನ ರಥವು ಹೋಗುತ್ತಿದ್ದ ಕಡೆಗೇ ತಮ್ಮ ರಥಗಳನ್ನೂ ಓಡಿಸಿದರು. ಸಾತ್ವತನ ಶರಗಳಿಂದ ಪೀಡಿತವಾಗಿದ್ದ ಕೌರವ ಸೈನ್ಯ ಸಮಾಕುಲವು ಅವರು ಓಡಿ ಹೋಗುತ್ತಿದ್ದುದನ್ನು ನೋಡಿ ಪುನಃ ಪ್ರಭಗ್ನವಾಯಿತು. ವೃಷ್ಣಿಯ ಶರಗಳಿಂದ ಪೀಡಿತಗೊಂಡು ವಾಯುವೇಗದಿಂದ ಓಡಿ ಹೋಗುತ್ತಿದ್ದ ಕುದುರೆಗಳಿಂದಲೇ ಪುನಃ ಹಿಂದಕ್ಕೆ ಕರತರಲ್ಪಟ್ಟ ದ್ರೋಣನು ವ್ಯೂಹದ ಮಹಾದ್ವಾರಕ್ಕೆ ಹೋಗಿ ಪುನಃ ಅಲ್ಲಿಯೇ ವ್ಯವಸ್ಥಿತನಾದನು. ಪಾಂಡವರು ಮತ್ತು ಪಾಂಚಾಲರಿಂದ ತನ್ನ ವ್ಯೂಹವು ಭಗ್ನವಾಗುತ್ತಿರುವುದನ್ನು ನೋಡಿ ವೀರ್ಯವಾನ್ ದ್ರೋಣನು ಶೈನೇಯನನ್ನು ಹಿಂಬಾಲಿಸಿ ಹೋಗದೇ ವ್ಯೂಹದ ರಕ್ಷಣೆಯಲ್ಲಿಯೇ ನಿರತನಾದನು. ಕೋಪವೆಂಬ ಕಟ್ಟಿಗೆಯಿಂದ ಪ್ರಜ್ವಲಿಸುತ್ತಿದ್ದ ದ್ರೋಣನು ಪಾಂಡು ಪಾಂಚಾಲ ಯೋಧರನ್ನು ದಹಿಸಿಬಿಡುವನೋ ಎಂಬಂತೆ ವ್ಯೂಹದ ಅಗ್ರಭಾಗದಲ್ಲಿ ನಿಂತು ಪ್ರಳಯಕಾಲದ ಸೂರ್ಯನಂತೆ ಪ್ರಕಾಶಿಸುತ್ತಿದ್ದನು.
ಸಾತ್ಯಕಿಯಿಂದ ಸುದರ್ಶನನ ವಧೆ
ದ್ರೋಣ ಮತ್ತು ಹಾರ್ದಿಕ್ಯನೇ ಮೊದಲಾದ ಕೌರವರನ್ನು ಜಯಿಸಿ ಪುರುಷಪ್ರವೀರ ಶಿನಿಪ್ರವೀರನು ನಗುತ್ತಾ ಸೂತನಿಗೆ ಈ ಮಾತನ್ನಾಡಿದನು: “ಸೂತ! ಈ ಶತ್ರುಗಳ ಸಂಹಾರದಲ್ಲಿ ನಾವು ನಿಮಿತ್ತಮಾತ್ರ. ಕೇಶವ-ಫಲ್ಗುನರಿಂದ ಇವರು ಈಗಾಗಲೇ ಸುಡಲ್ಪಟ್ಟಿದ್ದಾರೆ. ಸುರೇಶಾತ್ಮಜ ಅರ್ಜುನನಿಂದ ಕೊಲ್ಲಲ್ಪಟ್ಟ ಇವರನ್ನು ನಾವು ಈಗ ನೆಪಮಾತ್ರಕ್ಕೆ ಕೊಲ್ಲುತ್ತಿದ್ದೇವೆ.” ಹೀಗೆ ಹೇಳಿ ಅಗ್ರ ಧನುರ್ಧರ ಶಿನಿಪುಂಗವನು ಎಲ್ಲಕಡೆ ಶರಗಳನ್ನು ಎರಚುತ್ತಾ ಗಿಡುಗವು ಮಾಂಸದ ಮೇಲೆ ಎರಗುವಂತೆ ಶತ್ರುಗಳ ಮೇಳೆ ಎರಗಿದನು. ಚಂದ್ರ ಮತ್ತು ಶಂಖದ ಬಣ್ಣಗಳ ಕುದುರೆಗಳೊಂದಿಗೆ ಕುರುಸೇನೆಯನ್ನು ಪ್ರವೇಶಿಸುತ್ತಿದ್ದ ಆ ಪುರುಷಪ್ರವೀರ, ಸೂರ್ಯನ ರಶ್ಮಿಯಂತೆ ಬೆಳಗುತ್ತಿದ್ದ ನರಾಗ್ರ್ಯನನ್ನು ಸುತ್ತಲೂ ಯಾರೂ ತಡೆಯಲಾರದಾದರು. ಸಹಿಸಲು ಅಸಾಧ್ಯವಾದ ಪರಾಕ್ರಮವನ್ನು ಹೊಂದಿದ್ದ, ಮಹಾಬಲಶಾಲಿಯಾಗಿದ್ದ, ಸಹಸ್ರನೇತ್ರ ಇಂದ್ರನ ಸಮಾನ ಪರಾಕ್ರಮವನ್ನು ಹೊಂದಿದ್ದ, ಮೋಡಗಳಿಲ್ಲದ ಶರತ್ಕಾಲದ ಆಕಾಶದಲ್ಲಿ ಬೆಳಗುವ ಸೂರ್ಯನ ತೇಜಸ್ಸಿಗೆ ಸಮಾನ ತೇಜಸ್ಸನ್ನು ಹೊಂದಿದ್ದ ಸಾತ್ಯಕಿಯನ್ನು ಸಂಘಟಿತರಾದ ಕೌರವರ ಎಲ್ಲ ಸೈನಿಕರೂ ತಡೆಯಲಾರದೇ ಹೋದರು. ಆಗ ಕ್ರೋಧಪೂರ್ಣನಾಗಿದ್ದ, ವಿಚಿತ್ರರೀತಿಯಲ್ಲಿ ಯುದ್ಧಮಾಡುತ್ತಿದ್ದ, ಶರಾಸನೀ, ಕಾಂಚನ ಕವಚವನ್ನು ಧರಿಸಿದ್ದ ಸುದರ್ಶನನು ತನ್ನ ಕಡೆಗೆ ಬರುತ್ತಿದ್ದ ಸಾತ್ಯಕಿಯನ್ನು ನಗುತ್ತಾ ಬಲಪೂರ್ವಕವಾಗಿ ತಡೆದನು. ಅವರಿಬ್ಬರ ನಡುವೆ ಸುದಾರುಣವಾದ ಪ್ರಹಾರಗಳುಳ್ಳ ಯುದ್ಧವು ನಡೆಯಿತು. ಅವರ ನಡುವಿನ ಈ ಯುದ್ಧವನ್ನು ವೃತ್ರ-ಇಂದ್ರರ ಯುದ್ಧವನ್ನು ಅಮರಗಣಗಳು ಹೇಗೋ ಹಾಗೆ ಕೌರವರು ಮತ್ತು ಸೋಮಕರು ಪ್ರಶಂಸಿಸುತ್ತಾ ನೋಡತೊಡಗಿದರು.
ಸುತೀಕ್ಷ್ಣವಾದ ನೂರಾರು ಬಾಣಗಳಿಂದ ಸುದರ್ಶನನು ಸಾತ್ವತಮುಖ್ಯನನ್ನು ಹೊಡೆದನು. ಆದರೆ ಅವು ಬರುವುದರೊಳಗೇ ಶಿನಿಪುಂಗವನು ಅವುಗಳನ್ನು ಬಾಣಗಳಿಂದ ತುಂಡರಿಸಿ ಬಿಡುತ್ತಿದ್ದನು. ಹಾಗೆಯೇ ಶಕ್ರಪ್ರತಿಮನಾದ ಸಾತ್ಯಕಿಯೂ ಕೂಡ ಸುದರ್ಶನನ ಮೇಲೆ ಯಾವ ಸಾಯಕಗಳನ್ನು ಪ್ರಯೋಗಿಸುತ್ತಿದ್ದನೋ ಅವುಗಳನ್ನು ರಥದಲ್ಲಿ ಕುಳಿತಿದ್ದ ಸುದರ್ಶನನು ಉತ್ತಮ ಶರಗಳಿಂದ ಎರಡು-ಮೂರು ಭಾಗಗಳಾಗಿ ಕತ್ತರಿಸುತ್ತಿದ್ದನು. ಸಾತ್ಯಕಿಯ ಬಾಣಗಳ ವೇಗದಿಂದ ತಾನು ಬಿಡುತ್ತಿದ್ದ ಬಾಣಗಳು ವ್ಯರ್ಥವಾಗುತ್ತಿರುವುದನ್ನು ಕಂಡು ಸುದರ್ಶನನು ರೋಷದಿಂದ ಸಾತ್ಯಕಿಯನ್ನು ದಹಿಸಿಬಿಡುವನೋ ಎನ್ನುವಂತೆ ಆವೇಶಪೂರ್ಣನಾಗಿ ಸುವರ್ಣ ರೇಖೆಗಳಿಂದ ಚಿತ್ರಿತವಾಗಿದ್ದ ಬಾಣಗಳನ್ನು ಅವನ ಮೇಲೆ ಪ್ರಯೋಗಿಸಿದನು. ಪುನಃ ಸುದರ್ಶನನು ಅಗ್ನಿಸ್ವರೂಪದ ಸುಂದರ ಪುಂಖಗಳನ್ನು ಹೊಂದಿದ್ದ ಮೂರು ನಿಶಿತ ಬಾಣಗಳನ್ನು ಕಿವಿಯ ವರೆಗೂ ಸೆಳೆದು ಬಿಡಲು, ಅವು ಸಾತ್ಯಕಿಯ ದೇಹಾವರಣವನ್ನು ಭೇದಿಸಿ ಅವನ ಶರೀರವನ್ನು ಹೊಕ್ಕವು. ಹಾಗೆಯೇ ಸುದರ್ಶನನು ನಗುತ್ತಾ ಪ್ರಜ್ವಲಿಸುತ್ತಿದ್ದ ನಾಲ್ಕು ಬಾಣಗಳನ್ನು ಅನುಸಂಧಾನ ಮಾಡಿ ಬೆಳ್ಳಿಯಂತೆ ಪ್ರಕಾಶಿಸುತ್ತಿದ್ದ ನಾಲ್ಕು ಕುದುರೆಗಳನ್ನೂ ಬಲಪೂರ್ವಕವಾಗಿ ಪ್ರಹರಿಸಿದನು. ಹೀಗೆ ಅವನಿಂದ ಪ್ರಹರಿಸಲ್ಪಟ್ಟ ಶಿನಿಯ ಮೊಮ್ಮಗನು ತೀಕ್ಷ್ಣ ಬಾಣಗಳಿಂದ ಸುದರ್ಶನನ ಕುದುರೆಗಳನ್ನು ಸಂಹರಿಸಿ ಸಿಂಹನಾದಗೈದನು. ಕೂಡಲೇ ವಜ್ರಾಶನಿಸನ್ನಿಭ ಭಲ್ಲದಿಂದ ಅವನ ಸೂತನ ಶಿರವನ್ನು ಕತ್ತರಿಸಿ ಶಿನಿಪ್ರವೀರನು ಕ್ಷುರದಿಂದ ಸುದರ್ಶನನ ಶಿರವನ್ನು ತುಂಡರಿಸಿ ಗಹಗಹಿಸಿ ನಕ್ಕನು. ಹಿಂದೆ ವಜ್ರಧರನು ನಗುತ್ತಾ ರಣದಲ್ಲಿ ಬಲಸ್ಯ ಶಿರವನ್ನು ಹೇಗೋ ಹಾಗೆ ಸಾತ್ಯಕಿಯು ಸುದರ್ಶನನ ಕುಂಡಲಯುಕ್ತವಾದ, ಪೂರ್ಣಶಶಿಯ ಪ್ರಕಾಶವನ್ನು ಹೊಂದಿದ್ದ, ಭ್ರಾಜಿಷ್ಣು ವಕ್ತ್ರವನ್ನು ಅವನ ದೇಹದಿಂದ ಬೇರ್ಪಡಿಸಿದನು.
ರಣದಲ್ಲಿ ಆ ರಾಜಪುತ್ರ, ರಾಜನ ಮೊಮ್ಮಗನನ್ನು ಸಂಹರಿಸಿ ಸಾತ್ಯಕಿಯು ಪರಮ ಸಂತೋಷದಿಂದ ವಿರಾಜಿಸಿದನು. ಲೋಕವನ್ನೇ ಆಶ್ಚರ್ಯಚಕಿತವನ್ನಾಗಿ ಮಾಡುವ ಇಚ್ಛೆಯುಳ್ಳ ನರವೀರ ಸಾತ್ಯಕಿಯು ಉತ್ತಮ ಕುದುರೆಗಳೊಂದಿಗೆ ಅರ್ಜುನನು ಯಾವ ಮಾರ್ಗದಲ್ಲಿ ಹೋಗಿದ್ದನೋ ಅದೇ ಮಾರ್ಗದ ಮೂಲಕವಾಗಿ ತಡೆಯಲು ಬರುತ್ತಿದ್ದ ಕೌರವ ಸೇನೆಗಳನ್ನು ನಿವಾರಿಸುತ್ತಾ ಮುಂದುವರೆದನು. ವಿಸ್ಮಯನೀಯರಲ್ಲಿ ಅಗ್ರ್ಯನಾದ ಸಾತ್ಯಕಿಯನ್ನು ಯೋಧಶ್ರೇಷ್ಠರು ಒಟ್ಟಾಗಿ ಪ್ರಶಂಸಿಸಿದರು. ಅವನು ತನ್ನ ಮಾರ್ಗದಲ್ಲಿ ಗೋಚರಿಸುತ್ತಿದ್ದ ಅರಿಗಳನ್ನು ಅಗ್ನಿಯಂತಿದ್ದ ತನ್ನ ಬಾಣಗಳಿಂದ ದಹಿಸಿಬಿಡುತ್ತಿದ್ದನು.
ಸಾತ್ಯಕಿಯಿಂದ ಯವನರ ಪರಾಜಯ
ಸಾತ್ಯಕಿಯು ಸುದರ್ಶನನನ್ನು ಸಂಹರಿಸಿ ತನ್ನ ಸಾರಥಿಗೆ ಹೇಳಿದನು: “ಅಯ್ಯಾ! ರಥಾಶ್ವಗಜಸೈನಿಕರಿಂದ ಸಮೃದ್ಧವಾಗಿದ್ದ, ಬಾಣ-ಶಕ್ತ್ಯಾಯುಧಗಳೇ ಅಲೆಗಳಿಂತಿದ್ದ, ಖಡ್ಗಗಳೇ ಮತ್ಯ್ಸಗಳಂತಿದ್ದ, ಗದೆಗಳೇ ಮೊಸಳೆಗಳಂತಿದ್ದ, ಶೂರಯೋಧರ ಕೂಗೇ ಭೋರ್ಗರೆತವಾಗಿದ್ದ, ಪ್ರಾಣವನ್ನೇ ಅಪಹರಿಸಿಬಿಡುವ, ರೌದ್ರವಾದ, ರಣವಾದ್ಯಗಳಿಂದ ನಿನಾದಿತವಾಗಿದ್ದ, ಯೋಧರಿಗೆ ಸುಖಸ್ಪರ್ಷಿಯಾಗಿರದ, ದುರ್ಧರ್ಷವಾದ, ಜಯಿಸಲಸಾಧ್ಯವಾ, ಜಲಸಂಧನ ಸೈನ್ಯದ ಉಪಸ್ಥಿತಿಯಲ್ಲಿದ್ದ ದೈತ್ಯರಿಂದ ಆವೃತವಾದ ದ್ರೋಣನ ಮಹಾಸೇನೆಯನ್ನು ನಾವು ದಾಟಿ ಬಂದಿದ್ದೇವೆ. ಇನ್ನೂ ಜಯಿಸದೇ ಇರುವ ಇನ್ನೊಂದು ಸೈನ್ಯವಿದೆ. ಆದರೆ ಆ ಸೈನ್ಯದ ವಿಷಯದಲ್ಲಿ ಗಾಬರಿಯಾಗಬೇಕಾದುದು ಏನೂ ಇಲ್ಲ. ಸ್ವಲ್ಪವೇ ನೀರಿನಿಂದ ಕೂಡಿದ ಚಿಕ್ಕ ನದಿಯಂತೆ ಸುಲಭವಾಗಿ ಅದನ್ನು ದಾಟಬಹುದು. ದುರ್ಧರನಾದ ದ್ರೋಣನನ್ನು ಸೈನ್ಯಸಮೇತ ಸೋಲಿಸಿ ನಮಗೆ ಸವ್ಯಸಾಚಿಯು ಕೈಗೆ ಸಿಕ್ಕಿದ ಹಾಗೆಯೇ! ಯೋಧಶ್ರೇಷ್ಠ ಹಾರ್ದಿಕ್ಯನನ್ನೂ ಸೋಲಿಸಿದ ನಂತರ ನಮಗೆ ಧನಂಜಯನು ಸಿಕ್ಕಿದ ಹಾಗೆಯೇ! ಗ್ರೀಷ್ಮಋತುವಿನಲ್ಲಿ ಉರಿಯುತ್ತಿರುವ ಅಗ್ನಿಯ ಮುಂದೆ ಒಣಹುಲ್ಲು ಹೇಗೋ ಹಾಗೆ ಈ ಅನೇಕ ಸೇನೆಗಳನ್ನು ನೋಡಿ ನನಗೆ ಕಷ್ಟವಾಗುತ್ತದೆ ಎಂದು ಅನ್ನಿಸುವುದೇ ಇಲ್ಲ. ಪಾಂಡವಮುಖ್ಯ ಕಿರೀಟಿಯು ಕೆಳಗುರುಳಿಸಿರುವ ಪದಾತಿ, ಅಶ್ವ, ರಥ, ಆನೆಗಳ ಸಮೂಹಗಳಿಂದ ರಣಭೂಮಿಯು ಏರಿಳಿತಗಳಿಂದ ಕೂಡಿರುವುದನ್ನು ನೋಡು! ಕೃಷ್ಣನ ಸಾರಥ್ಯದಲ್ಲಿರುವ ಶ್ವೇತಾಶ್ವನು ಹತ್ತಿರದಲ್ಲಿಯೇ ಇರುವನೆಂದು ತೋರುತ್ತದೆ. ಆ ಅಮಿತತೇಜಸ್ವಿಯ ಗಾಂಡಿವದ ಶಬ್ಧವೂ ಕೇಳಿ ಬರುತ್ತಿದೆ. ನನಗೆ ತೋರುತ್ತಿರುವ ನಿಮಿತ್ತಗಳ ಪ್ರಕಾರ ಸೂರ್ಯನು ಅಸ್ತಂಗತನಾಗುವುದರೊಳಗೇ ಅರ್ಜುನನು ಸೈಂಧವನನ್ನು ಸಂಹರಿಸುತ್ತಾನೆ! ನಿಧಾನವಾಗಿ ಕುದುರೆಗಳಿಗೆ ಸ್ವಲ್ಪ ವಿಶ್ರಾಂತಿಯನ್ನಿತ್ತು ಸುಯೋಧನನ ನಾಯಕತ್ವದಲ್ಲಿ ಕವಚಗಳನ್ನು ಧರಿಸಿ ನಿಂತಿರುವ ಶತ್ರುಸೇನೆಯ ಕಡೆಗೆ ಹೋಗು. ಕ್ರೂರಕರ್ಮಗಳನ್ನೆಸಗುವ ಯುದ್ಧದುರ್ಮದರಾದ ಕವಚಗಳನ್ನು ಧರಿಸಿರುವ ಕಾಂಬೋಜರು, ಧನುಸ್ಸು-ಬಾಣಗಳನ್ನು ಧರಿಸಿರುವ ಪ್ರಹಾರಿಗಳಾದ ಯವನರು, ಶಕರು, ಕಿರಾತರು, ದರದರು, ಬರ್ಬರರು, ತಾಮ್ರಲಿಪ್ತಕರು ಮತ್ತು ಇನ್ನೂ ಇತರ ಅನೇಕ ಮ್ಲೇಚ್ಛರು ಎಲ್ಲರೂ ವಿವಿಧ ಆಯುಧಗಳನ್ನು ಹಿಡಿದು ಸಮರಾರ್ಥಿಗಳಾಗಿ ನನ್ನನ್ನೇ ಎದುರಾಗಿಸಿಕೊಂಡು ನಿಂತಿದ್ದಾರೆ. ರಥ-ಆನೆ-ಕುದುರೆ ಪತ್ತಿಗಳಿಂದ ಕೂಡಿದ ಇವರನ್ನು ಯುದ್ಧದಲ್ಲಿ ಸಂಹರಿಸಿದ ನಂತರ ಮಹಾಘೋರವಾದ ಅತ್ಯಂತ ದರ್ಗಮವಾದ ಸಂಕಟದಿಂದ ಪಾರಾದೆವೆಂದು ಭಾವಿಸು!”
ಸೂತನು ಹೇಳಿದನು: “ವಾರ್ಷ್ಣೇಯ! ಕ್ರುದ್ಧನಾದ ಪರಶುರಾಮನೇ ಯುದ್ಧದಲ್ಲಿ ನಿನ್ನ ಎದುರಾದರೂ ನಾನು ಗಾಬರಿಗೊಳ್ಳುವವನಲ್ಲ! ರಥಿಗಳಲ್ಲಿ ಶ್ರೇಷ್ಠರಾದ ದ್ರೋಣ ಅಥವಾ ಕೃಪ ಅಥವಾ ಮದ್ರೇಶ್ವರ ಶಲ್ಯ ಇವರುಗಳೇ ನಿನ್ನೊಡನೆ ಯುದ್ಧಮಾಡಲು ಬಂದರೂ ನಿನ್ನ ಆಶ್ರಯವಿರುವ ನನಗೆ ಭಯವೆಂಬುದಿಲ್ಲ. ಯುದ್ಧದಲ್ಲಿ ನೀನು ಅನೇಕರನ್ನು ಸೋಲಿಸಿದ್ದೀಯೆ. ಹಿಂದೆ ಎಂದೂ ನನಗೆ ಯಾವರೀತಿಯ ಭಯವೂ ಆಗಿರಲಿಲ್ಲ. ಇನ್ನು ಗೋವುಗಳ ಹಿಂಡಿನಂತಿರುವ ಇವರನ್ನು ಎದುರಿಸಿ ಎತ್ತಣ ಭಯ? ನಿನ್ನನ್ನು ಯಾವ ಮಾರ್ಗದಿಂದ ಧನಂಜಯನಲ್ಲಿಗೆ ಕರೆದೊಯ್ಯಲಿ? ಇಂದು ನೀನು ಯಾರ ಮೇಲೆ ಕ್ರುದ್ಧನಾಗಿರುವೆ? ಯಾರ ಮೃತ್ಯುವು ಸನ್ನಿಹಿತವಾಗಿದೆ? ಯಾರ ಮನಸ್ಸು ಇಂದು ಯಮಸದನಕ್ಕೆ ಹೋಗಲು ಉತ್ಸುಕಗೊಂಡಿದೆ? ಯುದ್ಧದಲ್ಲಿ ಕಾಲಾಂತಕಯಮನಂತಿರುವ ವಿಕ್ರಮಸಂಪನ್ನನಾದ ನಿನ್ನನ್ನು ನೋಡಿ ಯಾರುತಾನೇ ಪಲಾಯನಮಾಡುವವರಿದ್ದಾರೆ? ಮತ್ತು ಇಂದು ಯಾರು ವೈವಸ್ವತ ರಾಜ ಯಮನನ್ನು ಸ್ಮರಿಸಿಕೊಳ್ಳುತ್ತಿದ್ದಾರೆ?”
ಸಾತ್ಯಕಿಯು ಹೇಳಿದನು: “ವಾಸವನು ದಾನವರನ್ನು ಹೇಗೋ ಹಾಗೆ ನಾನು ಇಂದು ಮುಂಡನಮಾಡಿಕೊಂಡಿರುವ ಕಾಂಬೋಜರನ್ನು ಸಂಹರಿಸಿ ನನ್ನ ಪ್ರತಿಜ್ಞೆಯನ್ನು ಪೂರೈಸಿಕೊಳ್ಳುತ್ತೇನೆ. ಇಂದು ಇವರೊಂದಿಗೆ ಬೇಗನೆ ಯುದ್ಧಮಾಡಿ ಅರ್ಜುನನ ಸಮೀಪಕ್ಕೆ ಹೋಗುತ್ತೇನೆ. ಸೂತ! ತಲೆಬೋಳಿಸಿಕೊಂಡಿರುವ ಈ ಸರ್ವ ಸೇನೆಗಳನ್ನು ಸಂಹರಿಸುವ ನನ್ನ ವೀರ್ಯವನ್ನು ಸುಯೋಧನನೊಂದಿಗೆ ಕೌರವರು ಇಂದು ನೋಡುವವರಿದ್ದಾರೆ. ಇಂದು ಕೌರವಸೇನೆಯು ಸೀಳಿ ಹೋಗಿ ಬಹುರೀತಿಯಲ್ಲಿ ರೋಧಿಸುವುದನ್ನು ಕೇಳಿ ಸುಯೋಧನನು ದುಃಖಪಡುವವನಿದ್ದಾನೆ! ನನ್ನ ಆಚಾರ್ಯ ಪಾಂಡವಮುಖ್ಯ, ಮಹಾತ್ಮ ಶ್ವೇತಾಶ್ವನು ತೋರಿಸಿದ ಮಾರ್ಗವನ್ನೇ ಇಂದು ನಾನು ಯುದ್ಧದಲ್ಲಿ ತೋರಿಸಿಕೊಡುತ್ತೇನೆ. ಇಂದು ನನ್ನ ಬಾಣದಿಂದ ಸಹಸ್ರಾರು ಪ್ರಮುಖ ಯೋಧರು ಹತರಾದುದನ್ನು ನೋಡಿ ದುರ್ಯೋಧನನು ಪಶ್ಚಾತ್ತಾಪ ಪಡುವವನಿದ್ದಾನೆ. ಇಂದು ಕ್ಷಿಪ್ರಹಸ್ತನಾದ ನನ್ನಿಂದ ಬಿಡಲ್ಪಡುವ ಉತ್ತಮ ಸಾಯಕಗಳನ್ನೂ, ಬೆಂಕಿಯ ಕೊಳ್ಳಿಯ ಚಕ್ರದಂತೆ ತಿರುಗುವ ನನ್ನ ಧನುಸ್ಸನ್ನೂ ಕೌರವರು ನೋಡುವರು! ನನ್ನ ಸಾಯಕಗಳಿಂದ ತುಂಡಾದ ಅಂಗಗಳಿಂದ ರಕ್ತವು ಬಹಳವಾಗಿ ಸುರಿಯುವುದನ್ನು, ಮತ್ತು ಸೈನಿಕರ ವಧೆಯನ್ನು ನೋಡಿ ಇಂದು ಸುಯೋಧನನು ಸಂತಾಪಪಡುವವನಿದ್ದಾನೆ! ಇಂದು ನನ್ನ ಕ್ರುದ್ಧರೂಪವನ್ನು ಮತ್ತು ಶ್ರೇಷ್ಠರ ವಧೆಯನ್ನು ನೋಡಿ ಲೋಕದಲ್ಲಿ ಇಬ್ಬರು ಅರ್ಜುನರಿರುವರೋ ಎಂದು ಸುಯೋಧನನು ಯೋಚಿಸಲಿದ್ದಾನೆ. ಇಂದು ರಣದಲ್ಲಿ ಸಹಸ್ರಾರು ರಾಜರು ನನ್ನಿಂದ ಹತರಾಗುವುದನ್ನು ನೋಡಿ ದುರ್ಯೋಧನನು ಮಹಾಯುದ್ಧದಲ್ಲಿ ಸಂತಾಪಪಡುವವನಿದ್ದಾನೆ. ಇಂದು ಸಹಸ್ರಾರು ರಾಜರನ್ನು ಸಂಹರಿಸಿ ಮಹಾತ್ಮ ಪಾಂಡವ ರಾಜನಲ್ಲಿ ನನಗಿರುವ ಸ್ನೇಹ ಮತ್ತು ಭಕ್ತಿಯನ್ನು ತೋರಿಸಿಕೊಡುತ್ತೇನೆ!”
ಹೀಗೆ ಹೇಳಲು ಸೂತನು ಒಳ್ಳೆಯ ಶಿಕ್ಷಣವನ್ನು ಹೊಂದಿದ್ದ, ಒಳ್ಳೆಯ ರೀತಿಯಲ್ಲಿ ರಥವನ್ನು ಒಯ್ಯುವ, ಚಂದ್ರನ ಪ್ರಭೆಗೆ ಸಮಾನ ಪ್ರಭೆಯುಳ್ಳ ಕುದುರೆಗಳನ್ನು ಮುಂದೆ ಹೋಗುವಂತೆ ಹುರಿದುಂಬಿಸಿದನು. ವಾಯುವೇಗದಲ್ಲಿ ಹೋಗುತ್ತಿರುವ ಆ ಉತ್ತಮ ಕುದುರೆಗಳು ಆಕಾಶವನ್ನೇ ಕುಡಿಯುತ್ತಿವೆಯೋ ಎನ್ನುವಂತೆ ಶೀಘ್ರವಾಗಿ ಯುಯುಧಾನನನ್ನು ಯವನರ ಬಳಿ ಕರೆದೊಯ್ದವು. ಯುದ್ಧದಿಂದ ಹಿಂದಿರುಗದೇ ಇದ್ದ ಆ ಲಘುಹಸ್ತರು ಸಾತ್ಯಕಿಯನ್ನು ನೋಡಿ ಅವನನ್ನು ಅನೇಕ ಶರವರ್ಷಗಳಿಂದ ಮುಚ್ಚಿಬಿಟ್ಟರು. ಅವರ ಬಾಣಗಳು ಮತ್ತು ಅಸ್ತ್ರಗಳು ತನಗೆ ತಾಗುವುದರೊಳಗೇ ವೇಗವಾನ್ ಸಾತ್ಯಕಿಯು ಸನ್ನತಪರ್ವಗಳಿಂದ ಕತ್ತರಿಸಿದನು. ಬಂಗಾರದ ಪುಂಖಗಳುಳ್ಳ ಹರಿತಾದ ಹದ್ದಿನಗರಿಯ ಜಿಹ್ಮಗಗಳಿಂದ ಆ ಉಗ್ರನು ಯವನರ ಶಿರಗಳನ್ನೂ ಭುಜಗಳನ್ನೂ ಕತ್ತರಿಸಿದನು. ಎಲ್ಲ ಕಡೆ ಕೆಂಪು ಲೋಹಗಳಿಂದಲೂ ಕಂಚಿನಿಂದಲೂ ನಿರ್ಮಿತವಾದ ಕವಚಗಳನ್ನು ಬೇಧಿಸಿ, ಯೋಧರ ದೇಹಗಳನ್ನು ಸೀಳಿ ಬಾಣಗಳು ಭೂಮಿಯನ್ನು ಸೇರಿದವು. ರಣದಲ್ಲಿ ಸಾತ್ಯಕಿಯಿಂದ ಸಂಹರಿಸಲ್ಪಟ್ಟ ನೂರಾರು ವೀರ ಮ್ಲೇಚ್ಛರು ಪ್ರಾಣಗಳನ್ನು ತೊರೆದು ಭೂಮಿಯ ಮೇಲೆ ಉರುಳಿದರು. ಶಿಂಜಿನಿಯನ್ನು ಕಿವಿಯ ತುದಿಯವರೆಗೂ ಸೆಳೆದು ಮಧ್ಯೆ ಸ್ವಲ್ಪವೂ ಅಂತರವಿಲ್ಲದಂತೆ ಒಂದಕ್ಕೊಂದು ಅಂಟಿಕೊಂಡಿರುವಂತೆ ಬಾಣಗಳನ್ನು ಬಿಟ್ಟು ಸಾತ್ಯಕಿಯು ಐದು, ಆರು, ಏಳು ಮತ್ತು ಒಮ್ಮೊಮ್ಮೆ ಎಂಟು ಯವನರನ್ನು ಒಂದೇ ಬಾರಿಗೆ ಸಂಹರಿಸುತ್ತಿದ್ದನು.
ಸಹಸ್ರಾರು ಕಾಂಬೋಜರನ್ನೂ, ಶಕರನ್ನೂ, ಶಬರರನ್ನೂ, ಕಿರಾತರನ್ನೂ, ಹಾಗೆಯೇ ಬರ್ಬರರನ್ನೂ ಸಂಹರಿಸಿ, ರಣಭೂಮಿಯನ್ನು ಮಾಂಸ-ರಕ್ತ ಮಿಶ್ರಿತ ಕೆಸರಿನಿಂದ ಸಂಚರಿಸಲು ದುಃಸಾಧ್ಯವನ್ನಾಗಿ ಮಾಡಿದನು. ನೀಳವಾದ ಗಡ್ಡಗಳನ್ನೂ, ಶಿರಸ್ತ್ರಾಣಗಳನ್ನು ಧರಿಸಿದ್ದ ಬೋಳು ತಲೆಗಳ ದಸ್ಯುಗಳ ಶಿರಗಳು ರಣಾಂಗಣದ ಸುತ್ತಲೂ ಪುಕ್ಕಗಳನ್ನು ಪರಚಿದ ಪಕ್ಷಿಗಳಂತೆ ವ್ಯಾಪ್ತವಾಗಿ ಹರಡಿದ್ದವು. ರಕ್ತದಿಂದ ತೋಯ್ದ ಸರ್ವಾಂಗಗಳ ಕಬಂಧಗಳಿಂದ ಆ ರಣಾಂಗಣವು ಕೆಂಪಾದ ಮೇಘಗಳಿಂದ ಆವೃತವಾದ ಆಕಾಶದಂತೆ ತೋರುತ್ತಿತ್ತು. ವಜ್ರಾಯುಧಕ್ಕೂ ಸಿಡಿಲಿಗೂ ಸಮಾನ ಸ್ಪರ್ಶವುಳ್ಳ, ಉತ್ತಮ ಗಿಣ್ಣುಗಳನ್ನುಳ್ಳ, ನೇರವಾಗಿ ಹೋಗುವ ಬಾಣಗಳ ಮೂಲಕ ಹತರಾದ ಯವನರು ರಣಾಂಗಣವನ್ನು ಆವರಿಸಿಕೊಂಡಿದ್ದರು. ಉಳಿದ ಅಲ್ಪಸಂಖ್ಯಾತ ಕವಚಧಾರಿ ಯವನರನ್ನೂ ಕೂಡ ಯುಯುಧಾನನು ಮೂರ್ಛೆಗೊಳಿಸಿ ಸಂಹರಿಸಿ ಗೆದ್ದನು. ಉಳಿದಿದ್ದವರು ಹಿಮ್ಮಡಿಗಳಿಂದಲೂ, ಚಾವಟಿಗಳಿಂದಲೂ ಕುದುರೆಗಳನ್ನು ಪ್ರಹರಿಸುತ್ತಾ ಅತ್ಯಂತ ವೇಗದಲ್ಲಿ ಸಾತ್ಯಕಿಯಿಂದ ಎಲ್ಲ ಕಡೆ ಓಡಿ ಹೋದರು. ಸಾತ್ಯಕಿಯು ಹೀಗೆ ಜಯಿಸಲಸಾಧ್ಯ ಯವನರ ಮತ್ತು ಶಕರ ಮಹಾಸೇನೆಯನ್ನು ಯುದ್ಧದಲ್ಲಿ ಸೋಲಿಸಿ, ಕೌರವರನ್ನು ಗೆದ್ದು ಪ್ರಹೃಷ್ಟನಾಗಿ ಸೂತನಿಗೆ ಮುಂದುವರೆಯಲು ಹೇಳಿದನು. ಅರ್ಜುನನ ಪೃಷ್ಟರಕ್ಷಕನಾದ ಆ ಸಾತ್ಯಕಿಯು ಹಾಗೆ ಹೋಗುತ್ತಿರುವುದನ್ನು ನೋಡಿ ಸಂಹೃಷ್ಟರಾದ ಚಾರಣರೂ ಮತ್ತು ಕೌರವರೂ ಬಹಳವಾಗಿ ಪ್ರಶಂಸಿಸಿದರು.
ದ್ರೋಣ-ಪಾಂಚಾಲರ ಯುದ್ಧ
ಯುಯುಧಾನನು ಯವನರನ್ನೂ ಕಾಂಬೋಜರನ್ನೂ ಗೆದ್ದು ಕೌರವ ಸೇನೆಯ ಮಧ್ಯದಿಂದಲೇ ಅರ್ಜುನನ ಕಡೆಗೆ ಹೋದನು. ವಿಚಿತ್ರ ಕವಚವನ್ನೂ ಧ್ವಜವನ್ನೂ ಹೊಂದಿದ್ದ ಆ ಶರದಂಷ್ಟ್ರ ನರವ್ಯಾಘ್ರನು ಮೂಸುತ್ತಾ ಹೋಗುವ ಹುಲಿಯು ಜಿಂಕೆಗಳನ್ನು ಹೇಗೋ ಹಾಗೆ ಕೌರವ ಸೇನೆಗಳಿಗೆ ಭಯವನ್ನುಂಟುಮಾಡುತ್ತಿದ್ದನು. ರಥದ ಮೇಲೆ ಕುಳಿತು ಬಂಗಾರದ ಬೆನ್ನುಳ್ಳ ಬಂಗಾರದ ಚಂದ್ರಾಕಾರದ ಚಿಹ್ನೆಗಳನ್ನುಳ್ಳ ಮಹಾವೇಗಯುಕ್ತ ಧನುಸ್ಸನ್ನು ಜೋರಾಗಿ ತಿರುಗಿಸುತ್ತ ಅವನು ಅನೇಕ ಮಾರ್ಗಗಳಲ್ಲಿ ಸಂಚರಿಸುತ್ತಿದ್ದನು. ಸುವರ್ಣಮಯ ಭುಜಕೀರ್ತಿಯನ್ನೂ, ಸುವರ್ಣಮಯ ಕಿರೀಟವನ್ನೂ, ಸುವರ್ಣಮಯ ಕವಚವನ್ನೂ ಧರಿಸಿದ್ದ, ಸುವರ್ಣಮಯ ಧ್ವಜವನ್ನೂ ಧನುಸ್ಸನ್ನೂ ಹೊಂದಿದ್ದ ಆ ಶೂರನು ಮೇರುಶೃಂಗದಂತೆಯೇ ಪ್ರಕಾಶಿಸುತ್ತಿದ್ದನು. ಧನುಸ್ಸನು ಮಂಡಲಾಕಾರವಾಗಿ ತಿರುಗಿಸುತ್ತಿದ್ದ ಸೂರ್ಯನ ರಶ್ಮಿಗೆ ಸಮಾನ ತೇಜಸ್ಸಿನಿಂದ ಕೂಡಿದ್ದ ಆ ನರಸೂರ್ಯನು ಶರತ್ಕಾಲದ ನಿರಭ್ರ ಆಕಾಶದಲ್ಲಿ ಉದಯಿಸಿದ ಸೂರ್ಯನಂತೆ ವಿರಾಜಿಸುತ್ತಿದ್ದನು. ಆ ವೃಷಭಸ್ಕಂಧ, ವೃಷಭಾಕ್ಷ, ವಿಕ್ರಾಂತ, ನರರ್ಷಭನು ಕೌರವರ ಮಧ್ಯೆ ಗೋವುಗಳ ನಡುವೆ ಕಾಣುವ ಹೋರಿಯಂತೆ ಕಾಣಿಸಿದನು. ಕೌರವ ಸೇನೆಗಳ ಮಧ್ಯೆ ಮದಿಸಿದ ಆನೆಯಂತಿದ್ದ, ಮದಿಸಿದ ಆನೆಯ ನಡುಗೆಯುಳ್ಳ, ಮದೋದಕವನ್ನು ಸುರಿಸುತ್ತಿದ್ದ ಸಲಗದಂತಿದ್ದ ಸಾತ್ಯಕಿಯ ಮೇಲೆ ಕೌರವರು ಹುಲಿಗಳಂತೆ ಎರಗಿದರು. ದ್ರೋಣನ ಸೇನೆಯನ್ನೂ, ಭೋಜನ ದುಸ್ತರ ಸೇನೆಯನ್ನೂ ದಾಟಿ, ಜಲಸಂಧನೆನ್ನುವ ಸಮುದ್ರವನ್ನೂ, ಕಾಂಬೋಜರ ಸೇನೆಯನ್ನೂ ದಾಟಿ, ಹಾರ್ದಿಕ್ಯನೆಂಬ ಮೊಸಳೆಯಿಂದಲೂ ಮುಕ್ತನಾಗಿ ಸೈನ್ಯಸಾಗರವನ್ನೇ ದಾಟಿಬಂದ ಆ ಸಾತ್ಯಕಿಯನ್ನು ಕೌರವರ ಕಡೆಯ ಮಹಾರಥರು ಸುತ್ತುವರೆದರು. ದುರ್ಯೋಧನ, ಚಿತ್ರಸೇನ, ದುಃಶಾಸನ, ವಿವಿಂಶತೀ, ಶಕುನಿ, ದುಃಸ್ಸಹ, ದುರ್ಮರ್ಷಣ, ಕ್ರಥ ಮತ್ತು ಇನ್ನೂ ಅನೇಕ ದುರಾಸದ ಶಸ್ತ್ರವಂತ ಅಸಹನಶೀಲ ಶೂರರು ಹೋಗುತ್ತಿದ್ದ ಸಾತ್ಯಕಿಯನ್ನು ಬೆನ್ನಟ್ಟಿದರು. ಆಗ ಪರ್ವಕಾಲದಲ್ಲಿ ಭಿರುಗಾಳಿಯ ವೇಗಕ್ಕೆ ಸಿಲುಕಿದ ಸಮುದ್ರದಂತೆ ಕೌರವ ಸೇನೆಯಿಂದ ಮಹಾಶಬ್ಧವು ಕೇಳಿಬಂದಿತು. ತನ್ನನ್ನು ಆಕ್ರಮಿಸಲು ಹಿಂದಿನಿಂದ ವೇಗವಾಗಿ ಬರುತ್ತಿದ್ದ ಅವರೆಲ್ಲರನ್ನು ನೋಡಿ ಶಿನಿಪುಂಗವನು ನಗುತ್ತಾ ಮೆಲ್ಲನೆ ಹೋಗೆಂದು ತನ್ನ ಸಾರಥಿಗೆ ಹೇಳಿದನು.
ದುಃಶಾಸನನ ರಥವು ಸಮೀಪದಲ್ಲಿಯೇ ನಿಂತಿರುವುದನ್ನು ನೋಡಿ ಭಾರದ್ವಾಜನು ದುಃಶಾಸನನಿಗೆ ಈ ಮಾತುಗಳನ್ನಾಡಿದನು: “ದುಃಶಾಸನ! ಈ ಮಹಾರಥರೆಲ್ಲರೂ ಏಕೆ ಇಲ್ಲಿಗೆ ಓಡಿ ಧಾವಿಸಿ ಬರುತ್ತಿದ್ದಾರೆ? ನೃಪತಿ ದುರ್ಯೋಧನನು ಕ್ಷೇಮದಿಂದಿರುವನೇ? ಸೈಂಧವನು ಬದುಕಿದ್ದಾನೆಯೇ? ನೀನು ರಾಜಪುತ್ರ. ರಾಜನ ಸಹೋದರ. ಮಹಾರಥ. ಯುವರಾಜತ್ವವನ್ನು ಪಡೆದು ಹೀಗೆ ಏಕೆ ಯುದ್ಧದಿಂದ ಓಡಿ ಬಂದಿರುವೆ? ಪಾಂಚಲರು ಮತ್ತು ಪಾಂಡವರೊಂದಿಗೆ ಮಹಾ ವೈರವನ್ನು ಸ್ವಯಂ ನೀನೇ ಕಟ್ಟಿಕೊಂಡು ಈಗ ಏಕೆ ಯುದ್ಧದಲ್ಲಿ ಸಾತ್ಯಕಿಯೊಬ್ಬನನ್ನೇ ಎದುರಿಸಿ ಭಯಪಟ್ಟಿರುವೆ? ಹಿಡಿದಿದ್ದ ದಾಳಗಳೇ ಮುಂದೆ ಯುದ್ಧದಲ್ಲಿ ದಾರುಣ ಸರ್ಪವಿಷದಂತಿರುವ ಬಾಣಗಳಾಗುತ್ತವೆ ಎಂದು ನಿನಗೆ ಹಿಂದೆ ತಿಳಿದಿರಲಿಲ್ಲವೇ? ಹಿಂದೆ ನೀನು ಪಾಂಡವರಿಗೆ ಅಪ್ರಿಯ ಮಾತುಗಳನ್ನಾಡಿದೆ. ಅದರಲ್ಲೂ ವಿಶೇಷವಾಗಿ ದ್ರೌಪದಿಯ ಕಷ್ಟಗಳಿಗೆ ಕಾರಣನಾದೆ. ಅಂದಿನ ನಿನ್ನ ಅಭಿಮಾನವು ಈಗ ಎಲ್ಲಿ ಹೋಯಿತು? ದರ್ಪವೆಲ್ಲಿ ಹೋಯಿತು? ವೀರ್ಯವೆಲ್ಲಿ ಅಡಗಿಹೋಯಿತು? ಅಂದಿನ ಗರ್ಜನೆಯು ಈಗ ಎಲ್ಲಿ ಹೋಯಿತು? ವಿಷಸರ್ಪಸದೃಶರಾದ ಪಾರ್ಥರನ್ನು ಈ ರೀತಿ ಕೋಪಗೊಳಿಸಿ ಈಗ ಎಲ್ಲಿ ಹೋಗುತ್ತಿರುವೆ? ಈಗ ಭಾರತೀಸೇನೆಗಾಗಿ ಶೋಕಿಸಬೇಕಾಗಿದೆ. ರಾಜಾ ಸುಯೋಧನನಿಗಾಗಿ ಶೋಕಿಸಬೇಕಾಗಿದೆ. ಏಕೆಂದರೆ ಅವನ ತಮ್ಮನಾದ ಕರ್ಕಶನಾದ ನೀನು ಯುದ್ಧದಿಂದ ಪಲಾಯನಮಾಡುತ್ತಿರುವೆ! ವೀರ! ಸೀಳಿಹೋಗಿರುವ ಭಯಾರ್ದಿತರದ ಈ ಸೇನೆಗಳನ್ನು ಸ್ವಬಾಹುಬಲವನ್ನುಪಯೋಗಿಸಿ ನೀನು ರಕ್ಷಿಸಬೇಕಲ್ಲವೇ? ಭೀತನಾಗಿ ರಣವನ್ನು ತೊರೆದು ನೀನು ಶತ್ರುಗಳಿಗೆ ಆನಂದವನ್ನುಂಟುಮಾಡುತ್ತಿದ್ದೀಯೆ. ಸೈನ್ಯದ ನಾಯಕನಾಗಿರುವ ನೀನೇ ಓಡಿಹೋದರೆ ಬೇರೆ ಯಾರುತಾನೇ ಸಂಗ್ರಾಮದಲ್ಲಿ ಉಳಿದಾರು? ಯಾರ ಆಶ್ರಯದಲ್ಲಿರುವರೋ ಅವರೇ ಭೀತರಾದರೆ ಇಡೀ ಸೇನೆಯೇ ಭೀತಿಗೊಳ್ಳುವುದಿಲ್ಲವೇ? ಇಂದು ಸಾತ್ವತನೊಬ್ಬನೊಡನೆ ಯುದ್ಧಮಾಡುವಾಗಲೇ ನೀನು ಸಂಗ್ರಾಮದಿಂದ ಪಲಾಯನದ ಕುರಿತು ಮನಸ್ಸು ಮಾಡಿದೆ. ಇನ್ನು ಗಾಂಡೀವ ಧನ್ವಿ ಅರ್ಜುನ, ಭೀಮಸೇನ ಮತ್ತು ಯಮಳರಾದ ನಕುಲ-ಸಹದೇವರನ್ನು ಯುದ್ಧದಲ್ಲಿ ಎದುರಿಸಿದರೆ ಆಗ ನೀನು ಏನು ಮಾಡುವೆ? ಯಾವುದರಿಂದ ನೀನು ಭೀತನಾಗಿ ಪಲಾಯನಮಾಡುತ್ತಿರುವೆಯೋ ಆ ಸಾತ್ಯಕಿಯ ಶರಗಳು ಯುದ್ಧದಲ್ಲಿ ಸೂರ್ಯಾಗ್ನಿಸಮ ತೇಜಸ್ಸುಳ್ಳ ಫಲ್ಗುನನ ಬಾಣಗಳ ತುಲನೆಗೆ ಸಮನಾದವುಗಳಲ್ಲ. ಒಂದುವೇಳೆ ನೀನು ಪಲಾಯನ ಮಾಡುವ ನಿರ್ಧಾರವನ್ನೇ ಮಾಡಿದ್ದರೆ ಈ ಭೂಮಿಯನ್ನು ಧರ್ಮರಾಜನಿಗೆ ಶಾಂತಿಯಿಂದ ನೀಡಬೇಕು. ಫಲ್ಗುನನು ಬಿಟ್ಟ ಉರಗಸನ್ನಿಭ ನಾರಾಚಗಳು ನಿನ್ನ ಶರೀರವನ್ನು ಹೊಗುವ ಮೊದಲೇ ಪಾಂಡವರೊಂದಿಗೆ ಸಂಧಿಮಾಡಿಕೋ! ರಣದಲ್ಲಿ ನೂರು ಸಹೋದರರನ್ನೂ ಕೊಂದು ಆ ಮಹಾತ್ಮರು ಈ ಭೂಮಿಯನ್ನು ಕಿತ್ತುಕೊಳ್ಳುವುದರೊಳಗಾಗಿ ಪಾಂಡವರೊಡನೆ ಸಂಧಿಮಾಡಿಕೋ! ಧರ್ಮಪುತ್ರ ರಾಜಾ ಯುಧಿಷ್ಠಿರ ಮತ್ತು ಸಮರಶ್ಲಾಘೀ ಕೃಷ್ಣರು ಕ್ರುದ್ಧರಾಗುವ ಮೊದಲೇ ಪಾಂಡವರೊಡನೆ ಸಂಧಿಮಾಡಿಕೋ! ಮಹಾಬಾಹು ಭೀಮನು ಈ ಮಹಾಸೇನೆಯನ್ನು ಒಳಹೊಕ್ಕಿ ನಿನ್ನ ಸೋದರರನ್ನು ಸದೆಬಡಿಯುವುದರೊಳಗಾಗಿ ಪಾಂಡವರೊಡನೆ ಸಂಧಿಮಾಡಿಕೋ! ಹಿಂದೆ ನಿನ್ನ ಅಣ್ಣ ಸುಯೋಧನನಿಗೆ ಭೀಷ್ಮನು “ಸೌಮ್ಯ! ಯುದ್ಧದಲ್ಲಿ ಪಾಂಡವರು ಅಜೇಯರು. ಪಾಂಡವರೊಂದಿಗೆ ಸಂಧಿಮಾಡಿಕೋ!” ಎಂದು ಹೇಳಿದ್ದನು. ಆದರೆ ನಿನ್ನ ಅಣ್ಣ ಮೂಢ ಸುಯೋಧನನು ಹಾಗೆ ಮಾಡಲಿಲ್ಲ! ಆದುದರಿಂದ ಯುದ್ಧದಲ್ಲಿ ಧೈರ್ಯವನ್ನು ತಂದುಕೊಂಡು ಪ್ರಯತ್ನಪಟ್ಟು ಪಾಂಡವರೊಂದಿಗೆ ಯುದ್ಧಮಾಡು. ಬೇಗನೇ ಇದೇ ರಥದಲ್ಲಿ ಸಾತ್ಯಕಿಯೆಲ್ಲಿ ನಿಂತಿರುವನೋ ಅಲ್ಲಿಗೆ ಹೋಗು! ನೀನಿಲ್ಲದೇ ನಮ್ಮ ಸೇನೆಯು ದಿಕ್ಕಾಪಾಲಾಗಿ ಓಡಿಹೋಗುತ್ತಿದೆ. ನಿನಗಾಗಿಯಾದರೂ ರಣದಲ್ಲಿ ಸತ್ಯವಿಕ್ರಮಿ ಸಾತ್ಯಕಿಯೊಂದಿಗೆ ಯುದ್ಧಮಾಡು!”
ಇಷ್ಟು ಹೇಳಿದರೂ ದುಃಶಾಸನನು ಏನನ್ನೂ ಮಾತನಾಡಲಿಲ್ಲ. ಕೇಳಿದರೂ ಕೇಳದಂತೆ ಮಾಡಿ ಸಾತ್ಯಕಿಯು ಹೋದ ದಾರಿಯಲ್ಲಿ ಹೊರಟು ಹೋದನು. ಯುದ್ಧದಿಂದ ಹಿಮ್ಮೆಟ್ಟದಿದ್ದ ಮ್ಲೇಚ್ಛರ ಮಹಾ ಸೇನೆಯನ್ನು ಕೂಡಿಕೊಂಡು ದುಃಶಾಸನನು ಸಾತ್ಯಕಿಯೊಡನೆ ಯುದ್ಧಮಾಡತೊಡಗಿದನು. ದ್ರೋಣನೂ ಕೂಡ ಮಧ್ಯಮ ವೇಗವನ್ನು ಬಳಸಿ ಸಂಕ್ರುದ್ಧನಾಗಿ ಪಾಂಚಾಲ-ಪಾಂಡವರನ್ನು ಆಕ್ರಮಣಿಸಿದನು. ರಣದಲ್ಲಿ ಪಾಂಚಾಲರ ಸೇನೆಯನ್ನು ಪ್ರವೇಶಿಸಿ ದ್ರೋಣನು ನೂರಾರು ಸಾವಿರಾರು ಯೋಧರನ್ನು ಪಲಾಯನಗೊಳಿಸಿದನು. ಆಗ ದ್ರೋಣನು ತನ್ನ ಹೆಸರನ್ನು ಕೂಗಿ ಹೇಳಿಕೊಳ್ಳುತ್ತಾ ಪಾಂಡವ-ಪಾಂಚಾಲ-ಮತ್ಸ್ಯರೊಂದಿಗೆ ಮಹಾ ಕದನವನ್ನು ನಡೆಸಿದನು. ಅಲ್ಲಲ್ಲಿ ಸೇನೆಗಳನ್ನು ಸೋಲಿಸುತ್ತಿದ್ದ ಭಾರದ್ವಾಜನನ್ನು ಪಾಂಚಾಲಪುತ್ರ ವೀರಕೇತುವು ಎದುರಿಸಿದನು. ಅವನು ದ್ರೋಣನನ್ನು ಐದು ಸನ್ನತಪರ್ವಶರಗಳಿಂದ ಹೊಡೆದು ಒಂದರಿಂದ ಅವನ ಧ್ವಜವನ್ನೂ ಏಳರಿಂದ ಸಾರಥಿಯನ್ನೂ ಹೊಡೆದನು. ರಭಸವಾಗಿ ಯುದ್ಧಮಾಡುತ್ತಿದ್ದ ಆ ಪಾಂಚಾಲ್ಯನನ್ನು ದ್ರೋಣನಿಗೆ ಅತಿಕ್ರಮಿಸಿ ಹೋಗಲಾಗಲಿಲ್ಲ.
ದ್ರೋಣನನ್ನು ಪಾಂಚಾಲನು ತಡೆದುದನ್ನು ನೋಡಿ ಧರ್ಮಪುತ್ರನ ಹಿತೈಷಿಗಳು ದ್ರೋಣನನ್ನು ಸುತ್ತಲಿನಿಂದ ಆಕ್ರಮಣಿಸಿದರು. ಅವರು ಅಗ್ನಿಸಂಕಾಶ ಶರಗಳಿಂದಲೂ, ಬಹು ಮೂಲ್ಯ ತೋಮರಗಳಿಂದಲೂ, ವಿವಿಧ ಶಸ್ತ್ರಗಳಿಂದಲೂ ದ್ರೋಣನೊಬ್ಬನನ್ನೇ ಮುಚ್ಚಿಬಿಟ್ಟರು. ದ್ರೋಣನು ಆಕಾಶದಲ್ಲಿ ಅಪಾರ ಮಳೆನೀರಿನಿಂದ ತುಂಬಿದ ಮೋಡಗಳನ್ನು ಚದುರಿಸುವ ವಾಯುದೇವನಂತೆ ಎಲ್ಲೆಡೆಯಿಂದ ಮುಸುಕಿದ ಆ ಬಾಣಗಣಗಳನ್ನು ನಾಶಗೊಳಿಸಿದನು.
ಅನಂತರ ದ್ರೋಣನು ಸೂರ್ಯ-ಪಾವಕದಂತಿರುವ ಮಹಾಘೋರ ಬಾಣವನ್ನು ವೀರಕೇತುವಿನ ರಥದ ಕಡೆ ಹೂಡಿ ಹೊಡೆದನು. ಆ ಶರವು ಪಾಂಚಾಲ್ಯ ಕುಲನಂದನನನ್ನು ಭೇದಿಸಿ ಕೂಡಲೇ ರಕ್ತದಿಂದ ತೋಯ್ದು ಪ್ರಜ್ವಲಿಸುತ್ತಿರುವಂತೆ ಭೂಮಿಯ ಮೇಲೆ ಬಿದ್ದಿತು. ಕೂಡಲೇ ವೀರಕೇತುವು ಚಂಡಮಾರುತದಿಂದ ಹೊಡೆಯಲ್ಪಟ್ಟ ದೊಡ್ಡ ಸಂಪಿಗೆಯ ಮರವು ಪರ್ವತದ ಮೇಲಿಂದ ಕೆಳಕ್ಕೆ ಬೀಳುವಂತೆ ರಥದಿಂದ ಬಿದ್ದನು. ಆ ರಾಜಪುತ್ರನು ಹತನಾಗಲು ಪಾಂಚಾಲರು ತ್ವರೆಮಾಡಿ ದ್ರೋಣನನ್ನು ಎಲ್ಲಕಡೆಗಳಿಂದ ಸುತ್ತುವರೆದರು. ಭ್ರಾತೃವ್ಯಸನದಿಂದ ದುಃಖಿತರಾದ ಚಿತ್ರಕೇತು, ಸುಧನ್ವಾ, ಚಿತ್ರವರ್ಮ, ಮತ್ತು ಚಿತ್ರರಥರು ಸಂಘಟಿತರಾಗಿ ಭಾರದ್ವಾಜನೊಂದಿಗೆ ಯುದ್ಧಮಾಡಲು ಉತ್ಸುಕರಾಗಿ ಬೇಸಗೆಯ ಕೊನೆಯಲ್ಲಿ ಮೋಡಗಳು ಮಳೆಗರೆಯುವಂತೆ ಬಾಣಗಳ ಮಳೆಗರೆಯುತ್ತಾ ದ್ರೋಣನನ್ನು ಆಕ್ರಮಣಿಸಿದರು. ಆ ಮಹಾರಥ ರಾಜಪುತ್ರರಿಂದ ಬಹಳವಾಗಿ ಪೀಡಿಸಲ್ಪಟ್ಟ ದ್ರೋಣನು ಕುಪಿತನಾಗಿ ಆ ಕುಮಾರರನ್ನು ಅಶ್ವ-ಸೂತ-ರಥ ವಿಹೀನರನ್ನಾಗಿ ಮಾಡಿದನು. ಮಹಾಯಶಸ್ವಿ ದ್ರೋಣನು ಇತರ ಭಲ್ಲಗಳಿಂದ ಗಿಡಗಳಿಂದ ಹೂವನ್ನು ಕೊಯ್ಯುವಂತೆ ಅವರ ತಲೆಗಳನ್ನು ಕತ್ತರಿಸಿ ಬೀಳಿಸಿದನು. ಹಿಂದೆ ದೇವಾಸುರರ ಯುದ್ಧದಲ್ಲಿ ದೈತ್ಯ-ದಾನವರು ರಥಗಳಿಂದ ಕೆಳಗುರುಳಿದಂತೆ ಆ ಸುವರ್ಚಸ ಪಂಚಾಲರಾಜಕುಮಾರರು ಹತರಾಗಿ ರಥಗಳಿಂದ ಭೂಮಿಯ ಮೇಲೆ ಬಿದ್ದರು. ರಣದಲ್ಲಿ ಅವರನ್ನು ಸಂಹರಿಸಿ ಪ್ರತಾಪವಾನ್ ಭಾರದ್ವಾಜನು ಬಂಗಾರದ ಬೆನ್ನುಳ್ಳ ತನ್ನ ದುರಾಸದ ಧನುಸ್ಸನ್ನು ತಿರುಗಿಸತೊಡಗಿದನು.
ದೇವತೆಗಳಿಗೆ ಸಮಾನರಾದ ಆ ಮಹಾರಥ ಪಾಂಚಲರು ಹತರಾದುದನ್ನು ನೋಡಿ ತುಂಬಾ ಕ್ರುದ್ಧನಾಗಿ, ನೇತ್ರಗಳೆರಡರಿಂದ ನೀರನ್ನು ಸುರಿಸುತ್ತಾ ಧೃಷ್ಟದ್ಯುಮ್ನನು ಸಂಗ್ರಾಮದಲ್ಲಿ ದ್ರೋಣನ ರಥದ ಮೇಲೆ ಆಕ್ರಮಣಿಸಿದನು. ರಣದಲ್ಲಿ ಪಾಂಚಾಲ್ಯನು ದ್ರೋಣನನ್ನು ಶರಗಳಿಂದ ಮುಸುಕಿದುದನ್ನು ನೋಡಿ ಒಮ್ಮೆಲೇ ಹಾಹಾಕಾರವುಂಟಾಯಿತು. ಮಹಾತ್ಮ ಪಾರ್ಷತನಿಂದ ಬಹಳವಾಗಿ ಮುಚ್ಚಲ್ಪಟ್ಟರೂ ದ್ರೋಣನು ವ್ಯಥಿತನಾಗಲಿಲ್ಲ. ನಗುತ್ತಲೇ ಅವನೊಡನೆ ಯುದ್ಧಮಾಡತೊಡಗಿದನು. ಆಗ ಕ್ರೋಧಮೂರ್ಛಿತನಾದ ಪಾಂಚಾಲ್ಯನು ದ್ರೋಣನನ್ನು ಕ್ರುದ್ಧನಾಗಿ ತೊಂಭತ್ತು ನತಪರ್ವಣ ಶರಗಳಿಂದ ಎದೆಯ ಮೇಲೆ ಪ್ರಹರಿಸಿದನು. ಆ ಬಲಶಾಲಿ ಧೃಷ್ಟದ್ಯುಮ್ನನಿಂದ ಗಾಢವಾಗಿ ಹೊಡೆಯಲ್ಪಟ್ಟ ಮಹಾಯಶಸ್ವಿ ದ್ರೋಣನು ರಥಪೀಠದ ಪಕ್ಕಕ್ಕ್ಕೆ ಸರಿದು ಕುಳಿತು ಮೂರ್ಛೆಹೋದನು.
ಅವನು ಹಾಗಾದುದನ್ನು ನೋಡಿ ಧೃಷ್ಟದ್ಯುಮ್ನನು ಕೂಡಲೇ ಧನುಸ್ಸನ್ನು ಬಿಸುಟು ಖಡ್ಗವನ್ನು ಕೈಗೆತ್ತಿಕೊಂಡನು. ಬೇಗನೇ ತನ್ನ ರಥದಿಂದ ಹಾರಿ ತ್ವರೆಮಾಡಿ ಕ್ರೋಧದಿಂದ ಕೆಂಗಣ್ಣನಾಗಿದ್ದ ಆ ಧೃಷ್ಟದ್ಯುಮ್ನನು ದ್ರೋಣನ ಶಿರವನ್ನು ದೇಹದಿಂದ ಅಪಹರಿಸಲು ಬಯಸಿ ಭಾರದ್ವಾಜನ ರಥವನ್ನೇರಿದನು. ಅಷ್ಟರಲ್ಲಿಯೇ ದ್ರೋಣನು ಸುಧಾರಿಸಿಕೊಂಡು ಧನುಸ್ಸನ್ನೆತ್ತಿಕೊಂಡು ಹತ್ತಿರದ ಲಕ್ಷ್ಯವನ್ನು ಭೇದಿಸುವ ವೈತಸ್ತಿಕ ಬಾಣಗಳಿಂದ ಸಮರದಲ್ಲಿ ಧೃಷ್ಟದ್ಯುಮ್ನನೊಂದಿಗೆ ಯುದ್ಧಮಾಡತೊಡಗಿದನು. ದೃಷ್ಟದ್ಯುಮ್ನನ ಮೇಲೆ ಬಿಟ್ಟ, ಹತ್ತಿರದಲ್ಲಿರುವ ಯೋಧರನ್ನು ಭೇದಿಸಬಲ್ಲ ಆ ವೈತಸ್ತಿಕ ಎಂಬ ಹೆಸರಿನ ಬಾಣಗಳನ್ನು ದ್ರೋಣನೇ ನಿರ್ಮಿಸಿದ್ದನು. ಅನೇಕ ಸಾಯಕಗಳಿಂದ ಪ್ರಹರಿಸಲ್ಪಟ್ಟು ಭಗ್ನವೇಗನಾದ ಧೃಷ್ಟದ್ಯುಮ್ನನು ಬೇಗನೇ ದ್ರೋಣನ ರಥದಿಂದ ಧುಮುಕಿದನು. ಆ ವೀರ ಧೃಷ್ಟದ್ಯುಮ್ನನು ತನ್ನದೇ ರಥವನ್ನೇರಿ ಮಹಾಧನುಸ್ಸನ್ನು ಹಿಡಿದು ದ್ರೋಣನನ್ನು ಹೊಡೆದನು. ಅದ್ಭುತವಾಗಿದ್ದ ಅವರಿಬ್ಬರ ಯುದ್ಧವನ್ನು ಪ್ರಾಣಿಗಣಗಳೆಲ್ಲವೂ, ಕ್ಷತ್ರಿಯರೂ ಮತ್ತು ಅಲ್ಲಿದ್ದ ಇತರ ಸೈನಿಕರೂ ಪ್ರಶಂಸಿಸಿದರು. “ಧೃಷ್ಟದ್ಯುಮ್ನನೊಡನೆ ಯುದ್ಧಮಾಡುತ್ತಿರುವ ದ್ರೋಣನು ಅವಶ್ಯವಾಗಿಯೂ ನಮ್ಮ ರಾಜನ ವಶನಾಗಿದ್ದಾನೆ!” ಎಂದು ಪಾಂಚಾಲರು ಕೂಗಿಕೊಳ್ಳುತ್ತಿದ್ದರು.
ಆಗ ದ್ರೋಣನಾದರೋ ತಡಮಾಡದೇ ಧೃಷ್ಟದ್ಯುಮ್ನನ ಸಾರಥಿಯ ಶಿರವನ್ನು – ಮರದಲ್ಲಿರುವ ಹಣ್ಣನ್ನು ಕೆಳಗೆ ಬೀಳಿಸುವಂತೆ - ದೇಹದಿಂದ ಕೆಳಕ್ಕೆ ಕೆಡವಿದನು. ಆಗ ಧೃಷ್ಟದ್ಯುಮ್ನನ ಕುದುರೆಗಳು ದಿಕ್ಕಾಪಾಲಾಗಿ ಓಡಿಹೋದವು. ಅವುಗಳು ಓಡಿಹೋಗಲು ದ್ರೋಣನು ಪಾಂಚಾಲ ಸೃಂಜಯರೊಡನೆ ಅಲ್ಲಲ್ಲಿ ಯುದ್ಧಮಾಡತೊಡಗಿದನು. ಪಾಂಡವ-ಪಾಂಚಾಲರನ್ನು ಗೆದ್ದು ಭಾರದ್ವಾಜ ಅರಿಂದಮನು ತನ್ನ ವ್ಯೂಹವನ್ನು ಪುನಃ ಸ್ಥಿರವಾಗಿರುವಂತೆ ಮಾಡಿದನು. ಆಗ ಪಾಂಡವರು ಅವನೊಡನೆ ಯುದ್ಧಮಾಡಲು ಉತ್ಸಾಹಿತರಾಗಿರಲಿಲ್ಲ.
ಸಾತ್ಯಕಿ-ದುಃಶಾಸನರ ಯುದ್ಧ
ಅನಂತರ ದುಃಶಾಸನನು ಮಳೆಗರೆಯುತ್ತಿರುವ ಮೋಡದಂತೆ ಸಹಸ್ರಾರು ಬಾಣಗಳನ್ನು ಸುರಿಸುತ್ತಾ ಶೈನೇಯ ಸಾತ್ಯಕಿಯನ್ನು ಆಕ್ರಮಣಿಸಿದನು. ಸಾತ್ಯಕಿಯನ್ನು ಅರವತ್ತು ಮತ್ತು ಹಾಗೆಯೇ ಹದಿನಾರು ಶರಗಳಿಂದ ಹೊಡೆದರೂ ಯುದ್ಧದಲ್ಲಿ ಮೈನಾಕಪರ್ವತದಂತೆ ಸ್ಥಿರನಾಗಿ ನಿಂತಿದ್ದ ಅವನನ್ನು ಅಲುಗಾಡಿಸಲೂ ಆಗಲಿಲ್ಲ. ಆ ವೀರನು ಉಕ್ಕಿಬರುತ್ತಿರುವ ಸಾಗರದಂತೆ ಆಕ್ರಮಣಿಸುತ್ತಿರುವ ದುಃಶಾಸನನನ್ನು ಸಾಯಕಗಳಿಂದ ಗಾಯಗೊಳಿಸಿದನು. ದುಃಶಾಸನನು ಹಾಗೆ ಬಾಣಗಳಿಂದ ಪೀಡಿತನಾದುದನ್ನು ನೋಡಿ ದುರ್ಯೋಧನನು ಸಾತ್ಯಕಿಯ ರಥದ ಕಡೆ ಧಾವಿಸುವಂತೆ ತ್ರಿಗರ್ತರನ್ನು ಪ್ರಚೋದಿಸಿದನು. ಆ ಯುದ್ಧವಿಶಾರದ ತ್ರಿಗರ್ತರು ಮೂರು ಸಾವಿರ ರಥಗಳನ್ನು ಕೂಡಿಕೊಂಡು ಯುಯುಧಾನನ ಬಳಿ ಹೋದರು. ಅವರು ಯುದ್ಧದಲ್ಲಿ ಸ್ಥಿರಬುದ್ಧಿಯನ್ನಿರಿಸಿಕೊಂಡು ಪಲಾಯನಮಾಡುವುದಿಲ್ಲವೆಂದು ಶಪಥವನ್ನು ತೊಟ್ಟು ಆ ಮಹಾ ರಥಗುಂಪಿನಿಂದ ಸಾತ್ಯಕಿಯನ್ನು ಸುತ್ತುವರೆದರು. ಬಾಣಗಳ ಮಳೆಯನ್ನು ಸುರಿಸುತ್ತಾ ಯುದ್ಧದಲ್ಲಿ ಪ್ರಯತ್ನಪಡುತ್ತಿದ್ದ ಅವರ ಸೇನೆಗಳ ಎದುರಿರುವ ಐನೂರು ಯೋಧರನ್ನು ಸಾತ್ಯಕಿಯು ಉರುಳಿಸಿಬಿಟ್ಟನು. ಕೂಡಲೇ ಅವರು ವೇಗವಾಗಿ ಬೀಸುತ್ತಿದ್ದ ಮಹಾಚಂಡಮಾರುತಕ್ಕೆ ಸಿಲುಕಿ ಮುರಿದುಬಿದ್ದ ಮಹಾಮರಗಳಂತೆ ಶಿನಿಪ್ರವರನ ಸಾಯಕಗಳಿಗೆ ಸಿಲುಕಿ ಹತರಾಗಿ ಬಿದ್ದರು. ಅನೇಕ ರಥಗಳು ಮತ್ತು ಧ್ವಜಗಳೂ ತುಂಡಾಗಿ ಮತ್ತು ಬಂಗಾರದಿಂದ ಅಲಂಕೃತ ಕುದುರೆಗಳು ಹತವಾಗಿ ರಣಭೂಮಿಯಮೇಲೆ ಬಿದ್ದಿದ್ದವು. ಶೈನೇಯನ ಶರಗಳಿಂದ ಗಾಯಗೊಂಡು ರಕ್ತದಿಂದ ತೋಯ್ದುಹೋಗಿದ್ದ ಅವು ಹೂಬಿಟ್ಟ ಕಿಂಶುಕ ವೃಕ್ಷಗಳಂತೆ ಶೋಭಿಸಿದವು. ಯುಯುಧಾನನಿಂದ ವಧಿಸಲ್ಪಡುತ್ತಿದ್ದ ಕೌರವರು ಕೆಸರಿನಲ್ಲಿ ಸಿಲುಕಿದ್ದ ಆನೆಗಳಂತೆ ತ್ರಾತರನ್ಯಾರನ್ನೂ ಪಡೆಯಲಿಲ್ಲ. ಆಗ ಅವರೆಲ್ಲರೂ ಪತಗರಾಜನ ಭಯದಿಂದ ಬಿಲಗಳನ್ನು ಸೇರುವ ಮಹೋರಗಗಳಂತೆ ದ್ರೋಣನ ರಥದ ಬಳಿ ಸೇರಿದರು. ವಿಷಸರ್ಪಗಳಂತಿರುವ ಶರಗಳಿಂದ ಆ ಐನೂರು ಯೋಧರನ್ನು ಸಂಹರಿಸಿ ವೀರ ಸಾತ್ಯಕಿಯು ನಿಧಾನವಾಗಿ ಧನಂಜಯನ ರಥದ ಕಡೆ ಪ್ರಯಾಣಿಸಿದನು.
ಮುಂದೆ ಸಾಗುತ್ತಿದ್ದ ಆ ನರಶ್ರೇಷ್ಠನನ್ನು ದುಶಾಸನನು ಕೂಡಲೇ ಒಂಭತ್ತು ಸನ್ನತಪರ್ವ ಶರಗಳಿಂದ ಹೊಡೆದನು. ಸಾತ್ಯಕಿಯಾದರೋ ಅವನನ್ನು ಐದು ರುಕ್ಮಪುಂಖಗಳ, ಹದ್ದಿನ ಗರಿಗಳ ನಿಶಿತ ಜಿಹ್ಮಗ ಶರಗಳಿಂದ ತಿರುಗಿ ಹೊಡೆದನು. ದುಃಶಾಸನನಾದರೋ ನಗುತ್ತಿರುವನೋ ಎನ್ನುವಂತೆ ಸಾತ್ಯಕಿಯನ್ನು ಮೂರರಿಂದ ಹೊಡೆದು ಪುನಃ ಐದರಿಂದ ಹೊಡೆದನು. ಶೈನೇಯನು ದುಃಶಾಸನನನ್ನು ಐದು ಆಶುಗಗಳಿಂದ ಹೊಡೆದು ಅವನ ಧನುಸ್ಸನ್ನು ಕತ್ತರಿಸಿ ವಿಸ್ಮಯನನ್ನಾಗಿಸಿ ಅರ್ಜುನನ ಕಡೆ ಹೋದನು. ವೃಷ್ಣಿವೀರನು ಹಾಗೆ ಹೋಗಲು ಕ್ರುದ್ಧನಾದ ದುಃಶಾಸನನು ಅವನನ್ನು ಕೊಲ್ಲಲು ಬಯಸಿ ಸರ್ವವೂ ಉಕ್ಕಿನ ಮಯವಾಗಿರುವ ಶಕ್ತಿಯನ್ನು ಅವನ ಮೇಲೆ ಪ್ರಯೋಗಿಸಿದನು. ಅವನ ಆ ಘೋರ ಶಕ್ತಿಯನ್ನಾದರೋ ಸಾತ್ಯಕಿಯು ನಿಶಿತ ಕಂಕಪತ್ರಿಗಳಿಂದ ನೂರುತುಂಡುಗಳನ್ನಾಗಿ ಕತ್ತರಿಸಿದನು. ಆಗ ದುಃಶಾಸನನು ಇನ್ನೊಂದು ಧನುಸ್ಸೆನ್ನೆತ್ತಿಕೊಂಡು ಸಾತ್ಯಕಿಯನ್ನು ಹತ್ತು ಬಾಣಗಳಿಂದ ಹೊಡೆದು ಸಿಂಹನಾದಗೈದನು. ಕ್ರುದ್ಧ ಸಾತ್ಯಕಿಯಾದರೋ ಅವನನ್ನು ಮೂರ್ಛೆಗೊಳಿಸುತ್ತಾ ಅಗ್ನಿಶಿಖೆಗಳ ಆಕಾರದಲ್ಲಿದ್ದ ಶರಗಳನ್ನು ಅವನ ಎದೆಗೆ ಗುರಿಯಿಟ್ಟು ಹೊಡೆದನು. ಪುನಃ ಎಂಟು ತೀಕ್ಷ್ಣಮುಖಗಳುಳ್ಳ ಉಕ್ಕಿನ ಬಾಣಗಳಿಂದ ಹೊಡೆದನು. ಅದಕ್ಕೆ ಪ್ರತಿಯಾಗಿ ದುಃಶಾಸನನೂ ಕೂಡ ಸಾತ್ಯಕಿಯನ್ನು ಇಪ್ಪತ್ತು ಬಾಣಗಳಿಂದ ಹೊಡೆದನು. ತಿರುಗಿ ಸಾತ್ವತನೂ ಕೂಡ ಮಹಾವೇಗದಿಂದ ಅವನ ಎದೆಗೆ ಮೂರು ಸನ್ನತಪರ್ವ ಶರಗಳಿಂದ ಹೊಡೆದನು. ಆಗ ತುಂಬಾ ಕ್ರೋಧಿತನಾದ ಸಾತ್ಯಕಿಯು ದುಃಶಾಸನನ ಕುದುರೆಗಳನ್ನು ನಿಶಿತ ಬಾಣಗಳಿಂದ ಮತ್ತು ಸಾರಥಿಯನ್ನು ಕೂಡ ಸನ್ನತ ಪರ್ವ ಶರಗಳಿಂದ ಹೊಡೆದು ಸಂಹರಿಸಿದನು.
ಒಂದೇ ಭಲ್ಲದಿಂದ ಅವನ ಧನುಸ್ಸನ್ನೂ, ಹಸ್ತಾವಾಪವನ್ನೂ ಕತ್ತರಿಸಿ, ಎರಡು ಭಲ್ಲೆಗಳಿಂದ ಧ್ವಜವನ್ನೂ ರಥಶಕ್ತಿಯನ್ನೂ ತುಂಡರಿಸಿ ಆ ಪರಮಾಸ್ತ್ರವಿದುವು ತೀಕ್ಷ್ಣ ವಿಶಿಖಗಳಿಂದ ಅವನ ಇಬ್ಬರು ಪಾರ್ಷ್ಣಿಸಾರಥಿಗಳನ್ನೂ ಸಂಹರಿಸಿದನು. ಧನುಸ್ಸು ಮುರಿದ, ವಿರಥನಾದ, ಕುದುರೆ-ಸಾರಥಿಗಳನ್ನು ಕಳೆದುಕೊಂಡ ದುಃಶಾಸನನನ್ನು ತ್ರಿಗರ್ತಸೇನಾಪತಿಯು ತನ್ನ ರಥದಲ್ಲಿ ಏರಿಸಿಕೊಂಡನು. ಮಹಾಬಾಹು ಭೀಮಸೇನನ ಮಾತನ್ನು ನೆನಪಿಸಿಕೊಂಡು ಒಂದು ಕ್ಷಣ ದೊರಕಿದ್ದರೂ ಶೈನೇಯನು ದುಃಶಾಸನನನ್ನು ಕೊಲ್ಲಲಿಲ್ಲ. ಯುದ್ಧದಲ್ಲಿ ಧೃತರಾಷ್ಟ್ರನ ಎಲ್ಲ ಮಕ್ಕಳ ವಧೆಯನ್ನೂ ತಾನೇ ಮಾಡುತ್ತೇನೆಂದು ಸಭಾಮಧ್ಯದಲ್ಲಿ ಭೀಮಸೇನನು ಪ್ರತಿಜ್ಞೆಮಾಡಿದ್ದನು. ಹಾಗೆ ಸಂಯುಗದಲ್ಲಿ ದುಃಶಾಸನನನ್ನು ಗೆದ್ದ ಸಾತ್ಯಕಿಯು ತ್ವರೆಮಾಡಿ ಧನಂಜಯನು ಹೋಗಿರುವಲ್ಲಿಗೆ ಹೋದನು.
ರಥ-ಗಜ-ಅಶ್ವ-ಪದಾತಿಗಳಿಂದ ಸಮೃದ್ಧವಾದ ಕೌರವ ಸೇನೆಗಳು ಉದ್ಯೋಗಶೀಲರಾಗಿದ್ದು, ಅವುಗಳ ತುಮುಲವು ಯುಗಾಂತವೋ ಎಂಬಂತೆ ಇದ್ದಿತು. ಅಲ್ಲಿ ಸೇರಿದ್ದ ದೇವತೆಗಳೂ ಮತ್ತು ಚಾರಣರೂ “ಭೂಮಿಯಲ್ಲಿ ಇಂತಹ ಸೇನಾ ಸಮೂಹವು ಇದೇ ಕೊನೆಯದಾಗುತ್ತದೆ!” ಎಂದು ಹೇಳಿಕೊಳುತ್ತಿದ್ದರು. ಜಯದ್ರಥನ ವಧೆಯ ಸಮಯದಲ್ಲಿ ದ್ರೋಣನು ನಿರ್ಮಿಸಿದ ಅದರಂಥಹ ವ್ಯೂಹವು ಎಂದೂ ರಚನೆಗೊಂಡಿರಲಿಲ್ಲ. ರಣದಲ್ಲಿ ಅನ್ಯೋನ್ಯರನ್ನು ಪ್ರಹರಿಸುತ್ತಿದ್ದ ಆ ಸೇನೆಗಳಿಂದ ಹೊರಟ ಶಬ್ಧವು ಚಂಡಮಾರುತಕ್ಕೆ ಸಿಲುಕಿದ ಸಮುದ್ರದ ಭೋರ್ಗರೆತಕ್ಕೆ ಸಮನಾಗಿತ್ತು. ಸೇರಿರುವ ಕೌರವ ಮತ್ತು ಪಾಂಡವರ ಸೇನೆಗಳಲ್ಲಿ ನೂರಾರು ಸಹಸ್ರಾರು ಪಾರ್ಥಿವರಿದ್ದರು. ಸಮರದಲ್ಲಿ ಕ್ರುದ್ಧರಾಗಿರುವ ದೃಢಕರ್ಮಿ ಪ್ರವೀರರ ರೋಮಾಂಚಕಾರೀ ಮಹಾ ತುಮುಲಶಬ್ಧವು ಉಂಟಾಯಿತು. ಭೀಮಸೇನ, ಧೃಷ್ಟದ್ಯುಮ್ನ, ನಕುಲ, ಸಹದೇವ ಮತ್ತು ಪಾಂಡವ ಧರ್ಮರಾಜರು ಜೋರಾಗಿ ಕೂಗಿಕೊಳ್ಳುತ್ತಿದ್ದರು: “ಬೇಗಬನ್ನಿರಿ! ಶಕ್ತಿಯನ್ನುಪಯೋಗಿಸಿ ಪ್ರಹರಿಸಿ! ವೀರರಾದ ಮಾಧವ-ಪಾಂಡವರು ಅರಿಸೇನೆಯನ್ನು ಪ್ರವೇಶಿಸಿಬಿಟ್ಟಿದ್ದಾರೆ! ಜಯದ್ರಥನ ವಧೆಯು ಸುಲಭವಾಗಿ ನಡೆಯುವಂತೆ ಮಾಡಲು ಅವಸರಮಾಡಿರಿ!” ಎಂದು ಸೇನೆಗಳನ್ನು ಯುಧಿಷ್ಠಿರನು ಹುರಿದುಂಬಿಸಿದನು. “ಅವರಿಬ್ಬರೂ ಇಲ್ಲದಿರುವಾಗ ಕುರುಗಳು ನಮ್ಮನ್ನು ಜಯಿಸಿ ಯಶಸ್ವಿಗಳಾಗಿಬಿಡಬಹುದು! ಭಿರುಗಾಳಿಯು ಹೇಗೆ ಮಹಾವೇಗದಿಂದ ಬೀಸಿ ಸಾಗರವನ್ನು ಅಲ್ಲೋಲಕಲ್ಲೋಲಮಾಡುವುದೋ ಹಾಗೆ ನೀವು ಎಲ್ಲರೂ ಒಟ್ಟಾಗಿ ಬೇಗನೇ ಕುರುಸೇನೆಯನ್ನು ಕಲಕಿಬಿಡಿ!” ಹೀಗೆ ಭೀಮಸೇನ ಮತ್ತು ಪಾಂಚಾಲ್ಯ ಧೃಷ್ಟದ್ಯುಮ್ನರು ಪ್ರಚೋದಿಸಲು ಅವರು ಪ್ರಿಯಪ್ರಾಣಗಳನ್ನೂ ತೊರೆದು ರಣದಲ್ಲಿ ಕೌರವರನ್ನು ಸಂಹರಿಸಿದರು. ಆ ಉತ್ತಮತೇಜಸ್ಸುಳ್ಳವರು ಯುದ್ಧ ಶಸ್ತ್ರಗಳಿಂದ ಸಾವನ್ನು ಬಯಸಿ, ಮಿತ್ರಕಾರ್ಯಾರ್ಥವಾಗಿ ಮತ್ತು ಸ್ವರ್ಗಾರ್ಥವಾಗಿ ತಮ್ಮ ಜೀವವನ್ನೇ ರಕ್ಷಿಸಿಕೊಳ್ಳುತ್ತಿರಲಿಲ್ಲ. ಹಾಗೆಯೇ ಕೌರವರ ಕಡೆಯವರೂ ಕೂಡ ಮಹಾ ಯಶಸ್ಸನ್ನು ಬಯಸಿ ಯುದ್ಧದಲ್ಲಿಯೇ ಶ್ರೇಷ್ಠ ಬುದ್ಧಿಯನ್ನಿರಿಸಿ ಯುದ್ಧದಲ್ಲಿಯೇ ನಿರತರಾಗಿದ್ದರು. ಮಹಾಭಯವನ್ನುಂಟುಮಾಡಿ ನಡೆಯುತ್ತಿದ್ದ ಆ ತುಮುಲ ಯುದ್ಧದಲ್ಲಿ ಸರ್ವ ಸೇನೆಗಳನ್ನೂ ಸಂಹರಿಸಿ ಸಾತ್ಯಕಿಯು ಅರ್ಜುನನಿದ್ದಲ್ಲಿಗೆ ನಡೆದನು.
ದುರ್ಯೋಧನನ ಯುದ್ಧ
ಅಲ್ಲಿ ಕವಚಗಳ ಮೇಲೆ ಬಿದ್ದ ಸೂರ್ಯನ ರಶ್ಮಿಗಳು ಹೊರಸೂಸಿ ರಣದ ಎಲ್ಲಕಡೆಗಳಲ್ಲಿ ಸೈನಿಕರ ದೃಷ್ಟಿಯನ್ನೇ ಕೋರೈಸಿದವು. ಹಾಗೆ ನಿರ್ಭಯವಾಗಿ ಪ್ರಯತ್ನಿಸಿ ಹೋರಡುತ್ತಿದ್ದ ಪಾಂಡವೇಯರ ಆ ಮಹಾಬಲವನ್ನು ದುರ್ಯೋಧನನು ಪ್ರವೇಶಿಸಿದನು. ಅವನು ಆಕ್ರಮಣಿಸಲು ನಡೆದ ಅವನ ಮತ್ತು ಅವರ ನಡುವೆ ನಡೆದ ಮಹಾಯುದ್ಧವು ಸರ್ವಸೈನ್ಯಗಳ ಕ್ಷಯಕರವಾಗಿ ಪರಿಣಮಿಸಿತು. ಕಮಲಗಳಿಂದ ಕೂಡಿದ ಸರೋವರವನ್ನು ಆನೆಯೊಂದು ಮಥಿಸಿಬಿಡುವಂತೆ ರಣದಲ್ಲಿ ಪಾಂಡವರ ಸೇನೆಯನ್ನು ದುರ್ಯೋಧನನು ಒಮ್ಮೆಲೇ ಎಲ್ಲ ಕಡೆಗಳಿಂದ ಕದಡಿ ಅಲ್ಲೋಲಕಲ್ಲೋಲಗೊಳಿಸಿಬಿಟ್ಟನು. ಅವನು ಹಾಗೆ ಮಾಡಿದುದನ್ನು ನೋಡಿ ಭೀಮಸೇನನನ್ನು ಮುಂದಿರಿಸಿಕೊಂಡು ಪಾಂಚಾಲರು ಅವನನ್ನು ಆಕ್ರಮಣಿಸಿದರು. ದುರ್ಯೋಧನನು ಭೀಮಸೇನನನ್ನು ಹತ್ತರಿಂದ, ಮಾದ್ರೀಪುತ್ರರನ್ನು ಮೂರು-ಮೂರರಿಂದ, ವಿರಾಟ-ದ್ರುಪದರನ್ನು ಆರರಿಂದ, ನೂರರಿಂದ ಶಿಖಂಡಿಯನ್ನು. ಧೃಷ್ಟದ್ಯುಮ್ನನನ್ನು ಇಪ್ಪತ್ತರಿಂದ, ಧರ್ಮಪುತ್ರನನ್ನು ಏಳರಿಂದ, ಕೇಕಯರನ್ನು ಹತ್ತರಿಂದ ಮತ್ತು ದ್ರೌಪದೇಯರನ್ನು ಮೂರು-ಮೂರರಿಂದ ಹೊಡೆದು, ರಣದಲ್ಲಿ ಇತರ ಇನ್ನೂ ನೂರಾರು ಆನೆಗಳನ್ನು ರಥಗಳನ್ನು ಮತ್ತು ಯೋಧರನ್ನು ಕ್ರುದ್ಧನಾದ ಅಂತಕನಂತೆ ತನ್ನ ಉಗ್ರ ಬಾಣಗಳಿಂದ ಕತ್ತರಿಸಿ ಹಾಕಿದನು. ಅವನು ಧನುಸ್ಸನ್ನು ಮಂಡಲಾಕಾರವಾಗಿ ಹೂಡಿ, ತನ್ನ ಅಸ್ತ್ರಬಲ ಶಿಕ್ಷಣದಿಂದ ಶತ್ರುಗಳನ್ನು ಸಂಹರಿಸುತ್ತಿರುವಂತೆ ಕಂಡನು. ಶತ್ರುಗಳನ್ನು ಸಂಹರಿಸುತ್ತಿರುವ ಅವನ ಆ ಬಂಗಾರದ ಬೆನ್ನುಳ್ಳ ಮಹಾಧನುಸ್ಸನ್ನು ಜ್ಯೇಷ್ಠ ಪಾಂಡವ ಯುಧಿಷ್ಠಿರನು ಎರಡು ಭಲ್ಲಗಳಿಂದ ಮೂರು ಭಾಗಗಳನ್ನಾಗಿ ತುಂಡರಿಸಿದನು. ಇನ್ನೂ ಅನೇಕ ನಿಶಿತ ಶರಗಳಿಂದ ಅವನನ್ನು ಹೊಡೆಯಲು ಅವು ದುರ್ಯೋಧನನ ಕವಚಕ್ಕೆ ತಾಗಿ, ಕವಚವನ್ನು ಸೀಳಿ, ಭೂಮಿಯನ್ನು ಹೊಕ್ಕವು. ಆಗ ಸಂತೋಷಗೊಂಡ ಪಾರ್ಥರು ವೃತ್ರವಧೆಯ ನಂತರ ದೇವತೆಗಳು ಮತ್ತು ಮಹರ್ಷಿಗಳು ಶಕ್ರನನ್ನು ಹೇಗೋ ಹಾಗೆ ಯುಧಿಷ್ಠಿರನನ್ನು ಸುತ್ತುವರೆದರು. ಆಗ ದುರ್ಯೋಧನನು ದೃಢವಾದ ಬಿಲ್ಲನ್ನು ಎತ್ತಿಕೊಂಡು “ನಿಲ್ಲು! ನಿಲ್ಲು!” ಎಂದು ಹೇಳುತ್ತಾ ರಾಜಾ ಪಾಂಡವನನ್ನು ಆಕ್ರಮಣಿಸಿದನು. ಆ ಮಹಾರಥನು ಹೀಗೆ ಮುಂದುವರೆಯುತ್ತಿರಲು ಜಯವನ್ನು ಬಯಸುತ್ತಿದ್ದ ಪಾಂಚಾಲರು ಸಂತೋಷದಿಂದ ಅವನನ್ನು ಎದುರಿಸಿದರು. ಆಗ ಯುದ್ಧದಲ್ಲಿ ಪಾಂಡವರನ್ನು ರಕ್ಷಿಸುತ್ತಿದ್ದ ಅವರನ್ನು ದ್ರೋಣನು ಚಂಡಮಾರುತದಿಂದುಂಟಾದ ಮೇಘಗಳನ್ನೂ ಮೋಡಗಳನ್ನೂ ಸ್ವೀಕರಿಸುವ ಪರ್ವತದಂತೆ ಬರಮಾಡಿಕೊಂಡನು. ಅಲ್ಲಿ ಭೂರಿವರ್ಧನ ಸರ್ವದೇಹಿಗಳ ಸಂಹಾರಕ ರುದ್ರನ ಕ್ರೀಡೆಯಂತಿರುವ ಮಹಾ ಸಂಗ್ರಾಮವು ನಡೆಯಿತು.
ಕೇಕಯ ಬೃಹತ್ಕ್ಷತ್ರನ ವಧೆ
ಅವತ್ತಿನ ಅಪರಾಹ್ಣದಲ್ಲಿ ಮೋಡಗಳ ಗುಡುಗಿನಂತೆ ಮೊಳಗುತ್ತಿರುವ ಸಂಗ್ರಾಮವು ಪುನಃ ದ್ರೋಣ ಮತ್ತು ಸೋಮಕರ ನಡುವೆ ನಡೆಯಿತು. ಆ ನರವೀರನು ಸಮಾಹಿತನಾಗಿ ಕೆಂಪು ಕುದುರೆಗಳನ್ನು ಕಟ್ಟಿದ್ದ ರಥವನ್ನೇರಿ ಮಧ್ಯಮ ವೇಗವನ್ನು ಬಳಸಿ ಪಾಂಡವರನ್ನು ಆಕ್ರಮಣಿಸಿದನು. ಆ ಮಹೇಷ್ವಾಸ ಕಲಶೋತ್ತಮಸಂಭವ ಭಾರದ್ವಾಜನು ರಣದಲ್ಲಿ ಆಟವಾಡುತ್ತಿರುವನೋ ಎಂಬಂತೆ ಬಣ್ಣದ ಪುಂಖಗಳುಳ್ಳ ನಿಶಿತ ಬಾಣಗಳಿಂದ ಶ್ರೇಷ್ಠ ಶ್ರೇಷ್ಠ ಯೋಧರನ್ನು ತುಂಡರಿಸಿದನು. ಆಗ ಕೇಕಯರ ಮಹಾರಥ ಐವರು ಸಹೋದರರ ವೀರ ಶ್ಯೇಷ್ಠ, ಸಮರ ಕರ್ಕಶ ಬೃಹತ್ಕ್ಷತ್ರನು ದ್ರೋಣನನ್ನು ಎದುರಿಸಿದನು. ತೀಕ್ಷ್ಣ ವಿಶಿಖಗಳನ್ನು ಬಿಡುತ್ತಾ ಅವನು ಮಹಾಮೇಘವು ಗಂಧಮಾದನ ಪರ್ವತದ ಮೇಲೆ ಮಳೆಸುರಿಸುವಂತೆ ಆಚಾರ್ಯನ ಮೇಲೆ ಸುರಿಸಿ ಮುಚ್ಚಿಬಿಟ್ಟನು. ಕ್ರುದ್ಧನಾದ ದ್ರೋಣನು ಅವನ ಮೇಲೆ ಸ್ವರ್ಣಪುಂಖಗಳುಳ್ಳ, ಕಲ್ಲಿನ ಮೇಲೆ ಮಸೆದ ಹದಿನೇಳು ಸಾಯಕಗಳನ್ನು ಪ್ರಯೋಗಿಸಿದನು. ದ್ರೋಣನು ಬಿಟ್ಟ ಆ ಘೋರ ಸರ್ಪದ ವಿಷಗಳಂತಿರುವ ಒಂದೊಂದು ಬಾಣಗಳನ್ನೂ ಬೃಹತ್ಕ್ಷತ್ರನು ಸಂತೋಷದಿಂದ ಹತ್ತು ಬಾಣಗಳಿಂದ ಕತ್ತರಿಸಿದನು. ಅವನ ಆ ಕೈಚಳಕವನ್ನು ನೋಡಿ ನಕ್ಕ ದ್ವಿಜಸತ್ತಮನು ಎಂಟು ಸನ್ನತಪರ್ವ ವಿಶಿಖಗಳನ್ನು ಪ್ರಯೋಗಿಸಿದನು. ದ್ರೋಣನಿಂದ ಬಿಡಲ್ಪಟ್ಟ ಆ ಶರಗಳು ಬೀಳುವುದನ್ನು ನೋಡಿ ಬೃಹತ್ಕ್ಷತ್ರನು ಅವುಗಳನ್ನು ದೃಢವಾದ ಮತ್ತು ನಿಶಿತ ಶರಗಳಿಂದಲೇ ತಡೆದುಬಿಟ್ಟನು. ಆಗ ಬೃಹತ್ಕ್ಷತ್ರನು ಮಾಡಿದ ಆ ಸುದುಷ್ಕರ ಕೆಲಸವನ್ನು ನೋಡಿ ಕೌರವ ಸೈನ್ಯವು ವಿಸ್ಮಯಗೊಂಡಿತು. ಮಹಾತಪ ದ್ರೋಣನು ರಣದಲ್ಲಿ ಕೇಕಯನನ್ನು ಮೀರಿಸುತ್ತಾ ದಿವ್ಯ ಬ್ರಹ್ಮಾಸ್ತ್ರವನ್ನು ಹೂಡಿ ಪ್ರಯೋಗಿಸಿದನು. ಮಹಾಬಾಹು ಕೈಕೇಯನು ರಣದಲ್ಲಿ ಅದನ್ನು ತಿರುಗಿ ಬ್ರಹ್ಮಾಸ್ತ್ರದಿಂದಲೇ ತಡೆದನು. ಸಂಯುಗದಲ್ಲಿ ಭಾರದ್ವಾಜನ ಆ ಅಸ್ತ್ರವನ್ನು ಪ್ರತಿಸಂಹರಿಸಿ ಬೃಹತ್ಕ್ಷತ್ರನು ಆ ಬ್ರಾಹ್ಮಣನನ್ನು ಅರವತ್ತು ಸ್ವರ್ಣಪುಂಖ ಶಿಲಾಶಿತಗಳಿಂದ ಹೊಡೆದನು.
ದ್ರೋಣನು ಅವನನ್ನು ನಾರಾಚದಿಂದ ಹೊಡೆಯಲು ಅದು ಅವನ ಕವಚವನ್ನು ಭೇದಿಸಿ ಧರಣೀತಲವನ್ನು ಪ್ರವೇಶಿಸಿತು. ಕೃಷ್ಣಸರ್ಪವು ಹೇಗೆ ಹುತ್ತದಿಂದ ಹೊರಬರುತ್ತದೆಯೋ ಹಾಗೆ ಆಹವದಲ್ಲಿ ಆ ಬಾಣವು ಕೈಕೇಯನನ್ನು ಭೇದಿಸಿ ಭೂಮಿಯನ್ನು ಹೊಕ್ಕಿತು. ಅಸ್ತ್ರವಿದ ದ್ರೋಣನಿಂದ ಹಾಗೆ ತುಂಬಾ ಗಾಯಗೊಂಡ ಬೃಹತ್ಕ್ಷತ್ರನು ಮಹಾ ಕ್ರೋಧದಿಂದ ಆವಿಷ್ಟನಾಗಿ ಶುಭನಯನಗಳನ್ನು ತಿರುಗಿಸುತ್ತಾ ದ್ರೋಣನನ್ನು ಎಪ್ಪತ್ತು ಸ್ವರ್ಣಪುಂಖ ಶಿಲಾಶಿತಗಳಿಂದ ಹೊಡೆದನು ಮತ್ತು ಭಲ್ಲದಿಂದ ಅವನ ಸಾರಥಿಯ ಬಾಹು-ಎದೆಗಳಿಗೆ ಹೊಡೆದನು. ಬೃಹತ್ಕ್ಷತ್ರನಿಂದ ಬಹುವಾಗಿ ಗಾಯಗೊಂಡ ದ್ರೋಣನಾದರೋ ಕೇಕಯನ ರಥದ ಮೇಲೆ ತೀಕ್ಷ್ಣ ವಿಶಿಖಗಳನ್ನು ಬಿಟ್ಟನು. ಮಹಾರಥ ಬೃಹತ್ಕ್ಷತ್ರನನ್ನು ವ್ಯಾಕುಲಗೊಳಿಸಿ ದ್ರೋಣನು ಕೇಕಯನ ಮೇಲೆ ತೀಕ್ಷ್ಣ ಸಾಯಕವನ್ನು ಪ್ರಯೋಗಿಸಿದನು. ಅದು ಅವನ ಎದೆಯನ್ನು ಗಾಢವಾಗಿ ಚುಚ್ಚಿಕೊಳ್ಳಲು ಪುರುಷಶಾರ್ದೂಲ ಬೃಹತ್ಕ್ಷತ್ರನು ಹೃದಯವು ಒಡೆದು ರಥದಿಂದ ಕೆಳಕ್ಕೆ ಬಿದ್ದನು.
ಚೇದಿರಾಜ ಧೃಷ್ಟಕೇತುವಿನ ವಧೆ
ಕೇಕಯರ ಮಹಾರಥ ಬೃಹತ್ಕ್ಷತ್ರನು ಹತನಾಗಲು ಶಿಶುಪಾಲನ ಮಗ ಧೃಷ್ಟಕೇತುವು ಸುಸಂಕ್ರುದ್ಧನಾಗಿ ತನ್ನ ಸಾರಥಿಗೆ ಹೇಳಿದನು: “ಸಾರಥೇ! ಕೇಕಯರೆಲ್ಲರನ್ನೂ ಮತ್ತು ಪಾಂಚಾಲರ ವಾಹಿನಿಯನ್ನೂ ಸಂಹರಿಸಿ ಕವಚಧರಿಸಿದ ದ್ರೋಣನು ಎಲ್ಲಿ ನಿಂತಿರುವನೋ ಅಲ್ಲಿಗೆ ರಥವನ್ನೊಯ್ಯಿ!”
ಅವನ ಆ ಮಾತನ್ನು ಕೇಳಿ ಸಾರಥಿಯು ರಥಿಗಳಲ್ಲಿ ಶ್ರೇಷ್ಠ ಧೃಷ್ಟಕೇತುವನ್ನು ಕಾಂಬೋಜದ ವೇಗಯುಕ್ತ ಕುದುರೆಗಳ ಸಹಾಯದಿಂದ ದ್ರೋಣನಿದ್ದಲ್ಲಿಗೆ ತಲುಪಿಸಿದನು. ಚೇದಿಗಳ ವೃಷಭ, ಅತಿಬಲೋದಿತ ಧೃಷ್ಟಕೇತುವಾದರೋ ಬೆಂಕಿಯನ್ನು ಹೊಗುವ ಪತಂಗದಂತೆ ಒಮ್ಮೆಲೇ ದ್ರೊಣನ ಮೇಲೆ ಎರಗಿದನು. ಅಶ್ವ-ರಥ-ಧ್ವಜಗಳೊಂದಿಗೆ ದ್ರೋಣನನ್ನು ಅರವತ್ತು ಬಾಣಗಳಿಂದ ಹೊಡೆದು ಅವನು ಮಲಗಿರುವ ಹುಲಿಯನ್ನು ತಿವಿದು ಎಬ್ಬಿಸುವಂತೆ ಪುನಃ ಇತರ ತೀಕ್ಷ್ಣ ಶರಗಳಿಂದ ಹೊಡೆದನು. ಆಗ ಹೋರಾಡುತ್ತಿದ್ದ ರಾಜರಲ್ಲಿಯೇ ಬಲಶಾಲೀ ಧೃಷ್ಟಕೇತುವಿನ ಧನುಸ್ಸನ್ನು ಮಧ್ಯದಲ್ಲಿಯೇ ದ್ರೋಣನು ತುಂಡರಿಸಿದನು. ಆಗ ಮಹಾರಥ ಶೈಶುಪಾಲಿಯು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಪುನಃ ದ್ರೋಣನನ್ನು ನಿಶಿತವಾದ ದೃಢ ಸಾಯಕಗಳಿಂದ ಹೊಡೆದನು. ಮಹಾಬಲ ದ್ರೋಣನು ಅವನ ಕುದುರೆಗಳನ್ನೂ ಸಾರಥಿಯನ್ನೂ ಸಂಹರಿಸಿ, ಧೃಷ್ಟಕೇತುವಿನ ಮೇಲೆ ಇಪ್ಪತ್ತೈದು ಸಾಯಕಗಳನ್ನು ಪ್ರಯೋಗಿಸಿದನು. ರಣದಲ್ಲಿ ರಥ-ಧನುಸ್ಸುಗಳನ್ನು ಕಳೆದುಕೊಂಡ ಚೇದಿರಾಜನೂ ಕೂಡ ಸಂಕ್ರುದ್ಧನಾಗಿ ಭಾರಧ್ವಾಜನ ರಥದ ಮೇಲೆ ಗದೆಯನ್ನು ಎಸೆದನು. ಒಮ್ಮೆಲೇ ಬೀಳುತ್ತಿರುವ ಆ ಘೋರರೂಪದ ಭಯಾವಹ ಉಕ್ಕಿನಿಂದ ಮಾಡಲ್ಪಟ್ಟ ಭಾರವಾದ ಬಂಗಾರದಿಂದ ವಿಭೂಷಿತವಾದ ಗದೆಯನ್ನು ಭಾರದ್ವಾಜನು ಒಂದೇ ಶರದಿಂದ ಸಹಸ್ರ ಚೂರುಗಳನ್ನಾಗಿಸಿ ಬೀಳಿಸಿದನು. ಭಾರದ್ವಾಜನಿಂದ ಒಡೆಯಲ್ಪಟ್ಟ ಆ ಗದೆಯು ಕೆಂಪುಮಾಲೆಯನ್ನು ಧರಿಸಿದ ನಭಸ್ತಲದಿಂದ ತಾರೆಯು ಬೀಳುವಂತೆ ಭೂಮಿಯ ಮೇಲೆ ಬಿದ್ದಿತು.
ಗದೆಯು ನಾಶವಾದುದನ್ನು ನೋಡಿ ಅಮರ್ಷಣ ಧೃಷ್ಟಕೇತುವು ತಕ್ಷಣವೇ ಬಂಗಾರದಂತೆ ಪ್ರಜ್ವಲಿಸುತ್ತಿರುವ ತೋಮರ ಶಕ್ತಿಯನ್ನು ಎಸೆದನು. ದ್ರೋಣನಾದರೋ ಮಹಾರಣದಲ್ಲಿ ಆ ತೋಮರವನ್ನು ಮೂರು ಬಾಣಗಳಿಂದ ತುಂಡರಿಸಿ ಕೂಡಲೇ ಪಳಗಿದ ಕೈಯುಳ್ಳ ಮಹಾಬಲನು ಶಕ್ತಿಯನ್ನೂ ಕತ್ತರಿಸಿದನು. ಆಗ ಧೃಷ್ಟಕೇತುವಿನ ವಧೆಯನ್ನು ಬಯಸಿದ ಪ್ರತ್ಮವಾನ್ ಭಾರದ್ವಾಜನು ಅವನ ವಧೆಗೋಸ್ಕರ ತೀಕ್ಷ್ಣ ವಿಶಿಖವನ್ನು ಪ್ರಯೋಗಿಸಿದನು. ಆ ಅಮಿತೌಜಸ ಬಾಣವು ಅವನ ಕವಚವನ್ನು ಭೇದಿಸಿ ಹೃದಯವನ್ನು ಸೀಳಿ ಹಂಸವು ಪದ್ಮಸರೋವರವನ್ನು ಹೇಗೋ ಹಾಗೆ ಭೂಮಿಯನ್ನು ಸೇರಿತು. ಹಸಿದ ಹಲ್ಲಿಯು ಪತಂಗವನ್ನು ಹೇಗೆ ನುಂಗಿಬಿಡುತ್ತದೆಯೋ ಹಾಗೆ ಆ ಮಹಾರಣದಲ್ಲಿ ಶೂರ ದ್ರೋಣನು ಧೃಷ್ಟಕೇತುವನ್ನು ನುಂಗಿಬಿಟ್ಟನು.
ಚೇದಿರಾಜನು ಹೀಗೆ ಹತನಾಗಲು ಅವನ ಪರಮಾಸ್ತ್ರಗಳನ್ನು ತಿಳಿದಿದ್ದ ಮಗನು ತುಂಬಾ ಕೋಪದಿಂದ ಆವೇಶಗೊಂಡು ತಂದೆಯನ್ನು ಸಂಹರಿಸಿದ ದ್ರೋಣನನ್ನು ಆಕ್ರಮಣಿಸಿದನು. ಮಹಾರಣ್ಯದಲ್ಲಿ ಮಹಾವ್ಯಾಘ್ರವೊಂದು ಜಿಂಕೆಯ ಮರಿಯನ್ನು ಹೇಗೋ ಹಾಗೆ ಬಲಶಾಲೀ ದ್ರೋಣನು ಶರಗಳಿಂದ ಅವನನ್ನು ಯಮಲೋಕಕ್ಕೆ ಕಳುಹಿಸಿದನು. ಪಾಂಡವರ ಸೇನೆಯು ಹಾಗೆ ಕ್ಷೀಣವಾಗುತ್ತಿರಲು ಜರಾಸಂಧನ ವೀರ ಮಗನು ಸ್ವಯಂ ತಾನೇ ದ್ರೋಣನನ್ನು ಆಕ್ರಮಣಿಸಿದನು. ಅವನಾದರೋ ಕೂಡಲೇ ದ್ರೋಣನನ್ನು ಹರಿತ ಸಾಯಕಗಳಿಂದ ಮುಚ್ಚಿ ಮೋಡವು ಸೂರ್ಯನನ್ನು ಹೇಗೋ ಹಾಗೆ ಅವನನ್ನು ಕಾಣದಂತಾಗಿಸಿಬಿಟ್ಟನು. ಅವನ ಕೈಚಳಕವನ್ನು ನೋಡಿ ಕ್ಷತ್ರಿಯಮರ್ದನ ದ್ರೋಣನು ಕೂಡಲೇ ಅವನ ಮೇಲೆ ನೂರಾರು ಸಹಸ್ರಾರು ಸಾಯಕಗಳನ್ನು ಪ್ರಯೋಗಿಸಿದನು. ರಣದಲ್ಲಿ ರಥವನ್ನೇರಿದ್ದ ರಥಿಗಳಲ್ಲಿ ಶ್ರೇಷ್ಠ ಜರಾಸಂಧನ ಮಗನನ್ನು ಸರ್ವಧನ್ವಿಗಳೂ ನೋಡುತ್ತಿರುವಂತೆಯೇ ದ್ರೋಣನು ಸಂಹರಿಸಿದನು. ಅಂತ್ಯವು ಪ್ರಾಪ್ತವಾದಾಗ ಸರ್ವಭೂತಗಳನ್ನೂ ಅಂತಕನು ಹೇಗೆ ನುಂಗುವನೋ ಹಾಗೆ ಅಂತಕನಂತಿದ್ದ ದ್ರೋಣನನ್ನು ಯಾರ್ಯಾರು ಎದುರಿಸಿದರೋ ಅವರೆಲ್ಲರನ್ನೂ ದ್ರೋಣನು ಸಂಹರಿಸಿಬಿಟ್ಟನು. ಆಗ ಮಹೇಷ್ವಾಸ ದ್ರೋಣನು ರಣದಲ್ಲಿ ತನ್ನ ಹೆಸರನ್ನು ಕೂಗಿ ಕೇಳಿಸುತ್ತಾ ಅನೇಕ ಸಹಸ್ರ ಶರಗಳಿಂದ ಪಾಂಡವೇಯರನ್ನು ಮೂರ್ಛೆಗೊಳಿಸಿದನು. ಆಗ ಸ್ವರ್ಣಪುಂಖಗಳ ದ್ರೋಣಾಂಕಿತ ಶಿಲಾಶಿತ ಬಾಣಗಳು ರಣದ ಎಲ್ಲಕಡೆ ಮನುಷ್ಯರನ್ನು, ಆನೆಗಳನ್ನು ಮತ್ತು ಕುದುರೆಗಳನ್ನೂ ಸಂಹರಿಸಿದವು. ಶಕ್ರನ ಆಕ್ರಮಣಕ್ಕೊಳಗಾದ ಮಹಾಸುರರಂತೆ ದ್ರೋಣನಿಂದ ವಧಿಸಲ್ಪಡುತ್ತಿದ್ದ ಪಾಂಚಾಲರು, ಛಳಿಯಿಂದ ಪೀಡಿತರಾದ ಗೋವುಗಳಂತೆ ನಡುಗತೊಡಗಿದರು. ದ್ರೋಣನಿಂದ ವಧಿಸಲ್ಪಡುತ್ತಿರುವ ಪಾಂಡವರ ಸೇನೆಗಳಲ್ಲಿ ಘೋರವಾದ ಆಕ್ರಂದನವು ಕೇಳಿ ಬಂದಿತು. ಸಂಯುಗದಲ್ಲಿ ಭಾರದ್ವಾಜನ ಶರವರ್ಷಗಳಿಂದ ಪೀಡಿತರಾದ ಪಾಂಚಾಲರ ಮಹಾರಥರು ಮೊಸಳೆಯ ಬಾಯಿಗೆ ಸಿಕ್ಕ ತೊಡೆಗಳುಳ್ಳವರಂತೆ ಸ್ತಬ್ಧರಾಗಿಬಿಟ್ಟಿದ್ದರು. ಆಗ ಚೇದಿದೇಶದವರು, ಸೃಂಜಯರು ಮತ್ತು ಸೋಮಕರು ಯುದ್ಧದ ಉತ್ಸಾಹದಿಂದ ಸಂಹೃಷ್ಟರಾಗಿ ಭಾರದ್ವಾಜನನ್ನು ಆಕ್ರಮಣಿಸಿದರು. “ದ್ರೋಣನನ್ನು ಕೊಲ್ಲಿ! ದ್ರೋಣನನ್ನು ಕೊಲ್ಲಿ!” ಎಂದು ಹೇಳುತ್ತಾ ದ್ರೋಣನನ್ನು ಯಮಸದನಕ್ಕೆ ಕಳುಹಿಸಬೇಕೆಂದು ಬಯಸಿ ಪ್ರಯತ್ನಿಸುತ್ತಾ ಆ ಪುರುಷವ್ಯಾಘ್ರರು ಸರ್ವಶಕ್ತಿಯನ್ನುಪಯೋಗಿಸಿ ಮಹಾದ್ಯುತಿ ದ್ರೋಣನ ಮೇಲೆ ಎರಗಿದರು.
ಪ್ರಯತಿಸುತ್ತಿದ್ದ ಆ ವೀರರನ್ನು, ಅವರಲ್ಲೂ ವಿಶೇಷವಾಗಿ ಚೇದಿಪ್ರಮುಖರನ್ನು ಭಾರದ್ವಾಜನು ಶಿಲೀಮುಖಿಗಳಿಂದ ಯಮಲೋಕಕ್ಕೆ ಕಳುಹಿಸಿದನು. ಚೇದಿಪ್ರಮುಖರು ಕಡಿಮೆಯಾಗುತ್ತಿರುವುದನ್ನು ಕಂಡು ದ್ರೋಣನ ಸಾಯಕಗಳಿಂದ ಪೀಡಿತರಾದ ಪಾಂಚಾಲರು ನಡುಗಿದರು. ದ್ರೋಣನ ಆ ರೀತಿಯ ಕೃತ್ಯಗಳನ್ನು ನೋಡಿ ಅವರು ಧೃಷ್ಟದ್ಯುಮ್ನನ ರಥದ ಬಳಿಯಿದ್ದ ಭೀಮಸೇನನನ್ನು ಕೂಗಿ ಕರೆದರು: “ಬಹಳಷ್ಟು ತಪಸ್ಸನ್ನು ಆಚರಿಸಿದ ಈ ಬ್ರಾಹ್ಮಣನು ಕೆಟ್ಟದಾಗಿ ನಡೆದುಕೊಂಡು ಯುದ್ಧದಲ್ಲಿ ವಿಕ್ರಮದಿಂದ ಕ್ಷತ್ರಿಯರ್ಷಭರನ್ನು ಸುಡುತ್ತಿದ್ದಾನೆ! ಕ್ಷತ್ರಿಯನ ಧರ್ಮ ಯುದ್ಧ. ಬ್ರಾಹ್ಮಣನ ಧರ್ಮ ತಪಸ್ಸು. ತಪಸ್ವಿಯಾದ ಮತ್ತು ಯುದ್ಧದಲ್ಲಿ ಪಾರಂಗತನಾದವನು ಕಣ್ಣಿನ ನೋಟದಿಂದಲೇ ಸುಟ್ಟುಬಿಡಹಬಹುದು. ದ್ರೋಣನ ಅಸ್ತ್ರವೆಂಬ ಅಗ್ನಿಯು ತಾಗಿ ಅನೇಕ ಕ್ಷತ್ರಿಯರ್ಷಭರು ದುಸ್ತರವಾದ ಘೋರ ಅಗ್ನಿಯಲ್ಲಿ ಸುಟ್ಟುಹೋಗುತ್ತಿದ್ದಾರೆ. ಮಹಾದ್ಯುತಿ ದ್ರೋಣನು ಬಲವಿದ್ದಷ್ಟು, ಉತ್ಸಾಹವಿದ್ದಷ್ಟು, ಸತ್ತ್ವವಿದ್ದಷ್ಟೂ ಹೋರಾಡುತ್ತಿರುವ ನಮ್ಮ ಸೇನೆಗಳಲ್ಲಿ ಸರ್ವರನ್ನೂ ಮೂರ್ಛೆಗೊಳಿಸಿ ಸಂಹರಿಸುತ್ತಿದ್ದಾನೆ.”
ಅವರ ಆ ಮಾತನ್ನು ಕೇಳಿ ಅಲ್ಲಿಯೇ ನಿಂತಿದ್ದ ಕ್ಷತ್ರಧರ್ಮನು ಅರ್ಧಚಂದ್ರದಿಂದ ದ್ರೋಣನ ಧನುಸ್ಸನ್ನು ಬಾಣದೊಂದಿಗೆ ಕತ್ತರಿಸಿದನು. ಆಗ ಗಾಭರಿಗೊಂಡು ಕ್ಷತ್ರಿಯಮರ್ದನ ದ್ರೋಣನು ಇನ್ನೊಂದು ಹೊಳೆಯುವ ವೇಗವತ್ತರವಾದ ಬಿಲ್ಲನ್ನು ಎತ್ತಿಕೊಂಡನು. ಆಗ ಒಂದು ತೀಕ್ಷ್ಣವಾದ, ಭಾರವಾದುದನ್ನೂ ಹೊಡೆಯಬಲ್ಲ, ವಿಮಲವಾದ ಮತ್ತು ದೃಢವಾದ ಬಾಣವೊಂದನ್ನು ಹೂಡಿ ಆಚಾರ್ಯನು ಆಕರ್ಣಪೂರ್ಣವಾಗಿ ಎಳೆದು ಪ್ರಯೋಗಿಸಿದನು. ಅದು ಕ್ಷತ್ರಧರ್ಮನನ್ನು ಸಂಹರಿಸಿ ನೆಲವನ್ನು ಹೊಕ್ಕಿತು. ಅವನು ಹೃದಯವು ಒಡೆದು ವಾಹನದಿಂದ ಭೂಮಿಯ ಮೇಲೆ ಬಿದ್ದನು.
ಧೃಷ್ಟದ್ಯುಮ್ನನ ಮಗ ಕ್ಷತ್ರಧರ್ಮನು ಹಾಗೆ ಹತನಾಗಲು ಸೇನೆಗಳು ನಡುಗಿದವು. ಆಗ ಮಹಾರಥ ಚೇಕಿತಾನನು ದ್ರೋಣನ ಮೇಲೆ ಎರಗಿದನು. ಅವನನ್ನು ದ್ರೋಣನ ಎದೆಗೆ ಗುರಿಯಿಟ್ಟು ಹತ್ತು ಬಾಣಗಳಿಂದ ಹೊಡೆದನು. ನಾಲ್ಕರಿಂದ ಸಾರಥಿಯನ್ನೂ ಮತ್ತು ನಾಲ್ಕರಿಂದ ನಾಲ್ಕು ಕುದುರೆಗಳನ್ನೂ ಹೊಡೆದನು. ಆಚಾರ್ಯನು ಚೇಕಿತಾನನ ಬಲಭುಜಕ್ಕೆ ಹದಿನಾರು ಬಾಣಗಳಿಂದ ಹೊಡೆದು, ಇನ್ನೂ ಹದಿನಾರರಿಂದ ಧ್ವಜವನ್ನೂ, ಏಳರಿಂದ ಸಾರಥಿಯನ್ನೂ ಹೊಡೆದನು. ಭಾರದ್ವಾಜನ ಬಾಣಗಳಿಂದ ಹೊಡೆಯಲ್ಪಟ್ಟು ಚೇಕಿತಾನನ ಸೂತನು ಹತನಾಗಲು ಕುದುರೆಗಳು ಅವನ ರಥವನ್ನೊಯ್ದು ದಿಕ್ಕಾಪಾಲಾಗಿ ಓಡತೊಡಗಿದವು. ಸಾರಥಿಯನ್ನು ಕಳೆದುಕೊಂಡು ಒಡಿಹೋಗುತ್ತಿರುವ ಚೇಕಿತಾನನ ರಥವನ್ನು ಕಂಡು ಪಾಂಚಾಲರು ಮತ್ತು ಪಾಂಡವರನ್ನು ಮಹಾ ಭಯವು ಆವರಿಸಿತು. ರಣದಲ್ಲಿ ಶೂರರಾದ ಪಾಂಚಾಲ-ಸೃಂಜಯರು ಒಟ್ಟಿಗೇ ಸುತ್ತಲಿನಿಂದ ಆಕ್ರಮಣ ಮಾಡಲು ದ್ರೋಣನು ತುಂಬಾ ಶೋಭಿಸಿದನು. ವಯಸ್ಸಿನಲ್ಲಿ ಎಂಭತ್ತು ವರ್ಷಕ್ಕೂ ಹೆಚ್ಚಿನ, ಶ್ಯಾಮವರ್ಣದ, ಕಿವಿಯವರೆಗೂ ಇಳಿಬಿದ್ದಿದ್ದ ಬಿಳಿಕೂದಲಿನ ವೃದ್ಧ ದ್ರೋಣನು ಹದಿನಾರು ವರ್ಷದವನಂತೆ ರಣದಲ್ಲಿ ಸಂಚರಿಸುತ್ತಿದ್ದನು. ಭೀತಿಯಿಲ್ಲದೇ ಸಂಚರಿಸುತ್ತಿದ್ದ ಶತ್ರುಸೂದನ ದ್ರೋಣನನ್ನು ಶತ್ರುಗಳೂ ಕೂಡ ಇವನು ವಜ್ರಹಸ್ತ ಇಂದ್ರನೇ ಹೌದು ಎಂದು ಅಂದುಕೊಂಡರು. ಆಗ ಬುದ್ಧಿಮಾನ್ ನೃಪ ದ್ರುಪದನು ಹೇಳಿದನು: “ಲುಬ್ಧನಾಗಿರುವ ಇವನು ಹುಲಿಯು ಕ್ಷುದ್ರಮೃಗಗಳನ್ನು ಕೊಲ್ಲುವಂತೆ ಕ್ಷತ್ರಿಯರನ್ನು ಸಂಹರಿಸುತ್ತಾನೆ. ಯಾರ ಲೋಭದಿಂದಾಗಿ ಈ ಸಮರದಲ್ಲಿ ಕ್ಷತ್ರಿಯರ್ಷಭರು ಹತರಗುತ್ತಿದ್ದಾರೋ ಆ ದುರ್ಮತಿ ದುರ್ಯೋಧನನು ಪಾಪ ಲೋಕಗಳನ್ನೂ ಕಷ್ಟಗಳನ್ನು ಅನುಭವಿಸುತ್ತಾನೆ. ಅವನಿಂದಾಗಿಯೇ ಈ ಕ್ಷತ್ರಿಯರು ಗಾಯಗೊಂಡ ಗೂಳಿಗಳಂತೆ ರಕ್ತದಿಂದ ತೋಯ್ದು ಭೂಮಿಯ ಮೇಲೆ ಮಲಗಿ ನಾಯಿ-ನರಿಗಳ ಪಾಲಾಗಿದ್ದಾರೆ!”
ಹೀಗೆ ಹೇಳಿ ಅಕ್ಷೌಹಿಣೀಪತಿ ದ್ರುಪದನು ರಣದಲ್ಲಿ ಪಾರ್ಥರನ್ನು ಮುಂದಿಟ್ಟುಕೊಂಡು ದ್ರೋಣನನ್ನು ಆಕ್ರಮಣಿಸಿದನು.