ಶ್ರೀಮತ್ಸ್ಯಮಹಾಪುರಾಣ ಅಧ್ಯಾಯ 4
ಮನುರುವಾಚ । ಅಹೋ ಕಷ್ಟತರಂ ಚೈತದಂಗಜಾಗಮನಂ ವಿಭೋ । ಕಥಂ ನ ದೋಷಮಗಮತ್ಕರ್ಮಣಾನೇನ ಪದ್ಮಭೂಃ ।। 1 ।। ಪರಸ್ಪರಂ ಚ ಸಂಬಂಧಃ ಸಗೋತ್ರಾಣಾಮಭೂತ್ಕಥಮ್ । ವೈವಾಹಿಕಸ್ತತ್ಸುತಾನಾಂ ಛಿಂಧಿ ಮೇ ಸಂಶಯಂ ವಿಭೋ ।। 2 ।।
ಮನುವು ಹೇಳಿದನು: “ವಿಭೋ! ಅಹೋ ಕಷ್ಟವೇ! ಶರೀರದಿಂದ ಹುಟ್ಟಿದ ಮಗಳೊಂದಿಗೆ ಹೀಗಿರುವುದು ಹೇಗೆ? ಈ ಕರ್ಮದಿಂದ ಪದ್ಮಜ ಬ್ರಹ್ಮನು ಹೇಗೆ ತಾನೇ ದೋಷವನ್ನು ಹೊಂದಲಿಲ್ಲ? ಸಗೋತ್ರ ಮಕ್ಕಳಿಗೆ ಪರಸ್ಪರ ವಿವಾಹ ಸಂಬಂಧವು ಹೇಗೆ ಆಯಿತು? ವಿಭೋ! ನನ್ನ ಈ ಸಂಶಯವನ್ನು ಹೋಗಲಾಡಿಸು.”
ಮತ್ಸ್ಯ ಉವಾಚ । ದಿವ್ಯೇಯಮಾದಿಸೃಷ್ಟಿಸ್ತು ರಜೋಗುಣಸಮುದ್ಭವಾ । ಅತೀಂದ್ರಿಯೇಂದ್ರಿಯಾ ತದ್ವದತೀಂದ್ರಿಯಶರೀರಿಕಾ ।। 3 ।। ದಿವ್ಯತೇಜೋಮಯೀ ಭೂಪ ದಿವ್ಯಜ್ಞಾನಸಮುದ್ಭವಾ । ನ ಮರ್ತ್ಯೈರಭಿತಃ ಶಕ್ಯಾ ವಕ್ತುಂ ವೈ ಮಾಂಸಚಕ್ಷುಭಿಃ ।। 4 ।। ಯಥಾ ಭುಜಂಗಾಃ ಸರ್ಪಾಣಾಮಾಕಾಶಂ ವಿಶ್ವಪಕ್ಷಿಣಾಮ್ । ವಿದಂತಿ ಮಾರ್ಗಂ ದಿವ್ಯಾನಾಂ ದಿವ್ಯಾ ಏವ ನ ಮಾನವಾಃ ।। 5 ।। ಕಾರ್ಯಾಕಾರ್ಯೇ ನ ದೇವಾನಾಂ ಶುಭಾಶುಭಫಲಪ್ರದೇ । ಯಸ್ಮಾತ್ತಸ್ಮಾನ್ನ ರಾಜೇಂದ್ರ ತದ್ವಿಚಾರೋ ನೃಣಾಂ ಶುಭಃ ।। 6 ।।
ಮತ್ಸ್ಯನು ಹೇಳಿದನು: “ರಜೋಗುಣ ಸಮುದ್ಭವವಾದ ಈ ಆದಿಸೃಷ್ಟಿಯು ದಿವ್ಯವಾದುದು, ಅಮಾನುಷವಾದುದು. ಅದನ್ನು ಅರಿಯುವುದು ಇಂದ್ರಿಯಗಳಿಗೆ ಮೀರಿದ ಕೆಲಸ. ಹಾಗೆಯೇ ಆ ಶರೀರಗಳೂ ಇಂದ್ರಿಯ ಜ್ಞಾನಕ್ಕೆ ನಿಲುಕದಂಥವು. ಭೂಪ! ದಿವ್ಯ ತೇಜೋಮಯವಾದ ಈ ಸೃಷ್ಟಿಯು ದಿವ್ಯಜ್ಞಾನದಿಂದ ಆದುದು. ಅದನ್ನು ವಿವರಿಸಲು ಮಾಂಸದ ಕಣ್ಣುಗಳಿರುವ ಮನುಷ್ಯರಿಗೆ ಸಾಧ್ಯವಿಲ್ಲ. ಸರ್ಪಗಳ ಮಾರ್ಗವನ್ನು ಸರ್ಪಗಳೂ, ಆಕಾಶಮಾರ್ಗವನ್ನು ಪಕ್ಷಿಗಳೂ ಅರಿಯುವಂತೆ ದಿವ್ಯ ಪುರುಷರ ಚರಿತ್ರೆಯು ದಿವ್ಯಪುರುಷರಿಗೇ ಗೊತ್ತು. ಮಾನವರಿಗಲ್ಲ. ದೇವತೆಗಳು ಮಾಡುವ ಕಾರ್ಯ-ಅಕಾರ್ಯಗಳು ಅವರಿಗೆ ಶುಭ-ಅಶುಭ ಫಲಗಳನ್ನು ಕೊಡುವುದಿಲ್ಲ. ರಾಜೇಂದ್ರ! ಆದ್ದರಿಂದ ಆ ವಿಷಯದ ವಿಮರ್ಶೆಯು ಮನುಷ್ಯರಿಗೆ ಹಿತವಲ್ಲ.
ಅನ್ಯಚ್ಚ ಸರ್ವವೇದಾನಾಮಧಿಷ್ಠಾತಾ ಚತುರ್ಮುಖಃ । ಗಾಯತ್ರೀ ಬ್ರಹ್ಮಣಸ್ತದ್ವದಂಗಭೂತಾ ನಿಗದ್ಯತೇ ।। 7 ।। ಅಮೂರ್ತಂ ಮೂರ್ತಿವದ್ವಾಪಿ ಮಿಥುನಂ ತತ್ಪ್ರಚಕ್ಷತೇ । ವಿರಿಂಚಿರ್ಯತ್ರ ಭಗವಾಂಸ್ತತ್ರ ದೇವೀ ಸರಸ್ವತೀ । ಭಾರತೀ ಯತ್ರ ಯತ್ರೈವ ತತ್ರ ತತ್ರ ಪ್ರಜಾಪತಿಃ ।। 8 ।। ಯಥಾ ರವೇಶ್ಚ ರಹಿತಾ ಛಾಯಾ ನೋ ದೃಶ್ಯತೇ ಕ್ವಚಿತ್ । ಗಾಯತ್ರೀ ಬ್ರಹ್ಮಣಃ ಪಾರ್ಶ್ವಂ ತಥೈವ ನ ವಿಮುಂಚತಿ ।। 9 ।। ವೇದರಾಶಿಃ ಸ್ಮೃತೋ ಬ್ರಹ್ಮಾ ಸಾವಿತ್ರೀ ತದಧಿಷ್ಠಿತಾ । ತಸ್ಮಾನ್ನ ಕಶ್ಚಿದ್ದೋಷಃ ಸ್ಯಾತ್ಸಾವಿತ್ರೀಗಮನೇ ವಿಭೋ ।। 10 ।।
ಇದಲ್ಲದೇ ಚತುರ್ಮುಖ ಬ್ರಹ್ಮನು ಅಧಿದೇವತೆ. ಅವನ ಅಂಗಜಾತೆಯಾದ ಗಾಯತ್ರಿಯೂ ಕೂಡ ಹಾಗೆಯೇ. ಆದ್ದರಿಂದ ವೇದಾಭಿಮಾನ ದೇವತೆಗಳಿಬ್ಬರೂ ಒಂದುಗೂಡಿದಂತಾಯಿತು. ಬ್ರಹ್ಮ-ಸರಸ್ವತಿಯರು ಸಾಕಾರರಾಗಿರಲಿ ಅಥವಾ ನಿರಾಕಾರರಾಗಿರಲಿ – ಅವಿನಾಭಾವ ಸಂಬಂಧದಿಂದ ದಂಪತಿಗಳೆನಿಸಿಕೊಳ್ಳುತ್ತಾರೆ. ಭಗವಾನ್ ಬ್ರಹ್ಮನು ಎಲ್ಲಿ ಇರುವನೋ ಅಲ್ಲಿ ಸರಸ್ವತೀ ದೇವಿಯೂ ಇರುತ್ತಾಳೆ. ಭಾರತೀ ಸರಸ್ವತಿಯು ಎಲ್ಲಿರುವಳೋ ಅಲ್ಲಿ ಪ್ರಜಾಪತಿ ಬ್ರಹ್ಮನೂ ಇರುತ್ತಾನೆ. ಹೇಗೆ ಛಾಯೆಯು ಸೂರ್ಯನನ್ನು ಅಗಲದೇ ಇರುತ್ತಾಳೋ ಹಾಗೆಯೇ ಗಾಯತ್ರಿಯೂ ಕೂಡ ಬ್ರಹ್ಮನ ಸಮೀಪವನ್ನು ಬಿಟ್ಟಿರದೇ ಇರುತ್ತಾಳೆ. ಬ್ರಹ್ಮನು ವೇದರಾಶಿ. ಸಾವಿತ್ರಿಯು ಅದರ ಅಧಿದೇವತೆ. ವಿಭೋ! ಆದ್ದರಿಂದ ಸಾವಿತ್ರೀಸಮಾಗಮದಿಂದ ಬ್ರಹ್ಮನಿಗೆ ಯಾವ ದೋಷವೂ ಇಲ್ಲ.
ತಥಾಪಿ ಲಜ್ಜಾವನತಃ ಪ್ರಜಾಪತಿರಭೂತ್ಪುರಾ । ಸ್ವಸುತೋಪಗಮಾದ್ಬ್ರಹ್ಮಾ ಶಶಾಪ ಕುಸುಮಾಯುಧಮ್ ।। 11 ।। ಯಸ್ಮಾನ್ಮಮಾಪಿ ಭವತಾ ಮನಃ ಸಂಕ್ಷೋಭಿತಂ ಶರೈಃ । ತಸ್ಮಾತ್ತ್ವದ್ದೇಹಮಚಿರಾದ್ರುದ್ರೋ ಭಸ್ಮೀಕರಿಷ್ಯತಿ ।। 12 ।। ತತಃ ಪ್ರಸಾದಯಾಮಾಸ ಕಾಮದೇವಶ್ಚತುರ್ಮುಖಮ್ । ನ ಮಾಮಕಾರಣೇ ಶಪ್ತುಂ ತ್ವಮಿಹಾರ್ಹಸಿ ಮಾನದ ।। 13 ।। ಅಹಮೇವಂವಿಧಃ ಸೃಷ್ಟಸ್ತ್ವಯೈವ ಚತುರಾನನ । ಇಂದ್ರಿಯಕ್ಷೋಭಜನಕಃ ಸರ್ವೇಷಾಮೇವ ದೇಹಿನಾಮ್ ।। 14 ।। ಸ್ತ್ರೀಪುಂಸೋರವಿಚಾರೇಣ ಮಯಾ ಸರ್ವತ್ರ ಸರ್ವದಾ । ಕ್ಷೋಭ್ಯಂ ಮನಃ ಪ್ರಯತ್ನೇನ ತ್ವಯೈವೋಕ್ತಂ ಪುರಾ ವಿಭೋ ।। 15 ।। ತಸ್ಮಾದನಪರಾಧೋಽಹಂ ತ್ವಯಾ ಶಪ್ತಸ್ತಥಾ ವಿಭೋ । ಕುರು ಪ್ರಸಾದಂ ಭಗವನ್ ಸ್ವಶರೀರಾಪ್ತಯೇ ಪುನಃ ।। 16 ।।
ಆದರೂ ಕೂಡ, ಪ್ರಜಾಪತಿ ಬ್ರಹ್ಮನು ಹಿಂದೆ ಸ್ವಪುತ್ರೀಗಮನ ಕ್ಕಾಗಿ ಲಜ್ಜೆಯಿಂದ ತಲೆ ತಗ್ಗಿಸಿಕೊಂಡು “ನನ್ನ ಮನಸ್ಸನ್ನೂ ಕೂಡ ಶರಗಳಿಂದ ಕ್ಷೋಭೆಗೊಳಿಸಿದುದಕ್ಕಾಗಿ ಬೇಗನೆ ನಿನ್ನ ದೇಹವನ್ನು ರುದ್ರನು ಸುಟ್ಟು ಭಸ್ಮಮಾಡುತ್ತಾನೆ” ಎಂದು ಕುಸುಮಾಯುಧ ಮನ್ಮಥನಿಗೆ ಶಾಪವನ್ನಿತ್ತನು. ಆಗ ಕಾಮದೇವನು ಚತುರ್ಮುಖನನ್ನು ಪ್ರಸನ್ನಗೊಳಿಸುತ್ತಾ ಹೇಳಿದನು: “ಮಾನದ! ಅಕಾರಣವಾಗಿ ನನ್ನನ್ನು ನೀನು ಶಪಿಸಬಾರದು. ಚತುರಾನನ! ಸರ್ವ ದೇಹಿಗಳಿಗೂ ಇಂದ್ರಿಯವಿಕಾರವನ್ನುಂಟು ಮಾಡುವುದಕ್ಕಾಗಿಯೇ ನನ್ನನ್ನು ನೀನು ಸೃಷ್ಟಿಸಿದ್ದೀಯೆ. ವಿಭೋ! ಸ್ತ್ರೀ-ಪುರುಷರ ವಿಷಯದಲ್ಲಿ ಕಾಲ-ದೇಶಗಳನ್ನು ವಿಚಾರಿಸದೇ ಸರ್ವತ್ರ ಸರ್ವದಾ ಪ್ರಯತ್ನಪಟ್ಟು ಮನಸ್ಸನ್ನು ಕ್ಷೋಭೆಗೊಳಿಸಬೇಕೆಂದು ನೀನೇ ಹಿಂದೆ ಹೇಳಿದ್ದೆ. ವಿಭೋ! ಆದ್ದರಿಂದ ನಿನ್ನಿಂದ ಶಪ್ತನಾದ ನಾನು ಅನಪರಾಧಿಯು. ಭಗವನ್! ಪುನಃ ಶರೀರವನ್ನು ಪಡೆಯುವಂತೆ ಅನುಗ್ರಹಿಸು!”
ಬ್ರಹ್ಮೋವಾಚ । ವೈವಸ್ವತೇಽಂತರೇ ಪ್ರಾಪ್ತೇ ಯಾದವಾನ್ವಯಸಂಭವಃ । ರಾಮೋ ನಾಮ ಯದಾ ಮರ್ತ್ಯೋ ಮತ್ಸತ್ತ್ವಬಲಮಾಶ್ರಿತಃ ।। 17 ।। ಅವತೀರ್ಯಾಸುರಧ್ವಂಸೀ ದ್ವಾರಕಾಮಧಿವತ್ಸ್ಯತಿ । ತದ್ಭ್ರಾತುಸ್ತತ್ಸಮಸ್ಯ ತ್ವಂ ತದಾ ಪುತ್ರತ್ವಮೇಷ್ಯಸಿ ।। 18 ।। ಏವಂ ಶರೀರಮಾಸಾದ್ಯ ಭುಕ್ತ್ವಾ ಭೋಗಾನಶೇಷತಃ । ತತೋ ಭರತವಂಶಾಂತೇ ಭೂತ್ವಾ ವತ್ಸನೃಪಾತ್ಮಜಃ ।। 19 ।। ವಿದ್ಯಾಧರಾಧಿಪತ್ಯಂ ಚ ಯಾವದಾಭೂತಸಂಪ್ಲವಮ್ । ಸುಖಾನಿ ಧರ್ಮತಃ ಪ್ರಾಪ್ಯ ಮತ್ಸಮೀಪಂ ಗಮಿಷ್ಯಸಿ ।। 20 ।।
ಬ್ರಹ್ಮನು ಹೇಳಿದನು: “ವೈವಸ್ವತ ಮನ್ವಂತರವು ಪ್ರಾಪ್ತವಾದಾಗ ಯಾದವವಂಶದಲ್ಲಿ ನನ್ನ ಸತ್ತ್ವಬಲಗಳನ್ನು ಆಶ್ರಯಿಸಿ ರಾಮ ಎಂಬ ಹೆಸರಿನ ಅಸುರಧ್ವಂಸಿ ಮನುಷ್ಯನು ಅವತರಿಸಿ ದ್ವಾರಕೆಯನ್ನು ಆಳುತ್ತಾನೆ. ಅವನ ಸಮನಾದ ಅವನ ಸಹೋದರನಿಗೆ ನೀನು ಪುತ್ರನಾಗುತ್ತೀಯೆ. ಹೀಗೆ ಶರೀರವನ್ನು ಪಡೆದು, ಸಕಲ ಭೋಗಗಳನ್ನೂ ಅನುಭವಿಸಿ, ಭರತವಂಶದ ಅಂತ್ಯದಲ್ಲಿ, ವತ್ಸರಾಜನ ಮಗನಾಗಿ, ಪ್ರಳಯದ ವರೆಗೆ ವಿದ್ಯಾಧರರ ಅಧಿಪತ್ಯವನ್ನು ನಡೆಸುತ್ತೀಯೆ. ಧರ್ಮತಃ ಸುಖಗಳನ್ನು ಹೊಂದಿ, ನನ್ನ ಸಮೀಪ ಬರುತ್ತೀಯೆ.”
ಏವಂ ಶಾಪಪ್ರಸಾದಾಭ್ಯಾಮುಪೇತಃ ಕುಸುಮಾಯುಧಃ । ಶೋಕಪ್ರಮೋದಾಭಿಯುತೋ ಜಗಾಮ ಸ ಯಥಾಗತಮ್ ।। 21 ।।
ಹೀಗೆ ಬ್ರಹ್ಮನಿಂದ ಶಾಪವನ್ನೂ ಅನುಗ್ರಹವನ್ನೂ ಪಡೆದು ಕುಸುಮಾಯುಧನು ಶೋಕ-ಸಂತೋಷಗಳೊಂದಿಗೆ ತನ್ನಿಷ್ಟದಂತೆ ತೆರಳಿದನು.”
ಮನುರುವಾಚ । ಕೋಽಸೌ ಯದುರಿತಿ ಪ್ರೋಕ್ತೋ ಯದ್ವಂಶೇ ಕಾಮಸಂಭವಃ । ಕಥಂ ಚ ದಗ್ಧೋ ರುದ್ರೇಣ ಕಿಮಥ ಕುಸುಮಾಯುಧಃ ।। 22 ।। ಭರತಸ್ಯಾನ್ವಯೇ ತಸ್ಯ ಕಾ ಚ ಸೃಷ್ಟಿಃ ಪುರಾಭವತ್ । ಏತತ್ಸರ್ವಂ ಸಮಾಚಕ್ಷ್ವ ಮೂಲತಃ ಸಂಶಯೋ ಹಿ ಮೇ ।। 23 ।।
ಮನುವು ಹೇಳಿದನು: “ಯಾರ ವಂಶದಲ್ಲಿ ಕಾಮನು ಹುಟ್ಟಬೇಕಾಯಿತೋ ಆ ಯದುವು ಯಾರು? ಕುಸುಮಾಯುಧನನ್ನು ರುದ್ರನು ಏಕೆ ಸುಟ್ಟನು? ಹಿಂದೆ ಭರತ ಸೃಷ್ಟಿಯಲ್ಲಿ ಯಾರ್ಯಾರು ಜನಿಸಿದರು? ಇವೆಲ್ಲವನ್ನೂ ನನಗೆ ತಿಳಿಸಿ ಹೇಳು. ಈ ಮೂಲ ವಿಷಯದಲ್ಲಿಯೇ ನನಗೆ ಸಂದೇಹವಾಗಿದೆ.”
ಮತ್ಸ್ಯ ಉವಾಚ । ಯಾ ಸಾ ದೇಹಾರ್ಧಸಂಭೂತಾ ಗಾಯತ್ರೀ ಬ್ರಹ್ಮವಾದಿನೀ । ಜನನೀ ಯಾ ಮನೋರ್ದೇವೀ ಶತರೂಪಾ ಶತೇಂದ್ರಿಯಾ ।। 24 ।। ರತಿರ್ಮನಸ್ತಪೋ ಬುದ್ಧಿರ್ಮಹಾನ್ ದಿಕ್ಸಂಭ್ರಮಸ್ತಥಾ । ತತಃ ಸ ಶತರೂಪಾಯಾಂ ಸಪ್ತಾಪತ್ಯಾನ್ಯಜೀಜನತ್ ।। 25 ।। ಯೇ ಮರೀಚ್ಯಾದಯಃ ಪುತ್ರಾ ಮಾನಸಾಸ್ತಸ್ಯ ಧೀಮತಃ । ತೇಷಾಮಯಮಭೂಲ್ಲೋಕಃ ಸರ್ವಜ್ಞಾನಾತ್ಮಕಃ ಪುರಾ ।। 26 ।। ತತೋಽಸೃಜದ್ವಾಮದೇವಂ ತ್ರಿಶೂಲವರಧಾರಿಣಮ್ । ಸನತ್ಕುಮಾರಂ ಚ ವಿಭುಂ ಪೂರ್ವೇಷಾಮಪಿ ಪೂರ್ವಜಮ್ ।। 27 ।। ವಾಮದೇವಸ್ತು ಭಗವಾನಸೃಜನ್ಮುಖತೋ ದ್ವಿಜಾನ್ । ರಾಜನ್ಯಾನಸೃಜದ್ಬಾಹ್ವೋರ್ವಿಟ್ಛೂದ್ರಾನೂರುಪಾದಯೋಃ ।। 28 ।।
ಮತ್ಸ್ಯನು ಹೇಳಿದನು: “ಬ್ರಹ್ಮನು ತನ್ನ ದೇಹಾರ್ಧಸಂಭೂತೆ ಮತ್ತು ಮನುವಿನ ಜನನಿ, ಶತೇಂದ್ರಿಯೆ, ಬ್ರಹ್ಮವಾದಿನಿ, ಗಾಯತ್ರೀ ದೇವೀ ಶತರೂಪೆಯಲ್ಲಿ ರತಿ, ಮನ, ತಪಸ್ಸು, ಬುದ್ಧಿ, ಮಹತ್ತು, ದಿಕ್ಕು, ಮತ್ತು ಸಂಭ್ರಮಗಳೆಂಬ ಏಳು ಮಕ್ಕಳನ್ನು ಪಡೆದನು. ಹಿಂದೆ ಈ ಲೋಕವು ಮರೀಚಿಯೇ ಮೊದಲಾದ ಬ್ರಹ್ಮನ ಧೀಮತ ಮಾನಸಪುತ್ರರ ಜ್ಞಾನವೈಭವದಿಂದ ಉತ್ಪನ್ನವಾಯಿತು. ನಂತರ ಬ್ರಹ್ಮನು ಶ್ರೇಷ್ಠತ್ರಿಶೂಲಧಾರೀ ವಾಮದೇವನನ್ನು ಮತ್ತು ಹಿರಿಯವನಿಗಿಂತ ಹಿರಿಯನೆನಿಸಿದ ವಿಭು ಸನತ್ಕುಮಾರನನ್ನು ಸೃಷ್ಟಿಸಿದನು. ಭಗವಾನ್ ವಾಮದೇವನಾದರೋ ತನ್ನ ಮುಖದಿಂದ ಬ್ರಾಹ್ಮಣರನ್ನೂ, ಬಾಹುಗಳಿಂದ ಕ್ಷತ್ರಿಯರನ್ನೂ, ತೊಡೆಗಳಿಂದ ವೈಶ್ಯರನ್ನೂ, ಪಾದಗಳಿಂದ ಶೂದ್ರರನ್ನೂ ಸೃಷ್ಟಿಸಿದನು.
ವಿದ್ಯುತೋಽಶನಿಮೇಘಾಂಶ್ಚ ರೋಹಿತೇಂದ್ರಧನೂಂಷಿ ಚ । ಛಂದಾಂಸಿ ಚ ಸಸರ್ಜಾದೌ ಪರ್ಜನ್ಯಂ ಚ ತತಃ ಪರಮ್ ।। 29 ।। ತತಃ ಸಾಧ್ಯಗಣಾನೀಶಸ್ತ್ರಿನೇತ್ರಾನಸೃಜತ್ಪುನಃ । ಕೋಟೀಶ್ಚ ಚತುರಾಶೀತಿಂ ಜರಾಮರಣವರ್ಜಿತಾಃ ।। 30 ।। ವಾಮೋಽಸೃಜನ್ನಮರ್ತ್ಯಾಂಸ್ತಾನ್ ಬ್ರಹ್ಮಣಾ ವಿನಿವಾರಿತಃ । ನೈವಂವಿಧಾ ಭವೇತ್ಸೃಷ್ಟಿರ್ಜರಾಮರಣವರ್ಜಿತಾ ।। 31 ।। ಶುಭಾಶುಭಾತ್ಮಿಕಾ ಯಾ ತು ಸೈವ ಸೃಷ್ಟಿಃ ಪ್ರಶಸ್ಯತೇ । ಏವಂ ಸ್ಥಿತಃ ಸ ತೇನಾದೌ ಸೃಷ್ಟೇಃ ಸ್ಥಾಣುರತೋಽಭವತ್ ।। 32 ।।
ಅವನು ಮಿಂಚು, ಸಿಡಿಲು, ಮೋಡ, ಕಾಮನಬಿಲ್ಲು ಮತ್ತು ಛಂದಸ್ಸುಗಳನ್ನು ಮೊದಲು ಮತ್ತು ನಂತರ ಪರ್ಜನ್ಯನನ್ನು ಸೃಷ್ಟಿಸಿದನು. ನಂತರ ಈಶ್ವರನು ಮೂರುಕಣ್ಣುಗಳಿಂದ ಕೂಡಿದ, ಮುಪ್ಪು-ಸಾವುಗಳಿಲ್ಲದ 84 ಕೋಟಿ ಸಾಧ್ಯರ ಸಮೂಹವನ್ನು ಸೃಷ್ಟಿಸಿದನು. ವಾಮದೇವನು ಹೀಗೆ ಮರಣರಹಿತರನ್ನು ಸೃಷ್ಟಿಸಲು ಬ್ರಹ್ಮನು “ಸೃಷ್ಟಿಯು ಹೀಗೆ ಮುಪ್ಪು-ಸಾವುಗಳಿಲ್ಲದೇ ಇರಬಾರದು. ಸುಖ-ದುಃಖ ರೂಪವಾಗಿಯೇ ಇರಬೇಕು. ಅದೇ ಸೃಷ್ಟಿಯ ಲಕ್ಷಣ” ಎಂದು ಹೇಳಿ ಅವನನ್ನು ತಡೆದನು. ಸೃಷ್ಟಿಯ ಪ್ರಾರಂಭದಲ್ಲಿ ಹೀಗೆ ಜರಾಮರಣಗಳಿಲ್ಲದೇ ಅವನು ಉಳಿದುದರಿಂದ ಅವನಿಗೆ ಸ್ಥಾಣು ಅಂದರೆ ಸ್ಥಿರವಾಗಿರುವವನು ಎಂಬ ಹೆಸರು ಬಂದಿತು.
ಸ್ವಾಯಂಭುವೋ ಮನುರ್ಧೀಮಾಂಸ್ತಪಸ್ತಪ್ತ್ವಾ ಸುದುಶ್ಚರಮ್ । ಪತ್ನೀಮವಾಪ ರೂಪಾಢ್ಯಾಮನಂತೀಂ ನಾಮ ನಾಮತಃ ।। 33 ।। ಪ್ರಿಯವ್ರತೋತ್ತಾನಪಾದೌ ಮನುಸ್ತಸ್ಯಾಮಜೀಜನತ್ । ಧರ್ಮಸ್ಯ ಕನ್ಯಾ ಚತುರಾ ಸೂನೃತಾ ನಾಮ ಭಾಮಿನೀ ।। 34 ।। ಉತ್ತಾನಪಾದಾತ್ತನಯಾನ್ಪ್ರಾಪ ಮಂಥರಗಾಮಿನೀ । ಅಪಸ್ಯತಿಮಪಸ್ಯಂತಂ ಕೀರ್ತಿಮಂತಂ ಧ್ರುವಂ ತಥಾ ।। 35 ।। ಉತ್ತಾನಪಾದೋಽಜನಯತ್ಸೂನೃತಾಯಾಂ ಪ್ರಜಾಪತಿಃ । ಧ್ರುವೋ ವರ್ಷಸಹಸ್ರಾಣಿ ತ್ರೀಣಿ ಕೃತ್ವಾ ತಪಃ ಪುರಾ ।। 36 ।। ದಿವ್ಯಮಾಪ ತತಃ ಸ್ಥಾನಮಚಲಂ ಬ್ರಹ್ಮಣೋ ವರಾತ್ । ತಮೇವ ಪುರತಃ ಕೃತ್ವಾ ಧ್ರುವಂ ಸಪ್ತರ್ಷಯಃ ಸ್ಥಿತಾಃ ।। 37 ।।
ಧೀಮಾನ್ ಸ್ವಾಯಂಭುವ ಮನುವು ದುಶ್ಚರವಾದ ತಪಸ್ಸನ್ನು ತಪಿಸಿ ಅನಂತೀ ಎಂಬ ಹೆಸರಿನ ರೂಪಾಢ್ಯ ಪತ್ನಿಯನ್ನು ಪಡೆದನು. ಅವಳಲ್ಲಿ ಅವನು ಪ್ರಿಯವ್ರತ ಮತ್ತು ಉತ್ತಾನಪಾದರೆಂಬ ಇಬ್ಬರು ಮಕ್ಕಳನ್ನು ಪಡೆದನು. ಧರ್ಮನ ಮಗಳು, ಚತುರೆಯೂ, ಮಂಥರಗಾಮಿನಿಯೂ ಆದ ಸೂನೃತೆಯು ಉತ್ತಾನಪಾದನ ಮಕ್ಕಳನ್ನು ಪಡೆದಳು. ಪ್ರಜಾಪತಿ ಉತ್ತಾನಪಾದನು ಸೂನೃತೆಯಲ್ಲಿ ಅಪಸ್ಯತಿ, ಅಪಸ್ಯಂತ, ಕೀರ್ತಿಮಂತ ಮತ್ತು ಧ್ರುವ ಎಂಬ ಮಕ್ಕಳನ್ನು ಹುಟ್ಟಿಸಿದನು. ಹಿಂದೆ ಧ್ರುವನು ಮೂರುಸಾವಿರ ವರ್ಷಗಳ ತಪಸ್ಸನ್ನು ಮಾಡಿ ಬ್ರಹ್ಮನ ವರದಿಂದ ಅಚಲ ದಿವ್ಯ ಸ್ಥಾನವನ್ನು ಪಡೆದನು. ಸಪ್ತರ್ಷಿಗಳು ಅವನನ್ನೇ ಮುಂದೆ ಮಾಡಿಕೊಂಡು ನೆಲೆಸಿದರು.
ಧನ್ಯಾ ನಾಮ ಮನೋಃ ಕನ್ಯಾ ಧ್ರುವಾಚ್ಛಿಷ್ಟಮಜೀಜನತ್ । ಅಗ್ನಿಕನ್ಯಾ ತು ಸುಚ್ಛಾಯಾ ಶಿಷ್ಟಾತ್ಸಾ ಸುಷುವೇ ಸುತಾನ್ ।। 38 ।। ಕೃಪಂ ರಿಪುಂಜಯಂ ವೃತ್ತಂ ವೃಕಂ ಚ ವೃಕತೇಜಸಮ್ । ಚಕ್ಷುಷಂ ಬ್ರಹ್ಮದೌಹಿತ್ರ್ಯಾಂ ವೀರಿಣ್ಯಾಂ ಸ ರಿಪುಂಜಯಃ ।। 39 ।। ವೀರಣಸ್ಯಾತ್ಮಜಾಯಾಂ ತು ಚಕ್ಷುರ್ಮನುಮಜೀಜನತ್ । ಮನುರ್ವೈ ರಾಜಕನ್ಯಾಯಾಂ ನಡ್ವಲಾಯಾಂ ಸ ಚಾಕ್ಷುಷಃ ।। 40 ।। ಜನಯಾಮಾಸ ತನಯಾನ್ ದಶ ಶೂರಾನಕಲ್ಮಷಾನ್ । ಊರುಃ ಪೂರುಃ ಶತದ್ಯುಮ್ನಸ್ತಪಸ್ವೀ ಸತ್ಯವಾಗ್ಘವಿಃ ।। 41 ।। ಅಗ್ನಿಷ್ಟುದತಿರಾತ್ರಶ್ಚ ಸುದ್ಯುಮ್ನಶ್ಚಾಪರಾಜಿತಃ । ಅಭಿಮನ್ಯುಸ್ತು ದಶಮೋ ನಡ್ವಲಾಯಾಮಜಾಯತ ।। 42 ।। ಊರೋರಜನಯತ್ಪುತ್ರಾನ್ ಷಡಾಗ್ನೇಯೀ ತು ಸುಪ್ರಭಾನ್ । ಅಗ್ನಿಂ ಸುಮನಸಂ ಖ್ಯಾತಿಂ ಕ್ರತುಮಂಗಿರಸಂ ಗಯಮ್ ।। 43 ।।
ಧನ್ಯಾ ಎಂಬ ಮನುವಿನ ಕನ್ಯೆಯು ಧ್ರುವನಿಂದ ಶಿಷ್ಟನನ್ನು ಪಡೆದಳು. ಅಗ್ನಿಕನ್ಯೆ ಸುಚ್ಛಾಯೆಯು ಶಿಷ್ಟನಿಂದ ಕೃಪ, ರಿಪುಂಜಯ, ವೃತ್ತ, ವೃಕ, ಮತ್ತು ವೃಕತೇಜಸರೆಂಬ ಮಕ್ಕಳನ್ನು ಪಡೆದಳು. ಬ್ರಹ್ಮನ ಮೊಮ್ಮಗಳಾದ ವೀರಿಣಿಯಲ್ಲಿ ರಿಪುಂಜಯನಿಗೆ ಚಕ್ಷು ಎಂಬ ಮಗನಾದನು. ಚಕ್ಷುವು ವೀರಣನ ಮಗಳಲ್ಲಿ ಮನುವೆಂಬ ಮಗನನ್ನು ಪಡೆದನು. ಆ ಚಾಕ್ಷುಷ ಮನುವಿಗೆ ರಾಜಕನ್ಯೆ ನಡ್ವಲೆಯಲ್ಲಿ ಶೂರರೂ, ಅಕಲ್ಮಷರೂ ಹಾದ ಹತ್ತು ಮಕ್ಕಳು ಜನಿಸಿದರು: ಊರು, ಪೂರು, ಶತದ್ಯುಮ್ನ, ತಪಸ್ವೀ, ಸತ್ಯವಾಕ್, ಹವಿ, ಅಗ್ನಿಷ್ಟುತ್, ಅತಿರಾತ್ರ, ಸುದ್ಯುಮ್ನ, ಅಪರಾಜಿತ ಮತ್ತು ಹತ್ತನೆಯವನು ಅಭಿಮನ್ಯು. ಅಗ್ನಿಪುತ್ರಿ ಆಗ್ನೇಯಿಯು ಊರುವಿನಿಂದ ಕಾಂತಿಯುಕ್ತರಾದ ಅಗ್ನಿ, ಸುಮನಸ, ಖ್ಯಾತಿ, ಕ್ರತು, ಅಂಗಿರಸ ಮತ್ತು ಗಯರೆಂಬ ಆರು ಪುತ್ರರನ್ನು ಹೆತ್ತಳು.
ಪಿತೃಕನ್ಯಾ ಸುನೀಥಾ ತು ವೇನಮಂಗಾದಜೀಜನತ್ । ವೇನಮನ್ಯಾಯಿನಂ ವಿಪ್ರಾ ಮಮಂಥುಸ್ತತ್ಕರಾದಭೂತ್ । ಪೃಥುರ್ನಾಮ ಮಹಾತೇಜಾಃ ಸ ಪುತ್ರೌ ದ್ವಾವಜೀಜನತ್ ।। 44 ।।
ಪಿತೃಕನ್ಯೆ ಸುನೀಥೆಯು ಅಂಗನಿಂದ ವೇನನನ್ನು ಪಡೆದಳು. ಅನ್ಯಾಯಿಯಾಗಿದ್ದ ಆ ವೇನನನ್ನು ಬ್ರಾಹ್ಮಣರು ಕಡೆದರು. ಆಗ ಅವನ ಕೈಯಿಂದ ಮಹಾತೇಜಸ್ವಿಯೂ ಪ್ರಸಿದ್ಧನೂ ಆದ ಪೃಥುವು ಹುಟ್ಟಿದನು. ಅವನಿಗೆ ಇಬ್ಬರು ಮಕ್ಕಳಾದರು.
ಅಂತರ್ಧಾನಸ್ತು ಮಾರೀಚಂ ಶಿಖಂಡಿನ್ಯಾಮಜೀಜನತ್ । ಹವಿರ್ಧಾನಾತ್ ಷಡಾಗ್ನೇಯೀ ಧಿಷಣಾಽಜನಯತ್ಸುತಾನ್ । ಪ್ರಾಚೀನಬರ್ಹಿಷಂ ಸಾಂಗಂ ಯಮಂ ಶುಕ್ರಂ ಬಲಂ ಶುಭಮ್ ।। 45 ।। ಪ್ರಾಚೀನಬರ್ಹಿರ್ಭಗವಾನ್ಮಹಾನಾಸೀತ್ಪ್ರಜಾಪತಿಃ । ಹವಿರ್ಧಾನಾಃ ಪ್ರಜಾಸ್ತೇನ ಬಹವಃ ಸಂಪ್ರವರ್ತಿತಾಃ ।। 46 ।। ಸವರ್ಣಾಯಾಂ ತು ಸಾಮುದ್ರ್ಯಾಂ ದಶಾಧತ್ತ ಸುತಾನ್ಪ್ರಭುಃ । ಸರ್ವೇ ಪ್ರಚೇತಸೋ ನಾಮ ಧನುರ್ವೇದಸ್ಯ ಪಾರಗಾಃ ।। 47 ।। ತತ್ತಪೋರಕ್ಷಿತಾ ವೃಕ್ಷಾ ಬಭುರ್ಲೋಕೇ ಸಮಂತತಃ । ದೇವಾದೇಶಾಚ್ಚ ತಾನಗ್ನಿರದಹದ್ರವಿನಂದನ ।। 48 ।। ಸೋಮಕನ್ಯಾಽಭವತ್ಪತ್ನೀ ಮಾರೀಷಾ ನಾಮ ವಿಶ್ರುತಾ । ತೇಭ್ಯಸ್ತು ದಕ್ಷಮೇಕಂ ಸಾ ಪುತ್ರಮಗ್ರ್ಯಮಜೀಜನತ್ ।। 49 ।। ದಕ್ಷಾದನಂತರಂ ವೃಕ್ಷಾನೌಷಧಾನಿ ಚ ಸರ್ವಶಃ । ಅಜೀಜನತ್ಸೋಮಕನ್ಯಾ ನದೀಂ ಚಂದ್ರವತೀಂ ತಥಾ ।। 50 ।।
ಅಂತರ್ಧಾನನಾದರೋ ಶಿಖಂಡಿನಿಯಲ್ಲಿ ಮಾರೀಚನನ್ನು ಪಡೆದನು. ಆಗ್ನೇಯಿ ಧಿಷಣೆಗೆ ಹವಿರ್ಧಾನನಿಂದ ಪ್ರಾಚೀನಬರ್ಹಿ, ಸಾಂಗ, ಯಮ, ಶುಕ್ರ, ಬಲ ಮತ್ತು ಶುಭರೆಂಬ ಆರು ಪುತ್ರರಾದರು. ಭಗವಾನ್ ಪ್ರಾಚೀನಬರ್ಹಿಯು ಮಹಾನ್ ಪ್ರಜಾಪತಿಯಾಗಿದ್ದನು. ಅವನಿಗೆ ಹವಿರ್ಧಾನರೆಂಬ ಅನೇಕ ಪ್ರಜೆಗಳು ಆದರು. ಆ ಪ್ರಭುವು ಸಮುದ್ರಪುತ್ರಿ ಸುವರ್ಣೆಯಲ್ಲಿ ಹತ್ತು ಮಕ್ಕಳನ್ನು ಪಡೆದನು. ಅವರೆಲ್ಲರೂ ಧನುರ್ವೇದದಲ್ಲಿ ನಿಪುಣರಾಗಿ ಪ್ರಚೇತಸರೆಂದು ಪ್ರಸಿದ್ಧರಾದರು. ಅವರ ತಪೋಬಲದಿಂದ ರಕ್ಷಿಸಲ್ಪಟ್ಟ ವೃಕ್ಷಗಳು ಲೋಕದಲ್ಲೆಲ್ಲಾ ಮೆರೆದವು. ರವಿನಂದನ! ಆಗ ದೇವತೆಗಳ ಅಪ್ಪಣೆಯಂತೆ ಅಗ್ನಿಯು ಆ ವೃಕ್ಷಗಳನ್ನು ಸುಟ್ಟನು. ಮಾರೀಷಾ ಎಂದು ವಿಶ್ರುತಳಾದ ಸೋಮಕನ್ಯೆಯು ಅವರ ಪತ್ನಿಯಾದಳು. ಅವಳು ಅವರಿಂದ ದಕ್ಷ ಎನ್ನುವ ಒಬ್ಬನೇ ಪುತ್ರನನ್ನು ಪಡೆದಳು. ದಕ್ಷನ ನಂತರ ಸೋಮಕನ್ಯೆಯು ಎಲ್ಲಕಡೆ ವೃಕ್ಷಗಳನ್ನೂ, ಔಷಧಗಳನ್ನೂ, ಚಂದ್ರವತಿಯೆಂಬ ನದಿಯನ್ನೂ ಪಡೆದಳು.
ಸೋಮಾಂಶಸ್ಯ ಚ ತಸ್ಯಾಪಿ ದಕ್ಷಸ್ಯಾಶೀತಿಕೋಟಯಃ । ತಾಸಾಂ ತು ವಿಸ್ತರಂ ವಕ್ಷ್ಯೇ ಲೋಕೇ ಯಃ ಸುಪ್ರತಿಷ್ಠಿತಃ ।। 51 ।। ದ್ವಿಪದಶ್ಚಾಭವನ್ಕೇಚಿತ್ಕೇಚಿದ್ಬಹುಪದಾ ನರಾಃ । ವಲೀಮುಖಾಃ ಶಂಕುಕರ್ಣಾಃ ಕರ್ಣಪ್ರಾವರಣಾಸ್ತಥಾ ।। 52 ।। ಅಶ್ವಋಕ್ಷಮುಖಾಃ ಕೇಚಿತ್ಕೇಚಿತ್ಸಿಂಹಾನನಾಸ್ತಥಾ । ಶ್ವಸೂಕರಮುಖಾಃ ಕೇಚಿತ್ಕೇಚಿದುಷ್ಟ್ರಮುಖಾಸ್ತಥಾ ।। 53 ।। ಜನಯಾಮಾಸ ಧರ್ಮಾತ್ಮಾ ಮ್ಲೇಚ್ಛಾನ್ಸರ್ವಾನನೇಕಶಃ । ಸ ಸೃಷ್ಟ್ವಾ ಮನಸಾ ದಕ್ಷಃ ಸ್ತ್ರಿಯಃ ಪಶ್ಚಾದಜೀಜನತ್ ।। 54 ।। ದದೌ ಸ ದಶ ಧರ್ಮಾಯ ಕಶ್ಯಪಾಯ ತ್ರಯೋದಶ । ಸಪ್ತವಿಂಶತಿ ಸೋಮಾಯ ದದೌ ನಕ್ಷತ್ರಸಂಜ್ಞಿತಾಃ । ದೇವಾಸುರಮನುಷ್ಯಾದಿ ತಾಭ್ಯಸ್ಸರ್ವಮಭೂಜ್ಜಗತ್ ।। 55 ।।
ಸೋಮಾಂಶನಾದ ಆ ದಕ್ಷನ ಸೃಷ್ಟಿಗಳು 80 ಕೋಟಿ. ಲೋಕದಲ್ಲಿ ಸ್ಥಿರವಾಗಿ ನೆಲೆಸಿರುವ ಅವುಗಳ ಕುರಿತು ವಿಸ್ತಾರವಾಗಿ ಹೇಳುತ್ತೇನೆ. ಕೆಲವು ಎರಡು ಕಾಲಿನವು, ಕೆಲವು ಹಲವು ಕಾಲಿನವು. ಮನುಷ್ಯರು, ಕಪಿಗಳು, ಕತ್ತೆಗಳು, ಕಿವಿಮುಚ್ಚಿಹೋಗಿರುವ ಹಾವು ಮೊದಲಾದವುಗಳು, ಕುದುರೆ ಮತ್ತು ಕರಡಿಯ ಮುಖವುಳ್ಳವುಗಳು, ಸಿಂಹದ ಮುಖವುಳ್ಳವುಗಳು, ನಾಯಿ, ಹಂದಿ ಮತ್ತು ಒಂಟೆಯ ಮುಖದವು, ಹೀಗೆ ನಾನಾ ವಿಧವಾಗಿವೆ. ಆ ಧರ್ಮಾತ್ಮನು ಅನೇಕ ಮ್ಲೇಚ್ಛರೆಲ್ಲರನ್ನೂ ಸೃಷ್ಟಿಸಿದನು. ಹೀಗೆ ಮನಸ್ಸಿನಿಂದ ಎಲ್ಲವನ್ನೂ ಸೃಷ್ಟಿಸಿದ ನಂತರ ಅವನು ಸ್ತ್ರೀಯರನ್ನು ಹುಟ್ಟಿಸಿದನು. ಅವರಲ್ಲಿ ಹತ್ತು ಕನ್ಯೆಯರನ್ನು ಧರ್ಮನಿಗೂ, ಹದಿಮೂರು ಕನ್ಯೆಯರನ್ನು ಕಶ್ಯಪನಿಗೂ, ನಕ್ಷತ್ರವೆಂಬ ಹೆಸರಿನ 27 ಕನ್ಯೆಯರನ್ನು ಚಂದ್ರನಿಗೂ ಕೊಟ್ಟನು. ದೇವತೆಗಳು, ಅಸುರರು ಮತ್ತು ಮನುಷ್ಯರಿಂದ ಕೂಡಿದ ಜಗತ್ತೆಲ್ಲವೂ ಅವರಿಂದ ಹುಟ್ಟಿತು.””
ಇತಿ ಶ್ರೀಮಾತ್ಸ್ಯೇ ಮಹಾಪುರಾಣೇ ಆದಿಸರ್ಗೇ ಚತುರ್ಥೋಽಧ್ಯಾಯಃ ।।
ಇದು ಶ್ರೀಮತ್ಸ್ಯಮಹಾಪುರಾಣದಲ್ಲಿ ಆದಿಸರ್ಗದಲ್ಲಿ ನಾಲ್ಕನೇ ಅಧ್ಯಾಯವು.