ಶ್ರೀಮದ್ಭಾಗವತಮಹಾಪುರಾಣ, ದ್ವೀತೀಯ ಸ್ಕಂಧಃ, ಅಧ್ಯಾಯ 5: ಬ್ರಹ್ಮನಾರದಸಂವಾದಃ
ನಾರದ ಉವಾಚ । ದೇವದೇವ ನಮಸ್ತೇಽಸ್ತು ಭೂತಭಾವನ ಪೂರ್ವಜ । ತದ್ವಿಜಾನೀಹಿ ಯಜ್ಜ್ಞಾನಮಾತ್ಮತತ್ತ್ವನಿದರ್ಶನಮ್ ।। 1 ।। ಯದ್ರೂಪಂ ಯದಧಿಷ್ಠಾನಂ ಯತಃ ಸೃಷ್ಟಮಿದಂ ಪ್ರಭೋ । ಯತ್ಸಂಸ್ಥಂ ಯತ್ಪರಂ ಯಚ್ಚ ತತ್ತತ್ತ್ವಂ ವದ ತತ್ತ್ವತಃ ।। 2 ।। ಸರ್ವಂ ಹ್ಯೇತದ್ಭವಾನ್ವೇದ ಭೂತಭವ್ಯಭವತ್ಪ್ರಭುಃ । ಕರಾಮಲಕವದ್ವಿಶ್ವಂ ವಿಜ್ಞಾನಾವಸಿತಂ ತವ ।। 3 ।। ಯದ್ವಿಜ್ಞಾನೋ ಯದಾಧಾರೋ ಯತ್ಪರಸ್ತ್ವಂ ಯದಾತ್ಮಕಃ । ಏಕಃ ಸೃಜಸಿ ಭೂತಾನಿ ಭೂತೈರೇವಾತ್ಮಮಾಯಯಾ ।। 4 ।।
ನಾರದನು ಹೇಳಿದನು: “ದೇವದೇವ! ನಿನಗೆ ನಮಸ್ಕಾರ! ಭೂತಭಾವನ! ಪೂರ್ವಜ! ಆತ್ಮತತ್ತ್ವವನ್ನು ನಿದರ್ಶಿಸುವ ಜ್ಞಾನವನ್ನು ನೀನು ತಿಳಿದಿದ್ದೀಯೆ. ಪ್ರಭೋ! ಇದು ಯಾರಿಂದ ಸೃಷ್ಟಿಸಲ್ಪಟ್ಟಿದೆ? ಇದರ ರೂಪವೇನು? ಇದಕ್ಕೆ ಉಪಾದಾನ ಕಾರಣವೇನು? ಇದು ಯಾರ ಅಧಿಷ್ಠಾನದಲ್ಲಿದೆ? ಕೊನೆಯಲ್ಲಿ ಇದು ಎಲ್ಲಿಗೆ ಸೇರುತ್ತದೆ? ಆ ತತ್ತ್ವವನ್ನು ತತ್ತ್ವತಃ ಹೇಳು. ಭೂತ-ಭವಿಷ್ಯತ್-ವರ್ತಮಾನಗಳಲ್ಲಿ ಗೋಚರಿಸುವ ಎಲ್ಲವಕ್ಕೂ ಅಧಿಪತಿಯಾಗಿರುವುದರಿಂದ ಈ ಪ್ರಪಂಚದಲ್ಲಿ ನಿನಗೆ ತಿಳಿಯದೇ ಇದ್ದುದು ಯಾವುದೂ ಇಲ್ಲ. ಈ ವಿಶ್ವವು ನಿನಗೆ ಕೈಗನ್ನಡಿಯಂತೆ ಸ್ಪಷ್ಟವಾಗಿ ತಿಳಿದಿದೆ. ಯಾರಿಂದ ನಿನಗೆ ಈ ಜ್ಞಾನವುಂಟಾಯಿತು? ನಿನಗೆ ಆಶ್ರಯನಾರು? ನಿನಗೆ ಅಧಿಪತಿಯು ಯಾರು? ನಿನ್ನ ಈ ಸ್ವರೂಪವು ಯಾರಿಂದ ಉಂಟಾಯಿತು? ನೀನೊಬ್ಬನೇ ಪಂಚಭೂತಗಳನ್ನು ಸಾಧನವಾಗಿಟ್ಟುಕೊಂಡು ಸಮಸ್ತ ಪ್ರಾಣಿಗಳನ್ನೂ ನಿನ್ನದೇ ಮಾಯೆಯಿಂದ ಸೃಷ್ಟಿಸಿರುವೆಯಾ?
ಆತ್ಮನ್ಭಾವಯಸೇ ತಾನಿ ನ ಪರಾಭಾವಯನ್ಸ್ವಯಮ್ । ಆತ್ಮಶಕ್ತಿಮವಷ್ಟಭ್ಯ ಊರ್ಣನಾಭಿರಿವಾಕ್ಲಮಃ ।। 5 ।। ನಾಹಂ ವೇದ ಪರಂ ಹ್ಯಸ್ಮಿನ್ನಾಪರಂ ನ ಸಮಂ ವಿಭೋ । ನಾಮರೂಪಗುಣೈರ್ಭಾವ್ಯಂ ಸದಸತ್ಕಿಂಚಿದನ್ಯತಃ ।। 6 ।। ಸ ಭವಾನಚರದ್ಘೋರಂ ಯತ್ತಪಃ ಸುಸಮಾಹಿತಃ । ತೇನ ಖೇದಯಸೇ ನಸ್ತ್ವಂ ಪರಾಶಂಕಾಂ ಚ ಯಚ್ಛಸಿ ।। 7 ।। ಏತನ್ಮೇ ಪೃಚ್ಛತಃ ಸರ್ವಂ ಸರ್ವಜ್ಞ ಸಕಲೇಶ್ವರ । ವಿಜಾನೀಹಿ ಯಥೈವೇದಮಹಂ ಬುಧ್ಯೇಽನುಶಾಸಿತಃ ।। 8 ।।
ಜೇಡರ ಹುಳದಂತೆ ನೀನು ನಿನ್ನ ಶಕ್ತಿಯಿಂದಲೇ ಸ್ವಲ್ಪವೂ ಶ್ರಮವಿಲ್ಲದಂತೆ ನಿನ್ನ ಶರೀರದಿಂದಲೇ ಸಮಸ್ತ ಭೂತಗಳನ್ನೂ ಹುಟ್ಟಿಸಿ, ಅವನ್ನು ರಕ್ಷಿಸಿ, ಕೊನೆಗೆ ಅವುಗಳನ್ನು ಸಂಹರಿಸುತ್ತೀಯೆ. ವಿಭೋ! ನಿನಗಿಂತಲೂ ಹೆಚ್ಚಿನವರು ಯಾರೂ ಇಲ್ಲ. ನಿನ್ನ ಸಮನಾಗಿರುವವನು ಇನ್ನೊಬ್ಬನಿಲ್ಲ. ನಾಮ-ರೂಪಗಳಿಂದಲೂ, ಸತ್ತ್ವರಜಸ್ತಮೋಗುಣಗಳಿಂದಲೂ ಉತ್ತಮಾಧಮಮಧ್ಯಮಗಳಾಗಿ ಬೇರ್ಪಟ್ಟಿರುವ ಚೇತನಾಚೇತನಾತ್ಮಕವಾದ ಪ್ರಪಂಚವೆಲ್ಲವೂ ನಿನ್ನಿಂದಲೇ ನಿರ್ಮಿಸಲ್ಪಡುತ್ತದೆ. ಒಂದು ವಸ್ತುವಾದರೂ ಬೇರೊಬ್ಬರಿಂದ ನಿರ್ಮಿತವಾದಹಾಗೆ ಊಹಿಸಲೂ ಸಾಧ್ಯವಿಲ್ಲ. ಸೃಷ್ಟಿಕರ್ತನಾದ ನೀನೂ ಕೂಡ ಸುಸಮಾಹಿತನಾಗಿ ಘೋರತಪಸ್ಸನ್ನು ತಪಿಸುತ್ತಿದ್ದೆಯೆಂದು ಕೇಳಿ ನನ್ನ ಮನಸ್ಸಿನಲ್ಲಿ ಒಂದು ಶಂಕೆಯು ಉಂಟಾಗಿದೆ. ಎಲ್ಲರಿಗಿಂತಲೂ ನೀನೇ ಮೇಲಾದವನೆಂದೂ, ನಿನಗಿಂತಲೂ ಉತ್ತಮರಿಲ್ಲವೆಂದೂ ಇತರರು ನಿನ್ನನ್ನೇ ಉಪಾಸನೆ ಮಾಡಬೇಕೇ ಹೊರತು ನೀನು ಉಪಾಸನೆ ಮಾಡಬೇಕಾಗಿರುವವರು ಯಾರೂ ಇಲ್ಲವೆಂದು ನಂಬಿದ್ದೆವು. ಹೀಗಿರುವಾಗ ನೀನೂ ತಪಸ್ಸು ಮಾಡಿದೆಯೆಂದು ಕೇಳಿ ನಮ್ಮ ಮನಸ್ಸಿನಲ್ಲಿ ಸಂದೇಹವುಂಟಾಗಿದೆ. ದೇವ! ಸಮಸ್ತಕ್ಕೂ ಅಧಿಪತಿಯಾಗಿ ಸರ್ವಜ್ಞನಾಗಿರುವುದರಿಂದ ನೀನೇ ಅದರ ಕಾರಣವನ್ನು ತಿಳಿಸಿ ನನ್ನ ಸಂದೇಹವನ್ನು ನೀಗಿಸಿ ಮನಸ್ಸಿಗೆ ಸಂತೋಷವನ್ನುಂಟುಮಾಡಬೇಕು.”
ಬ್ರಹ್ಮೋವಾಚ । ಸಮ್ಯಕ್ಕಾರುಣಿಕಸ್ಯೇದಂ ವತ್ಸ ತೇ ವಿಚಿಕಿತ್ಸಿತಮ್ । ಯದಹಂ ಚೋದಿತಃ ಸೌಮ್ಯ ಭಗವದ್ವೀರ್ಯದರ್ಶನೇ ।। 9 ।। ನಾನೃತಂ ತವ ತಚ್ಚಾಪಿ ಯಥಾ ಮಾಂ ಪ್ರಬ್ರವೀಷಿ ಭೋಃ । ಅವಿಜ್ಞಾಯ ಪರಂ ಮತ್ತ ಏತಾವತ್ತ್ವಂ ಯತೋ ಹಿ ಮೇ ।। 10 ।। ಯೇನ ಸ್ವರೋಚಿಷಾ ವಿಶ್ವಂ ರೋಚಿತಂ ರೋಚಯಾಮ್ಯಹಮ್ । ಯಥಾರ್ಕೋಽಗ್ನಿರ್ಯಥಾ ಸೋಮೋ ಯಥರ್ಕ್ಷಗ್ರಹತಾರಕಾಃ ।। 11 ।।
ಬ್ರಹ್ಮನು ಹೇಳಿದನು: “ವತ್ಸ! ನಿನ್ನ ಪ್ರಶ್ನೆಯು ಯುಕ್ತವಾಗಿಯೇ ಇದೆ. ಇದು ಸಮಸ್ತ ಲೋಕಕ್ಕೂ ಹಿತವಾದುದು. ಸೌಮ್ಯ! ಭಗವಂತನ ವೀರ್ಯವನ್ನು ತೋರಿಸಿಕೊಡಲು ನೀನು ನನ್ನನ್ನು ಪ್ರಚೋದಿಸುತ್ತಿದ್ದೀಯೆ. ಭೋ! ನನ್ನ ಕುರಿತು ನೀನು ಹೇಳಿದುದು ಸುಳ್ಳಲ್ಲ. ಆದರೆ ಆ ಅಧಿಕಾರವನ್ನು ನೀಡಿರುವ ಪರಮ ಪುರುಷನು ಬೇರೊಬ್ಬನಿದ್ದಾನೆ ಎಂದು ತಿಳಿಯದೇ ನೀನು ನನ್ನನ್ನು ಪ್ರಶ್ನಿಸಿದ್ದೀಯೆ. ಯಾರ ಕಾಂತಿಯಿಂದಲೇ ಸೂರ್ಯ, ಚಂದ್ರ, ಗ್ರಹ-ನಕ್ಷತ್ರಾದಿಗಳು, ಅಗ್ನಿಯೂ ಕಾಂತಿವಿಶಿಷ್ಠರಾಗಿ ಪ್ರಕಾಶಿಸುತ್ತಾರೋ ಆ ಭಗವಂತನ ತೇಜಸ್ಸಿನಿಂದಲೇ ಈ ಸಮಸ್ತ ಲೋಕವೂ ಪ್ರಕಾಶಗೊಂಡಿದೆ. ಹೀಗೆ ಆ ಭಗವಂತನ ತೇಜಸ್ಸಿನಿಂದ ಪ್ರಕಾಶಗೊಂಡಿರುವ ಈ ವಿಶ್ವವನ್ನು ನಿಮಿತ್ತಮಾತ್ರವಾಗಿ ನಾನು ಪ್ರಕಾಶಗೊಳಿಸುತ್ತಿದ್ದೇನೆ.
ತಸ್ಮೈ ನಮೋ ಭಗವತೇ ವಾಸುದೇವಾಯ ಧೀಮಹಿ । ಯನ್ಮಾಯಯಾ ದುರ್ಜಯಯಾ ಮಾಂ ವದಂತಿ ಜಗದ್ಗುರುಮ್ ।। 12 ।। ವಿಲಜ್ಜಮಾನಯಾ ಯಸ್ಯ ಸ್ಥಾತುಮೀಕ್ಷಾಪಥೇಽಮುಯಾ । ವಿಮೋಹಿತಾ ವಿಕತ್ಥಂತೇ ಮಮಾಹಮಿತಿ ದುರ್ಧಿಯಃ ।। 13 ।। ದ್ರವ್ಯಂ ಕರ್ಮ ಚ ಕಾಲಶ್ಚ ಸ್ವಭಾವೋ ಜೀವ ಏವ ಚ । ವಾಸುದೇವಾತ್ಪರೋ ಬ್ರಹ್ಮನ್ನ ಚಾನ್ಯೋಽರ್ಥೋಽಸ್ತಿ ತತ್ತ್ವತಃ ।। 14 ।। ನಾರಾಯಣಪರಾ ವೇದಾ ದೇವಾ ನಾರಾಯಣಾಂಗಜಾಃ । ನಾರಾಯಣಪರಾ ಲೋಕಾ ನಾರಾಯಣಪರಾ ಮಖಾಃ ।। 15 ।। ನಾರಾಯಣಪರೋ ಯೋಗೋ ನಾರಾಯಣಪರಂ ತಪಃ । ನಾರಾಯಣಪರಂ ಜ್ಞಾನಂ ನಾರಾಯಣಪರಾ ಗತಿಃ ।। 16 ।।
ಯಾರ ದುರ್ಜಯ ಮಾಯೆಯಿಂದ ಮೋಹಿತರಾಗಿ ಜನರು ನನ್ನನ್ನೇ ಜಗದ್ಗುರು ಎಂದು ಹೇಳುತ್ತಾರೋ ಆ ಮಾಯಾಧೀಶನಾದ ಭಗವಾನ್ ವಾಸುದೇವನನ್ನು ನಾನು ಧ್ಯಾನಿಸಿ ವಂದಿಸುತ್ತೇನೆ. ಆ ಮಾಯೆಯಾದರೋ ಅವನ ಕಣ್ಣುಮಂದೆ ನಿಲ್ಲಲಾರದೇ ದೂರದಿಂದಲೇ ನಾಚಿ ಓಡಿಹೋಗುತ್ತದೆ. ಆದರೆ ಅಜ್ಞಾನಿಗಳು ವಿಮೋಹಿತರಾಗಿ ನಾನು- ನನ್ನದು ಎಂದು ಕೊಚ್ಚಿಕೊಳ್ಳುತ್ತಲೇ ಇರುತ್ತಾರೆ. ಬ್ರಹ್ಮನ್! ವಾಸ್ತವವಾಗಿ ವಾಸುದೇವನಿಗಿಂತ ಬೇರೆಯಾದ ಅನ್ಯ ದ್ರವ್ಯವಾಗಲೀ, ಕರ್ಮವಾಗಲೀ, ಕಾಲವಾಗಲೀ, ಸ್ವಭಾವವಾಗಲೀ ಮತ್ತು ಜೀವವೇ ಆಗಲೇ ಯಾವುದೂ ಇಲ್ಲ. ಸಮಸ್ತ ವೇದಗಳೂ ಆ ನಾರಾಯಣನನ್ನೇ ಪ್ರತಿಪಾದಿಸುತ್ತವೆ. ಸಮಸ್ತ ದೇವತೆಗಳೂ ನಾರಾಯಣನ ಶರೀರದಿಂದಲೇ ಹುಟ್ಟಿದ್ದಾರೆ. ಸಮಸ್ತ ಲೋಕವೂ ನಾರಾಯಣನಿಗೇ ಅಧೀನವಾಗಿದೆ. ಸಮಸ್ತ ಯಜ್ಞಗಳೂ ನಾರಾಯಣನ ಆರಾಧನಾರೂಪವೇ ಆಗಿವೆ. ಎಲ್ಲ ಯೋಗಗಳಿಗೆ ಲಕ್ಷ್ಯನಾಗಿರುವವನೂ ನಾರಾಯಣನೇ. ಎಲ್ಲ ತಪಸ್ಸುಗಳೂ ನಾರಾಯಣನಿಗಾಗಿಯೇ ಮಾಡಲ್ಪಡುತ್ತವೆ. ನಾರಾಯಣನೇ ಪಡೆಯಬೇಕಾದ ಪರಮ ಜ್ಞಾನವು. ನಾರಾಯಣನೇ ಪರಮ ಗತಿಯು.
ತಸ್ಯಾಪಿ ದ್ರಷ್ಟುರೀಶಸ್ಯ ಕೂಟಸ್ಥಸ್ಯಾಖಿಲಾತ್ಮನಃ । ಸೃಜ್ಯಂ ಸೃಜಾಮಿ ಸೃಷ್ಟೋಽಹಮೀಕ್ಷಯೈವಾಭಿಚೋದಿತಃ ।। 17 ।। ಸತ್ತ್ವಂ ರಜಸ್ತಮ ಇತಿ ನಿರ್ಗುಣಸ್ಯ ಗುಣಾಸ್ತ್ರಯಃ । ಸ್ಥಿತಿಸರ್ಗನಿರೋಧೇಷು ಗೃಹೀತಾ ಮಾಯಯಾ ವಿಭೋಃ ।। 18 ।। ಕಾರ್ಯಕಾರಣಕರ್ತೃತ್ವೇ ದ್ರವ್ಯಜ್ಞಾನಕ್ರಿಯಾಶ್ರಯಾಃ । ಬಧ್ನಂತಿ ನಿತ್ಯದಾ ಮುಕ್ತಂ ಮಾಯಿನಂ ಪುರುಷಂ ಗುಣಾಃ ।। 19 ।। ಸ ಏಷ ಭಗವಾಂಲ್ಲಿಂಗೈಸ್ತ್ರಿಭಿರೇತೈರಧೋಕ್ಷಜಃ । ಸ್ವಲಕ್ಷಿತಗತಿರ್ಬ್ರಹ್ಮನ್ಸರ್ವೇಷಾಂ ಮಮ ಚೇಶ್ವರಃ ।। 20 ।।
ಸಮಸ್ತ ವಸ್ತುಗಳನ್ನೂ ಸಾಕ್ಷಾತ್ಕರಿಸಬಲ್ಲ, ಸಮಸ್ತಕ್ಕೂ ನಿಯಾಮಕನಾದ, ವಿಕಾರಶೂನ್ಯನಾಗಿ ಸರ್ವಾಂತರ್ಯಾಮಿಯಾಗಿರುವ ಆ ಭಗವಂತನ ನೋಟದಿಂದಲೇ ನಾನೂ ಸೃಷ್ಟಿಸಲ್ಪಟ್ಟಿದ್ದೇನೆ. ಅವನಿಂದ ಪ್ರೇರಿತನಾಗಿ ಅವನು ಮೊದಲು ಸೃಷ್ಟಿಸಿದ ಪ್ರಪಂಚವನ್ನೇ ತಿರುಗಿ ನಾನು ಸೃಷ್ಟಿಸುತ್ತೇನೆ. ನಿರ್ಗುಣನಾದ ಭಗವಂತನು ಈ ಪ್ರಪಂಚದ ಸೃಷ್ಟಿ-ಸ್ಥಿತಿ-ಸಂಹಾರಗಳನ್ನು ನಡೆಸುವುದಕ್ಕಾಗಿ ಸತ್ತ್ವರಜಸ್ತಮಸ್ಸುಗಳೆಂಬ ಮೂರು ಗುಣಗಳನ್ನು ತನ್ನ ಮಾಯಾಶಕ್ತಿಯಿಂದ ಸ್ವೀಕರಿಸಿದ್ದಾನೆ. ಈ ಮೂರು ಗುಣಗಳು ದ್ರವ್ಯ, ಜ್ಞಾನ ಮತ್ತು ಕ್ರಿಯೆಗಳ ಆಶ್ರಯ ಪಡೆದು ಸ್ವರೂಪತಃ ನಿತ್ಯನೂ ಮುಕ್ತನೂ ಆದ ಪುರುಷನನ್ನು ಮಾಯೆಯಿಂದ ಕಾರ್ಯ, ಕಾರಣ, ಕರ್ತೃತ್ವಗಳಿಂದ ಬಂಧಿಸುತ್ತವೆ. ಬ್ರಹ್ಮನ್! ತ್ರಿಗುಣಗಳ ಆವರಣಗಳಿಂದ ತನ್ನ ಸ್ವರೂಪವನ್ನು ಚೆನ್ನಾಗಿ ಮರೆಮಾಡಿಕೊಂಡಿರುವ ಆ ಅಧೋಕ್ಷಜ ಭಗವಂತನೇ ನನ್ನ ಮತ್ತು ಎಲ್ಲರ ಈಶ್ವರನು.
ಕಾಲಂ ಕರ್ಮ ಸ್ವಭಾವಂ ಚ ಮಾಯೇಶೋ ಮಾಯಯಾ ಸ್ವಯಾ । ಆತ್ಮನ್ಯದೃಚ್ಛಯಾ ಪ್ರಾಪ್ತಂ ವಿಬುಭೂಷುರುಪಾದದೇ ।। 21 ।। ಕಾಲಾದ್ಗುಣವ್ಯತಿಕರಃ ಪರಿಣಾಮಃ ಸ್ವಭಾವತಃ । ಕರ್ಮಣೋ ಜನ್ಮ ಮಹತಃ ಪುರುಷಾಧಿಷ್ಠಿತಾದಭೂತ್ ।। 22 ।। ಮಹತಸ್ತು ವಿಕುರ್ವಾಣಾದ್ರಜಃಸತ್ತ್ವೋಪಬೃಂಹಿತಾತ್ । ತಮಃಪ್ರಧಾನಸ್ತ್ವಭವದ್ದ್ರವ್ಯಜ್ಞಾನಕ್ರಿಯಾತ್ಮಕಃ ।। 23 ।। ಸೋಽಹಂಕಾರ ಇತಿ ಪ್ರೋಕ್ತೋ ವಿಕುರ್ವನ್ಸಮಭೂತ್ತ್ರಿಧಾ । ವೈಕಾರಿಕಸ್ತೈಜಸಶ್ಚ ತಾಮಸಶ್ಚೇತಿ ಯದ್ಭಿದಾ ।। 24 ।। ದ್ರವ್ಯಶಕ್ತಿಃ ಕ್ರಿಯಾಶಕ್ತಿರ್ಜ್ಞಾನಶಕ್ತಿರಿತಿ ಪ್ರಭೋ ।
ಮಾಯಾಧೀಶನಾದ ಭಗವಂತನು ತನಗೆ ಇಚ್ಛೆಯಾದಾಗ ತನ್ನದೇ ಮಾಯೆಯಿಂದ ಕಾಲ, ಕರ್ಮ ಮತ್ತು ಸ್ವಭಾವಗಳನ್ನು ತನ್ನ ಸ್ವರೂಪಕ್ಕೆ ಅಂಟಿಸಿಕೊಂಡನು. ಅವನ ಶಕ್ತಿಯಿಂದಲೇ ಕಾಲವು ತ್ರಿಗುಣಗಳಲ್ಲಿ ಕ್ಷೋಭೆಯನ್ನುಂಟುಮಾಡಿತು. ಸ್ವಭಾವವು ಅವುಗಳನ್ನು ರೂಪಾಂತರಗೊಳಿಸಿತು. ಕರ್ಮವು ಮಹತ್ತತ್ತ್ವಕ್ಕೆ ಜನ್ಮನೀಡಿತು. ರಜೋಗುಣ ಮತ್ತು ಸತ್ತ್ವಗುಣಗಳ ವೃದ್ಧಿಯಿಂದ ಮಹತ್ತತ್ತ್ವದಲ್ಲಿ ವಿಕಾರವುಂಟಾಗಲು ಅದರಿಂದ ಜ್ಞಾನ, ಕ್ರಿಯೆ ಮತ್ತು ದ್ರವ್ಯರೂಪವಾದ ಹಾಗೂ ತಮಃಪ್ರಧಾನವಾದ ವಿಕಾರವುಂಟಾಯಿತು. ಆ ವಿಕಾರವನ್ನೇ ಅಹಂಕಾರ ಎಂದು ಕರೆಯುತ್ತಾರೆ. ಪುನಃ ಅದು ವಿಕಾರಗೊಂಡು ಜ್ಞಾನಶಕ್ತಿಯು ಪ್ರಧಾನವಾಗಿರುವ ವೈಕಾರಿಕಾಹಂಕಾರವೆಂದೂ, ಕ್ರಿಯಾಶಕ್ತಿಯು ಪ್ರಧಾನವಾಗಿರುವ ತೈಜಸಾಹಂಕಾರವೆಂದೂ, ದ್ರವ್ಯಶಕ್ತಿಯು ಪ್ರಧಾನವಾಗಿರುವ ತಾಮಸಾಹಂಕಾರವೆಂದೂ ಮೂರು ಬಗೆಯಾಯಿತು.
ತಾಮಸಾದಪಿ ಭೂತಾದೇರ್ವಿಕುರ್ವಾಣಾದಭೂನ್ನಭಃ । ತಸ್ಯ ಮಾತ್ರಾ ಗುಣಃ ಶಬ್ದೋ ಲಿಂಗಂ ಯದ್ದ್ರಷ್ಟೃದೃಶ್ಯಯೋಃ ।। 25 ।। ನಭಸೋಽಥ ವಿಕುರ್ವಾಣಾದಭೂತ್ಸ್ಪರ್ಶಗುಣೋಽನಿಲಃ । ಪರಾನ್ವಯಾಚ್ಛಬ್ದವಾಂಶ್ಚ ಪ್ರಾಣ ಓಜಃ ಸಹೋ ಬಲಮ್ ।। 26 ।। ವಾಯೋರಪಿ ವಿಕುರ್ವಾಣಾತ್ಕಾಲಕರ್ಮಸ್ವಭಾವತಃ । ಉದಪದ್ಯತ ತೇಜೋ ವೈ ರೂಪವತ್ಸ್ಪರ್ಶಶಬ್ದವತ್ ।। 27 ।। ತೇಜಸಸ್ತು ವಿಕುರ್ವಾಣಾದಾಸೀದಂಭೋ ರಸಾತ್ಮಕಮ್ । ರೂಪವತ್ಸ್ಪರ್ಶವಚ್ಚಾಂಭೋ ಘೋಷವಚ್ಚ ಪರಾನ್ವಯಾತ್ ।। 28 ।। ವಿಶೇಷಸ್ತು ವಿಕುರ್ವಾಣಾದಂಭಸೋ ಗಂಧವಾನಭೂತ್ । ಪರಾನ್ವಯಾದ್ರಸಸ್ಪರ್ಶ ಶಬ್ದರೂಪಗುಣಾನ್ವಿತಃ ।। 29 ।।
ತಾಮಸಾಹಂಕಾರದಲ್ಲಿ ವಿಕಾರವುಂಟಾಗಲು ಅದರಿಂದ ಆಕಾಶವು ಉತ್ಪನ್ನವಾಯಿತು. ಶಬ್ದವು ಆಕಾಶದ ತನ್ಮಾತ್ರೆ ಮತ್ತು ಗುಣವು. ಈ ಶಬ್ದದ ಮೂಲಕವೇ ದೃಷ್ಟಾ ಮತ್ತು ಅದೃಶ್ಯದ ಬೋಧವುಂಟಾಗುತ್ತದೆ. ಆಕಾಶದಲ್ಲಿ ವಿಕಾರವುಂಟಾಗಲು ಅದರಿಂದ ವಾಯುವಿನ ಉತ್ಪತ್ತಿಯಾಯಿತು. ಸ್ಪರ್ಶವು ವಾಯುವಿನ ಗುಣ. ಇದಲ್ಲದೆ ತನಗೆ ಕಾರಣವಾದ ಆಕಾಶದ ಗುಣ ಶಬ್ದವೂ ಇದಕ್ಕಿದೆ. ಪ್ರಾಣ, ಓಜಸ್ಸು, ಸಹನೆ ಮತ್ತು ಬಲಗಳು ವಾಯುವಿನ ರೂಪಗಳು. ಕಾಲ, ಕರ್ಮ ಮತ್ತು ಸ್ವಭಾವಗಳಿಂದ ವಾಯುವಿನಲ್ಲಿಯೂ ವಿಕಾರವುಂಟಾಗಿ ಅದರಿಂದ ತೇಜಸ್ಸಿನ ಉತ್ಪತ್ತಿಯಾಯಿತು. ರೂಪವು ತೇಜಸ್ಸಿನ ಗುಣ. ಆದರೆ ಅದರ ಕಾರಣಗಳಾದ ಆಕಾಶ ಮತ್ತು ವಾಯುಗಳ ಗುಣಗಳಾದ ಶಬ್ದ ಮತ್ತು ಸ್ಪರ್ಶಗಳೂ ತೇಜಸ್ಸಿನ ಗುಣಗಳು. ತೇಜಸ್ಸಿನ ವಿಕಾರದಿಂದ ಜಲದ ಉತ್ಪನ್ನವಾಯಿತು. ಇದರ ಪ್ರಧಾನ ಗುಣ ರಸ. ಜಲದಲ್ಲಿ ಇದಕ್ಕೆ ಕಾರಣಗಳಾದ ಅನ್ಯ ಭೂತಗಳ ಗುಣಗಳಾದ ಶಬ್ದ, ಸ್ಪರ್ಶ ಮತ್ತು ರೂಪಗಳೂ ಸೇರಿಕೊಂಡಿವೆ. ಜಲದ ವಿಕಾರದಿಂದ ಪೃಥ್ವಿಯ ಉತ್ಪನ್ನವಾಯಿತು. ಇದರ ಗುಣ ಗಂಧ. “ಕಾರಣದ ಗುಣಗಳು ಕಾರ್ಯದಲ್ಲಿ ಬರುತ್ತವೆ” ಎಂಬ ನ್ಯಾಯದಿಂದ ಶಬ್ದ, ಸ್ಪರ್ಶ, ರೂಪ, ರಸ – ಈ ನಾಲ್ಕೂ ಗುಣಗಳು ಪೃಥ್ವಿಯಲ್ಲಿವೆ.
ವೈಕಾರಿಕಾನ್ಮನೋ ಜಜ್ಞೇ ದೇವಾ ವೈಕಾರಿಕಾ ದಶ । ದಿಗ್ವಾತಾರ್ಕಪ್ರಚೇತೋಽಶ್ವಿ ವಹ್ನೀಂದ್ರೋಪೇಂದ್ರಮಿತ್ರಕಾಃ ।। 30 ।।
ವೈಕಾರಿಕ ಅಹಂಕಾರದಿಂದ ದೇವತೆಗಳು ಮತ್ತು ಇಂದ್ರಿಯಗಳಿಗೆ ಅಧಿಷ್ಠಾತೃಗಳಾದ ದಿಕ್ಕು, ವಾಯು, ಸೂರ್ಯ, ವರುಣ, ಅಶ್ವಿನೀದೇವತೆಗಳು, ಅಗ್ನಿ, ಇಂದ್ರ, ಉಪೇಂದ್ರ, ಮಿತ್ರ ಮತ್ತು ಪ್ರಜಾಪತಿ – ಈ ಹತ್ತು ದೇವತೆಗಳ ಉತ್ಪತ್ತಿಯಾಯಿತು[1].
ತೈಜಸಾತ್ತು ವಿಕುರ್ವಾಣಾದಿಂದ್ರಿಯಾಣಿ ದಶಾಭವನ್ । ಜ್ಞಾನಶಕ್ತಿಃ ಕ್ರಿಯಾಶಕ್ತಿರ್ಬುದ್ಧಿಃ ಪ್ರಾಣಶ್ಚ ತೈಜಸೌ । ಶ್ರೋತ್ರಂ ತ್ವಗ್ಘ್ರಾಣದೃಗ್ಜಿಹ್ವಾ ವಾಗ್ದೋರ್ಮೇಢ್ರಾಂಘ್ರಿಪಾಯವಃ ।। 31 ।।
ತೈಜಸಾಹಂಕಾರದಲ್ಲಿ ವಿಕಾರವುಂಟಾಗಲು ಅದರಿಂದ ಹತ್ತು ಇಂದ್ರಿಯಗಳು ಹುಟ್ಟಿದವು: ಕಿವಿ, ಚರ್ಮ, ಕಣ್ಣು, ನಾಲಿಗೆ, ಮೂಗು ಎಂಬ ಐದು ಜ್ಞಾನೇಂದ್ರಿಯಗಳು ಮತ್ತು ವಾಕ್ಕು, ಪಾಣಿ, ಪಾದ, ಗುದ ಮತ್ತು ಜನನೇಂದ್ರಿಯಗಳೆಂಬ ಐದು ಕರ್ಮೇಂದ್ರಿಯಗಳು. ಜೊತೆಗೆ ಜ್ಞಾನಶಕ್ತಿರೂಪವಾದ ಬುದ್ಧಿಯೂ, ಕ್ರಿಯಾಶಕ್ತಿರೂಪವಾದ ಪ್ರಾಣವೂ ತೈಜಸಾಹಂಕಾರದಿಂದಲೇ ಹುಟ್ಟಿದವು.[2]
ಯದೈತೇಽಸಂಗತಾ ಭಾವಾ ಭೂತೇಂದ್ರಿಯಮನೋಗುಣಾಃ । ಯದಾಯತನನಿರ್ಮಾಣೇ ನ ಶೇಕುರ್ಬ್ರಹ್ಮವಿತ್ತಮ ।। 32 ।। ತದಾ ಸಂಹತ್ಯ ಚಾನ್ಯೋನ್ಯಂ ಭಗವಚ್ಛಕ್ತಿಚೋದಿತಾಃ । ಸದಸತ್ತ್ವಮುಪಾದಾಯ ಚೋಭಯಂ ಸಸೃಜುರ್ಹ್ಯದಃ ।। 33 ।। ವರ್ಷಪೂಗಸಹಸ್ರಾಂತೇ ತದಂಡಮುದಕೇ ಶಯಮ್ । ಕಾಲಕರ್ಮಸ್ವಭಾವಸ್ಥೋ ಜೀವೋಽಜೀವಮಜೀವಯತ್ ।। 34 ।।
ಬ್ರಹ್ಮವಿತ್ತಮ! ಹೀಗೆ ಆಕಾಶಾದಿ ಭೂತಗಳೂ, ಇಂದ್ರಿಯಗಳೂ, ಮನಸ್ಸೂ, ಅವುಗಳಿಗೆ ವಿಷಯಗಳಾದ ತನ್ಮಾತ್ರೆಗಳೂ ಬೇರೆ ಬೇರೆಯಾಗಿದ್ದುದರಿಂದ ಬ್ರಹ್ಮಾಂಡದ ಸೃಷ್ಟಿಗೆ ಅವು ಅಸಮರ್ಥವಾಗಿದ್ದವು. ಆಗ ಭಗವಂತನ ಶಕ್ತಿಯಿಂದ ಪ್ರೇರಿತಗೊಂಡು ಇವು ಪಂಚೀಕರಣ[3] ಕ್ರಮವನ್ನನುಸರಿಸಿ ಒಂದಕ್ಕೊಂದು ಸಂಯೋಗವನ್ನು ಹೊಂದಿ, ಸ್ಥೂಲ-ಸೂಕ್ಷ್ಮಗಳೆಂಬ ರೂಪಭೇದದಿಂದ ಕಾಲ-ಕರ್ಮ-ಸ್ವಭಾವಗಳನ್ನನುಸರಿಸಿ, ಪಿಂಡಾಂಡ ಮತ್ತು ಬ್ರಹ್ಮಾಂಡ ಎರಡನ್ನೂ ರಚಿಸಿದವು. ಆ ಬ್ರಹ್ಮಾಂಡರೂಪವಾದ ಅಂಡವು ಒಂದು ಸಾವಿರ ವರ್ಷಕಾಲ ನಿರ್ಜೀವವಾಗಿ ನೀರಿನಲ್ಲಿ ಬಿದ್ದಿತ್ತು. ನಂತರ ಕಾಲ, ಕರ್ಮ, ಸ್ವಭಾವಗಳನ್ನು ಸ್ವೀಕರಿಸಿದ ಭಗವಂತನು ಅದನ್ನು ಜೀವಂತಗೊಳಿಸಿದನು. ಅರ್ಥಾತ್ – ಜೀವರೂಪದಿಂದ ಅದರಲ್ಲಿ ಪ್ರವೇಶಿಸಿದನು.
ಸ ಏವ ಪುರುಷಸ್ತಸ್ಮಾದಂಡಂ ನಿರ್ಭಿದ್ಯ ನಿರ್ಗತಃ । ಸಹಸ್ರೋರ್ವಂಘ್ರಿಬಾಹ್ವಕ್ಷಃ ಸಹಸ್ರಾನನಶೀರ್ಷವಾನ್ ।। 35 ।। ಯಸ್ಯೇಹಾವಯವೈರ್ಲೋಕಾನ್ಕಲ್ಪಯಂತಿ ಮನೀಷಿಣಃ । ಕಟ್ಯಾದಿಭಿರಧಃ ಸಪ್ತ ಸಪ್ತೋರ್ಧ್ವಂ ಜಘನಾದಿಭಿಃ ।। 36 ।। ಪುರುಷಸ್ಯ ಮುಖಂ ಬ್ರಹ್ಮ ಕ್ಷತ್ರಮೇತಸ್ಯ ಬಾಹವಃ । ಊರ್ವೋರ್ವೈಶ್ಯೋ ಭಗವತಃ ಪದ್ಭ್ಯಾಂ ಶೂದ್ರೋ ವ್ಯಜಾಯತ ।। 37 ।। ಭೂರ್ಲೋಕಃ ಕಲ್ಪಿತಃ ಪದ್ಭ್ಯಾಂ ಭುವರ್ಲೋಕೋಽಸ್ಯ ನಾಭಿತಃ । ಹೃದಾ ಸ್ವರ್ಲೋಕ ಉರಸಾ ಮಹರ್ಲೋಕೋ ಮಹಾತ್ಮನಃ ।। 38 ।। ಗ್ರೀವಾಯಾಂ ಜನಲೋಕೋಽಸ್ಯ ತಪೋಲೋಕಃ ಸ್ತನದ್ವಯಾತ್ । ಮೂರ್ಧಭಿಃ ಸತ್ಯಲೋಕಸ್ತು ಬ್ರಹ್ಮಲೋಕಃ ಸನಾತನಃ ।। 39 ।। ತತ್ಕಟ್ಯಾಂ ಚಾತಲಂ ಕ್ಲೄಪ್ತಮೂರುಭ್ಯಾಂ ವಿತಲಂ ವಿಭೋಃ । ಜಾನುಭ್ಯಾಂ ಸುತಲಂ ಶುದ್ಧಂ ಜಂಘಾಭ್ಯಾಂ ತು ತಲಾತಲಮ್ ।। 40 ।। ಮಹಾತಲಂ ತು ಗುಲ್ಫಾಭ್ಯಾಂ ಪ್ರಪದಾಭ್ಯಾಂ ರಸಾತಲಮ್ । ಪಾತಾಲಂ ಪಾದತಲತ ಇತಿ ಲೋಕಮಯಃ ಪುಮಾನ್ ।। 41 ।। ಭೂರ್ಲೋಕಃ ಕಲ್ಪಿತಃ ಪದ್ಭ್ಯಾಂ ಭುವರ್ಲೋಕೋಽಸ್ಯ ನಾಭಿತಃ । ಸ್ವರ್ಲೋಕಃ ಕಲ್ಪಿತೋ ಮೂರ್ಧ್ನಾ ಇತಿ ವಾ ಲೋಕಕಲ್ಪನಾ ।। 42 ।।
ಆ ಅಂಡವನ್ನು ಒಡೆದುಕೊಂಡು ಹೊರಬಂದವನೇ ಸಾವಿರತೊಡೆ, ಸಾವಿರ ಪಾದ, ಸಾವಿರ ಭುಜ, ಸಾವಿರ ನೇತ್ರ, ಸಾವಿರ ಮುಖ, ಸಾವಿರ ತಲೆಗಳುಳ್ಳ ವಿರಾಟ್ಪುರುಷನು. ವಿದ್ವಾಂಸರು ಉಪಾಸನೆಗೋಸ್ಕರ ಆ ವಿರಾಟ್ ಪುರುಷನ ಅಂಗಗಳಲ್ಲೇ ಸಮಸ್ತ ಲೋಕಗಳನ್ನೂ, ಅವುಗಳಲ್ಲಿರುವ ವಸ್ತುವನ್ನೂ ಕಲ್ಪಿಸುತ್ತಾರೆ. ಅವನ ನಡುವಿನಿಂದ ಕೆಳಗಿನ ಅಂಗಗಳಲ್ಲಿ ಏಳು ಪಾತಾಳಗಳನ್ನೂ, ಸೊಂಟದ ಮೇಲಿರುವ ಅಂಗಗಳಲ್ಲಿ ಏಳು ಸ್ವರ್ಗಗಳನ್ನೂ ಕಲ್ಪಿಸಿಕೊಳ್ಳುತ್ತಾರೆ. ಆ ವಿರಾಟ್ಪುರುಷನ ಬಾಯಿಯಿಂದ ಬ್ರಾಹ್ಮಣರೂ, ಭುಜಗಳಿಂದ ಕ್ಷತ್ರಿಯರೂ, ತೊಡೆಗಳಿಂದ ವೈಶ್ಯರೂ, ಪಾದಗಳಿಂದ ಶೂದ್ರರೂ ಜನಿಸಿದರು. ಕಾಲಿನಿಂದ ಹಿಡಿದು ಕಟಿಯ ವರೆಗೆ ಏಳು ಪಾತಾಳಗಳೂ ಮತ್ತು ಭೂಲೋಕವು ಕಲ್ಪಿತವಾಗುತ್ತದೆ. ಅವನ ನಾಭಿಯಲ್ಲಿ ಭುವರ್ಲೋಕವನ್ನೂ, ಹೃದಯದಲ್ಲಿ ಸ್ವರ್ಲೋಕವನ್ನೂ, ವಕ್ಷಃಸ್ಥಳದಲ್ಲಿ ಮಹರ್ಲೋಕವನ್ನೂ ಕಲ್ಪಿಸಲಾಗಿದೆ. ಕತ್ತಿನಲ್ಲಿ ಜನೋಲೋಕವೂ, ಎರಡು ಸ್ತನಗಳಲ್ಲಿ ತಪೋಲೋಕವೂ, ಮಸ್ತಕದಲ್ಲಿ ನನ್ನ ನಿತ್ಯನಿವಾಸಸ್ಥಾನವಾದ ಸತ್ಯಲೋಕವೂ ಭಾವಿತವಾಗಿದೆ. ಆ ವಿರಾಟ್ಪುರುಷನ ನಡುವಿನಲ್ಲಿ ಅತಲ ಲೋಕವೂ, ತೊಡೆಯಲ್ಲಿ ವಿತಲವೂ, ಮಂಡಿಗಳಲ್ಲಿ ಪವಿತ್ರವಾದ ಸುತಲಲೋಕವೂ, ಮೊಣಕಾಲುಗಳಲ್ಲಿ ತಲಾತಲಲೋಕವೂ ಕಲ್ಪಿತವಾಗಿವೆ. ಕಾಲಿನ ಹರಡುಗಳಲ್ಲಿ ಮಹಾತಲವೂ, ಪದಾಗ್ರದಲ್ಲಿ ರಸಾತಲವೂ, ಅಂಗಾಲಿನಲ್ಲಿ ಪಾತಾಳವನ್ನೂ ಭಾವಿಸುತ್ತಾರೆ. ಹೀಗೆ ವಿರಾಟ್ಪುರುಷನು ಸರ್ವಲೋಕಮಯನಾಗಿದ್ದಾನೆ. ಅಥವಾ ಆ ವಿರಾಟ್ಪುರುಷನ ಪಾದಗಳಲ್ಲಿ ಭೂಲೋಕ, ನಾಭಿಯಲ್ಲಿ ಭುವರ್ಲೋಕ, ಮತ್ತು ಶಿರಸ್ಸಿನಲ್ಲಿ ಸ್ವರ್ಲೋಕಗಳನ್ನು ಕಲ್ಪಿಸಬಹುದು.”
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಿತೀಯಸ್ಕಂಧೇ ಬ್ರಹ್ಮನಾರದಸಂವಾದೇ ಪಂಚಮೋಽಧ್ಯಾಯಃ ।।
ಇದು ಶ್ರೀಮಧ್ಬಾಗವತ ಮಹಾಪುರಾಣದಲ್ಲಿ, ಪರಮಹಂಸ ಸಂಹಿತೆಯಲ್ಲಿ ಎರಡನೇ ಸ್ಕಂಧದಲ್ಲಿ ಐದನೇ ಅಧ್ಯಾಯವು.
[1] ಕಿವಿಗೆ ಅಧಿಷ್ಠಾನ ದೇವತೆ ದಿಕ್ಕುಗಳು, ತ್ವಕ್ಕಿಗೆ ವಾಯು, ಕಣ್ಣಿಗೆ ಸೂರ್ಯ, ನಾಲಿಗೆಗೆ ವರುಣ, ಮೂಗಿಗೆ ಅಶ್ವಿನೀದೇವತೆಗಳು, ವಾಕ್ಕಿಗೆ ಇಂದ್ರ, ಪಾಣಿಗೆ ಅಗ್ನಿ, ಪಾದಕ್ಕೆ ಉಪೇಂದ್ರ, ಗುದಕ್ಕೆ ಮಿತ್ರ ಮತ್ತು ಜನನೇಂದ್ರಿಯಕ್ಕೆ ಪ್ರಜಾಪತಿ.
[2] ರಾಜಸ ಪ್ರಧಾನವಾದ ತೈಜಸಾಹಂಕಾರದಿಂದ ಚಂದ್ರನನ್ನು ಅಧಿಷ್ಠಾನ ದೇವತೆಯನ್ನಾಗುಳ್ಳ ಮನಸ್ಸೂ ಹುಟ್ಟಿತು (ಅಳಸಿಂಗರಾಚಾರ್ಯ).
[3] ಪಂಚೀಕರಣವೆಂದರೆ ಒಂದೊಂದು ಭೂತಗಳನ್ನೂ ಎರಡಾಗಿ ವಿಭಾಗಿಸಿ, ಅವುಗಳಲ್ಲಿ ಒಂದೊಂದು ಅರ್ಧಭಾಗವನ್ನೂ ತಿರುಗಿ ಐದು ಭಾಗ ಮಾಡಿ, ಆ ಐದು ಭಾಗಗಳಲ್ಲಿ ಒಂದನ್ನು ಬಿಟ್ಟು ಉಳಿದ ನಾಲ್ಕುಭಾಗಗಳನ್ನೂ ಇತರ ಭೂತಗಳಲ್ಲಿ ಒಂದೊಂದಕ್ಕೆ ಒಂದೊಂದರಂತೆ ಸೇರಿಸಿಡುವುದು. ಇದರಿಂದ ಒಂದೊಂದು ಭೂತಗಳಲ್ಲಿಯೂ ಬೇರೆ ಎಲ್ಲ ಭೂತಗಳ ಅಂಶವೂ ಸ್ವಲ್ಪ ಸ್ವಲ್ಪವಾಗಿ ಸೇರುತ್ತವೆ. ಮಹತ್ತು-ಅಹಂಕಾರಗಳೆಂಬ ಎರಡು ತತ್ತ್ವಗಳನ್ನೂ ಸೇರಿಸಿ, ಇದೇ ಕ್ರಮದಲ್ಲಿ ಮಿಶ್ರಣಮಾಡುವುದನ್ನು ಸಪ್ತೀಕರಣವೆಂದು ಹೇಳುತ್ತಾರೆ (ಶ್ರೀಅಳಸಿಂಗರಾಚಾರ್ಯ).