ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 6
ಮೈತ್ರೇಯ ಉವಾಚ । ಅರ್ವಾಕ್ಸ್ರೋತಾಸ್ತು ಕಥಿತೋ ಭವತಾ ಯಸ್ತು ಮಾನುಷಃ । ಬ್ರಹ್ಮನ್ವಿಸ್ತರತೋ ಬ್ರೂಹಿ ಬ್ರಹ್ಮಾ ತಮಸೃಜದ್ಯಥಾ ।। 1 ।। ಯಥಾ ಚ ವರ್ಣಾನಸೃಜದ್ಯದ್ಗುಣಾಂಶ್ಚ ಮಹಾಮುನೇ । ಯಚ್ಚ ತೇಷಾಂ ಸ್ಮೃತಂ ಕರ್ಮ ವಿಪ್ರಾದೀನಾಂ ತದುಚ್ಯತಾಮ್ ।। 2 ।।
ಮೈತ್ರೇಯನು ಹೇಳಿದನು: “ಬ್ರಹ್ಮನ್! ಅರ್ವಾಕ್ಸ್ರೋತವೆಂಬ ಮನುಷ್ಯ ಸೃಷ್ಟಿಯನ್ನು ಹೇಳಿದಿರಿ. ಬ್ರಹ್ಮನ ಆ ಸೃಷ್ಟಿಕ್ರಮವನ್ನು ವಿಸ್ತಾರವಾಗಿ ಹೇಳಬೇಕು. ಮಹಾಮುನೇ! ಅವನು ವರ್ಣಗಳನ್ನು ಮತ್ತು ಅವುಗಳ ಗುಣಗಳನ್ನು ಹೇಗೆ ಸೃಷ್ಟಿಸಿದನು? ವಿಪ್ರಾದಿ ವರ್ಣಗಳ ಕರ್ಮಗಳನ್ನು ಹೇಗೆ ನಿಗದಿಪಡಿಸಿದನು ಎನ್ನುವುದನ್ನು ಹೇಳಬೇಕು.”
ಪರಾಶರ ಉವಾಚ । ಸತ್ಯಾಭಿಧ್ಯಾಯಿನಃ ಪೂರ್ವಂ ಸಿಸೃಕ್ಷೋರ್ಬ್ರಹ್ಮಣೋ ಜಗತ್ । ಅಜಾಯಂತ ದ್ವಿಜಶ್ರೇಷ್ಠ ಸತ್ತ್ವೋದ್ರಿಕ್ತಾ ಮುಖಾತ್ಪ್ರಜಾಃ ।। 3 ।। ವಕ್ಷಸೋ ರಜಸೋದ್ರಿಕ್ತಾಸ್ತಥಾನ್ಯಾ ಬ್ರಹ್ಮಣೋಽಭವನ್ । ರಜಸಾ ತಮಸಾ ಚೈವ ಸಮುದ್ರಿಕ್ತಾಸ್ತಥೋರುತಃ ।। 4 ।। ಪದ್ಭ್ಯಾಮನ್ಯಾಃ ಪ್ರಜಾ ಬ್ರಹ್ಮಾ ಸಸರ್ಜ ದ್ವಿಜಸತ್ತಮ । ತಮಃಪ್ರಧಾನಾಸ್ತಾಸ್ಸರ್ವಾಶ್ಚಾತುರ್ವರ್ಣ್ಯಮಿದಂ ತತಃ ।। 5 ।। ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚ ದ್ವಿಜಸತ್ತಮ । ಪಾದೋರುವಕ್ಷಃಸ್ಥಲತೋ ಮುಖತಶ್ಚ ಸಮುದ್ಗತಾಃ ।। 6 ।। ಯಜ್ಞನಿಷ್ಪತ್ತಯೇ ಸರ್ವಮೇತದ್ಬ್ರಹ್ಮಾ ಚಕಾರ ವೈ । ಚಾತುರ್ವರ್ಣ್ಯಂ ಮಹಾಭಾಗ ಯಜ್ಞಸಾಧನಮುತ್ತಮಮ್ ।। 7 ।। ಯಜ್ಞೈರಾಪ್ಯಾಯಿತಾ ದೇವಾ ವೃಷ್ಟ್ಯುತ್ಸರ್ಗೇಣ ತಾಃ ಪ್ರಜಾಃ । ಆಪ್ಯಾಯಯಂತೇ ಧರ್ಮಜ್ಞ ಯಜ್ಞಾಃ ಕಲ್ಯಾಣಹೇತವಃ ।। 8 ।। ನಿಷ್ಪಾದ್ಯಂತೇ ನರೈಸ್ತೈಸ್ತು ಸ್ವಕರ್ಮಾಭಿರತೈಸ್ಸದಾ । ವಿಶುದ್ಧಾಚರಣೋಪೇತೈಸ್ಸದ್ಭಿಸ್ಸನ್ಮಾರ್ಗಗಾಮಿಭಿಃ ।। 9 ।। ಸ್ವರ್ಗಾಪವರ್ಗೌ ಮಾನುಷ್ಯಾತ್ಪ್ರಾಪ್ನುವಂತಿ ಮಹಾಮುನೇ । ಯಥಾಭಿರುಚಿತಂ ಸ್ಥಾನಂ ತದ್ಯಾಂತಿ ಮನುಜಾ ದ್ವಿಜ ।। 10 ।।
ಪರಾಶರನು ಹೇಳಿದನು: “ದ್ವಿಜಶ್ರೇಷ್ಠ! ಸತ್ಯ ಸಂಕಲ್ಪನಾದ ಬ್ರಹ್ಮನು ಜಗತ್ತನ್ನು ಸೃಷ್ಟಿಸಲು ಬಯಸಿದಾಗ ಅವನ ಮುಖದಿಂದ ಸತ್ತ್ವಗುಣವು ಉದ್ರಿಕ್ತವಾದ ಪ್ರಜೆಗಳೂ, ವಕ್ಷಸ್ಥಳದಿಂದ ರಜೋಗುಣವು ಉದ್ರಿಕ್ತವಾದವರೂ, ತೊಡೆಗಳಿಂದ ರಜಸ್ಸು ಮತ್ತು ತಮೋಗುಣಗಳು ಉದ್ರಿಕ್ತರಾದವರೂ, ಹಾಗೂ ಪಾದಗಳಿಂದ ತಮೋಗುಣ ಉದ್ರಿಕ್ತರಾದ ಮನುಷ್ಯರೂ ಹುಟ್ಟಿದರು. ದ್ವಿಜಸತ್ತಮ! ಇವರೇ ಮುಖ, ವಕ್ಷಸ್ಥಳ, ತೊಡೆಗಳು ಮತ್ತು ಪಾದಗಳಿಂದ ಹುಟ್ಟಿದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಮತ್ತು ಶೂದ್ರರೆಂಬ ನಾಲ್ಕು ವರ್ಣದವರಾದರು. ಮಹಾಭಾಗ! ಬ್ರಹ್ಮನು ಯಜ್ಞಾದಿ ಸರ್ವ ವೇದೋಕ್ತ ಕರ್ಮಗಳನ್ನು ಸರಿಯಾಗಿ ಮಾಡುವುದಕ್ಕಾಗಿಯೇ ಈ ನಾಲ್ಕು ವರ್ಣಗಳನ್ನು ಸೃಷ್ಟಿಸಿದನು. ಯಜ್ಞಗಳಿಂದ ದೇವತೆಗಳನ್ನು ತೃಪ್ತಿಪಡಿಸಿದರೆ, ಅವರು ಮಳೆಯನ್ನುಂಟುಮಾಡಿ ಪ್ರಜೆಗಳನ್ನು ತೃಪ್ತಗೊಳಿಸುತ್ತಾರೆ. ಧರ್ಮಜ್ಞ! ಯಜ್ಞಗಳು ಕಲ್ಯಾಣಕ್ಕೆ ಕಾರಣಗಳು. ಸದಾ ಸ್ವಕರ್ಮಗಳಲ್ಲಿ ನಿರತರಾಗಿರುವ, ವಿಶುದ್ಧ ಆಚಾರಗಳನ್ನು ಹೊಂದಿರುವ, ಸನ್ಮಾರ್ಗದಲ್ಲಿ ಹೋಗುತ್ತಿರುವ ಸತ್ಪುರುಷ ನರರು ಆ ಯಜ್ಞಗಳನ್ನು ಮಾಡುತ್ತಾರೆ. ಮಹಾಮುನೇ! ದ್ವಿಜ! ಮನುಷ್ಯರಿಂದಲೇ ಸ್ವರ್ಗ ಮತ್ತು ಮೋಕ್ಷಗಳನ್ನು ಪಡೆಯಲು ಸಾಧ್ಯ. ಮನುಷ್ಯರು ತಮಗಿಷ್ಟವಾದ ಸ್ಥಾನವನ್ನು ಪಡೆದುಕೊಳ್ಳಬಹುದು.
ಪ್ರಜಾಸ್ತಾ ಬ್ರಹ್ಮಣಾ ಸೃಷ್ಟಾಶ್ಚಾತುರ್ವರ್ಣ್ಯವ್ಯವಸ್ಥಿತೌ । ಸಮ್ಯಕ್ಛ್ರದ್ಧಾಃ ಸಮಾಚಾರಪ್ರವಣಾ ಮುನಿಸತ್ತಮ ।। 11 ।। ಯಥೇಚ್ಛಾವಾಸನಿರತಾಸ್ಸರ್ವಬಾಧಾವಿವರ್ಜಿತಾಃ । ಶುದ್ಧಾಂತಃಕರಣಾಃ ಶುದ್ಧಾಸ್ಸರ್ವಾನುಷ್ಠಾನನಿರ್ಮಲಾಃ ।। 12 ।। ಶುದ್ಧೇ ಚ ತಾಸಾಂ ಮನಸಿ ಶುದ್ಧೇಽಂತಸ್ಸಂಸ್ಥಿತೇ ಹರೌ । ಶುದ್ಧಜ್ಞಾನಂ ಪ್ರಪಶ್ಯಂತಿ ವಿಷ್ಣ್ವಾಖ್ಯಂ ಯೇನ ತತ್ಪದಮ್ ।। 13 ।।
ಮುನಿಸತ್ತಮ! ಬ್ರಹ್ಮನು ಚಾತುರ್ವರ್ಣ್ಯದ ವ್ಯವಸ್ಥೆಗನುಗುಣವಾಗಿ ಸೃಷ್ಟಿಸಿದ ಪ್ರಜೆಗಳು ಉತ್ತಮ ಶ್ರದ್ಧೆಯುಳ್ಳವರಾಗಿ, ಪರ್ವತದ ಗುಹೆ ಮೊದಲಾದ ಏಕಾಂತ ಸ್ಥಳಗಳಲ್ಲಿ ವಾಸಿಸುತ್ತಾ ಶೀತೋಷ್ಣ-ಹಸಿವು-ಬಾಯಾರಿಕೆ ಮೊದಲಾದ ಬಾಧೆಗಳಿಲ್ಲದೇ, ಶುದ್ಧಮನಸ್ಕರಾಗಿ, ಸತ್ಕುಲ ಪ್ರಸೂತರಾಗಿ, ವಿಹಿತ ಕರ್ಮಗಳ ಅನುಷ್ಠಾನ ಮಾಡುತ್ತಾ, ಮನಸ್ಸು ಪರಿಶುದ್ಧವಾದಂತೆ ಜ್ಞಾನಸ್ವರೂಪನಾದ ಹರಿಯು ಅವರ ಮನಸ್ಸಿನಲ್ಲಿ ನೆಲೆಸಲು, ವಿಷ್ಣುವೆಂಬ ಹೆಸರಿನ ಆ ಪರಮ ಪದವಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳುತ್ತಿದ್ದರು.
ತತಃ ಕಾಲಾತ್ಮಕೋ ಯೋಽಸೌ ತಸ್ಯಾಂಶಃ ಕಥಿತೋ ಹರೇಃ । ಸ ಪಾತಯತ್ಯಘಂ ಘೋರಮಲ್ಪಮಲ್ಪಾಲ್ಪಸಾರವತ್ ।। 14 ।। ಅಧರ್ಮಬೀಜಮುದ್ಭೂತಂ ತಮೋಲೋಭಸಮುದ್ಭವಮ್ । ಪ್ರಜಾಸು ತಾಸು ಮೈತ್ರೇಯ ರಾಗಾದಿಕಮಸಾಧಕಮ್ ।। 15 ।। ತತಃ ಸಾ ಸಹಜಾಸಿದ್ಧಿಸ್ತೇಷಾಂ ನಾತೀವ ಜಾಯತೇ । ರಸೋಲ್ಲಾಸಾದಯಶ್ಚಾನ್ಯಾಸ್ಸಿದ್ಧಯೋಽಷ್ಟೌ ಭವಂತಿ ಯಾಃ ।। 16 ।। ತಾಸು ಕ್ಷೀಣಾಸ್ವಶೇಷಾಸು ವರ್ಧಮಾನೇ ಚ ಪಾತಕೇ । ದ್ವಂದ್ವಾಭಿಭವದುಃಖಾರ್ತಾಸ್ತಾ ಭವಂತಿ ತತಃ ಪ್ರಜಾಃ ।। 17 ।। ತತೋ ದುರ್ಗಾಣಿ ತಾಶ್ಚಕ್ರುರ್ವಾರ್ಕ್ಷಂ ಪಾರ್ವತಮೌದಕಮ್ । ಕೃತ್ರಿಮಂ ಚ ತಥಾ ದುರ್ಗಂ ಪುರಖರ್ವಟಕಾದಿ ಯತ್ ।। 18 ।। ಗೃಹಾಣಿ ಚ ಯಥಾನ್ಯಾಯಂ ತೇಷು ಚಕ್ರುಃ ಪುರಾದಿಷು । ಶೀತಾತಪಾದಿ ಬಾಧಾನಾಂ ಪ್ರಶಮಾಯ ಮಹಾಮುನೇ ।। 19 ।। ಪ್ರತೀಕಾರಮಿಮಂ ಕೃತ್ವಾ ಶೀತಾದೇಸ್ತಾಃ ಪ್ರಜಾಃ ಪುನಃ । ವಾರ್ತೋಪಾಯಂ ತತಶ್ಚಕ್ರುರ್ಹಸ್ತಸಿದ್ಧಿಂ ಚ ಕರ್ಮಜಾಮ್ ।। 20 ।।
ನಂತರ ಕಾಲಾತ್ಮಕ ಹರಿಯ ಒಂದಂಶವು ಯುಗಧರ್ಮಕ್ಕನುಸಾರವಾಗಿ ಪ್ರಜೆಗಳಲ್ಲಿ ವಿಷಯಾಭಿಲಾಷೆ, ಮಾತ್ಸರ್ಯ ಮೊದಲಾದ ಪುರುಷಾರ್ಥಸಿದ್ಧಿಗೆ ವಿಘ್ನರೂಪವಾದ, ಭಯಂಕರವಾದ ಅಂದರೆ ಅತ್ಯಲ್ಪ ಸುಖವೂ, ಬಹು ದುಃಖವೂ ಇರುವ ಪಾಪಗಳನ್ನು ಹರಡುತ್ತದೆ. ಈ ಪಾಪವು ಅಧರ್ಮಕ್ಕೆ ಕಾರಣ. ಮೋಹವನ್ನೂ ಅಜ್ಞಾನವನ್ನೂ ಹುಟ್ಟಿಸುತ್ತದೆ. ವಿಷಯಾಭಿಲಾಷೆಯಿಂದ ಉಂಟಾಗುವ ಕಾಮಕ್ರೋಧಾದಿಗಳನ್ನು ಹುಟ್ಟಿಸಿ, ಪುರುಷಾರ್ಥ ಸಿದ್ಧಿಗೆ ವಿಘ್ನವನ್ನುಂಟುಮಾಡುತ್ತದೆ. ಆಗ ಮನುಷ್ಯರಿಗೆ ಕೃತಯುಗದಲ್ಲಿ ಸ್ವಾಭಾವಿಕವಾಗಿಯೇ ಉಂಟಾಗುತ್ತಿದ್ದ, ಹಸಿವು-ಬಾಯಾರಿಕೆ ಮೊದಲಾದ ದುಃಖಗಳನ್ನು ಜಯಿಸುವ ರಸೋಲ್ಲಾಸಾದಿ ಅಷ್ಟಸಿದ್ಧಿಗಳು[1] ಉಂಟಾಗುವುದಿಲ್ಲ. ತ್ರೇತಾಯುಗದಲ್ಲಿ ಜನರಿಗೆ ಅಷ್ಟಸಿದ್ಧಿಶಕ್ತಿಗಳು ಕಡಿಮೆಯಾಗುತ್ತಾ ಬಂದಹಾಗೆ ಪಾಪಗಳು ಹೆಚ್ಚಾಗುತ್ತಾ ಶೀತೋಷ್ಣ ಸುಖದುಃಖಾದಿ ದ್ವಂದ್ವಗಳ ಬಾಧೆಯು ಹೆಚ್ಚಾಗುತ್ತದೆ. ನಂತರ ಮನುಷ್ಯರು ಕಳ್ಳರೇ ಮೊದಲಾದವರ ಭಯಪರಿಹಾರಕ್ಕಾಗಿ ಕೃತ್ರಿಮವಾದ ಕಾಡು, ಪರ್ವತ, ನದಿಪ್ರದೇಶಗಳಲ್ಲಿ ದುರ್ಗ-ಕೋಟೆಗಳನ್ನೂ, ಶೀತೋಷ್ಣಗಳ ಪರಿಹಾರಕ್ಕಾಗಿ ಮನೆಗಳನ್ನೂ, ಪುರಿ[2], ಖರ್ವಟ[3] ಮೊದಲಾದವುಗಳನ್ನೂ, ಜೀವನಕ್ಕಾಗಿ ಕೈಗಾರಿಕೆ-ಕೃಷಿ-ವಾಣಿಜ್ಯಗಳನ್ನೂ ಮಾಡಿಕೊಂಡರು.
ವ್ರೀಹಯಶ್ಚ ಯವಾಶ್ಚೈವ ಗೋಧೂಮಾ ಅಣವಸ್ತಿಲಾಃ । ಪ್ರಿಯಂಗವೋ ಹ್ಯುದಾರಾಶ್ಚ ಕೋರದೂಷಾಸ್ಸತೀನಕಾಃ ।। 21 ।। ಮಾಷಾಮುದ್ಗಾ ಮಸೂರಾಶ್ಚ ನಿಷ್ಪಾವಾಸ್ಸಕುಲುತ್ಥಕಾಃ । ಆಢಕ್ಯಶ್ಚಣಕಾಶ್ಚೈವ ಶಣಾಸ್ಸಪ್ತದಶ ಸ್ಮೃತಾಃ ।। 22 ।। ಇತ್ಯೇತಾ ಓಷಧೀನಾಂ ತು ಗ್ರಾಮ್ಯಾಣಾಂ ಜಾತಯೋ ಮುನೇ । ಓಷಧ್ಯೋ ಯಾಜ್ಞಿಕಾಶ್ಚೈವ ಗ್ರಾಮ್ಯಾರಣ್ಯಾಶ್ಚತುರ್ದಶ ।। 23 ।। ವ್ರೀಹಯಸ್ಸಯವಾ ಮಾಷಾ ಗೋಧೂಮಾ ಅಣವಸ್ತಿಲಾಃ । ಪ್ರಿಯಂಗುಸಪ್ತಮಾ ಹ್ಯೇತಾ ಅಷ್ಟಮಾಸ್ತು ಕುಲುತ್ಥಕಾಃ ।। 24 ।। ಶ್ಯಾಮಾಕಾಸ್ತ್ವಥ ನೀವಾರಾಜರ್ತಿಲಾಸ್ಸಗವೇಧುಕಾಃ । ತಥಾ ವೇಣುಯವಾಃ ಪ್ರೋಕ್ತಾಸ್ತದ್ವನ್ಮರ್ಕಟಕಾ ಮುನೇ ।। 25 ।। ಗ್ರಾಮ್ಯಾರಣ್ಯಸ್ಸ್ಮೃತಾ ಹ್ಯೇತಾ ಓಷಧ್ಯಸ್ತು ಚತುರ್ದಶ ।
ಮುನೇ! ವ್ರೀಹಿ (ಅಕ್ಕಿ), ಯವೆ (ಜೋಳ, ಬಾರ್ಲಿ), ಗೋಧೂಮ (ಗೋಧಿ/ಗೋದಿ), ಅಣವ (ಸಣ್ಣ ಜೋಳ/ಬರಗು), ತಿಲ (ಎಳ್ಳು), ಪ್ರಿಯಂಗು (ಒಂದು ಧಾನ್ಯ ಪ್ರಭೇದ) ಉದಾರ, ಕೋರದೂಷ, ಸತೀನಕ, ಮಾಷ (ಉದ್ದಿನ), ಉದ್ಗ (ಹೆಸರು), ಮಸೂರ (ಮಸೂರದ ಬೀಜ), ನಿಷ್ಪಾವಾ (ಅವರೆಕಾಳು), ಕುಲುತ್ಥಕ (ಹುರಿಗಡಲೆ), ಅಢಕ್ಯ (ಒಂದು ವಿಧದ ಕಡಲೆ), ಚಣಕ (ಕಡಲೆ), ಮತ್ತು ಶಣ (ಅಲಸಿ, ಜ್ಯೂಟ್ ಬೀಜ) ಇವು ಒಟ್ಟು ಹದಿನೇಳು ವಿಧದ ಧಾನ್ಯಗಳು ಎಂದು ಮುನಿಗಳು ಹೇಳಿದ್ದಾರೆ. ಮುನೇ! ಇವುಗಳೆಲ್ಲ ಗ್ರಾಮ್ಯ (ಮಾನವನ ಬಳಕೆಯ) ಧಾನ್ಯಗಳ ಜಾತಿಗಳು. ಇವುಗಳಲ್ಲಿ ಕೆಲವನ್ನು ಯಜ್ಞಗಳಿಗೆ ಬಳಸುತ್ತಾರೆ. ಒಟ್ಟು ಗ್ರಾಮ್ಯ ಮತ್ತು ಅರಣ್ಯ ಓಷಧಿಗಳು (ಧಾನ್ಯಗಳು) ನಾಲ್ಕು ವರ್ಗಗಳಾಗಿ ಹೇಳಲ್ಪಟ್ಟಿವೆ: ವ್ರೀಹಿ, ಯವೆ, ಮಾಷ, ಗೋಧೂಮ, ಅಣವ, ತಿಲ, ಪ್ರಿಯಂಗು ಇವು ಏಳು ಮುಖ್ಯಧಾನ್ಯಗಳು. ಎಂಟನೆಯದು ಕುಲುತ್ಥಕ. ಶ್ಯಾಮಾಕ (ಕಂಪು ಅಥವಾ ಸಮೈ), ನೀವಾರ (ಕಾಡು ಅಕ್ಕಿ), ಅಜರ್ತಿಲ (ಒಂದು ಕಾಡು ಧಾನ್ಯ), ಗವೇಧುಕ (ಕಾಡು ಯವೆ), ವೇಣುಯವ (ಬಿದಿರಿನ ಅಕ್ಕಿ), ಮತ್ತು ಮರ್ಕಟಕ (ಒಂದು ಕಾಡುಕಾಳು) – ಇವು ಅರಣ್ಯ ಅಥವಾ ಕಾಡಿನ ಧಾನ್ಯಗಳ ವರ್ಗಕ್ಕೆ ಸೇರಿವೆ. ಹೀಗೆ ಗ್ರಾಮ್ಯ ಮತ್ತು ಅರಣ್ಯ ಸೇರಿ ಒಟ್ಟು 14 ವಿವಿಧ ಧಾನ್ಯ/ಓಷಧಿಗಳು ಪ್ರಸ್ತಾಪವಾಗಿವೆ.
ಯಜ್ಞನಿಷ್ಪತ್ತಯೇ ಯಜ್ಞಸ್ತಥಾಸಾಂ ಹೇತುರುತ್ತಮಃ ।। 26 ।। ಏತಾಶ್ಚ ಸಹ ಯಜ್ಞೇನ ಪ್ರಜಾನಾಂ ಕಾರಣಂ ಪರಮ್ । ಪರಾವರವಿದಃ ಪ್ರಾಜ್ಞಾಸ್ತತೋ ಯಜ್ಞಾನ್ವಿತನ್ವತೇ ।। 27 ।। ಅಹನ್ಯಹನ್ಯನುಷ್ಠಾನಂ ಯಜ್ಞಾನಾಂ ಮುನಿಸತ್ತಮ । ಉಪಕಾರಕರಂ ಪುಂಸಾಂ ಕ್ರಿಯಮಾಣಾಘಶಾಂತಿದಮ್ ।। 28 ।। ಯೇಷಾಂ ತು ಕಾಲಸೃಷ್ಟೋಽಸೌ ಪಾಪಬಿಂದುರ್ಮಹಾಮತೇ । ಚೇತಸ್ಸು ವವೃಧೇ ಚಕ್ರುಸ್ತೇನ ಯಜ್ಞೇಷು ಮಾನಸಮ್ ।। 29 ।। ವೇದನ್ವೇದಂ ತಥಾ ವೇದಾನ್ಯಜ್ಞಕರ್ಮಾದಿಕಂ ಚ ಯತ್ । ತತ್ಸರ್ವಂ ನಿಂದಮಾನಾಸ್ತೇ ಯಜ್ಞವ್ಯಾಸೇಧಕಾರಿಣಃ ।। 30 ।। ಪ್ರವೃತ್ತಿಮಾರ್ಗವ್ಯುಚ್ಛಿತ್ತಿಕಾರಿಣೋ ವೇದನಿಂದಕಾಃ । ದುರಾತ್ಮಾನೋ ದುರಾಚಾರಾ ಬಭೂವುಃ ಕುಟಿಲಾಶಯಾಃ ।। 31 ।।
ಇವೆಲ್ಲವೂ ಯಜ್ಞದಲ್ಲಿ ಬಳಸಲಾಗುತ್ತವೆ. ಇವೇ ಯಜ್ಞಕ್ಕೆ ಉತ್ತಮ ಕಾರಣಗಳು. ಯಜ್ಞಗಳೊಂದಿಗೆ ಇವು ಪ್ರಜೆಗಳಿಗೆ ಪರಮ ಕಾರಣವಾಗಿದೆ. ಈ ಸಸ್ಯಗಳು ಯಜ್ಞಕ್ಕೆ ಉಪಯೋಗವಾಗುವುದರಿಂದ ಮಳೆಗೂ ಪ್ರಜಾವೃದ್ಧಿಗೂ ಕಾರಣಗಳೆಂದು ಧರ್ಮವನ್ನು ತಿಳಿದ ಪ್ರಾಜ್ಞರು ಯಜ್ಞಗಳನ್ನು ಮಾಡುತ್ತಾರೆ. ಮುನಿಸತ್ತಮ! ಪ್ರತಿದಿನವೂ ಪಂಚಮಹಾ ಯಜ್ಞಗಳ[4] ಅನುಷ್ಠಾನ ಮಾಡುವುದರಿಂದ ಮನುಷ್ಯರು ಮಾಡುವ ಪಾಪಗಳು ನಾಶವಾಗುತ್ತವೆಯಾದ್ದರಿಂದ ಉಪಕಾರವಾಗುತ್ತದೆ ಮತ್ತು ಶಾಂತಿಯುಂಟಾಗುತ್ತದೆ. ಮಹಾಮತೇ! ಕಾಲದಿಂದ ಸೃಷ್ಟಿಯಾದ ಪಾಪಲೇಶವು ಯಾರ ಮನಸ್ಸಿನಲ್ಲಿ ಬೆಳೆಯುತ್ತದೆಯೋ ಅವರು ಯಜ್ಞವನ್ನು ಮಾಡುವ ಮನಸ್ಸುಮಾಡುವುದಿಲ್ಲ. ವೇದಗಳನ್ನೂ, ಜ್ಞಾನವನ್ನೂ, ದೇವತೆಗಳನ್ನೂ, ಯಜ್ಞಕರ್ಮಗಳನ್ನೂ ನಿಂದಿಸುತ್ತಾ ಅವರು ಯಜ್ಞನಾಶಕ್ಕೆ ಕಾರಣರಾಗುತ್ತಾರೆ. ಪ್ರವೃತ್ತಿಮಾರ್ಗವನ್ನು ನಾಶಮಾಡುವುದಕ್ಕೆ ಕಾರಣರಾದ ವೇದನಿಂದಕರು ದುಷ್ಟರೂ, ದುರಾಚಾರಿಗಳೂ, ವಕ್ರಬುದ್ಧಿಯುಳ್ಳವರೂ ಆಗಿರುತ್ತಾರೆ. ಪ್ರವೃತ್ತಿಮಾರ್ಗದ ನಾಶದಿಂದ ಯಜ್ಞಾನುಷ್ಠಾನವಿಲ್ಲದೇ ಮಳೆಯಾಗದ ಕಾರಣ ಅನ್ನವು ದೊರಕದೇ ಪ್ರಜಾವೃದ್ಧಿಯಾಗುವುದಿಲ್ಲ.
ಸಂಸಿದ್ಧಾಯಾಂ ತು ವಾರ್ತಾಯಾಂ ಪ್ರಜಾಃ ಸೃಷ್ಟ್ವಾ ಪ್ರಜಾಪತಿಃ । ಮರ್ಯಾದಾಂ ಸ್ಥಾಪಯಾಮಾಸ ಯಥಾಸ್ಥಾನಂ ಯಥಾಗುಣಮ್ ।। 32 ।। ವರ್ಣಾನಾಮಾಶ್ರಮಾಣಾಂ ಚ ಧರ್ಮಾನ್ಧರ್ಮಭೃತಾಂ ವರ । ಲೋಕಾಂಶ್ಚ ಸರ್ವವರ್ಣಾನಾಂ ಸಮ್ಯಗ್ಧರ್ಮಾನುಪಾಲಿನಾಮ್ ।। 33 ।। ಪ್ರಾಜಾಪತ್ಯಂ ಬ್ರಾಹ್ಮಣಾನಾಂ ಸ್ಮೃತಂ ಸ್ಥಾನಂ ಕ್ರಿಯಾವತಾಮ್ । ಸ್ಥಾನಮೈಂದ್ರಂ ಕ್ಷತ್ರಿಯಾಣಾಂ ಸಂಗ್ರಾಮೇಷ್ವನಿವರ್ತಿನಾಮ್ ।। 34 ।। ವೈಶ್ಯಾನಾಂ ಮಾರುತಂ ಸ್ಥಾನಂ ಸ್ವಧರ್ಮನಿರತಾತ್ಮನಾಮ್ । ಗಾಂಧರ್ವಂ ಶೂದ್ರಜಾತೀನಾಂ ಪರಿಚರ್ಯಾನುವರ್ತಿನಾಮ್ ।। 35 ।।
ಧರ್ಮಭೃತರಲ್ಲಿ ಶ್ರೇಷ್ಠ! ಕೃಷ್ಯಾದಿ ಕರ್ಮಸಿದ್ಧಿಯಾದ ನಂತರ ಬ್ರಹ್ಮನು ಪ್ರಜೆಗಳನ್ನು ಸೃಷ್ಟಿಸಿ ಅವರಲ್ಲಿ ಸ್ಥಾನ-ಗುಣಗಳಿಗನುಸಾರವಾಗಿ ಬ್ರಾಹ್ಮಣಾದಿ ವರ್ಣಗಳನ್ನೂ, ಗೃಹಸ್ಥಾದಿ ಆಶ್ರಮಗಳನ್ನೂ, ಧರ್ಮವ್ಯವಸ್ಥೆಯನ್ನೂ, ಅವರವರ ಧರ್ಮಾನುಷ್ಠಾನದಿಂದ ಅವರು ಪಡೆಯುವ ಲೋಕಗಳನ್ನೂ, ದೇಶ-ಕಾಲ ಮೊದಲಾದ ನಿಯಮಗಳನ್ನೂ ಗೊತ್ತುಮಾಡಿದನು. ಅಮೃತಬಿಂದು ಸ್ವರೂಪವಾದ ಯಜ್ಞಗಳ ಸೃಷ್ಟಿಯನ್ನು ಮಾಡಿದನು ಮತ್ತು ಯಥಾಸ್ಥಾನಗಳಲ್ಲಿ ಯಥಾಗುಣವಾಗಿ ಮರ್ಯಾದೆಗಳನ್ನು ಸ್ಥಾಪಿಸಿದನು. ನಿತ್ಯನೈಮಿತ್ತಿಕ ಅಗ್ನಿಹೋತ್ರ ಮೊದಲಾದ ಕರ್ಮಗಳನ್ನು ಅನುಷ್ಠಾನ ಮಾಡುವ ಬ್ರಾಹ್ಮಣರಿಗೆ ಪ್ರಾಜಾಪತ್ಯ[5]ವೆಂಬ ಲೋಕವಾಸವು ದೊರೆಯುತ್ತದೆ. ಸಂಗ್ರಾಮದಲ್ಲಿ ಹಿಂದೆ ಸರಿಯದ ಕ್ಷತ್ರಿಯರಿಗೆ ಇಂದ್ರನ ಸ್ಥಾನವು ದೊರೆಯುತ್ತದೆ. ಸ್ವಧರ್ಮವನ್ನು ಅನುಸರಿಸುವ ವೈಶ್ಯರಿಗೆ ಮಾರುತನ ಸ್ಥಾನವು ಲಭಿಸುತ್ತದೆ. ಪರಿಚರ್ಯೆಯನ್ನು ಮಾಡುವ ಸರ್ವಶೂದ್ರರಿಗೂ ಗಾಂಧರ್ವಸ್ಥಾನವು ದೊರೆಯುತ್ತದೆ.
ಅಷ್ಟಾಶೀತಿಸಹಸ್ರಾಣಿ ಯತೀನಾಮೂರ್ಧ್ವರೇತಸಾಮ್ । ಸ್ಮೃತಂ ತೇಷಾಂ ತು ಯತ್ಸ್ಥಾನಂ ತದೇವ ಗುರುವಾಸಿನಾಮ್ ।। 36 ।। ಸಪ್ತರ್ಷೀಣಾಂ ಚ ಯತ್ಸ್ಥಾನಂ ಸ್ಮೃತಂ ತದ್ವೈ ವನೌಕಸಾಮ್ । ಪ್ರಾಜಾಪತ್ಯಂ ಗೃಹಸ್ಥಾನಾಂ ನ್ಯಾಸಿನಾಂ ಬ್ರಹ್ಮಸಂಜ್ಞಿತಃ ।। 37 ।। ಯೋಗಿನಾಮಮೃತಂ ಸ್ಥಾನಂ ಸ್ವಾತ್ಮಸಂತೋಷಕಾರಿಣಾಮ್ ।। 38 ।। ಏಕಾಂತಿನಸ್ಸದಾ ಬ್ರಹ್ಮಧ್ಯಾಯಿನೋ ಯೋಗಿನೋ ಹಿ ಯೇ । ತೇಷಾಂ ತತ್ಪರಮಂ ಸ್ಥಾನಂ ಯದ್ವೈ ಪಶ್ಯಂತಿ ಸೂರಯಃ ।। 39 ।। ಗತ್ವಾ ಗತ್ವಾ ನಿವರ್ತಂತೇ ಚಂದ್ರಸೂರ್ಯಾದಯೋ ಗ್ರಹಾಃ । ಅದ್ಯಾಪಿ ನ ನಿವರ್ತಂತೇ ದ್ವಾದಶಾಕ್ಷರಚಿಂತಕಾಃ ।। 40 ।।
ಊರ್ಧ್ವರೇತಸರಾದ 88 ಸಾವಿರ ಯತಿಗಳಿಗೆ ಯಾವ ಸ್ಥಾನವು ನಿಯತವೋ ಆ ಸ್ಥಾನವು ಗುರುಕುಲದಲ್ಲಿ ವಾಸಿಸುವ ಬ್ರಹ್ಮಚಾರಿಗಳಿಗೆ ದೊರೆಯುತ್ತದೆ. ವಾನಪ್ರಸ್ಥರಿಗೆ ಸಪ್ತರ್ಷಿಗಳ ಸ್ಥಾನವೂ, ಗೃಹಸ್ಥರಿಗೆ ಪ್ರಜಾಪತಿಯ ಸ್ಥಾನವೂ ಮತ್ತು ಸಂನ್ಯಾಸಿಗಳಿಗೆ ಬ್ರಹ್ಮಲೋಕವೂ ದೊರೆಯುತ್ತವೆ. ಏಕಾಂತಿಗಳು, ಧ್ಯಾನಿಗಳು ಮತ್ತು ಯೋಗಿಗಳಿಗೆ ಅಮೃತಸ್ಥಾನವಾದ ಬ್ರಹ್ಮನ ಪರಮ ಪದವು ಲಭಿಸುತ್ತದೆ. ಅಂತಹ ಯೋಗಿಗಳಿಗೆ ವಿದ್ವಾಂಸರಿಗೂ ಗೋಚರವಾಗದ ಸ್ಥಾಲವು ಲಭಿಸುತ್ತದೆ. ಸೂರ್ಯ-ಚಂದ್ರ ಮೊದಲಾದ ಗ್ರಹಗಳೂ ಹೋಗುತ್ತವೆ ಮತ್ತು ಬರುತ್ತವೆ. ಹುಟ್ಟುತ್ತವೆ ಮತ್ತು ಸಾಯುತ್ತವೆ. ಆದರೆ ದ್ವಾದಶಾಕ್ಷರ[6] ಚಿಂತಕರು ಇದೂವರೆಗೂ ಅವರ ಸ್ಥಾನದಿಂದ ಹಿಂದಿರುಗಿಯೇ ಇಲ್ಲ.
ತಾಮಿಸ್ರಮಂಧತಾಮಿಸ್ರಂ ಮಹಾರೌರವರೌರವೌ । ಅಸಿಪತ್ರವನಂ ಘೋರಂ ಕಾಲಸೂತ್ರಮವೀಚಿಕಮ್ ।। 41 ।। ವಿನಿಂದಕಾನಾಂ ವೇದಸ್ಯ ಯಜ್ಞವ್ಯಾಸೇಧಕಾರಿಣಾಮ್ । ಸ್ಥಾನಮೇತತ್ಸಮಾಖ್ಯಾತಂ ಸ್ವಧರ್ಮತ್ಯಾಗಿನಶ್ಚ ಯೇ ।। 42 ।।
ವೇದವನ್ನು ನಿಂದಿಸುವವರಿಗೂ, ಯಜ್ಞಗಳನ್ನು ನಾಶ ಪಡಿಸುವವರಿಗೂ, ಮತ್ತು ಸ್ವಧರ್ಮವನ್ನು ತ್ಯಜಿಸುವವರಿಗೂ ತಾಮಿಸ್ರ[7], ಅಂಧತಾಮಿಸ್ರ[8], ರೌರವ[9], ಮಹಾರೌರವ[10], ಘೋರವಾದ ಅಸಿಪತ್ರವನ[11], ಕಾಲಸೂತ್ರ[12] ಮತ್ತು ಅವೀಚಿ[13] ಮೊದಲಾದ ನರಕಗಳಿರುತ್ತವೆ.”
ಇತಿ ಶ್ರೀವಿಷ್ಣುಪುರಾಣೇ ಪ್ರಥಮಾಂಶೇ ಷಷ್ಠೋಽಧ್ಯಾಯಃ ।।
ಇದು ಶ್ರೀವಿಷ್ಣುಪುರಾಣದ ಪ್ರಥಮಾಂಶದಲ್ಲಿ ಆರನೇ ಅಧ್ಯಾಯವು.
[1] ರಸೋಲ್ಲಾಸಾದಿ ಅಷ್ಟಸಿದ್ಧಿಗಳು ಎನ್ನುವುದು ತಂತ್ರಶಾಸ್ತ್ರ ಮತ್ತು ಯೋಗಶಾಸ್ತ್ರಗಳಲ್ಲಿ ಹೇಳಿರುವ ವಿಶಿಷ್ಠ ಶಕ್ತಿಗಳ (ಅಲೌಕಿಕ ಸಾಮರ್ಥ್ಯಗಳ) ಗುಂಪಾಗಿದೆ. ಅಂದರೆ ಎಂಟು ಸಾಧನೆಗಳು ಅಥವಾ ಎಂಟು ಅಲೌಕಿಕ ಶಕ್ತಿಗಳು ಎಂದರ್ಥ. ಆದರೆ ರಸೋಲ್ಲಾಸಾದಿ ಅಷ್ಟಸಿದ್ಧಿಗಳು ಸಾಮಾನ್ಯವಾಗಿ ತಿಳಿದಿರುವ ಅಣಿಮಾ, ಮಹಿಮಾ, ಗರಿಮಾ ಇತ್ಯಾದಿ ಯೋಗದ ಅಷ್ಟಸಿದ್ಧಿಗಳಲ್ಲ. ಇದು ರಸ, ತಂತ್ರ ಮತ್ತು ಯೋಗದ ಅನುಭವಾತ್ಮಕ ಶಕ್ತಿಗಳ ಒಂದು ವರ್ಗ. ಈ ರಸದ ಉದಯದಿಂದ ಮುಂದಿನ ಏಳು ಶಕ್ತಿಗಳು ಕ್ರಮವಾಗಿ ವ್ಯಕ್ತವಾಗುತ್ತವೆ. ಒಟ್ಟಾಗಿ ಅವುಗಳನ್ನು ರಸೋಲ್ಲಾಸಾದಿ ಅಷ್ಟಸಿದ್ಧಿಗಳು ಎಂದು ಕರೆಯುತ್ತಾರೆ. ಈ ಅಷ್ಟಸಿದ್ಧಿಗಳೂ ಮತ್ತು ಅವುಗಳ ತಾಂತ್ರಿಕ ವಿವರಣೆಗಳು ಹೀಗಿವೆ: (1) ರಸೋಲ್ಲಾಸಾ – ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸಿ ನಾಡಿಗಳಲ್ಲಿ ಆನಂದದ ಕಂಪನದ ಅನುಭವ (2) ರಸಸಿದ್ಧಿ – ದೇಹದ ರಸ (ಜಲ, ಪ್ರಾಣ, ಚೇತನ) ಗಳನ್ನು ಶುದ್ಧೀಕರಿಸಿ ಅಮೃತಸ್ವರೂಪವಾಗುವ ಶಕ್ತಿ (3) ರಸಜ್ಞಾನ – ಅಂತರಂಗದ ಆನಂದ ಮತ್ತು ಪರಮ ತತ್ತ್ವದ ರಸದ ಜ್ಞಾನವು ವ್ಯಕ್ತವಾಗುವುದು (4) ರಸಪ್ರವಾಹ – ಪ್ರಾಣಶಕ್ತಿಯು ದೇಹದೊಳಗೆ ನಿರಂತರವಾಗಿ ಹರಿಯುವ ಆನಂದಧಾರೆ (5) ರಸಾನುಭವ – ಯೋಗಿಯು ಆ ರಸದ ಮೂಲಕ ಪರಮಾನುಭವದಲ್ಲಿ ಲೀನನಾಗುವುದು (6) ರಸಸ್ಪೂರ್ತಿ – ಚೈತನ್ಯವು ದೇಹದ ಪ್ರತಿಯೊಂದು ಅಂಗದಲ್ಲಿ ತೇಜಸ್ಸಾಗಿ ಪ್ರಕಟವಾಗುವುದು (7) ರಸಲಹರಿ – ಭಾವಾತ್ಮಕ, ಆಧ್ಯಾತ್ಮಿಕ ಪರಾಕಾಷ್ಠೆಯ ಉಲ್ಲಾಸ, ತಾತ್ವಿಕ ಮಿಲನ (8) ರಸಸಮಾಧಿ – ರಸರೂಪ ಬ್ರಹ್ಮನೊಂದಿಗಿನ ಏಕೀಭಾವ – ಪರಮಾನಂದದ ಸ್ಥಿತಿ. ತಂತ್ರಗ್ರಂಥಗಳಲ್ಲಿ ಒಂದಾದ ರಸಹೃದಯತಂತ್ರದಲ್ಲಿ (ಪಾಠಾಂತರಾನುಸಾರ ಅಧ್ಯಾಯ 11 ಅಥವಾ 12) ರಸೋಲ್ಲಾಸಾದಿ ಅಷ್ಟಸಿದ್ಧಿಗಳ ಕುರಿತು ಬರುತ್ತದೆ. ರಸಸ್ಯಸ್ವತ ಏವಾಂತರುಲ್ಲಾಸಸ್ಸ್ಯಾತ್ಕೃತೇಯುಗೇ । ರಸೋಲ್ಲಾಸಾಖ್ಯಕಾಸಿದ್ಧಿಸ್ತಯಾ ಹಂತಿಕ್ಷುಧನಂ ನರಃ ।। ಸ್ತ್ರ್ಯಾದೀನಾಂ ನೈರಪೇಕ್ಷ್ಯೇಣ ಸದಾತೃಪ್ತಾಃ ಪ್ರಜಾಸ್ತಥಾ । ದ್ವಿತೀಯಾ ಸಿದ್ಧಿರುದ್ದಿಷ್ಟಾಸಾತೃಪ್ತಿರ್ಮುನಿಸತ್ತಮೈಃ ।। ಧರ್ಮೋತ್ತಮಂಚನಾಸ್ತ್ಯಾಸಾಂ ಸಾತೃತೀಯಾಭಿಧೀಯತೇ । ಚತುರ್ಥೀತುಲ್ಯತಾತಾ ಸಾಮಾಯುಷಸ್ಸುಖರೂಪಯೋಃ ।। ಐಕಾಂತ ಬಲಬಾಹುಲ್ಯಂ ವಿಶೋಕಾನಾಮ ಪಂಚಮೀ । ಪರಮಾತ್ಮ ಪರತ್ವೇನ ತಪೋಧ್ಯಾನಾದಿ ನಿಷ್ಠಿತಾ ।। ಷಷ್ಠೀ ಚ ಕಾಮಚಾರಿತ್ವಂ ಸಪ್ತಮೀ ಸಿದ್ಧಿರುಚ್ಯತೇ । ಅಷ್ಟಮೀ ಚ ಯಥಾಪ್ರೋಕ್ತಾಯತ್ರಕ್ವಚನ ಶಾಯಿತಾ ।। ಅರ್ಥಾತ್: (1) ಕೃತಯುಗದಲ್ಲಿ ರಸ (ಚೈತನ್ಯರಸ)ವು ಸ್ವತಃ ಅಂತರಂಗದಲ್ಲಿ ಉಲ್ಲಾಸಗೊಂಡಾಗ ರಸೋಲ್ಲಾಸವೆಂಬ ಮೊದಲನೇ ಸಿದ್ಧಿಯು ಉಂಟಾಗುತ್ತದೆ. ಈ ಸಿದ್ಧಿಯು ಸಾಧಕನ ಹಸಿವು, ದೇಹದ ಕ್ಷುಧೆ ಆಯಾಸ ಇವುಗಳನ್ನು ನಿವಾರಿಸುತ್ತದೆ. (2) ಸ್ತ್ರೀ ಮುಂತಾದ ಇಂದ್ರಿಯ ವಿಷಯಗಳ ಮೇಲೆ ಯಾವುದೇ ಆಸಕ್ತಿಯಿಲ್ಲದೇ ಯೋಗಿಯು ಸದಾ ಆಂತರಿಕ ತೃಪ್ತಿಯಲ್ಲಿ ನೆಲೆಸಿದಾಗ ಅದು ದ್ವಿತೀಯ ಸಿದ್ಧಿ ಅಥವಾ ಅತೃಪ್ತ ಸಿದ್ಧಿ ಎಂದು ಮುನಿಸತ್ತಮರು ಹೇಳಿದ್ದಾರೆ. (3) ಮೂರನೆಯ ಸಿದ್ಧಿಯು ಧರ್ಮೋತ್ತಮಾ. ಇದು ಸರ್ವೋತ್ತಮ ಧರ್ಮದ ಸ್ಥಿತಿಯಾಗಿದೆ. ಯಾವುದೇ ಅಶುದ್ಧಿ ಅಥವಾ ಅಧರ್ಮದವಿಲ್ಲದ ಪರಿಪೂರ್ಣ ಸ್ಥಿತಿ. (4) ನಾಲ್ಕನೆಯ ಸಿದ್ಧಿ ತತ್ಸಾಮ್ಯಾ – ಯೋಗಿಯು ಆಯುಷ್ಯ ಮತ್ತು ಸುಖದಲ್ಲಿ ಸಮತ್ವವನ್ನು ಹೊಂದುತ್ತಾನೆ. ಅವನಿಗೆ ಜನನ-ಮರಣ ಅಥವಾ ಸುಖ-ದುಃಖಗಳಲ್ಲಿ ವ್ಯತ್ಯಾಸ ಕಾಣುವುದಿಲ್ಲ. (5) ಐದನೆಯ ಸಿದ್ಧಿ ವಿಶೋಕಾ. ಇದರಿಂದ ಯೋಗಿಯು ದೈಹಿಕ ಮತ್ತು ಮಾನಸಿಕ ಬಲದಲ್ಲಿ ಪರಿಪೂರ್ಣನಾಗುತ್ತಾನೆ. ಅವನಲ್ಲಿ ಯಾವುದೇ ದುಃಖ, ಶೋಕ ಅಥವಾ ದುರ್ಬಲತೆಯು ಇರುವುದಿಲ್ಲ. (6) ಆರನೆಯದು ಪರಮಾತ್ಮನಿಷ್ಠಾ ಸಿದ್ಧಿ. ಅವನು ಪರಮಾತ್ಮನಲ್ಲಿಯೇ ಸ್ಥಿರನಾಗಿರುತ್ತಾನೆ. ತಪಸ್ಸು, ಧ್ಯಾನ ಮತ್ತು ಆತ್ಮಚಿಂತನೆಗಳಲ್ಲಿ ಶ್ರದ್ಧೆಯಿಂದ ನೆಲೆಸಿರುತ್ತಾನೆ. (7) ಏಳನೆಯ ಸಿದ್ಧಿ ಕಾಮಾಚಾರಾ ಸಿದ್ಧಿಯು. ಇದರಿಂದ ಸಾಧಕನು ತನ್ನ ಇಚ್ಛೆಯಂತೆ ಎಲ್ಲೆಡೆ ಸಂಚರಿಸಲು, ರೂಪಾಂತರಗೊಳ್ಳಲು, ಕಾರ್ಯಸಾಧನೆ ಮಾಡಲು ಶಕ್ತನಾಗುತ್ತಾನೆ. (8) ಎಂಟನೆಯದು ಯಥಾಪ್ರೋಕ್ತಾ ಸಿದ್ಧಿ. ಇದು ಪೂರ್ವೋಕ್ತ ಎಲ್ಲ ಸಿದ್ಧಿಗಳ ಸಮಪೂರ್ಣ ಸ್ಥಿತಿ. ಯೋಗಿಯು ಎಲ್ಲೆಡೆ ಸ್ಥಿತನಾಗುವ, ಬ್ರಹ್ಮತತ್ತ್ವದೊಂದಿಗೆ ಏಕೀಭವಗೊಳ್ಳುವ ಪರಮ ಸ್ಥಿತಿ.
[2] ಪುರಿ=ರಾಜನು ವಾಸಿಸುವ ಸ್ಥಳ.
[3] ಖರ್ವಟ=ಒಂದೆಡೆ ಗ್ರಾಮವೂ ಮತ್ತೊಂದೆಡೆ ನಗರವೂ ಇರುವ ನದೀತೀರ ಪ್ರದೇಶ
[4] ಪಂಚಮಹಾಯಜ್ಞಗಳು ಎಂದರೆ — ಪ್ರತಿ ಗೃಹಸ್ಥನೂ ನಿತ್ಯವಾಗಿ ಆಚರಿಸಬೇಕಾದ ಐದು ವಿಧದ ಯಜ್ಞಗಳು.ಇವು ಮನುಸ್ಮೃತಿ (3.68–3.71), ತೈತ್ತಿರೀಯ ಆರಣ್ಯಕ (2.10), ಮತ್ತು ಶತಪಥ ಬ್ರಾಹ್ಮಣ (11.5.6) ಗಳಲ್ಲಿ ಉಲ್ಲೇಖವಾಗಿವೆ. ಇವು ಮಾನವನು ದೇವತೆ, ಋಷಿ, ಪಿತೃ, ಭೂತ, ಮತ್ತು ಮನುಷ್ಯ (ಅತಿಥಿ)ಗಳ ಮೇಲಿನ ತನ್ನ ಋಣ (ಬಾಧ್ಯತೆ) ತೀರಿಸುವ ಸಾಧನಗಳೆಂದು ವಿವರಿಸಲಾಗಿದೆ.
| ಯಜ್ಞದ ಹೆಸರು | ಗುರಿ/ಉದ್ದೇಶ | ಆಚರಣೆ ವಿಧಾನ |
| 1. ಬ್ರಹ್ಮಯಜ್ಞ | ಋಷಿಗಳ ಋಣ – ವೇದ, ಶಾಸ್ತ್ರಗಳ ಅಧ್ಯಯನ ಮತ್ತು ಪಾಠ-ಪಾಠನದ ಮೂಲಕ ಋಷಿಗಳ ಸೇವೆ. | ಪ್ರತಿದಿನ ಸಂಧ್ಯಾವಂದನೆಯ ನಂತರ ವೇದ-ಪುರಾಣ-ಇತಿಹಾಸ ಗ್ರಂಥಗಳ ಅಧ್ಯಯನ |
| 2. ದೇವಯಜ್ಞ | ದೇವತೆಗಳ ಋಣ – ಇಂದ್ರ, ಅಗ್ನಿ, ಸೂರ್ಯ ಮೊದಲಾದ ದೇವತೆಗಳಿಗೆ ಅರ್ಪಣೆ. | ಹೋಮ, ತರ್ಪಣೆ, ನೈವೇದ್ಯ, ದೀಪಾರಾಧನೆ |
| 3. ಪಿತೃಯಜ್ಞ | ಪಿತೃಗಳ ಋಣ – ತರ್ಪಣ ಮತ್ತು ಶ್ರಾದ್ಧದ ಮೂಲಕ ಪೂರ್ವಜರ ಪೂಜೆ | ಪ್ರತಿದಿನ ತಿಲತರ್ಪಣ ಅಥವಾ ವಾರ್ಷಿಕ ಶ್ರಾದ್ಧ |
| 4. ಭೂತಯಜ್ಞ | ಪ್ರಾಣಿಮಾತ್ರಗಳ ಋಣ — ಹಿಂಸಾರಹಿತ ಜೀವನ, ಪ್ರಾಣಿಗಳ ಸೇವೆ | ಅನ್ನದಾನ, ಪಕ್ಷಿಗಳಿಗೆ ಧಾನ್ಯ, ಪಶುಪಕ್ಷಿಗಳ ಕಾಳಜಿ |
| 5. ನರಯಜ್ಞ / ಅತಿಥಿಯಜ್ಞ | ಮನುಷ್ಯರ ಋಣ — ಅತಿಥಿ ಸೇವೆ, ದಾನಧರ್ಮ, ಮಾನವಸೇವೆ | ಅತಿಥಿ ಸತ್ಕಾರ, ಅನಾಥ ಸೇವೆ, ಸತ್ಪಾತ್ರ ದಾನ. |
[5] ಬ್ರಹ್ಮಲೋಕಕ್ಕಿಂತ ಕೆಳಗಿನ ಆದರೆ ಪಿತೃಲೋಕಕ್ಕಿಂತ ಮೇಲಿನ ಒಂದು ಲೋಕವನ್ನು ಪ್ರಾಜಾಪತ್ಯಲೋಕ ಎಂದು ಹೇಳಲಾಗಿದೆ.
[6] ಓಂ ನಮೋ ಭಗವತೇ ವಾಸುದೇವಾಯ ಎಂಬ ದ್ವಾದಶಾಕ್ಷರ ಮಂತ್ರವನ್ನು ಜಪಿಸುವವರು.
[7] ತಾಮಿಸ್ರ=ಕತ್ತಲೆ. ಇದು ಆಧ್ಯಾತ್ಮಿಕ ಅಜ್ಞಾನ ಮತ್ತು ದ್ರೋಹದ ಕತ್ತಲೆಯ ಸಂಕೇತ. ಪರದಾರೆಯನ್ನು ಮೋಸದಿಂದ ವಶಪಡಿಸಿ ಕೊಳ್ಳುವವರು ಅಥವಾ ಇತರರ ಸಂಪತ್ತನ್ನು ಕಪಟದಿಂದ ಕಸಿದುಕೊಳ್ಳುವವರು ಈ ನರಕಕ್ಕೆ ಬೀಳುತ್ತಾರೆ. ಅವರು ಕತ್ತಲಾದ ಗುಹೆಗಳಲ್ಲಿ ಬಂಧಿತರಾಗುತ್ತಾರೆ. ಆಹಾರ-ನೀರು ಇಲ್ಲದೇ ಕಷ್ಟಪಟ್ಟು ದೇಹವು ಬಲಹೀನವಾಗುತ್ತದೆ. ನರಕದ ರಕ್ಷಕರು ಅವರನ್ನು ಬಲತ್ಕಾರವಾಗಿ ಬಡಿದು ಎಳೆಯುತ್ತಾರೆ.
[8] ಅಂಧತಾಮಿಸ್ರ=ಸಂಪೂರ್ಣಕತ್ತಲೆ. ಇದು ದಿವ್ಯಜ್ಞಾನವಿಲ್ಲದ ದುಷ್ಟಮನಸ್ಸಿನ ಸ್ಥಿತಿ. ಧರ್ಮದ ಹೆಸರಿನಲ್ಲಿ ದೇವ-ಗುರು-ಪಿತೃಗಳ ಗೌರವವನ್ನು ಕಳೆದು ಇತರರನ್ನು ಮೋಸಗೊಳಿಸುವವರು ಈ ನರಕಕ್ಕೆ ಬೀಳುತ್ತಾರೆ. ಅವರು ಅಂಧಕಾರದೊಳಗೆ ಎಸೆಯಲ್ಪಟ್ಟು ಕಣ್ಣು ಕಾಣದ ಸ್ಥಿತಿಯನ್ನು ಹೊಂದುತ್ತಾರೆ. ಬಾಧೆ ಮತ್ತು ಭಯದಿಂದ ಚಿತ್ತಶಕ್ತಿಯನ್ನು ಕಳೆದುಕೊಳ್ಳುತ್ತಾರೆ.
[9] ರೌರವ ನರಕದಲ್ಲಿ “ರುರು” ಎಂಬ ಭಯಾನಕ ಮಾಂಸಾಹಾರೀ ಸರ್ಪಾಕಾರದ ಪ್ರಾಣಿಗಳು ಪಾಪಿಗಳನ್ನು ಹಿಂಸಿಸುತ್ತವೆ. ಅವರ ಕೂಗಿನಿಂದ ಈ ನರಕಕ್ಕೆ “ರೌರವ” ಎಂಬ ಹೆಸರು ಬಂದಿದೆ. ಸ್ವಾರ್ಥಕ್ಕಾಗಿ ಇತರರಿಗೆ ಭಯಂಕರ ಹಾನಿಯನ್ನು ಮಾಡುವವರು ಅಥವಾ ಜೀವಿಗಳನ್ನು ಅನಾವಶ್ಯಕವಾಗಿ ಹಿಂಸಿಸುವವರು ಇಲ್ಲಿ ಬೀಳುತ್ತಾರೆ.
[10] ಮಹಾರೌರವ ನರಕದಲ್ಲಿ ರೌರವಕ್ಕಿಂತಲೂ ಭಯಾನಕ ಕೃಮಿಸರ್ಪಗಳು ಪಾಪಿಯನ್ನು ಜೀವಂತವಾಗಿಯೇ ಕಡಿಯುತ್ತವೆ. ಪಾಪಿಯ ಚಿತ್ತವು ನಿರಂತರ ನೋವಿನಲ್ಲಿ ತೊಳಲುತ್ತದೆ. ಸ್ವಂತ ಜೀವ ಉಳಿಸಿಕೊಳ್ಳಲು ಇತರರ ಪ್ರಾಣವನ್ನು ಬಲಿಕೊಡುವವರು ಅಥವಾ ತಮ್ಮ ಸ್ವಾರ್ಥಕ್ಕಾಗಿ ಪ್ರಾಣಿಗಳನ್ನು ಹಿಂಸಿಸುವವರು ಇಲ್ಲಿ ಬೀಳುತ್ತಾರೆ.
[11] ಅಸಿ=ಕತ್ತಿ, ಪತ್ರ=ಎಲೆ. ಅಸಿಪತ್ರ ನರಕದಲ್ಲಿ ಕತ್ತಿಯಂತೆ ಉರಿಯುವ ಎಲೆಗಳಿರುವ ಮರಗಳ ಕಾಡಿದೆ. ಪಾಪಿಗಳು ಅದರೊಳಗೆ ಓಡಾಡುವಾಗ ಕತ್ತಿಯ ಎಲೆಗಳು ದೇಹವನ್ನು ಕಡಿಯುತ್ತವೆ. ಅವರು ಬೀಳುತ್ತಿದ್ದರೂ ಪುನಃ ಎದ್ದು ಹೋಗಬೇಕಾಗುತ್ತದೆ. ಅಸಹನೀಯ ಕಷ್ಟ. ಧರ್ಮಗ್ರಂಥಗಳನ್ನು ತಿರಸ್ಕರಿಸುವವರು, ಸನಾತನ ಮಾರ್ಗವನ್ನು ನಿಂದಿಸುವವರು, ನಾಸ್ತಿಕರು ಮತ್ತು ದುರ್ಜನರು ಈ ನರಕಕ್ಕೆ ಬೀಳುತ್ತಾರೆ.
[12] ಕಾಲಸೂತ್ರ ಎಂದರೆ ಕಾಲವೇ ಬಂಧನ. ಅಂತ್ಯವಿಲ್ಲದ ಯಾತನೆ. ಅಲ್ಲಿ ನೆಲವು ಉರಿಯುತ್ತಿರುವ ಅಗ್ಗಿಯಂತೆ ಕಾವಾಗಿರುತ್ತದೆ, ಮೇಲೆ ಸೂರ್ಯನ ತಾಪವೂ ಇರುತ್ತದೆ. ಅಲ್ಲಿ ಬಿದ್ದವರು ದಿನರಾತ್ರಿ ಉಷ್ಣತೆಯಿಂದ ಸುಡುತ್ತಾ, ಕಾಡಿನಿಂದ, ಹುಳಗಳಿಂದ, ಶೋಕದಿಂದ ನರಳುತ್ತಾರೆ. ತಮ್ಮ ತಾಯ್ತಂದೆ, ಬ್ರಾಹ್ಮಣ, ಅಥವಾ ಗುರುವಿನ ವಿರುದ್ಧ ಪಾಪಮಾಡುವವರು, ಹಾಗೂ ಧರ್ಮನಿಂದಕರು ಈ ನರಕಕ್ಕೆ ಬೀಳುತ್ತಾರೆ.
[13] ಅ-ವೀಚಿ ಎಂದರೆ ವಿಶ್ರಾಂತಿಯಿಲ್ಲದುದು. ಅಲ್ಲಿ ಪಾಪಿಯು ಆಳವಾದ ಕುಣಿಯಲ್ಲಿ ಬೀಳುತ್ತಾನೆ; ಅದರ ಅಡಿಯಲ್ಲಿ ಉರಿ-ಅಗ್ನಿ, ಮೇಲೆ ಕಲ್ಲಿನ ಮಳೆ. ಅವರು ಬೀಳುತ್ತಿದ್ದರೂ ತಕ್ಷಣ ಮೇಲಕ್ಕೆ ಎಸೆಯಲ್ಪಟ್ಟು ಮತ್ತೆ ಬೀಳುತ್ತಾರೆ — ಅನಂತ ಚಕ್ರ. ಅತಿ ಕ್ರೂರರು — ದೇವನಿಂದಕರು, ಶರಣಾಗತರ ಹತ್ಯಾಕಾರರು, ಪಾಪವನ್ನು ಧರ್ಮವೆಂದು ಬೋಧಿಸುವವರು ಈ ನರಕಕ್ಕೆ ಬೀಳುತ್ತಾರೆ.