ಛಾಂದೋಗ್ಯೋಪನಿಷತ್: ಷಷ್ಠೋಽಧ್ಯಾಯಃ ಅಷ್ಟಮಃ ಖಂಡಃ

 

ಉದ್ದಾಲಕೋ ಹಾರುಣಿಃ ಶ್ವೇತಕೇತುಂ ಪುತ್ರಮುವಾಚ ಸ್ವಪ್ನಾಂತಂ ಮೇ ಸೋಮ್ಯ ವಿಜಾನೀಹೀತಿ ಯತ್ರೈತತ್ಪುರುಷಃ ಸ್ವಪಿತಿ ನಾಮ ಸತಾ ಸೋಮ್ಯ ತದಾ ಸಂಪನ್ನೋ ಭವತಿ ಸ್ವಮಪೀತೋ ಭವತಿ ತಸ್ಮಾದೇನ ಸ್ವಪಿತೀತ್ಯಾಚಕ್ಷತೇ ಸ್ವಹ್ಯಪೀತೋ ಭವತಿ ।। 1 ।। ಸ ಯಥಾ ಶಕುನಿಃ ಸೂತ್ರೇಣ ಪ್ರಬದ್ಧೋ ದಿಶಂ ದಿಶಂ ಪತಿತ್ವಾನ್ಯತ್ರಾಯತನಮಲಬ್ಧ್ವಾ ಬಂಧನಮೇವೋಪಶ್ರಯತ ಏವಮೇವ ಖಲು ಸೋಮ್ಯ ತನ್ಮನೋ ದಿಶಂ ದಿಶಂ ಪತಿತ್ವಾನ್ಯತ್ರಾಯತನಮಲಬ್ಧ್ವಾ ಪ್ರಾಣಮೇವೋಪಶ್ರಯತೇ ಪ್ರಾಣಬಂಧನ ಹಿ ಸೋಮ್ಯ ಮನ ಇತಿ ।। 2 ।।

ಉದ್ದಾಲಕ ಆರುಣಿಯು ಮಗ ಶ್ವೇತಕೇತುವಿಗೆ ಹೇಳಿದನು: “ಸೋಮ್ಯ! ನಿದ್ರೆಯ ಸ್ವರೂಪವನ್ನು ನನ್ನಿಂದ ತಿಳಿದುಕೋ. ಪುರುಷನು ಮಲಗಿದಾಗ ಅವನು ಸತ್ ದೊಡನೆ (ಮೂಲವಸ್ತುವಿನೊಡನೆ) ಒಂದಾಗಿರುತ್ತಾನೆ. ತನ್ನಲ್ಲಿ ಅರ್ಥಾತ್ ಆತ್ಮನಲ್ಲಿ ಲಯಹೊಂದಿರುತ್ತಾನೆ. ಆದ್ದರಿಂದ “ಮಲಗಿದ್ದಾನೆ” ಎಂದು ಹೇಳುತ್ತಾರೆ. ಏಕೆಂದರೆ “ಸ್ವಮ್ ಅಪೀತಃ” ಅವನು ತನ್ನಲ್ಲಿ ಒಂದಾಗಿರುತ್ತಾನೆ. ಹೇಗೆ ಬಂಧಿಸಲ್ಪಟ್ಟ ಪಕ್ಷಿಯು ದಿಕ್ಕು ದಿಕ್ಕು ಸುತ್ತಾಡಿದರೂ ಎಲ್ಲಿಯೂ ಆಶ್ರಯದೊರಕದೇ ಪುನಃ ತನ್ನ ಬಂಧನದ ಆಶ್ರಯದಲ್ಲಿಯೇ ಇರುತ್ತದೆಯೋ ಹಾಗೆ ಮನಸ್ಸು ದಿಕ್ಕು-ದಿಕ್ಕಿಗೆ ಹೋಗಿ ಎಲ್ಲಿಯೂ ಆಶ್ರಯದೊರೆಯದೇ ತನ್ನ ಪ್ರಾಣವನ್ನೇ ಆಶ್ರಯಿಸುತ್ತದೆ. ಪ್ರಾಣವೇ ಮನಸ್ಸಿನ ಬಂಧನವು.

ಅಶನಾಪಿಪಾಸೇ ಮೇ ಸೋಮ್ಯ ವಿಜಾನೀಹೀತಿ ಯತ್ರೈತತ್ಪುರುಷೋಽಶಿಶಿಷತಿ ನಾಮಾಪ ಏವ ತದಶಿತಂ ನಯಂತೇ ತದ್ಯಥಾ ಗೋನಾಯೋಽಶ್ವನಾಯಃ ಪುರುಷನಾಯ ಇತ್ಯೇವಂ ತದಪ ಆಚಕ್ಷತೇಽಶನಾಯೇತಿ ತತ್ರಿತಚ್ಛುಂಗಮುತ್ಪತಿತ ಸೋಮ್ಯ ವಿಜಾನೀಹಿ ನೇದಮಮೂಲಂ ಭವಿಷ್ಯತೀತಿ ।। 3 ।।

ಸೋಮ್ಯ! ನನ್ನಿಂದ ಹಸಿವು-ಬಾಯಾರಿಕೆಗಳ ಸ್ವರೂಪವನ್ನು ತಿಳಿದುಕೋ. ಪುರುಷನು ತಿನ್ನುವ ಇಚ್ಛೆಯುಳ್ಳವನಾದರೆ ನೀರೇ ಆ ತಿಂದ ಅನ್ನವನ್ನು ಸರಿಯಾಗಿ ಒಯ್ಯುತ್ತದೆ. ಹೇಗೆ ಹಸು, ಕುದುರೆ, ಮತ್ತು ಮನುಷ್ಯರನ್ನು ಒಯ್ಯುವವರು ಅನುಕ್ರಮವಾಗಿ ಗೋನಾಯ, ಅಶ್ವನಾಯ ಮತ್ತು ಪುರುಷನಾಯ ಎಂದು ಕರೆಯಲ್ಪಡುತ್ತಾರೋ ಹಾಗೆಯೇ ನೀರು “ಅಶನಾಯ” ಎಂದೆನಿಸಿಕೊಂಡಿದೆ. ಆದ್ದರಿಂದ, ಮೊಳೆದ ಈ ಅಂಕುರವು (ನೀರಿನಿಂದ ಬೆಳೆದ ಈ ದೇಹವು) ಬೇರಿಲ್ಲದೇ ಇಲ್ಲ ಎಂದು ತಿಳಿ.

ತಸ್ಯ ಕ್ವ ಮೂಲ ಸ್ಯಾದನ್ಯತ್ರಾನ್ನಾದೇವಮೇವ ಖಲು ಸೋಮ್ಯಾನ್ನೇನ ಶುಂಗೇನಾಪೋ ಮೂಲಮನ್ವಿಚ್ಛಾದ್ಭಿಃ ಸೋಮ್ಯ ಶುಂಗೇನ ತೇಜೋ ಮೂಲಮನ್ವಿಚ್ಛ ತೇಜಸಾ ಸೋಮ್ಯ ಶುಂಗೇನ ಸನ್ಮೂಲಮನ್ವಿಚ್ಛ ಸನ್ಮೂಲಾಃ ಸೋಮ್ಯೇಮಾಃ ಸರ್ವಾಃ ಪ್ರಜಾಃ ಸದಾಯತನಾಃ ಸತ್ಪ್ರತಿಷ್ಠಾಃ ।। 4 ।।

ಸೋಮ್ಯ! ಅನ್ನದ ಹೊರತಾಗಿ ಈ ದೇಹಕ್ಕೆ ಇನ್ನ್ಯಾವ ಮೂಲವು ಇರಬಹುದು? ಅದೇ ರೀತಿ, ಅನ್ನ ಎಂಬ ಅಂಕುರದಿಂದ ನೀರು ಎಂಬ ಬೇರನ್ನು, ನೀರು ಎಂಬ ಅಂಕುರದಿಂದ ತೇಜಸ್ಸು ಎಂಬ ಬೇರನ್ನು, ಮತ್ತು ತೇಜಸ್ಸು ಎಂಬ ಅಂಕುರದಿಂದ ಸತ್ ಎಂಬ ಬೇರನ್ನು ತಿಳಿದುಕೋ. ಈ ಎಲ್ಲ ಪ್ರಜೆಗಳೂ ಸತ್ ಎಂಬ ಬೇರುಳ್ಳವರು. ಸತ್ತೇ ಅವರ ಆಶ್ರಯವು. ಆಧಾರವು.

ಅಥ ಯತ್ರೈತತ್ಪುರುಷಃ ಪಿಪಾಸತಿ ನಾಮ ತೇಜ ಏವ ತತ್ಪೀತಂ ನಯತೇ ತದ್ಯಥಾ ಗೋನಾಯೋಽಶ್ವನಾಯಃ ಪುರುಷನಾಯ ಇತ್ಯೇವಂ ತತ್ತೇಜ ಆಚಷ್ಟ ಉದನ್ಯೇತಿ ತತ್ರೈತದೇವ ಶುಂಗಮುತ್ಪತಿತ ಸೋಮ್ಯ ವಿಜಾನೀಹಿ ನೇದಮಮೂಲಂ ಭವಿಷ್ಯತೀತಿ ।। 5 ।।

ಪುರುಷನು ಬಾಯಾರಿಕೆಯೆಂದು ನೀರು ಕುಡಿದರೆ, ಕುಡಿದ ನೀರನ್ನು ತೇಜಸ್ಸೇ ಒಯ್ಯುತ್ತದೆ. ಹೇಗೆ ಗೋನಾಯ, ಅಶ್ವನಾಯ, ಮತ್ತು ಪುರುಷನಾಯ ಎಂಬ ಹೆಸರುಗಳಿವೆಯೋ ಹಾಗೆ ತೇಜಸ್ಸಿಗೆ “ಉದನ್ಯ” (ನೀರನ್ನು ಒಯ್ಯುವುದು) ಎಂಬ ಹೆಸರಿದೆ. ಈ ಅಂಕುರ (ದೇಹ) ವು ಅದರಿಂದ ಉತ್ಪನ್ನವಾಗದೆ. ಇದು ಬೇರಿಲ್ಲದ್ದು ಅಲ್ಲ ಎಂದು ತಿಳಿದುಕೋ.

ತಸ್ಯ ಕ್ವ ಮೂಲ ಸ್ಯಾದನ್ಯತ್ರಾದ್ಭ್ಯೋಽದ್ಭಿಃ ಸೋಮ್ಯ ಶುಂಗೇನ ತೇಜೋ ಮೂಲಮನ್ವಿಚ್ಛ ತೇಜಸಾ ಸೋಮ್ಯ ಶುಂಗೇನ ಸನ್ಮೂಲಮನ್ವಿಚ್ಛ ಸನ್ಮೂಲಾಃ ಸೋಮ್ಯೇಮಾಃ ಸರ್ವಾಃ ಪ್ರಜಾಃ ಸದಾಯತನಾಃ ಸತ್ಪ್ರತಿಷ್ಠಾ ಯಥಾ ತು ಖಲು ಸೋಮ್ಯೇಮಾಸ್ತಿಸ್ರೋ ದೇವತಾಃ ಪುರುಷಂ ಪ್ರಾಪ್ಯ ತ್ರಿವೃತ್ತ್ರಿವೃದೇಕೈಕಾ ಭವತಿ ತದುಕ್ತಂ ಪುರಸ್ತಾದೇವ ಭವತ್ಯಸ್ಯ ಸೋಮ್ಯ ಪುರುಷಸ್ಯ ಪ್ರಯತೋ ವಾಙ್ಮನಸಿ ಸಂಪದ್ಯತೇ ಮನಃ ಪ್ರಾಣೇ ಪ್ರಾಣಸ್ತೇಜಸಿ ತೇಜಃ ಪರಸ್ಯಾಂ ದೇವತಾಯಾಮ್ ।। 6 ।।

ಸೋಮ್ಯ! ನೀರಿನ ಹೊರತು ಇದರ (ಈ ದೇಹದ) ಮೂಲವು ಇನ್ನ್ಯಾವುದಿರಬಹುದು? ನೀರೆಂಬ ಅಂಕುರದಿಂದ ತೇಜಸ್ಸು ಎಂಬ ಮೂಲವನ್ನು, ತೇಜಸ್ಸು ಎಂಬ ಅಂಕುರದಿಂದ ಸತ್ ಎಂಬ ಮೂಲವನ್ನು ತಿಳಿದುಕೋ. ಈ ಎಲ್ಲ ಪ್ರಜೆಗಳೂ ಸತ್ ಎಂಬ ಬೇರುಳ್ಳವರು. ಸತ್ತೇ ಅವರ ಆಶ್ರಯವು, ಆಧಾರವು. ಮಗನೇ! ಈ ಮೂರು (ತೇಜಾದಿ) ದೇವತೆಗಳು ಪುರುಷನಲ್ಲಿ ತ್ರಿವೃತ್ತಾಗಿ ಹೇಗೆ ಇರುತ್ತವೆ ಎನ್ನುವುದನ್ನು ನಾನು ಈ ಮೊದಲೇ ಹೇಳಿದ್ದೇನೆ. ಅದೇ ರೀತಿ, ಸಾಯುವ ಮನುಷ್ಯನ ವಾಣಿಯು ಮನಸ್ಸಿನಲ್ಲಿ, ಮನಸ್ಸು ಪ್ರಾಣದಲ್ಲಿ, ಪ್ರಾಣವು ತೇಜಸ್ಸಿನಲ್ಲಿ ಮತ್ತು ತೇಜಸ್ಸು ಪರಾದೇವತೆಯಲ್ಲಿ ಲಯ ಹೊಂದುತ್ತದೆ.

ಸ ಯ ಏಷೋಽಣಿಮೈತದಾತ್ಮ್ಯಮಿದ ಸರ್ವಂ ತತ್ಸತ್ಯ ಆತ್ಮಾ ತತ್ತ್ವಮಸಿ ಶ್ವೇತಕೇತೋ ಇತಿ ಭೂಯ ಏವ ಮಾ ಭಗವಾನ್ವಿಜ್ಞಾಪಯತ್ವಿತಿ ತಥಾ ಸೋಮ್ಯೇತಿ ಹೋವಾಚ ।। 7 ।।

ಆ ಪರಾದೇವತೆಯು ಅತ್ಯಂತ ಸೂಕ್ಷ್ಮವು. ಇವೆಲ್ಲವೂ ಆತ್ಮಸ್ವರೂಪವು. ಅದು ಸತ್ಯ. ಅದೇ ಆತ್ಮವು. ಶ್ವೇತಕೇತೋ! ನೀನೂ ಅದೇ ಆಗಿರುವೆ!” ಇದನ್ನು ಕೇಳಿ ಮಗನು “ನನಗೆ ಇನ್ನೂ ಜ್ಞಾನವನ್ನು ನೀಡಬೇಕು” ಎಂದು ಕೇಳಲು “ಆಯಿತು, ಮಗನೇ!” ಎಂದು ತಂದೆಯು ಒಪ್ಪಿಕೊಂಡನು.

ಇತಿ  ಅಷ್ಟಮಃ ಖಂಡಃ ।।

Leave a Reply

Your email address will not be published. Required fields are marked *