ಛಾಂದೋಗ್ಯೋಪನಿಷತ್: ಷಷ್ಠೋಽಧ್ಯಾಯಃ ಪಂಚಮಃ ಖಂಡಃ
ಅನ್ನಮಶಿತಂ ತ್ರೇಧಾ ವಿಧೀಯತೇ ತಸ್ಯ ಯಃ ಸ್ಥವಿಷ್ಠೋ ಧಾತುಸ್ತತ್ಪುರೀಷಂ ಭವತಿ ಯೋ ಮಧ್ಯಮಸ್ತನ್ಮಾಗ್ಂಸಂ ಯೋಽಣಿಷ್ಠಸ್ತನ್ಮನಃ ।। 1 ।। ಆಪಃ ಪೀತಾಸ್ತ್ರೇಧಾ ವಿಧೀಯಂತೇ ತಾಸಾಂ ಯಃ ಸ್ಥವಿಷ್ಠೋ ಧಾತುಸ್ತನ್ಮೂತ್ರಂ ಭವತಿ ಯೋ ಮಧ್ಯಮಸ್ತಲ್ಲೋಹಿತಂ ಯೋಽಣಿಷ್ಠಃ ಸ ಪ್ರಾಣಃ ।। 2 ।। ತೇಜೋಽಶಿತಂ ತ್ರೇಧಾ ವಿಧೀಯತೇ ತಸ್ಯ ಯಃ ಸ್ಥವಿಷ್ಠೋ ಧಾತುಸ್ತದಸ್ಥಿ ಭವತಿ ಯೋ ಮಧ್ಯಮಃ ಸ ಮಜ್ಜಾ ಯೋಽಣಿಷ್ಠಃ ಸಾ ವಾಕ್ ।। 3 ।। ಅನ್ನಮಯಗ್ಂ ಹಿ ಸೋಮ್ಯ ಮನಃ ಆಪೋಮಯಃ ಪ್ರಾಣಸ್ತೇಜೋಮಯೀ ವಾಗಿತಿ ಭೂಯ ಏವ ಮಾ ಭಗವಾನ್ವಿಜ್ಞಾಪಯತ್ವಿತಿ ತಥಾ ಸೋಮ್ಯೇತಿ ಹೋವಾಚ ।। 4 ।।
ತಿಂದ ಅನ್ನವು ಮೂರು ಭಾಗವಾಗುತ್ತದೆ. ಅದರ ಅತ್ಯಂತ ಸ್ಥೂಲಭಾಗವು ಮಲವಾಗುತ್ತದೆ. ಮಧ್ಯಮ ಭಾಗವು ಮಾಂಸವಾಗುತ್ತದೆ. ಅತ್ಯಂತ ಸೂಕ್ಷ್ಮಭಾಗವು ಮನಸ್ಸಾಗುತ್ತದೆ. ಕುಡಿದ ನೀರು ಮೂರು ಭಾಗವಾಗುತ್ತದೆ. ಅದರ ಅತ್ಯಂತ ಸ್ಥೂಲಭಾಗವು ಮೂತ್ರವಾಗುತ್ತದೆ. ಮಧ್ಯಮಭಾಗವು ರಕ್ತವಾಗುತ್ತದೆ. ಅತ್ಯಂತ ಸೂಕ್ಷ್ಮಭಾಗವು ಪ್ರಾಣವಾಗುತ್ತದೆ. ತಿಂದ ಎಣ್ಣೆಯು (ತೇಜಸ್ಸು) ಮೂರು ಭಾಗವಾಗುತ್ತದೆ. ಅದರ ಅತ್ಯಂತ ಸ್ಥೂಲಭಾಗವು ಎಲುಬಾಗುತ್ತದ. ಮಧ್ಯಮ ಭಾಗವು ಮಜ್ಜೆಯಾಗುತ್ತದೆ. ಅತ್ಯಂತ ಸೂಕ್ಷ್ಮಭಾಗವು ವಾಣಿಯಾಗುತ್ತದೆ. ಸೋಮ್ಯ! ಮನಸ್ಸು ಅನ್ನಮಯವು. ಪ್ರಾಣವು ಆಪೋಮಯವು. ವಾಣಿಯು ತೇಜೋಮಯವು.” ಅದಕ್ಕೆ ಮಗನು “ಭಗವನ್! ನನಗೆ ಇನ್ನೂ ಹೆಚ್ಚಿನ ಜ್ಞಾನವನ್ನು ನೀಡಬೇಕು” ಎಂದು ಕೇಳಲು ತಂದೆಯು “ಹಾಗೆಯೇ ಆಗಲಿ ಮಗನೇ!” ಎಂದು ಹೇಳಿದನು.
ತಿಂದ ಆಹಾರವು ಶರೀರದೊಳಗಿದ ಅಗ್ನಿಯಿಂದ ಪಕ್ವವಾಗಿ ಮೂರು ಬಗೆಯಾಗಿ ವಿಂಗಡವಾಗುತ್ತದೆ. ಆಹಾರದ ಅತ್ಯಂತ ಸ್ಥೂಲವಾದ ವಸ್ತು – ಅಂದರೆ ದಪ್ಪನೆಯ ಅಂಶವು – ಮಲವಾಗುತ್ತದೆ. ಆಹಾರದ ಮಧ್ಯಮಧಾತುವು ರಸಾದಿಕ್ರಮದಿಂದ[1] ಮಾಂಸವಾಗಿ ಪರಿಣಮಿಸುತ್ತದೆ. ಆಹಾರದಲ್ಲಿರುವ ಅತ್ಯಂತ ಸೂಕ್ಷ್ಮ ಧಾತುಗಳು ಮೇಲೆ ಹೃದಯಕ್ಕೆ ಹೋಗಿ, ಸೂಕ್ಷ್ಮವಾದ ಹಿತವಾದಗಳೆಂಬ ನಾಡಿಗಳ ಮೂಲಕ ವಾಕ್ಕೇ ಮುಂತಾದ ಕರಣಸಂಘಾತಕ್ಕೆ ಸೇರಿ ಮನಸ್ಸಾಗುತ್ತದೆ. ಅದು ಮನಸ್ಸಿನ ರೂಪಕ್ಕೆ ಪರಿಣಮಿಸಿ ಮನಸ್ಸಿನ ಬೆಳವಣಿಗೆಯನ್ನುಂಟುಮಾಡುತ್ತದೆ. ಅನ್ನದಿಂದ ಬೆಳೆದಿರುವುದರಿಂದ ಮನಸ್ಸು ಭೌತಿಕವೇ ಹೊರತು ವೈಶೇಷಿಕಶಾಸ್ತ್ರದಲ್ಲಿ ಹೇಳಿರುವಂತೆ ಇದು ನಿತ್ಯವೂ ನಿರವಯವೂ ಅಲ್ಲ. “ಮನೋಽಸ್ಯ ದೈವ ಚಕ್ಷುಃ” ಅರ್ಥಾತ್ ಇವನಿಗೆ ಮನಸ್ಸು ದೈವಚಕ್ಷಸ್ಸು (8-12-5) ಎಂದು ಮುಂದೆ ಹೇಳಿರುವಂತೆ ಮನಸ್ಸು ನಿತ್ಯವಲ್ಲ. ಅದು ಸೂಕ್ಷ್ಮವು. ವ್ಯವಧಾನವುಳ್ಳದ್ದು. ದೂರವಿರುವುದು. ಎಲ್ಲ ಇಂದ್ರಿಯವಿಷಯಗಳನ್ನೂ ವ್ಯಾಪಿಸಿರುವುದು ಎಂಬ ಅಭಿಪ್ರಾಯ[2].
ಹೀಗೆಯೇ ಕುಡಿದ ನೀರು ಮೂರುಬಗೆಯಾಗಿ ಮಾಡಲ್ಪಡುತ್ತದೆ. ಅದರ ಸ್ಥೂಲಭಾಗವು ಮೂತ್ರವಾಗುತ್ತದೆ. ಮಧ್ಯಮಭಾಗವು ರಕ್ತವಾಗುತ್ತದೆ. ಅತಿ ಸೂಕ್ಷ್ಮವಾದ ಭಾಗವು ಪ್ರಾಣವಾಗುತ್ತದೆ. ಮುಂದೆ ಹೇಳಿರುವಂತೆ “ಆಪೋಮಯಃ ಪ್ರಾಣೋ ನ ಪಿಬತೋ ವಿಚ್ಛೇತ್ಸ್ಯತ” ಅರ್ಥಾತ್ ಪ್ರಾಣವು ಆಪೋಮಯವು. ಕುಡಿಯದೇ ಇದ್ದವನಿಗೆ ಪ್ರಾಣವು ಹೋಗಿಬಿಡುತ್ತದೆ.
ಹೀಗೆಯೇ ತೈಲ, ತುಪ್ಪ ಮೊದಲಾದ ತೇಜೋರೂಪದ ಆಹಾರಗಳು ತಿಂದನಂತರ ಮೂರಾಗಿ ಮಾಡಲ್ಪಡುತ್ತವೆ. ಅದರ ಸ್ಥೂಲತಮ ಧಾತುವು ಎಲುಬಾಗುತ್ತದೆ. ನಡುವಿನ ಧಾತು ಮಜ್ಜೆ ಅಥವಾ ಎಲುಬಿನೊಳಗಿನ ಜಿಡ್ಡಾಗುತ್ತದೆ. ಅತಿ ಸೂಕ್ಷ್ಮವಾದ ಧಾತುವು ವಾಕ್ಕಾಗುತ್ತದೆ. ತೈಲ-ತುಪ್ಪ ಮೊದಲಾದವುಗಳನ್ನು ಸೇವಿಸುವುದರಿಂದ ಮಾತನಾಡುವವರ ಮಾತು ಶುದ್ಧವಾಗಿರುತ್ತದೆ ಎಂದು ಲೋಕದಲ್ಲಿ ಪ್ರಸಿದ್ಧವಷ್ಟೇ?
ಆದ್ದರಿಂದ ಮನಸ್ಸು ಅನ್ನಮಯವು. ಪ್ರಾಣವು ಆಪೋಮಯವು. ವಾಕ್ಕು ತೇಜೋಮಯವು.
ಶ್ವೇತಕೇತುವು ಇನ್ನೂ ನನಗೆ ತಿಳಿಸಿಕೊಡಬೇಕು ಎನ್ನುತ್ತಾನೆ. ಈ ವಿಷಯದಲ್ಲಿ ಈಗಲೂ ನನಗೆ ಸರಿಯಾದ ನಿಶ್ಚಯವಾಗಿರುವುದಿಲ್ಲ. ಏಕೆಂದರೆ ತೇಜೋಬನ್ನಮಯವೆನ್ನುವುದು ಸಮಾನವಾಗಿರುವಾಗ ಒಂದೇ ದೇಹದಲ್ಲಿ ಉಪಯುಕ್ತವಾಗುವ ಅನ್ನ, ನೀರು, ಜಿಡ್ಡು ಇವುಗಳು ಅಣಿಷ್ಠವಾದ ಧಾತುರೂಪದಿಂದ ತಮ್ಮ ಜಾತಿಯನ್ನು ಮೀರಿ ಮನಃಪ್ರಣವಾಕ್ಕುಗಳನ್ನೇ ಬೆಳೆಸುತ್ತವೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದ ಕಷ್ಟ ಎಂದು ಅಭಿಪ್ರಾಯ. ಆದ್ದರಿಂದ ಇನ್ನೂ ತಿಳಿಸಬೇಕು ಎಂದು ಕೇಳಿದ್ದಾನೆ.
ಇತಿ ಪಂಚಮಃ ಖಂಡಃ ।।
[1] ರಸ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ, ಶುಕ್ಲ – ಇವು ರಸಾದಿಕ್ರಮ.
[2] ಇಂದ್ರಿಯಗಳು ತಮಗೆ ಸಂಬಂಧಪಟ್ಟ ವರ್ಗಮಾನಕಾಲದ ವಿಷಯಗಳನ್ನು ಮಾತ್ರ ಅರಿಯಬಲ್ಲವು. ಮನಸ್ಸು ಹಾಗಲ್ಲ. ಇಂದ್ರಿಯಗಳಿಗೆ ನಿಲುಕದ ವಿಷಯಗಳನ್ನೂ ಅರಿಯಬಲ್ಲದು ಎಂದರ್ಥ.