ಶ್ರೀವಿಷ್ಣುಮಹಾಪುರಾಣ: ಪ್ರಥಮಾಂಶ, ಅಧ್ಯಾಯ 2
ಪರಾಶರ ಉವಾಚ । ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ । ಸದೈಕರೂಪರೂಪಾಯ ವಿಷ್ಣವೇ ಸರ್ವಜಿಷ್ಣವೇ ।। 1 ।। ನಮೋ ಹಿರಣ್ಯಗರ್ಭಾಯ ಹರಯೇ ಶಂಕರಾಯ ಚ । ವಾಸುದೇವಾಯ ತಾರಾಯ ಸರ್ಗಸ್ಥಿತ್ಯಂತಕಾರಿಣೇ ।। 2 ।। ಏಕಾನೇಕಸ್ವರೂಪಾಯ ಸ್ಥೂಲಸೂಕ್ಷ್ಮಾತ್ಮನೇ ನಮಃ । ಅವ್ಯಕ್ತವ್ಯಕ್ತರೂಪಾಯ ವಿಷ್ಣವೇ ಮುಕ್ತಿಹೇತವೇ ।। 3 ।। ಸರ್ಗಸ್ಥಿತಿವಿನಾಶಾನಾಂ ಜಗತೋ ಯೋ ಜಗನ್ಮಯಃ । ಮೂಲಭೂತೋ ನಮಸ್ತಸ್ಮೈ ವಿಷ್ಣವೇ ಪರಮಾತ್ಮನೇ ।। 4 ।। ಆಧಾರಭೂತಂ ವಿಶ್ವಸ್ಯಾಪ್ಯಣೀಯಾಂಸಮಣೀಯಸಾಮ್ । ಪ್ರಣಮ್ಯ ಸರ್ವಭೂತಸ್ಥಮಚ್ಯುತಂ ಪುರುಷೋತ್ತಮಮ್ ।। 5 ।।
ಪರಾಶರನು ಹೇಳಿದನು: “ವಿಕಾರಗಳಿಲ್ಲದವನೂ, ಶುದ್ಧನೂ, ನಿತ್ಯನೂ, ಸದಾ ಏಕರೂಪನೂ, ಎಲ್ಲವನ್ನು ವ್ಯಾಪಿಸಿರುವ ವಿಷ್ಣು ಮತ್ತು ಎಲ್ಲವನ್ನೂ ಗೆದ್ದಿರುವ ಸರ್ವಜಿಷ್ಣು, ಪರಮಾತ್ಮಾ, ಹಿರಣ್ಯಗರ್ಭ, ಹರ, ಶಂಕರ, ವಾಸುದೇವನಿಗೆ, ಸೃಷ್ಟಿ-ಸ್ಥಿತಿ-ಲಯಕಾರಿಗೆ ನಮಸ್ಕರಿಸುತ್ತೇನೆ. ಏಕ ಮತ್ತು ಅನೇಕರೂಪನಿಗೆ, ಸ್ಥೂಲ ಮತ್ತು ಸೂಕ್ಷ್ಮಾತ್ಮನಿಗೆ ನಮಸ್ಕಾರವು. ಅವ್ಯಕ್ತರೂಪ ಮುಕ್ತಿಹೇತು ವಿಷ್ಣುವೇ, ನಿನಗೆ ನಮಸ್ಕಾರವು. ಜಗತ್ತಿನ ಸೃಷ್ಟಿ-ಸ್ಥಿತಿ-ವಿನಾಶಗಳ ಕಾರಣ ಸ್ವರೂಪನೂ, ಜಗನ್ಮಯನೂ, ಮೂಲಭೂತನೂ ಆದ ವಿಷ್ಣು ಪರಮಾತ್ಮ! ನಿನಗೆ ನಮಸ್ಕಾರವು! ವಿಶ್ವದ ಆಧಾರಭೂತನಾದ, ಸೂಕ್ಷ್ಮಕ್ಕಿಂತಲೂ ಸೂಕ್ಷ್ಮನಾಗಿರುವ, ಸರ್ವಭೂತಗಳಲ್ಲಿಯೂ ನೆಲೆಸಿರುವ ಅಚ್ಯುತ ಪುರುಷೋತ್ತಮನನ್ನು ನಮಸ್ಕರಿಸುತ್ತೇನೆ.
ಜ್ಞಾನಸ್ವರೂಪಮತ್ಯಂತನಿರ್ಮಲಂ ಪರಮಾರ್ಥತಃ । ತಮೇವಾರ್ಥಸ್ವರೂಪೇಣ ಭ್ರಾಂತಿದರ್ಶನತಃ ಸ್ಥಿತಮ್ ।। 6 ।। ವಿಷ್ಣುಂ ಗ್ರಸಿಷ್ಣುಂ ವಿಶ್ವಸ್ಯ ಸ್ಥಿತಿಸರ್ಗೇ ತಥಾ ಪ್ರಭುಮ್ । ಪ್ರಣಮ್ಯ ಜಗತಾಮೀಶಮಜಮಕ್ಷಯಮವ್ಯಯಮ್ ।। 7 ।। ಕಥಯಾಮಿ ಯಥಾಪೂರ್ವಂ ದಕ್ಷಾದ್ಯೈರ್ಮುನಿಸತ್ತಮೈಃ । ಪೃಷ್ಟಃ ಪ್ರೋವಾಚ ಭಗವಾನಬ್ಜಯೋನಿಃ ಪಿತಾಮಹಃ ।। 8 ।। ತೈಶ್ಚೋಕ್ತಂ ಪುರುಕುತ್ಸಾಯ ಭೂಭುಜೇ ನರ್ಮದಾತಟೇ । ಸಾರಸ್ವತಾಯ ತೇನಾಪಿ ಮಹ್ಯಂ ಸಾರಸ್ವತೇನ ಚ ।। 9 ।।
ಅತ್ಯಂತ ನಿರ್ಮಲ ಜ್ಞಾನಸ್ವರೂಪನಾದ, ಪರಮಾರ್ಥಸ್ವರೂಪನಾದ, ದೃಷ್ಯವಸ್ತುಸ್ವರೂಪನೂ, ಭ್ರಾಂತಿಯಿಂದ ಜೀವಸ್ವರೂಪನೂ ಆಗಿರುವ, ಕಾಲರೂಪದಿಂದ ಸರ್ವವ್ಯಾಪಿಯಾಗಿ, ಪ್ರಪಂಚದ ಸೃಷ್ಟಿ-ಸ್ಥಿತಿ-ಲಯಗಳ ಪ್ರಭು, ಜಗದೀಶ, ಅಜ, ಅಕ್ಷಯ, ಅವ್ಯಯನಿಗೆ ನಮಸ್ಕರಿಸಿ ಹಿಂದೆ ದಕ್ಷಾದಿ ಮುನಿಸತ್ತಮರು ಕೇಳಿದಾಗ ಭಗವಾನ್ ಕಮಲಯೋನಿ ಪಿತಾಮಹನು ಏನು ಹೇಳಿದ್ದನೋ ಅದನ್ನು ಹೇಳುತ್ತೇನೆ. ಆ ವಿಷ್ಣುತತ್ತ್ವವನ್ನು ದಕ್ಷಾದಿಗಳು ನರ್ಮದಾತಟದಲ್ಲಿ ರಾಜಾ ಪುರುಕುತ್ಸನಿಗೆ ಹೇಳಿದರು. ಅವನು ಅದನ್ನು ಸಾರಸ್ವತನಿಗೆ ಹೇಳಿದನು. ಸಾರಸ್ವತನು ಅದನ್ನು ನನಗೆ ಹೇಳಿದನು.
ಪರಃಪರಾಣಾಂ ಪರಮಃ ಪರಮಾತ್ಮಾತ್ಮಸಂಸ್ಥಿತಃ । ರೂಪವರ್ಣಾದಿನಿರ್ದೇಶ ವಿಶೇಷಣವಿವರ್ಜಿತಃ ।। 10 ।। ಅಪಕ್ಷಯವಿನಾಶಾಭ್ಯಾಂ ಪರಿಣಾಮರ್ಧಿಜನ್ಮಭಿಃ । ವರ್ಜಿತಃ ಶಕ್ಯತೇ ವಕ್ತುಂ ಯಃ ಸದಾಸ್ತೀತಿ ಕೇವಲಮ್ ।। 11 ।। ಸರ್ವತ್ರಾಸೌ ಸಮಸ್ತಂ ಚ ವಸತ್ಯತ್ರೇತಿ ವೈ ಯತಃ । ತತಃ ಸ ವಾಸುದೇವೇತಿ ವಿದ್ವದ್ಭಿಃ ಪರಿಪಠ್ಯತೇ ।। 12 ।। ತದ್ಬ್ರಹ್ಮ ಪರಮಂ ನಿತ್ಯಮಜಮಕ್ಷಯಮವ್ಯಯಮ್ । ಏಕಸ್ವರೂಪಂ ತು ಸದಾ ಹೇಯಾಭಾವಾಚ್ಚ ನಿರ್ಮಲಮ್ ।। 13 ।।
ಇಂದ್ರಿಯಾದಿಗಳಿಗಿಂತಲೂ ಪುರಾತನನೂ ಶ್ರೇಷ್ಠನೂ ಜೀವಾತ್ಮನ ಅಂತರ್ಯಾಮಿಯೂ ರೂಪ ವರ್ಣ ಮೊದಲಾದ ವಿಶೇಷಣಗಳಿಲ್ಲದವನೂ, ಕ್ಷಯ-ವಿನಾಶಗಳಿಲ್ಲದವನೂ, ವೃದ್ಧಿ-ಜನ್ಮ ಮೊದಲಾದ ಪರಿಣಾಮಗಳಿಂದ ವರ್ಜಿತನೂ, ಕೇವಲ ಸದಾ ಇದ್ದನೆಂದಲ್ಲದೇ ಬೇರೆ ಏನನ್ನೂ ಹೇಳಲು ಶಕ್ಯವಿಲ್ಲದವನೂ, ಸರ್ವತ್ರವಿರುವ, ಮತ್ತು ಸಮಸ್ತದಲ್ಲಿಯೂ ವಾಸಿಸುವವನಾದ್ದರಿಂದ ಯಾರನ್ನು ವಿದ್ವಾಂಸರು ವಾಸುದೇವ ಎನ್ನುತ್ತಾರೋ ಅವನೇ ಪರಮ, ನಿತ್ಯ, ಅಜ, ಅಕ್ಷಯ, ಅವ್ಯಯ, ಸದಾ ಏಕರೂಪ, ಅವಿದ್ಯಾದಿ ಕಾರ್ಯಗಳಿಲ್ಲದೇ ನಿರ್ಮಲನಾಗಿರುವ ಪರಬ್ರಹ್ಮನು.
ತದೇವ ಸರ್ವಮೇತಚ್ಚ ವ್ಯಕ್ತಾವ್ಯಕ್ತಸ್ವರೂಪವತ್ । ತಥಾ ಪುರುಷರೂಪೇಣ ಕಾಲರೂಪೇಣ ಚ ಸ್ಥಿತಮ್ ।। 14 ।। ಪರಸ್ಯ ಬ್ರಹ್ಮಣೋ ರೂಪಂ ಪುರುಷಃ ಪ್ರಥಮಂ ದ್ವಿಜ । ವ್ಯಕ್ತಾವ್ಯಕ್ತೇ ತಥೈವಾನ್ಯೇ ರೂಪೇ ಕಾಲಸ್ತಥಾಪರಮ್ ।। 15 ।। ಪ್ರಧಾನಪುರುಷವ್ಯಕ್ತಕಾಲಾನಾಂ ಪರಮಂ ಹಿ ಯತ್ । ಪಶ್ಯಂತಿ ಸೂರಯಃ ಶುದ್ಧಂ ತದ್ವಿಷ್ಣೋಃ ಪರಮಂ ಪದಮ್ ।। 16 ।। ಪ್ರಧಾನಪುರುಷವ್ಯಕ್ತಕಾಲಾಸ್ತು ಪ್ರವಿಭಾಗಶಃ । ರೂಪಾಣಿ ಸ್ಥಿತಿಸರ್ಗಾಂತವ್ಯಕ್ತಿಸದ್ಭಾವಹೇತವಃ ।। 17 ।। ವ್ಯಕ್ತಂ ವಿಷ್ಣುಸ್ತಥಾಽವ್ಯಕ್ತಂ ಪುರುಷಃ ಕಾಲ ಏವ ಚ । ಕ್ರೀಡತೋ ಬಾಲಕಸ್ಯೇವ ಚೇಷ್ಟಾಂ ತಸ್ಯ ನಿಶಾಮಯ ।। 18 ।। ಅವ್ಯಕ್ತಂ ಕಾರಣಂ ಯತ್ತತ್ಪ್ರಧಾನಮೃಷಿಸತ್ತಮೈಃ । ಪ್ರೋಚ್ಯತೇ ಪ್ರಕೃತಿಃ ಸೂಕ್ಷ್ಮಾ ನಿತ್ಯಂ ಸದಸದಾತ್ಮಕಮ್ ।। 19 ।। ಅಕ್ಷಯಂ ನಾನ್ಯದಾಧಾರಮಮೇಯಮಜರಂ ಧ್ರುವಮ್ । ಶಬ್ದಸ್ಪರ್ಶವಿಹೀನಂ ತದ್ರೂಪಾದಿಭಿರಸಂಹತಮ್ ।। 20 ।। ತ್ರಿಗುಣಂ ತಜ್ಜಗದ್ಯೋನಿರನಾದಿಪ್ರಭವಾಪ್ಯಯಮ್ । ತೇನಾಗ್ರೇ ಸರ್ವಮೇವಾಸೀದ್ವ್ಯಾಪ್ತಂ ವೈ ಪ್ರಲಯಾದನು ।। 21 ।।
ಆ ಪರಬ್ರಹ್ಮವಸ್ತುವೇ ವ್ಯಕ್ತ ಮತ್ತು ಅವ್ಯಕ್ತಸ್ವರೂಪದಿಂದಲೂ, ಪುರುಷರೂಪದಿಂದಲೂ ಮತ್ತು ಕಾಲರೂಪದಿಂದಲೂ ಇದೆ. ದ್ವಿಜ! ಪರಬ್ರಹ್ಮನ ಪ್ರಥಮ ರೂಪವು ಪುರುಷ. ನಂತರದ ರೂಪಗಳು ವ್ಯಕ್ತ ಮತ್ತು ಅವ್ಯಕ್ತ. ಇನ್ನೊಂದು ರೂಪವು ಕಾಲ. ಪ್ರಧಾನ, ಪುರುಷ, ವ್ಯಕ್ತ ಮತ್ತು ಕಾಲಗಳೆಂಬ ಈ ರೂಪಗಳಿಂದಲೇ ಜ್ಞಾನಿಗಳು ಶುದ್ಧನಾದ ಆ ವಿಷ್ಣುವಿನ ಪರಮ ಪದವನ್ನು ಕಂಡುಕೊಳ್ಳುತ್ತಾರೆ. ಪ್ರಧಾನ, ಪುರುಷ, ವ್ಯಕ್ತ ಮತ್ತು ಕಾಲ – ಈ ಭೇದಗಳೇ ಸೃಷ್ಟಿ-ಸ್ಥಿತಿ-ನಾಶಗಳಿಗೆ ಕಾರಣಗಳಾಗಿವೆ. ವಿಷ್ಣುವೇ ಹೀಗೆ ವ್ಯಕ್ತ, ಅವ್ಯಕ್ತ, ಪುರುಷ ಮತ್ತು ಕಾಲಗಳ ರೂಪದಿಂದ ಬಾಲಕನಂತೆ ಆಟವಾದುತ್ತಾನೆ. ಅದರ ಕುರಿತು ಕೇಳು. ಋಷಿಸತ್ತಮರು ಅವ್ಯಕ್ತವನ್ನು ಪ್ರಧಾನವೆಂದೂ, ಕಾರಣವೆಂದೂ, ನಿತ್ಯವೂ ಸದಸದಾತ್ಮಕವೂ ನಿತ್ಯವೂ ಆದ ಪ್ರಕೃತಿಯೆಂದೂ ಹೇಳುತ್ತಾರೆ. ಈ ಪ್ರಕೃತಿಯು ಅಕ್ಷಯವಾದುದು. ಅನ್ಯ ಆಧಾರವ್ಯಾವುದೂ ಇಲ್ಲದಂಥದ್ದು. ಅದಕ್ಕೆ ಅಳತೆಯಿಲ್ಲ. ನಾಶವಿಲ್ಲ. ಇದು ಶಬ್ದ-ಸ್ಪರ್ಶಾದಿಗಳಿಲ್ಲದೇ ರೂಪವೂ ಇಲ್ಲದೇ ನಿಶ್ಚಲವಾದುದು. ಅದು ಗುಣತ್ರಯ ಸಾಮ್ಯರೂಪವಾದುದು. ಜಗದ್ಯೋನಿಯು. ಅನಾದಿಯು ಮತ್ತು ಸಕಲಕ್ಕೂ ಲಯಸ್ಥಾನವು. ಸೃಷ್ಟಿಯ ಮೊದಲೂ ಮತ್ತು ಪ್ರಲಯದ ನಂತರವೂ ಎಲ್ಲವೂ ಇದರಲ್ಲಿಯೇ ಐಕ್ಯವಾಗಿರುತ್ತವೆ.
ವೇದವಾದವಿದೋ ಬ್ರಹ್ಮನಿಯತಾ ಬ್ರಹ್ಮವಾದಿನಃ । ಪಠಂತಿ ಚೈತಮೇವಾರ್ಥಂ ಪ್ರಧಾನಪ್ರತಿಪಾದಕಮ್ ।। 22 ।। ನಾಹೋ ನ ರಾತ್ರಿರ್ನ ನಭೋ ನ ಭೂಮಿ ರ್ನಾಸೀತ್ತಮೋ ಜ್ಯೋತಿರಭೂನ್ನ ಚಾನ್ಯತ್ । ಶ್ರೋತ್ರಾದಿಬುದ್ಧ್ಯಾನುಪಲಭ್ಯಮೇಕಂ ಪ್ರಾಧಾನಿಕಂ ಬ್ರಹ್ಮ ಪುಮಾಂಸ್ತದಾಸೀತ್ ।। 23 ।। ವಿಷ್ಣೋಃ ಸ್ವರೂಪಾತ್ಪರತೋದಿತೇ ದ್ವೇರೂಪೇ ಪ್ರಧಾನಂ ಪುರುಷಶ್ಚ ವಿಪ್ರ । ತಸ್ಯೈವ ಯೇಽನ್ಯೇ ನ ಧೃತೇ ವಿಯುಕ್ತೇ ರೂಪಾಂತರಂ ತದ್ವಿಜ ಕಾಲಸಂಜ್ಞಮ್ ।। 24 ।। ಪ್ರಕೃತೌ ಸಂಸ್ಥಿತಂ ವ್ಯಕ್ತಮತೀತಪ್ರಲಯೇ ತು ಯತ್ । ತಸ್ಮಾತ್ಪ್ರಾಕೃತಸಂಜ್ಞೋಽಯಮುಚ್ಯತೇ ಪ್ರತಿಸಂಚರಃ ।। 25 ।। ಅನಾದಿರ್ಭಗವಾನ್ಕಾಲೋ ನಾಂತೋಽಸ್ಯ ದ್ವಿಜ ವಿದ್ಯತೇ । ಅವ್ಯುಚ್ಚಿನ್ನಾಸ್ತತಸ್ತ್ವೇತೇ ಸರ್ಗಸ್ಥಿತ್ಯಂತಸಂಯಮಾಃ ।। 26 ।।
ವೇದಾರ್ಥವನ್ನು ತಿಳಿದ ಬ್ರಹ್ಮನಿಯತ ಬ್ರಹ್ಮವಾದಿಗಳು ಇದೇ ಅರ್ಥವನ್ನು ಕೊಡುವ ಪ್ರಧಾನದ ಕುರಿತಾದ ಈ ಶ್ಲೋಕವನ್ನು ಹೇಳಿದ್ದಾರೆ: “ಹಗಲೂ ಇರಲಿಲ್ಲ. ರಾತ್ರಿಯೂ ಇರಲಿಲ್ಲ. ಆಕಾಶ ಮತ್ತು ಭೂಮಿಗಳೂ ಇರಲಿಲ್ಲ. ಕತ್ತಲೆಯಾಗಲೀ ಬೆಳಕಾಗಲೀ ಇರಲಿಲ್ಲ. ಬೇರೆ ಯಾವುದೂ ಇರಲಿಲ್ಲ. ಶಬ್ದಾದಿಗಳು ಇಲ್ಲವಾದ್ದರಿಂದ ಶ್ರೋತ್ರಾದಿ ಇಂದ್ರಿಯಗಳಾಗಲೀ, ಮನಸ್ಸು-ಬುದ್ಧಿಗಳಾಗಲೀ, ಮತ್ತ್ಯಾವ ವಸ್ತುವಾಗಲೀ ಇರಲಿಲ್ಲ. ಪ್ರಧಾನ, ಪುರುಷ ಮತ್ತು ಪರಬ್ರಹ್ಮ ಇವು ಒಂದೇ ಆಗಿದ್ದವು.” ವಿಪ್ರ! ವಿಷ್ಣುವಿನ ಪರಮಸ್ವರೂಪದಿಂದ ಪ್ರಧಾನ (ಅವ್ಯಕ್ತ ಪ್ರಕೃತಿ) ಮತ್ತು ಪುರುಷ ಎಂಬ ಎರಡು ರೂಪಗಳು ಉದಯವಾದವು. ದ್ವಿಜ! ಇವೆರಡೂ ಸೃಷ್ಟಿಕಾಲದಲ್ಲಿ ಕೂಡಿಯೂ ಪ್ರಳಯಕಾಲದಲ್ಲಿ ಬೇರೆಬೇರೆಯಾಗಿಯೂ ಇರುತ್ತವೆ. ಈ ಅನ್ಯ ರೂಪಾಂತರವೇ ಕಾಲ ಎಂದು ತಿಳಿಯಬೇಕು. ಹಿಂದಿನ ಪ್ರಳಯದಲ್ಲಿ ವ್ಯಕ್ತವಾಗಿದ್ದ ಪ್ರಪಂಚವು ಪ್ರಕೃತಿಯಲ್ಲಿ ಲೀನವಾಯಿತು. ಪ್ರಪಂಚವು ಪ್ರಕೃತಿಯಲ್ಲಿ ಲೀನವಾದ್ದರಿಂದ ಅದಕ್ಕೆ ಪ್ರಾಕೃತ ಪ್ರಳಯ ಎನ್ನುತ್ತಾರೆ[1]. ಭಗವಾನ್ ಕಾಲನೂ ಅನಾದಿ. ದ್ವಿಜ! ಇದಕ್ಕೆ ಅಂತ್ಯವೆ ಇಲ್ಲ. ಆದುದರಿಂದ ಸೃಷ್ಟಿ-ಸ್ಥಿತಿ-ನಾಶಗಳು ಪ್ರವಾಹರೂಪವಾಗಿ ಅವಿಚ್ಛಿನ್ನವಾಗಿ ನಿರಂತರವಾಗಿ ನಡೆಯುತ್ತಿರುತ್ತದೆ.
ಗುಣಸಾಮ್ಯೇ ತತಸ್ತಸ್ಮಿನ್ ಪೃಥಕ್ ಪುಂಸಿ ವ್ಯವಸ್ಥಿತೇ । ಕಾಲಸ್ವರೂಪಂ ತದ್ವಿಷ್ಣೋರ್ಮೈತ್ರೇಯ ಪರಿವರ್ತತೇ ।। 27 ।। ತತಸ್ತು ತತ್ಪರಂ ಬ್ರಹ್ಮ ಪರಮಾತ್ಮಾ ಜಗನ್ಮಯಃ । ಸರ್ವಗಃ ಸರ್ವಭೂತೇಶಃ ಸರ್ವಾತ್ಮಾ ಪರಮೇಶ್ವರಃ ।। 28 ।। ಪ್ರಧಾನಪುರುಷೌ ಚಾಪಿ ಪ್ರವಿಶ್ಯಾತ್ಮೇಚ್ಛಯಾ ಹರಿಃ । ಕ್ಷೋಭಯಾಮಾಸ ಸಂಪ್ರಾಪ್ತೇ ಸರ್ಗಕಾಲೇ ವ್ಯಯಾವ್ಯಯೌ ।। 29 ।। ಯಥಾ ಸನ್ನಿಧಿಮಾತ್ರೇಣ ಗಂಧಃ ಕ್ಷೋಭಾಯ ಜಾಯತೇ । ಮನಸೋ ನೋಪಕರ್ತೃತ್ವಾತ್ತಥಾಸೌ ಪರಮೇಶ್ವರಃ ।। 30 ।। ಸ ಏವ ಕ್ಷೋಭಕೋ ಬ್ರಹ್ಮನ್ ಕ್ಷೋಭ್ಯಶ್ಚ ಪುರುಷೋತ್ತಮಃ । ಸ ಸಂಕೋಚವಿಕಾಸಾಭ್ಯಾಂ ಪ್ರಧಾನತ್ವೇಽಪಿ ಚ ಸ್ಥಿತಃ ।। 31 ।। ವಿಕಾಸಾಣುಸ್ವರೂಪೈಶ್ಚ ಬ್ರಹ್ಮರೂಪಾದಿಭಿಸ್ತಥಾ । ವ್ಯಕ್ತಸ್ವರೂಪಶ್ಚ ತಥಾ ವಿಷ್ಣುಃ ಸರ್ವೇಶ್ವರೇಶ್ವರಃ ।। 32 ।।
ಪ್ರಳಯಕಾಲದಲ್ಲಿ ಪ್ರಕೃತಿಯು ಗುಣಸಾಮ್ಯಾವಸ್ಥೆಯಲ್ಲಿರುತ್ತದೆ ಮತ್ತು ಪುರುಷನು ಬೇರೆಯಾಗಿರುತ್ತಾನೆ. ಮೈತ್ರೇಯ! ವಿಷ್ಣುಸ್ವರೂಪವಾದ ಕಾಲವು ಅವೆರಡನ್ನೂ ಧರಿಸಿರುತ್ತದೆ[2]. ಆಗ ಆ ಪರಬ್ರಹ್ಮ ಪರಮಾತ್ಮಾ ಜಗನ್ಮಯ ಸರ್ವಗ ಸರ್ವಭೂತೇಶ ಸರ್ವಾತ್ಮಾ ಪರಮೇಶ್ವರ ಹರಿಯು ತನ್ನದೇ ಇಚ್ಛೆಯಿಂದ ಪ್ರಧಾನ ಮತ್ತು ಪುರುಷರನ್ನು ಪ್ರವೇಶಿಸಿ ಕ್ಷೋಭೆಯನ್ನುಂಟುಮಾಡಲು ವ್ಯಯ ಮತ್ತು ಅವ್ಯಯಗಳ ಸೃಷ್ಟಿಕಾಲವು ಪ್ರಾಪ್ತವಾಗುತ್ತದೆ. ತನ್ನ ಸನ್ನಿಧಿಮಾತ್ರದಿಂದ ಗಂಧವು ಹೇಗೆ ಮನಸ್ಸಿನಲ್ಲಿ ಕ್ಷೋಭೆಯನ್ನುಂಟುಮಾಡುತ್ತದೆಯೋ ಹಾಗೆ ಪರಮೇಶ್ವರನ ಸಾನ್ನಿದ್ಧ್ಯ ಮಾತ್ರದಿಂದ ಪ್ರಕೃತಿ-ಪುರುಷರಲ್ಲಿ ಚಲನೆಯುಂಟಾಗುತ್ತದೆ. ಹೀಗೆ ಪರಮೇಶ್ವರನು ಕರ್ತೃವಾಗುವುದಿಲ್ಲ. ಬ್ರಹ್ಮನ್! ಆ ಪುರುಷೋತ್ತಮನು ಕ್ಷೋಭೆಗೊಳಿಸುವವನು ಮತ್ತು ಕ್ಷೋಭೆಗೊಳಗಾಗುವನು. ಅವನೇ ಸಂಕೋಚ-ವಿಕಾಸಗಳಾಗಿ ಪ್ರಧಾನ (ಅವ್ಯಕ್ತ ಪ್ರಕೃತಿ) ಸ್ವರೂಪದಲ್ಲಿರುತ್ತಾನೆ. ಸರ್ವೇಶ್ವರ ವಿಷ್ಣುವೇ ವಿಕಾಸ-ಅಣುರೂಪಗಳಲ್ಲಿಯೂ, ಬ್ರಹ್ಮ-ವಿಷ್ಣು-ರುದ್ರಾದಿ ರೂಪಭೇದದಿಂದಲೂ, ವ್ಯಕ್ತಸ್ವರೂಪನಾಗಿಯೂ ಇದ್ದಾನೆ.
ಗುಣಸಾಮ್ಯಾತ್ತತಸ್ತಸ್ಮಾತ್ ಕ್ಷೇತ್ರಜ್ಞಾಧಿಷ್ಠಿತಾನ್ಮುನೇ । ಗುಣವ್ಯಂಜನಸಂಭೂತಿಃ ಸರ್ಗಕಾಲೇ ದ್ವಿಜೋತ್ತಮ ।। 33 ।। ಪ್ರಧಾನತತ್ತ್ವಮುದ್ಭೂತಂ ಮಹಾಂತಂ ತತ್ಸಮಾವೃಣೋತ್ । [3]ಸಾತ್ತ್ವಿಕೋ ರಾಜಸಶ್ಚೈವ ತಾಮಸಶ್ಚ ತ್ರಿಧಾ ಮಹಾನ್ ।। 34 ।। ಪ್ರಧಾನತತ್ತ್ವೇನ ಸಮಂ ತ್ವಚಾ ಬೀಜಮಿವಾವೃತಮ್ । ವೈಕಾರಿಕಸ್ತೈಜಸಶ್ಚ ಭೂತಾದಿಶ್ಚೈವ ತಾಮಸಃ ।। 35 ।। ತ್ರಿವಿಧೋಽಯಮಹಂಕಾರೋ ಮಹತ್ತತ್ತ್ವಾದಜಾಯತ । ಭೂತೇಂದ್ರಿಯಾಣಾಂ ಹೇತುಃ ಸ ತ್ರಿಗುಣತ್ವಾನ್ಮಹಾಮುನೇ । ಯಥಾ ಪ್ರಧಾನೇನ ಮಹಾನ್ಮಹತಾ ಸ ತಥಾವೃತಃ ।। 36 ।।
ಮುನೇ! ದ್ವಿಜೋತ್ತಮ! ಸೃಷ್ಟಿಕಾಲದಲ್ಲಿ ಕ್ಷೇತ್ರಜ್ಞನ ಅಧಿಷ್ಠಾನದಲ್ಲಿ ಗುಣಸಾಮ್ಯತೆಯಿದ್ದ ಅದರಲ್ಲಿ ಗುಣಗಳ ವ್ಯತ್ಯಾಸವುಂಟಾಗಿ ಅದರಿಂದ ಹುಟ್ಟಿದ ಮಹತ್ತತ್ತ್ವವು ಪ್ರಧಾನತತ್ತ್ವವನ್ನು ಆವರಿಸುತ್ತದೆ. ಆ ಮಹತ್ತತ್ತ್ವವು ಸಾತ್ತ್ವಿಕ, ರಾಜಸ ಮತ್ತು ತಾಮಸವೆಂದು ಮೂರು ಬಗೆಯಾಯಿತು. ಆ ಮೂರು ಗುಣಗಳೂ ಸಿಪ್ಪೆಯು ಬೀಜವನ್ನು ಹೇಗೋ ಹಾಗೆ ಪ್ರಧಾನತತ್ತ್ವವನ್ನು ಆವರಿಸಿಕೊಂಡವು. ಆಗ ವೈಕಾರಿಕ, ತೈಜಸ ಮತ್ತು ಭೂತಾದಿ ತಾಮಸವೆಂಬ ಮೂರುವಿಧದ ಅಹಂಕಾರಗಳು ಮಹತ್ತತ್ತ್ವದಿಂದ ಹುಟ್ಟಿದವು. ಮಹಾಮುನೇ! ತ್ರಿಗುಣಾತ್ಮಕವಾದ ಈ ಅಹಂಕಾರವೇ ಭೂತೇಂದ್ರಿಯಗಳಿಗೆ ಕಾರಣವು. ಪ್ರಧಾನವನ್ನು ಮಹತ್ತತ್ತ್ವವು ಹೇಗೋ ಹಾಗೆ ಮಹತ್ತತ್ತ್ವವನ್ನೂ ಈ ತ್ರಿಗುಣಗಳು ಆವರಿಸಿದವು.
ಭೂತಾದಿಸ್ತು ವಿಕುರ್ವಾಣಃ ಶಬ್ದತನ್ಮಾತ್ರಕಂ ತತಃ । ಸಸರ್ಜ ಶಬ್ದತನ್ಮಾತ್ರಾದಾಕಾಶಂ ಶಬ್ದಲಕ್ಷಣಮ್ ।। 37 ।। ಶಬ್ದಮಾತ್ರಂ ತಥಾಕಾಶಂ ಭೂತಾದಿಃ ಸ ಸಮಾವೃಣೋತ್ । ಆಕಾಶಸ್ತು ವಿಕುರ್ವಾಣಃ ಸ್ಪರ್ಶಮಾತ್ರಂ ಸಸರ್ಜ ಹ ।। 38 ।। ಬಲವಾನಭವದ್ವಾಯುಸ್ತಸ್ಯ ಸ್ಪರ್ಶೋ ಗುಣೋ ಮತಃ । ಆಕಾಶಂ ಶಬ್ದಮಾತ್ರಂ ತು ಸ್ಪರ್ಶಮಾತ್ರಂ ಸಮಾವೃಣೋತ್ ।। 39 ।। ತತೋ ವಾಯುರ್ವಿಕುರ್ವಾಣೋ ರೂಪಮಾತ್ರಂ ಸಸರ್ಜ ಹ । ಜ್ಯೋತಿರುತ್ಪದ್ಯತೇ ವಾಯೋಸ್ತದ್ರೂಪಗುಣಮುಚ್ಯತೇ ।। 40 ।। ಸ್ಪರ್ಶಮಾತ್ರಸ್ತು ವೈ ವಾಯೂ ರೂಪಮಾತ್ರಂ ಸಮಾವೃಣೋತ್ । ಜ್ಯೋತಿಶ್ಚಾಪಿ ವಿಕುರ್ವಾಣಂ ರಸಮಾತ್ರಂ ಸಸರ್ಜ ಹ ।। 41 ।। ಸಂಭವಂತಿ ತತೋಽಂಭಾಂಸಿ ರಸಾಧಾರಾಣಿ ತಾನಿ ತು । ರಸಮಾತ್ರಾಣಿ ಚಾಂಭಾಂಸಿ ರೂಪಮಾತ್ರಂ ಸಮಾವೃಣೋತ್ ।। 42 ।। ವಿಕುರ್ವಾಣಾನಿ ಚಾಂಭಾಂಸಿ ಗಂಧಮಾತ್ರಂ ಸಸರ್ಜಿರೇ । ಸಂಘಾತೋ ಜಾಯತೇ ತಸ್ಮಾತ್ತಸ್ಯ ಗಂಧೋ ಗುಣೋ ಮತಃ ।। 43 ।।
ತಮೋಗುಣ ಅಥವಾ ಭೂತಾದಿಯಲ್ಲಿ ವಿಕಾರವುಂಟಾಗಲು ಶಬ್ದತನ್ಮಾತ್ರವು ಹುಟ್ಟಿತು. ಶಬ್ದತನ್ಮಾತ್ರದಿಂದ ಶಬ್ದಲಕ್ಷಣವುಳ್ಳ ಆಕಾಶವು ಸೃಷ್ಟಿಯಾಯಿತು. ಶಬ್ದಮಾತ್ರವಾದ ಆ ಆಕಾಶವನ್ನು ಭೂತಾದಿ (ತಮೋಗುಣ) ಯು ಆವರಿಸಿತು. ಆಕಾಶವು ವಿಕಾರಹೊಂದಲು ಸ್ಪರ್ಶತನ್ಮಾತ್ರವು ಹುಟ್ಟಿಕೊಂಡಿತು. ಅದರಿಂದ ಸ್ಪರ್ಶಗುಣವಿರುವ ಬಲವಾನ್ ವಾಯುವು ಹುಟ್ಟಿತು. ಶಬ್ದಮಾತ್ರವಾದ ಆಕಾಶವನ್ನು ಸ್ಪರ್ಶಮಾತ್ರೆಯು ಆವರಿಸಿತು. ಆಗ ವಾಯುವು ಕಿಕಾರಹೊಂದಲು ರೂಪತನ್ಮಾತ್ರದ ಸೃಷ್ಟಿಯಾಯಿತು. ವಾಯುವಿನಿಂದ ರೂಪಗುಣವುಳ್ಳ ಜ್ಯೋತಿಯು ಉತ್ಪನ್ನವಾಯಿತೆಂದು ಹೇಳುತ್ತಾರೆ. ಸ್ಪರ್ಶಮಾತ್ರದ ವಾಯುವು ರೂಪಮಾತ್ರೆಯನ್ನು ಆವರಿಸಿತು. ಜ್ಯೋತಿಯೂ ವಿಕಾರಹೊಂದಿ ರಸತನ್ಮಾತ್ರೆಯು ಹುಟ್ಟಿಕೊಂಡಿತು. ಅದರಿಂದ ರಸಗಳನ್ನು ಸುರಿಸುವ ಜಲವು ಉತ್ಪನ್ನವಾಗುತ್ತದೆ. ರಸಮಾತ್ರೆಗಳು ಮತ್ತು ಜಲವು ರೂಪಮಾತ್ರೆಯನ್ನು ಆವರಿಸಿತು. ಜಲದಲ್ಲಿ ವಿಕಾರವುಂಟಾಗಲು ಗಂಧತನ್ಮಾತ್ರೆಯು ಹುಟ್ಟಿತು. ಅದರ ಸಂಘಾತದಿಂದ ಆದ ಭೂಮಿಯ ಗುಣವು ಗಂಧವೆಂದು ಹೇಳುತ್ತಾರೆ.
[4]ತಸ್ಮಿಂಸ್ತಸ್ಮಿಂಶ್ಚ ತನ್ಮಾತ್ರಂ ತೇನ ತನ್ಮಾತ್ರತಾ ಸ್ಮೃತಾ । ತನ್ಮಾತ್ರಾಣ್ಯವಿಶೇಷಾಣಿ ಅವಿಶೇಷಾಸ್ತತೋ ಹಿ ತೇ ।। 44 ।। ನ ಶಾಂತಾ ನಾಪಿ ಘೋರಾಸ್ತೇ ನ ಮೂಢಾಶ್ಚಾವಿಶೇಷಿಣಃ । ಭೂತತನ್ಮಾತ್ರಸರ್ಗೋಽಯಮಹಂಕಾರಾತ್ತು ತಾಮಸಾತ್ ।। 45 ।। [5]ತೈಜಸಾನೀಂದ್ರಿಯಾಣ್ಯಾಹುರ್ದೇವಾ ವೈಕಾರಿಕಾ ದಶ । ಏಕಾದಶಂ ಮನಶ್ಚಾತ್ರ ದೇವಾ ವೈಕಾರಿಕಾಃ ಸ್ಮೃತಾಃ ।। 46 ।।
ಆಕಾಶ ಮೊದಲಾದ ಭೂತತತ್ತ್ವಗಳಲ್ಲಿ ನಿಜವಾಗಿ ಶಬ್ದ ಮೊದಲಾದವುಗಳು ಮಾತ್ರ ಇರುವುದರಿಂದ ಅವುಗಳಿಗೆ ತನ್ಮಾತ್ರಗಳೆಂಬ ಹೆಸರಿವೆ. ಆ ತನ್ಮಾತ್ರಗಳು ಯಾವುದೇ ವಿಶೇಷವನ್ನು ತಿಳಿಸದೇ ಇರುವುದರಿಂದ ಅವಕ್ಕೆ ಅವಿಶೇಷಗಳು ಎಂಬ ಹೆಸರೂ ಇದೆ. ಆ ತನ್ಮಾತ್ರಗಳು ಶಾಂತ-ಘೋರ-ಮೂಢ ಎಂದೆನಿಸಿಕೊಳ್ಳುವುದಿಲ್ಲ. ಅವುಗಳಲ್ಲಿ ಅನ್ಯೋನ್ಯ ವಿಲಕ್ಷಣತೆಯನ್ನು ತೋರಿಸುವ ವಿಶೇಷವಿರುವುದಿಲ್ಲ. ಹೀಗೆ ತಾಮಸಾಹಂಕಾರದಿಂದ ತನ್ಮಾತ್ರಗಳಿಂದ ಕೂಡಿದ ಪಂಚಭೂತಗಳ ಉತ್ಪತ್ತಿಯಾಗುತ್ತದೆ. ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು ತೈಜಸ ಅಹಂಕಾರದಿಂದ ಹುಟ್ಟಿವೆ ಎಂದು ಹೇಳುತ್ತಾರೆ. ಅವುಗಳಿಗೆ ಸಂಬಂಧಿಸಿದ ಹತ್ತು ಶಕ್ತಿಗಳನ್ನು ವೈಕಾರಿಕ ದೇವತೆಗಳೆಂದೂ ಹೇಳುತ್ತಾರೆ. ಮನಸ್ಸನ್ನೂ ಸೇರಿಸಿ ಹನ್ನೊಂದು ವೈಕಾರಿಕ ದೇವತೆಗಳೆಂದು ಹೇಳಿದ್ದಾರೆ.
[6]ತ್ವಕ್ಚಕ್ಷುರ್ನಾಸಿಕಾಜಿಹ್ವಾಶ್ರೋತ್ರಮತ್ರ ಚ ಪಂಚಮಮ್ । ಶಬ್ದಾದೀನಾಮವಾಪ್ತ್ಯರ್ಥಂ ಬುದ್ಧಿಯುಕ್ತಾನಿ ವೈ ದ್ವಿಜ ।। 47 ।। ಪಾಯೂಪಸ್ಥೌ ಕರೌ ಪಾದೌ ವಾಕ್ಚ ಮೈತ್ರೇಯ ಪಂಚಮೀ । ವಿಸರ್ಗಶಿಲ್ಪಗತ್ಯುಕ್ತಿ ಕರ್ಮ ತೇಷಾಂ ಚ ಕಥ್ಯತೇ ।। 48 ।।
ಚರ್ಮ, ಕಣ್ಣು, ಮೂಗು, ನಾಲಿಗೆ, ಕಿವಿ – ಈ ಐದು ಇಂದ್ರಿಯಗಳೂ ಬುದ್ಧಿಯನ್ನು ಕೂಡಿಕೊಂಡು ಶಬ್ದಸ್ಪರ್ಶಾದಿ ಜ್ಞಾನವನ್ನುಂಟುಮಾಡುತ್ತವೆ. ಮೈತ್ರೇಯ! ಪಾಯು, ಉಪಸ್ಥ, ಕೈಗಳು, ಕಾಲುಗಳು, ಮತ್ತು ವಾಕ್ – ಈ ಐದು ಕರ್ಮೇಂದ್ರಿಯಗಳು. ಹೊರಕ್ಕೆ ಬಿಡುವುದು, ಕೈಕೆಲಸ, ನಡೆಯುವುದು, ಮಾತನಾಡುವುದು ಮತ್ತು ಗುಣ-ದೋಷಯುಕ್ತ ಕ್ರಿಯೆಗಳು ಇವುಗಳ ಕಾರ್ಯಗಳೆಂದು ಹೇಳಿದ್ದಾರೆ.
ಆಕಾಶವಾಯುತೇಜಾಂಸಿ ಸಲಿಲಂ ಪೃಥಿವೀ ತಥಾ । ಶಬ್ದಾದಿಭಿರ್ಗುಣೈರ್ಬ್ರಹ್ಮನ್ಸಂಯುಕ್ತಾನ್ಯುತ್ತರೋತ್ತರೈಃ ।। 49 ।। ಶಾಂತಾ ಘೋರಾಶ್ಚ ಮೂಢಾಶ್ಚ ವಿಶೇಷಾಸ್ತೇನ ತೇ ಸ್ಮೃತಾಃ ।। 50 ।। ನಾನಾವೀರ್ಯಾಃ ಪೃಥಗ್ಭೂತಾಸ್ತತಸ್ತೇ ಸಂಹತಿಂ ವಿನಾ । ನಾಶಕ್ನುವನ್ ಪ್ರಜಾಸ್ರಷ್ಟುಮಸಮಾಗಮ್ಯ ಕೃತ್ಸ್ನಶಃ ।। 51 ।। ಸಮೇತ್ಯಾನ್ಯೋನ್ಯಸಂಯೋಗಂ ಪರಸ್ಪರಸಮಾಶ್ರಯಾಃ ।
ಆಕಾಶ, ವಾಯು, ತೇಜಸ್ಸು, ಜಲ, ಮತ್ತು ಪೃಥ್ವೀ – ಇವು ಐದು ಪಂಚಭೂತಗಳು. ಬ್ರಹ್ಮನ್! ಕ್ರಮವಾಗಿ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳಲ್ಲಿ ಒಂದು, ಎರಡು, ಮೂರು, ನಾಲ್ಕು ಮತ್ತು ಐದನ್ನು ಈ ಪಂಚಭೂತಗಳು ಹೊಂದುತ್ತವೆ[7]. ಅವುಗಳಲ್ಲಿ ಶಾಂತ, ಘೋರ, ಮೂಢ ಮತ್ತು ವಿಶೇಷಗಳೆಂಬ ಭೇದಗಳಿವೆ. ಬೇರೆ ಬೇರೆ ಭೂತಗಳು ಭಿನ್ನ ಭಿನ್ನ ಶಕ್ತಿಯುಳ್ಳವುಗಳು. ಈ ಪಂಚಭೂತಗಳು ಒಂದಾಗದೇ ಪ್ರಜೆಗಳನ್ನು ಸೃಷ್ಟಿಸಲು ಅಸಮರ್ಥರು. ಇವುಗಳು ಒಂದಾಗಿ ಪರಸ್ಪರ ಆಶ್ರಯದಿಂದ ಸೃಷ್ಟಿಯಾಗುತ್ತದೆ.
ಏಕಸಂಘಾತಲಕ್ಷ್ಯಾಶ್ಚ ಸಂಪ್ರಾಪ್ಯೈಕ್ಯಮಶೇಷತಃ ।। 52 ।। ಪುರುಷಾಧಿಷ್ಠಿತತ್ವಾಚ್ಚಾಪ್ಯವ್ಯಕ್ತಾನುಗ್ರಹೇಣ ಚ । ಮಹದಾದಯೋ ವಿಶೇಷಾಂತಾ ಹ್ಯಂಡಮುತ್ಪಾದಯಂತಿ ತೇ ।। 53 ।। ತತ್ಕ್ರಮೇಣ ವಿವೃದ್ಧಂ ತುಸಜ್ಜಲಬುದ್ಬುದವತ್ಸಮಮ್ । ಭೂತೇಭ್ಯೋಽಂಡಂ ಮಹಾಬುದ್ಧೇ ಬೃಹತ್ತದುದಕೇಶಯಮ್ । ಪ್ರಾಕೃತಂ ಬ್ರಹ್ಮರೂಪಸ್ಯ ವಿಷ್ಣೋಃ ಸ್ಥಾನಮನುತ್ತಮಮ್ ।। 54 ।। ತತ್ರಾವ್ಯಕ್ತಸ್ವರೂಪೋಸೌ ವ್ಯಕ್ತರೂಪೋ ಜಗತ್ಪತಿಃ । ವಿಷ್ಣುರ್ಬ್ರಹ್ಮಸ್ವರೂಪೇಣ ಸ್ವಯಮೇವ ವ್ಯವಸ್ಥಿತಃ ।। 55 ।। ಮೇರುರುಲ್ಬಮಭೂತ್ತಸ್ಯ ಜರಾಯುಶ್ಚ ಮಹೀಧರಾಃ । ಗರ್ಭೋದಕಂ ಸಮುದ್ರಾಶ್ಚ ತಸ್ಯಾಸನ್ಸುಮಹಾತ್ಮನಃ ।। 56 ।। ಸಾದ್ರಿದ್ವೀಪಸಮುದ್ರಾಶ್ಚ ಸಜ್ಯೋತಿರ್ಲೋಕಸಂಗ್ರಹಃ । ತಸ್ಮಿನ್ನಂಡೇ ಭವೇದ್ವಿಪ್ರ ಸದೇವಾಸುರಮಾನುಷಃ ।। 57 ।।
ಈ ಭೂತಗಳು ಒಂದು ಗುಂಪಾಗಿ ಪರಸ್ಪರ ಭೇದವನ್ನಡಗಿಸಿಕೊಂಡು ಪುರುಷನ ಅಧಿಷ್ಟಾತೃತ್ವದಲ್ಲಿ ಪ್ರಧಾನನ ಅನುಗ್ರಹದಿಂದ ಸೃಷ್ಟಿಸುತ್ತವೆ. ಮಹತ್ತು ಮತ್ತು ವಿಶೇಷಭೂತಗಳು ಸೇರಿ ಅಂಡವನ್ನು ಉತ್ಪಾದಿಸುತ್ತವೆ. ಈ ಅಂಡವು ವೃದ್ಧಿಯಾಗಿ ನೀರಿನ ಗುಳ್ಳೆಯಂತೆ ಒಂದಾಗಿ ಕಾಣಿಸುತ್ತದೆ. ಮಹಾಬುದ್ಧೇ! ಪ್ರಾಕೃತವಾದ ಆ ಅಂಡವು ಬ್ರಹ್ಮರೂಪೀ ವಿಷ್ಣುವಿನ ಅನುತ್ತಮ ಸ್ಥಾನವು. ಅದರಲ್ಲಿ ಅವ್ಯಕ್ತರೂಪನಾದ ಜಗತ್ಪತಿ ವಿಷ್ಣುವು ತಾನೇ ಬ್ರಹ್ಮಸ್ವರೂಪದಲ್ಲಿ ವ್ಯವಸ್ಥಿತನಾಗುತ್ತಾನೆ. ಮಹದ್ರೂಪವನ್ನು ತಾಳಿದ ಆ ವಿಷ್ಣುವಿನ ಸ್ವೇದೋದಕವೇ ಅಂಡವಾಯಿತು. ಗರ್ಭವೇಷ್ಟನ ಚೀಲವೇ ಮೇರು ಮೊದಲಾದ ಪರ್ವತಗಳಾದವು. ಗರ್ಭೋದಕವೇ ಸಮುದ್ರವಾಯಿತು. ವಿಪ್ರ! ಆ ಅಂಡದಲ್ಲಿ ಪರ್ವತಗಳೂ, ದ್ವೀಪಗಳೂ, ಸಮುದ್ರಗಳೂ, ಜ್ಯೋತಿರ್ಲೋಕಗಳೂ, ದೇವಾಸುರ ಮನುಷ್ಯರೂ ಮತ್ತು ಎಲ್ಲ ಲೋಕಗಳೂ ಉಂಟಾದವು.
ವಾರಿವಹ್ನ್ಯನಿಲಾಕಾಶೈಸ್ತತೋ ಭೂತಾದಿನಾ ಬಹಿಃ । ವೃತಂ ದಶಗುಣೈರಂಡಂ ಭೂತಾದಿರ್ಮಹತಾ ತಥಾ ।। 58 ।। ಅವ್ಯಕ್ತೇನಾವೃತೋ ಬ್ರಹ್ಮಂಸ್ತೈಃ ಸರ್ವೈಃ ಸಹಿತೋ ಮಹಾನ್ । ಏಭಿರಾವರಣೈರಂಡಂ ಸಪ್ತಭಿಃ ಪ್ರಾಕೃತೈರ್ವೃತಮ್ । ನಾರಿಕೇಲಫಲಸ್ಯಾಂತರ್ಬೀಜಂ ಬಾಹ್ಯದಲೈರಿವ ।। 59 ।।
ಬ್ರಹ್ಮನ್! ಈ ಅಂಡವು ಹೊರಗಿನಿಂದ ಜಲ, ಅಗ್ನಿ, ಆಕಾಶ – ಮೊದಲಾದ ಪಂಚ ಭೂತಗಳಿಂದಲೂ, ಈ ಭೂತಗಳಿಗೂ ಹತ್ತು ಗುಣ ಮಹತ್ತಿನಿಂದಲೂ, ಆ ಮಹತ್ತು ಅವ್ಯಕ್ತದಿಂದಲೂ ಆವೃತವಾಗಿದೆ. ನಾರಿಕೇಲ ಫಲದಲ್ಲಿರುವ ಬೀಜವನ್ನು ಹೊರಗಿನ ಆವರಣಗಳು ಹೇಗೋ ಹಾಗೆ ಈ ಅಂಡವು ಏಳು ಪ್ರಕೃತಿತತ್ತ್ವಗಳಿಂದ ಆವೃತವಾಗಿದೆ.
ಜುಷನ್ರಜೋಗುಣಂ ತತ್ರ ಸ್ವಯಂ ವಿಶ್ವೇಶ್ವರೋ ಹರಿಃ । ಬ್ರಹ್ಮಾಭೂತ್ವಾಸ್ಯ ಜಗತೋ ವಿಸೃಷ್ಟೌ ಸಂಪ್ರವರ್ತತೇ ।। 60 ।। ಸೃಷ್ಟಂ ಚ ಪಾತ್ಯನುಯುಗಂ ಯಾವತ್ಕಲ್ಪವಿಕಲ್ಪನಾ । ಸತ್ತ್ವಭೃದ್ಭಗವಾನ್ವಿಷ್ಣುರಪ್ರಮೇಯಪರಾಕ್ರಮಃ ।। 61 ।। ತಮೋದ್ರೇಕೀ ಚ ಕಲ್ಪಾಂತೇ ರುದ್ರರೂಪೀ ಜನಾರ್ದನಃ । ಮೈತ್ರೇಯಾಖಿಲಭೂತಾನಿ ಭಕ್ಷಯತ್ಯತಿಭೀಷಣಃ ।। 62 ।। ಸಂಭಕ್ಷ್ಯ ಸರ್ವಭೂತಾನಿ ಜಗತ್ಯೇಕಾರ್ಣವೀಕೃತೇ । ನಾಗಪರ್ಯಂಕಶಯನೇ ಶೇತೇಸೌ ಪರಮೇಶ್ವರಃ ।। 63 ।। ಪ್ರಬುದ್ಧಶ್ಚ ಪುನಃ ಸೃಷ್ಟಿಂ ಕರೋತಿ ಬ್ರಹ್ಮರೂಪಧೃಕ್ ।। 64 ।।
ಅಲ್ಲಿ ರಜೋಗುಣ ಉದ್ರೇಕಗೊಂಡ ಸ್ವಯಂ ವಿಶ್ವೇಶ್ವರ ಹರಿಯು ಬ್ರಹ್ಮಭೂತನಾಗಿ ಜಗತ್ತಿನ ಸೃಷ್ಟಿಯಲ್ಲಿ ತೊಡಗುತ್ತಾನೆ. ಕಲ್ಪವು ಮುಗಿಯುವವರೆಗೆ ಸತ್ತ್ವಗುಣಯುಕ್ತನಾದ ಅಪ್ರಮೇಯ ಪರಾಕ್ರಮಿ ಭಗವಾನ್ ವಿಷ್ಣುವು ಯುಗಯುಗದಲ್ಲಿಯೂ ಸೃಷ್ಟಿಸಿದ ಜಗತ್ತನ್ನು ಪಾಲಿಸುತ್ತಾನೆ. ಮೈತ್ರೇಯ! ಕಲ್ಪಾಂತದಲ್ಲಿ ತಮೋಗುಣದ ಉದ್ರೇಕದಿಂದ ರುದ್ರರೂಪೀ ಜನಾರ್ದನನು ಅತಿಭೀಷಣನಾಗಿ ಅಖಿಲ ಭೂತಗಳನ್ನೂ ಭಕ್ಷಿಸುತ್ತಾನೆ. ಸರ್ವಭೂತಗಳನ್ನೂ ಭಕ್ಷಿಸಿ ಜಗತ್ತನ್ನು ಏಕಾರ್ಣವವನ್ನಾಗಿ ಮಾಡಿ ಪರಮೇಶ್ವರನು ನಾಗಪರ್ಯಂಕಶಯನದಲ್ಲಿ ನಿದ್ರಿಸುತ್ತಾನೆ. ಎಚ್ಚೆತ್ತು ಅವನೇ ಬ್ರಹ್ಮರೂಪವನ್ನು ಧರಿಸಿ ಪುನಃ ಸೃಷ್ಟಿಮಾಡುತ್ತಾನೆ.
ಸೃಷ್ಟಿಸ್ಥಿತ್ಯಂತಕರಣೀಂ ಬ್ರಹ್ಮವಿಷ್ಣುಶಿವಾತ್ಮಿಕಾಮ್ । ಸ ಸಂಜ್ಞಾಂ ಯಾತಿ ಭಗವಾನೇಕ ಏವ ಜನಾರ್ದನಃ ।। 65 ।। ಸ್ರಷ್ಟಾ ಸೃಜತಿ ಚಾತ್ಮಾನಂ ವಿಷ್ಣುಃ ಪಾಲ್ಯಂ ಚ ಪಾತಿ ಚ । ಉಪಸಂಹ್ರಿಯತೇ ಚಾಂತೇ ಸಂಹರ್ತಾ ಚ ಸ್ವಯಂ ಪ್ರಭುಃ ।। 66 ।। ಪೃಥಿವ್ಯಾಪಸ್ತಥಾ ತೇಜೋ ವಾಯುರಾಕಾಶ ಏವ ಚ । ಸರ್ವೇಂದ್ರಿಯಾಂತಃಕರಣಂ ಪುರುಷಾಖ್ಯಂ ಹಿ ಯಜ್ಜಗತ್ ।। 67 ।। ಸ ಏವ ಸರ್ವಭೂತಾತ್ಮಾ ವಿಶ್ವರೂಪೋ ಯತೋಽವ್ಯಯಃ । ಸರ್ಗಾದಿಕಂ ತತೋಽಸ್ಯೈವ ಭೂತಸ್ಥಮುಪಕಾರಕಮ್ ।। 68 ।।
ಸೃಷ್ಟಿ-ಸ್ಥಿತಿ ಮತ್ತು ಲಯಮಾಡುವ ಆ ಭಗವಾನ್ ಜನಾರ್ದನನೊಬ್ಬನೇ ಬ್ರಹ್ಮ-ವಿಷ್ಣು-ಶಿವ ಎಂಬ ಸಂಜ್ಞೆಗಳನ್ನು ಹೊಂದುತ್ತಾನೆ. ವಿಷ್ಣುವು ತನ್ನನ್ನು ತಾನೇ ಸೃಷ್ಟಿಸಿಕೊಳ್ಳುತ್ತಾನೆ, ತನ್ನನ್ನು ತಾನೇ ಪಾಲಿಸಿಕೊಳ್ಳುತ್ತಾನೆ, ಮತ್ತು ಸ್ವಯಂ ಆ ಪ್ರಭುವೇ ಸಂಹರ್ತನಾಗಿ ಅಂತ್ಯದಲ್ಲಿ ಉಪಸಂಹರಿಸಿಕೊಳ್ಳುತ್ತಾನೆ. ಈ ಜಗತ್ತು, ಭೂಮಿ, ಜಲ, ತೇಜಸ್ಸು, ವಾಯು ಮತ್ತು ಆಕಾಶ ಎಲ್ಲವೂ ಸರ್ವ ಇಂದ್ರಿಯ ಅಂತಃಕರಣದಲ್ಲಿರುವ ಪುರುಷನೆಂದೆನಿಸಿಕೊಂಡವನೇ. ಅವನೇ ಸರ್ವಭೂತಾತ್ಮನು. ವಿಶ್ವರೂಪನು. ಅವ್ಯಯನು. ಅವನೇ ಸೃಷ್ಟಿ ಮೊದಲಾದವುಗಳನ್ನು ಮಾಡಿ ಸರ್ವಭೂತಗಳಲ್ಲಿಯೂ ಇದ್ದುಕೊಂಡು ಅವುಗಳಿಗೆ ಉಪಕಾರಮಾಡುತ್ತಾನೆ.
ಸ ಏವ ಸೃಜ್ಯಃ ಸ ಚ ಸರ್ಗಕರ್ತಾ ಸ ಏವ ಪಾತ್ಯತ್ತಿ ಚ ಪಾಲ್ಯತೇ ಚ । ಬ್ರಹ್ಮಾದ್ಯವಸ್ಥಾಭಿರಶೇಷಮೂರ್ತಿರ್ವಿಷ್ಣುರ್ವರಿಷ್ಠೋ ವರದೋ ವರೇಣ್ಯಃ ।। 69 ।।
ಉತ್ಪತ್ತಿಹೊಂದುವವನೂ ಅವನೇ. ಉತ್ಪತ್ತಿಮಾಡುವವನೂ ಅವನೇ. ಕಾಪಾಡಿಕೊಳ್ಳಬೇಕಾದವನೂ ಅವನೇ. ಕಾಪಾಡುವವನೂ ಅವನೇ. ಆ ವರಿಷ್ಠ, ವರದ, ವರೇಣ್ಯ ಬ್ರಹ್ಮನೇ ಬ್ರಹ್ಮ-ವಿಷ್ಣು-ರುದ್ರಾದಿ ಅವಸ್ಥೆಗಳನ್ನು ಹೊಂದುತ್ತಾನೆ.”
ಇತಿ ಶ್ರೀವಿಷ್ಣುಪುರಾಣೇ ಪ್ರಥಮೇಽಂಶೇ ದ್ವಿತೀಯೋಽಧ್ಯಾಯಃ ।।
[1] ಪ್ರಕೃತಿ-ಪುರುಷರ ವಿಯೋಗವಿಲ್ಲದೇ ಪ್ರಳಯವಾಗುವುದಿಲ್ಲ.
[2] ಪ್ರಳಯಕಾಲದಲ್ಲಿ ಸೂರ್ಯಾದಿಗತಿಯಿಂದ ಕೂಡಿದ ಸ್ಥೂಲರೂಪವಾದ ಕಾಲವಿಲ್ಲವೆಂದು ಅಭಿಪ್ರಾಯ.
[3] ಈ ಶ್ಲೋಕವನ್ನು ಮೊದಲ್ಗೊಂಡು ಅಧ್ಯಾಯದ ಉಳಿದ ಶ್ಲೋಕಗಳು ಪದ್ಮಪುರಾಣದ ಸೃಷ್ಟಿಖಂಡದ ಎರಡನೇ ಅಧ್ಯಾಯದ 88-116ರ ವರೆಗಿನ ಶ್ಲೋಕಗಳನ್ನೇ ಸುಮಾರಾಗಿ ಹೋಲುತ್ತವೆ.
[4] ಈ ಎರಡು ಶ್ಲೋಕಗಳು (44-45) ಮಾರ್ಕಂಡೇಯ ಪುರಾಣದ ಅಧ್ಯಾಯ 42ರ 47-48ನೇ ಶ್ಲೋಕಗಳನ್ನು ಹೋಲುತ್ತವೆ.
[5] ಈ ಶ್ಲೋಕವು (46) ಮಾರ್ಕಂಡೇಯ ಪುರಾಣದ ಅಧ್ಯಾಯ 42ರ 50ನೇ ಶ್ಲೋಕವನ್ನೂ ಪದ್ಮಪುರಾಣದ ಆದಿಖಂಡದ ಅಧ್ಯಾಯ 2ರ 18ನೇ ಶ್ಲೋಕವನ್ನೂ ಹೋಲುತ್ತದೆ.
[6] ಈ ಶ್ಲೋಕವೂ ಸೇರಿ ಮುಂದಿನ 10 ಶ್ಲೋಕಗಳು ಪದ್ಮಪುರಾಣದ ಆದಿಖಂಡದ ಅಧ್ಯಾಯ 2ರಲ್ಲಿ ಮತ್ತು ಸೃಷ್ಟಿಖಂಡದ ಅಧ್ಯಾಯ 2ರಲ್ಲಿ ಬರುವ ಶ್ಲೋಕಗಳಿಗೆ ಹೋಲುತ್ತವೆ.
[7] ಮೊದಲು ಉತ್ಪತ್ತಿಯಾದ ಆಕಾಶಕ್ಕೆ ಶಬ್ದವೊಂದೇ ಗುಣವು, ಎರಡನೆಯ ವಾಯುವಿಗೆ ಶಬ್ದ ಮತ್ತು ಸ್ಪರ್ಶಗಳೆಂಬ ಎರಡು ಗುಣಗಳು. ಮೂರನೆಯ ತೇಜಸ್ಸಿಗೆ ಶಬ್ದ, ಸ್ಪರ್ಶ ಮತ್ತು ರೂಪಗಳೆಂಬ ಮೂರು ಗುಣಗಳು. ನಾಲ್ಕನೆಯ ಜಲಕ್ಕೆ ಶಬ್ದ, ಸ್ಪರ್ಶ, ರೂಪ ಮತ್ತು ರಸಗಳೆಂಬ ನಾಲ್ಕು ಗುಣಗಳು. ಐದನೆಯ ಪೃಥ್ವಿಗೆ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳೆಂಬ ಐದೂ ಗುಣಗಳು.