ಋಗ್ವೇದ ಸಂಹಿತೆ ಮಂಡಲ 10, ಅನುವಾಕ 6, ಸೂಕ್ತ 82
[ಋಗ್ವೇದ ಸಂಹಿತಾ (ಸಾಯಣಭಾಷ್ಯ ಸಮೇತ, ಕರ್ಣಾಟಕ ಭಾಷಾರ್ಥಾನುವಾದವಿವರಣೆಗಳೊಂದಿಗೆ) ಭಾಗ 29 ಎಂಟನೆಯ ಅಷ್ಟಕದ ಅಧ್ಯಾಯಗಳು 3-4 ಹತ್ತನೆಯ ಮಂಡಲದ ಸೂಕ್ತಗಳು 72-94, ಅನುವಾದಕರು ಆಸ್ಥಾನಮಹಾವಿದ್ವಾನ್ ಹೆಚ್. ಪಿ. ವೆಂಕಟರಾವ್, ಶ್ರೀ ಜಯಚಾಮರಾಜೇಂದ್ರ ವೇದರತ್ನಮಾಲಾ, ಸಂಖ್ಯೆ 29, ಶ್ರೀ ವಿನಾಯಕ ಪ್ರಿಂಟಿಂಗ್ ವರ್ಕ್ಸ್, ಮೈಸೂರು, 1954] [259]
[ಸೂಕ್ತದಲ್ಲಿರುವ ಋಕ್ಸಂಖ್ಯೆ 7; ಋಷಿಃ – ವಿಶ್ವಕರ್ಮಾ ಭೌವನಃ । ದೇವತಾ – ವಿಶ್ವಕರ್ಮಾ । ಛಂದಃ – ತ್ರಿಷ್ಟುಪ್]
ಚಕ್ಷುಷಃ ಪಿತಾ ಮನಸಾ ಹಿ ಧೀರೋ ಘೃತಮೇನೇ ಅಜನನ್ನಮ್ನಮಾನೇ । ಯದೇದಂತಾ ಅದದೃಹಂತ ಪೂರ್ವ ಆದಿದ್ದ್ಯಾವಾಪೃಥಿವೀ ಅಪ್ರಥೇತಾಮ್ ।। 1 ।।
ಚಕ್ಷುಷಃ – ಚಕ್ಷುತಾದಿ ಇಂದ್ರಿಯಗಳಿಗೆ । ಪಿತಾ – ಪಾಲಕನೂ । ಮನಸಾ – ಆತ್ಮಾಭಿಮಾನದಿಂದ । ಧೀರಃ – ಧೀರನೂ ಆದ ವಿಶ್ವಕರ್ಮನು । ಘೃತಂ - ಉದಕವನ್ನು । ಅಜನತ್ – ಉತ್ಪನ್ನಮಾಡಿದನು (ನಂತರ) । ನಮ್ನಮಾನೇ – ಇದೇ ಉದಕದಲ್ಲಿ ತೇಲಾಡುತ್ತಿದ್ದ । ಏನೇ – ದ್ಯಾವಾಪೃಥಿವಿಗಳನ್ನು ಉತ್ಪನ್ನಮಾಡಿದನು । ಯದೇತ್ - ಯಾವಾಗ । ಪೂರ್ವೇ – ಅತ್ಯಂತ ಪ್ರಾಚೀನವಾದ । ಅಂತಾಃ – ದ್ಯಾವಾಪೃಥಿವಿಗಳಿಗೆ ಸೇರಿದ ದಿಗಂತಗಳು । ಅದದೃಹಂತ – ದೃಢವಾಗಿ ನಿಯಮಿತವಾದವೋ । ಅದಿತ್ – ಆ ಒಡನೆಯೇ । ದ್ಯಾವಾಪೃಥಿವೀ – ದ್ಯಾವಾಪೃಥಿವಿಗಳೆರಡೂ । ಅಪ್ರಥೇತಾಂ – ವಿಸ್ತಾರವನ್ನು ಹೊಂದಿದವು ।
ಚಕ್ಷುರಾದಿ ಇಂದ್ರಿಯಗಳಿಗೆ ಪಾಲಕನೂ, ಆತ್ಮಾಭಿಮಾನದಿಂದ ಧೀರನೂ ಆದ ವಿಶ್ವಕರ್ಮನು ಉದಕವನ್ನು ಉತ್ಪನ್ನಮಾಡಿದನು. ನಂತರ ಅದೇ ಉದಕದಲ್ಲಿ ತೇಲಾಡುವ ದ್ಯಾವಾಪೃಥಿವಿಗಳನ್ನು ಉತ್ಪನ್ನಮಾಡಿದನು. ಯಾವಾಗ ಅತ್ಯಂತ ಪ್ರಾಚೀನವಾದ ದ್ಯಾವಾಪೃಥಿವಿಗಳಿಗೆ ಸೇರಿದ ದಿಗಂತಗಳು ದೃಢವಾಗಿ ನಿಯಮಿತವಾದವೋ ಆ ಒಡನೆಯೇ ದ್ಯಾವಾಪೃಥಿವೀಗಳೆರಡೂ ವಿಸ್ತಾರವನ್ನು ಹೊಂದಿದವು.
ಚಕ್ಷುಸ್ಸೆಂದರೆ ಕಣ್ಣು. ಇಲ್ಲಿ ಚಕ್ಷುಸ್ಸನ್ನು ಎಂದರೆ ಕಣ್ಣನ್ನು ಒಳಗೊಂಡ ಶರೀರವೆಂದೂ ಪಿತಾ ಎಂದರೆ ಶರೀರದ ಉತ್ಪಾದಕನೆಂದೂ ಭಾಷ್ಯಕಾರರು ಅರ್ಥವಿವರಣೆ ಮಾಡಿದ್ದಾರೆ. ಶರೀರದಲ್ಲಿ ಅನೇಕ ಅವಯವಗಳಿರುವಾಗ ಎಲ್ಲವನ್ನೂ ಬಿಟ್ಟು ಚಕ್ಷುಸ್ಸೆಂಬ ಶಬ್ದವನ್ನು ಮಾತ್ರ ಉಪಯೋಗಿಸಿರುವುದು ಏಕೆ?
ಸರ್ವಸ್ಯ ಗಾತ್ರಸ್ಯ ಶಿರಃ ಪ್ರಧಾನಃ ಎಂಬ ಉಕ್ತಿಯಲ್ಲಿ ಶರೀರದಲ್ಲಿರುವ ನಾನಾ ಅವಯವಗಳಲ್ಲಿ ಶಿರಸ್ಸಿಗೇ ಪ್ರಾಧಾನ್ಯತೆ ಇದೆ. ಏಕೆಂದರೆ – ಶರೀರವು ಆತ್ಮನ ಪ್ರೇರಣೆಯಿಂದ ವ್ಯವಹರಿಸಲು ಐದು ಕರ್ಮೇಂದ್ರಿಯಗಳು ಮತ್ತು ಐದು ಜ್ಞಾನೇಂದ್ರಿಯಗಳೂ ಅವಶ್ಯಕವು. ಹಸ್ತಪಾದಾದಿಕರ್ಮೇಂದ್ರಿಯಗಳು ಶಿರಸ್ಸಿನಲ್ಲಿ ಇಲ್ಲದಿದ್ದರೂ ಅವುಗಳ ಪ್ರೇರಣೆಯು ಜ್ಞಾನೇಂದ್ರಿಯಗಳ ಮೂಲಕವೇ ಆಗಬೇಕು. ಅಂದರೆ ಜ್ಞಾನೇಂದ್ರಿಯಗಳ ಸಹಾಯವಿಲ್ಲದೇ (ಜ್ಞಾನೇಂದ್ರಿಯಗಳಿಗೆ ಮನಸ್ಸಿನ ಸಹಾಯವಿಲ್ಲದೇ) ಕರ್ಮೇಂದ್ರಿಯಗಳ ವ್ಯಾಪಾರವು ಸಾಧ್ಯವಿಲ್ಲ. ಆದ್ದರಿಂದ ಕರ್ಮೇಂದ್ರಿಯಗಳಿಗಿಂತ ಜ್ಞಾನೇಂದ್ರಿಯಗಳಿಗೆ ಹೆಚ್ಚು ಪ್ರಾಶಸ್ತ್ಯವಿದೆ. ಈ ಜ್ಞಾನೇಂದ್ರಿಯಗಳು ಎಂದರೆ ಕಣ್ಣು, ಕಿವಿ, ಮೂಗು, ನಾಲಿಗೆ, ತ್ವಕ್ (ಸ್ಪರ್ಶೇಂದ್ರಿಯ) ಎಂಬ ಐದು ಜ್ಞಾನೇಂದ್ರಿಯಗಳೂ ಶಿರಸ್ಸೆಂಬ ಅಂಗದಲ್ಲಿಯೇ ಸ್ಥಾಪಿತವಾಗಿವೆ. ಈ ಐದು ಜ್ಞಾನೇಂದ್ರಿಯಗಳಲ್ಲಿಯೂ ಚಕ್ಷುಸ್ಸಿಗೇ (ಕಣ್ಣಿಗೇ) ಪ್ರಾಧಾನ್ಯತೆ ಇದೆ. ಆದ್ದರಿಂದ ಕರ್ಮೇಂದ್ರಿಯ-ಜ್ಞಾನೇಂದ್ರಿಯಗಳಲ್ಲೆಲ್ಲಾ ಪ್ರಧಾನಭೂತವಾದ ಚಕ್ಷುಸ್ಸನ್ನು ಹೇಳುವುದರಿಂದ ಶರೀರದ ಎಲ್ಲಾ ಅಂಗಗಳನ್ನೂ ಅಂದರೆ ಶರೀರವನ್ನೇ ಹೇಳಿದಂತಾಯಿತು ಎಂಬ ಭಾವನೆಯಿಂದ ಭೌವನ ಋಷಿಯು ಈ ಋಕ್ಕಿನಲ್ಲಿ ಚಕ್ಷುಷಃ ಪಿತಾ – ಸಮಸ್ತ ಶರೀರದ ಉತ್ಪಾದಕನು ಎಂದು ವರ್ಣಿಸಿದ್ದಾನೆ.
ಮನಸಾ ಹಿ ಧೀರಃ ಘೃತಂ ಅಜನತ್ – ಮನೋಧೈರ್ಯದಲ್ಲಿ ನನ್ನ ಸಮನಾದವನು ಯಾರೂ ಇಲ್ಲವೆಂಬ ಬುದ್ಧಿಯಿಂದ ಕೂಡಿದ ಆ ವಿಶ್ವಕರ್ಮನು ಎಲ್ಲಕ್ಕೂ ಮೊದಲು ಉದಕವನ್ನು ಉತ್ಪತ್ತಿ ಮಾಡಿದನು.
ವಿಶ್ವಕರ್ಮಾ ವಿಮನಾ ಆದ್ವಿಹಾಯಾ ಧಾತಾ ವಿಧಾತಾ ಪರಮೋತ ಸಂದೃಕ್ । ತೇಷಾಮಿಷ್ಟಾನಿ ಸಮಿಷಾ ಮದಂತಿ ಯತ್ರಾ ಸಪ್ತಋಷೀನ್ಪರ ಏಕಮಾಹುಃ ।। 2 ।।
ವಿಶ್ವಕರ್ಮಾ- ವಿಶ್ವಕರ್ಮ ದೇವನು । ವಿಮನಾಃ – ವಿಶೇಷ ಪ್ರಜ್ಞೆಯಿರುವ ಮನಸ್ಸುಳ್ಳವನೂ । ವಿಹಾಯಾಃ – ಮಹಾತ್ಮನೂ । ಧಾತಾ – ವ್ಯಷ್ಟ್ಯಾದಿಗಳ ಕರ್ತನೂ । ವಿಧಾತಾ – ಸಕಲ ಜಗತ್ತಿಗೂ ನಿರ್ಮಾಪಕನೂ । ಪರಮಾ - ಶ್ರೇಷ್ಠನೂ । ಸಂದೃಕ್ – ಎಲ್ಲವನ್ನೂ ಸೂಕ್ಷ್ಮವಾಗಿ ನೋಡುವವನೂ ಆಗಿದ್ದಾನೆ । ಯತ್ರ – ಯಾವ ಈ ವಿಶ್ವಕರ್ಮನಲ್ಲಿ । ತೇಷಾಂ – ಸಕಲ ಜ್ಯೋತಿಗಳ । ಇಷ್ಟಾನಿ – ಸ್ವರೂಪ ಮತ್ತು ಸಂಕಲ್ಪಗಳೂ । ಇಷಾ – ಉದಕದೊಡನೆ ಕೂಡಿ । ಸಂ ಮದಂತಿ – ಒಟ್ಟಿಗೆ ತೃಪ್ತಿಯನ್ನು ಹೊಂದುವವೋ ಆ ವಿಶ್ವಕರ್ಮನನ್ನು । ಸಪ್ತರ್ಷೀನ್ ಪರಃ – ಸಪ್ತರ್ಷಿಗಿಂತಲೂ ಅಧಿಕನೂ । ಏಕಂ – ಅದ್ವಿತೀಯನೂ ಆದ ಆದಿತ್ಯನೆಂದು । ಆಹುಃ – ತಿಳಿದವರು ಹೇಳುತ್ತಾರೆ ।
ವಿಶ್ವಕರ್ಮನು ವಿಶೇಷ ಪ್ರಜ್ಞೆಯುಳ್ಳ ಮನಸ್ಸಿನವನೂ, ಮಹಾತ್ಮನೂ, ವೃಷ್ಟ್ಯಾದಿಗಳ ಕರ್ತನೂ, ಸಂಪೂರ್ಣ ಜಗತ್ತಿನ ನಿರ್ಮಾಪಕನೂ, ಶ್ರೇಷ್ಠನೂ, ಎಲ್ಲವನ್ನೂ ಸೂಕ್ಷ್ಮವಾಗಿ ನೋಡುವವನೂ ಆಗಿದ್ದಾನೆ. ಯಾವ ಈ ವಿಶ್ವಕರ್ಮನಲ್ಲಿ ಸಮಸ್ತ ಜ್ಯೋತಿಗಳ ಸ್ವರೂಪ ಮತ್ತು ಸಂಕಲ್ಪಗಳೂ ಉದಕದೊಡನೆ ಕೂಡಿ ಒಟ್ಟಿಗೇ ತೃಪ್ತಿಯನ್ನು ಹೊಂದುವವೋ ಆ ವಿಶ್ವಕರ್ಮನನ್ನು ಸಪ್ತರ್ಷಿಗಳಿಗಿಂತಲೂ ಅಧಿಕನೂ, ಅದ್ವಿತೀಯನೂ ಆದ ಆದಿತ್ಯನೆಂದೂ ತಿಳಿದವರು ಹೇಳುತ್ತಾರೆ.
ಇಲ್ಲಿ ವಿಮನಾಃ ಎಂಬ ಶಬ್ದಕ್ಕೆ ವಿಭೂತಮನಾಃ ಎಂದು ಅರ್ಥೈಸಿದ್ದಾರೆ. ಅಂದರೆ ವಿಭೂತಪ್ರಜ್ಞಾನಃ, ಸರ್ವತ್ರಾಪ್ರತಿಹತಮಸ್ಯ ಪ್ರಜ್ಞಾನಂ । ಇಲ್ಲಿ ವಿಶ್ವಕರ್ಮ ಶಬ್ದಕ್ಕೆ ಆದಿತ್ಯನೆಂದು ಅರ್ಥೈಸಿದ್ದಾರೆ. ಆದ್ದರಿಂದ ಈ ಋಕ್ಕಿನಲ್ಲಿ ಪ್ರತಿಪಾದಿತನಾಗಿರುವ ವಿಶ್ವಕರ್ಮನ ಅಥವಾ ಆದಿತ್ಯನ ಪ್ರಜ್ಞೆಯು ಸರ್ವತ್ರ ಅಪ್ರತಿಹತವಾದುದು. ಸಮಸ್ತ ಸ್ಥಳಗಳಲ್ಲಿಯೂ, ಸಮಸ್ತ ವಿಷಯಗಳಲ್ಲಿಯೂ, ಅ ವಿಶ್ವಕರ್ಮನ (ಆದಿತ್ಯನ) ಪ್ರಜ್ಞೆಗೆ ತಡೆಯೆಂಬುದೇ ಇಲ್ಲ. ಅವನ ಪ್ರಜ್ಞೆಯು ಎಲ್ಲೆಡೆಯೂ ವ್ಯಾಪಿಸಿ ಪ್ರಸರಿಸಿರುವುದು.
ಇದಲ್ಲದೇ ಇವನು ಧಾತಾ ಚ ವಿಧಾತಾ ಚ – ಇವನು ಸಮಸ್ತ ಭುತಜಾತಗಳ ಸೃಷ್ಟಿಕರ್ತನು. ಮತ್ತು ತಾನು ಉತ್ಪತ್ತಿಮಾಡಿದ ಈ ಪ್ರಾಣಿಗಳಿಗೆಲ್ಲಾ ತಮ್ಮ ತಮ್ಮ ಕರ್ಮಾನುಸಾರವಾಗಿ ಉತ್ತಮಾಧಮಕರ್ಮಗಳಲ್ಲಿ ಪ್ರವೃತ್ತವಾಗಿರುವುದನ್ನು ನೋಡುವವನು. ಸರ್ವಸಾಕ್ಷಿಯು. ಅಂದರೆ ಅವರವರ ಕರ್ಮಗಳಿಗೆ ನಿಯಾಮಕನಾಗಿ ಉತ್ತಮ ಮಾರ್ಗದರ್ಶಿಯು. ಮತ್ತು ತಾನು ಸೃಷ್ಟಿಸಿದ ಪ್ರಾಣಿಗಳಿಗೆ ಇಷ್ಟವಾದ ಅಬೀಪ್ಸಿತಫಲಗಳನ್ನು ಕೊಟ್ಟು ಅವುಗಳಿಗೆ ಸಾಧನಭೂತವಾದ ಉದಕಗಳಿಂದ ಸಂತೋಷಪಡಿಸುವವನು.
ಇಷ್ಟಾನಿ ಎಂಬ ಶಬ್ದಕ್ಕೆ ಇಷ್ಟವಾದ ಅಭಿಲಾಷೆಗಳು, ಪ್ರೀತಿಪಾತ್ರವಾದ ವಸ್ತುಗಳು, ತಾವು ಬಯಸುವ ಪದಾರ್ಥಗಳು, ಹೋಗಿ ಸೇರುವ ಅಥವಾ ಬೇಕೆಂದು ಆಶಿಸುವ ಅಥವಾ ತಮ್ಮ ಗುರಿಗೆ ಸಾಧನಭೂತವಾಗಿರುವ ಅಭಿಲಾಷೆಗಳು ಎಂದು ನಾನಾವಿಧದ ಅರ್ಥಗಳನ್ನು ಹೇಳಿದ್ದಾರೆ. ಮತ್ತು ಸಂ ಇಷಾ ಮದಂತಿ – ಇಷಾ ಉದಕೇನ ಸಹ ಮೋದಂತೇ ಎಂಬ ವಾಕ್ಯಕ್ಕೆ – ಸರ್ವಪ್ರಾಣಿಗಳಿಗೂ ಬೇಕಾದ ಸುಖಸಾಮಗ್ರಿಗಳು ಅಂದರೆ ಆಹಾರ, ವಸ್ತ್ರ, ಇತರ ಭೋಗಸಾಮಗ್ರಿಗಳು ಇವೆಲ್ಲಕ್ಕೂ ವೃಷ್ಟಿಯೇ (ಮಳೆಯೇ) ಸಾಧನಭೂತವಾಗಿರುವುದು. ಕಾಲ ಕಾಲಕ್ಕೆ ಮಳೆಯಾದರೆ ಸಸ್ಯಾಭಿವೃದ್ಧಿಯಿಂದ ಸಕಲಸಂಪತ್ತುಗಳೂ ಲಭಿಸುವವು ಎನ್ನುವುದು ಲೋಕವ್ಯವಹಾರದಲ್ಲಿ ಅನುಭವವಾಗಿದೆ. ಆದ್ದರಿಂದ ವೃಷ್ಟಿಪ್ರದಾನದಿಂದಲೇ ಆದಿತ್ಯನು ಸಕಲ ಪ್ರಾಣಿಗಳನ್ನು ಸಂತೋಷಪಡಿಸುತ್ತಾನೆ ಎನ್ನುವುದು ನಿರ್ವಿವಾದವು.
ಯತ್ರ ಸಪ್ತಋಷೀನ್ ಪರ ತಸ್ಮಿನ್ನೇಕಂ ಭವಂತೀತ್ಯಧಿದೈವತಮ್ । ಏಳು ವಿಧದ ಜ್ಯೋತಿಗಳು ಅಥವಾ ರಶ್ಮಿವಿಶೇಷಗಳು ಅವುಗಳಾಚೆ ಇರುವ ಯಾವ ಆದಿತ್ಯನಲ್ಲಿ ಅಥವಾ ಆದಿತ್ಯಮಂಡಲದಲ್ಲಿ ಒಂದಾಗಿ ಸೇರಿ ಬೆಳಗುತ್ತಿರುವವೋ ಅಂತಹ ಆದಿತ್ಯನು ಸಮಸ್ತ ಪ್ರಾಣಿಗಳ ಸುಖಸಂತೋಷಗಳಿಗೆ ಸಾಧನಭೂತವಾದ ವೃಷ್ಟಿಗೆ ಕಾರಣನಾಗಿದ್ದಾನೆ. ಅವನೇ ಯಜ್ಞ-ದಾನ-ತಪಸ್ಸುಗಳ ಭೋಕ್ತೃವು. ನಖದಿಂದ ಹಿಡಿದು ಶ್ಮಶ್ರು, ಕೇಶ ಮೊದಲಾದ ಆ ಆದಿತ್ಯನ ಸರ್ವಾಂಗಗಳೂ ಹಿರಣ್ಯಮಯವಾಗಿವೆ. ಇಂತಹ ಆದಿತ್ಯನು ಪರಃ ಎಂದರೆ ಸಮಸ್ತಕ್ಕಿಂತಲೂ ಶ್ರೇಷ್ಠನಾದ ಪರದೇವತೆ.
ಯೋ ನಃ ಪಿತಾ ಜನಿತೋ ಯೋ ವಿಧಾತಾ ಧಾಮಾನಿ ವೇದ ಭುವನಾನಿ ವಿಶ್ವಾ । ಯೋ ದೇವಾನಾಂ ನಾಮದಾ ಏಕ ಏವ ತಂ ಸಂಪ್ರಶ್ನಂ ಭುವನಾ ಯಂತ್ಯನ್ಯಾ ।। 3 ।।
ಯಃ – ಯಾವದೇವನು । ನಃ - ನಮಗೆ । ಪಿತಾ – ಪಾಲಕನೂ । ಜ್ತಾ – ಉತ್ಪಾದಕನೂ ಆಗಿದ್ದಾನೋ । ಯಃ- ಯಾರು । ವಿಧಾತಾ – ಸಕಲ ಜಗತ್ತಿನ ನಿರ್ಮಾಪಕನೋ । ಧಾಮಾನಿ – ಸಕಲ ತೇಜಃಸ್ಥಾನಗಳನ್ನೂ । ವೇದ- ತಿಳಿದಿದ್ದಾನೋ । ವಿಶ್ವಾ ಭುವನಾ – ಸಕಲ ಜಗತ್ತನ್ನೂ ತಿಳಿದಿದ್ದಾನೋ । ಯಃ - ಯಾರು । ದೇವನಾಂ – ಅಗ್ನ್ಯಾದಿ ದೇವತೆಗಳಿಗೆ । ನಾಮಧಾಃ – ನಾಮನಿರ್ದೇಶನವನ್ನು ಮಾಡುತ್ತಾನೋ ಆ ದೇವನು । ಏಕ ಏವ – ಅದ್ವಿತೀಯನು । ತಂ- ಆ ವಿಶ್ವಕರ್ಮನನ್ನು । ಅನ್ಯಾ ಭುವನಾ – ಇತರ ಭೂತಜಾತಗಳು । ಪ್ರಶ್ನಂ – ಈಶ್ವರಸ್ವರೂಪವನ್ನು ತಿಳಿಯುವ ಪ್ರಶ್ನೆಯೊಡನೆ । ಯಂತಿ – ಸಮೀಪಿಸುತ್ತವೆ ।
ಯಾವ ದೇವನು ನಮಗೆ ಪಾಲಕನೂ ಉತ್ಪಾದಕನೂ ಆಗಿದ್ದಾನೋ, ಯಾರು ಸಕಲ ಜಗತ್ತಿನ ನಿರ್ಮಾಪಕನೋ, ಯಾರು ಸಕಲ ತೇಜಃಸ್ಥಾನಗಳನ್ನೂ ತಿಳಿದಿದ್ದಾನೋ, ಯಾರು ಅಗ್ನ್ಯಾದಿದೇವತೆಗಳಿಗೆ ನಾಮ-ನಿರ್ದೇಶನವನ್ನು ಕೊಡುತ್ತಾನೋ, ಆ ದೇವನು ಅದ್ವಿತೀಯನು. ಇತರ ಭೂತಜಾತಗಳೆಲ್ಲವೂ ಈಶ್ವರನ ಸ್ವರೂಪವನ್ನು ತಿಳಿಯುವ ಪ್ರಶ್ನೆಯೊಂದಿಗೆ ಅವನನ್ನು ಸಮೀಪಿಸುತ್ತವೆ.
ಪ್ರಕೃತ ಋಕ್ಕಿನಲ್ಲಿ ಎರಡು ಮುಖ್ಯ ಅಭಿಪ್ರಾಯಗಳಿವೆ. (1) ಸಕಲ ಉತ್ಪತ್ತಿ ಸ್ಥಿತಿಗೂ ಕಾರಣನೂ ಅದ್ವಿತೀಯನೂ ಆದ ವಿಶ್ವಕರ್ಮನೊಬ್ಬನೇ ಸಕಲ ದೇವತೆಗಳಿಗೂ ನಿರ್ಮಾಪಕನು ಮತ್ತು ನಾಮನಿರ್ದೇಶಕನು. ಹಾಗೆಯೇ ನಾಮಪ್ರಭೇದಗಳನ್ನೂ ಹೊಂದಿದ್ದಾನೆ. (2) ಉತ್ಪನ್ನವಾದ ಸಕಲ ಜಗತ್ತಿಗೂ ಇವನು ಅತಿರಿಕ್ತನಾಗಿರುವುದರಿಂದ ಇವನ ಸ್ವರೂಪವು ಗ್ರಾಹ್ಯಾತೀತವಾದುದು. ದೇವತೆಗಳ ಜ್ಞಾನಕ್ಕೂ ಮೀರಿದ ಸ್ವರೂಪವುಳ್ಳವನಾದ್ದರಿಂದ ಸಕಲರೂ ಇವನ ಸ್ವರೂಪವೇನಂದರಿಯಲು ಪ್ರಶ್ನಿಸುವರೇ ವಿನಃ ಇವನನ್ನು ಅರಿತವರು ಯಾರೂ ಇಲ್ಲ.
ವಿಶ್ಮಕರ್ಮಸಂಜ್ಞಕನಾದ ಈಶ್ವರನು ಸರ್ವವ್ಯಾಪಿ ಮತ್ತು ಸೂರ್ಯಚಂದ್ರಾದ ಸಕಲ ಗ್ರಹಗಳೂ, ಸಕಲ ದೇವತೆಗಳೂ ಇವನಲ್ಲಿ ಅಡಗಿದ್ದಾರೆ. ಸರ್ವರೂ ಇವನ ನಿಯಮಕ್ಕೆ ಒಳಪಟ್ಟಿದ್ದಾರೆ. ಈ ಪರಮಪುರುಷನಿಂದಲೇ ದೇವತೆಗಳೂ, ಸಾಧ್ಯರೂ, ಮನುಷ್ಯರೂ, ಪಶುಪಕ್ಷ್ಯಾದಿಗಳೂ, ತಪಸ್ಸು, ಶ್ರದ್ಧೆ, ಸತ್ಯ, ಬ್ರಹ್ಮಚರ್ಯ ಇವೆಲ್ಲವೂ ಉತ್ಪನ್ನವಾಗಿವೆ.
ದೇವಾನಾಂ ನಾಮಧಾ ಏಕ ಏವ ಎಂದರೆ ಅಕ್ಷರನೂ ಅದ್ವಿತೀಯನೂ ಆದ ಈಶ್ವರನ (ವಿಶ್ವಕರ್ಮನ) ಆಜ್ಞೆಗೆ ಒಳಪಟ್ಟು ಸೂರ್ಯನೂ ಚಂದ್ರನೂ ಅವರವರ ನಿಯತ ಸಂಜ್ಞೆಗಳನ್ನು ಪಡೆದು ತಮ್ಮ ಸ್ಥಿರವಾದ ಚಲನವಲನಗಳನ್ನು ಇಟ್ಟುಕೊಂಡಿದ್ದಾರೆ. ಈ ಆಜ್ಞಾನುಸಾರವೇ ದ್ಯಾವಾಪೃಥಿವಿಗಳೂ ತಮ್ಮ ತಮ್ಮ ನಿಯತ ಸ್ಥಾನಗಳಲ್ಲಿ ಸ್ಥಿರವಾಗಿವೆ. ಇವನ ಅನುಶಾಸನದಿಂದಲೇ ಸಕಲ ಕಾಲಾವಯಗಳೂ ತಮ್ಮ ಗಮನಾಗಮನಗಳನ್ನು ಯಥಾಕ್ರಮವಾಗಿ ನಡೆಸುತ್ತವೆ. ಆದ್ದರಿಂದ ದೇವ-ಮಾನವರ ನಡುವಿನ ಸಕಲ ವ್ಯವಹಾರಗಳಿಗೂ ಈಶ್ವರನೇ ಕಾರಣ.
ಅಲ್ಲದೇ ಪ್ರಕಾಶವನ್ನು ಹೊಂದಿರುವ ಸಕಲ ಜಗತ್ತೂ ಈಶ್ವರನ ಅಂಶವೇ ಆಗಿರುವುದರಿಂದ ಸಕಲ ಇಂದ್ರಾದಿ ದೇವತೆಗಳ ಹೆಸರುಗಳೂ ಇವನ ನಾಮಾಂತರಗಳೇ ಆಗಿವೆ. ಆಯಾ ಕರ್ಮಾನುಸಾರವಾಗಿ ಇವನಿಗೆ ಆಯಾ ಸಂಜ್ಞೆಗಳಿಂದ ವ್ಯವಹಾರವಿರುತ್ತದೆ. ಪಿತಾ, ಜನಿತಾ, ವಿಧಾತಾ- ಇತ್ಯಾದಿ ಅನೇಕ ವಿಶೇಷಣಗಳು ಇವನ ಜಗದುಪಾರಕ ಕ್ರಿಯೆಗಳನ್ನೇ ಸೂಚಿಸುತ್ತವೆ.
ಈಶ್ವರನು ಒಬ್ಬನೇ. ಆದರೆ ಅವನು ವಿಶ್ವರೂಪನು. ಯಾವ ರೂಪವನ್ನು ದರಿಸಿದರೆ ಅದಕ್ಕನುಗುಣವಾದ ಸಂಜ್ಞೆಯಿಂದ ವ್ಯವಹೃತನಾಗುತ್ತಾನೆ. ಇವನ ಪ್ರಭಾವವಿರುವುದರಿಂದಲೇ ಇವನ ರೂಪಾಂತರಗಳಾದ ದೇವತೆಗಳೂ ಸಹ ಅವರವರ ಸ್ವರೂಪಕ್ಕನುಗುಣವಾದ ಸಂಪತ್ತನ್ನು ಲೋಕಕ್ಕೆ ಒದಗಿಸುತ್ತಾರೆ. ಆದರೆ ವೈಯಕ್ತಿಕವಾದ ದೇವತೆಗಳು ಸ್ವತಂತ್ರರಲ್ಲ. ಎಲ್ಲರೂ ಇವನ ನಿಯಮಾನುವರ್ತಿಗಳು. ಇವನ ಸಂಕಲ್ಪವೇ ಮೂಲ. ಉಳಿದವರು ಇದರ ಅನುಯಾಯಿಗಳು.
ಬ್ರಹ್ಮವಿಷಯಕ ಪ್ರಶ್ನೆಗೂ ಒಂದು ಮಿತಿಯಿದೆ. ಕೇವಲ ವರ್ಚಾರೂಪದಿಂದ ತಿಳಿಯುವ ಅಂಶಗಳನ್ನು ಪ್ರಶ್ನೋತ್ತರಗಳ ಮೂಲಕ ತಿಳಿಯಬಹುದು. ಆದರೆ ಯತ ವಾಚೋ ನಿವರ್ತಂತೇ ಅಪ್ರಾಪ್ಯಮನಸಾ ಸಹ ವಾಕ್ಕಿನಿಂದ ಬ್ರಹ್ಮನನ್ನು ನಿರ್ಧರಿಸಲು ಸಾಧ್ಯವಿಲ್ಲ. ಈ ಆತ್ಮನ ಸ್ವರೂಪವು ಮನಸ್ಸಿನಿಂದಲೂ ತಿಳಿಯಲ್ಪಡದು. ಇವೆರಡರ ಎಲ್ಲೆಗೂ ಮೀರಿದುದು. ಕೇವಲ ಧ್ಯಾನರೂಪದಿಂದ ಮಾತ್ರ ತಿಳಿಯಲ್ಪಡುವಂಥದ್ದು. ಈ ಆತ್ಮನು ಉಪದೇಶಗಳಿಂದಾಗಲೀ, ಮೇಧಾಶಕ್ತಿಯಿಂದಾಗಲೀ, ಅಥವಾ ಇದರ ವರ್ಣನೆಯನ್ನು ಕೇಳುವುದರಿಂದಾಗಲೀ ತಿಳಿಯಲ್ಪಡುವುದಿಲ್ಲ. ಯಾರು ಧ್ಯಾನಪೂರ್ವಕವಾಗಿ ಈ ಆತ್ಮನನ್ನು ಅರಸುತ್ತಾರೋ ಅವರಿಗೆ ಮಾತ್ರ ಇದು ತಿಳಿಯುತ್ತದೆ. ಅವನಿಗೆ ತನ್ನ ಸ್ವರೂಪವನ್ನು ತೋರಿಸುತ್ತದೆ ಎಂದು ಪ್ರಶ್ನಾದಿಗಳ ವೈಯರ್ಥ್ಯವನ್ನು ಸೂಚಿಸಿದೆ.
ತ ಆಯಜಂತ ದ್ರವಿಣಂ ಸಮಸ್ಮಾ ಋಷಯಃ ಪೂರ್ವೇ ಜರಿತಾರೋ ನ ಭೂನಾ । ಅಸೂರ್ತೇ ಸೂರ್ತೇ ರಜಸಿ ನಿಷತ್ತೇ ಯ ಭೂತಾನಿ ಸಮಕೃಣ್ವನ್ನಿಮಾನಿ ।। 4 ।।
ಯೇ – ಯಾವ ಮಹರ್ಷಿಗಳು । ಅಸೂರ್ತೇ – ಚೈತನ್ಯರಹಿತವಾದುದೂ । ಸೂರ್ತೇ – ಚತನ್ಯಯುಕ್ತವಾದುದೂ ಆದ । ರಜಸಿ – ಲೋಕದಲ್ಲಿ । ನಿಷತ್ತೇ – ಇರುವಂತಹ । ಇಮಾನಿ ಭೂತಾನಿ – ಈ ಸಕಲ ಪ್ರಾಣಿಗಳನ್ನೂ । ಸಮಕೃಣ್ವನ್ – ಸಂಸ್ಕರಿಸಿದರೋ । ತೇ - ಅಂತಹ । ಪೂರ್ವೇ ಋಷಯಃ – ಪ್ರಾಚೀನ ಋಷಿಗಳು । ಭೂನಾ – ಅಧಿಕವಾದ ಸ್ತೋತ್ರದಿಂದ । ಜರಿತಾರೋ ನ - ಸ್ತುತಿಕರ್ತರು ಪೂಜಿಸುವಂತೆ । ಅಸ್ಮೈ- ವಿಶ್ವಕರ್ಮನನ್ನುದ್ದೇಶಿಸಿ । ದ್ರವಿಣಂ – ಚರುಪುರೋಡಾಶಾದಿಗಳಿಂದ । ಸಮಾಯಜಂತ – ಸರ್ವತ್ರ ಪೂಜಿಸುತ್ತಾರೆ ।
ಯಾವ ಮಹರ್ಷಿಗಳೂ ಚೈತನ್ಯರಹಿತವಾದ ಮತ್ತು ಚೈತನ್ಯಯುಕ್ತವಾದ ಲೋಕದಲ್ಲಿರುವ ಸಕಲ ಪ್ರಾಣಿಗಳನ್ನೂ ಸಂಸ್ಕರಿಸಿದರೋ ಅಂತಹ ಪ್ರಾಚೀನ ಋಷಿಗಳು ಅಧಿಕ ಸ್ತೋತ್ರದಿಂದ ಸ್ತುತಿಕರ್ತರು ಪೂಜಿಸುವಂತೆ ವಿಶ್ವಕರ್ಮನನ್ನು ಉದ್ದೇಶಿಸಿ ಚರು-ಪುರೋಡಾಶಾದಿಗಳಿಂದ ಸರ್ವತ್ರ ಪೂಜಿಸುತ್ತಾರೆ.
ಪರೋ ದಿವಾ ಪರ ಏನಾ ಪೃಥಿವ್ಯಾ ಪರೋ ದೇವೇಭಿರಸುರೈರ್ಯದಸ್ತಿ । ಕಂ ಸ್ವಿದ್ಗರ್ಭಂ ಪ್ರಥಮಂ ದಧ್ರ ಆಪೋ ಯತ್ರ ದೇವಾಃ ಸಮಪಶ್ಯಂತ ವಿಶ್ವೇ ।। 5 ।।
ದಿವಾ ಪರಃ – ದ್ಯುಲೋಕಕ್ಕಿಂತಲೂ ಅಧಿಕವೂ । ಏನಾ ಪೃಥಿವ್ಯಾಃ ಪರಃ – ಈ ಪೃಥ್ವಿಗಿಂತಲೂ ಅಧಿಕವೂ । ದೇವೇಭಿಃ – ದೇವತೆಗಳಿಗಿಂತಲೂ ಅಧಿಕವೂ । ಅಸುರೈಃ – ಅಸುರರಿಗಿಂತಲೂ ಅಧಿಕವೂ ಆದ । ಯತ್ಗರ್ಭಂ ಅಸ್ತಿ – ಯಾವ ರಹಸ್ಯ ತತ್ತ್ವವಿದೆಯೋ । ಯತ್ – ಯಾವುದನ್ನು । ಆಪಃ – ಉದಕಗಳು । ಪ್ರಥಮಂ – ಎಲ್ಲಕ್ಕಿಂತಲೂ ಮೊದಲು । ದಧ್ರೇ – ಧರಿಸಿದವೋ । ಯತ್ರ – ಯಾವ ಗರ್ಭತತ್ತ್ವದಲ್ಲಿ । ವಿಶ್ವೇ ದೇವಾಃ – ಇಂದ್ರಾದಿ ಸಕಲ ದೇವತೆಗಳೂ । ಸಮಪಶ್ಯಂತ – ಪರಸ್ಪರ ದರ್ಶನವನ್ನು ಹೊಂದಿದರೋ (ಆ ರಹಸ್ಯತತ್ತ್ವವು) । ಕ್ವಂ ಸ್ವಿತ್ – ಯಾವುದು? ಅದರ ಸ್ವರೂಪವೇನು? ।
ದ್ಯುಲೋಕಕ್ಕಿಂತಲೂ ಅಧಿಕವೂ, ಈ ಪೃಥ್ವಿಗಿಂತಲೂ ಅಧಿಕವೂ, ದೇವತೆಗಳಿಗಿಂತಲೂ ಅಧಿಕವೂ, ಅಸುರರಿಗಿಂತಲೂ ಅಧಿಕವೂ ಆದ ಗರ್ಭರೂಪವಾದ ಯಾವ ರಹಸ್ಯ ತತ್ತ್ವವಿದೆಯೋ, ಯಾವುದನ್ನು ಉದಕಗಳು ಎಲ್ಲಕ್ಕಿಂತಲೂ ಮೊದಲು ಧರಿಸಿದವೋ, ಯಾವ ಗರ್ಭತತ್ತ್ವದಲ್ಲಿ ಇಂದ್ರಾದಿ ಸಕಲ ದೇವತೆಗಳೂ ಪರಸ್ಪರ ದರ್ಶನವನ್ನು ಹೊಂದಿದರೋ ಆ ರಹಸ್ಯತತ್ತ್ವವು ಯಾವುದು? ಅದರ ಸ್ವರೂಪವೇನು?
ಜಗತ್ತಿಗೆಲ್ಲ ಗರ್ಭರೂಪನಾದ ವಿಶ್ವಕರ್ಮನ ಅನಂತವಾದ ರೂಪವನ್ನೂ ಶಕ್ತಿಯನ್ನೂ ಈ ಋಕ್ಕಿನಲ್ಲಿ ವರ್ಣಿಸಿದೆ. ಇಲ್ಲಿ ಮೂರು ಅಂಶಗಳು ನಿರ್ದಿಷ್ಟವಾಗಿವೆ: (1) ವಿಶ್ವಕರ್ಮರೂಪನಾದ ಈಶ್ವರನು ದ್ಯಾವಾಪೃಥಿವ್ಯಾದಿಗಳನ್ನೂ ಮೀರಿದ ಸ್ವರೂಪವುಳ್ಳವನು (2) ಇವನು ಸಕಲ ಜಗತ್ತಿಗೂ ಗರ್ಭರೂಪನಾದುದರಿಂದ ಇವನಲ್ಲಿ ಎಲ್ಲವೂ ಅಡಗಿದೆ. ಆದ್ದರಿಂದ ಸಕಲ ದೇವತೆಗಳೂ ಇವನಲ್ಲಿಯೇ ಅಂತರ್ಗತರಾಗಿದ್ದಾರೆ (3) ಜಗತ್ತಿಗೆ ಗರ್ಭರೂಪನಾದ ಇವನನ್ನು ಪ್ರಥಮತಃ ಉದಕಗಳು ಧರಿಸಿದವು. ಸಲಿಲವೇ ಈ ವಿಶ್ವಗರ್ಭಕ್ಕೆ ಪ್ರಥಮಧಾರಕವಾದ ಆಶ್ರಯವು ಎಂಬ ವಿಷಯವೂ ಈ ಋಕ್ಕು ತಿಳಿಸುತ್ತದೆ.
ತಮಿದ್ಗರ್ಭಂ ಪ್ರಥಮಂ ದಧ್ರ ಆಪೋ ಯತ್ರ ದೇವಾಃ ಸಮಗಚ್ಛಂತ ವಿಶ್ವೇ । ಅಜಸ್ಯ ನಾಭಾವಧ್ಯೇಕಮರ್ಪಿತಂ ಯಸ್ಮಿನ್ವಿಶ್ವಾನಿ ಭುವನಾನಿ ತಸ್ಥುಃ ।। 6 ।।
ಯತ್ರ – ಯಾವ ಗರ್ಭದಲ್ಲಿ । ವಿಶ್ವೇ ದೇವಾಃ – ಸಕಲ ದೇವತೆಗಳೂ । ಸಮಗಚ್ಛಂತ – ಒಟ್ಟಿಗೇ ಸೇರಿಕೊಂಡಿರುವರೋ । ತಮಿತ್ - ಅಂತಹ । ಗರ್ಭಂ – ವಿಶ್ವಕರ್ಮರೂಪವಾದ ಗರ್ಭವನ್ನು । ಆಪಃ - ಉದಕಗಳು । ಪ್ರಥಮಂ – ಸೃಷ್ಟಿಯ ಪೂರ್ವದಲ್ಲಿ । ದಧ್ರೇ – ಧರಿಸಿದವು । ಯಸ್ಮಿನ್ – ಯಾವ ಈ ಸುವರ್ಣಾಂಡದಲ್ಲಿ । ವಿಶ್ವಾನಿ ಭುವನಾನಿ – ಸಕಲ ಭೂತಗಳೂ । ತಸ್ಥುಃ – ಸ್ಥಾಪಿತವಾಗಿವೆಯೋ ಅಂತಹ । ಏಕಂ – ಅದ್ವಿತೀಯವಾದ ಈ ಬ್ರಹ್ಮಾಂಡವು । ಅಜಸ್ಯ ನಾಭೌ – ಜನ್ಮರಹಿತವಾದ ಮೂಲತತ್ತ್ವದ ನಾಭಿಯಲ್ಲಿ । ಅರ್ಪಿತಂ – ಅರ್ಪಿತವಾಗಿದೆ (ಸ್ಥಾಪಿತವಾಗಿದೆ) ।
ಯಾವ ಗರ್ಭದಲ್ಲಿ ಸಕಲ ದೇವತೆಗಳೂ ಒಟ್ಟಿಗೇ ಸೇರಿಕೊಂಡಿರುವರೋ ಅಂತಹ ವಿಶ್ವಕರ್ಮರೂಪವಾದ ಗರ್ಭವನ್ನು ಉದಕಗಳು ಸೃಷ್ಟಿಯ ಪೂರ್ವದಲ್ಲಿ ಧರಿಸಿದವು. ಯಾವ ಸುವರ್ಣಾಂಡದಲ್ಲಿ ಸಕಲ ಭೂತಗಳೂ ಸ್ಥಾಪಿತವಾಗಿವೆಯೋ ಅಂತಹ ಅದ್ವಿತೀಯವಾದ ಈ ಬ್ರಹ್ಮಾಂಡವು ಜನ್ಮರಹಿತವಾದ ಮೂಲತತ್ತ್ವದ ನಾಭಿಯಲ್ಲಿ ಸ್ಥಾಪಿತವಾಗಿದೆ. ಅಥವಾ ಸಕಲ ಜಗದ್ಬಂಧಕವಾದ ಉದಕದಲ್ಲಿ ಅದ್ವಿತೀಯವಾದ ಈ ಬ್ರಹ್ಮಾಂಡವು ಸ್ಥಾಪಿತವಾಗಿದೆ.
ಸೃಷ್ಟಿಯ ಪೂರ್ವದಲ್ಲಿ ಸಲಿಲದಲ್ಲಿ ಬ್ರಹ್ಮಾಂಡವನ್ನು ತನ್ನಲ್ಲೇ ಅಡಗಿಸಿಕೊಂಡಿದ್ದ ಹಿರಣ್ಯಗರ್ಭನು ಸ್ಥಾಪಿತನಾಗಿದ್ದನು ಎಂಬ ಹಿಂದಿನ ಋಕ್ಕಿನ ವಿಷಯವನ್ನೇ ಇಲ್ಲಿ ಇನ್ನೂ ವಿವರಿಸಿದೆ. ಇಲ್ಲಿ ಅಜಸ್ಯ ನಾಭೌ ಎಂಬ ಪದಗಳು ಮುಖ್ಯತಾತ್ಪರ್ಯವನ್ನು ತಿಳಿಸುತ್ತವೆ.
ಅಜ ಶಬ್ದಕ್ಕೆ ಜನ್ಮರಹಿತವಾದದ್ದು ಎಂದರ್ಥ. ಭುವನ ಶಬ್ದವು ಉತ್ಪನ್ನವಾದ ಸಕಲ ಭೂತಗಳನ್ನೂ ನಿರ್ದೇಶಿಸುತ್ತದೆ. ಈ ಪರಬ್ರಹ್ಮನಿಂದ ಸೃಷ್ಟವಾದ ಸಕಲ ಭೂತಗಳೂ ಈ ಜನ್ಮರಹಿತನಾದ ಹಿರಣ್ಯಗರ್ಭನ ನಾಭಿಯಲ್ಲಿ ಅಂತರ್ಗತವಾಗಿವೆ ಎಂದು ಅರ್ಥ. ಸೃಷ್ಟಿಯ ಪೂರ್ವಭಾವಿಯಾಗಿ ಸೂಕ್ಷ್ಮಾವಸ್ಥೆಯಲ್ಲಿಯೂ ಸೃಷ್ಟಿಯ ನಂತರ ಸ್ಥೂಲರೂಪದಲ್ಲಿಯೂ ಜನ್ಮರಹಿತನಾದ ಹಿರಣ್ಯಗರ್ಭದಲ್ಲಿ ಅಡಕವಾಗಿರುತ್ತದೆ.
ಹೀಗೆ ಸಕಲ ವಿಶ್ವಗಳೂ ಹಿರಣ್ಯಗರ್ಭರೂಪವಾದ ಅಂಡದಲ್ಲಿ ಅಂತರ್ಗತವಾಗಿದ್ದು, ಇವುಗಳನ್ನೆಲ್ಲ ಒಳಗೊಂಡ ಅಂಡವು ಉದಕದ ಆಶ್ರಯವನ್ನು ಹೊಂದಿ ತೇಲುತ್ತಿದೆ ಎನ್ನುವ ವರ್ಣನೆಯಲ್ಲಿ ಈಶ್ವರನು ವಿಶ್ವವ್ಯಾಪಕನು ಮತ್ತು ವಿಶ್ವವನ್ನೂ ಮೀರಿರುವನು ಎಂಬ ತಾತ್ಪರ್ಯವಿದೆ. ಇವನಲ್ಲಿ ಐಕ್ಯವನ್ನು ಹೊಂದಿದಾಗ ಮಾತ್ರ ಜಗತ್ತಿನ ಭೂತಗಳು ವೈಯಕ್ತಿಕ ಸ್ವರೂಪವನ್ನು ಹೊಂದಿರುವುದಿಲ್ಲ. ಜಗದ್ವ್ಯವಹಾರಕಾಲದಲ್ಲಿ ಮಾತ್ರ ವೈಯಕ್ತಿಕವಾದ ಸ್ವರೂಪವನ್ನು ಹೊಂದಿರುತ್ತವೆ. ಸೃಷ್ಟಿಯ ಪೂರ್ವದಲ್ಲಿ ಈ ವೈಯಕ್ತಿಕ ಸ್ವರೂಪವನ್ನು ಮರೆತು ಎಲ್ಲವೂ ಈಶ್ವರನ ನಾಭಿಯಲ್ಲಿಯೇ ಅಂತರ್ಗತವಾಗಿ ಎಲ್ಲವೂ ಈಶ್ವರರೂಪವನ್ನೇ ಹೊಂದುತ್ತವೆ.
ನ ತಂ ವಿದಾಥ ಯ ಇಮಾ ಜಜಾನಾನ್ಯದ್ದ್ಯುಷ್ಮಾಕಮಂತರಂ ಬಭೂವ । ನೀಹಾರೇಣ ಪ್ರಾವೃತಾ ಜಲ್ಪ್ಯಾ ಚಾಸುತೃಪ ಉಕ್ಥಶಾಸಶ್ಚರಂತಿ ।। 7 ।।
ಯಃ – ಯಾವ ವಿಶ್ವಕರ್ಮನು । ಇಮಾ – ಈ ಭೂತಗಳನ್ನು । ಜಜಾನ – ಉತ್ಪನ್ನಮಾಡಿದನೋ । ತಂ – ಆ ವಿಶ್ವಕರ್ಮನನ್ನು । ನ ವಿದಾಥ – ನೀವು ಅರಿಯರಾರಿರಿ । ಯುಷ್ಮಾಕಂ – ಪ್ರತ್ಯೇಕತೆಯನ್ನು ಹೊಂದಿರುವ ಅನಂತ ಜೀವರುಗಳಿಗಿಂತಲೂ । ಅಂತರಂ - ಬೇರೆಯಾದ । ಅನ್ಯತ್ - ಪರತತ್ತ್ವವು । ಬಭೂವ – ಇರುತ್ತದೆ (ಈ ಪರತತ್ತ್ವಜ್ಞಾನವಿಲ್ಲದೇ) । ನೀಹಾರೇಣ – ಮಂಜಿನ ಗಡ್ಡೆಯಂತಿರುವ ಅಜ್ಞಾನದಿಂದ । ಪ್ರಾವೃತಾಃ – ಮುಚ್ಚಲ್ಪಟ್ಟಿರುವವರೂ । ಜಲ್ಪ್ಯಾ – ಅಭಿಮಾನ ಪೂರ್ವಕವಾಗಿ ವ್ಯವಹಾರಗಳಲ್ಲಿ ನಿರತರಾಗಿರುವವರೂ । ಅಸುತೃಪಃ – ಕೇವಲ ಭೋಗವನ್ನೇ ಪ್ರಧಾನವಾಗಿಟ್ಟುಕೊಂಡಿರುವವರೂ । ಉಕ್ಥಶಾಸಃ – ಕಾಮ್ಯ ಕರ್ಮಕ್ಕೆ ಪ್ರಧಾನವಾದ ಶಾಸ್ತ್ರಾದಿ ಮಂತ್ರಗಳನ್ನೇ ಪಠಿಸುತ್ತಿರುವ ಭೋಗಾಸಕ್ತರೂ ಆದ ಅಜ್ಞಾನಿಗಳು । ಚರಂತಿ – ಅಧಿಕವಾಗಿರುತ್ತಾರೆ ।
ಯಾವ ವಿಶ್ವಕರ್ಮನು ಈ ಭೂತಗಳನ್ನು ಉತ್ಪತ್ತಿಮಾಡಿದನೋ ಆ ವಿಶ್ವಕರ್ಮನನ್ನು ನೀವು ಅರಿಯಲಾರಿರಿ. ಪ್ರತ್ಯೇಕತೆಯನ್ನು ಹೊಂದಿರುವ ಅನಂತ ಜೀವರುಗಳಿಗಿಂತ ಬೇರೆಯಾದ ಪರತತ್ತ್ವವಿದೆ. ಈ ಪರತತ್ತ್ವದ ಜ್ಞಾನವಿಲ್ಲದೇ ಮಂಜಿನ ಗಡ್ಡೆಯಂತಿರುವ ಅಜ್ಞಾನದಿಂದ ಮುಚ್ಚಲ್ಪಟ್ಟಿರುವವರೂ, ಅಭಿಮಾನಪೂರ್ವಕವಾದ ವ್ಯವಹಾರಗಳಲ್ಲಿ ನಿರತರಾಗಿರುವವರೂ, ಕೇವಲ ಭೋಗವನ್ನೇ ಪ್ರಧಾನವಾಗಿಟ್ಟುಕೊಂಡಿರುವವರೂ, ಕಾಮ್ಯಕರ್ಮಕ್ಕೆ ಪ್ರಧಾನವಾದ ಶಾಸ್ತ್ರಾದಿ ಮಂತ್ರಗಳನ್ನೇ ಪಠಿಸುತ್ತಲಿರುವ ಭೋಗಾಸಕ್ತರೂ ಆದ ಅಜ್ಞಾನಿಗಳೇ ಅಧಿಕರಾಗಿರುತ್ತಾರೆ.
ವಿಶ್ವಕರ್ಮರೂಪನಾದ ಈಶ್ವರನಿಂದ ಎಲ್ಲ ಭೂತಗಳೂ ಉತ್ಪನ್ನವಾಗುತ್ತವೆ. ಆದರೆ ಅವನಿಂದ ಉತ್ಪನ್ನವಾದ ಯಾವ ಪ್ರಾಣಿಯೂ ಅವನ ಮಹಿಮೆಯನ್ನು ತಿಳಿಯಲು ಶಕ್ತವಾಗುವುದಿಲ್ಲ. ಇದರೆ ಎರಡು ಕಾರಣಗಳು: (1) ಈಶ್ವರನು ವಿಶ್ವಕ್ಕಿಂತಲೂ ಅತೀತನು. ಇಂದ್ರಿಯಾದಿ ಉಪಕರಣಗಳಿಗೆ ಗೋಚರನಾಗತಕ್ಕವನಲ್ಲ. ತಪೋಮಹಿಮರಾದ ಮಹರ್ಷಿಗಳೂ ಈಶ್ವರನ ಕೇವಲ ಒಂದೊಂದು ಅಂಶವನ್ನು ಸಾಕ್ಷಾತ್ಕರಿಸಬಲ್ಲರೇ ಹೊರತು ಅವರಿಗೆ ಪೂರ್ಣನಾದ ಈಶ್ವರನ ಸಾಕ್ಷಾತ್ಕಾರವಾಗುವುದಿಲ್ಲ. ಜಗತ್ತಿಗೆಲ್ಲ ಕಾರಣನಾದ ಈಶ್ವರನು ಎಲ್ಲಾ ವಿಶ್ವಕ್ಕೂ ಸಂಬಂಧವನ್ನುಂಟುಮಾಡಿ ವೈವಿಧ್ಯದಲ್ಲಿ ಏಕತ್ರವನ್ನು ಪ್ರತಿಪಾದಿಸುವ ಸೂತ್ರಾತ್ಮಕನಾಗಿದ್ದಾನೆ. ಇವನು ಸರ್ವಾಂತರ್ಯಾಮಿ. ಸಕಲವನ್ನೂ ತಿಳಿದವನು. ಸಕಲ ವಸ್ತುಗಳಲ್ಲಿಯೂ ಇವನು ವ್ಯಾಪಿಸಿದ್ದರೂ ಇವನ ಮಹಿಮೆಯು ಯಾರಿಗೂ ತಿಳಿಯದು. (2) ಉತ್ಪನ್ನವಾದ ಎಲ್ಲ ಪ್ರಾಣಿಗಳೂ ತಮ್ಮ ಉತ್ಪತ್ತಿಯು ಈಶ್ವರನಿಂದ ಎಂಬ ಜ್ಞಾನವಿಲ್ಲದೇ ಕೇವಲ ಸ್ವಾರ್ಥಾಹಂಕಾರಗಳಿಂದಲೂ ಭೋಗಲಾಲಸೆಗಳಿಂದಲೂ ಕೂಡಿ ಅಜ್ಞಾನಪೂರಿತರಾಗುವುದರಿಂದ ಈಶ್ವರನ ಸಾಕ್ಷಾತ್ಕಾರಕ್ಕೆ ಯೋಗ್ಯತೆಯನ್ನು ಹೊಂದಿರುವುದಿಲ್ಲ. ಈಶ್ವನು ಗೋಚರಾತೀತನಲ್ಲ. ಸರ್ವಭೂತಗಳೂ ಅಜ್ಞಾನದಿಂದ ಆವೃತವಾಗಿ ಈಶ್ವರನನ್ನು ಸಾಕ್ಷಾತ್ಕರಿಸುವ ಯೋಗ್ಯತೆಯನ್ನು ಹೊಂದಿರುವುದಿಲ್ಲ ಎನ್ನುವುದೂ ಒಂದು ಕಾರಣವಾಗಿರುತ್ತದೆ. ಮಂಜಿನಂತಿರುವ ಅಜ್ಞಾನದಿಂದ ಆವೃತರಾಗಿ ತಾವು ಮಾತ್ರವೇ ಸರ್ವಜ್ಞರೆಂದು ಅಭಿಮಾನ ಹೊಂದಿರುತ್ತಾರೆ. ಅಸುತೃಪಃ, ಉಕ್ಥಶಾಸಃ ಚರಂತಿ ಎಂಬ ವಾಕ್ಯವು ಕರ್ಮವು ಕೇವಲ ಭೋಗಸಾಧನವೇ ವಿನಾ ಜ್ಞಾನಸಾಧನವಾಗುವುದಿಲ್ಲ ಎಂಬ ತಾತ್ಪರ್ಯವನ್ನೇ ಕೊಡುತ್ತದೆ.