ವಾಯು ಪುರಾಣ
ಪ್ರಪದ್ಯೇ ದೇವಮೀಶಾನಂ ಶಾಶ್ವತಮ್ ಧ್ರುವಮವ್ಯಯಮ್ । ಮಹಾದೇವಂ ಮಹಾತ್ಮಾನಂ ಸರ್ವಸ್ಯ ಜಗತಃ ಪತಿಮ್ ।।
[ಶ್ರೀಮದ್ವಾಯುಮಹಾಪುರಾಣಂ (ಕನ್ನಡ ಅನುವಾದಸಹಿತ, 6 ಭಾಗಗಳಲ್ಲಿ), ಅನುವಾದಕ: ಆರ್. ಸೇತುಮಾಧವಾಚಾರ್, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 38, ಮೈಸೂರು, ಶ್ರೀಶಾರದಾ ಎಲೆಕ್ಟ್ರಿಕ್ ಪ್ರೆಸ್, 1947]
ಮತ್ಸ್ಯಪುರಾಣದ ಪ್ರಕಾರ ಶ್ವೇತಕಲ್ಪದ ಪ್ರಸಂಗದಿಂದ ವಾಯುದೇವನು ಧರ್ಮಗಳನ್ನು ಹೇಳಿದುದನ್ನು ಒಳಗೊಂಡ ಪುರಾಣವು ವಾಯುಪುರಾಣವೆನಿಸುತ್ತದೆ. ಅದರಲ್ಲಿ ರುದ್ರಮಾಹಾತ್ಮ್ಯವು ವರ್ಣಿತವಾಗಿದೆ. ಅದರಲ್ಲಿ 24,000 ಶ್ಲೋಕಗಳಿವೆ.[1] ವಾಯುಪುರಾಣದ ಕುರಿತಾದ ಇದೇ ವರ್ಣನೆಯು ನಾರದೀಯಪುರಾಣದಲ್ಲಿಯೂ ಬಂದಿದೆ.[2]
ಈ ಪುರಾಣವನ್ನು ವಾಯುದೇವನು ಶಾಂಶಪಾಯನನಿಗೆ ಪೂರ್ವದಲ್ಲಿ ಹೇಳಿದ್ದುದನ್ನೇ ಸೂತನು ಶೌನಕಾದಿ ಮಹರ್ಷಿಗಳಿಗೆ ಹೇಳಿದನು. ಈ ಪುರಾಣದಲ್ಲಿ ಪ್ರಕ್ರಿಯಾಪಾದ, ಉಪೋದ್ಘಾತಪಾದ, ಅನುಷಂಗಪಾದ ಮತ್ತು ಉಪಸಂಹಾರಪಾದಗಳೆಂಬ ನಾಲ್ಕು ಪಾದಗಳೂ, ಪೂರ್ವ ಮತ್ತು ಉತ್ತರ ಖಂಡಗಳೆಂಬ ಎರಡು ಖಂಡಗಳೂ ಇವೆ. ಮೊದಲನೆಯ ಪಾದದಲ್ಲಿ ಜ್ಞಾನ, ಸೃಷ್ಟಿ, ಸ್ಥಿತಿ, ಲಯ ಇವುಗಳು ವಿಸ್ತಾರವಾಗಿ ವರ್ಣಿತಗೊಂಡಿವೆ. ಉಳಿದ ಪಾದಗಳಲ್ಲಿ ನಾನಾವಿಧದ ಶ್ರೌತ-ಸ್ಮಾರ್ತ ಆಚಾರಗಳೂ, ತೀರ್ಥಕ್ಷೇತ್ರಮಹಾತ್ಮೆಯಗಳೂ, ಗಯಾಶ್ರಾದ್ಧವಿಧಾನ, ಅದರ ಫಲಗಳು, ಭುವನಾಂಡಕೋಶ ಪರಿಮಾಣಗಳು, ಸರಿತ್ಸಮುದ್ರಶೈಲಾದಿಗಳ ವಿಭಾಗಗಳೂ ವರ್ಣಿತವಾಗಿವೆ. ಪೂರ್ವಖಂಡದಲ್ಲಿ 61 ಅಧ್ಯಾಯಗಳೂ ಉತ್ತರಖಂಡದಲ್ಲಿ 50 ಅಧ್ಯಾಗಳೂ ಇವೆ. ಈ ಪುರಾಣದಲ್ಲಿರುವ ಶ್ಲೋಕಸಂಖ್ಯೆ 12,000. ವಾಯುಪುರಾಣದಲ್ಲಿ ಬರುವ ಮುಖ್ಯವಿಷಯಗಳು ಈ ಕೆಳಗಿನಂತಿವೆ:
ಪೂರ್ವಖಂಡ (61 ಅಧ್ಯಾಯಗಳು): ಸೃಷ್ಟಿಪ್ರಕರಣ, ಪಾಶುಪತಯೋಗನಿರೂಪಣೆ, ಶೌಚಾಚಾರಲಕ್ಷಣಗಳು, ಓಂಕಾರದ ಲಕ್ಷಣ, ಕಲ್ಪಗಳ ವಿವರ ಮತ್ತು ಬ್ರಹ್ಮನ ಕಾಲಪರಿಮಾಣ, ಮಧು-ಕೈಟಭರ ಸಂಹಾರ, ಸ್ವರವರ್ಣೋತ್ಪತ್ತಿ, ಬ್ರಹ್ಮಸ್ವರೂಪ, ರುದ್ರನ ಅಷ್ಟಮೂರ್ತಿಗಳು, ಅಗ್ನಿವಂಶ, ದಕ್ಷಯಜ್ಞ, ಚತುರ್ಯುಗಗಳು, ಮನ್ವಂತರಗಳು, ಭುವನಕೋಶ, ಜ್ಯೋತಿರ್ಮಂಡಲವರ್ಣನೆ, ಲಿಂಗೋತ್ಪತ್ತಿನಿರೂಪಣೆ. ಮತ್ತು ಪಿತೃವರ್ಣನೆ.
ಉತ್ತರಖಂಡ (50 ಅಧ್ಯಾಯಗಳು): ಪೃಥ್ವಿಯ ಕ್ಷೀರದೋಹನ, ಪೃಥುಚರಿತ್ರೆ, ವೈವಸ್ವತಮನುವಿನ ವಂಶವರ್ಣನೆ, ದಕ್ಷಪ್ರಜಾಪತಿಯ ವಂಶವರ್ಣನೆ, ಕಶ್ಯಪನ ವಂಶವರ್ಣನೆ, ಶ್ರಾದ್ಧಪ್ರಕರಣ, ವರುಣವಂಶವರ್ಣನೆ, ಗೀತಾಲಂಕಾರನಿರೂಪಣೆ, ಸೋಮಜನ್ಮವಿವರಣೆ, ಚಂದ್ರವಂಶವರ್ಣನೆ, ವೃಷ್ಣಿವಂಶವರ್ಣನೆ, ವಿಷ್ಣುಮಹಾತ್ಮೆವರ್ಣನೆ, ಅನುಷಂಗಪಾದವರ್ಣನೆ, ಸ್ವರ್ಗಾದಿ ವರ್ಣನೆ, ವ್ಯಾಸಸಂಶಯಪರಿಹಾರ, ಗಯಾಮಹಿಮೆ.
[1] ಶ್ವೇತಕಲ್ಪಪ್ರಸಂಗೇನ ಧರ್ಮಾನ್ವಾಯುರಿಹಾಬ್ರವೀತ್ । ಯತ್ರ ತದ್ವಾಯವೀಯಂ ಸ್ಯಾದ್ರುದ್ರಮಾಹಾತ್ಮ್ಯಸಂಯುತಮ್ । ಚತುರ್ವಿಂಶಸಹಸ್ರಾಣಿ ಪುರಾಣಂ ತದಿಹೋಚ್ಯತೇ ।। 18 ।। (ಮತ್ಸ್ಯಪುರಾಣ, ಅಧ್ಯಾಯ 53)
[2] ಶೃಣು ವಿಪ್ರ ಪ್ರವಕ್ಷ್ಯಾಮಿ ಪುರಾಣಂ ವಾಯವೀಯಕಮ್ । ಯಸ್ಮಿನ್ ಶ್ರುತೇ ಲಭೇದ್ಧಾಮ ರುದ್ರಸ್ಯ ಪರಮಾತ್ಮನಃ ।। 1 ।। ಚತುರ್ವಿಂಶತಿಸಾಹಸ್ರಂ ತತ್ಪುರಾಣಂ ಪ್ರಕೀರ್ತಿತಮ್ । ಶ್ವೇತಕಲ್ಪಪ್ರಸಂಗೇನ ಧರ್ಮಾನತ್ರಾಹ ಮಾರುತಃ ।। 2 ।। (ನಾರದೀಯಪುರಾಣ, ಅಧ್ಯಾಯ 95)