ಬ್ರಹ್ಮಾಂಡ ಪುರಾಣ
ನಮೋ ನಮಃ ಕ್ಷಯೇ ಸೃಷ್ಟೌ ಸ್ಥಿತೌ ಸತ್ತ್ವಮಯಾಯ ವಾ । ನಮೋ ರಜಸ್ತಮಃಸತ್ತ್ವತ್ರಿರೂಪಾಯ ಸ್ವಯಂಭುವೇ ।।
[ಬ್ರಹ್ಮಾಂಡ ಪುರಾಣಂ (ಕನ್ನಡ ಅನುವಾದಸಹಿತ, 5 ಭಾಗಗಳಲ್ಲಿ), ಅನುವಾದಕ ಪಾಟಣಕರ ಚಂದ್ರಶೇಖರಭಟ್ಟ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 17, ಮೈಸೂರು, ಮೈಸೂರು ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಹೌಸ್, 1945]
ಮತ್ಸ್ಯಪುರಾಣದ 53ನೇ ಅಧ್ಯಾಯದ 55-56ನೇ ಶ್ಲೋಕಗಳ ಪ್ರಕಾರ ಬ್ರಹ್ಮಾ ಬ್ರಹ್ಮಾಂಡಮಾಹಾತ್ಮ್ಯಮಧಿಕೃತ್ಯಾಬ್ರವೀತ್ಪುನಃ । ತಚ್ಚ ದ್ವಾದಶಸಾಹಸ್ರಂ ಬ್ರಹ್ಮಾಂಡಂ ದ್ವಿಶತಾಧಿಕಮ್ ।। ಭವಿಷ್ಯಾಣಾಂ ಚ ಕಲ್ಪಾನಾಂ ಶ್ರೂಯತೇ ಯತ್ರ ವಿಸ್ತರಃ । ತದ್ಬ್ರಹ್ಮಾಂಡಪುರಾಣಂ ಚ ಬ್ರಹ್ಮಣಾ ಸಮುದಾಹೃತಮ್ ।। ಅರ್ಥಾತ್: ಬ್ರಹ್ಮನು ಬ್ರಹ್ಮಾಂಡದ ಮಾಹಾತ್ಮ್ಯವನ್ನು ತಿಳಿಸುವ ಉದ್ದೇಶದಿಂದ ಹೇಳಿದ ಪುರಾಣವು ಬ್ರಹ್ಮಾಂಡಪುರಾಣ ಎನಿಸುತ್ತದೆ. 12,200 ಶ್ಲೋಕಗಳಿಂದ ಕೂಡಿದ ಈ ಪುರಾಣವು ಮುಂದೆ ಬರುವ ಕಲ್ಪಗಳ ವಿಚಾರವನ್ನು ಹೇಳುತ್ತದೆ.
ಬ್ರಹ್ಮಾಂಡಪುರಾಣದಲ್ಲಿ ಪ್ರಕ್ರಿಯಾಪಾದ, ಅನುಷಂಗಪಾದ, ಉಪೋದ್ಘಾತಪಾದ ಮತ್ತು ಉಪಸಂಹಾರಪಾದಗಳೆಂಬ ನಾಲ್ಕು ಪಾದಗಳಿವೆ. ಈ ಪುರಾಣದಲ್ಲಿ ಒಟ್ಟು 113 ಅಧ್ಯಾಯಗಳಿವೆ ಮತ್ತು 9,789 ಶ್ಲೋಕಗಳಿವೆ. ಈ ಆವೃತ್ತಿಯ ಪ್ರಕಾರ ಬ್ರಹ್ಮಾಂಡಪುರಾಣದಲ್ಲಿ ಈ ಕೆಳಗಿನ ಮುಖ್ಯ ಅಂಶಗಳಿವೆ: ನೈಮಿಷಾರಣ್ಯದ ಮಹಿಮೆ, ಪುರೂರವನ ವಧೆ, ಹಿರಣ್ಯಗರ್ಭನ ಉತ್ಪತ್ತಿ, ಕಲ್ಪಪ್ರಾದುರ್ಭಾವ, ವರಾಹಾವತಾರ, ಚತುರ್ಯುಗಪರಿಮಾಣ, ಯುಗಕರ್ಮವ್ಯವಸ್ಥೆ, ಭೂತಸೃಷ್ಟಿ, ರುದ್ರ-ಭೃಗುಗಳ ಸೃಷ್ಟಿ, ಅಗ್ನಿಸೃಷ್ಟಿ, ಪ್ರಿಯವ್ರತವಂಶಚರಿತ್ರೆ, ಜಂಬೂದ್ವೀಪ ಮತ್ತು ವರ್ಷಗಳ ವರ್ಣನೆ, ಇತರ ದ್ವೀಪಗಳು, ಅತಲಾದಿ ಪಾತಾಳಲೋಕಗಳು, ಸೂರ್ಯಚಂದ್ರರ ಗತಿ, ಧ್ರುವಮಂಡಲ, ತೇಜೋಮಂಡಲ ಮತ್ತು ವಾಯುಮಂಡಲ ಮೇಘಮಂಡಲಗಳ ಪ್ರತಿಷ್ಠೆ, ನವಗ್ರಹವರ್ಣನೆ, ಅಮೃತಮಥನ, ಲಿಂಗೋತ್ಪತ್ತಿ, ಭಸ್ಮಮಹಿಮೆ, ಚತುರ್ಯುಗವರ್ಣನೆ, ಯುಗಧರ್ಮಾದಿವರ್ಣನೆ, ಪೃಥುರಾಜಚರಿತ್ರೆ, ಭೂಮಿದೋಹನ, ವೈಸ್ವಸ್ವತಮನು ವಂಶಾವಳಿ, ಕಶ್ಯಪಾದಿ ಸಪ್ತರ್ಷಿಗಳ ಉತ್ಪತ್ತಿ, ಭೃಗು-ಅಂಗಿರ ಮುನಿಗಳ ವಂಶವರ್ಣನೆ, ನಾರದನ ಉತ್ಪತ್ತಿ, ದಕ್ಷನಿಂದ ಶಾಪಪ್ರಾಪ್ತಿ. ಹಿರಣ್ಯಕಶಿಪು ಸಂಹಾರ, ದೈತ್ಯ-ದಾನವರ ವಂಶಾನುಕೀರ್ತನೆ, ಗಂಧರ್ವ-ಅಪ್ಸರೆಯರ ವಂಶಾನುಕೀರ್ತನೆ, ಅತ್ರಿ-ವಸಿಷ್ಠರ ವಂಶವರ್ಣನೆ, ಶ್ರಾದ್ಧನಿರೂಪಣೆ, ವಿಶ್ವೇದೇವರ ಉತ್ಪತ್ತಿ ಮತ್ತು ಶ್ರಾದ್ಧದಲ್ಲಿ ಅವರ ಅರ್ಚನೆ, ಭಾರ್ಗವರಾಮನ ಚರಿತ್ರೆ (21-47, ಸಗರನ ಚರಿತ್ರೆ, ಬಲರಾಮವಿವಹ, ಧುಂಧುವಧೆ, ತ್ರಿಶಂಕುಚರಿತ್ರೆ, ಬುಧನ ಜನ್ಮ, ಊರ್ವಶೀ-ಪುರೂರವರಕಥೆ, ವಿಶ್ವಾಮಿತ್ರವಂಶವರ್ಣನೆ, ರಜಿವಂಶವರ್ಣನೆ, ಯಯಾತಿ ಚರಿತೆ, ಕ್ರೋಷ್ಟುವಂಶವರ್ಣನೆ, ಸಾತ್ವತರ ವಂಶಾವಳಿ, ಸ್ಯಮಂತೋಪಾಖ್ಯಾನ, ದೇವಾಸುರಸಂಗ್ರಾಮಗಳು, ವಿಷ್ಣುವಿಗೆ ಭೃಗುವಿನ ಶಾಪ, ವಾಮನಬಲಿನಿಗ್ರಹ, ತೀರ್ಘತಮ ಚರಿತ್ರೆ, ಮನ್ವಂತರನಿರೂಪಣೆ.
ಆಚಾರ್ಯ ಜಗದೀಶಶಾಸ್ತ್ರಿ ಅವರ 1983ಯ ಆವೃತ್ತಿಯ ಪ್ರಕಾರ ಬ್ರಹ್ಮಾಂಡಪುರಾಣವು ಪೂರ್ವಭಾಗ, ಮಧ್ಯಭಾಗ ಮತ್ತು ಉತ್ತರಭಾಗಗಳೆಂಬ ಮೂರು ಭಾಗಗಳನ್ನು ಹೊಂದಿದೆ ಹಾಗೂ ಇದರಲ್ಲಿ ಒಟ್ಟು 156 ಅಧ್ಯಾಯಗಳೂ 13,802 ಶ್ಲೋಕಗಳೂ ಇವೆ. ಸ್ವಲ್ಪ ಹೆಚ್ಚು-ಕಡಿಮೆ ಜಯಚಾಮರಾಜೇಂದ್ರ ಗ್ರಂಥಮಾಲೆಯ ಬ್ರಹ್ಮಾಂಡಪುರಾಣದಲ್ಲಿರುವ ಅಧ್ಯಾಯಗಳು ಮತ್ತು ವಿಷಯಗಳೇ ಜಗದೀಶಶಾಸ್ತ್ರಿಯವರ ಆವೃತ್ತಿಯಲ್ಲಿವೆ. ಆದರೆ ಇಲ್ಲಿ 113 ಅಧ್ಯಾಯಗಳ ಬದಲಾಗಿ 112 ಅಧ್ಯಾಯಗಳಿವೆ (ಪೂರ್ವಭಾಗದಲ್ಲಿ 38 ಮತ್ತು ಮಧ್ಯಭಾಗದಲ್ಲಿ 74) ಮತ್ತು 9789 ಶ್ಲೋಕಗಳ ಬದಲಾಗಿ 9627 ಶ್ಲೋಕಗಳಿವೆ (ಪೂರ್ವಭಾಗದಲ್ಲಿ 3783 ಮತ್ತು ಮಧ್ಯಭಾಗದಲ್ಲಿ 5844). ಜಯಚಾಮರಾಜೇಂದ್ರ ಗ್ರಂಥಮಾಲೆಯ ಬ್ರಹ್ಮಾಂಡಪುರಾಣದಲ್ಲಿ ಇಲ್ಲದ ಉತ್ತರಭಾಗವು ಜಗದೀಶಶಾಸ್ತ್ರಿಯವರ ಬ್ರಹ್ಮಾಂಡಪುರಾಣದಲ್ಲಿ 44 ಅಧ್ಯಾಯಗಳಲ್ಲಿದೆ. ಈ ಭಾಗದ ಒಟ್ಟು ಶ್ಲೋಕಸಂಖ್ಯೆ 4175. ಈ ಉತ್ತರಭಾಗದಲ್ಲಿ ಪ್ರಮುಖವಾಗಿ ಹಯಗ್ರೀವ-ಅಗಸ್ತ್ಯರ ಸಂವಾದದಲ್ಲಿ ಲಲಿತೋಪಾಖ್ಯಾನವಿದೆ.