ಶ್ರೀಬ್ರಹ್ಮವೈವರ್ತಮಹಾಪುರಾಣ
ಕೃಷ್ಣಂ ಗೋಪಕಿಶೋರವೇಷಸುಭಗಂ ಜ್ಯೋತಿರ್ಮಯಂ ನಿರ್ಗುಣಮ್ ಭಕ್ತಾನುಗ್ರಹವಿಗ್ರಹಂ ಸುರುಚಿರಂ ಸ್ವೇಚ್ಛಾಮಯಂ ನಿರ್ಮಲಮ್ । ಸಾನಂದಂ ಸರಸೀರುಹೇಕ್ಷಣಮಮುಂ ರಾಧಾಮನೋಹಾರಿಣಮ್ ವಂದೇ ವಾಂಛಿತಸಿದ್ಧಯೇಽಚ್ಯುತಪದಂ ಭಕ್ತೈಕಸಿದ್ಧಿಪ್ರದಮ್ ।।
[ಶ್ರೀಬ್ರಹ್ಮವೈವರ್ತಮಹಾಪುರಾಣಂ (ಸಂಸ್ಕೃತಮೂಲ, ಕನ್ನಡದ ಅನುವಾದವಿವರಣೆಗಳೊಡನೆ, 10 ಭಾಗಗಳಲ್ಲಿ), ಅನುವಾದಕ ಬೆಟ್ಟದಪುರದ ಸುಬ್ರಾಯರ ಮಗ ಕೃಷ್ಣಪ್ಪ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 50, ಮೈಸೂರು, ಶ್ರೀಶಾರದಾ ಎಲೆಕ್ಟ್ರಿಕ್ ಪ್ರೆಸ್, 1949]
ಮತ್ಸ್ಯಪುರಾಣದ 53ನೇ ಅಧ್ಯಾಯದ 33-34ನೇ ಶ್ಲೋಕಗಳ ಪ್ರಕಾರ ರಥಂತರಸ್ಯ ಕಲ್ಪಸ್ಯ ವೃತ್ತಾಂತಮಧಿಕೃತ್ಯ ಚ । ಸಾವರ್ಣಿನಾ ನಾರದಾಯ ಕೃಷ್ಣಮಾಹಾತ್ಮ್ಯಮುತ್ತಮಮ್ ।। ಯತ್ರ ಬ್ರಹ್ಮವರಾಹಸ್ಯ ಚೋದಂತಂ ವರ್ಣಿತಂ ಮುಹುಃ । ತದಷ್ಟಾದಶಸಾಹಸ್ರಂ ಬ್ರಹ್ಮವೈವರ್ತಮುಚ್ಯತೇ ।। ಅರ್ಥಾತ್: ಬ್ರಹ್ಮವೈವರ್ತಪುರಾಣವು ರಥಂತರ ಕಲ್ಪದ ವೃತ್ತಾಂತವನ್ನು ಆಧರಿಸಿದೆ. ಅದರಲ್ಲಿ ಸಾವರ್ಣಿಮನುವು ನಾರದನಿಗೆ ಉತ್ತಮ ಕೃಷ್ಣಮಹಿಮೆಯನ್ನೂ, ಅಡಿಗಡಿಗೆ ಬ್ರಹ್ಮವರಾಹನ ವೃತ್ತಾಂತವನ್ನೂ ಹೇಳಿದ್ದಾನೆ. ಇದರಲ್ಲಿ 18,000 ಶ್ಲೋಕಗಳಿವೆ.
ಎಲ್ಲ ಪುರಾಣಗಳಲ್ಲಿರುವಂತೆ ಈ ಪುರಾಣದಲ್ಲಿಯೂ ಬ್ರಹ್ಮತತ್ತ್ವವು ವಿವೃತವಾಗಿದೆ. ಸೃಷ್ಟಿಯ ಮೂಲತತ್ತ್ವವು ಯಾವುದೆಂಬ ತರ್ಕವುಂಟಾದಾಗ ಪ್ರಾಚೀನ ಮಹರ್ಷಿಗಳು ಮೂರು ರೀತಿಯ ಉತ್ತರವನ್ನಿತ್ತರು: ಕೆಲವರು ಪ್ರಕೃತಿಯನ್ನು ಮೂಲತತ್ತ್ವವೆಂದರು (ಮಾರ್ಕಂಡೇಯ ಪುರಾಣ). ಕೆಲವರು ಅಗ್ನಿಪ್ರಾಣವನ್ನು ಮೂಲತತ್ತ್ವವೆಂದರು (ಆಗ್ನಿಪುರಾಣ). ಕೆಲವರು ಸೌರಶಕ್ತಿಯನ್ನು ಮೂಲತತ್ವವೆಂದರು (ಭವಿಷ್ಯಪುರಾಣ). ಈ ಮೂರು ವಿಪ್ರತ್ತಿಪತ್ತಿಗಳನ್ನು ಮೇಲ್ಕಂಡ ಪುರಾಣಗಳಲ್ಲಿ ಸ್ಪಷ್ಟಪಡಿಸಿ ವ್ಯಾಸನು ಇವೆಲ್ಲವೂ ಬ್ರಹ್ಮ ವಿವರ್ತವೆಂದು (ಬ್ರಹ್ಮವೇ ಮೂಲತತ್ತ್ವವೆಂದು) ಬ್ರಹ್ಮವೈವರ್ತಮಹಾಪುರಾಣದಲ್ಲಿ ವಿಶದಗೊಳಿಸಿದ್ದಾನೆ. ಬ್ರಹ್ಮಖಂಡ, ಪ್ರಕೃತಿಖಂಡ, ಗಣಪತಿಖಂಡ ಮತ್ತು ಶ್ರೀಕೃಷ್ಣಜನ್ಮಖಂಡಗಳೆಂಬ ನಾಲ್ಕು ಭಾಗಗಳನ್ನು ಹೊಂದಿರುವ ಈ ಪುರಾಣದಲ್ಲಿ ಒಟ್ಟು 253 ಅಧ್ಯಾಯಗಳಿವೆ ಮತ್ತು 19,556 ಶ್ಲೋಕಗಳಿವೆ.
ಬ್ರಹ್ಮಖಂಡ (30 ಅಧ್ಯಾಯಗಳು, 1829 ಶ್ಲೋಕಗಳು): ಸೌತಿ-ಶೌನಕರ ಸಂವಾದದಲ್ಲಿ ಪರಬ್ರಹ್ಮನಿರೂಪಣೆ, ದುರ್ಗಾಸ್ತೋತ್ರ, ಸೃಷ್ಟಿನಿರೂಪಣೆ, ಮತ್ತು ನಾರದಜನ್ಮಕಥನಗಳಿವೆ.
ಪ್ರಕೃತಿಖಂಡ (67 ಅಧ್ಯಾಯಗಳು, 5231 ಶ್ಲೋಕಗಳು): ನಾರಾಯಣ-ನಾರದರ ಸಂವಾದದಲ್ಲಿ ವಿಶ್ವಬ್ರಹ್ಮಾಂಡವರ್ಣನೆ, ಸರಸ್ವತ್ಯುಪಾಖ್ಯಾನ-ಕವಚ-ಸ್ತ್ರೋತ್ರಗಳು, ಪೃಥಿವ್ಯುಪಾಖ್ಯಾನ, ಗಂಗೋಪಾಖ್ಯಾನ, ತುಲಸ್ಯುಪಾಖ್ಯಾನ, ಸಾವಿತ್ರ್ಯುಪಾಖ್ಯಾನ, ಲಕ್ಷ್ಮ್ಯುಪಾಖ್ಯಾನ (ಸಮುದ್ರಮಥನ), ಸ್ವಾಹೋಪಾಖ್ಯಾನ, ಸ್ವಾಧೋಪಾಖ್ಯಾನ, ದಕ್ಷಿಣೋಪಾಖ್ಯಾನ, ಮಂಗಲೋಪಾಖ್ಯಾನ, ಮನಸೋಪಾಖ್ಯಾನ, ಸುರಭ್ಯುಪಾಖ್ಯಾನ, ರಾಧೋಪಾಖ್ಯಾನ, ಮತ್ತು ದುರ್ಗೋಪಾಖ್ಯಾನ.
ಗಣಪತಿಖಂಡ (23 ಅಧ್ಯಾಯಗಳು, 1207 ಶ್ಲೋಕಗಳು): ನಾರಾಯಣ-ನಾರದರ ಸಂವಾದದಲ್ಲಿ ಪುಣ್ಯಕವ್ರತವರ್ಣನೆ, ಗಣೇಶೋತ್ಪತ್ತಿವರ್ಣನೆ, ಕಾರ್ತಿಕೇಯಜನ್ಮಕಥನ.
ಶ್ರೀಕೃಷ್ಣಜನ್ಮಖಂಡ (133 ಅಧ್ಯಾಯಗಳು, 11,289 ಶ್ಲೋಕಗಳು): ನಾರಾಯಣ-ನಾರದ ಸಂವಾದದಲ್ಲಿ ರಾಧಾಶ್ರೀಧಾಮ, ಗೋಲೋಕವರ್ಣನ, ಕೃಷ್ಣಜನನ ಮತ್ತು ಬಾಲಲೀಲೆಗಳು, ರಾಧಾಕೃಷ್ಣವಿವಾಹಸಂಗಮ, ರಾಧಾಕೃಷ್ಣಸಂವಾದದಲ್ಲಿ ಪಾರ್ವತೀಗರ್ವಭಂಗ ಮತ್ತು ಶಂಕರವಿವಾಹ, ಕೃಷ್ಣಗಮನ, ಕಂಸವಧೆ, ಭಗವನ್-ನಂದಸಂವಾದ, ರಾಧಾ-ಉದ್ಧವಸಂವಾದ, ಭಗವದ್ಯುಪನಯನ, ದ್ವಾರಕಾನಿರ್ಮಾಣ, ರುಕ್ಮಿಣ್ಯುದ್ದಾಹ, ಬಾಣಯುದ್ಧ, ಶೃಗಾಲವಾಸುದೇವಮೋಕ್ಷಣ, ಸ್ಯಮಂತಕಮಣಿಹರಣ, ನಾರದವಿವಾಹಪ್ರಕರಣ, ವಹ್ನಿಸುವರ್ಣೋತ್ಪತ್ತಿ.