ಪುರಾಣಗಳು
Contents
Toggleಅಂಗಾನಿವೇದಾಶ್ಚತ್ವಾರೋ ಮೀಮಾಂಸಾನ್ಯಾಯವಿಸ್ತರಃ । ಪುರಾಣಂ ಧರ್ಮಶಾಸ್ತ್ರಂ ಚ ವಿದ್ಯಾಹ್ಯೇತಾಶ್ಚತುರ್ದಶ ।। ಎಂದು ಉಕ್ತವಾದ ಹದಿನಾಲ್ಕು ವಿದ್ಯೆಗಳಲ್ಲಿ ಸೇರಿದ ಪುರಾಣಗಳು ಮಾನವನ ಜನ್ಮಸಾರ್ಥಕತೆಗೆ ಆವಶ್ಯಕವಾದ ಜ್ಞಾನದಾಯಕಗಳಾಗಿವೆ.
ಇತಿಹಾಸಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್ ।। ವೇದಾರ್ಥವನ್ನು ತಿಳಿಯಬೇಕೆಂದಿರುವವನು ಇತಿಹಾಸ-ಪುರಾಣಾರ್ಥಗಳಲ್ಲಿ ಅನುಭವ ಹೊಂದಿರುವುದು ಅವಶ್ಯಕ. ಇದರಿಂದ ವೇದಗಳಲ್ಲಿ ಹೇಳಿರುವ ಪಾರಮಾರ್ಥಿಕತತ್ತ್ವವು ಸ್ಫುಟವಾಗುತ್ತದೆ.
ಈ ಅನುಬಂಧದಲ್ಲಿ ಕೆಳಗಿನ ಐದು ಪ್ರಶ್ನೆಗಳಿಗೆ ಉತ್ತರರೂಪವಾಗಿ ಪುರಾಣಗಳನ್ನು ಪರಿಚಯಿಸುತ್ತೇನೆ: (1) ಪುರಾಣ ಎಂದರೇನು? ಪುರಾಣಗಳೇ ಅವುಗಳ ಕುರಿತು ಏನನ್ನು ಹೇಳುತ್ತವೆ? (2) ಪುರಾಣಗಳು ಎಷ್ಟು ಹಿಂದಿನವು? (3) ಪುರಾಣಗಳನ್ನು ಯಾರು ರಚಿಸಿದರು? (4) ಎಷ್ಟು ಪುರಾಣಗಳಿವೆ? (5) ಪುರಾಣಗಳಲ್ಲಿ ಏನಿವೆ? ಪುರಾಣಗಳು ಏನನ್ನು ಹೇಳುತ್ತವೆ?
ಪುರಾಣವೆಂದರೇನು?
ಸಂಸ್ಕೃತ ಶಬ್ದ “ಪುರಾಣ” ಎಂದರೆ “ಪುರಾತನ” ಅಥವಾ “ಹಳೆಯದು” ಎಂದರ್ಥ. ಪುರಾಣಮ್ ಆಖ್ಯಾನಮ್ ಹಳೆಯ ಕಥೆ. ಯಸ್ಮಾತ್ಪುರಾ ಹ್ಯನತೀದಂ ಪುರಾಣಂ ತೇನ ತತ್ಸ್ಮೃತಮ್ । ಪುರಾತನ ಕಾಲವನ್ನು ಉಸಿರಾಡುವುದರಿಂದ ಅದು ಪುರಾಣವೆಂದೆನಿಸಿಕೊಂಡಿತು (ವಾಯು ಪುರಾಣ, 1.203). ಯಸ್ಮಾತ್ಪುರಾ ಹ್ಯಭೂಚ್ಚೈತತ್ಪುರಾಣಂ ತೇನ ತತ್ಸ್ಮೃತಮ್ । ಅದು ಪುರಾತನ ಕಾಲದಲ್ಲಿ ಇದ್ದುದರಿಂದ ಅದು ಪುರಾಣವೆಂದಾಯಿತು (ಬ್ರಹ್ಮಾಂಡ ಪುರಾಣ 1.1.173).
ಪುರಾಣವನ್ನು ಯಾರು ಮತ್ತು ಯಾವಾಗ ರಚಿಸಿದರು?
ವಿಸ್ತರಾಯ ತು ಲೋಕಾನಾಂ ಸ್ವಯಂ ನಾರಾಯಣಃ ಪ್ರಭುಃ । ವ್ಯಾಸರೂಪೇಣ ಕೃತವಾನ್ ಪುರಾಣಾನಿ ಮಹೀತಲೇ ।। ಎಂಬ ಸೂಕ್ತಿಯಿಂದ ನಾರಾಯಣನೇ ಮಾನವರ ಉದ್ಧಾರಕ್ಕಾಗಿ ಪುರಾಣಗಳನ್ನು ವ್ಯಾಸರೂಪದಿಂದ ರಚಿಸಿದನೆಂದು ವ್ಯಕ್ತವಾಗುತ್ತದೆ. ವೇದಗಳಂತೆ ಪುರಾಣಗಳೂ ಸನಾತನವಾದವು. ವಿಷ್ಣುವಿನಲ್ಲಿ ಅಡಗಿರುವವು. ಕಲ್ಪದ ಅದಿಯಲ್ಲಿ ಹಯಗ್ರೀವರೂಪದ ಹಾಗೂ ಮನ್ವಂತರದ ಆದಿಯಲ್ಲಿ ಮತ್ಸ್ಯರೂಪದ ವಿಷ್ಣುವಿನಿಂದ ಬ್ರಹ್ಮನಿಗೆ ಬೋಧಿಸಲ್ಪಟ್ಟವು.[1]
ಮತ್ಸ್ಯಪುರಾಣದ ಪ್ರಕಾರ ಪುರಾಣ ಪುರುಷ ವಿಶ್ವಾತ್ಮಾ ನಾರಾಯಣನೇ ಈ ವೈವಸ್ವತ ಮನ್ವಂತರದ ಪ್ರಾರಂಭದಲ್ಲಿ ಮತ್ಸ್ಯರೂಪದಲ್ಲಿ ಬಂದು ವೈವಸ್ವತ ಮನುವಿಗೆ ಪುರಾಣದ ಕುರಿತು ಹೇಳಿದನು. ಸರ್ವ ಶಾಸ್ತ್ರಗಳ ಮೊದಲು ಬ್ರಹ್ಮನು ಪುರಾಣವನ್ನು ನೆನಪಿಸಿಕೊಂಡನು. ನಂತರವೇ ಅವನ ಬಾಯಿಗಳಿಂದ ವೇದಗಳು ಸ್ಫುರಿಸಿದವು.[2],[3] ಕಳೆದ ಕಲ್ಪದ ಅಂತ್ಯದಲ್ಲಿ ಲೋಕಗಳು ಸುಡುತ್ತಿದ್ದಾಗ, ಹಯದ ರೂಪದಲ್ಲಿದ್ದ ನಾನು ನಾಲ್ಕೂ ವೇದಗಳನ್ನು, ಅವುಗಳ ಅಂಗಗಳಾದ ಪುರಾಣ, ನ್ಯಾಯ, ಮೀಮಾಂಸ ಮತ್ತು ಧರ್ಮಶಾಸ್ತ್ರಗಳೊಂದಿಗೆ ನನ್ನಲ್ಲಿಯೇ ಇರಿಸಿಕೊಂಡಿದ್ದೆನು. ಈ ಕಲ್ಪದ ಆರಂಭದಲ್ಲಿ ನಾನೇ ಮತ್ಸ್ಯರೂಪದಲ್ಲಿ ಏಕಾರ್ಣವದಲ್ಲಿ ನೆಲೆಸಿ ಇವೆಲ್ಲವನ್ನೂ ಪುನಃ ಸಂಪೂರ್ಣವಾಗಿ ಹೇಳಿದೆನು. ಅದನ್ನು ಕೇಳಿ ಬ್ರಹ್ಮನು ಎಚ್ಚೆತ್ತನು ಮತ್ತು ಅದನ್ನೇ ಮುನಿಗಳಿಗೂ ದೇವತೆಗಳಿಗೂ ಬೋಧಿಸಿದನು.[4]
ವಿಷ್ಣುಪುರಾಣದ ಪ್ರಕಾರ ಈಗ ನಡೆಯುತ್ತಿರುವ ವೈವಸ್ವತಮನ್ವಂತರದ 28ನೇ ಕಲಿಯುಗದ ಹಿಂದಿನ 28ನೇ ದ್ವಾಪರಯುಗದಲ್ಲಿ ಕೃಷ್ಣದ್ವೈಪಾಯನ ವ್ಯಾಸನು ವೇದಗಳನ್ನು ವಿಂಗಡಿಸಿ, ಪುರಾಣಸಂಹಿತೆಯನ್ನೂ ರಚಿಸಿ ಅದನ್ನು ತನ್ನ ಶಿಷ್ಯ ಸೂತ ಲೋಮಹರ್ಷಣನಿಗೆ ಉಪದೇಶಿಸಿದನು ಎಂದಿದೆ.[5]
ಪುರಾಣಗಳು ಎಷ್ಟು?
ಮತ್ಸ್ಯಪುರಾಣದ ಪ್ರಕಾರ ಪ್ರತಿ ಕಲ್ಪದ ಮತ್ತು ಮನ್ವಂತರಗಳ ಆದಿಯಲ್ಲಿ ಪುರಾಣವು ಒಂದೇ ಆಗಿದ್ದು ಪ್ರತಿ ದ್ವಾಪರ ಯುಗದಲ್ಲಿ ವಿಷ್ಣುವೇ ವ್ಯಾಸರೂಪದಲ್ಲಿ ಬಂದು 18 ಪುರಾಣಗಳನ್ನಾಗಿ ವಿಭಜಿಸುತ್ತಾನೆ. ಕಲ್ಪದ ಪ್ರಾರಂಭದಲ್ಲಿ ಒಂದು ನೂರು ಕೋಟಿ ಶ್ಲೋಕಗಳಿಂದ ವಿಸ್ತಾರವಾಗಿದ್ದ, ತ್ರಿವರ್ಗಗಳ (ಧರ್ಮ-ಅರ್ಥ-ಕಾಮಗಳ) ಸಾಧಕವಾದ ಒಂದೇ ಒಂದು ಪುರಾಣವಿತ್ತು.[6] ನಂತರ ಕಾಲಕ್ರಮೇಣವಾಗಿ ಮನುಷ್ಯರಿಗೆ ಪುರಾಣವನ್ನು ಗ್ರಹಿಸಿಕೊಳ್ಳುವ ಶಕ್ತಿಯು ಕಡಿಮೆಯಾದುದನ್ನು ನೋಡಿ ಪ್ರತಿ ಮಹಾಯುಗದ ದ್ವಾಪರಯುಗದಲ್ಲಿ ನಾನೇ ವ್ಯಾಸನ ರೂಪದಲ್ಲಿ ಬಂದು ಪುರಾಣವನ್ನು 4 ಲಕ್ಷ ಶ್ಲೋಕಗಳಿಗೆ ಇಳಿಸುತ್ತೇನೆ. ಭುವಿಯಲ್ಲಿ ಇವೇ 18 ಪುರಾಣಗಳಾಗಿ ಪ್ರಕಾಶಿತಗೊಳ್ಳುತ್ತವೆ. ದೇವಲೋಕದಲ್ಲಿ ಈಗಲೂ ಕೂಡ ನೂರು ಕೋಟಿ ಶ್ಲೋಕಗಳುಳ್ಳ ಪುರಾಣವು ಒಂದೇ ಒಂದು.[7]
ವಿಷ್ಣುಪುರಾಣದ ಪ್ರಕಾರ ಈ ಹದಿನೆಂಟು ಪುರಾಣಗಳು ಹೀಗಿವೆ: (1) ಬ್ರಹ್ಮ (2) ಪದ್ಮ (3) ವಿಷ್ಣು (4) ಶಿವ (5) ಭಾಗವತ (6) ನಾರದೀಯ (7) ಮಾರ್ಕಂಡೇಯ (8) ಅಗ್ನಿ (9) ಭವಿಷ್ಯ (10) ಬ್ರಹ್ಮವೈವರ್ತ (11) ಲಿಂಗ (12) ವರಾಹ (13) ಸ್ಕಂದ (14) ವಾಮನ (15) ಕೂರ್ಮ (16) ಮತ್ಸ್ಯ (17) ಗರುಡ (18) ಬ್ರಹ್ಮಾಂಡ[8].
ಶ್ರೀಮದ್ಭಾಗವತ ಪುರಾಣದಲ್ಲಿ 18 ಪುರಾಣಗಳ ಹೆಸರುಗಳು ಹೀಗಿವೆ: (1 ) ಬ್ರಹ್ಮ (2) ಪದ್ಮ (3) ವಿಷ್ಣು (4) ಶಿವ (5) ಲಿಂಗ (6) ಗರುಡ (7) ನಾರದ (8) ಭಾಗವತ (9) ಅಗ್ನಿ (10) ಸ್ಕಂದ (11) ಭವಿಷ್ಯ (12) ಬ್ರಹ್ಮವೈವರ್ತ (13) ಮಾರ್ಕಂಡೇಯ (14) ವಾಮನ (15) ವರಾಹ (16) ಮತ್ಸ್ಯ (17) ಕೂರ್ಮ (18) ಬ್ರಹ್ಮಾಂಡ.[9]
ಶ್ರೀನಾರದೀಯಪುರಾಣದ ಪ್ರಕಾರ ನೂರುಕೋಟಿ ಶ್ಲೋಕಗಳಿಂದ ಕೂಡಿ ವಿಸ್ತಾರವಾದ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಚ-ತುಷ್ಟಯಕ್ಕೆ ಸಾಧಕವಾದ ಪುರಾಣವು ಎಲ್ಲ ಕಲ್ಪಗಳ ಆದಿಯಲ್ಲಿಯೂ ಒಂದೇ ಆಗಿತ್ತು. ಅದರಿಂದ ಶಾಸ್ತ್ರತತ್ತ್ವಗಳೆಲ್ಲವೂ ತಿಳಿಯುತ್ತಿದ್ದವು. ಕಾಲ-ಕ್ರಮೇಣ ಜನರಿಗೆ ಪುರಾಣತತ್ತ್ವಜ್ಞಾನವು ಉಂಟಾಗುವುದಿಲ್ಲ ಎಂದು ತಿಳಿದು ಶ್ರೀಹರಿಯು ಪ್ರತಿಯೊಂದು ಯುಗಪರ್ಯಾಯದಲ್ಲಿಯೂ ವ್ಯಾಸ-ರೂಪದಿಂದ ಆವಿರ್ಭವಿಸಿ, ದ್ವಾಪರಯುಗಗಳಲ್ಲಿ ಪುರಾಣತತ್ತ್ವಗಳನ್ನು ನಾಲ್ಕುಲಕ್ಷ ಶ್ಲೋಕಗಳಲ್ಲಿ ಸಂಗ್ರಹಿಸಿ ಅದನ್ನು ಹದಿನೆಂಟು ಭಾಗಗಳನ್ನಾಗಿ ವಿಂಗಡಿಸಿ ಹದಿನೆಂಟು ಹೆಸರುಗಳಿಂದ ಭೂಲೋಕದಲ್ಲಿ ಪ್ರಕಟಿಸಿದನು. ದೇವಲೋಕದಲ್ಲಿ ಈಗಲೂ ಸಹ ಪುರಾಣವು ನೂರುಕೋಟಿ ಶ್ಲೋಕಗ-ಳಿಂದ ವರ್ಣಿಸಲ್ಪಟ್ಟಿದೆ. ಅದರ ಸಾರವನ್ನೇ ನಾಲ್ಕುಲಕ್ಷ ಶ್ಲೋಕಗಳಲ್ಲಿ ವರ್ಣಿಸಿದೆ. ಈ ಹದಿನೆಂಟು ಮಹಾಪುರಾಣಗಳು: (1) ಬ್ರಹ್ಮ (2) ಪದ್ಮ (3) ವಿಷ್ಣು (4) ವಾಯು (5) ಭಾಗವತ (6) ನಾರದೀಯ (7) ಮಾರ್ಕಂ-ಡೇಯ (8) ಆಗ್ನೇಯ (9) ಭವಿಷ್ಯ (10) ಬ್ರಹ್ಮವೈವರ್ತ (11) ಲಿಂಗ (12) ವರಾಹ (13) ಸ್ಕಾಂದ (14) ವಾಮನ (15) ಕೂರ್ಮ (16) ಮಾತ್ಸ್ಯ (17) ಗರುಡ ಮತ್ತು (18) ಬ್ರಹ್ಮಾಂಡ.[10]
ಪ್ರತಿಯೊಂದು ಪುರಾಣವು ಬೇರೆ ಬೇರೆ ಕಲ್ಪಗಳಲ್ಲಿ ನಡೆದುದನ್ನು ತಿಳಿ-ಸುತ್ತವೆ ಎಂದು ಮತ್ಸ್ಯಪುರಾಣ (ಅಧ್ಯಾಯ 53) ವು ಹೇಳುತ್ತದೆ. ಹಾಗೆ-ಯೇ ವಾಯುಪುರಾಣ (ಉತ್ತರಖಂಡದ 42ನೇ ಅಧ್ಯಾಯ)ವು ಪ್ರತಿ ಪುರಾಣದ ಶ್ಲೋಕಸಂಖ್ಯೆಗಳನ್ನೂ ನೀಡುತ್ತದೆ. ಇವೆರಡನ್ನೂ ಹೊಂದಿಸಿ-ಕೊಂಡು ಮತ್ಸ್ಯಪುರಾಣವು ಹೆಸರಿಸಿದ 18 ಪುರಾಣಗಳು ಯಾವ ಯಾವ ಕಲ್ಪದ ಕುರಿತಿವೆ, ಮತ್ತು ಅವುಗಳ ಶ್ಲೋಕ-ಪರಿಮಾಣಗಳೆಷ್ಟು ಎನ್ನುವು-ದನ್ನು ಕೆಳಗಿನ ಕೋಷ್ಟಕದಲ್ಲಿ ಸಂಗ್ರಹಿಸಿದೆ. ವಿಷ್ಣುಪುರಾಣದಲ್ಲಿ 4ನೇ ಸ್ಥಾನದಲ್ಲಿದ್ದ ಶಿವಪುರಾಣವನ್ನು ಮತ್ಸ್ಯಪುರಾಣದಲ್ಲಿ ವಾಯುಪುರಾಣ-ವೆಂಬ ಹೆಸರಿನಿಂದ ಹೇಳಿರುವುದನ್ನು ಬಿಟ್ಟರೆ ಈ ಎರಡು ಪುರಾಣಗಳ-ಲ್ಲಿರುವ 18 ಪುರಾಣಗಳ ಹೆಸರುಗಳು ಒಂದೇ ಆಗಿವೆ ಎನ್ನುವುದನ್ನು ಗಮನಿಸಬೇಕು. ಈ ಎಲ್ಲ ಪುರಾಣಗಳಲ್ಲಿರುವ ಶ್ಲೋಕಸಂಖ್ಯೆಗಳ ಮೊತ್ತವು ಹಿಂದೆ ಹೇಳಿದಂತೆ ಸುಮಾರು 4 ಲಕ್ಷ ಶ್ಲೋಕಗಳಾಗುತ್ತವೆ.
| ಪುರಾಣ | ಕಲ್ಪ | ಶ್ಲೋಕಸಂಖ್ಯೆ |
| ಬ್ರಹ್ಮ | 13,000 | |
| ಪದ್ಮ | ಪದ್ಮ | 55,000 |
| ವಿಷ್ಣು | ವಾರಾಹ | 23,000 |
| ವಾಯು | ಶ್ವೇತ | 24,000 |
| ಭಾಗವತ | ಸಾರಸ್ವತ | 18,000 |
| ನಾರದೀಯ | ಬೃಹತ್ | 25,000 |
| ಮಾರ್ಕಂಡೇಯ | 9,000 | |
| ಅಗ್ನಿ | ಈಶಾನ | 16,000 |
| ಭವಿಷ್ಯ | ಅಘೋರ | 14,500 |
| ಬ್ರಹ್ಮವೈವರ್ತ | ರಥಂತರ | 18,000 |
| ಲಿಂಗ | 11,000 | |
| ವರಾಹ | ಮಾನವ | 24,000 |
| ಸ್ಕಂದ | 81,000 | |
| ವಾಮನ | ಕೂರ್ಮ | 10,000 |
| ಕೂರ್ಮ | ಲಕ್ಷ್ಮೀ | 18,000 |
| ಮತ್ಸ್ಯ | ಶ್ವೇತವರಾಹ | 14,000 |
| ಗರುಡ | ಗಾರುಡ | 18,000 |
| ಬ್ರಹ್ಮಾಂಡ | 12,200 |
ಗರುಡಪುರಾಣವು (ಬ್ರಹ್ಮಕಾಂಡ, ಅಧ್ಯಾಯ 1, ಶ್ಲೋಕಗಳು 43-55) ಪುರಾಣಗಳನ್ನು ಸಾತ್ವಿಕ, ರಾಜಸಿಕ ಮತ್ತು ತಾಮಸಗಳೆಂಬ ಮೂರು ಗುಂಪುಗಳಲ್ಲಿ ವಿಂಗಡಿಸುತ್ತದೆ.[11] ಭಾಗವತ, ವಿಷ್ಣು, ಗರುಡ. ಮತ್ಸ್ಯ, ಕೂರ್ಮ ಮತ್ತು ವಾಯುಪುರಾಣಗಳು ಸಾತ್ವಿಕ ಪುರಾಣಗಳು. ಸ್ಕಂದ, ಪದ್ಮ, ವಾಮನ, ವರಾಹ, ಅಗ್ನಿ ಮತ್ತು ಭವಿಷ್ಯಪುರಾಣಗಳು ರಾಜಸ ಪುರಾಣಗಳು. ಬ್ರಹ್ಮ, ಬ್ರಹ್ಮಾಂಡ, ಬ್ರಹ್ಮವೈವರ್ತ, ಲಿಂಗ, ಮಾರ್ಕಂಡೇಯ ಮತ್ತು ಆದಿತ್ಯ[12] ಪುರಾಣಗಳು ತಾಮಸಪುರಾಣಗಳು.
ಪುರಾಣಗಳಲ್ಲಿ ಏನಿವೆ? ಪುರಾಣಗಳು ಏನನ್ನು ಹೇಳುತ್ತವೆ?
ಮತ್ಸ್ಯಪುರಾಣದ ಅಧ್ಯಾಯ 53, ಶ್ಲೋಕ 65ರ ಪ್ರಕಾರ ಪಂಚಾಂಗಾನಿ ಪುರಾಣೇಷು ಆಖ್ಯಾನಕಮಿತಿ ಸ್ಮೃತಮ್ । ಸರ್ಗಶ್ಚ ಪ್ರತಿಸರ್ಗಶ್ಚ ವಂಶೋ ಮನ್ವಂತರಾಣಿ ಚ । ವಂಶ್ಯಾನುಚರಿತಂ ಚೈವ ಪುರಾಣಂ ಪಂಚಲಕ್ಷಣಮ್ ।। ಅರ್ಥಾತ್: ಪುರಾಣಗಳಲ್ಲಿ ಆಖ್ಯಾನಗಳೆನ್ನುವ ಐದು ಅಂಗಗಳಿವೆ: (1) ಸರ್ಗ ಅಂದರೆ ಸೃಷ್ಟಿ (2) ಪ್ರತಿಸರ್ಗ (3) ವಂಶ (4) ಮನ್ವಂತರಗಳು ಮತ್ತು (5) ವಂಶಾನುಚರಿತ. ಶ್ರೀಮದ್ಭಾಗವತಮಹಾಪುರಾಣದ 12ನೇ ಸ್ಕಂಧದ 7ನೇ ಅಧ್ಯಾಯದ ಶ್ಲೋಕ 8-10 ರಲ್ಲಿ ಸೂತನು ಶೌನಕನಿಗೆ ಈ ಕೆಳಗಿನ ಪುರಾಣಲಕ್ಷಣಗಳನ್ನು ನಿರೂಪಿಸುತ್ತಾನೆ: ಪುರಾಣಲಕ್ಷಣಂ ಬ್ರಹ್ಮನ್ಬ್ರಹ್ಮರ್ಷಿಭಿರ್ನಿರೂಪಿತಮ್ । ಶೃಣುಷ್ವ ಬುದ್ಧಿಮಾಶ್ರಿತ್ಯ ವೇದಶಾಸ್ತ್ರಾನುಸಾರತಃ ।। ಸರ್ಗೋಽಸ್ಯಾಥ ವಿಸರ್ಗಶ್ಚ ವೃತ್ತಿರಕ್ಷಾಂತರಾಣಿ ಚ । ವಂಶೋ ವಂಶಾನುಚರೀತಂ ಸಂಸ್ಥಾ ಹೇತುರಪಾಶ್ರಯಃ ।। ದಶಭಿರ್ಲಕ್ಷಣೈರ್ಯುಕ್ತಂ ಪುರಾಣಂ ತದ್ವಿದೋ ವಿದುಃ । ಕೇಚಿತ್ಪಂಚವಿಧಂ ಬ್ರಹ್ಮನ್ಮಹದಲ್ಪವ್ಯವಸ್ಥಯಾ ।। ಅರ್ಥಾತ್: (1) ಸರ್ಗ, (2) ವಿಸರ್ಗ, (3) ವೃತ್ತಿ, (4) ರಕ್ಷಣೆ, (5) ಮನ್ವಂತರ, (6) ವಂಶ, (7) ವಂಶಾನುಚರಿತ, (8) ಸಂಸ್ಥೆ (ಪ್ರಳಯ), (9) ಹೇತು ಮತ್ತು (10) ಅಪಾಶ್ರಯಗಳೆಂಬ ಪುರಾಣಗಳ ಹತ್ತು ಲಕ್ಷಣಗಳನ್ನು ಪರಾಣಗಳನ್ನು ತಿಳಿದಿರುವ ವಿದ್ವಾಂಸರು ಹೇಳುತ್ತಾರೆ. ಕೆಲವರು ಪುರಾಣಗಳ ಐದೇ ಲಕ್ಷಣಗಳನ್ನು ತಿಳಿಸುತ್ತಾರೆ. ಎರಡೂ ಸರಿಯಾಗಿಯೇ ಇವೆ. ಏಕೆಂದರೆ. ವಿಸ್ತಾರಮಾಡಿ ಹತ್ತನ್ನೂ ಸಂಕ್ಷಿಪ್ತವಾಗಿ ಐದನ್ನೂ ಹೇಳುತ್ತಾರೆ. ಮುಂದಿನ ಶ್ಲೋಕಗಳಲ್ಲಿ ಈ ಹತ್ತೂ ಲಕ್ಷಣಗಳ ಕುರಿತಾದ ವರ್ಣನೆಗಳಿವೆ:
- ಸರ್ಗ: ಮೂಲಪ್ರಕೃತಿಯಲ್ಲಿ ಲೀನವಾದ ಗುಣಗಳು ಕ್ಷುಬ್ದವಾದಾಗ ಮಹತ್ತತ್ವದ ಉತ್ಪತ್ತಿಯಾಗುತ್ತದೆ. ಮಹತ್ತತ್ತ್ವದಿಂದ ತಾಮಸ, ರಾಜಸ ಮತ್ತು ವಿಕಾರಿಕ (ಸಾತ್ತ್ವಿಕ) ಎಂಬ ಮೂರು ಅಹಂಕಾರಗಳು ಉಂಟಾಗುತ್ತವೆ. ತ್ರಿವಿಧದ ಅಹಂಕಾರಗಳಿಂದ ಪಂಚತನ್ಮಾತ್ರೆಗಳು, ಇಂದ್ರಿಯಗಳು ಮತ್ತು ವಿಷಯಗಳ ಉತ್ಪತ್ತಿಯಾಗುತ್ತದೆ. ಈ ಉತ್ಪತ್ತಿಯ ಕ್ರಮವನ್ನೇ ಸರ್ಗ ಎಂದು ಹೇಳುತ್ತಾರೆ.[13]
- ವಿಸರ್ಗ: ಪರಮೇಶ್ವರನ ಅನುಗ್ರಹದಿಂದ ಸೃಷ್ಟಿಯ ಸಾಮರ್ಥ್ಯವನ್ನು ಪಡೆದು ಮಹತ್ತತ್ತ್ವಾದಿ ಜೀವಿಗಳ ಪೂರ್ವಕರ್ಮಗಳಿಗನುಸಾರವಾಗಿ ಒಳ್ಳೆಯ-ಕೆಟ್ಟ ವಾಸನೆಗಳ ಪ್ರಧಾನತೆಯಿಂದ ಬೀಜದಿಂದ ಬೀಜವು ಹುಟ್ಟುವಂತೆ ಈ ಚರಾಚರ ಶರೀರಾತ್ಮಕ ಜೀವಿಯ ಉಪಾಧಿಗಳ ಸೃಷ್ಟಿಯನ್ನೇ ವಿಸರ್ಗ ಎಂದು ಹೇಳುತ್ತಾರೆ.[14]
- ವೃತ್ತಿ: ವೃತ್ತಿರ್ಭೂತಾನಿ ಭೂತಾನಾಂ ಚರಾಣಾಮಚರಾಣಿ ಚ । ಕೃತಾ ಸ್ವೇನ ನೃಣಾಂ ತತ್ರ ಕಾಮಾಚ್ಚೋದನಯಾಪಿ ವಾ ।। ಅರ್ಥಾತ್: ಚರ ಪ್ರಾಣಿಗಳ, ಅಚರ ಪದಾರ್ಥಗಳ ಜೀವನ ನಿರ್ವಾಹದ ಸಾಮಾಗ್ರಿಯೇ ವೃತ್ತಿಯು. ಚರಪ್ರಾಣಿಗಳ ದುಗ್ಧಾದಿಗಳು ಜೀವನೋಪಾಯ ಸಾಮಾಗ್ರಿಯೇ. ಇವುಗಳಲ್ಲಿ ಕೆಲವನ್ನು ಮನುಷ್ಯರು ಸ್ವಾಭಾವಿಕ ಕಾಮನೆಗಳಿಂದ ನಿಶ್ಚಿತಪಡಿಸಿಕೊಂಡರು. ಕೆಲವನ್ನು ಶಾಸ್ತ್ರದ ಆಜ್ಞೆಯಂತೆ ನಿಶ್ಚಿತಪಡಿಸಿದರು.
- ರಕ್ಷೆ: ರಕ್ಷಾಚ್ಯುತಾವತಾರೇಹಾ ವಿಶ್ವಸ್ಯಾನು ಯುಗೇ ಯುಗೇ । ತಿರ್ಯಂಮರ್ತ್ಯರ್ಷಿದೇವೇಷು ಹನ್ಯಂತೇ ಯೈಸ್ತ್ರಯೀದ್ವಿಷಃ ।। ಅರ್ಥಾತ್: ಭಗವಂತನು ಯುಗಯುಗಗಳಲ್ಲಿ ಪಶು-ಪಕ್ಷಿ, ಮನುಷ್ಯ, ಋಷಿ, ದೇವತೆ, ಮೊದಲಾದ ರೂಪಗಳಲ್ಲಿ ಅವತರಿಸಿ ಅನೇಕ ಲೀಲೆಗಳನ್ನು ಮಾಡುತ್ತಾನೆ. ಈ ಅವತಾರಗಳಲ್ಲಿ ಅವನು ವೇದಧರ್ಮದ ವಿರೋಧಿಗಳನ್ನು ಸಂಹರಿಸುತ್ತಾನೆ. ಅವನ ಈ ಅವತಾರ ಲೇಲೆಗಳು ವಿಶ್ವದ ರಕ್ಷಣೆಗಾಗಿಯೇ ಇರುವುದರಿಂದ ಇದನ್ನು ರಕ್ಷೆ ಎಂದು ಹೇಳುತ್ತಾರೆ.
- ಮನ್ವಂತರ: ಮನ್ವಂತರಂ ಮನುರ್ದೇವಾ ಮನುಪುತ್ರಾಃ ಸುರೇಶ್ವರಾಃ । ಋಷಯೋಽಂಶಾವತಾರಾಶ್ಚ ಹರೇಃ ಷಡ್ವಿಧಮುಚ್ಯತೇ ।। ಅರ್ಥಾತ್: ಮನುಗಳು, ದೇವತೆಗಳು, ಮನುಪುತ್ರರು, ಇಂದ್ರ, ಸಪ್ತರ್ಷಿಗಳು ಮತ್ತು ಭಗವಂತನ ಅವತಾರಗಳು – ಈ ಆರು ವಿಶೇಷತೆಯಿಂದ ಕೂಡಿದ ಸಮಯಕ್ಕೆ ಮನ್ವಂತರ ಎಂದು ಹೇಳುತ್ತಾರೆ.
- ವಂಶ ಮತ್ತು (7) ವಂಶಾನುಚರಿತ: ರಾಜ್ಞಾಂ ಬ್ರಹ್ಮಪ್ರಸೂತಾನಾಂ ವಂಶಸ್ತ್ರೈಕಾಲಿಕೋಽನ್ವಯಃ । ವಂಶಾನುಚರಿತಂ ತೇಷಾಮ್ವೃತ್ತಂ ವಂಶಧರಾಸ್ಚ ಯೇ ।। ಅರ್ಥಾತ್: ಬ್ರಹ್ಮನಿಂದ ಆದ ರಾಜರ ಸೃಷ್ಟಿ, ಅವರ ಭೂತ, ಭವಿಷ್ಯ ಮತ್ತು ವರ್ತಮಾನ ಕಾಲದ ಸಂತಾನಪರಂಪರೆಯನ್ನು “ವಂಶ” ಎಂದು ಹೇಳುತ್ತಾರೆ. ಆ ರಾಜರ ಮತ್ತು ಅವರ ವಂಶದವರ ಚರಿತ್ರೆಗಳನ್ನು ವಂಶಾನುಚರಿತ ಎನ್ನುತ್ತಾರೆ.
- ಸಂಸ್ಥಾ: ನೈಮಿತ್ತಿಕಃ ಪ್ರಾಕೃತಿಕೋ ನಿತ್ಯ ಆತ್ಯಂತಿಕೋ ಲಯಃ । ಸಂಸ್ಥೇತಿ ಕವಿಭಿಃ ಪ್ರೋಕ್ತಶ್ಚತುರ್ಧಾಸ್ಯ ಸ್ವಭಾವತಃ ।। ಅರ್ಥಾತ್: ಈ ವಿಶ್ವ ಬ್ರಹ್ಮಾಂಡವು ಸ್ವಾಭಾವಿಕವಾಗಿಯೇ ಪ್ರಳಯವಾಗುತ್ತದೆ. ಆ ಪ್ರಳಯಗಳಲ್ಲಿ ನೈಮಿತ್ತಿಕ, ಪ್ರಾಕೃತಿಕ, ನಿತ್ಯ ಮತ್ತು ಆತ್ಯಂತಿಕ ಎಂಬ ನಾಲ್ಕು ಭೇದಗಳಿವೆ. ವಿದ್ವಾಂಸರು ಇದನ್ನು ಸಂಸ್ಥಾ ಎನ್ನುತ್ತಾರೆ.
- ಹೇತು: ಹೇತುರ್ಜೀವೋಽಸ್ಯ ಸರ್ಗಾದೇರವಿದ್ಯಾಕರ್ಮಕಾರಕಃ । ಯಂ ಚಾನುಶಾಯಿನಂ ಪ್ರಾಹುರವ್ಯಾಕೃತಮುತಾಪರೇ ।। ಅರ್ಥಾತ್: ಸರ್ಗ-ವಿಸರ್ಗ ಮೊದಲಾದವುಗಳಿಗೆ ಕಾರಣವಾದ ಜೀವನನ್ನೇ ಪುರಾಣಲಕ್ಷಣಗಳಲ್ಲಿ ಹೇತು ಎನ್ನುತ್ತಾರೆ. ಅಜ್ಞಾನವಶದಿಂದ ಅನೇಕ ಕರ್ಮಕಲಾಪಗಳಲ್ಲಿ ಸಿಲುಕಿ ಅಲೆದಾಡುತ್ತಿರುವ ಜೀವವೇ ಈ ಪ್ರಪಂಚ ಸೃಷ್ಟಿಗೆ ಹೇತು (ಕಾರಣ) ವಾಗಿದೆ. ಜೀವಾತ್ಮರಿಗೆ ಕರ್ಮಫಲಗಳನ್ನು ಅನುಭವಿಸಲಿಕ್ಕಾಗಿಯೇ ಪ್ರಪಂಚದ ಸೃಷ್ಟಿಯಾಗಿದೆ. ಸೃಷ್ಟಿಯ ಮೊದಲು ಜೀವಿಗಳಿಗೆ ದೇವ-ಮನುಷ್ಯಾದಿ ನಾಮರೂಪ ವಿಭಾಗವಿರುವುದಿಲ್ಲ. ಅವು ತಾವು ಹಿಂದೆ ಅನುಭವಿಸಿ ಮಿಕ್ಕಿರುವ ಕರ್ಮವಾಸನೆಯಿಂದ ಮಾತ್ರ ಕೂಡಿರುತ್ತವೆ. ಹಾಗೆ ಕರ್ಮವಾಸನೆಗಳಿಂದ ಕೂಡಿದ ಜೀವವೇ ಸೃಷ್ಟಿಗೆ ಕಾರಣವಾಗುವುದರಿಂದ ಜೀವಗಳು ಹೇತು ಎನಿಸಿಕೊಳ್ಳುತ್ತವೆ. ಇಂತಹ ಜೀವನನ್ನೇ ಕೆಲವರು “ಅನುಶಯಿ” ಎಂದೂ ಕೆಲವರು “ಅವ್ಯಾಕೃತ” ಎಂದೂ ಕರೆಯುತ್ತಾರೆ. ಪ್ರಕೃತಿಯಲ್ಲಿ ಶಯನಮಾಡುವ ಚೈತನ್ಯವಾದುದರಿಂದ ಇವನು ಅನುಶಯಿ. ನಾಮರೂಪಗಳಿಗೆ ಒಳಪಡದೇ ಪ್ರಕೃತಿಯಲ್ಲಿ ಬೆರೆತಿರುವಾಗ ಈತನೇ ಅವ್ಯಾಕೃತ ಎನಿಸಿಕೊಳ್ಳುತ್ತಾನೆ.
- ಅಪಾಶ್ರಯ: ವ್ಯತಿರೇಕಾನ್ವಯೋ ಯಸ್ಯ ಜಾಗ್ರತ್ಸ್ವಪ್ನಸುಷುಪ್ತಿಷು । ಮಾಯಾಮಯೇಷು ತದ್ಬ್ರಹ್ಮ ಜೀವವೃತ್ತಿಷ್ವಪಾಶ್ರಯಃ ।। ಅರ್ಥಾತ್: ಜೀವಿಯ ವೃತ್ತಿಗಳಲ್ಲಿ ಜಾಗ್ರತ, ಸ್ವಪ್ನ, ಸುಷುಪ್ತಿಗಳೆಂಬ ಮೂರು ವಿಭಾಗಗಳಿವೆ. ಯಾರು ಈ ಅವಸ್ಥೆಗಳಲ್ಲಿ ಇವುಗಳ ಅಭಿಮಾನಿ ವಿಶ್ವ, ತೈಜಸ ಮತ್ತು ಪ್ರಾಜ್ಞ ಈ ರೂಪಗಳಲ್ಲಿ ಮಾಯೆಯಿಂದ ಕಂಡುಬರುತ್ತಾನೋ, ಈ ಅವಸ್ಥೆಗಳಿಂದ ಪರನಾದ ತುರೀಯತತ್ತ್ವದ ರೂಪದಲ್ಲಿಯೂ ಲಕ್ಷಿತನಾಗುತ್ತಾನೋ ಆ ಬ್ರಹ್ಮವಸ್ತುವನ್ನೇ ಇಲ್ಲಿ ಅಪಾಶ್ರಯ ಎಂದು ಹೇಳಲಾಗಿದೆ.
ಪದಾರ್ಥೇಷು ಯಥಾ ದ್ರವ್ಯಂ ಸನ್ಮಾತ್ರಂ ರೂಪನಾಮಸು । ಬೀಜಾದಿಪಂಚತಾಂತಾಸು ಹ್ಯವಸ್ಥಾಸು ಯುತಾಯುತಮ್ ।। ಅರ್ಥಾತ್: ಹೇಗೆ ಬೀಜದಿಂದ ಹಿಡಿದು ನಾಶದವರೆಗೆ ಎಲ್ಲ ಅವಸ್ಥೆಗಳಲ್ಲಿ ನಾನಾ ರೂಪಗಳಲ್ಲಿ ಸತ್ ರೂಪೀ ದ್ರವ್ಯವೇ ಇದೆಯೋ, ಹಾಗೆಯೇ ಈ ವಿಶ್ವದ ಸೃಷ್ಟಿಯಿಂದ ಪ್ರಳಯದವರೆಗಿನ ಎಲ್ಲ ಅವಸ್ಥೆಗಳಲ್ಲಿ ಪರಮಾತ್ಮ ತತ್ತ್ವವೇ ಇರುವುದು ಮತ್ತು ಅದರಿಂದ ಅತೀತವೂ ಆಗಿರುವುದು. ಅದನ್ನೇ ಆಶ್ರಯತತ್ತ್ವವೆಂದು ಹೇಳುತ್ತಾರೆ.
ವಿರಮೇತ ಯದಾ ಚಿತ್ತಂ ಹಿತ್ವಾ ವೃತ್ತಿತ್ರಯಂ ಸ್ವಯಮ್ । ಯೋಗೇನ ವಾ ತದಾತ್ಮಾನಂ ವೇದೇಹಾಯಾ ನಿವರ್ತತೇ ।। ಅರ್ಥಾತ್: ಚಿತ್ತವು ಆತ್ಮವಿಚಾರದಲ್ಲಿ ಅಥವಾ ಯೋಗಾಭ್ಯಾಸದ ಮೂಲಕ ತ್ರಿಗುಣ ಸಂಬಂಧಿ ವ್ಯಾವಹಾರಿಕ ವೃತ್ತಿಗಳನ್ನು ಮತ್ತು ಜಾಗ್ರತ್, ಸ್ವಪ್ನ ಮೊದಲಾದ ಸ್ವಾಭಾವಿಕ ವೃತ್ತಿಗಳನ್ನು ತ್ಯಜಿಸಿ ಉಪರಾಮವಾದಾಗ ಶಾಂತವೃತ್ತಿಯಲ್ಲಿ “ತತ್ತ್ವಮಸಿ” ಮೊದಲಾದ ಮಹಾವಾಕ್ಯಗಳಲ್ಲಿ ಹೇಳಿರುವ ಆತ್ಮಜ್ಞಾನದ ಉದಯವಾಗುತ್ತದೆ. ಆಗ ಆತ್ಮವೇತ್ತನಾದ ಪುರುಷನು ಅಜ್ಞಾನಜನಿತ ಕರ್ಮವಾಸನೆ ಹಾಗೂ ಕರ್ಮಪರ್ವೃತ್ತಿಗಳಿಂದ ನಿವೃತ್ತನಾಗುತ್ತಾನೆ.
18 ಮಹಾಪುರಾಣಗಳು
ಇಲ್ಲಿ ವಾಯುಪುರಾಣವನ್ನೂ ಸೇರಿಸಿ 19 ಮಹಾಪುರಾಣಗಳ ಕುರಿತು ಕೊಟ್ಟಿದ್ದೇನೆ.
- ಬ್ರಹ್ಮಮಹಾಪುರಾಣ
- ಪದ್ಮಮಹಾಪುರಾಣ
- ವಿಷ್ಣುಪುರಾಣ
- ಶಿವಮಹಾಪುರಾಣ
- ಶ್ರೀಮದ್ಭಾಗವತಮಹಾಪುರಾಣ
- ನಾರದೀಯಮಹಾಪುರಾಣ
- ಮಾರ್ಕಂಡೇಯ ಪುರಾಣ
- ಅಗ್ನಿ ಪುರಾಣ
- ಭವಿಷ್ಯಮಹಾಪುರಾಣ
- ಶ್ರೀಬ್ರಹ್ಮವೈವರ್ತಮಹಾಪುರಾಣ
- ಶ್ರೀಲಿಂಗಮಹಾಪುರಾಣ
- ಶ್ರೀವರಾಹಮಹಾಪುರಾಣ
- ಸ್ಕಂದಪುರಾಣ
- ವಾಮನಪುರಾಣ
- ಕೂರ್ಮಪುರಾಣ
- ಮತ್ಸ್ಯಮಹಾಪುರಾಣ
- ಶ್ರೀಗರುಡಮಹಾಪುರಾಣ
- ಬ್ರಹ್ಮಾಂಡಪುರಾಣ
- ವಾಯುಪುರಾಣ
___________
[1] ಕಲ್ಪ ಮತ್ತು ಮನ್ವಂತರಗಳ ಕುರಿತು ಅನುಬಂಧ 2ನ್ನು ನೋಡಿ.
[2] ಪುರಾಣಂ ಸರ್ವಶಾಸ್ತ್ರಾಣಾಂ ಪ್ರಥಮಂ ಬ್ರಹ್ಮಣಾ ಸ್ಮೃತಮ್ । ಅನಂತರಂ ಚ ವಕ್ತ್ರೇಭ್ಯೋ ವೇದಸ್ತಸ್ಯ ವಿನಿರ್ಗತಾಃ ।। (ಮತ್ಸ್ಯಪುರಾಣ, 53.3)
[3] ಶ್ರೀಮದ್ವಾಯುಮಹಾಪುರಾಣದಲ್ಲಿಯೂ ಇದೇ ಅರ್ಥವನ್ನು ಕೊಡುವ ಶ್ಲೋಕವಿದೆ: ಪ್ರಥಮಂ ಸರ್ವಶಾಸ್ತ್ರಾಣಾಂ ಪುರಾಣಂ ಬ್ರಹ್ಮಸಮ್ಮತಮ್ । ಅನಂತರಂ ಚ ವಕ್ತ್ರೇಭ್ಯೋ ವೇದಾಸ್ತಸ್ಯ ವಿನಿಃಸೃತಾಃ ।। (ಅಧ್ಯಾಯ 1, ಶ್ಲೋಕ 57).
[4] ನಿರ್ದಗ್ಧೇಷು ಚ ಲೋಕೇಷು ವಾಜಿರೂಪೇಣ ವೈ ಮಯಾ । ಅಂಗಾನಿ ಚತುರೋ ವೇದಾನ್ ಪುರಾಣಂ ನ್ಯಾಯವಿಸ್ತರಮ್ ।। ಮೀಮಾಂಸಾಂ ಧರ್ಮಶಾಸ್ತ್ರಂ ಚ ಪರಿಗೃಹ್ಯ ಮಯಾ ಕೃತಮ್ । ಮತ್ಸ್ಯರೂಪೇಣ ಚ ಪುನಃ ಕಲ್ಪಾದಾವುದಕಾರ್ಣವೇ ।। ಅಶೇಷಮೇತತ್ಕಥಿತಮುದಾಂತರ್ಗತೇನ ಚ । ಶ್ರುತ್ವಾ ಜಗಾದ ಚ ಮುನೀನ್ ಪ್ರತಿ ದೇವಾಂಶ್ಚತುರ್ಮುಖಃ ।। (ಮತ್ಸ್ಯಪುರಾಣ 53.5-7)
[5] ಆಖ್ಯಾನೈಶ್ಚಾಪ್ಯುಖ್ಯಾನೈರ್ರ್ಗಾಥಾಭಿಃ ಕಲ್ಪಶುದ್ಧಿಭಿಃ । ಪುರಾಣಸಂಹಿತಾಂ ಚಕ್ರೇ ಪುರಾಣಾರ್ಥವಿಶಾರದಃ ।। ಪ್ರಖ್ಯಾತೋ ವ್ಯಾಸಶಿಷ್ಯೋಽಭೂತ್ ಸೂತೋ ವೈ ಲೋಮಹರ್ಷಣಃ । ಪುರಾಣಸಂಹಿತಾಂ ತಸ್ಮೈ ದದೌ ವ್ಯಾಸೋ ಮಹಾಮುನಿಃ ।। (ವಿಷ್ಣುಪುರಾಣ, ಅಂಶ 3, ಅಧ್ಯಾಯ 6, ಶ್ಲೋಕ 15-16)
[6] ಪುರಾಣಮೇಕಮೇವಾಸೀತ್ತದಾ ಕಲ್ಪಾಂತರೇಽನಘ । ತ್ರಿವರ್ಗಸಾಧನಂ ಪುಣ್ಯಂ ಶತಕೋಟಿಪ್ರವಿಸ್ತರಮ್ ।। (ಮತ್ಸ್ಯಪುರಾಣ, 53.4)
[7] ಪ್ರವೃತ್ತಿಃ ಸರ್ವಶಾಸ್ತ್ರಾಣಾಂ ಪುರಾಣಸ್ಯಾಭವತ್ತತಃ । ಕಾಲೇನಾಗ್ರಹಣಂ ದೃಷ್ಟ್ವಾ ಪುರಾಣಸ್ಯ ತತೋ ನೃಪ ।। ವ್ಯಾಸರೂಪಮಹಂ ಕೃತ್ವಾ ಸಂಹರಾಮಿ ಯುಗೇ ಯುಗೇ । ಚತುರ್ಲಕ್ಷಪ್ರಮಾಣೇನ ದ್ವಾಪರೇ ದ್ವಾಪರೇ ಸದಾ ।। ತಥಾಷ್ಟಾದಶಧಾ ಕೃತ್ವಾ ಭೂರ್ಲೋಕೇಽಸ್ಮಿನ್ಪ್ರಕಾಶ್ಯತೇ । ಅದ್ಯಾಪಿ ದೇವಲೋಕೇಽಸ್ಮಿಂ-ಶತಕೋಟಿಪ್ರವಿಸ್ತರಮ್ ।। (ಮತ್ಸ್ಯಪುರಾಣ, 53.8-10)
[8] ಆದ್ಯಂ ಸರ್ವ ಪುರಾಣಾನಾಂ ಪುರಾಣಂ ಬ್ರಾಹ್ಮಮುಚ್ಯತೇ । ಅಷ್ಟಾದಶ ಪುರಾಣಾನಿ ಪುರಾಣಜ್ಞಾಃ ಪ್ರಚಕ್ಷತೇ ।। ಬ್ರಾಹ್ಮಂ ಪಾದ್ಮ್ಯಂ ವೈಷ್ಣವಂ ಚ ಶೈವಂ ಭಾಗವತಂ ತಥಾ । ತಥಾನ್ಯಂ ನಾರದೀಯಂ ಚ ಮಾರ್ಕಂಡೇ-ಯಂ ಚ ಸಪ್ತಮಮ್ ।। ಆಗ್ನೇಯಮಷ್ಟಮಂ ಚೈವ ಭವಿಷ್ಯಂ ನವಮಂ ತಥಾ । ದಶಮಂ ಬ್ರಹ್ಮವೈವರ್ತಂ ಲೈಂಗಮೇಕಾದಶಂ ಸ್ಮೃತಮ್ ।। ವಾರಾಹಂ ದ್ವಾದಶಂ ಚೈವ ಸ್ಕಾಂದಂ ಚಾತ್ರ ತ್ರಯೋದಶಮ್ । ಚತುರ್ದಶಂ ವಾಮನಂ ಚ ಕೌರ್ಮಂ ಪಂಚದಶಂ ಸ್ಮೃತಮ್ । ಮಾತ್ಸ್ಯಂ ಚ ಗಾರುಡಂ ಚೈವ ಬ್ರಹ್ಮಾಂಡಂ ಚ ತತಃ ಪರಮ್ ।। (ವಿಷ್ಣುಪುರಾಣ ಅಂಶ 3, ಅಧ್ಯಾಯ 6, ಶ್ಲೋಕ 20-23)
[9] ಬ್ರಾಹ್ಮಂ ಪಾದ್ಮಂ ವೈಷ್ಣವಂ ಚ ಶೈವಂ ಲೈಂಗಂ ಸಗಾರುಡಂ । ನಾರದೀಯಂ ಭಾಗವತಮಾಗ್ನೇಯಂ ಸ್ಕಾಂದಸಂಜ್ಞಿತಮ್ ।। ಭವಿಷ್ಯಂ ಬ್ರಹ್ಮವೈವರ್ತಂ ಮಾರ್ಕಂಡೇಯಂ ಸವಾಮನಮ್ । ವಾರಾಹಂ ಮಾತ್ಸ್ಯಂ ಕೌರ್ಮಂ ಚ ಬ್ರಹ್ಮಾಂಡಾಖ್ಯಮಿತಿ ತ್ರಿಷಟ್ ।। (ಭಾಗವತಮಹಾಪುರಾಣ 12ನೇ ಸ್ಕಂಧ, 7ನೇ ಅಧ್ಯಾಯ, ಶ್ಲೋಕ 23-24)
[10] ಪುರಾಣಮೇಕಮೇವಾಸೀತ್ಸರ್ವಕಲ್ಪೇಷು ಮಾನದ । ಚತುರ್ವರ್ಗಸ್ಯ ಬೀಜಂ ಚ ಶತಕೋಟಿಪ್ರವಿಸ್ತರಮ್ ।। 22 ।। ಪ್ರವೃತ್ತಿಃ ಸರ್ವಶಾಸ್ತ್ರಾಣಾಂ ಪುರಾಣಾದಭ-ವತ್ತತಃ । ಕಾಲೇನಾಗ್ರಹಣಂ ದೃಷ್ಟ್ವಾ ಪುರಾಮಸ್ಯ ಮಹಾಮತಿಃ ।। 23 ।। ಹರಿರ್ವ್ಯಾಸಸ್ವರೂಪೇಣ ಜಾಯತೇ ಚ ಯುಗೇ ಯುಗೇ । ಚತುರ್ಲಕ್ಷಪ್ರಮಾಣೇನ ದ್ವಾಪರೇ ದ್ವಾಪರೇ ಸದಾ ।। 24 ।। ತದಷ್ಟಾದಶಧಾ ಕೃತ್ವಾ ಭೂರ್ಲೋಕೇ ನಿರ್ದ್ದಿಶತ್ಯಪಿ । ಅದ್ಯಾಪಿ ದೇವಲೋಕೇ ತು ಶತಕೋಟಿಪ್ರವಿಸ್ತರಮ್ ।। 25 ।। ಅಸ್ತ್ಯೇವ ತಸ್ಯ ಸಾರಸ್ತು ಚತುರ್ಲಕ್ಷೇಣ ವರ್ಣ್ಯತೇ । ಬ್ರಾಹ್ಮಂ ಪಾದ್ಮಂ ವೈಷ್ಣವಂ ಚ ವಾಯವೀಯಂ ತಥೈವ ಚ ।। 26 ।। ಭಾಗವತಂ ನಾರದೀಯಂ ಮಾರ್ಕಂಡೇಯಂ ಚ ಕೀರ್ತಿತಮ್ । ಆಗ್ನೇಯಂ ಚ ಭವಿಷ್ಯಂ ಚ ಬ್ರಹ್ಮವೈವರ್ತ್ತಲಿಂಗಕೇ ।। 27 ।। ವಾರಾಹಂ ಚ ತಥಾ ಸ್ಕಾಂದಂ ವಾಮನಂ ಕೂರ್ಮಸಂಜ್ಞಕಮ್ । ಮಾತ್ಸ್ಯಂ ಚ ಗಾರುಡಂ ತದ್ವದ್ಬ್ರಹ್ಮಾಣಾಖ್ಯಮಿತಿ ತ್ರಿಷಟ್ ।। 28 ।। (ನಾರದೀಯಪುರಾಣ ಪೂರ್ವಭಾಗ ಚತುರ್ಥಪಾದ ಬ್ರಾಹ್ಮಪುರಾಣೇತಿಹಾಸಕಥನ, ಅಧ್ಯಾಯ 92, ಶ್ಲೋಕ 22-28)
[11] ಮುಖ್ಯಂ ಪುರಾಣಂ ಹಿ ಕಲೌ ನೃಣಾಂ ಚ ಶ್ರೇಯಸ್ಕರಂ ಭಾಗವತಂ ಪುರಾಣಮ್ ।। 43 ।। ಪೂರ್ವಂ ಹಿ ಸೃಷ್ಟಿಃ ಪ್ರತಿಪಾದ್ಯತೇ ತ್ರ ಯತೋ ಹ್ಯತೋ ಭಾಗವತಂ ಪರಂ ಸ್ಮೃತಮ್ । ಯಸ್ಮಿನ್ಪುರಾಣೇ ಕಥಯಂತಿ ಸೃಷ್ಟಿಂ ಹ್ಯಾದೌ ವಿಷ್ಣೋರ್ಬ್ರಹ್ಮರುದ್ರಾದಿಕಾನಾಮ್ ।। 44 ।। ನಾನಾರ್ಥಮೇವಂ ಕಥಯಂತಿ ವಿಪ್ರ ನೀಚೋಚ್ಚರೂಪಂ ಜ್ಞಾನಮಾಹುರ್ಮಹಾಂತಃ । ತೇನೈವ ಸಿದ್ಧಂ ಪ್ರವದಂತಿ ಸರ್ವಂ ಹ್ಯತಃ ಪರಂ ಭಾಗವತಂ ಪುರಾಣಮ್ ।। 45 ।। ತತಃ ಪರಂ ವಿಷ್ಣುಪುರಾಣಮಾಹುಸ್ತತಃ ಪರಂ ಗಾರುಡಸಂಜ್ಞಕಂ ಚ । ತ್ರೀಣ್ಯೇವ ಮುಖ್ಯಾ ನಿ ಕಲೌ ನೃಣಾಂ ತು ತಥಾ ವಿಶೇಷೋ ಗಾರುಡೇ ಕಿಂಚಿದಸ್ತಿ ।। 46 ।। ಶೃಣುಧ್ವಂ ವೈ ತಂ ವಿಶೇಷಂ ಚ ವಿಪ್ರಾಸ್ತ್ರ್ಯಂಶೈರ್ಯುಕ್ತಂ ಗಾರುಡಾಖ್ಯಂ ಪುರಾಣಮ್ । ಆದ್ಯಾಂಶಂ ವೈ ಕರ್ಮಕಾಂಡಂ ವದಂತಿ ದ್ವಿತೀಯಾಂಶಂ ಧರ್ಮಕಾಂಡಂ ತಮಾಹುಃ ।। 47 ।। ತೃತೀಯಾಂಶಂ ಬ್ರಹ್ಮಕಾಂಡಂ ವದಂತಿ ತೇಷಾಂ ಮಧ್ಯೇ ತ್ವಂತಿಮೋಯಂ ವರಿಷ್ಠಃ । ತೃತೀಯಾಂಶಶ್ರವಣಾತ್ಪುಣ್ಯಮಾಹುಸ್ತುಲ್ಯಂ ಪುಣ್ಯಂ ಭಾಗವತಸ್ಯ ವಿಪ್ರಾಃ ।। 48 ।। ತೃತೀಯಾಂಶೇ ಪಠಿತೇ ವೇದತುಲ್ಯಂ ಫಲಂ ಭವೇನ್ನಾತ್ರ ವಿಚಾರ್ಯಮಸ್ತಿ । ತೃತೀಯಾಂಶಶ್ರವಣಾದೇವ ವಿಪ್ರಾಃ ಫಲಂ ಪ್ರೋಕ್ತಂ ಪಠತೋಪ್ಯರ್ಥಮೇವಮ್ ।। 49 ।। ತೃತೀಯಾಂಶಶ್ರವಣಾದರ್ಥತಶ್ಚ ಪುಣ್ಯಂ ಚಾಹುಃ ಪಠತೋ ವೈ ದಶಾಂಶಮ್ । ತತೋ ವರಂ ಮತ್ಸ್ಯಪುರಾಣಮಾಹುಸ್ತತೋ ವರಂ ಕೂರ್ಮಪೂರಾಣಮಾಹುಃ ।। 50 ।। ತಥೈವ ವೈ ವಾಯುಪುರಾಣಮಾಹುಸ್ತ್ರೀಣ್ಯೇವ ಚಾಹುಃ ಸಾತ್ತ್ವಿಕಾನೀತಿ ಲೋಕೇ । ತತ್ರಾಪಿ ಕಿಂಚಿದ್ವೇದಿತವ್ಯಂ ಭವೇಚ್ಚ ಪುರಾಣಷಟ್ಕೇ ಸತ್ತ್ವರೂಪೇ ಮುನೀಂದ್ರಾಃ ।। 51 ।। ಸತ್ತ್ವಾಧಮೇ ಮಾತ್ಸ್ಯಕೌರ್ಮೇ ತಥಾಹುರ್ವಾಯು ಚಾಹುಃ ಸಾತ್ತ್ವಿಕಂ ಮಧ್ಯಮಂ ಚ । ವಿಷ್ಣೋಃ ಪುರಾಣಂ ಭಾಗವತಂ ಪುರಾಣಂ ಸತ್ತ್ವೋತ್ತಮಂ ಗಾರುಡಂ ಚಾಹುರಾರ್ಯಾಃ ।। 52 ।। ಸ್ಕಾಂದಂ ಪಾದ್ಮಂ ವಾಮನಂ ವೈ ವರಾಹಂ ತಥಾಗ್ರೇಯಂ ಭವಿಷ್ಯಂ ಪರ್ವಸೃಷ್ಟೌ । ಏತಾನ್ಯಾಹೂ ರಾಜಸಾನೀತಿ ವಿಪ್ರಾಸ್ತತ್ರೈಕದೇಶಃ ಸಾತ್ತ್ವಿಕಸ್ತಾಮಸಶ್ಚ ।। 53 ।। ರಜಃ ಪ್ರಾಚುರ್ಯಾದ್ರಾಜಸಾನೀತಿ ಚ ಹುಃ ಶ್ರಾವ್ಯಾಣಿ ನೈತಾನಿ ಮುಮುಕ್ಷುಭಿಃ ಸದಾ । ತೇಷಾಂ ಮಧ್ಯೇ ಸಾತ್ತ್ವಿಕಾಂಶಾಶ್ಚ ಸಂತಿ ತೇಷಾಂ ಶ್ರುತೇರ್ಗಾರುಡೀಯಂ ಫಲಂ ಚ ।। 54 ।। ಬ್ರಹ್ಮಾಂಡಲೈಂಗ್ಯೇ ಬ್ರಹ್ಮವೈವರ್ತಕಂ ವೈ ಮಾರ್ಕಂಡೇಯಂ ಬ್ರಾಹ್ಮಮಾದಿತ್ಯಕಂ ಚ । ಏತಾನ್ಯಾ ಹುಸ್ತಾಮಸಾನೀತಿ ವಿಪ್ರಾಸ್ತತ್ರೈಕದೇಶಃ ಸಾತ್ತ್ವಿಕೋ ರಾಜಸಶ್ಚ ।। 55 ।।
[12] ಆದಿತ್ಯ ಪುರಾಣವು ಮಹಾಪುರಾಣಗಳ ಪಟ್ಟಿಯಲ್ಲಿಲ್ಲ ಎನ್ನುವುದನ್ನು ಗಮನಿಸಬೇಕು.
[13] ಅವ್ಯಾಕೃತಗುಣಕ್ಷೋಭಾನ್ಮಹತಸ್ತ್ರಿವೃತೋಽಹಮಃ । ಭೂತಸೂಕ್ಷ್ಮೇಂದ್ರಿಯಾರ್ಥಾನಾಂ ಸಂಭವಃ ಸರ್ಗ ಉಚ್ಯತೇ ।।
[14] ಪುರುಷಾನುಗೃಹೀತಾನಾಮೇತೇಷಾಂ ವಾಸನಾಮಯಃ । ವಿಸರ್ಗೋಽಯಂ ಸಮಾಹಾರೋ ಬೀಜಾದ್ಬೀಜಂ ಚರಾಚರಮ್ ।।