ಈಶಾವಾಸ್ಯೋಪನಿಷತ್ತು

ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ । ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ।। ಓಂ ಶಾಂತಿಃ ಶಾಂತಿಃ ಶಾಂತಿಃ ।।

[ಆಧಾರಗ್ರಂಥ: ಸ್ವಾಮಿ ಆದಿದೇವಾನಂದ, ಈಶಾವಾಸ್ಯೋಪನಿಷತ್, ಶ್ರೀರಾಮಕೃಷ್ಣ ಆಶ್ರಮ, ಮೈಸೂರು, 1965]

ಈ ಉಪನಿಷತ್ತಿನ ಮೊದಲನೆಯ ಮಂತ್ರವು “ಈಶಾ ವಾಸ್ಯಮ್” ಎಂದು ಪ್ರಾರಂಭವಾಗುವುದರಿಂದ ಇದಕ್ಕೆ “ಈಶಾವಾಸ್ಯೋಪನಿಷತ್” ಅಥವಾ “ಈಶೋಪನಿಷತ್” ಎಂಬ ಹೆಸರು. ಇದು ಶುಕ್ಲಯಜುರ್ವೇದದ ವಾಜಸನೇಯ ಸಂಹಿತೆಗೆ (ಅಧ್ಯಾಯ 40) ಸೇರಿದುದರಿಂದ ಇದನ್ನು “ವಾಜಸನೇಯಸಂಹಿತೋಪನಿಷತ್” ಎಂದೂ ಕರೆಯುವುದುಂಟು.

ಒಟ್ಟು 18 ಮಂತ್ರಗಳನ್ನು ಹೊಂದಿದ ಒಂದು ಚಿಕ್ಕ ಉಪನಿಷತ್ತು. ಶಾಂಕರಭಾಷ್ಯದ ಪ್ರಕಾರ ಈ ಮಂತ್ರಗಳ ವಿಶ್ಲೇಷಣೆಯು ಹೀಗಿದೆ: ಈಶಾವಾಸ್ಯೋಪನಿಷತ್ತಿನ ಎಳು ಮಂತ್ರಗಳು (1 ಮತ್ತು 3-8) ಪರಬ್ರಹ್ಮನ ಸ್ವರೂಪವನ್ನು ನಿರೂಪಿಸುತ್ತವೆ. ಇತರ ಮಂತ್ರಗಳು ಆತ್ಮನನ್ನು ಅರಿಯದ ಅಜ್ಞಾನಿಗಳಿಗೆ ಅನ್ವಯಿಸುತ್ತವೆ. ಇವರು ದೃಷ್ಟಾದೃಷ್ಟಭೋಗಗಳನ್ನು ಹೊಂದಬೇಕೆಂಬ ಆಸೆಯಿಂದ ಸಂಸಾರದಲ್ಲಿ ಆಸಕ್ತರಾಗಿ ಯಜ್ಞಯಾಗಗಳ ಅನುಷ್ಠಾನದಲ್ಲಿ ಅಥವಾ ದೇವತೆಗಳ ಉಪಾಸನೆಯಲ್ಲಿ ನಿರತರಾಗಿರುತ್ತಾರೆ. ಮೊದಲನೆಯ ಮಂತ್ರವು ಆತ್ಮನ ಅದ್ವೈತರೂಪವನ್ನು ನಿರೂಪಿಸಿ ಆತ್ಮನಲ್ಲಿ ಅದ್ಧ್ಯಸ್ತವಾಗಿರುವ ಕರ್ತೃತ್ವಭೋಕ್ತೃತ್ವಾದಿ ಲಕ್ಷಣಗಳಿಂದ ಕೂಡಿದ ದ್ವೈತರೂಪವಾದ ಜಗತ್ತು ಮಿಥ್ಯೆಯೆಂದು ಉಪದೇಶಿಸುತ್ತದೆ.[1] ಇಂತರ ಆತ್ಮನನ್ನು ಅರಿತುಕೊಳ್ಳಲು ಶಕ್ತಿಯಿಲ್ಲದವನಿಗೆ ಎರಡನೆ ಮಂತ್ರವು ಕರ್ಮನಿಷ್ಠೆಯನ್ನು ಉಪದೇಶಿಸುತ್ತದೆ.[2] ಮೂರನೆಯ ಮಂತ್ರವು ಅಜ್ಞಾನಿಗಳನ್ನು ನಿಂದಿಸುತ್ತದೆ. ನಾಲ್ಕನೇ ಮತ್ತು ಐದನೇ ಮಂತ್ರಗಳು ಆತ್ಮತತ್ತ್ವವನ್ನು ವರ್ಣಿಸುತ್ತವೆ.[3] ಶುದ್ಧವಾದ ಒಂದೇ ಆತ್ಮತತ್ತ್ವವನ್ನು ಕಾಣುವವನಿಗೆ ನಿಂದಿಸಲು ಕಾರಣವಾದ ಬೇರೆ ಯಾವ ವಸ್ತುವೂ ಇರುವುದಿಲ್ಲ. ಅನುಭವಸಿದ್ಧವಾದ ಮಾತನ್ನೇ ಇಲ್ಲಿ ಶ್ರುತಿಯು ಹೇಳಿದೆ ಎನ್ನುವುದು ಆರನೇ ಮತ್ತು ಏಳನೇ ಮಂತ್ರಗಳ ಅರ್ಥ.[4] ಎಂಟನೇ ಮಂತ್ರವು ಪರಬ್ರಹ್ಮದ ಸ್ವರೂಪವನ್ನು ವರ್ಣಿಸುತ್ತದೆ.[5] ನಂತರದ ಮೂರು (9-11) ಮಂತ್ರಗಳು ಅವಿದ್ಯೆ ಮತ್ತು ವಿದ್ಯೆಗಳ ಕುರಿತು ಹೇಳುತ್ತವೆ: ಅವಿದ್ಯೆಯೆಂದರೆ ಅಗ್ನಿಹೋತ್ರಾದಿ ವೈದಿಕ ಕರ್ಮಗಳು. ವಿದ್ಯೆಯೆಂದರೆ ಕರ್ಮವಿಹೀನವಾದ ದೇವತಾವಿಷಯಕ ಜ್ಞಾನ. ಅವಿದ್ಯೋಪಾಸನೆಯ ಮೂಲಕ ಪಿತೃಲೋಕವನ್ನೂ ವಿದ್ಯೋಪಾಸನೆಯ ಮೂಲಕ ದೇವಲೋಕವನ್ನೂ ಕರ್ಮೋಪಾಸಕರು ಪಡೆಯುತ್ತಾರೆ. ಅಮೃತತ್ವವನ್ನು ಪಡೆಯಲು ಕರ್ಮ-ಜ್ಞಾನಗಳ ಸಮುಚ್ಛಯವು ಸುಲಭಸಾಧನವೆಂದು ಹನ್ನೊಂದನೇ ಮಂತ್ರವು ಹೇಳುತ್ತದೆ. ಮುಂದಿನ ಮೂರು (12-14) ಮಂತ್ರಗಳು ಪ್ರಕೃತಿ ಮತ್ತು ಹಿರಣ್ಯಗರ್ಭರ ಕುರಿತು ಹೇಳುತ್ತವೆ. ಆಸಂಭೂತಿ ಎಂದರೆ ಅವ್ಯಾಕೃತವೆಂಬ ಹೆಸರಿನ ಪ್ರಕೃತಿ. ಸಂಭೂತಿ ಎಂದರೆ ಹಿರಣ್ಯಗರ್ಭನೆಂಬ ಕಾರ್ಯಬ್ರಹ್ಮ. ಸಂಭೂತಿ-ಅಸಂಭೂತಿಗಳ ಧ್ಯಾನದ ಫಲಗಳು ಬೇರೆ ಬೇರೆಯಾಗಿರುವುದರಿಂದ ಈ ಎರಡು ಉಪಾಸನೆಗಳನ್ನೂ ಸೇರಿಸಿ ಮಾಡಬೇಕೆಂದು ಹದಿನಾಲ್ಕನೆಯ ಮಂತ್ರವು ಉಪದೇಶಿಸುತ್ತದೆ. ನಂತರದ ನಾಲ್ಕು (15-18) ಮಂತ್ರಗಳಲ್ಲಿ ಏಷಣಗಳನ್ನು ಬಿಡದೆ ಜನ್ಮದಿಂದ ಮರಣದವರೆಗೆ ಕರ್ಮಮಾರ್ಗದಲ್ಲಿ ಪ್ರವೃತ್ತನಾಗಿ ಅಪರಬ್ರಹ್ಮವನ್ನು ಉಪಾಸನೆ ಮಾಡುವ ಸಾಧಕನು ಯಾವ ಮಾರ್ಗದ ಮೂಲಕ ಅಮೃತತ್ವವನ್ನು ಹೊಂದುತ್ತಾನೆ ಎನ್ನುವುದನ್ನು ಹೇಳಿದೆ.

ನಿತ್ಯಕರ್ಮ-ಬ್ರಹ್ಮವಿದ್ಯೆಗಳಲ್ಲಿ ಯಾವುದೇ ಭೇದವನ್ನು ಕಲ್ಪಿಸದೇ ಸಮವಾಗಿ ಅನುಷ್ಠಾನಮಾಡುವುದೇ ಈಶಾವಾಸ್ಯೋಪನಿಷತ್ತಿನ ವಿಶೇಷ ಉಪದೇಶ. ಕಾಮ್ಯಕರ್ಮಗಳನ್ನು ತ್ಯಜಿಸಿ ಈಶ್ವರನ ಸೇವೆಗಾಗಿ ಮತ್ತು ಲೋಕಸಂಗ್ರಹಕ್ಕಾಗಿ ನಿತ್ಯಕರ್ಮಗಳನ್ನು ಮಾಡುತ್ತಾ ನೂರು ವರ್ಷ ಬಾಳಲು ಬಯಸಬೇಕು. ಉಪಾಸಕನು ಜ್ಞಾನಕ್ಕೆ ಸಹಾಯವಾಗುವ ಕರ್ಮಗಳನ್ನೇ ಮಾಡುವುದರಿಂದ ಕರ್ಮದ ಸ್ವಾಭಾವಿಕ ದೋಷಗಳು ಅವನಿಗೆ ಅಂಟುವುದಿಲ್ಲ. ಎಲ್ಲವೂ ಭಗವಂತನಿಗೆ ಸೇರಿದೆ ಎನ್ನುವ ಜ್ಞಾನದಿಂದ ನಿರ್ಮಮತ್ವವು ಸಿದ್ಧಿಸಿದರೆ ಶೋಕವೆಲ್ಲೆ? ಮೋಹವೆಲ್ಲಿ? ಇದು ಈ ಉಪನಿಷತ್ತಿನ ಸಾರ. 

[1] ಈಶಾ ವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ । ತೇನತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯ ಸ್ವಿದ್ಧನಮ್ ।। ಅರ್ಥಾತ್: ಈ ಜಗತ್ತಿನಲ್ಲಿ ಯಾವುದೆಲ್ಲಾ ಇದೆಯೋ ಅವೆಲ್ಲಾ ಈಶ್ವರನಿಂದ ತುಂಬಿದೆ. ಆದ್ದರಿಂದ ಅವನ್ನು ತ್ಯಜಿಸಿ ಸುಖಪಡು. ಯಾರ ಧನವನ್ನೂ ಆಶಿಸಬೇಡ.

[2] ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ । ಏವಂ ತ್ವಯಿ ನಾನ್ಯಥೇತೋಽಸ್ತಿ ನ ಕರ್ಮ ಲಿಪ್ಯತೇ ನರೇ ।। ಅರ್ಥಾತ್: ಈ ಲೋಕದಲ್ಲಿ ಅಗ್ನಿಹೋತ್ರಾದಿ ಕರ್ಮಗಳನ್ನು ಮಾಡುತ್ತಲೇ ನೂರು ವರ್ಷಗಳ ಕಾಲ ಬದುಕಿರುವುದಕ್ಕೆ ಇಚ್ಛಿಸು. ಮಾನವನಿಗೆ ಈ ಕರ್ಮಮಾರ್ಗವಲ್ಲದೇ ಬೇರೆ ಮಾರ್ಗವೇ ಇಲ್ಲ. ಇಂಥವನನ್ನು ಕರ್ಮಗಳು ಅಂಟಿಕೊಂಡು ಬಾಧಿಸುವುದಿಲ್ಲ.

[3] ಅನೇಜದೇಕಂ ಮನಸೋ ಜವೀಯೋ ನೈನದ್ದೇವಾ ಆಪ್ನುವನ್ಪೂರ್ವಮರ್ಷತ್ । ತದ್ಧಾವತೋ ನ್ಯಾನತ್ಯೇತಿ ತಿಷ್ಠತ್ತಸ್ಮಿನ್ನಪೋ ಮಾತರಿಶ್ವಾ ದಧಾತಿ ।। ಅರ್ಥಾತ್: ಆತ್ಮವು ಚಲಿಸದೇ ಇರುತ್ತದೆ. ಆದರೆ ಅದು ಮನಸ್ಸಿಗಿಂತಲೂ ವೇಗವುಳ್ಳದ್ದು. ಅದು ಮುಂದೆ ಓಡುತ್ತಿದ್ದರೂ ದೇವತೆಗಳು ಅದನ್ನು ಹಿಮ್ಮೆಟ್ಟಿಸಲಾರರು. ಅದು ಕುಳಿತೇ ಇದ್ದರೂ, ಅದು ಓಡುತ್ತಾ ತನ್ನನ್ನು ಹಿಂಬಾಲಿಸುವವರನ್ನು ಮೀರಿ ಮುಂದಕ್ಕೆ ಓಡುತ್ತದೆ. ಅದರಲ್ಲಿ ಮಾತರಿಶ್ವನು ಎಲ್ಲಾ ಜೀವಿಗಳ ಕರ್ಮಗಳನ್ನು ಆಧರಿಸುತ್ತಾನೆ. ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ । ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ ।। ಅರ್ಥಾತ್: ಆತ್ಮವು ಚಲಿಸುತ್ತದೆ; ಅದು ಚಲಿಸುವುದಿಲ್ಲ. ಅದು ದೂರ ಮತ್ತು ಅತ್ಯಂತ ಸಮೀಪವೇ ಇದೆ. ಅದು ಎಲ್ಲವುಗಳ ಒಳಗಿದೆ. ಅದು ಎಲ್ಲವುಗಳ ಹೊರಗೂ ಇದೆ.

[4] ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ । ಸರ್ವಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ ।। ಅರ್ಥಾತ್: ಯಾರು ಆತ್ಮನಲ್ಲಿಯೇ ಇರುವ ಇಲ್ಲವನ್ನೂ ನೋಡುತ್ತಾನೆಯೋ ಮತ್ತು ಎಲ್ಲವುಗಳಲ್ಲಿ ಆತ್ಮನನ್ನು ಕಾಣುತ್ತಾನೋ ಅವನು ಆ ಪ್ರಕಾರದ ದಿವ್ಯದರ್ಶನದಿಂದ ಯಾವುದನ್ನೂ ದ್ವೇಷಿಸುವುದಿಲ್ಲ. ಯಾವುದನ್ನು ಕಂಡರೂ ಜಿಗುಪ್ಸೆಪಡುವುದಿಲ್ಲ. ಯಸ್ಮಿನ್ಸರ್ವಾಣಿ ಭೂತಾನ್ಯಾತ್ಮೈವಾ ಭೂದ್ವಿಜಾನತಃ । ತತ್ರ ಕೋ ಮೋಹಃ ಕಃ ಶೋಕ ಏಕತ್ವಮನುಪಶ್ಯತಃ ।। ಅರ್ಥಾತ್: ಯಾವಾಗ ಜ್ಞಾನಿಗೆ ಎಲ್ಲ ಪ್ರಾಣಿಗಳೂ ತನ್ನ ಆತ್ಮವೇ ಆಗಿಬಿಡುತ್ತವೆಯೋ ಆಗ ಎಲ್ಲೆಲ್ಲಿಯೂ ಏಕತ್ವವನ್ನು ಕಾಣುವ ಅವನಿಗೆ ಮೋಹವೆಲ್ಲಿ? ಶೋಕವೆಲ್ಲಿ? ಅಂದರೆ ಎಲ್ಲಿಯೂ ಮೋಹ ಮತ್ತು ಶೋಕ ಎನ್ನುವುದೇ ಇಲ್ಲ.

[5] ಸ ಪರ್ಯಗಾಚ್ಛಕ್ರಮಕಾಯಮವೃಣಮಸ್ನಾವಿರಂ ಶುದ್ಧಮಪಾಪವಿದ್ಧಮ್ । ಕವಿರ್ಮನಿಷೀ ಪರಿಭೂಃ ಸ್ವಯಂಭೂರ್ಯಥಾ ತಥ್ಯತೋಽರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ ।। ಅರ್ಥಾತ್: ಆ ಆತ್ಮವು ಸರ್ವತ್ರ ಸಂಚರಿಸುವಂತಹುದು. ಅದು ಉಜ್ವಲ, ಅಶರೀರ, ವ್ರಣರಹಿತ, ಸ್ನಾಯುರಹಿತ, ಪಾಪವು ಮುಟ್ಟದ ಶುದ್ಧವು, ಕವಿ, ಜ್ಞಾನಿ, ಸರ್ವತವಿದ್ಯಮಾನ, ಸ್ವಯಂಭುವು. ಪ್ರಜಾಪತಿಗಳಿಗೆ ಯಥಾಸ್ವಭಾವಾನುಸಾರ ಕರ್ತವ್ಯಗಳನ್ನು ಶಾಶ್ವತವಾಗಿ ವ್ಯವಸ್ಥೆಮಾಡಿದೆ.

Leave a Reply

Your email address will not be published. Required fields are marked *